ಸೋಮವಾರ, ಸೆಪ್ಟೆಂಬರ್ 19, 2016

"ಹೌದು, ಗಡಿಯಾರಗಳು ಮಾತನಾಡುತ್ತವೆ"...

                    

     ಇಷ್ಟಿಷ್ಟೇ ಮಾತನ್ನು ತಡೆತಡೆದು ಹೇಳಬಹುದೇ, ಅಷ್ಟೇನೂ ಗಮನಿಸದೆ ವಾಕ್ಯಗಳ ತಿದ್ದದೇನೆ.. ಪಾರಿಜಾತದ ನಗೆಯ ನಿನ್ನ ಕಂಗಳ ಕುಡಿಯ ಮೇಲುದುರಿದ ಇಬ್ಬನಿಯ ಕತೆಗಳನು ಹೆಕ್ಕಿ ಹೆಕ್ಕಿ ತಂದು ನಾ ಬರೆಯಲೇನು.. ಪರಿಚಯದ ಪುರವಣಿಯ ಗರಿಗರಿಯ ಹಾಳೆಗಳ ಎದೆಯೊಳಗೆ ಬೆಚ್ಚಗೆ ನಿನ್ನನ್ನು ಇರಿಸಲೇನು.. ನಾ ಒರಗಲೇನು ಹಾಗೇ ತಬ್ಬಿಕೊಂಡು.. ನೆನಪುಗಳನು ಮುದ್ದಾಗಿ ಹೊದ್ದುಕೊಂಡು...ಹೌದಂತೆ ಗೆಳತೀ.. ಈ ನೆನಪುಗಳಿಗೂ ಮತ್ತು ಕನಸುಗಳಿಗೂ ಒಂದೇ ರೂಪವಂತೆ.. ಸುರುಳಿ ಸುರುಳಿ ಮೆದುಳಿನಲಿ ಅಲ್ಲಲ್ಲಿ ಅಂಟಿ ಕೂತ ಇಬ್ಬರದೂ ಒಂದೇ ಗಮಕವಂತೆ.. ನುಸುಳಿಬರುವ ಪದಗಳಲ್ಲಿ ಪಲುಕು ಮಾತ್ರ ಬೇರೆಯಂತೆ!.. ಎಲ್ಲಕ್ಕೂ ಮೂಲ ಕಾಲವಂತೆ...

     ತುಂಬಾನೇ ವಿಚಿತ್ರ ಕಣೇ ಹುಡುಗಿ.. ಬದಲಾವಣೆಯನೇ ಕಾಲವೆಂದರೋ ಇಲ್ಲಾ, ಕಾಲವನೇ ಬದಲಾವಣೆಯೆಂದರೋ.... ಅಲ್ಲಿ ಇಲ್ಲಿ ಅದಲು ಬದಲೋ ಅಥವಾ ಒಂದೇ ತೊಗಲೋ.. ಗಟ್ಟಿ ಬಿಗಿದ ಮಾಂಸಖಂಡ ಹವೆಯ ಹಟದಲಿ, ಜೋತುಬೀಳೋ ತನಕ ತಿಕ್ಕಿಕೊಂಡ ‘ನಾನೂ’ ಕೂಡ ಹದಕೆ ಬರುವ ಹರಿವಿಗೆಂದೂ ತುಂಬು ಪ್ರಾಯವೇ?.. ಅಲ್ಲೂ ಎಳೆಯ ಮಧ್ಯ ಮುಪ್ಪುಗಳ ನ್ಯಾಯವೇ!.. ಅನುಕ್ರಮದ ಸರಣಿಯಲ್ಲಿ ಕಾಲವೆಂಬುದು ಭ್ರಮೆಯೇ.. ಅಥವಾ ತೀರಲಾರದ ಉಪಮೆಯೇ!.. ಒಂದಷ್ಟು ಕಿಸೆಗಳನು ಹೊಲಿದುಕೊಡು ಮಾರಾಯ್ತೀ, ನೆನಪುಗಳನು ಜೋಪಾನವಾಗಿ ಇಟ್ಟುಕೊಳ್ಳುತ್ತೇನೆ ಎದೆಗೆ ತುಂಬ ಹತ್ತಿರದಲ್ಲಿ... ತೇಪೆ ಹಚ್ಚಿದ ಎದೆಯೊಳಗೆ ತಡವಿಕೊಂಡಂತೆಲ್ಲಾ.., ಎಂದೋ ಮಾಸಿದ ನುಣುಪು, ಮೊನ್ನೆಯಷ್ಟೇ ಹೊಲಿದುಕೊಂಡ ಹಸಿ ಹುರುಪು, ಜೊತೆ ಜೊತೆಗೇ ಅರ್ಧರ್ಧ ಬಿಟ್ಟ ದಾರದ ಸೋಂಕು.. ಇರಲಿಬಿಡು, ನೆನಪುಗಳಲಾದರೂ ನೀನು ಪಾಲುದಾರಳಾದೆಯಲ್ಲ!.. ನೇರಳೆ ಮರದ ನೆರಳ ಕೆಳಗೆ ನವಿಲುಗರಿ ತಂದು ಬಣ್ಣಗಳ  ಬೇರ್ಪಡಿಸು ಎಂದಿದ್ದೆಯಲ್ಲ.. ಕಾಲುದಾರಿಯ ಬೇಲಿತುದಿಗೆ ಅಡಗಿಕೊಂಡ ಮೊಗ್ಗ ತಂದು ಹೆರಳ ಸಲಿಗೆಯ ಕೇಳಿಕೊಂಡ ನನಗೆ ಪೂರ್ತಿ ಹಕ್ಕು ಕೊಟ್ಟ ಮೇಲೂ, ಬಾಡಲಿಲ್ಲ ಮೊಗ್ಗು.. ಅರಳಿಕೊಂತು ಬಿಸಿಲು ಬಿದ್ದ ಹಾಗೆ..! ಅಂದು ಒಮ್ಮೆ ಕೆಸರಿನಲ್ಲಿ ಹೆಸರ ಬರೆದು ಕೆನ್ನೆಗೊಂದು ಬೊಟ್ಟು ಇಟ್ಟ ಮೇಲೆ ಸ್ಪರ್ಶಕೊಂದು ಅರ್ಥ ಬಂದಿತ್ತು..

     ಆಗಾಗ ಹಲುಬುತ್ತೇನೆ ಹುಡುಗೀ.. ಒಮ್ಮೆ ಜೋರಾದ ಮಳೆಯಲ್ಲಿ ತುಂಬಾನೇ ನೆನೆಯಬೇಕು.. ನಿನಗೆಂದೇ ನಾ ಹಚ್ಚಿಕೊಂಡ ಬಣ್ಣಗಳೆಲ್ಲಾ ತೊಳೆದುಹೋಗಿ ಖಾಲಿಯೆಂಬ(?) ನಾನುಳಿಯಬೇಕು.. ಬೆರಕೆ ಬಣ್ಣಗಳು ನೀರಿನಲಿ ಅದೆಷ್ಟು ಚಿತ್ರ ಬಿಡಿಸುವವೋ, ನಾ ಕಾದು ನೋಡಬೇಕು.. ಬೇಡ, ಬೇಡ.. ಮಳೆ ಬರುವುದೇ ಬೇಡ.. ನಿನಗೆಂದೇ ನಾ ಒಣಗಿಸಿಟ್ಟ ನಿನ್ನದೇ ಚಹರೆಗಳವು ಗೆಳತೀ.. ಹೇಳಿದೆನಲ್ಲ, ಮತ್ತೊಂದು ಮಗ್ಗುಲಲ್ಲಿ ಕನಸುಗಳಿವೆ.. ನನ್ನತನವ ಅಡವಿಡಬೇಕಿಲ್ಲವಂತೆ ಕನಸು ಕಾಣೋದಿಕ್ಕೆ.. ನೆನಪುಗಳೇ ಕನಸುಗಳೆಂದು, ಕನಸುಗಳೇ ನೆನಪುಗಳೆಂದು ಬಿಕರಿಗಿಡುತ್ತೇನೆ.. ದರ ಮಾತ್ರ ಕೇಳಬೇಡ; ಇದು ಮನಸಿನ ವ್ಯಾಪಾರ.. ! ಇನ್ನೊಂದಿಷ್ಟು ದಿನದಲ್ಲಿ ಹೊಸ ಒಪ್ಪಂದ ಶುರುವಾಗಬಹುದು.. ಮತ್ತ್ಯಾವುದೋ ಲೇಖನಿ ಇನ್ನೊಂದು ಶೀರ್ಷಿಕೆಯ ಬರೆಯಬಹುದು.. ನಾನು ಕೇಳಿಸಿಕೊಳ್ಳುತ್ತೇನೆ; ಹೌದು, ಇನ್ನು ಮುಂದೆ ಗಡಿಯಾರಗಳು ಮಾತನಾಡುತ್ತವೆ...


~‘ಶ್ರೀ’
  ತಲಗೇರಿ 

ಶನಿವಾರ, ಸೆಪ್ಟೆಂಬರ್ 17, 2016

‘ಅನ್ವೇಷಣ’ದ ಹಾದಿಯಲ್ಲಿ...

                 


     ಈ ಹುಡುಕಾಟ ಎನ್ನುವುದು ಹೇಗೆ ಮತ್ತು ಯಾಕೆ ಹುಟ್ಟಿಕೊಳ್ಳುತ್ತದೆ ಅನ್ನುವುದು ಒಂಥರಾ ವಿಸ್ಮಯ.. ಯಾರೂ ಇದರಿಂದ ಹೊರತಾಗಿಲ್ಲ; ಈ ಹುಡುಕಾಟವನ್ನೇ ವಸ್ತುವಾಗಿಸಿಕೊಂಡು ಶ್ರೀ ಎಸ್ ಎಲ್ ಭೈರಪ್ಪನವರು ಬರೆದಂಥ ಕಾದಂಬರಿ ‘ಅನ್ವೇಷಣ’. ಪಾತ್ರಗಳ ಗಟ್ಟಿತನ, ಕತೆಯ ಓಘ ಇತ್ಯಾದಿಗಳ ಬಗ್ಗೆ ಹೇಳಿ ವಿಮರ್ಶಾತ್ಮಕ ಓದುಗನಾಗುವುದಕ್ಕಿಂತ, ಅದರ ಸೌಂದರ್ಯವನ್ನು ಹಾಗೇ ಎದೆಗೆ ತುಂಬಿಕೊಂಡು ರಸಾಸ್ವಾದಕನಾಗುವುದೇ ಆಪ್ಯಾಯಮಾನ ಎನಿಸಿತು.‘ಅನ್ವೇಷಣ’ದ ಹಾದಿಯಲ್ಲಿ ನಾನು ಕಂಡ ನೆರಳು ಬೆಳಕುಗಳ ಸಂಯೋಜನೆಯನ್ನು ತಮ್ಮ ಮುಂದೆ ಈಗ ಹೀಗೆ ಹರಡುತ್ತಿದ್ದೇನೆ...

     ವ್ಯಕ್ತಿತ್ವಕ್ಕನುಗುಣವಾಗಿ ಆಲೋಚನೆ, ನಿರ್ಧಾರ, ಕೆಲಸಗಳ ಸರಣಿಯಲ್ಲಿ ಏರುಪೇರಾಗುತ್ತದೆ; ಅನುಕ್ರಮವಾಗೇ ಜರುಗಬೇಕೆಂದೇನಿಲ್ಲ.. ಇದು ಊಟ ಮಾಡುವಾಗ ಹಾಕಿಸಿಕೊಳ್ಳುವ ಪದಾರ್ಥಗಳಂತೆ!.. ಒಂದು ವಿಷಯ ಹೊರಗಿನಿಂದ ನೋಡುವವರಿಗೆ ಬೇರೆಯದಾಗಿಯೇ ಕಾಣಬಹುದು. ಆದರೆ, ಅದರಲ್ಲಿನ ತಿರುಳು ಇನ್ನೇನೋ ಆಗಿರಬಹುದು. ಅಂತೆಯೇ ಸಂಬಂಧಗಳು; ಹೊರಗಿನಿಂದ ಒಂದು ಹೆಣ್ಣು ಗಂಡಿನ ಸಂಬಂದ್ಘಕ್ಕೆ ಕಲ್ಪನೆಯ ರೆಕ್ಕೆ ಕೊಟ್ಟು, ಅದನ್ನು ಎಷ್ಟು ಕೆಳ ಮಟ್ಟಕ್ಕಾದರೂ ಇಳಿಸಬಹುದು ( ಇಳಿಸುತ್ತೇವೆಂಬುದೂ ಭ್ರಮೆಯೇ?! ).. ಆದರೆ ಆ ಸಂಬಂಧದ ಒಳ, ತಾಯಿ ಮಕ್ಕಳಷ್ಟು ಪವಿತ್ರವೂ ಆಗಿರಬಹುದು. ನಮ್ಮವರು ಎಂದುಕೊಡವರ ಬಗೆಗಿನ ಯೋಚನೆಗಳ ವರ್ತುಲದಲ್ಲಿ ಅವರ ಬಗೆಗೆ ಒಂದಷ್ಟು ಚಿತ್ರಗಳು ಗಾಢವಾಗಿ ಅಚ್ಚೊತ್ತಿಕೊಂಡಿರುತ್ತವೆ; ಅದು ಎಂಥಹುದೇ ಸ್ಥಿತಿಯಲ್ಲಿ ನಾವಿದ್ದರೂ!.. ಮನುಷ್ಯ ಸಂಬಂಧಗಳ ಕುರಿತಾಗಿ ಹೇಳುತ್ತಾ, ಒಂದು ಕಡೆ, ದಾರಿಯಲ್ಲಿ ನಡೆದುಹೋಗುವ ಪಾತ್ರವೊಂದನ್ನು ಮಾತನಾಡಿಸುವ ಜನರ ಮೂಲಕ ಅಂದಿನ ಹಳ್ಳಿಯ ಜೀವನಶೈಲಿಗೂ, ಇಂದಿನ ನಮ್ಮ ಜೀವನಶೈಲಿಗೂ ಇರುವ ವ್ಯತ್ಯಾಸವನ್ನು ಥಟ್ಟನೆ ನಮ್ಮೆದುರಿಗೆ ತಂದು ನಿಲ್ಲಿಸುತ್ತಾರೆ.

     ಸಾವಿರಾರು ಜನ ಓಡಾಡೋ ದಾರಿಯಲ್ಲಿ ಗರಿಕೆಯೂ ಬೆಳೆಯೋದಿಲ್ಲ. ಆದರೆ ಆ ದಾರಿಗೂ ‘ತನ್ನವರದ್ದು’ ಅನ್ನುವ ಹೆಜ್ಜೆಗಳು ಶಾಶ್ವತವಾಗಿ ಉಳಿಯಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ ಆ ದಾರಿಯ ಧ್ವನಿ ಯಾರಿಗೂ ಕೇಳುವುದಿಲ್ಲ. ಎಲ್ಲೋ ಒಂದು ಚಿಗುರು ಕಾಣಿಸಿಕೊಳ್ಳಲಿ ಅಥವಾ ಉಳಿದುಹೋಗಲಿ ಅನ್ನುವಾಗ ಸಂಬಂಧದ ಬೇರುಗಳ ಗಟ್ಟಿತನ ಪ್ರಶ್ನೆಯಾಗುತ್ತದೆ. ಅಸಹಾಯಕ ದಾರಿಯ ಮೌನವು ಕಣ್ಣನ್ನು ತೇವವಾಗಿಸುತ್ತದೆ. ನೆನಪುಗಳು ಅದೆಷ್ಟು ಕೊಲ್ಲುತ್ತವೆ ; ಆದರೆ ಭಯವನ್ನು ಮೀರಿದವನು ಸಾವಿಗೆ ಹೆದರುವುದಿಲ್ಲ.. ಯಾವಾಗಲೂ ಕೇವಲ ದುಡ್ಡು ಕೊಟ್ಟು ತಂದ ವಸ್ತುವಿನಲ್ಲಿ ಋಣದ ಭಾರ ಕಡಿಮೆ ಅನ್ನುತ್ತಾ, ಅದು ಪ್ರೀತಿಗೆ ಅಂಟಿಕೊಳ್ಳುವುದು ಕೂಡಾ ಕಡಿಮೆಯೆಂದು ಶ್ರೀಯುತರು ಹೇಳಿದ್ದಾರೆ.

     ಒಂದು ಕಡೆ ಓದುವ ಮನಸ್ಸು (ಕರ್ತವ್ಯ), ಬಣ್ಣದ ಬದುಕಿನ ಸೆಳೆತ (ನಾವು ಹಾಕುವ ಸೋಗು), ಅಮ್ಮನನ್ನು ಹುಡುಕುತ್ತಾ ಅಲೆಯುವಿಕೆ (ನಮ್ಮೊಳಗಿನ ಮಗುತನ), ಹುತ್ತದೊಳಗೆ ಕೈಯಿಡುವಿಕೆ, ರೈಲುಹಳಿಗಳಲ್ಲಿ ನಡೆಯುವುದು (ಭಂಡತನ), ಆಗಾಗ ಅಳುವ ಹುಡುಗ (ಎಲ್ಲವನ್ನೂ ಕಳೆದುಕೊಳ್ಳುವ ಹತಾಶ ಭಾವ), ಒಂದಷ್ಟು ಗುಟ್ಟುಗಳು, ಎಲ್ಲವನ್ನೂ ತಿಳಿದು ನಿರ್ಲಿಪ್ತ ಸ್ಥಿತಿ, ನಮ್ಮೊಳಗೇ ಇರುವ ಒಂದು ಸತ್ತ್ವಯುತ ಅಧಿಕಾರ, ಎಲ್ಲೇ ಹೋದರೂ ನಮ್ಮ ಜೊತೆಗೇ ಸಾಗುವ ಗಾಯ, ಬೇನೆಗಳು, ನಮ್ಮನ್ನು ತಿದ್ದಿ ತೀಡುವ ಅನುಭವ ಮುಪ್ಪಂತೆ ಒಬ್ಬ ಪ್ರೌಢ, ತನ್ನನ್ನೇ ತಾನು ಒರೆಹಚ್ಚಿಕೊಳ್ಳುವ ಪ್ರಕ್ರಿಯೆ, ಪುರುಷಾರ್ಥಗಳೊಂದರ ಅಭಿವ್ಯಕ್ತಿ ಇದ್ದುದನ್ನು ಬಿಟ್ಟು ಇಲ್ಲದಿದ್ದುದರ ಕಡೆ ಅಥವಾ ಬೇರೆಯವರ ವಸ್ತುವಿನ ಕಡೆಗೆ ಸೆಳೆವ ಮನಸ್ಸು ಹೀಗೇ ಹೀಗೇ ಪ್ರತಿಯೊಂದು ಭಾವವೂ ಇಲ್ಲಿ ಒಂದೊಂದು ಪಾತ್ರವಾಗಿ ಕತೆಯ ತುಂಬಾ ಅಲೆದಾಡುತ್ತವೆ

     ನಮ್ಮ ಬೆನ್ನ ಮೇಲಿನ ಗಾಯ ನಮಗೆ ಕಾಣಿಸೋದಿಲ್ಲ, ಅದಕ್ಕೆ ಕನ್ನಡಿ ಹಿಡಿಯುವ ಪ್ರಯತ್ನವನ್ನೂ ನಾವು ಮಾಡೋದಿಲ್ಲ. ನೋವು ದೈಹಿಕವಾಗಿರಲಿ ಅಥವಾ ಮಾನಸಿಕವಾಗಿರಲಿ, ಗಮನಿಸಿದರೆ ಮಾತ್ರವೇ ಅರಿವಿಗೆ ಬರುತ್ತದೆ; ಅಂದರೆ ಇದಕ್ಕೆಲ್ಲಾ ಕಾರಣ ಮನಸ್ಸು ಮಾತ್ರ...

     ಮನುಷ್ಯ ತನಗೇ ತಾನು ಸತ್ಯ ಹೇಳಿಕೊಳ್ಳುವಲ್ಲಿಯೂ ತಡವರಿಸುತ್ತಾನೆ. ತನ್ನ ನಿಜವಾದ ಚಿತ್ರ ಮನಸ್ಸಿನಲ್ಲಿ ಮೂಡಿದಾಗ, ಅರೆಬರೆ ಸುಳ್ಳು ಅಲ್ಲಿಂದಲೇ ಆರಂಭವಾಗುತ್ತದೆ. ಅದಕ್ಕೆ ಸಮರ್ಥನೆಗಳೂ ಹುಟ್ಟಿಕೊಳ್ಳುತ್ತವೆ. ಈ ಸತ್ಯ ಸುಳ್ಳುಗಳೆಲ್ಲಾ ಅವರವರ ದೃಷ್ಟಿಗೆ ಸಂಬಂಧಿಸಿದ್ದಷ್ಟೇ ಅಲ್ಲವೇ! ಯಾವತ್ತು ಮನುಷ್ಯ ತನಗೇ ತಾನು ನಿಜ ಹೇಳಿಕೊಳ್ಳುವ ಶಕ್ತಿ ಪಡೆಯುತ್ತಾನೋ, ಆಗ ಆತ ಒಂದು ಮಟ್ಟ ಮುಟ್ಟಿದ ಅಂತ ಅರ್ಥ. ಕೆಲವೊಮ್ಮೆ ಪರಿಸ್ಥಿತಿ ಮನುಷ್ಯನ ಆಚಾರ ವಿಚಾರಗಳನ್ನು ರೂಪಿಸುತ್ತದೆ.

     ಪುರುಷಾರ್ಥಗಳಲ್ಲಿನ ಆಸಕ್ತಿ ಕಡಿಮೆಯಾದಂತೆ ನಾವು ಮಾಗುತ್ತಿದ್ದೇವೆ ಅಂತ ಅರ್ಥ. ಆ ನಿರಾಸಕ್ತಿ, ಒಳಗಿನ ಆಸಕ್ತಿಗೆ ಪೂರಕ. ನಮ್ಮನ್ನು ನಾವು ತಿಳಿಯುವ ಈ ಪ್ರಕ್ರಿಯೆಯಲ್ಲಿ, ಆಸಕ್ತಿ ನಿರಾಸಕ್ತಿಗಳು ಹಗಲು ರಾತ್ರಿಗಳಿದ್ದಂತೆ. ಅಕ್ಕಿ ಬೇಯುತ್ತದೆ, ಬೇಳೆಯೂ ಬೇಯುತ್ತದೆ.. ಆದರೆ ಉತ್ತಮ ಊಟದ ರುಚಿ ನಮ್ಮ ಕೈಯಲ್ಲೇ ಇದೆ. ಕೆಲವೊಮ್ಮೆ ಮನುಷ್ಯನ ಆಸೆಗಳು ಆತನನ್ನು ಮತ್ತೆ ಜೀವನ್ಮುಖಿಯಾಗಿಸುತ್ತವೆ. ನಮ್ಮಲ್ಲಿ ಅಂದರೆ, ಪ್ರಕೃತಿಯಲ್ಲಿ ಎಲ್ಲವೂ ಇದೆ. ಆದರೆ, ನಮ್ಮಲ್ಲಿನ ಸೌಂದರ್ಯಕ್ಕೆ ಅದನ್ನು ಬಳಸಿಕೊಳ್ಳಬೇಕಾದುದು ನಮಗೇ ಬಿಟ್ಟಿದ್ದು.

     ಬೇರೆಯವರ ಮೇಲೆ ಹೊರಿಸುವ ತಪ್ಪುಗಳು ನಮ್ಮ ತಪ್ಪುಗಳಿಂದ ನಮ್ಮ ಮೇಲಾದ ಕಲೆಯನ್ನು ಅಳಿಸಿಹಾಕುವುದಿಲ್ಲ. ಆ ಕಲೆಯನ್ನು ತಿಕ್ಕಬೇಕು, ಹಳೇ ಪೊರೆ ಕಳಚಿ ಮತ್ತೆ ಮರುಹುಟ್ಟು ಇರಬೇಕು.

     ಅಧ್ಯಾತ್ಮ ಎನ್ನುವುದು ಜೀವನವನ್ನು ತುಂಬ ಕಂಡವರಲ್ಲಿ ಮತ್ತು ಅನುಭವಿಸಿದವರಲ್ಲಿ ಜಾಗೃತವಾಗುತ್ತದೆ. ಏನೂ ಕಾಣದವರಲ್ಲಿ ಅದರ ಕಲ್ಪನೆಯಷ್ಟೇ ಮೂಡುತ್ತದೆ.

     ಬರೆಯುವಿಕೆಯ ಮಹತ್ವವನ್ನೂ ಸೂಚ್ಯವಾಗಿ ಶ್ರೀಯುತರು ಹೇಳುತ್ತಾರೆ. ಬರೆಯುತ್ತಾ ಹೋದರೆ ಎಷ್ಟು ಪುಸ್ತಕ ಪ್ರಕಟಿಸಬಹುದಾಗಿತ್ತು ಎಂದು ಒಂದು ಪಾತ್ರದ ಮೂಲಕ ಹೇಳುತ್ತಾ, ಬರವಣಿಗೆಯಲ್ಲಿ ಗಟ್ಟಿತನ ಇರಬೇಕು, ಬರೆದದ್ದು ನೆಲೆ ಕೊಡಬೇಕು, ಅನಿಸಿದ್ದೆಲ್ಲವೂ ಬರವಣಿಗೆಯ ರೂಪ ಪಡೆದುಕೊಳ್ಳಲಿಕ್ಕಾಗುವುದಿಲ್ಲ ಎಂಬುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ.

     ಹುಡುಕಾಟದಲ್ಲಿ ಹತ್ತಿರ ಬಂದ ನಮ್ಮನ್ನೇ ನಾವು ಕೆಲವೊಮ್ಮೆ ದೂರ ತಳ್ಳಿಕೊಳ್ಳುತ್ತೇವೆ. ಬಹುಶಃ ಅಷ್ಟು ವರ್ಷಗಳ ತಿಕ್ಕಾಟದ ಮೇಲಿನ ಜಿಗುಪ್ಸೆಯೋ ಅಥವಾ ಅಸ್ತಿತ್ವಕ್ಕೊಂದು ಅರ್ಥ ಕಂಡುಕೊಳ್ಳಲಾರದ ತಳಮಳದ ಇನ್ನೊಂದು ಮುಖವೋ.. ಹಪಹಪಿಸುತ್ತೇವೆ, ಸುಕ್ಕಾಗುತ್ತೇವೆ, ಮತ್ತೆ ಮತ್ತೆ ಬಿದ್ದು ಬಿದ್ದು ಏಳುತ್ತೇವೆ, ಗಟ್ಟಿಯಾಗುತ್ತೇವೆ. ಇನ್ನ್ಯಾವುದರಲ್ಲೋ ಅರ್ಥ ಹುಡುಕಲು ಶುರುವಿಟ್ಟುಕೊಳ್ಳುತ್ತೇವೆ. ಕೊನೆಗೆ ಯಾವುದೋ ಒಂದು ಮುಖವನ್ನಿಟ್ಟುಕೂಂಡು ಸಮಾಧಾನದ ಭ್ರಾಂತಿಯಲ್ಲಿ ಕಣ್ಣು ಮುಚ್ಚುತ್ತೇವೆ.

     ನಾವದೆಷ್ಟು ಜನ ಸ್ಥಿರಚಿತ್ತರಿದ್ದೇವೆ? ಏನೋ ಆಗಬೇಕೆಂದು ಕನವರಿಸುತ್ತೇವೆ. ಆ ಕನವರಿಕೆ ಒಳ್ಳೆಯ ನಿದ್ರೆಯಲ್ಲಿನ ಒಂದೆರಡು ಕ್ಷಣಗಳಾಗಿ ಹೊರಟುಹೋಗುತ್ತದೆಯೇ ಹೊರತು, ಹಗಲಿನ ಚುರುಕಾಗುವುದೇ ಇಲ್ಲ. ಸುಮ್ಮನೆ ನಡೆಯುತ್ತೇವೆ ಸಿಕ್ಕ ಸಿಕ್ಕ ಕಾಲುದಾರಿಗಳಲ್ಲಿ ಉದ್ದೇಶವೇ ಇರದೆ!.. ಸಂಬಂಧಗಳಿಗೆ ವ್ಯಾಖ್ಯೆ ಮತ್ತು ಅರ್ಥವನ್ನು ಕೊಟ್ಟುಕೊಳ್ಳುವವರು ನಾವೇ.. ಸಂಬಂಧಗಳ ಹೆಸರಿಗಿಂತಲೂ ಹೆಚ್ಚಾದ ಅನುಭೂತಿಯನ್ನು ನಾವೇ ಹುಟ್ಟಿಸಿಕೊಳ್ಳಬಹುದಲ್ವಾ?..

     ಬದುಕಿನ ಒಂದಷ್ಟು ಪುಟಗಳು ಖಾಲಿ ಅನ್ನುವುದಕ್ಕಿಂತ ಅವು ಮುಂದೆ ಬರೆಯಬೇಕಾದವುಗಳು ಅಂತ ಅಂದುಕೊಳ್ಳುವುದರಲ್ಲಿ ಅದೆಂಥ ಜೀವನೋತ್ಸಾಹವಿದೆ ಅಲ್ಲವೇ!.. ಬಹುಶಃ ಇದನ್ನೇ ಹುಡುಕಾಟ ಎನ್ನಬಹುದೇನೋ..!

     ಸಾವು ಭೌತಿಕವಾದದ್ದಲ್ಲ; ಅದು ಬೌದ್ಧಿಕವಾದದ್ದು.. ಹೊಸಹುಟ್ಟು, ಪುನರ್ ಸೃಷ್ಟಿಗೊಳ್ಳುತ್ತಲೇ ಇರುವ ನಮ್ಮ ವ್ಯಕ್ತಿತ್ವದ ಪಕ್ವತೆಗೆ ಪರಿಕರವಾಗಬೇಕು.. ನಿಜ, ಅದೆಷ್ಟೋ ಜನ ತಮ್ಮನ್ನು ತಾವು ಅರಿತಿದ್ದರೆ, ಪರಿಸ್ಥಿತಿಯ ಪರಿಹಾಸ್ಯಕ್ಕೆ ಪೆಚ್ಚು ಮೋರೆ ಹಾಕಿಕೊಂಡು ಆಗ ಸಿಕ್ಕ ಮುಖವಾಡಗಳನ್ನು ಹಾಕಿಕೊಳ್ಳುತ್ತಾ, ಒಂದಷ್ಟು ದಿನ ಭ್ರಮೆಯಲ್ಲಿ ಮೆರೆಯುತ್ತಾ ಮತ್ತೆ ಮತ್ತೆ ಸಾಯುತ್ತೇವೆ, ಹಾಗೇ ಹುಟ್ಟುತ್ತೇವೆ (ಕೆಲವೊಮ್ಮೆ!).. ಆಗಾಗ ಸತ್ತು ಹುಟ್ಟಬೇಕಂತೆ, ಹೇಗೆ?.. ಹೊಸ ಬದುಕಿನ ಅಥವಾ ಹೊಸ ಚೈತನ್ಯದ ಮರುಹುಟ್ಟೇ ಅಥವಾ ಹೊಸ ವ್ಯಕ್ತಿತ್ವದ್ದೇ?.. ಪ್ರತೀ ಸಲ ಮುಖವಾಡ ಬದಲಿಸಿಕೊಂಡಾಗಲೂ ಸಾವು ಹುಟ್ಟಿನ ಸರಸ ಖಚಿತವೇ? ಇಷ್ಟೆಲ್ಲಾ ಪಾತ್ರಗಳ ಭಾಗವಾಗುವಾಗ ‘ನಮ್ಮದು’ ಅಂತ ಒಂದು ಭಾವ ಆವರಿಸಿಕೊಳ್ಳುವುದಿಲ್ಲವೇ? ಒಂದಕ್ಕೇ ಆತುಕೊಳ್ಳುವವ ಬಹುಶಃ ಮನುಷ್ಯನಾಗಿರುವುದೇ ಇಲ್ಲವೇನೋ!.. ಪಾತ್ರಗಳ ಮತ್ತು ಅವುಗಳ ಸಂಬಂಧಗಳ ನಡುವಿನ ಎಳೆತ, ಸೆಳೆತ, ಬಿಗಿತಗಳೇ ಮನುಷ್ಯನನ್ನು ಕ್ರಿಯಾಶೀಲನಾಗಿಸುವುದು?!.. ಅಥವಾ ತಡೆದು ತಡೆದು ಬಣ್ಣಬಿಡುವ ತೀವ್ರತೆಯ ಹೆಚ್ಚಿಸುವುದು.. ಹುಡುಕುತ್ತೇವೆ, ಹುಡುಕಿಯೇ ಹುಡುಕುತ್ತೇವೆ ಯಾವುದೋ ಒಂದು ಘಟ್ಟದಲ್ಲಿ.. ಅದುವೇ ನಮ್ಮದೆಂದು ಅಥವಾ ಅದೇ ನಾವೆಂದು ಒಪ್ಪಿಕೊಳ್ಳುವ ಧೈರ್ಯ ಅಥವಾ ಮನಃಸ್ಥಿತಿ ಬಹುಶಃ ನಮಗಿರುವುದು ತುಂಬಾ ಕಡಿಮೆ. ಸಿಕ್ಕಿದೆ ಅಂದುಕೊಳ್ಳುತ್ತಿರುವಾಗಲೇ ಕಳೆದುಕೊಂಡಿರುತ್ತೇವೆ. ಯಾಕೆಂದರೆ ನಾವು ಹುಡುಕುವುದು ನಾವಾಗಿ ಅಲ್ಲ; ಅವರಾಗಿ!.. ನನಗೆ ಗೊತ್ತಿರುವ ನಾನಾದರೂ ಎಷ್ಟು ಸತ್ಯ? ಅಥವಾ ನಾನು ನನ್ನ ಚಿತ್ರ ಇಷ್ಟೇ ಇರಬೇಕೆಂದು ನನ್ನ ಸಂತೋಷಕ್ಕೆ ನಾನೇ ಎಳೆದ ಗೆರೆಗಳಲ್ಲಿ ಅದೆಷ್ಟು ನಾನಿದ್ದೇನೆ?!.. ಇದೇ ‘ಅನ್ವೇಷಣ’... :) :) :)


~‘ಶ್ರೀ’
  ತಲಗೇರಿ