ಭಾನುವಾರ, ಜೂನ್ 24, 2012


                               "ಹನಿ ಹನಿಯ ಋತು ಪರ್ವ...."!!

          ಕಪ್ಪು ಮುಗಿಲ ತನುವಿನ ತುಂಬ ಬೆಳಕಿನ ಬಳ್ಳಿ ಹಬ್ಬಿದಾಗ,ಕರಿಯ ಬಂಡೆಯಲಿ ಶ್ವೇತ ಬಿರುಕುಗಳೋ ಎಂಬಂತೆ ರೇಖೆಗಳ ಸೆಲೆಯೊಂದು ಹೊರಳಿದಾಗ,ತಣಿತಣಿವ ಹಕ್ಕಿಯೊಡಲ ಹಾಡು,ಸುಳಿಸುಳಿವ ಪರಿಮಳದ ಜಾಡು ಹಿಡಿದ ಗೆದ್ದಲಿನ ಗೂಡುಗಳ ಅವಸಾನದ ಪಾಡು,ಸುಡುಸುಡುವ ಎದೆಯೊಳಗಣ ತುಮುಲಗಳ ಸಹವಾಸದಿ ಪರವಶವಾಗಿಹ ಎದೆಗೂಡಿನ ಜಿದ್ದನು ನೋಡು..ಕರಗಿ ಕರಗಿ ಧಾರೆಯಾಗಿ ಧರೆಗಿಳಿವ ಕಂಬನಿಯ ಕಾರುಬಾರು..ಎಲೆ ಎಲೆಗಳ ಮೇಲೆ ಬಿದ್ದು,ಮುದ್ದಾಗಿ ಮುತ್ತಾಗುವ ಹನಿಹನಿಗಳದೇ ದರ್ಬಾರು..

          ಹೃದಯದೊಳಗೆ ಕಟ್ಟಿಕೊಂಡಿಹ ಕೋಟೆಯೊಳಗೆ ಹೆಪ್ಪುಗಟ್ಟಿಹ ನೋವಿನೆಳೆಗಳ ನೆರಳುಗಳೆಲ್ಲ ಸುಳಿಸುಳಿಯಾಗಿ ಬಳಗವಾಗಿ ಹನಿಯಾಗುತಿವೆ..ಎಂಥದ್ದೋ ಅವ್ಯಕ್ತ ಭ್ರಮೆಯ ಸಂಭ್ರಮದ ವಿಭ್ರಮದಲ್ಲಿ ಅಳುತ್ತಿದೆ ವಿಹ..ಅದಕೂ ಕಾರಣ ವಿರಹ!ಬಾನು ಭುವಿಗಳ ಮಿಲನಪರ್ವ,ಕನಸಿನ ಧ್ಯಾನಗರ್ವವೇ ಆಗಿಹೋಗಿದೆಯೇ?..ಕ್ಷಿತಿಜದಲ್ಲಿ ಸಮಾಗಮವೆಂಬುದಲ್ಲ ಸತ್ಯ!ಅಂತ್ಯವಿಲ್ಲದ ಪರಿಧಿಗೆ ಆದಿಯೆಂಬುದೇ ಮಿಥ್ಯ!..ಮೃದುಲ ಕ್ಷಿತಿಯ ಮಡಿಲ ಒಡಲಿಗೆ ಚಾಚಿಕೊಳುವ ಕಾತರ..ವಿರಹ ತಾಪದಿ ತಪ್ತವಾದ ಹೃದಯಕ್ಕೆ ಲಗ್ಗೆಯಿಟ್ಟು,ಆಪ್ತವಾಗುವ ಉಪಾಸನೆಯ ತಪಸ್ಸು..ನೊಂದ ಜೀವಕ್ಕೆ ಸಾಂತ್ವನದ ಸಹಸ್ಪರ್ಶ ನೀಡುವ ಅವಸರ..ನವಿಲಿಗೋ,ಅಳುವ ಮುಗಿಲ ಕಣ್ಣ ಹನಿಗಳಲಿ ಮಿಂದು,ನೃತ್ಯ ಮಾಡುವ ಆತುರ..ಗರಿಬಿಚ್ಚಿ ಬೆರಗಾಗಿ,ಸ್ವರತನ್ಮಯವಾಗಿ ಆಸ್ವಾದಿಸುವ ಆ ಕ್ಷಣದ್ದೆಂಥ ಚಮತ್ಕಾರ..ಸೃಷ್ಟಿ ಗೀಚಿದ ಸುರುಳಿರೇಖೆಗೆ ಬಣ್ಣ ಹಚ್ಚಿಹನ್ಯಾರೋ ಒಬ್ಬ ಪೋರ..!ಸೊಗಡಿಗೇ ಸೋಗು ಹಾಕಿ,ಬೆಡಗಿಗೇ ಬೀಗವಿಕ್ಕಿ,ಜೋಪಾನವಾಗಿ ಎದೆಯ ಜಗುಲಿಯಲ್ಲಿ ಜಾಗಕೊಡುವ ಹೃದಯಂಗಮ ಸೌಂದರ್ಯದ ಸಂಗಮವಲ್ಲವೇ ಈ ಚಿತ್ರ!!..

          ಪತ್ರ ಬರೆವ ಚಾಳಿಗೆ ಪಾತ್ರವಿರದೆ,ಬಿತ್ತರಗೊಳ್ಳದೆಯೇ ಸತ್ತಿವೆಯೇ ಭಾವಗಳು?!ಕಂತಿರದ ಬದುಕಿನ ಅಧ್ಯಾಯವ,ಹೊಸಕಂತಿನ ಕ್ರಾಂತಿಗೆ ವಿಸ್ತರಿಸುವ ಅಲೆಮಾರಿಯ ತಲೆಮಾರಿನ ಪರ್ವವೇ?ಬೀಸುವ ವಿರಸದ ಬಿಸಿಗಾಳಿಗೂ ತುಸುತುಸು ಪ್ರೀತಿಯ ತಾನೊಯ್ಯುವ ಹಸಿವಿದೆ..ಮಡಿಚಿಟ್ಟ ಮನಸಿನ ಮಡಿಕೆಗಳ ಮಗ್ಗುಲಲ್ಲೂ ತುಡಿತುಡಿವ ಮೌನದ ಸಂವೇದನೆ!..ಮುದುಡಿರುವ ಮೌನಕ್ಕೆ ಹದವಾಗಿ ಬದಲಾಗಿ,ಕತೆಯಾಗುವ ಯೋಚನೆ!ಬದಿಬದಿಗೆ ತಹಬದಿಗೆ ಬರದ ಮಿಲನಗಳಿಗೆಯದೇ ಯಾಚನೆ!..ದಿನದಿನವೂ ಎದುರುಬದುರಾಗಿ ನಿಂದು,ಅವಕಾಶದಿ ಚುಂಬನವ ಇದಿರುಗೊಳ್ಳುವ ಕಾಮನೆ..ಇನಿಯೆಯ ಸ್ಪರ್ಶದಿ ನಶೆಯ ವಶವಾಗುವ ಇಂಗಿತ..ಹನಿ ಹನಿ ಕಂಬನಿ,ಇಳೆಯ ತಬ್ಬುವ ವೇಳೆಗೆ ಕಲ್ಲಲ್ಲೂ ಅಲೆಯುವುದು ಅಲೆಅಲೆಯ ಸಂಗೀತ..ಅಟ್ಟಹಾಸದ ಸದ್ದಿನಲ್ಲಿ,ಮಂದಹಾಸದ ಸುದ್ದಿಯಲ್ಲಿ ಅಂದಗಟ್ಟಿದೆ ಈ ಮಧುಚಂದ್ರವಿರದ ಮಿಲನ ಮನ್ವಂತರದ ಋತು..ಸೆರೆಯಾಯಿತು ವಿಧಿ,ಎದೆಗರ್ಭದ ಪ್ರೀತಿಗೆ ಸೋತು...!

          ವಿಷಾದದ ಬಸಿರಲ್ಲಿ ವಿನೋದದ ಸಂವಾದ..ಶೈಶವದ ಶೀಷೆಯಲಿ ಮಲಗಿರುವ ಅವಶೇಷಗಳು ಇತಿಹಾಸವ ಧ್ವನಿಸುತ್ತವೆ;ಹಿತದ ಕಚಗುಳಿಯಾಗುತ್ತವೆ..ಅಂತೆಯೇ,ಈ ಹನಿಗಳ ಚಳುವಳಿಯು..ಅಂತರಾಳದ ಸ್ವರಸ್ಯಂದನ ಮುನ್ನಡೆದಿರೆ,ಪ್ರೀತಿಯ ಪರಿಚಯವು..ಮರುಭೂಮಿಗೂ ಖುಷಿಕೊಡುವುದು ಹನಿಗಳ ತಂಪನೆ ಸಿಂಚನವು..ಕಂಬನಿಯೇ ಜಾಹ್ನವಿಯಾಗಿ,ಜೀವ ಸೃಜನಕ್ಕೆ ಮುನ್ನುಡಿಯಾಗಿ,ಮಗುವಿನ ಮಂದಸ್ಮಿತ,ಸ್ಫಟಿಕದ ತೆರ ಕಣ್ಣುಕುಕ್ಕುವ ವೇಳೆಗೆ,ಮತ್ತದೇ ಗಗನದಿ ಮುಗಿಲು,ಕಾಮನಬಿಲ್ಲಿನ ಜೊತೆ ಮಗುವಾಗುವುದು..ಹೊಸ ಬಾಂಧವ್ಯದ ಸೇತು,ಕತೆಯಾಗಲು ಕನವರಿಸುವುದು...!!!....


                                                                                                          ~‘ಶ್ರೀ’
                                                                                                            ತಲಗೇರಿ

                        ಖಾಲಿ ಪುಟದ ಕವಲುದಾರಿ...

            ಬರೆಯುವ ಮನಸಿಲ್ಲದೆ ಪದಗಳಿಗೆ ಸೆರೆಯಾಗೋ ಸರಸವೀ ಬದುಕು!ಮನಸು,ಕನಸು,ನನಸು ಈ ಮೂರರ ಸುಗಳಿಗೆಗಾಗಿ ಕಾತರಿಸುವ ಭಾವಗಳಲ್ಲಿ ಸಂತೃಪ್ತಿಯ ಸಂಗೀತ ಹೊರಹೊಮ್ಮುವಾಗ ಮತ್ತದೇ ಬದುಕಲ್ಲಿ ಎಂಥದ್ದೋ ಅರ್ಥವಾಗದ ಆನಂದ ಮನೆಮಾಡಿದ ಸಂಭ್ರಮದ ಸಂಗಮ..ನೆರಳ ಹೆರುವ ನಮಗೂ,ಬೆಳಕ ಸುರಿವ ಸೂರಿಗೂ ಏನೋ ಒಂಥರದ ನಂಟು..ಖಾಲಿಯಾಗುತ್ತಲೇ ಇರುತ್ತವೆ ದಿನದಿನವೂ ಬದುಕಿನ ಪುಟಗಳು ‘ತಾವೂ ಖಾಲಿ’ ಎಂಬ ಕೀರ್ತನೆಯೊಂದಿಗೆ,ಬರುವ ನಾಳೆಗಳ ಬಗೆಗಿನ ಹಳೆಯದೇ ಹೊಸ ಭರವಸೆಯೊಂದಿಗೆ...

            ಅರ್ಥವಾಗದ ಸಮಯದಲ್ಲಿ,ಅರ್ಥವಿಲ್ಲದ ಅರ್ಥಗಳು ಸ್ಫುರಿಸುತ್ತಾ,ಖಾಲಿ ಪುಟಗಳಲ್ಲೂ ಕುಣಿಕುಣಿವ ಅಕ್ಷರಗಳಾಗಿ ‘ಕಣಿ’ ಹೇಳುತ್ತವೆ..ಆಸೆಗಳಿಗೆ ಮಣಿವ ಮನಸಿಗೆ ಭಿಕ್ಷೆ ಹಾಕುತ್ತವೆ..ಉನ್ಮಾದದ ಉನ್ನತಿಯಲ್ಲಿ ಸೋಲುವ ಉದಾಹರಣೆಗಳಾಗಿ ಶರಣಾಗುತ್ತವೆ..ಅಲ್ಪನೆಯ ಕಲ್ಪನೆಗೂ,ಸ್ವಲ್ಪಸ್ವಲ್ಪವೇ ಸಾಕ್ಷಾತ್ಕರಿಸಲ್ಪಡುವ ಶಿಲ್ಪಕ್ಕೂ ಎಷ್ಟೊಂದು ಅಂತರ!ಸುರಿವ ಮಳೆಹನಿಗಳ ಸನ್ನಿಧಿಯಲ್ಲಿ ಮಗುವಾಗುವ ಮನಸ್ಥಿತಿ ಎಲ್ಲರಲ್ಲಿಯೂ ಇಲ್ಲ..ಆ ದೃಶ್ಯವೂ ಒಂದು ಸುಂದರ ಕಲಾಕೃತಿಯೇ ಅಲ್ಲವೇ?ಚಿಕ್ಕಪುಟ್ಟ ಸಂಗತಿಗಳು ಸುಕ್ಕಾಗುವಾಗ,ಅದರ ಸವಿಗೆ ಸಂಗಾತಿಯಾಗುವುದು ತಪ್ಪಲ್ಲ ಅಲ್ಲವೇ?ಸ್ಮೃತಿಯ ಪ್ರತಿ ಪದರಿನಲ್ಲೂ ನೆನಪಿನಾಚೆಯ ಪರಿಧಿಯೊಂದು ಪರದೆಯಾಗಿ ಹರಡಿಕೊಂಡಿರುತ್ತದೆಯೇ?ಸರಿಸರಿವ ಮಂದ್ರ ಗಾಳಿಗೆ ಉಸಿರ ಕಸಿಯುವ ಮನಸಿರುವುದಿಲ್ಲ,ಬದಲಾಗಿ,ಬಾಂಧವ್ಯ ಬೆಸೆಯುವ,ಹೆಸರ ಹೊಸೆಯುವ ಹೊಸ ನಾದದ ಆಂತರ್ಯವಿರುತ್ತದೆ..ಚಕ್ರವಾಕ ಪಕ್ಷಿಗಳ ಸಮ್ಮಿಲನಕ್ಕೆ ಸಾಕ್ಷಿಯಾಗುವ ಚಂದ್ರಮನ ಬಗಲಲ್ಲಿ ತಾರೆಗಳು ಚೆಲ್ಲಾಟವಾಡುತ್ತವೆ.ಖಾಲಿ ಖಾಲಿ ಪುಟಗಳ ಅಂಗಳದಲ್ಲಿ ಕಾಣದ ರೇಖೆಗಳು ಕಾಡಿಸಿಬಿಡುತ್ತವೆ;ಬೆಳದಿಂಗಳ ರಾತ್ರಿಯಂತೆ!..

            ಸತ್ತಂತೆ ಮಲಗಿರುವ ಗೊಂಚಲಿ ಗೊಂಚಲು ಕವಲುದಾರಿಗಳು ನೂರಾರು ಕತೆ ಹೇಳುತ್ತವೆ..ನವಿಲೂರ ಮಯೂರಚಂದ್ರಿಕೆಯನ್ನು ಸಂಗಮಿಸುವ ಕ್ಷಣಕ್ಕೆ ಸಾಕ್ಷಿಯಾಗುತ್ತವೆ.ಅರಳಿರುವ ಪರಿಮಳದ ಹೂವ ಪ್ರೀತಿಗೆ ಪರವಶವಾಗುತ್ತವೆ..ಒಂದೊಂದು ಕವಲುದಾರಿಯ ಭೂತಲೋಕದ ಗೋರಿಯೊಳಗೂ ಮಾಸಿಹೋಗದ ವ್ಯಥೆಯಿದೆ..ಬಾರಿ ಬಾರಿ ಸಾರಿ ಹೇಳುವ ಅನುಭವದ ಅಭಿಮಾನಕ್ಕೆ ಯಶಸ್ಸಿನ ಅಭಿಯಾನವಾಗುವ ಕಸುವಿದೆ..ತೆರೆದಂತೆ ತೆರೆದುಕೊಳ್ಳುತ್ತಾ,ಭವಿಷ್ಯಕ್ಕೆ ತನ್ನತನವನ್ನೇ ಬಿಕರಿ ಮಾಡುವ ಖಾಲಿಪುಟಗಳ ವೈಖರಿಯೇ ವಿಸ್ಮಯ!ಖಾಲಿಪುಟದೊಳಗೂ ಬ್ರಹ್ಮಾಂಡವಿದೆ..ಖಾಲಿ ಖಾಲಿ ಎನ್ನುತ್ತಲೇ ಎಲ್ಲವನ್ನು ತುಂಬಿಕೊಡುವ ಆ ಖಾಲಿತನಕ್ಕೆ ಅದೆಂಥಹ ಖಯಾಲಿ!ಅಲ್ಲಲ್ಲಿ ಹರಡಿಕೊಂಡಿರುವ ರಸದ ನೆಳಲ ಕವಲುದಾರಿಗಳು ಮತ್ತೆ ಮತ್ತೆ ಸಂಧಿಸುತ್ತವೆ..ಅವೇ ರಸನಿಮಿಷಗಳೆಂದು ಹೆಸರಾಗುತ್ತವೆ,ಹಸಿರಾಗುತ್ತವೆ!..ಏನೂ ಇಲ್ಲದ ಖಾಲಿಯಲ್ಲೂ ರೂಪುಗೊಳ್ಳುತ್ತವೆ ಎಲ್ಲವನ್ನು ಮುಟ್ಟಿಸುವ ಗುರಿಯ ದಾರಿಗಳು..ಶೂನ್ಯದಲ್ಲೂ ಪರಿಪೂರ್ಣತ್ವವನ್ನು ಬಿಂಬಿಸಿದ ಸುಳಿವುಗಳು..ಹೀಗೇ ಬದುಕಿನೆಲ್ಲ ಕುಹಕ,ತವಕ,ತಹತಹಿಸುವಿಕೆಯ ಬಳುಕು,ಬೆಳಕುಗಳ ಅನಾವರಣದ ತಾಣವೀ ಖಾಲಿ ಪುಟದ ಕವಲುದಾರಿ....

                                                                                                 ~‘ಶ್ರೀ’
                                                                                                   ತಲಗೇರಿ

ಭಾನುವಾರ, ಜೂನ್ 10, 2012


                           ‘ಸಂಜೆಗಡಲು’
                                      ....ಮಳಲ ಮೇಲೆ ಪ್ರೀತಿ,ಸಾವು ಮತ್ತು ನೆಳಲು...!


           ಮುಸ್ಸಂಜೆಯ ಸಮಯ..ಬಾನ ತುಂಬೆಲ್ಲಾ ರಂಗುರಂಗಿನ ರಂಗವಲ್ಲಿ...ಒಂದೊಂದು ರೂಪದ ಒಂದೊಂದು ಚಿತ್ರಗಳೋ ಎಂಬಂತೆ ಮೋಡಗಳ ಹಾವಳಿ..ವಿವಿಧ ಬಣ್ಣಗಳ ಸಂಗಮದಿ ಸೃಷ್ಟಿ ರಚಿಸಿದ ಚಿತ್ರವೇ ಅದೆಂಥ ಮನೋಹರ..ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಬಣ್ಣಬಣ್ಣಗಳಲ್ಲೂ ಅದಾವ ಚಂಚಲತೆ?ಸೃಷ್ಟಿಯ ಕುಂಚದ ಹೊರಳಾಟಕ್ಕೆ ಕಾಗದವಾಗುತ್ತಿರುವ ಆ ಬಾನಿಗೋ ಅದಾವ ಪರವಶತೆ?ಆದರೂ ಬಿಡಲೊಲ್ಲದಲ್ಲ ಇದರ ಬಗೆಗಿನ ಮೋಹಕತೆ!ಹಕ್ಕಿಗಳೆಲ್ಲಾ ಬಳಗವ ಕರೆದು ಮಾಡುತಿವೆ ಚಿಲಿಪಿಲಿಯ ಕಲರವವ..ಗೂಡು ಸೇರುವ ಮುನ್ನ ತನ್ನವರನ್ನೆಲ್ಲಾ ಒಮ್ಮೆ ನೋಡುವ ತವಕವೇ?ಅಥವಾ ಸೋತ ಮನಸುಗಳಿಗೆ ನಾಳೆಯಿದೆ ಮತ್ತೆ ಸಾಧಿಸಲಿಕ್ಕೆ ಎಂಬ ಸಾಂತ್ವನದ ಸಂಗತಿಯೇ?ಕಡಲ ತೀರದ ತುಂಬೆಲ್ಲಾ ಹರಡಿಕೊಂಡಿರುವ ಮಳಲು..ಅಲ್ಲಲ್ಲಿ ಬಿದ್ದಿರುವ ಶಂಖ ಚಿಪ್ಪುಗಳು..ಹಾಗೇ ಮಲಗಿರುವ ನಕ್ಷತ್ರ ಮೀನುಗಳು..ಮಂದಮಂದವಾಗಿ ಬೀಸುವ ಆ ಗಾಳಿಗೋ ಅದಾವ ತನ್ಮಯತೆ?!ಗಾಳಿಯ ಶೀತಲ ಸುಖಸ್ಪರ್ಶಕೆ ಅವಳ ಮುಂಗುರುಳಿಗೂ ಹಾರಿಹೋಗುವ ಬಯಕೆ..ಮತ್ತೆ ಮತ್ತೆ ಅದೆಂಥ ಮಾದಕತೆ ಆ ಗಾಳಿಯ ಹಂಬಲಕೆ!!...

           ಆಕೆ ಕುಳಿತಿದ್ದಾಳೆ ಕಡಲ ತೀರದಲ್ಲಿನ ಆ ಕಲ್ಲುಬಂಡೆಯ ಮೇಲೆ..ಆ ಕಲ್ಲೋ ಎಂದೋ ತನ್ನ ಬಣ್ಣ ಕಳೆದುಕೊಂಡಿದೆ..ಆ ಕಡಲ ಅಲೆಗಳ ಸ್ಪರ್ಶಕ್ಕಾಗಿ ಅಲ್ಲೇ ಕುಳಿತಿದೆ.ಒಮ್ಮೊಮ್ಮೆ ಬಂದು ಬಡಿವ ಅಲೆಗಳಿಗೂ,ಹಾಗೇ ಬಂದು ಸೋಕಿಹೋಗುವ ಅಲೆಗಳಿಗೂ ಎಷ್ಟೊಂದು ಅಂತರ!..ಎಂತಹ ಭಿನ್ನತೆ..ಅಲೆಗಳ ಒಂದು ಕ್ಷಣದ ಸ್ಪರ್ಶಕ್ಕಾಗಿ ಆ ಬಂಡೆ ಎಷ್ಟೋ ವರ್ಷಗಳಿಂದ ಅಲ್ಲೇ ತಪಸ್ಸನ್ನಾಚರಿಸುತ್ತಿರುವಂತೆ ತೋರುತ್ತಿದೆ.ಕಲ್ಲನ್ನು ಪುಡಿಗಟ್ಟಲೋ ಎಂಬಂತೆ ನುಗ್ಗಿಬರುವ ಅಲೆಗಳಿಗೂ,ತೋಯ್ದು ತೋಯ್ದು ಶೀತವಾಗಿಸಲೋ ಎಂಬಂತೆ ಸುರಿವ ಮಳೆಯ ಒಲವಿಂದಲೂ ತಲ್ಲಣದ ತವಕ..ಆದರೂ ಕ್ಷಣಕ್ಷಣಕ್ಕೂ ಏನೋ ಒಂಥರಾ ಸಿಹಿಯ ಪುಳಕ..ಅದಕ್ಕೇ ಅಲ್ಲವೇ ಆ ಬಂಡೆಯಿನ್ನೂ ಹಾಗೇ ಸ್ಥಿರವಾಗಿರುವುದು..ಯಾವ ಕನಸುಗಳಿಲ್ಲದ ಆ ಬಂಡೆಗಾದರೂ ಹೇಗೆ ಬಂತು ಆ ತರದ ಮನಸು?ಎಲ್ಲ ಆ ರೀತಿಯ ಪ್ರೀತಿಯ ಒಂದು ಸ್ಪರ್ಶಕ್ಕಾಗಿಯೇ ಅಲ್ಲವೇ ಎನಿಸುತ್ತದೆ..ಇಂತಹ ಬಂಡೆಯ ಮೇಲೆ ಕುಳಿತಿದ್ದಾಳೆ ಆಕೆ ಬಹಳ ಹೊತ್ತಿನಿಂದ..ಈಗ ಗಾಳಿ ಒಮ್ಮೆ ಮಂದ್ರವಾಗಿ,ಇನ್ನೊಮ್ಮೆ ಪ್ರಬಲವಾಗಿ ಬೀಸುತ್ತಿದೆ..ಸಾಂದ್ರವಾಗಿರುವ ಅವಳ ಮುಂಗುರುಳೂ ನವೋತ್ಸಾಹದಿಂದ ಬಳುಕಾಡುತ್ತಿದೆ.ಆದರೆ ಅವಳಲ್ಲಿ ಮಾತ್ರ ಬತ್ತದ ನೀರವತೆ!..ಮೌನ ಮಲ್ಲಿಗೆಯೋ ಎಂಬಂತೆ ಕುಳಿತಿದ್ದಾಳೆ ಸ್ನಿಗ್ಧ ಸೌಂದರ್ಯವತಿ ನಿರಾಭರಣ ಸುಂದರಿಯಾಗಿ!..ಮೊಗದ ಮೇಲೆ ಅಲ್ಲಲ್ಲಿ ಬಿದ್ದಿರುವ ರಸದ ನೆಳಲು...ಮಂಕುದಿಬ್ಬಗಳಾದಂತಿಹ ಕಣ್ಣುಗಳು..ಆ ದಿಬ್ಬಗಳ ಬೇಲಿಯೋ ಎಂಬಂತೆ ಚೆಂದದ ಹುಬ್ಬುಗಳು..ಬಣ್ಣದ ಜಗತ್ತಿನಲ್ಲಿ ಕಪ್ಪು ಬಿಳಿ ಬಣ್ಣಗಳೇ ಅವಳ ಸಂಗಾತಿಗಳಾಗಿವೆ;ಕಪ್ಪು ಮನಕ್ಕೆ,ಬಿಳಿ ದೇಹಕ್ಕೆ...!ಮುದ್ದು ಮನಸಿನ ತುಂಬೆಲ್ಲಾ ಛಿದ್ರವಾಗಿ ಹರಿದ,ಹರಡಿದ ಕನವರಿಕೆಗಳು..ಕತ್ತಲೆಯಲ್ಲಿ ನರಳಿದಂತೆ ಅವಳಿಗೆ ಅನಿಸುತ್ತಿದೆ.ಸಾಯಂಕಾಲದ ಸಮಯವಲ್ಲವೇ?ಸಮುದ್ರತೀರದಲ್ಲಿ ಮಳಲ ಮೇಲೆ ಹೆಜ್ಜೆ ಮೂಡಿಸುವ ಪಾದಗಳೇನು ಕಡಿಮೆ ಇರಲಿಲ್ಲ.!ಅದಾವುದರ ಮೇಲೆಯೂ ಈಗ ಅವಳ ಗಮನವಿಲ್ಲ.ಸಮುದ್ರದಲೆಗಳು ಶಾಂತವಾಗಿ ಹೊಯ್ದಾಡುತ್ತಿವೆ.ನೋಡುತ್ತಿದ್ದಾಳೆ,ಸಮುದ್ರದಲೆಗಳನ್ನೇ ನೆಟ್ಟ ದೃಷ್ಟಿಯಿಂದ...ಅರೇ!ಎಷ್ಟು ಹೊತ್ತು?ಅವಳ ಕಣ್ಣ ರೆಪ್ಪೆಗಳೇಕೆ ಮುಚ್ಚುತ್ತಲೇ ಇಲ್ಲ?ಇದ್ದಕ್ಕಿದ್ದಂತೆ ಸಾಗರದಲೆಗಳು ಭಯಾನಕವಾಗತೊಡಗಿದವು...ಸಮುದ್ರದಲ್ಲಿರುವ ನೌಕೆಗಳೆಲ್ಲಾ ಓಲಾಡತೊಡಗಿದವು.ಸಾಗರದಲ್ಲಿ ಈಜಾಡುತ್ತಿದ್ದ ಮಂದಿ ಭೀತಿಯಿಂದ ತೀರಕ್ಕೆ ಓಡಿಬರತೊಡಗಿದರು.ಇವರನ್ನು ನೋಡಿ ಈಕೆ ಗಹಗಹಿಸಿ ನಗುತ್ತಿದ್ದಾಳೆ..ದೊಡ್ಡದಾಗಿ,ಹ್ಹಹ್ಹಹ್ಹಾ..ಹ್ಹೊಹ್ಹೋ..ಹ್ಹೆಹ್ಹೆಹ್ಹೇ!!!ಎಂದು...ಅವಳ ಹತ್ತಿರದಲ್ಲೇ ಇಬ್ಬರು ಪುಟ್ಟ ಮಕ್ಕಳು ಇದ್ಯಾವುದರ ಪರಿವೆಯಿಲ್ಲದೇ ಮರಳಿನಲ್ಲಿ ಗೊಂಬೆಗಳನ್ನು ಮಾಡುತ್ತಾ ಮದುವೆಯ ಆಟವಾಡುತ್ತಿದ್ದಾರೆ.ಆ ಇಬ್ಬರು ಪುಟ್ಟ ಮಕ್ಕಳು ಅಲ್ಲೇ ಒಬ್ಬರನ್ನೊಬ್ಬರು ಮುದ್ದಿಸುತ್ತಿದ್ದಾರೆ.ಯಾವ ಕಲ್ಮಶವಿಲ್ಲದ ಆ ಪ್ರತಿ ಪ್ರೀತಿಯ ಮುತ್ತಿನಲ್ಲಿ ಎಂತಹ ಅಮೃತತ್ವವಿದೆಯೇನೋ ಎಂದನಿಸುತ್ತಿತ್ತು.ಇಷ್ಟು ಹೊತ್ತು ನಗುತ್ತಿದ್ದಳು ಈಕೆ.ಆದರೆ,ಈ ಇಬ್ಬರು ಮಕ್ಕಳನ್ನು ನೋಡಿದೊಡನೆ,ನಿಧಾನವಾಗಿ ಅವಳ ನಗು ವಿಕಾರವಾಗತೊಡಗಿತ್ತು..ನಗುತ್ತಾ ನಗುತ್ತಾ ನರಳುವಿಕೆಯಂತೆ,ಈಗ ಆ ನಗುವೇ ಅಳುವಾಗತೊಡಗಿತ್ತು.ಒಮ್ಮೆಲೇ ಜೋರಾಗಿ ಬಿಕ್ಕಳಿಸತೊಡಗಿದಳು.ಕೂಗತೊಡಗಿದಳು..ಆಚೆ ಈಚೆ ನೋಡಿದಳು..ಯಾರಿಗೂ ಅವಳ ಮೇಲೆ ಗಮನವಿರಲಿಲ್ಲ.ಸಣ್ಣದಾಗಿ ಅಳತೊಡಗಿದಳು.ಒಮ್ಮೆಲೇ ಬೆಚ್ಚಿಬಿದ್ದಳು.ತನ್ನ ನೆರಳನ್ನೇ ನೋಡುತ್ತಿದ್ದಾಳೆ..ಮುಖದಲ್ಲಿ ಒಂಥರದ ಭಯ ಆವರಿಸತೊಡಗಿತ್ತು...ಕಣ್ಣುಗಳಲ್ಲಿ ಒಂದೇ ಸಮನೆ ನೀರು ಸುರಿಯುತ್ತಿದೆ..ಹಾಗೇ ನೋಡುತ್ತಿದ್ದಾಳೆ ತನ್ನ ನೆರಳನ್ನೇ!ಮತ್ತೆ ಮತ್ತೆ ಬೆಚ್ಚಿಬೀಳುತ್ತಿದ್ದಾಳೆ.ನೆರಳು! ನನ್ನದೇ ನೆರಳು!!ಎಲ್ಲಿತ್ತು ಇಷ್ಟು ಹೊತ್ತು?ನನ್ನ ಜೊತೆಯೇ ಇತ್ತೇ ಅಥವಾ ವಿಹರಿಸಲು ಎಲ್ಲಿಯೋ ಹೋಗಿತ್ತೇ?ಅಥವಾ ನಾನೇ ಗಮನಿಸಿಯೂ ಗಮನಿಸಿರಲಿಲ್ಲವೇ?ನನ್ನ ಪ್ರತಿಬಿಂಬವೇ ಇದು?ಹೀಗೇ ಹೀಗೇ ಅವಳ ಮನದಲ್ಲಿ ಹತಾರು ಪ್ರಶ್ನೆಗಳು ಹುಟ್ಟಿಕೊಳ್ಳತೊಡಗಿದವು..ಅವಳ ಅಳು ಈಗ ಒಂದು ಕ್ಷಣ ನಿಂತಿತ್ತು.ಅವಳೆಲ್ಲ ಗಮನ ಈಗ ಅವಳ ನೆರಳಿನ ಮೇಲೆಯೇ ಕೇಂದ್ರೀಕೃತವಾಗಿದೆ!ನನ್ನದೆನ್ನುವ ಈ ನೆರಳು ನನ್ನ ಸ್ವಂತದ್ದೇ?ಅನುಕ್ಷಣವೂ ನನ್ನನ್ನೇ ಹಿಂಬಾಲಿಸಿ ಬರುತ್ತಿದೆಯೇ?ಇದೆಂತು ಸಾಧ್ಯ;ಬಿಟ್ಟಿರದ ಅನುಬಂಧವಿರಲೆಂತು ಸಾಧ್ಯ?ಇದು ಕಪ್ಪನೆಯ ದಿಬ್ಬವಲ್ಲ,ಮಬ್ಬು ಮಬ್ಬು ದೀಪವೂ ಅಲ್ಲ!!ಒಂಚೂರು ಸದ್ದಾಗದಂತೆ ಪ್ರತಿಕ್ಷಣವೂ ನನ್ನೊಡನಿರಲೆಂತು ಸಾಧ್ಯ?ಇದರ ಮೌನವೇ ಸಾವಿರ ಮಾತಾಗುತ್ತಿದೆಯೇ?ಇದರ ಮೌನವೇ ಸಾವಿನ ಮಾತಾಗುತ್ತಿದೆಯೇ?ಅರ್ಥವಾಗುತ್ತಿಲ್ಲ ನನಗೆ..!ತಣ್ಣನೆಯ ಮೌನ..ಅಲ್ಲ ಅಲ್ಲ!ಉಸಿರನ್ನೇ ಹಿಸುಕಿದಂತಿನಿಸುವ ಭಯಂಕರ ಮೌನ..!ಧಗಧಗಿಸುತ್ತಿರುವ ಮೌನ..ಇರಲಾರದೇ?..ಇರಬಾರದೇ?..ಮನಸು ನುಡಿಸುವ ಮೌನ ತರಂಗದಿ ಅಪಶೃತಿಯ ತರಂಗ ಮೇಳೈಸಿದೆಯೇ?..ಅಪಶೃತಿ??!!..ಹ್ಹಹ್ಹಾ..ಅಪಶೃತಿಯೇ?ಹಾಗಾದರೆ ಶೃತಿಯೆಂದರೇನು?ಶೃತಿ ಅಪಶೃತಿಗಳ ನಡುವಿನ ಸಂಗತಿಯನ್ನು ಅರಿಯಲೇ?ಅಥವಾ ಬದುಕಿನ ಅರ್ಥವನ್ನೇ ಕಾಣದ ನನಗೆ ಇವುಗಳ ಅರ್ಥ ಹುಡುಕುವ ವ್ಯರ್ಥ ಪ್ರಯತ್ನ ಬೇಡವೇ?..ಇರಲಾರವೇ ಎರಡೆರಡು?ಮಂಜುಗಡ್ಡೆ ನೀರಾದಂತೆ,ನೀರೇ ಮಂಜುಗಡ್ಡೆಯಾದಂತೆಯೇ ಮತ್ತೆ?ಶೃತಿಯೇ ಅಪಶೃತಿಯಾಗಿ,ಅಪಶೃತಿಯೇ ಶೃತಿಯಾಗಿ ಬಾಳಸಂಗೀತ ಸರಿಗಮದ ರಸದ ತನನವೇ?ಇಂದು ವಿಭ್ರಮವೆನಿಸಿದ್ದು ನಾಳೆ ಸಂಭ್ರಮವಾದೀತೇ?ಮಾವಿನ ಕಾಯೊಳಗೆ ಬೀಜ ಮೊಳೆತುಬಂದಂತೆ!ಮೃದುಲ ಬೀಜವೇ ಕೊನೆಗೆ ಗಟ್ಟಿಯಾದಂತೆ!ಹಣ್ಣಾಗಿ ಮಾಗೆ ಕಾಯೇ ಸಿಹಿಯಾದಂತೆ!..ಅಪಶೃತಿಯೊಳಗೇ ಒಲ್ಮೆಯ ಶೃತಿ ಮೂಡಿಬರಬಹುದೇ?ಮಜ್ಜಿಗೆಯೊಳಗೆ ನವನೀತ ಸ್ಫುರಿಸಿಬಂದಂತೆ!!!ಆ ಮೌನದೊಳಗೂ ಇರಬಹುದೇ ಮಾತುಮಾತಿಗೂ ಕವನ?!ಈ ಮೌನಕ್ಕೂ ಕಾರಣ ಈ ನೆಳಲೇ ಅಲ್ಲವೇ?ಪ್ರತಿಕ್ಷಣವೂ ನನ್ನೊಡನಿರುವ ಈ ನೆಳಲು ಕತ್ತಲೆಯಲ್ಲ್ಯಾಕೆ ಕಾಣುವುದಿಲ್ಲ?ಎಲ್ಲಿಹೋಗುತ್ತದೆ ಆಗ?ಏಕಾಂಗಿಯಲ್ಲ ನೀನು;ನಾನಿರುವೆನಲ್ಲಾ ನಿನ್ನೊಡನೆ ಎಂದು ಕ್ಷಣಕ್ಷಣವೂ ಹೇಳುತ್ತಾ,ತಂಪುಕತ್ತಲೆ ದೊರೆತಾಗ ನನಗೆ ಕಾಣುವುದಿಲ್ಲವೇಕೆ?ಬೆಳಕಲ್ಲಿದ್ದರೆ ಮಾತ್ರ ನೆರಳು ಗೋಚರಿಸುವುದೇ?ಬೆಳಕಲ್ಲಿ ಮಾತ್ರ ನಿನ್ನ ಜೊತೆ ಬರುತ್ತೇನೆ ಎನ್ನುತ್ತಿದೆಯೇ ಈ ನೆಳಲು?ಈ ನೆರಳಿನಂತೆಯೇ ಸಾವೇ?ಆ..ಆ..ಸಾವು!ಸಾವು..!!ಅವಳ ಮೈ ಕಂಪಿಸತೊಡಗಿತ್ತು.ಅಲ್ಲೇ ಕಲ್ಲು ಬಂಡೆಯ ಮೇಲೆ ತನ್ನ ಕೈಗಳನ್ನು ನರಳುತ್ತಾ ಹೊಸೆಯತೊಡಗಿದಳು.ಕಣ್ಣಲ್ಲಿ ಮಾತ್ರ ಈಗ ನಿಧಾನವಾಗಿ ಮತ್ತೆ ಕಣ್ಣೀರು ತುಂಬಿಕೊಳ್ಳತೊಡಗಿದೆ.ಸಾವು..ಸಾವು..ಮುಲುಗುತ್ತಿದ್ದಾಳೆ!ನನ್ನ ಇನಿಯನ ಸಾವು..ನನ್ನ ಭಾವದ ಗೆಳೆಯನ ಸಾವು..ನನ್ನದೆಲ್ಲದರ ಒಡೆಯನ ಸಾವು..ನನ್ನವನ ಸಾವು..ಹ್ಹಹ್ಹಹ್ಹಾ..ಸತ್ತೋದಾ!..ಆತ ಸತ್ತೋದ..ನಾನು..ನಾನು..ಬದುಕಿಯೇ ಇದ್ದೇನೆ;ಬದುಕಿಲ್ಲದಂತೆ..ಬೆಳಕಿಲ್ಲದಂತೆ!!..ತನ್ನೆದೆಯ ಮೇಲೆ ಕೈಯಿಟ್ಟುಕೊಂಡು,ಎದೆಯನ್ನು ಸವರುತ್ತಾ ಹೇಳ್ತಿದ್ದಾಳೆ..ಮುದ್ದೂ!..ಕೋಪಾನಾ?ಮಾತಾಡೊಲ್ವಾ?..ಮಲ್ಕೊಂಡಿದ್ದೀಯಾ ನನ್ ಚಿನ್ನೂ?..ಪಾಪು ಮಲಗಿದ್ದಾನೆ,ಯಾರೂ ಏಳಿಸ್ಬೇಡಿ..ಉಶ್!ಎನ್ನುತ್ತಿದ್ದಾಳೆ..ಉಹ್ಹೂ..ಇಲ್ಲ..ಅವನಿಲ್ಲವಿಲ್ಲಿ..ಅವನು ಅಲ್ಲಿ ಮಲಗಿದ್ದಾನೆ.ಇಲ್ಲಿ ಅವನ ನೆನಪುಗಳು ಮಾತ್ರ ಮಲಗಿವೆ.ಅವನ ಚೆಂದದ ರೂಪ,ನೆನಪುಗಳ ತಾಪ ನನ್ನ ಹೃದಯವನ್ನಾವರಿಸಿದೆ.ಅವನು..ಅವನು..?ಎಲ್ಲಿ ಹೋದ?ಹೊರಟೇಹೋದ ನನ್ನಿನಿಯ...ಅವ ಚೆಂದದಳಿಯ..ಸಾವೂ ಕೂಡ ಚೆಂದ ಮಕರಂದವೇ?ಆತ ನನಗೆ ಏನಾಗಿದ್ದ?ಗಂಡನೇ?..ಗೆಳೆಯನೇ?...ನಲ್ಲನೇ?...ಮಾವನ ಮಗನೇ?..ಎಲ್ಲವೂ..ಎಲ್ಲವೂ ಅಲ್ಲವೇ?..ಯಾವುದಾಗಿರಲಿಲ್ಲ ಆತ?ನನಗೆ ಜ್ವರ ಬಂದಾಗ,ಮಾತ್ರೆ ತೆಗೆದುಕೊಳ್ಳುವುದಿಲ್ಲವೆಂದು ಹಟ ಮಾಡಿದಾಗ,ಆತ ತಾನೇ ತೆಗೆದುಕೊಳ್ಳುತ್ತಿದ್ದ,ಬಿಡದೇ ನನಗೂ ತಿನ್ನಿಸುತ್ತಿದ್ದ.ಕೇಳಿದರೆ,ನನಗೆ ನೀನಲ್ಲವೇ,ನಿನಗೆ ನಾನಲ್ಲವೇ?ನಾವಿಬ್ಬರೂ ಒಂದೇ ಅಲ್ಲವೇ?ಎನ್ನುತ್ತಿದ್ದ.ಆಶ್ಚರ್ಯವೆಂದರೆ,ನನ್ನ ಜೊತೆ ಅವನೂ ಔಷಧ ತೆಗೆದುಕೊಂಡರೆ ಮಾತ್ರ ನನಗೆ ಬೇಗ ವಾಸಿಯಾಗುತ್ತಿತ್ತು.ಇಲ್ಲದಿದ್ದಲ್ಲಿ ಗುಣವಾಗುವುದೇ ಇಲ್ಲವಾಗಿತ್ತಲ್ಲವೇ?ನಾನು ಅಳುತ್ತಿದ್ದಾಗಲೆಲ್ಲಾ ತಾಯಿಯಂತೆ ಬರಸೆಳೆದು ಬಿಗಿದಪ್ಪಿ,ಹಣೆಗೆ ಪಪ್ಪಿ ಕೊಡ್ತಿದ್ದ.ಆ ಒಂದು ಚುಂಬನಕ್ಕಾಗಿಯೇ ಅಲ್ಲವೇ ನಾನು ಪ್ರತಿ ಸಲವೂ ಸುಮ್ ಸುಮ್ನೆ ಅಳ್ತಾ ಇದ್ದಿದ್ದು..!ಸುಳ್ಳು ಸುಳ್ಳೇ ಅಳ್ತಿದ್ದೆ ಎಂದು ಗೊತ್ತಾದರೆ,ಕಳ್ಳಾ..ಎನ್ನುತ್ತ,ಕಿವಿ ಹಿಂಡುತ್ತಿದ್ದ.ಈ ಸಲ ಕೆನ್ನೆಗೆ ಮುತ್ತು ಕೊಡ್ತಿದ್ದ.ಕಂಗಳಿಗೂ ಕೂಡಾ!ಪ್ರತಿಸಲ ಅವನ ಎದೆಯ ಮೇಲೆ ಒರಗಿದಾಗಲೂ ಅದೆಂಥ ಮೋಹಕ ಸುಖ..ಬೆಚ್ಚನೆಯ ಆ ಸ್ಪರ್ಶಕ್ಕಾಗಿಯೇ ಅಲ್ಲವೇ ನಾನವನನ್ನು ಸದಾ ತಬ್ಬಿಕೊಂಡಿರುತ್ತಿದ್ದುದು..ಅವನ ಕೊರಳಿಗೆ ಹೋಗಿ ಜೋತುಬೀಳುತ್ತಿದ್ದುದು..!ಅದೆಷ್ಟು ಸಲ ನನ್ನ ಮಡಿಲಲ್ಲಿ ಮಲಗಿ ಮಗುವಾಗುತ್ತಿದ್ದ!ನಾನದೆಷ್ಟು ಸಲ ಅವನೊಂದಿಗೆ ನಗುವಾಗುತ್ತಿದ್ದೆ!ಅದೆಂಥ ಪ್ರೀತಿ,ಅದೆಂಥ ವಾತ್ಸಲ್ಯ!!ಅಮ್ಮನ ಮಮತೆಯಿಲ್ಲದ ನನಗೆ ಮಾವ ತಂದೆಯಂತಿದ್ದರೆ,ಈತ ನನಗೆ ತಾಯಿಯೇ ಆಗಿಬಿಡುತ್ತಿದ್ದನಲ್ಲವೇ?ಈಗ..ಈಗ ಏನು ಮಾಡಲಿ?...ಭಣಗುಡುವ ನನ್ನೊಡಲ ಏಕಾಂತಕ್ಕೆ ಏನು ಹೇಳಲಿ?..ಬಾಡದಿರಿ ನೆನಪುಗಳೇ ಉಸಿರು ನಿಲ್ಲುವ ಮುನ್ನ..ಕಾಡಿಬಿಡಿ ಪ್ರತಿಕ್ಷಣವೂ ಒಲವ ಸಂಗತಿಯನ್ನ...ನೆನಪಾಗುತ್ತಾಳಲ್ಲವೇ ಮತ್ತೆ ಮತ್ತೆ ಅಮ್ಮ!?.ಇಲ್ಲ,ಹೇಗೆ ನೆನಪಾದಾಳು?ನಾನವಳನ್ನು ನೋಡಿಯೇ ಇಲ್ಲವಲ್ಲ!!ಅಮ್ಮ ಒಂಭತ್ತು ತಿಂಗಳ ಗರ್ಭಿಣಿಯಾಗಿದ್ದಾಗ ನನ್ನಪ್ಪ ತೀರಿಕೊಂಡರಂತೆ..ಆಮೇಲೆ..ಆಮೇಲೆ ನನ್ನನ್ನು ಹೆರುವ ಸಮಯದಲ್ಲಿ ನನ್ನಮ್ಮ ನನ್ನೊಬ್ಬಳನ್ನೇ ಬಿಟ್ಟು ಹೊರಟುಹೋದಳಂತೆ;ತಣ್ಣನೆಯ ಸಾವಿನ ಲೋಕಕ್ಕೆ!ಆದರೆ ನಾನು ಒಬ್ಬಂಟಿಯಾಗಲಿಲ್ಲ..ನನ್ನ ಮಾವ ಅವನ ಮಗನಿಗೆ ಮತ್ತು ನನಗೆ ತಾಯಿಯಾಗಿ,ತಂದೆಯಾಗಿ,ಗುರುವಾಗಿ,ಗುರಿಯಾಗಿ ಬೆಳೆಸಿದನು.ನಾನು ಹುಟ್ಟುವುದಕ್ಕಿಂತ ನಾಲ್ಕು ತಿಂಗಳು ಮೊದಲು ಮಾವನ ಮಗ ಹುಟ್ಟಿದ್ದನಲ್ಲವೇ?ಇದು ಅದೃಷ್ಟವೋ ಅಥವಾ ದುರಾದೃಷ್ಟದ ಅತಿರೇಕವೋ ಅವನಿಗೂ ಅವನ ತಾಯಿ ಹೆರಿಗೆಯ ಸಮಯದಲ್ಲಿ ಆತನನ್ನು ತೊರೆದು ಒಬ್ಬಳೇ ಪರಲೋಕಕ್ಕೆ ಹೊರಟುಹೋದಳಂತೆ..ಮಾವನಿಗೆ ನಾನು ಮತ್ತು ಅವನ ಮಗ ಮಾತ್ರ..ನಾವೇ ಅವನ ಎರಡು ಕಂಗಳಾಗಿದ್ದೇವೆ..ಮಾವ ಎಂದು ನಾನವನನ್ನು ಕರೆದೇ ಇಲ್ಲ.ಪಪ್ಪಾ ಎಂದೇ ಹೇಳುತ್ತೇನೆ ಈಗಲೂ..ಪಪ್ಪ ಸಂಜೆಯ ಸಮಯ ತಿರುಗಾಡಲು ಹೋಗುವಾಗ,ನಾನು ಪಪ್ಪನ ಕೈಯನ್ನು,ಅವನ ಮಗ ನನ್ನ ಕೈಯನ್ನೂ ಹಿಡಿದುಕೊಳ್ಳುತ್ತಿದ್ದ..ಒಮ್ಮೊಮ್ಮೆ ಪಪ್ಪ ನಮ್ಮಿಬ್ಬರನ್ನೂ ಅವನ ಎರಡು ಹೆಗಲುಗಳ ಮೇಲೆ ಕೂರಿಸಿಕೊಂಡು ಸಮುದ್ರತೀರದಲ್ಲಿ ಓಡುತ್ತಿದ್ದ.ನಾವು ನಗುತ್ತಿದ್ದೆವು.ಕುಳಿತಲ್ಲೇ ಹಾರಿ ಹಾರಿ,ಪಪ್ಪಾ ಓಡು ಓಡು ಅನ್ನುತ್ತಿದ್ದೆವು.ಪಪ್ಪ ನಮ್ಮನ್ನು ಖುಷಿಪಡಿಸುತ್ತಿದ್ದ.ಅವನೂ ನಮಗಿಂತ ಹೆಚ್ಚು ಖುಷಿಪಡುತ್ತಿದ್ದ.ವ್ಹಾ!ಅವೆಂಥ ಚೆಂದದ ಕ್ಷಣಗಳು..ಮರೆತುಹೋಗುವವೇ ಮುನಿಸಿ ನಗಿಸಿಹ ಆ ದಿನಗಳು..ಅದೇಕೋ ಕಾಣೆ ಅವನ ಮಗನಿಗೆ ನಾನೆಂದರೆ ಎಲ್ಲಿಲ್ಲದ ಪ್ರೀತಿ..ಆತ ಎಂದೂ ನನ್ನನ್ನು ತಂಗಿ ಅಂತ ಕರೆಯಲೇ ಇಲ್ಲ.ನಾನೂ ಕೂಡಾ ಅಷ್ಟೇ;ಅವನನ್ನು ಎಂದೂ ‘ಅಣ್ಣಾ’ ಎನ್ನಲೇ ಇಲ್ಲ..ಪಪ್ಪನೂ ಕೂಡಾ ಹೀಗೇ ಕರೀ ಅಂತ ಎಂದೂ ಹೇಳಲೇ ಇಲ್ಲ.ಅವನ ಮಗ ನನ್ನನ್ನು ‘ಜೀವಾ’ ಎಂದೇ ಕರೆಯುತ್ತಿದ್ದ.ನಾನೂ ಕೂಡಾ ಅಷ್ಟೇ..ಮುದ್ದೂ ಅಂತಾನೇ ಆತನನ್ನು ಕರೆಯುತ್ತಿದ್ದೆ.ಬಹುಶಃ ಯಾವುದೋ ಲೋಕದಲ್ಲಿ ಯಾವುದೋ ಗಳಿಗೆಯಲ್ಲಿ ನನ್ನ ಮತ್ತು ಅವನ ಸಂಬಂಧ ನಿಶ್ಚಯಿಸಲ್ಪಟ್ಟಿತ್ತೇನೋ!ಜೊತೆಯಲ್ಲೇ ಬೆಳೆದ್ವಿ..ನಾನು ಮತ್ತು ಅವನು ಚಿಕ್ಕವರಿದ್ದಾಗ ಒಮ್ಮೆ ಯಾವುದೋ ಸಣ್ಣ ವಿಷಯಕ್ಕೆ ಮುನಿಸಿಕೊಂಡಿದ್ವಿ... ಆತ ನನ್ನಿಂದ ಅಲ್ಲೇ ಸ್ವಲ್ಪ ದೂರದಲ್ಲಿ ಕುಳಿತುಕೊಂಡಿದ್ದ.ಆಗ ಪಕ್ಕದ ಮನೆಯವನು,ಸ್ವಲ್ಪ ದೊಡ್ಡವನು ಬಂದು,ನನಗೆ ಯಾಕೋ ಸುಮ್ಮನೆ ಬೈಯತೊಡಗಿದ.ನಾನು ಅಳತೊಡಗಿದೆ.ಆಗ ಈತನಿಗೆ ಅದೆಲ್ಲಿಂದ ಕೋಪ ಬಂತೋ!ಹೋಗಿ ಅವನ ಎರಡೂ ಕಾಲುಗಳನ್ನು ಎಳೆದುಬಿಟ್ಟಿದ್ದ.ಆತ ಧಡ್ಡನೆ ನೆಲಕ್ಕೆ ಬಿದ್ದುಬಿಟ್ಟಿದ್ದ.ನಾನು ಅಳುತ್ತಿದ್ದವಳು ಒಮ್ಮೆಲೇ ನಗುತ್ತಾ,ಚಪ್ಪಾಳೆ ತಟ್ಟತೊಡಗಿದೆ.ಆಗ ಆತ ಹೇಳಿದ್ದೇನು?..ನನ್ನ ಪಾಪುವಿಗೆ ನೀನೇನಾದರೂ ಅಂದ್ರೆ ಸುಮ್ನಿದ್ಬಿಡ್ತೀನಾ?...ನನ್ನ ಚಿನ್ನು ಕಣೋ ಅವ್ನು..ಅಂದಿದ್ನಲ್ಲವೇ!ಹ್ಹೂ...ಎಂಟು ವರ್ಷದ ಈತ ನನಗೋಸ್ಕರ ಆ ಹದಿನೆಂಟು ವರ್ಷದ ಹುಡುಗನನ್ನು ಎದುರಿಸಲು ಹೋಗಿದ್ದನಲ್ಲಾ!ಅದೆಂಥ ಉತ್ಕಟ ಪ್ರೀತಿ;ಅದೆಂಥ ಅಚಲ ಆತ್ಮವಿಶ್ವಾಸ..ಹೀಗೇ ಇತ್ತಲ್ಲವೇ ನಮ್ಮ ಅನುಬಂಧ!ಆತ ಸಾಯುವ ಹಿಂದಿನ ದಿನ,ಚಿನ್ನೂ..ನನ್ ಜೀವ...ಯಾಕೋ ಒಂಥರಾ ಇದ್ದೀಯಾ..ಅಂತ ಕೇಳಿದ್ದ.ನಾನು,ಏನಾಗಿದ್ಯೋ ನಂಗೆ;ಚೆನ್ನಾಗೇ ಇದ್ದೀನಲ್ಲೋ..ಏನೋ,ಏನಾಯ್ತೋ ನಿಂಗೆ..?ಅಂತ ಕೇಳಿದ್ದೆ.ನನಗ್ಯಾಕೋ ಅಂದೇ ತಳಮಳ ಶುರುವಾಗಿತ್ತು.ಆದರೂ ಆತನಲ್ಲಿ ಹಾಗೆ ಹೇಳಿದ್ದೆ.ಬಹುಶಃ ಆತನ ಸಾವಿನ ಮುನ್ಸೂಚನೆ ನನ್ನ ಹೃದಯಕ್ಕೆ ಅರಿವಾಗಿತ್ತೇ?ಅದು ಅವನಿಗೆ ನನ್ನೊಳಗಿನ ತುಮುಲವಾಗಿ,ನನ್ನ ಕಣ್ಣುಗಳಲ್ಲಿ ಕಂಡಿತ್ತೇ?ದಿನಾ ಒಂದು ಚೆಂದದ ಚೆಂಗುಲಾಬಿಯನ್ನು ತಂದುಕೊಡುತ್ತಿದ್ದವನು,ಆ ದಿನ ಮಾತ್ರ ಕೆಂಗುಲಾಬಿಯ ಜೊತೆಗೆ,ಅದ್ಭುತ ಕಲಾಕೃತಿಯಂತಿರುವ,ಪ್ಲಾಸ್ಟಿಕ್ ಗುಲಾಬಿಯನ್ನೂ ತಂದಿದ್ದ.ಪ್ಲಾಸ್ಟಿಕ್ ಗುಲಾಬಿಯನ್ನು ಕೊಟ್ಟು ಹೇಳಿದ್ದ..ಪ್ರೀತೀ..ಈ ರೋಜಾ ಹೂ ಬಾಡಿಹೋಗುವವರೆಗೂ ನಾನು ನಿನ್ನೊಂದಿಗೆ ಇರ್ತೀನಿ..ನಿನ್ನ ನಗುವಾಗಿ..ನಿನ್ನ ಮಗುವಾಗಿ..ನಿನ್ನ ಜೀವದ ಚೆಲುವಾಗಿ..ಹೃದಯದ ಗೆಲುವಾಗಿ..ಎಂದೆಂದೂ ನಿನಗೇ ಅಂಟಿಕೊಂಡು ನಿನ್ನ ಬೆಚ್ಚನೆಯ ಸ್ಪರ್ಶಸುಖದಲ್ಲೇ ತೇಲುತ್ತಾ,ನಿನ್ನ ಹೃದಯದ ಪ್ರತೀ ಕೋಣೆಯ ಕಿಟಕಿ ಬಾಗಿಲುಗಳನ್ನು ಬಡಿಯುತ್ತಾ,ನಿನ್ನನ್ನು ಅಳಿಸುತ್ತಾ,ನಗಿಸುತ್ತಾ,ಅಮೂರ್ತ ಪ್ರೀತಿಯೊಂದಿಗೆ ನಿನ್ನನ್ನು ಮುದ್ದಿಸುತ್ತಾ ಇರ್ತೀನಿ..ನಿನ್ನ ಪ್ರತೀ ಕಣದಲ್ಲೂ..ಪ್ರತೀ ಕ್ಷಣದಲ್ಲೂ...!ಎಂದಿದ್ದನಲ್ಲವೇ?ಈಗಲೂ..ಈ ಕ್ಷಣವೂ,ಹಾಗೆಯೇ?ನನ್ನ ಹೃದಯದ ಹೊಸ್ತಿಲಲ್ಲಿ ಕುಣಿಯುತ್ತಿದ್ದಾನಲ್ಲವೇ?ಹೊರಗೆ ಹೋಗಲೇ ಎಂದು ಹೆದರಿಸುತ್ತಿದ್ದಾನಲ್ಲವೇ?ಅವನೇ ಪದೇ ಪದೇ ಧ್ವನಿಸುತ್ತಿದ್ದಾನಲ್ಲವೇ?ಅವನ ನೆನಪುಗಳು ಎಂದಿಗೂ ಮಿಂಚಿನ ಸಂಚಲನದಂತೆ ಕ್ಷಣಿಕವಲ್ಲ..ಅದು ಕ್ಷಣ ಕ್ಷಣವೂ ಪುಳಕ..ಪವಿತ್ರ ಸೋನೆಮಳೆಯ ಮೈಜಳಕ..ಎಲೆಗಳ ಮೇಲೆ ಹೊರಳಾಡೋ ಚೆಂದ ಚೆಂದ ಮಿಹಿಕಾ..ನೆನಪುಗಳೇ ಹೀಗೆ..ಕಾಡುತ್ತಲೇ ತೃಪ್ತಿಪಡಿಸುತ್ತವೆ.ಕಾಡುತ್ತಲೇ ಮಾತಾಡದೆಯೇ ಮಾತಾಗುತ್ತವೆ.ಆದರೆ ಈತನ ನೆನಪುಗಳು ನನ್ನನ್ನು ಸುಡುತ್ತಿವೆಯಲ್ಲವೇ?ಅವನ ನೆನಪುಗಳೆಂದರೆ ಬೂದಿ ಮುಚ್ಚಿದ ಕೆಂಡವೇ?ಈತನ ಎಲ್ಲ ನೆನಪುಗಳ ಭಾರಕ್ಕೆ ಮನವೇಕೋ ಕಲಕುತ್ತಿದೆ.ಆತ ನನಗಾಗಿ ಎಲ್ಲವೂ ಆಗಿದ್ದನಲ್ಲವೇ?ಹೌದು..ಈಗದು ಕೇವಲ ಕುರುಹುಗಳು ಮಾತ್ರವಲ್ಲವೇ?ಎಷ್ಟು ಹಂಬಲಿಸಿದ್ದೆ ಅವನ ಜೊತೆ ಬಾಳಲು?..ಬಾಳಲಿಲ್ಲವೇ?..ಬಾಳಿದ್ದೇನಲ್ಲವೇ?..ಎಂದೂ ಬತ್ತಿಹೋಗದ ಬಾಲ್ಯದ ಮಧುರ ಕ್ಷಣಗಳೊಂದೇ ಸಾಕಲ್ಲವೇ ಈ ಜನುಮಕೆ..ಮಿಡಿವ ಹೃದಯಕೆ..!ನನ್ನ ಅವನ ಬಾಂಧವ್ಯದಂತೆ ಈ ಕಡಲಿನೊಂದಿಗಿನ ಸಂಬಂಧ..ಹಠಮಾಡಿ ಕಡಲ ತಡಿಯಲ್ಲೇ ಮಲಗಿದ ದಿನಗಳೆಷ್ಟಿಲ್ಲ?ನಾವು ಮೂವರೂ ಒಟ್ಟಾಗಿ ಕಳೆದ ಚಣಗಳೆಷ್ಟಿಲ್ಲ?ಈ ಕಡಲ ಮಡಿಲಲ್ಲಿ..!ಎಂದು ಅಂದುಕೊಳ್ಳುತ್ತಾ ಇರುವ ಸಮಯದಲ್ಲೇ,ಅಲ್ಲಿಗೆ ಒಬ್ಬ ಸಣ್ಣ ಹುಡುಗ ಬಲೂನುಗಳನ್ನು ಮಾರುತ್ತಾ ಬಂದ.ಕಡಲಿನ ಪ್ರಕ್ಷುಬ್ಧತೆ ಈಗ ಮಾಯವಾಗಿತ್ತು.ಸೂರಿ ಪಡುವಣದಿ ತನ್ನ ನಿರ್ಗಮನದ ಕೊನೆಯ ಅಂಚಿನಲ್ಲಿದ್ದ..ಕಡಲದಂಡೆಯಲ್ಲಿ ಮತ್ತೆ ಜನ ತುಂಬಿಕೊಂಡಿದ್ದರು.ಬಲೂನು ಮಾರುವ ಆ ಹುಡುಗ ನಡೆಯುತ್ತಾ ನಡೆಯುತ್ತಾ ಈಕೆಯಲ್ಲಿಗೆ ಬಂದ.ಅಕ್ಕಾ,ಬಲೂನು ಬೇಕಾ?...ಎಂದ.ಆಕೆ ಉತ್ತರಿಸಲಿಲ್ಲ.ಮತ್ತೆ ಮತ್ತೆ ಕೇಳತೊಡಗಿದ.ಆಕೆ ಉತ್ತರಿಸದೇ ಹಾಗೇ ಕುಳಿತಿದ್ದಳು.ತನ್ನ ಪುಟ್ಟ ಕೈಯಿಂದ ಅವಳ ಹೆಗಲನ್ನು ಅಲುಗಿಸಿದ.ಆತ ಹಾಗೆ ಸ್ಪರ್ಶಿಸಿದ ಮರುಕ್ಷಣವೇ ಆಕೆಯಲ್ಲಿ ಯಾಕೋ ಮಾತೃವಾತ್ಸಲ್ಯ ಉಕ್ಕಿ ಹರಿಯತೊಡಗಿತು.ಆತನನ್ನು ನೋಡಿದಳು.ಮುಗ್ಧತೆ ತುಂಬಿದ ಆ ಮುಖ ಎಷ್ಟು ಚೆಂದವಿತ್ತು ಎಂದರೆ,ಅವಳಿಗೆ ಕೂಡಲೇ ತನ್ನಿನಿಯನ ಮಾಸದ ಆ ನಗು ಇವನ ಮುಖದಲ್ಲಿ ಕಾಣತೊಡಗಿತ್ತು.ದಂತದ ಗೊಂಬೆಯಂತಿದ್ದ.ಅವನನ್ನೇ ನೋಡತೊಡಗಿದಳು.ನಿನ್ನೆಯ ನೆನಪಿರದ,ನಾಳೆಯ ಚಿಂತೆಯಿರದ,ಇಂದಿನ ಹಂಗಿರದ ಆ ಮುಖ ಪ್ರಶಾಂತವಾಗಿ ಕಂಡಿತು.ಹಳೆಯ ಅಂಗಿಯನ್ನು ಧರಿಸಿದ್ದರೂ ಸೌಂದರ್ಯ ಎದ್ದು ನಲಿಯುತ್ತಿತ್ತು.ತೀಕ್ಷ್ಣ ಕಣ್ಣುಗಳು ಕಾಂತಿಯುತವಾಗಿದ್ದವು.ಜೀವನೋತ್ಸಾಹ ತುಂಬಿತುಳುಕುತ್ತಿತ್ತು.ಆತ ಮತ್ತೆ ಮತ್ತೆ ಅಕ್ಕಾ ಅಕ್ಕಾ ಎಂದು ಕರೆಯುತ್ತಿದ್ದ.ಆತನ ಹೆಗಲ ಮೇಲೆ ಕೈಯಿಟ್ಟ ಆಕೆ,ಕುಳಿತಲ್ಲಿಂದಲೇ,ಕುಳಿತುಕೋ ಎಂದು ಸನ್ನೆ ಮಾಡಿದಳು.ಆತ ಕುಳಿತ ತಕ್ಷಣ,ಆತನನ್ನು ಬರಸೆಳೆದು ಬಿಗಿದಪ್ಪಿ,ಹಣೆಯ ಮೇಲೆ ಮುತ್ತಿಟ್ಟಳು.ಅವಳು ಹಾಗೆ ಮಾಡಿದ ತಕ್ಷಣ ಆತನಲ್ಲಿ ಏನಾಯಿತೋ ಏನೋ ಕಣ್ಣಿಂದ ಭಾಷ್ಪಗಳು ಉದುರತೊಡಗಿದವು.ಆತನ ಕಣ್ಣೀರನ್ನು ತನ್ನ ಬೆರಳುಗಳಿಂದ ಒರೆಸಿದಳು.ಆತನನ್ನು ತನ್ನ ಮಡಿಲಲ್ಲಿ ಮಲಗಿಸಿಕೊಂಡಳು.ಆತನಿಗೆ ಇದ್ಯಾವುದರ ಅರಿವೂ ಇಲ್ಲ.ಯಾವುದೋ ಒಂದು ಅಮೂರ್ತ ಲೋಕದೊಳಗೆ ಆತ ಜಾರಿಹೋಗಿದ್ದ.ಅವಳ ಪ್ರೀತಿಯ ಒಂದು ನೇವರಿಕೆ ಆತನಿಗೆ ಅಷ್ಟೊಂದು ಅಪ್ಯಾಯಮಾನವಾಗಿತ್ತು.ಆತನಿಗೆ ಅರಿವಿಲ್ಲದೇ ,ಅಯಾಚಿತವಾಗಿ ಜಗದ ಶ್ರೇಷ್ಠ ಪದ ‘ಅಮ್ಮಾ’ ಎಂಬ ಉದ್ಘಾರ ಆತನ ಬಾಯಿಂದ ಹೊರಬಂತು.ದನಿಯಲ್ಲಿ ಉತ್ಕಟ ಪ್ರೀತಿಯಿತ್ತು.ಕರೆದ ಆ ಬಗೆಯಲ್ಲಿ ಮೊಟ್ಟಮೊದಲು ಅಮ್ಮಾ ಎಂದು ಕರೆದ ಮಿಡಿತವಿತ್ತು.ಆ ನುಡಿಯನ್ನು ಕೇಳಿದ ಕೂಡಲೇ ಆಕೆಯ ಕಣ್ಣುಗಳಲ್ಲಿ ಅದೆಂಥದೋ ಉತ್ಸಾಹ.ಅವರ್ಣನೀಯವಾದಂತಹ ಅತಿಮಧುರ ಸಿಹಿಸ್ವಪ್ನ ನಗು..ಕಣ್ಣುಗಳು ಸುಮ್ಮನಿರಬೇಕಲ್ಲ;ಯಾರನ್ನೂ,ಯಾವುದನ್ನೂ ಕೇಳದೆಯೇ ಸಂತೃಪ್ತಿಯ ಒಂದೆರಡು ಬಿಂದುಗಳು ಆಕೆಯ ಕೆನ್ನೆ ಮೇಲಿಂದ ಹಾಗೇ ಜಾರಿಹೋಗಿ ಆತನ ಕಪೋಲಗಳ ಮೇಲೆ ಬಿತ್ತು.ಆಗ ಆತ ಅವಳೆಡೆಗೆ ನೋಡಿದ.ತನ್ನ ಕೈಗೆ ಮುತ್ತಿಕ್ಕಿಕೊಂಡ.ತನ್ನ ಪುಟ್ಟ ಪುಟ್ಟ ಬೆರಳುಗಳಿಂದ ಅವಳ ಕಣ್ಣೀರೊರೆಸುವ ಪ್ರಯತ್ನ ಮಾಡಿದ.ಇಬ್ಬರೂ ಮಾತನಾಡುತ್ತಿಲ್ಲ.ಆದರೂ ಅದೊಂದು ಅಭೂತಪೂರ್ವ ಅನುಭೂತಿ!ಮಾತಿಲ್ಲದ ಆ ಸಂವಹನದ ಸಂವೇದನೆಯೇ ಅದೆಷ್ಟು ಚೆಂದ!ಇದ್ದಕ್ಕಿದ್ದಂತೆ,ಅವಳು ಕುಳಿತ ಆ ಬಂಡೆಯ ಮೇಲೆ ಒಂದು ಚಿಟ್ಟೆ ಹಾರಿಬಂದು ಕುಳಿತಿತು.ಆಕೆ ಒಂದು ಕೈಯಿಂದ ಆತನ ತಲೆಯನ್ನು ನೇವರಿಸುತ್ತಾ,ಇನ್ನೊಂದು ಕೈಯನ್ನು ಬಂಡೆಯ ಮೇಲಿಟ್ಟಳು.ಆದರೆ, ಆಕೆಯ ಕೈ ಆ ಚಿಟ್ಟೆಯ ಮೇಲೆ ಬಿದ್ದಾಗ,ಚಿಟ್ಟೆ ವಿಲವಿಲನೆ ಒದ್ದಾಡಿದಾಗ,ಆಕೆ ಕುಳಿತಲ್ಲಿಯೇ ಚಡಪಡಿಸಿದಳು.ರಂಗುರಂಗಿನ ಆ ಚಿಟ್ಟೆಯ ವಯಸ್ಸು ಕೇವಲ ಹದಿನಾಲ್ಕು ದಿನಗಳು.ಆದರೆ,ಅದರ ಚೈತನ್ಯಕ್ಕೆ ಅದಕ್ಕದು ಮಾತ್ರವೇ ಸಾಟಿ ಅಲ್ಲವೇ?ಪತಂಗದ ಮೇಲೆ ಕೈಬಿದ್ದಾಗ,ಆ ಪುಟ್ಟ ಜೀವ ಎಷ್ಟೊಂದು ಚಡಪಡಿಸಿರಬೇಕು ಎಂದು ಈಕೆಯ ಮನಸ್ಸು ಕೊರಗತೊಡಗಿತ್ತು.ಮತ್ತೆ ಮತ್ತೆ ಕುಳಿತಲ್ಲಿಯೇ ಚಡಪಡಿಸುತ್ತಿದ್ದಳು.ಆ ಚಿಟ್ಟೆಯು ಸತ್ತಂತೆ ಬಿದ್ದುಕೊಂಡಿತ್ತು.ಸತ್ತಿತ್ತೇ?ಅಥವಾ ಬದುಕಿಯೇ ಇತ್ತೇ?ಒಂದೆರಡು ಕ್ಷಣ ರೆಕ್ಕೆ ಬಡಿದಾಡಿತ್ತು.ಒಂದೇ ಸಮನೆ ಜೋರಾಗಿ ಗಾಳಿ ಬೀಸತೊಡಗಿತು.ಜೊತೆಗೆ ಧೋಧೋ ಎಂದು ಮಳೆ ಸುರಿಯತೊಡಗಿತು.ಆ ಹುಡುಗ ಆಕೆಯ ಮಡಿಲಿನಿಂದ ಎದ್ದ.ಎದ್ದವನೇ ತನ್ನ ಬಲೂನುಗಳನ್ನು ನೋಡಿದ.ಈಕೆಯನ್ನು ನೋಡಿ,ಯಾವುದೋ ಅರ್ಥವಾಗದ ಭಾವದ ನೋಟವೊಂದನ್ನು ಬೀರಿದ..ಆದರೆ, ಆ ನೋಟ ನಿರ್ವಿಕಲ್ಪ ನಿರ್ಭರ ನಿಸ್ತುಲ ಭಾವದ ಹೃದಯಪದ್ಮದ ಕುಸುಮವಾಗಿತ್ತು.ತನ್ನ ಬಲೂನುಗಳೊಂದಿಗೆ ಆತ ನಡೆಯತೊಡಗಿದ.ಆಕೆ ಮತ್ತೆ ಮಾತನಾಡಲಿಲ್ಲ.ಆತನೂ ಕೂಡಾ!ಆಕೆ ಹೋಗಬೇಡವೆಂದು ಹೇಳಲಿಲ್ಲ.ಆತನೂ ಹೋಗುತ್ತೇನೆ ಅನ್ನಲೇ ಇಲ್ಲ.ಆತ ದೂರ ದೂರ ನಡೆದುಹೋಗುತ್ತಿದ್ದ.ಈಕೆ ನೋಡುತ್ತಿದ್ದಾಳೆ.ಆತನ ಬಲೂನುಗಳ ರಾಶಿಯಲ್ಲಿ ಒಂದು ಬಲೂನಿನ ತುತ್ತತುದಿಯಲ್ಲಿ ಆ ಚಿಟ್ಟೆ ನಾಟ್ಯವಾಡುತ್ತಿತ್ತು.ವ್ಹಾ!ಬದುಕು ಅದೆಷ್ಟು ಸುಂದರ.ಮುಗ್ಧ ಮನೋಹರ..ಆ ಹುಡುಗ ಎಲ್ಲಿಂದ ಬಂದ,ಹೇಗೆ ಬಂದ ಮತ್ತು ಯಾಕಾಗಿ ಬಂದ?ಈಗ ಆಗಂತುಕನಂತೆ ಮಾಯವಾದ..ಪರಿಚಿತನಾಗುವ ಮುನ್ನವೇ ಮತ್ತೆ ಅನಾಮಿಕನಾಗಿ ಹೋದನಲ್ಲವೇ?ಆಕೆ ಯೋಚಿಸುತ್ತಲೇ ಇದ್ದಾಳೆ.ಬಲೂನು ಮಾರುವ ಆ ಹುಡುಗ ಒಂದು ನೆಪವೇ?ಹೃದಯ ಬಯಸುವುದು ಎಂದೂ ಒಂದು ಹಿಡಿ ಪ್ರೀತಿಯನ್ನು ಅಲ್ಲವೇ?ಬೇಸರವಾದಾಗ ಸಾಂತ್ವನದ ಒಂದು ಮೃದುಲ ಸ್ಪರ್ಶಕ್ಕಾಗಿ ಮನಸ್ಸು ಹಂಬಲಿಸುತ್ತದಲ್ಲವೇ?ಯಾಕೆ ಪ್ರೀತಿ ಪ್ರೀತಿ ಪ್ರೀತಿ..!ಈ ಥರದ ರೀತಿ?ಅದನ್ನು ಬಿಟ್ಟು ಮನುಷ್ಯ ಬದುಕಲಾರನೇ?ನೆರಳು,ಸಾವುಗಳಂತೆಯೇ ಈ ಪ್ರೀತಿಯೇ?ಸಾವನ್ನು ಯಾರೂ ಬಯಸದಿದ್ದರೂ ಅದು ನಮ್ಮನ್ನು ಬಯಸುತ್ತದಲ್ಲವೇ?ನೆರಳೂ ಕೂಡ ಹಾಗೇ..ನಾನು ನಿನ್ನವನು,ನೀನು ನನ್ನವನು ಎನ್ನುತ್ತಲೇ ಕತ್ತಲಲ್ಲಿ ಕರಗಿಹೋಗುತ್ತದೆ,ಕಳೆದುಹೋಗುತ್ತದೆ...ಈ ಹುಡುಗನಂತೆಯೇ!ಆದರೆ,ಜೊತೆಗಿದ್ದಷ್ಟು ಕಾಲ ಒಂಟಿತನದ ಏಕಾಂತದಲ್ಲೂ ಜಂಟಿಯಾಗುತ್ತದೆ.ಅಮೃತತ್ವದ ಸಿಂಚನದ ಕಾಲವದು!..ಬಾಂಧವ್ಯದ ಹಾದಿಯಲ್ಲಿ ಕ್ರಮಿಸಿದ ಹೆಜ್ಜೆ ಸುಳಿವೂ ಕೂಡಾ ಎಷ್ಟೊಂದು ಚೆಂದ ಅಲ್ಲವೇ?ಈಗ ಅಳುತ್ತಿದೆ ಮುಗಿಲು;ನನ್ನ ಬದಲು..ಆದರೆ ತಂಪಾಗಿದೆ ನನ್ನೊಡಲು..ಹಿತವಾಗಿದೆ ಅಲೆಯ ಕಡಲು..ಕ್ಷಿತಿ ಮತ್ತು ವಿಹಗಳು ಎಂದಿಗೂ ಒಂದಾಗಲು ಸಾಧ್ಯವೇ ಇಲ್ಲವೇ?ದಿಗಂತದಲ್ಲಿ ಸೇರುತ್ತವಲ್ಲವೇ?ಅಥವಾ ಸೇರಿದಂತೆ ಅನಿಸುತ್ತದೆಯೇ?ಭ್ರಮೆಯ ಮಗ್ನತೆಯಲ್ಲಿ,ಭಗ್ನಗೊಂಡ ಮುಗಿಲ ಕನಸುಗಳು ಕಾಣುವುದೇ ಇಲ್ಲವಲ್ಲ..ಒಬ್ಬರನ್ನೊಬ್ಬರು ಕೇವಲ ನೋಡುತ್ತಲೇ ಕಾಲ ನೂಕುವ,ಗಗನ ಮತ್ತು ಧರಣಿಗಳ ಪ್ರೀತಿ ಚಿರಂತನ ಅಲ್ಲವೇ?..ಮಿಲನದ ಸುಳಿವುಗಳಲ್ಲಿ ಮಲಿನ ಮನಸುಗಳಿಲ್ಲ..ಪ್ರತಿಸಲವೂ ಆಕಾಶ ಮತ್ತು ಭುವಿಯು ವರಿಸುತ್ತಲೇ ಇರುತ್ತವಲ್ಲವೇ?ಪ್ರತೀ ಬಾರಿಯೂ ಕಂಬನಿಯ ಮಾಲೆ!ಮಧುಚಂದ್ರವಿರದ ಮನ್ವಂತರದ ಬದುಕೇ!!...ದಿಗಂತವೆಂಬುದು ಅನಂತದಲ್ಲಿರುವಾಗ ಕಣ್ಣುಗಳಿಗೆಲ್ಲಿ ಅದನ್ನು ಸೆರೆಹಿಡಿಯುವ ಅವಕಾಶ?..ಹಂಬಲಗಳ ಹಂಗಿನಲ್ಲಿ ಬದುಕು ಒಂದು ಹಂದರ ಅಲ್ಲವೇ?ನನ್ನ ಒಲುಮೆಯ ಬೃಂದಾವನದಿ ನೆನಪುಗಳೇ ಅವನ ರಾಯಭಾರಿ..ಇತಿಹಾಸದಲ್ಲಿ ಮತ್ತೆ ಮತ್ತೆ ಕಾಡುವ,ಕೃಷ್ಣನ ತೋರುವ ಪ್ರೀತಿ ಕಣ್ಣಾಗಿ,ರಾಧೆಯಾಗಿಬಿಡಲೇ?ಪರಿತಾಪವೆಲ್ಲಾ ಈಗ ಪರಿಧ್ಯಾನವಾಗಿ ಅನುಭಾವವಾಗುತ್ತಿದೆಯಲ್ಲಾ..ಸಾವಿನಾ ಸಂಚಿನೊಳಗೆಲ್ಲ ಸ್ವಚ್ಛಂದವಾಗಿ ವಿಹರಿಸಿಬಿಡಬೇಕಲ್ಲವೇ?ನನ್ನದೆನ್ನುವ ನೆರಳು ನನ್ನೊಂದಿಗೇ ಇದೆ..ಸಾವೂ ಕೂಡಾ ಇದೆ;ಬೆನ್ತಟ್ಟುವ ಬೆರಳುಗಳಂತೆಯೇ!ಸಾವು,ನೆರಳು ಮತ್ತು ಪ್ರೀತಿಯ ವಿಶ್ಲೇಷಣೆಗಳಲ್ಲಿ ನಾನು ಸೋತುಹೋಗಿದ್ದೇನೆ..ಆದರೆ,ಹೆಣ್ತನದ ವಾತ್ಸಲ್ಯದ ಪರಿಧಿಯೊಳಗೆ ಏನೋ ಒಂಥರದ ಸಮಾಧಾನದ ಗೆಲುವನ್ನು ಹೊಂದಿದ್ದೇನಲ್ಲವೇ?ಮಾತೃತ್ವವೆಂಬುದು ಜೀವಕಾವ್ಯದಂತೆ..ಸಾವಿರದ ಚರಿತ್ರೆಯಂತೆ..ನನಗೆ ಅದು ದೊರೆತಾಯಿತು!ನಾನು ತಾಯಿಯಾದೆ..!ಮಾತೃತ್ವದ ಜೀವಸೆಲೆಯ ಸನ್ನಿಧಿಯಲ್ಲಿ ವಾಸ್ತವದ ಪವಿತ್ರ ಸಂಗತಿಯಾದೆ..ಭಣಗುಡುವ ನನ್ನೊಡಲ ಏಕಾಂತಕ್ಕೆ ಇನ್ನೇನೂ ಹೇಳಬೇಕಿಲ್ಲ!ಅದೀಗ ಭಣಗುಡುತ್ತಲೂ ಇಲ್ಲ,ಅದೀಗ ಏಕಾಂಗಿಯೂ ಅಲ್ಲ!!ಮೌನದೊಂದಿಗೆ ಮನದ ಸಂಧಾನವಾಗಿದೆ.ಶಬ್ದಗಳು ಹೇಳಲಾಗದ ಮಾತೃತ್ವದ ಜೀವನ ಸೌಂದರ್ಯವನ್ನು ಕೇವಲ ಪ್ರೀತಿಯ ಒಂದು ಸ್ಪರ್ಶ ನೀಡಿದೆಯಲ್ಲವೇ?ಮಳೆ ಹನಿಸುತ್ತಲೇ ಇದೆ ಅಲ್ಲವೇ?ಹೀಗೇ ಇರಲಿ..ಮನಸ್ಸಿಗೆ,ದೇಹಕ್ಕೆ ತಂಪು ಕೊಡುವ ಈ ಹನಿಗಳ ಬಳಗದ ಚಳುವಳಿಯ ಸೊಗಡು ಸೊಬಗಲ್ಲವೇ?..ಚಂದಮಾಮ ನಿನ್ನ ಬೆಳಗು..ನೀರ ಗಾಜಿನ ಲೋಕದೊಳಗು!!..ಅಂದುಕೊಳ್ಳುತ್ತಿದ್ದಾಳೆ.ಮರಳಲ್ಲಿ ನಡೆಯಬೇಕೆಂದರೆ ಕಾಲೆಳೆಯುತ್ತ ಸಾಗಬಾರದು..ಕಾಲನ್ನು ಎತ್ತಿಹಾಕುತ್ತಾ ಹೋಗಬೇಕು..ಅಂದಾಆಅಗ ಮಾತ್ರ ದಿಟ್ಟ,ಸ್ಪಷ್ಟ ಹೆಜ್ಜೆ ಮೂಡಲು ಸಾಧ್ಯ..ಕುಳಿತ ಕಲ್ಲಿನಿಂದ ಕೆಳಗಿಳಿದು ಬಂದಳು.ಸಮುದ್ರದಲೆಗಳು ತೀರ ತಾಕುವ ಜಾಗಕ್ಕಿಂತ ಸ್ವಲ್ಪ ದೂರದಲ್ಲಿ ಬಂದು ನಿಂತಳು..ಚಂದಮಾಮನನ್ನು ನೋಡಿದಳು..ಹಾಗೇ ಸಮುದ್ರವನ್ನು ನೋಡಿದಳು..ಮಂದಸ್ಮಿತಳಾದಳು..ಕಡಲಿಗೆ ಹೇಳಿದಳು..ನೋಡು ನೋಡು,ಸಾಲು ಸಾಲು!ಕಾದು ಕುಳಿತಿವೆ ಪ್ರಸವಕ್ಕೆ ಭಾವ ಹಣತೆಗಳು..ಇದು ನನ್ನೊಬ್ಬಳ ಕತೆಯಲ್ಲ,ಎಲ್ಲರ ಕತೆ!..ಎನ್ನುತ್ತಾ ಅಲ್ಲೇ ಮಳಲ ಮೇಲೆ ಕುಳಿತಳು..ಆ ಇಬ್ಬರು ಪುಟ್ಟ ಮಕ್ಕಳು ಮಾಡಿದ್ದ ಗೊಂಬೆಯ ಅವಶೇಷದ ಸುಳಿವು ದೊರಕುತ್ತಿತ್ತು.ಈಕೆ ಮಳಲನ್ನು ಒಟ್ಟುಗೂಡಿಸತೊಡಗಿದಳು..ಈಗ ಅವಳ ಅಂತರಂಗದಲ್ಲಿ ಬೆಳಕಿತ್ತು..ಹೊಸ ಭರವಸೆಯ ಹೊಳಹಿತ್ತು..ಮಳಲಿನ ಮನೆಯನ್ನು ಕಟ್ಟುತ್ತಾ ಹೇಳತೊಡಗಿದಳು...ನನ್ನ ಕಡಲು ಈಗ ಅಗಾಧವಾಗಿದೆ,ಪ್ರಶಾಂತವಾಗಿದೆ..ಅದರ ಕಿನಾರೆಯ ತುಂಬೆಲ್ಲ ಹರಡಿದ್ದ ನೆನಪ ಮಳಲ ಮೇಲೆ ಇದ್ದ ಪ್ರೀತಿ,ಸಾವು ಮತ್ತು ನೆಳಲಿನ ಹೆಜ್ಜೆಗುರುತುಗಳು ಮುಗಿಲ ಕಂಬನಿಯಿಂದ ಮತ್ತಷ್ಟು ಸ್ಪಷ್ಟವಾಗಿವೆ..ಸ್ಥಿರವಾಗಿವೆ..ಅಳಿಸಿಹೋಗಬೇಕಾದವು ಅರಳಿನಿಂತಿವೆ..!!ಸಾಧನೆಯ ಬೀದಿಗೆ ಅವೇ ನನಗೆ ದಾರಿಯಾಗಿವೆ..ಕಡಲೇ..ಕಲ್ಪನೆಗೂ,ವಾಸ್ತವಕ್ಕೂ ಎಲ್ಲಿಯ ಹೋಲಿಕೆ?...ಕನಸೆಂಬುದು ಎಂದೂ ಗಾಜಿನಾ ಬಾಲಿಕೆ..ಅರ್ಥವಾಗುತ್ತದೋ ಇಲ್ಲವೋ ಅದೆಲ್ಲ ‘ಅವನಿಗೆ’..ಆದರೂ ನಿನ್ನೆಗೆ ನಾಳೆಗೆ ಒಲವಿನ ಬೆಸುಗೆ!ಕಳೆದ ಕ್ಷಣಗಳ,ಬೆಸೆದ ಮನಗಳ ನೆನಪುಗಳ ಮಹಲು..ಕನವರಿಸಿ ಕನಿಕರಿಸಿ ಕುಳಿತಿಹವು ಈಗ ಕನಸುಗಳು...ನನ್ನ ಮನದ ತುಂಬ ತುಂಬ ನೆನಪುಗಳ ರಾಯಭಾರ...ಬರೆದುಬಿಡಿ ಭಾವಗಳೇ,ನನ್ನೆದೆಯ ಮಳಲ ಮೇಲೆ ಚೂರು ಹಸ್ತಾಕ್ಷರ...!!!....                                                                                                   ~‘ಶ್ರೀ’
                                                                                                     ತಲಗೇರಿ