ಬುಧವಾರ, ಅಕ್ಟೋಬರ್ 22, 2014

"ಜೀವನ್ಮುಖಿ..."

            "ಜೀವನ್ಮುಖಿ..."

ವಿರಾಗಿಯ ಬಗಲಲ್ಲಿ ಜೋಳಿಗೆಯ ಪರಿಭಾಷೆ
ಕರಗದಿರುವ ನೆರಳಿಗೂ ಬೆರಳಿನಾ ಆಸೆ..
ಸಾರಿಗೆಯ ರಹದಾರಿ ಬಿಸಿಲಿನಾ ಪಿಸುಮಾತು
ಹಾಸಿಹುದು ಕಡುಗಪ್ಪು ಮೌನವೂ ಬೆರೆತು..

ಮಿಥ್ಯ ಸಂಜೆಯಲಿ ಚಂದಿರನ ಹೆಣವು
ಸಿಕ್ಕು ಸಿಕ್ಕಾದ ಶೃಂಗಾರಕೆ ತಾರೆಗಳ ಮೊಗ್ಗು..
ತಥ್ಯ ತೀಟೆಯಲಿ ಮುಗಿಲಿನಾ ಸೆಳವು
ಜಲಬಿಂದು ಜೋಡಿಕೆಗೂ ಬೆಳಕಿನಾ ಹಂಗು..

ಬೆಚ್ಚುತಿಹ ಬಣ್ಣಗಳ ಒಟ್ಟುಗೂಡಲಿಟ್ಟು
ಗುಟ್ಟಾಗಿ ಬರೆದಿರುವ ಚಿತ್ತಾರ ಬಾನು..
ಮುಂಚಿತವೇ ಮನೆಯ ಬಾಗಿಲನು ತೆರೆದಿಟ್ಟು
ಹೆಜ್ಜೆಗಳ ಸಲಿಗೆಯನು ಬಯಸಿಹೆನೇ ನಾನು!..

ಬೇಡಿಕೆಯ ಸೇರಿಕೆಗೆ ಯಂತ್ರಗಳ ಆಲಾಪ
ಕೀಲುಗಳ ಕದಲಿಕೆಗೆ ಪ್ರತಿಕ್ಷಣದ ಮಿಸುಕಾಟ..
ಬಾಡಿಗೆಯ ನಿದಿರೆಗೆ ರಾತ್ರಿಯಾ ಸಂತಾಪ
ನೂಲುಗಳ ಪೋಣಿಕೆಗೆ ಕನಸುಗಳ ತಡಕಾಟ..

ಇಂದ್ರಿಯದ ನರುಗಂಪು ಭ್ರಮೆಗಳಾ ಬೀದಿ
ಹವೆಯ ಪ್ರಾಯ ಹಾಗೇ ಏರುತಿರಲು..
ಕಣ್ಣೆವೆಗೆ ನಿಲುಕೀತು ವಾಸ್ತವದ ಪರಿಧಿ
ಬಲಿತ ರೆಕ್ಕೆಗೆ ಒಂದು ದಿಕ್ಕು ಕೊಡಲು..

                              ~‘ಶ್ರೀ’
                               ತಲಗೇರಿ

ಶನಿವಾರ, ಅಕ್ಟೋಬರ್ 11, 2014

"ಸಂತೆಯ ಸೋಗಿಗಿಲ್ಲಿ..."

   "ಸಂತೆಯ ಸೋಗಿಗಿಲ್ಲಿ..."

ಹಕ್ಕಿ ಹಚ್ಚಿಹುದು ನನ್ನೆದೆಗೆ ರೆಕ್ಕೆಗಳ
ಹುಡುಕಿಹೆನು ಮತ್ತೆ ಭ್ರಮೆಗಳಾ ಬರಿಗಾಲು
ತಟ್ಟಿ ಎಬ್ಬಿಸಲೇ ನಕ್ಷತ್ರ ನೆರಳುಗಳ
ದಿಕ್ಕುಗಳ ದಾಖಲೆಗೆ ಚುಕ್ಕಿಗಳ ಸಾಲು..

ಮಬ್ಬಾದ ಹವೆಯ ಹರೆಯದಾ ಚಾಳಿ
ಬೇಕೇನು ಕಾಲುದಾರಿಗೆ ಸಣ್ಣ ರೂಪಾಂತರ
ದಿಬ್ಬಣದ ಸಂಭ್ರಮ ಭ್ರಮರದಾ ಪಾಳಿ
ಮೊಗ್ಗಾಯ್ತು ಮನದೊಳಗೆ ಸ್ಪರ್ಶದಾ ಪ್ರವರ..

ಕತ್ತಲೆಗೆ ಕಾಡೀತು ಬೆಳಕಿನಾ ಅಮಲು
ಜೋಪಡಿಯ ಜಗುಲಿಯಲಿ ಸ್ವಪ್ನಗಳ ಸಾಕಲು..
ನಿಂತಿರಲು ಎದುರು ಭೂಮಿಕೆಯ ಹಗಲು
ಕರಗಿರುವ ಇಬ್ಬನಿಗೆ ತಾ ಕೊರಗೀತೇ ಬಿಸಿಲು..

ಸುಕ್ಕುಗಳ ಪುರವಣಿಗೆ ಬೇಕೇನು ಅನುವಾದ
ಅಕ್ಷರದ ಸಂಚಿಯಲಿ ಹಲವು ಮುಖಗಳು..
ಬೇಕುಗಳ ಜಾತ್ರೆಯಲಿ ಹರಡಿರುವ ಭವನಾದ
ಮಂದ್ರದಲಿ ಕರೆದಿಹುದು ಆಟಿಕೆಯ ಕೊರಳು..

ಅರಸುತ್ತ ಹರವಿನಲಿ ಶಾಪ ಕರಗಿದ ಗೂಡು
ಪರಿಧಿಗಳ ಪರಿಧಿಯನು ಮೀರಬಲ್ಲದೇ ಹಕ್ಕಿ..
ಸಂತೆಯ ಸೋಗಿಗಿಲ್ಲಿ ತಿದ್ದಬೇಕಿದೆ ಕರಡು
ಅರಿವಿರದೆ ಬರೆದಿಟ್ಟ ರೂಪಕವ ಹುಡುಕಿ..

                                          ~‘ಶ್ರೀ’
                                             ತಲಗೇರಿ

ಬುಧವಾರ, ಅಕ್ಟೋಬರ್ 1, 2014

"ತಾಜಾ ಬೇಸಿಗೆಗೆ.."

    "ತಾಜಾ ಬೇಸಿಗೆಗೆ.."

ಗೂಡು ಕಟ್ಟಿದೆ ಕನಸ ಗುಂಗು
ಅದಕೂ ಕೂಡ ಈಗ ನಿನದೇ ರಂಗು
ತುತ್ತು ತರುವ ತಾಯಿ ಹಕ್ಕಿ
ಹಾರಬಯಸಿದೆ ತಾನು ಮುಗಿಲ ಹೆಗಲಿಗೂ..

ಮೂಡಿಹನು ಚಂದ್ರ ಚಾಮರದ ಜಾಡಿನಲಿ
ಹರವಿಟ್ಟ ಹರೆಯದ ಗರಿಗಳಾ ಹೆಕ್ಕಿ..
ಹಿಂದೊಮ್ಮೆ ಎಂದೋ ಅರಳಿದಾ ಕುಸುರಿಯಲಿ
ಕೊಸರಿಹುದು ಗೆರೆಯು ಕಾರಣವ ಹುಡುಕಿ..

ನಮ್ಮಿಬ್ಬರಾ ನಡುವೆ ನುಸುಳಿರಲು ತಂಗಾಳಿ
ತಂತಿಗಳ ಹರಿದಿತ್ತು ನಾಚಿಕೆಯ ಬೇಲಿ..
ಹೊಸದಾಗಿ ಹಾಗೇ ಹೂ ಬಿಡುವ ಹಂಬಲ
ಬಾಡಿದಾ ವಲ್ಲಿಗೆ ಸೋಕಿ ಹೊಸ ಪರಿಮಳ..

ಬಿಡಿ ನುಡಿಯ ಸರಕೆಲ್ಲ ಒತ್ತೊಟ್ಟಿಗೆ
ಬೇಕೇನು ಈ ಗಳಿಗೆ ಭಾವಾಂತರ..
ಕುಡಿ ಕುಡಿಯ ಸಂಗೀತ ಮನದಾಸೆಗೆ
ಹೂವಿಗೂ ಮುನ್ನ ಏನೋ ಮಧ್ಯಂತರ..

ಮೊಗ್ಗಿನಾ ಬಣ್ಣ ತುರುಬಿನಾ ತುದಿಗೆ
ಮೆರಗನ್ನು ಹಚ್ಚೀತೇ ಈ ತಾಜಾ ಬೇಸಿಗೆಗೆ..
ಸೆರೆಹಿಡಿದು ಕವಲ,ಹವೆಯಾಯ್ತು ಖಾಸಗಿ
ಸಂಕ್ರಮಣ ಬಂದಾಯ್ತು ಸದ್ಯದಾ ಋತುವಿಗೆ..

                                               ~‘ಶ್ರೀ’
                                                   ತಲಗೇರಿ

"ಅಮಲಿನ ತಂತು.."

     "ಅಮಲಿನ ತಂತು.."

ರೆಕ್ಕೆಯ ಬಡಿದಿದೆ ಎದೆಯ ಅಂಚಿಗೆ
ಗೆರೆಯನು ಗೀಚುತ ಮುಗಿಲಿನ ಹಕ್ಕಿ
ಕರಗಿದೆ ನೆರಳು,ಕಾಣದ ಕ್ಷಣದಲಿ
ಕಾರಣ ಅರಸಿದೆ ಅರಳದ ಚುಕ್ಕಿ..

ಕಂಪನ ಕಾಮದ ಸೊಂಪಿನ ತಂಪಿಗೆ
ಋತು ಬರೆದಿದೆ ಒಲವಿನ ಸಾರ
ಅವಿರತ ಅಮಲಿನ ಅರಿವಿನ ಧಾಟಿಗೆ
ಸ್ವರ ಹೊಸೆದಿದೆ ಹರೆಯದ ಪೂರ

ಬೆರಗು ಬಾನಿನ ಮೌನದ ಗರಿಗೆ
ಬಣ್ಣದ ಹೊಸನಶೆ ಕಾಮನಬಿಲ್ಲು
ನೆರಿಗೆ ನಾಚುವ ಸೀರೆಯ ತುದಿಗೆ
ಕುಸುರಿಯ ಕರೆದಿದೆ ಗೊಲ್ಲನ ಕೊಳಲು..

ಹಸಿವಿನ ಹೊಸನಗು ತುಟಿಯಾ ಮುಡಿಗೆ
ಇಂಗಿದೆ ಹಂಗಿನ ನೆಲದಲಿ ಬಿಸಿಲು..
ಬಿರಿಯುವ ಮೊಗ್ಗಿನ ಪಕಳೆಯ ಮೈಗೆ
ಕಾದಿದೆ ತವಕದಿ ಚಿಟ್ಟೆಯ ಕಾಲು..

ಕರಗುವ ಮೇಣದ ಬೆಳಕಿನ ರಾಶಿಗೆ
ಕತ್ತಲ ಪ್ರಸವದ ಕನಸಿನ ಲಹರಿ..
ತಂತಿಯ ಒಳಗೂ ನರಳುವ ಕೂಗಿಗೆ
ಸರಿಗಮ ಕಲಿಸಿದೆ ಬದುಕಿನ ತಂಬೂರಿ..

                              ~‘ಶ್ರೀ’
                                ತಲಗೇರಿ

"ನವಿಲು ನಾಚಿದ ಮಳೆಗೆ.."

     "ನವಿಲು ನಾಚಿದ ಮಳೆಗೆ.."

ರಾತ್ರಿಗೂ ಹಗಲಿಗೂ ಹಾದಿಯ ಹಾಸಿದೆ
ಪಸಗಳ ನೆಳಲಲಿ ನಸು ಬೆಳಕಿನ ಸಂಕ..
ತೆರೆಗಳ ಗಾಳಿಗೂ ಎದೆಯನು ತೆರೆದಿದೆ
ಯೌವ್ವನ ಸವೆಯದ ನೀಲ ಮಯೂಖ..

ಮುಗಿಲ ಮಳಿಗೆಯ ಬೇಲಿಯ ಒಳಗೆ
ನಡೆದಿದೆ ಅವಿರತ ತಾರೆಯ ಜೀತ..
ಒಲವಿನ ಮುಡಿಯದು ಸೋಕದ ಹೆಗಲಿಗೆ
ಕರಗುವ ಚಂದ್ರನ ಒಡಲಿನ ಮೊರೆತ..

ನಿನ್ನೆಯ ಅಮಲನು ಆರಿಸಿ ಬರೆದ
ಗೋರಿಯ ಬಸಿರಲಿ ಕಾಲನ ಕೆರೆತ..
ನಾಳೆಯ ಮಿಡಿತಕೆ ಹೆಸರನು ಹೇಳದೆ
ಹಸಿವನು ಹರಸಿದೆ ಬಿಸಿಲಿನ ಸೆಳೆತ..

ಗ್ರೀಷ್ಮದ ಕೊರಳಿಗೆ ಹನಿಗಳ ಹಾರ
ತೊದಲು ಮಾತಿಗು ಮೊದಲು ಬೆತ್ತಲೆ ಶಿಶಿರ..
ನಿಮಿಷದ ನಶೆಯೊಳು ಪ್ರಾಯದ ಮಧುವು
ಪರ್ಣದ ಎದುರಲೇ ದಿನವಹಿ ಪಕಳೆಯ ಸಾವು..

ನವಿಲು ನಾಚಿದ ಮಳೆಗೆ ಮೊಳೆತಿದೆ
ನೆನಪುಗಳ ಉಲಿಯುತ್ತ ಬಿಡಿ ಪಾರಿಜಾತ
ಹಂಗಾಮಿ ಗೆರೆಯ ಸುಳಿಗೆ ಸಿಲುಕಿದೆ
ಬಣ್ಣಗಳ ಕನವರಿಸಿ ಬಿಂದುಗಳ ಕಾಗುಣಿತ..

                                            ~‘ಶ್ರೀ’
                                                ತಲಗೇರಿ