ಮಂಗಳವಾರ, ಮಾರ್ಚ್ 29, 2011


ಮಳೆ ಹನಿಯ ಬರದಲ್ಲಿ....

ಬಿರುಕು ಬಿಟ್ಟಿಹ ಚರ್ಮವೇ
ಉರಿದು ಕೊರಗಿಹ ಜೀವವೇ
ಯಾವ ಲೇಪನ ನಿನ್ನ ಕಾಯ್ವುದು?!
ಕೆರಳಿ ಹೊತ್ತಿಹ ಧಗೆಗೆ ದಣಿಯದು?!

ಕರಗಿದರೂ ಕೊರಗಿಲ್ಲ
ನಡುಗಿದರೂ ಉಡುಗೊಲ್ಲ
ಅದರಿದರೂ ಬೆದರೊಲ್ಲ!
ಪಿಸು ಮಾತು ಹೊರಸೂಸದೆ
ನಸುಗೆ೦ಪು ಶುರುವಾಗಿದೆ!!

ಬತ್ತೆದೆಯ ಜಗವಿಲ್ಲಿ ನವ ಬೆತ್ತಲೆ
ಮುತ್ತಿಕ್ಕೊ ತ್ವಚೆಯಲ್ಲಿ ಬರೀ ಕತ್ತಲೆ
ಕ್ಷಣಕ್ಷಣವೂ ಕಣ ಕಣದಿ ಹೊಸ ಕ೦ಪನ
ಅನುದಿನವು ಬದುಕಲ್ಲಿ ಇದೆ ತಲ್ಲಣ!

ಅತ್ತಿದ್ದ ಕಣ್ಣಿ೦ದ ಬಿದ್ದಿರುವ
ಕಣ್ಣೀರು ಇ೦ಗಾಗಿದೆ!
ಒಳಗಡೆಯ ಬಿಸಿನೀರು
ಮೇಘಗಳ ತಾ ಸೇರದೇ?
ಮಡಿಲಾಗೋ ಬಯಕೇಲಿ
ಮನತೆರೆದು ಮಲಗಿರುವ
ನಿನ್ನೊಡಲ ನಡುವನ್ನು
ಮಳೆಬಿ೦ದು ಒಮ್ಮೆ ತಬ್ಬದೇ?

ಕಮರಿರುವ ಆಸೆಗಳ
ಕೊರಳೊಳಗೆ ಉಸಿರು ತು೦ಬಿ
ಹುದುಗಿರುವ ಚೈತನ್ಯದ
ಬುಗ್ಗೆಯೊ೦ದು ಚಿಮ್ಮಬೇಕು
ಅವನಿಯಲ್ಲಿ ಜೀವಸೆಲೆಯು
ಒರತೆಯಾಗಿ ಹರಿಯಬೇಕು!

                     ~‘ಶ್ರೀ’
                       ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ