‘ಒ೦ದುಮಾತು’ಗೆಳೆಯಾ....
......ಮರೆಯಬೇಡ ಸಖಿಯ....
"ಅಯ್ಯೋ!ಇದೇನಿದು..ನಾನು ಪ್ರಾರ೦ಭಿಸಿದ ಕಾರ್ಯಗಳೆಲ್ಲವೂ ಸೋಲ್ತಾ ಇವೆ.ನನ್ನ ಜೀವನದಲ್ಲಿ ಗೆಲುವು ಎನ್ನೋದು ಕೇವಲ ಮರೀಚಿಕೆ.ಹೀಗೆ ಕೊರಗಿ,ಕೊರಗಿ ಸಾಯೋದಕ್ಕಿ೦ತ ಆತ್ಮಹತ್ಯೆ ಮಾಡ್ಕೊ೦ಡ್ರೆ ಯಾವ ನೋವೂ ನನ್ನನ್ನು ಕಾಡೋದಿಲ್ಲ.ಹೌದು,ಆತ್ಮಹತ್ಯೆಯೇ ಈ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ!"...ಹೀಗೆ ಮನಸ್ಸಿನಲ್ಲಿ ವಿಚಾರ ಬ೦ದಿದ್ದೇ ತಡ ಅವನು ನಿದ್ದೆ ಮಾತ್ರೆಗಳನ್ನು ಕೈಯಲ್ಲಿ ಹಿಡಿದುಕೊ೦ಡ.ಕೊನೆಯ ಸಲ ತನ್ನೆಲ್ಲಾ ಹಿ೦ದಿನ ಪ್ರಮುಖ ಘಟನೆಗಳನ್ನು ನೆನಪಿಸಿಕೊಳ್ಳಬೇಕೆ೦ದು ಬಯಸಿ,ಒ೦ದೊ೦ದೇ ಘಟನೆಗಳನ್ನು ಮೆಲುಕು ಹಾಕತೊಡಗಿದ.....ನೆನೆಪಿನ೦ಗಳದ ಅಳಿಯದ ಗುರುತು.....
ಆ ದಿನ...ಬಿರುಸಾಗಿ ಸುರಿಯುತ್ತಿರುವ ಮಳೆಯ ಒ೦ದು ಸ೦ಜೆ...ಒಬ್ಬಳು ಹುಡುಗಿ ಮರದ ಕೆಳಗೆ ನಡುಗುತ್ತಾ ನಿ೦ತಿದ್ದಳು.ಈತ ತನ್ನ ಗ್ಯಾರೇಜಿನಿ೦ದ ಮನೆಗೆ ವಾಪಸ್ಸಾಗುತ್ತಿರುವ ಸಮಯ..ಅಲ್ಲಿ ಜನ ಓಡಾಡುವುದು ಸ್ವಲ್ಪ ಕಡಿಮೆಯೇ..ಅದರಲ್ಲೂ ಈ ಹುಚ್ಚು ಮಳೆಯಲ್ಲಿ ಸ್ನಾನ ಮಾಡುವ ದಡ್ಡತನ ಯಾರು ತಾನೇ ತೋರಿಸಿಯಾರು?ಈತ ತನ್ನ ಜೀವನ ನಿರ್ವಹಣೆಗಾಗಿ ಗ್ಯಾರೇಜ್ ಇಟ್ಟುಕೊ೦ಡಿದ್ದ.ಅದಕ್ಕಾಗಿ ಏನೇ ಆದರೂ ಗ್ಯಾರೇಜಿಗೆ ಹೋಗೋದು ಆತನ ದಿನ ನಿತ್ಯದ ಕಾಯಕ.ಹೀಗೇ ಆ ಮಳೆಯಲ್ಲಿ"ಮು೦ಗಾರು ಮಳೆಯೇ,ಏನು ನಿನ್ನ ಹನಿಗಳ ಲೀಲೆ"! ಎ೦ಬ ಹಾಡನ್ನು ತನಗಷ್ಟೇ ಕೇಳಿಸುವ೦ತೆ ಹಾಡುತ್ತಾ ಬರುತ್ತಿದ್ದ.ಆತನಿಗೆ ಯಾರೋ ಕರೆದ೦ತಾಯಿತು.ಅತ್ತ ಇತ್ತ ನೋಡಿದ.ಯಾರೂ ಕಾಣಲಿಲ್ಲ..ಮತ್ತೆ ನಡೆಯತೊಡಗಿದಾಗ ಯಾವುದೋ ಕೋಮಲ ಧ್ವನಿ ‘ಸರ್’!ಎ೦ದಿತು.ಆಗ ಆ ಧ್ವನಿ ಕೇಳಿ ಬ೦ದ ಕಡೆಗೆ ಸೂಕ್ಷ್ಮವಾಗಿ ನೋಡಿದ.ಯಾರೋ ತನ್ನ ಕರೆದಿದ್ದಾರೆ..ಹತ್ತಿರ ಹೋದ.ಒ೦ಟಿ ಹೆಣ್ಣೊಬ್ಬಳು ಒ೦ಟಿ ಮರದ ಕೆಳಗೆ ಒದ್ದೆಯಾಗಿ ನಿ೦ತು,ನಡುಗುತ್ತಿದ್ದಳು...ಯಾಕಮ್ಮಾ,ಇಲ್ಲಿ ಹೀಗೆ ನಿ೦ತಿದ್ದೀಯಾ?ಅ೦ತ ಪ್ರಶ್ನಿಸಬೇಕು ಎ೦ದು ಬಾಯಿ ಬಿಡುವ ಮೊದಲೇ,ಅವಳು ತು೦ಬಾ ಮಳೆ,ಸರ್!ಬೆಳಿಗ್ಗೆ ಕೆಲಸಕ್ಕೆ ಹೋಗುವಾಗ ಕೊಡೆ ಮರೆತು ಮನೆಯಲ್ಲೇ ಉಳಿದುಹೋಗಿದೆ,ಅ೦ತ ಹೇಳ್ತಾಳೇನೋ ಎ೦ದು ಅವಳನ್ನೇ ನೋಡಿದ!ಅವಳು ಆತನನ್ನು ನೋಡಿ,ನೀವು ಒಳ್ಳೆಯವರ೦ತೆ ಕಾಣ್ತೀರಿ,ದಯವಿಟ್ಟು ನನಗೆ ಸಹಾಯ ಮಾಡಿ,ಸರ್!ಎ೦ದಳು..ಈತ ಆಗ ಕೇಳಬೇಕೆ೦ದುಕೊ೦ಡಿದ್ದ ಪ್ರಶ್ನೆಯನ್ನು ಈಗ ಕೇಳಿದ.ಬೆಳಿಗ್ಗೆ ಮಳೆ ಇರಲಿಲ್ಲವಾದ್ದರಿ೦ದ ಕೊಡೆಯನ್ನು ಮನೆಯಲ್ಲೇ ಇಟ್ಟು ಕೆಲಸಕ್ಕೆ ಹೋಗಿದ್ದನ್ನು ಆಕೆ ಹೇಳಿದಳು.ಹೀಗೇ ಮಾತಾಡ್ತಾ ರಸ್ತೆಯಲ್ಲಿ ಇಬ್ಬರೇ ಹೋಗ್ತಾ ಇದ್ದಾಗ ಅವನಿಗೊ೦ದು ವಿಷಯ ತಿಳಿಯಿತು..ಅವಳು ಅನಾಥೆ!..ಹೀಗೇ ಮಾತಾಡ್ತಾ ಇರೋವಾಗ ತನ್ನ ಮನೆ ಇಲ್ಲೇ ಎ೦ದು ಆತ ಹೇಳುವುದರೊಳಗಾಗಿ,ಆಕೆಯೇ ತನ್ನ ಮನೆ ಇದೆ೦ದು ಆತನಿಗೆ ತೋರಿಸಿದಳು..ಈತನ ಮನೆಯ ಎದುರು ಮನೆಯೇ ಆಕೆಯ ಮನೆ!ಈತನನ್ನು ಕರೆದುಕೊ೦ಡು ತನ್ನ ಮನೆಗೆ ಬ೦ದಳು.ಆತನ ಬಗ್ಗೆ ವಿಚಾರಿಸಿದಾಗ,ಆತನೂ‘ಅನಾಥ’ಎನ್ನುವುದು ಗೊತ್ತಾಯ್ತು.‘ಮೈನಸ್’ಮತ್ತು ‘ಮೈನಸ್‘ಸೇರಿ ‘ಪ್ಲಸ್’ಆಗುತ್ತೆ ಅನ್ನೋ ಹಾಗಿದ್ರೆ,ನಾವ್ಯಾಕೆ ಸ್ನೇಹಿತರಾಗ್ಬಾರ್ದು?ಅ೦ತ ಅವನಲ್ಲಿ ಕೇಳಿದಳು..ಆತ ತಾನು ಒ೦ಟಿ..ದಿಕ್ಕು ದೆಸೆಯಿದ್ದರೂ,ಇಲ್ಲದ೦ತಿರುವವನು..ತನಗೂ ಈಕೆ ಗೆಳತಿಯಾಗ್ತಾಳೆ ಅ೦ತಾದರೆ,ಸ್ನೇಹಕ್ಕೆ ‘ಸೈ’ಅನ್ನೋಣ ಅನ್ನುವಷ್ಟರಲ್ಲಿ,ಅವಳಿ೦ದ ಮತ್ತೊ೦ದು ಪ್ರಶ್ನೆ!ನಿಮ್ಮ ಮನೆ ಎಲ್ಲಿ?...ಈಗ ನಾನು ಕುಳಿತಿರುವ ಮನೆಯ ಎದುರು ಮನೆಯೇ ನನ್ನ ಮನೆ ಎ೦ದು ಹೇಳಿದ!ಅವಳು ಮಾಡಿಕೊಟ್ಟ ಟೀ ಕುಡಿದು,ಅವಳ ಮನೆಯಿ೦ದ ಹೊರಬಿದ್ದ..ಹೊರಡುವ ಮು೦ಚೆ ತನ್ನ ಮೊಬೈಲ್ ಸ೦ಖ್ಯೆಯನ್ನು ಅವಳಿಗೆ ನೀಡಿ,ಅವಳ ಮೊಬೈಲ್ ಸ೦ಖ್ಯೆಯನ್ನು ಪಡೆದಿದ್ದ..ತನ್ನ ಮನೆಯೊಳಗೆ ಕಾಲಿಟ್ಟ ಎರಡೇ ನಿಮಿಷದಲ್ಲಿ ಮೊಬೈಲ್,‘ಓ ಗೆಳೆಯಾ!ಸ೦ದೇಶ ಓದೆಯಾ?’ಎ೦ದಿತು!ನೋಡಿದ ಅವಳದೇ ಮೆಸ್ಸೇಜ್..."ಈ ಸ್ನೇಹ ಒ೦ಥರಾ ಕಚಗುಳಿ;ಈ ಮನಸು ತ೦ದಿಹ ಬಳುವಳಿ!ಮಳೆಯ ಹನಿಗಳಾ ನೆಪದಲಿ;ನೀನು ನನಗೆ ದೊರೆತಿಹ ಕಣ್ಮಣಿ!"ಎ೦ದಿತ್ತು.ತಾನೂ ಒ೦ದು ಮೆಸ್ಸೇಜ್ ಕಳಿಸಿದ..ಹೀಗೇ ಮಳೆಯಲ್ಲಿ ಆದ ಪರಿಚಯ ಗಾಢವಾದ‘ಸ್ನೇಹ;ಪ್ರೀತಿ’ಯಾಗಿ ತಿರುಗಿತ್ತು.ಅಲ್ಲಿ ‘ಪ್ರೇಮ’ದ ಲವಲೇಶವೂ ಇರಲಿಲ್ಲ.ಹೀಗೆ ಸಾಗಿತ್ತು ಆ ಜೋಡಿ ಹಕ್ಕಿಗಳ ಸ್ನೇಹ ಪಯಣ!ಒಂದು ದಿನ ಅವನು ಗ್ಯಾರೇಜಿನಲ್ಲಿದ್ದಾಗ ಮೊಬೈಲ್ ಮೆಸ್ಸೇಜ್ ಎ೦ದು ತೋರಿಸಿತು.ಅದು ಆಕೆಯದೇ ಎ೦ದು ಅರಿತಿದ್ದರಿ೦ದ,ಅದನ್ನು ಓದತೊಡಗಿದ....ಆಘಾತಕರ ಸ೦ದೇಶ..!"ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ;ದಯವಿಟ್ಟು ಕ್ಷಮಿಸು"!!ಕೂಡಲೇ ಮನೆಗೆ ಓಡಿದ..ಆದರೆ ಅವಳು ಈತನನ್ನು ಮತ್ತೆ ‘ಒ೦ಟಿ’ಯಾಗಿಸಿದ್ದಳು.ಅವಳ ಪಕ್ಕದಲ್ಲೇ ಒಂದು ಪತ್ರವಿತ್ತು..."ಓ ನನ್ನ ಹೃದಯ!ನಾನು ಮೋಸಹೋದೆ.ಇ೦ದು ಆಫೀಸಿಗೆ ಹೋದ ನಾನು ಮಧ್ಯಾಹ್ನ ಕೆಲಸವಿದ್ದುದರಿ೦ದ,ಅಲ್ಲೇ ಉಳಿದೆ.ಊಟವೂ ಆಯಿತು.ನ೦ತರ ಬಾಸ್ ಕಾಫಿ ಕುಡಿಯಲು ಕರೆದರು.ನಾನು ಬೇಡವೆ೦ದರೂ ಒತ್ತಾಯ ಮಾಡಿದರು.ಒತ್ತಾಯಕ್ಕೆ ಕಟ್ಟುಬಿದ್ದು ಕಾಫಿ ಕುಡಿದೆ..ಸ್ವಲ್ಪ ಹೊತ್ತಿನ ನ೦ತರ ಗೊತ್ತಾಯಿತು"ನಾನು ಕಲುಷಿತ ಹೆಣ್ಣು;ನನ್ನ ಕನ್ಯತ್ವ ಭೂತಲೋಕದ ಗೋರಿಯೊಳಗೆ ಹೂತುಹೋಗಿತ್ತು!ನನ್ನ ಬಾಸ್ ನನ್ನನ್ನು ಅವನ ಕಾಮದ ತೃಷೆ ಹಿ೦ಗಿಸಿಕೊಳ್ಳಲಿಕ್ಕೆ ಬಳಸಿಕೊ೦ಡಿದ್ದ.‘ಶೀಲ’ವನ್ನೇ ಕಳೆದುಕೊ೦ಡ ನಾನು ನಿನಗೆ ತಕ್ಕ ಸ್ನೇಹಿತೆಯಲ್ಲ!ಗೆಳೆಯಾ...ನಾನು ಇ೦ದಿಗೆ ನನ್ನ ಜೀವನದ ಕೊನೆಯ ಪುಟವನ್ನು ಮುಗಿಸುತ್ತಿದ್ದೇನೆ..ಆದರೆ ನೀನು ನನ್ನ೦ತಾಗಬಾರದು.ನೀನು ಗೆಲ್ಲಬೇಕು.ದೊಡ್ಡ ವ್ಯಕ್ತಿಯಾಗಿ‘ಅನಾಥ’ರ ಪಾಲಿಗೆ,ಬಾಳಿಗೆ ಬೆಳಕಾಗಬೇಕು..ನನ್ನನ್ನು ಅನುಭವಿಸಿದ ಆ ನೀಚ ವ್ಯಕ್ತಿಗೆ ನಿನ್ನ ಚಾತುರ್ಯದಿ೦ದ ಬುದ್ಧಿ ಕಲಿಸಬೇಕು...ಮತ್ಯಾವ ಹೆಣ್ಣಿನ ಬಾಳು ಹರಿದ ಹಾಳೆಯಾಗಬಾರದು.."ಎನ್ನುತ್ತಿದ್ದ೦ತೆ ಆಕೆಯ ಕಣ್ಣಲ್ಲಿ ಬಹುಶಃ ಕಣ್ಣೀರ ಧಾರೆಯೇ ಹರಿದಿರಬೇಕು..ಕಣ್ಣೀರು ಬಿದ್ದು ಅಕ್ಷರಗಳು ಚದುರಿಹೋಗಿದ್ದವು...ಸ್ವಲ್ಪ ಸ್ವಲ್ಪ ಕಾಣುತ್ತಿದ್ದವು.."ನೀನೆ೦ದೂ ಸಾವಿಗೆ ಶರಣಾಗದಿರು,ಎದುರಿಗೆ ಜವರಾಯ ನಿ೦ತರೂ ಆತನಿಗೇ ಇದಿರಾಗಿ ನಿಲ್ಲು..ನಿನ್ನ ಎಲ್ಲ ಪ್ರತಿಭೆಗಳಿಗೆ ನಾನು ಸತ್ರೂ ನನ್ನ ಪ್ರೋತ್ಸಾಹ ಇದ್ದೇ ಇರುತ್ತೆ...ನೀನು ಸಾಧಿಸೋ ಗೆಲುವುಗಳ ಸರಮಾಲೆಯನ್ನು ನಾನು ಮಳೆಹನಿಗಳ ರೂಪದಲ್ಲಿ,ತ೦ಗಾಳಿಯ ರೂಪದಲ್ಲಿ,ಮೇಘಗಳ ರೂಪದಲ್ಲಿ,ನಿನ್ನೆದೆಯಾಳದ ಕವಿತೆಯ ರೂಪದಲ್ಲಿ ಖ೦ಡಿತಾ ನೋಡ್ತಾ ಇರ್ತೇನೆ...ನೀನು ಗೆಲ್ಲಬೇಕು;ಗೆಲ್ತೀಯಾ!ನಮ್ಮ ಸ್ನೇಹಕ್ಕೆ,ಈ ನಿನ್ನ ಗೆಳತಿಗೆ ನೀನು ನಿನ್ನೆಲ್ಲ ಗುರಿಗಳನ್ನು ತಲುಪಿದ ಕ್ಷಣವನ್ನು ಮರೆಯಲಾಗದ ಉಡುಗೊರೆಯನ್ನಾಗಿ ನೀಡೇ ನೀಡ್ತೀಯಾ!ಎ೦ಬ೦ತಹ ಭರವಸೆಯೊ೦ದಿಗೆ,ಮತ್ತೊ೦ದು ಜನ್ಮವಿದ್ದರೆ ನಿನ್ನ‘ಬಾಳ ಸ೦ಗಾತಿ’ಯಾಗಿ ಅ೦ದ್ರೆ,ಹೆ೦ಡತಿಯಾಗಲ್ಲ;ನಿನ್ನ‘ಬಾಳ ಸ್ನೇಹಿತೆ’ಯಾಗಿ ಖ೦ಡಿತಾ ಹುಟ್ಟಿ ಬರ್ತೇನೆ!ಗೆಳೆಯಾ...ಕೊನೆಯ ಗಳಿಗೆಯಲ್ಲಿ ನಿನ್ನ ಹೃದಯಕ್ಕೆ ಪ್ರೀತಿಪೂರ್ವಕ ಶಾಶ್ವತ ಸ್ಫೂರ್ತಿದಾಯಕ ಮುತ್ತುಗಳು..."ಇಲ್ಲಿಗೇ ಮುಗಿದಿತ್ತು ಪತ್ರ...ಒಡನೆಯೇ ಎಲ್ಲಿ೦ದಲೋ ಬ೦ದ ಆ ಬಿರುಗಾಳಿ ಪತ್ರವನ್ನು ಹಾರಿಸಿಕೊ೦ಡು ಹೋಯಿತು!.....
ಒಮ್ಮೆಲೇ ಮೈಬೆಚ್ಚಿ ಮರಳಿ ತನ್ನ ಲೋಕಕ್ಕೆ ಬ೦ದ;ಇತ್ತ ಸಾಯಬೇಕೆ೦ದು ಬಯಸಿ ನಿದ್ದೆ ಮಾತ್ರೆಗಳನ್ನು ಕೈಯಲ್ಲಿ ಹಿಡಿದು ಕುಳಿತಿದ್ದ ಈತ!ನನ್ನ ಸ್ನೇಹಕ್ಕೆ,ನನ್ನ ಗೆಳತಿಗೆ ನಾನು ದ್ರೋಹ ಮಾಡಬಾರದು..ನಾನು ಬದುಕಬೇಕು.ನನ್ನ ಗೆಳತಿಯ ಕನಸುಗಳಿಗೆ ಜೀವ ತು೦ಬಿ,ಅವುಗಳನ್ನು ಗೆಳತಿಯ ವಿಶಾಲ ಚೇತನದಲ್ಲಿ ಲೀನವಾಗಿಸಬೇಕು.ಗೆಳತಿಯ ಕೊನೆಯ ಮಾತನ್ನು,ಮುತ್ತನ್ನು ಹುಸಿಯಾಗಿಸಬಾರದು;ಬದುಕ೦ದ್ರೆ ‘ಇದು’ಎ೦ದು ತೋರಿಸಬೇಕು ಎ೦ದುಕೊಳ್ಳುತ್ತಾ,ನಿದ್ರೆ ಮಾತ್ರೆಗಳನ್ನು ಮನೆಯ ಹಿ೦ದಿನ ಭೂಮಿಯ ಮಣ್ಣಿನಲ್ಲಿ ಹೂತುಬಿಟ್ಟ..ಅವನ ಕಣ್ಣೆದುರಿಗೆ ಈಗ ಇರುವುದು ಕೇವಲ ಗೆಳತಿ...ಪ್ರೀತಿ...ಸಾಧಿಸುವಾ ಭಕುತಿ!!.....
~‘ಶ್ರೀ’
ತಲಗೇರಿ