ಭಾನುವಾರ, ಆಗಸ್ಟ್ 29, 2021

ಒಂದು ಶೃಂಗಾರದ ರಾತ್ರಿ



ಮನೆಯ ಪಕ್ಕದಲ್ಲೇ ಇರುವ ರಸ್ತೆಯಲ್ಲಿ ಬೆಳಕಿನ ರಂಗೋಲಿ ಇಡುವ ವಾಹನಗಳ ಸಂಖ್ಯೆ ಚೂರು ಕಡಿಮೆಯಾಗಿತ್ತು. ನಗರಕ್ಕೆ ರಾತ್ರಿಯಾಗುವುದಿಲ್ಲವಾದರೂ ಬಹುತೇಕ ಅಂಗಡಿಗಳು ಮುಸುಕೆಳೆದುಕೊಂಡು ಮಲಗುವ ತಯಾರಿಯಲ್ಲಿದ್ದವು. ಅಲ್ಲಲ್ಲಿ ಅಲ್ಲಲ್ಲಿ ಕೆಂಪು, ಹಳದಿ, ನೀಲಿ, ಚಿನ್ನದ ಬಣ್ಣದ ಮಿಣುಕು ಹುಳಗಳಂಥ ಬೆಳಕಿದ್ದರೂ ಅವು ಕಪ್ಪು ಉಡುಪಿಗೆ ಪೋಣಿಸಿದ ಮಣಿಗಳ‌ ಹಾಗೆ ಅಂತ ಅನಿಸಿದ್ದು ಹೌದು ನನಗೆ. ಅದರಲ್ಲೂ ಈಗ ನಾವಿರುವ ಹೊತ್ತಿನಲ್ಲಿ ಇಡೀ ಜಗತ್ತಿಗೆ ಅದ್ಯಾವುದೋ ಬರಿಗಣ್ಣಿಗೆ ಕಾಣದ್ದರ ಭೀತಿ ಬೇರೆ. ಹಾಗಾಗಿಯೇ ಇರಬೇಕು, ನಾವೆಲ್ಲರೂ ಒಂಥರಾ ಮೌನಕ್ಕೆ ಶರಣಾಗಿಬಿಟ್ಟಿದ್ದೇವೆ ಅಂತನ್ನುವ ಭಾವ ಪದೇ ಪದೇ ಒತ್ತರಿಸಿಕೊಂಡು ಬರುತ್ತದೆ ಈಗೀಗ ನನಗೆ. ಇದನ್ನು ಅವನಿಗೆ ಹೇಳಬೇಕು ಅಂದುಕೊಂಡಾಗಲೆಲ್ಲಾ, ಇದೆಂಥಾ ಇದು ರಗಳೆ, ಇದನ್ನೆಲ್ಲಾ ಹೇಳಿ ಅವನ ಮನಸ್ಸನ್ನು ಕದಡುವುದು ಯಾಕೆ? ಮೊದಲೇ, ನನ್ನ ಮನಸ್ಸು ವಿಚಲಿತವಾಗಿದೆ ಅನ್ನುವ ಸೂಚನೆ ಸಿಕ್ಕರೂ ಸಾಕು, ಉಳಿದೆಲ್ಲ ಕೆಲಸ ಬದಿಗಿಟ್ಟು ನನ್ನ ಉಪಚಾರಕ್ಕೆ ನಿಂತುಬಿಡುತ್ತಾನೆ. ಅವನದು ಉಸಿರುಗಟ್ಟಿಸುವ ಪ್ರೀತಿಯಲ್ಲ, ಅದೇ ಸಮಾಧಾನ ಹಾಗೂ ಬಹುಶಃ ಬದುಕು ನನಗೆ ಕೊಟ್ಟ ಅತಿ ದೊಡ್ಡ ಉಡುಗೊರೆ ಅಂತ ಅಂದುಕೊಳ್ಳುತ್ತಿರುವಾಗಲೇ, ಕೈಕಾಲು ಮುಖ ತೊಳೆದುಕೊಂಡು ಮಲಗಬೇಕು ಅಂದುಕೊಳ್ಳುತ್ತ ಅವ ಬಂದ. ಏನೋ ಗುಯ್ ಅಂತಿರೋ ಹಾಗಿದೆ ತಲೇಲಿ, ಚೂರು ಶಬ್ದ ಈ ಕಡೇನೂ ಕೇಳ್ತಿದ್ಯಪಾ ಅಂತ ತಮಾಷೆಯಾಗಿ ಹೇಳಿದ, ಅವನದು ಇದು ಯಾವತ್ತಿನ ವರಸೆ. ಏನಿಲ್ಲ, ಏನೋ ಒಂದು.. ಅಂದೆ ನಾನು. ಅಷ್ಟರಲ್ಲಿ ಮಳೆ ಶುರುವಾಯಿತು ಅನಿಸುತ್ತದೆ. ಈ ನಮ್ಮ ನಗರದ ಮಳೆಗೆ ಇದೊಂದು ಒಳ್ಳೆಯ ಅಭ್ಯಾಸವಿದೆ. ಮಲಗುವಾಗಲಾದರೂ ವಾತಾವರಣ ತಂಪಾಗಿರಲಿ ಅನ್ನುವ ಕಾರಣಕ್ಕೇ ತಾನು ಬಂದು ಲಾಲಿ ಹಾಡುವ ಹಾಗೆ, ಸುಮಾರು ಎಲ್ಲರೂ ಮಲಗುವ ಸಮಯಕ್ಕೇ ಹಾಜರಾಗುತ್ತದೆ ಅಪರೂಪಕ್ಕೆ ಮಳೆ. ಇದನ್ನೂ ಅವನೇ ಹೇಳಿದ.. ನಾನು ಇನ್ನೂ ಹಾಗೆಯೇ ಕುಳಿತಿದ್ದನ್ನು ನೋಡಿ, ನನ್ನ ಭುಜದ ಮೇಲೆ ಕೈಯಿಟ್ಟು, ಬಾ ಒಂದೊಂದ್ ಕಪ್ ಚಾ ಕುಡಿಯುವ ಅಂದ! ಮಲಗೋ ಹೊತ್ತಲ್ಲಿ ಇವಂದೆಂಥಾ ಚಾ ಹುಚ್ಚು ಅಂತ ಕಣ್ಣು ಹುಬ್ಬು ಗಂಟಿಕ್ಕಿಕೊಳ್ಳುತ್ತಾ ಅನುಮಾನದಲ್ಲಿ ಅವನನ್ನು ನೋಡಿದೆ. ಅರೇ, ಹೋಗು ಬಾಲ್ಕನೀಲಿ ಮೇಣದ ಬತ್ತಿ ಹಚ್ಚು, ನಾನು ಚಾ ಮಾಡ್ಕೊಂಡ್ ತಗೊಂಡ್ ಬರ್ತೀನಿ,  ಮಳೆ ಜೋರಾಗೋ ಥರಾನೂ ಕಾಣ್ತಿದೆ, ಈಗ್ ಚಾ ಕುಡ್ದ್ರೆ ಸಖತ್ ಮಜಾ ಇರತ್ತೆ ಅಂದ. 'ಅಪ್ಪಣೆ ಮಹಾಪ್ರಭು' ಅಂತ ಎದ್ದು ನಾನು ನನ್ನ ಪಾಲಿನ ಕೆಲಸ ಮಾಡುವುದಕ್ಕೆ ಹೊರಟೆ, ನನಗೂ ಚೂರು ಬೇರೆ ಯೋಚನೆಗಳು ಇಷ್ಟೇ ಇಷ್ಟು ಹೊತ್ತಾದರೂ ಬರಲಿ ಅನ್ನುವ ಇಂಗಿತ ಇದ್ದಂತಿತ್ತು ಹಾಗೂ 'ಏನ್ ಮಾಡ್ತಾನೆ ಇವ್ನು' ಅನ್ನೋ ಕುತೂಹಲಾನೂ ಇತ್ತು. 


ಗಾಳಿ ಅಷ್ಟೇನು ಇರದೇ ಇದ್ದುದಕ್ಕೆ ಮೇಣದಬತ್ತಿ ಹಚ್ಚುವುದು ಕಷ್ಟ ಆಗಲಿಲ್ಲ. ಆದರೂ ಎಲ್ಲಿ ಮಳೆ ನೀರು ತಾಗಿ ನಂದಿಹೋಗುತ್ತದೋ ಅನ್ನುವ ಅಳುಕಿತ್ತು. ಅಷ್ಟರಲ್ಲಿ ಅವ ಎರಡು ಕಪ್ ಚಹಾದೊಂದಿಗೆ ಬಂದ. ನಮ್ಮ ಮನೆಯ ಬಾಲ್ಕನಿಯಿರುವುದು ರಸ್ತೆಗೆ ಅಭಿಮುಖವಾಗಿ ಅಲ್ಲ. ಬಾಲ್ಕನಿಯ ಎದುರಿಗಿರುವುದು ಒಂದು ಉದ್ಯಾನವನ. ನಾವಿಬ್ಬರೂ ಒಟ್ಟಿಗೆ ಕೂತು ಚಹಾ ಕುಡಿಯುವಾಗಲೆಲ್ಲಾ ಆ ಉದ್ಯಾನವನದ ಕಡೆಗೇ ಮುಖ ಮಾಡಿ ಕೂರುವುದು. ಹಾಗೆ ಕೂತು ಚಹಾದ ಒಂದೊಂದೇ ಗುಟುಕು, ಚಹಾ ಸೊಪ್ಪಿನೊಂದಿಗೆ ಹಾಲು ಸೇರಿ ಉಂಟುಮಾಡುವ ಬಣ್ಣ ತುಟಿಗೆ, ನಾಲಿಗೆಗೆ ತಾಕುವಾಗಿನ ಸ್ಪರ್ಶವನ್ನೂ, ಅದರ ಬಿಸಿಯನ್ನೂ, ಉಗಿಯಲ್ಲಿರುವ ಪರಿಮಳವನ್ನೂ ಅನುಭವಿಸುತ್ತಾ ನಾವು ಚಹಾ ಕುಡಿಯುವ ಸಂಭ್ರಮವನ್ನು ನೋಡಲು ಯಾರಾದರೂ ಎದುರಿಗೆ ಇದ್ದರೆ ಖಂಡಿತಾ ಅವರ ರೋಮ ರೋಮಗಳಲ್ಲೂ ಸುಖದ ಉತ್ತುಂಗದ ಅನುಭವವಾಗುತ್ತಿತ್ತೇನೋ, ಚಹಾ ಕುಡಿಯುವುದೆಂದರೆ ನಮಗೆ ಭವಬಂಧನಗಳಿಂದ ಮುಕ್ತವಾಗುವ ಮಾಯಕದ ಕ್ಷಣ. ಇವತ್ತೂ ಚಹಾ ಕುಡಿಯುವ ಕಾರ್ಯಕ್ರಮ ಹಾಗೆಯೇ ಮುಗಿಯಿತು. ಈಗ ವಂದನಾರ್ಪಣೆ ಅನ್ನುವ ಹಾಗೆ ನನ್ನ ಕಡೆಗೆ ತಿರುಗಿ  ಅವ, "ಈಗ ಹೇಳು, ಏನಾಯಿತು?" ಅಂತ ಮೃದುವಾಗಿ ಕೇಳಿದ. ಅವ ಕೇಳುವುದೇ ಹಾಗೆ! 


ಅವ ಕೇಳಿದ ಮೇಲೆ ಅವನಿಗೆ ಹೇಳದೇ ಯಾವುದನ್ನೂ ಮುಚ್ಚಿಡುವುದಕ್ಕೆ ನನ್ನಿಂದ ಸಾಧ್ಯವಾಗುವುದಿಲ್ಲ. ಒಂದು ಭೋರ್ಗರೆತ ನನ್ನೊಳಗೆ ಹುಟ್ಟಿಕೊಂಡಿದ್ದು ನನ್ನ ಅನುಭವಕ್ಕೆ ಬಂತು. ಆ ಭೋರ್ಗರೆತದ ರೌರವವನ್ನೂ ಕೂತು ಕೇಳುವ ತಾಳ್ಮೆ ಅವನಲ್ಲಿತ್ತು. ಕಡಲ‌ ತಡಿಯಲ್ಲಿ ಕಪ್ಪು ಕಲ್ಲುಗಳ‌ ಮೇಲೆ ಲವಣದ ಪರಿಮಳದ‌ ಗಾಳಿಗೆ ಮೈಯೊಡ್ಡಿ ಯಾವ ಗಡಿಬಿಡಿಯೂ ಇಲ್ಲದೆಯೇ ಕೂರುತ್ತೇವಲ್ಲಾ ಅಂಥ‌ ಶಾಂತತೆ ಅವನದು. ನನ್ನ ಕಣ್ಣಲ್ಲಿ ಅವ ಕಣ್ಣಿಡುವಾಗಲೇ ನನ್ನರ್ಧ ತಳಮಳಗಳನ್ನು ಅಪಹರಿಸಿಬಿಡುತ್ತಿದ್ದ. ನನಗೂ ಮೊದಮೊದಲಿಗೆ ಇಂಥವನೊಬ್ಬ ಇರುವುದಕ್ಕೆ ಸಾಧ್ಯವಾ, ಅಥವಾ ಇವೆಲ್ಲವೂ ನಾನೇ ನನಗಾಗಿ ಕಟ್ಟಿಕೊಂಡ ಭ್ರಮೆಗಳಾ‌ ಅನ್ನುವ ಅನುಮಾನಗಳು ಬಹಳಷ್ಟಿದ್ದವು. ನನ್ನೆಲ್ಲ ಪ್ರಶ್ನೆಗಳಿಗೆ ಪ್ರತೀ ಸಲವೂ ಅವ ಉತ್ತರವಾಗಿ ನಿಲ್ಲುತ್ತಿದ್ದ. ಇವತ್ತೂ ಅಷ್ಟೇ, ಅವ ಕೇಳಿದನಲ್ಲ, ಕೇಳುವುದರಲ್ಲೂ ಹಲವು ಬಗೆಗಳಿರುತ್ತವೆ. ಕೆಲವೊಮ್ಮೆ ಕೇಳಬೇಕು ಅಂತ ಕೇಳುವುದು, ಇನ್ನು ಕೆಲವೊಮ್ಮೆ ಕೇಳಲೇಬೇಕು ಅಂತ ಕೇಳುವುದು. ಇವನದು 'ಹೇಳು, ಕೇಳಿಸಿಕೊಳ್ಳುವುದಕ್ಕೆ ನಾನಿದ್ದೇನೆ' ಅನ್ನುವ ಸಾಂಗತ್ಯದ ಭರವಸೆ. ಅವನ ಎಡತೋಳನ್ನು ನನ್ನ ಬಲತೋಳಿಂದ ಬಳಸಿದೆ. ಅವನ ಬೆರಳುಗಳ ಮಧ್ಯದಲ್ಲಿ ನನ್ನ ಬೆರಳುಗಳನ್ನು ಹೊಸೆದೆ. ಒಂದು ಬಿಸಿಯಾದ ಅನುಭವ ಅವನ ರೋಮಗಳಿಂದ ನನ್ನ ಚರ್ಮಕ್ಕೆ ವರ್ಗಾವಣೆಯಾದಂತೆ ಭಾಸವಾಯಿತು. ಪ್ರೀತಿಸುವವರ ಒಂದು ಸ್ಪರ್ಶದಲ್ಲಿ ಎಲ್ಲ ಗಾಯಗಳನ್ನೂ ಹೊಲಿದು, ಮಾಯಿಸುವ ಔಷಧವಿದೆ ಅಂತ ಅವನೇ ಆಗಾಗ ಹೇಳುತ್ತಿರುತ್ತಾನೆ. ನಾನು ಅವನ‌ ಎದೆಗೆ ಒರಗಿಕೊಂಡಾಗಲೆಲ್ಲಾ, ಶತ ಶತಮಾನಗಳಿಂದ ಚೂರು ಬಿಸಿಲು ಕಡಿಮೆಯಾಗಬಹುದೆಂದು ಕಾಯುತ್ತಿರುವವನ ಎದೆಗೇ ಮರವೊಂದು ತನ್ನ ರೆಂಬೆಕೊಂಬೆಗಳ ಚಾಚಿ ನೆರಳ ಹಾಸಿದಂತೆ ಇದು ಅಂತ ನನ್ನ ಕುರಿತು ಯಾವಾಗಲೂ ಅವ ಹೇಳುತ್ತಿರುತ್ತಾನೆ. ಅವನಿಗೆ ಹೇಳಿದೆ, ಎಲ್ಲವೂ ಇದ್ದು ಏನೋ ಕಳೆದುಕೊಂಡಂತೆ; ಎಳೆದುಕೊಂಡ ಉಸಿರು ಮತ್ತೆ ಬಿಡಲಿಕ್ಕೇ ಸಾಧ್ಯವಾಗದಿದ್ದರೆ? ಅನಿಶ್ಚಿತತೆ; ನಾಳೆ‌ ಸೂರ್ಯೋದಯವಾದ ಕೂಡಲೇ ಮತ್ತೆ ಎಲ್ಲವೂ ಹೊಸತಾಗಿ ಶುರುವಾಗುತ್ತದೆ ಬಿಡು ಅಂತಂದುಕೊಂಡರೂ, ಆ ಎಲ್ಲಾ ನಾಳೆಯ ಮುಂಜಾವುಗಳೂ ನಿನ್ನೆಗಳ ಭಾರದೊಂದಿಗೇ ಹುಟ್ಟಿಕೊಂಡಂತೆ ತಳಮಳವಾಗುತ್ತದೆ. ಈ ಹೊತ್ತು ಹೇಗೋ ಕಳೆಯಬಹುದು ಬಿಡು ಅಂತೆಲ್ಲಾ‌ ಅಂದುಕೊಂಡ ಮಾತ್ರಕ್ಕೆ ಹಾಗೆಲ್ಲಾ ಅದು ಕಳೆದುಹೋಗುವುದಿಲ್ಲ. ನಿನಗೆ ಗೊತ್ತಲ್ವಾ, ಮನಸ್ಸು ಭಾರವಾದಷ್ಟೂ ಕಾಲದ‌‌ ಗತಿ ನಿಧಾನವಾಗುತ್ತಾ ಹೋಗುತ್ತದೆ. 


ಅವ ನಿಧಾನವಾಗಿ ನನ್ನ ಕೈಯನ್ನು ಅವನ ಎಡತೋಳಿನಿಂದ ಬಿಡಿಸಿಕೊಂಡ, ಅವನ ಎರಡೂ ತೋಳುಗಳಿಂದ ನನ್ನನ್ನು ಪೂರ್ಣವಾಗಿ ಆವರಿಸಿಕೊಂಡು ಅವನೆದೆಗೆ ಮತ್ತೆ ನನ್ನ ತಲೆ ಒರಗುವಂತೆ ಚಾಚಿಕೊಂಡ. ಒಂದು ಕ್ಷಣ ಅವನ ಕೆನ್ನೆಗಳಲ್ಲಿ ಮಂದಹಾಸದ ಗೆರೆಗಳು ಮೂಡಿ ಅಲ್ಲೇ ನೆಲೆಸಿದಂತೆ ಕಂಡವು, ನಾನು ಒರಗಿದಲ್ಲೇ ತಲೆಯೆತ್ತಿ ಅವನನ್ನೇ ನೋಡುವ ಪ್ರಯತ್ನದಲ್ಲಿದ್ದೆ. ನನ್ನ ತಲೆಗೂದಲ ಬುಡದಲ್ಲಿ ಕೈಯಾಡಿಸುತ್ತಾ ಅವ ಕೇಳಿದ, ಯಾಕೆ ಹೀಗೆ ಅನ್ಸ್ತಿದ್ಯಂತೆ?.. ಗೊತ್ತಿಲ್ಲ ಅಂತನ್ನುವುದು ನನ್ನ ಉತ್ತರವೆಂದು ಅವನಿಗೆ ಗೊತ್ತಿತ್ತು. ನಾನೇ ಮುಂದುವರೆದು ಹೇಳಿದೆ,‌ ಏನಾದರೊಂದು ಹೊಸತು ಶುರುವಾದ ಸಮಯದಲ್ಲಿ ಹೊಸತರ ಕುರಿತಾಗಿ ಹೆಚ್ಚು ಗಮನ ಕೊಡುವಾಗ ಹಳೆಯದರ ಕುರಿತಾಗಿ ಗಮನ ಚೂರು ಕಡಿಮೆಯಾದಂತೆ‌ ತೋರುವುದೇನೋ ಹೌದು; ಆದರೆ, ಅದರರ್ಥ ನಾವು ಹಳತನ್ನು ಮರೆತೆವು ಅಂತೇನೂ ಅಲ್ಲ‌ ಅಲ್ವಾ? ಆದರೆ, ಯಾಕೆ ಕೆಲವೇ ಕೆಲವು ಹಳೆಯ ಸಂಬಂಧಗಳು ಮಾತ್ರವೇ ಎಷ್ಟೋ ಕಾಲಗಳ‌ ನಂತರವೂ ಸಹಜವಾಗೇ ಇರುತ್ತದೆ, ಉಳಿದವುಗಳು ಏನೂ ಇರಲಿಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಬೇರೆಯಾಗಿ ಹೋಗುತ್ತವೆ? ಅಷ್ಟೂ ವರ್ಷಗಳ ಕಾಲದ ಅಷ್ಟೂ ನೆನಪನ್ನು ಅಷ್ಟು ಸುಲಭಕ್ಕೆ ಬಿಟ್ಟುಕೊಡಬಹುದಾ? ಕೆಲವೊಮ್ಮೆ ಮಾತು ಅನಗತ್ಯವಾಗುತ್ತದೆ, ಆದರೆ ಅದನ್ನೇ‌ ಅಹಂಕಾರ ಅಂತಂದುಕೊಂಡು ದೂರವಾಗಬಹುದಾ? ಅಸ್ಪಷ್ಟ ಸ್ವಪ್ನಗಳಲ್ಲಿ ಒಂದು ಪರಿಚಿತ ದಾರಿಗಾಗಿ ಪರಿತಪಿಸುತ್ತಾ ಇರೋರಲ್ವಾ ನಾವು? ನೀನೇ ಹೇಳು ಹೀಗೆ ಸಂಬಂಧಗಳು ಸವಕಲಾಗಬಹುದಾ? ಗುಮ್ಮನಂತೆ ಮುಖ ಮಾಡಿಕೊಂಡು ಅವನ ನೋಡಿದೆ. ಮುಟ್ಟುತ್ತಿರುವನೋ ಇಲ್ಲವೋ ಅನ್ನುವಂತೆ ಹಣೆಯ ತುದಿಯಿಂದ ತನ್ನ ಬಲಗೈಯ ತೋರುಬೆರಳನ್ನು ಜಾರಿಸುತ್ತಾ ಜಾರಿಸುತ್ತಾ ಕಣ್ಣು ಹುಬ್ಬುಗಳ ಮಧ್ಯದ ಹಾದಿಯಿಂದ ಕೆಳಗಿಳಿದು ಮೂಗಿನ ತುದಿಯಲ್ಲಿ ನಿಂತ, ಪಕ್ಕದ ಮೂಗುತಿ ಹವಾಮಾನ ವೈಪರೀತ್ಯದ ದಾಳಿಗೆ ತುತ್ತಾಗಿ ಅಸ್ಥಿರ ಚಲನೆಯಲ್ಲಿತ್ತು. ಇದು ಹೊಸತಲ್ಲ, ಆದರೂ ಇದು ಮತ್ತೆ ಮತ್ತೆ ಹೊಸತೆನ್ನುವಂಥದ್ದೇ ಅನುಭವ, ಅವನಿಗೆ ಮಾತ್ರ ಗೊತ್ತಿರುವ ನನ್ನ ಗುಟ್ಟು.. 


ಮುಂದುವರೆದು ಅವ ಹೇಳಿದ, ನಿನಗೆ ಗೊತ್ತಾ, ನಾವು ಅದೆಷ್ಟೋ ನೆನಪುಗಳ ನೆರಳುಗಳಿಂದ ಆಚೆ ನಿಂತು ತಾಜಾ ಬಿಸಿಲನ್ನು ನಿಧಾನವಾಗಿ ಉಸಿರಲ್ಲಿ ತುಂಬಿಕೊಳ್ಳುತ್ತಿದ್ದೇವೆ ಅಂದುಕೊಳ್ಳುತ್ತೇವೆ, ಆದರೆ ಅದು ಬರೀ ಅಷ್ಟೇ ಅಲ್ಲ; ಆ ನೆರಳುಗಳ ನೆನಪಲ್ಲೇ ಈ ಬಿಸಿಯನ್ನು ಅನುಭವಿಸುತ್ತೇವೆ. ಇವೆರಡೂ ಬೇರೆ ಬೇರೆ ಕ್ರಿಯೆಗಳಾದರೂ ಒಂದರ ಅನುಭವವನ್ನು ಇನ್ನೊಂದು ಸಲಹುತ್ತದೆ. ನೆನಪಿದೆಯಾ ನಿನಗೆ, ಆವತ್ತೊಂದಿನ ನಾವು ಆ ಹಳದಿ ಹೂವಿನ ಕಣಿವೆಗೆ ಹೋಗುವ ಮುನ್ನ ರಾತ್ರಿ ಎತ್ತರದ ಭಾಗದ ಮನೆಯಲ್ಲಿ ತಂಗಿದ್ದು.. ಜೀರುಂಡೆಗಳು ಪೂರಾ ರಾತ್ರಿ ಕಿರ್ರೆನ್ನುತ್ತಾ ಕೂಗಿದ್ದು, ಅದ್ಯಾವುದೋ ವಿಲಕ್ಷಣ ಪರಿಮಳ ಅಲ್ಲಿನ ಇಡೀ ವಾತಾವರಣದಲ್ಲಿ ಹರಡಿಕೊಂಡಿದ್ದು, ಅಲ್ಲಿನ ಆ ರಾತ್ರಿ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲಾಗದ ನಾನು ಒದ್ದಾಡುತ್ತಿರುವಾಗ ನೀನು ಅರ್ಧ ರಾತ್ರಿಯವರೆಗೂ ನನ್ನನ್ನು ಹೀಗೇ ಒರಗಿಸಿಕೊಂಡು ನಿನ್ನ ಬಾಲ್ಯದ ಕತೆಗಳನ್ನು ಹೇಳಿ ನನ್ನ ಗಮನವನ್ನು ಬೇರೆಡೆಗೆ ಸೆಳೆದಿದ್ದು.. ಆವತ್ತು ಆ ಒದ್ದಾಟವನ್ನು ನಾವಿಬ್ಬರೂ ಕಡಿಮೆ ಮಾಡಲಿಕ್ಕಾಗುವುದಿಲ್ಲವೆಂಬುದು ಇಬ್ಬರಿಗೂ ಅರಿವಿತ್ತು. ನಾವು ಆ ಪ್ರಯತ್ನವನ್ನೂ ಮಾಡಲಿಲ್ಲ, ಬದಲಾಗಿ ಬದುಕನ್ನು ಹಂಚಿಕೊಂಡೆವು, ವರ್ತಮಾನದಲ್ಲಿ ಭೂತಕಾಲವನ್ನೂ ನಿನ್ನ ಬಾಲ್ಯವನ್ನೂ ಜೀವಿಸಿದೆವು, ಆ ನೆನಪುಗಳ ಭಾಗವಾಗಿದ್ದ ಅದೆಷ್ಟೋ ವ್ಯಕ್ತಿಗಳು ಈಗ ಜೊತೆಯಲ್ಲಿ ಇಲ್ಲ ಅಲ್ವಾ.. ನಾವು ಯಾವ ನೆನಪನ್ನು ಉಳಿಸಿಕೊಳ್ಳಬೇಕು ಅಂತ ಬಯಸುತ್ತೇವೋ ಅಂಥವುಗಳನ್ನು ಮಾತ್ರ ಉಳಿಸಿಕೊಳ್ಳುತ್ತೇವೆ; ಅವುಗಳಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇರಬಹುದು. ಕೆಲವರು ಹಾಗೆಯೇ, ಆ ಭಾಗದ ಬದುಕಿನಲ್ಲಿ ಮಾತ್ರ ಭೇಟಿಯಾಗುವವರು. ಅದರ ನಂತರ ಅವರ ಅಸ್ತಿತ್ವವೆನ್ನುವುದು ಸ್ವಪ್ನದ ಹಾಗೆ. ಯಾವುದೋ ಅನಪೇಕ್ಷಿತ ಸಮಯದಲ್ಲಿ ಧುತ್ತನೆ ನೆನಪಾಗಬಹುದು; ಅಥವಾ, ಕೆಲವೊಮ್ಮೆ ಮುಗುಳುನಗೆಯೊಂದಿಗೆ ವರ್ತಮಾನವನ್ನು ಉಲ್ಲಸಿತಗೊಳಿಸಬಹುದು. ನಿನ್ನ ಅನಿಶ್ಚಿತತೆ, ನಿನ್ನ ನೆನಪುಗಳು ಹಾಗೆಯೇ ಇರಲಿ ಬಿಡು, ಈಗ ಇರುವ 'ನೀನು' ಆಗಿರುವುದು ಈ ಎಲ್ಲ ಅನುಭವಗಳಿಂದಲೇ.. ಅವುಗಳನ್ನೇ ತಿರಸ್ಕರಿಸಿದರೆ ನಿನ್ನನ್ನೇ ತಿರಸ್ಕರಿಸಿದಂತೆ. ಬದುಕು ಎಲ್ಲದರ ಒಟ್ಟೂ ಮೊತ್ತ, ಬಿಡಿ ಹತ್ತುಗಳ ಲೆಕ್ಕದಲ್ಲಿ ಅವುಗಳನ್ನು ಪ್ರತ್ಯೇಕಿಸುವುದು ಬೇಡ ಅಲ್ವಾ..  ಇವತ್ತು ನಾ ನಿನಗೆ ನನ್ನ ಬಾಲ್ಯದ ಕತೆಗಳನ್ನು ಹೇಳ್ತೀನಿ, ನಿನ್ನಷ್ಟು ಚೆಂದ ಅಲ್ಲ, ಆದ್ರೂ, ಏನೋ ಚೂರು ಹಾಂಗೇ.. ಅನ್ನುತ್ತಾ ನನ್ನ ಮೂಗನ್ನು ತನ್ನ ಬೆರಳಿಂದ ಕುಟುಕಿದ. 


ಅವರಿಬ್ಬರೂ ಎರಡು ಗಾಯಗಳು ಒಂದಕ್ಕೊಂದು ಅಂಟಿಕೊಂಡಂತೆ ಕೂತಿದ್ದರು. ಬೇಗ ಮಾಯುವುದಕ್ಕಿಂತ ಆ ನೋವಿನ ಪ್ರತಿ ಕ್ಷಣವನ್ನೂ ಜೀವಿಸುವುದೇ ಮುಖ್ಯ ಎನ್ನುವಂತೆ.. ಬೇಕಂತಲೇ ಒಂದು ಸಣ್ಣ ಕಲೆ ಉಳಿಸಿಕೊಳ್ಳುವಂತೆ.. ಅನಾಥ ಮೌನದ ಕಣಕಣಗಳಲ್ಲೂ ಮಳೆಯ ಹಾಡು ಇನ್ನಷ್ಟು ವಿಲೀನವಾಗಿತ್ತು, ಆ ರಾತ್ರಿ ಮತ್ತಷ್ಟು ಪ್ರೌಢವಾಗಿತ್ತು...


~`ಶ್ರೀ'

   ತಲಗೇರಿ

4 ಕಾಮೆಂಟ್‌ಗಳು: