ಭಾನುವಾರ, ಸೆಪ್ಟೆಂಬರ್ 27, 2015

"ನಿವೇದನೆ..."

         "ನಿವೇದನೆ..."

ಲಾಂದ್ರದಾ ಹಾಡಿನಲಿ ನನ್ನ ನೆರಳ ಹುಡುಕಿದರೆ
ಕೇಳಿದ್ದು ಮಾತ್ರ ನಿನ್ನ ಹೆಸರ ಪಿಸುಮಾತು..
ಹಿತವಾದ ಋತುಮಾನವೊಂದು
ಪಲ್ಲವಕೆ ಅಣಿಯಾಯ್ತು..

ಕನಸಲ್ಲೂ ಕೂಡ ಮಳೆಯಲ್ಲಿ ತೋಯ್ದು
ಎದುರಲ್ಲಿ ಬಂದು ನಾಚದಿರು ಗೆಳತಿ!
ಕಳೆದುಹೋಗುವೆ ನಾನು,ನನಗೇ ಸಿಗದಂತೆ
ಮಡಿವಂತಿಕೆಯ ಬೀದಿಯಲಿ
ಬಣ್ಣ ಮಾಗಿದಾ ಜಾತ್ರೆ..

ಬಯಕೆಯಾ ಕದಿರುಗಳಿಗೆ ನೀನೊಂದು ಆಕಾಶ..
ಒತ್ತಾಗಿ ನೇಯಬೇಕು ಚಂದ್ರ ಜಾರದಂತೆ..
ಗೆರೆಗಳಿಗೆ ಅಂಟಿರುವ ಪದಗಳೆಲ್ಲಾ
ಎದೆಯೆದೆಯ ಗೋಡೆಗಳ ನೆಚ್ಚಿನಾ ಸಾಲುಗಳು..
ಕೋಣೆಗಳಿಗೆ ಎಂದೂ ಅವು ಖಾಸಗಿ..

ಗಾಳಿಯಲಿ ಬೆರೆತಂತೆ ನಿನ್ನ ನೆನಪ ಸೌರಭವು
ನನ್ನೆದೆಯ ತೋಟದಲಿ
ಬೀಡುಬಿಟ್ಟಿವೆ ಚಿಟ್ಟೆಯಾ ಹಿಂಡು..
ನಿನ್ನ ಸ್ವಪ್ನದಲಿ ನಾ ಬರುವ ನಿಮಿಷವ
ಕಾಯ್ದಿರಿಸಿ ಬರೆಯುತಿದೆ
ನಿನ್ನೆದೆಯ ತಕರಾರು..
ಅನುಮತಿಸು ಒಂಚೂರು...

                                     ~‘ಶ್ರೀ’
                                         ತಲಗೇರಿ

ಶನಿವಾರ, ಸೆಪ್ಟೆಂಬರ್ 12, 2015

"ಕನ್ನಡಿಯೂ ಸುಳ್ಳಾಡುತ್ತಿದೆ..."

"ಕನ್ನಡಿಯೂ ಸುಳ್ಳಾಡುತ್ತಿದೆ..."

ಅರೇ! ಕನ್ನಡಿಯೂ ಈಗೀಗ
ಸುಳ್ಳಾಡುತ್ತಿದೆ..
ಮೊನ್ನೆಯಷ್ಟೇ ತೋರಿಸಿತ್ತು ನನಗೆ
ಬೊಚ್ಚು ಬಾಯಿಯ,ಅಚ್ಚ ತೊದಲಿನ
ಆಪ್ತ ನಗುವನ್ನ..
ನಿನ್ನೆ ಕೂಡ ಬದಲಾಗಿತ್ತು,
ಕನ್ನಡಿಯ ಮೈಗೆಲ್ಲ
ಇಂದ್ರಿಯದ ಆಸೆಗಳ
ವಾಸನೆ ಅಂಟಿತ್ತು..
ಆದರೆ,ಇಂದು..
ಮತ್ತದೇ ಬೊಚ್ಚುಬಾಯಿಯ ಜೊತೆಗೆ
ಜೋಲುತಿಹ ಚರ್ಮ,ಕಾಡುತಿಹ ಕರ್ಮ..
ಕ್ಷಣಗಳೆಲ್ಲಾ ಕಾದಿದ್ದು,
ಒಟ್ಟಾಗಿ ಪರಚಿದಾ ಮುಖದ ಮೇಲೀಗ
ಕತೆ ಹೇಳುವಾ ಗೀರುಗಳು..
ಚೌಕಟ್ಟಿನಾ ಗಾಜಿನಲಿ
ಸಂಜೆಗಳ,ಆದ್ಯ ಮರ್ಮ..

ನಾ ತೊಟ್ಟ ಮುಖವಾಡಕೆಲ್ಲ
ಜೀವ ಸುರಿದಂತೆ ಕಂಡಿತ್ತು..
ನಾ ಬಯಸಿದಾ ಬಗೆಗೆಲ್ಲಾ
ರೆಕ್ಕೆಗಳ ಹಡೆದಿತ್ತು..
ಈ ಸಂಜೆ..ಯಾಕೋ
ಕುಳಿತಿಹುದು,ವೈರಾಗಿಯಂತೆ..
ಈವರೆಗೆ ತೋರಿದ್ದ ನನ್ನೆಲ್ಲಾ
ಚಾರುಬಿಂಬಗಳು ಅದಕೀಗ ಬೇಕಿಲ್ಲ..
ಮಸುಕಾದ ಮೇಲೆ
ಹುಡುಕುತ್ತಾ ಹೊರಟ ನನಗೆ..
ಕನ್ನಡಿಯೂ ಈಗೀಗ ಸುಳ್ಳಾಡುತ್ತಿದೆ...

                                 ~‘ಶ್ರೀ’
                                     ತಲಗೇರಿ