ಶನಿವಾರ, ಜುಲೈ 23, 2022

'ಒಂದು ವಿಳಾಸದ ಹಿಂದೆ' ಎಷ್ಟೆಲ್ಲಾ ಕತೆಗಳು...

 



'ಒಂದು ವಿಳಾಸದ ಹಿಂದೆ' ಎಷ್ಟೆಲ್ಲಾ ಕತೆಗಳು... 

ನಿಜವಾಗಿ ಹೇಳಬೇಕೆಂದರೆ ಕತೆ, ಕಾದಂಬರಿ, ಕವಿತೆ ಇವು ಗಂಭೀರವಾಗಿದ್ದರೆ ಅವಕ್ಕೆ ಗಂಭೀರ ಓದುಗರೂ ಬೇಕಾಗುತ್ತಾರೆ. ಆದರೆ, ಕತೆಯಷ್ಟು ಕಥನವನ್ನೂ ಅಥವಾ ಸಂ'ಗತಿ'ಯನ್ನೂ ಹೊಂದಿರದ, ಕವಿತೆಯಷ್ಟು ವಕ್ರತೆಯೂ ಇಲ್ಲದ, ಕಾದಂಬರಿಯಷ್ಟು ಗಹನವಲ್ಲದ, ಆದರೆ ಈ ಎಲ್ಲವನ್ನೂ ಚೂರು ಚೂರೇ ಮೇಳೈಸಿಕೊಂಡು ಹುಟ್ಟಿಕೊಳ್ಳುವ ಬರಹಗಳು ಬಹಳಷ್ಟು ಜನರನ್ನು ತಲುಪುವಲ್ಲಿ ಯಶಸ್ವಿಯಾಗುತ್ತವೆ. ಹದವಾದ ತಿಳಿಹಾಸ್ಯ, ಒಂದಷ್ಟು ಗಟ್ಟಿ ವಿಚಾರಗಳು, ಒಂದಷ್ಟು ರಂಜನೆ, ಒಂದಷ್ಟು ಆತ್ಮೀಯ ಕಾಲಹರಣ ಇತ್ಯಾದಿಗಳಿಂದೊಡಗೂಡಿ ನಿತ್ಯದ ಬದುಕಿನಿಂದಲೇ ಆಯ್ದುಕೊಂಡ ಅಥವಾ ಆಯ್ದುಕೊಂಡಂತೆ‌ ಅನಿಸಬಹುದಾದ ಸಂಗತಿಗಳನ್ನಿಟ್ಟುಕೊಂಡು ಬರೆಯಬಹುದಾದ ಪ್ರಕಾರ‌ ಲಲಿತ ಪ್ರಬಂಧ. ಮನಸ್ಸಿಗೆ ಹಿತವಾಗಬಹುದಾದ,‌ ಹತ್ತಿರವಾಗಬಹುದಾದ ಹಾಗೂ ಮನಸ್ಸನ್ನು ಹಗುರಗೊಳಿಸಬಹುದಾದ ಭಾವಗುಚ್ಛ ಅಂತಂದರೆ ಪೂರಾ ತಪ್ಪಾಗಲಿಕ್ಕಿಲ್ಲ ! ಅಂಥ ಲಲಿತ ಪ್ರಬಂಧಗಳ ಪುಸ್ತಕ 'ಒಂದು ವಿಳಾಸದ ಹಿಂದೆ', ಬರೆದವರು ಸ್ಮಿತಾ ಅಮೃತರಾಜ್, ಸಂಪಾಜೆ. 

ಎರಡು ವರ್ಷಗಳ ಹಿಂದೆ ಈ ಹೆಸರು ಕೇಳಿದಾಗ, ಮೊದಲೆಲ್ಲೋ‌‌ ಕೇಳಿದ್ದೇನಲ್ಲಾ ಅಂತ‌ ಅನ್ನಿಸೋದಕ್ಕೆ ಶುರುವಾಯಿತು. ಬಹುಶಃ ನಾನು ಕನ್ನಡದ‌ ವಾರಪತ್ರಿಕೆಗಳನ್ನು ಓದಲು ಶುರುಮಾಡಿದಾಗಿನಿಂದಲೂ ಅವರು ಬರೆಯುತ್ತಲೇ‌ ಇದ್ದಾರೆ! ಅವರಿಗೆ ಅಷ್ಟು ವಯಸ್ಸಾಯಿತು ಅಂತಲ್ಲ ಮತ್ತೆ ಹ್ಞ! ( ಇದನ್ನು ಅವರು ಓದಿದರೆ "ಏನಪ್ಪಾ ನಿನ್ ತರಲೆ" ಅಂತ ಮುದ್ದಾಗಿ ನಗ್ತಾರೆ ಖಂಡಿತಾ!) ಅಷ್ಟು ದೀರ್ಘಕಾಲದ ಬರವಣಿಗೆಯ ಹಿನ್ನೆಲೆಯಿರುವವರು. ಕವಿತೆ ಅವರ ಮೊದಲ ಆಯ್ಕೆಯಾದರೂ, ಲಲಿತ‌ ಪ್ರಬಂಧದಲ್ಲಿಯೂ ಸಾಹಿತ್ಯ ಕೃಷಿ ಮಾಡಿದ್ದಾರೆ. ಅದರ ಜೊತೆಗೆ ಕೃಷಿ ಅನ್ನುವ ಕೃಷಿಯನ್ನೂ ಮಾಡಿದ್ದಾರೆ. ತಾನು ಬರಹಗಾರ್ತಿ ಅನ್ನುವುದಕ್ಕೂ ಮೊದಲು ಅವರು ಹೇಳುವುದು ನಾನು ಗೃಹಿಣಿ, ಕೃಷಿಕ ಮಹಿಳೆ. ಒಂದು ಸಂವಾದದಲ್ಲಿ ಅವರದ್ದೊಂದು ಮಾತಿದೆ; "ಅಡುಗೆ ಮನೆಯ ಕಿಟಕಿಯನ್ನೇ ವಿಶಾಲವಾಗಿ ಮಾಡ್ಕೊಂಡು ಪ್ರಪಂಚವನ್ನು ನೋಡ್ಲಿಕ್ಕೆ ನಮಗೆ ಇವತ್ತು ಬರೆಹದ ಮೂಲಕ‌ ಸಾಧ್ಯ ಆಗಿದೆ ಅನ್ನಿಸ್ತದೆ". ಇದರದ್ದೇ ಮುಂದುವರೆದ ಭಾಗವಾಗಿ, ಇನ್ನೊಂದು ಸಂದರ್ಶನದಲ್ಲಿ ಅವರು ಹೇಳಿದ ಮಾತು, "ನಾನು ಅಡುಗೆ ಮನೆ ಮತ್ತು ತೋಟದ ಮೂಲಕ ಇಡೀ ವಿಶ್ವವನ್ನು ನೋಡಲಿಕ್ಕೆ ಬಯಸ್ತೇನೆ". ಅಡುಗೆಮನೆಯ ಕಿಟಕಿ ಹಾಗೂ ತೆರೆದುಕೊಳ್ಳುವ ತೋಟ ಇವೆರಡೂ ಈ ಅಭಿವ್ಯಕ್ತಿಗೆ, ವಿಶ್ವಮಾನವತೆಯ ತತ್ವಕ್ಕೆ ಹೊಸ ದನಿಯನ್ನು ಕೊಡುತ್ತಿವೆ ಅಲ್ವಾ. 

ಈಗೊಂದೆರಡು ವರ್ಷಗಳಿಂದ ವೈಯಕ್ತಿಕ ಕಾರಣಗಳಿಗಾಗಿ ನಾನು ಪುಸ್ತಕದ ಹಾರ್ಡ್ ಕಾಪಿ ಕೊಳ್ಳುವುದನ್ನು ಬಿಟ್ಟಿದ್ದೇನೆ. ಹಾಗಾಗಿ ಯಾರಾದರೂ ಪುಸ್ತಕ ಕಳುಹಿಸುತ್ತೇನೆ ಅಂದಾಗ ಏನು ಹೇಳಬೇಕೆಂದು ಗೊತ್ತಾಗದೇ ಒದ್ದಾಡುವುದೂ ಇದೆ. ಜೊತೆಗೆ ಯಾವ ಯಾವ ಪುಸ್ತಕಗಳನ್ನು ಓದಬೇಕು ಅನಿಸುತ್ತದೋ ಆ ಲೇಖಕರ ಬಳಿ ಇ-ಬುಕ್ ಅನ್ನು ಕೂಡಾ ಪ್ರಕಟಿಸಿ ಅಂತ ದುಂಬಾಲು ಬೀಳುವುದಕ್ಕೆ ಶುರು ಮಾಡಿದ್ದೇನೆ. 'ಒಂದು ವಿಳಾಸದ ಹಿಂದೆ' ಈ ಪುಸ್ತಕವನ್ನು ಅವರು ಕಳುಹಿಸಿ ಒಂದು ವರ್ಷದ ಮೇಲಾಯಿತು. ನನ್ನ ಓದು ಸ್ವಲ್ಪ‌ ನಿಧಾನ. ಈ ಪುಸ್ತಕವನ್ನು ಶುರುವಿನಲ್ಲಿ ರಕ್ಷಾಪುಟ, ಅರ್ಪಣೆ, ಮುನ್ನುಡಿ, ಮೊದಲ ಬರೆಹ ಹೀಗೇ ಓದುತ್ತಾ ಹೋದೆ. ಆಮೇಲೆ,‌ ಒಂದು ನಾಲ್ಕು ಬರೆಹಗಳನ್ನು ಓದಿದ ಮೇಲೆ ನನಗೆ ಬೇರೆ ಇನ್ನ್ಯಾವುದನ್ನೋ ಓದುವ ಮನಸ್ಸಾಯಿತು. ಈ ಪುಸ್ತಕ ಚೆನ್ನಾಗಿರಲಿಲ್ಲ ಅನ್ನುವ ಕಾರಣಕ್ಕಾಗಿ ಅಲ್ಲ , ಒಂದೇ ಸಲಕ್ಕೆ ಎರಡು ಮೂರು ಪುಸ್ತಕಗಳನ್ನು ಒಟ್ಟೊಟ್ಟಿಗೆ ಓದುವ ಅಭ್ಯಾಸವಿದೆ ಅಷ್ಟೇ!. ಅದಾದ ಮೇಲೆ ಸ್ವಲ್ಪ‌ ತಿಂಗಳುಗಳ ನಂತರ ಈ ಪುಸ್ತಕವನ್ನು ಮತ್ತೆ ಕೈಗೊತ್ತಿಕೊಂಡೆ, ಹಾಗೂ ಈ ಸಲ ಓದಿದ್ದು ಕೊನೆಯ ಬರೆಹದಿಂದ ಮೊದಲ ಬರಹದ ಕಡೆಗೆ. ಅವರ 'ಮೂಗುತಿ ಮುಂಭಾರ' ಪ್ರಬಂಧವನ್ನು ಓದಿದ‌ ಮೇಲೆ‌ ಪುಸ್ತಕದ ಹಿಂಬದಿಯಲ್ಲೇ ಇರುವ ಅವರ ಫೋಟೋ‌ ನೋಡಿ ಬಂದೆ ಒಮ್ಮೆ! 

ಪುರುಷ ಬರಹಗಾರ ಅದೆಷ್ಟೇ ಪರಕಾಯ ಪ್ರವೇಶ ಮಾಡಿ ತಾನು ಸ್ತ್ರೀಸಂವೇದನೆಗಳ‌ ಕುರಿತಾಗಿ ಬರೆಯುತ್ತೇನೆಂದರೂ, ಬರಹಗಾರ್ತಿಯರು ಅದನ್ನು ಬರೆದಾಗ ಅದಕ್ಕೆ ಸಿಗಬಹುದಾದ ಸಹಜತೆಯೇ ಬೇರೆ. ಅಲ್ಲಿ ತಾನಲ್ಲದ್ದನ್ನು ಆರೋಪಿಸಿಕೊಂಡು ಬರೆಯಬೇಕಾದ ಪ್ರಸಂಗವಿಲ್ಲ. ಬರೀ ಸ್ತ್ರೀಸಂವೇದನೆಗೆ ಮಾತ್ರ ಸೀಮಿತವಾ ಅದರಾಚೆಗೆ ಏನೂ ಇಲ್ವಾ ಅಂತೊಂದು ಪ್ರಶ್ನೆ ಬರಬಹುದು. ಅದು ಹಾಗಲ್ಲ; ಅದರಾಚೆಗೂ ಇರುತ್ತದೆ ಹಾಗೂ ಅದೇ ಎಲ್ಲವೂ ಆಗಿರುವುದಿಲ್ಲ. ಆದರೆ, ಅಲ್ಲೊಂದು ನವಿರಾದ ಸೂಕ್ಷ್ಮವಿರುತ್ತದೆ. ಅದು ಈ ಸಂವೇದನೆಗೆ ಅತ್ಯಂತ ಮುಖ್ಯವಾಗಿ ಬೇಕಾದ ಗುಣಲಕ್ಷಣ ಮತ್ತು ಈ ಸೂಕ್ಷ್ಮ ತೆರೆಯಬಹುದಾದ ಲೋಕ ನಮಗೆ ಅಷ್ಟು ಪರಿಚಿತವಲ್ಲದ್ದು. ಆಸಕ್ತಿ ಇನ್ನಷ್ಟು ಹೆಚ್ಚಾಗುವುದಕ್ಕೆ ಇದಕ್ಕಿಂತ ಬೇರೆ ಕಾರಣಗಳು ಬೇಕಿಲ್ಲ ಅಲ್ವಾ. "ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗುವ ಒಗ್ಗರಣೆಯ ಕರಿಬೇವು, ಬೆಳ್ಳುಳ್ಳಿ, ಮೆಣಸಿನ ಚೂರು ತಟ್ಟೆಕೊನೆಯಲ್ಲಿಯೇ ಉಳಿದುಬಿಡುವಾಗ ಅವುಗಳಿಗಾಗುವ ಬೇಗುದಿ ನಮಗಲ್ಲದೇ ಇನ್ನ್ಯಾರಿಗೆ ಅರ್ಥವಾಗಲು ಸಾಧ್ಯ" - ಅಡುಗೆಕೋಣೆಯಲ್ಲಿರುವ ಹೆಣ್ಣುಮಕ್ಕಳ‌ ಕತೆಯನ್ನು ಒಂದೇ ಸಾಲಲ್ಲಿ ಹೇಳಿದ ಮಾತು ಇದು. ಇಡೀ ಮನೆಯನ್ನು ಸಂಬಾಳಿಸುವ ಹೆಣ್ಣು, ಮನೆಯಲ್ಲಿ ಕೈಗೊಳ್ಳಬೇಕಾದ ನಿರ್ಧಾರದ ವಿಷಯ ಬಂದಾಗ ಎಂದಿಗೂ ನೇಪಥ್ಯದಲ್ಲೇ.. ಇದು ಇಡೀ ಮನೆಗೊಂದು ಘಮವನ್ನೂ, ಅಲ್ಲಿನ ಮನಸ್ಸುಗಳಿಗೆ ಆಹ್ಲಾದವನ್ನೂ‌ ತಂದುಕೊಡುವ ಹೆಣ್ಣಿನ ಸ್ಥಿತಿ. 

ಇಡೀ ಪುಸ್ತಕದ ತುಂಬಾ ಎದ್ದು ಕಾಣುವುದು‌ ಪ್ರಾಮಾಣಿಕತೆ. ತಾನು ಅಷ್ಟು ವರ್ಷಗಳಿಂದ ಬರೆಯುತ್ತಿದ್ದೇನೆ ಅನ್ನುವ ಹಮ್ಮು ಚೂರೂ ಇಲ್ಲ. ಕೆಲವೊಂದು ಕಡೆಗಳಲ್ಲಂತೂ ತನಗೆ ಈ ಹೊಸ ಯುಗದ ಹಲವು ಸಂಗತಿಗಳು ಗೊತ್ತಿಲ್ಲ ಅಂತ ಒಪ್ಪಿಕೊಂಡು ಅದನ್ನು ಸ್ವೀಕರಿಸುವ ಆ ಮನೋಭಾವ ಬಹುಶಃ ಈ ಬರಹಗಳು ಇನ್ನಷ್ಟು ಆಪ್ತವಾಗುವುದಕ್ಕೆ ಮತ್ತಷ್ಟು ಕಾರಣಗಳನ್ನು ಕೊಡುತ್ತದೆ. ಯಾವ ಪ್ರಚಾರವನ್ನು ಬಯಸದೆಯೇ ವರುಷ ವರುಷಗಳವರೆಗೆ ಬರೆಯುವುದು ಸುಲಭವಲ್ಲ. "ರೀಚ್ ತುಂಬಾ ಕಡಿಮೆ ಇದೆ" ಅನ್ನುವ ಈ ಕಾಲದಲ್ಲಿ, ಅದ್ಯಾವುದರ ಚಿಂತೆಯೂ ಇಲ್ಲದೇ ಬರೆಯುವವರನ್ನು ಕಂಡಾಗಲೆಲ್ಲಾ 'ಸಂತೆಯಲ್ಲಿ ನಿಂತ ಸಂತ'ನೇ ಸೂಕ್ತ ಪದ ಅವರ ಕುರಿತಾಗಿ ಹೇಳುವುದಕ್ಕೆ ಅಂತ ಅನಿಸುತ್ತದೆ. ಕಾಲಘಟ್ಟಗಳು ಹಾಗೂ ಅವುಗಳ ಬದಲಾವಣೆಗಳ ಕುರಿತಾಗಿ ಬಹಳಷ್ಟನ್ನು ಬರಹಗಾರ್ತಿ ದಾಖಲಿಸಿದ್ದಾರೆ ಈ ಪುಸ್ತಕದಲ್ಲಿ. ಒಂದೊಂದು ಸಲ ಕಳವಳದಂತೆ, ಇನ್ನು ಕೆಲವು ಸಲ ಈ ನವಯುಗ ಒದಗಿಸಿಕೊಟ್ಟ ಸೌಲಭ್ಯಗಳನ್ನು ಸಂಭ್ರಮಿಸುವಂತೆ. ಇಡೀ ಪುಸ್ತಕದುದ್ದಕ್ಕೂ ಅವರು ಉಲ್ಲೇಖಿಸುವ "ಅತಿ ರಂಜಕ ಕತೆಗಳಾಗಿತ್ತವೆಯೇನೋ ಅನ್ನುವ ಭಯ" ಅನ್ನುವ ವಾಕ್ಯ, ನಮ್ಮೀ ಹೊಸ ಜನಾಂಗ ಕಳೆದುಕೊಂಡ ಆ ಸಹಜ ಬದುಕಿನ ಕುರಿತಾಗಿ ಹೇಳುತ್ತದೆ. ಅಂದರೆ ಆಗ ಹೀಗೆಲ್ಲಾ ಇತ್ತು ಅಂದರೆ, ಅದನ್ನು ಹಾಗೂ ಆ ಸಹಜತೆಯನ್ನು ಅಸಹಜವೆಂಬಂತೆ ನೋಡಬೇಕಾದಲ್ಲಿಗೆ ನಾವು ಬದಲಾಗಿಹೋಗಿದ್ದೇವೆ. ನಾಗರಿಕತೆ ಅಥವಾ ಒಂದೋ ಎರಡೋ ತಲೆಮಾರು ಸಾಗಿಬಂದ ಹಾದಿಯನ್ನು ನಂಬುವುದಕ್ಕೂ ನಮ್ಮಿಂದ ಸಾಧ್ಯವಾಗ್ತಿಲ್ಲ ಅನ್ನುವಷ್ಟರ ಮಟ್ಟಿಗೆ ಇಲ್ಲಿ ಹಲವು ಸಂಗತಿಗಳು ಜರುಗಿಹೋಗಿವೆ ಅನ್ನುವ ಆತಂಕವೂ ಇಲ್ಲಿದೆ. ನಮ್ಮ ಅಮ್ಮನೋ, ಅಕ್ಕನೋ ನಮ್ಮ ಪಕ್ಕವೇ ಕೂತು ಈ ಎಲ್ಲವನ್ನೂ ಹೇಳುತ್ತಿರುವಂಥ ಆತ್ಮೀಯತೆಯೇ ಈ ಪುಸ್ತಕದ ಜೀವಾಳ.

ಕತೆಯಂಥ ನಿಜಸಂಗತಿಯೊಂದು ಕತೆಯಂತೆ ಬಂದುಹೋಗುತ್ತದೆ ಈ ಬರೆಹಗಳಲ್ಲಿ. ಒಂದು ಪ್ರದೇಶದ ಜನಜೀವನ ಹಾಗೂ ಅದರ ದಾಖಲಾತಿ ಅದೆಷ್ಟು ಮುಖ್ಯವೆಂದರೆ ಮನುಷ್ಯರು ಹೀಗೆಲ್ಲಾ ಬದುಕಿದ್ದರಾ ಅಂತ ಮುಂದೊಂದು ದಿನ ನಮ್ಮದೇ ಜನಾಂಗಗಳು ಆಶ್ಚರ್ಯಪಡಬಹುದು. ಈ ಪುಸ್ತಕ‌ ಹಿಡಿದು ಕೂತರೆ ಬಹುತೇಕ ಬಾರಿ ನಾವು ನಮ್ಮ ನಮ್ಮ ಊರುಗಳ ನೆನಪುಗಳೆಡೆಗೆ ಹೊರಳಿಕೊಳ್ಳುತ್ತೇವೆ. ನಮ್ಮ ನಮ್ಮ ಬಾಲ್ಯ, ಹದಿಹರೆಯದ ದಿನಗಳನ್ನು ನೆನೆಯುತ್ತೇವೆ. ಆಗಲೇ ಒಂದು ಜೋರು ಮಳೆ ಬಂದು ನಿಂತು, ಮಬ್ಬು ಮಬ್ಬು ವಾತಾವರಣದಲ್ಲಿ ಯಾವುದೋ ಬೆಚ್ಚಗಿನ ಅನುಭವವೊಂದು ಬಂದು ನಮ್ಮನ್ನು ಆಲಂಗಿಸಿ, ಬದುಕು ಚೆಂದವಿದೆ, ಇನ್ನಷ್ಟು ಸಂಭ್ರಮಿಸು ಅಂದ ಹಾಗೆ ಭಾಸವಾಗುತ್ತದೆ. ಲೇಖಕಿಯೇ ಹೇಳುವ ಹಾಗೆ, "ಕೊಡೆ ಮಳೆಯಲ್ಲಿ ನೆನೆಯುವುದೇ ಅದರ ಬದುಕಿನ ಭಾಗ್ಯ" 

- 'ಶ್ರೀ'
   ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ