ಬುಧವಾರ, ಅಕ್ಟೋಬರ್ 5, 2022

ವರಾಹ ರೂಪಂ...

 ವರಾಹರೂಪಂ... 



ಬಹುಶಃ ಮನುಷ್ಯ ಹುಟ್ಟಿದಾಗಿನಿಂದ‌ ನಂಬಿಕೆಗಳೂ ಹುಟ್ಟಿರಬಹುದು. ನಂಬಿಕೆ ಅಂದ್ರೆ ಕೆಲವೊಮ್ಮೆ ಪ್ರಶ್ನಿಸುವಂಥದ್ದು, ಇನ್ನು ಕೆಲವೊಮ್ಮೆ ಪ್ರಶ್ನಿಸಲು ಹೆದರುವಂಥದ್ದು. ಆದರೆ, ಇನ್ನು ಕೆಲವು ಸಂಗತಿಗಳನ್ನು ಪ್ರಶ್ನಿಸುವುದಕ್ಕೂ ಮನುಷ್ಯನ ಹತ್ತಿರ ಸಾಧ್ಯವಾಗುವುದಿಲ್ಲ. ಮನುಷ್ಯ ಸಂಕುಲ‌ ಸೃಷ್ಟಿಯಾದ ನಂತರ 'ದೇವರು' ಅಂತ ಏನನ್ನೋ ಮೊದಲ ಬಾರಿಗೆ ಕಂಡುಕೊಂಡಾಗ, ಅದನ್ನು ಗುರುತಿಸಿದಾಗ ಮನುಷ್ಯನಿಗೆ ತನಗಿಂತ ಭಿನ್ನವಾದ ಅಸ್ತಿತ್ವವೊಂದರ ಅನುಭವ ಆಗಿರಲೇಬೇಕಲ್ಲ! ತನ್ನನ್ನು ಮೀರಿದ ಶಕ್ತಿಯೊಂದನ್ನು ಮನುಷ್ಯನೇ ಬೆಳೆಸಿಕೊಂಡ, ಅದಕ್ಕೆ ದೇವರು ಅಂತ ಕರೆದ. ತಾನು ಕಂಡುಕೊಂಡ ಆ ಶಕ್ತಿಯೇ ಇಡೀ ಜಗತ್ತಿನ ಸೃಷ್ಟಿಗೆ ಕಾರಣವೆಂದೂ ಹಾಗೂ ಅದರ ನಾದ ಮಾತ್ರದಿಂದಲೇ ಜಗತ್ತು ತನ್ನ ಲಯವನ್ನು ಕಂಡುಕೊಳ್ಳುತ್ತದೆಂದು ನಂಬಿದ. ಹಾಗೆ ಜಗತ್ತು ‌ನಡೆಯುವಾಗ, ಅದರೊಳಗೆ ನಡೆಯುವ ಎಲ್ಲ ಕಾರ್ಯಗಳನ್ನೂ ಆ ಶಕ್ತಿ ಈ ಜಗತ್ತಿನ ಸ್ಥಿತಿಯನ್ನು ಕಾಪಾಡುವುದಕ್ಕೆ ನಡೆಸುವ ಕೆಲಸವೆಂದೂ ಕರೆದ. ನಂಬುವುದಷ್ಟೇ ಅಲ್ಲದೇ, ತನ್ನ ನಂಬಿಕೆಗಳನ್ನೂ ಆರಾಧಿಸತೊಡಗಿದ. ದೇವರ ಜೊತೆ ಜೊತೆಗೆ ಗಣಗಳೂ ಹುಟ್ಟಿಕೊಂಡವು. ಎಲ್ಲವೂ ಒಂದು ಸಮತೋಲನದ ಪ್ರಕ್ರಿಯೆಯ ಭಾಗವೇ ಆದವು. ಜಗತ್ತಿನ ವಾಸ್ತುಶಿಲ್ಪಕ್ಕೆ ದೇವರು ಮತ್ತು ನಂಬಿಕೆಗಳು ಕೊಟ್ಟಷ್ಟು ಕೊಡುಗೆಯನ್ನು ಮತ್ತ್ಯಾವುದೂ ಕೊಟ್ಟಿಲ್ಲ.‌ ಬೇರೆ ಬೇರೆ ಕಲಾಪ್ರಕಾರಗಳು ಈ ಜಗತ್ತಿನಲ್ಲಿ ಹುಟ್ಟಿಕೊಂಡಿದ್ದಕ್ಕೂ ಈ ಎಲ್ಲಾ ನಂಬಿಕೆಗಳೇ ಮುಖ್ಯ ಕಾರಣ. ಇಂಥ ನಂಬಿಕೆಗಳೇ ವಿಶ್ವದ ಬೇರೆ ಬೇರೆ ಸಂಸ್ಕೃತಿಗಳನ್ನು ಹುಟ್ಟುಹಾಕಿದವು. ಈ ಸಂಸ್ಕೃತಿಗಳೇ ಮನುಷ್ಯನ ಬದುಕನ್ನು ಕಲಾತ್ಮಕವಾಗಿಸಿದವು. ನಂಬಿಕೆಗಳು ಬದುಕಿಗೆ ನೆಮ್ಮದಿ, ಧೈರ್ಯ, ಸಂಸ್ಕಾರ, ಆತ್ಮ ಸಂತೃಪ್ತಿಯನ್ನು ಕೊಟ್ಟವು. ನಂಬಿಕೆಗಳನ್ನು ಪ್ರಶ್ನಿಸುವುದನ್ನೂ ಇದೇ ಸಂಸ್ಕೃತಿ ಹೇಳಿಕೊಟ್ಟಿತು. ಪ್ರಶ್ನಿಸುವುದಕ್ಕೂ ಹೀಗಳೆಯುವುದಕ್ಕೂ ವ್ಯತ್ಯಾಸವಿದೆ. ಭಾರತ ಯಾವತ್ತಿಗೂ ಅನ್ವೇಷಕರ ನಾಡು. ಇದಮಿತ್ಥಂ ಅನ್ನುವ ನಂಬಿಕೆಯಿಂದ ಶುರುವಾಗಿ ಆ ನಂಬಿಕೆಗಳ ಪರಿಧಿಯನ್ನು ಮೀರಿ ಉತ್ತರ ಹುಡುಕುವ ಸಂಸ್ಕೃತಿ ಭಾರತದ್ದು. ಹೀಗೆ ಹುಡುಕುವ ಪ್ರಕ್ರಿಯೆಯಲ್ಲಿ ಒಂದಷ್ಟು ಆಚರಣೆಗಳು, ಪದ್ಧತಿಗಳೂ ರೂಪುಗೊಳ್ಳುತ್ತವೆ. ಅವೇ ಪರಂಪರೆಯಾಗಿ ಮುಂದುವರೆಯುತ್ತವೆ. "ಅರೇ, ಮನುಷ್ಯ ಹುಟ್ಟಿದ ಮೇಲಲ್ಲವಾ ಇವೆಲ್ಲಾ ಆಗಿದ್ದು?" ಅಂತ ಪ್ರಶ್ನಿಸಬಹುದಷ್ಟೇ, ಆದರೆ ಮನುಷ್ಯ ಪ್ರಪಂಚ ಹುಟ್ಟುವುದಕ್ಕೂ ಮೊದಲು ಏನಿತ್ತು? ಮನುಷ್ಯ ಪ್ರಪಂಚವೇ ಪೂರ್ತಿ ಕಣ್ಮರೆಯಾದ ಮೇಲೆ ಏನು ಉಳಿಯಬಹುದು? ಇವೆಲ್ಲಕ್ಕೂ ಏನೇನೋ ಊಹಿಸಿಕೊಂಡು ಉತ್ತರಿಸಬಹುದು ಬಿಟ್ಟರೆ, ನಿಖರವಾದ ಉತ್ತರ ಹೇಳುವುದಾದರೂ ಹೇಗೆ ಸಾಧ್ಯ? ಇಂದ್ರಿಯಗಳ ಅನುಭವದ ಪರಿಧಿಗೆ ನಿಲುಕದೇ ಇರುವುದನ್ನು ವ್ಯಂಗ್ಯ ಮಾಡುವ ಬದಲು, ಆ ಅನುಭವ ನಮಗಿನ್ನೂ ಆಗಿಲ್ಲ ಅಂತ ಒಪ್ಪಿಕೊಳ್ಳುವುದೇ ಹೆಚ್ಚು ಪ್ರಾಮಾಣಿಕತೆ. ತನಗಿಂತ ಹೆಚ್ಚು ಬಲಾಢ್ಯವಾದ ಯಾವುದೋ ಶಕ್ತಿ ತನ್ನನ್ನು ಕಾಯುತ್ತದೆ ಅನ್ನುವ ನಂಬಿಕೆಯಿಂದ ಮನುಷ್ಯ ಅಸಾಧ್ಯಗಳನ್ನು ಸಾಧ್ಯವಾಗಿಸಬಲ್ಲ‌. ಅದು ನಂಬಿಕೆಗೆ ಇರಬಹುದಾದ ಹರವು. 


ಜಗತ್ತಿನೆಲ್ಲೆಡೆಯೂ ಮನುಷ್ಯರ ಕತೆಗಳು ಒಂದೇ ಥರವೇ. ಆದರೆ, ಯಾವಾಗ ಆ ನೆಲದ, ಆ ಪರಿಸರದ ಭಿನ್ನತೆಗಳು ಕತೆಯಾಗುತ್ತವೆಯೋ ಆಗ ಅವು ಹೊಸ ಆಯಾಮವನ್ನು ಕತೆಗೆ ಒದಗಿಸುತ್ತವೆ. ಹಾಗೆ ಹುಟ್ಟಿಕೊಂಡ ಕತೆಗಳು ಒಟ್ಟೊಟ್ಟಿಗೆ ಜಾಗತಿಕವೂ, ಪ್ರಾದೇಶಿಕವೂ ಆಗುತ್ತವೆ‌. ಒಂದು ಕತೆ ಏಕತಾನತೆಯ ಹಾದಿಯಲ್ಲಿ ಸಾಗುವುದನ್ನು ತಪ್ಪಿಸುವುದೂ ಇದೇ ಪ್ರಾದೇಶಿಕತೆ. ಒಂದೇ ತೆರನಾದ ಕತೆಗಳು ಸಾಹಿತ್ಯದಲ್ಲಿ ಕಾಣುತ್ತಿವೆ, ಸಾಹಿತ್ಯ ನಿಂತ‌ ನೀರಾಗಿದೆ, ಅದೇ ಊರು ಅದೇ ಕೇರಿ, ಅದೇ ನಗರ ಅದೇ ಉದ್ಯೋಗ, ಇವಿಷ್ಟರ ಸುತ್ತಲೇ ಕತೆಗಳು ಮತ್ತು ಕಥಾ ಪಾತ್ರಗಳು ಸುತ್ತು ಹೊಡೆಯುತ್ತಿವೆ ಅನ್ನುವ ಆರೋಪಗಳ ಮಧ್ಯ, ನಾವು ನಿಜವಾಗಿಯೂ ಈ ನೆಲದ ಕತೆಗಳನ್ನು ಪೂರ್ತಿಯಾಗಿ ಹೇಳಿದೆವಾ ಅಂತ ನಮ್ಮನ್ನೇ ನಾವು ಪ್ರಶ್ನಿಸಿಕೊಂಡರೆ ಬಹುಶಃ ಇಲ್ಲ‌ ಅಂತಲೇ ಅನ್ನಿಸದಿದ್ದರೆ ನಾವಿನ್ನೂ ಕತೆಗಳನ್ನು ಗುರುತಿಸಬಲ್ಲವರಾಗಿಲ್ಲವೆಂದೇ ಅರ್ಥ. ಸಮೃದ್ಧ ಜೀವ ಸಂಕುಲವಿದ್ದಲ್ಲಿ ಕತೆಗಳಿಗೆ ಬರವೇ! ಪ್ರಕೃತಿಯೊಂದಿಗೆ ಬದುಕು ಆರಂಭಿಸಿದ ಮನುಷ್ಯ ತಾನು ಮಾಡಿಕೊಂಡ ವ್ಯವಸ್ಥೆಗಳಲ್ಲಿ ಮನುಷ್ಯನೊಂದಿಗೇ ಬಿಕ್ಕಟ್ಟು ಸೃಷ್ಟಿಸಿಕೊಂಡ. ತಾನು ಶಕ್ತಿಶಾಲಿ ಅಂತ‌ ನಿರೂಪಿಸುವ ಭರದಲ್ಲಿ ಪ್ರಕೃತಿಗೂ ಎದುರಾಗಿ ನಿಂತ. ಆದರೆ, ದಾಹವಾದಾಗ ಕುಡಿಯಲು ಬೇಕಾಗುವ ನೀರು, ಹಸಿವಾದಾಗ ಬೇಕಾಗುವ ಆಹಾರವನ್ನು ಕೊಡುವ ಮಣ್ಣು, ಇವೆರಡಕ್ಕಿಂತಲೂ ಪ್ರತಿ ಕ್ಷಣ ಉಸಿರಾಡಲು ಅಗತ್ಯವಿರುವ ಗಾಳಿ ಇವುಗಳಲ್ಲಿ ಯಾವುದು ಕಲುಷಿತವಾದರೂ ಅದರಿಂದ ತನಗೇ ತೊಂದರೆ ಅನ್ನುವುದು ಮಾತ್ರ 'ತಾನೇ ಬುದ್ಧಿವಂತ' ಅಂದುಕೊಂಡ ಪ್ರಾಣಿಗೆ ತಿಳಿಯದೇ ಇರುವುದು ವಿಪರ್ಯಾಸ ಹಾಗೂ ಅದೇ ಸೋಜಿಗ. ಕೃತಕವಾಗಿ ಆಮ್ಲಜನಕ ತಯಾರಿಸಿ ಮಾರಾಟ ಮಾಡಿ ಅದೆಷ್ಟು ಹಣ ಮಾಡಬಹುದು ಅನ್ನುವ ಯೋಚನೆಯೇ ಹೆಚ್ಚು ಪ್ರಯೋಜನಕಾರಿ ಅಂತ ಅನಿಸದೇ ಹೋದರೆ ಅವ ಇಂದಿನ ಮನುಷ್ಯನೇ ಅಲ್ಲ;ಅವನಿಗೆ 'ಬದುಕುವ‌ ಕಲೆ'ಯೇ ಗೊತ್ತಿಲ್ಲ! ಆದರೆ, ನಮ್ಮ ಪೂರ್ವಿಕರಿಗೆ ಮನುಷ್ಯನ ಅಗತ್ಯತೆಗಳ ಅರಿವಿತ್ತು. ಹಾಗಾಗಿಯೇ ಅದೆಷ್ಟೋ ವಿಷಯಗಳನ್ನು ದೇವರ ಹೆಸರಿನಲ್ಲಿ ಕಾಪಾಡತೊಡಗಿದರು. ಉದಾಹರಣೆಗೆ 'ದೇವರ ಕಾಡು'. ಈ ಥರದ ಕಾಡುಗಳು ಇರುವುದರ ಮಹತ್ವದ ಅರಿವಿರದೇ ಹೋದರೆ, ಅದು ಮೂಢನಂಬಿಕೆಯಾಗಿ ಕಾಣುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಆದರೆ, ಅಂಥ ಕಾಡುಗಳೇ ಇಂದಿಗೂ ನಮ್ಮನ್ನೆಲ್ಲಾ ಪೊರೆಯುತ್ತಿರುವುದು. ನದಿ ಕೇವಲ ನಾಗರಿಕತೆಗಳ ತೊಟ್ಟಿಲು ಅಂತ ಓದಿ ಬಿಟ್ಟುಬಿಡದೇ, ದೇವರ ಸ್ಥಾನದಲ್ಲಿಟ್ಟು ಪೂಜಿಸುವ ನಾಡು ನಮ್ಮದು. ಮನುಷ್ಯನ ಬದುಕು ಸುಲಲಿತವಾಗಿ ನಡೆಯುವುದಕ್ಕೆ‌ ಅನುವು ಮಾಡಿಕೊಡುವ ಪ್ರಕೃತಿಯ ಎಲ್ಲ ಸಂಗತಿಗಳನ್ನೂ ಕೃತಜ್ಞತೆಯಿಂದ ಸ್ಮರಿಸುವ ಹಾಗೂ ಆ ಸ್ಮರಣೆಗಾಗಿ ಒಂದೊಂದು ಆಚರಣೆಯನ್ನು ಪೋಷಿಸಿಕೊಂಡು, ತಲೆಮಾರುಗಳಿಂದ ನಡೆಸಿಕೊಂಡು ಬಂದ ದೇಶ ನಮ್ಮದು. ಇಲ್ಲಿ ಕತೆಗಳು ಖಾಲಿಯಾದಾವೇ! 


ಇಷ್ಟೆಲ್ಲಾ ಬರೆಯುವುದಕ್ಕೆ ಕಾರಣ ಕಾಂತಾರ ಸಿನೆಮಾ. ಈ ಬರವಣಿಗೆಯ ಯಾವ ಅಗತ್ಯವೂ ಇಲ್ಲದಷ್ಟು ಸಿನೆಮಾ ಈಗಾಗಲೇ ಜನಸಮೂಹವನ್ನು ತಲುಪಿಯಾಗಿದೆ. ಈ ಬರವಣಿಗೆಯಿಂದ ಆ ಸಿನೆಮಾಕ್ಕೆ ಯಾವ ಲಾಭವೂ ಇಲ್ಲ. ಆದರೆ, ಸಿನೆಮಾ ನೋಡಿ ಅದರಿಂದ ಉಂಟಾದ ರಸಾನುಭೂತಿಯನ್ನು ಪದಕ್ಕಿಳಿಸುವ ಪ್ರಯತ್ನ ಮಾಡದೇ ಹೋದರೆ, ಬಹುಶಃ ಆ ಸಿನೆಮಾದ ಗುಂಗಿನಿಂದ ಹೊರಬರುವುದು ತುಸು ಕಷ್ಟವೇ ಆದೀತೇನೋ.. "ವರಾಹ ರೂಪಂ ದೈವ ವರಿಷ್ಠಮ್" ಅನ್ನುವ ಆ ಧ್ವನಿ ಈಗಲೂ ಕಿವಿಯಲ್ಲಿ, ಮನಸ್ಸಿನಲ್ಲಿ ಅನುರಣಿಸುತ್ತಲೇ ಇದೆ. ಸಿನೆಮಾದಲ್ಲಿ ಋಣಾತ್ಮಕ ಅಂಶಗಳೇ ಇಲ್ವಾ ಅಂತ‌ ಪ್ರಶ್ನಿಸಿಕೊಂಡರೆ ಬೇಕಾದಷ್ಟು ಸಿಗುತ್ತವೆ. ಕೆಲವು ಪಾತ್ರಗಳು ಮತ್ತು ಆ ಪಾತ್ರಗಳಿಗೆ ಇರಬಹುದಾದ ಸಾಧ್ಯತೆಗಳು ಅಥವಾ ಸಂದರ್ಭದ ತೀವ್ರತೆ ಅಷ್ಟು ಸಮರ್ಥವಾಗಿ ಕಟ್ಟಲ್ಪಟ್ಟಿಲ್ಲ. ಉದಾಹರಣೆಗೆ ಲೀಲಾಳ ತುಮುಲಗಳು. ಆದರೂ, ಯಾಕೆ ಸಿನೆಮಾ ಅಷ್ಟು ಇಷ್ಟವಾಯಿತು ಅಂತ‌ ಕೇಳಿದರೆ ಅದಕ್ಕೆ ಬಹಳಷ್ಟು ಕಾರಣಗಳು ದೊರೆತವು. ಸುಮ್ಮನೆ ನೆಪಕ್ಕಾಗಿ ಯಾವುದನ್ನೂ ಇಲ್ಲಿ ತುರುಕಿಲ್ಲ. ಈ ಥರದ ಸಿನೆಮಾಗಳಾಗಲೀ, ಸಿನೆಮಾದ ಅಂತ್ಯಗಳಾಗಲೀ ಬಂದೇ ಇಲ್ವಾ ಅಂತ ಕೇಳಿದರೆ, ಬಂದಿವೆ; ಸುಖಾಂತ್ಯದ ಭಾಗವಾಗಿ ಬಂದವುಗಳೇ ಹೆಚ್ಚು. ಆದರೆ, ಇಲ್ಲಿ ಅದು ಇಡೀ ಕತೆಯ ಭಾಗವಾಗಿ, ಇಡೀ ಕತೆಯೇ ಅಂಥದ್ದೊಂದು ಹಂದರದಲ್ಲಿ ಸಹಜವಾಗಿ ಬಂದಿದೆ‌. ಜೊತೆಗೆ, ಅದರ ತೀವ್ರತೆಯೂ ಪ್ರೇಕ್ಷಕರಲ್ಲಿ ಒಂದು ತೆರನಾದ ಭಾವೋತ್ಕರ್ಷಕ್ಕೆ ಕಾರಣವಾಗುತ್ತಿದೆ. ಅಲ್ಲಿನವರೇ ಆ ಕತೆಯನ್ನು ಹೇಳಿದಾಗ ಅದಕ್ಕೊಂದು ಸ್ವಂತಿಕೆ ಸಿಗುತ್ತದೆ. ಅದರಲ್ಲೂ ಇದು ಸಂಪೂರ್ಣವಾಗಿ ಜನಪದದ ಹಿನ್ನೆಲೆಯಲ್ಲಿ ಮೂಡಿಬಂದಿದ್ದರಿಂದ ಜನರಿಗೆ ಹತ್ತಿರವಾಗುವ ಗುಣ ಹೆಚ್ಚು. ಜನಪದ ತನ್ನ ಸೊಗಡು ಹಾಗೂ ನೈಜತೆಯಿಂದಾಗಿ ಯಾವತ್ತೂ ಜನಮಾನಸದಲ್ಲಿ ಔನ್ನತ್ಯವನ್ನು ತಲುಪುತ್ತದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ರಾಮಾಯಣ. ವಾಲ್ಮೀಕಿ ಮಹರ್ಷಿ ರಾಮಾಯಣವನ್ನು ಬರೆಯುವುದಕ್ಕೂ  ಮೊದಲಿಗೆ ರಾಮಾಯಣವನ್ನು ನಾರದರಿಂದ ಕೇಳಿದ್ದು ಜ‌ನಪದದ ಭಾಗವಾಗಿಯೇ. ಜನಪದದಲ್ಲಿ ಮುಗ್ಧತೆ, ಭಕ್ತಿ, ಧರ್ಮಪ್ರಜ್ಞೆ, ನಂಬಿಕೆ, ಗೌರವ, ಸಂಭ್ರಮ, ಸಂಸ್ಕಾರ, ದರ್ಶನ, ಮೌಲ್ಯ, ಪರಂಪರೆ, ಸಂಪ್ರದಾಯಗಳಿವೆ. ಹಾಗಾಗಿ ಜನಪದ ಗಟ್ಟಿಯಾಗಿ ಬೇರೂರುತ್ತದೆ. ಮನಸ್ಸುಗಳನ್ನು ಕಟ್ಟುತ್ತದೆ. 


ದಕ್ಷಿಣ ಕನ್ನಡದ ಕುರಿತು ಹೇಳುವಾಗ ಹೇಳಲಾಗುವ ಒಂದು ಮಾತನ್ನು ಗಮನಿಸಿದ್ದೇನೆ; 'ಅವಿಭಜಿತ ದಕ್ಷಿಣ ಕನ್ನಡ'. ಅಲ್ಲಿನ ನಂಬಿಕೆಗಳು, ಆಚರಣೆಗಳು, ಸಂಪ್ರದಾಯಗಳು ಹಾಗೂ ಅವೆಲ್ಲಕ್ಕೂ ಮೂಲವಾಗಿರುವ ದೈವಗಳು ಇಡೀ ದಕ್ಷಿಣ ಕನ್ನಡವನ್ನು ಒಂದಾಗಿ ಹಿಡಿದಿಟ್ಟಿವೆ ಅಂದರೆ ತಪ್ಪಾಗಲಾರದೇನೋ. ಹಾಗೆಯೇ, ದಕ್ಷಿಣ ಕನ್ನಡಕ್ಕೆ ಒಂದು ನಿಗೂಢತೆಯಿದೆ. ಆ ನಿಗೂಢತೆಯೇ ಅಲ್ಲಿನ ಆಚರಣೆಗಳಿಗೂ ಅಂಥದ್ದೊಂದು ಗುಣವನ್ನು ತಂದುಕೊಟ್ಟಿದೆ. ಅಲ್ಲಿನ ನಂಬಿಕೆಗಳೆಲ್ಲಾ ಕತೆ ಅಂದುಕೊಂಡವರಿಗೆ ಕತೆಯೂ ಹೌದು, ಸತ್ಯ ಅಂದುಕೊಂಡವರಿಗೆ ಸತ್ಯವೂ ಹೌದು. ಮನುಷ್ಯನ ಊಹೆಗೂ ನಿಲುಕದ ಅದೆಷ್ಟೋ ಘಟನೆಗಳಿಗೆ ಈ ನಾಡು ಸಾಕ್ಷಿಯಾಗಿದೆ. ನನ್ನನ್ನು ಯಾವುದೋ ಶಕ್ತಿ ನಿರಂತರವಾಗಿ ಕಾಯುತ್ತಿದೆ ಹಾಗೂ ಅದು ನಾನು ಅಧರ್ಮದ ದಾರಿ ಹಿಡಿಯದಂತೆ ಸದಾ ಎಚ್ಚರಿಸುತ್ತಲೂ ಇರುತ್ತದೆ ಅನ್ನುವ ಭಾವವೇ ಬದುಕಿಗೆ ಅದೆಷ್ಟು ನೆಮ್ಮದಿ ತರಬಲ್ಲದು. ಅದಕ್ಕಾಗಿಯೇ ಇಲ್ಲಿನ ದೈವಗಳು ದೇವಸಮಾನವಾಗಿ ಪೂಜಿಸಲ್ಪಡುತ್ತವೆ. ಒಂದು ನಿರ್ದಿಷ್ಟ ಕಾರ್ಯಕ್ಕಾಗಿ ದೇವರಿಂದ ಕಳುಹಿಸಲ್ಪಟ್ಟವುಗಳು ಇವು ಅನ್ನುವ ನಂಬಿಕೆಯೂ ಇದರ ಭಾಗವೇ. ಇಲ್ಲಿ ಮನುಷ್ಯರೂ ದೈವದ ಸ್ಥಾನಕ್ಕೇರಿದ ಉದಾಹರಣೆಗಳಿವೆ. ಭಾರತ ಧರ್ಮಭೂಮಿಯೂ ಹೌದು, ಕರ್ಮಭೂಮಿಯೂ ಹೌದು. 


ಈ ಚಿತ್ರ ಘೋಷಣೆಯಾದ ದಿನದಿಂದ ಕಾದು, ಸುಮಾರು ನಾಲ್ಕು ವರ್ಷಗಳ ನಂತರ ಚಿತ್ರಮಂದಿರಕ್ಕೆ ಹೋಗಿ, ಇಂಥದ್ದೊಂದು ಸಿನೆಮಾ ನೋಡುವ ಸಂಭ್ರಮವೇ ಬೇರೆ. ಸಿನೆಮಾ ನೋಡಿ ಆದ ಮೇಲೂ ಅದರ ಕುರಿತಾಗಿ ನಾನು ಬರೆಯಬೇಕು ಅಂದುಕೊಂಡಿದ್ದೆಲ್ಲವೂ ಸಪ್ಪೆಯೆನಿಸಿ, ಕಾದು ಕಾದು ಬರೆಯುವ, ಪದೇ ಪದೇ ಸಿನೆಮಾವನ್ನು ಕಣ್ಣೆದುರಿಗೆ ತಂದುಕೊಳ್ಳುವ ಈ ಅನುಭವ ಇದೆಯಲ್ಲಾ ಅದಕ್ಕಾಗಿ ಕಾಂತಾರ ಹತ್ತಿರವಾಗುತ್ತದೆ. ಪ್ರತಿಯೊಬ್ಬರಲ್ಲೂ ಒಂದು ಅನಿರ್ವಚನೀಯ ಅನುಭೂತಿಯನ್ನು ಹುಟ್ಟುಹಾಕುವುದು ಸುಲಭದ ಸಂಗತಿಯಲ್ಲ.  ಕಾಂತಾರ ಒಂದು ಪರಿಪೂರ್ಣ ಕಲಾಕೃತಿಯಲ್ಲ. ಆದರೆ, ಚೆಂದದ ಹಾಗೂ ಸ್ವಂತಿಕೆಯ ಕಲಾಕೃತಿ. ತನ್ನ ಅಪೂರ್ಣತೆಯನ್ನು ತಾನೇ ಮೀರುವ ಸಾಧ್ಯತೆಗಳನ್ನು ತನ್ನಲ್ಲಿಯೇ ಇರಿಸಿಕೊಂಡ ಕಲಾಕೃತಿ. ಕೆಲವು ಸೂಕ್ಷ್ಮ ಸಂಗತಿಗಳನ್ನು ಬಹಳ ಸೂಕ್ಷ್ಮವಾಗಿಯೇ ಹೇಳಿದ ಸಿನೆಮಾ. ಮನುಷ್ಯ ಮನುಷ್ಯರ ನಡುವಿನ ಅಂತಸ್ತುಗಳ ಭಿನ್ನತೆಗಳು ಹಾಗೂ ಪರಿ'ಶುದ್ಧ'ವಾದಾಗ ಉಂಟಾಗುವ ಸಮಾನತೆ ಇತ್ಯಾದಿಗಳನ್ನು ವಾಚ್ಯವಾಗಿಸದೇ ಹೇಳಿದೆ. ಸಿಂಗಾರ ಸಿರಿಯೇ ಹಾಡಲ್ಲಿ Manasi Sudhir  ಅವ್ರು ಶಿವ ಮತ್ತು ಲೀಲಾಳನ್ನು ನೋಡಿ ಒಳಗೊಳಗೇ ಖುಷಿಪಡುವ ದೃಶ್ಯ ಇದೆ. ಅದು ಬಹುಶಃ ಎಲ್ಲ ಅಮ್ಮಂದಿರ ಅಂತಃಕರಣದ ಪ್ರತೀಕ ಅಂತಲೇ ಅನಿಸಿತು. ಒಂದು ಊರಿನ, ಒಂದು ಭಾಗದ ಸಾಮಾಜಿಕ ಜೀವನವನ್ನು ಯಾವ ಪೂರ್ವಗ್ರಹದಲ್ಲಾಗಲೀ ಅಥವಾ ಸಿದ್ಧಾಂತದ ಪರಿಧಿಯಲ್ಲಾಗಲೀ ತೆರೆದಿಟ್ಟಿಲ್ಲ. 'ಆ‌ ಕಾಲಘಟ್ಟದಲ್ಲಿ ಹೀಗಿತ್ತು ಮತ್ತು ಇದು ಹೀಗಿದೆ' ಅನ್ನುವುದಷ್ಟೇ ಇಲ್ಲಿನ ಪ್ರಸ್ತುತಿ. ಚಿತ್ರದ ಕೊನೆಯಲ್ಲಿ ಇರುವ ಆಶಯವೂ ಅಷ್ಟೇ ಹೃದ್ಯವಾದದ್ದು. ಧರ್ಮ ಮತ್ತು ದೈವ ಇರುವುದು ಇದೇ ಕಾರಣಕ್ಕಾಗಿ ಹಾಗೂ ಇದೇ ಅವುಗಳ ಕೆಲಸ ಅನ್ನುವುದನ್ನು ಅದೆಷ್ಟು ಕಾವ್ಯಾತ್ಮಕವಾಗಿ ಹೇಳಲಾಗಿದೆ ಅಂದರೆ, ಅರಿವಿಲ್ಲದೆಯೇ ಕಣ್ಣಂಚು ಒದ್ದೆಯಾಗುತ್ತದೆ ಹಾಗೂ ಮನಸ್ಸು ಆಹ್ಲಾದಕ್ಕೊಳಗಾಗುತ್ತದೆ. ಕತೆ, ಕವಿತೆ, ಸಿನೆಮಾ ಯಾವುದರಲ್ಲೇ ಆದರೂ, ಅಷ್ಟೂ ಹೊತ್ತಿನ ಸಂಗತಿಗಳನ್ನು ಒಗ್ಗೂಡಿಸಿ, ಅದಕ್ಕೊಂದು ಸೂಕ್ತವಾದ ಅರ್ಥ ಕೊಡುವುದು ಅಂತ್ಯದ ಕೆಲಸ. ಹಾಗಾಗಿಯೇ ಅಂತ್ಯ‌, ಇಡೀ ಸಿನೆಮಾವನ್ನು ಕಟ್ಟಬಹುದು ಅಥವಾ ಕೆಡವಬಹುದು. ಕಾಂತಾರದಲ್ಲಿ ಅಂತ್ಯ ಇಡೀ ಸಿನೆಮಾಕ್ಕೆ ಬೇರೆ ನೆಲೆಯನ್ನೇ ಕೊಟ್ಟಿದೆ. ಇತ್ತೀಚಿನ ದಿನಗಳಲ್ಲಿ ಬಂದ ಸಿನಿಮಾಗಳು ಧರ್ಮ, ಆಚರಣೆ, ಸಂಪ್ರದಾಯಗಳ ಕುರಿತಾಗಿ ಇರಬೇಕಾದ ಸೂಕ್ಷ್ಮತೆಯನ್ನು ಕಳೆದುಕೊಂಡಿರುವುದೇ ಹೆಚ್ಚು. ಆದರೆ, ಈ ಸಿನೆಮಾದಲ್ಲಿ ನಮ್ಮ ನೆಲದ ಕತೆಯನ್ನು ಒಂದು ಆತ್ಮೀಯ ಕತೆಯಾಗಿಯೇ ಹೇಳುವ ಹಾಗೂ ಅದನ್ನು ಅಷ್ಟೇ ಗೌರವದಿಂದ, ಜತನದಿಂದ ಮುಂದಿಡುವ ಪ್ರಯತ್ನಕ್ಕೆ ಮನಸ್ಸು ತುಂಬಿಕೊಳ್ಳದೇ, ಪುಳಕಗೊಳ್ಳದೇ ಇರುವುದಾದರೂ ಹೇಗೆ ಸಾಧ್ಯ! 


"ವರಾಹ ರೂಪಂ ದೈವ ವರಿಷ್ಠಮ್..."

ಶನಿವಾರ, ಜುಲೈ 23, 2022

'ಒಂದು ವಿಳಾಸದ ಹಿಂದೆ' ಎಷ್ಟೆಲ್ಲಾ ಕತೆಗಳು...

 



'ಒಂದು ವಿಳಾಸದ ಹಿಂದೆ' ಎಷ್ಟೆಲ್ಲಾ ಕತೆಗಳು... 

ನಿಜವಾಗಿ ಹೇಳಬೇಕೆಂದರೆ ಕತೆ, ಕಾದಂಬರಿ, ಕವಿತೆ ಇವು ಗಂಭೀರವಾಗಿದ್ದರೆ ಅವಕ್ಕೆ ಗಂಭೀರ ಓದುಗರೂ ಬೇಕಾಗುತ್ತಾರೆ. ಆದರೆ, ಕತೆಯಷ್ಟು ಕಥನವನ್ನೂ ಅಥವಾ ಸಂ'ಗತಿ'ಯನ್ನೂ ಹೊಂದಿರದ, ಕವಿತೆಯಷ್ಟು ವಕ್ರತೆಯೂ ಇಲ್ಲದ, ಕಾದಂಬರಿಯಷ್ಟು ಗಹನವಲ್ಲದ, ಆದರೆ ಈ ಎಲ್ಲವನ್ನೂ ಚೂರು ಚೂರೇ ಮೇಳೈಸಿಕೊಂಡು ಹುಟ್ಟಿಕೊಳ್ಳುವ ಬರಹಗಳು ಬಹಳಷ್ಟು ಜನರನ್ನು ತಲುಪುವಲ್ಲಿ ಯಶಸ್ವಿಯಾಗುತ್ತವೆ. ಹದವಾದ ತಿಳಿಹಾಸ್ಯ, ಒಂದಷ್ಟು ಗಟ್ಟಿ ವಿಚಾರಗಳು, ಒಂದಷ್ಟು ರಂಜನೆ, ಒಂದಷ್ಟು ಆತ್ಮೀಯ ಕಾಲಹರಣ ಇತ್ಯಾದಿಗಳಿಂದೊಡಗೂಡಿ ನಿತ್ಯದ ಬದುಕಿನಿಂದಲೇ ಆಯ್ದುಕೊಂಡ ಅಥವಾ ಆಯ್ದುಕೊಂಡಂತೆ‌ ಅನಿಸಬಹುದಾದ ಸಂಗತಿಗಳನ್ನಿಟ್ಟುಕೊಂಡು ಬರೆಯಬಹುದಾದ ಪ್ರಕಾರ‌ ಲಲಿತ ಪ್ರಬಂಧ. ಮನಸ್ಸಿಗೆ ಹಿತವಾಗಬಹುದಾದ,‌ ಹತ್ತಿರವಾಗಬಹುದಾದ ಹಾಗೂ ಮನಸ್ಸನ್ನು ಹಗುರಗೊಳಿಸಬಹುದಾದ ಭಾವಗುಚ್ಛ ಅಂತಂದರೆ ಪೂರಾ ತಪ್ಪಾಗಲಿಕ್ಕಿಲ್ಲ ! ಅಂಥ ಲಲಿತ ಪ್ರಬಂಧಗಳ ಪುಸ್ತಕ 'ಒಂದು ವಿಳಾಸದ ಹಿಂದೆ', ಬರೆದವರು ಸ್ಮಿತಾ ಅಮೃತರಾಜ್, ಸಂಪಾಜೆ. 

ಎರಡು ವರ್ಷಗಳ ಹಿಂದೆ ಈ ಹೆಸರು ಕೇಳಿದಾಗ, ಮೊದಲೆಲ್ಲೋ‌‌ ಕೇಳಿದ್ದೇನಲ್ಲಾ ಅಂತ‌ ಅನ್ನಿಸೋದಕ್ಕೆ ಶುರುವಾಯಿತು. ಬಹುಶಃ ನಾನು ಕನ್ನಡದ‌ ವಾರಪತ್ರಿಕೆಗಳನ್ನು ಓದಲು ಶುರುಮಾಡಿದಾಗಿನಿಂದಲೂ ಅವರು ಬರೆಯುತ್ತಲೇ‌ ಇದ್ದಾರೆ! ಅವರಿಗೆ ಅಷ್ಟು ವಯಸ್ಸಾಯಿತು ಅಂತಲ್ಲ ಮತ್ತೆ ಹ್ಞ! ( ಇದನ್ನು ಅವರು ಓದಿದರೆ "ಏನಪ್ಪಾ ನಿನ್ ತರಲೆ" ಅಂತ ಮುದ್ದಾಗಿ ನಗ್ತಾರೆ ಖಂಡಿತಾ!) ಅಷ್ಟು ದೀರ್ಘಕಾಲದ ಬರವಣಿಗೆಯ ಹಿನ್ನೆಲೆಯಿರುವವರು. ಕವಿತೆ ಅವರ ಮೊದಲ ಆಯ್ಕೆಯಾದರೂ, ಲಲಿತ‌ ಪ್ರಬಂಧದಲ್ಲಿಯೂ ಸಾಹಿತ್ಯ ಕೃಷಿ ಮಾಡಿದ್ದಾರೆ. ಅದರ ಜೊತೆಗೆ ಕೃಷಿ ಅನ್ನುವ ಕೃಷಿಯನ್ನೂ ಮಾಡಿದ್ದಾರೆ. ತಾನು ಬರಹಗಾರ್ತಿ ಅನ್ನುವುದಕ್ಕೂ ಮೊದಲು ಅವರು ಹೇಳುವುದು ನಾನು ಗೃಹಿಣಿ, ಕೃಷಿಕ ಮಹಿಳೆ. ಒಂದು ಸಂವಾದದಲ್ಲಿ ಅವರದ್ದೊಂದು ಮಾತಿದೆ; "ಅಡುಗೆ ಮನೆಯ ಕಿಟಕಿಯನ್ನೇ ವಿಶಾಲವಾಗಿ ಮಾಡ್ಕೊಂಡು ಪ್ರಪಂಚವನ್ನು ನೋಡ್ಲಿಕ್ಕೆ ನಮಗೆ ಇವತ್ತು ಬರೆಹದ ಮೂಲಕ‌ ಸಾಧ್ಯ ಆಗಿದೆ ಅನ್ನಿಸ್ತದೆ". ಇದರದ್ದೇ ಮುಂದುವರೆದ ಭಾಗವಾಗಿ, ಇನ್ನೊಂದು ಸಂದರ್ಶನದಲ್ಲಿ ಅವರು ಹೇಳಿದ ಮಾತು, "ನಾನು ಅಡುಗೆ ಮನೆ ಮತ್ತು ತೋಟದ ಮೂಲಕ ಇಡೀ ವಿಶ್ವವನ್ನು ನೋಡಲಿಕ್ಕೆ ಬಯಸ್ತೇನೆ". ಅಡುಗೆಮನೆಯ ಕಿಟಕಿ ಹಾಗೂ ತೆರೆದುಕೊಳ್ಳುವ ತೋಟ ಇವೆರಡೂ ಈ ಅಭಿವ್ಯಕ್ತಿಗೆ, ವಿಶ್ವಮಾನವತೆಯ ತತ್ವಕ್ಕೆ ಹೊಸ ದನಿಯನ್ನು ಕೊಡುತ್ತಿವೆ ಅಲ್ವಾ. 

ಈಗೊಂದೆರಡು ವರ್ಷಗಳಿಂದ ವೈಯಕ್ತಿಕ ಕಾರಣಗಳಿಗಾಗಿ ನಾನು ಪುಸ್ತಕದ ಹಾರ್ಡ್ ಕಾಪಿ ಕೊಳ್ಳುವುದನ್ನು ಬಿಟ್ಟಿದ್ದೇನೆ. ಹಾಗಾಗಿ ಯಾರಾದರೂ ಪುಸ್ತಕ ಕಳುಹಿಸುತ್ತೇನೆ ಅಂದಾಗ ಏನು ಹೇಳಬೇಕೆಂದು ಗೊತ್ತಾಗದೇ ಒದ್ದಾಡುವುದೂ ಇದೆ. ಜೊತೆಗೆ ಯಾವ ಯಾವ ಪುಸ್ತಕಗಳನ್ನು ಓದಬೇಕು ಅನಿಸುತ್ತದೋ ಆ ಲೇಖಕರ ಬಳಿ ಇ-ಬುಕ್ ಅನ್ನು ಕೂಡಾ ಪ್ರಕಟಿಸಿ ಅಂತ ದುಂಬಾಲು ಬೀಳುವುದಕ್ಕೆ ಶುರು ಮಾಡಿದ್ದೇನೆ. 'ಒಂದು ವಿಳಾಸದ ಹಿಂದೆ' ಈ ಪುಸ್ತಕವನ್ನು ಅವರು ಕಳುಹಿಸಿ ಒಂದು ವರ್ಷದ ಮೇಲಾಯಿತು. ನನ್ನ ಓದು ಸ್ವಲ್ಪ‌ ನಿಧಾನ. ಈ ಪುಸ್ತಕವನ್ನು ಶುರುವಿನಲ್ಲಿ ರಕ್ಷಾಪುಟ, ಅರ್ಪಣೆ, ಮುನ್ನುಡಿ, ಮೊದಲ ಬರೆಹ ಹೀಗೇ ಓದುತ್ತಾ ಹೋದೆ. ಆಮೇಲೆ,‌ ಒಂದು ನಾಲ್ಕು ಬರೆಹಗಳನ್ನು ಓದಿದ ಮೇಲೆ ನನಗೆ ಬೇರೆ ಇನ್ನ್ಯಾವುದನ್ನೋ ಓದುವ ಮನಸ್ಸಾಯಿತು. ಈ ಪುಸ್ತಕ ಚೆನ್ನಾಗಿರಲಿಲ್ಲ ಅನ್ನುವ ಕಾರಣಕ್ಕಾಗಿ ಅಲ್ಲ , ಒಂದೇ ಸಲಕ್ಕೆ ಎರಡು ಮೂರು ಪುಸ್ತಕಗಳನ್ನು ಒಟ್ಟೊಟ್ಟಿಗೆ ಓದುವ ಅಭ್ಯಾಸವಿದೆ ಅಷ್ಟೇ!. ಅದಾದ ಮೇಲೆ ಸ್ವಲ್ಪ‌ ತಿಂಗಳುಗಳ ನಂತರ ಈ ಪುಸ್ತಕವನ್ನು ಮತ್ತೆ ಕೈಗೊತ್ತಿಕೊಂಡೆ, ಹಾಗೂ ಈ ಸಲ ಓದಿದ್ದು ಕೊನೆಯ ಬರೆಹದಿಂದ ಮೊದಲ ಬರಹದ ಕಡೆಗೆ. ಅವರ 'ಮೂಗುತಿ ಮುಂಭಾರ' ಪ್ರಬಂಧವನ್ನು ಓದಿದ‌ ಮೇಲೆ‌ ಪುಸ್ತಕದ ಹಿಂಬದಿಯಲ್ಲೇ ಇರುವ ಅವರ ಫೋಟೋ‌ ನೋಡಿ ಬಂದೆ ಒಮ್ಮೆ! 

ಪುರುಷ ಬರಹಗಾರ ಅದೆಷ್ಟೇ ಪರಕಾಯ ಪ್ರವೇಶ ಮಾಡಿ ತಾನು ಸ್ತ್ರೀಸಂವೇದನೆಗಳ‌ ಕುರಿತಾಗಿ ಬರೆಯುತ್ತೇನೆಂದರೂ, ಬರಹಗಾರ್ತಿಯರು ಅದನ್ನು ಬರೆದಾಗ ಅದಕ್ಕೆ ಸಿಗಬಹುದಾದ ಸಹಜತೆಯೇ ಬೇರೆ. ಅಲ್ಲಿ ತಾನಲ್ಲದ್ದನ್ನು ಆರೋಪಿಸಿಕೊಂಡು ಬರೆಯಬೇಕಾದ ಪ್ರಸಂಗವಿಲ್ಲ. ಬರೀ ಸ್ತ್ರೀಸಂವೇದನೆಗೆ ಮಾತ್ರ ಸೀಮಿತವಾ ಅದರಾಚೆಗೆ ಏನೂ ಇಲ್ವಾ ಅಂತೊಂದು ಪ್ರಶ್ನೆ ಬರಬಹುದು. ಅದು ಹಾಗಲ್ಲ; ಅದರಾಚೆಗೂ ಇರುತ್ತದೆ ಹಾಗೂ ಅದೇ ಎಲ್ಲವೂ ಆಗಿರುವುದಿಲ್ಲ. ಆದರೆ, ಅಲ್ಲೊಂದು ನವಿರಾದ ಸೂಕ್ಷ್ಮವಿರುತ್ತದೆ. ಅದು ಈ ಸಂವೇದನೆಗೆ ಅತ್ಯಂತ ಮುಖ್ಯವಾಗಿ ಬೇಕಾದ ಗುಣಲಕ್ಷಣ ಮತ್ತು ಈ ಸೂಕ್ಷ್ಮ ತೆರೆಯಬಹುದಾದ ಲೋಕ ನಮಗೆ ಅಷ್ಟು ಪರಿಚಿತವಲ್ಲದ್ದು. ಆಸಕ್ತಿ ಇನ್ನಷ್ಟು ಹೆಚ್ಚಾಗುವುದಕ್ಕೆ ಇದಕ್ಕಿಂತ ಬೇರೆ ಕಾರಣಗಳು ಬೇಕಿಲ್ಲ ಅಲ್ವಾ. "ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗುವ ಒಗ್ಗರಣೆಯ ಕರಿಬೇವು, ಬೆಳ್ಳುಳ್ಳಿ, ಮೆಣಸಿನ ಚೂರು ತಟ್ಟೆಕೊನೆಯಲ್ಲಿಯೇ ಉಳಿದುಬಿಡುವಾಗ ಅವುಗಳಿಗಾಗುವ ಬೇಗುದಿ ನಮಗಲ್ಲದೇ ಇನ್ನ್ಯಾರಿಗೆ ಅರ್ಥವಾಗಲು ಸಾಧ್ಯ" - ಅಡುಗೆಕೋಣೆಯಲ್ಲಿರುವ ಹೆಣ್ಣುಮಕ್ಕಳ‌ ಕತೆಯನ್ನು ಒಂದೇ ಸಾಲಲ್ಲಿ ಹೇಳಿದ ಮಾತು ಇದು. ಇಡೀ ಮನೆಯನ್ನು ಸಂಬಾಳಿಸುವ ಹೆಣ್ಣು, ಮನೆಯಲ್ಲಿ ಕೈಗೊಳ್ಳಬೇಕಾದ ನಿರ್ಧಾರದ ವಿಷಯ ಬಂದಾಗ ಎಂದಿಗೂ ನೇಪಥ್ಯದಲ್ಲೇ.. ಇದು ಇಡೀ ಮನೆಗೊಂದು ಘಮವನ್ನೂ, ಅಲ್ಲಿನ ಮನಸ್ಸುಗಳಿಗೆ ಆಹ್ಲಾದವನ್ನೂ‌ ತಂದುಕೊಡುವ ಹೆಣ್ಣಿನ ಸ್ಥಿತಿ. 

ಇಡೀ ಪುಸ್ತಕದ ತುಂಬಾ ಎದ್ದು ಕಾಣುವುದು‌ ಪ್ರಾಮಾಣಿಕತೆ. ತಾನು ಅಷ್ಟು ವರ್ಷಗಳಿಂದ ಬರೆಯುತ್ತಿದ್ದೇನೆ ಅನ್ನುವ ಹಮ್ಮು ಚೂರೂ ಇಲ್ಲ. ಕೆಲವೊಂದು ಕಡೆಗಳಲ್ಲಂತೂ ತನಗೆ ಈ ಹೊಸ ಯುಗದ ಹಲವು ಸಂಗತಿಗಳು ಗೊತ್ತಿಲ್ಲ ಅಂತ ಒಪ್ಪಿಕೊಂಡು ಅದನ್ನು ಸ್ವೀಕರಿಸುವ ಆ ಮನೋಭಾವ ಬಹುಶಃ ಈ ಬರಹಗಳು ಇನ್ನಷ್ಟು ಆಪ್ತವಾಗುವುದಕ್ಕೆ ಮತ್ತಷ್ಟು ಕಾರಣಗಳನ್ನು ಕೊಡುತ್ತದೆ. ಯಾವ ಪ್ರಚಾರವನ್ನು ಬಯಸದೆಯೇ ವರುಷ ವರುಷಗಳವರೆಗೆ ಬರೆಯುವುದು ಸುಲಭವಲ್ಲ. "ರೀಚ್ ತುಂಬಾ ಕಡಿಮೆ ಇದೆ" ಅನ್ನುವ ಈ ಕಾಲದಲ್ಲಿ, ಅದ್ಯಾವುದರ ಚಿಂತೆಯೂ ಇಲ್ಲದೇ ಬರೆಯುವವರನ್ನು ಕಂಡಾಗಲೆಲ್ಲಾ 'ಸಂತೆಯಲ್ಲಿ ನಿಂತ ಸಂತ'ನೇ ಸೂಕ್ತ ಪದ ಅವರ ಕುರಿತಾಗಿ ಹೇಳುವುದಕ್ಕೆ ಅಂತ ಅನಿಸುತ್ತದೆ. ಕಾಲಘಟ್ಟಗಳು ಹಾಗೂ ಅವುಗಳ ಬದಲಾವಣೆಗಳ ಕುರಿತಾಗಿ ಬಹಳಷ್ಟನ್ನು ಬರಹಗಾರ್ತಿ ದಾಖಲಿಸಿದ್ದಾರೆ ಈ ಪುಸ್ತಕದಲ್ಲಿ. ಒಂದೊಂದು ಸಲ ಕಳವಳದಂತೆ, ಇನ್ನು ಕೆಲವು ಸಲ ಈ ನವಯುಗ ಒದಗಿಸಿಕೊಟ್ಟ ಸೌಲಭ್ಯಗಳನ್ನು ಸಂಭ್ರಮಿಸುವಂತೆ. ಇಡೀ ಪುಸ್ತಕದುದ್ದಕ್ಕೂ ಅವರು ಉಲ್ಲೇಖಿಸುವ "ಅತಿ ರಂಜಕ ಕತೆಗಳಾಗಿತ್ತವೆಯೇನೋ ಅನ್ನುವ ಭಯ" ಅನ್ನುವ ವಾಕ್ಯ, ನಮ್ಮೀ ಹೊಸ ಜನಾಂಗ ಕಳೆದುಕೊಂಡ ಆ ಸಹಜ ಬದುಕಿನ ಕುರಿತಾಗಿ ಹೇಳುತ್ತದೆ. ಅಂದರೆ ಆಗ ಹೀಗೆಲ್ಲಾ ಇತ್ತು ಅಂದರೆ, ಅದನ್ನು ಹಾಗೂ ಆ ಸಹಜತೆಯನ್ನು ಅಸಹಜವೆಂಬಂತೆ ನೋಡಬೇಕಾದಲ್ಲಿಗೆ ನಾವು ಬದಲಾಗಿಹೋಗಿದ್ದೇವೆ. ನಾಗರಿಕತೆ ಅಥವಾ ಒಂದೋ ಎರಡೋ ತಲೆಮಾರು ಸಾಗಿಬಂದ ಹಾದಿಯನ್ನು ನಂಬುವುದಕ್ಕೂ ನಮ್ಮಿಂದ ಸಾಧ್ಯವಾಗ್ತಿಲ್ಲ ಅನ್ನುವಷ್ಟರ ಮಟ್ಟಿಗೆ ಇಲ್ಲಿ ಹಲವು ಸಂಗತಿಗಳು ಜರುಗಿಹೋಗಿವೆ ಅನ್ನುವ ಆತಂಕವೂ ಇಲ್ಲಿದೆ. ನಮ್ಮ ಅಮ್ಮನೋ, ಅಕ್ಕನೋ ನಮ್ಮ ಪಕ್ಕವೇ ಕೂತು ಈ ಎಲ್ಲವನ್ನೂ ಹೇಳುತ್ತಿರುವಂಥ ಆತ್ಮೀಯತೆಯೇ ಈ ಪುಸ್ತಕದ ಜೀವಾಳ.

ಕತೆಯಂಥ ನಿಜಸಂಗತಿಯೊಂದು ಕತೆಯಂತೆ ಬಂದುಹೋಗುತ್ತದೆ ಈ ಬರೆಹಗಳಲ್ಲಿ. ಒಂದು ಪ್ರದೇಶದ ಜನಜೀವನ ಹಾಗೂ ಅದರ ದಾಖಲಾತಿ ಅದೆಷ್ಟು ಮುಖ್ಯವೆಂದರೆ ಮನುಷ್ಯರು ಹೀಗೆಲ್ಲಾ ಬದುಕಿದ್ದರಾ ಅಂತ ಮುಂದೊಂದು ದಿನ ನಮ್ಮದೇ ಜನಾಂಗಗಳು ಆಶ್ಚರ್ಯಪಡಬಹುದು. ಈ ಪುಸ್ತಕ‌ ಹಿಡಿದು ಕೂತರೆ ಬಹುತೇಕ ಬಾರಿ ನಾವು ನಮ್ಮ ನಮ್ಮ ಊರುಗಳ ನೆನಪುಗಳೆಡೆಗೆ ಹೊರಳಿಕೊಳ್ಳುತ್ತೇವೆ. ನಮ್ಮ ನಮ್ಮ ಬಾಲ್ಯ, ಹದಿಹರೆಯದ ದಿನಗಳನ್ನು ನೆನೆಯುತ್ತೇವೆ. ಆಗಲೇ ಒಂದು ಜೋರು ಮಳೆ ಬಂದು ನಿಂತು, ಮಬ್ಬು ಮಬ್ಬು ವಾತಾವರಣದಲ್ಲಿ ಯಾವುದೋ ಬೆಚ್ಚಗಿನ ಅನುಭವವೊಂದು ಬಂದು ನಮ್ಮನ್ನು ಆಲಂಗಿಸಿ, ಬದುಕು ಚೆಂದವಿದೆ, ಇನ್ನಷ್ಟು ಸಂಭ್ರಮಿಸು ಅಂದ ಹಾಗೆ ಭಾಸವಾಗುತ್ತದೆ. ಲೇಖಕಿಯೇ ಹೇಳುವ ಹಾಗೆ, "ಕೊಡೆ ಮಳೆಯಲ್ಲಿ ನೆನೆಯುವುದೇ ಅದರ ಬದುಕಿನ ಭಾಗ್ಯ" 

- 'ಶ್ರೀ'
   ತಲಗೇರಿ

ಭಾನುವಾರ, ಜುಲೈ 17, 2022

'ಶಂಕರ ವಿಹಾರ : ಆಧುನಿಕನೊಬ್ಬನ ಅದ್ವೈತ ಯಾತ್ರೆ'


 'ಶಂಕರ ವಿಹಾರ : ಆಧುನಿಕನೊಬ್ಬನ ಅದ್ವೈತ ಯಾತ್ರೆ' 


ಇದೆಂಥದು? ಈ ಥರದ್ದೊಂದು ಪುಸ್ತಕದ ಕುರಿತಾಗಿ ಇವ ಯಾಕಾದ್ರೂ ಹೇಳ್ಬೇಕು ಅಂತ ಹಲವರಿಗೆ ಅನ್ನಿಸಬಹುದು,‌ ಕೆಲವರಿಗೆ ಇಷ್ಟವಾಗದೇ ಹೋಗಬಹುದು, ಇನ್ನು ಕೆಲವರಿಗೆ 'ಇವರೆಲ್ಲಾ ಇಷ್ಟೇ' ಅಂತಲೂ ಅಥವಾ ಇನ್ನೂ ಏನೇನೋ ಅನ್ನಿಸಬಹುದು. ಆದರೂ, ಬಹಳಷ್ಟು ದಿನಗಳ ನಂತರ ಒಂದು ಗಹನವಾದ ಹಾಗೂ ಗಾಢವಾದ ಕ್ಷಣಗಳನ್ನು ಒಂದು ಪುಸ್ತಕ ಓದುವುದರಿಂದ ಅನುಭವಿಸಿದ್ದಕ್ಕಾದರೂ ಈ ಪುಸ್ತಕದ ಬಗ್ಗೆ ಬರೆಯಲೇಬೇಕು. ನಿಜ ಹೇಳಬೇಕೆಂದರೆ, ಈ ಪುಸ್ತಕದ ಅಡಿಬರಹವನ್ನು ತಪ್ಪಾಗಿ ಅರ್ಥೈಸಿಕೊಂಡಲ್ಲಿಂದ ಈ ಪುಸ್ತಕದೊಂದಿಗಿನ ಪ್ರಯಾಣ ಶುರುವಾಗಿದ್ದು. ಆಮೇಲೆ ಪುಸ್ತಕ ಶುರುಮಾಡಿದ‌ ಮೇಲೆ ತಿಳಿಯಿತು ನಾನಂದುಕೊಂಡಿದ್ದು ಬೇರೆ ಅಂತ. ಆದರೆ, ಪುಸ್ತಕದ ಮೊದಲ‌ ಅಧ್ಯಾಯದಲ್ಲೇ ಒಂದು ವಿನಮ್ರ ವಿಜ್ಞಾಪನೆಯಿದೆ. ಆ ವಿಜ್ಞಾಪನೆಯೇ ಈ ಪುಸ್ತಕಕ್ಕೆ ಒಂದು ಗಟ್ಟಿ ದನಿಯನ್ನು ಕೊಟ್ಟಿದೆ. ಕೆಲವೊಮ್ಮೆ ನಾವು ಏನನ್ನು ಓದಲು ಬಯಸುತ್ತೇವೆಯೋ ಅದನ್ನು ಯಾರೂ ಬರೆಯದಿದ್ದಾಗ ನಾವೇ ಬರೆಯಲು ಮುಂದಾಗಬೇಕಾಗುತ್ತದೆ. ಇದು ಅಂಥದ್ದೇ ಪ್ರಯತ್ನ ಅಂತ ಲೇಖಕರು ಹೇಳಿದ್ದಾರೆ. ನನಗೆ ಈ ಸಂದರ್ಭದಲ್ಲಿ ಚಿತ್ರನಟ, ನಿರ್ದೇಶಕ‌ ರಕ್ಷಿತ್ ಶೆಟ್ಟಿಯವರು ಒಂದು ಸಂದರ್ಶನದಲ್ಲಿ ಹೇಳಿದ ಒಂದು ಮಾತು ಕೂಡಾ ನೆನಪಿಗೆ ಬಂತು; "ನನ್ ಸಿನೆಮಾ ಯಾರೂ ಮಾಡೋದಿಲ್ಲ, ನಾನೇ ಮಾಡ್ಕೋಬೇಕು"! ನಾನು ಯಾವ ಥರದ ಕತೆಯನ್ನು, ಸಂಗತಿಯನ್ನು ಕೇಳಲು ಬಯಸುತ್ತೇನೋ ಆ ಥರದ್ದನ್ನು ಯಾರೂ ಹೇಳದಿದ್ದಾಗ, ನಾನೇ ಆ ಪ್ರಾರಂಭಕ್ಕೆ ಒಂದು ಆರಂಭ ಕೊಡಬೇಕು. ಇದು ಕೇವಲ ಯಾವುದೋ ಒಂದು ಸಿದ್ಧಾಂತದ ಪ್ರಚಾರಕ್ಕಾಗಿಯೋ, ಇದೊಂದೇ ಶ್ರೇಷ್ಠ ಅನ್ನುವುದನ್ನು ಸಾರುವುದಕ್ಕಾಗಿಯೋ ಬರೆದ ಪುಸ್ತಕವಿರಬಹುದು ಅಂತ ಅಂದುಕೊಂಡಲ್ಲಿ ಅದು ತೀರಾ ಬಾಲಿಶವಾದೀತು. ಭಾರತದ ಹಲವು ದರ್ಶನಗಳನ್ನು ಒಟ್ಟಿಗೆ ಇಟ್ಟು, ಅವುಗಳನ್ನು ಸರಳವಾಗಿ ನೋಡುವ ಹಾಗೂ ಅವುಗಳ ಸಾಮ್ಯತೆಗಳನ್ನು ಗುರುತಿಸುವುದರ ಜೊತೆಗೆ ಅದ್ವೈತ ಎಷ್ಟರ ಮಟ್ಟಿಗೆ ಹೆಚ್ಚು ಪ್ರಸ್ತುತವಾಗಬಲ್ಲದು ಅನ್ನುವುದನ್ನೂ ಹೇಳುವ ಸಂಕಲ್ಪದ ಭಾಗವೇ ಶ್ರೀ ಅಕ್ಷರ ಕೆ ವಿ ಅವರ 'ಶಂಕರ ವಿಹಾರ : ಆಧುನಿಕನೊಬ್ಬನ ಅದ್ವೈತ ಯಾತ್ರೆ' 


ನಾವು ಅದೆಷ್ಟೇ ಜಾಗಗಳಿಗೆ ಹೋಗಲಿ, ಅದೆಷ್ಟೇ ದೇಶಗಳನ್ನು ಸುತ್ತಲಿ, ಕೊನೆಗೆ ಎಲ್ಲವನ್ನೂ ಸಮೀಕರಿಸಿಕೊಳ್ಳುವುದು ನಮ್ಮೂರಿನ ಯಾವುದೋ ಒಂದು ಜಾಗಕ್ಕೆ; ಇದು ಅದರ ಹಾಗಿಲ್ಲ, ಅದಕ್ಕಿಂತ‌ ಚೂರು‌‌ ಜಾಸ್ತಿ ಅಥವಾ ಕಡಿಮೆ ಅಂತಲೋ, ಎಷ್ಟೇ ವ್ಯಕ್ತಿಗಳನ್ನು ಭೇಟಿ ಮಾಡಲಿ; ಇವ ಅವರ ಥರವೇ ಅಲ್ವಾ ಅಂತಲೋ, ಇನ್ನೂ ಏನೇನೋ ಹೀಗೆ. ಅಂದರೆ, 'ಮನುಷ್ಯ ಎಲ್ಲಿ ಹೋದರೂ ತನ್ನ ಪರಿಚಿತ ನೆನಪುಗಳೊಂದಿಗೆ ಮಾತ್ರವೇ ಎಲ್ಲವನ್ನೂ ನೋಡುತ್ತ ಹೋಗುತ್ತಾನೆ'. ಸ್ವತಂತ್ರವಾದಂಥ ಚಿತ್ರಣವೊಂದು ತಾನಾಗೇ ಮೂಡುವುದಕ್ಕೆ ಬಹುತೇಕವಾಗಿ ಕಷ್ಟಸಾಧ್ಯವೇ ಆಗಿರಬಹುದು.


ಇನ್ನು, ಬಹುತೇಕರು ಆಧುನಿಕತೆಯೆಂದರೆ ಸಂಪ್ರದಾಯಕ್ಕೆ ವಿರುದ್ಧ ಅಂತಲೇ ಅಥವಾ ಸಂಪ್ರದಾಯದ ವಿರುದ್ಧವಾಗಿದ್ದರೆ ಮಾತ್ರ ತಾವು ಆಧುನಿಕರು ಅಂತ ಭಾವಿಸಿದ್ದಾರೆ. ಆಧುನಿಕತೆಯೆಂದರೆ ನಂಬಿಕೆಗಳ ನವೀಕರಣ; ಅದು ಸಂಪ್ರದಾಯದಿಂದ ವಿಮುಖವಾಗಬೇಕಿಲ್ಲ. ಒಂದು ಸಂಕುಚಿತ ಅರ್ಥದಲ್ಲಿ ನೋಡಿದರೆ ಬಹುಶಃ ಎರಡೂ ಪರಸ್ಪರ ತಾಳೆಯಾಗದ ಪದಗಳಾಗಿ ಕಂಡರೆ ಅದು ಅವರವರ ಮಿತಿ ಅಷ್ಟೇ. ಯಾಕೆಂದರೆ ಸತ್ಯಕ್ಕೆ ಕೇವಲ ಎರಡು ಮುಖಗಳೇ ಇರಬೇಕು ಅಂತೇನೂ ಇಲ್ಲವಲ್ಲ ! ಈ ಎರಡು ಮುಖಗಳ  ನಂಬಿಕೆಯಾಚೆಗಿನ ಇನ್ನೊಂದು ಸಾಧ್ಯತೆಯೂ ಇರಬಹುದು. ಅಂಥ ಒಂದು ಸಾಧ್ಯತೆಯನ್ನು ಪರಿಕಲ್ಪನೆಯಲ್ಲಿಯೂ ಸಹ ನಿರೀಕ್ಷಿಸಿರದೇ ಇದ್ದವರಿಗೆ ಮಾತ್ರ ಅದು ಕೇವಲ ಎರಡು ರೂಪಗಳಿಗೆ ಸೀಮಿತ. ಜೊತೆಗೆ, ನಮ್ಮಲ್ಲೊಂದು ಪರಿಪಾಠವಿದೆ. ಆಧುನಿಕವೆಂಬಂತೆ ತೋರಿಸಿಕೊಳ್ಳಬೇಕೆಂದರೆ ಸಂಪ್ರದಾಯವನ್ನು ಹೀಯಾಳಿಸಬೇಕು. ಅದನ್ನು ಕಂಡಕಂಡ ಪದಗಳಲ್ಲಿ ಲೇವಡಿ ಮಾಡಬೇಕು. ಸಂಪ್ರದಾಯವಾದಿಗಳೆಂದವರನ್ನು‌ 'ಹೋ' ಎಂಬ ಕಿರುಚಾಟದ ನಡುವೆ ಅವಮಾನಿಸಬೇಕು. ವೈಚಾರಿಕತೆಯ ಗಂಧವೂ ಇರದ ಇಂಥ ಮನಸುಗಳು ಹೆಚ್ಚಾಗುತ್ತಿರುವುದು ಹಾಗೂ ಅದನ್ನು ಪೋಷಿಸುತ್ತಿರುವುದು‌ ಈ ಕಾಲದ ದುರಂತಗಳಲ್ಲಿ ಒಂದು. 


ಇತ್ತೀಚೆಗೆ ವಿಶ್ವವಿದ್ಯಾಲಯಗಳನ್ನು ದೊಡ್ಡ ದೊಡ್ಡ ಕಂಪೌಂಡುಗಳು ಸುತ್ತುವರೆದಿರುತ್ತಾವಲ್ಲಾ, ಅದನ್ನಿಲ್ಲಿ ಒಂದು ಆಳವಾದ ವ್ಯಂಗ್ಯದೊಂದಿಗೆ ಹೇಳಲಾಗಿದೆ. ವಿಶ್ವವಿದ್ಯಾಲಯಗಳು ಹಾಕುವ ಎತ್ತರದ ಬೇಲಿಗಳು ಕೇವಲ ಭೌತಿಕ ಬೇಲಿಯಲ್ಲ, ಅದು ಅಲ್ಲಿ ಬೋಧಿಸುವ ಸಂಗತಿಗಳ ಕುರಿತಾಗಿಯೂ ಇರುವ ಬೇಲಿ. ಅದೆಷ್ಟು ವಿಶ್ವವಿದ್ಯಾಲಯಗಳು ಕೇವಲ ತಮ್ಮದೇ ರಾಜಕೀಯ ಸಿದ್ಧಾಂತಗಳ‌ ಬೇಲಿ ಹಾಕಿಕೊಂಡು ಕುಳಿತಿಲ್ಲ ಹೇಳಿ! ವಿಶ್ವದ ಎಲ್ಲ ಕಡೆಯಿಂದಲೂ ಜ್ಞಾನದ ಬೆಳಕು ಹರಿದುಬರಲಿ ಅನ್ನುವುದು ಭಾರತೀಯತೆಯ ಪ್ರಾರ್ಥನೆ. ಆದರೆ, ಈಗ ಕೇವಲ ಕೆಲವರು ಆರಿಸಿಕೊಟ್ಟ ಆ‌ ಕೆಲವು ವಿಷಯಗಳ ಕುರಿತಾಗಿ ಮಾತನಾಡಿದರಷ್ಟೇ ನಮ್ಮನ್ನು ವೈಚಾರಿಕ ವ್ಯಕ್ತಿಯೆಂದು ಗುರುತಿಸಲಾಗುತ್ತದೆ; ಇಲ್ಲದಿದ್ದಲ್ಲಿ ಗೊಡ್ಡು ಸಂಪ್ರದಾಯವಾದಿ! 


ವೇದವಾಕ್ಯಗಳು ಎಂದಿಗೂ ಯಾವ ಕೆಲಸವನ್ನೂ ಮಾಡಿ ಯಾ ಮಾಡಬೇಡಿರೆಂದು ವಿಧಿಸುವುದಿಲ್ಲ. ಅವು ಕೇವಲ‌ ಅಭಿವ್ಯಕ್ತಿಯಾಗಿ ಮಾತ್ರವೇ ಇವೆ. ಅಂದರೆ, ಒಂದು ಕೆಲಸವನ್ನು ಹೀಗೆ ಮಾಡಿದರೆ‌ ಹೀಗಾಗಬಹುದು ಅನ್ನುವ ದಾರಿಯ ಪರಿಕಲ್ಪನೆಯನ್ನು ಸೂಚಿಸುತ್ತವೆಯೇ ಹೊರತೂ ಅಲ್ಲಿ ವಿಧಿಸುವಿಕೆ ಇಲ್ಲ. ಇದು ಮಾತ್ರವೇ ನಿನಗಿರುವ ದಾರಿ ಅನ್ನುವ ಕಟ್ಟಪ್ಪಣೆ ಇಲ್ಲ. ಭಾರತ ಯಾವತ್ತಿಗೂ ಅನ್ವೇಷಕರ ಭೂಮಿ ( land of seekers ). ಇದು ಹೀಗೆಯೇ ಅಂತಂದು ಷರಾ ಬರೆದ ಮರುಕ್ಷಣವೇ ಅನ್ವೇಷಣೆಗೆ ಅವಕಾಶವಾದರೂ ಎಲ್ಲಿ? ಭಾರತದಲ್ಲಿ ಇದ್ದಿದ್ದು ಇದು ಹೀಗೆ; ಬೇಕಾದರೆ ಹುಡುಕಿಕೋ ಅನ್ನುವ ಸಂಜ್ಞೆ. ಜೊತೆಗೆ ಹುಡುಕದೇ‌ ಯಾವುದರ ಸಾಕ್ಷಾತ್ಕಾರವೂ ಆಗುವುದಿಲ್ಲ. ಕಾರಣ, ಪ್ರತೀ ವ್ಯಕ್ತಿಯ ಅನುಭವವೂ ಭಿನ್ನ. ಹಾಗೆಯೇ, ಪ್ರತಿ ವ್ಯಕ್ತಿಯ ಅಂತರಂಗವೂ ಭಿನ್ನ. ಅದೇ ಅಧ್ಯಾತ್ಮ; ಆತ್ಮದ ಕುರಿತಾಗಿದ್ದು! ಅಪಾರದರ್ಶಕ ವಸ್ತುವಿನ ಮೇಲೆ ಬೆಳಕು ಬಿದ್ದಾಗ, ಬೆಳಕು ಬೀಳುತ್ತಿರುವ ಕೋನದಿಂದ ನೋಡಿದವನಿಗೆ ಅಪಾರದರ್ಶಕದ ನೆರಳು ಗೋಚರಿಸದೇ‌ ಹೋಗಬಹುದು. ಆಗ, ನೆರಳೇ ಇಲ್ಲ ಅಂತ ವಾದಿಸುವುದು ಮತ್ತು ನಂಬುವುದು ಪೂರ್ಣ ದರ್ಶನದ ಭಾಗವಲ್ಲ. ಅದಕ್ಕಾಗಿಯೇ ಭಾರತದಲ್ಲಿ ಕೇವಲ ಯಾವುದೋ ಒಂದು ದರ್ಶನವಿರಲಿಲ್ಲ. ಎಲ್ಲ ದರ್ಶನಗಳ ಒಟ್ಟೂ ಸತ್ಯ‌ ಮತ್ತೆ ಸತ್ಯದ‌ ಮೂಲ ರೂಪಕ್ಕೇ ಹೋಗಿ ನಿಲ್ಲುತ್ತದೆ. ಯಾವಾಗಲೂ ಒಂದು ಮಾತಿದೆ; ಮೀನು ಹಿಡಿಯುವುದನ್ನು ಕಲಿಸು ಆದರೆ ನೀನೇ ಮೀನು ಹಿಡಿದುಕೊಡಬೇಡ ಅಂತ. ಹೀಗೂ ಇರಬಹುದು ಅನ್ನುವ ಹಲವು ದಾರಿಗಳನ್ನು ತೆರೆದಿಡು, ಆದರೆ ಯಾವ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಅನ್ನುವ ನಿರ್ಧಾರವನ್ನು ಆ ವ್ಯಕ್ತಿಗೆ ಬಿಡು, ಇದನ್ನೇ ವೇದವಾಗಲೀ ಭಗವದ್ಗೀತೆಯಾಗಲೀ ಮಾಡುವುದು - ಯಥೇಚ್ಛಸಿ ತಥಾ ಕುರು. 


ಇನ್ನೊಂದು ಮಜದ ಸಂಗತಿಯೆಂದರೆ, ನಮ್ಮಲ್ಲಿ ಹಲವರು ಮೂಲಗ್ರಂಥಗಳನ್ನು ಓದದೆಯೇ ಅಲ್ಲ್ಯಾರೋ ಇನ್ನು ಹೇಗೋ ಅಸಂಬದ್ಧವಾಗಿ ಅರ್ಥೈಸಿಕೊಂಡಿರುವುದನ್ನು ಬರೆದಿದ್ದನ್ನೇ ಓದಿ ಇನ್ನೇನೋ ಅರ್ಥೈಸಿಕೊಳ್ಳುತ್ತೇವೆ. ಆ ಗ್ರಂಥದಲ್ಲಿ ಆ ಸಾಲಿನ ಮೂಲ ಉದ್ದೇಶ ಇನ್ನೇನೋ ಆಗಿರಬಹುದು. ಒಂದು ಸಂಗತಿಯ ಹಿಂದೆ ಮುಂದೆ ಬೇರೆ ಏನಾದರೂ ಇದ್ದರೆ, ಆ ಇಡೀ ಸಂಗತಿ ಅರ್ಥವಾಗುವ ರೀತಿಯೇ ಬೇರೆ!‌ ಕೇವಲ ಒಂದು ಸಾಲನ್ನು ಮಾತ್ರವೇ ತೆಗೆದುಕೊಂಡು ಅದರ ಅರ್ಥವನ್ನು ವಿಶ್ಲೇಷಿಸಿ ಮಹಾನ್ ವೈಚಾರಿಕರೆನಿಸಿಕೊಳ್ಳುವ ಹಂಬಲದಲ್ಲಿರುತ್ತೇವೆ. ಉದಾಹರಣೆಗೆ, 'ಅವನು ಊಟ ಮಾಡಿದನು' ಇದೊಂದು ಸರಳವಾದ ವಾಕ್ಯ ಸ್ವತಂತ್ರವಾಗಿ;ಅರ್ಥವೂ ಅಷ್ಟೇ ಸರಳ. ಆ ವಾಕ್ಯದ ಹಿಂದೆ ಈಗ ಈ ವಾಕ್ಯವನ್ನು ಸೇರಿಸುವ; "ಯಾರ ಹತ್ತಿರವೋ ಬೇಡಿ ಅವರು ಊಟ ಪಡೆದಿದ್ದರು, ಅವರ ಕೈಯಿಂದ ಅದನ್ನು ಕಸಿದುಕೊಂಡು ಅವನು ಊಟ ಮಾಡಿದನು". ಇನ್ನೂ ಒಂದು ವಾಕ್ಯ " ನಡುಗುವ ಕೈಗಳ ಅಮ್ಮನ ಕೈಯಿಂದ ಅವನು ಊಟ ಮಾಡಿದನು". ಅವನು ಊಟ ಮಾಡಿದ್ದು ಸತ್ಯವೇ ಆದರೂ, ವಾಕ್ಯದ ನಿಜ ಅರ್ಥ ಹಾಗೂ ಧ್ವನಿ ಮೂರೂ ಸಂಗತಿಗಳಲ್ಲಿ ಬೇರೆಬೇರೆಯೇ ಅಲ್ವಾ! ಈಗ ನಮ್ಮ ವೇದ, ಉಪನಿಷತ್ತು, ಪುರಾಣ,‌ ಮಹಾಕಾವ್ಯದ ವಿಷಯಗಳಲ್ಲಿ ಆಗುತ್ತಿರುವುದು ಇದೇ. 


ಹೇಗೆ ತತ್ವಗಳಿಗೆ ದೇವರ ರೂಪ ಕೊಡಲಾಗುತ್ತದೋ ಹಾಗೆಯೇ, ಅವತಾರಗಳ ಮೂಲಕ ದೇವರಿಗೆ ಮನುಷ್ಯ ರೂಪ ಕೊಡಲಾಗುತ್ತದೆ. ಈ ಸಂಗತಿ ಅದೆಷ್ಟು ಆಪ್ತವೆಂದರೆ, ದೇವರು ಅಂದ ಮಾತ್ರಕ್ಕೆ ಮನುಷ್ಯ ನಿಯಮಗಳನ್ನು ಮೀರುವ ಹಾಗಿಲ್ಲ. ಮನುಷ್ಯ ದೇಹವನ್ನು ಪ್ರವೇಶಿಸಿದ ಮೇಲೆ ಮನುಷ್ಯ ಅನುಭವಿಸಬೇಕಾದ ಎಲ್ಲ‌ ಕ್ಲೇಶಗಳನ್ನು ದೇವರೆಂಬ ದೇವರೂ ಅನುಭವಿಸಬೇಕು! ಯುದ್ಧ ಮುಗಿದ ಮೇಲೆ‌ ರಾಮ ಹೇಳುತ್ತಾನಲ್ಲಾ; "ಆತ್ಮಾನಂ ಮಾನುಷಂ ಮನ್ಯೇ ರಾಮಂ ದಶರಥಾತ್ಮಜಂ". ಇವೆಲ್ಲವೂ ಒಂಥರಾ ಫ್ಯಾನ್ಸಿ ಅಥವಾ ಅತಿರೇಕದ ಹೇಳಿಕೆಗಳಂತೆ ಭಾಸವಾಗಬಹುದು. ಆದರೆ, ನಾನೂ ನೀನೂ ಬೇರೆಯಲ್ಲ ಅನ್ನುವುದನ್ನು ಇದಕ್ಕಿಂತ ಇನ್ನೊಂದು ದೃಷ್ಟಾಂತದ‌ ಮೂಲಕ ಹೇಳುವುದಕ್ಕೆ ಸಾಧ್ಯವಾ! 


~'ಶ್ರೀ' 

   ತಲಗೇರಿ

ಭಾನುವಾರ, ಜೂನ್ 5, 2022

ಹಿಮಶ್ರೇಣಿಗಳ ಮಡಿಲಲ್ಲಿ ಬದುಕಿನ ಹಾಡು


ಹೋರಾಟ ಎನ್ನುವುದು ಯಾವತ್ತಿಗೂ ರೋಚಕವಾದದ್ದು ಅದರಾಚೆ ನಿಂತು ನೋಡುವವರಿಗೆ. ಆದರೆ, ಆ ಹೋರಾಟದ ಭಾಗವಾಗಿರುವವರಿಗೆ ಅದು 'ಉಸಿರು ನಿಲ್ಲುವ ಅಥವಾ 'ನಿಟ್ಟುಸಿರು ಬಿಡುವ' ಈ ಎರಡರಲ್ಲಿ ಯಾವುದಾದರೂ ಒಂದು ಆಗಿಹೋಗುವ ಭಯಾನಕ ಅವಧಿ. ಹೋರಾಟವೆಂದರೆ ಹೊಡೆದಾಟ, ಯುದ್ಧ, ಚಳುವಳಿ ಇತ್ಯಾದಿಗಳೇ ಆಗಬೇಕಿಲ್ಲ. ಮನುಷ್ಯ ಸಂಕುಲದಲ್ಲಷ್ಟೇ ಅಲ್ಲ, ಎಲ್ಲ ಜೀವಕೋಟಿಗಳಲ್ಲೂ ಇರುವ ಒಂದು ಸಾಮ್ಯತೆ ಇದು. ಕೋಟ್ಯಂತರ ವೀರ್ಯಾಣುಗಳಲ್ಲಿ ಒಂದು ವೀರ್ಯಾಣು ಮುನ್ನುಗ್ಗುವಿಕೆಯಿಂದ ಶುರುವಾಗಿ, ಪ್ರತಿ ನಿತ್ಯ ಪ್ರತಿ ಕ್ಷಣ ಉಸಿರನ್ನು ಒಳಗೆಳೆದುಕೊಂಡು ಹೊರಬಿಡುವುದರಿಂದ ಹಿಡಿದು, ಶಿಶುವಾಗಿದ್ದಾಗ ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ, ಗೋಡೆ ಹಿಡಿದು ನಿಲ್ಲುವ ಪ್ರಯತ್ನಗಳಾದಿಯಾಗಿ ಮರಣಕ್ಕೂ ಮುನ್ನ ಯಾರನ್ನೋ ನೋಡುವ ಸಲುವಾಗಿ ಯಾರದೋ ಸ್ಪರ್ಶ, ಧ್ವನಿ ತರಂಗಗಳ ಅನುಭವದ ಸಲುವಾಗಿ ಅರೆ ಪ್ರಜ್ಞಾ ಸ್ಥಿತಿಯಲ್ಲಿ ಕಾಯುವವರೆಗೆ ಇಡೀ ಒಂದು ಪ್ರಯಾಣ ಅಷ್ಟು ಸರಳವೂ ಅಲ್ಲ, ಸಾಮಾನ್ಯವೂ ಅಲ್ಲ. ಪ್ರಾಣಿ ಜಗತ್ತಿನಲ್ಲಿಯೂ ಅಷ್ಟೇ; ಆ ಕ್ಷಣಕ್ಕೆ ಸಿಕ್ಕ ಆಹಾರವನ್ನು ಉಳಿಸಿಕೊಳ್ಳುವ, ಸಂಗಾತಿಯನ್ನು ಆಕರ್ಷಿಸುವ, ತನ್ನ ಅಧಿಪತ್ಯವನ್ನು ಉಳಿಸಿಕೊಳ್ಳುವ, ಪ್ರಕೃತಿಯಲ್ಲಾಗುವ ಸಹಜ, ಅಸಹಜ ಬದಲಾವಣೆಗೆ ನಿರಂತರವಾಗಿ ಗ್ರಾಹಿಯಾಗಿರುವ ಸಂಗತಿ ಸಣ್ಣದಲ್ಲ. ಆದರೆ, ಎಲ್ಲವೂ ಮುಖ್ಯವಾಹಿನಿಯಲ್ಲಿ ಚರ್ಚಿಸಲ್ಪಡುವುದಿಲ್ಲ. ಅವೆಲ್ಲವೂ ಈ ಲೋಕದ ಪಾಡು ಎನ್ನುವ ಹಾಗೆ ಸಹಜವಾಗಿ ನಡೆದುಹೋಗುತ್ತವೆ ಮತ್ತು ಅವು ಯಾರನ್ನೂ ತಮ್ಮತ್ತ ಸೆಳೆಯುವಂಥವುಗಳಲ್ಲ. ನಮಗೆಲ್ಲಾ ಒಮ್ಮೊಮ್ಮೆ ಜಡತೆ ಆವರಿಸುತ್ತದೆ. ಎಲ್ಲವುಗಳಲ್ಲಿಯೂ ನಿರಾಸಕ್ತಿ ಅಥವಾ ಯಾವುದೋ ಒಂದನ್ನು ಮಾಡಿಮುಗಿಸಬಹುದಾದ ಇಚ್ಛಾಶಕ್ತಿಯ ಕೊರತೆ ಕಾಡತೊಡಗುತ್ತದೆ. ಆಗ ಹೊಸತೇನನ್ನೋ ಹುಡುಕಿ ಹೊರಡುತ್ತೇವೆ, ಮತ್ತೆ ಬದುಕನ್ನು ನವೀಕರಿಸಿಕೊಳ್ಳುವ ಉತ್ತೇಜನಕ್ಕಾಗಿ ಹಂಬಲಿಸುತ್ತೇವೆ. ಹಲವಾರು ಬಾರಿ ಯಾವ್ಯಾವುದೋ ಕೃತಕ ವ್ಯಕ್ತಿತ್ವ ವಿಕಸನ ಭಾಷಣ, ಬರಹ, ಸಿನಿಮಾ ಇತ್ಯಾದಿಗಳ ಮೊರೆಹೋಗುತ್ತೇವೆ. ಕೆಲವೊಮ್ಮೆ ಅವು ಧನಾತ್ಮಕವಾಗಿಯೂ ಕೆಲಸ ಮಾಡಬಲ್ಲವು. ಆದರೆ, ಅವೆಲ್ಲವೂ ಬೇರೂರಿ ಕೊನೆಗೆ ಫಲ ಕೊಡಬೇಕಾಗಿರುವುದು ನಮ್ಮಲ್ಲಿಯೇ, ಆ ಆಳಕ್ಕಿಳಿಯುವ ಕಾರ್ಯ ಆಗದೇ ಇದ್ದಲ್ಲಿ ಎಲ್ಲವೂ ತಾತ್ಕಾಲಿಕ. ಇದು ಒಂದು ಕಡೆಯಾದಲ್ಲಿ, ಕೆಲವರ ಬದುಕೇ ಈ ಎಲ್ಲಾ ವ್ಯಕ್ತಿತ್ವ ವಿಕಸನ ತರಗತಿಗಳ ವಿಶ್ವವಿದ್ಯಾಲಯದಂತಿರುತ್ತದೆ. ಅದರಲ್ಲಿ ಪ್ರತ್ಯೇಕವಾಗಿ ಹೇರಿಕೊಂಡ ಸಂಗತಿಗಳಿರುವುದಿಲ್ಲ, ಯಾವುದೋ ಒಂದು ಸಮಯ, ಘಟನೆ, ವಿಷಯ ಅವರನ್ನು ಸಾಮಾನ್ಯ ಬದುಕಿನಿಂದ ಭಿನ್ನವಾದ ಮತ್ತು ಎತ್ತರದ ನೆಲೆಗೆ ಕೊಂಡೊಯ್ಯುತ್ತದೆ. ಆಗ ಆ ಇಡೀ ಬದುಕೇ ಸಹಜವಾದ ಸ್ಫೂರ್ತಿಯ ಆಕರವಾಗುತ್ತದೆ. ಅಂಥದ್ದೇ ಒಂದು ಮೈನವಿರೇಳಿಸುವ, ಕ್ಷಣಕ್ಷಣಕ್ಕೂ ಕೈ ಜಾರುತ್ತಿರುವ ಬದುಕನ್ನು ಮತ್ತೆ ಮತ್ತೆ ಗಟ್ಟಿಯಾಗಿ ಅಪ್ಪಿಕೊಳ್ಳುವ, ನಕ್ಷೆಯಲ್ಲಿ ಎಲ್ಲಿದ್ದೇವೆ ಎಂದು ಗೊತ್ತೂ ಆಗದ ಜಾಗದಿಂದ ಮತ್ತೆ ಹೊರಜಗತ್ತಿನೊಂದಿಗೆ ಬೆರೆಯುವ ದಾರಿಯನ್ನು ಹುಡುಕುವ, ಎಲ್ಲವೂ ಮುಗಿಯಿತು ಅನ್ನುವಾಗಲೇ ಮತ್ತೆ ಹೊಸತಾಗಿ ಶುರುವಾಗುವ, ನಂಬಿಕೆಗಳ ಜೊತೆ ನಿರಂತರವಾಗಿ ಸಂಘರ್ಷವೇರ್ಪಟ್ಟು ಸಮಯದ ಜೊತೆ ರಾಜಿಯಾಗದೇ ನಿಂತು, ಪ್ರಕೃತಿಯ ಅಗಾಧತೆಯನ್ನು ಪೂಜಿಸುತ್ತಾ ಪ್ರಕೃತಿಯೊಂದಿಗೇ ಹೋರಾಡಿ ಗೆಲ್ಲುವ, ಆಂಡೀಸ್ ಪರ್ವತ ಶ್ರೇಣಿಯ ಮಡಿಲಲ್ಲಿ ನಡೆದ ಮನುಕುಲದ ದಾರುಣ ಸ್ಥಿತಿಯಲ್ಲೂ ಜೀವನಪ್ರೀತಿಯನ್ನು ಸ್ಫುರಿಸುವ ಕಥಾನಕವೇ ಸಂಯುಕ್ತಾ ಪುಲಿಗಲ್ ( Samyuktha Puligal ) ಅವರು ಅನುವಾದಿಸಿದ ಪರ್ವತದಲ್ಲಿ ಪವಾಡ. 


ನ್ಯಾಂಡೋ ಪರಾಡೊ ಬರೆದ, ಜೊತೆಗೆ ಜೀವಿಸಿದ ೭೨ ದಿನಗಳ ಅನುಭವ ಕಥನ ಮಿರಾಕಲ್ ಇನ್ ದಿ ಆಂಡೀಸ್ ( Miracle in the andes ) ಕೃತಿಯ ಕನ್ನಡ ಅನುವಾದ ಇದು. ಮಾನವೀಯ ತುಡಿತಗಳು ಮತ್ತು ಸಂಬಂಧಗಳ ಆರ್ದ್ರತೆಯನ್ನು ಕೊರೋನಾ ಸಮಯದಲ್ಲಿ ಬಹಳಷ್ಟನ್ನು ನೋಡಿದ್ದೇವೆ. ಅದೆಂಥದ್ದೇ ಗಟ್ಟಿಮನಸ್ಸಿನವರಾದರೂ ಒಮ್ಮೆ ಭಾವುಕರಾಗಬಹುದಾದ ಹಲವು ಸಂಗತಿಗಳನ್ನು ಕೇಳಿದ್ದೇವೆ, ಕಂಡಿದ್ದೇವೆ; ಅಲ್ಲ್ಯಾರೋ ವಯಸ್ಸಾದವರು ತನಗಾಗಿ ಮೀಸಲಾದ ಆಸ್ಪತ್ರೆಯ ಹಾಸಿಗೆಯನ್ನು ಇನ್ನ್ಯಾರೋ ಯುವಕನಿಗೆ ಬಿಟ್ಟುಕೊಟ್ಟು ತಾವು ಮೃತರಾದರಂತೆ, ಕೊರೋನಾ ರೋಗಿಗಳ ಸೇವೆ ಮಾಡುತ್ತಲೇ ವೈದ್ಯರು ತಮ್ಮ ಕುಟುಂಬದಿಂದ ದೂರಾದರಂತೆ, ಯಾರೋ ಒಂದಷ್ಟು ಜನ ಬೀದಿನಾಯಿಗಳಿಗೆ ಆಹಾರ ಒದಗಿಸುತ್ತಿದ್ದರಂತೆ, ನಿತ್ಯದ ಮುಗಿಯದ ಕೆಲಸಗಳ ಮಧ್ಯವೂ ಆಸ್ಪತ್ರೆಯ ಹಾಸಿಗೆ, ಔಷಧ, ಆಮ್ಲಜನಕ ಇತ್ಯಾದಿಗಳನ್ನು ಅಗತ್ಯ ಇರುವವರಿಗೆ ತಲುಪಿಸಲು ನಿದ್ದೆಗೆಟ್ಟು, ಊಟ ತಿಂಡಿಗಳನ್ನು ಬಿಟ್ಟು ಪ್ರಯತ್ನಿಸಿದರಂತೆ, ಯಾರೋ ಇನ್ನ್ಯಾರದೋ ಅನಾಥ ಮೃತಶರೀರಕ್ಕೆ ಸಿಗಬೇಕಾದ ಅಂತಿಮ ವಿಧಿಗಳನ್ನು ಪೂರೈಸಿದರಂತೆ ಹೀಗೆ ಹತ್ತು ಹಲವಾರು. ಇವೆಲ್ಲವೂ ಮನುಷ್ಯ ಮನುಷ್ಯನೊಳಗಿನ ಬಾಂಧವ್ಯವನ್ನು, ಭರವಸೆಯನ್ನು ದಟ್ಟವಾಗಿ ಹೆಣೆಯುವ ಘಟನೆಗಳು. ಅಸಂಖ್ಯಾತ ಅಪನಂಬಿಕೆಗಳ, ಮೋಸದ, ಭ್ರಷ್ಟ ವ್ಯವಸ್ಥೆಗಳ, ಸ್ವಾರ್ಥ ಹಪಹಪಿಗಳ ನಡುವೆ ಇವೆಲ್ಲವೂ ಮಾನವ ಸಂಕುಲಕ್ಕೆ ಮನುಷ್ಯ ಪದದ ಅರ್ಥವನ್ನು ಮತ್ತೆ ಕಟ್ಟಿಕೊಡುವ ಸಂದರ್ಭಗಳು. ಅಂಥ ಸಂದರ್ಭಗಳು ದಿನಂಪ್ರತಿಯೂ ಒಂದಲ್ಲಾ ಒಂದು ಕಡೆ ಆಗುತ್ತಲೇ ಇರುತ್ತದೆ. ಆದರೆ, ಕೊರೋನಾ ಸಮಯದಲ್ಲಿ ನೋಡಿದ್ದು ಜಗತ್ತಿನ ಬೇರೆ ಬೇರೆ ದೇಶಗಳಲ್ಲಿನ ಮನುಷ್ಯರು ಒಂದೇ ಸಮಯದಲ್ಲಿ ಈ ಅನುಭವಕ್ಕೆ ಸಾಕ್ಷಿಯಾಗಿದ್ದರು. ಇಡೀ ಜಗತ್ತನ್ನು ಅಂತರ್ಜಾಲ ಬೆಸೆಯುವ ಪ್ರಯತ್ನ ಮಾಡಿತು. ಮನೆಯಲ್ಲಿ ವಯಸ್ಸಾದವರಿದ್ದಾರೆ ಅಂತ ಮನೆಗೆ ಹೋಗದೇ ಉಳಿದ ಮಗ ಮಗಳು, ನಾನು ಊರಿಗೆ ಹೋಗಿ ತನ್ನೂರಿಗೆ ಏನಾದರೂ ಆದರೆ ಅಂತಂದುಕೊಂಡ ಉದ್ಯೊಗಕ್ಕಾಗಿ ಊರು ಬಿಟ್ಟು ಬಂದವ, ಯಾರೋ ನಗರ ಪ್ರದೇಶದಿಂದ ಬಂದಾಗ ಅವರು ಬಂದರು ಅನ್ನುವ ಕಾರಣಕ್ಕೇ‌ ಇಬ್ಭಾಗವಾದ ಒಂದೇ ಊರಿನ ಜನರು, ದಣಿವನ್ನು ಲೆಕ್ಕಿಸದೇ ಸೇವೆ ಸಲ್ಲಿಸಿದ ವೈದ್ಯಲೋಕ, ಭಯಗ್ರಸ್ತ ಮನಸುಗಳಿಗೆ ಧೈರ್ಯ ತುಂಬಿದ ಅದೆಷ್ಟೋ ಮಂದಿ, ಅದರ ಜೊತೆಜೊತೆಗೆ ದಂಧೆ ಎನ್ನುವ ಕರಾಳ ಜಗತ್ತು ಕೂಡ. ಇವಿಷ್ಟನ್ನೂ, ಅಥವಾ ಇದಕ್ಕಿಂತಲೂ ಹೆಚ್ಚಿನದನ್ನು ಜಗತ್ತು ನೋಡಿದೆ. ೧೯೭೨ರಲ್ಲಾದ ಒಂದು ವಿಮಾನ‌ ಅಪಘಾತ ಹಾಗೂ ಇಡೀ ಜಗತ್ತಿನ‌ ಸಂಪರ್ಕವೇ ಕಡಿದುಹೋದ ಆ ಕ್ಷಣದಲ್ಲಿ, ರಕ್ಷಣಾ ಸೇನೆ ಇವರಿರುವ ಜಾಗವನ್ನು ಪತ್ತೆಹಚ್ಚಬಹುದಾ ಇಲ್ಲವಾ ಅನ್ನುವುದರ ಕುರಿತಾಗಿಯೂ ಅನುಮಾನ ಇರುವಾಗ, ಸುತ್ತಲೂ ಎತ್ತರೆತ್ತರದ ಹಿಮಾವೃತ ಪರ್ವತಗಳ ಬುಡದಲ್ಲಿ ಬಿದ್ದ‌ ಗಾಯಾಳುಗಳು ಮತ್ತೆ ವಾಪಸ್ ತಮ್ಮ ತಮ್ಮ ಮನೆಯ ಗೋಡೆಗಳಿಗೆ ಒರಗಿ ಕೂರುವ ಕ್ಷಣಗಳನ್ನು ನೆನೆಸಿಕೊಂಡು ಅದೆಷ್ಟು ಹಂಬಲಿಸಿರಬಹುದು. ಬಹುಶಃ ಬದುಕಿಗಿಂತ ಬೇರೆ ಸ್ಫೂರ್ತಿ ಇರಲಾರದೇನೋ, ಹೇಗಾದರೂ ಬದುಕಲೇಬೇಕು ಹಾಗೂ ಮತ್ತೊಮ್ಮೆ ಈ ಬದುಕನ್ನು ತೃಪ್ತಿಯಿಂದ ಅನುಭವಿಸಬೇಕು ಅನ್ನುವ ಕನಸು ಮತ್ತು ಆ‌ ಕನಸಿನ ಬೆನ್ನುಹತ್ತಿ ಹೋಗುವ ಕತೆ ರೋಚಕವಾಗದೇ ಇದ್ದೀತಾದರೂ ಹೇಗೆ! ಮೂಲ ಕಾದಂಬರಿಯನ್ನು ನಾನಿನ್ನೂ ಓದಿಲ್ಲ, ಕೇವಲ‌ ಅನುವಾದವನ್ನಷ್ಟೇ ಓದಿದೆ. ಕಾದಂಬರಿಯ ಮೊದಲ ಮಾತಿನಲ್ಲಿ ಲೇಖಕಿ ಹೇಳಿದ ಹಾಗೆ ಇದು ಬದುಕನ್ನು ದ್ವೇಷಿಸಿದ ವ್ಯಕ್ತಿಯೊಬ್ಬ ಬದುಕಿನ ಅಗಾಧ ಪ್ರೇಮವನ್ನು ಹುಡುಕಿ ಹೋಗುವ ಕಥನ. ಎಲ್ಲವೂ ಸರಿಯಾಗಿದ್ದಾಗಲೇ ನಮ್ಮ ಹತ್ತಿರ ಬದುಕಿನ ಕುರಿತಾಗಿ ಹಲವು ದೂರುಗಳಿರುತ್ತವೆ. ಏನೂ ಇಲ್ಲದಾದಾಗ ನಮ್ಮ ಪ್ರತಿಕ್ರಿಯೆ ಹೇಗಿರಬಹುದು‌ ಅಥವಾ ಆ ಕ್ಷಣದ ನಮ್ಮ‌ ದೃಷ್ಟಿಕೋನ ಹೇಗಿರಬಹುದು ಅನ್ನೋ ಪ್ರಶ್ನೆಗಳೆಲ್ಲಾ ಓದುವುದಕ್ಕೆ ಅಷ್ಟೇನು ಆಸಕ್ತಿದಾಯಕವಾಗದೇ ಹೋಗಬಹುದು, ಆದರೆ ಅದರ ಉತ್ತರಗಳು ಮಾತ್ರ ನಾವು ಪಯಣಿಸಿಯೇ ಇರದ ದಾರಿಗಳನ್ನು ತೆರೆದಿಡುತ್ತವೆ. 


ನಾವು ಪದೇ ಪದೇ ಹೇಳಿಕೊಂಡು ಬರುತ್ತಿರುವ ಸಂಗತಿಯೆಂದರೆ ಪ್ರಕೃತಿಯ ಇದಿರು ನಾವ್ಯಾರೂ ಒಂದು ಲೆಕ್ಕವೇ ಅಲ್ಲ ಅನ್ನುವುದು. ಆದರೆ ಮನುಷ್ಯನಿಗೊಂದು ಚಾಳಿಯಿದೆ. ಇದ್ದುದನ್ನು ಇದ್ದ ಸ್ಥಿತಿಯಲ್ಲಿಯೇ ಇರುವುದಕ್ಕೆ ಬಿಡದೇ ಇರುವುದು. ವಿಕೃತ ಆನಂದವೊಂದು ದೊರೆಯುತ್ತದೆ ಅಂತಾದಲ್ಲಿ ಮೆದುಳು ಅದಕ್ಕಾಗಿ ಸಜ್ಜಾಗಿಯೇ ಬಿಡುತ್ತದೆ, ಆ ಕ್ಷಣಕ್ಕೆ ತಾನೇ ಸರ್ವರಲ್ಲಿಯೂ ಶಕ್ತಿಶಾಲಿ ಎಂದು ಬೀಗುತ್ತದೆ ಕೂಡಾ. ಆದರೆ, ಸಮತೋಲನ ಎನ್ನುವುದು ಪ್ರಕೃತಿಯ ಅವಿಭಾಜ್ಯ ಅಂಗ. ತನ್ನನ್ನು ತಾನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದಕ್ಕೆ ಗೊತ್ತೇ ಆಗದ ಹಾಗೆ ಪ್ರಕೃತಿ ಪ್ರತಿರೋಧ ಒಡ್ಡುತ್ತದೆ. ಪ್ರತಿ ಬಾರಿಯೂ ಬೇರೆ ಬೇರೆಯದೇ ರೀತಿಯಲ್ಲಿ. ಮನುಷ್ಯ ಅಲ್ಲಿಯೂ ಹೋರಾಡುತ್ತಾನೆ. ಯಾರು ಗೆಲ್ಲುತ್ತಾರೆ ನೋಡೇಬಿಡೋಣ ಅನ್ನುವ ಜಿದ್ದಿಗಿಂತ ಅದರ ಅಗಾಧತೆಯನ್ನು ಪೂಜಿಸಿ ಅದರ ಹತ್ತಿರವೇ ರಕ್ಷಿಸು ಅಂತ ದೈನ್ಯವಾಗಿ ಬೇಡಿಕೊಂಡು ನಂತರ ಪ್ರಯತ್ನ ಮುಂದುವರೆಸಿದರೆ ಆ ಹೋರಾಟಕ್ಕೆ ಸಿಗುವ ಆಯಾಮವೇ ಬೇರೆ. ಪೊರೆವವಳು ಮಡಿಲಲ್ಲಿಟ್ಟು ತೂಗದೇ ಇರುವಳೇ? ಎಷ್ಟೆಂದರೂ ಪರಾವಲಂಬಿಗಳಲ್ಲವೇ ನಾವು! 


ಸೂಕ್ಷ್ಮ ಮನಸಿನವರಾದರೆ, ಮನಸ್ಸನ್ನು ಗಟ್ಟಿಮಾಡಿಕೊಂಡು ಓದಿ ನೋಡಿ. ಗಟ್ಟಿ ಮನಸ್ಸಿನವರಾಗಿದ್ದರೆ, ಅಂಥ ಗಟ್ಟಿತನವನ್ನು ಚೂರಾದರೂ ಅಲ್ಲಾಡಿಸಲಿಕ್ಕೆಂದೇ ಒಂದಷ್ಟು ಘಟನೆಗಳು ಪುಸ್ತಕದ ಒಳಗೆ ಕಾಯುತ್ತಿವೆ, ಅಗಾಧ ಹಿಮಶ್ರೇಣಿಗಳ ನಡುವೆ ಬದಲಾಗುತ್ತಲೇ ಇರುವ ಪ್ರತಿಕೂಲ ಹವಾಮಾನದ ಥರ! ಈ ಮುಖಾಮುಖಿ ಕೇವಲ ಕಾದಂಬರಿ ಹಾಗೂ ಓದುಗರದ್ದಲ್ಲ; ಈ ಬಾರಿ, ಬದುಕು ಮತ್ತು ಬದುಕಿನದ್ದು ಮಾತ್ರ... 


~`ಶ್ರೀ'

    ತಲಗೇರಿ

ಪುಟ್ಟ ಪಾದದ ಗುರುತಿಗೆ ಬರೀ ಎರಡು ರೆಕ್ಕೆ!


 


ಒಂದು ಬರೆಹ ಅಥವಾ ಸಿನೆಮಾ ಇಷ್ಟವಾಗುವುದಕ್ಕೆ ಹಲವು ಕಾರಣಗಳಿರಬಹುದು. ಯಾವುದೋ ಥರದ ಹೊಸ ಪ್ರಯತ್ನ ಮಾಡುವುದಕ್ಕೆ ಹೊರಟಿದ್ದಾರೆ, ಸಣ್ಣ ಪುಟ್ಟ ಹಿನ್ನೆಡೆಗಳಿದ್ದರೆ ಅವುಗಳನ್ನು ಮುನ್ನೆಲೆಗೆ ತರುವದು ಬೇಡ ಅಂದುಕೊಳ್ಳುತ್ತಲೇ ಇಷ್ಟವಾಗಬಹುದು ಅಥವಾ ಇದು ನನ್ನ ಪರಿಸರ, ನನ್ನ ಬದುಕಿಗೆ, ದೈನಂದಿನ ಸಂಗತಿಗಳಿಗೆ ಹೊಂದುತ್ತದೆ ಅನ್ನುವ ಕಾರಣದಿಂದ ಇಷ್ಟವಾಗಬಹುದು. ಅದರಲ್ಲಿ ಭಾವನಾತ್ಮಕವಾದ ಸನ್ನಿವೇಶಗಳಿವೆ, ಸಮಾಜಕ್ಕೆ ಉತ್ತಮ ಸಂದೇಶ ಕೊಡುತ್ತದೆ, ನಮ್ಮೊಳಗಿನ ಹುಳುಕುಗಳನ್ನು ಎತ್ತಿ ಹೇಳುತ್ತದೆ, ದಮನಿತರ ದನಿಯಂತೆ ಕಾಣುತ್ತದೆ, ಅದನ್ನು ಕಟ್ಟಿಕೊಟ್ಟ ರೀತಿ ಬೇರೆಯದೇ ಆಗಿದೆ ಇತ್ಯಾದಿ ಇತ್ಯಾದಿ ಅನೇಕಾನೇಕ ಕಾರಣಗಳು. ಆದರೆ ಇವೆಲ್ಲವುಗಳ ಜೊತೆಗೆ, ಸಿನೆಮಾ ನೋಡುವಾಗಲೋ ಪುಸ್ತಕ ಓದುವಾಗಲೋ ಇರುವ ಮನಸ್ಥಿತಿಯ ಆಧಾರದ ಮೇಲೂ ಅದು ನೀಡುವ ಅನುಭವ ಪ್ರತ್ಯೇಕತೆಯನ್ನು ಪಡೆದುಕೊಳ್ಳುತ್ತದೆ. ಅದೇನೇ ಇದ್ದರೂ ಮನುಷ್ಯನಿಗೆ ನಂಬಿಕೆಗಳು ಬೇಕು, ತನ್ನ ತತ್ವಗಳನ್ನು ಉದ್ದೀಪಿಸುವ ಸಂಗತಿಗಳು ಬೇಕು, ತನ್ನ ಯೋಚನಾ ಧಾರೆಗಳನ್ನು ಬೆಂಬಲಿಸುವ ಹಾಗೂ ಸಮರ್ಥಿಸುವ ದಾಖಲೆಗಳು ಬೇಕು. ಇದರಿಂದಾಗಿ ತಾನು ಇತರರ ನಂಬಿಕೆಗಳನ್ನು ತಿರಸ್ಕರಿಸುವಂತಾದರೆ ಅದು ಬೋನಸ್ ಇದ್ದ ಹಾಗೆ! "ಇವೆಲ್ಲವೂ ಸಹಜ ತುಡಿತಗಳು, ಇವುಗಳಿಂದ ಮುಕ್ತವಾಗಿದ್ದಲ್ಲಿ ನೀವು ಈ ಸಮಾಜದ ಭಾಗವೇ ಅಲ್ಲ, ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ನಿಮ್ಮಿಂದ ಸಾಸಿವೆಯಷ್ಟೂ ಉಪಯೋಗವಿಲ್ಲ" (ಎಳ್ಳನ್ನು ಖಾಲಿಮಾಡಿ ಸಾಸಿವೆ ಬಳಸಲಾಗಿದೆ!). ಇಂಥ ಒಂದು ಪರಿಸ್ಥಿತಿ ಇರುವಾಗ ಕೆಲವು ಕೃತಿಗಳು ಈ ಸಂಗತಿಗಳ‌ನ್ನಿಟ್ಟುಕೊಂಡೂ ಬೇರೆಯದಾಗಿ ನಿಲ್ಲುತ್ತವೆ. ಶ್ರೀಮತಿ ಸುನಂದಾ ಪ್ರಕಾಶ ಕಡಮೆಯವರ ಎರಡು ಕೃತಿಗಳ ಕುರಿತಾಗಿ ನಾನು ಇವತ್ತು ಹೇಳಹೊರಟಿದ್ದೇನೆ. ಒಂದು ಅವರ ಚೊಚ್ಚಲ‌ ಕಥಾ ಸಂಕಲನ 'ಪುಟ್ಟ ಪಾದದ ಗುರುತು' ಇನ್ನೊಂದು ಇವರ ಚೊಚ್ಚಲ ಕಾದಂಬರಿ 'ಬರೀ ಎರಡು ರೆಕ್ಕೆ' 


ಪುಟ್ಟ ಪಾದದ ಗುರುತು ಅನ್ನೋ ಕತೆಯನ್ನೇ ಪುಸ್ತಕದ ಶೀರ್ಷಿಕೆಯಾಗಿ ಮಾಡಿರುವ ಶ್ರೀಮತಿ ಸುನಂದಾ ಕಡಮೆಯವರ ಕೃತ್ಯಕ್ಕೆ ಆ ಶೀರ್ಷಿಕೆ ನ್ಯಾಯ ಒದಗಿಸುತ್ತದೆ. ಬಹುತೇಕ ಕಥೆಗಳು ಬಾಲ್ಯ, ಮಾತೃತ್ವ ಹಾಗೂ ಮಕ್ಕಳ ಕುರಿತಾದ ವಸ್ತುಗಳನ್ನು ಹೊಂದಿವೆ. ಆದರೆ ಬರೀ ಅಷ್ಟೇ ಇಲ್ಲ, ಅದರಾಚೆಗೂ ಬೇರೆ ಕತೆಗಳಿವೆ ಹಾಗೂ ಆ ಕತೆಗಳು ಅಷ್ಟೇ ಸೊಗಸಾಗಿವೆ ಕೂಡಾ. ಬದುಕಿನ ಬಹುತೇಕ ಸಂಗತಿಗಳು ವರ್ತಮಾನದಲ್ಲಿ 'ಎಲ್ಲವೂ' ಅಥವಾ 'ನಗಣ್ಯ' ಅಷ್ಟೇ ಆಗಿ ಕಾಣಬಹುದು. ಆದರೆ ಕಾಲಾಂತರದಲ್ಲಿ ಆ ಸಂಗತಿಗಳ ನೆನಪುಗಳು ಈ ಅಳತೆಗಳ ಮಿತಿಗಳಿಂದಾಚೆ ನಿಲ್ಲುತ್ತವೆ. ಗಣ್ಯ ನಗಣ್ಯಗಳ ಹಂಗು ತೊರೆದು ಬದುಕಿನ 'ಬದುಕಿದ ಕ್ಷಣ'ಗಳಾಗುತ್ತವೆ. ಅದರಲ್ಲೂ ಮೊದಲ ಸಂಕಲನವೆಂದಾಕ್ಷಣ ಅದನ್ನು 'ಜನ' ನೋಡುವ ರೀತಿ ಬೇರೆ. ( ಓದುಗರು ನೋಡುವ ರೀತಿ ಬೇರೆ ಅಂತ ಬಳಸಿಲ್ಲ!) ಆ ಲೇಖಕನಿಗೆ ಅಥವಾ ಆ ಲೇಖಕಿಗೆ ಹೀಗೆ ಬರೆಯಬಹುದಿತ್ತು ಅಥವಾ ಹಾಗೆ ಬರೆಯಬಹುದಿತ್ತು ಅನ್ನುವವರ ಬಳಗವೂ ದೊಡ್ಡದೇ ಆಗಿರುತ್ತದೆ ( ಅದು ತಪ್ಪು ಅಂತಲ್ಲ !). ಜೊತೆಗೆ ಇನ್ನ್ಯಾವುದೋ ಲೇಖಕ ಲೇಖಕಿಯರೊಂದಿಗೆ ಈ ಕೃತಿಯನ್ನಿಟ್ಟು ತುಲನೆ ಮಾಡುವುದು, ಇದು ಅವರ ಬರೆಹವನ್ನು ಹೋಲುತ್ತದೆ ಅನ್ನುವುದು ಇವೆಲ್ಲವೂ ಸಹಜವೇ; ಹಾಗೂ, ಈ 'ಹೋಲುವಿಕೆ'ಯನ್ನು ಮೀರುವುದಕ್ಕೇ ಕೆಲವೊಮ್ಮೆ ಬಹಳ ಕಷ್ಟಪಡಬೇಕಾಗುತ್ತದೆ. ಅದೆಷ್ಟೇ ಆದರೂ ಎಲ್ಲೋ ಒಂದು ಕಡೆ ಯಾವುದೋ ಸಾಲಿಂದಲೋ, ಯಾವುದೋ ಪುಸ್ತಕದಿಂದಲೋ, ಕಥಾ ವಸ್ತುವಿನಿಂದಲೋ, ಬರೆಹದ ಶೈಲಿಯಿಂದಲೋ ಪ್ರಭಾವಿತರಾಗುವುದು ತಪ್ಪುವುದಿಲ್ಲ ಹಾಗೂ ಅದು ತಪ್ಪಲ್ಲ ಕೂಡಾ! ಬದುಕಿನಿಂದ ಬರೆಹ ಹುಟ್ಟಬೇಕೆನ್ನುವುದು ಸತ್ಯವಾದರೂ ಆ ಬರೆಹದ ಹುಟ್ಟಿಗೆ ಕಾರಣವಾಗುವ ವಿಷಯಗಳು ಹಲವಾರು ಇರಬಹುದಲ್ಲಾ! ಹಾಗೂ ಪ್ರತಿ ಲೇಖಕರಿಗೂ ಅವರದ್ದೇ ಆದ ಮಿತಿಗಳಿವೆ; ಲೇಖಕಿಯರಿಗೆ ಮಿತಿಗಳ ಮೇಲೆ ಮಿತಿಗಳಿವೆ! ಈಗ ಇವೆಲ್ಲವುಗಳನ್ನು ಆಚೆಗಿಟ್ಟು ಒಂದು ಕೃತಿಯಾಗಿ ನೋಡಿದರೂ ಈ ಪುಸ್ತಕದ ಕತೆಗಳಲ್ಲಿ ಕಾಣುವುದು ಅಪ್ಪಟ ಮುಗ್ಧತೆ, ಕರುಣೆ, ಆರ್ದ್ರತೆ. ಕತೆಯ ಪಾತ್ರ ಪ್ರಾರ್ಥಿಸಿದಾಗ ನಾವು ಪ್ರಾರ್ಥಿಸುತ್ತಾ, ಕತೆಯ ಪಾತ್ರ ಉಪ್ಪಿನ ಕಾಯಿಯ ಬಾಟಲಿಯನ್ನು ತೆಗೆಯಲು ಪ್ರಯತ್ನಿಸುವಾಗ ನಾನೂ ಒಂದು ಕೈ ನೋಡೇಬಿಡೋಣ ಅಂತ ಓದುಗ ನೆನೆಯುವುದು, ಖಾಯಂ ಗಿರಾಕಿಗಳ ಹತ್ರ ಕೆಲವೊಂದಕ್ಕೆ ದುಡ್ಡು ತೆಗೆದುಕೊಳ್ಳದೇ 'ಎಕ್ಸ್ಟ್ರಾ' ಕೊಡುವ ವ್ಯಾಪಾರಸ್ಥರು, ಸರ್ಕಾರದ ಯಾವುದೋ ಯೋಜನೆ ಬಂತೆಂದು ಮನೆ ಜಮೀನನ್ನು ಬಿಟ್ಟುಕೊಡಲೇಬೇಕಾದ ಸ್ಥಿತಿ ತಲುಪುವ ನಾಗರಿಕರು, ಅಥವಾ ಹೇಳಿಕೊಳ್ಳದ ಹಳೆಯ ಪ್ರೇಮದ ನವಿರು ನೆನಪು ಹೀಗೆ ಇಂಥ ಸಂಗತಿಗಳು ನಿತ್ಯವೂ ಕಾಣುವ ಕೇಳುವ ಅನುಭವಿಸುವಂಥವುಗಳು. ಚಾದರ ಹಾಗೂ ಹುಲಿಯನ್ನು ಒಳಗೊಂಡ ಒಂದು ಸನ್ನಿವೇಶವಂತೂ 'ಆಹ್ಞ್, ಅದೆಷ್ಟ್ ಚೆಂದ' ಅಂತನ್ನಿಸದೇ ಹೋಗುವುದಿಲ್ಲ. ಕೆಲವೊಂದು ಕತೆಗಳ ಅಂತ್ಯ ಒಂದಷ್ಟು ಫ್ಯಾಂಟಸಿ ಶೈಲಿಯಲ್ಲಿರುವುದು ನನಗೆ ಅಷ್ಟೇನು ಹಿಡಿಸದಿದ್ದರೂ ಕತೆಗಳ‌ ಉದ್ದೇಶಕ್ಕೆ ಅವು ಜಾಸ್ತಿ‌ ಮೋಸ ಮಾಡಿದ ಹಾಗೇನೂ ಆಗಿಲ್ಲ. 


ಹೆಣ್ಣಿನ ಲೋಕವನ್ನು ಲೇಖಕಿ ಕಟ್ಟಿಕೊಡುವ ರೀತಿ ಚೆಂದ. ಗಂಡು ಬರೆವ ಸಾಹಿತ್ಯದಲ್ಲಿ ಹೆಣ್ತನದ ಸೂಕ್ಷ್ಮಗಳು ಬರುವುದಾದರೂ ಹೇಗೆ? ಅದಕ್ಕೆ ಲೇಖಕಿಯರೇ ಆಗಬೇಕು! ಇದಕ್ಕೊಂದು ಚೆಂದದ ಉದಾಹರಣೆಯೆಂದರೆ 'ಬರೀ ಎರಡು ರೆಕ್ಕೆ'ಯಲ್ಲಿ ಪೊಲಕಿನ(ಬ್ಲೌಸ್) ಕುರಿತಾಗಿ‌ ಒಂದು ಸಣ್ಣ ಮಾತುಕತೆ ಬರುತ್ತದೆ; ಅದರಲ್ಲಿನ ಸಹಜತೆ ಮತ್ತು ಕಚಗುಳಿಯಂಥ ತುಂಟತನ. ಅದಕ್ಕಾಗಿಯೇ ಹೆಣ್ಣು ಕಟ್ಟಿಕೊಡುವ ಹೆಣ್ತನದ ನವಿರು ಭಾವಗಳು ಮುಖ್ಯ ವೇದಿಕೆಗೆ ಬರಬೇಕು. ಅದಕ್ಕಾಗಿಯಾದರೂ ಲೇಖಕಿಯರು ಗಂಡು ಹಾಕಿಟ್ಟ ಸಾಹಿತ್ಯದ ಚೌಕಟ್ಟುಗಳಾಚೆ ಇಣುಕಬೇಕಾಗಿರುವುದು ತುರ್ತು ಕೂಡಾ ಹೌದು. ಶ್ರೀಮತಿ ಸುನಂದಾ ಕಡಮೆಯವರು ಒಂದು ಸಂದರ್ಶನದಲ್ಲಿ ಹೇಳಿದ್ದಾರೆ; ಲೇಖಕಿಯರಿಗೆ ಎಷ್ಟೆಲ್ಲಾ ಕಟ್ಟುಪಾಡುಗಳಿದ್ದವು ಅವರು ಬರೆವಣಿಗೆ ಶುರುಮಾಡಿದ ಸಮಯದಲ್ಲಿ, ಮುಂದೊಂದು ದಿನ ಮುಕ್ತವಾಗಿ ಬರೆಯುವಂಥ ವಾತಾವರಣ ಸೃಷ್ಟಿಯಾದೀತೇನೋ ಎಂದು. ನಾವಿನ್ನೂ ಆ ಮುಕ್ತತೆಯ ಹಾಗೂ ಬದಲಾವಣೆಯ ಹೊಸ್ತಿಲಲ್ಲೇ ಇದ್ದೇವಾ; ಗೊತ್ತಿಲ್ಲ! ಆದರೆ, ಕೆಲವು ಲೇಖಕಿಯರು ಇಂಥ ಪ್ರಯತ್ನಗಳನ್ನು ಮಾಡ್ತಿರೋದು ಸಂಭ್ರಮದ ಸಂಗತಿಗಿಂತ ಚೂರೇ ಚೂರು ಕೂಡಾ ಕಡಿಮೆಯಲ್ಲ. 


ಶ್ರೀಮತಿ ಸುನಂದಾ ಅವರ ಊರು ಉತ್ತರ ಕನ್ನಡದ ಅಲಗೇರಿ, ನನ್ನ ಊರು ಅದೇ ಉತ್ತರ ಕನ್ನಡದ ತಲಗೇರಿ. ಅವರ 'ಬರೀ ಎರಡು ರೆಕ್ಕೆ'ಯಲ್ಲಿ ಬರುವ ಒಂದು ಊರಿನ ಹೆಸರು ಹಟ್ಟಿಕೇರಿ; ನನ್ನೂರಿನ ಪಕ್ಕದ ಊರ ಹೆಸರೂ ಹಟ್ಟಿಕೇರಿ. ಅವರ ಈ ಕಾದಂಬರಿಯಲ್ಲಿ ಇರುವ ಸಂಭಾಷಣೆಗಳಲ್ಲಿ ಆಗಾಗ ಹಾಲಕ್ಕಿ ಒಕ್ಕಲಿಗರ ಮಾತುಗಳು ಬರುತ್ತವೆ. ನಮ್ಮ ಮನೆ ಇರೋದು ಕೂಡಾ ಈ ಹಾಲಕ್ಕಿ ಸಮಾಜದ ಕೊಪ್ಪದಲ್ಲಿ. ಹಾಗಾಗಿ ಈ ಕತೆಯಂತೂ ನನಗೆ ನನ್ನೂರನ್ನು ತಂದು ಎದುರಿಗಿಟ್ಟಂತೆ ಕಂಡಿದ್ದರಲ್ಲಿ ಯಾವ ಅನುಮಾನವೂ ಇಲ್ಲ. ಹಾಲಕ್ಕಿ ಹೆಂಗಸರು ಯಾವತ್ತೂ ಗಟ್ಟಿಗರು. ಗಂಡಸಿಗೆ ಸರಿಸಮನಾಗಿ ಕೆಲಸ ಮಾಡುವವರು. ಹಾಗಿದ್ದರೂ ಸಂಜೆ ಗಂಡ ಕುಡಿದು ಬಂದಾಗ ಅವನಿಂದ ಹೊಡೆತ ತಿನ್ನುತ್ತಿದ್ದರು. ಕುಡಿದ ವ್ಯಕ್ತಿ ತಾನಾಗಿ ನಿಂತುಕೊಳ್ಳೋದಕ್ಕೇ ಆಗೋದಿಲ್ಲ, ಅಂಥವನ ಕೈಲಿ ಇಷ್ಟು ಗಟ್ಟಿಗಿತ್ತಿಯರು ಯಾಕೆ ಒದೆ ತಿನ್ನುತ್ತಾರೆ; ಯಾಕೆ ತಿರುಗಿ ನಾಲ್ಕು ಬಾರಿಸೋದಿಲ್ಲ ಅನ್ನುವ ಪ್ರಶ್ನೆ ನನ್ನನ್ನು ಮುಂಚೆಯೂ ಕಾಡಿತ್ತು; ಈಗಲೂ ಪ್ರಶ್ನೆ ಇದೆ ಅಲ್ಪ ಸ್ವಲ್ಪ ಸಮಾಧಾನಕರ ಉತ್ತರಗಳೊಂದಿಗೆ. ಮೊದಲನೆಯದಾಗಿ ಗಂಡನೇ ದೇವರು, ಎಷ್ಟಿದ್ದರೂ ಗಂಡ ಅನ್ನುವ ಒಂದು ಗೌರವ ಭಾವ, ಇನ್ನೊಂದು ರಾತ್ರಿ ಗಂಡ ಕುಡಿದಿದ್ದಾಗ ಹೊಡೆದುಬಿಡಬಹುದು, ಆಮೇಲೆ ಬೆಳಿಗ್ಗೆ ಕುಡಿತದ ನಶೆ ಇಳಿದಾಗ ಗಂಡಸು ಏನಿದ್ದರೂ ಗಂಡಸೇ ಅಲ್ಲವೇ ಅನ್ನುವ ಭಯವೂ ಇರಬಹುದು. ಆದರೂ, ಅವರು ಮನಸ್ಸು ಮಾಡಿದರೆ ಏನೆಲ್ಲವನ್ನು ಮಾಡಬಹುದು. 


ಮೊದಲೇ ಹೇಳಿದ ಹಾಗೆ, ಎಲ್ಲಾ ವ್ಯಕ್ತಿಗಳಿಗೂ ಅವರವರದ್ದೇ ಆದ ತತ್ವ ಸಿದ್ಧಾಂತಗಳಿರುತ್ತವೆ. ಕತೆ ಹೇಳುವವರು ತಮ್ಮ ವೈಯಕ್ತಿಕ ಸಿದ್ಧಾಂತಗಳನ್ನು ಕತೆಯಲ್ಲಿಡದೆಯೇ ಕತೆಯ ಅಗತ್ಯವನ್ನಷ್ಟೇ ಪೂರೈಸಬೇಕು ಅನ್ನುವುದು ಒಂದು ನಿಯಮ. ಬರೆಹಗಾರ ಎಲ್ಲ ಸಲವೂ ಸಮಾಜವನ್ನು ತಿದ್ದುವುದಕ್ಕೆ ಹೋಗಬೇಕು ಅಂತೇನಿಲ್ಲ ಅನ್ನುವುದು ಕೆಲವು ಸಾಹಿತಿಗಳ ಮಾತಾದರೆ, ಸಮಾಜದ ದನಿಯಾಗದ ಸಾಹಿತ್ಯ ಇದ್ದೇನು ಪ್ರಯೋಜನ ಅನ್ನುವುದು ಹಲವರ ಅಭಿಪ್ರಾಯ. ಅದೇನೇ ಇದ್ದರೂ, ವಾಚ್ಯವಾಗದೇ ಸೂಚ್ಯವಾದರೆ ಮಾತ್ರ ಬರೆಹಕ್ಕೊಂದು ನಾಜೂಕುತನ ಬರುವುದಕ್ಕೆ ಸಾಧ್ಯ. ಬರೆಹ ಯಾಕೆ ನಾಜೂಕಾಗಬೇಕು ಅನ್ನುವ ಪ್ರಶ್ನೆ ಇದಿರಾದರೆ, ನಾಜೂಕಿಗೆ ಒಂದು ಸೂಕ್ಷ್ಮತೆಯಿದೆ; ಆ ಸೂಕ್ಷ್ಮತೆ ಸಾಹಿತ್ಯಕ್ಕೆ ಬೇಕು ಅಂದರೆ ತಪ್ಪಲ್ಲ‌ ಅಲ್ಲವಾ? 'ಬರೀ ಎರಡು ರೆಕ್ಕೆ'ಯಲ್ಲಿರುವುದು ಇಂಥ ನಾಜೂಕುತನ. ಇಲ್ಲಿ ಉತ್ತರ ಕನ್ನಡದ ಸಾಮಾಜಿಕ ವ್ಯವಸ್ಥೆಯ ಚಿತ್ರಣವನ್ನು ಅತ್ಯಂತ ಪ್ರಾಮಾಣಿಕವಾಗಿ, ಯಾವ ಪೂರ್ವಗ್ರಹವೂ ಇಲ್ಲದೇ ಕಟ್ಟಿಕೊಡಲಾಗಿದೆ. ಹಾಗಂತ ಇದು ಯಾರ ದನಿಯೂ ಆಗಿಲ್ಲವಾ ಅಂದರೆ, ಅತಿರೇಕಗಳಿಲ್ಲದೇ ನಾಟಕೀಯ ಪ್ರಲೋಭಗಳಿಲ್ಲದೆಯೂ ದನಿಯಾಗಬಹುದು ಅನ್ನುವುದು ಈ ಕಾದಂಬರಿಯ ಮೂಲಕ ಕಣ್ಣ ಮುಂದಿದೆಯಲ್ಲಾ! ಮದುವೆ ಬೇಡ ಬೇಡ ಅನ್ನುತ್ತ ದಿಟ್ಟವಾಗಿ ಮಾತನಾಡಿ ಕೊನೆಗೆ ಆ ಕಾಲಕ್ಕೆ ಅತ್ಯಂತ ಆಧುನಿಕ ಜೀವನಶೈಲಿಯನ್ನು ರೂಪಿಸಿಕೊಳ್ಳುವ ಹುಡುಗಿಯೂ, ಮೌನವನ್ನೇ ತನ್ನ ಪ್ರತಿಭಟನೆಯ ದನಿಯಾಗಿಸಿಕೊಂಡು ಅಸಹಾಯಕತೆಯಿಂದಲೇ ಸಂಸಾರದ ಸಮತೋಲನ ಕಾಯ್ದುಕೊಳ್ಳಲು ಹೆಣಗುವ ಪಾತ್ರವೂ ಒಂದೇ ಮುಖದ ಎರಡು ಪ್ರತಿಬಿಂಬಗಳಂತೆ ಕಂಡರೆ ಅದು ಅಸಹಜವೇನಲ್ಲ ಅಂತನಿಸುತ್ತದೆ ನನಗೆ. ಈ ಕಾದಂಬರಿಯಲ್ಲಿ ಬಹುತೇಕ ಎಲ್ಲರಿಗೂ ತಮ್ಮ‌‌ ದೈನಿಕ ತೊಳಲಾಟಗಳಿಂದ ಬಿಡುಗಡೆ ಸಿಗುತ್ತದೆ. ನಿತ್ಯದ ನೆಲ ಬಿಟ್ಟು ಹಾರಲು ರೆಕ್ಕೆ ಸಿಗುತ್ತದೆ. 


ಈ ಕಾದಂಬರಿಯಲ್ಲಿ ಬಳಸಿದ ಭಾಷೆಯ ಕುರಿತಾಗಿ ಲೇಖಕಿ‌ ಒಂದು ಕಡೆ ಹೇಳಿಕೊಂಡಿದ್ದಾರೆ;"ಭಾಷೆಯು ಆಯಾ ಜನಾಂಗದ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಯಾವುದೇ ಒಂದು ಪ್ರಾದೇಶಿಕ ಭಾಷೆಗೆ ಆ ನೆಲದ ಸೊಗಡು ಇರುತ್ತದೆ". ಉತ್ತರ ಕನ್ನಡದ ಸ್ಥಳೀಯ ಪದಗಳನ್ನು, ಗ್ರಾಮ್ಯ ಪದಗಳನ್ನು ಕಾದಂಬರಿಯಲ್ಲಿ ಬೇಕಾದಷ್ಟು ಬಳಸಲಾಗಿದೆ. ಒಂದು ಜಾಗದ ಸಂಸ್ಕೃತಿಯ ಸೊಗಡನ್ನು ಮನಸಾರೆ ಅನುಭವಿಸಬೇಕಾದರೆ ಅಲ್ಲಿನ ಭಾಷೆಯನ್ನು ಅರಿತುಕೊಳ್ಳುವುದು ಕೂಡಾ ಬಹಳ ಮುಖ್ಯ ಅಲ್ಲವಾ? ಹಾಗೂ ಒಂದು ಪ್ರಾದೇಶಿಕ ಭಾಷೆ ಪುಸ್ತಕದಲ್ಲಿ ದಾಖಲಾಗುವುದು ಕೂಡಾ ಅಷ್ಟೇ ಮುಖ್ಯ. ಪ್ರತಿ ಸಂಭಾಷಣೆಗೂ ಆ ಪ್ರದೇಶದ ಸಾಮಾಜಿಕ ಸಂಗತಿಯನ್ನು ಬಿಚ್ಚಿಡುವ ಸಾಮರ್ಥ್ಯ ಸಿಗೋದು ಸ್ಥಳೀಯ ಪದಗಳನ್ನು ಬಳಸಿಕೊಂಡಾಗಲೇ. ಅದಕ್ಕಾಗಿಯೇ ಕೆಲವೊಮ್ಮೆ ಸಾಹಿತ್ಯ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದಗೊಂಡಾಗ ತನ್ನ ಮೂಲ ಸೌಂದರ್ಯವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗುವುದು. 


ಪುಸ್ತಕದ‌ ಕುರಿತಾಗಿ, ಕತೆಯ ಕುರಿತಾಗಿ ಹೇಳಬಹುದು ಅಂತ ಅಂದುಕೊಂಡು ನೀವಿದನ್ನು ಓದಲು ಶುರು ಮಾಡಿ, ಈಗ ಅದನ್ನು ಬಿಟ್ಟು ಉಳಿದೆಲ್ಲವೂ ಇದೆ ಅಂತನ್ನಿಸಿದರೆ ಅದು ಪ್ರಜ್ಞಾಪೂರ್ವಕ ಕೃತ್ಯ ಅಂತಲೇ ಅಂದುಕೊಳ್ಳಬೇಕಾಗಿ ವಿನಂತಿ. ಈ ಎರಡೂ ಪುಸ್ತಕಗಳನ್ನು ತಪ್ಪದೇ ಓದಿ ಅನ್ನುವುದು ಸ್ಪಷ್ಟ‌ ಹಾಗೂ ನೇರ ಕೋರಿಕೆ. 


- 'ಶ್ರೀ' 

   ತಲಗೇರಿ

ಶನಿವಾರ, ಫೆಬ್ರವರಿ 12, 2022

ತಂಗಾಳಿಯೊಂದಿಗೊಂದು ಅಸ್ಪಷ್ಟ ಗಂಧ!



ಒಂದು ಕವಿತೆ, ಒಂದು ಕತೆ, ಒಂದು ಕಾದಂಬರಿ ಅಥವಾ ಒಂದು ಪುಸ್ತಕ ಓದುವಾಗ ಕೊಡುವ ಅನುಭವಕ್ಕಿಂತ, ಓದಿ ಮುಗಿದ ಮೇಲೆ ಕೊಡುವ ಅನುಭವದ ಗಾಢತೆಯನ್ನು ಆಧರಿಸಿ ಅದರ ಕುರಿತಾಗಿ ಬರೆಯುವುದು ನನ್ನ ಪದ್ಧತಿ. ಹಾಗಾಗಿಯೇ ಓದಿದ ಕೂಡಲೇ ಅದರ ಕುರಿತಾಗಿ ಬರೆಯುವುದಕ್ಕೆ ಹೋಗುವುದಿಲ್ಲ; ಒಂದೊಮ್ಮೆ ಆ ಕ್ಷಣಕ್ಕೆ ಆ ಪ್ರಭಾವಲಯದಲ್ಲಿ ಸಿಲುಕಿ ಓದಿನ ತೀವ್ರತೆಯಿಂದಾಗಿ ಒಂದಷ್ಟು ಉತ್ಪ್ರೇಕ್ಷೆಗಳು ಇಣುಕಬಹುದು ಅನ್ನುವುದು ಒಂದು ಕಾರಣವಾದರೆ, ಆ ಓದು ಎಷ್ಟು ತೀವ್ರವಾಗಿತ್ತು, ಗಹನವಾಗಿತ್ತು ಮತ್ತು ಯಾವ ಥರದ ಪರಿಣಾಮವನ್ನು ಉಂಟುಮಾಡಿದೆ ಅನ್ನುವುದನ್ನು ನನಗೇ ನಾನು ಖಾತ್ರಿ ಮಾಡಿಕೊಳ್ಳುವ ಸಲುವಾಗಿಯೂ ಒಂದೆರಡು ದಿನ ಕಾಯುವುದು ಇದೆ. ಅರೇ, ಅದರಲ್ಲೇನಿದೆ, ಪುಸ್ತಕದ ಕುರಿತಾಗಿ ಬರೆಯುವುದಕ್ಕೆ ಇಷ್ಟೆಲ್ಲಾ ನಾಟಕಗಳ್ಯಾಕೆ, ಸುಮ್ಮನೆ ಪರಿಚಯಾತ್ಮಕವಾಗಿ ಬರೆದರೆ ಆಗುವುದಿಲ್ಲವಾ ಅನ್ನುವ ಪ್ರಶ್ನೆ ನನ್ನಲ್ಲೂ ಹುಟ್ಟಿತ್ತು. ಹೀಗೆ ಪರಿಚಯಾತ್ಮಕವಾಗಿ ಬರೆಯಬಹುದಾದರೂ ಅದು ನನ್ನ ಪದ್ಧತಿಗೆ ಸರಿ ಹೊಂದದ ಕಾರಣ, ಸುಲಭವಾದರೂ ಆ ದಾರಿಯನ್ನು ಆಯ್ದುಕೊಳ್ಳುವುದು ನನ್ನಿಂದಾಗದ ಕೆಲಸ. ಇಷ್ಟೆಲ್ಲಾ ಪೀಠಿಕೆ ಯಾಕೆ ಅನ್ನುವುದಕ್ಕೂ ಕಾರಣವಿದೆ‌. ನಮ್ಮ ಕನ್ನಡ ಓದುಗ ವರ್ಗದಲ್ಲಿ "ಚೆನ್ನಾಗಿದೆ", "ಇಷ್ಟ ಆಯ್ತು" ಹಾಗೂ ಇನ್ನಿತರ ಸಾಲುಗಳನ್ನು ಬಿಟ್ಟು ಅದೆಷ್ಟರ ಮಟ್ಟಿಗೆ ಒಂದು ಕೃತಿಯ ಕುರಿತಾಗಿ ಬರೆಯುತ್ತೇವೆ ಇತ್ತೀಚಿನ ದಿನಗಳಲ್ಲಿ? ನನಗೆ ವಿಮರ್ಶೆ ಎಲ್ಲಾ ಬರೋದಿಲ್ಲ, ಹಾಗಾಗಿ ನಾನು ಬರೆಯೋದಿಲ್ಲ ಅನ್ನುವುದು ಹಲವರ ಅಭಿಪ್ರಾಯವಾದರೂ, ಒಂದು ಪುಸ್ತಕದ ಕುರಿತಾಗಿ ನನಗೇನು ಇಷ್ಟವಾಯಿತು, ಯಾಕಾಗಿ ಇಷ್ಟವಾಯಿತು, ಇದು ಏನನ್ನು ನೆನಪಿಸಿತು, ಇದು ನನ್ನಲ್ಲಿ ಏನೇನು ಯೋಚನೆಗಳನ್ನು ಹುಟ್ಟುಹಾಕಿತು ಅನ್ನುವುದರ ಕುರಿತಾಗಿ ಪ್ರತಿಯೊಬ್ಬರಲ್ಲೂ ಒಂದಷ್ಟು ಅಭಿಪ್ರಾಯವಂತೂ ಖಂಡಿತಾ ಇದ್ದೇ ಇರುತ್ತದಲ್ಲಾ; ಅಂಥ ಅಭಿಪ್ರಾಯಗಳನ್ನು ದಾಖಲಿಸುವುದನ್ನೇ ಬರೆಹವಾಗಿಸಬಹುದಲ್ಲ! ಒಂದು ಪುಸ್ತಕದ ಕುರಿತಾಗಿ ಒಂದಷ್ಟು ಚರ್ಚೆಗಳಾಗಬೇಕು, ಚರ್ಚೆಗಳಲ್ಲದಿದ್ದರೂ ಹೊಸ ಹೊಸ ಹೊಳಹುಗಳು, ದೃಷ್ಟಿಕೋನಗಳು ಮುನ್ನೆಲೆಗೆ ಬರಬೇಕು. ಕೇವಲ ಕೆಲವೇ ಕೆಲವು ಹಳೆಯ ಹಾಗೂ ಪ್ರಸಿದ್ಧ ಬರೆಹಗಾರರ ಕುರಿತಾಗಿ ಮತ್ತು ಅವರ ಕೃತಿಗಳ ಕುರಿತಾಗಿ ಮಾತ್ರ ಬರೆಯದೇ, ಒಂದಷ್ಟು ಹೊಸ ನೀರಿನ ರುಚಿಯನ್ನೂ ನೋಡಬೇಕು. ಆದರೆ, ನಮ್ಮಲ್ಲಿ ಬಹುದೊಡ್ಡ ಸಮಸ್ಯೆಯೆಂದರೆ, ನಾವು ಇನ್ನೂ ಬೇರೆ ಬೇರೆ ವಿಷಯಗಳತ್ತ ಗಮನಹರಿಸದೇ ಒಂದಷ್ಟು ನಿರ್ದಿಷ್ಟ ವಿಷಯಗಳ ಕುರಿತಾಗಿನ ಬರೆಹಗಳನ್ನಷ್ಟೇ ಓದುತ್ತಿದ್ದೇವೆ. ಅದು ತಪ್ಪಲ್ಲದಿದ್ದರೂ ಅದೆಷ್ಟೋ ಹೊಸ ಪುಸ್ತಕಗಳು ಮುಖ್ಯ ವೇದಿಕೆಯನ್ನು ಅಷ್ಟಾಗಿ ಪ್ರವೇಶಿಸದೇ ಇರುವುದಕ್ಕೆ ಇಂಬು ಕೊಟ್ಟಂತಾಗುತ್ತದೆ ಅಂತ ಬಹುಶಃ ಒಪ್ಪಿಕೊಳ್ಳಬಹುದೇನೋ. ಹೀಗೆ ಯಾವುದರ ಕುರಿತು ಮಾತಾಡಬೇಕೋ ಅಂಥ ಪುಸ್ತಕಗಳ ಸಾಲಿಗೆ ಸೇರಬಹುದಾದ ಹಲವು ಪುಸ್ತಕಗಳಲ್ಲಿ ಒಂದು ಶ್ರೀ ನಾಗರಾಜ್ ವಸ್ತಾರೆ ಅವರ 'ಪ್ರಿಯೇ ಚಾರುಶೀಲೆ'..

ಈ ಪುಸ್ತಕದ ಕುರಿತಾಗಿ ಯಾರ್‍ಯಾರು ಏನೇನು ಬರೆದಿರಬಹುದು ಅನ್ನುವ ಕುತೂಹಲದೊಂದಿಗೆ ಒಂದಷ್ಟು ಹುಡುಕಾಡಿದೆ. ನನಗೆ ಸಿಕ್ಕಿದ್ದು ಮೂರ್ನಾಲ್ಕು ಬರೆಹಗಳು ಮಾತ್ರ. ಅದರಲ್ಲೂ ಒಂದು ಬರೆಹದಲ್ಲಿ ಇಡೀ ಕಾದಂಬರಿಯ ಸಾರಾಂಶವನ್ನು ನೇರವಾಗಿ, ಯಾವ ಕುತೂಹಲವನ್ನೂ ಇಟ್ಟುಕೊಳ್ಳದ ಹಾಗೆ ಬರೆದು ಮುಗಿಸಿದ್ದಾರೆ. ಓದುವಿಕೆಯ ಅನುಭವವನ್ನು ಹಾಳುಗೆಡವುವ ಇಂಥ ಬರೆಹಗಳಾದರೂ ಯಾಕೆ ಅನ್ನುವ ಸಿಟ್ಟೂ ನಾನೀಗ ಇಲ್ಲಿ ಬರೆಯುತ್ತಿರುವುದಕ್ಕೆ ಒಂದು ಕಾರಣ ಅಂತಂದರೆ ಅತಿಶಯೋಕ್ತಿ ಅಲ್ಲ ಅಂತಲೇ ಭಾವಿಸುತ್ತೇನೆ. ಕತೆ, ಕಾದಂಬರಿ, ಸಿನೆಮಾದ ಕುತೂಹಲವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡದೇ, ಓದುಗನಲ್ಲಿ, ನೋಡುಗನಲ್ಲಿ ಕುತೂಹಲವನ್ನು ಹುಟ್ಟುಹಾಕುವುದಕ್ಕೆ ಬೇಕಾದಷ್ಟು ಕತೆಯನ್ನು (ತೀರಾ ಅಗತ್ಯವಿದ್ದರೆ) ಮಾತ್ರವೇ ತೆರೆದಿಡುವುದಕ್ಕೆ ಪ್ರಯತ್ನ‌ ಇರಲಿ ಅಂತ ಒಂದು ವಿನಮ್ರ ವಿನಂತಿ. ಇನ್ನು, ಕೇವಲ ಅಂತರ್ಜಾಲದಲ್ಲಿ ಹುಡುಕಾಡಿದ್ದು ನನ್ನ ಮಿತಿಯೂ ಇರಬಹುದು!

ಪ್ರೇಮದ ಕುರಿತಾಗಿ ಅದೆಷ್ಟೇ ಬರೆದರೂ, ಮತ್ತೆ‌ ಮತ್ತೆ ಬೇರೆ ಬೇರೆ ಪೀಳಿಗೆ ಬೇರೆ ಬೇರೆಯದೇ ಅಭಿವ್ಯಕ್ತಿಯೊಂದಿಗೆ ಪ್ರೇಮದ ಕುರಿತಾಗಿ ಬರೆಯುತ್ತಲೇ ಬಂದಿದೆ. ಮನುಷ್ಯ ಸಂಘಜೀವಿ ಅಂತಲೇ ನಾವೆಲ್ಲಾ ಕಲಿತಿರುವುದು; ಆದರೆ, ಬಹುಶಃ ಮನುಷ್ಯ ‌ನಿಜವಾಗಲೂ ಒಂಟಿ, ಆ ಒಂಟಿತನವನ್ನು ಕಳೆದುಕೊಳ್ಳುವುದಕ್ಕೋಸ್ಕರ ಸಂಘಜೀವಿಯ ಸೋಗು ಹಾಕಿ ಕಾಲ‌ ಕಳೆಯುತ್ತಾನೆ. ಇಲ್ಲಿ ಸೋಗು ಎನ್ನುವುದಕ್ಕೆ ಕಪಟ ಅಂತ ಭಾವಿಸಬೇಕಾಗಿಲ್ಲ; ಅದೊಂದು ವೇಷ, ಆರೋಪಿಸಿಕೊಳ್ಳುವಂಥದ್ದು ಅನ್ನುವ ಧ್ವನಿಯಷ್ಟೇ ಮುಖ್ಯ. ಹೀಗೆ ಒಂಟಿತನದಲ್ಲಿರುವ ಮನುಷ್ಯ ಸಂಘಜೀವಿಯ ವೇಷವನ್ನು ನಡೆಸಿಕೊಂಡು ಹೋಗುವುದಕ್ಕೆ ಒಂದಷ್ಟು ಮೂಲದ್ರವ್ಯಗಳ ಮೊರೆಹೋಗುತ್ತಾನೆ; ಅದರಲ್ಲಿ ಪ್ರೇಮವೂ ಒಂದು. ಪ್ರೀತಿ, ಮಮತೆ, ವಾತ್ಸಲ್ಯ, ಕರುಣೆ, ನಂಬಿಕೆ, ತ್ಯಾಗ ಇತ್ಯಾದಿಗಳ ಮೂಲಕವೂ, ದ್ವೇಷ, ಅಸೂಯೆ, ಅಹಂಕಾರ, ಸಿಟ್ಟು, ಲೋಭಗಳಿಂದಲೂ ತನ್ನ ಸುತ್ತಮುತ್ತ ಒಂದಷ್ಟು ಸಂಬಂಧಗಳನ್ನು ಹುಟ್ಟುಹಾಕಿಕೊಳ್ಳುತ್ತಾನೆ. ಆ ಸಂಬಂಧಗಳೊಂದಿಗಿನ ನಿತ್ಯ ಸಂವಾದ, ಸಂಘರ್ಷಗಳಿಂದಾಗಿ ತನ್ನ ಒಂಟಿತನದ ತೀವ್ರತೆಯನ್ನು ಮರೆಯುವ, ಬದುಕಿನ ಬೇರೆ ಬೇರೆ ಮಗ್ಗುಲುಗಳಿಗೆ ಹೊರಳಿಕೊಳ್ಳುವ ಪ್ರಕ್ರಿಯೆಯನ್ನು ಜೀವಂತವಾಗಿಡುತ್ತಾನೆ.

ಹೆಸರೊಂದನ್ನು ಬಿಟ್ಟು ಇನ್ನೇನೂ ಗೊತ್ತಿರದೇ, ಯಾವ ಪೂರ್ವಗ್ರಹಗಳೂ ಇಲ್ಲದೇ ಓದಲು ಶುರುಮಾಡಿದ ಕಾದಂಬರಿ 'ಪ್ರಿಯೇ ಚಾರುಶೀಲೆ'. ನಾಗರಾಜ ವಸ್ತಾರೆ ಅವರ ಯಾವ ಪುಸ್ತಕವನ್ನು ಓದಿರದೇ ಇದ್ದುದರಿಂದ ಯಾವುದೇ ನಿರೀಕ್ಷೆಯ ಚೌಕಟ್ಟಿರಲಿಲ್ಲ. ಹಳೆ ತಲೆಮಾರಿನ ಭಾಷೆಯೊಂದಿಗೆ, ಹೊಸ ತಲೆಮಾರಿನ‌ ಭಾಷೆಯನ್ನು ಬೆಸೆಯುವುದಕ್ಕೆ ಶ್ರೀಯುತರು ಪ್ರಯತ್ನಿಸಿದಂತೆ ಕಾಣುತ್ತದೆ. ಒಮ್ಮೊಮ್ಮೆ ಹೊಸ ತಲೆಮಾರಿನ ಪ್ರೇಮಕತೆಯಂತೆಯೂ, ಇನ್ನು ಕೆಲವೊಮ್ಮೆ ಅದೆಷ್ಟೇ ತಲೆಮಾರುಗಳು ಕಳೆದರೂ ಬದಲಾಗದ ಪ್ರೇಮದ ಮೂಲವನ್ನು ಹುಡುಕುವ ಕತೆಯಂತೆಯೂ ಕಂಡರೆ ಆಶ್ಚರ್ಯವೇನಿಲ್ಲ. ಬರೀ ಪ್ರೇಮವಷ್ಟೇ ಕಂಡರೆ ತಪ್ಪೂ ಅಲ್ಲ; ಪೂರ್ತಿ ಸರಿಯೂ ಅಲ್ಲ! ಹೊರಗಿನ ಪ್ರಪಂಚವನ್ನು ನೋಡುವ ಮನುಷ್ಯನಿಗೆ ತಾನು ಮಾತ್ರ ದುಃಖದಲ್ಲಿರುವುದಾಗಿಯೂ, ತನ್ನೊಬ್ಬನನ್ನು ಬಿಟ್ಟು ಇಡೀ ಜಗತ್ತು ಸುಖದ ಸಂಭ್ರಮದ ಅಮಲಲ್ಲಿ ತೇಲುತ್ತಿರುವುದಾಗಿಯೂ ಕಾಣುವುದು ಸಹಜ. ತನ್ನ ಸದ್ಯದ‌ ಬದುಕಿಂದ ಕೆಲ ಕಾಲ ಹೊರ ಬಂದು ಹೊಸ ಅನುಭವಗಳನ್ನು ಪಡೆದುಕೊಳ್ಳಬೇಕು ಎಂದು ಹಂಬಲಿಸುವವರು ಹಲವರಾದರೂ, ಕಾರ್ಯಪ್ರವೃತ್ತರಾಗುವವರು ಬೆರಳೆಣಿಕೆಯಷ್ಟು. ಬೀದಿಯಲ್ಲಿ ನಡೆಯುವಾಗ ಪರಿಚಯದ ಯಾವ ಮುಖಗಳೂ ಕಾಣದೇ, ಹೆಸರಿಡಿದು ಕರೆಯುವ ಯಾವ ಧ್ವನಿಗಳೂ ಇದಿರಾಗದೇ, ತಮ್ಮನ್ನೇ ತಾವು ಹೊಸದಾಗಿ ಹುಡುಕಿಕೊಳ್ಳಬಹುದಾದ ಒಂದು ಅವಕಾಶಕ್ಕಾಗಿ ದಿನಂಪ್ರತಿ ಪ್ರಾರ್ಥಿಸುವ ಮನುಷ್ಯರೇನು ಕಡಿಮೆ ಇಲ್ಲವಲ್ಲ ! ಅದೆಷ್ಟೇ ಅಪರಿಚಿತ ಪ್ರದೇಶಕ್ಕೆ ಹೋದರೂ ಪರಿಚಯ ಆಗಲೇ ಬೇಕಲ್ಲ , ಹೊಸ ಹೊಸ ಸಂಬಂಧಗಳು ಹುಟ್ಟಲೇಬೇಕಲ್ಲ! ಹಾಗೆ ಹುಟ್ಟುವ ಸಂಬಂಧ ಮತ್ತದರ ಕಥಾನಕವನ್ನು ತೆರೆದಿಡುವುದೇ 'ಪ್ರಿಯೇ ಚಾರುಶೀಲೆ'.

ನಾಗರಾಜ ವಸ್ತಾರೆಯವರು ಭಾಷೆಯನ್ನು ಬಳಸಿಕೊಂಡ ಹಾಗೂ ದುಡಿಸಿಕೊಂಡ ಬಗೆಯೇ ಇಡೀ ಕಾದಂಬರಿಯ ಜೀವಾಳ; ಕೆಲವೊಮ್ಮೆ ಒತ್ತಾಯಪೂರ್ವಕವಾಗಿಯೂ! ಇಲ್ಲಿ ಸಾಹಿತ್ಯದ ಶಾಸ್ತ್ರೀಯ ವಾಕ್ಯಗಳೂ ಇವೆ; ಇತ್ತೀಚಿನ ದಿನಗಳಲ್ಲಿ ನಿತ್ಯ ಮಾತಾಡುವ ಕನ್ನಡವೂ ಇದೆ, 'ಐ ಮೀನ್' ಕಂಗ್ಲೀಷೂ ಇದೆ; ಹಾಗೆ ಹೇಳಬಹುದಾದಲ್ಲಿ.. ಅವರು ಹೇಳಬೇಕಾಗಿರುವುದನ್ನು ಹೇಗಾದರೂ ಹೇಳಲೇಬೇಕಾಗಿತ್ತು, ಹಾಗಾಗಿ ಅಲ್ಲಿಯೂ ಅವರು ಜಾಣ್ಮೆಯನ್ನು ತೋರಿದ್ದಾರೆ. ಒಮ್ಮೊಮ್ಮೆ ದಾರಿ ತಪ್ಪುವ ನಿರೂಪಣೆಯನ್ನು ಅಲ್ಲಿನ ಪಾತ್ರದ ಮೂಲಕವೇ ದಾರಿ ತಪ್ಪಿಸುತ್ತಾರೆ ಹಾಗೂ ಆ ದಾರಿ ತಪ್ಪುವ ಎಚ್ಚರವೂ ಅವರಿಗಿದೆ; ಆ ಪಾತ್ರಕ್ಕೂ ! ಹಾಗಾಗಿ ಇದನ್ನು ಒಂದು ಪ್ರಯೋಗ ಅಂತಲೇ ಭಾವಿಸಬೇಕೇ ಹೊರತೂ, ಅರಿವಿಲ್ಲದೇ ಆದ ನಿರೂಪಣೆಯಲ್ಲ. ಆದರೆ, ಓದಿನ ಓಘಕ್ಕೆ ಒಮ್ಮೊಮ್ಮೆ ಅದೇ ತೊಡಕಾಗುವ ಸಾಧ್ಯತೆಗಳು ದಟ್ಟವಾಗಿ ಕಾಣಿಸಿದ್ದಂತೂ ಹೌದು. ವಿವರಗಳೇ ತುಂಬಿಕೊಂಡಾಗ ಆಸಕ್ತಿಯಿದ್ದರೂ ಕತೆಯ ದಿಕ್ಕು ತಡಕಾಡಿಸುತ್ತದೆ ಆದರೂ, ಅದೂ ಒಂಥರಾ ಮಜವಾಗಿದೆ.

ಮನುಷ್ಯ ತನ್ನ ವಾಸ್ತವದಿಂದ ಓಡುವುದಕ್ಕೆ ಯಾವತ್ತೂ ಪ್ರಯತ್ನಿಸುತ್ತಲೇ ಇರುತ್ತಾನೇನೋ ಅಂತನ್ನಿಸದೇ ಹೋಗುವುದಿಲ್ಲ. ಕೆಲವು ಸಂಬಂಧಗಳು ಹುಟ್ಟಿಕೊಳ್ಳುವುದಕ್ಕೆ ವರ್ಷ ವರ್ಷಗಳ ಕಾಲ ಕೂತು ತೂಗಿ ಅಳೆದು ಅವುಗಳನ್ನು ನಿರ್ವಹಿಸಬೇಕಾದ ಅಗತ್ಯತೆ‌ ಇರುವುದಿಲ್ಲ. ಸರಿಯಾದ ಸಂದರ್ಭ ಮತ್ತು ಮನೋಭೂಮಿಕೆ ಸರಿಯಾದ ಸಮಯದಲ್ಲಿ ಒಂದಕ್ಕೊಂದು ಇದಿರಾದಾಗ ಬೇಡ ಬೇಡವೆಂದರೂ ಸಂಬಂಧಗಳು 'ಗಂಟು' ಬೀಳುತ್ತವೆ. ಹಾಗಾಗಿ ಮನುಷ್ಯನ ಬದುಕಿನಷ್ಟು ಸಂಕೀರ್ಣವಾದ ಇನ್ನೊಂದು ಬದುಕು ಬಹುಶಃ ಇರಲಿಕ್ಕಿಲ್ಲ. ಕಾರಣ, ಒಂದೊಂದು ಭಾವವೂ ಒಂದೊಂದು ದಿಕ್ಕಿಗೆ ಎಳೆದೊಯ್ಯಬಲ್ಲ ಸಾಮರ್ಥ್ಯ ಹೊಂದಿರುವಂಥವುಗಳು. ಮತ್ತೆ ಮತ್ತೆ ಎಳೆ ತಂದು ಒಂದೇ ತಂತಿಗೆ ಜೋಡಿಸಬೇಕಾಗಿರುವುದು ನಮ್ಮ ಹಾಡಿನ ಪಾಡು.

ಈ ಕಾದಂಬರಿಯನ್ನು ಓದುತ್ತಿದ್ದಾಗ ತುಂಬಾ ಕಡೆ ಇದು ಸಿನೆಮಾವಾದರೆ ಎಷ್ಟು ಚೆಂದ ಅಂತ ಅನಿಸಿದ್ದಿದೆ. ಕೆಲವು ಸನ್ನಿವೇಶಗಳನ್ನು ಅಷ್ಟು ವೈಭವೋಪೇತವಾಗಿ ಅಕ್ಷರಗಳಲ್ಲೇ ಲೇಖಕರು ಕಟ್ಟಿಕೊಟ್ಟಿದ್ದಾರೆ. ಅದು ಅವರ ಭಾಷೆಗಿರುವ ಗಟ್ಟಿತನ. ಕೆಲವು ಮೈನವಿರೇಳಿಸುವ ಸಂಗತಿಗಳೂ ಇವೆ ನಮ್ಮ ನಮ್ಮ ಕಲ್ಪನಾಶಕ್ತಿಯನ್ನು ಆಧರಿಸಿ! ಕೆಲವು ಕಡೆ ಸ್ವಲ್ಪ ನಾಟಕೀಯತೆಯೂ ಇರುವುದು ಕತೆಯ ಬೆಳವಣಿಗೆಗೆ ಅಂತಲೇ ಆದರೂ, ವಾಸ್ತವದ ನೆಲೆಗಟ್ಟಿನಲ್ಲಿ ಸರಿಯಾಗಿ ಕೂರದೇ ಒದ್ದಾಡುತ್ತವೆ. ಉದಾಹರಣೆಗೆ, ಜಗತ್ತಿನ ಅನೇಕ ಸಂಗತಿಗಳ ಕುರಿತು ಗೊತ್ತಿರುವ ವ್ಯಕ್ತಿಗೆ ಸರಿ ಸುಮಾರು ಒಂದೇ ಎನ್ನಬಹುದಾದ ತನ್ನದೇ ರಂಗದ ಪ್ರಸಿದ್ಧ ಹೆಸರೊಂದು ತಿಳಿಯದೇ ಇರುವುದು. ಎಲ್ಲರಿಗೂ ಎಲ್ಲವೂ ತಿಳಿದಿರಲೇಬೇಕು ಅಂತೇನಿಲ್ಲ , ಸಚಿನ್ ತೆಂಡೂಲ್ಕರ್ ಯಾರೆಂದು ತನಗೆ ಗೊತ್ತೇ ಇಲ್ಲ ಅಂತ ಮರಿಯಾ ಶರಪೋವಾ ಹಿಂದೊಮ್ಮೆ ಹೇಳಿದಾಗ ಬಹಳಷ್ಟು ಜನ ಸಿಟ್ಟಿಗೆದ್ದಿದ್ದು ನಮ್ಮ ಕಣ್ಣ ಮುಂದಿದೆ. ಆದರೆ, ಯಾವಾಗ ಪಾತ್ರವೊಂದರ ಕಟ್ಟುವಿಕೆ 'ಬಹಳಷ್ಟು ತಿಳಿದಿದೆ' ಅನ್ನುವುದನ್ನೇ ಮೂಲವಾಗಿಸಿಕೊಂಡಿರುತ್ತದೋ, ಆಗ 'ಗೊತ್ತಿಲ್ಲ' ಅನ್ನುವುದು ದುರ್ಬಲವೂ, ಬಾಲಿಶವೂ ಅಂತನ್ನಿಸಿದರೆ ಓದುಗನ ತಪ್ಪಲ್ಲವೆಂದು ಮನ್ನಿಸಬೇಕಾಗಿ ಕೋರಿಕೆ!

ಇನ್ನೂ ಬಹಳಷ್ಟನ್ನು ಈ ಕೃತಿಯ ಕುರಿತಾಗಿ ಹೇಳಬೇಕಿತ್ತು; ಆದರೆ, ಕತೆಯ ಅಂಶಗಳನ್ನು ಇಷ್ಟೇ ಇಷ್ಟು ಕೂಡಾ ಬಿಟ್ಟುಕೊಡುವುದಕ್ಕೆ ಮನಸ್ಸಿಲ್ಲದ ಕಾರಣ ಜಾಸ್ತಿ ಹೇಳದೇ‌ ನಿಲ್ಲಿಸುವೆ. ಒಂದು ಕೃತಿ ಒಳ್ಳೆಯದೋ ಕೆಟ್ಟದ್ದೋ, ಸಾಮಾನ್ಯದ್ದೋ ಅಸಾಮಾನ್ಯದ್ದೋ ಅನ್ನುವುದನ್ನು ತೀರ್ಮಾನಿಸುವುದಕ್ಕೂ ಮೊದಲು ಆ ಕೃತಿಯ ಕುರಿತಾಗಿ ಚರ್ಚಿಸೋಣ, ಆ ಕೃತಿಯನ್ನು ಪರಿಚಯಿಸೋಣ, ಆ ಕೃತಿಯನ್ನು ನಮ್ಮದಾಗಿಸಿಕೊಳ್ಳುವ ಪ್ರಯತ್ನ ಮಾಡೋಣ. ಎಲ್ಲವೂ ಎಲ್ಲರಿಗೂ ಇಷ್ಟವಾಗಲೇಬೇಕು ಅಂತೇನಿಲ್ಲ. ಸಾಹಿತ್ಯವೇ ಆಗಿರಲಿ, ವ್ಯಕ್ತಿತ್ವವೇ ಆಗಿರಲಿ ಗಹನವಾದಷ್ಟೂ ದ್ವಂದ್ವಗಳು ಹೆಚ್ಚುತ್ತವೆ ಮತ್ತು ಅಂಥ ದ್ವಂದ್ವಗಳಲ್ಲೇ ಯೋಚನೆಗಳು ಕಡೆಯಲ್ಪಡುತ್ತವೆ. ಕಡೆದಷ್ಟೂ ಸಂಕೀರ್ಣವಾಗುತ್ತವೆ. ಸಂಕೀರ್ಣತೆಗೂ ಒಂದು ಸೌಂದರ್ಯವಿದೆ; ಮಾನವ ಜನಾಂಗದಂತೆಯೇ!

- 'ಶ್ರೀ'
   ತಲಗೇರಿ