ಭಾನುವಾರ, ಜನವರಿ 1, 2023

ಬಯಲ ಹೂವಿನ ಗಂಧ

ಬಯಲ ಹೂವಿನ ಗಂಧ

ಈ ಪುಸ್ತಕದ ಕುರಿತಾಗಿ ಬರೆಯಬೇಕು ಅಂತ ಅಂದುಕೊಂಡಿದ್ದು ಬಹಳ ಸಲ. ಸುಮಾರು ಒಂದು ವರ್ಷವಾಯಿತು‌ ಇದನ್ನು ಓದಿ. ಕೆಲವೊಮ್ಮೆ ಕೆಲವು ಸಂಗತಿಗಳು ಕಟ್ಟಿಕೊಡುವ ಅನುಭವಗಳು ಗಾಢವಾಗಿರುತ್ತವೆ. ಅವುಗಳನ್ನು ಅಕ್ಷರ ರೂಪಕ್ಕಿಳಿಸುವುದಕ್ಕೆ ನಾವು ಸೋಲಬಹುದು ಅನ್ನುವ ಹಿಂಜರಿಕೆಯೇ ಹೀಗೆ ಬರೆಯದೇ ದಿನ ದೂಡುವುದಕ್ಕೆ ನೆಪವಾಗುತ್ತದೆ. ಈ ಸಲ ಬರೆಯಲೇಬೇಕೆಂದು ಮರುಓದಿಗೆ ತೊಡಗಿದೆ. ಬಹುಶಃ ಒಂದು ಸಲ ಓದಿದ ಮೇಲೆ ಮತ್ತೆ ಓದಿದ ಕೆಲವೇ ಕೆಲವು ಪುಸ್ತಕಗಳಲ್ಲಿ ಇದೂ ಒಂದು. ಹಾಗಂತ ಇದು ಸಿಕ್ಕಾಪಟ್ಟೆ ಅದ್ಭುತವಾದ, ಎಲ್ಲಿಯೂ ಸಿಗದ ಕತೆಗಳಿರುವ ಪುಸ್ತಕ ಅಂತೆಲ್ಲಾ ಹೊಗಳುವುದಿಲ್ಲ! ಆದರೆ, ಈ ಪುಸ್ತಕ ಒಂದು ಗಾಢವಾದ ಅನುಭವದ ಜಗತ್ತನ್ನು ಕಟ್ಟಿಕೊಡುತ್ತದೆ. ಸಣ್ಣ ಸಣ್ಣ ಸಂಗತಿಗಳೇ ಕತೆಗಾರರ ಶಕ್ತಿ. ಅಂಥದ್ದೊಂದು ಭಂಡಾರವೇ ಇಲ್ಲಿದೆ. ಅವುಗಳಲ್ಲಿ ಕೆಲವನ್ನು ಈ ಬರೆಹದ ಕೊನೆಯಲ್ಲಿ ಹಂಚಿಕೊಳ್ಳುತ್ತೇನೆ. ಛಂದ ಪುಸ್ತಕ ಬಹುಮಾನ ಪಡೆದ ಕೃತಿ ಅಂದರೆ ಅದೊಂದು ಥರದ ನಂಬಿಕೆ; ಅದು ಒಂದೊಳ್ಳೆಯ ಓದನ್ನು ಕೊಡುತ್ತದೆ ಅನ್ನುವ ಗಟ್ಟಿ ನಂಬಿಕೆ. ಅದರಲ್ಲೂ ಸಶಕ್ತ ಕತೆಗಾರ್ತಿಯರು ಕತೆ ಹೇಳಿದಾಗ ಪುರುಷ ಕತೆಗಾರರಿಗೆ ದಕ್ಕದ ಇನ್ನೊಂದು ಲೋಕ ಮತ್ತು ಆ ಲೋಕದ ಸೂಕ್ಷ್ಮತೆ ಆ ಕತೆಗಳಲ್ಲಿರುತ್ತವೆ ಅನ್ನುವುದನ್ನು ನಾನು ಓದಿದ ಕೆಲವೇ ಕೆಲವು ಕತೆಗಾರ್ತಿಯರ ಕತೆಗಳಿಂದ ಗಮನಿಸಿದ್ದೇನೆ. ಇಲ್ಲಿಯೂ ನನಗೆ ಅಂಥದ್ದೊಂದು ಜಗತ್ತು ಸಿಕ್ಕಿತು. ಮಹತ್ತರವಾದ ಅಥವಾ ಗಹನವಾದ ಸಂಗತಿಗಳನ್ನು ತೀವ್ರವಾಗಿ ತುಂಬಿಕೊಂಡಿರುವ ಕತೆಗಳೇನಲ್ಲ ಇವು. ಆದರೆ, ಈ ಜಗತ್ತಿನ ಪುಟ್ಟ ಪುಟ್ಟ ಸಂಗತಿಗಳನ್ನು ಗಮನಿಸಿ ಅದನ್ನು ಕತೆಯ ಭಾಗವಾಗಿಸುವುದಿದೆಯಲ್ಲಾ; ಅದನ್ನೇ ಬಹುಶಃ 'ಘಟಿಸುವುದು' ಅನ್ನಬಹುದೇನೋ!  ಅಂಥದ್ದೇ ಒಂದು ಸಂಕಲನ ಛಾಯಾ ಭಟ್ ಅವರ 'ಬಯಲರಸಿ ಹೊರಟವಳು' 

ನಮ್ಮೆಲ್ಲರ ಬದುಕಿನಲ್ಲಿ ಕೆಲವು ವ್ಯಕ್ತಿಗಳಿರುತ್ತಾರೆ. ಹೇಗಾದರೂ ಮಾಡಿ ನಮ್ಮನ್ನು ಕೆಣಕುವವರೂ ಅವರೇ, ಸಹಾಯಕ್ಕೆ ಬರುವವರೂ ಅವರೇ. ಈ ನಡುವಿನ ಬದುಕಿನಲ್ಲಿ ಅದೊಂದು ತೆರನಾದ ಸಂಬಂಧ ಅವರ ಜೊತೆ ಬೆಳೆದುಹೋಗಿರುತ್ತದೆ. ಅದನ್ನು ಆತ್ಮೀಯತೆ ಅಂತಲಾದರೂ ಕರೆಯಿರಿ ಅಥವಾ ಅನಿವಾರ್ಯತೆ ಅಂತಲಾದರೂ! ದೇವಳದ ಸೂರಿನಲ್ಲಿ , ಪ್ರಕೃತಿಯ ಕೋಪದಲ್ಲಿ ಎಲ್ಲರೂ ಒಂದೇ ಅನ್ನುವ ಮಾತು ಎಷ್ಟು ವಾಸ್ತವಿಕ. ಪ್ರಕೃತಿ ವಿಕೋಪಗಳಾದಾಗ, ಊರ ಶಾಲೆಯಲ್ಲೋ, ದೇವಸ್ಥಾನದಲ್ಲೋ, ಚರ್ಚು, ಮಸೀದಿಗಳಲ್ಲೋ ಗಂಜಿಕೇಂದ್ರಗಳನ್ನು ತೆರೆಯುವುದು ನಮಗೆ ತಿಳಿದ ಸಂಗತಿಯೇ. ಮತ್ತೆ ಮತ್ತೆ ಇಂಥ ವಿಕೋಪಗಳಾದಾಗ ಮಾತ್ರ ಮನುಷ್ಯನಿಗೆ ಮನುಷ್ಯನಾಗುವುದಕ್ಕೆ ಸಾಧ್ಯವಾಗುತ್ತದೆಯೇನೋ ಬಹುಶಃ! ಮನುಷ್ಯ ನಾಗರಿಕತೆಗಳ ಏಳುಬೀಳುಗಳನ್ನು ಕಂಡು ಪೊರೆವ ನದಿಯೇ ಒಮ್ಮೊಮ್ಮೆ ಉಕ್ಕುತ್ತದೆ ಅನ್ನುವ ಲೇಖಕಿ, ಪ್ರಕೃತಿಗೆ ತನ್ನ ಸಮತೋಲನವನ್ನು ತಾನೇ ಕಾಯ್ದುಕೊಳ್ಳುವುದು ಗೊತ್ತಿದೆ ಅನ್ನುವ ಮೂಲಕ ಮನುಷ್ಯ ತಾನು ಮಾಡಿಕೊಳ್ಳುವ ಅನರ್ಥಗಳಿಗೆ ಏನೇನೋ ಉದ್ಧಾರದ ಸಮಜಾಯಿಷಿ ಕೊಡುವುದನ್ನು ಸೂಕ್ಷ್ಮವಾಗಿ ಟೀಕಿಸಿಸುತ್ತಾರೆ. ಒಮ್ಮೊಮ್ಮೆ ಅನಿಸುತ್ತದೆ, ನಾವು ಮಾತಾಡಿದ್ದರೆ ಎಲ್ಲವೂ ಸರಿಯಾಗುತ್ತಿತ್ತೇನೋ, ಮನುಷ್ಯ ಮನುಷ್ಯರ‌ ನಡುವಿನ ವೈಮನಸ್ಯಗಳು ತಿಳಿಯಾಗುತ್ತಿದ್ದವೇನೋ ಅಂತೆಲ್ಲಾ. ಬಹಳ ಸಲ ಮಾತು ಒಂದು ಮಟ್ಟಿಗೆ ಕೆಲಸ ಮಾಡುವುದು ಹೌದಾದರೂ, ಮಾತಿನಿಂದಲೇ ಎಲ್ಲವೂ ಅರ್ಥವಾಗುವುದೇ? ಸಂವಹನ ನಡೆಯುವುದು ಕೇವಲ ಮಾತಿನ ಅರ್ಥದಿಂದಲೇ? ಅನ್ನುವ ಪ್ರಶ್ನೆ ಮೌನದ ಸಂವಹನಕ್ಕೆ ಇನ್ನಷ್ಟು ಬಲ ತುಂಬುತ್ತದೆ. ಮನುಷ್ಯನಿಗೆ ಇಂದ್ರಿಯಗಳು ಮತ್ತದಕ್ಕೆ ಅಂಟಿಕೊಂಡ ಸಂವೇದನೆಗಳೇ ಎಲ್ಲಾ ನೆನಪುಗಳಿಗೂ ಕಾರಣ. ಹಾಗೂ ಬದುಕಿನ ಭರವಸೆಗಳಿಗೂ ಕಾರಣ. ಇನ್ನೂ ಏನೋ ಉಳಿದಿದೆ ಅನ್ನುವುದೇ ನಾಳೆಗಳನ್ನು ಅನಿವಾರ್ಯವಾಗಿಸುತ್ತದೆ. 'ನೆರೆ' ಅನ್ನುವ ಈ ಕತೆ ಈ ಪುಸ್ತಕದ ಮೊದಲ‌ ಕತೆ. ಇದರಲ್ಲಿ ಒಂದು ಸಾಲಿದೆ "ನೆಟ್ಟವರಿಗಷ್ಟೇ ಕೀಳುವ ಹಕ್ಕಿರುವುದು"

ಕೆಲವರಿಗೆ ಊರಿಗೆ ಹೋಗುವುದೆಂದರೆ ನೆಮ್ಮದಿಯ ಆತ್ಮೀಯತೆ. ಇನ್ನು ಕೆಲವರಿಗೆ ಊರೆಂದರೆ ಅದು ತಳಮಳಗಳನ್ನು ಹುಟ್ಟುಹಾಕುವ, ಮನಸ್ಸೊಳಗಿನ ಅವ್ಯವಸ್ಥೆಗಳನ್ನು ಎತ್ತಿ ತೋರಿಸುವ ಹಾಗೂ ಕೌಟುಂಬಿಕ ಸುಖಕ್ಕೆ ವಿರುದ್ಧವಾದ ಕಿರಿಕಿರಿಯನ್ನು ದಾಟಿಸುವ ಜಾಗ. ಯಾಕೆ ಹಾಗಾಗುತ್ತದೆ ಅಂತ ಕೇಳಿದರೆ ಬದುಕಿನೊಂದಿಗೆ ಹೆಣೆಯಲ್ಪಟ್ಟ ನೆನಪುಗಳು, ಭಿನ್ನ ಘಟನೆಗಳು, ಅವುಗಳ ಅನುಭವಗಳು ಇತ್ಯಾದಿ. ಬಹುಶಃ ನಮ್ಮದು ಅಂತ ಅನ್ನಿಸುವವರೆಗೂ ಅದರೊಂದಿಗೆ ನಾವು ಸುಖಿಸಲು ಸಾಧ್ಯವೇ ಇಲ್ಲವೇನೋ! ಬದುಕಿನ ಪ್ರತೀ ಹಂತದಲ್ಲೂ ಭಯ ಉಂಟಾಗುತ್ತಲೇ ಇರುತ್ತದೆ. ಒಂದು ಸಂಗತಿಯಿಂದ ಆಚೆ ಬಂದು ತೆಗೆದುಕೊಳ್ಳುವ ನಿರ್ಧಾರದಿಂದ ಹುಟ್ಟುವ ಧೈರ್ಯ ಇನ್ನಷ್ಟು ಹುರುಪಿಗೆ ನಾಂದಿ ಅನ್ನುವುದನ್ನು 'ಕೋಲ್ಮಿಂಚು' ಕತೆ ನಮಗೆ ದಾಟಿಸುತ್ತದೆ. 

ಪ್ರತಿ ಜನಾಂಗವೂ ತನ್ನ ಹಿಂದಿನ ಜನಾಂಗದ ನಂಬಿಕೆಗಳ ಆಧಾರದ ಮೇಲೆಯೇ ಬದುಕು ಕಟ್ಟಿಕೊಳ್ಳುವುದು.‌ ಕೆಲವೊಮ್ಮೆ ಆ ನಂಬಿಕೆಗಳು ಹಳತಾದವೆಂದು ನವೀಕರಿಸುತ್ತಲೇ, ಇನ್ನು ಕೆಲವೊಮ್ಮೆ ಆ ನಂಬಿಕೆಯೇ ಅಂತಿಮ ಸತ್ಯವೆಂದು ಆದರಿಸುತ್ತಲೇ ಪೀಳಿಗೆಯಿಂದ ಪೀಳಿಗೆಗೆ ನಂಬಿಕೆಗಳು ವರ್ಗಾವಣೆಯಾಗುತ್ತವೆ. ತಲೆಮಾರುಗಳ ನಡುವಿನ ನಂಬಿಕೆಗಳು ಹಾಗೂ ಅವುಗಳ ಒಳ ಪದರಗಳು ತಂದೊಡ್ಡುವ ವಿಪರೀತಗಳು ನೋಡುವುದಕ್ಕೆ ಸರಳವಾಗಿದ್ದರೂ, ಕೆಲವೊಮ್ಮೆ ಒಂಥರದ ಕಗ್ಗಂಟು. ಒಮ್ಮೆ ಮನಸ್ತಾಪ ಶುರುವಾದರೆ, ಪದೇ ಪದೇ ವಿಷಯವೇ ಇಲ್ಲದೇ ಮನಸ್ತಾಪಗಳಾಗುತ್ತವೆ. ಕುಟುಂಬದ ಹೆಣಿಗೆಗಳಿಗೆ ಪರಿಹಾರ ಅಷ್ಟು ಸುಲಭವಲ್ಲ. ಅದಕ್ಕಾಗಿಯೇ ಅಲ್ಲವಾ ಸಂಸಾರ ಸಾಗರ ಅಂತನ್ನುವುದು. ಅಲೆಗಳು ಒಂದಾದ ಮೇಲೊಂದರಂತೆ ಬರದೇ ಸಾಗರ ಇರುವುದಾದರೂ ಹೇಗೆ! 'ತೊಟ್ಟು ಕಳಚಿದ ಹೂವು' ಎನ್ನುವ ಈ ಕತೆಯಲ್ಲಿ ಅಬ್ಬೆ, ಮಗ, ಮಗನ ಹೆಂಡತಿಯ ನಡುವಿನ ತಾಕಲಾಟಗಳು, ಸಂಬಂಧಗಳ ನಡುವಣ ಸಂಘರ್ಷಗಳಿವೆ. 

ಮುಂದಿನ ಕತೆ ಪಾತಿಚಿಕ್ಕಿಯದ್ದು. ಜೀವನದಲ್ಲಿ ಎದುರಾಗುವ ಸಾವಿರ‌ ಕಷ್ಟ ಕಾರ್ಪಣ್ಯಗಳಿಗೆ ಮಾತನಾಡದ ದೇವರುಗಳಿಗಿಂತ ಒರಟೊರಟಾಗಿ ಮಾತಾಡಿ, ಎಲ್ಲರ‌ ನಂಬಿಕೆಯನ್ನೇ ಅಲ್ಲಾಡಿಸುವಂತೆ ಬದುಕುವುದು ಪಾತಿಚಿಕ್ಕಿಯ ಪಾತ್ರ. ಮುಗ್ಧರ ಹಾಗೂ ನಿತ್ಯದ ಅಗತ್ಯಕ್ಕಾಗಿ ಹೆಣಗುವವರ ಮನುಷ್ಯ ಸಹಜ ಆಸೆಗಳನ್ನು  ಇಂದಿನ ರಾಜಕೀಯ ಕಾರ್ಯಕ್ರಮಗಳಲ್ಲಿ ಹೇಗೆ ಬಳಸಿಕೊಳ್ಳಲಾಗುತ್ತದೆ ಅನ್ನುವುದನ್ನೂ ಈ ಕತೆ ತೆರೆದಿಡುತ್ತದೆ. ಒಂದು ಗಂಭೀರ ಸನ್ನಿವೇಶದಲ್ಲೂ ಮಕ್ಕಳ ಮನಸ್ಸಿನಲ್ಲಿ ಮೂಡಬಹುದಾದ ಮುಗ್ಧ ಹಾಗೂ ಮಜವಾದ ಸಂಗತಿಯೊಂದು ಪಾತಿಚಿಕ್ಕಿಯ ಗಂಡ ಮನೆಬಿಟ್ಟು ಹೋದಾಗಿನ ಸಂದರ್ಭದಲ್ಲಿದೆ. ಹೆಣ್ಣು ತಾನು ಸೇರಿದ ಮನೆಯನ್ನು, ಹೊಸ ಸಂಬಂಧವನ್ನು ಅಪ್ಪಿಕೊಂಡಷ್ಟು ಸುಲಭವಾಗಿ ಗಂಡಸಿಗೆ ಅದು ಸಾಧ್ಯವಾಗುವುದು ಬಹಳ ಅಪರೂಪ ಅನ್ನುತ್ತಾರೆ ಕತೆಗಾರ್ತಿ. ಮುರಿದು ಮತ್ತಷ್ಟು ಚೆಂದಕ್ಕೆ ಕಟ್ಟುವುದು ಹೆಣ್ಣಿಗೊಲಿದ ವಿಶೇಷ ಕಲೆಯೇ ಇರಬೇಕು. ಅಲ್ಲದೇ ಇದ್ದರೆ ಹಳಬರು ಸುಮ್ಮನೆ ಹೇಳುತ್ತಿದ್ದರೇ; "ಮದುವೆ ಅಂತ ಒಂದ್ ಮಾಡಿ, ಹುಡುಗ ಸರಿ ಹೋಗ್ತಾನೆ" ಅಂತ! ಒಂದು ವಸತಿಗೃಹವನ್ನು ಮನೆಯಾಗಿಸುವವಳು ಹೆಣ್ಣು. ಒಂಟಿತನ ಎನ್ನುವುದು ಪೂರಾ ಮಾನಸಿಕ ಅವಸ್ಥೆ , ಯಾವಾಗ ಬೇಕಾದರೂ ಬರಬಹುದು, ತುಂಬು ಸಂಸಾರದಲ್ಲಿಯೂ ಮನುಷ್ಯ ತನಗ್ಯಾರಿಲ್ಲವೆಂದು ನೋಯಬಹುದು ಅನ್ನುವ ಸಂಗತಿಯನ್ನು ಲೇಖಕಿ ಹೇಳುತ್ತಾರೆ. ಬಹುಶಃ ಇದು ಎಲ್ಲಾ ಕಾಲಕ್ಕೂ ಪ್ರಸ್ತುತವೇ ಆಗಬಹುದಾದ ಹೇಳಿಕೆ ಅಂತ ನನಗನಿಸುತ್ತದೆ. ಜನರ ಕಷ್ಟ ಎಷ್ಟಿದೆಯೆಂದರೆ ಎಷ್ಟೇ ಗುಡಿ ಕಟ್ಟಿ ಕೈಮುಗಿದರೂ ಬೇಡಿ ಮುಗಿಯಲಾರದಷ್ಟು ಕೋರಿಕೆಗಳಿರುತ್ತವೆ ಅವರಿಗೆ! ತನಗಿಂತ ಹೆಚ್ಚು ಶಕ್ತಿಶಾಲಿಯಾದವರಲ್ಲಿ ನಂಬಿಕೆ ಹುಟ್ಟಿಕೊಳ್ಳುವುದೇ ಹೀಗೆ. ಅದಕ್ಕೆಂದೇ ಮನುಷ್ಯ ದೇವರನ್ನು ನಂಬತೊಡಗಿದ ಅಂತ ಭಗತ್ ಸಿಂಗ್ ತಮ್ಮ 'ನಾನೇಕೆ ನಾಸ್ತಿಕ' ಪುಸ್ತಕದಲ್ಲಿ ಬರೆದಿರುವ ಮಾತಿಗೆ ಇದು ಹೆಚ್ಚು ಹತ್ತಿರದ ಸಾಲು ಅನಿಸಿತು. ನಾವೆಲ್ಲರೂ ಪ್ರತಿ ದಿನ ಬಯಲರಸಿ ಹೊರಡುವುದಕ್ಕೆ ಹಲುಬುತ್ತಲೇ ಇರುತ್ತೇವೆ ಅಲ್ಲವಾ! ಸಂಕಲನದ ಶೀರ್ಷಿಕೆ ಕತೆ ಇದು; 'ಬಯಲರಸಿ ಹೊರಟವಳು' 

ಮುಂದಿನ ಕತೆಯ ಶುರುವಿನಲ್ಲಿ ಬರುವ ಕೊಂಕಣ ರೈಲಿನ ವರ್ಣನೆ, ಅಲ್ಲಿ ಹೊರಟಿದ್ದು ಮುಂಬಯಿಯಿಂದಾದರೂ, 'ಹಾಯ್, ಹೋಯ್, ಇಶ್ಶೀ' ಎನ್ನುವ ಉದ್ಗಾರಗಳು ಪಕ್ಕಾ ಉತ್ತರ ಕನ್ನಡದವು! ಹಲವು ಸಲ ಅನಿಸಿದ್ದಿದೆ, ನಾವು ಮತ್ತೆ ಮತ್ತೆ ಅದದೇ ಕತೆಗಳನ್ನು, ಅದದೇ ಪರಿಸರವನ್ನು, ಅದದೇ ಸಾಹಿತ್ಯವನ್ನು ತಿರುಗಾಮುರುಗಾ ಮಾಡಿ ಹೇಳುತ್ತಿದ್ದೇವಾ ಅಂತ. ಆದರೆ, ಇನ್ನೂ ಕೆಲವೊಮ್ಮೆ ಅನಿಸಿದ್ದಿದೆ. ನಮಗೆ ಗೊತ್ತಿಲ್ಲದ ಇನ್ನ್ಯಾವುದೋ ಪರಿಸರವನ್ನು ನಾವು ನಮ್ಮ ಕತೆಯಲ್ಲಿ ತರುವುದಾದರೂ ಹೇಗೆ ಸಾಧ್ಯ? ತಂದರೂ, ಅದು ಅಷ್ಟು ನೈಜವಾಗಿ ಇರುವುದಕ್ಕೆ ಸಾಧ್ಯವಾ? ಅಂತ. ಹಾಗಾಗಿ ಕೊನೆಗೆ ನಾನು ಕಂಡುಕೊಂಡ ಉತ್ತರ; ನಮ್ಮದೇ ಪರಿಸರದಲ್ಲಿ, ನಮ್ಮದೇ ಬಾಲ್ಯದಲ್ಲಿ, ನಮ್ಮದೇ ಊರಿನಲ್ಲಿ, ನಮ್ಮದೇ ನಗರಗಳಲ್ಲಿ ಹೇಳದೇ ಉಳಿದ ಅದೆಷ್ಟೋ ಕತೆಗಳಿವೆ. ಅವುಗಳನ್ನು ಹೇಳದೇ ಹೋದರೆ, ಆ ಕತೆಗಳಿಗೂ ದನಿ ಬೇಕಲ್ಲವಾ ಎಂಬುದಾಗಿ. ಹಾಗಾಗಿ, ಈಗ ಊರ ಕತೆಗಳು 'ಮತ್ತದೇ ಹಾಡು' ಎಂಬಂತಾಗುವುದಿಲ್ಲ. ಈ ಕತೆಯ ಶುರುವಿನಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗಲೂ ಗಂಡಸಿನ ಲೋಕ ಏನು ಅನ್ನುವುದನ್ನು ಕತೆಗಾರ್ತಿ ಹೇಳುತ್ತಾರೆ. ಅದಾದ ನಂತರ ಇಡೀ ಕತೆಯಲ್ಲಿರುವುದು ಒಂದು ಘಟನೆ ನಮ್ಮ ಜೀವನ ಪೂರ್ತಿ ಬೆನ್ನು ಹತ್ತಿ ಕೂತು ಕಾಡುತ್ತದೆ ಅನ್ನುವುದು ಹಾಗೂ ಅದರಿಂದಾಗಿ ನಾವು ತೆಗೆದುಕೊಳ್ಳುವ ನಿರ್ಧಾರಗಳು. ಕತೆಯ ಹೆಸರು 'ಆ ಕಡುಗಪ್ಪು ಕಣ್ಣುಗಳು'

ಒಂದು ಸಣ್ಣ ಮನಸ್ತಾಪ ಯಾವ್ಯಾವುದೋ ಅಮಲಿನಲ್ಲಿ ಇನ್ನೇನೋ ಆಗುವುದರಿಂದಲೇ‌ ಮನುಷ್ಯ ಜಾತಿಯನ್ನು ಇನ್ನೂ ಅರಿತುಕೊಳ್ಳುವುದಕ್ಕೆ ಸಾಧ್ಯವಾಗದೇ ಹೋಗಿರುವುದು. ಎಲ್ಲ ಸಲ ಗಲಾಟೆಯಾದಾಗಲೂ, ಯಾವ ಕಾರಣಕ್ಕಾಗಿ ಗಲಾಟೆ ನಿಗದಿಯಾಗಿತ್ತೋ ಅದಕ್ಕಿಂತಲೂ ಕೊನೆಯಲ್ಲಿ ಅದು ಉಳಿಯುವುದು ಇನ್ನೇನೋ ಆಗಿಯೇ! ಇದು ಇಂದಿನ ಸ್ಥಿತಿ.‌ ಮನುಷ್ಯನ ಭಾವಲೋಕ ವಿಚಿತ್ರವಾದದ್ದು. ಕೃತಜ್ಞತೆ ಮತ್ತು ಕೃತಘ್ನತೆಗೆ ಕೇವಲ ಒಂದು ಅಕ್ಷರದ ವ್ಯತ್ಯಾಸವಷ್ಟೇ. ಹಿಂಸಿಸುವುದೂ ಒಂದು ಉನ್ಮಾದವಿದ್ದಂತೆ, ಮಾಡಿದಂತೆ ಏರುತ್ತಲೇ ಹೋಗುತ್ತದೆ, ನಿಲ್ಲಿಸಬೇಕೆಂದು ಅನಿಸುವುದೇ ಇಲ್ಲ ಅನ್ನುವ ಸಾಲು ಎಲ್ಲಾ ಕಾಲದಲ್ಲಿಯೂ ಮನುಷ್ಯ ಯಾಕೆ ಕ್ರೌರ್ಯವನ್ನು ವಿಜೃಂಭಿಸುತ್ತಾನೆ ಅನ್ನುವುದಕ್ಕೆ ಉತ್ತರದಂತಿದೆ. ಈ ಕತೆಯ ಹೆಸರು 'ಸುಳಿ'

ನಂತರದ ಕತೆ ಬಾಡಿಗೆ ತಾಯ್ತನ, ಕಲಾಶಾಲೆಗೆ ಮಾಡೆಲ್ ಆಗುವ ಹೆಣ್ಣೊಬ್ಬಳ ಕುರಿತಾಗಿದ್ದು, ಜೊತೆಗೆ, ಯಾರ ಚಿತ್ರವನ್ನು ಬಿಡಿಸಿದ್ದೆನೋ, ಆ ಚಿತ್ರ ಹೆಚ್ಚಿನ ಬೆಲೆಗೆ ಮಾರಾಟವಾದಾಗ, ಆ ಹಣ ಅವರಿಗೂ ಸಲ್ಲಬೇಕು ಎಂದು ಮತ್ತೆ ಅವರನ್ನು ಹುಡುಕಿ ಹೋಗುವ ಒಬ್ಬ ಕಲಾವಿದನ ಕುರಿತಾಗಿಯೂ ಇದೆ. ಇದು ಒಬ್ಬ ಕಲಾವಿದನಿಗೆ ಅಥವಾ ಛಾಯಾಗ್ರಾಹಕನಿಗೆ (ಛಾಯಾಗ್ರಾಹಕನೂ ಕಲಾವಿದನೇ, ಅದರಲ್ಲಿ ಅನುಮಾನವಿಲ್ಲ!) ಇರಬೇಕಾದ ನೈತಿಕ ಪ್ರಜ್ಞೆ ಅನಿಸುತ್ತದೆ ನನಗೆ. ಇದು ನನಗೆ ಪಾಕಿಸ್ತಾನದ ಕ್ಯಾಂಪಿನಲ್ಲಿ ತೆಗೆದ 'ಅಪ್ಘನ್ ಗರ್ಲ್' ಫೋಟೋದಲ್ಲಿದ್ದ ಶರ್ಬತ್ ಗುಲಾಳನ್ನು ಫೋಟೋ ತೆಗೆದ ಸುಮಾರು ಇಪ್ಪತ್ತು ವರ್ಷಗಳ ನಂತರ ನ್ಯಾಷನಲ್ ಜಿಯೋಗ್ರಫಿಕ್ ತಂಡದವರು ಹುಡುಕಿಹೋದದ್ದನ್ನು ನೆನಪಿಸಿತು. ಈ ಕತೆಯ ಹೆಸರು 'ಶುಭ್ರಜ್ಯೋತ್ಸ್ನೆ'

ಖಾಲಿ ಜಾಗವನ್ನು ಹದ ಮಾಡಿ ಮನೆ ಕಟ್ಟುವುದು ಕಷ್ಟವೇನಲ್ಲ, ಆದರೆ ನೆನಪುಗಳೇ‌ ತುಂಬಿಕೊಂಡಿರುವ ಹಳೆ ಮನೆಯನ್ನು ಉದುರಿಸಿ ಹೊಸ ಮನೆ ಕಟ್ಟಿದರೂ ನೆನಪುಗಳು ಕಾಡದೇ ಇರುತ್ತವೆಯಾ? ಅನ್ನುವುದನ್ನು ಹೇಳುವ ಕತೆ 'ಹುಲ್ಲಾಗು ಬೆಟ್ಟದಡಿ'. ಕೊನೆಗೂ ಮನುಷ್ಯನಿಗೆ ಬೇಕಿರುವುದು ನೆಮ್ಮದಿಯಾ ಅಥವಾ ದೊಡ್ಡ ದೊಡ್ಡ ನಗರದ ಜೀವನವಾ ಅನ್ನುವ ಪ್ರಶ್ನೆಗೆ ಉತ್ತರಿಸುವ ಪ್ರಯತ್ನ ಮಾಡುತ್ತದೆ. 

ಎಂಥದ್ದೇ ಘಟನೆಯಾದರೂ ಮನೆಯಲ್ಲಿ ಮರುದಿನ ದೋಸೆ ಬಂಡಿಯ ಮೇಲೆ ದೋಸೆ ಹೊಯ್ಯಲೇಬೇಕು; ಅದೇ ಬದುಕು. ಹೊಯ್ಯುವವರಷ್ಟೇ ಬದಲಾಗಬಹುದು. ಆದರೆ, ಬೆಳಗಾಗುತ್ತದೆ, ಸಂಜೆಯಾಗುತ್ತದೆ,‌ ಕಾಲ ಜಾರುತ್ತದೆ, ಯಾರದೋ ಯೌವನಕ್ಕೆ ಮುಪ್ಪು ಬರುತ್ತದೆ. ಇನ್ನ್ಯಾರದೋ ಗರ್ಭದೊಳಗಿಂದಿಳಿದು ಪುಟ್ಟ ಅಳು ನಗು ಮೊದಲ ಬಾರಿಗೆ ಗಾಳಿಗೆ ಮೈಯೊಡ್ಡುತ್ತದೆ. ಇದು ಕಾಲದ ಪ್ರವಾಹ ಅನ್ನುವುದನ್ನು ಹೇಳುವ ಈ ಕತೆಯಲ್ಲಿ ನನ್ನನ್ನು ಕಾಡಿದ ರೂಪಕ ದೂರ್ವೆಯದ್ದು. ಈ ರೂಪಕ ವರ್ಷಗಟ್ಟಲೆ ನನ್ನನ್ನು ಕಾಡಿದೆ ಅಂದರೆ ಸುಳ್ಳಲ್ಲ. ಬಹುಶಃ ಇನ್ನಷ್ಟು ವರ್ಷಗಳ ಕಾಲ ಇದು ನೆನಪಿನಲ್ಲಿ ಉಳಿಯುತ್ತದೆ. "ಬೆಳಿಗ್ಗೆ ಕಾಲಡಿಗೆ ಸಿಕ್ಕಿ ಗೂನುಬೆನ್ನಿನವರಂತೆ ಬಾಗಿ ನಿಲ್ಲುವ ದೂರ್ವೆ ಕಾವೇರಿ ಕೊಯ್ದು ತೊಳೆದರೆ ಸಾಕು ಗಣೇಶನ ಮುಡಿಗೇರುವಷ್ಟು ಮತ್ತೆ ಪವಿತ್ರವಾಗಿಬಿಡುತ್ತಿತ್ತು. ಯಾರದ್ದೇ ಕಾಲಡಿಗೆ ಆದರೂ ತನ್ನತನ ಕಳೆದುಕೊಳ್ಳದಿದ್ದರೆ ತುಳಿತಕ್ಕೊಳಗಾದ ನೋವು ಬಹಳ ಹೊತ್ತಿರದಲ್ಲವೇ!". ಕತೆಯ ಹೆಸರು 'ಮಾಕಬ್ಬೆ'

ಬರೆಹದ ಮೊದಲಿಗೆ ಹೇಳಿದ್ದೆ; ಕೆಲವು ಸಣ್ಣ ಸಣ್ಣ ರೂಪಕಗಳು ಈ ಕಥಾಸಂಕಲನದ ಅನುಭವವನ್ನು ಇನ್ನಷ್ಟು ಆಪ್ತವಾಗಿಸುತ್ತವೆ ಅಂತ. ಜೊತೆಗೆ, ಕಥೆಗಾರರಿಗೆ ಇರಬೇಕಾದದ್ದು ಮೈಯೆಲ್ಲಾ ಕಣ್ಣು ಅನ್ನುವುದು ಈ ಕತೆಗಾರ್ತಿಗೆ ಹೆಚ್ಚು ಹೊಂದಿಕೆಯಾಗುತ್ತದೆ. ಇಲ್ಲಿ ಕಾಣಸಿಕ್ಕಿದ್ದು ಬಹಳ ಹೊಸದಾದ ರೂಪಕಗಳು. ಒಂದೆರಡು ನಿಮ್ಮ ಓದಿಗೆ..

"ಡಬ್ಬದಲ್ಲಿರುವ ಮದುವೆಯ ಬೂಂದಿಲಾಡಿಗೆ ಗಡ್ಡ ಮೀಸೆ ಆಗ ತಾನೇ ಮೂಡುತ್ತಿತ್ತು"

"ಭರಣಿಯಲ್ಲಿ ಹತ್ತತ್ತಿಟ್ಟ ಉಪ್ಪಿನಕಾಯಿಯ ಮುಖ"

"ಹಾಲೇ‌ ಕಾಣದ ಚಹದಂತೆ , ಹೆಚ್ಚು ಕಮ್ಮಿ ಛಾ ಕಣ್ಣು ಬಣ್ಣದ ಅರಲು ನೀರು"

"ಅಲ್ಲೇ ಮೂಲೆಯಲ್ಲಿದ್ದ ಪುಟ್ಟ ಗಿಡವೆರಡು ಮನೆಯೊಳಗೆ ತಂಪಗೆ ಹಬ್ಬಿದ್ದರೂ ಕಿಡಕಿಯತ್ತಲೇ ಮುಖಮಾಡಿ ಸೂರ್ಯನಿಗಾಗಿ ತಪಿಸುತ್ತಿದ್ದವು. ಬಹುಶಃ ಚಿಕ್ಕಿಯ ಅವಸ್ಥೆಯೂ ಈಗ ಹೀಗೆಯೇ ಇದ್ದಿರಬಹುದು"

ಒಮ್ಮೊಮ್ಮೆ ಗೋಡೆಗಳಾಚೆಯೂ, ಕೆಲವೊಮ್ಮೆ ಗೋಡೆಗಳ ನಡುವೆಯೂ ನಿಂತು ಸಂಬಂಧಗಳ ಕತೆಯನ್ನು ಹೇಳಿ ಕತೆಗಾರ್ತಿ ಬಯಲರಸಿ ಹೊರಟಿದ್ದಾರೆ. ಅರಸಿ ಹೊರಟ ಬಯಲು ಕೂಡಾ ಇನ್ನಷ್ಟು ಕತೆಗಳಾಗಿ ಅವರನ್ನೇ 'ಹರಸಿ' ಬರಲಿ ಅನ್ನುವ ಆಶಯಗಳೊಂದಿಗೆ ಹಾಗೂ ಸಂಕಲನಕ್ಕಾಗಿ ಕತೆಗಾರ್ತಿಗೆ ಧನ್ಯವಾದಗಳೊಂದಿಗೆ,

~'ಶ್ರೀ'
   ತಲಗೇರಿ