ಶನಿವಾರ, ಅಕ್ಟೋಬರ್ 8, 2016

"ಮುಖವಾಡ ಕೊಡು, ಬದುಕಿಕೊಳ್ಳುತ್ತೇನೆ"...

                         

    ಹೌದು, ಕಡಲೇ.. ಚಿಕ್ಕವರಿದ್ದಾಗ ಜಾತ್ರೆ ಸಂತೆಗಳು ಬಂತೆಂದರೆ ಸಾಕು, ಅದೆಷ್ಟೋ ದಿನಗಳಿಂದಲೇ ಕನಸುಗಳ ಹೆಣೆಯುವಿಕೆ ಶುರುವಾಗಿಬಿಡುತ್ತಿತ್ತು. ತೆಗೆದುಕೊಂಡ ವಿಮಾನದ ರೆಕ್ಕೆ ಮುರಿದಿದೆ, ಕೀಲಿ ಕೊಡುವ ಹಕ್ಕಿ ಯಾಕೋ ಚೀಂವ್ ಚೀಂವ್ ಗುಡುತ್ತಿಲ್ಲ, ಬಡಿಯುವ ತಮಟೆಯ ಚರ್ಮ ಹರಿದುಹೋಗಿದೆ, ದುಡ್ಡಿಟ್ಟಾಗ ಬರುತ್ತಿದ್ದ ನಾಯಿಮರಿ ಬಾಗಿಲು ತೆಗೆಯುತ್ತಲೇ ಇಲ್ಲ.. ಈ ಸಲದ ಜಾತ್ರೆಯಲ್ಲಿ ಇವೆಲ್ಲವನ್ನೂ ಹೊಸದಾಗಿ ತೆಗೆದುಕೊಳ್ಳಬೇಕು ಅನ್ನೋ ಆಸೆಯ ಜೊತೆ, ಹಿಂದಿನ ಸಲ ಪಿಳಿ ಪಿಳಿ ಕಣ್ಣಿನ ಚಿಗುರು ಮೀಸೆಯ ಅಚ್ಚುಕಪ್ಪಿನ ಕಣ್ಣು ಹುಬ್ಬಿನ ಮುಖವಾಡ ತೆಗೆದುಕೊಂಡಿದ್ದೆ, ಈ ಸಲ ಒಂದೆರಡು ರಾಕ್ಷಸನ ಮುಖವಾಡ ಕೊಂಡುಕೊಳ್ಳಬೇಕು ಅಂತಂದುಕೊಳ್ಳುವಾಗ ಮುಖ ಮತ್ತು ಕಣ್ಣು ಇಷ್ಟಗಲ ಆಗುತ್ತಿತ್ತಲ್ಲಾ! ಆ ಮುಖವಾಡ ತೊಟ್ಟುಕೊಂಡು ಗೆಳೆಯನನ್ನೋ ಗೆಳತಿಯನ್ನೋ ಬೆಚ್ಚಿಬೀಳಿಸಿ ಹುಚ್ಚುಹುಚ್ಚಾಗಿ ಕುಣಿವಾಗ ಅದೆಷ್ಟು ಸಂಭ್ರಮವಿರುತ್ತಿತ್ತು. ಅಪ್ಪನ ಧ್ವನಿಯಲ್ಲಿ ಅಮ್ಮನ ಸೆರಗಿನಲ್ಲಿ ಹೊಕ್ಕಿಕೊಳ್ಳುತ್ತಿದ್ದ ಪ್ರೀತಿಯನ್ನು ಹೆಕ್ಕಿ ಹೆಕ್ಕಿ ಎತ್ತಿ ಎದೆಯಲ್ಲಿ ಬಚ್ಚಿಟ್ಟುಕೊಳ್ಳುವಿಕೆಯಿತ್ತಲ್ವಾ, ಅದೆಷ್ಟು ಮಧುರವಾಗಿತ್ತು! ಹಟ ಹಿಡಿದು ದಕ್ಕಿಸಿಕೊಂಡ ಮುಖವಾಡದ ಬಣ್ಣ ಮಾಸುವವರೆಗೆ ಮತ್ತೆ ಜಾತ್ರೆ ಬರುತ್ತದೆ, ಆಗ ಇನ್ನೊಂದು ಮುಖವಾಡ ಎಂಬ ಮುಗ್ಧತೆಯಲ್ಲಿ ಎಷ್ಟೊಂದು ಜೀವವಿತ್ತು.. ಬಹುಶಃ ಆಗ ಗೊತ್ತಿರಲಿಲ್ಲ ಕಡಲೇ, ದೊಡ್ಡವರಾಗುತ್ತ ಆಗುತ್ತ ಶಾಶ್ವತವಾಗಿ ಮುಖವಾಡ ತೊಟ್ಟುಕೊಂಡು ಅದರ ದಾಸರೇ ಆಗಿಬಿಡುತ್ತೇವೆಂದು.. ಕನ್ನಡಿಯೆದುರು ತಲೆಯೆತ್ತುವುದಕ್ಕೂ ಹೆದರುತ್ತೇವೆಂದು...

     ಕಿತ್ತಿಟ್ಟು ಬಂದಿದ್ದೇನೀಗ ಎಲ್ಲವನ್ನೂ.. ಇಷ್ಟು ದಿನಗಳ ಕಾಲ ಬಾಚಿ ಬಾಚಿ ಹಚ್ಚಿಕೊಂಡ ಮುಖವಾಡಗಳಲ್ಲಿ ಒಂದೂ ನನ್ನದಾಗಲೇ ಇಲ್ಲ, ಯಾವ ಮುಖವಾಡದ ಬಣ್ಣವೂ ನನ್ನ ಕೆನ್ನೆ ಮೇಲೆ ಆಪ್ತವಾಗಿ ಕೂರಲೇ ಇಲ್ಲ. ಚರ್ಮವನ್ನು ಸುಡುತ್ತ ಒಳಗೊಳಗೇ ಬೇಯುತ್ತಾ, ನನ್ನನ್ನು ನಾನು ಗುರುತಿಸಿಕೊಳ್ಳಲಾಗದ ಸ್ಥಿತಿಯಲ್ಲಿ ನನ್ನನ್ನು ಇಟ್ಟುಬಿಟ್ಟಿತ್ತು.. ನಾನು, ನನ್ನವರು ಎನ್ನುತ್ತಲೇ ಹೋದೆ; ಒಂದಷ್ಟು ಜನರ ಗುಂಪು ಅದನ್ನು ಸ್ವಾಭಿಮಾನ, ಪ್ರೀತಿ ಎಂದಿತು. ಎದುರು ಗುಂಪು ಅದನ್ನೇ ಸ್ವಾರ್ಥ ಎಂದಿತು. ಸಂಬಂಧಗಳ ಗೋಜಲನ್ನು ಬಿಡಿಸುತ್ತಾ ಹೋಗಬೇಕೆಂದುಕೊಂಡೆ ತತ್ವಜ್ಞಾನಿ ಎಂದರು. ನಿರ್ಲಿಪ್ತಳಾಗಿರಬೇಕೆಂದುಕೊಂಡೆ, ಕಲ್ಲುಬಂಡೆ ಅಂದರು.. ಚರ್ಮದ ಬಿಗಿತಕ್ಕೆ ಸ್ಪಂದಿಸುತ್ತಾ ಕತ್ತಲೆಯಲ್ಲಿ ದಿನನಿತ್ಯ ಚಿತ್ರಬಿಡಿಸಬೇಕೆಂದುಕೊಂಡೆ, ವೇಶ್ಯೆ ಅಂದರು. ಸಣ್ಣ ಸಣ್ಣ ವಯೋಸಹಜ ಬಯಕೆಗಳನ್ನು ಎದೆಯುಬ್ಬಿಸಿ ಈಡೇರಿಸಿಕೊಳ್ಳಹೋದೆ, ಗಂಡುಭೀರಿ ಎಂದರು. ಅನಿಸಿದ್ದನ್ನು ಎಲ್ಲರಲ್ಲೂ ಮನಬಿಚ್ಚಿ ಹೇಳಿಕೊಂಡೆ, ವಾಚಾಳಿ ಅಂದರು. ಮಾತುಗಳಿಗೆ ಲಗಾಮಿಟ್ಟು, ಎಲ್ಲ ಮೆಟ್ಟಿ ನಿಂತೆ; ವಿರಾಗಿಯೆಂದರು. ಎಲ್ಲರಂತೆ ಮನೆ ಜಮೀನು ಆಸ್ತಿಯೆಂದೆ, ಮೋಹಿಯೆಂದರು.. ಬೀದಿಗಳಲ್ಲಿ ಒಂದಷ್ಟು ದಿನ ಭಿಕ್ಷೆ ಬೇಡೋಣವೆಂದುಕೊಂಡೆ, ಮೈಬಗ್ಗಿಸಿ ದುಡಿಯೆಂದರು.. ಬಿಸಿಲಲ್ಲಿ ಚರ್ಮ ಸುಟ್ಟುಕೊಂಡರೆ, ಚಂದಿರನ ಬೆಳಕಲ್ಲಿ ಹವಾಮಾನದ ಬಿಸಿಯೇರಿಸುತ್ತೀಯಾ ಅಂತ ಕೇಳಿದರು.. ಹಸಿದಿದ್ದೇನೆ ಊಟ ಹಾಕೆಂದರೆ, ದುಡ್ಡು ಬೇಕೆಂದರು. ದುಡ್ಡಿನ ನೆರಳನ್ನಾದರೂ ಹಿಡಿಯಬೇಕೆಂದುಕೊಂಡೆ, ಲೋಭಿಯೆಂದರು. ಮೇಘಗಳೆಲ್ಲಾ ಒಟ್ಟುಗೂಡಿ ಹಬ್ಬ ಮಾಡುತ್ತಿದ್ದಾಗ, ಆಗ ತಾನೇ ಅರಳಿಕೊಂಡ ಘಮಲಿಗೆ ನಾಸಿಕದ ಸೊಗವಿಕ್ಕಿ, ಬೊಗಸೆಯಲಿ ಮುಗಿಲರಸ ಹಿಡಿಹಿಡಿದು ನಡುವಲ್ಲಿ ನವಿಲಾಗಬೇಕೆಂದುಕೊಂಡೆ, ಹುಚ್ಚುಚ್ಚಾಗಿ ಕುಣಿಯದಿರು; ನೀನು ಹುಡುಗಿಯೆಂದರು. ಅಮಾವಾಸ್ಯೆಯ ರಾತ್ರಿಯಲ್ಲಿ ಕಂದೀಲು ಹಿಡಿದು ಚಂದ್ರನನ್ನರಸುತ್ತಾ, ಅರಚುವ ಕಾಡುಜಿರಳೆಗಳ ಕತೆಗೆ ಕಿವಿಯಾಗಬೇಕೆಂದರೆ, ಹೊಕ್ಕುಳಿಗೆ ಹೂ ಬಿಡುವ ಸಮಯ, ಸಿಕ್ಕ ಸಿಕ್ಕ ಬೆರಳುಗಳಿಗಂಟಿ ಬಣ್ಣ ಕದಡೀತು ಪಕ್ಕಾ ಮಾಗುವ ಮುನ್ನವೇ ಎಂದು ಹೆದರಿಸಿದರು.. ಹೇಳು, ಕಡಲೇ.. ಹತ್ತೆಂಟು ಹುಚ್ಚು ಕಲ್ಪನೆಗಳಿದ್ದಿದ್ದರಿಂದಲೇ ನಾನು ಹೆಣ್ಣಲ್ಲವೇ!.. ರಾತ್ರಿ ನಕ್ಷತ್ರಗಳ ಕೊಯ್ದು ನನ್ನ ಹೆರಳಲ್ಲಿ ಸಿಕ್ಕಿಸಿ, ಮಧು ಬಟ್ಟಲ ಮಾಲೆ ಕಟ್ಟುವವನ ಎದೆಯ ರೋಮದ ಬೆವರಲ್ಲಿ ಕೈಯದ್ದಿ ಹೆಣ್ತನದ ಕ್ಯಾನ್ವಾಸಿಗಿಷ್ಟು ಕೈಯಚ್ಚು ಬರೆದುಕೊಳ್ಳುತ್ತೇನೆ ಅಂತ ಅಂದುಕೊಳ್ಳುವುದೂ ತಪ್ಪಾ ಕಡಲೇ.. ಇಷ್ಟೇ ಅಲ್ಲ ಕಡಲೇ, ಇನ್ನೂ ಏನೇನೋ.. ಇಷ್ಟೆಲ್ಲಾ ಮಾಡಿಯೂ ಯಾವ ಮುಖವಾಡವೂ ನನ್ನ ಸ್ವಂತದ್ದಾಗಲೇ ಇಲ್ಲ, ಇದೇ ನಾನೆಂದು ಹೇಳಿಕೊಳ್ಳುವಷ್ಟು ಆಪ್ತವಾಗಲೇ ಇಲ್ಲ.. ನಾನಾಗಲೇ ಇಲ್ಲ.. ಅಸಹ್ಯವಾಯಿತು. ಅದಕ್ಕೆಂದೇ ಇಂದು ಎಲ್ಲ ಮುಖವಾಡಗಳನ್ನು ಕಳಚಿಟ್ಟು ಬಂದಿದ್ದೇನೆ ಕಡಲೇ ನಿನ್ನಲ್ಲಿಗೆ. ನಾನು ಕೂತ ಈ ಕಲ್ಲಿನ ಮೇಲೆ ಅದೆಷ್ಟೋ ಪಾಚಿ  ಹಸಿರು ಹಸಿರಾಗಿ ಮೆರೆಯುತ್ತಿದೆ. ಒಂದಷ್ಟು ದಿನ.. ಅರೆಗಂದು ಬಣ್ಣದ ಹುಡಿಯಾಗಿ ಉದುರಿಹೋಗುತ್ತದೆ. ಈ ನೆನಪುಗಳೂ ಹೀಗೇ ಆಗಿದ್ದರೆ?!.. ಋತುಮಾನಗಳಿಗೆ ತಕ್ಕ ಫಸಲು ಯಾವತ್ತೂ ಬರುವಂತಿದ್ದರೆ!.. ಊಹ್ಞೂ.. ಕಳೆಗಳೇ ಜಾಸ್ತಿಯಾದಾಗ ಇಳುವರಿ ಎಲ್ಲಿಯದು.. ಹೀಗೇ ಎಷ್ಟೋ ವರ್ಷಗಳ ಬೆತ್ತಲೆ ಕಲ್ಲು ಮುಂದೊಂದು ದಿನ ಇನ್ನ್ಯಾರದೋ ಮನೆಯ ಮಣ್ಣಾಗಿ ಹೊಚ್ಚ ಹೊಸ ನೆರಳ ಬೇರಿಳಿಸಿಕೊಳ್ಳುವಾಗ ಈ ಪಾಚಿಯ ಗುರುತನ್ನು ಉಳಿಸಿಕೊಂಡು ಬಿಕ್ಕುತ್ತದೆಯೇ? ಮೋಡಗಳೆಲ್ಲವನ್ನೂ ತನ್ನೆದೆಗೆ ಬಿಟ್ಟುಕೊಂಡು , ಉಕ್ಕಿನ ಹಕ್ಕಿಗಳ ಧೂಮದ ಸುರುಳಿಸುರುಳಿಗೆ ಮತ್ತೆ ಮತ್ತೆ ತೆರೆದುಕೊಂಡು ತಿಳಿ ನೀಲಿ ತೊದಲಿನಲ್ಲಿ ಕಪ್ಪು ಬಿಳಿ ಕನಸುಗಳ ಬಾಯಿಪಾಠ ಮಾಡುವ ಓಹ್ ಗಗನಾ, ನಿನಗಿದು ಅರ್ಥವಾಗುವುದಿಲ್ಲ ಬಿಡು.. ನೀನು ಮತ್ತು ಭೂಮಿ  ಎಂದೂ ಭೇಟಿಯೇ ಆಗದ ಪ್ರೇಮಿಗಳಂತೆ.. ಅಥವಾ ದಿಗಂತದಲ್ಲಿ ಕೂಡಿಸಿದ್ದು ನಾವೇ; ಅದೂ ಭ್ರಮೆಯೇ!.. ಅದಕ್ಕೇ ಕಡಲೇ.. ಇದು ನಿನಗೆ ಮಾತ್ರ ಅರ್ಥವಾಗಬಹುದು.. ತವರು ಬಿಟ್ಟ ಅದೆಷ್ಟೋ ನದಿಗಳು ಬಂದು ನಿನ್ನ ಸೇರುತ್ತವೆ. ಎಲ್ಲಿಯದೋ ಕೊರಕಲು, ಎಲ್ಲಿಯದೋ ಮಣ್ಣ ಗಂಧ, ಎಲ್ಲಿಯದೋ ಸಸಿಯ ಕೊಳೆತ ಎಲೆಗಳ ಅಸ್ಥಿಪಂಜರ ಕರಗಿಸಿಕೊಂಡ ನೀರ ಪಾತ್ರಗಳು ನಿನ್ನೆದೆಯಲ್ಲಿ ಬೆರೆಯುತ್ತವೆ. ಇಷ್ಟೆಲ್ಲ ಆದರೂ ನಿನಗೊಂದು ಅಸ್ತಿತ್ವ ಸಿಕ್ಕಿಬಿಟ್ಟಿತು.; ಜೊತೆಗೆ ರುಚಿಯೂ.. ಅದೆಷ್ಟೋ ಭಾವಗಳು ನನ್ನೆದೆಯಲ್ಲಿ ಈಗಲೂ ಹುಟ್ಟಿಕೊಳ್ಳುತ್ತವೆ, ಇನ್ನೊಂದಿಷ್ಟು ಹುಟ್ಟಿಕೊಳ್ಳುವ ಮೊದಲೇ  ಗೋರಿ ಕಟ್ಟಿಕೊಳ್ಳುತ್ತವೆ. ಯಾರಿಗೂ ನನ್ನ ಅಸ್ತಿತ್ವವನ್ನು ಗಟ್ಟಿಪಡಿಸುವ ಎದೆಗಾರಿಕೆಯಿಲ್ಲ.. ಹೇಳು ಕಡಲೇ, ಹೇಳಲಿಲ್ಲವೇ ಯಾರೂ ನಿನಗೆ, ಹೂಟ್ಟೆಬಾಕನೆಂದು.. ಮಿಲನ ದರ್ಬಾರು ನಡೆಸುತ್ತಾ ಅದೇನೇನೋ ತನ್ನೊಳಗೇ ಬಚ್ಚಿಟ್ಟುಕೊಳ್ಳುವ ವ್ಯಾಮೋಹಿಯೆಂದು.. ಇಲ್ಲ, ಕಡಲೇ.. ನಿನ್ನೊಳಗೂ ಪಲ್ಲಟವಾಗುತ್ತಿರುವ ತುಂಡುಗಳಿವೆ.. ಅದಕ್ಕಾಗಿಯೇ ಅಲ್ಲವೇ ಒಮ್ಮೊಮ್ಮೆ ನೀನೂ ಸಿಡಿದೇಳುವುದು.. ಆದರೂ ಅದ್ ಹೇಗೆ ನೀನು ಆ ನಿರಂತರತೆಯನ್ನು ಕಾಯ್ದುಕೊಂಡೆ; ಬಹುತೇಕ ಒಂದೇ ತೆರನಾದ ಅಲೆ.. ಅದೆಷ್ಟೋ ತಪ್ಪಲುಗಳಲ್ಲಿ ಹಾಗೂ ಜಟೆಗಳಲ್ಲಿ ಮೂಲವಿಟ್ಟುಕೊಂಡು ಅದೆಷ್ಟೋ ಸಂಕ ಸೇತುವೆಗಳ ಕೆಳಗೆ ಹರಿದು, ಮತ್ತಿನ್ನೆಷ್ಟೋ  ಬಂಡೆಗಳ ಮೈಸವರಿ ಹೋಗುವ ನದಿಗಳು ನಿನ್ನೆದೆಯ ಸೇರಿದ ಮೇಲೆ ತಕರಾರೆತ್ತುವುದಿಲ್ಲವೇನೆ? ಅವೆಲ್ಲ ಮುಖವಾಡ ಕಳಚಿಟ್ಟವೇ, ಒಂದೇ ಒಳಗಾಗುವಂತೆ.. ಒಂದೇ ಹದವಾಗುವಂತೆ.. ಅಥವಾ ಪಾರದರ್ಶಕತೆಯ ಮುಖವಾಡ ತೊಟ್ಟಿದೆಯೇ?!.. ನಿನ್ನ ಆ ಅಗಾಧತೆಯ ಇದಿರು ನಾವೆಲ್ಲಾ ಅದೆಷ್ಟು ಚಿಕ್ಕವರಾಗಿಬಿಡುತ್ತೇವೆ ಅಲ್ವಾ!.. ಮತ್ತೆ ಮತ್ತೆ ಉಕ್ಕುತ್ತೀಯಾ ಗರ್ಭದೊಳಗಿನದೆಲ್ಲವನ್ನೂ ಗುಟ್ಟಾಗಿಯೇ ಇಟ್ಟುಕೊಂಡು; ಅದೆಂಥ ಕ್ರಿಯಾಶೀಲ ನೀನು..!

     ಗುರುತ್ವಗಳ ಗತಿಯಲ್ಲಿ ಏರುಪೇರಿದ್ದರೂ , ನಿನ್ನ ಮತ್ತು ದಡದ ಮರಳ ಸಂಬಂಧಗಳ ಮಧ್ಯ, ಮೈದಡವುತ್ತಾ ತಾಯ್ತನದ ಸುಖ ಪಡೆಯುತ್ತೀಯಾ.. ನೀಲ ನೀಲ ವಿಸ್ತಾರ.. ದೂರ ದೂರ ಹೋದಂತೆ ಇನ್ನೂ ಹತ್ತಿರ ಹತ್ತಿರ.. ಮುಳ್ಳುಪೊದೆಯ ಪುಟ್ಟ ಹೂವಿಗೆ ಹಾಡು ಹೇಳೋ ಗೆಳತಿ.. ನಿನ್ನ ಮೇಲೆ ಬಿದ್ದು ಬಿದ್ದು ನಿನ್ನ ಚೀಲದಿಂದ ಕದ್ದು ಕದ್ದು ತಿನ್ನುವ ಹದ್ದುಗಳಿಗೆ ಅಕ್ಕರೆಯ ಅಕ್ಕ.. ಭೂಮಿ ಮಡಿಲ ನೆರಿಗೆಯಲ್ಲಿ ಆಷ್ಟಷ್ಟೇ ಮೈಯ ಹರಡಿ, ಕಾಲು ಮುದುಡಿ ಮಲಗಿಕೊಂಡ ಮಗಳು.. ನಾನೂ ಒಬ್ಬ ಮಡದಿ.. ಬಹುಶಃ ಈ ನದಿಯಂತಿರಬೇಕು ನಾನು.. ಹರಿಯುತ್ತಿದ್ದರೆ ಮಾತ್ರ ಹಾಡು ಕೇಳುವುದು.. ಇನ್ನು ತಡ ಮಾಡುವುದಿಲ್ಲ; ಕಡಲೇ ಮತ್ತೆ ತಿರುಗಿ ಓಡಬೇಕು ನಾನು.. ಮತ್ತೆ ತಿರುಗಿ ನೋಡಬೇಕು ನಾನು.. ತುರ್ತಾಗಿ.. ತೊಟ್ಟುಕೊಂಡಿದ್ದೇನೆಂದೇ ತಿಳಿಯದ, ಮತ್ತೆ ಎಂದೂ ಕಳಚದ, ದಿಕ್ಕು ದಿಕ್ಕಿಗೆ ಬೇರೆ ಬೇರೆ ಬಣ್ಣ ತೋರುವ ಮುಖವಾಡ ಕೊಡು, ಬದುಕಿಕೊಳ್ಳುತ್ತೇನೆ.. ಬದುಕಿಸಿಕೊಳ್ಳುತ್ತೇನೆ.. ಸಂತೆ ಇನ್ನೂ ಮುಗಿದಿಲ್ಲ; ವ್ಯಾಪಾರವೂ...

~‘ಶ್ರೀ’
  ತಲಗೇರಿ

ಗುರುವಾರ, ಅಕ್ಟೋಬರ್ 6, 2016

"ಬಿಸಿಲು ಮಳೆ ಚಳಿಗೆ"...ಅವಳೂರ ಕಡಲಲ್ಲಿ ಪ್ರತಿರಾತ್ರಿ ಮೃದಂಗದಂತೆ ಗುಂಯ್ ಗುಟ್ಟುವ ಅಲೆಗಳಿಗೆ ಅವನೂರ ಚಂದ್ರಮನ ತೋಳತೆಕ್ಕೆಯಲಿ ಪಿಸುಗುಡುತ್ತಿದ್ದ ನಾಳೆಗಳ ಇಂದಿನುಸಿರ ಬಿಸಿ ಸೆಳೆತ ಕಾರಣವಂತೆ.. ಇಷ್ಟಕ್ಕೂ, ಅಷ್ಟುದ್ದ ಮೈಹರವಿ ಬಿದ್ದಿರುವ ದಾರಿಗದು ಗೊತ್ತಿಲ್ಲವಂತೆ..ಆಯತದ ತಲೆದಿಂಬು ಅವಳ ಸುರುಳಿ ಸ್ವಪ್ನಗಳ ಎಳೆಯನ್ನು ಇಣುಕಿಣುಕಿ ಓದಿತ್ತಂತೆ.. ಹೆರಳಿಗಂಟಿದ್ದ ಹಳೇ ತಲೆಮಾರಿನ ಜಿಗುಟು ಸ್ನಾನಕ್ಕೆ ಹೊರಡುವಾಗ ಅಳಿದುಳಿದ ಗುಸುಗುಸು, ಮಂಚದ ಚಿತ್ತಾರಕ್ಕೆ ಕಣ್ಣುಮುಚ್ಚಾಲೆಯಾಡುವುದನ್ನು ಹೇಳಲೆತ್ನಿಸುತ್ತಿತ್ತಂತೆ.. ಒಂದೇ ನೆರಳ ಹಿಂದೆ ಅಡಗಿದ್ದ ದೀಪ, ಬೇರೆ ಬಣ್ಣ ಹಚ್ಚಲು ಕುಂಚ ಹುಡುಕುತ್ತಿತ್ತಂತೆ.. ಅವನಂತೂ ಅರ್ಧರಾತ್ರಿಯಲ್ಲಿ ಸುರಿದ ಮಳೆಯನ್ನು ಕೊಡಗಟ್ಟಲೆ ಹಿಡಿದು ರುಚಿ ನೋಡುತ್ತೇನೆಂದು ಚಪ್ಪಲಿ ಮೆಟ್ಟಿ, ಕೊಡೆಹಿಡಿದು ನಿಂತಿದ್ದಾನಂತೆ.. ಹೆಸರಿಲ್ಲದ ಕಾಡಹೂವೊಂದು ಎದ್ದು ಕುಳಿತು ತನ್ನ ನೆರಿಗೆ ಸರಿಪಡಿಸಿಕೊಂಡು, ಮಣ್ಣಿನಲಿ ಯಾರೋ ಧೂಪ ಹಚ್ಚಿಟ್ಟ ಕನಸು ಕಾಣುತ್ತ ಮತ್ತೆ ಮಲಗಿತಂತೆ.. ಅಷ್ಟಿಷ್ಟು ಸಂಗೀತ ಕಲಿತಿದ್ದ ಮುಗಿಲು ಆಗಾಗ ಅಭ್ಯಾಸ ಮಾಡುತ್ತಿತ್ತಂತೆ.. ಮೊನ್ನೆ ಅದು ಹೇಳಿದ ಮೇಲೆಯೇ ತಿಳಿದದ್ದು, ನಾಚಿಕೆಗೂ ಬಹಳಷ್ಟು ಅರ್ಥವುಂಟಂತೆ.. ಹ್ಞಾ, ಹೇಳುವುದ ಮರೆತಿದ್ದೆ; ಆದರಲ್ಲಿ ಯಾರಿಗೂ ತಿಳಿದಿರಲಿಲ್ಲ.. ಪ್ರೀತಿಗೆ ಸ್ವಂತ ಬಣ್ಣ ರುಚಿ ವಾಸನೆಯಿಲ್ಲ; ಅದು ಅನುಭೂತಿ ಅಷ್ಟೇ..! ನೆನಪಿಡಿ, ಬಾಡಿಗೆಯ ಫಲಕಗಳ ವಿಳಾಸದ ಅಕ್ಷರಗಳು ಮಸುಕಾಗುತ್ತವೆ ಬಿಸಿಲು ಮಳೆ ಚಳಿಗೆ...

~`ಶ್ರೀ'
    ತಲಗೇರಿ