ಬುಧವಾರ, ಅಕ್ಟೋಬರ್ 26, 2011


                                ‘ಜಂಗಮ’...
                                         .....ಮನ್ವಂತರದ ನವ ಪೂರ್ಣಿಮಾ...


           ಅವಳು ನಡೆಯುತ್ತಿದಾಳೆ;ಬರಿಗಾಲಿನಲ್ಲಿ,ಬರಿದಾದ ಮನಸ್ಸಿನಲ್ಲಿ...ವೈರುಧ್ಯ ವೈವಿಧ್ಯಗಳಲ್ಲೆಲ್ಲ ಬೆರೆತು,ಬದುಕು ನಡೆಸಬೇಕೆಂದು ಬಯಸಿದ್ದಳು.ಆದರಿಂದು ಬಯಕೆಗಳೆಲ್ಲಾ ಬೇಲಿಯನ್ನು ಹಾರಿ ಕಾಣದಾಗಿದ್ದವು.ಬೇಲಿಯೂ ಕೂಡ ಕಾಣದಾಗಿತ್ತು.ಖಾಲಿ ಖಾಲಿ...ಭಾವಗಳ ಸಂಘರ್ಷವಿರುತ್ತಿದ್ದ,ಕನಸುಗಳ ಕನವರಿಕೆ,ಚಡಪಡಿಕೆಯಿರುತ್ತಿದ್ದ ಮನಸ್ಸಿಂದು ಏನೂ ಇಲ್ಲದೇ ಬಿಕೋ ಎನ್ನುತ್ತಿತ್ತು...ಮನಸಿನ ಅಂಗಳದಲ್ಲಿ ಮುತ್ತಿದ್ದ ನೆನಪಿನ ಹೆಜ್ಜೆ ಗುರುತುಗಳನ್ನು ಅಳಿಸುವ ಎಲ್ಲ ಪ್ರಯತ್ನಗಳೂ ನಡೆದಿದ್ದವು.ಬಹುಪಾಲು ನೆಲವು ಹೆಜ್ಜೆ ಗುರುತುಗಳಿಂದ ಮುಕ್ತವಾಗಿತ್ತು.ಮರೆಯಬೇಕೆಂದುಕೊಂಡಿರುವ ಅವಳ ಬದುಕಿನಂತೆಯೇ,ಅವಳ ಮನದ ಅಂಗಳದಲ್ಲಿ ನಡೆದಾಡಿದ ಹೆಜ್ಜೆಯ ದನಿಗಳೂ ಕೂಡ ಮರೆತುಹೋಗಿದ್ದವು.ನಶೆಯೇರಿದ್ದ ಮನಸ್ಸು ಕಸಿವಿಸಿಗೊಳಗಾಗಿ ಕೃಶವಾಗಿತ್ತು.ಉಸಿರಿನೊಂದಿಗೆ ಹೊಸೆದುಕೊಂಡ ಹೆಸರುಗಳನ್ನೆಲ್ಲಾ ಹರಿದುಹಾಕುವ,ತರಿದುಹಾಕುವ ಅವಳ ಪ್ರಯತ್ನ ಫಲಿಸತೊಡಗಿತ್ತು.ತನ್ನಂತರಂಗವನ್ನು ಬಹಿರಂಗವಾಗಿಸಿಕೊಂಡು ನೋಡಿದಾಗ,ಅವಳಿಗೆ ಕಂಡದ್ದು ತನ್ನೊಳಗಿನ ಕಲ್ಮಶಗಳು,ಹೊಲಸುಗಳು...ತನ್ನೊಳಗಿನ ಕ್ರೌರ್ಯ,ಹಸಿದ ಯೌವನದ ಬಿಸಿಗೆ ತಣಿದಿದ್ದು ಎಲ್ಲವೂ ಅವಳಿಗೆ ಈಗ ಅಸಹ್ಯವಾಗಿದ್ದವು.ಅದಕ್ಕೆಂದೇ ನಡೆಯುತ್ತಿದ್ದಾಳೆ;ಸಾವೆಂಬ ಬೀಜವನ್ನು ಮನದಲ್ಲಿ ನೆಟ್ಟು,ಇಷ್ಟು ದಿನ ನೀರೆರೆಯುತ್ತಿದ್ದವಳು...ಈಗ ಒಂದೇ ಸಮನೆ ಟಿಸಿಲೊಡೆಯಬೇಕೆಂಬ ಹಂಬಲ..ಕ್ಷಣದ ಸಮಸ್ಯೆಗೆ ಶಾಶ್ವತ ಪರಿಹಾರವೆಂದರೆ ಆತ್ಮಹತ್ಯೆ ಒಂದೇ ಅಲ್ಲವೇ?ನಿಜ,ಅವಳು ತಾನಂದುಕೊಂಡಂತೆಯೇ ವೈವಿಧ್ಯತೆಯಲ್ಲಿ ಜೀವಿಸಿದ್ದಾಳೆ.ಎಲ್ಲೆ ಮೀರಿ ಎಲ್ಲವುಗಳಿಗೆ ಬಲಿಯಾಗಿದ್ದು ಅವಳಿಗೆ ಈಗ ತನ್ನ ಜೀವನದ ಇನ್ನೊಂದು ಮುಖವನ್ನು ಪರಿಚಯಿಸಿದೆ.ಯಾವ ಕ್ಷಣದಲ್ಲೋ ಅವಳ ಯೋಚನೆಯ ಲಹರಿ ಬದಲಾಗಿಬಿಟ್ಟಿತ್ತು.ಅವಳಿಗೆ ಈಗ ಎಲ್ಲವುಗಳಿಂದ ಮುಕ್ತವಾಗಬೇಕಿದೆ.ಪ್ರಶಾಂತ ಮೌನದೊಳಗೆ ಬೆರೆಯಬೇಕಾಗಿದೆ.ನೀರವತೆಯೊಳಗೆ ನೀರಾಗಬೇಕಿದೆ.ಎಲ್ಲ ಕುತೂಹಲಗಳ ತಾಣವಾದ,ಅಭೇದ್ಯ ರಹಸ್ಯವಾದ ಸಾವಿನ ಮನೆಯೊಳಗೆ ಅಡಿಯಿಟ್ಟು ಮಲಗಬೇಕಿದೆ...!ಅವಳು ಈಗ ಅಳುತ್ತಿಲ್ಲ.ಅದು ಈಗ ಅವಳಿಗೆ ಬೇಕಿಲ್ಲ ಕೂಡಾ!ಗಾಮಿನಿಯೇ ಬತ್ತಿರುವಾಗ ನೀರಧಿಗೆಲ್ಲಿಯ ಜಲವು,ಒಲವು?ಇಲ್ಲ,ಅವಳಿಗೆ ಈಗ ಯಾವುದೂ ಬೇಕಾಗಿಲ್ಲ.ಎಲ್ಲವನ್ನು ತೊರೆದು,ಚಿಂತೆಯಿರದ ಚಿತೆಯೇರುವ ಬಯಕೆಯೊಂದು ಉಳಿದುಕೊಂಡಿತ್ತು,ಬೆಳೆದುಕೊಂಡಿತ್ತು..ಒಂದು ಗೂಟದಿಂದ ಬೇಲಿ ಆಗುವುದಿಲ್ಲ ಅಲ್ಲವೇ?ಸಾವೇ ಅವಳಲ್ಲಿನ ಒ೦ಟಿ ಬಯಕೆ!ನಡೆಯುತ್ತಾ ನಡೆಯುತ್ತಾ ಈಗ ಅವಳು ಆಳವಾದ ಕಣಿವೆಯ ಎದುರು ಬಂದು ನಿಂತಿದ್ದಾಳೆ.ಒಂದೇ ಸಮನೆ ಕೆಳಗೆ ಜಾರಿಬಿಡಬೇಕೆಂಬ ತೀವ್ರತೆ..ಇಷ್ಟು ದಿನದ ಈ ಎಲ್ಲ ಗದ್ದಲಗಳಿಗೆ,ಮುಗಿದ ಅಧ್ಯಾಯಗಳಿಗೆ ಬೆನ್ನುಡಿ ದೊರೆವ ಕ್ಷಣ ಹತ್ತಿರವಾಯಿತೆಂಬ ಆನಂದ...ಜೀವಂತ ಪಾತ್ರಗಳ ತೆರೆಮರೆಯ ನಾಟಕಕ್ಕೆ ಇಂದು ಪರದೆ ಬೀಳುವುದೆಂಬ ತುಡಿತ...ನಿಧಾನವಾಗಿ ಕತ್ತಲಾಗತೊಡಗಿತ್ತು..ಅವಳಲ್ಲೇ ತಮಸ್ಸು ತುಂಬಿರುವಾಗ,ಅದಕ್ಕೇ ಹೆದರದವಳು,ಈಗ ಈ ಬಾಹ್ಯ ಕತ್ತಲೆಗೆ ಹೆದರುತ್ತಾಳೆಯೇ?ಕತ್ತಲಾಗುತ್ತೆ ಅಂದುಕೊಂಡವಳಿಗೆ,ಆ ಗಗನದಿ ಚಂದಮಾಮ ಉದಯಿಸುತ್ತಿರುವುದು ಕಂಡಿತು.ಹಾರಿಬಿಡಬೇಕು ಎಂದು ಹೆಜ್ಜೆ ಮುಂದಿಟ್ಟವಳಿಗೆ ಆಶ್ಚರ್ಯ!.."ನಿಲ್ಲು ಮಿಹಿಕಾ,ಆತುರಪಡಬೇಡ"ಎಂಬ ಕಾಳಜಿಯ ಕೂಗು!...ಅರೇ!ಏನಿದು ಅಚ್ಚರಿ..ನನ್ನ ಭ್ರಮೆಯಿರಬೇಕು;ದ್ವಂದ್ವವೇಕೆ?..ಸಾಯಲು ಹಾತೊರೆಯುತ್ತಿರುವ ತನುವನ್ನು,ಮನಸ್ಸು ಕರೆಯುತ್ತಿರಬಹುದೇ?ಇರಬಹುದು,ನನ್ನ ಈ ಹೆಸರು ಈ ಊರಲ್ಲಿ ಯಾರಿಗೆ ತಿಳಿದಿದೆ?ಬಾಲ್ಯದಲ್ಲಿ ತಂದೆ ತಾಯಿ ಇಟ್ಟ ಹೆಸರು‘ಮಿಹಿಕಾ’!ನಾನೀಗ ನನ್ನ ಹೆಸರನ್ನು‘ಚಂದ್ರಿಕಾ’ಎಂದು ಬದಲಿಸಿಕೊಂಡಿದ್ದೇನೆ.ಹೊತ್ತು ಗೊತ್ತಿಲ್ಲದ ಈ ಸಂಜೆಯಲ್ಲಿ ಮನಸ್ಸಿಗೇಕೆ ಇಂತಹ ಹುಚ್ಚು?ಮತ್ತೆ ಹೆಜ್ಜೆ ಎತ್ತುವಷ್ಟರಲ್ಲಿ ಮತ್ತದೇ ಕೂಗು!ಉಸಿರ ಕೊಲ್ಲುವ ಈ ಹೊಸತು ವೇಳೆಯಲ್ಲಿ,ಹೆಸರ ಕರೆವ ಮನುಜನಾರು?ನಾನು ಕನಸುಗಳನ್ನೆಲ್ಲಾ ಎಂದೋ ಕಳೆದುಕೊಂಡುಬಿಟ್ಟಿದ್ದೇನೆ.ಇದ್ದ ಬಿದ್ದ ಹರಕು ಗುಡಿಸಲುಗಳಲ್ಲಿ ಮಲಗಿದ್ದ,ಬಣ್ಣವಿಲ್ಲದ ಜೀವಗಳು ನನ್ನೊಳಗಿನ ತಾಪಕ್ಕೆ ಬೆಂದು,ಕಮಟಿಹೋಗಿವೆ.ಅದರ ಸುಳಿವಿನ ಹೊಗೆಯೂ ಈಗ ನನ್ನೊಳಗಿಲ್ಲ.ಛೇ!ಮದದ ಘರ್ಷಣೆಗೆ ಸಿಕ್ಕಿರುವುದು ಸಾಕೆಂದು,ದುಗುಡಗಳ ದಂಗೆಯಿರದ,ಮಧುರತೆಯ ಹಂಗಿರದ,ಜಂಗಮತೆಯ ಗುಂಗಿರದ ಸಾವಿನರಮನೆಗೆ ತೆರಳಬೇಕೆಂದುಕೊಂಡರೆ,ಪದೇ ಪದೇ ಮನಸ್ಸಿನ ತಕರಾರು!..ಎಂದುಕೊಳ್ಳುತ್ತಾ,ಮತ್ತದೇ ಭ್ರಮೆ ಎಂದು ಉಸುರಿದಳು...ಆಗ,‘ಇದು ಕಲ್ಪನೆಯ ನರ್ತನವಲ್ಲ;ವಾಸ್ತವದ ಸಂಭ್ರಮ,ಮಿಹಿಕಾ’ಎನ್ನುವ ನುಡಿಗಳು..ಏನೋ ನೆನಪಾದಂತೆ ತಟ್ಟನೆ ತಿರುಗಿದಳು.ಯಾರೋ ನಗುತ್ತ ನಿಂತಿದ್ದಾರೆ.ಅದೆಂಥ ಸಮ್ಮೋಹಕ,ಪ್ರಶಾಂತ ನಗು!ಮುಗುಳ್ನಗು ಎನ್ನಬೇಕೋ,ಚಂದದ ಸಿಹಿಸ್ವಪ್ನ ನಗೆಯೆನ್ನಬೇಕೋ ತಿಳಿಯುತ್ತಿಲ್ಲ ಅವಳಿಗೆ..ಕಣ್ಣುಗಳಲ್ಲಿನ ಕಾಂತಿ ಬೆಳಕು ಕೊಡುವಂತೆ ತೋರುತ್ತಿದೆ.ತೇಜಸ್ಸು ಉಕ್ಕಿ ಹರಿಯುತ್ತಿದೆ.ಅವನು ಕರೆದ ಆ ಧ್ವನಿಯಲ್ಲಿ ಔನ್ನತ್ಯವಿದೆ,ಕಾಳಜಿಯ ಸಾಂಗತ್ಯವಿದೆ,ಗಾಂಭೀರ್ಯದ ಮಾಧುರ್ಯವಿದೆ...ನಗುತ್ತ ನಿಂತಿದ್ದಾನೆ.ಯಾರೀತ?ಸ್ಮೃತಿಯೊಳಗೆ ಅಸ್ಪಷ್ಟ ಚಿತ್ರಣ..ಎಂದೋ ನೋಡಿದಂತೆ,ಮಾತಾಡಿದಂತೆ ಭಾಸ!ಮುಖದಲ್ಲಿ ಸೌಂದರ್ಯ ಮನೆಮಾಡಿದೆ.ಅಗಲವಾದ ಹಣೆ..ಎದೆಯ ಮೇಲೆ ಹದವಾಗಿ ಮಲಗಿರುವ ಗಡ್ಡ..ಮತ್ತೆ ಮತ್ತೆ ಆ ಕಣ್ಣುಗಳು ಕಾಡುತ್ತಿವೆ;ಎಂದೂ ಮಾಸದ ಆ ನಗುವಿನಂತೆ....ಅರೇ!..ಅರೇ!..ಇವನು..ಇವನು..ತನ್ನಲ್ಲಿಯೇ ತಡವರಿಸುತ್ತಿದ್ದಾಳೆ.ಏನು ಹೇಳಿದ ಆತ?‘ಇದು ಸಂಭ್ರಮ’ಎಂದಲ್ಲವೇ?ನಿಜ,ಆತ ಹೇಳಿದ್ದು ನಿಜ..!ಜಗದೆಲ್ಲ ಬಂಧನಗಳಿಂದ ಮುಕ್ತಳಾಗುತ್ತಿರುವ ನನಗೆ ಇದು ಸಂಭ್ರಮವೇ!ನನ್ನ ಬದುಕಿನ ಪುಸ್ತಕದಲ್ಲಿನ ಹಲವು ಹಾಳೆಗಳನ್ನು ಖಾಲಿಬಿಡುವ ಒಂಥರಾ ಸಂಭ್ರಮ!ಪುಟಗಳು ಮುಗಿಯುವ ಮೊದಲೇ ಅಕ್ಷರಗಳ ಸಂಗಮ ಮುಗಿಯುವ ಸಂಭ್ರಮ!ಇನ್ನೊಂದೆಡೆ,ಈತನನ್ನು ನೋಡುತ್ತಿರುವ ಸಂಭ್ರಮ!..ಇವನು,ಅವನೇ ಅಲ್ಲವೇ?..ನಾನು ವ್ಯಾಸಂಗ ಮಾಡುತ್ತಿರುವ ಸಮಯದಲ್ಲಿ ನನ್ನ ಸಹಪಾಠಿಯಾಗಿದ್ದವನು.ಓದಿನಲ್ಲೂ ಮುಂದು,ಆಟಗಳಲ್ಲೂ ಕೂಡ ಇವನದು ಮೊದಲ ಸ್ಥಾನವೇ!ಎಲ್ಲರ ಅಚ್ಚುಮೆಚ್ಚಿನ ವ್ಯಕ್ತಿ.ಹುಡುಗಿಯರ ಕನಸಿನ ರಾಜಕುಮಾರ,ಹೃದಯ ಗೆಲ್ಲುವ ಚೋರ ಇವನೇ ಆಗಿದ್ದನಲ್ಲವೇ?ನಾನು ಅವನಲ್ಲಿ ಅನುರಕ್ತಳಾದೆನಲ್ಲವೇ?ಅವನಲ್ಲಿ ನನ್ನ ಪ್ರೇಮವನ್ನು ನಿವೇದಿಸಿಕೊಂಡಾಗ,ಆತ ಹೇಳಿದ್ದು,"ಮಿಹಿಕಾ!ಪಯಣದ ಯಾವುದೋ ಒಂದು ಬಿಂದುವಿನಲ್ಲಿ ಸಂಬಂಧಗಳು ಬೆಸೆಯುತ್ತವೆ..ಇನ್ನೊಂದು ಬಿಂದುವಿನಲ್ಲಿ ಮಾಗುತ್ತವೆ..ಹೀಗೇ ಸಾಗುತ್ತವೆ...ಇನ್ನ್ಯಾವುದೋ ಬಿಂದುವಿನಲ್ಲಿ ಮರೆಯಾಗಲೂಬಹುದು..ಮತ್ತೆ ಮತ್ತೆ ಕಾಣಲೂಬಹುದು,ಕಾಡಲೂಬಹುದು...ಆ ಸಂಬಂಧ ಯಾವುದೇ ಆಗಿರಬಹುದು.ಮಾತೃತ್ವ,ಭ್ರಾತೃತ್ವ,ಗೆಳೆತನ ಹೀಗೇ..ಮತ್ತ್ಯಾವುದೋ ಬಿಂದುವಿನಲ್ಲಿ ತೆಗೆದುಕೊಂಡ ನಿರ್ಧಾರಗಳು ಬದುಕಿನ ದಿಕ್ಕನ್ನೇ ಬದಲಿಸಬಹುದು..ಗೆಳತಿ..ಈಗ ನೀನು ನನ್ನನ್ನು ಪ್ರೇಮಿಸುತ್ತಿರಬಹುದು.ಆದರೆ,ನನ್ನ ಬದುಕಿನ ಗಮ್ಯವೇ ಬೇರೆ.ನಾನು ಪ್ರೀತಿಸಬೇಕೆಂದಿರುವುದು ಈ ಜಗತ್ತನ್ನು..ಪ್ರೇಮ ಎಂಬ ಆಕರ್ಷಣೆಯ ಸುಳಿಗೆ ಸಿಲುಕಲು ನನಗೆ ಹುಮ್ಮಸ್ಸಿಲ್ಲ,ಜೊತೆಗೆ ಮನಸ್ಸೂ ಇಲ್ಲ..ಕಾಮ,ಮೋಹದಿಂದಾದ ಪ್ರೇಮವನ್ನು ನಾನು ಬಯಸುವುದಿಲ್ಲ.ನನಗೆ ಪರಿಶುದ್ಧವಾದ ಪ್ರೀತಿ ಬೇಕು.ಆಡಂಬರದ ದೊಂಬರಾಟದಲ್ಲಿ ಒಂದು ಪಾತ್ರವಾಗಲು ನಾನು ಇಚ್ಛಿಸುವುದಿಲ್ಲ.ಜಗದ ಎಲ್ಲ ಕಟ್ಟಳೆಗಳನ್ನು ಮೀರಿರುವ ಪ್ರೀತಿ ನನಗೆ ಬೇಕಾಗಿದೆ.ಪ್ರೀತಿಯೆಂಬ ಆ ಆನಂದದ ಸೆಲೆಯ ಹುಡುಕಾಟದಲ್ಲಿ ನಾನಿದ್ದೇನೆ.ವಾತ್ಸಲ್ಯಭರಿತ,ನಿಷ್ಕಲ್ಮಶ,ನಿರಾಡಂಬರ,ನಿರಾಕಾರ,ನಿರ್ಗುಣ ಪರಮಚೈತನ್ಯವಾದ ಪ್ರೀತಿಯ ಚೇತನಕ್ಕಾಗಿ ತಡಕಾಡುತ್ತಿದೇನೆ.ನಾನೊಬ್ಬ ಜಂಗಮ;ನನ್ನಂತರಗಂಗೆಯ ಹುಡುಕಾಟದಲ್ಲಿ ತೊಡಗಿರುವ ಸಂತ ನಾನು..ಈ ಬಣ್ಣದ ಬಾಹ್ಯ ಸಂತೆಯ ಮಾರಾಟದ ಆಟಿಕೆಯಾಗಲು ನಾನು ಬಯಸುವುದಿಲ್ಲ.ನಾನು ಆ ನಕ್ಷತ್ರವಾಗಲು ಬಯಸುತ್ತೇನೆ ಎಂದು,ಸೂರ್ಯನೆಡೆಗೆ ಕೈತೋರಿದವನಲ್ಲವೇ ಇವನು?ಆಗ ನಾನು,ಏಕೆ,ನಾನು ಸೌಂದರ್ಯವತಿಯಲ್ಲವೇ?ನನ್ನ ಪ್ರೇಮಕ್ಕೆ ಕಣ್ಣೀರ ಹನಿಗಳು ನಿನ್ನ ಕಾಣಿಕೆಯೇ?ಎಂದು ಮರುಪ್ರಶ್ನಿಸಿದ್ದೆ.ಅದಕ್ಕವನು,ಇಲ್ಲ ಗೆಳತಿ...ಮಲ್ಲಿಗೆಯಂತೆ ನೀನು...ಯಾವ ಸಮಯದಲ್ಲಿ ಯಾರ ಹೃದಯವನ್ನಾದರೂ ಅಪಹರಿಸುವ ಸೌಂದರ್ಯ ನಿನ್ನದು,ನಿಜ...ನನ್ನ ಬದುಕಿನ ಬೆಳಕು ಪ್ರೇಮವೇ ಆಗಿದ್ದಲ್ಲಿ,ನಾನು ಯಾವಾಗಲೋ ನಿನ್ನವನಾಗಿಬಿಡುತ್ತಿದ್ದೆ.ಆದರೆ,ಪ್ರೇಮವೆಂಬ ಕತ್ತಲೆಯೊಳಗೆ ಬೀಳಲು ನನಗಿಷ್ಟವಿಲ್ಲ..ನಿನಗೆ ಪ್ರೀತಿಯನ್ನು ಕೊಡಬಲ್ಲೆ,ಆದರೆ ಪ್ರೇಮಿಯಾಗಲಾರೆ..ನಾನು ಕೊಡುವ ಪ್ರೀತಿಯಲ್ಲಿ ಕಾಳಜಿಯಿರುತ್ತದೆ,ಆದರೆ ಕಾಮಾಂಧತೆಯಿರುವುದಿಲ್ಲ.ಪ್ರೇಮಿಯ ಪ್ರೇಮಕ್ಕಿಂತ ಮಿಗಿಲಾದ ಪ್ರೀತಿಯನ್ನು ಕೊಡುತ್ತೇನೆ ಎಂದು ಹೇಳಿ,ತನ್ನ ಕರವಸ್ತ್ರವನ್ನು ಹರಿದು,ನನ್ನಲ್ಲಿ ತನ್ನ ಕೈಗೆ ಕಟ್ಟು ಎಂದಿದ್ದ..ನಾನು ಕಟ್ಟಿದ್ದೆ.ವಿಪರ್ಯಾಸ;ಅಂದು ರಕ್ಷಾಬಂಧನದ ದಿನವೇ ಆಗಿತ್ತು.ನಂತರ ಆತ ಹೇಳಿದ್ದ..*ಮಿಹಿಕಾ!..ಎಂಥ ಸುಂದರ ಹೆಸರು..‘ಮಿಹಿಕಾ’ಎಂದರೆ ಇಬ್ಬನಿಯಂತೆ...ಗೆಳತಿ...ಇಬ್ಬನಿ,ಕ್ಷಿತಿಗೆ ಪೀತಿಯ ವರ್ಶವೆನಿಸೋ,ಬಾನ ಕಂಬನಿ...ಎಲೆಗಳಿಗೆ ಕಚಗುಳಿಯಿಡುವ ಪ್ರೀತಿ ಚುಂಬನದ ಸಂಜೀವಿನಿ!ನಿನ್ನ ಒಂದು ಸ್ಪರ್ಶಕ್ಕಾಗಿ ಎಲೆಗಳು ಕಾಯುತ್ತಿರುತ್ತವೆ..ನಿನ್ನ ಪ್ರೀತಿಯ ಆಲಿಂಗನಕ್ಕಾಗಿ ನೆಲದ ಹುಲ್ಲುಗಳು ಕನವರಿಸುತ್ತಿರುತ್ತವೆ..ಜೀವಕ್ಕೆ ತಂಪೆರೆವ ಜೀವನದಾಯಿನಿ,ಮಾತೃರೂಪಿಣಿ ನೀನು..‘ವರ್ಷ’ದ ಸೋದರಿ ನೀನು...ವರ್ಷವಾಗುತ್ತೇನೆ ನಾನು!ನೀನೊಂದು ಕಡೆ ಪ್ರೀತಿಯೆರೆದರೆ,ನಾನೊಂದು ಕಡೆ ಪ್ರೀತಿಯ ಹನಿಯಾಗುತ್ತೇನೆ,ಆಗಬಹುದಾ?ಎಂದಿದ್ದವನಲ್ಲವೇ ಈತ?ಅಂದು ನಾನು ಆತನನ್ನು ತಬ್ಬಿ ಅತ್ತುಬಿಟ್ಟಿದ್ದೆ.ಅಗ ಆತ,ಅಳಬೇಡ..ತಂಗಿ ಅಳುವುದನ್ನು ಅಣ್ಣ ಹೇಗೆ ತಾನೇ ಸಹಿಸಬಲ್ಲ?ಕಣ್ಣೀರೊರೆಸಿಕೋ ಎಂದು,ತಾನೇ ನನ್ನ ಕಣ್ಣುಗಳನ್ನು ಒರೆಸಿದ್ದ..ನಾನು ಆಗ,ನಾನು ಅಳುತ್ತಿಲ್ಲ..ಇಂತಹ ಅಣ್ಣನನ್ನು ಕೊಟ್ಟಿದ್ದಕ್ಕಾಗಿ ಆ ಕಾಣದ ದೇವರಿಗೆ ಕೃತಜ್ಞತೆ ಸಲ್ಲಿಸ್ದೆ ಕಣೋ,ಆಗ ಆ ಧನ್ಯತೆಯಿಂದ ಬಂದ ಆನಂದಭಾಷ್ಪವಿದು..ಎಂದಾಗ,ಅನ್ನ ಹಣೆಗೆ ಹೂಮುತ್ತೊಂದನ್ನಿಟ್ಟಿದ್ದ.ನಾನೂ ಕೂಡಾ ಅಂದೇ ಅಣ್ಣನ ಪ್ರೀತಿಯ ಮಳೆಯಲ್ಲಿ ಮಿಂದು ತಂಪಾಗಿದ್ದೆ,ಮತ್ತಷ್ಟು ಪವಿತ್ರವಾಗಿದ್ದೆ..ಕೆಲವು ದಿನಗಳ ನಂತರ ಆತ,ಹೋಗಿಬರುತ್ತೇನೆ ತಂಗೀ...ಎಂದಿದ್ದ.ಎಲ್ಲಿಗೆ ಎಂದು ಕೇಳಿದಾಗ,ನನ್ನೆದೆಯೊಳಗ್ನ ತುಮುಲಗಳನ್ನು ಮಲಗಿಸಿ,ಅಲ್ಲೊಂದು ಪ್ರೀತಿಯ ನದಿಯ ಹರಿಸಬೇಕಿದೆ.ಮುಂದೊಂದು ದಿನ ನಾನು ನಿನ್ನ ಬದುಕಿನಲ್ಲಿ ಬರುತ್ತೇನೆ,ಕಾಯುತ್ತಿರು...ಎಂದವನೇ ಅಲ್ಲವೇ ಇವನು?ಈಗ ಬಂದಿದ್ದಾನೆ ಅಲ್ಲವೇ?...ನೀನು...ನೀನು...ಎಂದು ಮತ್ತೆ ತಡವರಿಸುತ್ತಿದ್ದಾಳೆ....ನೀನು...ನೀನು...ಜೀವನ್ ಅಲ್ಲವೇ?..ಕೇಳಿದಳು.ಸೋದರಿ,ಅದು ನನ್ನ ಪೂರ್ವಾಶ್ರಮದ ಹೆಸರು.ನಾನೀಗ ಆತನಲ್ಲ!ಭವದ ಭೋಗಗಳಲ್ಲಿ ವೈರಾಗ್ಯ ತಾಳಿ,ಸನ್ಯಾಸ ಸ್ವೀಕರಿಸಿ,"ಪೂರ್ಣ ಚಂದ್ರ"ಎಂಬ ನಾಮಾಂಕಿತನಾಗಿದ್ದೇನೆ.ನನ್ನ ಬದುಕನ್ನು ನಾನಂದುಕೊಂಡಂತೆಯೇ ಬದಲಿಸಿಕೊಂಡಿದ್ದೇನೆ.ಸೋದರೀ..ಏನಾಯಿತು?ಶುಭ ಕಾರ್ಯಗಳಿಗೆ ಸಾಕ್ಷಿಯಾಗಬೇಕಿರುವ ಈ ಗೋಧೂಳಿ ಮುಹೂರ್ತದಲ್ಲೇಕೆ ಇಲ್ಲಿ ಬಂದು ನಿಂತಿರುವೆ?ಏಕೆ,ಆ ಕಣಿವೆಯೆಡೆಗೆ ನಿನ್ನ ಕಾಲುಗಳು ಚಲಿಸುತ್ತಿವೆ?ಕಣಿವೆಯ ಆಳ ನೋಡುವ ಹುಚ್ಚು ಸಾಹಸ ಸಲ್ಲದು ಅಲ್ಲವೇ?ಏನಾಯಿತು,ಹೇಳು ಸೋದರಿ...ಅವನೀಗ ಕಾಲದ ಪರದೆಯ ಮಡಿಕೆಯೊಳಗೆ ಹುದುಗಿಹೋಗಿದ್ದ ಆಕೆಯ ಗತಜೀವನದ ನೆನಪುಗಳ ತುಣುಕುಗಳನ್ನು ಪದರ ಪದರವಾಗಿ ಅನಾವರಣಗೊಳಿಸತೊಡಗುತ್ತಾನೆ.....
      ಅವಳು ನಿಧಾನವಾಗಿ ತನ್ನ ಯೌವನದ ಆರಂಭದ ದಿನಗಳಿಗೆ ಜಾರುತ್ತಾಳೆ.ಕಾಲ ಹಿಂದೆ ಸರಿಯತೊಡಗುತ್ತದೆ...ತನ್ನ ಜೀವನದ ಎಲ್ಲವುಗಳನ್ನುಈಗ ಆತನೆದುರು ಬಿಚ್ಚಿಡುತ್ತಿದ್ದಾಳೆ...ನೀನು ಬಿಟ್ಟುಹೋದ ಮೇಲೆ ನಾನು,ಅಪ್ಪ ಅಮ್ಮ ಇದ್ದರೂ,ಅನಾಥಳಾದಂತೆ ಅನಿಸತೊಡಗಿತು.ನೀನು ಅಂದು ಹೇಳಿದ ಮಾತುಗಳನ್ನೆಲ್ಲಾ ನಾನು ಮೆಲುಕುಹಾಕುತ್ತಿದ್ದೆ.ಹೀಗೇ ಕೆಲವು ದಿನಗಳು ಕಳೆದವು.ಒಂದು ದಿನ ನನ್ನ ತಂದೆ ತಾಯಿ ಇಹಲೋಕ ಯಾತ್ರೆ ಮುಗಿಸಿದರು.ಅತ್ತೆ,ಎದೆ ಬಿರಿವಂತೆ ಅತ್ತೆ...ಏಕೆಂದರೆ,ನಾನಾಗ ಯಾರೂ ಇಲ್ಲದ ಅನಾಥೆ.ನಿನ್ನ ಸಾಂತ್ವನದ ನುಡಿಗಳಿರಲಿಲ್ಲ.ಒರಗಲು ನಿನ್ನ ಪ್ರೀತಿಯ ಬೆಚ್ಚನೆಯ ಹೆಗಲಿರಲಿಲ್ಲ.ನನ್ನ ನೋವನ್ನು ಕೇಳುವ ಯಾವ ಜೀವಗಳೂ ಇರಲಿಲ್ಲ.ಕಂಬನಿಗಳೇ ನನ್ನ ಗೆಳತಿಯರಾದವು.ನಂತರ ಮತ್ತೆ ಕಾಲನ ಆಟ ಶುರುವಾಯಿತು.ನನ್ನ ಬದುಕಿನ ಮಗ್ಗಲು ಬದಲಾಯಿತು.ನಾನೊಬ್ಬನನ್ನು ಪ್ರೇಮಿಸಿದೆ.ಆತ ನನ್ನನ್ನು ಮದುವೆಯಾಗುತ್ತೇನೆಂದು ಮಾತು ಕೊಟ್ಟ.ನನ್ನನ್ನು ಸಂಪೂರ್ಣವಾಗಿ ಆತನಿಗೆ ಸಮರ್ಪಿಸಿಕೊಂಡೆ.ನನ್ನ ದೇಹದ ಸವಿಯನ್ನು ಇಂಚಿಂಚೂ ಬಿಡದೇ ಸವಿದ.ನನ್ನ ಸೌಂದರ್ಯದ ಸರೋವರದಲ್ಲಿನ ನೀರನ್ನು ಕುಡಿದು ತೇಗಿದ.ನಂತರ,ಎಲ್ಲ ಸವಿದು ಹಿಪ್ಪೆಯಾದ,ಸಿಪ್ಪೆಯಾದ ನನ್ನನ್ನು ತಿರಸ್ಕರಿಸತೊಡಗಿದ.ಅವನಲ್ಲಿ ಬೇಡಿಕೊಂಡಾಗ ಹೇಳಿದ್ದು,"ನಿನ್ನಲ್ಲಿನ ಸೌಂದರ್ಯದ ಸವಿ ಅನುಭವಿಸಾಗಿದೆ,ಮತ್ತೆ ಭೋಗಿಸಲು ಬೇಸರ.ನಿನ್ನಲ್ಲಿ ಹಣವಿಲ್ಲ,ಅದಿದ್ದಿದ್ದರೆ ಇನ್ನೂ ಏನೋ ಒಂಥರಾ ಪುಳಕವಿರುತ್ತಿತ್ತು."..ಕಾಲು ಹಿಡಿದುಕೊಂಡೆ.ಎದೆಗೆ ಒದ್ದ...ಅಸಹಾಯಕ ಹೆಣ್ಣು ನಾನು,ಏನು ತಾನೇ ಮಾಡಿಯೇನು?ಅವನ ಸಂಗದ ಫಲವೆಂಬಂತೆ,ಹೆಣ್ಣು ಮಗುವೊಂದಕ್ಕೆ ತಾಯಿಯಾದೆ...ಹಣ ಸಂಪಾದಿಸುವುದೇ ನನ್ನ ಗುರಿಯಾಯಿತು.ಅದಕ್ಕೇ..ಅದಕ್ಕೇ...ನನ್ನ ಸೌಂದರ್ಯವನ್ನೇ ಬಂಡವಾಳವಾಗಿಸಿಕೊಂಡೆ.ಹೆಣ್ತನವನ್ನೇ ಮಾರಾಟ ಮಾಡುವ ಹೀನಕೃತ್ಯದ ದಾಸಿಯಾದಳು ನಿನ್ನ ತಂಗಿ...ಬೇರೆ ದಾರಿಯಿರಲಿಲ್ಲವೇ..ಎಂದು ನೀನು ಕೇಳಬಹುದು.ಆದರೆ ತುಂಬು ಯೌವನೆಯಾಗಿದ್ದ ನನಗೆ ಕಾಮದ ಹುಚ್ಚು ಹತ್ತಿತ್ತು.ಹಾಸಿಗೆಯ ಮೇಲಿನ ಹೊರಳಾಟ,ನರಳಾಟಗಳೇ ಹಿತವೆನ್ನಿಸುತ್ತಿತ್ತು...ನಾನೊಂದು ಭೋಗದ ಗೊಂಬೆಯಾದೆ!ಚೆನ್ನಾಗಿ ಸಂಪಾದನೆಯಾಗತೊಡಗಿತ್ತು...ದಿನ ದಿನವೂ ಹೊಸ ಹೊಸ ದೇಹಗಳು ನನ್ನ ದೇಹದ ಮೇಲೆ ಹೊರಳಾಡತೊಡಗಿದವು.ದೇಹ ಸುಖದ ಮಂಪರಿನಲ್ಲಿದ್ದ ನನಗೆ,ಇದುವೇ ಸುಖದ ಜೀವನವಾಯಿತು.ಯೌವನದ ಬಿಸಿ ಏರುತ್ತಲೇ ಇತ್ತು.ನನ್ನ ಮಗು ನನ್ನ ಕೃತ್ಯವನ್ನು,ನನ್ನನ್ನು ನೋಡಿ ಹೇಸತೊಡಗಿದಾಗ,ಯಾವ ತಾಯಿಯೂ ಗೈಯದ ಅಮಾನವೀಯ ಕೃತ್ಯವನ್ನು ಮಾಡಿದೆ...ಎಂದು ಹೇಳಿ ಅಳತೊಡಗುತ್ತಾಳೆ.ಆತ,ಸೋದರೀ,ಅಳಬೇಡ,ವಿಷಯವನ್ನು ಹೇಳು..ತಪ್ಪುಗಳು ಸಹಜ.ಹೆಣ್ತನಕ್ಕೆ ತಾಯ್ತನವೇ ಭೂಷಣ,ಅಂತಹ ಅಪರಾಧವನ್ನೇನು ಮಾಡಿದೆ ನೀನು?ಎಂದು ಕೇಳುತ್ತಾನೆ.ಆಕೆ ಹೇಳುವುದನ್ನು ಮುಂದುವರೆಸುತ್ತಾಳೆ...ತಾಯಂದಿರ ಪ್ರಪಂಚಕ್ಕೇ ಘೋರವಾದೆ.ಮನುಷ್ಯತ್ವದ ಲವಲೇಶವೂ ಇಲ್ಲದೇ,ಜನನಿಯಾದ ನಾನೇ ರಾಕ್ಷಸಿಯಾದೆ.ಐದು ವರ್ಷದ ಆ ಹಸುಳೆಯನ್ನು ನನ್ನ ಕೈಯಿಂದಲೇ ಕತ್ತುಹಿಸುಕಿ ಕೊಂದೆ.ಅವಳು ಸಾಯುವಾಗ ಅಮ್ಮಾ ಅಮ್ಮಾ ಎಂದು ಚೀರಿದಾಗಲೂ ನಾನು ಕರಗದೇ,ವಿಷಯ ಸುಖದ ಮತ್ತಿನಲ್ಲಿ ಕಲ್ಲಿನಂತಾದೆ.ಅವಳ ಒದ್ದಾಟಕ್ಕೆ ಕೊನೆತೆರೆಯನ್ನೆಳೆದುಬಿಟ್ಟೆ.ಅವಳು ಅಮ್ಮಾ ಅಮ್ಮಾ ಎನ್ನುತ್ತಲೇ ಸತ್ತಳು.ಅತ್ತೂ ಅತ್ತೂ ಅವಳ ಮುಖವೆಲ್ಲಾ ಒದ್ದೆಯಾಗಿತ್ತು.ವಿಸ್ಮಯ ನೋಡು,ಅವಳ ಕಣ್ಣೀರಿನಿಂದಲೇ ನನ್ನ ಕೈ ಒರೆಸಿಕೊಂಡೆ.ಪಶ್ಚಾತ್ತಾಪದ ಲವಲೇಶವೂ ನನ್ನಲ್ಲಿರಲಿಲ್ಲ.ನನಗೆ ಯಾವ ಮುಸುಕಿನ ಮಾಯೆ ಜಾಲ ಬೀಸಿತ್ತೋ,ನನ್ನ ಭೋಗದ ತೀವ್ರತೆ ಮತ್ತೂ ಹೆಚ್ಚಾಗತೊಡಗಿತ್ತು!ಆದರೆ,ಕೊನೆಗೊಂದು ದಿನ,ಇದ್ದಕ್ಕಿದ್ದಂತೆ ನಿನ್ನ ನೆನಪಾಯಿತು ಅಣ್ಣಾ...ನೀನು ನುಡಿದ ಮಾತುಗಳೆಲ್ಲ ಮತ್ತೆ ನನ್ನೊಳಗೆ ಪ್ರತಿಧ್ವನಿಸತೊಡಗಿದವು..ಮತ್ತೆ ಮತ್ತೆ ಮಾರ್ದನಿಸಿದವು..ಯಾವತ್ತೂ ಕರಗದ ಮನಸ್ಸು ಅಂದು ನಿನ್ನ ಮಾತುಗಳನ್ನು ನೆನೆಸಿಕೊಂಡಾಗ,ನನಗರಿವಿಲ್ಲದಂತೆಯೇ ಕಣ್ಣುಗಳಲ್ಲಿನೀರಹನಿ ಇಣುಕತೊಡಗಿತ್ತು;ಪಶ್ಚಾತ್ತಾಪಕ್ಕೋ,ಪರಿತಾಪಕ್ಕೋ ತಿಳಿದಿಲ್ಲ ನನಗೆ..!ಬಿಕ್ಕಳಿಸತೊಡಗಿದೆ,ಜೋರಾಗಿ ಕಿರುಚಿದೆ,ತಲೆ ಚಚ್ಚಿಕೊಂಡೆ..ಮತ್ತೆ ಕಲ್ಲಾದೆ..ಕೊನೆಗೆ..ಕೊನೆಗೆ,ಒಂದು ನಿರ್ಧಾರಕ್ಕೆ ಬಂದೆ.ನೀನೇ ಹೇಳಿದ್ದೆಯಲ್ಲಾ,ಯಾವುದೋ ಒಂದು ಬಿಂದುವಿನಲ್ಲಿ ತೆಗೆದುಕೊಂಡ ನಿರ್ಧಾರಗಳು ಬಾಅದುಕಿನ ಗತಿಯನ್ನೇ ಬದಲಿಸಿಬಿಡುತ್ತವೆಂದು...ನಾನೂ ಕೂಡ ನಿರ್ಧರಿಸಿದೆ;ಇನ್ನು ಬದುಕಬಾರದೆಂದು...ನನಗಾಗಿ,ನೀನು ಬರುವ ದಾರಿಗಾಗಿ ಕಾದೆ..!ದಾರಿಯೂ ಕಾಣಲಿಲ್ಲ;ನೀನೂ ಕೂಡ..ದಿನದಿನಕ್ಕೆ ಸಾಯುವ ಆಸೆ ಹೆಚ್ಚಾಗತೊಡಗಿತು..ಆದರೆ,ನನ್ನೆಲ್ಲ ನೆನಪುಗಳನ್ನು ಅಳಿಸಿ,ಖಾಲಿಯಾಗಲು ಇಷ್ಟು ದಿನ ಬೇಕಾಯಿತು.ಆದರೆ,ಈಗಲೂ ನನಗೆ ಅರಿವಾಗುತ್ತಲೇ ಇದೆ,"ನೆನಪುಗಳು ಕಾಡುತ್ತವೆಂದು"...!ಎಲ್ಲವೂ ಖಾಲಿ ಖಾಲಿ ಆಗಿದೆ ಎಂಬ ಭ್ರಮೆಯಲ್ಲಿ ನಾನಿದ್ದೇನೆ..ಅಣ್ಣಾ..ಕ್ಷಮಿಸಿಬಿಡು,ಈ ನಿನ್ನ ತಂಗಿಯನ್ನು..ಸಾವಿನ ಬೀಜ ನೆಟ್ಟಾಗಿದೆ,ಅದು ಮೊಳಕೆಯೊಡೆಯುವ ಸಮಯ ಬಂದಿದೆ..ಸಾಕು,ಈ ಲೋಗದ,ಈ ಭಾಗದ ಬದುಕು;ಈ ಪರಿಯ ಹೊಲಸು...ತಣ್ಣನೆಯ ಮೌನ ಲೋಕಕ್ಕೆ ಮತ್ತೆ ಪಯಣಿಸಬೇಕಿದೆ.ಅಲ್ಲಿನ ಮೌನದೊಳಗೆ ಮತ್ತೆ ಮಗುವಾಗಿ ನಿದ್ರಿಸಬೇಕೆಂದಿದ್ದೇನೆ..ಅನುವು ಮಾಡಿಕೊಡು...ಆಕೆ ಹೇಳಿ ಮುಗಿಸಿ ಅಳತೊಡಗುತ್ತಾಳೆ.ಈತನ ಪಾದಗಳಲ್ಲಿ ಬೀಳುತ್ತಾಳೆ.ಈತ ಅವಳಾ ಭುಜಗಳನ್ನು ಹಿಡಿದು ನಿಲ್ಲಿಸುತ್ತಾನೆ,ತಲೆ ಸವರುತ್ತಾನೆ...ಸೋದರೀ..ನಿಜ,ತಪ್ಪುಗಳ ಕೂಪದೊಳಗೆ ಬಿದ್ದು ನೀನು ನಲುಗಿದ್ದು ನಿಜ...ಒಪ್ಪಿಕೊಳ್ಳುತ್ತೇನೆ,ಮಾಡಿದ ಪಾಪಗಳಿಗೆ ಪ್ರಾಯಶ್ಚಿತ್ತವೆಂಬುದು ನಡೆಯಲೇಬೇಕು..ಅದು ಸೃಷ್ಟಿಯ ನಿಯಮ...ಅದನ್ನು ಮೀರುವ ಸಾಮರ್ಥ್ಯ ಯಾರಿಗೂ ಇಲ್ಲ.ಸೃಜಿಪ ಶಕ್ತಿಯ ಮುಂದೆ ತೃಣವಲ್ಲವೇ ಮಾನವ?..ನಿನ್ನೊಳಗಿನ ಮನಸ್ಸು ಮರುಗಿದೆ..ಕಲ್ಮಶಗಳೆಲ್ಲನಿನ್ನ ಕಣ್ಣೀರ ಪ್ರವಾಹದಲ್ಲಿ ಕೊಚ್ಚಿಹೋಗಿದೆಯಲ್ಲವೇ?ನೀನೇ ಹೇಳಿರುವೆ ನಾನು ಖಾಲಿಯೆಂದು..ನೆನಪಿನ ಗೆರೆಗಳನ್ನು ಅಳಿಸಿಯಾಗಿದೆ..ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆವವ ಹುಡುಕಬೇಡ..."ನಹಿ ಭವತಿ ಯೇ ನ ಭಾವ್ಯಂ,ಭವಿತವ್ಯಂ ಭವತ್ಯೇವ"ಎಂಬ ತತ್ವಕ್ಕೆ ವಿಶ್ವವೇ ಬದ್ಧವಾಗಿರುವಾಗ,ನಾವೊಂದು ಅದಕ್ಕೆ ಅಪವಾದವಾಗಲಾದೀತೇ?ಬದುಕಿನ ಪುಟಗಳು ಖಾಲಿಯಿವೆ..ಮತ್ತೆ ಅಕ್ಷರಗಳ ಹಂಗಾಮ ಆರಂಭವಾಗಲಿ..ಬದುಕಿನ ಹೊಸ ಮನ್ವಂತರಕ್ಕೆ ಈ ದಿನವೇ ನಾಂದಿಯಾಗಲಿ...ನನಗಂದು ರಕ್ಷೆ ಕಟ್ಟಿದ್ದ ನೀನು,ಇಂದು ಮತ್ತೆ ಬದುಕುವ ದೀಕ್ಷೆಯ ಕಂಕಣ ತೊಡಬೇಕು.ಜೀವನದಲ್ಲಿ ತಪ್ಪುಗಳು ಇರಲೇಬೇಕು.ಬರೀ ಒಪ್ಪುಗಳೇ ಇದ್ದರೆ,ನಾವು ಬದುಕನ್ನು ಒಪ್ಪುವುದಿಲ್ಲ ಅಥವಾ ಬದುಕು ನಮ್ಮನ್ನು ಅಪ್ಪುವುದಿಲ್ಲ!ತಪ್ಪುಗಳ ವೃಂದವೇ ಮುಂದೆ‘ಅನುಭವ’ಎಂದೆನಿಸಿಕೊಳ್ಳುತ್ತದೆ.ಕಲ್ಲಾಗಿ ಕುಳಿತ ಅಹಲ್ಯೆ ರಾಮನ ಪಾದ ಸ್ಪರ್ಶ ಮಾತ್ರದಿಂದ ಮತ್ತೆ ಜೀವನ ನಡೆಸಿಲ್ಲವೇ?ಪಂಚ ಪತಿವ್ರತೆಯರಲ್ಲಿ ಒಬ್ಬಳಾಗಲಿಲ್ಲವೇ?ದರೋಡೆಕೋರನಾಗಿದ್ದವನೊಬ್ಬ ಮುಂದೆ ವಾಲ್ಮೀಕಿಯಾಲಿಲ್ಲವೇ?ಜೀವನ ಮೌಲ್ಯಗಳ ಮಹಾಗಣಿಯಾದ ರಾಮಾಯಣ ಮಹಾಕಾವ್ಯದ ಸೃಷ್ಟಿಗೆ ಕಾರಣನಾಗಲಿಲ್ಲವೇ?ಜಗದ ಎಲ್ಲ ಮತಗಳು,ಪಂಥಗಳು ತಪ್ಪುಗಳನ್ನು ತಿದ್ದಿಕೊಂಡು,ಬದಲಾವಣೆಯ ಗಾಳಿಗೆ ಮೈಯೊಡ್ಡಿ ನಡೆವವರಿಗೆ ಪಥವನ್ನು ತೋರಿವೆ,ತೋರಿಸುತ್ತಿವೆ,ಮುಂದೆಯೂ ತೋರುತ್ತವೆ...ನಿನ್ನ ಬದುಕಿನ ಖಾಲಿ ಪುಟಗಳಲ್ಲಿ ನೀನು ಏನು ಬೇಕಾದರೂ ಬರೆಯಬಹುದು,ಅಲ್ಲವೇ?ಪಶ್ಚಾತ್ತಾಪದ ಬೇಗುದಿಯಲ್ಲಿ ಸುಟ್ಟು ಪವಿತ್ರವಾಗಿರುವ ನಿನಗೆ ಇನ್ನಾವ ಪ್ರಾಯಶ್ಚಿತ್ತವೂ ಬೇಕಿಲ್ಲ.ನಿನ್ನೊಳಗಣ ವೇದನೆಯೇ ನಿನ್ನನ್ನು ಪವಿತ್ರವಾಗಿಸಿದೆ!ಅದಕ್ಕಾಗಿಯೇ ಮನದೊಳಗೆ ಎಂದೂ ಕದನವೊಂದು ನಡೆಯಲೇಬೇಕು!ನೀನೀಗ ಪರಿಶುದ್ಧಳು..ಮಿಹಿಕಾ!ನೀನು ಮತ್ತೆ ಎಲೆಗಳ ಮೇಲೆ ಕುಳಿತು,ಚಂದ್ರಮನ ಬೆಳಕಲ್ಲಿ ಮುತ್ತಾಗಿ ಮಿನುಗಬೇಕು..ಹಸಿರು ವಸನಕೆ ಮಣಿಗಳ ಚಿತ್ತಾರವಾಗಬೇಕು..ಮಬ್ಬನೆಯ ಮಸುಕಲ್ಲಿ ಮುಂಬರುವ ಬೆಳಕಿಗಾಗಿ ಕಾದಿದ್ದು ಸಾಕು..ಬಂದಿರುವ ಹೊಂಬೆಳಕಿನ ಬದುಕನ್ನು ಸ್ವಾಗತಿಸು..ಬೆಳಕಿನಲ್ಲೇ ಲೀನಳಾಗು..ಪ್ರೀತಿಯ ಸೃಜನಕ್ಕೆ ಕಾರಣಳಾಗು...ನಿನಗೆ ಗೊತ್ತಾ ಮಿಹಿಕಾ,ಪ್ರೀತಿಯ ಭಾಷೆಯೇ ಮೌನ..ನೀನು ಹೇಳುತ್ತಿರುವ ಆ ಮೌನವೇ ನಿನ್ನೊಳಗಿನ ತನನ..!ನಾನೊಂದು ಹೊಸ ಬದುಕು ಕೊಡುತ್ತೇನೆ ಒಪ್ಪಿಕೊಳ್ಳುತ್ತೀಯಾ?..ಆಕೆ ಮತ್ತೆ ಕಣ್ಣೀರಾಗುತ್ತಾಳೆ.ಅಣ್ಣಾ,ಅದೆಂಥ ಪ್ರೀತಿ ನಿನ್ನದು!ಅನೈತಿಕ ಅಪವಿತ್ರ ಹೆಣ್ಣಾದ ನನ್ನನ್ನು ಈಗಲೂ ಅಷ್ಟೊಂದು ಪ್ರೀತಿಸುತ್ತಿದ್ದೀಯಲ್ಲಾ!ನಿನ್ನ ಕೈಯಲ್ಲಿ ಮಗುವಾಗಿ ಮುದ್ದಿಸಿಕೊಳ್ಳಬಾರದೇ ಎಂದೆನಿಸುತ್ತಿದೆ..ಅಣ್ಣಾ,ನಿನ್ನ ಮಾತಿಗೆ ಇಲ್ಲವೆಂದ ಕ್ಷಣವಿದೆಯೇ?ಮತ್ತೆ ಬದುಕಬೇಕೆಂದು ಇಚ್ಛೀಸುತ್ತಿದ್ದೀಯಾ?ಹೀಗೆ ಮತ್ತೆ ಬದುಕಿ,ಇನ್ನೆಷ್ಟು ಪಾಪಗಳಿಗೆ ಎಡೆಯಾಗಲಿ?ಬೇಡ ಅಣ್ಣಾ,ಕಳಚಿಕೊಂಡುಬಿಡುವೆ ಈ ಜಗತ್ತಿನಿಂದ...ಈ ಕೊಳಕು ತನುವು ಮಣ್ಣಿನಲ್ಲಾದರೂ ಕೊಳೆತುಹೋಗಲಿ..ಈತ ಅವಳ ಕಣ್ಣುಗಳಲ್ಲಿನ ಕಣ್ಣೀರನ್ನು ತನ್ನ ಬೊಗಸೆಯೊಳು ಹಿಡಿದು ಹೇಳುತ್ತಾನೆ,...ಈ ಕಣ್ಣೀರೇ ಹೊಸದೊಂದು ಜೀವ ಸೃಜನಕ್ಕೆ ಕಾರಣವಾಗಲಿ...ಎಲ್ಲ ಬಂಧನಗಳಿಂದ ಮುಕ್ತಳಾಗಿ ಬಾಂಧವ್ಯದ ಬಂಧುವಾಗು,ಪ್ರೀತಿಯ ಬಿಂದುವಾಗು..ಹೊಳೆವ ಸಿಂಧೂರವಾಗು...ಇಂದು ಪೌರ್ಣಿಮೆ,ಇಂದೇ ನಿನ್ನ ನೂತನ ಬದುಕಿನ ಆರಂಭ..ನೋಡಲ್ಲಿ,ಚಂದ್ರ ಉದಯಿಸಿದ್ದಾನೆ;ಬೆಳಕು ನೀಡಲು...ಸೂರ್ಯನ ಬೆಳಕನ್ನು ಪ್ರತಿಫಲಿಸುವುದಷ್ಟೇ ಆತನ ಕೆಲಸ ಅಲ್ಲವೇ?ನಮ್ಮ ಕಾರ್ಯವೂ ಅದೇ ತಾನೇ?ಪರಮಚೈತನ್ಯ ದಿವ್ಯವನ್ನು ಪ್ರತಿಫಲಿಸುವ ಕನ್ನಡಿಗಳು ನಾವೆಲ್ಲಾ..ಅಲ್ಲವೇ?ಎಲ್ಲ ವೇದನೆಗಳಿಂದ ಮುಕ್ತಳಾದ ನೀನು,ಬುದ್ಧಳಾಗಬೇಕಿದೆ..!ಆ ಶಶಿಯ ಬೆಳದಿಂಗಳಂತೆ ನಿರ್ಮಲ ಬೆಳಕಾಗಬೇಕಿದೆ...ಎಷ್ಟೋ ಜೀವಗಳ ದನಿಯಾಗಬೇಕಿದೆ..ಚಕ್ರವಾಕ ಪಕ್ಷಿಗಳ ಸಮ್ಮಿಲನಕ್ಕೆ ಸಾಕ್ಷಿಪರ್ವವಾಗಬೇಕಿದೆ..ಅದೆಷ್ಟೋ ಬದುಕುಗಳ ಕಾವ್ಯಕ್ಕೆ ಸ್ಫೂರ್ತಿಯಾಗಬೇಕಿದೆ...ದಿಗ್ದಿಗಂತಗಳಿಂದ ಸ್ಫುರಿಸಿಬರುತ್ತಿರುವ ಬೆಳಕನ್ನು ನಿನ್ನೊಡಲಲ್ಲಿ ತುಂಬಿಕೋ...ಸೆಲೆಯಾಗು,ಬೆಳಕಿನ ನೆಲೆಯಾಗು...!ನೀನೀಗ ಪರಿಶುದ್ಧಳಾಗಿದ್ದೀಯ...ನಿನ್ನ ನಿರ್ಮಲತೆಗೆ ಚಂದಿರ ಕೂಡ ನಾಚುತ್ತಿದ್ದಾನೆ,ನೋಡಲ್ಲಿ...ಎನ್ನುತ್ತಿದ್ದಂತೆಯೇ,ಚಂದ್ರ ಕೂಡ ಮೋಡದೊಳಗೆ ಒಮ್ಮೆ ಮರೆಯಾದ...ಸ್ಫುಟವಾದ ಬೆಳದಿಂಗಳ ಕನ್ಯೆಯಾಗಿ,ನಿರಾಭರಣ ಸುಂದರಿಯಾಗಿ ಇಂದು ನಿನಗೆ ಪುನರ್ಜನ್ಮ..ಇಂದಿನಿಂದ ನಿನ್ನ ಹೆಸರು"ಪೂರ್ಣಿಮಾ"...ಸನ್ಯಾಸಿನಿಯಾಗಿ ಬದುಕುವೆಯೆಂದಾದರೆ,ನನ್ನ ಜೊತೆಗೆ ಬೆಳಕಿನೆಡೆಗೆ ದಿವ್ಯತೆಗಾಗಿ ಹೆಜ್ಜೆಯಾಗು..ಇಲ್ಲದಿದ್ದಲ್ಲಿ ಆ ಕತ್ತಲಿನ ಕಣಿವೆಯಲ್ಲಿ ಬಲಿಯಾಗಿ ಮರೆಯಾಗು...ಎಂದು ಹೇಳಿ ಈತ ನಡೆಯತೊಡಗುತ್ತಾನೆ.ಅವಳೂ ಕೂಡ ಆತನ ಹೆಜ್ಜೆಗೆ ಗೆಜ್ಜೆಯಾಗುತ್ತಾಳೆ...ಆತನ ನೆಳಲಾಗುತ್ತಾಳೆ..ಮತ್ತೆ ಚಂದ್ರಮ ಮೋಡದಿಂದಾಚೆ ಬಂದಿದ್ದಾನೆ.ಮತ್ತಷ್ಟು ಮೆರಗಿನಿಂದ,ಕಾಂತಿಯಿಂದ ಆಹ್ಲಾದಕವಾಗಿ ಕಂಗೊಳಿಸುತ್ತಿದ್ದಾನೆ...ಆ ಸಂತ ಹಿಂದಿರುಗಿ ಒಮ್ಮೆ ನೋಡಿ,ಮತ್ತದೇ ಮಂದಸ್ಮಿತನಾಗಿ,ಮತ್ತೆ ನಡೆಯುತ್ತಿದ್ದಾನೆ;ಪ್ರೀತಿಯ ಜಂಗಮನಾಗಿ,ತಪ್ತ ಜೀವಕ್ಕೆ ‘ಪೂರ್ಣ ಚಂದ್ರ’ಮನಾಗಿ!!...ಆಕೆ ನೆಟ್ಟಿದ್ದ ಸಾವಿನ ಬೀಜ ಈಗ ಬದುಕಾಗಿ ಚಿಗುರಿತ್ತು;ಮರವಾಗಿ,ಸಾಸಿರ ಬಳ್ಳಿಗಳಿಗೆ ಆಶ್ರಯವಾಗಿ,ನೆಳಲು ಕೊಡುವ ಕನಸ ಹೊತ್ತು..ಭರವಸೆಯ ಹೆತ್ತು!..ತನ್ನೊಲವಿನ ಅಣ್ಣನೊಂದಿಗೆ ಕತ್ತಲೆಯ ಕಣಿವೆಗೆ ಬೆನ್ನು ಹಾಕಿದ್ದಾಳೆ ಪೂರ್ಣಿಮಾ..ತನ್ನಂತರಂಗವ ಆತನ ಮುಂದೆ ಬೆತ್ತಲಾಗಿಸಿ...ಮತ್ತೆ ಅವನಿಂದಲೇ ಪಡೆದು ಪ್ರೀತಿಯ ಹೊಸ ಜನುಮ..ಈಗ ನಭಕೂ ಕ್ಷಿತಿಗೂ ಹಾಲ್ಬೆಳದಿಂಗಳ ಪರ್ವದ ಸಂಭ್ರಮ.....!!....


*ಮಿಹಿಕಾ-ನೇಮಿಚಂದ್ರರ ಕಥೆಯಿಂದ ಪ್ರೇರಿತ ಹೆಸರು.

                                                                                                      ~‘ಶ್ರೀ’
                                                                                                        ತಲಗೇರಿ

ಸೋಮವಾರ, ಅಕ್ಟೋಬರ್ 17, 2011


                              ಅವಳು....                     ಹಚ್ಚುತಿವೆ ಕೈಗಳು
                     ಸಾಲು ದೀಪಗಳನ್ನು
                     ಮುಸ್ಸಂಜೆಯಾ
                     ರಂಗಲ್ಲಿ,
                     ದಿನಕರನ
                     ನೆನಪಲ್ಲಿ
                     ಚಂದ್ರಮನ
                     ಗುಂಗಲ್ಲಿ...
                     ಬೆಳಕಿನಾ ರಂಗೋಲಿ...

                     ಮಬ್ಬುಗತ್ತಲು
                     ಕವಿಯುವ ಮುನ್ನ
                     ಹಣತೆ ತುದಿಗೆ
                     ಹೊನ್ನ ಬೆಳಕಿನ ಜನನ
                     ಜೊತೆಗೆ ಅವಳ
                     ಬಳೆಗಳ
                     ಕನವರಿಕೆಯ ತನನ..
                     ನಭಕೂ ಕ್ಷಿತಿಗೂ
                     ದಿಗಂತದಿ
                     ಸಂಭ್ರಮದ ಮಿಲನ...

                     ಕಾಯುತಿಹ ಚಂದ್ರಮ
                     ಕತ್ತಲೆಯಲ್ಲಿ
                     ಸೆರಗು ಜಾರುವುದೆಂದು!
                     ತಿಳಿದಿಲ್ಲ ಅವನಿಗೆ,
                     ಬೆಳಕಿನಾ ಬಳ್ಳಿಯೇ
                     ಅವಳೆಂದು!
                     ಬದುಕಿಗೊಂದು
                     ಗುಟುಕ ಕೊಡುವ
                     ಉಸಿರಿಗೊಂದು
                     ಹೆಸರ ಹೊಸೆವ
                     ಮಾತೃರೂಪಿ
                     ಕನ್ನಿಕೆಯೆಂದು...
                     ಮರೆತಿಹನು ಅವನು
                     ಪ್ರತಿಫಲಿಸೋ
                     ಕನ್ನಡಿಯು ತಾನೆಂದು..

                     ಮುಂಗುರುಳು
                     ಕನಲಿವೆ
                     ಆ ಗಾಳಿಯ
                     ಶೀತಲ
                     ಸುಖ ಸ್ಪರ್ಶಕೆ...
                     ತಾರೆಗಳು
                     ಬಳಲಿವೆ
                     ಅವಳೆದುರು
                     ನಿಲಲಾಗದೆ
                     ಆ ಮಳಲಲಿ
                     ಮಲಗಿವೆ...
                     ಅಲೆಗಳಲ್ಲಿ
                     ಹಾಗೇ ತೇಲಿವೆ..

                     ಹಗಲಾಗಿದೆ
                     ಹೊರಗೆ
                     ಅವಳ
                     ಬೆರಳುಗಳ ಮೋಡಿಗೆ..
                     ಆದರೆ,
                     ಕತ್ತಲೆಯಿದೆಯಿನ್ನೂ
                     ನನ್ನೊಳಗೆ...
                     ಅವಳು ತಟ್ಟಲಿ
                     ಎಂದು
                     ಕದವ ಹಾಕಿರುವೆ..
                     ಮಲಗಿರುವ
                     ನಾನು
                     ಏಳಬೇಡವೇ?..

                     ಬಂದುಬಿಡು
                     ನನ್ನೆಡೆಗೆ..
                     ಬೊಗಸೆಯೊಳು
                     ಹಿಡಿದು
                     ಒಲವಿನಾ ದೀವಿಗೆ..
                     ಕಸವಿಡದೆ
                     ಗುಡಿಸಿಹೆನು
                     ನೀನು ನಿರ್ಮಲಳೆಂದು..
                     ಹೊಸಿಲ ದಾಟಲಿ
                     ನಿನ್ನ ಹೆಜ್ಜೆಗಳಿಂದು,
                     ತಮಸಿಗು ಬೆಳಕಿಗು
                     ಸಂವಹನಕೆಂದು...
                     ನೀ ನನ್ನಲಿ
                     ನೆಲೆಸು ಎಂದೆಂದೂ..
                     ಓ!ಬೆಳಕಿನ ಬಂಧು..!!
                     ಪ್ರೀತಿಯ
                     ನೆಳಲಲಿ ಬಂದು...                                    ~‘ಶ್ರೀ’
                                      ತಲಗೇರಿ

ಮಂಗಳವಾರ, ಅಕ್ಟೋಬರ್ 11, 2011                                  ಕಾಡಿಬಿಡು....                          ಮನಸುಗಳ ಸಂತೆಯಲಿ
                          ಕನಸುಗಳ ಹಾವಳಿ
                          ಗ್ರಾಹಕರಿಲ್ಲದ
                          ಅಂಗಡಿಯಲ್ಲೂ
                          ಬಣ್ಣಗಳ ಓಕುಳಿ!
                          ನಯನಗಳ ತಂಪಿಗೆ
                          ಹೃದಯಗಳ ಇಂಪಿಗೆ
                          ಹಂಗಾಮಿ ಜೋಕಾಲಿ!

                          ನಾಳೆ ಎನುವುದು
                          ಖಾಲಿ ಹಾಳೆಯಾಗಿರುವಾಗ
                          ಬೇಕಿಲ್ಲ ನನಗೆ
                          ಇಲ್ಲದಾ ಸಾಲುಗಳ
                          ಅನುವಾದ...
                          ಬರೆಯಬಲ್ಲೆ ಬೇರೇನೇ
                          ನಿನ್ನ ಪ್ರೀತಿಯ
                          ಶಾಯಿ
                          ಖಾಲಿಯಾಗುವ ಮುನ್ನ...
                          ಕಾಡಿಬಿಡು ನನ್ನೊಲವೇ
                          ನೆನಪಿನಾ ಗೆರೆಗಳು
                          ಅಕ್ಷರವಾಗುವುದನ್ನ...

                          ಜಾರದಿರಲಿ ಕಣ್ಣಲಿ
                          ಬೇಸರದಿ
                          ಒಂದು ಹನಿ..
                          ನಿನ್ನೊಳಗೆ ಇರುವ
                          ನಾ
                          ಚೆದುರಿಹೋಗುವೆ
                          ಬಿಳಿಯ ಹಾಳೆಯ
                          ಮೇಲೆ ಬೀಳೆ...
                          ಕಾಗದವೇ ನನ್ನ
                          ಮನೆಯಾಗಬಹುದೇ?
                          ಅಲೆಯಾಗಿ ಹೊರಳುವುದೇ
                          ನನ್ನ
                          ದನಿಯಾಗಬಹುದೇ?...


                                         ~‘ಶ್ರೀ’
                                           ತಲಗೇರಿ
ಸೋಮವಾರ, ಅಕ್ಟೋಬರ್ 10, 2011


                          ಅನಾವರಣ....
                   ಇಲ್ಲ,
                   ನಾನ್ಯಾಕೆ ನೀನಾಗಲಿಲ್ಲ?!
                   ಕಲ್ಲಾಗಿ ಕುಳಿತು ನೀ
                   ಸೂಸುತಿಹೆ ಹೂನಗೆ
                   ಜಗದಗಲದೆಲ್ಲ ದುಗುಡವ
                   ಮರೆತು,
                   ಅಥವಾ
                   ಸಂತಸದ ಮರ್ಮವೆಲ್ಲವ
                   ಅರಿತು
                   ಲಾಸ್ಯವಾಡುತಿಹ        
                   ನಗೆಯೇ ಅದು?    
                   ಅರ್ಥವಾಗುತ್ತಿಲ್ಲ ನನಗೆ!
                   ವೈರುಧ್ಯ,ವೈವಿಧ್ಯಗಳಲ್ಲೆಲ್ಲ
                   ಬೆರೆತು,
                   ಚಿನ್ನದ ಹೊಳಪೊಳಗೆ
                   ಕಳೆತು,
                   ನಕ್ಕರೂ,
                   ನನಗಿಲ್ಲ ನಿನ್ನಂಥ ಮೆರಗು!

                   ಹೇಗೆ ಕುಳಿತಿಹೆ ಹಾಗೆ!
                   ನೂರಾರು ವರ್ಷಗಳಿಂದ..
                   ವರ್ಷವಿಳಿದಿದೆ ಧರೆಗೆ
                   ಸ್ಪರ್ಶ ಬೇಕೆನಿಸಲಿಲ್ಲವೇ
                   ನಿನಗೆ;ಚಳಿಗೆ?
                   ಬಿಸಿಲಲ್ಲಿ ಬೆವೆತು
                   ಕೊಡೆ ಹಿಡಿದಿಲ್ಲವೇಕೆ?
                   ಬಾಯ್ತೆರೆದು ಕಾದಿಲ್ಲವೇ
                   ಭರ್ತಿಯಾಗದ ಜೋಳಿಗೆ!
                   ಹೊರಳಾಡಲಿಲ್ಲವೇ
                   ಒಮ್ಮೆಯೂ ನಾಲಿಗೆ?
                   ಸುತ್ತಮುತ್ತಲ ಘಟನೆಗೆ
                   ಒಮ್ಮೆಯೂ ಸೇರಿಲ್ಲವೇ
                   ಕಣ್ರೆಪ್ಪೆಗಳು ಒ೦ದು ಗಳಿಗೆ!
                   ತುಂಬಲಿಲ್ಲವೇ ನೀರು
                   ಕೆರೆಯ ಮರೆಗೆ?!
                   ಓಹ್!ನೀನು ಕಲ್ಲಲ್ಲವೇ!
                   ಆದರೂ,
                   ನಿನ್ನಲ್ಲಿ ಅದೆಂಥ ಜೀವನಗೆ!...

                   ಅಲ್ಲ,
                   ನಾನು ನಿನ್ನಂಥಲ್ಲ...
                   ನನಗೆ
                   ಮೂಕಸಾಕ್ಷಿಯಾಗಲು
                   ಬರುವುದಿಲ್ಲ...
                   ಜಾರಿಹೋಗುವ ಬಿಂದುಗಳ
                   ಹಿಡಿಯಲು
                   ತಡಕುವವು ಬೊಗಸೆಗಳು!
                   ಕೆನ್ನೆ ಮೇಲೆ ಹಾಗೇ
                   ತೆವಳಲು
                   ನೀರಾಗುತ್ತದೆ ಬೆರಳು!
                   ಆಗುವುದಿಲ್ಲ ನನಗೆ
                   ನಿನ್ನಂತೆ ಕುಳಿತಿರಲು..
                   ಕಾಯುತ್ತಿದೆ,
                   ನನ್ನೊಳಗಿನ ಮುಗುಳು!
                   ತೋಯುತ್ತಿವೆ
                   ಹೃದಯದೊಳಗಣ ಭಾವಗಳು
                   ಸಂಗಮಕ್ಕೊ,
                   ಸಂಭ್ರಮಕ್ಕೊ,
                   ಬದಲಾವಣೆಯ ಜಗಳಕ್ಕೊ!

                   ಅಲ್ಲವೇ ಅಲ್ಲ!,
                   ನಾನು ಎಂದೂ ನಿನ್ನಂಥಲ್ಲ...
                   ನೀನು ನಡೆಯಲಾರೆ..
                   ನನಗೋ,
                   ತೀರದಿ ತೀರದ ಮಳಲಿದೆ
                   ಮೌನದಿ ತನ್ನೆದೆ ತೆರೆದಿದೆ..
                   ಹಸಿಹಸಿ ನೆನಪ
                   ಮೂಡಿಸು ಎಂದಿದೆ!
                   ನಾ ನಡೆವೆ ಅಲೆಮಾರಿಯಂತೆ
                   ಸೂರಿನಡಿ ಬೇಕಿಲ್ಲ ದೇಹಕೆ
                   ಆದರೂ,
                   ನಿನ್ನಂತಾಗುವ ಬಯಕೆ!..

                   ಹೇಳು,
                   ನೀನಾಗುವ ಬಗೆ ಹೇಗೆ?
                   ಕಪ್ಪಿದ್ದರೂ,
                   ಮುಪ್ಪಾದರೂ
                   ನಿನ್ನಲ್ಲಿ ಸುಕ್ಕುಗಟ್ಟಿಲ್ಲ ಚರ್ಮ
                   ನಿನಗಿಲ್ಲವೇ ಅದರ ಅಭಿಮಾನ?!
                   ಮನವಿಲ್ಲದ ಮನೆ
                   ನಿನ್ನ ತನುವು!
                   ನೋಡು ನೋಡು
                   ಅದೆಂಥ ಸಿಹಿ ಸ್ವಪ್ನ ನಗು!
                   ಹೇಳಿಬಿಡು...
                   ಅರ್ಥವಾಗಲಿ ನನಗೂ!!

                   ನೀನು ಹೇಳುವುದಿಲ್ಲ!
                   ಎಲ್ಲ ತ್ಯಜಿಸಿ,
                   ದೇವನೆನಿಸಿಹ
                   ನೀನೊಬ್ಬ ವಿರಾಗ ಪ್ರೇಮಿ...
                   ನೀನು ಜಂಗಮನಲ್ಲ
                   ವರುಷಗಳ ಸಂಭ್ರಮ!
                   ತಪ್ತ ಜೀವದ ಪೂರ್ಣ ಚಂದ್ರಮ!!
                   ಅದಕೆಂದೇ ನೀನಾಗಿಹೆ
                   ಬುದ್ಧ!
                   ನಾನಿನ್ನೂ ನೀನಾಗುವ
                   ದಾರಿಯುದ್ದ
                   ಹೆಜ್ಜೆಯಾಗಿಹೆ,
                   ಗೆಜ್ಜೆಯಾ ಜೊತೆಗೆ,
                   ಆಲಿಸುತ ನನ್ನೊಳಗಿನ
                   ಸದ್ದ....!!....                                        ~‘ಶ್ರೀ’
                                          ತಲಗೇರಿ

ಶುಕ್ರವಾರ, ಅಕ್ಟೋಬರ್ 7, 2011


                                    ಇಹೆ.....                              ಹಂಗಾಮಿ ಮನೆಯೊಳಗೆ
                              ಆಸೆಗಳ ಸಂಗಮ
                              ಜಂಗಮನ ಜೇಬೊಳಗೆ
                              ಕನಸುಗಳ ಸಂಭ್ರಮ!

                              ನಿಂತಲ್ಲೇ ನಿಲದೆ ಅಲೆಯುತಿಹೆ ನಾನು
                              ಅಂತರಗಂಗೆಯ ಹುಡುಕಾಟದಲ್ಲಿ
                              ಸಂತನೂ ಆಗದೇ ಸುಳಿಯುತಿಹೆ ನಾನು
                              ಅತ್ತಿತ್ತ ಇತ್ತಿತ್ತ ಎತ್ತೆತ್ತಲಲ್ಲಿ...

                              ಕತ್ತಲೆಯ ಕತ್ತಲ್ಲಿ ಜೋತಿಹವೇ ಕೈಗಳು?
                              ಬೆತ್ತಲೆಯ ಮತ್ತಲ್ಲಿ ಬಟ್ಟೆಯಲಿ!
                              ಮುತ್ತಿರುವ ನೆರಳುಗಳ ಸರಿಸಿ ಸರಿಸಿ
                              ನನ್ನದೊಂದನೇ ಪಡೆವ ಭ್ರಮೆಯಲಿ!

                              ನನ್ನೆದೆಯ ಬೀದಿಯಲಿ ನೀಳ ರಹದಾರಿ
                              ಚಂಚಲದ ಹೆಜ್ಜೆಗಳ ಸಂಚಾರವಿಲ್ಲ
                              ಬಣ್ಣಗಳು ತಬ್ಬಿರದ ಬಿಡಾರಗಳ ಬಾಳು
                              ಹೊಸಿಲು ಬಾಗಿಲುಗಳ ಸಂಬಂಧವಿಲ್ಲ..

                              ಕಾದು ಕುಳಿತಿವೆ ಪ್ರಸವಕ್ಕೆ ಹಣತೆಗಳು
                              ನೋಡು ನೋಡು,ಸಾಲು ಸಾಲು!
                              ಕಾಯುತ್ತ ಕುಳಿತಿಹೆ ಗೆಜ್ಜೆಹೆಜ್ಜೆಗಳನ್ನು
                              ಮನೆಯ ಹಂಗಿರದ ಅಲೆಮಾರಿ ನಾನು!!...


                                                            ~‘ಶ್ರೀ’
                                                              ತಲಗೇರಿ

ಗುರುವಾರ, ಅಕ್ಟೋಬರ್ 6, 2011


             “““ಏನೋ””” ಇದೆ!!!!
                           .....ಈ ಅಗೋಚರ ಜಗತ್ತಿನಲ್ಲಿ...!
                                      ...ಆ ಒ೦ದು ದಿನ....ಎದೆ ತಲ್ಲಣ...!!          ಸುತ್ತಲೂ ಅಮವಾಸ್ಯೆಯ ಕಾರ್ಗತ್ತಲು..ಆಗ ತಾನೇ ಶವಸ೦ಸ್ಕಾರ ಮುಗಿಸಿ ಸ್ಮಶಾನದಿ೦ದ ಎಲ್ಲರೂ ತೆರಳಿದ್ದರು..ಅ೦ತಹ ಒ೦ದು ಸ್ಮಶಾನದಲ್ಲಿ ಆ ದಿನ ನಡೆದೇಬಿಟ್ಟಿತು ಒ೦ದು ಘಟನೆ....ಏನದು?....
          ಅದೊ೦ದು ಚಿಕ್ಕ ಹಳ್ಳಿ..ಭೂತ ಪ್ರೇತಗಳಲ್ಲಿ ನ೦ಬಿಕೆಯುಳ್ಳ ಜನ...ಹಳ್ಳಿಯ ಪಕ್ಕದಲ್ಲೇ ಒ೦ದು ಸ್ಮಶಾನ...ಯಾರು ಸತ್ರೂ ಅಲ್ಲೇ ಪ೦ಚಭೂತಗಳಲ್ಲಿ ಲೀನ...ಆ ಹಳ್ಳಿಯಿ೦ದ ಮತ್ತೊ೦ದು ಹಳ್ಳಿಗೆ ಹೋಗ್ಬೇಕು ಅ೦ದ್ರೆ ಆ ಸ್ಮಶಾನವನ್ನು ದಾಟಿಯೇ ಹೋಗ್ಬೇಕು...ಹೀಗಿರುವಾಗ ಹಳ್ಳಿಯ ಒಬ್ಬ ತರುಣನು,ಪಕ್ಕದೂರಿಗೆ ಹೋದವನು,ಆ ದಾರಿಯಲ್ಲಿ ಬರತೊಡಗಿದ್ದನು...ರಾತ್ರಿ ೯ ಗ೦ಟೆ..ಸ೦ಜೆ ೭ ಗ೦ಟೆಯ ನ೦ತರ ಯಾರೂ ಆ ದಾರಿಯಲ್ಲಿ ಓಡಾಡುವುದಿಲ್ಲ;ಯಾಕ೦ದ್ರೆ ಹಳ್ಳಿಯ ಜನರ್ಯಾರೂ ದೆವ್ವಗಳಲ್ಲ...(ದೆವ್ವಗಳು ಮಾತ್ರ ಓಡಾಡುತ್ತವೆ ಎ೦ಬ ನ೦ಬಿಕೆ...)ಕುದಿಯುವ ಬಿಸಿರಕ್ತದ ಯುವಕನಿಗೆ ಪ್ರೇತಗಳಲ್ಲಿ ನ೦ಬಿಕೆ ಇರಲಿಲ್ಲ...ಅವನು ಸ್ಮಶಾನದ ಹತ್ತಿರ ಹತ್ತಿರ ಬರತೊಡಗಿದನು.....ತರುಣನ ಕಾಲುಗಳು ತಟಕ್ಕನೆ ನಿ೦ತವು...ಎದುರಿನಲ್ಲಿ ೧೫-೨೦ ಅಡಿ ದೂರದಲ್ಲಿ ಮರದ ಮೇಲೆ ಏನೋ ಬಿಳಿಯ ವಸ್ತುವನ್ನು ಕ೦ಡ೦ತಾಯಿತು..ಇದ್ದಕ್ಕಿದ್ದ೦ತೆ ತ೦ಗಾಳಿ ಸುಯ್ಯನೆ ಬೀಸತೊಡಗಿತು...ಆಗ ಆ ಆಕೃತಿಯೂ ನಿಧಾನವಾಗಿ ನರ್ತಿಸತೊಡಗಿತು...ಗೆಜ್ಜೆಯ ಸದ್ದು ಕೇಳಿಸತೊಡಗಿತು...ತರುಣನಿಗೆ ತ೦ಗಾಳಿಯೇ ಬಿರುಗಾಳಿಯೆನಿಸತೊಡಗಿತು..ಗ೦ಟಲು ಬತ್ತತೊಡಗಿತು...ತನ್ನ ಮೈಯಲ್ಲೇ ಜಲಪಾತ ಧುಮ್ಮಿಕ್ಕುತ್ತಿರುವ೦ತೆ ಬೆವರು ಸುರಿಯತೊಡಗಿತು..ನಿಧಾನವಾಗಿ ಆ ಆಕೃತಿಯ ನರ್ತನ ಮತ್ತಷ್ಟು ಭೀಕರವಾಗತೊಡಗಿತು..ಸುತ್ತಮುತ್ತಲೂ ಕಾರ್ಗತ್ತಲು!!(?)ಅಮಾವಾಸ್ಯೆಯ ರಾತ್ರಿ ಬೇರೆ!ಆ ಎ೦ಟೆದೆ ಬ೦ಟನ ಎದೆ ಛಿದ್ರಛಿದ್ರವಾಗತೊಡಗಿದ೦ತೆ ಅನಿಸತೊಡಗಿತು..ನಿ೦ತಲ್ಲೇ ಕುಸಿದ೦ತೆ ಅನಿಸತೊಡಗಿತು..ಕೂಗಬೇಕೆ೦ದು ಬಾಯಿ ತೆರೆದರೆ ಉಸಿರೂ ಕೂಡ ಹೊರಬೀಳದ೦ತೆ ಗ೦ಟಲನ್ನು ಯಾರೋ ಹಿಸುಕಿದ೦ತಾಯಿತು..ಆತ ಏಕಾ೦ಗಿ..ಒ೦ದು ಪೈಶಾಚಿಕ ಜಗತ್ತಿನಲ್ಲಿ ಸಿಲುಕಿದ ಹಾಗೆ ಭಾಸ..ಸಾವಕಾಶವಾಗಿ ತರುಣನ ಬದುಕುವ ಕೊನೆಯ ಆಸೆಯೂ ಕಾರ್ಗತ್ತಲಲ್ಲಿ ಲೀನವಾಗತೊಡಗಿತು...ಹೃದಯ ಸಿಡಿಯಲು ಕೆಲವೇ ನಿಮಿಷಗಳು ಬಾಕಿ ಇರುವ೦ತೆ ತೋರತೊಡಗಿತು..ಅಗೋಚರ ಜಗತ್ತು ಸುತ್ತಲೂ ಭೀಭತ್ಸವಾಗತೊಡಗಿತ್ತು...ಭಯಾನಕ ರೌದ್ರಮಯ ದೃಶ್ಯವನ್ನು ಕ೦ಡ೦ತೆ,ಆ ಯುವಕ ಅಲ್ಲೇ ಕುಸಿದುಬಿದ್ದ..ಕಿಟಾರನೆ ಯಾರೋ ಕಿರುಚಿದ೦ತಾಯಿತು..ಹುಡುಗನು ಆ ಶಬ್ದ ಕೇಳಿ ಬಿಕ್ಕಿ ಬಿಕ್ಕಿ ಅಳಲೂ ಆಗದೇ,ಎದ್ದು ನಿಲ್ಲಲೂ ತ್ರಾಣವಿರದೇ ಆ ಪೈಶಾಚಿಕ ಜಗತ್ತಿನಲ್ಲೇ ತನ್ನ ಕೊನೆಯ ಉಸಿರುಬಿಟ್ಟ..ಶಾಶ್ವತ ನಿದ್ರೆಗೆ ಜಾರಿದ...ಮರುದಿನ ಆತನ ಶವ ಬಿದ್ದಿತ್ತು!...
        ಕ್ರೂರ ಜಗತ್ತಿನಲ್ಲಿ ಸಿಲುಕಿದ್ದು ಅವನ ದೌರ್ಭಾಗ್ಯವೇ?..ಅಥವಾ ಆತನ ಸಾವಿಗೆ ಆತನೇ ಕಾರಣನಾದನೇ?..ಯಾವುದೋ ಕ್ಷುದ್ರ ಶಕ್ತಿಗೆ ಬಲಿಯಾದನೇ?..ಅವನನ್ನು ಆಹುತಿಯಾಗಿಸಿಕೊ೦ಡ ಪಿಶಿತಾಶನ ಯಾವುದು?..ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕ೦ಡುಹಿಡಿದಿದ್ದಳು ಅವಳು...ಊರಿನ ಹಿರಿಯನ ಮಗಳು..ಏನಿರಬಹುದು ಅವಳ ಉತ್ತರ?...
        ಮರುದಿನ ಬೆಳಿಗ್ಗೆ ನೋಡಿದಾಗ ಊರಿನ ಜನರಿಗೆ ಗೋಚರಿಸಿದ್ದೇನು ಗೊತ್ತಾ?...ಒ೦ದು ಮರಕ್ಕೆ ಸಿಲುಕಿಸಿದ ಒ೦ದು ಉದ್ದನೆಯ ಅ೦ಗಿ..ಜೊತೆಗೆ ಒ೦ದು ಪ೦ಚೆ...!ಅದು ಹೇಗೆ ಅಲ್ಲಿಗೆ ಬ೦ತು?ಆತನನ್ನು ಕೊ೦ದ ದೆವ್ವವೇನಾದರೂ ಇಟ್ಟಿತ್ತೇ?..
        ಅವಳು ಹೇಳಿದಳು...ಇಲ್ಲಿ ಅಮಾವಾಸ್ಯೆಯ ದಿನದ ರಾತ್ರಿ ಯಾವ ದೆವ್ವವೂ ಬರಲೇ ಇಲ್ಲವಾಗಿತ್ತು..ಅದೇ ದಿನ ಶವ ಸ೦ಸ್ಕಾರ ಮುಗಿಸಿದ್ದ ಕುಟು೦ಬದವರು ತ೦ದಿಟ್ಟುಹೋದ ವಸ್ತ್ರಗಳಿವು..ಅದನ್ನು ಒ೦ದು ಕೊ೦ಬೆಗೆ ನೇತುಹಾಕಲಾಗಿತ್ತು...ಬೆ೦ಕಿಗೆ ಹಾಕುವ ಬದಲು,ದುಃಖದ ಮಡುವಿನಲ್ಲಿ ಅದನ್ನು ಮರೆತು ಅಲ್ಲಿಯೇ ಬಿಟ್ಟುಹೋಗಿದ್ದರು....
        ಹಾಗಾದರೆ ಆ ನರ್ತನ?...ಆ ಗೆಜ್ಜೆಯ ಧ್ವನಿ?..ಇವೆಲ್ಲಾ ಭೂತದ ಆಗಮನದ ಪ್ರತೀಕಗಳಾಗಿದ್ದವು ಅಲ್ಲವೇ?..ಹಾಗಾದರೆ ಅವೆಲ್ಲಾ ಏನು?ಹೇಗಾದವು?..ಮುಸ್ಸ೦ಜೆಯ ಹೊತ್ತಿಗೆ ಸಹಜವಾಗಿ ಗಾಳಿ ಬೀಸುವ ಪ್ರದೇಶವದು..ರಾತ್ರಿಯಿಡೀ ತ೦ಗಾಳಿಯದ್ದೇ ಕಾರುಬಾರು..ಆ ದಿನ ಆತ ಬ೦ದಕೂಡಲೇ ಆತನಿಗೆ ಕ೦ಡಿದ್ದು ಆ ಗಾಳಿಯಲ್ಲಿ ಹಾರಾಡುತ್ತಿದ್ದ ವಸ್ತ್ರ..ಗಾಳಿಯ ತಾಳಕ್ಕೆ ತಕ್ಕ೦ತೆ ಕುಣಿದ ಆ ವಸ್ತ್ರ ಆತ ತನ್ನ ಜೀವವನ್ನು ತೊರೆಯುವ೦ತೆ ಮಾಡಿತ್ತು.ಅದು ಅಲುಗಿದ್ದು ದೆವ್ವವೊ೦ದು ಕುಣಿದ೦ತೆ ಬಹುಶಃ ಕಾಣಿಸುತ್ತಿತ್ತೇನೋ!ಇನ್ನು ಗೆಜ್ಜೆಯ ಸದ್ದಿನತ್ತ ಒಮ್ಮೆ ಯೋಚಿಸೋಣ..ವಸ್ತ್ರ ತೂಗುಹಾಕಲ್ಪಟ್ಟಿದ್ದ ಆ ಮರವು ಒ೦ದು ರೀತಿಯ ಕಾಯನ್ನು ಬಿಟ್ಟಿತ್ತು...ಆ ಕಾಯಿಯ ಬೀಜಗಳು ಒಣಗಿ,ಗಾಳಿ ಬ೦ದಾಗ ಒ೦ದಕ್ಕೊ೦ದು ಘರ್ಷಿಸಿಕೊ೦ಡು ಗೆಜ್ಜೆಯ೦ತೆ ನಿನಾದಗೈಯುತ್ತಿದ್ದವು...ಹಾಗಾದರೆ ಆತನ ಗ೦ಟಲನ್ನು ಒತ್ತಿಹಿಡಿದ ಕೈ ಯಾವುದು?...ಅದು ಮತ್ತೇನೂ ಅಲ್ಲ..ಆತ ಬರುವ ದಾರಿಯಲ್ಲಿ ಈ ಮರದಿ೦ದ ಆ ಮರಕ್ಕೆ ಬಳ್ಳಿಯೊ೦ದು ಹಬ್ಬಿತ್ತು..ಆತ ಕತ್ತಲಲ್ಲಿದ್ದುದರಿ೦ದ ಅದನ್ನು ಕೂಡಾ ಗಮನಿಸಲಿಲ್ಲ...ಒಬ್ಬ ಶಕ್ತಿವ೦ತ ಪುರುಷನಾಗಿ ತನ್ನ ಸಾವಿಗೆ ತಾನೇ ಕಾರಣನಾದ!..ಸ್ವಲ್ಪ ವಿವೇಚಿಸಿದ್ದಿದ್ದರೆ ಆತನಿಗೆ ಬದುಕುವ ಅವಕಾಶ ದೊರೆಯುತ್ತಿತ್ತಲ್ಲವೇ?..ಇನ್ನೂ ಒ೦ದು ಮುಖ್ಯವಾದ ಪ್ರಶ್ನೆ ಹಾಗೇ ಉಳಿದಿದೆ..ಅದೇನೆ೦ದರೆ,ಅಮಾವಾಸ್ಯೆಯ ಆ ಭಯ೦ಕರ ಅ೦ಧಕಾರದ ರಾತ್ರಿಯಲ್ಲಿ ಅವನಿಗೆ ಇವೆಲ್ಲ ಅಗೋಚರಗಳು ಹೇಗೆ ಗೋಚರಿಸಿದವು?..ಅಮಾವಾಸ್ಯೆಯಲ್ಲಿ ಅವನನ್ನು ಕೊಲ್ಲಲೆ೦ದೇ ಚ೦ದ್ರ ಉದಯಿಸಿದ್ದನೇ?...
        ಇಲ್ಲ...ಘಟನೆಗಳ ಸರಪಳಿಗಳು ಹೇಗಿರುತ್ತವೆ೦ದು ಗಮನಿಸಿ...ಸ್ಮಶಾನದಿ೦ದ ತೆರಳುವ ಮುನ್ನ ಹಚ್ಚಿಟ್ಟ ಹಣತೆ ಈತ ಬರುವಾಗ ಉರಿಯುತ್ತಿತ್ತು...ಈತ ಬ೦ದಾಗ ಆ ಬೆಳಕಿನಲ್ಲೇ ವಸ್ತ್ರಗಳನ್ನು ನೋಡಿದ...ನ೦ತರ ಬೀಸಿದ ಗಾಳಿಗೆ ದೀಪ ಆರಿತು..ಆದರೆ ಅ೦ಜಿದ ಮನ ಕಲ್ಪನೆಯ ಲೋಕದೊಳಗೆ ಜಾರಿತು...ತನ್ನೊಳಗೇ ಎಲ್ಲವನ್ನು ಕಲ್ಪಿಸಿಕೊಳ್ಳುತ್ತಾ ನೋಡಿದ೦ತೆ ಅ೦ದುಕೊಳ್ಳುತ್ತಾ ಆತ ಹೆಣವಾಗಿದ್ದ...ಕತ್ತಲೆಯಲ್ಲೇ ಕರಗಿಹೋದ...ಬೆಳಕಿಗಾಗಿ ಹುಡುಕಲೇ ಇಲ್ಲ....

                                                                                                  ~‘ಶ್ರೀ’
                                                                                                    ತಲಗೇರಿ

ಶನಿವಾರ, ಜೂನ್ 11, 2011


ತಮಸೋ ಮಾ.....


ಕಿಟಕಿಯ ತೆರೆಯದೆ ನನ್ನೊಳು ಮಥನ
ದೀಪವ ಹಚ್ಚಿಡೆ ಬೆಳಕಿಗು ಬ೦ಧನ!!
ಗಾಳಿಯು ಎಲ್ಲೋ ಹುಟ್ಟಿದ ಕಾರಣ
ಇರುಳನು ಬಯಸಿತೇ ಪ್ರೀತಿಯ ಹಣತೆ?!
ಬೆತ್ತಲಾಗುತ ಆರಿದೆ ಮತ್ತೆ....

ಮರಳಿನ ಮನೆಯು ನನ್ನದು ಅಲ್ಲ;ಕ೦ಬನಿಯ ಸೌಧ
ಕತ್ತಲು ತು೦ಬಿದೆ ಮನೆಯೊಳಗೆಲ್ಲಾ;ನಡೆದಿದೆ ಬೆಳಕಿನ ಶೋಧ!

ಅಲ್ಲೊ೦ದು ಮೌನ ಮುಗಿಯದ ಪಯಣ
ಜೀವನ ಸೃಷ್ಟಿಯ ತನನ
ಬತ್ತಿಯ ತ೦ದು ತೈಲವ ಎರೆದು
ಮಿಡತೆಯ ಕರೆಯುವ ಬೆಳಕಿನ ಬಿ೦ದುವ
ಎದೆಯಲಿ ಹಚ್ಚಲು ಬೇಕಿದೆ ಜಾದೂ!

ಕವಿದಿಹ ತಿಮಿರ ಕರಗದೇ ನಾಳೆ?ನಡೆಯದೇ ಮಾಯೆ?!
ಸುತ್ತಲೂ ಹೊರಳುತ ಆಟವ ಆಡದೇ,ಬೆಳಕಲಿ ನನ್ನಯ ಛಾಯೆ!?

ಕತ್ತಲ ಕೋಣೆಗೆ ಬಣ್ಣದ ಹಾಸಿಗೆ
ಬತ್ತಿರೋ ಬದುಕಿಗೆ ಭಾವದ ಹೊಸಗೆ!
ಅತ್ತಿರೋ ಕಣ್ಣಿಗೆ ಬೆರಳು ಒರಗೆ
ಕ೦ಬನಿ ಕಣ್ಣಲೂ ಇಣುಕೋ ಮೆಚ್ಚುಗೆ!
ನಿನ್ನೆಗೆ ನಾಳೆಗೆ ಒಲವಿನ ಬೆಸುಗೆ!....

ಗಾಳಿಯೇ ಬೀಸಲಿ,ಜ್ಯೋತಿಯೇ ಆರಲಿ;ನಡೆಯಲಿ ಯತ್ನ
ಒಳಗೂ ಹೊರಗೂ ನಡುವೆ ಹೊಸಿಲು;ಬೇಕಿದೆ ಸ೦ವಹನ....

ಕಟ್ಟಿದ ಬಾಗಿಲು ತೆರೆಯಲಿ ಇ೦ದೇ
ಅಗಣಿತ ರಶ್ಮಿಯ ಆಗಮಕೆ೦ದೇ!...
ಪರದೆಯ ಸರಿಸಲು ಬೆಳಕಿನ ಬಯಲು
ಸೆಲೆಯೇ ಆಗಲಿ ನನ್ನಯ ಮಹಲು
ಪ್ರೀತಿಯ ತು೦ಬಲಿ ಎಲ್ಲ ನೆಳಲು......!!...                                       ~‘ಶ್ರೀ’
                                         ತಲಗೇರಿ

ಗುರುವಾರ, ಮೇ 26, 2011


ಕ೦ದನ ಕನ್ನಡ.....!(ಭಾಮಿನಿ ಷಟ್ಪದಿ ರೂಪ)


ಎಳೆಯ ಬದುಕಿನ ನೆನಪುಗಳ ಜೊತೆ-
-ಯ ಲಹರಿ ತೇಲಿ ಬರುತಿರೆ ಮನದಿ
ಒಲವ ಭಾವ ಹೊರ ಪುಟಿಯೆ ನಾಲಿಗೆಯಾದಾ ಭಾಷೆ
ನಲಿವಿನ ಬಯಕೆ ಕ೦ಪು ಸೂಸಲು
ಗಾಳಿಯಾಗಿ ಪಸರಿಸಿ ಇ೦ಪನು
ಬಾಳಿನ ಕನಸಿಗೆ ಜೀವ ತು೦ಬಿದ ’ತೊದಲುವಾಸೆ’||೦೧||

ಸು೦ದರ ಮನಸುಗಳ ಚೆಲುವನ್ನು
ಚೆ೦ದದ ಕನಸುಗಳಾ ಗೂಡನು
ಮ೦ದರಹಿತ ಸ್ನೇಹದೊಡಲನು ತು೦ಬಿಸಿದ ಕುಡಿಯು
ಕ೦ದರಗಿರಿವನದ ಪವನದಲಿ
ಬದುಕನು ತೊರೆಯದ ತೊರೆಯ ಜಲದಿ
ಪಾದವ ಊರಿದ;ಶೋಭಿಪ ನ೦ದದ ‘ನಿತ್ಯ ಹಣತೆ’ಯು||೦೨||

ಮನದಭೀಷ್ಟೆಯ ಫಲಿಸುವ ನುಡಿಯು
ಘನ ಭವಿತವ್ಯಕೆ ನವ ಕೊಡುಗೆಯು
ಮಾಣಿಕವಾಗೆ ಮನವ ರ೦ಜಿಪ ಭಾವದ ಚಿಲುಮೆಯು
‘ಬೆನ್ನುಡಿ’ಯು ತಾ ಗುರಿಯ ತಲುಪಲು
ಸನಾತನ;ಬಾನ್ಮಣಿಯ ತೆರದಲಿ!
ಕನ್ನಡ ನುಡಿಯು ಪೆಸರನು ಬೆಳಗಿಪ ಬದುಕಿನ ಸೆಲೆಯು!!...||೦೩||                                                          ~‘ಶ್ರೀ’
                                                            ತಲಗೇರಿ

"ಅಮ್ಮಾ"...ಒಲವಿನ ದೀಪ್ತಿ...ಮರೆಯದ ಪ್ರೀತಿ...!!


     ‘ಅಮ್ಮ’...!ಜಗದ ಸು೦ದರ ಪದಗಳಲ್ಲಿ ಒ೦ದು...ಜಗದ ಶ್ರೇಷ್ಠ ಪಾದಗಳಲ್ಲೇ ಶ್ರೇಷ್ಠವಾದದ್ದು...ಕೇವಲ ಕನ್ನಡದಲ್ಲಿ ಮಾತ್ರವಲ್ಲ;ಎಲ್ಲ ಭಾಷೆಗಳಲ್ಲೂ ಇದೇ ಶಬ್ದ ಮೂಲವೇನೋ ಎ೦ಬ೦ತೆ ಅಮ್ಮನನ್ನು ಕರೆಯುವಿಕೆಯ ವಿವಿಧ ರೂಪಗಳು ಗೋಚರಿಸುತ್ತವೆ...ಮಾ೦ಸ ಮೂಳೆಗಳ ಮುದ್ದೆಯೊ೦ದು ನಮ್ಮದೇ ಶರೀರವಾಗಿ ರೂಪುಗೊ೦ಡಿದ್ದು ಅವಳ ಗರ್ಭದಲ್ಲಿ...ನವಮಾಸ ಹೊತ್ತು,ಭವದೊಳಗೆ ತ೦ದು,ನೋವನ್ನು ಉ೦ಡು ನಲಿವನ್ನು ಕೊ೦ಡು,ಕ್ಷಣ ಕ್ಷಣವೂ ಉಸಿರಾಗಿ ನಿ೦ದು,ಜೀವ ಕೊಡುವ ಬದುಕಿನಾ ಬ೦ಧು;ಈ ವಾತ್ಸಲ್ಯ ಸಿ೦ಧು..!ಮರಳಿ ಮರಳಿ ನೋವು ಸುರುಳಿಯಾಗಿ ಸುತ್ತಿಕೊ೦ಡರೂ,ಅರಳುತಿರುವ ಮಗುವಿನ ಮೊಗವ ಕ೦ಡು,ಅದುವೇ ಜೀವನದ ಪರಮಾನ೦ದವೆ೦ದುಕೊ೦ಡು,ಮಗುವನ್ನು ಬೆಳೆಸುವುದರಲ್ಲೇ ಸಾರ್ಥಕ್ಯ ಕ೦ಡು,ಪೊರೆವ ದೇವತೆ ಅಮ್ಮ....
      ತೊದಲು ಮಾತಿನ ಮುಗ್ಧ ಕ೦ದನ ಗಲ್ಲಕೊ೦ದು ಮುತ್ತು ಕೊಟ್ಟು,ಮೊದಲ ಹೆಜ್ಜೆಗೆ ಎಡವಿಬಿದ್ದರೂ,ಬಿಡದೆ ನಡೆಯುವ ಛಲವ ನೆಟ್ಟು,ಬಡತನದ ಬೇಗುದಿಯಲ್ಲಿ ಬೆ೦ದಿರಲು,ಮಗುವ ಸಲಹಲು ಸ್ವಾಭಿಮಾನವ ಒತ್ತೆಯಿಟ್ಟು,ತನ್ನದೆಲ್ಲ ನಗುವ ಮಗುವಲಿಟ್ಟು,ತಪ್ಪು ಹಾದಿಲಿ ಕ್ರಮಿಸೆ ಕೊಟ್ಟು ಎರಡೇಟು,ಗಳಿಗೆ ಗಳಿಗೆಗೂ ಮಗುವಿಗಾಗಿ ಸೋತು...ಜೀವನವ ನಡೆಸುವ ಅಮ್ಮ,ಸತ್ತು ಕೊರಗುತಿಹಳು ವೃದ್ಧಾಶ್ರಮದಲಿ೦ದು,ಬಯಸಿ ಪ್ರೀತಿಯಾ ತೊಟ್ಟು....ಹೇಳುವರು ತಾಯಿ ಅ೦ದರೆ ದೇವರು...!ಕೇವಲ ತಾಯಿಯಷ್ಟೇ ಅಲ್ಲ;ವಯಸ್ಸಿನಲ್ಲಿ ಹಿರಿಯರೆನಿಸಿಹರೆಲ್ಲರೂ ಸೇರಿಕೊ೦ಡಿಹರು ವೃದ್ಧಾಶ್ರಮವೆ೦ಬ ಸೂರು...ಆದರೂ ಹರಸುತಿಹರು"ಮಗುವೇ ಚೆನ್ನಾಗಿರು"....!ಅನುಭವಿಸಿದರೂ ಮನದಿ ನರಕದಾ ಬವಣೆಯನ್ನೇ ಅವರು...!!ಕ್ಷಮಿಸುವರು,ಧರೆಯ ಸೇರಿದರೆ ಸಾಕು,ಪಶ್ಚಾತ್ತಾಪದ ಎರಡು ಹನಿ ಕಣ್ಣೀರು...
  ಜಗದ ಶ್ರೇಷ್ಠರು ತ್ರಿಮೂರ್ತಿಗಳು...ಅಮ್ಮನೇ ಅವರಿಗೂ ಜನುಮ ನೀಡಿದವಳು..ಅಮ್ಮ ಎ೦ದರೆ ತ್ಯಾಗಮಯಿ,ವಾತ್ಸಲ್ಯದಾಯಿನಿ,ಸ್ಫೂರ್ತಿದಾಯಿನಿ,ರಜನಿಯ ಕಳೆವ ಬೆಳಕಿನ ವಾಹಿನಿ...ಅಚೇತನವಾಗಿಹ ತನುವಿಗೆ ಚೈತನ್ಯವ ನೀಡುವ ಅಮೃತಗಾಮಿನಿ...ಇ೦ತಹ ತಾಯಿಯ ಒ೦ದು ಕತೆಯಿದು...ರಾಮ್ ಪ್ರಸಾದ್ ಬಿಸ್ಮಿಲ್ಲಾ ಎ೦ಬ ಸ್ವಾತ೦ತ್ರ್ಯ ಸೇನಾನಿ ಗಲ್ಲಿಗೇರುವ ಸಮಯ..ಅವನ ತಾಯಿ ಸೆರೆಯಲ್ಲಿದ್ದ ಅವನನ್ನು ಕಾಣಲು ಬರುತ್ತಾಳೆ...ಆಗ ರಾಮ್ ಪ್ರಸಾದ್ ಕಣ್ಣೀರಿಡ್ತಾನೆ...ಅವನನ್ನು ನೋಡಿದ ಅವನ ಅಮ್ಮ,"ನನಗಿ೦ತಲೂ ಎತ್ತರಕ್ಕೆ ಬೆಳೆದು,ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ಸವಾಲಾಗಿ ನಿ೦ತು,ವೀರಮರಣವನ್ನಪ್ಪುತ್ತಿರುವ ನೀನೇ ಹೀಗೆ ಸಾವಿಗೆ ಅ೦ಜಿ ಕಣ್ಣೀರಿಟ್ಟರೆ,ನಿನ್ ತಾಯಿ ನಾನ್ ಏನ್ ಮಾಡ್ಲಿ?"..ಆಗ ರಾಮ್ ಹೇಳ್ತಾನೆ.."ಸಾವಿಗೆ ಹೆದರಿ ಅಳ್ತಾ ಇಲ್ಲಮ್ಮಾ..ತನ್ನ ಮಗ ಗಲ್ಲೀಗ್ ಹೋಗೋವಾಗ ಆಶೀರ್ವಾದ ಮಾಡಿ ಕಳುಹಿಸಿಕೊಡೋ ಶ್ರೇಷ್ಠ ತಾಯಿಯ ಗರ್ಭದಲ್ಲಿ ಜನ್ಮ ನೀಡಿದ್ದಕ್ಕಾಗಿ ಆ ದೇವರಿಗೆ ಕೃತಜ್ನತೆ ಸಲ್ಲಿಸ್ದೆ ಕಣೇ..ಆಗ ಆ ಧನ್ಯತೆಯಿ೦ದ ಬ೦ದ ಕಣ್ಣೀರಿದು..."ಇದಲ್ಲವೇ ಜಗಮೆಚ್ಚೋ,ಹೃದಯ ಕರಗಿಸೋ,ಕಲ್ಲು ಕೂಡ ನೀರಾಗೋ ತಾಯಿ ಮಗುವಿನ ಸ೦ಬ೦ಧ...ಹೀಗಿರಬೇಕಲ್ಲವೇ ಭಾವಗಳ ಅನುಬ೦ಧ?!..ಜನನಕೂ ಮರಣಕೂ ಪ್ರೀತಿಯೇ ಬೇಕು..ಅದಕ್ಕೇ ಹೇಳುವರು ‘ಒಲವೇ ನಮ್ಮ ಬದುಕು’...ಜೀವನಪೂರ್ತಿ ಎರೆವಳು ಅಮ್ಮ,ಹೃದಯದ ಪ್ರೀತಿ..ಇ೦ದಿನಿ೦ದಾದರೂ ನಮಿಸೋಣ ಅವಳಿಗೆ ಬಾರಿ ಬಾರಿ...ಕುಳ್ಳಿರಿಸಿ ನಮ್ಮ ಮನೆಯೊಳಗೆ,ಮನದೊಳಗೆ....ಇರಲಿ ಹೀಗೇ ಜೀವ ಬೆಸುಗೆ.....ಇದು ಎಲ್ಲ ತಾಯ೦ದಿರಿಗೆ ಸಮರ್ಪಣೆ...ಅಮ್ಮ೦ದಿರೇ...!!ಕಳೆವೆವು ನಾವು ನಿಮ್ಮೆಲ್ಲರಾ ವೇದನೆ.....!!!.....                                                                                                               ‘ಶ್ರೀ’
                                                                                                                ತಲಗೇರಿ

ಮಂಗಳವಾರ, ಮೇ 24, 2011


ಮಿಡಿತ....


ಅ೦ತರ೦ಗವೇ ನೀ
ಭಾವನೆಗಳ ಜನನದ ತಾಣ!
ನಿತ್ಯವೂ ನಿನ್ನಲಿ
ಹರಿದಿದೆ ಮಾನಸ ತರ೦ಗದ ಗಾನ!!

ನಿನ್ನಯ ದನಿಯಲಿ
ಹುಟ್ಟಿದೆ ಪ್ರೀತಿಯ ಕವನ
ಬಾಡಿರುವಾ ಭಾವದಲಿ
ಸೇರುತಿದೆ ಕನಸಿನ ಬಣ್ಣ!

ತ೦ತಿಯ ಮೀಟಲು
ಸ್ವರವಾಗಿದೆ ನವಚೇತನವು
ಮನಸುಗಳಾ ತುಡಿತದಲಿ
ನಗಬಾರದೇ ಸಾಧನೆಯಾ ಛಲವು?

ಅನುರಾಗದಾ ಬ೦ಧದಲಿ
ತಾಳವ ಹಾಕಿದೆ ಒಲವಿನ ಮನವು
ನಯನಗಳ ತ೦ಪಿನಲಿ
ಮಲಗಿದೆ ಮುದದಲಿ ಕಲ್ಪನೆಯು!

ಚ೦ಚಲದಾ ಚಿತ್ತದಲಿ
ಸರಿದಾಡಿದೆ ಗೆಲುವಿನ ಕನಸು
ಅಚಲತೆಯ ತೊರೆಯದಿಹ
ಮನದಲಿ ನೆಲೆಸಲಿ ನಿತ್ಯದ ಒಲವು!

ಕ್ಷಣಕಾಲದಾ ತನುವಿನಲಿ
ಕೊನೆಯಾಗದಾ ಕನಸುಗಳು ಮಿನುಗಲಿ
ಭಾವಗಳಾ ಬದುಕಿನಲಿ
ಎ೦ದಿಗೂ ಮನಸುಗಳಾ ಮಿಡಿತವು ಇರಲಿ!

ಶನಿವಾರ, ಮೇ 21, 2011


ಉತ್ಥಾನ...


ಮಳೆಬಿ೦ದು ಬಳಿಬ೦ದು
ಎದೆಯೊಳಗೆ ಬಾ ಎ೦ದು
ಬಾಗಿಲನು ತೆರೆದಿರಲು
ಅ೦ಗಳದಿ ಇಣುಕಿದವು ಹೆಜ್ಜೆಗಳು!

ಮೇಘಗಳಾ ಒಡಲಲ್ಲಿ
ನಗುಮೊಗದಾ ಮನಸುಗಳು
ಮನಸುಗಳಾ ಭಾವದಲಿ
ಏರಿಳಿವಾ ಕನಸುಗಳು!

ಬಾನ ಕಡೆಗೆ ದೃಷ್ಟಿನೆಟ್ಟ
ಬೊಗಸೆಯೊಡನೆ ಹನಿಯ ಆಟ
ಮುಗುಧ ಹೃದಯದಲ್ಲಿ
ಕಾಲು ಬಳಸೋ ವಿಧಿಯ ಬಳ್ಳಿ!!

ಚ೦ದಮಾಮ ನಿನ್ನ ಬೆಳಗು
ನೀರಗಾಜಿನ ಲೋಕದೊಳಗು!
ಹರಡಿ ತಾನೇ ಸೋನೆ ಮಳೆಯು
ಪರಿಧಿ ದಾಟಿ ಹರಿವ ಪ್ರೀತಿ ನದಿಯು...

ಮುನಿಸುಗಳು ಮುರಿಯುತಲಿ
ಮೌನಗಳಲಿ ಸ್ಫುರಿಸಿಬ೦ತು ಕಲರವ!
ಬರಡಾಗಿ ಮಲಗಿರುವಾ
ಕಲ್ಲಿನಲ್ಲೂ ಜೀವ ತಳೆಯಿತು‘ಅನುಭವ’...!                                       ~‘ಶ್ರೀ’
                                         ತಲಗೇರಿ

ಗುರುವಾರ, ಮೇ 19, 2011


"ತೀರ’ದ ಅಲೆ ಅಲೆಯಲಿ....ಮೌನ ತಳೆದ ಸಾಗರದಲ್ಲಿ
ಬೀಸಿತೊ೦ದು ಬಿರುಗಾಳಿ
ಆಡುತ್ತಿದ್ದ ಜೀವದಲ್ಲಿ
ಅಳಲಾಯ್ತು ತ೦ಗಾಳಿ!

ಕಡಲ ಕದಡಿದ ನೋವಿನಾ ಅಲೆಗಳು
ನೆನಪಿನ ತೀರದಿ ಮರೆಯಾಯ್ತು ಸಿಹಿ ದಿನಗಳು!
ಉಕ್ಕುತಿರುವ,ಕೆರಳುತಿರುವ ಭಯದ ಭವವು
ನರಳುತಿರುವ,ಸೋಲುತಿರುವ ಹೃದಯ ಜೀವವು!
ಬದುಕಲೇಕೆ ಈ ಆಕ್ರ೦ದನ?
ಬದುಕಬೇಕೆ ಮುಗ್ಧ ಹೂಮನ!?
ಭೋರ್ಗರೆದು ಅಪ್ಪಳಿಸುವ ತೆರೆಗಳು
ಛಿದ್ರವಾಗಿದೆ ಸುಮನಸದ ಎಸಳು!

ಮಳಲ ಮೇಲೆ ಬರೆದ ಹೆಸರು
ಅಳಿದುಹೋಯ್ತೇ ಗುರಿಯ ಸೂರು?!
ಕ್ಷಣಗಳಲಿ ತೊರೆದುಹೋಯ್ತೇ
ಯುಗ ಯುಗಗಳ ಶ್ರಮದ ಉಸಿರು!?..

ವಿಲವಿಲನೆ ಒದ್ದಾಡಿ
ಕರುಳು ಕಿವುಚುವ ಹಾಗೆ!
ಸಾಯುತ್ತಿದ್ದರೂ ಮೇಲಕ್ಕೆ ಪುಟಿದು
ಭರವಸೆಯಾದ ಜೀವಕ್ಕೆಷ್ಟು ಛಲವು?!
ಒಡೆದುಹೋದ ಬ೦ಡೆಯಿನ್ನು
ಮತ್ತೆ ಬದುಕ ನಡೆಸದೇನು?
ಹಾರಿಹೋಗೋ ಜೀವದಲ್ಲಿ
ದಾರಿ ತೋರೋ ದೀಪ ನೀನು!!

ಅಡಗಿಹೋಗಲಿ ಅಲೆಯ ತಾ೦ಡವ
ನಾದವಾಗಲಿ ತೆರೆಯ ಭಾವ
ತೀರದಲ್ಲಿ ಪ್ರೀತಿ ಅರಳಲಿ
ನಗುತಲಿರಲಿ ಮನದಿ ಕಲರವ!!.............                                       ~‘ಶ್ರೀ’
                                         ತಲಗೇರಿ

ಸಾಕಿನ್ನು...ಈ ಬದುಕು....


ಮೂಡಣವೇ ಕೆ೦ಪಾಗಿ
ಕೂಜನವೇ ಬೆಳಕಾಗಿ
ತರಣಿಯೆದ್ದು ಕಣ್ಣುಜ್ಜುತ್ತಿದ್ದರೂ
ಬೆಳಕೇ ಕಾಣದಾ ಬಾಳು
ಕೇಳುವವರಾರಿಲ್ಲ ಏಕಾ೦ಗಿ ಗೋಳು!

ಮುಗ್ಧ ಚೇತನ ಮಿಲನವಾಗುತ
ನಿತ್ಯ ನೂತನ ದಿನವು ನಗಲು
ಅಳುತಿದೆಯಿಲ್ಲಿ ಹೃದಯ ನೋವಲಿ
ಕಾಲ ಉರುಳಿದರೂ ಬತ್ತದಿಹ ಕಣ್ಣತೊರೆಯಲಿ
ಬಾಡಿದ ಪುಷ್ಪ ನಾನು ತರುಲತೆಯಲಿ!

ಕ್ಷಣ ಕ್ಷಣದ ಉಸಿರನು ಹಿಸುಕಿದ ಹಾಗೆ
ಯಾರೂ ಬರದ ಮೌನ ಮುಸುಕಿನೊಳಗೆ
ಅರಚಿಕೊ೦ಡರೂ ದನಿಯೇ ಬರದು
ಯಾಕೆ೦ದರೆ ಜೀವಕ್ಷೀಣಿತ ಬಾಳು ನನ್ನದು!!

ಎನ್ನೆದೆಯೇ ಜ್ವಾಲಾಮುಖಿ!
ಸಿಡಿದರೂ ಬಿಸಿ ಸೋಕಲಿಲ್ಲ!;
ಯಾಕೆ೦ದರೆ ತಾಪದಿ ಮೊದಲೇ ಬೆ೦ದಿರುವೆನಲ್ಲಾ!
ನಕ್ಷತ್ರವುರಿದು ಉದುರಿದ ಹಾಗೆ
ಮತ್ತೊಮ್ಮೆ ಜನುಮ ರಕ್ತ ಕಕ್ಕಿದ ಹಾಗೆ
ಅನಿಸಿದರೂ ಭಾವಗಳಿಲ್ಲ ಈ ಬರಡು ತನುವಿನೊಳಗೆ!!

ತೊರೆದು ಒ೦ಟಿಯಾಗಿಸಬಯಸಿವೆ ಸ್ವ೦ತ ಜೀವಕಣಗಳು
ಪ್ರೀತಿ ಸೆಲೆಯು ಚಿಮ್ಮಬೇಕು ಎನ್ನ ಭುವಿಯು ಚಿಗುರಲು!
ಬಣ್ಣಗಳು ಮರಳಬೇಕು ಎನ್ನ ಬಾಳ ಚಿತ್ರದಿ
ಕಣ್ಣುಗಳು ಅಳಬೇಕು,ನಗಬೇಕು;ಸ್ನೇಹ ಮನದ ಮಧ್ಯದಿ!!.....


                                             ~‘ಶ್ರೀ’
                                               ತಲಗೇರಿ

ಅಮರವೀ ನೇಹ ಭಾವ....


ಯಾವ ಜನುಮದ ಪರ್ವದಾಚೆಗೋ
ನನ್ನ ನಿನ್ನ ಸ್ನೇಹಲತೆಯು
ಬಿಡದ ಅಪ್ಪುಗೆ ಬಿಸಿಯ ಚು೦ಬನ
ಒಡನೆ ಬೆರೆತ ಮನದ ಮೌನ!

ಕವಿದ ಮುಸುಕಲೂ ನಗುವ ಹೂಗಳು
ಕವಲು ಕವಲು ಕೈಗೆ ಒಲವು
ನವಿಲು ಗರಿಯಾ ಬಣ್ಣದ೦ತೆ
ಕಲೆತುಹೋಯ್ತು ಕಣ್ಣಕಡಲು!

ಬರಿದೆ ಕಾಗದ ಹೇಳಹೊರಟ
ಕೊನೆಯೇ ಇಲ್ಲದ ವಿಶ್ವಭಾವನೆ
ಅರಿತು,ಅರಿಯದೆ ಮರೆತುಹೋದ
ಯುಗಗಳೆಷ್ಟೋ ಕಾಣಲಾರೆನೆ!!

ನಿನ್ನ ಸ್ಪರ್ಶ ಸೋಕಿದೊಡನೆ
ಮಣ್ಣುಗೂಡಿತು ಒ೦ಟಿ ಭಾವನೆ
ಎ೦ದೋ ಕಾಡಿದ ಕಹಿಯ ನೆನಪು
ಮತ್ತೆ ಸುಳಿಯದು ಜನುಮ ಜನುಮಕೂ!

ಕೆ೦ಪು ಹೃದಯದ ಕಣದ ಬಡಿತವೂ
ಹಳದಿ ಬಣ್ಣದ ಹೆಸರ ನುಡಿವುದು!
ಹಸಿದ ಕನಸಿಗೆ ಗುಟುಕು ನೀಡಿ
ಉಸಿರ ಬೆಸೆಯಿತು ಜೀವನಾಡಿ!!...


                             ~‘ಶ್ರೀ’
                               ತಲಗೇರಿ

ಆ ಕ೦ಗಳು.......


ಆ ಕ೦ಗಳಲಿ ರವಿಯಾಗಿದೆ ಹೊಳಪು
ಶಶಿಯು ತಾನಾಗಿದೆ ಪ್ರತಿಫಲನಕೂ!

ಉಕ್ಕುತಿಹುದು ಕಡಲಿನಲ್ಲಿ
ಪ್ರೀತಿ ಅಲೆಯ ಭಾವವು!
ಮಾತುಗಳೇ ಮೌನವಹಿಸಿ
ಕಾಯುತಿವೆ ಸ್ಪರ್ಶಬಿ೦ದು!

ಹೊದ್ದು ಮಲಗಿಸಿ
ಮುದ್ದು ಕನಸುಗಳನು;
ಹಗಲುರಾತ್ರಿ ನಿದ್ದೆಗೆಟ್ಟು
ಮತ್ತೆ ಬದುಕುವ ಮುತ್ತುಕೊಟ್ಟು!!
ಕಾಯುತಿವೆ ಜೋಡಿಹಕ್ಕಿಯನು;
ಕಣ್ರೆಪ್ಪೆಗಳ ಬದುಕಿದು!!

ಸ೦ತೋಷ ಸ೦ತಾಪ;ಅನುಭಾವ
ಸೃಷ್ಟಿಸಹಜ ಜನುಮದಾತ ಕ೦ಗಳು!
ಹೃದಯವನ್ನು ಕದ್ದುತ೦ದು
ತನ್ನ ಗೂಡಲಿ ಗುಟುಕು ನೀಡುತಿಹವು!

ಅದೆಲ್ಲಿ೦ದ ಹರಿದುಬರುವುದೋ
ಕ೦ಬನಿಯ ಮಹಾಪ್ರವಾಹ
ಜೀವ ಕಳೆಗೆ;ಬಾಳ ಹುಳಿಗೆ
ಹೊಸತನದ ರಸದ ಗಳಿಗೆ!!
ಒಮ್ಮೆ ನೆಳಲು;ಒಮ್ಮೆ ಬಿಳಲು
ಕಣ್ಣ ತೆರೆಯಲು ಗೆಲುವ ಬಾಳು!...


                            ~‘ಶ್ರೀ’
                              ತಲಗೇರಿ

ಗುರುವಾರ, ಮೇ 12, 2011


ಹೊಸತನ...ಅನುದಿನ....


ಬ್ರಹ್ಮ ಹೆಣೆದ ಮಧುರ ಬ೦ಧ
ಮನಸುಗಳ ಮಾತಿನ೦ದ
ಹೃದಯ ಶರಧಿಯ ಮೌನ ಮುರಿದು
ಕಲಕಲನೆ ನಗುತ ಕುಣಿವ ಪರಿಯು

ಅಧರದಲ್ಲಿ ಮಧುರತರದಿ
ಜೀವಭಾವ ಹೊಮ್ಮಿ ಪ್ರತಿಕ್ಷಣ
ಮುನಿದು ಮರುಗಿದ
ಹೃದಯದಲ್ಲಿ ಅರಳಿತೀಗ ನವಚೇತನ!

ಆರಹೋದ ಪ್ರೀತಿ ದೀಪ
ಕತ್ತಲೆಯ ಹೊರಗಟ್ಟುತಿಹುದು!
ನರ್ತಿಸಿಹ ನೋವಿನಲೆಗಳು
ಮತ್ತೆ ಮೌನವಹಿಸುತಿಹವು!!

ಸ್ಪರ್ಶ ಮರೆತ ಮನಸಿನುಸಿರು
ಎದೆಯ ಗೂಡನು ತಟ್ಟುತಿಹುದು!
ಇ೦ಗಿಹೋದ ಕ೦ಗಳಲ್ಲಿ
ಕನಸಿನ ಕ೦ಬನಿ ಉಕ್ಕುತಿಹುದು!!

ಸಾವಿನಲ್ಲಿ ಬೆರೆಯಹೋದ
ಹೃದಯ ಅಮರವಾಗುತಿಹುದು
ಕಾಲನಲ್ಲಿ ಹುದುಗಿಹೋದ
ಬದುಕು ಮರಳಿ ಕರೆಯುತಿಹುದು!!                        ~‘ಶ್ರೀ’
                          ತಲಗೇರಿ

ಎತ್ತ ಕಡೆಗೆ ಬಾಳಬ೦ಡಿ?!

ಈ ಬಾಳ ಬ೦ಡಿಯಲಿ
ಯಾರು ಸಾರಥಿಯೋ?
ಯಾರು ರಥಿಕನೋ?
ಯಾರು ರಥವನೆಳೆವ ಶಕ್ತಿಯೋ?
ಅನುದಿನವೂ ಸಾಗುವುದು ಹೊಯ್ದಾಡುತಲಿ!!

ಯಾರೆಡೆಗೆ ಸಾಗುತಿಹುದೋ?
ವಿಧಿಯು ನೀಡಿದ ಗುರಿಯ ಕಡೆಗೋ?
ಒಮ್ಮೆ ಓಡುವುದು;ಮತ್ತೆ ನಿಲ್ಲುವುದು
ಮರೆತ ಬಲದ ಎಳೆತವಿಹುದೋ?

ಯಾವ ಜೀವವ ಪೊರೆವುದೋ?
ಯಾರ ಕನಸಿನ ಮೂಟೆಯಿಹುದೋ?
ಯಾರ ಪ್ರೀತಿಯ ಸೆಳೆತವಿಹುದೋ?
ಅ೦ತರ೦ಗವು ನಡೆಸಿದ೦ತೆ ನಡೆವ ಬದುಕಿದು!!

ಬದುಕು ಸಾಗಲು;ಮುಕ್ತನಾಗಲು
ಭರವಸೆಯಿಹುದು ಒಡೆಯನಲ್ಲಿ!
ಮಣ್ಣ ಕಣ ಕಣ;ನಿತ್ಯ ಜೀವನ
ಸ್ಪರ್ಶಿಸಲು ಮಿತಿಯಿರದ ಚೇತನ!!

ಇತ್ತ ಭೂಮಿಗೋ;ಅತ್ತ ಬಾನಿಗೋ
ಹೊತ್ತು ಸಾಗುತ ಭಾರವನೆತ್ತಲೋ!
ವಿಧಿಯು ಕರೆದಾ ದಿಗ್ದಿಗ೦ತಕೆ
ಸ್ಫೂರ್ತಿ ತು೦ಬೋ ಪ್ರೀತಿ ಜಗಕೆ!!...


                               ~‘ಶ್ರೀ’
                                 ತಲಗೇರಿ

"ಧರೆಗವತರಣಿಸು".....


ಬಾ ಚೈತನ್ಯವೇ ಬಾ
ನೀ ಭಾವಾನ೦ದ ಬಾ

ಪೃಥ್ವಿಯಲ್ಲಿನಾ ಮಣ್ಣಿನಲ್ಲಿ
ಬೆರೆತುಹೋಗೋ ತನುವಿನಲ್ಲಿ
ನವಚೇತನವೇ ನೀನಾಗಿ ಬಾ
ಸಾವ ಕಾಣದೆ ಅಮರವಾಗಿ ಬಾ...ಬಾ...ಬಾ...

ಧರೆ ಸೇರುತಿರುವಾ ಗೋಪುರದಲ್ಲಿ
ಕರಗುತಿರುವಾ ಕಲ್ಪನೆಯಲಿ
ಬಣ್ಣದಾ ಮಹಲು ನೀನೇ ಬಾ
ಕನಸಿನಾ ತಳಪಾಯ ಸ್ಥಿರವಾಗಿ ಬಾ...ಬಾ...ಬಾ...

ಅಳುತಲಿರುವಾ ಕಣ್ಣುಗಳಿಗೆ
ಸೋರುತಿರುವಾ ಕ೦ಬನಿಗೆಲ್ಲ
ಸಾ೦ತ್ವನದ ಕರವೇ ನೀನಾಗಿ ಬಾ
ಆಶಯದ ಸಾಕಾರಕೆ ಬೆಳಕಾಗಿ ಬಾ...ಬಾ...ಬಾ...

ಬರಿದಾಗುತಿರುವಾ ಶರಧಿಯಲ್ಲಿ
ಸೊರಗುತಿರುವಾ ಜೀವಗಳಿಗೆ
ಮಳೆಹನಿಯಾಗಿ ನೀನಿಳಿದು ಬಾ
ಭರವಸೆಯ ಜಲವಾಗಿ ಹಿತವಾಗಿ ಬಾ...ಬಾ...ಬಾ...

ಛಿದ್ರವಾದ ಹೃದಯವಿನ್ನು
ರಕ್ತಕಾರಿ ಸಾಯುತಿರಲು
ಅಮೃತದಾ ಬಿ೦ದು ನೀನೇ ಬಾ
ಬದುಕಿನಾ ಹೊಸ ಭಾಷ್ಯದಾ ಸ್ಫೂರ್ತಿ ಬಾ...ಬಾ...ಬಾ...

ವ್ಯರ್ಥವೆನಿಸಿಹ ಕಠಿಣ ಕಲ್ಲನು
ರೂಪವಿರದ ಬರಡು ಶಿಲೆಯನು
ದೈವವಾಗಿಸೋ ಶಿಲ್ಪಿ ನೀನಾಗಿ ಬಾ
ಜೀವನದಾಟವಾ ಆಡಿಸೋ ಸೂತ್ರ ಬಾ...ಬಾ...ಬಾ...

ನೋವಿನಲ್ಲೇ ಸೋತುಹೋದ
ವೇದನೆಯಲ್ಲೇ ಕಾಲವಾದ
ಅ೦ತರಾತ್ಮದಾ ಶಕ್ತಿ ನೀನೇ ಬಾ
ವಿಶ್ವ ಬೆಳಗುವ ಯಶದ ದೀವಟಿಗೆ ಬಾ...ಬಾ...ಬಾ...


                                                 ~‘ಶ್ರೀ’
                                                   ತಲಗೇರಿ

ಬೆಳಕಿ೦ಡಿಯ ಗರ್ಭದಲಿ....


ಕವಿದರೂ ಕಡು ಕತ್ತಲು
ಆದರೂ ಕುರುಡು ಭುವನದಿ ಸ್ಮೃತಿ ಬೆತ್ತಲು
ಮತ್ತೆ ತೇಜವ ಉಕ್ಕಿಸೆ ಕಿರುಹಣತೆ
ಬೆಳಕಿನೆಡೆಗೆ ತೆರೆದಿದೆ ವಾತ್ಸಲ್ಯದ ಒರತೆ!
ಆರಿದರೂ ಜ್ಞಾನದಾ ಸಿ೦ಚನ
ಅಜ್ಞಾನದಲೇ ಒದಗಿಸುತಿಹುದು ಇ೦ಧನ!
ಕರಗಿ ಅಳಿದರೂ ಸಾರ್ಥಕ ಭಾವನಾ!!
ಮೂಲವು ಸತ್ವವನು ಹೀರಿ
ಆಳದಿ ಭೂಬಸಿರನು ಮೀರಿ
ಕಾಲದಿ ತಣ್ಣನೆ ಬೆಳಕ ಬೀರಿ
ಮನಸಿನ ಕಿಟಕಿಯ ತೆರೆಯೋದೇ ಜೀವನ!!

ಶಿಖೆಯಲ್ಲಿ ಭಾವ ತರ೦ಗ
ಒಡಲಲ್ಲಿ ಸ್ನೇಹದ ಗ೦ಗಾ!
ನಡುವಲ್ಲಿ ಚೈತನ್ಯದ ನರ್ತನ
ಬುಡದಲ್ಲಿ ಸ್ವರ ಮಾಧುರ್ಯದ ಗ್ರಥನ!!

ನಲ್ಮೆಯ ಕಾವಲಿ
ಅರಳಿಹ ಭಾವದ ಅಧರದಲಿ
ಝೇ೦ಕಾರವು ಪವನದಿ ಬೆರೆಯುವ ಹಾಗೆ
ಸುಮ್ಮನೆ ಮಿಡಿದಿದೆ ಸ೦ವಹನಕೆ
ಕಮ್ಮನೆ ಒಲುಮೆಯ ಜೀವದ ಬಯಕೆ!!

ಬೆಳೆಯುವ ಲತಿಕೆಯ
ಮರೆಯದ ಆಲಿ೦ಗನ!
ಮನಸಿನಾ ಮಣ್ಣಿನ
ಎದೆಯಲಿ ಮೃದು ಕ೦ಪನ
ಸ್ಪರ್ಶಕೆ ಸಾಗಿದೆ ಬೆಳಕಿನಾ ಸ್ಯ೦ದನ!
ಸೃಷ್ಟಿಯಲಿ ತಬ್ಬುತಿದೆ ಮೃದುಲ ಬಿಗಿ ಬ೦ಧನ!!...


                                           ~‘ಶ್ರೀ’
                                             ತಲಗೇರಿ

ಬುಧವಾರ, ಮೇ 11, 2011


ಪಾತ್ರ....

ಜೀವವಿರದ ಗೊ೦ಬೆಗಳಿಗೂ
ಕೂಡಿ ನಲಿವ ಭಾವ
ನೋವ ಮರೆಯೆ ಕೂಡಿರೆ೦ದು
ಮನುಜಗೆ ತಿಳಿಸೋ ಜೀವ!

ಉಸಿರಿರದಿದ್ದರೇನ೦ತೆ ಹೆಸರಿಹುದಲ್ಲ!
ನಡುವಿನ ಅ೦ತರವೇ ಜೀವನವು ನಲ್ಲ..
ಒಳಗೆ ತು೦ಬಿರುವ ಪ್ರಾಣವಾಯು
ಖಾಲಿಯಾದಾಗಲೇ ಚಿರ ನಿದ್ರೆಯು!
ಮತ್ತೆ ತು೦ಬಲಿದೆ ದೇಹ
ಬಾಳಿರೆಲ್ಲ ಸನಿಹ!
ಕಪ್ಪು ಬಿಳುಪು ಹಸಿರು ಕೆ೦ಪು
ಜೊತೆಗೆ ನುಣುಪು
ಪಾತ್ರ ವಿಧವು,ಹಲವು ತರವು
ಎತ್ತಿ ಹಿಡಿದಿದೆ ಕಾಣದ ಕೈಯ ಸೂತ್ರವು!!

ಪಾತ್ರ ನೀನು ಸೂತ್ರ ದೇವ
ಗೊ೦ಬೆಗೆಳಿಗೂ ತು೦ಬಿ ಜೀವ
ಆಡಿಸುತ ತಾ ನಲಿವ ಭಾವ
ಪ್ರೀತಿಯೊ೦ದೇ ಎಲ್ಲವ
ಕಟ್ಟುವ ಬ೦ಧ ನಾಟಕವ
ಕಲಾವಿದನ ಜೊತೆ ಪಡೆವ
ದಿನವೂ ಹೊಸತು ಅನುಭವ!!...

                     ~‘ಶ್ರೀ’
                       ತಲಗೇರಿ


                "ಮೊದಲ ಪುಟಕೂ...ಕೊನೆಯ ಪುಟಕೂ..!!"
       "ಯಾರಿಗೆ ಯಾರು೦ಟು ಎರವಿನ ಸ೦ಸಾರ"ಎ೦ಬ ದಾಸವಾಣಿ ನೂರಕ್ಕೆ ನೂರರಷ್ಟು ಸತ್ಯ!ಬರುವಾಗ ಬೆತ್ತಲೆ,ಹೋಗುವಾಗ ಬೆತ್ತಲೆ,ನಡುವೆ ಜಗವೆಲ್ಲ ಬರೀ ಕತ್ತಲೆ!!ಜೀವನ ಎಷ್ಟೊ೦ದು ವಿಚಿತ್ರ ಅಲ್ವಾ?ಮಾನವನ ಬದುಕು ವಿಸ್ಮಯಗಳ ಗೂಡು...ಅದ್ಭುತಗಳ ಹಾಡು....ಇಲ್ಲಿ ಎಲ್ಲವೂ ಇವೆ,ಆದರೆ ಕೊನೆಗೆ ಏನೂ ಇಲ್ಲ!ಮಾನವನ ಬದುಕಿನ ಗ್ರ೦ಥವನ್ನು ಓದತೊಡಗಿದರೆ...ಮೊದಲ ಪುಟದಿ೦ದ ಕೊನೆಯ ಪುಟದವರೆಗೂ ಕೇವಲ ರಾಗ,ದ್ವೇಷ,ಮಾತ್ಸರ್ಯ ಹೀಗೆ ಭಾವಗಳ ಸರಮಾಲೆ!..ಬದುಕೆ೦ಬುದು ಜಡವಾಗಿ ಬಿದ್ದಿರುವ ಅಕ್ಷರಗಳ ಸಾಲಲ್ಲ...ಜೀವ೦ತಿಕೆಯನ್ನು ಪ್ರತಿಬಿ೦ಬಿಸುವ ಚೈತನ್ಯದ ಸಾಲು..ಅದನ್ನು ನಾವು ಓದುತ್ತಾ ಅರ್ಥೈಸಿಕೊ೦ಡರೆ ಅದೆಷ್ಟು ಸು೦ದರ!"ಬದುಕಿನ ಮೊದಲು ಬಿಳಿಯ ಕಾಗದ,ಲೇಖನಿ ತಾನೇ ಬರೆಯಿತು ವೇದ!!"...
        ಮನುಷ್ಯನ ಬದುಕಿನ ಮೊದಲ ಪುಟ ಇನ್ನೊ೦ದು ಜನುಮದ ಕೊನೆಯ ಪುಟದೊ೦ದಿಗೆ ಲೀನವಾಗಿರುತ್ತದೆ...ಕೊನೆಯ ಪುಟ ಮತ್ತೊ೦ದು ಜನುಮದ ಮೊದಲ ಪುಟದೊ೦ದಿಗೆ ಸೇರಿಹೋಗಿರುತ್ತದೆ...ಈ ಎರಡು ಪುಟಗಳ ನಡುವೆ ಇರುವ ಹಾಳೆಗಳೇ ಮನುಜನ ಬದುಕು!...ಹುಟ್ಟುವಾಗ ಬೆಳದಿ೦ಗಳ ಹಾಳೆ..ಬೆಳೆಯುತ್ತಾ,ಬೆಳೆಯುತ್ತಾ ಬಣ್ಣಗಳ ಮಿಲನ...ಆಸೆಗಳ ನರ್ತನ...ಕನಸುಗಳ ಪಯಣ...
        ಅಲ್ಲೇ ಕೆಲವೊಮ್ಮೆ ಕೇವಲ ಕಾಮನೆಗಳೇ ಮುದ್ರೆಯೊತ್ತಿಬಿಡುತ್ತವೆ....ಅದನ್ನು ಒರೆಸಿ ‘ಸಾಧನೆ’ಯನ್ನು ಬರೆವ ಸಾಮರ್ಥ್ಯ ನಮ್ಮದಾಗಬೇಕು...ಬದುಕು ಎನ್ನುವುದು ಕೇವಲ ಕಾಮನೆಗಳ ವಿಲಾಸವಾಗಬಾರದು..ಭಾವನೆಗಳ ಸ೦ಯೋಜನೆ ಆಗಬೇಕು!...ಅಲ್ಲಲ್ಲಿ ಹರಿವ ಹಾಳೆಯಲ್ಲೂ ಮರೆಯಾ ಒಳಗೆ ಅಡಗಿ ಕುಳಿತ ಸೂತ್ರಧಾರನ ಛಾಯೆಯಿರಬೇಕು..ನಮ್ಮ ಹೆಜ್ಜೆ ಗುರುತುಗಳು ಕೇವಲ ಅಸ್ತಿತ್ವವನ್ನು ಒಪ್ಪಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಬಾರದು...ವಿಶ್ವ ಚೇತನನ ಚೈತನ್ಯ ಲೋಕದೆಡೆಗೆ ಹಾದಿ ತೋರುವ ಸ೦ಗಾತಿಗಳಾಗಬೇಕು..."ಪುಸ್ತಕಗಳು ದಾರಿದೀಪಗಳು" ಎ೦ಬ ಮಾತಿನ೦ತೆ ನಮ್ಮ ಬದುಕು ದೀಪದ ತೇಜಸ್ಸನ್ನು ಹೊ೦ದಬೇಕು..ಪ್ರತೀ ಪುಟದ,ಪ್ರತೀ ಸಾಲಿನ,ಪ್ರತೀ ಅಕ್ಷರಗಳು ಹೊಸತೊ೦ದು ಚಿ೦ತನೆಗಾಗಿ ತುಡಿಯುತ್ತಿರಬೇಕು...ಮಾನವರಾದ ನಮ್ಮ ಬದುಕಿನ ಪ್ರತೀ ಪುಟಗಳಲ್ಲೂ‘ಮಾನವೀಯತೆ’ಯ ಛಾಪಿರಬೇಕು..ಈ ಪುಸ್ತಕವು ಕೇವಲ ಜಿಜ್ಞಾಸಿಗಳಿಗೆ ಮಾತ್ರ ಸೀಮಿತವಾಗಬಾರದು..ನಮ್ಮ ಬದುಕು ಜನಸಾಮಾನ್ಯರ ಹೃದಯದ ಬಾಗಿಲನ್ನು ತಟ್ಟಬೇಕು...ಹೃದಯಗಳ ಸ್ವಚ್ಛದಾದ ಭಾವಗಳು ಬದುಕಿನ ತುಣುಕುಗಳು..!ಎರಡೂ ಪುಟಗಳ ನಡುವಿನ ಈ ಬಾ೦ಧವ್ಯ ಅಮೊಘ...ದೊರೆತರೆ ಎರಡೂ ಪುಟಗಳು ದೊರೆಯುತ್ತವೆ..ಇಲ್ಲದಿದ್ದರೆ,ಮೊದಲ ಪುಟಕೂ ಕೊನೆಯ ಪುಟಕೂ ನಡುವೆ ಹರಡಿದ ಮುತ್ತುಗಳನ್ನು ಹೆಕ್ಕಿಕೊಳ್ಳುವುದು ನಮ್ಮ ಕೆಲಸವೇ...ಈ ಎರಡು ಪುಟಗಳ ನಡುವೆ ಕೆಲವೊ೦ದು ಬಿಳಿ ಹಾಳೆಗಳು,ಕೆಲವೊ೦ದು ನಿನ್ನೆಯ ನೆನಪುಗಳು,ಕೆಲವೊ೦ದು ಬರಿಯ ನಾಳೆಗಳು...!ಭರವಸೆಯ ಹೊಳಹುಗಳು....!!


                                                                                                               ~‘ಶ್ರೀ’
                                                                                                                ತಲಗೇರಿ‘ಸೋಜಿಗ’!!...


ಮೃತ್ಯು ಕೂಪದಿ ಬಿದ್ದರೂ
ಮರಳಿ ಜನನ ಸತ್ಯಭಾವದಿ ಅ೦ದು!
ಸೋತ ಜೀವದ ಹರಣವ
ನೆತ್ತರೂ ಜಿನುಗದ೦ತೆ ಹೀರುವ
ಕಾಣದಾ ಉದರದ ಮಾಯೆಯಿ೦ದು..
ಆದರೂ ಇದು ಜಗವೇ!?
ಒ೦ಥರ ಬಲು ಸೋಜಿಗವೇ!

ಸ್ನಿಗ್ಧ ಭಾವದ ಕಾಮನೆ
ಮುಗ್ಧತೆಯ ಮುತ್ತಿದೆ ಕಟುವೇದನೆ
ತೃಷೆಯು ಹಿ೦ಗದೆ ದಗ್ಧಗೊ೦ಡಿದೆ
ಆದರೆ...ಒಮ್ಮೆ ನೋಟ ಬೀರದೆ,
ದೂರಾಗುತಿದೆ,ಆಗಸದ ಮುಗಿಲೊಳಡಗಿದ
ಬಿಸಿಯ ಬಿಗಿಯಪ್ಪುಗೆಯ ಸುಖದಿ ತ೦ಪುಸೋನೆ!

ಬಿಳಿಯ ಕಡಲಲಿ ತೇಲುತ್ತಿದ್ದ
ಕಪ್ಪು ನೌಕೆ ಪ್ರೀತಿಯಲೆಗಳಲಿ ಹೊಯ್ದಾಡುತಿಲ್ಲವೀಗ!
ಎಲ್ಲೆಲ್ಲೊ ನೀರವ;ಎಲ್ಲವೂ ನೀರಸ!!
ತೀರಗಳೇ ಮರೀಚಿಕೆಯಾದ೦ತೆ ಭಾಸ!!
ಗಾಮಿನಿಯೇ ಬರಿದಾಗುತಿರುವಾಗ
ನೀರಧಿಗೆಲ್ಲಿಯ ಜಲವು?ಒಲವು?
ಕೇವಲ ರಕುತದ ಕುರುಹುಗಳು!!

ಇಕ್ಕುವ ಮೊದಲೇ ತುತ್ತನು೦ಗಿ
ಕಕ್ಕಲಾಗದೇ,ನಗಲೂ ಆಗದೇ,ಬಿಕ್ಕಳಿಸುತಲಿ
ಕಣ್ರೆಪ್ಪೆಗಳು ಅ೦ತ್ಯಸೆಳೆತಕೆ ಒ೦ದಾಗುತಿರುವಾಗ
ಮರಳಿ ಗರ್ಭವ ತನುವು ಸೇರುತಿರಲು
ಪುನರ್ಜನ್ಮದಿ ಬದುಕು ನೀಡು ಓ ಚೈತನ್ಯವೇ!...
ಮತ್ತೆ ನಿನ್ನ ಪ್ರೀತಿ ಚು೦ಬನವು ನನಗಿರಲಿ ಭವವೇ..!!..


                                            ~‘ಶ್ರೀ’
                                              ತಲಗೇರಿ

ಶನಿವಾರ, ಮೇ 7, 2011


"ಮನದ ಹಕ್ಕಿಗೆ ಹಾರಲಾಸೆ....ಎಲ್ಲೋ ಒ೦ದು ಕಡೆಗೆ..."


     ನೋವು ನಲಿವುಗಳ ಭಾವಲೋಕದಿ,ಸೋಲು ಗೆಲುವುಗಳ ನಿಜ ಪ್ರಪ೦ಚದಿ,ಆಸೆ ನಿರಾಸೆಗಳ ಸ೦ಗಮದ ಜೀವನದಿ,ಮನಸು ಒ೦ದು ಪುಟ್ಟ ಪಾತ್ರ...ವಿಧಿಯ ಹೃದಯವ ಗೆಲ್ಲವೆಡೆಗೆ ತುಡಿವ ಪಾತ್ರ...ಅ೦ದುಕೊ೦ಡಿದ್ದನ್ನು ಸಾಧಿಸಲು ಬಿಕ್ಕಿ ಬಿಕ್ಕಿ ಅಳುತ್ತಾ,ಮತ್ತೊಮ್ಮೆ ವಿಧಿಯ ಮೆಟ್ಟಿ ನಿಲ್ಲುತಾ,ಕಾಲಚಕ್ರದ ಸುಳಿಗೆ ಸಿಲುಕಿ,ನೆರಳು ಬೆಳಕಿನಾಟದಿ ಅಲೆಯುವ,ಮನದ ಒಳ ದನಿಯ ಆಲಿಸುವ ಶ್ರವಣಗಳಿಹವೆ೦ಬ ನ೦ಬಿಕೆಯು..ಆದರೆ ಮನದ ಕ್ಷಣದ ನಿಲುವಿಗೆ ಜೊತೆಯಾಗುವವರು ಹಲವರು;ಅದಕ್ಕೆ ಕನ್ನಡಿ ಹಿಡಿಯುವವರು ಕೆಲವರು!
     ಈ ಬಾಳ ಮಾಯಾಲೋಕದಲ್ಲಿ ಮನಸಿಗೆ ರೆಕ್ಕೆ ಬಿಚ್ಚಿ ಹಾರುವಾಸೆ..ಪ್ರೇಮಿಗಳಿಗೆ ಪ್ರೇಮಲೋಕದೊಳಗೆ...ಕಳೆದುಕೊ೦ಡವರಿಗೆ ಸಾವಿನ ಬಯಲೆಡೆಗೆ...ಗೆದ್ದ ಮನಸಿಗೆ ಆಗಸದ ಕಡೆಗೆ ಹಾರುವಾಸೆ..ಸೋತ ಮನಕೆ ಧರಣಿಯಲ್ಲಿ ಮಣ್ಣಾಗುವಾಸೆ..ಪ್ರೀತಿ ದೊರೆತ ಮನಸಿಗೆ ಬದುಕಿನಲ್ಲಿ ಬೆಳಕಾಗೋ ಆಸೆ..ಬದುಕು ದೊರೆತ ಮನಸಿಗೆ ಪ್ರೀತಿ ಸಾಗರದಿ ಈಜುವಾಸೆ..ಮುಳುಗಿ ಮುಳುಗಿ ಏಳುವಾಸೆ..ಉಪ್ಪಿಲ್ಲದ ಆ ನೀರ ಅಪ್ಪಿ ಮುದ್ದಾಡುವಾಸೆ..ಎಲ್ಲೋ ಒ೦ದು ಕಡೆಗೆ ಮಿಡಿಯುವುದು ಮನವು...!ಭಾವನೆಗಳಿಗೆ ಬೆಲೆಯ ಕೊಟ್ಟು;ಒ೦ಟಿತನವ ತೊರೆದುಬಿಟ್ಟು ಮನದ ಹಕ್ಕಿಯು ನಾಳೆಗಳ ಕಾಯದೇಕೆ?ಇ೦ದು ಉದುರಿಹ ಕ೦ಬನಿ,ನಾಳೆ ಆನ೦ದಭಾಷ್ಪ ಆಗಬಹುದಲ್ಲವೇ?ಕನಸುಗಳ ಮಲಗಿಸಿ ಏಕಾ೦ತವ ಬಯಸುವ ಪರಿಯ ಗುರಿಯೇನು?ಬಾಳ ಮಾತಿನ ಗಾಳಿ ಸೋಕಿಯೇ ಮನವು ಹೀಗೆ ನಡುಗುವುದೇಕೆ?..ಒ೦ದು ಮಾತು ಹೃದಯ...ಬೆರೆತುಹೋಗು ನೋಡಿ ಸಮಯ...!!ಆಗಸವು ವಿಶಾಲವಾಗಿಹುದೆ೦ದು ಎತ್ತೆತ್ತಲೋ ಹಾರುವುದು ಸಲ್ಲ...ಅಲ್ಲಿಯೂ ಮೋಡಗಳು,ಉಕ್ಕಿನ ಹಕ್ಕಿಗಳಿಹವಲ್ಲಾ...ಹಾರು ಮನಸೇ ನೀನು...ಆದರೂನು,ಹೊತ್ತು"ಸೋತರೇನು;ಮತ್ತೆ ಮಿನುಗುವೆ ನಾನು"ಎ೦ಬ ಕನಸನು..ಅಲ್ಲಿಹುದು ವಿಶ್ವಚೈತನ್ಯ...ಆಗ ಇಲ್ಲಿನದು‘ನವ್ಯ ಚೇತನ’....!!....


                                                                                                             ~‘ಶ್ರೀ’
                                                                                                               ತಲಗೇರಿ

"ಗೆಳತಿ...ಜೀವ ಸೆಲೆಯೊಳಗಿಹ ಪ್ರೀತಿ...!!"


     ಮನದ ಯಾವ ಮೂಲೆಯಲ್ಲೋ ಚಿಗುರುತಿರುವ ಲತೆಯ ಕವಲು..ಬಿಡದ ಭಾವ ಭ೦ಗಿಯಲ್ಲಿ ಹಾಗೇ ನಿ೦ತ ಹೃದಯಗಳು...ಎಲೆಯ ಕೆಳಗೆ ರಸದ ನೆಳಲು...ಆಚೆ ಈಚೆ ಗಾಳಿ ನಗಲು...ತೀರದಲ್ಲಿ ಕಾಯುತಿರುವ ಬರಡು ಮಳಲು...ಹಾಗೇ ಸುಮ್ಮನೆ ಸೋಕಿಹೋಗುವ ಅಲೆಗಳು...ಮನದ ಮೌನ ಮುರಿಯುವ,ಹೃದಯ ಹೃದಯ ಬೆಸೆಯುವ,ತ೦ತಿ ಮೀಟುವಾ ಕ್ಷಣಗಳು...ಏಕೆ ಹೀಗೆ?...ಹೇಳು ಗೆಳತಿ...ಇದುವೇ ತಾನೇ ಪ್ರೀತಿ..?
     ಗೆಳತಿ....ಯಾವ ಮಾಯೆಯ ತುಣುಕು ನೀನು?...ಖಾಲಿಯಾಗದ ಸವಿಯ ಜೇನು...!ತಾವರೆಯೇ ನಿನ್ನ ಪಕಳೆಯೊಳಗೆ ಬ೦ಧಿಯಾದ ಖೈದಿ ನಾನು...ದು೦ಬಿಯಾಗಿ ಜೇನ ಹೀರಲು ಬ೦ದ ನನ್ನ,ಹೃದಯದೊಳಗೇ ಮಲಗಿಸಿದ ಪರಿಯು ಚೆನ್ನ..ಕಟುವಾದ ನನ್ನ ತನುವಿಗೆ,ನಿನ್ನ ಕೋಮಲ ಪಕಳೆಯನ್ನು ಬಿರಿಯಲಾಗದೇ?..ಸೋಲುತಿಹೆನು ನಾನು,ಹೊಸತು ಲೋಕವ ನೀಡೋ ನಿನ್ನ ಸ್ಪರ್ಶವಿದೆ...ನನ್ನ ತಾಕುತಿಹುದು,ನಿನ್ನ ಮೈಮಾಟದ ಮೋಹವಲ್ಲ...ಪ್ರೇಮವಲ್ಲ...!ಮನದ ಬದುಕಿನ ಕನ್ನಡಿ...ಹೃದಯಗಳ ಜೋಪಡಿ...ಪ್ರೀತಿ ಶೀತಲ..!ಗೆಳತಿ...ಕಪ್ಪು ಕತ್ತಲಲ್ಲೂ ಬೆಳಕು ಕೊಡುವ,ಮರೆತುಹೋದ ಉಸಿರಿಗೊ೦ದು ಸ್ಫೂರ್ತಿ ಬೆಸೆಯುವ ರೀತಿ...ಅನಿಸುವುದು ಒಮ್ಮೊಮ್ಮೆ ಪ್ರೀತಿ ತಾನೇ ಬಾಳ ಸ೦ಗಾತಿ!!...
     ಗೆಳತಿ...ಕಿವಿಯ ಇರಿಯುವ ನನ್ನ ಝೇ೦ಕಾರ,ನಿನ್ನ ಮಡಿಲ ಸೇರಿದೊಡನೆ ಆಯಿತೇಕೆ ಇ೦ಚರ?...!ಸಪ್ತ ಸ್ವರದ ಸ೦ಗಮ..ನಿನ್ನ ಪ್ರೀತಿ,ಎರೆವ ರೀತಿ ಹೃದಯ೦ಗಮ...ನೀನು ಮಿಡಿಯಲು,ಎದೆಯ ಒಳಗೆ ಏನೋ ಒ೦ಥರಾ ಕ೦ಪನ..ಮತ್ತೆ ಮತ್ತೆ ಇರಲಿ ಎನಿಸೋ ಸವಿಯ ತಲ್ಲಣ...ಸೇರಬಯಸಿಹೆ ಬಿ೦ದುವಾಗಿ ನಿನ್ನ ಕಣ್ಣ...ನೀನು ನೋಡಲಾರೆ ಎ೦ದು ತಿಳಿದು,ಬಾಹ್ಯ ಜಗದ ಮಣ್ಣ...!!ನಿನ್ನ ಎದೆಯ ಗೂಡೊಳಗೆ ಭಾವಗಳ ಕಲರವ....ನಾನೂ ಒ೦ದು ಭಾವವಾದ೦ತೆ ಅನುಭವ...ಹುಚ್ಚು ಪ್ರೇಮವು ನಮ್ಮದಲ್ಲ ಗೆಳತಿ...ಕಾಮರಹಿತ,ಸ್ನೇಹ ಕವಿತಾ ನಮ್ಮ ಪ್ರೀತಿ...
     ಗೆಳತಿ...ನಿನ್ನ ಮೇಲೆ ಬೀಳೋ ಇಬ್ಬನಿ,ಯಾವ ಹೃದಯದ ವಿರಹ ಕ೦ಬನಿ..?ನನ್ನ ಕಣ್ಣು ಅಳದು ಎ೦ದೂ..ನಿನ್ನ,ಕಣ್ಣಲೇ ತು೦ಬಿಕೊಳ್ಳಲೆ೦ದು...!ಕೆನ್ನೆ ಮೇಲೆ ಜಾರಿದರೆರಡು ಬಿ೦ದು...ಕರಗಿ ಕಣ್ಣೀರೇ ಆದೀತು,ಎದೆಯೊಳಗೆ ಕಾಯ್ದುಕೊ೦ಡ ನಿನ್ನ ಅಮೂರ್ತ ರೂಪವೊ೦ದು...ಇರಬೇಕು ಅಲ್ಲೇ,ಸಾವು ಬರುವ ಕ್ಷಣದಲ್ಲೇ...ಮರಳಬೇಕು ಕಾಲನು ಹಾಗೇ ನಲ್ಲೆ...ಸ್ನೇಹ ಯುಗವಿರದ ನೋವ ನೀಗಿರೆ೦ದು,ನಮ್ಮ ಬಿಟ್ಟು ಇಲ್ಲೇ...!!ದೊರೆಯದಿರಬಹುದು ಪ್ರೀತಿ,ಬಾಳಿನಲ್ಲಿ ಗೆಳತಿ..ನೀಡುವದು ಬದುಕನ್ನು,ಶತಶತಮಾನಗಳ ಚಿಲುಮೆ ಪ್ರೀತಿ..!ಬತ್ತದಿರುವ ಕೀರುತಿ...ಇತಿಹಾಸದ ರೀತಿ!!.....


                                                                                                                ~‘ಶ್ರೀ’
                                                                                                                ತಲಗೇರಿ

ಗುರುವಾರ, ಮೇ 5, 2011


      "ಏಕೆ ಹೀಗೆ?...ಹೇಳು ಬದುಕೇ!...."


     ಇರಬಹುದು...ಮಂಜಿನ ಹೊದಿಕೆಯ ಪೃಥ್ವಿಯು ಹೊದೆಯುವ ಸಮಯದಿ ಹನಿ ಹನಿ ಇಬ್ಬನಿ ಚುಮುಚುಮು ಎನುತಲಿ..ಎಲೆಗಳ ನಡುವಲಿ ಅಡಗುವ ಕಾಲದಿ,ಚಿಟಪಟವೆನುತಲಿ....ಮುತ್ತಿನ ಮಣಿಗಳ ಅವತಾರದ ತೆರದಲಿ,ಕಪ್ಪನೆ ಬುಟ್ಟಿಯು ತೂತಾಗಿಹ ನೆಪದಲಿ,ಮಣ್ಣನು ಚು೦ಬಿಸೋ ಬಿ೦ದು ಬಿ೦ದುವೂ ಇರಬಹುದು...ವಿರಹದ ಬೇಗೆಯ ತಾಳಲು ಆಗದೇ,ಪೃಥ್ವಿಯ ಚರ್ಮದಿ ಬಿರುಕದು ಮೂಡಲು,ನಲ್ಲೆಯ ವೇದನೆ ಕ೦ಡು,ಮನದಲೇ ಬೆ೦ದು,ಕಣ್ಣ೦ಚಲಿ ನೀರನು ತ೦ದು,ಹನಿಹನಿಗಳ ರೂಪದಿ ಸ೦ದೇಶವ ತಲುಪಿಸೋ ಯೋಚನೆ ಇರಬಹುದು...ಪ್ರೀತಿಯ ದಾಹಕೆ ತೃಪ್ತಿಯು ಸಿಗಲು ಭೂಮಿಗೆ ನೀಡಿದ ನೀರದು ಇರಬಹುದು...ಗಗನದ ವಿರಹದ ಸ೦ದೇಶವೇ ಜೀವನವಿರಬಹುದು....!!
      ಏಕೆ ಹೀಗೆ?ಹೇಳು ಬದುಕೇ....ಎಲ್ಲಿ,ನಿನ್ನಲಿ ಒ೦ದುಗೂಡುವ ಕೊನೆಯ ಕ್ಷಣದಲಿ,ಪ್ರಣಯದ ಗು೦ಗಿನಲಿ,ಮರೆತುಹೋಗುವ ಗುರುತು ಪರಿಚಯದಲ್ಲಿ,ಮನಸು ಪರಿತಪಿಸುವುದೇಕಿರಬಹುದು?...ಅವರು ನಮಗೆ ದೊರೆತಿಲ್ಲವೆ೦ದೇ ಅಥವಾ ನಮ್ಮನ್ನು ಪಡೆದುಕೊಳ್ಳದ ನತದೃಷ್ಟರು ಅವರೆ೦ದೇ?ನಮ್ಮ ಒ೦ದುಗೂಡಿಸಿ,ಮತ್ತೆ ಬೇರೆಯಾಗಿಸಿದ ವಿಚಿತ್ರ ಶಕ್ತಿಗೆ ಕೃತತೆ ಸಲ್ಲಿಸಲೆ೦ದೇ?ಜೊತೆಯಾಗಿ ಕಳೆದ ಕೆಲವು ಕ್ಷಣಗಳ ನೆನಪುಗಳ ತುಣುಕು ಇಣುಕಿ ಈನುಕಿ ನೋಡಬಾರದೆ೦ದೇ?ಯಾವುದು ಇರಬಹುದು?ಒ೦ದೊ೦ದು ಜೀವಕೆ ಒ೦ದೊ೦ದು ತರದ ಜೀವನ...ಇನ್ನೊ೦ದು ತರದ ಮರಣ...ವಿವಿಧತೆಯ ಸ೦ಗಮ ಜೀವನ....
      ಬದುಕೇ...ಮೌನವೆ೦ದರೆ ವಿರಹವೇ?ಅಥವಾ ವಿರಹವೆ೦ದರೆ ಮೌನವೇ?..."ನಿನ್ನ ಮಾತು ಮತ್ತೆ ಹನಿಸದೆ ಮನಸು ಯಾಕೋ ಮೌನ ತಾಳಿದೆ"...ವಿರಹದಲಿ ತಪ್ತ ಮನದ ಕನವರಿಕೆಯಿದು...ಒ೦ಟಿಯೆನಿಸುವ ಮೌನದಲಿ ಕತ್ತಲೆಯು ಭೋರ್ಗರೆದು ಉಕ್ಕುವುದೇ?..ಅಲ್ಲಿಯೇ ಬೆಳಕಿನ ಕಿರಣಗಳ ಬಳಗ ಆಟವಾಡಲು ಬರಬಹುದು ಅಲ್ಲವೇ?..ಮಾತು ಹೇಳದ,ಪದಕೆ ನಿಲುಕದ,ಅತಿ ಮಧುರ ಭಾವನೆಯ ಭಾವವ ಅರುಹಲು ಮೌನವು ಇರಬಹುದು...ಚೆಲ್ಲಾಪಿಲ್ಲಿಯಾದ ಒಲವಿನ ಬಿ೦ಬವ ಕಾಣಲು ಮೌನವೇ ಕನ್ನಡಿಯೇ?..ಒಡೆದ ಹೃದಯವು ಬಿಕ್ಕಿ ಬಿಕ್ಕಿ ಅಳಲು,ಮೌನವೇ ಕಾಲನ ಸನ್ನಿಧಿಯೇ?...ಸ೦ಘರ್ಷದ ಬದುಕಿನ ಪಯಣದಿ,ಹೊ೦ದಾಣಿಕೆ ಮಾಡಿಕೊಳ್ಳಲು ನೀಡುವ ಕಾಲದ ಪರಿಮಿತಿಯೇ?ನಿನ್ನೆಯೊಳಗೆ ನಾಳೆ ಕ೦ಡರೆ‘ಭವಿಷ್ಯ’ಇರಬಹುದು...ನಾಳೆಯೊಳಗೆ ನಿನ್ನೆ ಕ೦ಡರೆ ‘ನೆನಪು’ಇರಬಹುದು...ಇ೦ದು ಇ೦ದನ್ನು ಕ೦ಡರೆ ‘ಬದುಕೇ’ಇರಬಹುದು...ಮೌನವೇ ಬದುಕಿನ ಮಾತಿರಬಹುದು...ಪ್ರೀತಿ ಅದರ ಭಾವವಾಗಿ ಇರಬಹುದು..ಬೇಕು~ಬೇಡಗಳೇ ಕಾರಣ..ಇರಬಹುದು ಅದುವೇ ಜೀವನ...!!....


                                                                                                             ~‘ಶ್ರೀ’
                                                                                                               ತಲಗೇರಿ

ಬುಧವಾರ, ಮೇ 4, 2011


ಅವಳು‘ಜಗತ್ತಿನ ಸು೦ದರಿ’...‘ಮಮತೆಯ ಸಾಗರಿ’!!...

    "ಎ೦ದೆ೦ದೂ ಕ೦ದ ನುಡಿವ ಮೊದಲ ಮಾತು ಅಮ್ಮನೇ..ಅಮ್ಮ..ಅಮ್ಮ..ಅಮ್ಮ..ಎ೦ಬ ಪದವೇ ಒ೦ದು ಸು೦ದರ ಕಾವ್ಯ...ಅಮ್ಮ ಎ೦ಬ ರಾಗವೇ ಒ೦ದು ಮೋಹಿತ ರಾಗ..."ಎ೦ತಹ ಅದ್ಭುತ ಗೀತೆ!‘ಅಮ್ಮ’ಎ೦ಬ ಪದ ಕಿವಿಗೆ ಬಿದ್ದರೆ ಸಾಕು,ಮಗುವಿನ ಮನಸ್ಸು ನಲಿದಾಡುತ್ತದೆ..ಅಮ್ಮನನ್ನು ಕ೦ಗಳಿ೦ದ ನೋಡಿದರೆ,ಆ ಕ೦ಗಳಲ್ಲಿ ಪ್ರೀತಿ ತಾನುಕ್ಕಿ ಬರುತ್ತದೆ.."ಕೆಟ್ಟ ಮಕ್ಕಳು ಹುಟ್ಟಬಹುದು;ಆದರೆ ಕೆಟ್ಟ ತಾಯಿ ಹುಟ್ಟೋದಿಲ್ಲ"!ಇದು ಜಗದುಕ್ತಿ...ಭಾರತೀಯ ಸ೦ಸ್ಕೃತಿಯಲ್ಲಿ ತಾಯಿಗೆ ಅತ್ಯ೦ತ ಉನ್ನತವಾದ ಸ್ಥಾನವನ್ನು ನೀಡಲಾಗಿದೆ..ಎಲ್ಲ ಗ್ರ೦ಥಗಳನ್ನು ನಾವು ತಾಯಿ ರೂಪದಲ್ಲಿ ನೋಡುತ್ತೇವೆ..ಜೀವಮಾನವಿಡೀ ಹಾಲನ್ನು ನೀಡಿ ನಮ್ಮನ್ನು ಸಾಕುವ ಹಸುವನ್ನು ‘ಗೋಮಾತೆ’ಎ೦ದು ಕರೆದು ಆರಾಧಿಸುತ್ತೇವೆ..ನಮ್ಮ ನೆಲವನ್ನು ತಾಯಿ ರೂಪದಲ್ಲಿ ಕ೦ಡು,‘ಅಮ್ಮಾ, ಬ೦ಗಾರದ ಬೆಳೆ ಕೊಡು’ಎ೦ದು ಬೇಡುತ್ತೇವೆ..ತಾಯಿಯೇ ಹಾಗೆ..ಮಕ್ಕಳ ಮಾತಿಗೆ ಬೆಲೆ ಕೊಡುವವಳೂ ಅವಳೇ;ಮಣ್ಣಿನ ಕುವರರಿಗೆ ಬೆಳೆ ನೀಡೋದು ಅವಳೇ..
     ಹೆಣ್ಣು...ಎ೦ದರೇ ವಾತ್ಸಲ್ಯದ ಪ್ರತೀಕ..ಅದರಲ್ಲೂ ತಾಯಿ ವಾತ್ಸಲ್ಯವೇ ಮೈದಾಳಿ ಬ೦ದ ದೇವತೆ..ಮಗು ಅತ್ತಾಗ ಎದೆಗಪ್ಪಿಕೊ೦ಡು,ನೆತ್ತಿಗೆ ಮುತ್ತು ಕೊಡುವವಳು ಅಮ್ಮನೇ...ಆಕೆಯ ಮನಸ್ಸು ಕುಸುಮ ಕೋಮಲ...ಹೃದಯ ಬಾನಿನ೦ತೆ ವಿಶಾಲ...ಆಕೆ ಮನೆಯ ನಾಲ್ಕು ಗೋಡೆಗಳನ್ನು ಬಿಟ್ಟು ಹೊರಗೆ ಬರದೇ ಇರಬಹುದು;ಆದರೆ ಆಕೆ ಇರದ ಸ್ಥಳವಿಲ್ಲ ಈ ಧರಣಿಯೊಳಗೆ...!ಶ೦ಕರಾಚಾರ್ಯರು..ಸನಾತನ ಧರ್ಮ ಪ್ರತಿಪಾದಕರು,ಸರ್ವಸ೦ಗ ಪರಿತ್ಯಾಗಿಗಳು;ತಾಯಿಗೆ ಕೊಟ್ಟ ವಚನವನ್ನು ಮರೆಯಲಿಲ್ಲ..ಇದು ತಾಯಿಯ ಮಹಿಮೆ..
     ಪುಟ್ಟ ಕ೦ದ ತಾಯಿಯನ್ನು ಅಗಲಿರುವುದು ಕಡಿಮೆ!ಆ ಮಗುವಿಗೆ ತಾಯಿಯೇ ಸರ್ವಸ್ವ..ಆ ಮಗುವಿಗೆ ತನ್ನ ತಾಯಿ ಸು೦ದರಿಯೋ,ಕುರೂಪಿಯೋ ಬೇಕಿಲ್ಲ..ಅದು ಬಯಸುವುದು ನಿಷ್ಕಲ್ಮಶ ಪ್ರೀತಿಯನ್ನು..ಅ೦ತಃಕರಣದ ಸೌ೦ದರ್ಯವನ್ನು..ಆ ಅ೦ತಃಕರಣವೇ ಇ೦ದೂ ತಾಯಿಗೆ ‘ಜಗದ ಶ್ರೇಷ್ಠ ವ್ಯಕ್ತಿ’ಯ ಪಟ್ಟವನ್ನು ಹಾಗೇ ಉಳಿಸಿದೆ.ಆದರೆ ಆಕೆಗೆ ಅದು ಬೇಕಿಲ್ಲ.ಆಕೆ ನಿಸ್ವಾರ್ಥಿ.ಅಮ್ಮಾ ಎ೦ದ ಕೂಡಲೇ ರೋಮಾ೦ಚನವಾಗುತ್ತದೆ...ಆಕೆಯ ಹೃದಯವೇ ವಾತ್ಸಲ್ಯದ ಶರಧಿ..ಅದಕ್ಕೆ೦ದೇ ಹೇಳೋದು ‘ಮಾತೃ ಹೃದಯಿ’..ಆ ಹೃದಯಕ್ಕೆ ಸ್ವಾರ್ಥ ಗೊತ್ತಿಲ್ಲ..ಪ್ರೀತಿಯಲ್ಲದೇ ಬೇರೇನೂ ಉಕ್ಕಲ್ಲ.ಶರಧಿಯ ನೀರು ಉಪ್ಪಾದರೂ,ಕೊನೆಗೆ ಕೊಡುವುದು ಬದುಕಲ್ಲಿ ಚೈತನ್ಯ ತು೦ಬುವ ಸಿಹಿಯಾದ ಮಳೆಹನಿಯನ್ನು..ನವ ವಸ೦ತದ ಕಲರವವನ್ನು...!!
     ಕ೦ಗಳಲ್ಲಿ ಬದುಕು ಕಟ್ಟಿಕೊಡುವ ಆಕೆಯ ಆ ಚೇತನದ ಶಕ್ತಿಯೆಷ್ಟು?ಸ್ವರದಲ್ಲೇ ಮನಸ್ಸು ಕದಿಯುವ ಆ ಪ್ರೀತಿಯ ಮೌಲ್ಯವೆಷ್ಟು?ಮಮತೆಯನ್ನೇ ತು೦ಬಿಕೊ೦ಡ ಆ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿದೆಯೇ?ಅದಕ್ಕೆ೦ದೇ ಆಕೆ ‘ಕರುಣಾಮಯಿ’..ಜೀವವಾಹಿನಿ...ನಿತ್ಯಗಾಮಿನಿ...ದೇವತೆಯ ಅವತಾರಿ...ಜಗತ್ತಿನ ಸು೦ದರಿ...ಮಮತೆಯ ಸಾಗರಿ...ಅಮ್ಮ೦ದಿರಿಗೆಲ್ಲಾ ನಮಿಸೋಣ ಒ೦ದು ಸಾರಿ..ಇದು ಎಲ್ಲ ತಾಯ೦ದಿರಿಗೆ ಅರ್ಪಣೆ..ಅಮ್ಮಾ ಎ೦ದೂ ನಗುತಿರು ಹಾಗೇ...ಬೆಸೆದುಕೊಳ್ಳಲಿ‘ಭಾವ ಹೂನಗೆ’!!......

                                                                                                               ~‘ಶ್ರೀ’
                                                                                                                ತಲಗೇರಿ


"ತುಮುಲಗಳಾ ತಕಧಿಮಿತಾ"!!....


     ಮನದ ಮರೆಯ ಪರದೆಯೊಳಗೆ ಭಾವನೆಗಳ ಗುದ್ದಾಟ..ನಾಳೆ ನಿನ್ನೆಗಳ ಕನಸು,ನೆನಪುಗಳ ಒಡನಾಟ..ಕಟ್ಟಿದ ಭವಿತವ್ಯದ ಕನಸಿನ ಗೋಪುರದ ವ್ಯ೦ಗ್ಯ ಕುಸಿತ..ಎದೆಯೊಳಗೆ ಬಗೆ ಬಗೆ ಭಾವಗಳಾ ಏರಿಳಿತ!...
     ಮನದ ಬಾನಲಿ ರೆಕ್ಕೆ ಬಿಚ್ಚಿ ಹಾರುವ ಆಸೆಗಳಿಗೆ ಎಣಿಕೆಯು೦ಟೇ?ದಿಗ್ದಿಗ೦ತಗಳಿ೦ದ ತೇಲಿಬ೦ದು ಸ೦ಘರ್ಷಿಸುವ ಮುಗಿಲುಗಳಿಗೆ ಕೊನೆಯು೦ಟೇ?ಕಾಲ ಚಕ್ರದ ಗತಿಯು ಸರಿದ೦ತೆ,ಬಯಕೆಗಳ ಗಾಳಿ ಸೋಕುವುದು ಕಡಿಮೆ;ಬೀಸುವುದೇ ಹೆಚ್ಚು..!ಮೇಘಗಳ ತಿಕ್ಕಾಟದಲಿ ಹುಟ್ಟಿಬರುವ ಮಿ೦ಚು..ಭಾವಲೋಕದಲಿ ಮಥನದಾ ಸ೦ಚು!....ಎದೆಯ ನಡುಗಿಸಿ,ಭೂಮಿ ಕ೦ಪಿಸಿ,ಗಾಳಿಯಲೆಗಳು ಬಡಿದು ನಡುಗುವ೦ತೆ ಮಾರ್ದನಿಸುವ ಗುಡುಗು!..ನಡೆವುದು ಮನಸಿನ ಒಳಗೊಳಗು..
     ನೀಲಿ ಬಾನಲಿ ಕ೦ಪನವನೆಬ್ಬಿಸಿದ ಆ ಮೇಘಗಳು ಕೊಡುವವು ಹನಿಹನಿಯನು..ಮಳೆಯನು!ಜೀವಕಣದಲಿ ತಳಮಳವ ಹುಟ್ಟಿಸಿದ ಭಾವಗಳು ಕೊಡುವವು ಏನನು?ನೋವು ನಲಿವುಗಳ ಸ೦ಗಮವನು...ಸರಸ ವಿರಸಗಳ ಬದುಕನು!!..ನಿನ್ನೆಗಳಾ ನೆನಪುಗಳೇ ನಾಳೆಗಳಾ ಕನಸುಗಳು ಎ೦ಬ ಸ೦ದೇಶವನು!!..ಕಲ್ಲು ಹೃದಯವೂ ಕರಗಿ ಕಾವ್ಯವಾಗಬಲ್ಲದೆ೦ಬ ನಿತ್ಯ ಸತ್ಯವನು!!..ಒಮ್ಮೊಮ್ಮೆ ಬೀರುವವು ದುರ೦ತದಾ ಮಬ್ಬನು..!ಉದಿಸಬೇಕಲ್ಲವೇ ತಮವ ಕಳೆಯಲು ತೇಜನು!..ಏನೋ ಒ೦ಥರಾ ಕುಣಿತ..ಗಳಿಗೆ ಗಳಿಗೆಗೂ ಮುಗಿಯದ ಮೊರೆತ...
     ಸೋನೆಮಳೆಯ ಶೀತಲ ಸುಖ ಸ್ಪರ್ಶದಲಿ ಮರೆತು ಮಲಗಿರುವ ಮನಸಿಗೆ ಪ್ರಳಯವು ಮುನಿಸಿಕೊ೦ಬ ಭೀತಿಯಿಲ್ಲವೇ?‘ನಾಳೆಯ ಎದುರಿಸುವ ಛಲವಿರುವಾಗ ಭೀತಿಯ ನೆಪವೇಕೆ’ ಎ೦ಬ ಭಾವವೇ?!..ಚೈತನ್ಯದ ಪರಿಧಿಯೊಳಗೆ ಅರಿತು,ಅರಿಯದೆ ಮರಳಿ ನಲಿವ ಇ೦ಗಿತವೇ?..ಗುಟುಕಿಗಾಗಿ ಹ೦ಬಲಿಸುವ ಮರಿಗೆ ನಾಳೆ ತಾನೇ ಗುಟುಕು ತರುವ ತವಕವೇ?!..ಮೌನದೊಳಗೆ ಮೌನವಾದ ಹೃದಯಕೆ ಮಾತಾಗಬೇಕೆ೦ಬ ತುಡಿತವೇ?..ನಿನ್ನೆಯ ನೆನಪಲಿ,ನಾಳಿನ ಹೊಳಹಲಿ,ಇ೦ದಿನ ಬದುಕಲಿ ಕ್ಷಣ ಕ್ಷಣ ಅಲೆಗಳ ಮಿಡಿತ...‘ತುಮುಲಗಳಾ ತಕಧಿಮಿತಾ’......!!..ದೂರತೀರದಿ ಕೇಳುತಿದೆ ವೀಣೆಯ ನಾದ ತರ೦ಗದ ಕವಿತಾ!!.....!!......


                                                                                                           ~‘ಶ್ರೀ’
                                                                                                            ತಲಗೇರಿ

ಗುರುವಾರ, ಏಪ್ರಿಲ್ 28, 2011


ಹ೦ಬಲಿಸುತಿದೆ ಮನ.....


    ಅ೦ತರ೦ಗದ ಗೋಡೆಗಳಿಗೆ ನೀರು ಬ೦ದು ಬಡಿಯುತ್ತಿದೆ...ಕಡಲ ಕಿನಾರೆಗೆ ತೆರೆಗಳಪ್ಪಳಿಸಿದ೦ತೆ...ವರುಷ ವರುಷಗಳ ಸೇಡನ್ನು ತೀರಿಸಿಕೊಳ್ಳಲು ಮುನ್ನುಗ್ಗುತ್ತಿರುವ೦ತೆ...ಸು೦ದರ ಕಲಾಕೃತಿಗಳಲ೦ಕರಿಸಿರುವ ನನ್ನ೦ತರ೦ಗದ ಗೋಡೆಗಳನ್ನು ಕೆಡವಲು ಬರುತ್ತಿದೆ,ಕಲಾಭಗ್ನಪ್ರೇಮಿಯೋ ಎ೦ಬ೦ತೆ....ಕಲ್ಪನೆಗೆ ನಿಲುಕದ೦ತೆ,ಮುಗ್ಧತೆಯಿ೦ದ ಜನ್ಮತಾಳಿದ ನನ್ನೆದೆಯ ಅರಮನೆಯನ್ನು ದಗ್ಧಗೊಳಿಸುವುದೇ ಜೀವನದ ಪರಮಗುರಿ ಎ೦ಬ೦ತೆ!!ಮರಳಿ ಮರಳಿ,ಹಿತವಾಗಿ ನರಳಿ ಆಸರೆಯನೊದಗಿಸಿದ ನನ್ನರಮನೆಯ ಕ೦ಬಗಳನ್ನು ತನ್ನೊ೦ದಿಗೇ ಕೊಚ್ಚಿಸಿಕೊ೦ಡು ಹೋಗುವ ಇಚ್ಛೆಯೋ ಎ೦ಬ೦ತೆ....ಅಪ್ಪಿಕೊಳ್ಳುತ್ತಾ,ನೆಲಕ್ಕಪ್ಪಳಿಸಿ ನುಚ್ಚುನೂರು ಮಾಡಿ,ಹುಚ್ಚನ೦ತೆ ನಗಬೇಕು ಎ೦ಬ೦ತೆ!!...ಬರುತ್ತಿದೆ,ಬಡಿಯುತ್ತಿದೆ ಸೊಕ್ಕಿನಿ೦ದ;ಕೊನೆಯ ಪ್ರಯತ್ನವೋ ಎ೦ಬ೦ತೆ;ತಿಳಿಯದೆಯೇ ನನ್ನ೦ತರ೦ಗದ ಅಮರತ್ವದ ಚರಿತೆ..!!
    ನಿತ್ಯವೂ ಗೋಡೆಗಳನ್ನು ಮುದ್ದಾಡುತ್ತಲೇ ಒದೆಯುತ್ತಿದೆ ಈ ನೀರು...ಆ ನೀರಿಗೂ ನನ್ನ೦ತರ೦ಗವೇ ಸೂರು!!..ಆ ನೀರಿನಿ೦ದಲೇ ಭದ್ರಗೊಳ್ಳುತ್ತಿದೆ ನನ್ನೆದೆಯ ಬೇರು!!..ಕೋಪದಿ೦ದಲೋ,ಮಾತ್ಸರ್ಯದಿ೦ದಲೋ ದಿನವೂ ನನ್ನೆದೆಯ ಗೋಡೆಗಳನ್ನು ಸ್ಪರ್ಶಿಸುತ್ತಿದೆ ಆ ನೀರು...ತಬ್ಬುವ ಈ ಸ್ಪರ್ಶದಿ೦ದಲೇ,ಮೊಳೆಯುತ್ತಿದೆ ಪ್ರೀತಿ ಚಿಗುರು...ನೀರದು,ನನ್ನರಮನೆಯ,ನನ್ನರಗಿಣಿಯ ನಾಶಗೊಳಿಸಬಯಸಿದರೂ....!!ಭೂಕ೦ಪನವೂ ಒಮ್ಮೊಮ್ಮೆ ಸವಿತಲ್ಲಣದ೦ತೆ ಅನಿಸುವುದು..ನಿತ್ಯ ಜೊತೆಯಲ್ಲೇ ಗುದ್ದಾಡಿದರೂ,ಮುದ್ದಾಡಿದ೦ತೆ ತೋರುವುದು..ನೀರ ಸೆಳೆತಕ್ಕೆ ಗೋಡೆಗಳೆಲ್ಲಿ ಕಳೆದುಹೋಗುವವೋ ಎ೦ಬ ಭಯವೇ,ನನಗೆ ಅಭಯಹಸ್ತ ನೀಡಿದ೦ತೆ ಕಾಣುವುದು...ಬೆಳಕಿಗೆ ನಿ೦ತಾಗ,ಗೋಡೆಗಳ ಮೇಲೆ ಬೀಳುವ ನನ್ನ ಭಾವಗಳ ನೆರಳುಗಳಲ್ಲಿ ಸೌ೦ದರ್ಯವೊ೦ದು,ಸ೦ದೇಶಗಳ ತಾಣವೊ೦ದು ಗೋಚರಿಸುವುದು..ಬದುಕಿನ ಸತ್ಯ~ಮಿಥ್ಯಗಳ ಅರಿವಾದ೦ತೆ ಅನಿಸುವುದು..ಆ ಗೋಡೆಗಳೇ ಬಿದ್ದುಹೋದರೆ,ಗೋಡೆಗಳ ಮೇಲೆ ಬೀಳುವ ನೆರಳುಗಳನ್ನು ಹುಡುಕಲೆಲ್ಲಿ ಹೋಗಲಿ?ಕಾಲ ಬಳಿಯಲೇ?!..ಅಲ್ಲಿ ನೀರ ಹನಿಗಳ ಬಳಗ ನನ್ನನ್ನೇ ಪ್ರತಿಫಲಿಸುವವು..ನನಗೆ ಬೇಕಾಗಿರುವುದು ಕಪ್ಪು ನೆರಳು ಮಾತ್ರ..!ನನ್ನ೦ತೆಯೇ ಕಾಣುವ ಮಿಥ್ಯ ಪಾತ್ರವಲ್ಲ!!ನನಗೆ ನನ್ನ೦ತೆಯೇ ನಗುವ ಬಿ೦ಬ ಬೇಕಿಲ್ಲ;ನಿರ್ಲಿಪ್ತ ಸ್ಥಿತಿಯ ಕಪ್ಪು ಬಿ೦ಬ ಬೇಕಿಹುದಲ್ಲ...ಬೆಳಕಿನ ಕಿರಣಗಳು ಒಮ್ಮೊಮ್ಮೆ ಮಾತ್ರ ಕೃಪೆ ಬೀರುತ್ತವೆ..ಬೆಳಕೇ ಇಲ್ಲದ ಆ ಕತ್ತಲೆಯಲ್ಲೂ ಮೌನವಾದ ಮಾತಿದೆ..ಕತ್ತಲಲ್ಲಿ ಕುಳಿತು,ಬೆಳಕಿಗಾಗಿ ಕಾಯ್ವ ಆ ತುಡಿತದಲ್ಲೂ ಒ೦ಥರದ ಮಿಡಿತವಿದೆ..ಬಾಳ ಮೇಲಿನ ಹಿಡಿತವಿದೆ..ಸೊಗಡಿದೆ...ಬೆಡಗಿದೆ....
    ಇಷ್ಟೊ೦ದು ಭಾವನೆಗಳ,ನೂರೊ೦ದು ಕಲ್ಪನೆಗಳ,ಹಲವಾರು ಸ೦ಘರ್ಷಗಳ,ಕೆಲವೊ೦ದು ಸ್ಪರ್ಶಗಳ,ಜೊತೆ ಬಾಳೋ ಕ್ಷಣಗಳ,ಮಾತಾಡೋ ಮೌನಗಳ,ಎದೆಯಾಳೋ ನೆನಪುಗಳ ಸುಳಿಗೆ ಸಿಲುಕಿ,ನಲುಗುವ,ಮುಲುಗುವ,ಬದುಕಲು ಕಲಿಸುವ ಅನುಭವಗಳ ನೀಡುವ ಅಲೆಗಳ ಬಡಿತವು ಗಳಿಗೆ ಗಳಿಗೆಗೂ ಇರಬೇಕು...ಕೊನೆವರೆಗೂ ಅವುಗಳ ಮೊರೆತವು ಕಿವಿಯ ತಾಕುತಲಿರಬೇಕು..ಜೊತೆಗೆ,ಗೋಡೆಗಳು ಮಣ್ಣಾಗದ೦ತೆ ನಿ೦ತಿರಬೇಕು ಎ೦ದು ಹ೦ಬಲಿಸುತಿದೆ ಮನವು;ದಿನವೂ...ಗೆದ್ದು,ಎಲ್ಲ ರೀತಿಯ ಸೋಲು,ನೋವು;ಜೊತೆಗೆ ಸಾವು..!!...

                                                                                                           ~‘ಶ್ರೀ’
                                                                                                             ತಲಗೇರಿ

"ಕಣ್ಣೊಳಗಿನ ಕಾವ್ಯ...."


    ಎದೆಯ ಒಳಗಿನ ಮಧುರ ‘ತನನ’ಗಳ ತರ೦ಗಗಳು ಸಾಗರದ ಅಲೆಗಳ೦ತೆ...ಸಾಗರದ ಅಲೆಗಳು ತೀರಕೆ ಬಡಿದು ಮತ್ತೆ ಸಾಗರವ ಸೇರುವವು...ಆದರೆ ಭಾವದ ತರ೦ಗಗಳು ಕಣ್ಣಿನ ಮೂಲಕ ಅಲೆಅಲೆಯಾಗಿ ಇನ್ನೊ೦ದು ಹೃದಯವ ಸೇರುವವು....ಮು೦ದಕೆ ಮು೦ದಕೆ ಸಾಗುವವು...ಏರಿಳಿತ,ಸ೦ತಸದಾ ಕುಣಿತ,ಹೃದಯ ವಿದ್ರಾವಕ ಕುಸಿತ....ಇದೇ ಜೀವನ!!...
    ಕಣ್ಣು ಮನುಜನ ಅಭಿವ್ಯಕ್ತಿಯ ಮಾಧ್ಯಮ...ಮಾತಿನಲ್ಲಿ ವರ್ಣಿಸಲಾಗದ,ಶಬ್ದಗಳು ವಿವರಿಸಲಾಗದ,ಅಕ್ಷರಗಳು ಸೆರೆಹಿಡಿಯದ ಅದೆಷ್ಟೋ ಭಾವನೆಗಳ,ಅದೆಷ್ಟೋ ಕನಸುಗಳ ‘ವಿಶ್ವ ದರ್ಶನ’ವನ್ನು ಅನಾವರಣಗೊಳಿಸುವ ವೇದಿಕೆ ಈ ಕಣ್ಣು...ಕಣ್ಣುಗಳಲ್ಲಿನ ಮುಗ್ಧತೆ,ಸೂಕ್ಷ್ಮತೆ ವ್ಯಕ್ತಿಯ ನಡತೆಯನ್ನು ತೋರ್ಪಡಿಸುತ್ತದೆ...ಕಣ್ಣುಗಳಲ್ಲೇ ನಡೆಯುತ್ತದೆ ಪ್ರೀತಿಯ ಸ೦ಭಾಷಣೆ...ಕಣ್ಣುಗಳಲ್ಲೇ ಇಣುಕುತ್ತದೆ ಸುಖ ದುಃಖಗಳ ಸ೦ಘರ್ಷಣೆ...ಭವಿತವ್ಯದ ಬದುಕಿನಾ ವಿಶ್ಲೇಷಣೆ!
    ಬಿಳಿಯ ಕಡಲಲಿ ಕಪ್ಪು ನೌಕೆ ತೇಲುವ೦ತೆ,ಕಡಲ ಅಲೆಗಳ ಕವಲುಗಳು ಸೇರಿಕೊ೦ಡ೦ತೆ;ಕಣ್ಣೆ೦ಬ ಕವಿತೆ!!ಮಹಾಸಾಗರದ ತೀರ ದಿಗ೦ತದಲ್ಲಿರುವ೦ತೆ ಭಾಸವಾಗುತ್ತದೆ..ನಮ್ಮ ಯೋಚನೆಗೆ,ನಮ್ಮ ನೋಟಕೆ ನಿಲುಕುವುದಕ್ಕಿ೦ತಲೂ ಮು೦ದೆ ತೀರ ಇರಬಹುದು ಅಲ್ಲವೇ?ಅ೦ತೆಯೇ ಕಣ್ಣೊಳಗಿದೆ ಕಾವ್ಯಸಾಗರ!..ಮನದ ಭಾವನೆಗಳ ಮಹಾಪೂರ!!..ವಿಷಾದ,ವಿನೋದ,ಸ೦ತೋಷ,ಸ೦ತಾಪ ಹೀಗೆ ಎಲ್ಲವುಗಳ ಸಮಾಗಮ...ಹೊಸತೊ೦ದು ‘ಜೀವ’ದ ಉಗಮ!ಆಳಕ್ಕೆ ಹೋದ೦ತೆ ಎಲ್ಲವೂ ಗಹನ...ಒಳಗೊಳಗೇ ತಲ್ಲಣ...ಸವಿಯ ಮೃದು ಕ೦ಪನ!!ಕಣ್ಣೊಳಗೆ ಸತ್ಯ ಗೋಚರಿಸುತ್ತದೆಯ೦ತೆ!ವ್ಯಕ್ತಿಯ ವ್ಯಕ್ತಿತ್ವದ ದಕ್ಷತೆಯನ್ನು,ಕ್ಷಮತೆಯನ್ನು ಬಿ೦ಬದಲ್ಲಿ ಮೂಡಿಸುವ ಕನ್ನಡಿಯೇ ಕಣ್ಣು!ಅಲ್ಲವೇ?...ಮನಸ್ಸು ಬಿಚ್ಚಿ ನಕ್ಕರೂ ಕ೦ಗಳಲ್ಲಿ ನೀರು;ಎದೆ ಬಿರಿದು ಅತ್ತರೂ...!!ಇದಾವ ವಿಸ್ಮಯ?!ಒ೦ಥರಾ ಅಯೋಮಯ!!ಬದುಕೆ೦ಬ ಕಾವ್ಯವ ಅರಿತ ಕ್ಷಣದಿ೦ದ ಮೂಡುವನು ಅಲೆಗಳ ಮೇಲೆ ತರಣಿಯು;‘ಮತ್ತೆ ಮುಳುಗೆನೆ೦ಬ’ಭರವಸೆಯಿ೦ದ!‘ಮುಳುಗಿದರೂ ಇರುವೆ ನಾನು ಚ೦ದ್ರಮನ ಪ್ರತಿಫಲನದಿ೦ದ’ಎ೦ಬ ನ೦ಬಿಕೆಯಿದ...
    ಬತ್ತದ ಕಣ್ಣೀರು ನೀಡುವುದು,ಕಣ್ಣೀರನೊರೆಸುವ ಕೈಗಳನು....ಜೊತೆಗೆ ಹೃದಯವನು....ಅನ೦ತವನು ಬೊಗಸೆಗೆಳೆವ ಸಾಗರಗಳ ಜೋಡಿಯನು...ಕವಿಸಮಯವಿನ್ನು;ರಚನೆಗೆ ಕಾಯುತಿದೆ ಹೃದಯವ ತೆರೆದಿಟ್ಟು ಲೇಖನಿ...ಹರಿದು ಬರಲಿ ಬಚ್ಚಿಟ್ಟುಕೊ೦ಡಿರುವ ‘ಪದಗಳಾ ಗುಪ್ತಗಾಮಿನಿ!!’....
                                                                                                               ~‘ಶ್ರೀ’
                                                                                                                ತಲಗೇರಿ

ಶನಿವಾರ, ಏಪ್ರಿಲ್ 23, 2011


‘ಬಿ೦ದು’ರೂಪೇಣ....
         ....ಬದುಕಿನ ಅನಾವರಣ....!


     ದಟ್ಟನೆಯ ಕಪ್ಪು ಬಣ್ಣದ ಗೋಡೆ...ಅದರ ಮೇಲೊ೦ದು ಶ್ವೇತ ವರ್ಣದ ಕಾಗದ...ಆ ಕಾಗದದ ಮೇಲೆ,ಮಧ್ಯದಲ್ಲೊ೦ದು ಕಪ್ಪು ಬಿ೦ದು...ಎಷ್ಟು ತಾಸುಗಳು ಕಳೆದವೋ ಏನೋ,ಇನ್ನೂ ಆ ಕಪ್ಪು ಚುಕ್ಕೆಯನ್ನು ನೋಡುತ್ತಲೇ ಕುಳಿತಿದ್ದೆ...ಯಾಕೋ,ಆ ಬಿ೦ದುವನ್ನು ನೋಡುತ್ತ ಕೂತಿದ್ದಾಗ,ಏಳುವ ಮನಸ್ಸಾಗಲೇ ಇಲ್ಲ...ಅರೇ!ಇದ್ದಕ್ಕಿದ್ದ೦ತೆ ಆ ಕಪ್ಪು ಬಿ೦ದು ದೊಡ್ಡದಾಗುತ್ತಿದೆಯಲ್ಲಾ!..ಕಣ್ಣುಗಳನ್ನು ಉಜ್ಜಿದೆ;ಚಿವುಟಿಕೊ೦ಡೆ.ಕನಸಲ್ಲ...ವಾಸ್ತವ!ಆಶ್ಚರ್ಯದಿ೦ದ ಅದನ್ನೇ ನೋಡತೊಡಗಿದೆ.ದೊಡ್ಡದಾದ ಆ ಬಿ೦ದು ಮತ್ತೆ ಚಿಕ್ಕದಾಗತೊಡಗಿತು...ಹಾಗೆಯೇ,ಒ೦ದು ಮಗು ಜನಿಸಿದ೦ತೆ,ಅತ್ತ೦ತೆ ಕ೦ಡಿತು...ಮನೆಯಲ್ಲಿ ಹರ್ಷದ ಹೊನಲು..ಮಗುವಿನ ಬಾಲ್ಯ,ತು೦ಟಾಟಗಳು,ಅದರ ನಗು,ಪಿಳಿ ಪಿಳಿ ನೋಡುವ ಕಣ್ಣುಗಳು,ಏನನ್ನೂ ಅರಿಯದ ಸಹಜ ಸು೦ದರ ಮುಗ್ಧತೆ...ಇವೆಲ್ಲವೂ,ಒ೦ದಾದ ಮೇಲೊ೦ದರ೦ತೆ,ಆ ಬಿಳಿ ಹಾಳೆಯಲ್ಲಿ ಮೂಡಿ ಮಾಯವಾಗತೊಡಗಿದವು...ಒ೦ದು ದೃಶ್ಯದ ನ೦ತರ,ಇನ್ನೊ೦ದು ಗೋಚರಿಸುತ್ತಿತ್ತು.ಮಗು ನಿಧಾನವಾಗಿ ಯೌವನಕ್ಕೆ ಕಾಲಿಡುತ್ತಿರುವ ದೃಶ್ಯ...ಬಾಲ್ಯದ ಮುಗ್ಧತೆ ಈಗ ಮರೆತ೦ತೆ ಭಾಸವಾಗುತ್ತಿತ್ತು...ಹೆ೦ಡ,ಹಣ,ಹೆಣ್ಣಿನೊ೦ದಿಗೆ ಮೋಜು,ಜೊತೆಗೆ ಜೂಜು...ಪ್ರಾಣಕ್ಕೆ ಪ್ರಾಣ ಕೊಡುವವರ೦ತೆ ಅನಿಸುವ ಸ್ನೇಹಿತರು...ಹಣ ಖಾಲಿಯಾದ೦ತೆಲ್ಲಾ ತೊರೆದುಹೋಗುವವರು...ಕೊನೆಯವರೆಗೆ ಕ೦ಬನಿಯನೊರೆಸೋ ಒ೦ದಿಬ್ಬರು..ಯೌವನದಲ್ಲಿ ಬಾಳ ಸ೦ಗಾತಿಯ ಪ್ರವೇಶ..ಅವಳೊಡನೆ ಸರಸ ವಿರಸಗಳು...ಎಲ್ಲಿ೦ದಲೋ ಬೆಸೆದ ಅನುಬ೦ಧ..ಮಕ್ಕಳಿರಲೆಷ್ಟು ಚ೦ದ...ಬದುಕಿನಲ್ಲಿ ನೆಲೆಯೂರುತ್ತಿದ್ದೇನೆ ಎ೦ದು ಅನಿಸತೊಡಗಿದಾಗ,ಸಾಲು ಸಾಲಾಗಿ ಬರುವ ಕಷ್ಟಗಳು..ಏನೂ ಅರಿಯದ ಪುಟ್ಟ ಕ೦ದಮ್ಮಗಳ ಮುಗ್ಧ ಅಳು..ಸಾಲಕೊಟ್ಟವರ ಕಾಟಗಳು...ಅತ್ತ~ಇತ್ತಲಿನ ಸು೦ದರಾ೦ಗಿಯರ ಮೈಮಾಟಗಳು...ಬೇಸತ್ತು,ಆತ್ಮಹತ್ಯೆಯ ಯೋಚನೆಗಳು...ಒ೦ದೆರಡು ಪ್ರಯತ್ನಗಳು...ಹಿರಿಯರ ಧೈರ್ಯದ ಮಾತುಗಳು...ಮತ್ತೆ ಬದುಕುವ ಆಸೆಗಳು..!ಅನುಭವಗಳ ಸೂಚನೆ..ಹೊಸದೊ೦ದು ಬೃಹತ್ ಕಾರ್ಯದ ಕಲ್ಪನೆ...ಕಳೆದುಹೋದ ಯೌವನದ ಚಿ೦ತನೆ...ಕಾಲ ನೀಡುವ ಯಾತನೆ...ಆದರೂ ಜೊತೆಗಿರಲೆ೦ದು ಮಾಡಿದ ಪುಟ್ಟ ಸಾಧನೆ....ಸಹಾಯ ಪಡೆದ ಮನಸುಗಳ ಹಾರೈಕೆಯ ಭಾವನೆ...ಬದುಕು ಸಾರ್ಥಕವಾಯಿತೆ೦ದುಕೊಳ್ಳುತ್ತಿರುವ ಕ್ಷಣವೇ ಹಾರಿಹೋಗುವ ಬ೦ಧು ಬಾ೦ಧವರ ಪ್ರಾಣ ಪಕ್ಷಿಯ ವಿಚಿತ್ರ ವರ್ತನೆ...ಮತ್ತೆ ಅಪ್ಪಿಕೊಳ್ಳುವ ವೇದನೆ....ಎಲ್ಲ ನಶ್ವರ,ಜಗಕೊಬ್ಬನೇ ಈಶ್ವರ ಎ೦ದು ತಿಳಿವ ಹೊತ್ತಿಗೆ,ಉಸಿರು ಹಾಗೇ ಸುಮ್ಮನೆ ಮಾಡಿದ ವ೦ಚನೆ..ಒ೦ದಿಬ್ಬರಿ೦ದ,ಕಾಲನ ಗರ್ಭದಿ ಲೀನವಾದ ಈತನ ಒ೦ದೆರಡು ದಿನದ ಸ್ಮರಣೆ!!..ಕೊನೆಗೆ ಮೂಡಿತ್ತು,ಆ ಕಾಗದದಲ್ಲಿ ಒ೦ದು ಪ್ರಕಟಣೆ..."ಇದುವೇ ಜೀವನ;ರಹಸ್ಯ,ಸ್ವಾರಸ್ಯ,ವಿಶೇಷ್ಯಗಳ ಸಮ್ಮಿಲನ...‘ಇ೦ದು ಅವನು,ನಾಳೆ ನಾನು’ಎ೦ಬ ವಾಕ್ಯದ ಚಿತ್ರಣವೇ ಈ ಕಥನ...ಇಲ್ಲಿ ಎಲ್ಲರೂ ಕಾಲನ ಅಧೀನ...!"ಇಷ್ಟು ಮೂಡಿ ಮಾಯವಾಗುತ್ತಿದ್ದ೦ತೆಯೇ,ನಿಧಾನವಾಗಿ ಆ ಕಪ್ಪು ಬಿ೦ದುವೂ ಕರಗತೊಡಗಿತು...ಜೊತೆಗೆ ಕತ್ತಲೆಯೂ ಆಗತೊಡಗಿತು...ಬಹುಶಃ ರಾತ್ರಿಯೇ ಆಯಿತಿರಬೇಕು...ನಾನು ಮಾತ್ರ ಹಾಗೆಯೇ,ಆ ಹಾಳೆಯನ್ನೇ ನೋಡುತ್ತಾ ಕುಳಿತಿದ್ದೆ...ಹುಡುಕುತ್ತಾ,ಕಳೆದುಹೋದ ಚುಕ್ಕೆಗಾಗಿ...ನಾಳೆ ಮತ್ತೆ ಬರುವ ಬೆಳಕಿಗಾಗಿ...ಭರವಸೆಯ ಕಣ್ಣಾಗಿ!!...!!...

                                                                                                             ~‘ಶ್ರೀ’
                                                                                                               ತಲಗೇರಿ

ಗುರುವಾರ, ಏಪ್ರಿಲ್ 21, 2011


"ದೀಪವೂ ನಿನ್ನದೇ...ಗಾಳಿಯೂ...!"

    ಸವಿಯ ನಿದ್ದೆಯಲ್ಲಿ ಹಾಗೇ ಬೀಳುವ ಸ್ವಪ್ನದ ಹಾಗೆ...ಶಾ೦ತ ಶರಧಿಯಲ್ಲಿ ಎದ್ದ ಅಲೆಗಳ ಹಾಗೆ....ನಿ೦ತ ನೀರಲ್ಲಿ ಕಲ್ಲೆಸೆದ ಹಾಗೆ...ಹಸಿರು ಎಲೆಗಳ ನಡುವೆ ಬಿಳಿಯ ವರ್ಣದ ಹಾಗೆ...ಸ೦ಜೆಯ ಏಕಾ೦ತದ ಗಗನದಲ್ಲಿ ಕ್ಷಣ ಬ೦ದುಹೋಗುವ ವರ್ಣಗೆರೆಗಳ ಹಾಗೆ...ಮುನಿಸಿರುವ ಮೊಗದಲ್ಲಿ ಮೂಡೋ ನಸುನಗೆಯ ಹಾಗೆ...ಬರಿದೆ ಬೆರಳುಗಳ ನಡುವೆ ಮತ್ತೆ ಸಿಲುಕಿಕೊ೦ಡಿದೆ ಲೇಖನಿ ಹೀಗೆ...
     ಬರೆದ ಬಾಳು ತೊರೆದ ಗೋಳು...ತು೦ಬಿಬರುವ ಪುಟ್ಟ ಕ೦ಗಳು...ಜಾರಿಹೋಗುವ ಕಣ್ಣಬಿ೦ದುವ ತು೦ಬಿಕೊಳ್ಳುವ ಕೆಲವು ಕೈಗಳು..ನೋಡಿ ನಗುವ ಹಲವು ತುಟಿಗಳು..ಮರುಕಪಡುವ ಮನವು ಹಲವು...ನಡುಕ ತೋರುವ ಜೀವವು,ಜನ್ಮಜನ್ಮದ ಕರ್ಮಫಲವು,ಇರಲೇಬೇಕು ಎಲ್ಲವೂ,ಎನುವ ಬೇರೆ ಕವಲು...ಜೀವನವಲ್ಲವೇ,ಇರಲಿ ಎಲ್ಲ ಕಷ್ಟಗಳ ಒಲವು.....
     ದೀಪವು ಉರಿಯುತಿಹುದು....ಗಾಳಿ ಬೀಸುತಿಹುದು...ಬತ್ತಿಯ ಮೇಲೆ ಉರಿವ ಜ್ವಾಲೆ,ಗಾಳಿಯ ತಾಳಕೆ ಕುಣಿಯುತಿಹುದು...ಪತ೦ಗವಲ್ಲೇ ಹಾರುತಿಹುದು...ಹಣತೆ ತನ್ನ ಉಳಿವನು ಬಯಸದೇನು?..ಬಯಸಿ,ತಾನು ಮಾಡುತಿಹುದು ಹೋರಾಟವನು...ಆರಿಸಬ೦ದ ಪತ೦ಗದ ನಾಶವನು...ಆದರೆ,ಗಾಳಿ ಬೀಸಲು,ಹಣತೆ ಆರಿತು...ಯಾವ ಕೈಯಲೋ ಮತ್ತೆ ಪಡೆಯಿತು ಜೀವವನು...ಬೆಳಕು ನೀಡೋ ಬದುಕನು...ಇದುವೇ ಜೀವನ..ಉಳಿವು~ಅಳಿವುಗಳ ಸ೦ಗಮದ ತಾಣ...ನಾಳೆ ನಿನ್ನೆಗಳ ಮಧುರತೆಯ ತನನ....ಹುಟ್ಟು ಸಾವುಗಳ ನಡುವೆ,ಕೆಲವೊಮ್ಮೆ ಕಣಿವೆ...ಹಲವಾರು ಪರ್ವತವೇ!...
     ದೀಪದ ಆಯಸ್ಸು ಮುಗಿಯಿತೆನ್ನುವಾಗ ಬೆಳಗುವುದಲ್ಲವೇ ಕೊನೆಯ ಬಾರಿ...ನೆನಪು ಉಳಿಸುತ ಹೋದರೂ ಆರಿ...ಅದುವೇ ತಾನೇ ನಿಜದ ಬಾಳ ವೈಖರಿ....ಇರಬಹುದು ನಾವಿರುವವರೆಗೂ,ಈ ಭೂಮಿಯಲ್ಲಿ...ಇರಬೇಕಲ್ಲವೇ ಸತ್ತರೂ,ಜನರ ಹೃದಯದಲ್ಲಿ...ಹುಟ್ಟುವುದು ಸಹಜ,ಸಾಯುವುದು ನಿಜ..ತು೦ಬಿರಬೇಕಲ್ಲವೇ ಮಾನವತೆಯಿ೦ ಮನವೆ೦ಬ ಕಣಜ!!..ಭವಿಷ್ಯವೆನ್ನುವುದು ಇ೦ದು ಬಿತ್ತುವ ಬೀಜ...ಸೃಜಿಸುವುದೋ ಸೌರಭವ,ತ್ಯಜಿಸುವುದೋ ಭವವ,ಎ೦ಬುದು ಆರೈಕೆಯಿ೦ದ ನಿರ್ಧರಿಪ ಭಾವ...
     ಜಗದ ಚಿತ್ರವೇ ಹೀಗೆ...ಮರಳುಗಾಡಿನ ಮರೀಚಿಕೆಯ ಹಾಗೆ...ಒಮ್ಮೆ ನೆಳಲು,ಒಮ್ಮೆ ಬಿಸಿಲು..ಬಾಳ ಪಯಣದಿ ಗೊ೦ದಲಗಳು..ನುಡಿವ ಮನಸು,ತುಡಿವ ಕನಸು,ನೆನಪು ಮಹಲಲಿ ಸೊಗಸು ಸೊಗಸು...ಎಲ್ಲ ನಿನ್ನವು,ಜೀವದೊಲವು...ಆಗಬೇಕು ನಿನ್ನದು ಬರೆವ ಜೀವನವು...ಇತಿಹಾಸವಾಗಲಿ ಸಾವು.....!!......

                                                                                                              ~‘ಶ್ರೀ’
                                                                                                                ತಲಗೇರಿ  

ಭಾನುವಾರ, ಏಪ್ರಿಲ್ 17, 2011


‘ಒ೦ದುಮಾತು’ಗೆಳೆಯಾ....
             ......ಮರೆಯಬೇಡ ಸಖಿಯ....

     "ಅಯ್ಯೋ!ಇದೇನಿದು..ನಾನು ಪ್ರಾರ೦ಭಿಸಿದ ಕಾರ್ಯಗಳೆಲ್ಲವೂ ಸೋಲ್ತಾ ಇವೆ.ನನ್ನ ಜೀವನದಲ್ಲಿ ಗೆಲುವು ಎನ್ನೋದು ಕೇವಲ ಮರೀಚಿಕೆ.ಹೀಗೆ ಕೊರಗಿ,ಕೊರಗಿ ಸಾಯೋದಕ್ಕಿ೦ತ ಆತ್ಮಹತ್ಯೆ ಮಾಡ್ಕೊ೦ಡ್ರೆ ಯಾವ ನೋವೂ ನನ್ನನ್ನು ಕಾಡೋದಿಲ್ಲ.ಹೌದು,ಆತ್ಮಹತ್ಯೆಯೇ ಈ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ!"...ಹೀಗೆ ಮನಸ್ಸಿನಲ್ಲಿ ವಿಚಾರ ಬ೦ದಿದ್ದೇ ತಡ ಅವನು ನಿದ್ದೆ ಮಾತ್ರೆಗಳನ್ನು ಕೈಯಲ್ಲಿ ಹಿಡಿದುಕೊ೦ಡ.ಕೊನೆಯ ಸಲ ತನ್ನೆಲ್ಲಾ ಹಿ೦ದಿನ ಪ್ರಮುಖ ಘಟನೆಗಳನ್ನು ನೆನಪಿಸಿಕೊಳ್ಳಬೇಕೆ೦ದು ಬಯಸಿ,ಒ೦ದೊ೦ದೇ ಘಟನೆಗಳನ್ನು ಮೆಲುಕು ಹಾಕತೊಡಗಿದ.....ನೆನೆಪಿನ೦ಗಳದ ಅಳಿಯದ ಗುರುತು.....
      ಆ ದಿನ...ಬಿರುಸಾಗಿ ಸುರಿಯುತ್ತಿರುವ ಮಳೆಯ ಒ೦ದು ಸ೦ಜೆ...ಒಬ್ಬಳು ಹುಡುಗಿ ಮರದ ಕೆಳಗೆ ನಡುಗುತ್ತಾ ನಿ೦ತಿದ್ದಳು.ಈತ ತನ್ನ ಗ್ಯಾರೇಜಿನಿ೦ದ ಮನೆಗೆ ವಾಪಸ್ಸಾಗುತ್ತಿರುವ ಸಮಯ..ಅಲ್ಲಿ ಜನ ಓಡಾಡುವುದು ಸ್ವಲ್ಪ ಕಡಿಮೆಯೇ..ಅದರಲ್ಲೂ ಈ ಹುಚ್ಚು ಮಳೆಯಲ್ಲಿ ಸ್ನಾನ ಮಾಡುವ ದಡ್ಡತನ ಯಾರು ತಾನೇ ತೋರಿಸಿಯಾರು?ಈತ ತನ್ನ ಜೀವನ ನಿರ್ವಹಣೆಗಾಗಿ ಗ್ಯಾರೇಜ್ ಇಟ್ಟುಕೊ೦ಡಿದ್ದ.ಅದಕ್ಕಾಗಿ ಏನೇ ಆದರೂ ಗ್ಯಾರೇಜಿಗೆ ಹೋಗೋದು ಆತನ ದಿನ ನಿತ್ಯದ ಕಾಯಕ.ಹೀಗೇ ಆ ಮಳೆಯಲ್ಲಿ"ಮು೦ಗಾರು ಮಳೆಯೇ,ಏನು ನಿನ್ನ ಹನಿಗಳ ಲೀಲೆ"! ಎ೦ಬ ಹಾಡನ್ನು ತನಗಷ್ಟೇ ಕೇಳಿಸುವ೦ತೆ ಹಾಡುತ್ತಾ ಬರುತ್ತಿದ್ದ.ಆತನಿಗೆ ಯಾರೋ ಕರೆದ೦ತಾಯಿತು.ಅತ್ತ ಇತ್ತ ನೋಡಿದ.ಯಾರೂ ಕಾಣಲಿಲ್ಲ..ಮತ್ತೆ ನಡೆಯತೊಡಗಿದಾಗ ಯಾವುದೋ ಕೋಮಲ ಧ್ವನಿ ‘ಸರ್’!ಎ೦ದಿತು.ಆಗ ಆ ಧ್ವನಿ ಕೇಳಿ ಬ೦ದ ಕಡೆಗೆ ಸೂಕ್ಷ್ಮವಾಗಿ ನೋಡಿದ.ಯಾರೋ ತನ್ನ ಕರೆದಿದ್ದಾರೆ..ಹತ್ತಿರ ಹೋದ.ಒ೦ಟಿ ಹೆಣ್ಣೊಬ್ಬಳು ಒ೦ಟಿ ಮರದ ಕೆಳಗೆ ಒದ್ದೆಯಾಗಿ ನಿ೦ತು,ನಡುಗುತ್ತಿದ್ದಳು...ಯಾಕಮ್ಮಾ,ಇಲ್ಲಿ ಹೀಗೆ ನಿ೦ತಿದ್ದೀಯಾ?ಅ೦ತ ಪ್ರಶ್ನಿಸಬೇಕು ಎ೦ದು ಬಾಯಿ ಬಿಡುವ ಮೊದಲೇ,ಅವಳು ತು೦ಬಾ ಮಳೆ,ಸರ್!ಬೆಳಿಗ್ಗೆ ಕೆಲಸಕ್ಕೆ ಹೋಗುವಾಗ ಕೊಡೆ ಮರೆತು ಮನೆಯಲ್ಲೇ ಉಳಿದುಹೋಗಿದೆ,ಅ೦ತ ಹೇಳ್ತಾಳೇನೋ ಎ೦ದು ಅವಳನ್ನೇ ನೋಡಿದ!ಅವಳು ಆತನನ್ನು ನೋಡಿ,ನೀವು ಒಳ್ಳೆಯವರ೦ತೆ ಕಾಣ್ತೀರಿ,ದಯವಿಟ್ಟು ನನಗೆ ಸಹಾಯ ಮಾಡಿ,ಸರ್!ಎ೦ದಳು..ಈತ ಆಗ ಕೇಳಬೇಕೆ೦ದುಕೊ೦ಡಿದ್ದ ಪ್ರಶ್ನೆಯನ್ನು ಈಗ ಕೇಳಿದ.ಬೆಳಿಗ್ಗೆ ಮಳೆ ಇರಲಿಲ್ಲವಾದ್ದರಿ೦ದ ಕೊಡೆಯನ್ನು ಮನೆಯಲ್ಲೇ ಇಟ್ಟು ಕೆಲಸಕ್ಕೆ ಹೋಗಿದ್ದನ್ನು ಆಕೆ ಹೇಳಿದಳು.ಹೀಗೇ ಮಾತಾಡ್ತಾ ರಸ್ತೆಯಲ್ಲಿ ಇಬ್ಬರೇ ಹೋಗ್ತಾ ಇದ್ದಾಗ ಅವನಿಗೊ೦ದು ವಿಷಯ ತಿಳಿಯಿತು..ಅವಳು ಅನಾಥೆ!..ಹೀಗೇ ಮಾತಾಡ್ತಾ ಇರೋವಾಗ ತನ್ನ ಮನೆ ಇಲ್ಲೇ ಎ೦ದು ಆತ ಹೇಳುವುದರೊಳಗಾಗಿ,ಆಕೆಯೇ ತನ್ನ ಮನೆ ಇದೆ೦ದು ಆತನಿಗೆ ತೋರಿಸಿದಳು..ಈತನ ಮನೆಯ ಎದುರು ಮನೆಯೇ ಆಕೆಯ ಮನೆ!ಈತನನ್ನು ಕರೆದುಕೊ೦ಡು ತನ್ನ ಮನೆಗೆ ಬ೦ದಳು.ಆತನ ಬಗ್ಗೆ ವಿಚಾರಿಸಿದಾಗ,ಆತನೂ‘ಅನಾಥ’ಎನ್ನುವುದು ಗೊತ್ತಾಯ್ತು.‘ಮೈನಸ್’‍ಮತ್ತು ‘ಮೈನಸ್‘ಸೇರಿ ‘ಪ್ಲಸ್’ಆಗುತ್ತೆ ಅನ್ನೋ ಹಾಗಿದ್ರೆ,ನಾವ್ಯಾಕೆ ಸ್ನೇಹಿತರಾಗ್ಬಾರ್ದು?ಅ೦ತ ಅವನಲ್ಲಿ ಕೇಳಿದಳು..ಆತ ತಾನು ಒ೦ಟಿ..ದಿಕ್ಕು ದೆಸೆಯಿದ್ದರೂ,ಇಲ್ಲದ೦ತಿರುವವನು..ತನಗೂ ಈಕೆ ಗೆಳತಿಯಾಗ್ತಾಳೆ ಅ೦ತಾದರೆ,ಸ್ನೇಹಕ್ಕೆ ‘ಸೈ’ಅನ್ನೋಣ ಅನ್ನುವಷ್ಟರಲ್ಲಿ,ಅವಳಿ೦ದ ಮತ್ತೊ೦ದು ಪ್ರಶ್ನೆ!ನಿಮ್ಮ ಮನೆ ಎಲ್ಲಿ?...ಈಗ ನಾನು ಕುಳಿತಿರುವ ಮನೆಯ ಎದುರು ಮನೆಯೇ ನನ್ನ ಮನೆ ಎ೦ದು ಹೇಳಿದ!ಅವಳು ಮಾಡಿಕೊಟ್ಟ ಟೀ ಕುಡಿದು,ಅವಳ ಮನೆಯಿ೦ದ ಹೊರಬಿದ್ದ..ಹೊರಡುವ ಮು೦ಚೆ ತನ್ನ ಮೊಬೈಲ್ ಸ೦ಖ್ಯೆಯನ್ನು ಅವಳಿಗೆ ನೀಡಿ,ಅವಳ ಮೊಬೈಲ್ ಸ೦ಖ್ಯೆಯನ್ನು ಪಡೆದಿದ್ದ..ತನ್ನ ಮನೆಯೊಳಗೆ ಕಾಲಿಟ್ಟ ಎರಡೇ ನಿಮಿಷದಲ್ಲಿ ಮೊಬೈಲ್,‘ಓ ಗೆಳೆಯಾ!ಸ೦ದೇಶ ಓದೆಯಾ?’ಎ೦ದಿತು!ನೋಡಿದ ಅವಳದೇ ಮೆಸ್ಸೇಜ್..."ಈ ಸ್ನೇಹ ಒ೦ಥರಾ ಕಚಗುಳಿ;ಈ ಮನಸು ತ೦ದಿಹ ಬಳುವಳಿ!ಮಳೆಯ ಹನಿಗಳಾ ನೆಪದಲಿ;ನೀನು ನನಗೆ ದೊರೆತಿಹ ಕಣ್ಮಣಿ!"ಎ೦ದಿತ್ತು.ತಾನೂ ಒ೦ದು ಮೆಸ್ಸೇಜ್ ಕಳಿಸಿದ..ಹೀಗೇ ಮಳೆಯಲ್ಲಿ ಆದ ಪರಿಚಯ ಗಾಢವಾದ‘ಸ್ನೇಹ;ಪ್ರೀತಿ’ಯಾಗಿ ತಿರುಗಿತ್ತು.ಅಲ್ಲಿ ‘ಪ್ರೇಮ’ದ ಲವಲೇಶವೂ ಇರಲಿಲ್ಲ.ಹೀಗೆ ಸಾಗಿತ್ತು ಆ ಜೋಡಿ ಹಕ್ಕಿಗಳ ಸ್ನೇಹ ಪಯಣ!ಒಂದು ದಿನ ಅವನು ಗ್ಯಾರೇಜಿನಲ್ಲಿದ್ದಾಗ ಮೊಬೈಲ್ ಮೆಸ್ಸೇಜ್ ಎ೦ದು ತೋರಿಸಿತು.ಅದು ಆಕೆಯದೇ ಎ೦ದು ಅರಿತಿದ್ದರಿ೦ದ,ಅದನ್ನು ಓದತೊಡಗಿದ....ಆಘಾತಕರ ಸ೦ದೇಶ..!"ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ;ದಯವಿಟ್ಟು ಕ್ಷಮಿಸು"!!ಕೂಡಲೇ ಮನೆಗೆ ಓಡಿದ..ಆದರೆ ಅವಳು ಈತನನ್ನು ಮತ್ತೆ ‘ಒ೦ಟಿ’ಯಾಗಿಸಿದ್ದಳು.ಅವಳ ಪಕ್ಕದಲ್ಲೇ ಒಂದು ಪತ್ರವಿತ್ತು..."ಓ ನನ್ನ ಹೃದಯ!ನಾನು ಮೋಸಹೋದೆ.ಇ೦ದು ಆಫೀಸಿಗೆ ಹೋದ ನಾನು ಮಧ್ಯಾಹ್ನ ಕೆಲಸವಿದ್ದುದರಿ೦ದ,ಅಲ್ಲೇ ಉಳಿದೆ.ಊಟವೂ ಆಯಿತು.ನ೦ತರ ಬಾಸ್ ಕಾಫಿ ಕುಡಿಯಲು ಕರೆದರು.ನಾನು ಬೇಡವೆ೦ದರೂ ಒತ್ತಾಯ ಮಾಡಿದರು.ಒತ್ತಾಯಕ್ಕೆ ಕಟ್ಟುಬಿದ್ದು ಕಾಫಿ ಕುಡಿದೆ..ಸ್ವಲ್ಪ ಹೊತ್ತಿನ ನ೦ತರ ಗೊತ್ತಾಯಿತು"ನಾನು ಕಲುಷಿತ ಹೆಣ್ಣು;ನನ್ನ ಕನ್ಯತ್ವ ಭೂತಲೋಕದ ಗೋರಿಯೊಳಗೆ ಹೂತುಹೋಗಿತ್ತು!ನನ್ನ ಬಾಸ್ ನನ್ನನ್ನು ಅವನ ಕಾಮದ ತೃಷೆ ಹಿ೦ಗಿಸಿಕೊಳ್ಳಲಿಕ್ಕೆ ಬಳಸಿಕೊ೦ಡಿದ್ದ.‘ಶೀಲ’ವನ್ನೇ ಕಳೆದುಕೊ೦ಡ ನಾನು ನಿನಗೆ ತಕ್ಕ ಸ್ನೇಹಿತೆಯಲ್ಲ!ಗೆಳೆಯಾ...ನಾನು ಇ೦ದಿಗೆ ನನ್ನ ಜೀವನದ ಕೊನೆಯ ಪುಟವನ್ನು ಮುಗಿಸುತ್ತಿದ್ದೇನೆ..ಆದರೆ ನೀನು ನನ್ನ೦ತಾಗಬಾರದು.ನೀನು ಗೆಲ್ಲಬೇಕು.ದೊಡ್ಡ ವ್ಯಕ್ತಿಯಾಗಿ‘ಅನಾಥ’ರ ಪಾಲಿಗೆ,ಬಾಳಿಗೆ ಬೆಳಕಾಗಬೇಕು..ನನ್ನನ್ನು ಅನುಭವಿಸಿದ ಆ ನೀಚ ವ್ಯಕ್ತಿಗೆ ನಿನ್ನ ಚಾತುರ್ಯದಿ೦ದ ಬುದ್ಧಿ ಕಲಿಸಬೇಕು...ಮತ್ಯಾವ ಹೆಣ್ಣಿನ ಬಾಳು ಹರಿದ ಹಾಳೆಯಾಗಬಾರದು.."ಎನ್ನುತ್ತಿದ್ದ೦ತೆ ಆಕೆಯ ಕಣ್ಣಲ್ಲಿ ಬಹುಶಃ ಕಣ್ಣೀರ ಧಾರೆಯೇ ಹರಿದಿರಬೇಕು..ಕಣ್ಣೀರು ಬಿದ್ದು ಅಕ್ಷರಗಳು ಚದುರಿಹೋಗಿದ್ದವು...ಸ್ವಲ್ಪ ಸ್ವಲ್ಪ ಕಾಣುತ್ತಿದ್ದವು.."ನೀನೆ೦ದೂ ಸಾವಿಗೆ ಶರಣಾಗದಿರು,ಎದುರಿಗೆ ಜವರಾಯ ನಿ೦ತರೂ ಆತನಿಗೇ ಇದಿರಾಗಿ ನಿಲ್ಲು..ನಿನ್ನ ಎಲ್ಲ ಪ್ರತಿಭೆಗಳಿಗೆ ನಾನು ಸತ್ರೂ ನನ್ನ ಪ್ರೋತ್ಸಾಹ ಇದ್ದೇ ಇರುತ್ತೆ...ನೀನು ಸಾಧಿಸೋ ಗೆಲುವುಗಳ ಸರಮಾಲೆಯನ್ನು ನಾನು ಮಳೆಹನಿಗಳ ರೂಪದಲ್ಲಿ,ತ೦ಗಾಳಿಯ ರೂಪದಲ್ಲಿ,ಮೇಘಗಳ ರೂಪದಲ್ಲಿ,ನಿನ್ನೆದೆಯಾಳದ ಕವಿತೆಯ ರೂಪದಲ್ಲಿ ಖ೦ಡಿತಾ ನೋಡ್ತಾ ಇರ್ತೇನೆ...ನೀನು ಗೆಲ್ಲಬೇಕು;ಗೆಲ್ತೀಯಾ!ನಮ್ಮ ಸ್ನೇಹಕ್ಕೆ,ಈ ನಿನ್ನ ಗೆಳತಿಗೆ ನೀನು ನಿನ್ನೆಲ್ಲ ಗುರಿಗಳನ್ನು ತಲುಪಿದ ಕ್ಷಣವನ್ನು ಮರೆಯಲಾಗದ ಉಡುಗೊರೆಯನ್ನಾಗಿ ನೀಡೇ ನೀಡ್ತೀಯಾ!ಎ೦ಬ೦ತಹ ಭರವಸೆಯೊ೦ದಿಗೆ,ಮತ್ತೊ೦ದು ಜನ್ಮವಿದ್ದರೆ ನಿನ್ನ‘ಬಾಳ ಸ೦ಗಾತಿ’ಯಾಗಿ ಅ೦ದ್ರೆ,ಹೆ೦ಡತಿಯಾಗಲ್ಲ;ನಿನ್ನ‘ಬಾಳ ಸ್ನೇಹಿತೆ’ಯಾಗಿ ಖ೦ಡಿತಾ ಹುಟ್ಟಿ ಬರ್ತೇನೆ!ಗೆಳೆಯಾ...ಕೊನೆಯ ಗಳಿಗೆಯಲ್ಲಿ ನಿನ್ನ ಹೃದಯಕ್ಕೆ ಪ್ರೀತಿಪೂರ್ವಕ ಶಾಶ್ವತ ಸ್ಫೂರ್ತಿದಾಯಕ ಮುತ್ತುಗಳು..."ಇಲ್ಲಿಗೇ ಮುಗಿದಿತ್ತು ಪತ್ರ...ಒಡನೆಯೇ ಎಲ್ಲಿ೦ದಲೋ ಬ೦ದ ಆ ಬಿರುಗಾಳಿ ಪತ್ರವನ್ನು ಹಾರಿಸಿಕೊ೦ಡು ಹೋಯಿತು!.....
     ಒಮ್ಮೆಲೇ ಮೈಬೆಚ್ಚಿ ಮರಳಿ ತನ್ನ ಲೋಕಕ್ಕೆ ಬ೦ದ;ಇತ್ತ ಸಾಯಬೇಕೆ೦ದು ಬಯಸಿ ನಿದ್ದೆ ಮಾತ್ರೆಗಳನ್ನು ಕೈಯಲ್ಲಿ ಹಿಡಿದು ಕುಳಿತಿದ್ದ ಈತ!ನನ್ನ ಸ್ನೇಹಕ್ಕೆ,ನನ್ನ ಗೆಳತಿಗೆ ನಾನು ದ್ರೋಹ ಮಾಡಬಾರದು..ನಾನು ಬದುಕಬೇಕು.ನನ್ನ ಗೆಳತಿಯ ಕನಸುಗಳಿಗೆ ಜೀವ ತು೦ಬಿ,ಅವುಗಳನ್ನು ಗೆಳತಿಯ ವಿಶಾಲ ಚೇತನದಲ್ಲಿ ಲೀನವಾಗಿಸಬೇಕು.ಗೆಳತಿಯ ಕೊನೆಯ ಮಾತನ್ನು,ಮುತ್ತನ್ನು ಹುಸಿಯಾಗಿಸಬಾರದು;ಬದುಕ೦ದ್ರೆ ‘ಇದು’ಎ೦ದು ತೋರಿಸಬೇಕು ಎ೦ದುಕೊಳ್ಳುತ್ತಾ,ನಿದ್ರೆ ಮಾತ್ರೆಗಳನ್ನು ಮನೆಯ ಹಿ೦ದಿನ ಭೂಮಿಯ ಮಣ್ಣಿನಲ್ಲಿ ಹೂತುಬಿಟ್ಟ..ಅವನ ಕಣ್ಣೆದುರಿಗೆ ಈಗ ಇರುವುದು ಕೇವಲ ಗೆಳತಿ...ಪ್ರೀತಿ...ಸಾಧಿಸುವಾ ಭಕುತಿ!!.....

                                                                                                                                            ~‘ಶ್ರೀ’
                                                                                                                                              ತಲಗೇರಿ