ಭಾನುವಾರ, ಜೂನ್ 5, 2022

ಹಿಮಶ್ರೇಣಿಗಳ ಮಡಿಲಲ್ಲಿ ಬದುಕಿನ ಹಾಡು


ಹೋರಾಟ ಎನ್ನುವುದು ಯಾವತ್ತಿಗೂ ರೋಚಕವಾದದ್ದು ಅದರಾಚೆ ನಿಂತು ನೋಡುವವರಿಗೆ. ಆದರೆ, ಆ ಹೋರಾಟದ ಭಾಗವಾಗಿರುವವರಿಗೆ ಅದು 'ಉಸಿರು ನಿಲ್ಲುವ ಅಥವಾ 'ನಿಟ್ಟುಸಿರು ಬಿಡುವ' ಈ ಎರಡರಲ್ಲಿ ಯಾವುದಾದರೂ ಒಂದು ಆಗಿಹೋಗುವ ಭಯಾನಕ ಅವಧಿ. ಹೋರಾಟವೆಂದರೆ ಹೊಡೆದಾಟ, ಯುದ್ಧ, ಚಳುವಳಿ ಇತ್ಯಾದಿಗಳೇ ಆಗಬೇಕಿಲ್ಲ. ಮನುಷ್ಯ ಸಂಕುಲದಲ್ಲಷ್ಟೇ ಅಲ್ಲ, ಎಲ್ಲ ಜೀವಕೋಟಿಗಳಲ್ಲೂ ಇರುವ ಒಂದು ಸಾಮ್ಯತೆ ಇದು. ಕೋಟ್ಯಂತರ ವೀರ್ಯಾಣುಗಳಲ್ಲಿ ಒಂದು ವೀರ್ಯಾಣು ಮುನ್ನುಗ್ಗುವಿಕೆಯಿಂದ ಶುರುವಾಗಿ, ಪ್ರತಿ ನಿತ್ಯ ಪ್ರತಿ ಕ್ಷಣ ಉಸಿರನ್ನು ಒಳಗೆಳೆದುಕೊಂಡು ಹೊರಬಿಡುವುದರಿಂದ ಹಿಡಿದು, ಶಿಶುವಾಗಿದ್ದಾಗ ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ, ಗೋಡೆ ಹಿಡಿದು ನಿಲ್ಲುವ ಪ್ರಯತ್ನಗಳಾದಿಯಾಗಿ ಮರಣಕ್ಕೂ ಮುನ್ನ ಯಾರನ್ನೋ ನೋಡುವ ಸಲುವಾಗಿ ಯಾರದೋ ಸ್ಪರ್ಶ, ಧ್ವನಿ ತರಂಗಗಳ ಅನುಭವದ ಸಲುವಾಗಿ ಅರೆ ಪ್ರಜ್ಞಾ ಸ್ಥಿತಿಯಲ್ಲಿ ಕಾಯುವವರೆಗೆ ಇಡೀ ಒಂದು ಪ್ರಯಾಣ ಅಷ್ಟು ಸರಳವೂ ಅಲ್ಲ, ಸಾಮಾನ್ಯವೂ ಅಲ್ಲ. ಪ್ರಾಣಿ ಜಗತ್ತಿನಲ್ಲಿಯೂ ಅಷ್ಟೇ; ಆ ಕ್ಷಣಕ್ಕೆ ಸಿಕ್ಕ ಆಹಾರವನ್ನು ಉಳಿಸಿಕೊಳ್ಳುವ, ಸಂಗಾತಿಯನ್ನು ಆಕರ್ಷಿಸುವ, ತನ್ನ ಅಧಿಪತ್ಯವನ್ನು ಉಳಿಸಿಕೊಳ್ಳುವ, ಪ್ರಕೃತಿಯಲ್ಲಾಗುವ ಸಹಜ, ಅಸಹಜ ಬದಲಾವಣೆಗೆ ನಿರಂತರವಾಗಿ ಗ್ರಾಹಿಯಾಗಿರುವ ಸಂಗತಿ ಸಣ್ಣದಲ್ಲ. ಆದರೆ, ಎಲ್ಲವೂ ಮುಖ್ಯವಾಹಿನಿಯಲ್ಲಿ ಚರ್ಚಿಸಲ್ಪಡುವುದಿಲ್ಲ. ಅವೆಲ್ಲವೂ ಈ ಲೋಕದ ಪಾಡು ಎನ್ನುವ ಹಾಗೆ ಸಹಜವಾಗಿ ನಡೆದುಹೋಗುತ್ತವೆ ಮತ್ತು ಅವು ಯಾರನ್ನೂ ತಮ್ಮತ್ತ ಸೆಳೆಯುವಂಥವುಗಳಲ್ಲ. ನಮಗೆಲ್ಲಾ ಒಮ್ಮೊಮ್ಮೆ ಜಡತೆ ಆವರಿಸುತ್ತದೆ. ಎಲ್ಲವುಗಳಲ್ಲಿಯೂ ನಿರಾಸಕ್ತಿ ಅಥವಾ ಯಾವುದೋ ಒಂದನ್ನು ಮಾಡಿಮುಗಿಸಬಹುದಾದ ಇಚ್ಛಾಶಕ್ತಿಯ ಕೊರತೆ ಕಾಡತೊಡಗುತ್ತದೆ. ಆಗ ಹೊಸತೇನನ್ನೋ ಹುಡುಕಿ ಹೊರಡುತ್ತೇವೆ, ಮತ್ತೆ ಬದುಕನ್ನು ನವೀಕರಿಸಿಕೊಳ್ಳುವ ಉತ್ತೇಜನಕ್ಕಾಗಿ ಹಂಬಲಿಸುತ್ತೇವೆ. ಹಲವಾರು ಬಾರಿ ಯಾವ್ಯಾವುದೋ ಕೃತಕ ವ್ಯಕ್ತಿತ್ವ ವಿಕಸನ ಭಾಷಣ, ಬರಹ, ಸಿನಿಮಾ ಇತ್ಯಾದಿಗಳ ಮೊರೆಹೋಗುತ್ತೇವೆ. ಕೆಲವೊಮ್ಮೆ ಅವು ಧನಾತ್ಮಕವಾಗಿಯೂ ಕೆಲಸ ಮಾಡಬಲ್ಲವು. ಆದರೆ, ಅವೆಲ್ಲವೂ ಬೇರೂರಿ ಕೊನೆಗೆ ಫಲ ಕೊಡಬೇಕಾಗಿರುವುದು ನಮ್ಮಲ್ಲಿಯೇ, ಆ ಆಳಕ್ಕಿಳಿಯುವ ಕಾರ್ಯ ಆಗದೇ ಇದ್ದಲ್ಲಿ ಎಲ್ಲವೂ ತಾತ್ಕಾಲಿಕ. ಇದು ಒಂದು ಕಡೆಯಾದಲ್ಲಿ, ಕೆಲವರ ಬದುಕೇ ಈ ಎಲ್ಲಾ ವ್ಯಕ್ತಿತ್ವ ವಿಕಸನ ತರಗತಿಗಳ ವಿಶ್ವವಿದ್ಯಾಲಯದಂತಿರುತ್ತದೆ. ಅದರಲ್ಲಿ ಪ್ರತ್ಯೇಕವಾಗಿ ಹೇರಿಕೊಂಡ ಸಂಗತಿಗಳಿರುವುದಿಲ್ಲ, ಯಾವುದೋ ಒಂದು ಸಮಯ, ಘಟನೆ, ವಿಷಯ ಅವರನ್ನು ಸಾಮಾನ್ಯ ಬದುಕಿನಿಂದ ಭಿನ್ನವಾದ ಮತ್ತು ಎತ್ತರದ ನೆಲೆಗೆ ಕೊಂಡೊಯ್ಯುತ್ತದೆ. ಆಗ ಆ ಇಡೀ ಬದುಕೇ ಸಹಜವಾದ ಸ್ಫೂರ್ತಿಯ ಆಕರವಾಗುತ್ತದೆ. ಅಂಥದ್ದೇ ಒಂದು ಮೈನವಿರೇಳಿಸುವ, ಕ್ಷಣಕ್ಷಣಕ್ಕೂ ಕೈ ಜಾರುತ್ತಿರುವ ಬದುಕನ್ನು ಮತ್ತೆ ಮತ್ತೆ ಗಟ್ಟಿಯಾಗಿ ಅಪ್ಪಿಕೊಳ್ಳುವ, ನಕ್ಷೆಯಲ್ಲಿ ಎಲ್ಲಿದ್ದೇವೆ ಎಂದು ಗೊತ್ತೂ ಆಗದ ಜಾಗದಿಂದ ಮತ್ತೆ ಹೊರಜಗತ್ತಿನೊಂದಿಗೆ ಬೆರೆಯುವ ದಾರಿಯನ್ನು ಹುಡುಕುವ, ಎಲ್ಲವೂ ಮುಗಿಯಿತು ಅನ್ನುವಾಗಲೇ ಮತ್ತೆ ಹೊಸತಾಗಿ ಶುರುವಾಗುವ, ನಂಬಿಕೆಗಳ ಜೊತೆ ನಿರಂತರವಾಗಿ ಸಂಘರ್ಷವೇರ್ಪಟ್ಟು ಸಮಯದ ಜೊತೆ ರಾಜಿಯಾಗದೇ ನಿಂತು, ಪ್ರಕೃತಿಯ ಅಗಾಧತೆಯನ್ನು ಪೂಜಿಸುತ್ತಾ ಪ್ರಕೃತಿಯೊಂದಿಗೇ ಹೋರಾಡಿ ಗೆಲ್ಲುವ, ಆಂಡೀಸ್ ಪರ್ವತ ಶ್ರೇಣಿಯ ಮಡಿಲಲ್ಲಿ ನಡೆದ ಮನುಕುಲದ ದಾರುಣ ಸ್ಥಿತಿಯಲ್ಲೂ ಜೀವನಪ್ರೀತಿಯನ್ನು ಸ್ಫುರಿಸುವ ಕಥಾನಕವೇ ಸಂಯುಕ್ತಾ ಪುಲಿಗಲ್ ( Samyuktha Puligal ) ಅವರು ಅನುವಾದಿಸಿದ ಪರ್ವತದಲ್ಲಿ ಪವಾಡ. 


ನ್ಯಾಂಡೋ ಪರಾಡೊ ಬರೆದ, ಜೊತೆಗೆ ಜೀವಿಸಿದ ೭೨ ದಿನಗಳ ಅನುಭವ ಕಥನ ಮಿರಾಕಲ್ ಇನ್ ದಿ ಆಂಡೀಸ್ ( Miracle in the andes ) ಕೃತಿಯ ಕನ್ನಡ ಅನುವಾದ ಇದು. ಮಾನವೀಯ ತುಡಿತಗಳು ಮತ್ತು ಸಂಬಂಧಗಳ ಆರ್ದ್ರತೆಯನ್ನು ಕೊರೋನಾ ಸಮಯದಲ್ಲಿ ಬಹಳಷ್ಟನ್ನು ನೋಡಿದ್ದೇವೆ. ಅದೆಂಥದ್ದೇ ಗಟ್ಟಿಮನಸ್ಸಿನವರಾದರೂ ಒಮ್ಮೆ ಭಾವುಕರಾಗಬಹುದಾದ ಹಲವು ಸಂಗತಿಗಳನ್ನು ಕೇಳಿದ್ದೇವೆ, ಕಂಡಿದ್ದೇವೆ; ಅಲ್ಲ್ಯಾರೋ ವಯಸ್ಸಾದವರು ತನಗಾಗಿ ಮೀಸಲಾದ ಆಸ್ಪತ್ರೆಯ ಹಾಸಿಗೆಯನ್ನು ಇನ್ನ್ಯಾರೋ ಯುವಕನಿಗೆ ಬಿಟ್ಟುಕೊಟ್ಟು ತಾವು ಮೃತರಾದರಂತೆ, ಕೊರೋನಾ ರೋಗಿಗಳ ಸೇವೆ ಮಾಡುತ್ತಲೇ ವೈದ್ಯರು ತಮ್ಮ ಕುಟುಂಬದಿಂದ ದೂರಾದರಂತೆ, ಯಾರೋ ಒಂದಷ್ಟು ಜನ ಬೀದಿನಾಯಿಗಳಿಗೆ ಆಹಾರ ಒದಗಿಸುತ್ತಿದ್ದರಂತೆ, ನಿತ್ಯದ ಮುಗಿಯದ ಕೆಲಸಗಳ ಮಧ್ಯವೂ ಆಸ್ಪತ್ರೆಯ ಹಾಸಿಗೆ, ಔಷಧ, ಆಮ್ಲಜನಕ ಇತ್ಯಾದಿಗಳನ್ನು ಅಗತ್ಯ ಇರುವವರಿಗೆ ತಲುಪಿಸಲು ನಿದ್ದೆಗೆಟ್ಟು, ಊಟ ತಿಂಡಿಗಳನ್ನು ಬಿಟ್ಟು ಪ್ರಯತ್ನಿಸಿದರಂತೆ, ಯಾರೋ ಇನ್ನ್ಯಾರದೋ ಅನಾಥ ಮೃತಶರೀರಕ್ಕೆ ಸಿಗಬೇಕಾದ ಅಂತಿಮ ವಿಧಿಗಳನ್ನು ಪೂರೈಸಿದರಂತೆ ಹೀಗೆ ಹತ್ತು ಹಲವಾರು. ಇವೆಲ್ಲವೂ ಮನುಷ್ಯ ಮನುಷ್ಯನೊಳಗಿನ ಬಾಂಧವ್ಯವನ್ನು, ಭರವಸೆಯನ್ನು ದಟ್ಟವಾಗಿ ಹೆಣೆಯುವ ಘಟನೆಗಳು. ಅಸಂಖ್ಯಾತ ಅಪನಂಬಿಕೆಗಳ, ಮೋಸದ, ಭ್ರಷ್ಟ ವ್ಯವಸ್ಥೆಗಳ, ಸ್ವಾರ್ಥ ಹಪಹಪಿಗಳ ನಡುವೆ ಇವೆಲ್ಲವೂ ಮಾನವ ಸಂಕುಲಕ್ಕೆ ಮನುಷ್ಯ ಪದದ ಅರ್ಥವನ್ನು ಮತ್ತೆ ಕಟ್ಟಿಕೊಡುವ ಸಂದರ್ಭಗಳು. ಅಂಥ ಸಂದರ್ಭಗಳು ದಿನಂಪ್ರತಿಯೂ ಒಂದಲ್ಲಾ ಒಂದು ಕಡೆ ಆಗುತ್ತಲೇ ಇರುತ್ತದೆ. ಆದರೆ, ಕೊರೋನಾ ಸಮಯದಲ್ಲಿ ನೋಡಿದ್ದು ಜಗತ್ತಿನ ಬೇರೆ ಬೇರೆ ದೇಶಗಳಲ್ಲಿನ ಮನುಷ್ಯರು ಒಂದೇ ಸಮಯದಲ್ಲಿ ಈ ಅನುಭವಕ್ಕೆ ಸಾಕ್ಷಿಯಾಗಿದ್ದರು. ಇಡೀ ಜಗತ್ತನ್ನು ಅಂತರ್ಜಾಲ ಬೆಸೆಯುವ ಪ್ರಯತ್ನ ಮಾಡಿತು. ಮನೆಯಲ್ಲಿ ವಯಸ್ಸಾದವರಿದ್ದಾರೆ ಅಂತ ಮನೆಗೆ ಹೋಗದೇ ಉಳಿದ ಮಗ ಮಗಳು, ನಾನು ಊರಿಗೆ ಹೋಗಿ ತನ್ನೂರಿಗೆ ಏನಾದರೂ ಆದರೆ ಅಂತಂದುಕೊಂಡ ಉದ್ಯೊಗಕ್ಕಾಗಿ ಊರು ಬಿಟ್ಟು ಬಂದವ, ಯಾರೋ ನಗರ ಪ್ರದೇಶದಿಂದ ಬಂದಾಗ ಅವರು ಬಂದರು ಅನ್ನುವ ಕಾರಣಕ್ಕೇ‌ ಇಬ್ಭಾಗವಾದ ಒಂದೇ ಊರಿನ ಜನರು, ದಣಿವನ್ನು ಲೆಕ್ಕಿಸದೇ ಸೇವೆ ಸಲ್ಲಿಸಿದ ವೈದ್ಯಲೋಕ, ಭಯಗ್ರಸ್ತ ಮನಸುಗಳಿಗೆ ಧೈರ್ಯ ತುಂಬಿದ ಅದೆಷ್ಟೋ ಮಂದಿ, ಅದರ ಜೊತೆಜೊತೆಗೆ ದಂಧೆ ಎನ್ನುವ ಕರಾಳ ಜಗತ್ತು ಕೂಡ. ಇವಿಷ್ಟನ್ನೂ, ಅಥವಾ ಇದಕ್ಕಿಂತಲೂ ಹೆಚ್ಚಿನದನ್ನು ಜಗತ್ತು ನೋಡಿದೆ. ೧೯೭೨ರಲ್ಲಾದ ಒಂದು ವಿಮಾನ‌ ಅಪಘಾತ ಹಾಗೂ ಇಡೀ ಜಗತ್ತಿನ‌ ಸಂಪರ್ಕವೇ ಕಡಿದುಹೋದ ಆ ಕ್ಷಣದಲ್ಲಿ, ರಕ್ಷಣಾ ಸೇನೆ ಇವರಿರುವ ಜಾಗವನ್ನು ಪತ್ತೆಹಚ್ಚಬಹುದಾ ಇಲ್ಲವಾ ಅನ್ನುವುದರ ಕುರಿತಾಗಿಯೂ ಅನುಮಾನ ಇರುವಾಗ, ಸುತ್ತಲೂ ಎತ್ತರೆತ್ತರದ ಹಿಮಾವೃತ ಪರ್ವತಗಳ ಬುಡದಲ್ಲಿ ಬಿದ್ದ‌ ಗಾಯಾಳುಗಳು ಮತ್ತೆ ವಾಪಸ್ ತಮ್ಮ ತಮ್ಮ ಮನೆಯ ಗೋಡೆಗಳಿಗೆ ಒರಗಿ ಕೂರುವ ಕ್ಷಣಗಳನ್ನು ನೆನೆಸಿಕೊಂಡು ಅದೆಷ್ಟು ಹಂಬಲಿಸಿರಬಹುದು. ಬಹುಶಃ ಬದುಕಿಗಿಂತ ಬೇರೆ ಸ್ಫೂರ್ತಿ ಇರಲಾರದೇನೋ, ಹೇಗಾದರೂ ಬದುಕಲೇಬೇಕು ಹಾಗೂ ಮತ್ತೊಮ್ಮೆ ಈ ಬದುಕನ್ನು ತೃಪ್ತಿಯಿಂದ ಅನುಭವಿಸಬೇಕು ಅನ್ನುವ ಕನಸು ಮತ್ತು ಆ‌ ಕನಸಿನ ಬೆನ್ನುಹತ್ತಿ ಹೋಗುವ ಕತೆ ರೋಚಕವಾಗದೇ ಇದ್ದೀತಾದರೂ ಹೇಗೆ! ಮೂಲ ಕಾದಂಬರಿಯನ್ನು ನಾನಿನ್ನೂ ಓದಿಲ್ಲ, ಕೇವಲ‌ ಅನುವಾದವನ್ನಷ್ಟೇ ಓದಿದೆ. ಕಾದಂಬರಿಯ ಮೊದಲ ಮಾತಿನಲ್ಲಿ ಲೇಖಕಿ ಹೇಳಿದ ಹಾಗೆ ಇದು ಬದುಕನ್ನು ದ್ವೇಷಿಸಿದ ವ್ಯಕ್ತಿಯೊಬ್ಬ ಬದುಕಿನ ಅಗಾಧ ಪ್ರೇಮವನ್ನು ಹುಡುಕಿ ಹೋಗುವ ಕಥನ. ಎಲ್ಲವೂ ಸರಿಯಾಗಿದ್ದಾಗಲೇ ನಮ್ಮ ಹತ್ತಿರ ಬದುಕಿನ ಕುರಿತಾಗಿ ಹಲವು ದೂರುಗಳಿರುತ್ತವೆ. ಏನೂ ಇಲ್ಲದಾದಾಗ ನಮ್ಮ ಪ್ರತಿಕ್ರಿಯೆ ಹೇಗಿರಬಹುದು‌ ಅಥವಾ ಆ ಕ್ಷಣದ ನಮ್ಮ‌ ದೃಷ್ಟಿಕೋನ ಹೇಗಿರಬಹುದು ಅನ್ನೋ ಪ್ರಶ್ನೆಗಳೆಲ್ಲಾ ಓದುವುದಕ್ಕೆ ಅಷ್ಟೇನು ಆಸಕ್ತಿದಾಯಕವಾಗದೇ ಹೋಗಬಹುದು, ಆದರೆ ಅದರ ಉತ್ತರಗಳು ಮಾತ್ರ ನಾವು ಪಯಣಿಸಿಯೇ ಇರದ ದಾರಿಗಳನ್ನು ತೆರೆದಿಡುತ್ತವೆ. 


ನಾವು ಪದೇ ಪದೇ ಹೇಳಿಕೊಂಡು ಬರುತ್ತಿರುವ ಸಂಗತಿಯೆಂದರೆ ಪ್ರಕೃತಿಯ ಇದಿರು ನಾವ್ಯಾರೂ ಒಂದು ಲೆಕ್ಕವೇ ಅಲ್ಲ ಅನ್ನುವುದು. ಆದರೆ ಮನುಷ್ಯನಿಗೊಂದು ಚಾಳಿಯಿದೆ. ಇದ್ದುದನ್ನು ಇದ್ದ ಸ್ಥಿತಿಯಲ್ಲಿಯೇ ಇರುವುದಕ್ಕೆ ಬಿಡದೇ ಇರುವುದು. ವಿಕೃತ ಆನಂದವೊಂದು ದೊರೆಯುತ್ತದೆ ಅಂತಾದಲ್ಲಿ ಮೆದುಳು ಅದಕ್ಕಾಗಿ ಸಜ್ಜಾಗಿಯೇ ಬಿಡುತ್ತದೆ, ಆ ಕ್ಷಣಕ್ಕೆ ತಾನೇ ಸರ್ವರಲ್ಲಿಯೂ ಶಕ್ತಿಶಾಲಿ ಎಂದು ಬೀಗುತ್ತದೆ ಕೂಡಾ. ಆದರೆ, ಸಮತೋಲನ ಎನ್ನುವುದು ಪ್ರಕೃತಿಯ ಅವಿಭಾಜ್ಯ ಅಂಗ. ತನ್ನನ್ನು ತಾನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದಕ್ಕೆ ಗೊತ್ತೇ ಆಗದ ಹಾಗೆ ಪ್ರಕೃತಿ ಪ್ರತಿರೋಧ ಒಡ್ಡುತ್ತದೆ. ಪ್ರತಿ ಬಾರಿಯೂ ಬೇರೆ ಬೇರೆಯದೇ ರೀತಿಯಲ್ಲಿ. ಮನುಷ್ಯ ಅಲ್ಲಿಯೂ ಹೋರಾಡುತ್ತಾನೆ. ಯಾರು ಗೆಲ್ಲುತ್ತಾರೆ ನೋಡೇಬಿಡೋಣ ಅನ್ನುವ ಜಿದ್ದಿಗಿಂತ ಅದರ ಅಗಾಧತೆಯನ್ನು ಪೂಜಿಸಿ ಅದರ ಹತ್ತಿರವೇ ರಕ್ಷಿಸು ಅಂತ ದೈನ್ಯವಾಗಿ ಬೇಡಿಕೊಂಡು ನಂತರ ಪ್ರಯತ್ನ ಮುಂದುವರೆಸಿದರೆ ಆ ಹೋರಾಟಕ್ಕೆ ಸಿಗುವ ಆಯಾಮವೇ ಬೇರೆ. ಪೊರೆವವಳು ಮಡಿಲಲ್ಲಿಟ್ಟು ತೂಗದೇ ಇರುವಳೇ? ಎಷ್ಟೆಂದರೂ ಪರಾವಲಂಬಿಗಳಲ್ಲವೇ ನಾವು! 


ಸೂಕ್ಷ್ಮ ಮನಸಿನವರಾದರೆ, ಮನಸ್ಸನ್ನು ಗಟ್ಟಿಮಾಡಿಕೊಂಡು ಓದಿ ನೋಡಿ. ಗಟ್ಟಿ ಮನಸ್ಸಿನವರಾಗಿದ್ದರೆ, ಅಂಥ ಗಟ್ಟಿತನವನ್ನು ಚೂರಾದರೂ ಅಲ್ಲಾಡಿಸಲಿಕ್ಕೆಂದೇ ಒಂದಷ್ಟು ಘಟನೆಗಳು ಪುಸ್ತಕದ ಒಳಗೆ ಕಾಯುತ್ತಿವೆ, ಅಗಾಧ ಹಿಮಶ್ರೇಣಿಗಳ ನಡುವೆ ಬದಲಾಗುತ್ತಲೇ ಇರುವ ಪ್ರತಿಕೂಲ ಹವಾಮಾನದ ಥರ! ಈ ಮುಖಾಮುಖಿ ಕೇವಲ ಕಾದಂಬರಿ ಹಾಗೂ ಓದುಗರದ್ದಲ್ಲ; ಈ ಬಾರಿ, ಬದುಕು ಮತ್ತು ಬದುಕಿನದ್ದು ಮಾತ್ರ... 


~`ಶ್ರೀ'

    ತಲಗೇರಿ

ಪುಟ್ಟ ಪಾದದ ಗುರುತಿಗೆ ಬರೀ ಎರಡು ರೆಕ್ಕೆ!


 


ಒಂದು ಬರೆಹ ಅಥವಾ ಸಿನೆಮಾ ಇಷ್ಟವಾಗುವುದಕ್ಕೆ ಹಲವು ಕಾರಣಗಳಿರಬಹುದು. ಯಾವುದೋ ಥರದ ಹೊಸ ಪ್ರಯತ್ನ ಮಾಡುವುದಕ್ಕೆ ಹೊರಟಿದ್ದಾರೆ, ಸಣ್ಣ ಪುಟ್ಟ ಹಿನ್ನೆಡೆಗಳಿದ್ದರೆ ಅವುಗಳನ್ನು ಮುನ್ನೆಲೆಗೆ ತರುವದು ಬೇಡ ಅಂದುಕೊಳ್ಳುತ್ತಲೇ ಇಷ್ಟವಾಗಬಹುದು ಅಥವಾ ಇದು ನನ್ನ ಪರಿಸರ, ನನ್ನ ಬದುಕಿಗೆ, ದೈನಂದಿನ ಸಂಗತಿಗಳಿಗೆ ಹೊಂದುತ್ತದೆ ಅನ್ನುವ ಕಾರಣದಿಂದ ಇಷ್ಟವಾಗಬಹುದು. ಅದರಲ್ಲಿ ಭಾವನಾತ್ಮಕವಾದ ಸನ್ನಿವೇಶಗಳಿವೆ, ಸಮಾಜಕ್ಕೆ ಉತ್ತಮ ಸಂದೇಶ ಕೊಡುತ್ತದೆ, ನಮ್ಮೊಳಗಿನ ಹುಳುಕುಗಳನ್ನು ಎತ್ತಿ ಹೇಳುತ್ತದೆ, ದಮನಿತರ ದನಿಯಂತೆ ಕಾಣುತ್ತದೆ, ಅದನ್ನು ಕಟ್ಟಿಕೊಟ್ಟ ರೀತಿ ಬೇರೆಯದೇ ಆಗಿದೆ ಇತ್ಯಾದಿ ಇತ್ಯಾದಿ ಅನೇಕಾನೇಕ ಕಾರಣಗಳು. ಆದರೆ ಇವೆಲ್ಲವುಗಳ ಜೊತೆಗೆ, ಸಿನೆಮಾ ನೋಡುವಾಗಲೋ ಪುಸ್ತಕ ಓದುವಾಗಲೋ ಇರುವ ಮನಸ್ಥಿತಿಯ ಆಧಾರದ ಮೇಲೂ ಅದು ನೀಡುವ ಅನುಭವ ಪ್ರತ್ಯೇಕತೆಯನ್ನು ಪಡೆದುಕೊಳ್ಳುತ್ತದೆ. ಅದೇನೇ ಇದ್ದರೂ ಮನುಷ್ಯನಿಗೆ ನಂಬಿಕೆಗಳು ಬೇಕು, ತನ್ನ ತತ್ವಗಳನ್ನು ಉದ್ದೀಪಿಸುವ ಸಂಗತಿಗಳು ಬೇಕು, ತನ್ನ ಯೋಚನಾ ಧಾರೆಗಳನ್ನು ಬೆಂಬಲಿಸುವ ಹಾಗೂ ಸಮರ್ಥಿಸುವ ದಾಖಲೆಗಳು ಬೇಕು. ಇದರಿಂದಾಗಿ ತಾನು ಇತರರ ನಂಬಿಕೆಗಳನ್ನು ತಿರಸ್ಕರಿಸುವಂತಾದರೆ ಅದು ಬೋನಸ್ ಇದ್ದ ಹಾಗೆ! "ಇವೆಲ್ಲವೂ ಸಹಜ ತುಡಿತಗಳು, ಇವುಗಳಿಂದ ಮುಕ್ತವಾಗಿದ್ದಲ್ಲಿ ನೀವು ಈ ಸಮಾಜದ ಭಾಗವೇ ಅಲ್ಲ, ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ನಿಮ್ಮಿಂದ ಸಾಸಿವೆಯಷ್ಟೂ ಉಪಯೋಗವಿಲ್ಲ" (ಎಳ್ಳನ್ನು ಖಾಲಿಮಾಡಿ ಸಾಸಿವೆ ಬಳಸಲಾಗಿದೆ!). ಇಂಥ ಒಂದು ಪರಿಸ್ಥಿತಿ ಇರುವಾಗ ಕೆಲವು ಕೃತಿಗಳು ಈ ಸಂಗತಿಗಳ‌ನ್ನಿಟ್ಟುಕೊಂಡೂ ಬೇರೆಯದಾಗಿ ನಿಲ್ಲುತ್ತವೆ. ಶ್ರೀಮತಿ ಸುನಂದಾ ಪ್ರಕಾಶ ಕಡಮೆಯವರ ಎರಡು ಕೃತಿಗಳ ಕುರಿತಾಗಿ ನಾನು ಇವತ್ತು ಹೇಳಹೊರಟಿದ್ದೇನೆ. ಒಂದು ಅವರ ಚೊಚ್ಚಲ‌ ಕಥಾ ಸಂಕಲನ 'ಪುಟ್ಟ ಪಾದದ ಗುರುತು' ಇನ್ನೊಂದು ಇವರ ಚೊಚ್ಚಲ ಕಾದಂಬರಿ 'ಬರೀ ಎರಡು ರೆಕ್ಕೆ' 


ಪುಟ್ಟ ಪಾದದ ಗುರುತು ಅನ್ನೋ ಕತೆಯನ್ನೇ ಪುಸ್ತಕದ ಶೀರ್ಷಿಕೆಯಾಗಿ ಮಾಡಿರುವ ಶ್ರೀಮತಿ ಸುನಂದಾ ಕಡಮೆಯವರ ಕೃತ್ಯಕ್ಕೆ ಆ ಶೀರ್ಷಿಕೆ ನ್ಯಾಯ ಒದಗಿಸುತ್ತದೆ. ಬಹುತೇಕ ಕಥೆಗಳು ಬಾಲ್ಯ, ಮಾತೃತ್ವ ಹಾಗೂ ಮಕ್ಕಳ ಕುರಿತಾದ ವಸ್ತುಗಳನ್ನು ಹೊಂದಿವೆ. ಆದರೆ ಬರೀ ಅಷ್ಟೇ ಇಲ್ಲ, ಅದರಾಚೆಗೂ ಬೇರೆ ಕತೆಗಳಿವೆ ಹಾಗೂ ಆ ಕತೆಗಳು ಅಷ್ಟೇ ಸೊಗಸಾಗಿವೆ ಕೂಡಾ. ಬದುಕಿನ ಬಹುತೇಕ ಸಂಗತಿಗಳು ವರ್ತಮಾನದಲ್ಲಿ 'ಎಲ್ಲವೂ' ಅಥವಾ 'ನಗಣ್ಯ' ಅಷ್ಟೇ ಆಗಿ ಕಾಣಬಹುದು. ಆದರೆ ಕಾಲಾಂತರದಲ್ಲಿ ಆ ಸಂಗತಿಗಳ ನೆನಪುಗಳು ಈ ಅಳತೆಗಳ ಮಿತಿಗಳಿಂದಾಚೆ ನಿಲ್ಲುತ್ತವೆ. ಗಣ್ಯ ನಗಣ್ಯಗಳ ಹಂಗು ತೊರೆದು ಬದುಕಿನ 'ಬದುಕಿದ ಕ್ಷಣ'ಗಳಾಗುತ್ತವೆ. ಅದರಲ್ಲೂ ಮೊದಲ ಸಂಕಲನವೆಂದಾಕ್ಷಣ ಅದನ್ನು 'ಜನ' ನೋಡುವ ರೀತಿ ಬೇರೆ. ( ಓದುಗರು ನೋಡುವ ರೀತಿ ಬೇರೆ ಅಂತ ಬಳಸಿಲ್ಲ!) ಆ ಲೇಖಕನಿಗೆ ಅಥವಾ ಆ ಲೇಖಕಿಗೆ ಹೀಗೆ ಬರೆಯಬಹುದಿತ್ತು ಅಥವಾ ಹಾಗೆ ಬರೆಯಬಹುದಿತ್ತು ಅನ್ನುವವರ ಬಳಗವೂ ದೊಡ್ಡದೇ ಆಗಿರುತ್ತದೆ ( ಅದು ತಪ್ಪು ಅಂತಲ್ಲ !). ಜೊತೆಗೆ ಇನ್ನ್ಯಾವುದೋ ಲೇಖಕ ಲೇಖಕಿಯರೊಂದಿಗೆ ಈ ಕೃತಿಯನ್ನಿಟ್ಟು ತುಲನೆ ಮಾಡುವುದು, ಇದು ಅವರ ಬರೆಹವನ್ನು ಹೋಲುತ್ತದೆ ಅನ್ನುವುದು ಇವೆಲ್ಲವೂ ಸಹಜವೇ; ಹಾಗೂ, ಈ 'ಹೋಲುವಿಕೆ'ಯನ್ನು ಮೀರುವುದಕ್ಕೇ ಕೆಲವೊಮ್ಮೆ ಬಹಳ ಕಷ್ಟಪಡಬೇಕಾಗುತ್ತದೆ. ಅದೆಷ್ಟೇ ಆದರೂ ಎಲ್ಲೋ ಒಂದು ಕಡೆ ಯಾವುದೋ ಸಾಲಿಂದಲೋ, ಯಾವುದೋ ಪುಸ್ತಕದಿಂದಲೋ, ಕಥಾ ವಸ್ತುವಿನಿಂದಲೋ, ಬರೆಹದ ಶೈಲಿಯಿಂದಲೋ ಪ್ರಭಾವಿತರಾಗುವುದು ತಪ್ಪುವುದಿಲ್ಲ ಹಾಗೂ ಅದು ತಪ್ಪಲ್ಲ ಕೂಡಾ! ಬದುಕಿನಿಂದ ಬರೆಹ ಹುಟ್ಟಬೇಕೆನ್ನುವುದು ಸತ್ಯವಾದರೂ ಆ ಬರೆಹದ ಹುಟ್ಟಿಗೆ ಕಾರಣವಾಗುವ ವಿಷಯಗಳು ಹಲವಾರು ಇರಬಹುದಲ್ಲಾ! ಹಾಗೂ ಪ್ರತಿ ಲೇಖಕರಿಗೂ ಅವರದ್ದೇ ಆದ ಮಿತಿಗಳಿವೆ; ಲೇಖಕಿಯರಿಗೆ ಮಿತಿಗಳ ಮೇಲೆ ಮಿತಿಗಳಿವೆ! ಈಗ ಇವೆಲ್ಲವುಗಳನ್ನು ಆಚೆಗಿಟ್ಟು ಒಂದು ಕೃತಿಯಾಗಿ ನೋಡಿದರೂ ಈ ಪುಸ್ತಕದ ಕತೆಗಳಲ್ಲಿ ಕಾಣುವುದು ಅಪ್ಪಟ ಮುಗ್ಧತೆ, ಕರುಣೆ, ಆರ್ದ್ರತೆ. ಕತೆಯ ಪಾತ್ರ ಪ್ರಾರ್ಥಿಸಿದಾಗ ನಾವು ಪ್ರಾರ್ಥಿಸುತ್ತಾ, ಕತೆಯ ಪಾತ್ರ ಉಪ್ಪಿನ ಕಾಯಿಯ ಬಾಟಲಿಯನ್ನು ತೆಗೆಯಲು ಪ್ರಯತ್ನಿಸುವಾಗ ನಾನೂ ಒಂದು ಕೈ ನೋಡೇಬಿಡೋಣ ಅಂತ ಓದುಗ ನೆನೆಯುವುದು, ಖಾಯಂ ಗಿರಾಕಿಗಳ ಹತ್ರ ಕೆಲವೊಂದಕ್ಕೆ ದುಡ್ಡು ತೆಗೆದುಕೊಳ್ಳದೇ 'ಎಕ್ಸ್ಟ್ರಾ' ಕೊಡುವ ವ್ಯಾಪಾರಸ್ಥರು, ಸರ್ಕಾರದ ಯಾವುದೋ ಯೋಜನೆ ಬಂತೆಂದು ಮನೆ ಜಮೀನನ್ನು ಬಿಟ್ಟುಕೊಡಲೇಬೇಕಾದ ಸ್ಥಿತಿ ತಲುಪುವ ನಾಗರಿಕರು, ಅಥವಾ ಹೇಳಿಕೊಳ್ಳದ ಹಳೆಯ ಪ್ರೇಮದ ನವಿರು ನೆನಪು ಹೀಗೆ ಇಂಥ ಸಂಗತಿಗಳು ನಿತ್ಯವೂ ಕಾಣುವ ಕೇಳುವ ಅನುಭವಿಸುವಂಥವುಗಳು. ಚಾದರ ಹಾಗೂ ಹುಲಿಯನ್ನು ಒಳಗೊಂಡ ಒಂದು ಸನ್ನಿವೇಶವಂತೂ 'ಆಹ್ಞ್, ಅದೆಷ್ಟ್ ಚೆಂದ' ಅಂತನ್ನಿಸದೇ ಹೋಗುವುದಿಲ್ಲ. ಕೆಲವೊಂದು ಕತೆಗಳ ಅಂತ್ಯ ಒಂದಷ್ಟು ಫ್ಯಾಂಟಸಿ ಶೈಲಿಯಲ್ಲಿರುವುದು ನನಗೆ ಅಷ್ಟೇನು ಹಿಡಿಸದಿದ್ದರೂ ಕತೆಗಳ‌ ಉದ್ದೇಶಕ್ಕೆ ಅವು ಜಾಸ್ತಿ‌ ಮೋಸ ಮಾಡಿದ ಹಾಗೇನೂ ಆಗಿಲ್ಲ. 


ಹೆಣ್ಣಿನ ಲೋಕವನ್ನು ಲೇಖಕಿ ಕಟ್ಟಿಕೊಡುವ ರೀತಿ ಚೆಂದ. ಗಂಡು ಬರೆವ ಸಾಹಿತ್ಯದಲ್ಲಿ ಹೆಣ್ತನದ ಸೂಕ್ಷ್ಮಗಳು ಬರುವುದಾದರೂ ಹೇಗೆ? ಅದಕ್ಕೆ ಲೇಖಕಿಯರೇ ಆಗಬೇಕು! ಇದಕ್ಕೊಂದು ಚೆಂದದ ಉದಾಹರಣೆಯೆಂದರೆ 'ಬರೀ ಎರಡು ರೆಕ್ಕೆ'ಯಲ್ಲಿ ಪೊಲಕಿನ(ಬ್ಲೌಸ್) ಕುರಿತಾಗಿ‌ ಒಂದು ಸಣ್ಣ ಮಾತುಕತೆ ಬರುತ್ತದೆ; ಅದರಲ್ಲಿನ ಸಹಜತೆ ಮತ್ತು ಕಚಗುಳಿಯಂಥ ತುಂಟತನ. ಅದಕ್ಕಾಗಿಯೇ ಹೆಣ್ಣು ಕಟ್ಟಿಕೊಡುವ ಹೆಣ್ತನದ ನವಿರು ಭಾವಗಳು ಮುಖ್ಯ ವೇದಿಕೆಗೆ ಬರಬೇಕು. ಅದಕ್ಕಾಗಿಯಾದರೂ ಲೇಖಕಿಯರು ಗಂಡು ಹಾಕಿಟ್ಟ ಸಾಹಿತ್ಯದ ಚೌಕಟ್ಟುಗಳಾಚೆ ಇಣುಕಬೇಕಾಗಿರುವುದು ತುರ್ತು ಕೂಡಾ ಹೌದು. ಶ್ರೀಮತಿ ಸುನಂದಾ ಕಡಮೆಯವರು ಒಂದು ಸಂದರ್ಶನದಲ್ಲಿ ಹೇಳಿದ್ದಾರೆ; ಲೇಖಕಿಯರಿಗೆ ಎಷ್ಟೆಲ್ಲಾ ಕಟ್ಟುಪಾಡುಗಳಿದ್ದವು ಅವರು ಬರೆವಣಿಗೆ ಶುರುಮಾಡಿದ ಸಮಯದಲ್ಲಿ, ಮುಂದೊಂದು ದಿನ ಮುಕ್ತವಾಗಿ ಬರೆಯುವಂಥ ವಾತಾವರಣ ಸೃಷ್ಟಿಯಾದೀತೇನೋ ಎಂದು. ನಾವಿನ್ನೂ ಆ ಮುಕ್ತತೆಯ ಹಾಗೂ ಬದಲಾವಣೆಯ ಹೊಸ್ತಿಲಲ್ಲೇ ಇದ್ದೇವಾ; ಗೊತ್ತಿಲ್ಲ! ಆದರೆ, ಕೆಲವು ಲೇಖಕಿಯರು ಇಂಥ ಪ್ರಯತ್ನಗಳನ್ನು ಮಾಡ್ತಿರೋದು ಸಂಭ್ರಮದ ಸಂಗತಿಗಿಂತ ಚೂರೇ ಚೂರು ಕೂಡಾ ಕಡಿಮೆಯಲ್ಲ. 


ಶ್ರೀಮತಿ ಸುನಂದಾ ಅವರ ಊರು ಉತ್ತರ ಕನ್ನಡದ ಅಲಗೇರಿ, ನನ್ನ ಊರು ಅದೇ ಉತ್ತರ ಕನ್ನಡದ ತಲಗೇರಿ. ಅವರ 'ಬರೀ ಎರಡು ರೆಕ್ಕೆ'ಯಲ್ಲಿ ಬರುವ ಒಂದು ಊರಿನ ಹೆಸರು ಹಟ್ಟಿಕೇರಿ; ನನ್ನೂರಿನ ಪಕ್ಕದ ಊರ ಹೆಸರೂ ಹಟ್ಟಿಕೇರಿ. ಅವರ ಈ ಕಾದಂಬರಿಯಲ್ಲಿ ಇರುವ ಸಂಭಾಷಣೆಗಳಲ್ಲಿ ಆಗಾಗ ಹಾಲಕ್ಕಿ ಒಕ್ಕಲಿಗರ ಮಾತುಗಳು ಬರುತ್ತವೆ. ನಮ್ಮ ಮನೆ ಇರೋದು ಕೂಡಾ ಈ ಹಾಲಕ್ಕಿ ಸಮಾಜದ ಕೊಪ್ಪದಲ್ಲಿ. ಹಾಗಾಗಿ ಈ ಕತೆಯಂತೂ ನನಗೆ ನನ್ನೂರನ್ನು ತಂದು ಎದುರಿಗಿಟ್ಟಂತೆ ಕಂಡಿದ್ದರಲ್ಲಿ ಯಾವ ಅನುಮಾನವೂ ಇಲ್ಲ. ಹಾಲಕ್ಕಿ ಹೆಂಗಸರು ಯಾವತ್ತೂ ಗಟ್ಟಿಗರು. ಗಂಡಸಿಗೆ ಸರಿಸಮನಾಗಿ ಕೆಲಸ ಮಾಡುವವರು. ಹಾಗಿದ್ದರೂ ಸಂಜೆ ಗಂಡ ಕುಡಿದು ಬಂದಾಗ ಅವನಿಂದ ಹೊಡೆತ ತಿನ್ನುತ್ತಿದ್ದರು. ಕುಡಿದ ವ್ಯಕ್ತಿ ತಾನಾಗಿ ನಿಂತುಕೊಳ್ಳೋದಕ್ಕೇ ಆಗೋದಿಲ್ಲ, ಅಂಥವನ ಕೈಲಿ ಇಷ್ಟು ಗಟ್ಟಿಗಿತ್ತಿಯರು ಯಾಕೆ ಒದೆ ತಿನ್ನುತ್ತಾರೆ; ಯಾಕೆ ತಿರುಗಿ ನಾಲ್ಕು ಬಾರಿಸೋದಿಲ್ಲ ಅನ್ನುವ ಪ್ರಶ್ನೆ ನನ್ನನ್ನು ಮುಂಚೆಯೂ ಕಾಡಿತ್ತು; ಈಗಲೂ ಪ್ರಶ್ನೆ ಇದೆ ಅಲ್ಪ ಸ್ವಲ್ಪ ಸಮಾಧಾನಕರ ಉತ್ತರಗಳೊಂದಿಗೆ. ಮೊದಲನೆಯದಾಗಿ ಗಂಡನೇ ದೇವರು, ಎಷ್ಟಿದ್ದರೂ ಗಂಡ ಅನ್ನುವ ಒಂದು ಗೌರವ ಭಾವ, ಇನ್ನೊಂದು ರಾತ್ರಿ ಗಂಡ ಕುಡಿದಿದ್ದಾಗ ಹೊಡೆದುಬಿಡಬಹುದು, ಆಮೇಲೆ ಬೆಳಿಗ್ಗೆ ಕುಡಿತದ ನಶೆ ಇಳಿದಾಗ ಗಂಡಸು ಏನಿದ್ದರೂ ಗಂಡಸೇ ಅಲ್ಲವೇ ಅನ್ನುವ ಭಯವೂ ಇರಬಹುದು. ಆದರೂ, ಅವರು ಮನಸ್ಸು ಮಾಡಿದರೆ ಏನೆಲ್ಲವನ್ನು ಮಾಡಬಹುದು. 


ಮೊದಲೇ ಹೇಳಿದ ಹಾಗೆ, ಎಲ್ಲಾ ವ್ಯಕ್ತಿಗಳಿಗೂ ಅವರವರದ್ದೇ ಆದ ತತ್ವ ಸಿದ್ಧಾಂತಗಳಿರುತ್ತವೆ. ಕತೆ ಹೇಳುವವರು ತಮ್ಮ ವೈಯಕ್ತಿಕ ಸಿದ್ಧಾಂತಗಳನ್ನು ಕತೆಯಲ್ಲಿಡದೆಯೇ ಕತೆಯ ಅಗತ್ಯವನ್ನಷ್ಟೇ ಪೂರೈಸಬೇಕು ಅನ್ನುವುದು ಒಂದು ನಿಯಮ. ಬರೆಹಗಾರ ಎಲ್ಲ ಸಲವೂ ಸಮಾಜವನ್ನು ತಿದ್ದುವುದಕ್ಕೆ ಹೋಗಬೇಕು ಅಂತೇನಿಲ್ಲ ಅನ್ನುವುದು ಕೆಲವು ಸಾಹಿತಿಗಳ ಮಾತಾದರೆ, ಸಮಾಜದ ದನಿಯಾಗದ ಸಾಹಿತ್ಯ ಇದ್ದೇನು ಪ್ರಯೋಜನ ಅನ್ನುವುದು ಹಲವರ ಅಭಿಪ್ರಾಯ. ಅದೇನೇ ಇದ್ದರೂ, ವಾಚ್ಯವಾಗದೇ ಸೂಚ್ಯವಾದರೆ ಮಾತ್ರ ಬರೆಹಕ್ಕೊಂದು ನಾಜೂಕುತನ ಬರುವುದಕ್ಕೆ ಸಾಧ್ಯ. ಬರೆಹ ಯಾಕೆ ನಾಜೂಕಾಗಬೇಕು ಅನ್ನುವ ಪ್ರಶ್ನೆ ಇದಿರಾದರೆ, ನಾಜೂಕಿಗೆ ಒಂದು ಸೂಕ್ಷ್ಮತೆಯಿದೆ; ಆ ಸೂಕ್ಷ್ಮತೆ ಸಾಹಿತ್ಯಕ್ಕೆ ಬೇಕು ಅಂದರೆ ತಪ್ಪಲ್ಲ‌ ಅಲ್ಲವಾ? 'ಬರೀ ಎರಡು ರೆಕ್ಕೆ'ಯಲ್ಲಿರುವುದು ಇಂಥ ನಾಜೂಕುತನ. ಇಲ್ಲಿ ಉತ್ತರ ಕನ್ನಡದ ಸಾಮಾಜಿಕ ವ್ಯವಸ್ಥೆಯ ಚಿತ್ರಣವನ್ನು ಅತ್ಯಂತ ಪ್ರಾಮಾಣಿಕವಾಗಿ, ಯಾವ ಪೂರ್ವಗ್ರಹವೂ ಇಲ್ಲದೇ ಕಟ್ಟಿಕೊಡಲಾಗಿದೆ. ಹಾಗಂತ ಇದು ಯಾರ ದನಿಯೂ ಆಗಿಲ್ಲವಾ ಅಂದರೆ, ಅತಿರೇಕಗಳಿಲ್ಲದೇ ನಾಟಕೀಯ ಪ್ರಲೋಭಗಳಿಲ್ಲದೆಯೂ ದನಿಯಾಗಬಹುದು ಅನ್ನುವುದು ಈ ಕಾದಂಬರಿಯ ಮೂಲಕ ಕಣ್ಣ ಮುಂದಿದೆಯಲ್ಲಾ! ಮದುವೆ ಬೇಡ ಬೇಡ ಅನ್ನುತ್ತ ದಿಟ್ಟವಾಗಿ ಮಾತನಾಡಿ ಕೊನೆಗೆ ಆ ಕಾಲಕ್ಕೆ ಅತ್ಯಂತ ಆಧುನಿಕ ಜೀವನಶೈಲಿಯನ್ನು ರೂಪಿಸಿಕೊಳ್ಳುವ ಹುಡುಗಿಯೂ, ಮೌನವನ್ನೇ ತನ್ನ ಪ್ರತಿಭಟನೆಯ ದನಿಯಾಗಿಸಿಕೊಂಡು ಅಸಹಾಯಕತೆಯಿಂದಲೇ ಸಂಸಾರದ ಸಮತೋಲನ ಕಾಯ್ದುಕೊಳ್ಳಲು ಹೆಣಗುವ ಪಾತ್ರವೂ ಒಂದೇ ಮುಖದ ಎರಡು ಪ್ರತಿಬಿಂಬಗಳಂತೆ ಕಂಡರೆ ಅದು ಅಸಹಜವೇನಲ್ಲ ಅಂತನಿಸುತ್ತದೆ ನನಗೆ. ಈ ಕಾದಂಬರಿಯಲ್ಲಿ ಬಹುತೇಕ ಎಲ್ಲರಿಗೂ ತಮ್ಮ‌‌ ದೈನಿಕ ತೊಳಲಾಟಗಳಿಂದ ಬಿಡುಗಡೆ ಸಿಗುತ್ತದೆ. ನಿತ್ಯದ ನೆಲ ಬಿಟ್ಟು ಹಾರಲು ರೆಕ್ಕೆ ಸಿಗುತ್ತದೆ. 


ಈ ಕಾದಂಬರಿಯಲ್ಲಿ ಬಳಸಿದ ಭಾಷೆಯ ಕುರಿತಾಗಿ ಲೇಖಕಿ‌ ಒಂದು ಕಡೆ ಹೇಳಿಕೊಂಡಿದ್ದಾರೆ;"ಭಾಷೆಯು ಆಯಾ ಜನಾಂಗದ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಯಾವುದೇ ಒಂದು ಪ್ರಾದೇಶಿಕ ಭಾಷೆಗೆ ಆ ನೆಲದ ಸೊಗಡು ಇರುತ್ತದೆ". ಉತ್ತರ ಕನ್ನಡದ ಸ್ಥಳೀಯ ಪದಗಳನ್ನು, ಗ್ರಾಮ್ಯ ಪದಗಳನ್ನು ಕಾದಂಬರಿಯಲ್ಲಿ ಬೇಕಾದಷ್ಟು ಬಳಸಲಾಗಿದೆ. ಒಂದು ಜಾಗದ ಸಂಸ್ಕೃತಿಯ ಸೊಗಡನ್ನು ಮನಸಾರೆ ಅನುಭವಿಸಬೇಕಾದರೆ ಅಲ್ಲಿನ ಭಾಷೆಯನ್ನು ಅರಿತುಕೊಳ್ಳುವುದು ಕೂಡಾ ಬಹಳ ಮುಖ್ಯ ಅಲ್ಲವಾ? ಹಾಗೂ ಒಂದು ಪ್ರಾದೇಶಿಕ ಭಾಷೆ ಪುಸ್ತಕದಲ್ಲಿ ದಾಖಲಾಗುವುದು ಕೂಡಾ ಅಷ್ಟೇ ಮುಖ್ಯ. ಪ್ರತಿ ಸಂಭಾಷಣೆಗೂ ಆ ಪ್ರದೇಶದ ಸಾಮಾಜಿಕ ಸಂಗತಿಯನ್ನು ಬಿಚ್ಚಿಡುವ ಸಾಮರ್ಥ್ಯ ಸಿಗೋದು ಸ್ಥಳೀಯ ಪದಗಳನ್ನು ಬಳಸಿಕೊಂಡಾಗಲೇ. ಅದಕ್ಕಾಗಿಯೇ ಕೆಲವೊಮ್ಮೆ ಸಾಹಿತ್ಯ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದಗೊಂಡಾಗ ತನ್ನ ಮೂಲ ಸೌಂದರ್ಯವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗುವುದು. 


ಪುಸ್ತಕದ‌ ಕುರಿತಾಗಿ, ಕತೆಯ ಕುರಿತಾಗಿ ಹೇಳಬಹುದು ಅಂತ ಅಂದುಕೊಂಡು ನೀವಿದನ್ನು ಓದಲು ಶುರು ಮಾಡಿ, ಈಗ ಅದನ್ನು ಬಿಟ್ಟು ಉಳಿದೆಲ್ಲವೂ ಇದೆ ಅಂತನ್ನಿಸಿದರೆ ಅದು ಪ್ರಜ್ಞಾಪೂರ್ವಕ ಕೃತ್ಯ ಅಂತಲೇ ಅಂದುಕೊಳ್ಳಬೇಕಾಗಿ ವಿನಂತಿ. ಈ ಎರಡೂ ಪುಸ್ತಕಗಳನ್ನು ತಪ್ಪದೇ ಓದಿ ಅನ್ನುವುದು ಸ್ಪಷ್ಟ‌ ಹಾಗೂ ನೇರ ಕೋರಿಕೆ. 


- 'ಶ್ರೀ' 

   ತಲಗೇರಿ