ಸಖೀ ರಾಧೆ,
ಹಿಂದೊಮ್ಮೆ ಹೀಗೇ ದಟ್ಟ ಕತ್ತಲೆಯ ಮೋಡಗಳು ಆಕಾಶದಲ್ಲಿ ಆವರಿಸಿ, ಇಡೀ ವಾತಾವರಣ ಒಂದು ಗಾಢವಾದ ಆತ್ಮೀಯತೆಯನ್ನೂ, ನಿರೀಕ್ಷೆಯನ್ನೂ, ಆಹ್ಲಾದಕತೆಯನ್ನೂ, ತಲ್ಲಣವನ್ನೂ ಕಟ್ಟಿಕೊಟ್ಟಂಥ ಸಮಯದಲ್ಲಿ, ಕೊನೆಗೆ ಕಪ್ಪೆಲ್ಲವೂ ನೀರಾಗಿ, ಭೂದೇವಿಯ ಎದೆಯೊಳಗಿಳಿದಂಥ ಸಂದರ್ಭದಲ್ಲಿ ನಿನಗೆ ಪತ್ರ ಬರೆದಿದ್ದೆ. ವರ್ಷಗಳೆರಡಾದವೀಗ, ಪತ್ರ ಬರೆಯದೇ. ಕೃಷ್ಣ ಮರೆತಿರುವನು ಅಂತ ಅಂದುಕೊಂಡಿರುತ್ತೀಯೇನೋ ಅಥವಾ ಇವನನ್ನು ನಂಬಿ ಕೂತರೆ ಕಾಯುವುದಷ್ಟೇ 'ಕಾಯ'ದ ಕೆಲಸ ಅಂತಲೂ ನಸುನಗುತ್ತೀಯೇನೋ, ಅಥವಾ ಆಗಿನ್ನೂ ಮಳೆಗಾಲ ಶುರುವಾಗಿರಲಿಲ್ಲ, ಕಪ್ಪು ಮೋಡ ಅಂತೆಲ್ಲಾ ಸುಳ್ಳು ಸುಳ್ಳೇ ಹೇಳಬೇಡ, ಬರೀ ಹೀಗೆಲ್ಲಾ ಏನೇನೋ ಹೇಳುತ್ತಲೇ ನನ್ನ ಕೋಪವನ್ನು ಬೇರೆಡೆ ಸೆಳೆಯುವುದಕ್ಕೆ ಯತ್ನಿಸಬೇಡ ಅಂತ ನೀನು ಸಿಟ್ಟಾಗುತ್ತಿಯೇನೋ ಅಂತೆಲ್ಲಾ ನಾನು ಕಲ್ಪಿಸಿಕೊಳ್ಳುವುದರಲ್ಲೇ ಎಷ್ಟು ಚೆಂದದ ಸುಖವಿದೆ ತಿಳಿದಿದೆಯಾ ನಿನಗೆ? ಹಾಗೆಯೇ, ಒಂದು ವೇಳೆ ನೀನು ಕೋಪಿಸಿಕೊಂಡರೂ, ಅದೆಷ್ಟು ಹೊತ್ತು? ಪಾಪದವನಲ್ಲವಾ ನಾನು? ಏನೋ ಹೆಚ್ಚು ಕಡಿಮೆ ಆಗುತ್ತದಲ್ಲವಾ, ಏನೋ ಸೈರಿಸಿಕೊಳ್ಳಬೇಕಪ್ಪಾ ಅಂತೆಲ್ಲಾ ಹೇಳಿ ಕಿವಿ ಹಿಡಿದುಕೊಂಡು, ಮುಖ ಸಣ್ಣಗೆ ಮಾಡಿಕೊಂಡು ನಿನ್ನೆಡೆಗೆ ನೋಡುತ್ತಾ ನಿಲ್ಲುವುದು ನನಗೆ ಹೊಸದಲ್ಲ ಬಿಡು. ಕೃಷ್ಣ ಹಾಗೆ ನೋಡಿದಾಗಲೆಲ್ಲಾ ವಾತ್ಸಲ್ಯದ ತೊಟ್ಟಿಲೇ ನೀನಾಗುವುದೂ ಹೊಸದಲ್ಲ ಬಿಡು! ವಾತ್ಸಲ್ಯ ಅಂದಾಗಲೆಲ್ಲಾ ಮಮತೆ ತುಂಬಿದ ಅಮ್ಮ ಯಶೋದೆಯ ಕಣ್ಣುಗಳು ಕಣ್ಣ ಮುಂದೆ ಬರುತ್ತವೆ. ಅರಿವಿಲ್ಲದೆಯೇ ತುಟಿ ಬಿರಿಯುತ್ತದೆ, ಸಂಭ್ರಮದ ನಗೆ ಹೂವು ತಾನಾಗೇ ಅರಳುತ್ತದೆ. ಎದೆಯಲ್ಲೊಂದು ಅಲೌಕಿಕ ಸಂಭ್ರಮ ಮೊದಲಾಗುತ್ತದೆ. ಅಮ್ಮನೆಂದರೆ ಹಾಗೆಯೇ ಅಲ್ಲವಾ ರಾಧಾ..
ನನ್ನದು ಬಹಳ ಭಿನ್ನವಾದ ಪರಿಸ್ಥಿತಿಯಾಗಿತ್ತು ನೋಡು. ಕಾರಾಗೃಹದಲ್ಲಿ ಹುಟ್ಟಿ, ಹುಟ್ಟಿದ ಕೆಲವೇ ಕ್ಷಣಕ್ಕೆ ಹೆತ್ತಮ್ಮನಿಂದ ದೂರವೇ ಉಳಿಯಬೇಕಾದ ಸ್ಥಿತಿ. ಹುಟ್ಟಿದ ಮಗುವಿಗೆ ಅಮ್ಮನ ಎದೆ ಹಾಲೇ ತಾನೇ ಈ ಜಗತ್ತನ್ನು ನೋಡುವ ಶಕ್ತಿ ಕೊಡುವುದು, ಎದ್ದು ನಿಲ್ಲುವ, ನಿಲ್ಲುತ್ತಲೇ ನಡೆಯುವ, ನಡೆಯುತ್ತಲೇ ಓಡುವ, ಕುಣಿಯುವ, ನರ್ತಿಸುವ, ಸಂಭ್ರಮಿಸುವ ಚೈತನ್ಯ ಕೊಡುವುದು. ಹಸಿ ಮೈಯ ತಾಯಿ ಕಾರಾಗೃಹದಲ್ಲೇ ಉಳಿದಳು. ಬೇರ್ಪಟ್ಟ ನಾನು ಬದುಕಿಗಾಗಿ ಇನ್ನೊಬ್ಬರ ಮನೆಯನ್ನು ಆಶ್ರಯಿಸಿದೆ. ವಿಚಿತ್ರ ಅನ್ನಿಸುತ್ತದಲ್ಲವಾ? ಈ ಜಗತ್ತು ಅದನ್ನು ಮಾಯೆ ಅನ್ನುವುದೋ, ಲೀಲೆ ಅನ್ನುವುದೋ ಅದು ಜಗತ್ತಿಗೆ ಬಿಟ್ಟಿದ್ದು. ಹಾಲುಣಿಸುವುದೆಂದರೆ ಅಮ್ಮ ಯಶೋದೆಗೆ ಅದೆಂಥ ಸಂಭ್ರಮ. ನಾನು ಇಂಥ ಸಮಯ ಅಂಥ ಸಮಯ ಅಂತೆಲ್ಲಾ ಇಲ್ಲದೇ ಕೂಗುತ್ತಿದ್ದೆ. ಅಮ್ಮ ಯಶೋದೆ ಕೆಲವೊಮ್ಮೆ ಹಾಲುಣಿಸುತ್ತ ಊಟ ನಿದ್ದೆ ಮನೆಗೆಲಸ ಮರೆಯುತ್ತಿದ್ದಳು. ಕೆಲವೊಮ್ಮೆ ನನ್ನನ್ನು ಮಡಿಲಲ್ಲಿ ಮಲಗಿಸಿಕೊಂಡು ಕುಳಿತಲ್ಲೇ ಗೋಡೆಗೆ ಆತು ನಿದ್ದೆಹೋಗುತ್ತಿದ್ದಳು. ಆದರೆ, ನನ್ನ ಒಂದು ಮುಲುಕಾಟ ಅವಳನ್ನು ಎಚ್ಚರಾಗಿಸುತ್ತಿತ್ತು. ಕರುಳಬಂಧ ಅಮ್ಮ ದೇವಕಿಯದ್ದಾದರೂ ಆತ್ಮಬಂಧ ಅಮ್ಮ ಯಶೋದೆಯದ್ದು. ಜಗತ್ತಿನ ಹೆಣ್ಣು ಮಕ್ಕಳಿಗೆಲ್ಲಾ ಈ ತಾಯ್ತನವೆನ್ನುವುದು ತಾನಾಗಿಯೇ ಬಂದುಬಿಡುತ್ತದೆ ನೋಡು. ಯಾರೋ ಹೆತ್ತ ಮಗುವಾದರೂ ತನ್ನದೇ ಇದು ಅನ್ನುವಂತೆ ಕಾಪಿಡುವ ಹೃದಯವೇನಿದ್ದರೂ ಅದು ತಾಯಿಯದು ಮಾತ್ರ. ಹೇಳಬಹುದು ನೀನು, ಅಲ್ಲಾ ಕೃಷ್ಣ, ಅಮ್ಮ ಯಶೋದೆಗೆ ನೀನು ಅವಳ ಮಗ ಅಲ್ಲವೆಂದು ತಿಳಿದಿರಲಿಲ್ಲವಲ್ಲಾ ಅಂತ. ಅದು ನಿಜವೇ ಅದರೂ, ಗೋಕುಲದ ಗೋಪಿಕೆಯರ್ಯಾರಿಗೂ ನಾನು ಅವರ ಮಗನಾಗಿರಲಿಲ್ಲವಲ್ಲ. ಆದರೆ, ಕೃಷ್ಣನಿಗೆ ಹಸಿವಾದಾಗಲೆಲ್ಲಾ ಗೋಕುಲದ ಎಲ್ಲಾ ಗೋಪಿಕೆಯರಲ್ಲಿ ಎದೆಹಾಲು ಒಸರುತ್ತಿತ್ತು. ಬಹುಶಃ ಕಾರಾಗೃಹದಲ್ಲಿ ಅಮ್ಮ ದೇವಕಿಯ ಎದೆಯಲ್ಲೂ ಹೀಗೆ ಹಾಲು ಒಸರುತ್ತಿತ್ತೇನೋ, ಅವಳು ಪರಿತಪಿಸುತ್ತಲೇ ಸಮಸ್ತ ಸೃಷ್ಟಿಯಲ್ಲಿ ಬೇಡಿಕೊಳ್ಳುತ್ತಿದ್ದಳೇನೋ, ನನ್ನ ಕಂದನಿಗೆ ಹಾಲುಣಿಸಿ ದೈವಗಳೇ ಅಂತ ಕೈಮುಗಿದು..
ಜಗದೋದ್ಧಾರಕ್ಕಾಗಿ ಅವತಾರವೆತ್ತಿದವ ನಾನಾದರೂ ಅಮ್ಮ ದೇವಕಿ ಆ ಅವತಾರಕ್ಕೊಂದು ರೂಪ ಕೊಟ್ಟಳು. ಇಂದು ಅದೇ ರೂಪವನ್ನಲ್ಲವಾ ಸೃಷ್ಟಿ ಕೊಂಡಾಡುವುದು, ಮೋಹಕವೆಂದು ಬಗೆಬಗೆಯಲ್ಲಿ ವರ್ಣಿಸುವುದು. ಮೋಹಗಳ ತೊರೆಯಿರಿ ಅಂತ ಹೇಳುವವ ನಾನಾದರೂ ಈ ವಾತ್ಸಲ್ಯವನ್ನು ತಿರಸ್ಕರಿಸಲಾರೆ. ನಾನ್ಯಾರೆಂದು ತಿಳಿಯದೆಯೇ ಅಮ್ಮ ಯಶೋದೆ ನನ್ನ ಬಾಲ್ಯವನ್ನು ನನಗೆ ಕಟ್ಟಿಕೊಟ್ಟಳು. ಮೊಸರ ಮಡಕೆಯಲ್ಲಿ ನಾನು ಕೈಹಾಕಿ ಬೆಣ್ಣೆ ಕದ್ದು ತಿಂದಾಗಲೆಲ್ಲಾ ಕಿವಿ ಹಿಂಡುತ್ತಿದ್ದಳು. ಆಮೇಲೆ, ಅವಳೇ ಬರಸೆಳೆದು ಅಪ್ಪಿ ಮುತ್ತಿಟ್ಟು ಮಡಿಲಲ್ಲಿ ಮಲಗಿಸಿಕೊಂಡು ಲಾಲಿ ಹಾಡುತ್ತಿದ್ದಳು. ನನ್ನ ಕಿವಿ ಹಿಂಡುವಾಗಲೆಲ್ಲಾ ಅವಳ ಕಂಗಳನ್ನು ಎದುರಿಸುವ ಧೈರ್ಯ ನನ್ನಲ್ಲಿ ಇರುತ್ತಿರಲಿಲ್ಲ. ಒಮ್ಮೆ ಮಾತ್ರ ನೋಡಿದ್ದೆ, ದೊಡ್ಡ ಕಣ್ಣು ಮಾಡಿದ್ದಳು, ಆದರೆ ಕಣ್ಣೀರಿನಿಂದ ತುಂಬಿಹೋಗಿತ್ತು. ಲಾಲಿ ಹಾಡುವಾಗ ಕೂಡಾ, ಅವಳ ಮಡಿಲಲ್ಲಿ ಮಲಗಿದ್ದ ನನ್ನ ಕೆನ್ನೆಯ ಮೇಲೆ ಒಂದೆರಡು ಬಾರಿ ಬಿಸಿ ಹನಿಗಳು ಬಿದ್ದ ನೆನಪಿದೆ ನನಗೆ. ಅವಳ ಧ್ವನಿ ಕಂಪಿಸುತ್ತಿರಲಿಲ್ಲ, ಆದರೆ, ನಾನು ಮಲಗಿದೆ ಅಂತ ತಿಳಿದ ಮೇಲೆ, ಕಿವಿ ಹಿಂಡಿದ್ದಕ್ಕಾಗಿ ಬೇಸರಿಸಿಕೊಂಡು ಅಳುತ್ತಿದ್ದಳು. ನಾನು ಬೇಕಂತಲೇ ನನ್ನ ಕಣ್ಣು ತಿಕ್ಕುತ್ತಿದ್ದೆ. ತಕ್ಷಣ ಏನೂ ಆಗಿಲ್ಲವೆಂಬಂತೆ ಸಾವರಿಸಿಕೊಂಡು ನಿಧಾನಕ್ಕೆ ತಲೆತಟ್ಟುತ್ತಿದ್ದಳು. ಮಣ್ಣು ತಿಂದ ನನ್ನ ಬಾಯ್ತೆರೆಸಿದಾಗ ಬ್ರಹ್ಮಾಂಡ ಕಂಡ ಮೇಲೂ ಆಕೆ ನನ್ನ ಕಿವಿ ಹಿಂಡುವುದ ಬಿಡಲಿಲ್ಲ, ಬೆತ್ತ ಹಿಡಿದ ಅವಳನ್ನು ಗೋಕುಲದ ತುಂಬಾ ಓಡುವಂತೆ ಮಾಡುವುದನ್ನು ನಾನೂ ಬಿಡಲಿಲ್ಲ. ಆಡಿದಳು, ಹಾಡಿದಳು ಅಮ್ಮ ಯಶೋದೆ ನನ್ನ ಜೊತೆ. ಗೋಪಿಕೆಯರೂ ಕಡಿಮೆ ಇರಲಿಲ್ಲ. ಅಮ್ಮ ಯಶೋದೆಗೆ ನಾನೆಂದರೆ ಬಹಳ ಪ್ರೀತಿ. ಯಾರಾದರೂ ಪದೇ ಪದೇ ನನ್ನನ್ನು ನೋಡಿದರೆ ದೃಷ್ಟಿ ಆಗಿಬಿಡುತ್ತದೆ ಅನ್ನುವ ಆತಂಕ ಅವಳಿಗೆ. ಅದರಲ್ಲೂ ಗೋಪಿಕೆಯರು ನನ್ನನ್ನು ಎವೆಯಿಕ್ಕದೇ ನೋಡುವುದನ್ನು ಅವಳು ನೋಡಿದ್ದಳು. ಹಾಗಾಗಿ ಗೋಪಿಕೆಯರೆಲ್ಲರಿಗೂ ತಾಕೀತು ಮಾಡಿದ್ದಳು, ಯಾರೂ ಕೃಷ್ಣನನ್ನು ನೋಡುತ್ತ ನಿಲ್ಲಬಾರದು. ಅವನೇನಾದರೂ ದಾರಿಯಲ್ಲಿ ಸಿಕ್ಕರೆ ತಲೆಬಗ್ಗಿಸಿಕೊಂಡು ನಡೆಯಬೇಕು ಇತ್ಯಾದಿ ಇತ್ಯಾದಿ. ಆದರೆ, ಗೋಪಿಕೆಯರು ಅವೆಲ್ಲವನ್ನೂ ಕೇಳುವರೇ! ಬೇಕು ಬೇಕಂತಲೇ ನಾನು ಬರಲಿ ಅಂತಲೇ ಬೆಣ್ಣೆ ಮಡಕೆಗಳನ್ನು ಮೇಲೆ ಕಟ್ಟದೇ ನೆಲದ ಮೇಲೇ ಇಡುತ್ತಿದ್ದರು. ತಮ್ಮ ಗಂಡ ಮಕ್ಕಳು ಕೇಳಿದರೆ ಖಾಲಿಯಾಗಿದೆ ಅನ್ನುತ್ತಿದ್ದ ಇವರು ನನಗಂತಲೇ ಬೇರೆ ಮಡಕೆಯನ್ನು ಅಡಗಿಸಿಡುತ್ತಿದ್ದುದೂ ಉಂಟು. ಆಮೇಲೆ, ನಾನು ಬೆಣ್ಣೆ ತೆಗೆಯುವಾಗಲೆಲ್ಲಾ ಅಲ್ಲಿಯೇ ಇದ್ದರೂ ನೋಡದವರಂತೆ ಇದ್ದು, ಆಮೇಲೆ ಅಮ್ಮ ಯಶೋದೆಯ ಬಳಿಗೆ ಬಂದು ದೂರುತ್ತಿದ್ದರು. ಆಗ, ಅಮ್ಮ ಯಶೋದೆ ನನ್ನ ಕರೆದು ಎದುರಲ್ಲಿ ನಿಲ್ಲಿಸಿ ಕೇಳುವಾಗಲೆಲ್ಲಾ ತಮ್ಮ ದೂರುಗಳನ್ನು ಮರೆತು ನಗುತ್ತಾ ನಿಂತುಬಿಡುತ್ತಿದ್ದರು. ಅಮ್ಮ ಯಶೋದೆಗೆ ಗೊಂದಲ. ಕೊನೆಕೊನೆಗೆ ಅಮ್ಮ ನೀವುಂಟು ನಿಮ್ಮ ಕೃಷ್ಣನುಂಟು, ನನ್ನ ಹತ್ತಿರ ಅವನ ದೂರು ತರಬೇಡಿ ಅಂತನ್ನುವುದಕ್ಕೆ ಶುರು ಮಾಡಿದ್ದಳು. ನಿನಗಿದೆಲ್ಲಾ ಗೊತ್ತಿದೆಯಲ್ಲವಾ ರಾಧಾ? ಆತ್ಮೀಯರೊಂದಿಗೆ ಹೀಗೆ ನೆನಪುಗಳನ್ನು ಹಂಚಿಕೊಳ್ಳುವ ಸುಖಕ್ಕೆ ಬೇರೆ ಯಾವ ವ್ಯಾಖ್ಯಾನಗಳೂ ಬೇಕಿಲ್ಲ ಅಲ್ಲವಾ. ಅದರಲ್ಲೂ, ನನ್ನೆಲ್ಲಾ ನೆನಪಿನ ಪಾಲುದಾರಳು ನೀನು. ರಾಧೆಯಿಲ್ಲದ ಕೃಷ್ಣನ ನೆನಪುಗಳು ಅಪೂರ್ಣ. ಬರೀ ನೆನಪುಗಳಲ್ಲೇ ನಾವಿರುವುದು ಈಗ ಕೃಷ್ಣಾ ಅನ್ನದಿರು. ಸಮಯದ ಹಂಗು ತೊರೆದ ನದಿಗಳ ಹಾಗೆ ಈ ನೆನಪುಗಳು. ನದಿಗಳು ಬತ್ತುತ್ತವೆ, ಉಕ್ಕುತ್ತವೆ, ಕಾಣೆಯಾಗುತ್ತವೆ ಅಂತನ್ನಬೇಡ. ನದಿ ತನ್ನ ಹರಿವನ್ನು ನೆನಪಿಟ್ಟುಕೊಳ್ಳುತ್ತದೆ. ಯಾವತ್ತೋ ಒಂದು ದಿನ ಸಮಯ ಕೂಡಿಬಂದಾಗ ಮತ್ತದೇ ಹಾದಿಯಲ್ಲಿ ಅದೆಂಥದ್ದೇ ಅಡೆತಡೆಗಳಿದ್ದರೂ ಅವೆಲ್ಲವನ್ನೂ ದಾಟಿಕೊಂಡು ಹರಿಯುತ್ತದೆ. ನನ್ನೀ ನೆನಪಿನ ನದಿಯ ಹರಿವನ್ನು ನಿರಂತರವಾಗಿಸುತ್ತಿರುವವಳು ನೀನು. ಋತು ನಾನಾದರೂ ಸ್ಪಂದಿಸುವ ಪ್ರಕೃತಿ ನೀನು. ಆತ್ಮ ನಾನಾದರೂ ಸ್ಮೃತಿ ನೀನು..
ನೆನಪು ಅಂದಾಗ ಮತ್ತೆರಡು ಘಟನೆಗಳು ಮುನ್ನೆಲೆಗೆ ಬಂದವು ನೋಡು. ನೆನಪಿದೆಯಾ ನಿನಗೆ ಪೂತನಿ ನನಗೆ ಹಾಲುಣಿಸಿದ್ದು. ಯಾವ ಅಪರಿಚಿತರಿಗೂ ನನ್ನ ಹತ್ತಿರವೂ ಹೋಗಗೊಡದ ಅಮ್ಮ ಯಶೋದೆ ಅಂದು ದಿಗ್ಭ್ರಮೆಯಿಂದ ನಿಂತುಬಿಟ್ಟಿದ್ದಳು ಪೂತನಿಯನ್ನು ನೋಡಿ. ಸೌಂದರ್ಯದ ಉಪಮೆಯೇ ಗೋಕುಲಕ್ಕೆ ಬಂದಂತೆ ಬಂದಿದ್ದಳು ಪೂತನಿ. ಬಂದವಳೇ ನಡೆದಿದ್ದು ನನ್ನ ತೊಟ್ಟಿಲ ಬಳಿಗೆ. ನಾನು ಅಂದು ಕಣ್ಣು ಪಿಳಕಿಸುತ್ತಾ ಮಲಗಿದ್ದೆ. ಎರಡೂ ಕೈಗಳಲ್ಲಿ ಎತ್ತಿಕೊಂಡಳು. ಒಮ್ಮೆ ನನ್ನ ಮುಖ ನೋಡಿದಳು; ದೊಡ್ದದಾಗಿ ನಿಟ್ಟುಸಿರು ಬಿಟ್ಟಳು. ವಿಷದ ಹಾಲಿಂದ ಕೊಲ್ಲಬೇಕೆಂದು ಅವಳಿಗೆ ಆಜ್ಞೆಯಾಗಿತ್ತು. ಸ್ತನಪಾನಕ್ಕಾಗಿ ಅವಳ ಸ್ತನಗಳನ್ನು ನನ್ನ ಬಾಯಿಯಲ್ಲಿಟ್ಟಳು. ನಾನು ಅವಳ ಪ್ರಾಣವನ್ನೂ ಹೀರಿದ್ದೆ. ಆ ಭಯಂಕರ ನೋವಿಗೆ ಅವಳ ಸೌಂದರ್ಯದ ಮಾರುವೇಷ ಬದಲಾಗಿ ರಾಕ್ಷಸಿಯ ನಿಜರೂಪದ ದೇಹ ಬಿದ್ದಿತ್ತು. ನಾನು ಅದರ ಮೇಲೆ ಆಟವಾಡುತ್ತಿದ್ದೆ. ಅಂದು ಆ ದೇಹವನ್ನು ಗೋಕುಲದಲ್ಲಿ ಬೆಂಕಿ ಹಾಕಿ ಸುಟ್ಟಾಗ ಸುಗಂಧವೊಂದು ಇಡೀ ವಾತಾವರಣವನ್ನು ವ್ಯಾಪಿಸಿತ್ತು. ಪೂತನಿ ಭವದ ಬದುಕಿಂದ ಮುಕ್ತಳಾಗಿದ್ದಳು. ಯಾಕೆ ಕೃಷ್ಣಾ, ಕೊಲ್ಲಲು ಬಂದವಳಿಗೆ ಮುಕ್ತಿ ಅಂತ ನೀನು ಪ್ರಶ್ನಿಸಬಹುದು. ನಿನಗೆ ಗೊತ್ತಾ ರಾಧಾ, ರಕ್ಕಸಿಯಾಗಿದ್ದರೂ, ಕೊಲ್ಲುವುದೇ ಉದ್ದೇಶವಾಗಿದ್ದರೂ ನನಗೆ ಎದೆ ಹಾಲು ಉಣಿಸುವ ಆ ಸಂದರ್ಭದಲ್ಲವಳು ಯಾವ ಕಲ್ಮಶಗಳೂ ಇಲ್ಲದ ತಾಯಾಗಿದ್ದಳು. ಕೊಲ್ಲುವುದ ಮರೆತಿದ್ದಳು. ತಾಯ್ತನದ ಪೂರ್ಣಭಾವವನ್ನು ಅನುಭವಿಸಿದಳು. ನಿಜವಾಗಿಯೂ ಹಾಲುಣಿಸಿದವಳು ಕೊಲ್ಲಲಾರಳು ಅನ್ನುವ ಸಂದೇಶ ಜಗತ್ತಿಗೆ ಮುಟ್ಟಬೇಕಿತ್ತಲ್ಲವಾ, ಹಾಗಾಗಿಯೇ ಅಂದು ಪೂತನಿ ತಾಯ್ತನದ ಪದವಿ ಪಡೆದಳು ಹಾಗೂ ಅದರಿಂದಾಗಿಯೇ ಅವಳ ಅಷ್ಟೂ ದಿನದ ಕ್ಲೇಶಗಳಿಂದ ಮುಕ್ತಳಾದಳು.
ಅಶ್ವತ್ಥಾಮನು ಅಸ್ತ್ರ ಪ್ರಯೋಗಿಸಿ ಉತ್ತರೆಯ ಗರ್ಭದಲ್ಲಿದ್ದ ಮಗುವನ್ನು ಕೊಲ್ಲುವುದಕ್ಕೆ ಹವಣಿಸಿದ್ದು ನೆನಪಿದೆಯಾ ನಿನಗೆ? ಜಗತ್ತನ್ನೇ ನೋಡಿರದ ಭ್ರೂಣವೊಂದಕ್ಕೆ ಅಸ್ತ್ರ ಪ್ರಯೋಗ ಮಾಡಬಾರದಿತ್ತು ಅಶ್ವತ್ಥಾಮ. ಆದರೆ, ಪಾಂಡವರ ವಂಶವನ್ನು ನಿರ್ವಂಶ ಮಾಡಬೇಕೆನ್ನುವ ದ್ವೇಷದಲ್ಲಿ ಮಹಾಗುರು ದ್ರೋಣರ ಮಗ ಅಶ್ವತ್ಥಾಮ ಧರ್ಮದ ಕಟ್ಟಳೆಗಳನ್ನು ಮೀರಿ ನಿಂತಿದ್ದ. ಒಂದು ವೇಳೆ ಆ ದಿನ ಉತ್ತರೆಯ ಗರ್ಭವೇನಾದರೂ ಬಲಿಯಾಗಿದ್ದರೆ ಇತಿಹಾಸದಲ್ಲೊಂದು ಘೋರ ಕೃತ್ಯ ದಾಖಲಾಗುತ್ತಿತ್ತು. ಹಾಗಾಗಿಯೇ ನಾನು ಆ ದಿನ ಆ ಗರ್ಭಕ್ಕೆ ರಕ್ಷಣಾಕವಚವಾಗಿ ನಿಲ್ಲಬೇಕಾಯಿತು. ಆ ದಿನ ಧರ್ಮಕ್ಕಿಂತಲೂ ಮುಖ್ಯವಾದ ಇನ್ನೇನೋ ಒಂದು ಸಂದೇಶ ಇಡೀ ಸೃಷ್ಟಿಗೆ ತಲುಪಬೇಕಿತ್ತು. ತಾಯಿಯ ಗರ್ಭವೂ ಸುರಕ್ಷಿತವಲ್ಲ ಅಂತ ತಿಳಿದರೆ ಈ ಸೃಷ್ಟಿಯಲ್ಲಿ ಅದೆಷ್ಟೋ ಯುಗಗಳ ತನಕ ಜೀವ ಸೃಜನೆ ಆಗುವುದಾದರೂ ಹೇಗೆ ಅಲ್ಲವಾ ರಾಧೆ?
ಮಾತೃತ್ವದ ನೆನಪುಗಳನ್ನು ಮೆಲುಕು ಹಾಕುತ್ತಾ, ನೀನು ಹೇಗಿದ್ದೀಯಾ ಅಂತ ಕೇಳುವುದನ್ನೇ ಮರೆತೆ ನೋಡು ನಾನು. ಕಾಯುತ್ತಿದ್ದೀಯಾ ಅಂತ ತಿಳಿದಿದೆ. ಕಾಯುವುದು ಹೆಣ್ಣು ಜೀವಕ್ಕೆ ಹುಟ್ಟಿನಿಂದಲೇ ಬಂದ ಸಾಮರ್ಥ್ಯ ಅಂತ ನಾನು ಅಂದರೆ, ಹೌದಪ್ಪಾ, ನಿಮಗೇನು ಗಂಡಸರಿಗೆ, ಹೇಳಿಬಿಡುತ್ತೀರಿ, ಕಾಯುವುದರಲ್ಲೂ ಒಂಥರಾ ಸುಖವಿದೆ, ವಿರಹ ಹೆಚ್ಚಾದಷ್ಟೂ ಮಿಲನದ ತೀವ್ರತೆ ಹೆಚ್ಚು, ಸಂಬಂಧಗಳು ಗಟ್ಟಿಯಾಗುವುದೇ ಕಾಯುವುದರಿಂದ ಇತ್ಯಾದಿ ಇತ್ಯಾದಿ, ಅಂತೆಲ್ಲಾ ನನ್ನ ಮೇಲೆ ಹರಿಹಾಯಬೇಡ. ಜೀವವೊಂದು ಕರುಳ ಬಳ್ಳಿಗೆ ಅಂಟಿಕೊಂಡಿರುವಾಗ ಒಂಬತ್ತು ತಿಂಗಳುಗಳ ಕಾಲ ಪೊರೆದು, ಕ್ಷಣಕ್ಷಣವೂ ತನ್ನ ದೇಹದಿಂದ ಸೃಜಿಸುವ ಇನ್ನೊಂದು ಜೀವವನ್ನು ಕೈಯಲ್ಲಿ ಹಿಡಿಯುವ ಪುಳಕದಲ್ಲಿ ಕಾಯುತ್ತಾಳಲ್ಲವಾ ತಾಯಿ ಅನ್ನುವ ಕಾರಣಕ್ಕೆ ನಾನು ಹಾಗೆ ಹೇಳಿದೆನಷ್ಟೇ. ಕಾಯುವುದೂ ಸಂಭ್ರಮವಾಗಬಲ್ಲದು, ಮಗು ಒದೆಯುವುದೂ ನಗೆ ಚೆಲ್ಲಬಲ್ಲದು ಅನ್ನುವುದನ್ನು ತಾಯಲ್ಲದೇ ಇನ್ನಾರು ತೋರಿಸಲು ಸಾಧ್ಯ!
ರಾಧೇ, ಬೃಂದಾವನದ ಗೋಮಾತೆಯರು ಹೇಗಿದ್ದಾರೆ ಈಗ? ನನಗೆ ಬಿರುಬಿಸಿಲಲ್ಲಿ ನೆರಳನ್ನಿತ್ತ ವೃಕ್ಷಗಳು ಹೇಗಿದ್ದಾವೆ? ನಾವು ಕಾಲುಬಿಟ್ಟು ಕೂತು ಗಂಟೆಗಟ್ಟಲೆ ಮಾತಾಡುತ್ತಿದ್ದ ಹಳ್ಳಕೊಳ್ಳಗಳು ಹೇಗಿದ್ದಾವೆ? ನನಗೆ ಮತ್ತೆ ನಿನ್ನ ಜೊತೆ ಕೂತು ಮಡಕೆಗಳ ಮೇಲೆಲ್ಲಾ ಚಿತ್ತಾರ ಬರೆಯಬೇಕು. ಕಪಿಲೆ ಗಂಗೆಯರ ಮೈಮೇಲೆ ವೃತ್ತಾಕಾರದ ಚಿತ್ರಗಳನ್ನು ಬಿಡಿಸಬೇಕು, ಝರಿಯ ಹತ್ತಿರ ಅವುಗಳ ಮೈತೊಳೆಸಬೇಕು, ಕೋಗಿಲೆ, ನವಿಲುಗಳ ಜೊತೆ ಕೊಳಲೂದುತ್ತಾ ಸ್ಪರ್ಧಿಸಬೇಕು, ಆಗಷ್ಟೇ ಮಿಂದುಬಂದ ನಿನ್ನ ಹೆರಳ ಒದ್ದೆ ಪರಿಮಳವನ್ನು ಆಘ್ರಾಣಿಸಬೇಕು, ಧೂಪದ ಗಂಧದ ಗಾಳಿಯಲ್ಲಿ ಸಂಜೆಯ ಉದ್ಯಾನದ ತುಂಬಾ ನಿನ್ನ ಜೊತೆ ಸೇರಿ ಹಣತೆಗಳನ್ನಿಡಬೇಕು. ಗಾಳಿಗೆ ಆರಿ ಹೋಗದ ಹಾಗೆ, ನಿನ್ನ ಹಿಂದಿನಿಂದ ನಿನ್ನ ಕೈಗಳೊಂದಿಗೆ ನನ್ನ ಕೈಗಳನ್ನು ಕೂಡಿಸಬೇಕು, ನಿನ್ನ ಸೊಂಟದಿಂದ ತುಸು ದೂರದಲ್ಲಿಯೇ ನನ್ನ ಕೈಗಳು ಹಾದುಹೋಗುವಾಗ ನಿನ್ನ ಕಿಬ್ಬೊಟ್ಟೆಯ ಪಕ್ಕ ಕಂಪಿಸುವುದ ನೋಡಬೇಕು, ಬಿದಿಗೆ ಚಂದ್ರನ ಬೆಳಕಲ್ಲಿ ನಿನ್ನ ನಾಚಿಕೆಯನ್ನು ಅಳೆಯಬೇಕು, ಮತ್ತೆ ಬೆಳಿಗ್ಗೆ ನದಿ ದಡದಲ್ಲಿ ನೀನು ಒಗೆದುಕೊಟ್ಟ ಬಟ್ಟೆಯನ್ನೆಲ್ಲಾ ಹಿಂಡುತ್ತಾ ಒಣಗಿಸುವುದಕ್ಕೆ ಅಣಿಯಾಗಬೇಕು, ಯಮುನೆಯ ದಡದಗುಂಟ ನಡೆದರೆ ಒಂದು ಕಾಡಿದೆಯಲ್ಲಾ, ಅಲ್ಲಿ ಕಟ್ಟಿರುವ ಜೋಕಾಲಿಯಲ್ಲಿ ನಾವಿಬ್ಬರೇ ಕೂತು ತೂಗಬೇಕು, ಅದೆಷ್ಟೋ ಮಧ್ಯಾಹ್ನಗಳ ನೀರವತೆಯಲ್ಲಿ ನಿನ್ನ ಮುಂಗುರುಳುಗಳ ಜೊತೆ ಆಟವಾಡಬೇಕು, ಕಣ್ಣುಮುಚ್ಚಾಲೆಯಾಡುವಾಗಲೆಲ್ಲಾ ನೀನೆಲ್ಲಿದ್ದೀಯ ಅಂತ ಗೊತ್ತಿದ್ದರೂ ಗೊತ್ತಿಲ್ಲದವರ ಹಾಗೆ ಊರ ತುಂಬಾ ಹುಡುಕಾಡಬೇಕು, ಅಶ್ವತ್ಥ ಎಲೆಗಳ ಮೇಲೆ ನಿನ್ನ ಹೆಸರನ್ನು ಬರೆದು ನದಿಯಲ್ಲಿ ತೇಲಿಬಿಡಬೇಕು, ರಾಧೇ.. ಅಂಥ ದಿನಗಳಿಗಾಗಿ ಕೃಷ್ಣನೂ ಕಾಯುತ್ತಿದ್ದಾನೆ ಅನ್ನುವುದು ತಿಳಿದಿದೆಯಲ್ಲವಾ ನಿನಗೆ?
ನೀನು ಬೆಳಿಗ್ಗೆಯೇ ಎದ್ದು ಹಾಕುವ ರಂಗೋಲಿಯಲ್ಲಿ ಪ್ರತಿದಿನವೂ ಎರಡು ಚುಕ್ಕಿಗಳನ್ನು ಹಾಗೆಯೇ ಬಿಟ್ಟಿರು, ಒಂದು ಮುಂಜಾನೆ ಹಿಮದ ದಪ್ಪ ಪದರಗಳು ತುಂಬಿಕೊಂಡ ಹಾದಿಯಲ್ಲಿ ಕೋಮಲ ಪಾದಗಳು ನಡೆದುಬರುತ್ತವೆ. ಅಪೂರ್ಣ ಕತೆಗಳನ್ನು ಇನ್ನಷ್ಟು ಮುಂದುವರೆಸುವ ನನ್ನ ಇಂಗಿತವನ್ನು ಇನ್ನಷ್ಟು ವರುಷಗಳ ಕಾಲ ನಾವು ಒಯ್ಯಲೇಬೇಕು. ಕೃಷ್ಣ ಬರುತ್ತಾನೆ, ಅಂದು ಬೃಂದಾವನದ ಆಕಳ ಕೊರಳ ಗಂಟೆಗಳು ತಾವಾಗಿಯೇ ತೂಗುತ್ತವೆ, ಕೊಟ್ಟಿಗೆಯಿಂದಾಚೆ ಬಂದು ಅವೆಲ್ಲವೂ ಗುಂಪುಗಟ್ಟಿ ನಿಲ್ಲುತ್ತವೆ. ಕಡೆದಂತೆಲ್ಲಾ ತುಂಬಿಸಲಿಕ್ಕೆ ಮಡಕೆಗಳು ಸಾಕಾಗದಷ್ಟು ಬೆಣ್ಣೆ ಬೆಳೆಯುತ್ತದೆ, ಹಿಂದಿನ ದಿನ ಸಂಜೆ ನೀ ಮಲಗುವ ಕೋಣೆಗೆ ಎಲ್ಲಿಂದಲೋ ನವಿಲುಗರಿಯೊಂದು ಹಾರಿ ಬಂದು ಬೀಳುತ್ತದೆ, ರಾತ್ರಿ ಪೂರ ಚಕ್ರವಾಕ ಕೂಗುತ್ತದೆ, ಬೆಳದಿಂಗಳ ಮೃದು ಕಿರಣಗಳು ಕಿಟಕಿಗಳನ್ನು ದಾಟಿ ನಿನ್ನ ಹೊಕ್ಕುಳನ್ನು ಹೊಕ್ಕುತ್ತವೆ. ನಾ ಬರುವ ದಿನ ನೀ ಹೊದ್ದ ಸೆರಗು ಪದೇ ಪದೇ ಜಾರುತ್ತದೆ, ನಿನಗೆ ಇದ್ದಕ್ಕಿದ್ದ ಹಾಗೆ ಕಾಲ್ಗೆಜ್ಜೆಯ ನೆನಪಾಗುತ್ತದೆ.. ಅದೆಷ್ಟೋ ವರುಷಗಳ ಧೂಳನ್ನು ಕೊಡವುವ ಹಾಗೆ ಗಾಳಿ ಬೀಸಿ ಆಮೇಲೆ ತಂಗಾಳಿಯು ಊರ ತುಂಬಾ ಹಬ್ಬುತ್ತದೆ, ಕೊಳಲು ಹಿಡಿದು ಊರ ಹೊಸಲಲ್ಲಿ ಇದಿರುಗೊಳ್ಳುತ್ತೀಯಲ್ಲವಾ ರಾಧೆ?
ಇಂತಿ ನಿನ್ನ
ಗೊಲ್ಲ
~`ಶ್ರೀ'
ತಲಗೇರಿ