ಬುಧವಾರ, ಡಿಸೆಂಬರ್ 31, 2014

"ಧಾತು...."

              "ಧಾತು...."
     
ಚಿಗುರಿದ ಚಂದ್ರನ ತುಟಿಗಳ ತುದಿಯಲಿ
ಹರಡಿದೆ ನಿಬಿಡದಿ ಘಮ್ಮನೆ ಮೊಲ್ಲೆ
ಕರಗುವ ಮೇಘದ ಮಗ್ಗುಲ ಸ್ತರದಲಿ
ತರುವುದು ಸಡಗರ ಬೆಳಕಿನ ಜಲ್ಲೆ...

ಬರಡು ಭೋಗದ ಕರಡು ನೆಲದಲಿ
ಹುಲ್ಲಿಗೆ ಇಬ್ಬನಿಯ ಹೊದೆವಾಸೆ ವಿಸ್ಮಯ
ಮರಳ ತೇಗುವ ಬಿಸಿಯ ಎದೆಯಲಿ
ಬಳ್ಳಿಗೆ ಕಡಲಾಳ ಬೇರುಗಳ ವಿಷಯ

ಎದುರು ಗೋಡೆಯ ಬಸಿರ ಪುಟದಲಿ
ಬರೆದ ಸಾಲಿಗೆ ಹಾಕಬೇಕೇನು ಕನ್ನ!
ಅಕ್ಷರದ ನೆರಳ ನಿಲ್ಲಿಸಲು ಸಾಲಿನಲಿ
ಬೆಂಕಿಕಡ್ಡಿಯ ಕೊನೆಗೆ ಬೆಳಕಿನಾ ಬಣ್ಣ..

ಇಳಿಬಿಟ್ಟ ಜೋಕಾಲಿ ಜೀಕುವಾ ದನಿಗೆ
ಬೇಸರವು ಒಣಗಿರಲು ಮರಕೀಗ ಪ್ರಾಯ..
ಹಸಿದಿದ್ದ ಗಳಿಗೆಯಲಿ ತುತ್ತಿಟ್ಟ ಒಲವಿಗೆ
ಮರಿ ಹೇಗೆ ಮರೆತೀತು ಇನ್ನೀಗ ತಾಯ..

ಋತುಗಳಾ ಸರಪಣಿಗೆ ಹವೆಯಾಯ್ತು ತಂತು
ಅವಕಾಶ ಒದಗಿಹುದೇ ಮಿಲನಕ್ಕೆ ಶೂನ್ಯದಲಿ!
ಮೋಹಗಳ ಮರುದನಿಗೆ ಮನವಾಯ್ತು ಧಾತು
ಜಿನನೆಂತು ಜನಿಸುವನು ಕಟ್ಟಿಟ್ಟ ಗೂಡಿನಲಿ...

                                                             ~`ಶ್ರೀ'
                                                                 ತಲಗೇರಿ

"ಈಗೀಗ..."

"ಈಗೀಗ..."

ನನ್ನೆದೆಯ ಹೊಸ್ತಿಲ ಎದೆಯ ಮೇಲೀಗ
ಸದ್ದಿಲ್ಲದೆ ಶುರುವಾಗಿದೆ ಹೆಜ್ಜೆಗಳ ಸಂಕ್ರಮಣ..
ಏಕಾಂತದಾ ಆಲಾಪ ಇಳಿಯುವಾಗ ಕ್ಷಣಕೀಗ
ಸಲ್ಲಾಪ ತೊದಲುತಿದೆ ಪ್ರಣಯದಾ ಪರಿಧ್ಯಾನ..

ನೋಡುತ್ತ ಘನವಾಯ್ತು ಕಾದಂಬಿನಿ
ನಿಡುಲಜ್ಜೆಯಲಿ ನೀ ಕರಗುವುದನ್ನ...
ಪ್ರತಿಗಳಲಿ ಬರೆದಿಡಲೇ ಕಿರು ಟಿಪ್ಪಣಿ
ನಿನ್ನ ರೆಪ್ಪೆಗಳಲಿ ನಾ ಕಂತುವಾ ಮುನ್ನ..

ಪ್ರೀತಿ ಸಹಿಯ ಬರೆವಾಸೆ ದಿಗಂತದಲಿ
ನಿನ್ನ ಬೆರಳ ಹಿಡಿದು ಬೆಳ್ಳಕ್ಕಿ ಸಾಲಿನಲಿ..
ಒಂದೆರಡು ಕ್ಷಣ ಕಳೆವಾಸೆ ಜೊತೆಯಲ್ಲಿ
ಬಾಗಿದಾ ಮಳೆಬಿಲ್ಲ ಬಣ್ಣಗಳ ನೆರಿಗೆಯಲಿ...

ನಿನ್ನ ಪ್ರೀತಿ ಕಿರಣಗಳ ಸ್ಪರ್ಶಕ್ಕೆ
ಅರಳಿತು ನನ್ನೆದೆ ಕೊಳದಾ ನೈದಿಲೆ..
ನಿನ್ನ ಕುರಿತ ಕುಸುರಿಗಳ ತರ್ಕಕ್ಕೆ
ಏರಿತು ಋತುವಿನಾ ಅಮಲು ಆಗಲೇ..

ಕೂಡಿಡುವೆ ನಿನ್ನೊಲವ ಪ್ರತಿಪದವ
ಚಿತ್ರಕ್ಕೆ ತೊಡಿಸುವಾ ಕಿರು ಚೌಕಟ್ಟಿನಂತೆ
ಬಯಸುತ್ತ ಪ್ರತಿಕ್ಷಣವೂ ನಿನ್ನ ಸನಿಹವ
ಕನಸಲ್ಲೇ ಚಲಿಸುವೆ ನಿನ್ನತ್ತ ಅಲೆಮಾರಿಯಂತೆ!..

                                                          ~'ಶ್ರೀ'
                                                             ತಲಗೇರಿ

ಬುಧವಾರ, ಅಕ್ಟೋಬರ್ 22, 2014

"ಜೀವನ್ಮುಖಿ..."

            "ಜೀವನ್ಮುಖಿ..."

ವಿರಾಗಿಯ ಬಗಲಲ್ಲಿ ಜೋಳಿಗೆಯ ಪರಿಭಾಷೆ
ಕರಗದಿರುವ ನೆರಳಿಗೂ ಬೆರಳಿನಾ ಆಸೆ..
ಸಾರಿಗೆಯ ರಹದಾರಿ ಬಿಸಿಲಿನಾ ಪಿಸುಮಾತು
ಹಾಸಿಹುದು ಕಡುಗಪ್ಪು ಮೌನವೂ ಬೆರೆತು..

ಮಿಥ್ಯ ಸಂಜೆಯಲಿ ಚಂದಿರನ ಹೆಣವು
ಸಿಕ್ಕು ಸಿಕ್ಕಾದ ಶೃಂಗಾರಕೆ ತಾರೆಗಳ ಮೊಗ್ಗು..
ತಥ್ಯ ತೀಟೆಯಲಿ ಮುಗಿಲಿನಾ ಸೆಳವು
ಜಲಬಿಂದು ಜೋಡಿಕೆಗೂ ಬೆಳಕಿನಾ ಹಂಗು..

ಬೆಚ್ಚುತಿಹ ಬಣ್ಣಗಳ ಒಟ್ಟುಗೂಡಲಿಟ್ಟು
ಗುಟ್ಟಾಗಿ ಬರೆದಿರುವ ಚಿತ್ತಾರ ಬಾನು..
ಮುಂಚಿತವೇ ಮನೆಯ ಬಾಗಿಲನು ತೆರೆದಿಟ್ಟು
ಹೆಜ್ಜೆಗಳ ಸಲಿಗೆಯನು ಬಯಸಿಹೆನೇ ನಾನು!..

ಬೇಡಿಕೆಯ ಸೇರಿಕೆಗೆ ಯಂತ್ರಗಳ ಆಲಾಪ
ಕೀಲುಗಳ ಕದಲಿಕೆಗೆ ಪ್ರತಿಕ್ಷಣದ ಮಿಸುಕಾಟ..
ಬಾಡಿಗೆಯ ನಿದಿರೆಗೆ ರಾತ್ರಿಯಾ ಸಂತಾಪ
ನೂಲುಗಳ ಪೋಣಿಕೆಗೆ ಕನಸುಗಳ ತಡಕಾಟ..

ಇಂದ್ರಿಯದ ನರುಗಂಪು ಭ್ರಮೆಗಳಾ ಬೀದಿ
ಹವೆಯ ಪ್ರಾಯ ಹಾಗೇ ಏರುತಿರಲು..
ಕಣ್ಣೆವೆಗೆ ನಿಲುಕೀತು ವಾಸ್ತವದ ಪರಿಧಿ
ಬಲಿತ ರೆಕ್ಕೆಗೆ ಒಂದು ದಿಕ್ಕು ಕೊಡಲು..

                              ~‘ಶ್ರೀ’
                               ತಲಗೇರಿ

ಶನಿವಾರ, ಅಕ್ಟೋಬರ್ 11, 2014

"ಸಂತೆಯ ಸೋಗಿಗಿಲ್ಲಿ..."

   "ಸಂತೆಯ ಸೋಗಿಗಿಲ್ಲಿ..."

ಹಕ್ಕಿ ಹಚ್ಚಿಹುದು ನನ್ನೆದೆಗೆ ರೆಕ್ಕೆಗಳ
ಹುಡುಕಿಹೆನು ಮತ್ತೆ ಭ್ರಮೆಗಳಾ ಬರಿಗಾಲು
ತಟ್ಟಿ ಎಬ್ಬಿಸಲೇ ನಕ್ಷತ್ರ ನೆರಳುಗಳ
ದಿಕ್ಕುಗಳ ದಾಖಲೆಗೆ ಚುಕ್ಕಿಗಳ ಸಾಲು..

ಮಬ್ಬಾದ ಹವೆಯ ಹರೆಯದಾ ಚಾಳಿ
ಬೇಕೇನು ಕಾಲುದಾರಿಗೆ ಸಣ್ಣ ರೂಪಾಂತರ
ದಿಬ್ಬಣದ ಸಂಭ್ರಮ ಭ್ರಮರದಾ ಪಾಳಿ
ಮೊಗ್ಗಾಯ್ತು ಮನದೊಳಗೆ ಸ್ಪರ್ಶದಾ ಪ್ರವರ..

ಕತ್ತಲೆಗೆ ಕಾಡೀತು ಬೆಳಕಿನಾ ಅಮಲು
ಜೋಪಡಿಯ ಜಗುಲಿಯಲಿ ಸ್ವಪ್ನಗಳ ಸಾಕಲು..
ನಿಂತಿರಲು ಎದುರು ಭೂಮಿಕೆಯ ಹಗಲು
ಕರಗಿರುವ ಇಬ್ಬನಿಗೆ ತಾ ಕೊರಗೀತೇ ಬಿಸಿಲು..

ಸುಕ್ಕುಗಳ ಪುರವಣಿಗೆ ಬೇಕೇನು ಅನುವಾದ
ಅಕ್ಷರದ ಸಂಚಿಯಲಿ ಹಲವು ಮುಖಗಳು..
ಬೇಕುಗಳ ಜಾತ್ರೆಯಲಿ ಹರಡಿರುವ ಭವನಾದ
ಮಂದ್ರದಲಿ ಕರೆದಿಹುದು ಆಟಿಕೆಯ ಕೊರಳು..

ಅರಸುತ್ತ ಹರವಿನಲಿ ಶಾಪ ಕರಗಿದ ಗೂಡು
ಪರಿಧಿಗಳ ಪರಿಧಿಯನು ಮೀರಬಲ್ಲದೇ ಹಕ್ಕಿ..
ಸಂತೆಯ ಸೋಗಿಗಿಲ್ಲಿ ತಿದ್ದಬೇಕಿದೆ ಕರಡು
ಅರಿವಿರದೆ ಬರೆದಿಟ್ಟ ರೂಪಕವ ಹುಡುಕಿ..

                                          ~‘ಶ್ರೀ’
                                             ತಲಗೇರಿ

ಬುಧವಾರ, ಅಕ್ಟೋಬರ್ 1, 2014

"ತಾಜಾ ಬೇಸಿಗೆಗೆ.."

    "ತಾಜಾ ಬೇಸಿಗೆಗೆ.."

ಗೂಡು ಕಟ್ಟಿದೆ ಕನಸ ಗುಂಗು
ಅದಕೂ ಕೂಡ ಈಗ ನಿನದೇ ರಂಗು
ತುತ್ತು ತರುವ ತಾಯಿ ಹಕ್ಕಿ
ಹಾರಬಯಸಿದೆ ತಾನು ಮುಗಿಲ ಹೆಗಲಿಗೂ..

ಮೂಡಿಹನು ಚಂದ್ರ ಚಾಮರದ ಜಾಡಿನಲಿ
ಹರವಿಟ್ಟ ಹರೆಯದ ಗರಿಗಳಾ ಹೆಕ್ಕಿ..
ಹಿಂದೊಮ್ಮೆ ಎಂದೋ ಅರಳಿದಾ ಕುಸುರಿಯಲಿ
ಕೊಸರಿಹುದು ಗೆರೆಯು ಕಾರಣವ ಹುಡುಕಿ..

ನಮ್ಮಿಬ್ಬರಾ ನಡುವೆ ನುಸುಳಿರಲು ತಂಗಾಳಿ
ತಂತಿಗಳ ಹರಿದಿತ್ತು ನಾಚಿಕೆಯ ಬೇಲಿ..
ಹೊಸದಾಗಿ ಹಾಗೇ ಹೂ ಬಿಡುವ ಹಂಬಲ
ಬಾಡಿದಾ ವಲ್ಲಿಗೆ ಸೋಕಿ ಹೊಸ ಪರಿಮಳ..

ಬಿಡಿ ನುಡಿಯ ಸರಕೆಲ್ಲ ಒತ್ತೊಟ್ಟಿಗೆ
ಬೇಕೇನು ಈ ಗಳಿಗೆ ಭಾವಾಂತರ..
ಕುಡಿ ಕುಡಿಯ ಸಂಗೀತ ಮನದಾಸೆಗೆ
ಹೂವಿಗೂ ಮುನ್ನ ಏನೋ ಮಧ್ಯಂತರ..

ಮೊಗ್ಗಿನಾ ಬಣ್ಣ ತುರುಬಿನಾ ತುದಿಗೆ
ಮೆರಗನ್ನು ಹಚ್ಚೀತೇ ಈ ತಾಜಾ ಬೇಸಿಗೆಗೆ..
ಸೆರೆಹಿಡಿದು ಕವಲ,ಹವೆಯಾಯ್ತು ಖಾಸಗಿ
ಸಂಕ್ರಮಣ ಬಂದಾಯ್ತು ಸದ್ಯದಾ ಋತುವಿಗೆ..

                                               ~‘ಶ್ರೀ’
                                                   ತಲಗೇರಿ

"ಅಮಲಿನ ತಂತು.."

     "ಅಮಲಿನ ತಂತು.."

ರೆಕ್ಕೆಯ ಬಡಿದಿದೆ ಎದೆಯ ಅಂಚಿಗೆ
ಗೆರೆಯನು ಗೀಚುತ ಮುಗಿಲಿನ ಹಕ್ಕಿ
ಕರಗಿದೆ ನೆರಳು,ಕಾಣದ ಕ್ಷಣದಲಿ
ಕಾರಣ ಅರಸಿದೆ ಅರಳದ ಚುಕ್ಕಿ..

ಕಂಪನ ಕಾಮದ ಸೊಂಪಿನ ತಂಪಿಗೆ
ಋತು ಬರೆದಿದೆ ಒಲವಿನ ಸಾರ
ಅವಿರತ ಅಮಲಿನ ಅರಿವಿನ ಧಾಟಿಗೆ
ಸ್ವರ ಹೊಸೆದಿದೆ ಹರೆಯದ ಪೂರ

ಬೆರಗು ಬಾನಿನ ಮೌನದ ಗರಿಗೆ
ಬಣ್ಣದ ಹೊಸನಶೆ ಕಾಮನಬಿಲ್ಲು
ನೆರಿಗೆ ನಾಚುವ ಸೀರೆಯ ತುದಿಗೆ
ಕುಸುರಿಯ ಕರೆದಿದೆ ಗೊಲ್ಲನ ಕೊಳಲು..

ಹಸಿವಿನ ಹೊಸನಗು ತುಟಿಯಾ ಮುಡಿಗೆ
ಇಂಗಿದೆ ಹಂಗಿನ ನೆಲದಲಿ ಬಿಸಿಲು..
ಬಿರಿಯುವ ಮೊಗ್ಗಿನ ಪಕಳೆಯ ಮೈಗೆ
ಕಾದಿದೆ ತವಕದಿ ಚಿಟ್ಟೆಯ ಕಾಲು..

ಕರಗುವ ಮೇಣದ ಬೆಳಕಿನ ರಾಶಿಗೆ
ಕತ್ತಲ ಪ್ರಸವದ ಕನಸಿನ ಲಹರಿ..
ತಂತಿಯ ಒಳಗೂ ನರಳುವ ಕೂಗಿಗೆ
ಸರಿಗಮ ಕಲಿಸಿದೆ ಬದುಕಿನ ತಂಬೂರಿ..

                              ~‘ಶ್ರೀ’
                                ತಲಗೇರಿ

"ನವಿಲು ನಾಚಿದ ಮಳೆಗೆ.."

     "ನವಿಲು ನಾಚಿದ ಮಳೆಗೆ.."

ರಾತ್ರಿಗೂ ಹಗಲಿಗೂ ಹಾದಿಯ ಹಾಸಿದೆ
ಪಸಗಳ ನೆಳಲಲಿ ನಸು ಬೆಳಕಿನ ಸಂಕ..
ತೆರೆಗಳ ಗಾಳಿಗೂ ಎದೆಯನು ತೆರೆದಿದೆ
ಯೌವ್ವನ ಸವೆಯದ ನೀಲ ಮಯೂಖ..

ಮುಗಿಲ ಮಳಿಗೆಯ ಬೇಲಿಯ ಒಳಗೆ
ನಡೆದಿದೆ ಅವಿರತ ತಾರೆಯ ಜೀತ..
ಒಲವಿನ ಮುಡಿಯದು ಸೋಕದ ಹೆಗಲಿಗೆ
ಕರಗುವ ಚಂದ್ರನ ಒಡಲಿನ ಮೊರೆತ..

ನಿನ್ನೆಯ ಅಮಲನು ಆರಿಸಿ ಬರೆದ
ಗೋರಿಯ ಬಸಿರಲಿ ಕಾಲನ ಕೆರೆತ..
ನಾಳೆಯ ಮಿಡಿತಕೆ ಹೆಸರನು ಹೇಳದೆ
ಹಸಿವನು ಹರಸಿದೆ ಬಿಸಿಲಿನ ಸೆಳೆತ..

ಗ್ರೀಷ್ಮದ ಕೊರಳಿಗೆ ಹನಿಗಳ ಹಾರ
ತೊದಲು ಮಾತಿಗು ಮೊದಲು ಬೆತ್ತಲೆ ಶಿಶಿರ..
ನಿಮಿಷದ ನಶೆಯೊಳು ಪ್ರಾಯದ ಮಧುವು
ಪರ್ಣದ ಎದುರಲೇ ದಿನವಹಿ ಪಕಳೆಯ ಸಾವು..

ನವಿಲು ನಾಚಿದ ಮಳೆಗೆ ಮೊಳೆತಿದೆ
ನೆನಪುಗಳ ಉಲಿಯುತ್ತ ಬಿಡಿ ಪಾರಿಜಾತ
ಹಂಗಾಮಿ ಗೆರೆಯ ಸುಳಿಗೆ ಸಿಲುಕಿದೆ
ಬಣ್ಣಗಳ ಕನವರಿಸಿ ಬಿಂದುಗಳ ಕಾಗುಣಿತ..

                                            ~‘ಶ್ರೀ’
                                                ತಲಗೇರಿ

ಶನಿವಾರ, ಸೆಪ್ಟೆಂಬರ್ 20, 2014

"ಕಾಲುದಾರಿಯ ಕವಿತೆ.."

  "ಕಾಲುದಾರಿಯ ಕವಿತೆ.."

ಕಾಲುದಾರಿಯ ಆದಿಯಲಿ
ಕಾದಿಹೆನು ನೆನಪುಗಳ ಡೇರೆಯಲಿ..
ಬೇಲಿದಾಟದ ಮಾತುಗಳ
ಕೂಡುತಿದೆ ಬಿಡಾರ ತನ್ನೆದೆಯ ಗೂಡಿನಲಿ..

ಮಳೆ ಮುಗಿದ ಎಲೆ ಹನಿಯ ಸದ್ದು
ನನ್ನೆದೆಯ ಗದ್ದಲಕೆ ವಿರಾಮವೆಂಬಂತೆ..
ಬಲು ಮಾಗಿದ ಮೃದು ಚಿಟ್ಟೆಯಾ ಮುದ್ದು
ಮುನ್ನುಡಿಯ ಮುನ್ನೋಟಕೆ ಮೊದಲ ಪದದಂತೆ..

ಚಂದಿರನ ಚಟಗಳಿಗೆ ನಾಚದಂತೆ
ಕಪ್ಪು ಮುಗಿಲಿಗೂ ಹರಡಿದೆ ನೀಲಿ ಅಮಲು
ಮಂದಗಾಳಿ ಮನಸುಗಳಿಗೆ ಸೋಕಿದಂತೆ
ಮಧುವುಕ್ಕಿ ನಗುತಿಹವು ಕಾಮನೆಯ ಹೂಗಳು..

ಬಣ್ಣ ಬಾಗಿನ ಕೊಟ್ಟು ಕನಸುಗಳಿಗೆ
ಕಾಣಿಸಲೇ ತೀರದಲೆಗಳ ಸಂಜೆ ಸವಾರಿ..
ನಾಳೆಗಳ ದಿವ್ಯಧ್ಯಾನದಲಿ ಹಾಗೇ
ಆಗಮಕೆ ಅಣಿಯಾಯ್ತು ಏಕಾಂತ ಲಹರಿ..

ಕಾಲುದಾರಿಯೇಕೋ ಇನ್ನೂ ಖಾಲಿ ಖಾಲಿ
ಮರಳಲಾರೆಯಾ ನೀ,ಮತ್ತೆ ಆಗಂತುಕಳಂತೆ..
ನೆರಳ ಸಲಿಗೆಯ ಬಯಸಿ ಕಾದಿಹುದು ಬೇಲಿ
ಕತ್ತಲಲಿ ಕಳೆದೊಲವು ಬೆಳಕಲ್ಲಿ ಸಿಕ್ಕೀತೇ?..

                               ~‘ಶ್ರೀ’
                                 ತಲಗೇರಿ

ಬುಧವಾರ, ಜುಲೈ 30, 2014

"ಅಭಿಸಾರಿಕೆ..."

"ಅಭಿಸಾರಿಕೆ..."

ಕಾಲುದಾರಿಯಲಿ ಕಾದಿದ್ದ
ನವಿಲುಗರಿಯೊಂದು
ಗೊಲ್ಲನಾ ಕೊಳಲ ದನಿಯ
ಕತೆ ಹೇಳಿತ್ತು..
ತನ್ನ ನಲ್ಲನ ನೆನೆದು ಆಕೆ
ಬಿರಬಿರನೆ ನಡೆವಾಗ
ಕಾಲುಂಗುರದ ಮಿಡಿತಕ್ಕೆ
ತರಗೆಲೆಯೂ ತಾಳ ಹಾಕಿತ್ತು..

ಮುಂಗುರುಳನು ಮೆಲ್ಲನೆ
ತೂಗುವ ತಂಗಾಳಿಗೆ
ಬಿಸಿಯಾಯಿತು ಯೌವನ;
ಇದು ಚಳಿ ಸಂಜೆಯ ಚಾಳಿ..
ಅವಳೆದೆ ಪುಟದಾ
ಸಲಿಗೆಯ ಮೇಲೆ
ನಡೆದಿದೆ ಈಗ
ಬಣ್ಣ ಬಣ್ಣದಾ ಕುಂಚದ ಹಾವಳಿ..

ಚಂದಿರ ಎರವಲು ಪಡೆದ
ಅವಳಾ ಹೊಳಪನು
ನಾಚುತ ತಾನು...
ಮುಗಿಲದು ಮಂಟಪ ಕಟ್ಟಿತು,
ಹಬ್ಬಕೆ ಅಣಿಯಾಯಿತು
ಬೆರಗು ಮೌನದಿ ಬಾನು..

ಬೆಳದಿಂಗಳ ಲೀಲೆಗೆ
ಅವಳಾದಳು ನೈದಿಲೆ;
ಹೇಳದೆ ಕೇಳದೆ ಹಾಗೇ..
ಭ್ರಮರದ ಸ್ಪರ್ಶಕೆ
ಎರೆದಳು ತನ್ನಯ ಮಧುವ..
ಹವೆಯಲಿ ಈಗ
ಮಿಲನದಾ ಮೆರವಣಿಗೆ...

                               ~`ಶ್ರೀ'
                                   ತಲಗೇರಿ

ಮಂಗಳವಾರ, ಜುಲೈ 22, 2014

"ದಾರಿ..ತಂಬೂರಿ...ಅಲೆಮಾರಿ..."

"ದಾರಿ..ತಂಬೂರಿ...ಅಲೆಮಾರಿ..."

ಹೆದ್ದಾರಿಯಾ ಎದೆಯಲ್ಲಿ
ನೆನಪುಗಳಾ ನಡಿಗೆ
ಅಡಿಗಡಿಗೆ ಕಳೆದಿಹವು
ಒಂದೊಂದೇ ಗಳಿಗೆ..
ನಟ್ಟನಡುವೆ ಬಿಳಿಪಟ್ಟಿ
ಅಂತರದ ಓಟಗಳಿಗೆ..

ಬೇಲಿಗೂಟಗಳೆಲ್ಲಾ ಬಂಧಿ
ಬಾಂಧವ್ಯದ ತಂತಿಯಲಿ
ಬಿಸಿಲು ಬೆಸೆದಿರೋ ಹಾಗೆ
ಚಂದ್ರಮನ ತೋಳಲಿ..
ಬಿಂದು ಬಿಂದುವು ಬಂಧು
ಅಖಂಡ ಸೃಷ್ಟಿಯಲಿ...

ಹೆಜ್ಜೆಗುರುತುಗಳೆಲ್ಲ
ಪಳೆಯುಳಿಕೆಗಳಾಗಿಯೂ
ಒಳಗಾಗಿಲ್ಲ ಅಸ್ತಿತ್ತ್ವದ ಹಂಗಿಗೆ..
ಕಳಚಿಹುದು ಅಲ್ಲಲ್ಲಿ
ಹೊರಪದರ;ಆರದಾ ಗಾಯಕ್ಕೆ
ತೇಪೆ ಹಾಕಿದ ಮೇಲೂ
ತಕರಾರು ಎದೆಯೊಳಗೆ..

ದೂರದೂರಿನ ಕಾಲುದಾರಿಗೆ
ನಾನೊಬ್ಬ ದಾರಿಹೋಕ
ಉದುರುತಿಹ ಎಲೆಗಳಿಗೂ
ನನ್ನ ಸೋಕೋ ತವಕ..
ಬೆರಳ ಜೊತೆ ತಂತಿ ಸೇರಿಸಿ
ಹಸಿದ ಉದರದ ಕೂಗ
ಹಾಡಾಗಿಸಿದೆ ತಂಬೂರಿ..
ಎಲ್ಲ ದಾರಿಗೂ ಗಮ್ಯವೊಂದೇ!
ಕವಲುಗಳ ಕಲೆಹಾಕೋ
ನಾ...ಅಲೆಮಾರಿ..

                               ~`ಶ್ರೀ'
                                   ತಲಗೇರಿ

ಬುಧವಾರ, ಜುಲೈ 16, 2014

"ಮತ್ತೆ ಮೂಡುವ.."

"ಮತ್ತೆ ಮೂಡುವ.."

ಅಸ್ತಮಿತ ಆಸೆಗಳ
ಅಂತರಂಗದ ಬಣ್ಣಗಳು
ಕಳೆದ ಸಂಜೆಗೆ
ಮೆರಗು ನೀಡಿಹೋಗಿವೆ
ಅಸ್ತಮಕೂ ಮುನ್ನವೇ..

ಬಾನ ಹೆದ್ದಾರಿಯಲಿ
ತಾರೆಗಳೊಂದೊಂದು ಮೈಲಿಗಲ್ಲು
ಚಂದಿರನ ತೇರಿಗೆ..
ಕಾರಿರುಳ ನೆಳಲಿನಲಿ
ಕತೆಗಳೆಲ್ಲವೂ ಚೆದುರಿಹವು
ಅವರವರ ಪಾಲಿಗೆ..

ಬರೆಹವಾಗದೇ ಉಳಿದ
ನನ್ನದೆಯ ಬಿಡಿ ಭಾವಗಳ
ನಿಡುಮೌನದ ತರಹ;
ಬೀಸಣಿಕೆಯ ನಶೆಯಲ್ಲಿ
ತಂಪು ಕಂಡಿದೆ
ನಡುರಾತ್ರಿಯ ವಿರಹ...

ಮತ್ತೆ ಮೂಡುವ
ಅರುಣನಿಗೋ
ಬಣ್ಣಗಳ ಚಟ..
ಮಡಿಕೆಗಳ ಮಡಿಲಲ್ಲಿ
ನೆರಳಿನಾ ಆಟ..
ಕರಗಿಲ್ಲ ದ್ವಂದ್ವ
ಯಾವುದು ಸತ್ಯ;
ಕತ್ತಲೆಯ ನೆರವೋ..
ಇಲ್ಲಾ,ಬೆಳಕಿನಾಸರೆಯೋ...

                                ~'ಶ್ರೀ'
                                    ತಲಗೇರಿ

ಸೋಮವಾರ, ಜುಲೈ 14, 2014

"ಅನುಮಾನ ಬೇಡ..."

"ಅನುಮಾನ ಬೇಡ..."

ಕಾಗದವು ಹಸಿದಿಹುದು
ನೀಡಬೇಕಿದೆ ನಾನು
ಶಾಯಿ ಕಲಸಿದ ಕೈತುತ್ತು
ಒಣಗಿದಾ ಮಣ್ಣಿಗೆ
ತುಸು ತಂಪೀಯಬಹುದೇ
ಬರೆವ ನನ್ನ ಬೆರಳ ನೆರಳು....

ಏನು ಬರೆದರೂ ನಿನಗೆ
ಹಸಿವು ನೀಗಿದ
ಸಂತೃಪ್ತ ಭಾವ..
ಮತ್ತೆ ನನಗೆ
ಜೀವತಂತು ಮೀಟಿ
ತಾಯಾದ ಅನುಭವ..

ಈತನಕ ನನ್ನೊಳಗೆ
ಹೋರಾಡಿದಾ ಎಲ್ಲ
ತುಮುಲಗಳ ಭಾರವ
ಇಳಿಸಬೇಕು ನಿನ್ನೆದೆಗೆ
ತಿಳಿಯಬೇಕು ನೀನೂ
ಈ ಜಗದ ಸೋಜಿಗವ...

ಕೆದಕಬೇಕು ಈಗ
ನನ್ನೆದೆಯ ಸೂಕ್ಷ್ಮಗಳ
ಅಂತರಂಗದ ಸಾಕ್ಷ್ಯಗಳ...
ಅನುಮಾನ ಬೇಡ;
ನಿನ್ನೊಡಲ ಹಸಿವ
ತಣಿಸುವಾ ಸೆಲೆಯು..
ನಾನು ಕವಿಯು...

                     ~'ಶ್ರೀ'
                         ತಲಗೇರಿ

ಭಾನುವಾರ, ಜುಲೈ 13, 2014

"ರೇಖೆಗಳು ಕರಗುವ ಸಮಯ.."

"ರೇಖೆಗಳು ಕರಗುವ ಸಮಯ.."

ಮೆಲ್ಲನೆ ನಕ್ಕಿತು ಮಲ್ಲಿಗೆಯ ಹೂವೊಂದು
ಉದುರಿತು ಅದರಿಂದ ಚಂದ್ರನಾ ಚೂರೊಂದು
ಪರಿಮಳದ ಗಾಳಿಯಲಿ ಹಾರುತಿದೆ ನವಿಲುಗರಿ
ದಾರವನು ಸೇರುತಿದೆ ನಾಚುತಲಿ ಬುಗುರಿ...

ಶ್ರಾವಣದ ತಿಳಿಸಂಜೆ ಅಧರಗಳು ಬೆದರಿ
ಗೋಡೆಗಳು ನಿಂತಿಹವು ಒಳಗೊಳಗೇ ಬೆವರಿ..
ಬೀದಿದೀಪಕೆ ಕಳೆದ ಕಾರ್ಮುಗಿಲ ಕಡು ಶಾಪ
ಹವೆಯ ಕವಿದಿದೆ ಈಗ ಅವಳದೇ ಮೈಧೂಪ..
ನಾ ಬರೆದ ರೇಖೆಗಳು ಕರಗುವಾ ಸಮಯ
ಕಾಗದನ ಮನೆಯಲ್ಲಿ ಬಣ್ಣಗಳ ಪರಿಣಯ..

ಚಾದರದ ಚಿತ್ರದಲಿ ತಿರುವುಗಳ ಹುಡುಕಾಟ
ಮೇರೆಗಳಿಗೆ ಸಾಕ್ಷಿಯಿಲ್ಲಿ ಒಂದು ಹಳೆಯ ಭೂಪಟ..
ಭ್ರಮರದಾ ಸ್ವರದಲ್ಲಿ ಮಧುವಿನಾ ಗೊಣಗಾಟ
ಹೂವೆದೆಯ ಮೆದುವಿನಲಿ ನೆಟ್ಟಿರಲು ಬಾವುಟ...
ನಾ ಬರೆದ ರೇಖೆಗಳು ಕರಗುವಾ ಸಮಯ
ಕಾಗದನ ಮನೆಯಲ್ಲಿ ಬಣ್ಣಗಳ ಪರಿಣಯ..

ಕಮಾನು ಕಟ್ಟಿಹುದು ನನ್ನವಳ ಪಿಸುಮಾತು
ಹಾದಿಯಾ ಹಾಸಿಹುದು ಹರೆಯಕೆ,ಕಾಮನಾ ಸೇತು..
ಗಮ್ಯವದು ಮರೆತೀತೇ ರಮ್ಯ ರಸಗಳಿಗೆಯಲಿ
ಮತ್ಸ್ಯ ಮಿಥುನ ಸುರತ,ಸೌಮ್ಯ ಶರಧಿಯಲಿ..
ನಾ ಬರೆದ ರೇಖೆಗಳು ಕರಗುವಾ ಸಮಯ
ಕಾಗದನ ಮನೆಯಲ್ಲಿ ಬಣ್ಣಗಳ ಪರಿಣಯ...

                                                  ~'ಶ್ರೀ'
                                                      ತಲಗೇರಿ

ಶುಕ್ರವಾರ, ಜುಲೈ 11, 2014

"ನನ್ನವಳು ಮತ್ತು ಚಂದಿರ..."

"ನನ್ನವಳು ಮತ್ತು ಚಂದಿರ..."

ಖಾಲಿ ಹಾಳೆಯ ಕೊಡು ಚಂದಿರ
ಬರೆದುಕೊಡುವೆ ನನ್ನವಳ ಚಿತ್ತಾರ
ಆ ನಿಶೆಯ ಬೆಳಕ ಸ್ವರದ ಏರಿಳಿತ
ಆಕಾಶ ಭೂಮಿಗೂ ಕಂಪನದ ಸೆಳೆತ..

ತಲೆದೊಂಬು ತೊದಲುತಿದೆ ಬಚ್ಚಿಟ್ಟ ಆಸೆಗಳ
ಕನಸಿನಾ ಯಾನದಲಿ ನಾವೆಗಳ ಯುಗಳ
ಬೆಚ್ಚನೆಯ ಮಲ್ಲಿಗೆಯ ಮೊಗ್ಗಿನಾ ಜೇನಹನಿ
ಪರಿಚಯದ ಸಲಿಗೆಯಲಿ ಭಾವಗಳ ಜೀವದನಿ

ನಡೆಸುತಿಹೆ ನೀನೇಕೆ ರಸಿಕ ರಾತ್ರಿಯ ದರ್ಬಾರು?
ಹನಿಸುತಿದೆ ಅಲ್ಲಲ್ಲಿ ನಾಚಿಕೆಯ ಮುಂಗಾರು..
ಮುಗಿಲ ನೆರಿಗೆಯಲಿ ಚಕ್ರವಾಕ ಮಿಲನ ಪರ್ವ
ಅಗಳಿ ತೆಗೆದ ಎದೆಯೊಳಗೆ ಈಗ ಪ್ರೀತಿ ಪ್ರಣವ...

ಬಣ್ಣಗಳ ಹರವಿಟ್ಟ ನೂರಾರು ತಾಟು
ಕೈಜಾರಿ ಮೂಡಿರುವ ಒಂದೆರಡು ಗೀಟು..
ಮೈದಳೆದು ನಿಂತಿಹುದು ಅಂಬರದ ಕುಸುರಿ
ಹುಣ್ಣಿಮೆಯ ಹಂಬಲಕೆ ಚಂದನದ ಲಹರಿ...

ನೆನಪುಗಳ ಸನಿಹ ನೂರೆಂಟು ತುಡಿತ
ಬೆತ್ತಲ ಬಯಲಿನಲಿ ತಾರೆಗಳ ಕಾಗುಣಿತ
ನನ್ನದೆನ್ನುವ ಅವಳು ನಾಳೆಗಳ ಬಾಗಿಲು
ಚಂದಿರನ ಸಾಲುಗಳಿಗೆ ದನಿಯಾಗೋ ಕೊಳಲು...

                                                    ~'ಶ್ರೀ'
                                                        ತಲಗೇರಿ

ಶನಿವಾರ, ಜುಲೈ 5, 2014

"ಭ್ರಮೆಗೆ ಮರಳಿ..."

      "ಭ್ರಮೆಗೆ ಮರಳಿ..."

ಸಂಶಯದ ಸುಳಿಮಿಂಚ ಬಣ್ಣವದು
ಉದ್ರೇಕದಾ ಪ್ರತಿಫಲನ ಚಲನೆಯಲಿ
ಪರಿಚಯದ ಪರಿಸರಣ ಸಾರವದು
ಆಂತರ್ಯದಾ ಸಮ್ಮಿಲನ ನಳಿಗೆಯಲಿ..

ಜೀವಲೋಕದ ಕಾವು ಸುಡುತಿದೆ
ಚಂದ್ರನೆದೆಯ ಭಾವ ಹಂದರ..
ಸಾವ ಕಾಣದ ಗಾಯ ನರಳಿದೆ
ರಂಧ್ರ ಬರೆದ ಕಲೆಯು ಭೀಕರ..

ಇತಿಹಾಸದೊಡಲಲಿ ಒಬ್ಬ ಗಾಂಧಾರಿ
ಕುರುಡಿಯಾದಳು ತಾನೇ ಬಯಸಿ
ಮಂದಹಾಸದ ನಿತ್ಯ ಮುಸುಕುಧಾರಿ
ನಡೆಯುತಿಹನೇ ಬೆಳಕ ಅರಸಿ...

ಮುಗಿಲ ಬಗಲಿನ ತೇಲು ತಾರೆ
ಉದುರುವುದೋ ಯಾವ ಗಳಿಗೆ..
ಹಸಿರ ಸೆರಗಿನ ನೀಲ ನೀರೆ
ಶಿಶಿರ ಬರುವನು ಮತ್ತೆ ಬಳಿಗೆ...

ಮುಗಿಲ ರಾಗದಿ ಕರಗೋ ರವಿಯು
ಮತ್ತೆ ಎದೆಯಲಿ ಚಂದ್ರ ಬಿಳಿಯು...
ಬಿಸಿಲ ಕುದುರೆ ಅರಳಿ ಹೊರಳಿ
ಕರೆಯುತಿಹುದು ಭ್ರಮೆಗೆ ಮರಳಿ...


                       ~‘ಶ್ರೀ’
                         ತಲಗೇರಿ

ಶುಕ್ರವಾರ, ಮೇ 23, 2014

"ಹುಡುಕಾಟ...ನಿನ್ನೆದೆಯ ಬೀದಿಯಲಿ.."

    "ಹುಡುಕಾಟ...ನಿನ್ನೆದೆಯ ಬೀದಿಯಲಿ.."


ನಿನ್ನೆದೆಯ ಬೀದಿಯಲಿ ನಾನೊಬ್ಬ ಅಲೆಮಾರಿ
ನೂರು ಗೋಡೆಯ ನಡುವೆ ಸಿಗದೇ ಕಾಲುದಾರಿ..
ನಿನ್ನಾಸೆ ಸಂತೆಯಲಿ ನಾನೊಬ್ಬ ವ್ಯಾಪಾರಿ
ಮಾರುದೂರದಿ ಕುಳಿತು ಕರೆಯಲೇ ಹಲವು ಸಾರಿ..

ಮುಗಿಲು ಕರಗದ ಸಮಯ ಎತ್ತರದ ಹುಡುಕಾಟ
ಬರುವಿಕೆಯ ಬಯಕೆಯಲಿ ಈ ದಿನದ ಕೊನೆಯು..
ಹೊನಲ ಬರೆಯದ,ಬರಿಯ ಬಣ್ಣಗಳ ಭೂಪಟ
ಕನಸುಗಳ ನಾವೆಯಲಿ ಈ ಖಾಲಿ ಬಲೆಯು..

ಎಲ್ಲ ಸುಳಿವ ಅಳಿಸಿ ಕಾದಿಹೆಯಾ ಒಲವೇ
ಹವೆಯೊಳಗೆ ಬೆರೆತಿಹುದು ನೀ ಇರುವ ಅಮಲು..
ನನ್ನ ಆಗಮ ನೆನೆಸಿ ನಾಚಿಹೆಯಾ ಸೆಳವೇ
ನಿನ್ನೆದೆಗೆ ಮರಳುವೆನು ನಾ ಕಳೆದು ಇರುಳು..

ಎಲ್ಲ ಬಣ್ಣದ ಸನಿಹ ಬೆತ್ತಲೆಯ ಬಿನ್ನಹ
ನೆರಳಿನಲಿ ಮರೆಯಾಯ್ತು ಈ ದೇಹ ಕುಸುರಿ...
ದಿವ್ಯ ಮೌನದ ವಿನಹ,ಸುಡುವಾಗ ವಿರಹ
ಕೊರಳಿನಲಿ ದನಿಯಾಯ್ತು ಈ ಜೀವ ಲಹರಿ...

ಭ್ರಮೆಯೊಳಗೆ ಬೆಸೆದಿಹೆನು ಆ ಮೊದಲ ಏಕಾಂತ
ಅರಳಿಹುದು ಅದರೊಳಗೆ ಸ್ಪರ್ಶ ಮಂದಾರ..
ನನ್ನೊಳಗೆ ಹಸಿವಿಹುದು ನೀ ಅದರ ಸಂಕೇತ
ನಗುತಿಹನೇ ನಿಶೆಯೊಳಗೆ ಆ ಪಾರ್ಶ್ವ ಚಂದಿರ..

                               ~‘ಶ್ರೀ’
                                 ತಲಗೇರಿ

ಗುರುವಾರ, ಮೇ 1, 2014

"ನಿಶೆಯ ಕಂತು..."

    "ನಿಶೆಯ ಕಂತು..."


ನೆರಳ ಬೆಸೆಯುವಾ ರಾಗಸಂಜೆಯೇ
ನನ್ನ ಬೆರಳ ಸೋಕಿಸು ಒಮ್ಮೆ ಸನಿಹದಿ
ನನ್ನವಳ ಗುಳಿಯ ಕೆನ್ನೆಗೆ..
ಕೊರಳ ಬಳಸುವಾ ತೋಳ ಬಂಧವೇ
ಮೈಯ ನುಣುಪ ಅರಳಿಸು ಒಮ್ಮೆ ಪ್ರಣಯದಿ
ಕನಸುಗಳು ನಮಗೊಲಿವ ಗಳಿಗೆ...

ಹೆರಳ ಘಮದಲಿ ಹೊಸತು ಕದಿರು
ಸೆಳೆತ ನೂರಿದೆ ಅವಳ ಇದಿರು..
ಮಿಣುಕು ಬೆಳಕಲಿ ಅಲೆದಲೆದು ಉಸಿರು
ಬೆರೆಯುತಿದೆ ನಮ್ಮೊಳಗೆ ಒಂದೊಂದೇ ಚೂರು..

ಸರಿವ ಸಮಯದಿ ಸುರಿವ ಬಯಕೆ
ಅಳತೆ ಮೀರಿದ ಅದರ ಎಣಿಕೆ..
ಪುಳಕ ಕೊಳದಲಿ ನಡೆನಡೆದು ತನಿಖೆ
ತೆರೆಯುತಿದೆ ನಮ್ಮೊಳಗೆ ಜಲಬಿಂದು ಮಡಿಕೆ...

ಇರುಳ ಕಿಟಕಿಯ ಪರದೆ ತುಂಬ
ಚಂದ್ರ ಸುಳಿದ ಹೆಜ್ಜೆ ಗುರುತು..
ಸರಿಸುವಾಗ ಎಲ್ಲ ತೆರೆಯ ಬಿಂಬ
ಕರಗಿಹೋಯಿತು ತಾನೇ ನಿಶೆಯ ಕಂತು..

ನೆರಳ ನಡೆಸುವಾ ಉದಯ ದನಿಯೇ
ನನ್ನ ನೆನಪ ಪೋಣಿಸು ಒಮ್ಮೆ ಪಯಣದಿ
ಅವಳೆದೆಯ ಪಲುಕ ನಿನ್ನೆಗೆ...

                         ~‘ಶ್ರೀ’
                          ತಲಗೇರಿ

ಸೋಮವಾರ, ಮಾರ್ಚ್ 31, 2014

"ನೀನು...ನಾನು..ಮತ್ತು ಸಮಯ.."

   "ನೀನು...ನಾನು..ಮತ್ತು ಸಮಯ.."


ನಾ ಬರುವ ಸಮಯ ಕಣ್ಣೆವೆಯ ಬಳಿಗೆ
ತಂತಾನೇ ತಾನೇ ನಾಚಿಕೊಂಡಿತು ಕಾಡಿಗೆ
ನಾ ಬೆರೆವ ಆಶಯ ನಿನ್ನೆದೆಯ ಒಳಗೆ
ಮುಂಚೇನೇ ನೀನೇ ಕೊಡಲಾರೆಯಾ ಸಲಿಗೆ..

ಕನಸುಗಳಿಹ ಸಂಜೆಯಲಿ ನೀ ಚೆಂದ ಸೆಳೆತ
ಒನಪು ಬಳುಕಿದೆ ನವಿಲೇ ಸಮ್ಮಿಲನ ಗಳಿಗೆ
ತೊದಲುತಿಹ ಹೆರಳಿನಲಿ ಹೂವೆಲೆಯ ಬಿಗಿತ
ಹೊಳಪು ಇಣುಕಿದೆ ಚೆಲುವೆ ಯೌವನದ ಒಳಗೆ

ಶಿಶಿರಗಳಿಹ ಅವನಿಯಲಿ ನೀ ತಂಪು ಚಿಗುರು
ಮನದ ಮುಗಿಲಿಗೆ ದೊರೆತ  ಸಂಭ್ರಮದ ಹೆಸರು
ಅರಳುತಿಹ ಹೂಗಳಲಿ ನೀ ನಿತ್ಯ ಮಧುವು
ಎದೆಯ ಹವೆಯಲಿ ಬೆರೆತ ಪರಿಮಳದ ಕಾವು

ಭ್ರಮೆಗಳಿಹ ಸ್ವಪ್ನದಲಿ ನೀ ಸಾಲು ಬೆಳಕೇ
ಇರುಳು ಕುಲುಕಿದೆ ಎಲ್ಲೋ ನೆನಪುಗಳ ಕುಡಿಕೆ
ನಿನ್ನೆದೆಯ ಕಂಪನಕೆ ನಾ ನೀಳ ಮಿಡಿತ
ಒಲವು ಹುಡುಕಿದೆ ನಲ್ಲೆ ಭಾವಗಳ ಸುರತ..

ನಾನಿರುವ ಸಮಯ ನಿನ್ನ ಮೌನಗಳಿಗೆ
ಕಾಡಿಲ್ಲವೇನೇ ನನ್ನ ಸೇರೋ ತುಡಿತ..
ನಾ ಬರದ ಸಮಯ ನಿನ್ನ ತೋಳುಗಳಿಗೆ
ಕೂಡಿಲ್ಲವೇನೇ ಬೆನ್ನಾಗಿ ವಿರಹದಾ ಗಣಿತ..

                                                     ~‘ಶ್ರೀ’
                         ತಲಗೇರಿ

ಭಾನುವಾರ, ಮಾರ್ಚ್ 23, 2014

"ಸಾಲು ಬಣ್ಣಗಳ ಸೇತು..."

  "ಸಾಲು ಬಣ್ಣಗಳ ಸೇತು..."

ಕಣ್ಣುರೆಪ್ಪೆಯ ತುದಿಗಳಲ್ಲಿ
ಸಾಲು ಬಣ್ಣಗಳ ತಂಗುದಾಣ..
ನಿನ್ನೆ ಕಟ್ಟಿದ ನೆನಪಿನಲ್ಲಿ
ಎಲ್ಲೋ ಇಣುಕಿದೆ ಒಂದು ಮೌನ..

ನಿನ್ನ ಬಯಲಿನ ಕಾಲುದಾರಿ
ಎದೆಯ ತೆರೆದಿದೆ ನನ್ನ ಸಲುವೆ..
ತಂಪು ಬೆಳಕಿನ ಬೀಜ ಬೀರಿ
ಕಂಪು ಸೂಸಲು ಮುಂದೆ ನಡೆವೆ..

ನಿನ್ನ ಕಡಲಿನ ಹಾಯಿದೋಣಿ
ಒಲವ ಅಲೆಯಲಿ ನಾ ಕಂತಲೇ..
ನೀನೋ ತಿಳಿಯದ ದಿವ್ಯ ಮೌನಿ
ನಿನ್ನ ಗರ್ಭದಿ ನಾ ಬೆರೆಯಲೇ..

ನಿನ್ನ ಒಳಗಿನ ಸಂಜೆಗಳಲಿ
ಮಿಲನ ರಾಗದ ಮಳೆಯಬಿಲ್ಲು
ಮತ್ತೆ ಕಟ್ಟುವ ಸೇತುಗಳಲಿ
ನಿನದೇ ಮೊರೆತ ತುಂಬಿ ಒಡಲು..

ಬಿದಿರು ಕೊಳಲಾದೀತು
ನಿನ್ನ ಶ್ರುತಿಯ ತೊದಲಿರಲು..
ಒಣಮರವು ನೆರಳಾದೀತು
ಅದರೆದೆಯು ತಾ ತೆರೆದಿರಲು..

                        ~‘ಶ್ರೀ’
                          ತಲಗೇರಿ 

"ಲಾಂದ್ರ...ನೀನು...ಚಂದಿರ.."

"ಲಾಂದ್ರ...ನೀನು...ಚಂದಿರ.."

ಲಾಂದ್ರವ ಹಿಡಿದು ಚಂದಿರ ಬಂದ
ಬಾನಿನ ಎದೆಯಲಿ ಬೆಳಕನು ತಂದ
ಸವೆಸಿದ ಹಾದಿಯ ನೆನಪಿನ ತುಂಬ
ಜೊತೆಯಲೇ ಅಂಟಿದೆ ಕಾಣದ ಬಿಂಬ..

ನಸುತುಸು ಚೆದುರಿದ ಮುಗಿಲಿನ ಒಳಗೆ
ಹೆಪ್ಪುಗಟ್ಟಿದಾ ಹನಿಗಳ ಬೆಸುಗೆ..
ಒಳಗೂ ಹೊರಗೂ ಬಣ್ಣದ ಬೆರಗು
ನೆರಿಗೇಲಿ ನಾಚಿದೆ ಅಂಚಿನ ಸೆರಗು..

ಚಂದ್ರನ ಉಸಿರಿನ ಮಿಡಿತದ ಲಯಕೆ
ಕಡಲಿನ ಅಲೆಯಲಿ ಹೆಚ್ಚಿದ ಸೆಳವು..
ಹರಡಿದ ಮಳಲಲಿ ಬರೆದರೆ ಬಯಕೆ
ಬೆರೆವುದೇ ಅದರೊಳು ಬೆರಳಿನ ಒಲವು..

ಋತುವಲಿ ನೀನು ಪಸರಿಸೆ ಮಧುವ
ತೊದಲಿದ ಚಂದಿರ ನಿನ್ನಾಗಮಕೆ..
ಕನಸಲಿ ನಿನ್ನ ಕಲ್ಪಿಸಿ ನೋಡುವ
ಮನದಲಿ ತುಂಬಿದೆ ನೀ ಚಡಪಡಿಕೆ..

ನಿನ್ನಯ ಸನಿಹದಿ ಪ್ರಣಯವ ನೆನೆದು
ಲಾಂದ್ರವ ಮಿಣುಕಿಸಿ ಚಂದಿರ ಹಲುಬಿದನು..
ನಿನ್ನಯ ನೆರಳಲೇ ಚೆಲುವನು ಮೊಗೆದು
ನೆನಪಿನ ಬೆಳಕಲೇ ಚಂದಿರ ಕರಗಿದನು...

                                ~‘ಶ್ರೀ’
                                 ತಲಗೇರಿ

ಶನಿವಾರ, ಫೆಬ್ರವರಿ 15, 2014

"ಮೃಗಜಲದ ಬಿಂಬದಲಿ"....

      "ಮೃಗಜಲದ ಬಿಂಬದಲಿ"....

ಮರಳುಗಾಡಲಿ ತಾನೇ ಅರಳಿರುವ ಹೂವೇ
ಅಂತಃಸತ್ತ್ವವನು ಹೀರಿ,ಬಯಕೆಗಳ ಮೀರಿ..
ಮೃಗಜಲದ ಬಿಂಬದಲಿ ಮಾಯೆಯಾ ಪರಿವೆ
ಹುಡುಕಿಹೊರಟಿಹೆ ನೀನೆ ಬೇರಿನಾ ಕವಲುದಾರಿ..

ಬಿಸಿಲ ಬಿಸಿ ಚಟಕೆ ತೆರೆದ ಹರವು
ಎದೆಯ ತುದಿ ಜಿನುಗಿದ್ದ ಇಬ್ಬನಿಯ ಸಾವು..
ಮುಗಿಲ ಸಂಕಟಕೆ ಮೊರೆತ ಹಲವು
ಆಗಾಗ,ತಾನೇ ಹುಟ್ಟುವುದು ಚಂದಿರನ ಶವವು..

ಮೂರು ಹೆಜ್ಜೆಗಳ ದೀರ್ಘ ಪಯಣಕೆ
ಗುರುತು ಮೂಡಿಸದೆ ಹಸಿವ ಮರಳ ಬೀದಿ
ಹಾರೋ ಕಣಗಳ ಹೊಸ ಸಂಚಿನಾಟಕೆ
ಕೊನೆಯ ಎಳೆವುದು ಧರಣಿ ತನ್ನ ಸೆಳೆತದಿ...

ಕನಸ ಬೆಳ್ಳಕ್ಕಿ ಕಟ್ಟಿಹುದೇ ಸೇತು
ಕೂಡಿಕೊಳಲು ಗಾಳಿ ತಾ ಮುಗಿಲ ಬಳಗ..
ಕಲ್ಲೆದೆಯ ಒಳಗೆಲ್ಲೋ ಜೀವತಂತು
ಮೀಟುವುದ ತುಸು ಕೇಳಬಲ್ಲೆಯಾ ಅಂತರಂಗ...

ಮರಳುಗಾಡಲಿ ತಾನೇ ಅರಳಿರುವ ಹೂವೇ
ಹಂಚಬಲ್ಲೆಯಾ ಕೊಂಚ ದಿವ್ಯ ಸೌರಭ..
ನಡೆವ ಹಾದಿಯ ತುಂಬ ನನ್ನ ಸಲುವೆ
ಒಲಿಸಿಕೊಡುವೆಯಾ ಒಲವೇ ಸಣ್ಣ ಆರಂಭ..

                              ~‘ಶ್ರೀ’
                                ತಲಗೇರಿ

ಭಾನುವಾರ, ಫೆಬ್ರವರಿ 2, 2014

"ಹಸಿವು.."

     "ಹಸಿವು.."

ಖಾಲಿ ಹಾಳೆಯ ಮೇಲೆ ಮೂಡಿದೆ
ಬರೆವ ಬೆರಳಿನ ಮೋಟು ನೆರಳು..
ಬಿದಿರ ತೂತಲಿ ಗಾಳಿ ಸಾಗಿದೆ
ಶ್ರುತಿಯ ಹಿಡಿಯಲು ನಿರತ ಕೊಳಲು..

ಕತ್ತಲೆಯ ನಿಬಿಡ ಏಕಾಂತ
ಬಯಸುವುದು ಬೆಳಕಿನಾ ಸಂಗೀತ..
ಹಬ್ಬಿರುವ ಲತೆಯ ಸೆಳೆತ
ಮರದೊಳಗೆ ಬೆಳೆಸುವುದು ಬಿಗಿತ..

ಕಣ್ಣೆವೆಯ ತುದಿಯ ಬಣ್ಣಕೂ
ಕನಸಿನೊಂದಿಗೆ ತಾ ಬೆರೆವ ತವಕ
ಮಣ್ಣೆದೆಯ ಪ್ರಸವ ಗಂಧಕೂ
ನೀರಹನಿಗಳ ನಾಜೂಕು ಪುಳಕ

ಜಾರಿರುವ ಸೆರಗ ಕಂಪನ
ಮದನ ಮಳೆಯ ಮೊದಲ ಗುರುತು
ಇಂದ್ರಿಯದ ಅದಿರ ಉತ್ಖನನ
ಬಿಸಿಯುಸಿರ ಸುಳಿಯೊಳಗೆ ಬೆರೆತು..

ಹಸಿದ ಉದರದ ಒಂಟಿ ಕೂಗು
ಹಾಡಾಗಿದೆ ಜೋಗಿಯಾ ತಂಬೂರಿ ತಂತಿಯಲಿ..
ಮನದ ಬಯಕೆಗೆ ನೂರು ಸೋಗು
ತಂಗಿಹುದು ಹಸಿವು ಈ ಬದುಕ ಸೀಸೆಯಲಿ..

                                   ~‘ಶ್ರೀ’
                                     ತಲಗೇರಿ

ಗುರುವಾರ, ಜನವರಿ 30, 2014

"ಒಳ ಕಿಟಕಿಯಲಿ.."

ತಮ್ಮೆಲ್ಲರ ಪ್ರೀತಿ ಹೀಗೇ ಇರುತ್ತದೆಂಬ ಭರವಸೆಯೊಂದಿಗೆ...ನನ್ನ ಕಾವ್ಯಜೀವನದ ೨೦೦ನೇ ಕವಿತೆ....

 "ಒಳ ಕಿಟಕಿಯಲಿ.."

ಕತ್ತಲೆಯೆ ಕೊಡು ನನಗೆ
ನಿನ್ನೆದೆಯ ನಡು ಛಾಯೆ..
ಬೆಳಕ ಪುಳಕದ ಒಳಗೆ
ತಂಪ ಕೊಡಲಿ ಹೊಸ ಮಾಯೆ...

ಭ್ರಾಂತಿ ನೂಲಿನ ಬೆಸುಗೆಯಿಂದಲಿ
ಹೊಲಿದು ತೊಟ್ಟಿಹ ಮೋಹದರಿವೆ..
ಹರಿತ ನೆರಿಗೆಯ ಅಂಚುಗಳಲಿ
ಅಲೆದು ಕಳೆದಿದೆ ನಿಜದ ಪರಿವೆ..

ನನ್ನೆದೆಯ ಒಳಕಿಟಕಿಯಲಿ
ಹೊಂಚುಹಾಕಿದೆ ಬೆಳಕ ಕಿರುಬಾಣ..
ಸುಳಿವಿರದ ನವ ಸೆಳೆತದಲಿ
ಮುಳುಗಿಹೋಗದೆ ತೇಲೀತೇ ಹರಿವಾಣ..

ಮರದ ಆಟಿಕೆಯ ಮನಸಿನೊಳಗೆ
ರಂಧ್ರ ಕೊರೆಯಲೇ ಭಾವ ತೂರಲು..
ಬೆರೆವ ಒಲವಿನ ತೈಲದೊಳಗೆ
ಅದ್ದಿ ತೆಗೆಯಲೇ ಎಲ್ಲ ಕೀಲು..

ದಿನವು ತೀರದ ದಾಹದೊಳಗೆ
ವಿರಹವನು ಬೆರೆಸಿ ತುಳುಕಿಸಲೇ..
ಕತ್ತಲೆಯೇ ನೀ ಸುಳಿಯೆ ಬಳಿಗೆ
ಆಗಾಗ ತಿಳಿಯಲಿ ಬೆಳಕಿನಾ ಬೆಲೆ...

                             ~‘ಶ್ರೀ’
                               ತಲಗೇರಿ


ಶನಿವಾರ, ಜನವರಿ 4, 2014

"ರದ್ದಿ ಕಾಗದ"...

       "ರದ್ದಿ ಕಾಗದ"...

ತಾಜಾ ಹಾಳೆಗಳ ನಡುವೆ
ರದ್ದಿ ಕಾಗದವು ನಾನು...
ಹಗಲ ಹೊಳಪಿನ ನಡುವೆ
ಇದ್ದರೂ ಇರದ ಬದುಕೆನಲೇನು..

ಪುಟ್ಟ ಕೈಗಳಲಿ ದೋಣಿಯಾಗಿ
ಸಲಿಲದೊಡನೆ ಸಲಿಗೆಯೊಡನೆ ತೇಲಿಸಾಗಿ
ಮುಟ್ಟೋ ಸುಳಿಗಳಲಿ ದಿಟ್ಟವಾಗಿ
ಸೇರಿಕೊಳಲೇ ದೂರಸಾಗರ ಒಂಟಿಯಾಗಿ..

ಚುಕ್ಕಿ ದಿರಿಸ ತೊಟ್ಟ ಪಟವಾಗಿ
ಗಾಳಿಯೊಡನೆ ನಿತ್ಯ ಬೆಳೆವ ಹಟವಾಗಿ
ಹಕ್ಕಿಯುಸಿರು ಬೆರೆವ ಎದೆಯಾಗಿ
ತಬ್ಬಿಕೊಳಲೇ ಮುಗಿಲ ಮಡಿಲ ಮುಗ್ಧವಾಗಿ..

ಹಸಿದ ಉದರದ ತಂಪಿಗಾಗಿ
ತಂತಿ ಮೀಟುತ,ಸದ್ದಿನೊಡನೆ ಏಕವಾಗಿ
ಅಲೆವ ಜೋಗಿಯ ಸಲುವಾಗಿ
ಅನ್ನ ಹಿಡಿಯಲೇ ತುತ್ತಿನೂಟದ ಎಲೆಯಾಗಿ..

ರದ್ದಿ ಕಾಗದವೇ ನಾ ಆದರೇನು,..
ಚೆಲುವು ನಾಚಬೇಕು ನನ್ನ ಇದಿರು..
ಬೀಡುಬಿಟ್ಟ ಮೌನ ತಾಕದೇನು,..
ಕನಸ ತಟದ ಹೊಸತು ಕದಿರು...!

                          ~‘ಶ್ರೀ’
                            ತಲಗೇರಿ

ಶುಕ್ರವಾರ, ಜನವರಿ 3, 2014

"ಯೌವನದ ಮೂಸೆಯೊಳು"...

      "ಯೌವನದ ಮೂಸೆಯೊಳು"...

ಕತ್ತಲೆಯ ಪದರಿನಲಿ ತುಂಬು ಮೌನ
ಮೆತ್ತನೆಯ ಮಂಚದಲಿ ರತಿಯ ಧ್ಯಾನ..
ಕಲ್ಪನೆಯ ಸರಪಳಿಗೆ ಹಲವು ಕೊಂಡಿ
ಭ್ರಮೆಗಳಲೇ ಹೊಳೆವ ಪುಟ್ಟ ಬೆಳಕಿಂಡಿ..

ಮೌನದೊಳಗೆ ಸದ್ದಿಲ್ಲ,ಖಾಲಿ ಏಕಾಂತ
ಏಕಾಂತದೊಳಗು ನೆನಪ ಲಯ ತಾಳ ಮಿಡಿತ!
ಶೂನ್ಯದೊಳು ಬೆರೆತೀತೇ ಚಪ್ಪಾಳೆಯಾ ಸದ್ದು
ತುಡಿತವದು ಮೊದಲಾಯ್ತು ಶೂನ್ಯದಲೇ ಚಪ್ಪಾಳೆಯೆದ್ದು..

ನಿಶೆಯೊಳಗೆ ರೆಪ್ಪೆಗಳಲಿ ಬಣ್ಣದಾ ಸಾಲು
ನೆನಪುಗಳ ಜೊತೆ ಕಳೆವಾಗ ತಿಳಿನೀರ ಕಡಲು..
ಕನವರಿಸಿದ ಕನಸುಗಳ ಲೆಕ್ಕ ತಲೆದಿಂಬಿಗಿಲ್ಲ
ನಾಜೂಕು ಸಂಚಲನ ಇನ್ನು ನನ್ನೊಳಗೇ ಎಲ್ಲ..

ಬಿಸಿಯುಸಿರ ಗೊಣಗಾಟ ಕತ್ತಲಿನ ಛಾಯೆಯಲಿ
ನೂರೆಂಟು ಏರಿಳಿತ ಹಸಿಮನದ ಮೂಲೆಯಲಿ..
ಯೌವನದ ಮೂಸೆಯೊಳು ಎಲ್ಲ ಕರಗುವ ಮುನ್ನ
ಮಿಣುಕು ದೀಪಕೆ ತೆರೆದ ಮೈಗೂ ಚಿನ್ನದಾ ಬಣ್ಣ..

ಕತ್ತಲೆಯ ಪದರಿನಲಿ ತುಂಬು ಮೌನ
ಮೌನದಲಿ ಸೃಜಿಸೀತೇ ಸೃಷ್ಟಿಯಾ ತನನ..
ಮೋಹದಾ ಸೆಳೆತಕೆ ವಾಸ್ತವಕೂ ಮಂಪರು
ಭ್ರಮೆಗಳಲೇ ಇಣುಕೀತೇ ಬೆಳಕು ಒಂಚೂರು...


                                  ~‘ಶ್ರೀ’
                                    ತಲಗೇರಿ