ಗುರುವಾರ, ಜೂನ್ 29, 2023

ವಾತ್ಸಲ್ಯದ ವಿಳಾಸಕ್ಕೊಂದು ಪತ್ರ


 
ವಾತ್ಸಲ್ಯದ ವಿಳಾಸಕ್ಕೊಂದು ಪತ್ರ


ಸಖೀ ರಾಧೆ,


ಹಿಂದೊಮ್ಮೆ ಹೀಗೇ ದಟ್ಟ ಕತ್ತಲೆಯ ಮೋಡಗಳು ಆಕಾಶದಲ್ಲಿ ಆವರಿಸಿ, ಇಡೀ ವಾತಾವರಣ ಒಂದು ಗಾಢವಾದ ಆತ್ಮೀಯತೆಯನ್ನೂ, ನಿರೀಕ್ಷೆಯನ್ನೂ, ಆಹ್ಲಾದಕತೆಯನ್ನೂ, ತಲ್ಲಣವನ್ನೂ ಕಟ್ಟಿಕೊಟ್ಟಂಥ ಸಮಯದಲ್ಲಿ, ಕೊನೆಗೆ ಕಪ್ಪೆಲ್ಲವೂ ನೀರಾಗಿ, ಭೂದೇವಿಯ ಎದೆಯೊಳಗಿಳಿದಂಥ ಸಂದರ್ಭದಲ್ಲಿ ನಿನಗೆ ಪತ್ರ ಬರೆದಿದ್ದೆ. ವರ್ಷಗಳೆರಡಾದವೀಗ, ಪತ್ರ ಬರೆಯದೇ. ಕೃಷ್ಣ ಮರೆತಿರುವನು ಅಂತ ಅಂದುಕೊಂಡಿರುತ್ತೀಯೇನೋ ಅಥವಾ ಇವನನ್ನು ನಂಬಿ‌ ಕೂತರೆ ಕಾಯುವುದಷ್ಟೇ 'ಕಾಯ'ದ ಕೆಲಸ‌ ಅಂತಲೂ ನಸುನಗುತ್ತೀಯೇನೋ, ಅಥವಾ ಆಗಿನ್ನೂ ಮಳೆಗಾಲ‌ ಶುರುವಾಗಿರಲಿಲ್ಲ, ಕಪ್ಪು ಮೋಡ ಅಂತೆಲ್ಲಾ ಸುಳ್ಳು ಸುಳ್ಳೇ ಹೇಳಬೇಡ, ಬರೀ ಹೀಗೆಲ್ಲಾ ಏನೇನೋ ಹೇಳುತ್ತಲೇ ನನ್ನ ಕೋಪವನ್ನು ಬೇರೆಡೆ ಸೆಳೆಯುವುದಕ್ಕೆ ಯತ್ನಿಸಬೇಡ ಅಂತ ನೀನು ಸಿಟ್ಟಾಗುತ್ತಿಯೇನೋ ಅಂತೆಲ್ಲಾ ನಾನು ಕಲ್ಪಿಸಿಕೊಳ್ಳುವುದರಲ್ಲೇ ಎಷ್ಟು ಚೆಂದದ ಸುಖವಿದೆ ತಿಳಿದಿದೆಯಾ ನಿನಗೆ? ಹಾಗೆಯೇ, ಒಂದು ವೇಳೆ ನೀನು ಕೋಪಿಸಿಕೊಂಡರೂ,‌ ಅದೆಷ್ಟು ಹೊತ್ತು? ಪಾಪದವನಲ್ಲವಾ ನಾನು? ಏನೋ ಹೆಚ್ಚು ಕಡಿಮೆ ಆಗುತ್ತದಲ್ಲವಾ, ಏನೋ ಸೈರಿಸಿಕೊಳ್ಳಬೇಕಪ್ಪಾ ಅಂತೆಲ್ಲಾ ಹೇಳಿ ಕಿವಿ ಹಿಡಿದುಕೊಂಡು, ಮುಖ ಸಣ್ಣಗೆ ಮಾಡಿಕೊಂಡು ನಿನ್ನೆಡೆಗೆ ನೋಡುತ್ತಾ ನಿಲ್ಲುವುದು ನನಗೆ ಹೊಸದಲ್ಲ ಬಿಡು. ಕೃಷ್ಣ ಹಾಗೆ ನೋಡಿದಾಗಲೆಲ್ಲಾ ವಾತ್ಸಲ್ಯದ ತೊಟ್ಟಿಲೇ ನೀನಾಗುವುದೂ ಹೊಸದಲ್ಲ ಬಿಡು! ವಾತ್ಸಲ್ಯ ಅಂದಾಗಲೆಲ್ಲಾ ಮಮತೆ ತುಂಬಿದ ಅಮ್ಮ ಯಶೋದೆಯ ಕಣ್ಣುಗಳು ಕಣ್ಣ ಮುಂದೆ ಬರುತ್ತವೆ. ಅರಿವಿಲ್ಲದೆಯೇ ತುಟಿ ಬಿರಿಯುತ್ತದೆ, ಸಂಭ್ರಮದ ನಗೆ ಹೂವು ತಾನಾಗೇ ಅರಳುತ್ತದೆ. ಎದೆಯಲ್ಲೊಂದು ಅಲೌಕಿಕ ಸಂಭ್ರಮ ಮೊದಲಾಗುತ್ತದೆ. ಅಮ್ಮನೆಂದರೆ ಹಾಗೆಯೇ ಅಲ್ಲವಾ ರಾಧಾ.. 


ನನ್ನದು ಬಹಳ ಭಿನ್ನವಾದ ಪರಿಸ್ಥಿತಿಯಾಗಿತ್ತು ನೋಡು. ಕಾರಾಗೃಹದಲ್ಲಿ ಹುಟ್ಟಿ, ಹುಟ್ಟಿದ ಕೆಲವೇ ಕ್ಷಣಕ್ಕೆ ಹೆತ್ತಮ್ಮನಿಂದ ದೂರವೇ ಉಳಿಯಬೇಕಾದ ಸ್ಥಿತಿ. ಹುಟ್ಟಿದ ಮಗುವಿಗೆ ಅಮ್ಮನ ಎದೆ ಹಾಲೇ ತಾನೇ ಈ ಜಗತ್ತನ್ನು ನೋಡುವ ಶಕ್ತಿ ಕೊಡುವುದು, ಎದ್ದು ನಿಲ್ಲುವ, ನಿಲ್ಲುತ್ತಲೇ ನಡೆಯುವ, ನಡೆಯುತ್ತಲೇ ಓಡುವ,‌ ಕುಣಿಯುವ, ನರ್ತಿಸುವ, ಸಂಭ್ರಮಿಸುವ ಚೈತನ್ಯ ಕೊಡುವುದು. ಹಸಿ ಮೈಯ ತಾಯಿ ಕಾರಾಗೃಹದಲ್ಲೇ ಉಳಿದಳು. ಬೇರ್ಪಟ್ಟ ನಾನು ಬದುಕಿಗಾಗಿ ಇನ್ನೊಬ್ಬರ ಮನೆಯನ್ನು ಆಶ್ರಯಿಸಿದೆ. ವಿಚಿತ್ರ ಅನ್ನಿಸುತ್ತದಲ್ಲವಾ? ಈ ಜಗತ್ತು ಅದನ್ನು ಮಾಯೆ ಅನ್ನುವುದೋ, ಲೀಲೆ ಅನ್ನುವುದೋ ಅದು ಜಗತ್ತಿಗೆ ಬಿಟ್ಟಿದ್ದು. ಹಾಲುಣಿಸುವುದೆಂದರೆ ಅಮ್ಮ ಯಶೋದೆಗೆ ಅದೆಂಥ ಸಂಭ್ರಮ. ನಾನು ಇಂಥ ಸಮಯ ಅಂಥ ಸಮಯ ಅಂತೆಲ್ಲಾ ಇಲ್ಲದೇ ಕೂಗುತ್ತಿದ್ದೆ. ಅಮ್ಮ ಯಶೋದೆ ಕೆಲವೊಮ್ಮೆ ಹಾಲುಣಿಸುತ್ತ ಊಟ ನಿದ್ದೆ ಮನೆಗೆಲಸ ಮರೆಯುತ್ತಿದ್ದಳು. ಕೆಲವೊಮ್ಮೆ ನನ್ನನ್ನು ಮಡಿಲಲ್ಲಿ ಮಲಗಿಸಿಕೊಂಡು ಕುಳಿತಲ್ಲೇ ಗೋಡೆಗೆ ಆತು‌ ನಿದ್ದೆಹೋಗುತ್ತಿದ್ದಳು. ಆದರೆ, ನನ್ನ ಒಂದು ಮುಲುಕಾಟ ಅವಳನ್ನು ಎಚ್ಚರಾಗಿಸುತ್ತಿತ್ತು. ಕರುಳಬಂಧ ಅಮ್ಮ ದೇವಕಿಯದ್ದಾದರೂ ಆತ್ಮಬಂಧ ಅಮ್ಮ ಯಶೋದೆಯದ್ದು. ಜಗತ್ತಿನ‌ ಹೆಣ್ಣು ಮಕ್ಕಳಿಗೆಲ್ಲಾ ಈ ತಾಯ್ತನವೆನ್ನುವುದು ತಾನಾಗಿಯೇ ಬಂದುಬಿಡುತ್ತದೆ ನೋಡು. ಯಾರೋ ಹೆತ್ತ ಮಗುವಾದರೂ ತನ್ನದೇ ಇದು ಅನ್ನುವಂತೆ ಕಾಪಿಡುವ ಹೃದಯವೇನಿದ್ದರೂ ಅದು ತಾಯಿಯದು ಮಾತ್ರ. ಹೇಳಬಹುದು ನೀನು, ಅಲ್ಲಾ ಕೃಷ್ಣ, ಅಮ್ಮ ಯಶೋದೆಗೆ ನೀನು ಅವಳ ಮಗ ಅಲ್ಲವೆಂದು ತಿಳಿದಿರಲಿಲ್ಲ‌ವಲ್ಲಾ ಅಂತ. ಅದು ನಿಜವೇ ಅದರೂ, ಗೋಕುಲದ ಗೋಪಿಕೆಯರ್ಯಾರಿಗೂ ನಾನು ಅವರ ಮಗನಾಗಿರಲಿಲ್ಲವಲ್ಲ. ಆದರೆ, ಕೃಷ್ಣನಿಗೆ ಹಸಿವಾದಾಗಲೆಲ್ಲಾ‌ ಗೋಕುಲದ ಎಲ್ಲಾ ಗೋಪಿಕೆಯರಲ್ಲಿ ಎದೆಹಾಲು ಒಸರುತ್ತಿತ್ತು. ಬಹುಶಃ ಕಾರಾಗೃಹದಲ್ಲಿ ಅಮ್ಮ ದೇವಕಿಯ ಎದೆಯಲ್ಲೂ ಹೀಗೆ ಹಾಲು ಒಸರುತ್ತಿತ್ತೇನೋ, ಅವಳು ಪರಿತಪಿಸುತ್ತಲೇ ಸಮಸ್ತ ಸೃಷ್ಟಿಯಲ್ಲಿ ಬೇಡಿಕೊಳ್ಳುತ್ತಿದ್ದಳೇನೋ, ನನ್ನ ಕಂದನಿಗೆ ಹಾಲುಣಿಸಿ ದೈವಗಳೇ ಅಂತ ಕೈಮುಗಿದು..


ಜಗದೋದ್ಧಾರಕ್ಕಾಗಿ ಅವತಾರವೆತ್ತಿದವ ನಾನಾದರೂ ಅಮ್ಮ ದೇವಕಿ ಆ ಅವತಾರಕ್ಕೊಂದು ರೂಪ‌ ಕೊಟ್ಟಳು. ಇಂದು ಅದೇ ರೂಪವನ್ನಲ್ಲವಾ ಸೃಷ್ಟಿ ಕೊಂಡಾಡುವುದು, ಮೋಹಕವೆಂದು ಬಗೆಬಗೆಯಲ್ಲಿ ವರ್ಣಿಸುವುದು. ಮೋಹಗಳ ತೊರೆಯಿರಿ ಅಂತ ಹೇಳುವವ ನಾನಾದರೂ ಈ ವಾತ್ಸಲ್ಯವನ್ನು ತಿರಸ್ಕರಿಸಲಾರೆ. ನಾನ್ಯಾರೆಂದು ತಿಳಿಯದೆಯೇ ಅಮ್ಮ ಯಶೋದೆ ನನ್ನ ಬಾಲ್ಯವನ್ನು ನನಗೆ ಕಟ್ಟಿಕೊಟ್ಟಳು. ಮೊಸರ ಮಡಕೆಯಲ್ಲಿ ನಾನು ಕೈಹಾಕಿ ಬೆಣ್ಣೆ ಕದ್ದು ತಿಂದಾಗಲೆಲ್ಲಾ ಕಿವಿ ಹಿಂಡುತ್ತಿದ್ದಳು. ಆಮೇಲೆ, ಅವಳೇ ಬರಸೆಳೆದು ಅಪ್ಪಿ ಮುತ್ತಿಟ್ಟು ಮಡಿಲಲ್ಲಿ ಮಲಗಿಸಿಕೊಂಡು ಲಾಲಿ ಹಾಡುತ್ತಿದ್ದಳು. ನನ್ನ ಕಿವಿ ಹಿಂಡುವಾಗಲೆಲ್ಲಾ ಅವಳ ಕಂಗಳನ್ನು ಎದುರಿಸುವ ಧೈರ್ಯ ನನ್ನಲ್ಲಿ ಇರುತ್ತಿರಲಿಲ್ಲ. ಒಮ್ಮೆ ಮಾತ್ರ ನೋಡಿದ್ದೆ, ದೊಡ್ಡ ಕಣ್ಣು ಮಾಡಿದ್ದಳು, ಆದರೆ ಕಣ್ಣೀರಿನಿಂದ ತುಂಬಿಹೋಗಿತ್ತು. ಲಾಲಿ ಹಾಡುವಾಗ ಕೂಡಾ, ಅವಳ ಮಡಿಲಲ್ಲಿ ಮಲಗಿದ್ದ ನನ್ನ ಕೆನ್ನೆಯ ಮೇಲೆ‌ ಒಂದೆರಡು ಬಾರಿ ಬಿಸಿ ಹನಿಗಳು ಬಿದ್ದ ನೆನಪಿದೆ ನನಗೆ. ಅವಳ ಧ್ವನಿ ಕಂಪಿಸುತ್ತಿರಲಿಲ್ಲ, ಆದರೆ, ನಾನು ಮಲಗಿದೆ ಅಂತ ತಿಳಿದ ಮೇಲೆ, ಕಿವಿ ಹಿಂಡಿದ್ದಕ್ಕಾಗಿ ಬೇಸರಿಸಿಕೊಂಡು ಅಳುತ್ತಿದ್ದಳು. ನಾನು ಬೇಕಂತಲೇ‌ ನನ್ನ ಕಣ್ಣು ತಿಕ್ಕುತ್ತಿದ್ದೆ. ತಕ್ಷಣ ಏನೂ ಆಗಿಲ್ಲವೆಂಬಂತೆ ಸಾವರಿಸಿಕೊಂಡು ನಿಧಾನಕ್ಕೆ ತಲೆತಟ್ಟುತ್ತಿದ್ದಳು. ಮಣ್ಣು ತಿಂದ ನನ್ನ ಬಾಯ್ತೆರೆಸಿದಾಗ ಬ್ರಹ್ಮಾಂಡ ಕಂಡ ಮೇಲೂ ಆಕೆ ನನ್ನ ಕಿವಿ ಹಿಂಡುವುದ ಬಿಡಲಿಲ್ಲ, ಬೆತ್ತ ಹಿಡಿದ ಅವಳನ್ನು ಗೋಕುಲದ ತುಂಬಾ ಓಡುವಂತೆ ಮಾಡುವುದನ್ನು ನಾನೂ ಬಿಡಲಿಲ್ಲ. ಆಡಿದಳು, ಹಾಡಿದಳು ಅಮ್ಮ ಯಶೋದೆ ನನ್ನ ಜೊತೆ. ಗೋಪಿಕೆಯರೂ ಕಡಿಮೆ ಇರಲಿಲ್ಲ. ಅಮ್ಮ ಯಶೋದೆಗೆ ನಾನೆಂದರೆ ಬಹಳ ಪ್ರೀತಿ. ಯಾರಾದರೂ ಪದೇ ಪದೇ ನನ್ನನ್ನು ನೋಡಿದರೆ ದೃಷ್ಟಿ ಆಗಿಬಿಡುತ್ತದೆ ಅನ್ನುವ ಆತಂಕ ಅವಳಿಗೆ. ಅದರಲ್ಲೂ ಗೋಪಿಕೆಯರು ನನ್ನನ್ನು ಎವೆಯಿಕ್ಕದೇ ನೋಡುವುದನ್ನು ಅವಳು ನೋಡಿದ್ದಳು. ಹಾಗಾಗಿ ಗೋಪಿಕೆಯರೆಲ್ಲರಿಗೂ ತಾಕೀತು ಮಾಡಿದ್ದಳು, ಯಾರೂ ಕೃಷ್ಣನನ್ನು ನೋಡುತ್ತ ನಿಲ್ಲಬಾರದು. ಅವನೇನಾದರೂ ದಾರಿಯಲ್ಲಿ ಸಿಕ್ಕರೆ ತಲೆಬಗ್ಗಿಸಿಕೊಂಡು ನಡೆಯಬೇಕು ಇತ್ಯಾದಿ ಇತ್ಯಾದಿ.‌‌ ಆದರೆ, ಗೋಪಿಕೆಯರು ಅವೆಲ್ಲವನ್ನೂ ಕೇಳುವರೇ! ಬೇಕು ಬೇಕಂತಲೇ ನಾನು ಬರಲಿ ಅಂತಲೇ ಬೆಣ್ಣೆ ಮಡಕೆಗಳನ್ನು ಮೇಲೆ ಕಟ್ಟದೇ ನೆಲದ‌‌ ಮೇಲೇ ಇಡುತ್ತಿದ್ದರು. ತಮ್ಮ ಗಂಡ ಮಕ್ಕಳು ಕೇಳಿದರೆ ಖಾಲಿಯಾಗಿದೆ ಅನ್ನುತ್ತಿದ್ದ ಇವರು ನನಗಂತಲೇ ಬೇರೆ ಮಡಕೆಯನ್ನು ಅಡಗಿಸಿಡುತ್ತಿದ್ದುದೂ ಉಂಟು. ಆಮೇಲೆ, ನಾನು ಬೆಣ್ಣೆ ತೆಗೆಯುವಾಗಲೆಲ್ಲಾ‌ ಅಲ್ಲಿಯೇ ಇದ್ದರೂ ನೋಡದವರಂತೆ ಇದ್ದು, ಆಮೇಲೆ ಅಮ್ಮ ಯಶೋದೆಯ ಬಳಿಗೆ ಬಂದು ದೂರುತ್ತಿದ್ದರು. ಆಗ, ಅಮ್ಮ ಯಶೋದೆ ನನ್ನ ಕರೆದು ಎದುರಲ್ಲಿ ನಿಲ್ಲಿಸಿ ಕೇಳುವಾಗಲೆಲ್ಲಾ ತಮ್ಮ ದೂರುಗಳನ್ನು ಮರೆತು ನಗುತ್ತಾ ನಿಂತುಬಿಡುತ್ತಿದ್ದರು. ಅಮ್ಮ ಯಶೋದೆಗೆ ಗೊಂದಲ. ಕೊನೆಕೊನೆಗೆ ಅಮ್ಮ ನೀವುಂಟು ನಿಮ್ಮ ಕೃಷ್ಣನುಂಟು, ನನ್ನ ಹತ್ತಿರ ಅವನ ದೂರು ತರಬೇಡಿ ಅಂತನ್ನುವುದಕ್ಕೆ ಶುರು ಮಾಡಿದ್ದಳು. ನಿನಗಿದೆಲ್ಲಾ ಗೊತ್ತಿದೆಯಲ್ಲವಾ ರಾಧಾ? ಆತ್ಮೀಯರೊಂದಿಗೆ ಹೀಗೆ ನೆನಪುಗಳನ್ನು ಹಂಚಿಕೊಳ್ಳುವ ಸುಖಕ್ಕೆ ಬೇರೆ ಯಾವ ವ್ಯಾಖ್ಯಾನಗಳೂ ಬೇಕಿಲ್ಲ ಅಲ್ಲವಾ. ಅದರಲ್ಲೂ, ನನ್ನೆಲ್ಲಾ‌‌ ನೆನಪಿನ ಪಾಲುದಾರಳು ನೀನು. ರಾಧೆಯಿಲ್ಲದ ಕೃಷ್ಣನ ನೆನಪುಗಳು ಅಪೂರ್ಣ. ಬರೀ ನೆನಪುಗಳಲ್ಲೇ ನಾವಿರುವುದು ಈಗ ಕೃಷ್ಣಾ ಅನ್ನದಿರು. ಸಮಯದ ಹಂಗು ತೊರೆದ ನದಿಗಳ ಹಾಗೆ ಈ ನೆನಪುಗಳು. ನದಿಗಳು ಬತ್ತುತ್ತವೆ, ಉಕ್ಕುತ್ತವೆ, ಕಾಣೆಯಾಗುತ್ತವೆ ಅಂತನ್ನಬೇಡ. ನದಿ ತನ್ನ ಹರಿವನ್ನು ನೆನಪಿಟ್ಟುಕೊಳ್ಳುತ್ತದೆ. ಯಾವತ್ತೋ ಒಂದು ದಿನ ಸಮಯ ಕೂಡಿಬಂದಾಗ ಮತ್ತದೇ ಹಾದಿಯಲ್ಲಿ ಅದೆಂಥದ್ದೇ ಅಡೆತಡೆಗಳಿದ್ದರೂ ಅವೆಲ್ಲವನ್ನೂ ದಾಟಿಕೊಂಡು ಹರಿಯುತ್ತದೆ. ನನ್ನೀ ನೆನಪಿನ ನದಿಯ ಹರಿವನ್ನು ನಿರಂತರವಾಗಿಸುತ್ತಿರುವವಳು ನೀನು. ಋತು ನಾನಾದರೂ ಸ್ಪಂದಿಸುವ‌ ಪ್ರಕೃತಿ ನೀನು. ಆತ್ಮ‌ ನಾನಾದರೂ ಸ್ಮೃತಿ ನೀನು.. 


ನೆನಪು ಅಂದಾಗ ಮತ್ತೆರಡು ಘಟನೆಗಳು ಮುನ್ನೆಲೆಗೆ ಬಂದವು ನೋಡು. ನೆನಪಿದೆಯಾ ನಿನಗೆ ಪೂತನಿ ನನಗೆ ಹಾಲುಣಿಸಿದ್ದು. ಯಾವ ಅಪರಿಚಿತರಿಗೂ ನನ್ನ ಹತ್ತಿರವೂ ಹೋಗಗೊಡದ ಅಮ್ಮ ಯಶೋದೆ ಅಂದು ದಿಗ್ಭ್ರಮೆಯಿಂದ ನಿಂತುಬಿಟ್ಟಿದ್ದಳು ಪೂತನಿಯನ್ನು ನೋಡಿ. ಸೌಂದರ್ಯದ ಉಪಮೆಯೇ ಗೋಕುಲಕ್ಕೆ ಬಂದಂತೆ ಬಂದಿದ್ದಳು ಪೂತನಿ. ಬಂದವಳೇ ನಡೆದಿದ್ದು ನನ್ನ ತೊಟ್ಟಿಲ‌ ಬಳಿಗೆ. ನಾನು ಅಂದು ಕಣ್ಣು ಪಿಳಕಿಸುತ್ತಾ ಮಲಗಿದ್ದೆ. ಎರಡೂ ಕೈಗಳಲ್ಲಿ ಎತ್ತಿಕೊಂಡಳು.‌ ಒಮ್ಮೆ ನನ್ನ ಮುಖ ನೋಡಿದಳು; ದೊಡ್ದದಾಗಿ ನಿಟ್ಟುಸಿರು ಬಿಟ್ಟಳು. ವಿಷದ ಹಾಲಿಂದ ಕೊಲ್ಲಬೇಕೆಂದು ಅವಳಿಗೆ ಆಜ್ಞೆಯಾಗಿತ್ತು. ಸ್ತನಪಾನಕ್ಕಾಗಿ ಅವಳ ಸ್ತನಗಳನ್ನು ನನ್ನ ಬಾಯಿಯಲ್ಲಿಟ್ಟಳು. ನಾನು ಅವಳ ಪ್ರಾಣವನ್ನೂ ಹೀರಿದ್ದೆ. ಆ ಭಯಂಕರ ನೋವಿಗೆ ಅವಳ ಸೌಂದರ್ಯದ ಮಾರುವೇಷ ಬದಲಾಗಿ ರಾಕ್ಷಸಿಯ ನಿಜರೂಪದ ದೇಹ ಬಿದ್ದಿತ್ತು. ನಾನು ಅದರ ಮೇಲೆ ಆಟವಾಡುತ್ತಿದ್ದೆ. ಅಂದು ಆ ದೇಹವನ್ನು ಗೋಕುಲದಲ್ಲಿ ಬೆಂಕಿ ಹಾಕಿ ಸುಟ್ಟಾಗ ಸುಗಂಧವೊಂದು ಇಡೀ ವಾತಾವರಣವನ್ನು ವ್ಯಾಪಿಸಿತ್ತು. ಪೂತನಿ ಭವದ ಬದುಕಿಂದ ಮುಕ್ತಳಾಗಿದ್ದಳು. ಯಾಕೆ ಕೃಷ್ಣಾ, ಕೊಲ್ಲಲು ಬಂದವಳಿಗೆ ಮುಕ್ತಿ ಅಂತ ನೀನು ಪ್ರಶ್ನಿಸಬಹುದು. ನಿನಗೆ ಗೊತ್ತಾ ರಾಧಾ, ರಕ್ಕಸಿಯಾಗಿದ್ದರೂ, ಕೊಲ್ಲುವುದೇ ಉದ್ದೇಶವಾಗಿದ್ದರೂ ನನಗೆ ಎದೆ ಹಾಲು ಉಣಿಸುವ ಆ ಸಂದರ್ಭದಲ್ಲವಳು ಯಾವ ಕಲ್ಮಶಗಳೂ ಇಲ್ಲದ ತಾಯಾಗಿದ್ದಳು. ಕೊಲ್ಲುವುದ ಮರೆತಿದ್ದಳು. ತಾಯ್ತನದ ಪೂರ್ಣಭಾವವನ್ನು ಅನುಭವಿಸಿದಳು. ನಿಜವಾಗಿಯೂ ಹಾಲುಣಿಸಿದವಳು ಕೊಲ್ಲಲಾರಳು ಅನ್ನುವ ಸಂದೇಶ ಜಗತ್ತಿಗೆ ಮುಟ್ಟಬೇಕಿತ್ತಲ್ಲವಾ, ಹಾಗಾಗಿಯೇ ಅಂದು ಪೂತನಿ ತಾಯ್ತನದ ಪದವಿ ಪಡೆದಳು ಹಾಗೂ ಅದರಿಂದಾಗಿಯೇ ಅವಳ ಅಷ್ಟೂ ದಿನದ ಕ್ಲೇಶಗಳಿಂದ ಮುಕ್ತಳಾದಳು. 


ಅಶ್ವತ್ಥಾಮನು ಅಸ್ತ್ರ ಪ್ರಯೋಗಿಸಿ ಉತ್ತರೆಯ ಗರ್ಭದಲ್ಲಿದ್ದ ಮಗುವನ್ನು ಕೊಲ್ಲುವುದಕ್ಕೆ ಹವಣಿಸಿದ್ದು ನೆನಪಿದೆಯಾ ನಿನಗೆ? ಜಗತ್ತನ್ನೇ ‌ನೋಡಿರದ ಭ್ರೂಣವೊಂದಕ್ಕೆ ಅಸ್ತ್ರ ಪ್ರಯೋಗ ಮಾಡಬಾರದಿತ್ತು ಅಶ್ವತ್ಥಾಮ. ಆದರೆ, ಪಾಂಡವರ ವಂಶವನ್ನು ನಿರ್ವಂಶ ಮಾಡಬೇಕೆನ್ನುವ ದ್ವೇಷದಲ್ಲಿ ಮಹಾಗುರು ದ್ರೋಣರ ಮಗ ಅಶ್ವತ್ಥಾಮ ಧರ್ಮದ ಕಟ್ಟಳೆಗಳನ್ನು ಮೀರಿ ನಿಂತಿದ್ದ. ಒಂದು ವೇಳೆ ಆ ದಿನ ಉತ್ತರೆಯ ಗರ್ಭವೇನಾದರೂ ಬಲಿಯಾಗಿದ್ದರೆ ಇತಿಹಾಸದಲ್ಲೊಂದು ಘೋರ ಕೃತ್ಯ ದಾಖಲಾಗುತ್ತಿತ್ತು. ಹಾಗಾಗಿಯೇ ನಾನು ಆ ದಿನ ಆ ಗರ್ಭಕ್ಕೆ ರಕ್ಷಣಾಕವಚವಾಗಿ ನಿಲ್ಲಬೇಕಾಯಿತು. ಆ ದಿನ ಧರ್ಮಕ್ಕಿಂತಲೂ ಮುಖ್ಯವಾದ ಇನ್ನೇನೋ ಒಂದು ಸಂದೇಶ ಇಡೀ ಸೃಷ್ಟಿಗೆ ತಲುಪಬೇಕಿತ್ತು. ತಾಯಿಯ ಗರ್ಭವೂ ಸುರಕ್ಷಿತವಲ್ಲ ಅಂತ ತಿಳಿದರೆ ಈ ಸೃಷ್ಟಿಯಲ್ಲಿ ಅದೆಷ್ಟೋ ಯುಗಗಳ ತನಕ ಜೀವ ಸೃಜನೆ ಆಗುವುದಾದರೂ ಹೇಗೆ ಅಲ್ಲವಾ ರಾಧೆ? 


ಮಾತೃತ್ವದ ನೆನಪುಗಳನ್ನು ಮೆಲುಕು ಹಾಕುತ್ತಾ, ನೀನು ಹೇಗಿದ್ದೀಯಾ ಅಂತ ಕೇಳುವುದನ್ನೇ ಮರೆತೆ ನೋಡು ನಾನು. ಕಾಯುತ್ತಿದ್ದೀಯಾ ಅಂತ ತಿಳಿದಿದೆ. ಕಾಯುವುದು ಹೆಣ್ಣು ಜೀವಕ್ಕೆ ಹುಟ್ಟಿನಿಂದಲೇ‌ ಬಂದ ಸಾಮರ್ಥ್ಯ ಅಂತ ನಾನು ಅಂದರೆ, ಹೌದಪ್ಪಾ, ನಿಮಗೇನು ಗಂಡಸರಿಗೆ, ಹೇಳಿಬಿಡುತ್ತೀರಿ, ಕಾಯುವುದರಲ್ಲೂ ಒಂಥರಾ ಸುಖವಿದೆ, ವಿರಹ ಹೆಚ್ಚಾದಷ್ಟೂ ಮಿಲನದ ತೀವ್ರತೆ ಹೆಚ್ಚು, ಸಂಬಂಧಗಳು ಗಟ್ಟಿಯಾಗುವುದೇ ಕಾಯುವುದರಿಂದ ಇತ್ಯಾದಿ ಇತ್ಯಾದಿ, ಅಂತೆಲ್ಲಾ ನನ್ನ ಮೇಲೆ ಹರಿಹಾಯಬೇಡ. ಜೀವವೊಂದು ಕರುಳ ಬಳ್ಳಿಗೆ ಅಂಟಿಕೊಂಡಿರುವಾಗ ಒಂಬತ್ತು ತಿಂಗಳುಗಳ ಕಾಲ ಪೊರೆದು, ಕ್ಷಣಕ್ಷಣವೂ ತನ್ನ ದೇಹದಿಂದ ಸೃಜಿಸುವ ಇನ್ನೊಂದು ಜೀವವನ್ನು ಕೈಯಲ್ಲಿ ಹಿಡಿಯುವ ಪುಳಕದಲ್ಲಿ ಕಾಯುತ್ತಾಳಲ್ಲವಾ ತಾಯಿ ಅನ್ನುವ ಕಾರಣಕ್ಕೆ ನಾನು ಹಾಗೆ ಹೇಳಿದೆನಷ್ಟೇ. ಕಾಯುವುದೂ ಸಂಭ್ರಮವಾಗಬಲ್ಲದು, ಮಗು ಒದೆಯುವುದೂ ನಗೆ ಚೆಲ್ಲಬಲ್ಲದು ಅನ್ನುವುದನ್ನು ತಾಯಲ್ಲದೇ ಇನ್ನಾರು ತೋರಿಸಲು ಸಾಧ್ಯ! 


ರಾಧೇ, ಬೃಂದಾವನದ ಗೋಮಾತೆಯರು ಹೇಗಿದ್ದಾರೆ ಈಗ? ನನಗೆ ಬಿರುಬಿಸಿಲಲ್ಲಿ ನೆರಳನ್ನಿತ್ತ ವೃಕ್ಷಗಳು ಹೇಗಿದ್ದಾವೆ? ನಾವು ಕಾಲುಬಿಟ್ಟು ಕೂತು ಗಂಟೆಗಟ್ಟಲೆ ಮಾತಾಡುತ್ತಿದ್ದ ಹಳ್ಳ‌ಕೊಳ್ಳಗಳು ಹೇಗಿದ್ದಾವೆ? ನನಗೆ ಮತ್ತೆ ನಿನ್ನ ಜೊತೆ ಕೂತು ಮಡಕೆಗಳ ಮೇಲೆಲ್ಲಾ ಚಿತ್ತಾರ ಬರೆಯಬೇಕು. ಕಪಿಲೆ ಗಂಗೆಯರ ಮೈಮೇಲೆ ವೃತ್ತಾಕಾರದ‌ ಚಿತ್ರಗಳನ್ನು ಬಿಡಿಸಬೇಕು, ಝರಿಯ ಹತ್ತಿರ ಅವುಗಳ ಮೈತೊಳೆಸಬೇಕು, ಕೋಗಿಲೆ, ನವಿಲುಗಳ ಜೊತೆ ಕೊಳಲೂದುತ್ತಾ ಸ್ಪರ್ಧಿಸಬೇಕು, ಆಗಷ್ಟೇ‌ ಮಿಂದುಬಂದ ನಿನ್ನ ಹೆರಳ ಒದ್ದೆ ಪರಿಮಳವನ್ನು ಆಘ್ರಾಣಿಸಬೇಕು, ಧೂಪದ ಗಂಧದ ಗಾಳಿಯಲ್ಲಿ ಸಂಜೆಯ ಉದ್ಯಾನದ ತುಂಬಾ ನಿನ್ನ ಜೊತೆ ಸೇರಿ ಹಣತೆಗಳನ್ನಿಡಬೇಕು. ಗಾಳಿಗೆ ಆರಿ ಹೋಗದ ಹಾಗೆ, ನಿನ್ನ ಹಿಂದಿನಿಂದ ನಿನ್ನ ಕೈಗಳೊಂದಿಗೆ ನನ್ನ ಕೈಗಳನ್ನು ಕೂಡಿಸಬೇಕು, ನಿನ್ನ ಸೊಂಟದಿಂದ ತುಸು ದೂರದಲ್ಲಿಯೇ ನನ್ನ ಕೈಗಳು ಹಾದುಹೋಗುವಾಗ ನಿನ್ನ ಕಿಬ್ಬೊಟ್ಟೆಯ ಪಕ್ಕ ಕಂಪಿಸುವುದ ನೋಡಬೇಕು, ಬಿದಿಗೆ ಚಂದ್ರನ ಬೆಳಕಲ್ಲಿ ನಿನ್ನ ನಾಚಿಕೆಯನ್ನು ಅಳೆಯಬೇಕು, ಮತ್ತೆ ಬೆಳಿಗ್ಗೆ ನದಿ ದಡದಲ್ಲಿ ನೀನು ಒಗೆದುಕೊಟ್ಟ ಬಟ್ಟೆಯನ್ನೆಲ್ಲಾ ಹಿಂಡುತ್ತಾ ಒಣಗಿಸುವುದಕ್ಕೆ ಅಣಿಯಾಗಬೇಕು, ಯಮುನೆಯ ದಡದಗುಂಟ ನಡೆದರೆ ಒಂದು ಕಾಡಿದೆಯಲ್ಲಾ, ಅಲ್ಲಿ ಕಟ್ಟಿರುವ ಜೋಕಾಲಿಯಲ್ಲಿ ನಾವಿಬ್ಬರೇ ಕೂತು ತೂಗಬೇಕು, ಅದೆಷ್ಟೋ ಮಧ್ಯಾಹ್ನಗಳ ನೀರವತೆಯಲ್ಲಿ ನಿನ್ನ ಮುಂಗುರುಳುಗಳ ಜೊತೆ ಆಟವಾಡಬೇಕು, ಕಣ್ಣುಮುಚ್ಚಾಲೆಯಾಡುವಾಗಲೆಲ್ಲಾ ನೀನೆಲ್ಲಿದ್ದೀಯ ಅಂತ ಗೊತ್ತಿದ್ದರೂ ಗೊತ್ತಿಲ್ಲದವರ ಹಾಗೆ ಊರ ತುಂಬಾ ಹುಡುಕಾಡಬೇಕು, ಅಶ್ವತ್ಥ ಎಲೆಗಳ ಮೇಲೆ ನಿನ್ನ ಹೆಸರನ್ನು ಬರೆದು ನದಿಯಲ್ಲಿ ತೇಲಿಬಿಡಬೇಕು, ರಾಧೇ.. ಅಂಥ ದಿನಗಳಿಗಾಗಿ ಕೃಷ್ಣನೂ ಕಾಯುತ್ತಿದ್ದಾನೆ ಅನ್ನುವುದು ತಿಳಿದಿದೆಯಲ್ಲವಾ ನಿನಗೆ?


ನೀನು ಬೆಳಿಗ್ಗೆಯೇ ಎದ್ದು ಹಾಕುವ ರಂಗೋಲಿಯಲ್ಲಿ ಪ್ರತಿದಿನವೂ ಎರಡು ಚುಕ್ಕಿಗಳನ್ನು ಹಾಗೆಯೇ ಬಿಟ್ಟಿರು, ಒಂದು ಮುಂಜಾನೆ ಹಿಮದ ದಪ್ಪ ಪದರಗಳು ತುಂಬಿಕೊಂಡ ಹಾದಿಯಲ್ಲಿ ಕೋಮಲ‌ ಪಾದಗಳು ನಡೆದುಬರುತ್ತವೆ. ಅಪೂರ್ಣ ಕತೆಗಳನ್ನು ಇನ್ನಷ್ಟು ಮುಂದುವರೆಸುವ ನನ್ನ ಇಂಗಿತವನ್ನು ಇನ್ನಷ್ಟು ವರುಷಗಳ ಕಾಲ‌ ನಾವು ಒಯ್ಯಲೇಬೇಕು. ಕೃಷ್ಣ ಬರುತ್ತಾನೆ, ಅಂದು ಬೃಂದಾವನದ ಆಕಳ ಕೊರಳ ಗಂಟೆಗಳು ತಾವಾಗಿಯೇ ತೂಗುತ್ತವೆ, ಕೊಟ್ಟಿಗೆಯಿಂದಾಚೆ ಬಂದು ಅವೆಲ್ಲವೂ ಗುಂಪುಗಟ್ಟಿ ನಿಲ್ಲುತ್ತವೆ. ಕಡೆದಂತೆಲ್ಲಾ ತುಂಬಿಸಲಿಕ್ಕೆ ಮಡಕೆಗಳು ಸಾಕಾಗದಷ್ಟು ಬೆಣ್ಣೆ ಬೆಳೆಯುತ್ತದೆ,  ಹಿಂದಿನ ದಿನ ಸಂಜೆ ನೀ ಮಲಗುವ ಕೋಣೆಗೆ ಎಲ್ಲಿಂದಲೋ ನವಿಲುಗರಿಯೊಂದು ಹಾರಿ ಬಂದು ಬೀಳುತ್ತದೆ, ರಾತ್ರಿ ಪೂರ ಚಕ್ರವಾಕ ಕೂಗುತ್ತದೆ, ಬೆಳದಿಂಗಳ ಮೃದು ಕಿರಣಗಳು ಕಿಟಕಿಗಳನ್ನು ದಾಟಿ ನಿನ್ನ ಹೊಕ್ಕುಳನ್ನು ಹೊಕ್ಕುತ್ತವೆ. ನಾ‌ ಬರುವ ದಿನ ನೀ ಹೊದ್ದ ಸೆರಗು ಪದೇ ಪದೇ ಜಾರುತ್ತದೆ, ನಿನಗೆ ಇದ್ದಕ್ಕಿದ್ದ ಹಾಗೆ ಕಾಲ್ಗೆಜ್ಜೆಯ ನೆನಪಾಗುತ್ತದೆ.. ಅದೆಷ್ಟೋ ವರುಷಗಳ ಧೂಳನ್ನು ಕೊಡವುವ ಹಾಗೆ ಗಾಳಿ ಬೀಸಿ ಆಮೇಲೆ ತಂಗಾಳಿಯು ಊರ ತುಂಬಾ ಹಬ್ಬುತ್ತದೆ, ಕೊಳಲು ಹಿಡಿದು ಊರ ಹೊಸಲಲ್ಲಿ ಇದಿರುಗೊಳ್ಳುತ್ತೀಯಲ್ಲವಾ ರಾಧೆ?


ಇಂತಿ ನಿನ್ನ 

ಗೊಲ್ಲ


~`ಶ್ರೀ'

    ತಲಗೇರಿ

ಶನಿವಾರ, ಫೆಬ್ರವರಿ 11, 2023

ವೃತ್ತಗಳ ಆಚೆ ಈಚೆ : ದ್ವೀಪವ ಬಯಸಿ...

 


ವೃತ್ತಗಳ ಆಚೆ ಈಚೆ : ದ್ವೀಪವ ಬಯಸಿ... 

ಅಲೆಮಾರಿ ಮನುಷ್ಯ ಒಂದು ಕಡೆ ನೆಲೆ ನಿಂತ ಅನ್ನುವುದು ನಾಗರಿಕತೆಯ ಶುರುವಾದರೂ, ನೆಲೆ‌ ನಿಂತ ಮನುಷ್ಯ ಮತ್ತೆ ಅಲೆಮಾರಿತನದ ಕನಸಿನೊಂದಿಗೆ ಬದುಕತೊಡಗಿದ. ಒಂದು ಊರಿನಿಂದ ಇನ್ನೊಂದು ಊರಿಗೆ, ಹಳ್ಳಿಯಿಂದ‌ ನಗರಕ್ಕೆ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ, ಒಂದು ದೇಶದಿಂದ ಇನ್ನೊಂದು ದೇಶಕ್ಕೆ, ಕೊನೆಗೆ ಒಂದು ಗ್ರಹದಿಂದ ಇನ್ನೊಂದು ಗ್ರಹಕ್ಕೆ ಹೋಗುವುದೂ ಮನುಷ್ಯನ ಅಲೆಮಾರಿತನದ ಭಾಗವೇ ಆಗಿಹೋಗಿದೆ. ಉದ್ಯೋಗ, ಬದುಕಿನ ಗುಣಮಟ್ಟದ ಉನ್ನತಿಗಾಗಿ, ಬೇರೆ ಬೇರೆ ಜಾಗ, ಜನ ಜೀವನ, ಸಂಸ್ಕೃತಿಗಳನ್ನು ತಿಳಿಯುವುದಕ್ಕಾಗಿ, ಓದಿಗಾಗಿ, ನೆಮ್ಮದಿಗಾಗಿ ಹೀಗೆ ಹತ್ತು ಹಲವು ಕಾರಣಗಳೇ ನೆಪವಾಗಿ ಅಲೆದಾಟ ನಾಗರಿಕತೆಯ ಭಾಗವೂ ಆಯಿತು. ಕೆಲವೊಮ್ಮೆ ತಾವಿರುವ ಜಾಗದಲ್ಲಿ ತಮಗೆ ಸಿಗಬೇಕಾದ ಮನ್ನಣೆ ಸಿಗಲಿಲ್ಲವೆಂದು ವಿದೇಶಗಳಿಗೆ ಉದ್ಯೋಗಕ್ಕಾಗಿ ಹೋಗುವವರು ಒಂದು ಕಡೆಯಾದರೆ, ಇನ್ನೊಂದು ಬದಿಯಲ್ಲಿ ತಾವಿರುವ ಕಡೆಯಲ್ಲಿ ಮನ್ನಣೆ ದೊರೆತು, ಮನ್ನಣೆಯ ಮುಂದುವರಿದ ಭಾಗವಾಗಿಯೇ ವಿದೇಶಕ್ಕೆ ಹೋಗುವವರು. ಇನ್ನು ಕೆಲವರು, ನೀರ ಹರಿವಿಗೆ ಅನುಗುಣವಾಗಿ ನೀರಲ್ಲಿ ಉದುರಿದ ಎಲೆಗಳು ಸಾಗುವ ಹಾಗೆ. ಅವಕಾಶಗಳು ಎಲ್ಲೆಲ್ಲಿ ಕರೆದೊಯ್ಯುತ್ತವೆಯೋ ಅಲ್ಲೆಲ್ಲಾ ಹೋಗುತ್ತಾರೆ. ಈ ಪಾತ್ರದಲ್ಲಿ ಬರುವ ದಂಪತಿಗಳ ಕತೆಯೂ ಹೆಚ್ಚೂ ಕಡಿಮೆ ನೀರ ಹರಿವಿನೊಂದಿಗೆ ಸಾಗುವ ಎಲೆಗಳ ಹಾಗೆಯೇ. ಆದರೆ, ಇದು ಬರೀ ಅಸಹಾಯಕತೆಯಲ್ಲ, ಹರಿವಿನೊಂದಿಗೆ ಈಜು ಕಲಿತು, ಆಮೇಲೆ ಅದರ ವಿರುದ್ಧ ಈಜುವ ಪ್ರಕ್ರಿಯೆಯ ಭಾಗವೂ ಆಗಿರಬಹುದೇನೋ ಅನ್ನುವ ಹಾಗೆ! ಅಂದ ಹಾಗೆ, ಕಾದಂಬರಿಯ ಹೆಸರು 'ದ್ವೀಪವ ಬಯಸಿ', ಬರೆದವರು ಎಂ ಆರ್ ದತ್ತಾತ್ರಿ ಅವರು.

ಕಾರ್ಪೊರೇಟ್ ಜಗತ್ತು ಅಂದ ತಕ್ಷಣ ಒಂದಷ್ಟು ಅದೇ ಹಳಸಲು ರೂಪಕಗಳು, ಈಗಾಗಲೇ ತಿಕ್ಕಿ ತಿಕ್ಕಿ ಬರೆದು ಬರೆದು ತೆಳುವಾದ ಅಭಿವ್ಯಕ್ತಿಗಳೇ ಹೆಚ್ಚಾಗಿ ನಮ್ಮ ಕಣ್ಣ‌ಮುಂದೆ ಬರುತ್ತವೆ. ಆದರೆ, ಈ ಕಾದಂಬರಿ ಭಿನ್ನವಾಗುವುದೇ ಇಲ್ಲಿ. ಇದು ಕಾರ್ಪೊರೇಟಿನ ಕತೆಯಾದರೂ, ಅದೊಂದು ದ್ವೀಪವಷ್ಟೇ; ಅಂಥದ್ದೇ ಇನ್ನೂ ಹಲವು ದ್ವೀಪಗಳಿವೆ ಇಲ್ಲಿ! ಕಾರ್ಪೊರೇಟಿನ ಯಾವತ್ತಿನ ಸಂಗತಿಗಳ ಜೊತೆಜೊತೆಗೆ ಇಲ್ಲಿ ಮನುಷ್ಯರ ಕತೆಗಳಿವೆ. ಮನುಷ್ಯರ ಸಂಬಂಧಗಳ, ಮನೋವ್ಯಾಪಾರಗಳ ಕತೆಗಳಿವೆ. ವೀಕೆಂಡು, ಬಾಸಿಗೆ ಬೈಗುಳ ಇಷ್ಟಕ್ಕೇ ಸೀಮಿತವಾಗದೇ, ಕಾರ್ಪೊರೇಟಿನ ಒಳಸುಳಿಗಳೂ ಕೆಲವಷ್ಟಿವೆ. ಒಂದು ಸಂಗತಿಯನ್ನು ಕಾರ್ಪೊರೇಟ್ ಅಥವಾ ರಾಜಕೀಯ ಹೇಗೆ ತನ್ನ ಸಂಪನ್ಮೂಲಗಳನ್ನು ಬಳಸಿಕೊಂಡು ಜನರ ಮುಂದಿಡುತ್ತದೆ ಹಾಗೂ ಅದನ್ನು ನಂಬಿಸುವಲ್ಲಿ ಸಫಲವಾಗುತ್ತದೆ ಅನ್ನುವುದನ್ನು ಹೇಳುವುದರ ಜೊತೆಜೊತೆಗೆ, ಇಲ್ಲಿ ಹುಡುಕಾಟದ ಕತೆಯಿದೆ. ಜಗತ್ತು ಒಂದೇ ಆದರೂ, ಅಲ್ಲಲ್ಲಿ ಅಲ್ಲಲ್ಲಿ ಪುಟ್ಟ ಪುಟ್ಟ ದ್ವೀಪಗಳು. ಪ್ರತಿ ದ್ವೀಪವನ್ನು ತಲುಪುವುದಕ್ಕೂ ಬೇರೆ ಬೇರೆಯದೇ ದಾರಿ. ಪ್ರತಿ ದ್ವೀಪದ ಒಳ ಪ್ರಪಂಚ ಬೇರೆ ಬೇರೆ. 

ನಮಗೆ ಮಾತು ಎಷ್ಟು ಮುಖ್ಯವೋ ಮೌನವೂ ಅಷ್ಟೇ ಮುಖ್ಯ. ಒಂದು ಹಂತದವರೆಗೆ ದೇಹ ಸೌಂದರ್ಯವನ್ನೂ ನೋಡಿ ಮದುವೆಯಾದವರಿಗೆ ವರುಷಗಳು ಉರುಳಿದ ಹಾಗೆ, ಅದು ದೇಹಕ್ಕಿಂತಲೂ ಮನಸ್ಸುಗಳ ಬೆಸುಗೆಯಾಗಿ ಸಂಬಂಧ ಗಟ್ಟಿಯಾಗುತ್ತ ಹೋಗುತ್ತದೆ.‌ ದೇಹ ಒಂದು ಸಾಧನವಷ್ಟೇ, ಬಂಧ ಇರುವುದು ಮನಸ್ಸುಗಳ‌ ಸಂಬಂಧದಲ್ಲಿ. ಬಹುಶಃ ಈ ಮಾತು ಮತ್ತು ಮೌನಗಳ ಸಂಗತಿಯೂ ಹೀಗೇ ಇರಬಹುದು ಅನಿಸುತ್ತದೆ. ಮಾತು, ಸಂವಹನದ ಮಾಧ್ಯಮವೇ ಆದರೂ ಮೌನದ ಸಾನ್ನಿಧ್ಯವನ್ನು ಹಾಗೂ ಅದರ ಅಗತ್ಯವನ್ನು ಗುರುತಿಸಲಾರದವರು ಮಾತಿನ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾರರೇನೋ ಅನಿಸುತ್ತದೆ. ಈ ಕಾದಂಬರಿಯಲ್ಲಿ ಒಂದು ಸಾಲಿದೆ; "ನಮ್ಮ ನಮ್ಮ ಮೌನ ಭಾಷೆಯನ್ನು ಕೇಳಬಲ್ಲ ಮತ್ತೊಂದು ಜೀವವನ್ನು ಗುರುತಿಸಿಕೊಟ್ಟಿತ್ತು". ಸಂಗಾತಿಯಾಗುವುದೆಂದರೆ ಮಾತುಗಳನ್ನು ಕೇಳುವುದಷ್ಟೇ ಅಲ್ಲ, ಮೌನವನ್ನು ಆಲಿಸುವುದು ಕೂಡಾ ಬಹುಮುಖ್ಯ, ಮುಂದೊಂದು ದಿನ ಬದುಕಿನ ಮಹತ್ವದ ನಿರ್ಧಾರಗಳಿಗೆ ಬೆನ್ನೆಲುಬಾಗುವುದು ಈ ಮೌನ ಭಾಷೆಗಳ ನಡುವಿನ ಸಂವಹನ ಅನ್ನುವುದು ಒಂದು ವಿಸ್ಮಯಕಾರಿ ವಿಷಯ. 

ಫೋಟೋಗಳ ಪ್ರಪಂಚ ಬಹುಶಃ ಎಲ್ಲರಿಗೂ ಇಷ್ಟವಾಗುವ ಪ್ರಪಂಚ. ಒಂದೊಂದು ಥರದ ಫೋಟೋಗಳು ಒಬ್ಬೊಬ್ಬರಿಗೆ ಇಷ್ಟವಾಗುತ್ತವೆ. ಆದರೆ, ಎಲ್ಲದರಲ್ಲೂ ಒಂದು ಸಾಮಾನ್ಯ ಸಂಗತಿಯೆಂದರೆ, ಆ ಫೋಟೋ ಇಷ್ಟವಾಗುವುದರ ಅಥವಾ ಅದು ಆತ್ಮೀಯವಾಗುವುದರ ಹಿಂದೆ ಯಾವುದೋ ಒಂದು ಕತೆಯಿರುತ್ತದೆ. ಅದು ನಮ್ಮ ಹಿನ್ನೆಲೆಯೊಂದಿಗೆ ತಳುಕು ಹಾಕಿಕೊಳ್ಳುತ್ತದೆ. ನಾವು ಬದುಕಿದ ಪರಿಸರ ಅಥವಾ ನಮ್ಮ ಕನಸಿನ ಪರಿಸರ, ನಮ್ಮ ಜೀವನದ ಎಷ್ಟೋ ಘಟನೆಗಳು ಹಾಗೂ ಅದರ ಸುತ್ತಲೂ ಹಬ್ಬಿಕೊಂಡ ನಮ್ಮ ಭಾವಗಳು, ನಾವು ಇಷ್ಟಪಡುವ ಅಥವಾ ಹೆಚ್ಚಾಗಿ ಹಚ್ಚಿಕೊಂಡ ವ್ಯಕ್ತಿಗಳು ಹೀಗೆ ಹಲವು ಕಾರಣಗಳು ಒಂದು ಫೋಟೋವನ್ನು ನಮಗೆ ಹತ್ತಿರವಾಗಿಸುತ್ತವೆ. ಕೆಲವೊಮ್ಮೆ 'ಇಷ್ಟ'ದ ಫೋಟೋ ಅನ್ನುವುದಕ್ಕಿಂತ ಅದನ್ನು 'ಕಾಡಿದಂಥ' ಫೋಟೋ ಅಂತಲೂ ಅನ್ನಬಹುದು. ಒಂದು ಫೋಟೋ ಅದ್ಯಾಕೆ‌ ನಮ್ಮೊಂದಿಗೆ ತಳುಕು ಹಾಕಿಕೊಳ್ಳುತ್ತದೆ ಅನ್ನುವುದಕ್ಕೆ ಒಂದು ಸಂದರ್ಭ ಇದೆ ಈ ಕಾದಂಬರಿಯಲ್ಲಿ. ಅಲ್ಲಿ ಬರುವ ಮಾತುಗಳು ಹೆಚ್ಚೂ ಕಡಿಮೆ ಸ್ಟೀಫನ್ ಶೋರ್ (stephen shore)  ಅವರ ಮಾತುಗಳನ್ನು ನೆನಪಿಸಿತು. ಮಜದ ಸಂಗತಿಯೆಂದರೆ ಈ ಕಾದಂಬರಿಯಲ್ಲಿ ಬರುವ ಈ ಸಂದರ್ಭವನ್ನು ಓದಿದ್ದು ಮತ್ತು ಸ್ಟೀಫನ್ ಅವರ ಸಾಲುಗಳನ್ನು ಓದಿದ್ದು ಒಂದೇ ದಿ‌ನ! ಸ್ಟೀಫನ್ ಅವರ ಸಾಲುಗಳು ಹೀಗಿವೆ: "The context in which a photograph is seen affects the meaning the viewer draws from it" - ಯಾವ ಸಂದರ್ಭದಲ್ಲಿ ಒಂದು ಫೋಟೋ ನೋಡಲ್ಪಟ್ಟಿತು ಅನ್ನುವುದು, ಅದನ್ನು ಅರ್ಥೈಸಿಕೊಳ್ಳುವಿಕೆಯ ಮೇಲೆ ಪರಿಣಾಮ ಬೀರುತ್ತದೆ. 

ಮನುಷ್ಯ ಲೋಕವೇ ಒಂದು ವಿಸ್ಮಯದ ಲೋಕ. ಇಲ್ಲಿ ಯಾವ ವ್ಯಕ್ತಿಯನ್ನಾದರೂ ನಾವು ಎಷ್ಟು ಅರ್ಥೈಸಿಕೊಂಡಿದ್ದೇವೆ ಅಂದುಕೊಂಡರೂ, ಯಾವತ್ತೋ ನಮಗೆ ಗೊತ್ತಿಲ್ಲದ ಯಾವುದೋ ಹೊಸ ಗುಣದೊಂದಿಗೆ, ಹೊಸ ಅಂಶದೊಂದಿಗೆ ನಮ್ಮೆದುರು ಬರುತ್ತಾರೆ. ವ್ಯಕ್ತಿಯನ್ನು ಅರಿತುಕೊಂಡಷ್ಟೂ, ಅರಿಯದೇ ಹೋದದ್ದು ಬಹಳಷ್ಟಿದೆ ಅನ್ನುವುದರ ಅರಿವಾದರೆ, ಬಹುಶಃ ಬದುಕು ಇನ್ನಷ್ಟು ಸಲೀಸಾದೀತೇನೋ. ಮೊದಮೊದಲಿಗೆ ಇಬ್ಬರು ವ್ಯಕ್ತಿಗಳು ಪರಿಚಿತರಾದಾಗ, ಇಬ್ಬರಿಗೂ ಮಾತಾಡುವುದಕ್ಕೆ ಬಹಳಷ್ಟಿರುತ್ತದೆ. ಕಾರಣ, ಒಬ್ಬರನ್ನೊಬ್ಬರು ಅರಿತುಕೊಳ್ಳುವ ಕುತೂಹಲ. ಆದರೆ, ಒಂದೆರಡು ವರ್ಷಗಳ ನಂತರವೂ ಆ ಬಾಂಧವ್ಯ, ಆ ಮಾತುಕತೆಗಳು ಹಾಗೆಯೇ ಇದ್ದರೆ, ಅದನ್ನು ಖಂಡಿತವಾಗಿಯೂ ವಿಶೇಷ ಸಂಬಂಧವೆಂದೇ ಪರಿಗಣಿಸಬಹುದೇನೋ. ಕುತೂಹಲ ತಣಿದ ಮೇಲೆ ಮನುಷ್ಯರಿಗೆ ಆಸಕ್ತಿ ಕಡಿಮೆಯಾಗುವುದು ಸಹಜ ಗುಣ. ಹಾಗಾಗಿಯೇ ಹಲವು ಸಂಬಂಧಗಳು ಒಂದೆರಡು ವರ್ಷಗಳ ನಂತರ ಸಡಿಲವಾಗುತ್ತವೆ. ಮಾತುಕತೆಗಳು ನಿಲ್ಲುತ್ತವೆ. "ಪ್ರತಿ ವ್ಯಕ್ತಿಯೊಂದಿಗೂ ನಾವು ಗುರುತಿಸಿ ಪದಗಳಿಗೆ ರೂಪಾಂತರಿಸಬಲ್ಲ ಚಹರೆಗಳು ಒಂದಿಷ್ಟಿದ್ದರೆ ಅವ್ಯಕ್ತವಾಗಿ ಹೊರಹೊಮ್ಮುವ ಚಹರೆಗಳು ಸಾವಿರವಿರುತ್ತವೆ" ಅಂತ ಲೇಖಕರು ಒಂದು ಕಡೆ ಹೇಳಿದ್ದಾರೆ.

ಜಾಗತಿಕವಾದ ಅಥವಾ ವಿಶ್ವಾತ್ಮಕವಾದ ಸತ್ಯ ಒಂದೇ ಇರುವುದು ಅನ್ನುವುದು ನಿಜವಾದರೂ, ಆ ಕ್ಷಣದ ಸತ್ಯಗಳು ಹಲವು. ಯಾವ ಪರಿಸರದಲ್ಲಿ, ಯಾವ ಸಂದರ್ಭದಲ್ಲಿ ನಾವು ಒಂದು ಸಂಗತಿಯನ್ನು ನೋಡುತ್ತೇವೆಯೋ ಅದಕ್ಕೆ ಅನುಗುಣವಾಗಿ ನಾವು ಅರ್ಥಗಳನ್ನು ಹುಡುಕಿಕೊಳ್ಳುತ್ತೇವೆ. ಎಲ್ಲವೂ ಸತ್ಯದ ಒಂದೊಂದು ಭಾಗವಾಗಿರುತ್ತವೆಯೇ ಹೊರತೂ 'ಪೂರ್ಣ ಸತ್ಯ'ವಾಗಿರುವುದಿಲ್ಲ. ಹಾಗೆ, ಪೂರ್ಣ ಸತ್ಯ ಅರಿವಾಗಬೇಕಾದರೆ, ಎಲ್ಲಾ ಕೋನಗಳಿಂದಲೂ ಆ ಸತ್ಯದ ನೋಟ ಸಿಗಬೇಕು. ಹಾಗಾಗಿಯೇ ವ್ಯಕ್ತಿಯಿಂದ ವ್ಯಕ್ತಿಗೆ ಸತ್ಯ ಬದಲಾಗುತ್ತದೆ. ನಿಜ ಹೇಳಬೇಕೆಂದರೆ, ಅದು ಸತ್ಯ ಬದಲಾಗುವುದಲ್ಲ. ಆದರೆ, ಸತ್ಯದ ತುಣುಕುಗಳಷ್ಟೇ ದಕ್ಕುವುದು. ಅದೇ ಅವರವರ ಪಾಲಿನ ಸತ್ಯ. 

ಲೈಫ್ ಆಫ್ ಪೈ' ( Life of Pi ) ಪುಸ್ತಕ ಹಾಗೂ ಸಿನೆಮಾದಲ್ಲಿ ಒಂದು ಮಾತಿದೆ. "I suppose in the end, the whole of life becomes an act of letting go, but what always hurts the most is not taking a moment to say goodbye" - ಕೊನೆಯಲ್ಲಿ, ಇಡೀ ಬದುಕು ಬೀಳ್ಕೊಡುಗೆಯ ಒಂದು ಪ್ರಕ್ರಿಯೆಯೇ ಆಗಿಹೋಗುತ್ತದೆ. ಆದರೆ, ನೋವು ಕೊಡುವ ಸಂಗತಿಯೆಂದರೆ, ಹಾಗೆ ಬೀಳ್ಕೊಡುವಾಗ, ಒಂದು ಸರಿಯಾದ ವಿದಾಯವನ್ನು ಹೇಳಲಿಕ್ಕೆ ಒಂದು ಕ್ಷಣವನ್ನು ಕೂಡಾ ತೆಗೆದುಕೊಳ್ಳದೇ‌ ಹೋಗುವುದು. ಬಹುಶಃ ಎಲ್ಲ ನಿರ್ಗಮನಗಳೂ ಹಾಗೆಯೇ. ಎಲ್ಲಿಯೇ ಹೋದರೂ, ನಿರ್ಗಮನದ ದಿನ ಭಾವುಕತೆ ಜಾಸ್ತಿ. ಅದರಲ್ಲೂ ಅಲ್ಲಿನ ಜಾಗ, ಮನುಷ್ಯರು, ಸಂಸ್ಕೃತಿ ಇತ್ಯಾದಿಗಳು ಇಷ್ಟವಾದರಂತೂ ಮುಗಿಯಿತು. ತುಸು ಹೆಚ್ಚೇ ಮನಸ್ಸು ಚಡಪಡಿಸುತ್ತದೆ. ಹಾಗಿರುವಾಗ, ಈ 'ಕೊನೆಯ ದಿನ' ಅನ್ನುವುದು ಬಹಳಷ್ಟನ್ನು ಹೇಳುತ್ತದೆ ಕೂಡಾ. ಜಪಾನಿನಲ್ಲಿ ಒಂದು ಸಂಸ್ಕೃತಿಯಿದೆ. ಸತ್ತಮೇಲೆ ದೇಹವನ್ನು ಶುಚಿಯಾಗಿಸಿ,‌ ಅಲಂಕರಿಸಿ ತಯಾರು ಮಾಡಲಾಗುತ್ತದೆ. ನಮ್ಮಲ್ಲಿನ ಭಾರತೀಯ ಸಂಸ್ಕೃತಿಯಲ್ಲೂ ಹೀಗೆಯೇ ದೇಹವನ್ನು ಶುದ್ಧೀಕರಿಸುವ ಆಚರಣೆಯಿದೆ. ಯಾಕೆಂದರೆ, ಯಾವತ್ತಿಗೂ "ಒಂದು ಗೌರವಯುತವಾದ ಬೀಳ್ಕೊಡುಗೆ ಬೇಕು". 

ನಮಗೆಲ್ಲಾ ಅದೆಷ್ಟೋ ಸಲ ಅನಿಸಿದ್ದಿದೆ. ಬಹುಶಃ ಪ್ರತಿದಿನವೂ ಅನಿಸುತ್ತದೆ. ನಮ್ಮೆಲ್ಲರ ಬದುಕು ಯಾಕಿಷ್ಟು ವಿಚಿತ್ರ. ಪ್ರತಿಯೊಬ್ಬರೂ ಅವರವರ ಆರ್ಥಿಕ ಮಟ್ಟಕ್ಕಿಂತ ಮೇಲಿನವರನ್ನು ನೋಡಿ, " ಅವರಿಗೇನು, ಸುಖದ ಸುಪ್ಪೊತ್ತಿಗೆ" ಅಂತಲೇ ಅನ್ನುವುದು. ಆದರೆ, ಪ್ರತಿಯೊಬ್ಬರಿಗೂ ಅವರವರ ಕಷ್ಟಗಳು ಇರುವಂಥದ್ದೇ. "ಜೀವನ ಯಾಕಿಷ್ಟು ಸಂಕೀರ್ಣವಾಗಬೇಕು. ನೂರು ಕಷ್ಟಗಳನ್ನು ಅನುಭವಿಸಿಯೂ ಒಂದು ಸುಖ ಕಾಣದಿದ್ದರೆ, ಅಂತಹ ಜೀವನವನ್ನು ಮುಂದುವರೆಸುವುದರಲ್ಲಿ ಯಾವ ಅರ್ಥವಿದೆ" ಅನ್ನುವ ಪ್ರಶ್ನೆ ಒಂದಲ್ಲಾ ಒಂದು ಸಂದರ್ಭದಲ್ಲಿ ನಮ್ಮೆಲ್ಲರಲ್ಲಿಯೂ ಹುಟ್ಟಿರುವಂಥದ್ದೇ. ಹಾಗೆಯೇ, ಅದಕ್ಕೆ ಬೇಕಾದ ಸಮಜಾಯಿಷಿಗಳನ್ನೂ ನಮ್ಮ ಬದುಕೇ ಒದಗಿಸಿಕೊಡುತ್ತದೆ ಅಥವಾ ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಆ ಪ್ರಶ್ನೆಗೆ ಸರಿಯಾದ 'ತಿಳಿವಳಿಕೆ'ಯನ್ನು ನಮ್ಮ ಬದುಕೇ ನಮ್ಮಲ್ಲಿ ಬಿತ್ತುತ್ತದೆ. ಪ್ರತೀ ಬದುಕಿಗೂ ಅದರದ್ದೇ ಆದ ಮಹತ್ವವಿದೆ. ಜಗತ್ತಿನ ಯಾವುದೋ ಮೂಲೆಯಲ್ಲಿರುವ ವ್ಯಕ್ತಿಯ ಬದುಕು, ಜಗತ್ತಿನ ಇನ್ನೊಂದು ಯಾವುದೋ ಮೂಲೆಯಲ್ಲಿರುವ ವ್ಯಕ್ತಿಯ ಬದುಕಿನ ಮೇಲೆ ಹೇಗೆ ಪರಿಣಾಮ ಬೀರೋದಕ್ಕೆ ಸಾಧ್ಯ ಅಂತನ್ನುವುದು ವಿಚಿತ್ರ ಕುತೂಹಲವಾದರೂ, ಒಂದು ಮನೆಯಲ್ಲಿರುವ ಪ್ರತಿ ವ್ಯಕ್ತಿಯ ನಡೆಯೂ, ಅದೇ ಕುಟುಂಬದ ಇನ್ನೊಂದು ವ್ಯಕ್ತಿಯ ನಡೆಯ ಮೇಲೆ ಪರಿಣಾಮ ಬೀರುವುದಿಲ್ಲ ಅಂತ ಹೇಳಲಾದೀತೇ, ಇಲ್ಲ ತಾನೇ? ಜಗತ್ತೇ ಒಂದು ಕುಟುಂಬ ಕಾಲದ ಸೂರಿನ ಕೆಳಗೆ. 

ಈ ಕಾದಂಬರಿಯಲ್ಲಿ, ಒಂದು ಬಹುಮುಖ್ಯವಾದ ಹಾಗೂ ಬಹುತೇಕರು ಗುರುತಿಸುವ ಸಂಗತಿಯೆಂದರೆ ನಮ್ಮಲ್ಲಿನ ಒಳ ಹೊರ ಎರಡು ವೃತ್ತಗಳ‌ ಕುರಿತಾಗಿ ಮತ್ತು ಭಿನ್ನ ವ್ಯಕ್ತಿತ್ವಗಳ ಕುರಿತಾಗಿ ಇರುವಂಥ ಸಾಲುಗಳನ್ನು. ನಮ್ಮೆಲ್ಲರಲ್ಲಿಯೂ ಎರಡು ಪ್ರಪಂಚಗಳು. ಒಂದು ಹೊರ ಪ್ರಪಂಚ, ಇನ್ನೊಂದು ಒಳ ಪ್ರಪಂಚ. ಎಷ್ಟೋ ಸಂಗತಿಗಳಲ್ಲಿ ಹೊರಗಡೆ ನಾವು 'ತೋರಿಸಿಕೊಳ್ಳುವ' ರೀತಿಯೇ ಬೇರೆ, ಒಳಗಡೆ ಇರುವ ರೀತಿಯೇ ಬೇರೆ. ಇದು ಕಪಟತೆಯ ಪ್ರಶ್ನೆ ಅಲ್ಲ, ಅದಕ್ಕಿಂತ ಮಿಗಿಲಾದ ಒಂದು ಸಹಜ ಮಾನವ ಲೋಕದ ಪ್ರತಿಫಲನ ಅಷ್ಟೇ. ಆ ಒಳಗಿನ ವೃತ್ತಕ್ಕೆ ಕೆಲವರಿಗಷ್ಟೇ, ಇಷ್ಟೇ ಇಷ್ಟು ಮಾತ್ರವೇ ಪ್ರವೇಶವಿರುವುದು, ಆ ಒಳಗಿನ ವೃತ್ತದಲ್ಲಿ ಮನುಷ್ಯ ಬಹುತೇಕ ಒಂಟಿಯೇ! ಇದು ಒಂದು ಕಡೆಯಾದಲ್ಲಿ, ಇನ್ನೊಂದು ಕಡೆ, ಈ ಜಗತ್ತಿನ ಸಂಗತಿಗಳಂತೂ ಬಲು ಸೋಜಿಗ. "ಎಡಮನೆಯಲ್ಲೊಬ್ಬ ಪ್ರೇಮಿಯಿದ್ದರೆ ಬಲಮನೆಯಲ್ಲೊಬ್ಬನಿಗೆ ವೈರಾಗ್ಯ ಅಂಕುರಿಸಿರುತ್ತದೆ" ಅನ್ನುತ್ತಾರೆ ಲೇಖಕರು. 

ಮನುಷ್ಯಲೋಕದ ವಿಸ್ಮಯಗಳು ಮುಗಿಯುವಂಥದ್ದಲ್ಲ. ಹೂವಿಗೆ ಗಂಧ ಹೇಗೋ ಹಾಗೆಯೇ, ಮನುಷ್ಯರಿಗೆ ನೆನಪುಗಳು. ಈ ನೆನಪುಗಳೇ ಮನುಷ್ಯರ ನಾಳೆಗಳನ್ನು ರೂಪಿಸುತ್ತವೆ. ಈ ನೆನಪುಗಳೇ ಮನುಷ್ಯರ ಬದುಕುಗಳನ್ನು ಕಟ್ಟಿಕೊಡುತ್ತವೆ. ಈ ನೆನಪಿನ ಪ್ರಪಂಚದಲ್ಲಿ ಏನೆಲ್ಲಾ ಆಗಿರಬಹುದು, ಆದರೆ ಅದರಲ್ಲಿ ಎಲ್ಲವೂ ನೆನಪಿರುವುದಿಲ್ಲ. ಒಳ್ಳೆಯದೇ ಆಗಿರಲಿ ಅಥವಾ ಕೆಟ್ಟದ್ದೇ ಆಗಿರಲಿ, ಅದು ಮನುಷ್ಯರೊಳಗಿನ ಒಳವೃತ್ತವನ್ನು ಸೋಕದ ಹೊರತು, ನೆನಪಿನ ಪ್ರಪಂಚದಲ್ಲಿ ಅಚ್ಚಾಗುವುದಿಲ್ಲವೇನೋ ಅಥವಾ ಕಾಲಕ್ರಮೇಣ ಅಳಿಸಿಯೂ ಹೋಗಬಹುದು. ಆದರೆ, ಅಂಥ‌ ನೆನಪುಗಳಿರುವುದರಿಂದಲೇ ಮನುಷ್ಯರು ಬರೆಯಬಲ್ಲರು. ವಾಸ್ತವಗಳನ್ನೂ ಮೀರಿದ ಹಲವು ಪ್ರಪಂಚಗಳನ್ನು ತೆರೆದಿಡಬಲ್ಲರು. ಕಲೆ ಮತ್ತು ಕಲಾವಿದ ಇರುವುದೇ ನೆನಪುಗಳಿಂದಾಗಿ ಅಂದರೆ ಜಾಸ್ತಿಯೇನೂ ಆಗುವುದಿಲ್ಲ ಅನಿಸುತ್ತದೆ. ನೆನಪುಗಳು ವಸ್ತುಗಳೊಂದಿಗೆ, ಕ್ಷಣಗಳೊಂದಿಗೆ ಅಂಟಿಕೊಂಡಿರುವುದರಿಂದಲೇ ಮನುಷ್ಯರ ಭಾವಪ್ರಪಂಚ ಅಷ್ಟು ಚೆಂದ. 

ನಾವು ನೈತಿಕತೆಗಳ ಬಗ್ಗೆ ಬಹಳಷ್ಟು ಭಾಷಣ ಮಾಡುತ್ತೇವೆ. ಆದರೆ, ಯುದ್ಧದ ಮಧ್ಯ ನಿಂತು ಫೋಟೋ ತೆಗೆಯುವ ಛಾಯಾಗ್ರಾಹಕರನ್ನು ಅಥವಾ ಅದನ್ನು ವಿವಿಧ ಸುದ್ದಿ ಮಾಧ್ಯಮಗಳಿಗೆ ದಾಟಿಸುವ ವರದಿಗಾರರನ್ನು ಕೇಳಿ, ನೈತಿಕತೆ ಅಂದರೇನು? ಅಂತ. ಕಣ್ಣೆದುರಿಗೇ ಹೆಣಗಳು ಉದುರುತ್ತಿರುತ್ತವೆ. ಆದರೆ, ಆ ಪರಿಸರದಲ್ಲಿ ಹಸ್ತಕ್ಷೇಪ ಮಾಡುವ ಹಾಗಿಲ್ಲ. ಇದು ವಿಚಿತ್ರ ಅನ್ನಿಸಬಹುದು, ಜೊತೆಗೆ ಮನುಷ್ಯರಿಗೆ ನೆರವಾಗದ ಇನ್ನೊಬ್ಬ ಮನುಷ್ಯ ಇದ್ದು ಏನು ಪ್ರಯೋಜನ ಅಂತಲೂ ಅನ್ನಿಸಬಹುದು. ಆದರೆ, ಇದು ಇರುವುದೇ ಹಾಗೆ. ವನ್ಯಜೀವಿ ಛಾಯಾಗ್ರಾಹಕರ ಕಣ್ಣೆದುರೇ ಬೇಟೆ ನಡೆಯುತ್ತದೆ. ಆದರೆ, ತಪ್ಪಿಸುವ ಹಾಗಿಲ್ಲ. ಬೇಟೆ ತಪ್ಪಿಸಿದರೆ, ಜೀವ ಉಳಿಸಿದ್ದು ಹೌದು, ಆದರೆ ಇನ್ನೊಂದು ಪ್ರಾಣಿ ಉಪವಾಸವಿರುವುದೂ ಹೌದು. ವನ್ಯಜೀವಿ ಲೋಕದ ಕತೆಯಲ್ಲಿ ಬದುಕಿಗಾಗಿ ಮಾತ್ರವೇ ಬೇಟೆ. ಆದರೆ, ಮನುಷ್ಯಲೋಕದಲ್ಲಿ ಆಸೆಗಳಿಗಾಗಿ. ಆ ಆಸೆಗಳಿಗೆ ಭಿನ್ನ ಭಿನ್ನ ಕಾರಣಗಳು. ಯುದ್ಧದ ಭೀಕರತೆ ಮತ್ತು ಯುದ್ಧವನ್ನು ಸೆರೆಹಿಡಿಯುವ ಫೋಟೋಗ್ರಾಫರ್ರುಗಳ, ವರದಿಗಾರರ ಮನಸ್ಸಿನಲ್ಲಾಗುವ ಅಲ್ಲೋಲ‌ ಕಲ್ಲೋಲವನ್ನು ಈ ಕಾದಂಬರಿ ಆರ್ದ್ರವಾಗಿ ಹೇಳುತ್ತದೆ. ಇದನ್ನು ಓದುವಾಗ, ಸ್ಯೂಡಾನಿನ ಫೋಟೋ 'ರಣಹದ್ದು ಮತ್ತು ಪುಟ್ಟ ಹುಡುಗಿ' ( the vulture and the little girl ) ಹಾಗೂ ಅದನ್ನು ಸೆರೆಹಿಡಿದ ಫೋಟೋಗ್ರಾಫರ್ ಕೆವಿನ್ ಕಾರ್ಟರ್ ಆತ್ಮಹತ್ಯೆ ಮಾಡಿಕೊಂಡಿದ್ದು ನೆನಪಾಗುತ್ತದೆ. ಯಾವುದು ನೈತಿಕತೆ ಅನ್ನುವ ಪ್ರಶ್ನೆಯೇ ಹೆಚ್ಚು ಕಾಡುತ್ತದೆ. 

'ದ್ವೀಪವ ಬಯಸಿ' ಕಾದಂಬರಿ ನಮ್ಮನ್ನು ಹಲವು ದ್ವೀಪಗಳಿಗೆ ಕರೆದೊಯ್ಯುತ್ತದೆ ಹಾಗೂ ಅಗಾಧವಾದ ಕಾರ್ಪೋರೇಟ್ ಕರಾಳತೆಯ ಚೂರೇ ಚೂರು ರುಚಿ ತೋರಿಸುತ್ತದೆ. ಭರವಸೆಯ ನಾಳೆಗಳನ್ನು ಮಾತಿನಲ್ಲಿಯೇ ತೋರಿಸುವ ಎಲ್ಲರೂ ನಿಜವಾಗಿಯೂ ಅಂಥ ನಿಮ್ಮ ನಾಳೆಗಳಲ್ಲಿ ಆಸಕ್ತರಾಗಿರುವುದಿಲ್ಲ ಅನ್ನುವ ಸತ್ಯವನ್ನೂ ತೆರೆದಿಡುತ್ತಾ ಹೋಗುತ್ತದೆ. ಬರೀ ಅಷ್ಟಕ್ಕೇ ನಿಲ್ಲದೇ, ನಮ್ಮೊಳಗಣ ವೃತ್ತವನ್ನೂ, ಅದರ ತಲ್ಲಣಗಳನ್ನೂ ಆತ್ಮೀಯವಾಗಿ ಅಪ್ಪಿಕೊಳ್ಳುವ ಕೆಲಸವನ್ನು ಮಾಡುತ್ತದೆ. ಬರೀ ಕತೆಯನ್ನಷ್ಟೇ ಹೇಳದೇ,‌ ಕತೆಯೊಂದಿಗೆ ಇನ್ನೂ ಏನನ್ನೋ ಹುಡುಕಿಹೊರಡುವ ಇಂಥ ಪುಸ್ತಕಗಳು ಇಷ್ಟವಾಗದೇ ಇರುವುದಾದರೂ ಹೇಗೆ!

ಗೂಗಲ್ ಪ್ಲೇ ಬುಕ್ಸಲ್ಲಿ ,ಇಂಗ್ಲೀಷ್ ಅಕ್ಷರದ ಒಂದಷ್ಟು ವಾಕ್ಯಗಳು ಸರಿಯಾದ ಫಾರ್ಮ್ಯಾಟಲ್ಲಿ ಇಲ್ಲ ಅಂದ ತಕ್ಷಣವೇ ಅವೆಲ್ಲವನ್ನೂ ಸರಿಪಡಿಸಿದ ವಸುಧೇಂದ್ರ ಸರ್-ಗೆ ವಿಶೇಷ ಧನ್ಯವಾದಗಳು. 

- 'ಶ್ರೀ'
   ‌ತಲಗೇರಿಭಾನುವಾರ, ಜನವರಿ 1, 2023

ಬಯಲ ಹೂವಿನ ಗಂಧ

ಬಯಲ ಹೂವಿನ ಗಂಧ

ಈ ಪುಸ್ತಕದ ಕುರಿತಾಗಿ ಬರೆಯಬೇಕು ಅಂತ ಅಂದುಕೊಂಡಿದ್ದು ಬಹಳ ಸಲ. ಸುಮಾರು ಒಂದು ವರ್ಷವಾಯಿತು‌ ಇದನ್ನು ಓದಿ. ಕೆಲವೊಮ್ಮೆ ಕೆಲವು ಸಂಗತಿಗಳು ಕಟ್ಟಿಕೊಡುವ ಅನುಭವಗಳು ಗಾಢವಾಗಿರುತ್ತವೆ. ಅವುಗಳನ್ನು ಅಕ್ಷರ ರೂಪಕ್ಕಿಳಿಸುವುದಕ್ಕೆ ನಾವು ಸೋಲಬಹುದು ಅನ್ನುವ ಹಿಂಜರಿಕೆಯೇ ಹೀಗೆ ಬರೆಯದೇ ದಿನ ದೂಡುವುದಕ್ಕೆ ನೆಪವಾಗುತ್ತದೆ. ಈ ಸಲ ಬರೆಯಲೇಬೇಕೆಂದು ಮರುಓದಿಗೆ ತೊಡಗಿದೆ. ಬಹುಶಃ ಒಂದು ಸಲ ಓದಿದ ಮೇಲೆ ಮತ್ತೆ ಓದಿದ ಕೆಲವೇ ಕೆಲವು ಪುಸ್ತಕಗಳಲ್ಲಿ ಇದೂ ಒಂದು. ಹಾಗಂತ ಇದು ಸಿಕ್ಕಾಪಟ್ಟೆ ಅದ್ಭುತವಾದ, ಎಲ್ಲಿಯೂ ಸಿಗದ ಕತೆಗಳಿರುವ ಪುಸ್ತಕ ಅಂತೆಲ್ಲಾ ಹೊಗಳುವುದಿಲ್ಲ! ಆದರೆ, ಈ ಪುಸ್ತಕ ಒಂದು ಗಾಢವಾದ ಅನುಭವದ ಜಗತ್ತನ್ನು ಕಟ್ಟಿಕೊಡುತ್ತದೆ. ಸಣ್ಣ ಸಣ್ಣ ಸಂಗತಿಗಳೇ ಕತೆಗಾರರ ಶಕ್ತಿ. ಅಂಥದ್ದೊಂದು ಭಂಡಾರವೇ ಇಲ್ಲಿದೆ. ಅವುಗಳಲ್ಲಿ ಕೆಲವನ್ನು ಈ ಬರೆಹದ ಕೊನೆಯಲ್ಲಿ ಹಂಚಿಕೊಳ್ಳುತ್ತೇನೆ. ಛಂದ ಪುಸ್ತಕ ಬಹುಮಾನ ಪಡೆದ ಕೃತಿ ಅಂದರೆ ಅದೊಂದು ಥರದ ನಂಬಿಕೆ; ಅದು ಒಂದೊಳ್ಳೆಯ ಓದನ್ನು ಕೊಡುತ್ತದೆ ಅನ್ನುವ ಗಟ್ಟಿ ನಂಬಿಕೆ. ಅದರಲ್ಲೂ ಸಶಕ್ತ ಕತೆಗಾರ್ತಿಯರು ಕತೆ ಹೇಳಿದಾಗ ಪುರುಷ ಕತೆಗಾರರಿಗೆ ದಕ್ಕದ ಇನ್ನೊಂದು ಲೋಕ ಮತ್ತು ಆ ಲೋಕದ ಸೂಕ್ಷ್ಮತೆ ಆ ಕತೆಗಳಲ್ಲಿರುತ್ತವೆ ಅನ್ನುವುದನ್ನು ನಾನು ಓದಿದ ಕೆಲವೇ ಕೆಲವು ಕತೆಗಾರ್ತಿಯರ ಕತೆಗಳಿಂದ ಗಮನಿಸಿದ್ದೇನೆ. ಇಲ್ಲಿಯೂ ನನಗೆ ಅಂಥದ್ದೊಂದು ಜಗತ್ತು ಸಿಕ್ಕಿತು. ಮಹತ್ತರವಾದ ಅಥವಾ ಗಹನವಾದ ಸಂಗತಿಗಳನ್ನು ತೀವ್ರವಾಗಿ ತುಂಬಿಕೊಂಡಿರುವ ಕತೆಗಳೇನಲ್ಲ ಇವು. ಆದರೆ, ಈ ಜಗತ್ತಿನ ಪುಟ್ಟ ಪುಟ್ಟ ಸಂಗತಿಗಳನ್ನು ಗಮನಿಸಿ ಅದನ್ನು ಕತೆಯ ಭಾಗವಾಗಿಸುವುದಿದೆಯಲ್ಲಾ; ಅದನ್ನೇ ಬಹುಶಃ 'ಘಟಿಸುವುದು' ಅನ್ನಬಹುದೇನೋ!  ಅಂಥದ್ದೇ ಒಂದು ಸಂಕಲನ ಛಾಯಾ ಭಟ್ ಅವರ 'ಬಯಲರಸಿ ಹೊರಟವಳು' 

ನಮ್ಮೆಲ್ಲರ ಬದುಕಿನಲ್ಲಿ ಕೆಲವು ವ್ಯಕ್ತಿಗಳಿರುತ್ತಾರೆ. ಹೇಗಾದರೂ ಮಾಡಿ ನಮ್ಮನ್ನು ಕೆಣಕುವವರೂ ಅವರೇ, ಸಹಾಯಕ್ಕೆ ಬರುವವರೂ ಅವರೇ. ಈ ನಡುವಿನ ಬದುಕಿನಲ್ಲಿ ಅದೊಂದು ತೆರನಾದ ಸಂಬಂಧ ಅವರ ಜೊತೆ ಬೆಳೆದುಹೋಗಿರುತ್ತದೆ. ಅದನ್ನು ಆತ್ಮೀಯತೆ ಅಂತಲಾದರೂ ಕರೆಯಿರಿ ಅಥವಾ ಅನಿವಾರ್ಯತೆ ಅಂತಲಾದರೂ! ದೇವಳದ ಸೂರಿನಲ್ಲಿ , ಪ್ರಕೃತಿಯ ಕೋಪದಲ್ಲಿ ಎಲ್ಲರೂ ಒಂದೇ ಅನ್ನುವ ಮಾತು ಎಷ್ಟು ವಾಸ್ತವಿಕ. ಪ್ರಕೃತಿ ವಿಕೋಪಗಳಾದಾಗ, ಊರ ಶಾಲೆಯಲ್ಲೋ, ದೇವಸ್ಥಾನದಲ್ಲೋ, ಚರ್ಚು, ಮಸೀದಿಗಳಲ್ಲೋ ಗಂಜಿಕೇಂದ್ರಗಳನ್ನು ತೆರೆಯುವುದು ನಮಗೆ ತಿಳಿದ ಸಂಗತಿಯೇ. ಮತ್ತೆ ಮತ್ತೆ ಇಂಥ ವಿಕೋಪಗಳಾದಾಗ ಮಾತ್ರ ಮನುಷ್ಯನಿಗೆ ಮನುಷ್ಯನಾಗುವುದಕ್ಕೆ ಸಾಧ್ಯವಾಗುತ್ತದೆಯೇನೋ ಬಹುಶಃ! ಮನುಷ್ಯ ನಾಗರಿಕತೆಗಳ ಏಳುಬೀಳುಗಳನ್ನು ಕಂಡು ಪೊರೆವ ನದಿಯೇ ಒಮ್ಮೊಮ್ಮೆ ಉಕ್ಕುತ್ತದೆ ಅನ್ನುವ ಲೇಖಕಿ, ಪ್ರಕೃತಿಗೆ ತನ್ನ ಸಮತೋಲನವನ್ನು ತಾನೇ ಕಾಯ್ದುಕೊಳ್ಳುವುದು ಗೊತ್ತಿದೆ ಅನ್ನುವ ಮೂಲಕ ಮನುಷ್ಯ ತಾನು ಮಾಡಿಕೊಳ್ಳುವ ಅನರ್ಥಗಳಿಗೆ ಏನೇನೋ ಉದ್ಧಾರದ ಸಮಜಾಯಿಷಿ ಕೊಡುವುದನ್ನು ಸೂಕ್ಷ್ಮವಾಗಿ ಟೀಕಿಸಿಸುತ್ತಾರೆ. ಒಮ್ಮೊಮ್ಮೆ ಅನಿಸುತ್ತದೆ, ನಾವು ಮಾತಾಡಿದ್ದರೆ ಎಲ್ಲವೂ ಸರಿಯಾಗುತ್ತಿತ್ತೇನೋ, ಮನುಷ್ಯ ಮನುಷ್ಯರ‌ ನಡುವಿನ ವೈಮನಸ್ಯಗಳು ತಿಳಿಯಾಗುತ್ತಿದ್ದವೇನೋ ಅಂತೆಲ್ಲಾ. ಬಹಳ ಸಲ ಮಾತು ಒಂದು ಮಟ್ಟಿಗೆ ಕೆಲಸ ಮಾಡುವುದು ಹೌದಾದರೂ, ಮಾತಿನಿಂದಲೇ ಎಲ್ಲವೂ ಅರ್ಥವಾಗುವುದೇ? ಸಂವಹನ ನಡೆಯುವುದು ಕೇವಲ ಮಾತಿನ ಅರ್ಥದಿಂದಲೇ? ಅನ್ನುವ ಪ್ರಶ್ನೆ ಮೌನದ ಸಂವಹನಕ್ಕೆ ಇನ್ನಷ್ಟು ಬಲ ತುಂಬುತ್ತದೆ. ಮನುಷ್ಯನಿಗೆ ಇಂದ್ರಿಯಗಳು ಮತ್ತದಕ್ಕೆ ಅಂಟಿಕೊಂಡ ಸಂವೇದನೆಗಳೇ ಎಲ್ಲಾ ನೆನಪುಗಳಿಗೂ ಕಾರಣ. ಹಾಗೂ ಬದುಕಿನ ಭರವಸೆಗಳಿಗೂ ಕಾರಣ. ಇನ್ನೂ ಏನೋ ಉಳಿದಿದೆ ಅನ್ನುವುದೇ ನಾಳೆಗಳನ್ನು ಅನಿವಾರ್ಯವಾಗಿಸುತ್ತದೆ. 'ನೆರೆ' ಅನ್ನುವ ಈ ಕತೆ ಈ ಪುಸ್ತಕದ ಮೊದಲ‌ ಕತೆ. ಇದರಲ್ಲಿ ಒಂದು ಸಾಲಿದೆ "ನೆಟ್ಟವರಿಗಷ್ಟೇ ಕೀಳುವ ಹಕ್ಕಿರುವುದು"

ಕೆಲವರಿಗೆ ಊರಿಗೆ ಹೋಗುವುದೆಂದರೆ ನೆಮ್ಮದಿಯ ಆತ್ಮೀಯತೆ. ಇನ್ನು ಕೆಲವರಿಗೆ ಊರೆಂದರೆ ಅದು ತಳಮಳಗಳನ್ನು ಹುಟ್ಟುಹಾಕುವ, ಮನಸ್ಸೊಳಗಿನ ಅವ್ಯವಸ್ಥೆಗಳನ್ನು ಎತ್ತಿ ತೋರಿಸುವ ಹಾಗೂ ಕೌಟುಂಬಿಕ ಸುಖಕ್ಕೆ ವಿರುದ್ಧವಾದ ಕಿರಿಕಿರಿಯನ್ನು ದಾಟಿಸುವ ಜಾಗ. ಯಾಕೆ ಹಾಗಾಗುತ್ತದೆ ಅಂತ ಕೇಳಿದರೆ ಬದುಕಿನೊಂದಿಗೆ ಹೆಣೆಯಲ್ಪಟ್ಟ ನೆನಪುಗಳು, ಭಿನ್ನ ಘಟನೆಗಳು, ಅವುಗಳ ಅನುಭವಗಳು ಇತ್ಯಾದಿ. ಬಹುಶಃ ನಮ್ಮದು ಅಂತ ಅನ್ನಿಸುವವರೆಗೂ ಅದರೊಂದಿಗೆ ನಾವು ಸುಖಿಸಲು ಸಾಧ್ಯವೇ ಇಲ್ಲವೇನೋ! ಬದುಕಿನ ಪ್ರತೀ ಹಂತದಲ್ಲೂ ಭಯ ಉಂಟಾಗುತ್ತಲೇ ಇರುತ್ತದೆ. ಒಂದು ಸಂಗತಿಯಿಂದ ಆಚೆ ಬಂದು ತೆಗೆದುಕೊಳ್ಳುವ ನಿರ್ಧಾರದಿಂದ ಹುಟ್ಟುವ ಧೈರ್ಯ ಇನ್ನಷ್ಟು ಹುರುಪಿಗೆ ನಾಂದಿ ಅನ್ನುವುದನ್ನು 'ಕೋಲ್ಮಿಂಚು' ಕತೆ ನಮಗೆ ದಾಟಿಸುತ್ತದೆ. 

ಪ್ರತಿ ಜನಾಂಗವೂ ತನ್ನ ಹಿಂದಿನ ಜನಾಂಗದ ನಂಬಿಕೆಗಳ ಆಧಾರದ ಮೇಲೆಯೇ ಬದುಕು ಕಟ್ಟಿಕೊಳ್ಳುವುದು.‌ ಕೆಲವೊಮ್ಮೆ ಆ ನಂಬಿಕೆಗಳು ಹಳತಾದವೆಂದು ನವೀಕರಿಸುತ್ತಲೇ, ಇನ್ನು ಕೆಲವೊಮ್ಮೆ ಆ ನಂಬಿಕೆಯೇ ಅಂತಿಮ ಸತ್ಯವೆಂದು ಆದರಿಸುತ್ತಲೇ ಪೀಳಿಗೆಯಿಂದ ಪೀಳಿಗೆಗೆ ನಂಬಿಕೆಗಳು ವರ್ಗಾವಣೆಯಾಗುತ್ತವೆ. ತಲೆಮಾರುಗಳ ನಡುವಿನ ನಂಬಿಕೆಗಳು ಹಾಗೂ ಅವುಗಳ ಒಳ ಪದರಗಳು ತಂದೊಡ್ಡುವ ವಿಪರೀತಗಳು ನೋಡುವುದಕ್ಕೆ ಸರಳವಾಗಿದ್ದರೂ, ಕೆಲವೊಮ್ಮೆ ಒಂಥರದ ಕಗ್ಗಂಟು. ಒಮ್ಮೆ ಮನಸ್ತಾಪ ಶುರುವಾದರೆ, ಪದೇ ಪದೇ ವಿಷಯವೇ ಇಲ್ಲದೇ ಮನಸ್ತಾಪಗಳಾಗುತ್ತವೆ. ಕುಟುಂಬದ ಹೆಣಿಗೆಗಳಿಗೆ ಪರಿಹಾರ ಅಷ್ಟು ಸುಲಭವಲ್ಲ. ಅದಕ್ಕಾಗಿಯೇ ಅಲ್ಲವಾ ಸಂಸಾರ ಸಾಗರ ಅಂತನ್ನುವುದು. ಅಲೆಗಳು ಒಂದಾದ ಮೇಲೊಂದರಂತೆ ಬರದೇ ಸಾಗರ ಇರುವುದಾದರೂ ಹೇಗೆ! 'ತೊಟ್ಟು ಕಳಚಿದ ಹೂವು' ಎನ್ನುವ ಈ ಕತೆಯಲ್ಲಿ ಅಬ್ಬೆ, ಮಗ, ಮಗನ ಹೆಂಡತಿಯ ನಡುವಿನ ತಾಕಲಾಟಗಳು, ಸಂಬಂಧಗಳ ನಡುವಣ ಸಂಘರ್ಷಗಳಿವೆ. 

ಮುಂದಿನ ಕತೆ ಪಾತಿಚಿಕ್ಕಿಯದ್ದು. ಜೀವನದಲ್ಲಿ ಎದುರಾಗುವ ಸಾವಿರ‌ ಕಷ್ಟ ಕಾರ್ಪಣ್ಯಗಳಿಗೆ ಮಾತನಾಡದ ದೇವರುಗಳಿಗಿಂತ ಒರಟೊರಟಾಗಿ ಮಾತಾಡಿ, ಎಲ್ಲರ‌ ನಂಬಿಕೆಯನ್ನೇ ಅಲ್ಲಾಡಿಸುವಂತೆ ಬದುಕುವುದು ಪಾತಿಚಿಕ್ಕಿಯ ಪಾತ್ರ. ಮುಗ್ಧರ ಹಾಗೂ ನಿತ್ಯದ ಅಗತ್ಯಕ್ಕಾಗಿ ಹೆಣಗುವವರ ಮನುಷ್ಯ ಸಹಜ ಆಸೆಗಳನ್ನು  ಇಂದಿನ ರಾಜಕೀಯ ಕಾರ್ಯಕ್ರಮಗಳಲ್ಲಿ ಹೇಗೆ ಬಳಸಿಕೊಳ್ಳಲಾಗುತ್ತದೆ ಅನ್ನುವುದನ್ನೂ ಈ ಕತೆ ತೆರೆದಿಡುತ್ತದೆ. ಒಂದು ಗಂಭೀರ ಸನ್ನಿವೇಶದಲ್ಲೂ ಮಕ್ಕಳ ಮನಸ್ಸಿನಲ್ಲಿ ಮೂಡಬಹುದಾದ ಮುಗ್ಧ ಹಾಗೂ ಮಜವಾದ ಸಂಗತಿಯೊಂದು ಪಾತಿಚಿಕ್ಕಿಯ ಗಂಡ ಮನೆಬಿಟ್ಟು ಹೋದಾಗಿನ ಸಂದರ್ಭದಲ್ಲಿದೆ. ಹೆಣ್ಣು ತಾನು ಸೇರಿದ ಮನೆಯನ್ನು, ಹೊಸ ಸಂಬಂಧವನ್ನು ಅಪ್ಪಿಕೊಂಡಷ್ಟು ಸುಲಭವಾಗಿ ಗಂಡಸಿಗೆ ಅದು ಸಾಧ್ಯವಾಗುವುದು ಬಹಳ ಅಪರೂಪ ಅನ್ನುತ್ತಾರೆ ಕತೆಗಾರ್ತಿ. ಮುರಿದು ಮತ್ತಷ್ಟು ಚೆಂದಕ್ಕೆ ಕಟ್ಟುವುದು ಹೆಣ್ಣಿಗೊಲಿದ ವಿಶೇಷ ಕಲೆಯೇ ಇರಬೇಕು. ಅಲ್ಲದೇ ಇದ್ದರೆ ಹಳಬರು ಸುಮ್ಮನೆ ಹೇಳುತ್ತಿದ್ದರೇ; "ಮದುವೆ ಅಂತ ಒಂದ್ ಮಾಡಿ, ಹುಡುಗ ಸರಿ ಹೋಗ್ತಾನೆ" ಅಂತ! ಒಂದು ವಸತಿಗೃಹವನ್ನು ಮನೆಯಾಗಿಸುವವಳು ಹೆಣ್ಣು. ಒಂಟಿತನ ಎನ್ನುವುದು ಪೂರಾ ಮಾನಸಿಕ ಅವಸ್ಥೆ , ಯಾವಾಗ ಬೇಕಾದರೂ ಬರಬಹುದು, ತುಂಬು ಸಂಸಾರದಲ್ಲಿಯೂ ಮನುಷ್ಯ ತನಗ್ಯಾರಿಲ್ಲವೆಂದು ನೋಯಬಹುದು ಅನ್ನುವ ಸಂಗತಿಯನ್ನು ಲೇಖಕಿ ಹೇಳುತ್ತಾರೆ. ಬಹುಶಃ ಇದು ಎಲ್ಲಾ ಕಾಲಕ್ಕೂ ಪ್ರಸ್ತುತವೇ ಆಗಬಹುದಾದ ಹೇಳಿಕೆ ಅಂತ ನನಗನಿಸುತ್ತದೆ. ಜನರ ಕಷ್ಟ ಎಷ್ಟಿದೆಯೆಂದರೆ ಎಷ್ಟೇ ಗುಡಿ ಕಟ್ಟಿ ಕೈಮುಗಿದರೂ ಬೇಡಿ ಮುಗಿಯಲಾರದಷ್ಟು ಕೋರಿಕೆಗಳಿರುತ್ತವೆ ಅವರಿಗೆ! ತನಗಿಂತ ಹೆಚ್ಚು ಶಕ್ತಿಶಾಲಿಯಾದವರಲ್ಲಿ ನಂಬಿಕೆ ಹುಟ್ಟಿಕೊಳ್ಳುವುದೇ ಹೀಗೆ. ಅದಕ್ಕೆಂದೇ ಮನುಷ್ಯ ದೇವರನ್ನು ನಂಬತೊಡಗಿದ ಅಂತ ಭಗತ್ ಸಿಂಗ್ ತಮ್ಮ 'ನಾನೇಕೆ ನಾಸ್ತಿಕ' ಪುಸ್ತಕದಲ್ಲಿ ಬರೆದಿರುವ ಮಾತಿಗೆ ಇದು ಹೆಚ್ಚು ಹತ್ತಿರದ ಸಾಲು ಅನಿಸಿತು. ನಾವೆಲ್ಲರೂ ಪ್ರತಿ ದಿನ ಬಯಲರಸಿ ಹೊರಡುವುದಕ್ಕೆ ಹಲುಬುತ್ತಲೇ ಇರುತ್ತೇವೆ ಅಲ್ಲವಾ! ಸಂಕಲನದ ಶೀರ್ಷಿಕೆ ಕತೆ ಇದು; 'ಬಯಲರಸಿ ಹೊರಟವಳು' 

ಮುಂದಿನ ಕತೆಯ ಶುರುವಿನಲ್ಲಿ ಬರುವ ಕೊಂಕಣ ರೈಲಿನ ವರ್ಣನೆ, ಅಲ್ಲಿ ಹೊರಟಿದ್ದು ಮುಂಬಯಿಯಿಂದಾದರೂ, 'ಹಾಯ್, ಹೋಯ್, ಇಶ್ಶೀ' ಎನ್ನುವ ಉದ್ಗಾರಗಳು ಪಕ್ಕಾ ಉತ್ತರ ಕನ್ನಡದವು! ಹಲವು ಸಲ ಅನಿಸಿದ್ದಿದೆ, ನಾವು ಮತ್ತೆ ಮತ್ತೆ ಅದದೇ ಕತೆಗಳನ್ನು, ಅದದೇ ಪರಿಸರವನ್ನು, ಅದದೇ ಸಾಹಿತ್ಯವನ್ನು ತಿರುಗಾಮುರುಗಾ ಮಾಡಿ ಹೇಳುತ್ತಿದ್ದೇವಾ ಅಂತ. ಆದರೆ, ಇನ್ನೂ ಕೆಲವೊಮ್ಮೆ ಅನಿಸಿದ್ದಿದೆ. ನಮಗೆ ಗೊತ್ತಿಲ್ಲದ ಇನ್ನ್ಯಾವುದೋ ಪರಿಸರವನ್ನು ನಾವು ನಮ್ಮ ಕತೆಯಲ್ಲಿ ತರುವುದಾದರೂ ಹೇಗೆ ಸಾಧ್ಯ? ತಂದರೂ, ಅದು ಅಷ್ಟು ನೈಜವಾಗಿ ಇರುವುದಕ್ಕೆ ಸಾಧ್ಯವಾ? ಅಂತ. ಹಾಗಾಗಿ ಕೊನೆಗೆ ನಾನು ಕಂಡುಕೊಂಡ ಉತ್ತರ; ನಮ್ಮದೇ ಪರಿಸರದಲ್ಲಿ, ನಮ್ಮದೇ ಬಾಲ್ಯದಲ್ಲಿ, ನಮ್ಮದೇ ಊರಿನಲ್ಲಿ, ನಮ್ಮದೇ ನಗರಗಳಲ್ಲಿ ಹೇಳದೇ ಉಳಿದ ಅದೆಷ್ಟೋ ಕತೆಗಳಿವೆ. ಅವುಗಳನ್ನು ಹೇಳದೇ ಹೋದರೆ, ಆ ಕತೆಗಳಿಗೂ ದನಿ ಬೇಕಲ್ಲವಾ ಎಂಬುದಾಗಿ. ಹಾಗಾಗಿ, ಈಗ ಊರ ಕತೆಗಳು 'ಮತ್ತದೇ ಹಾಡು' ಎಂಬಂತಾಗುವುದಿಲ್ಲ. ಈ ಕತೆಯ ಶುರುವಿನಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗಲೂ ಗಂಡಸಿನ ಲೋಕ ಏನು ಅನ್ನುವುದನ್ನು ಕತೆಗಾರ್ತಿ ಹೇಳುತ್ತಾರೆ. ಅದಾದ ನಂತರ ಇಡೀ ಕತೆಯಲ್ಲಿರುವುದು ಒಂದು ಘಟನೆ ನಮ್ಮ ಜೀವನ ಪೂರ್ತಿ ಬೆನ್ನು ಹತ್ತಿ ಕೂತು ಕಾಡುತ್ತದೆ ಅನ್ನುವುದು ಹಾಗೂ ಅದರಿಂದಾಗಿ ನಾವು ತೆಗೆದುಕೊಳ್ಳುವ ನಿರ್ಧಾರಗಳು. ಕತೆಯ ಹೆಸರು 'ಆ ಕಡುಗಪ್ಪು ಕಣ್ಣುಗಳು'

ಒಂದು ಸಣ್ಣ ಮನಸ್ತಾಪ ಯಾವ್ಯಾವುದೋ ಅಮಲಿನಲ್ಲಿ ಇನ್ನೇನೋ ಆಗುವುದರಿಂದಲೇ‌ ಮನುಷ್ಯ ಜಾತಿಯನ್ನು ಇನ್ನೂ ಅರಿತುಕೊಳ್ಳುವುದಕ್ಕೆ ಸಾಧ್ಯವಾಗದೇ ಹೋಗಿರುವುದು. ಎಲ್ಲ ಸಲ ಗಲಾಟೆಯಾದಾಗಲೂ, ಯಾವ ಕಾರಣಕ್ಕಾಗಿ ಗಲಾಟೆ ನಿಗದಿಯಾಗಿತ್ತೋ ಅದಕ್ಕಿಂತಲೂ ಕೊನೆಯಲ್ಲಿ ಅದು ಉಳಿಯುವುದು ಇನ್ನೇನೋ ಆಗಿಯೇ! ಇದು ಇಂದಿನ ಸ್ಥಿತಿ.‌ ಮನುಷ್ಯನ ಭಾವಲೋಕ ವಿಚಿತ್ರವಾದದ್ದು. ಕೃತಜ್ಞತೆ ಮತ್ತು ಕೃತಘ್ನತೆಗೆ ಕೇವಲ ಒಂದು ಅಕ್ಷರದ ವ್ಯತ್ಯಾಸವಷ್ಟೇ. ಹಿಂಸಿಸುವುದೂ ಒಂದು ಉನ್ಮಾದವಿದ್ದಂತೆ, ಮಾಡಿದಂತೆ ಏರುತ್ತಲೇ ಹೋಗುತ್ತದೆ, ನಿಲ್ಲಿಸಬೇಕೆಂದು ಅನಿಸುವುದೇ ಇಲ್ಲ ಅನ್ನುವ ಸಾಲು ಎಲ್ಲಾ ಕಾಲದಲ್ಲಿಯೂ ಮನುಷ್ಯ ಯಾಕೆ ಕ್ರೌರ್ಯವನ್ನು ವಿಜೃಂಭಿಸುತ್ತಾನೆ ಅನ್ನುವುದಕ್ಕೆ ಉತ್ತರದಂತಿದೆ. ಈ ಕತೆಯ ಹೆಸರು 'ಸುಳಿ'

ನಂತರದ ಕತೆ ಬಾಡಿಗೆ ತಾಯ್ತನ, ಕಲಾಶಾಲೆಗೆ ಮಾಡೆಲ್ ಆಗುವ ಹೆಣ್ಣೊಬ್ಬಳ ಕುರಿತಾಗಿದ್ದು, ಜೊತೆಗೆ, ಯಾರ ಚಿತ್ರವನ್ನು ಬಿಡಿಸಿದ್ದೆನೋ, ಆ ಚಿತ್ರ ಹೆಚ್ಚಿನ ಬೆಲೆಗೆ ಮಾರಾಟವಾದಾಗ, ಆ ಹಣ ಅವರಿಗೂ ಸಲ್ಲಬೇಕು ಎಂದು ಮತ್ತೆ ಅವರನ್ನು ಹುಡುಕಿ ಹೋಗುವ ಒಬ್ಬ ಕಲಾವಿದನ ಕುರಿತಾಗಿಯೂ ಇದೆ. ಇದು ಒಬ್ಬ ಕಲಾವಿದನಿಗೆ ಅಥವಾ ಛಾಯಾಗ್ರಾಹಕನಿಗೆ (ಛಾಯಾಗ್ರಾಹಕನೂ ಕಲಾವಿದನೇ, ಅದರಲ್ಲಿ ಅನುಮಾನವಿಲ್ಲ!) ಇರಬೇಕಾದ ನೈತಿಕ ಪ್ರಜ್ಞೆ ಅನಿಸುತ್ತದೆ ನನಗೆ. ಇದು ನನಗೆ ಪಾಕಿಸ್ತಾನದ ಕ್ಯಾಂಪಿನಲ್ಲಿ ತೆಗೆದ 'ಅಪ್ಘನ್ ಗರ್ಲ್' ಫೋಟೋದಲ್ಲಿದ್ದ ಶರ್ಬತ್ ಗುಲಾಳನ್ನು ಫೋಟೋ ತೆಗೆದ ಸುಮಾರು ಇಪ್ಪತ್ತು ವರ್ಷಗಳ ನಂತರ ನ್ಯಾಷನಲ್ ಜಿಯೋಗ್ರಫಿಕ್ ತಂಡದವರು ಹುಡುಕಿಹೋದದ್ದನ್ನು ನೆನಪಿಸಿತು. ಈ ಕತೆಯ ಹೆಸರು 'ಶುಭ್ರಜ್ಯೋತ್ಸ್ನೆ'

ಖಾಲಿ ಜಾಗವನ್ನು ಹದ ಮಾಡಿ ಮನೆ ಕಟ್ಟುವುದು ಕಷ್ಟವೇನಲ್ಲ, ಆದರೆ ನೆನಪುಗಳೇ‌ ತುಂಬಿಕೊಂಡಿರುವ ಹಳೆ ಮನೆಯನ್ನು ಉದುರಿಸಿ ಹೊಸ ಮನೆ ಕಟ್ಟಿದರೂ ನೆನಪುಗಳು ಕಾಡದೇ ಇರುತ್ತವೆಯಾ? ಅನ್ನುವುದನ್ನು ಹೇಳುವ ಕತೆ 'ಹುಲ್ಲಾಗು ಬೆಟ್ಟದಡಿ'. ಕೊನೆಗೂ ಮನುಷ್ಯನಿಗೆ ಬೇಕಿರುವುದು ನೆಮ್ಮದಿಯಾ ಅಥವಾ ದೊಡ್ಡ ದೊಡ್ಡ ನಗರದ ಜೀವನವಾ ಅನ್ನುವ ಪ್ರಶ್ನೆಗೆ ಉತ್ತರಿಸುವ ಪ್ರಯತ್ನ ಮಾಡುತ್ತದೆ. 

ಎಂಥದ್ದೇ ಘಟನೆಯಾದರೂ ಮನೆಯಲ್ಲಿ ಮರುದಿನ ದೋಸೆ ಬಂಡಿಯ ಮೇಲೆ ದೋಸೆ ಹೊಯ್ಯಲೇಬೇಕು; ಅದೇ ಬದುಕು. ಹೊಯ್ಯುವವರಷ್ಟೇ ಬದಲಾಗಬಹುದು. ಆದರೆ, ಬೆಳಗಾಗುತ್ತದೆ, ಸಂಜೆಯಾಗುತ್ತದೆ,‌ ಕಾಲ ಜಾರುತ್ತದೆ, ಯಾರದೋ ಯೌವನಕ್ಕೆ ಮುಪ್ಪು ಬರುತ್ತದೆ. ಇನ್ನ್ಯಾರದೋ ಗರ್ಭದೊಳಗಿಂದಿಳಿದು ಪುಟ್ಟ ಅಳು ನಗು ಮೊದಲ ಬಾರಿಗೆ ಗಾಳಿಗೆ ಮೈಯೊಡ್ಡುತ್ತದೆ. ಇದು ಕಾಲದ ಪ್ರವಾಹ ಅನ್ನುವುದನ್ನು ಹೇಳುವ ಈ ಕತೆಯಲ್ಲಿ ನನ್ನನ್ನು ಕಾಡಿದ ರೂಪಕ ದೂರ್ವೆಯದ್ದು. ಈ ರೂಪಕ ವರ್ಷಗಟ್ಟಲೆ ನನ್ನನ್ನು ಕಾಡಿದೆ ಅಂದರೆ ಸುಳ್ಳಲ್ಲ. ಬಹುಶಃ ಇನ್ನಷ್ಟು ವರ್ಷಗಳ ಕಾಲ ಇದು ನೆನಪಿನಲ್ಲಿ ಉಳಿಯುತ್ತದೆ. "ಬೆಳಿಗ್ಗೆ ಕಾಲಡಿಗೆ ಸಿಕ್ಕಿ ಗೂನುಬೆನ್ನಿನವರಂತೆ ಬಾಗಿ ನಿಲ್ಲುವ ದೂರ್ವೆ ಕಾವೇರಿ ಕೊಯ್ದು ತೊಳೆದರೆ ಸಾಕು ಗಣೇಶನ ಮುಡಿಗೇರುವಷ್ಟು ಮತ್ತೆ ಪವಿತ್ರವಾಗಿಬಿಡುತ್ತಿತ್ತು. ಯಾರದ್ದೇ ಕಾಲಡಿಗೆ ಆದರೂ ತನ್ನತನ ಕಳೆದುಕೊಳ್ಳದಿದ್ದರೆ ತುಳಿತಕ್ಕೊಳಗಾದ ನೋವು ಬಹಳ ಹೊತ್ತಿರದಲ್ಲವೇ!". ಕತೆಯ ಹೆಸರು 'ಮಾಕಬ್ಬೆ'

ಬರೆಹದ ಮೊದಲಿಗೆ ಹೇಳಿದ್ದೆ; ಕೆಲವು ಸಣ್ಣ ಸಣ್ಣ ರೂಪಕಗಳು ಈ ಕಥಾಸಂಕಲನದ ಅನುಭವವನ್ನು ಇನ್ನಷ್ಟು ಆಪ್ತವಾಗಿಸುತ್ತವೆ ಅಂತ. ಜೊತೆಗೆ, ಕಥೆಗಾರರಿಗೆ ಇರಬೇಕಾದದ್ದು ಮೈಯೆಲ್ಲಾ ಕಣ್ಣು ಅನ್ನುವುದು ಈ ಕತೆಗಾರ್ತಿಗೆ ಹೆಚ್ಚು ಹೊಂದಿಕೆಯಾಗುತ್ತದೆ. ಇಲ್ಲಿ ಕಾಣಸಿಕ್ಕಿದ್ದು ಬಹಳ ಹೊಸದಾದ ರೂಪಕಗಳು. ಒಂದೆರಡು ನಿಮ್ಮ ಓದಿಗೆ..

"ಡಬ್ಬದಲ್ಲಿರುವ ಮದುವೆಯ ಬೂಂದಿಲಾಡಿಗೆ ಗಡ್ಡ ಮೀಸೆ ಆಗ ತಾನೇ ಮೂಡುತ್ತಿತ್ತು"

"ಭರಣಿಯಲ್ಲಿ ಹತ್ತತ್ತಿಟ್ಟ ಉಪ್ಪಿನಕಾಯಿಯ ಮುಖ"

"ಹಾಲೇ‌ ಕಾಣದ ಚಹದಂತೆ , ಹೆಚ್ಚು ಕಮ್ಮಿ ಛಾ ಕಣ್ಣು ಬಣ್ಣದ ಅರಲು ನೀರು"

"ಅಲ್ಲೇ ಮೂಲೆಯಲ್ಲಿದ್ದ ಪುಟ್ಟ ಗಿಡವೆರಡು ಮನೆಯೊಳಗೆ ತಂಪಗೆ ಹಬ್ಬಿದ್ದರೂ ಕಿಡಕಿಯತ್ತಲೇ ಮುಖಮಾಡಿ ಸೂರ್ಯನಿಗಾಗಿ ತಪಿಸುತ್ತಿದ್ದವು. ಬಹುಶಃ ಚಿಕ್ಕಿಯ ಅವಸ್ಥೆಯೂ ಈಗ ಹೀಗೆಯೇ ಇದ್ದಿರಬಹುದು"

ಒಮ್ಮೊಮ್ಮೆ ಗೋಡೆಗಳಾಚೆಯೂ, ಕೆಲವೊಮ್ಮೆ ಗೋಡೆಗಳ ನಡುವೆಯೂ ನಿಂತು ಸಂಬಂಧಗಳ ಕತೆಯನ್ನು ಹೇಳಿ ಕತೆಗಾರ್ತಿ ಬಯಲರಸಿ ಹೊರಟಿದ್ದಾರೆ. ಅರಸಿ ಹೊರಟ ಬಯಲು ಕೂಡಾ ಇನ್ನಷ್ಟು ಕತೆಗಳಾಗಿ ಅವರನ್ನೇ 'ಹರಸಿ' ಬರಲಿ ಅನ್ನುವ ಆಶಯಗಳೊಂದಿಗೆ ಹಾಗೂ ಸಂಕಲನಕ್ಕಾಗಿ ಕತೆಗಾರ್ತಿಗೆ ಧನ್ಯವಾದಗಳೊಂದಿಗೆ,

~'ಶ್ರೀ'
   ತಲಗೇರಿ