ಶನಿವಾರ, ಜುಲೈ 23, 2022

'ಒಂದು ವಿಳಾಸದ ಹಿಂದೆ' ಎಷ್ಟೆಲ್ಲಾ ಕತೆಗಳು...

 



'ಒಂದು ವಿಳಾಸದ ಹಿಂದೆ' ಎಷ್ಟೆಲ್ಲಾ ಕತೆಗಳು... 

ನಿಜವಾಗಿ ಹೇಳಬೇಕೆಂದರೆ ಕತೆ, ಕಾದಂಬರಿ, ಕವಿತೆ ಇವು ಗಂಭೀರವಾಗಿದ್ದರೆ ಅವಕ್ಕೆ ಗಂಭೀರ ಓದುಗರೂ ಬೇಕಾಗುತ್ತಾರೆ. ಆದರೆ, ಕತೆಯಷ್ಟು ಕಥನವನ್ನೂ ಅಥವಾ ಸಂ'ಗತಿ'ಯನ್ನೂ ಹೊಂದಿರದ, ಕವಿತೆಯಷ್ಟು ವಕ್ರತೆಯೂ ಇಲ್ಲದ, ಕಾದಂಬರಿಯಷ್ಟು ಗಹನವಲ್ಲದ, ಆದರೆ ಈ ಎಲ್ಲವನ್ನೂ ಚೂರು ಚೂರೇ ಮೇಳೈಸಿಕೊಂಡು ಹುಟ್ಟಿಕೊಳ್ಳುವ ಬರಹಗಳು ಬಹಳಷ್ಟು ಜನರನ್ನು ತಲುಪುವಲ್ಲಿ ಯಶಸ್ವಿಯಾಗುತ್ತವೆ. ಹದವಾದ ತಿಳಿಹಾಸ್ಯ, ಒಂದಷ್ಟು ಗಟ್ಟಿ ವಿಚಾರಗಳು, ಒಂದಷ್ಟು ರಂಜನೆ, ಒಂದಷ್ಟು ಆತ್ಮೀಯ ಕಾಲಹರಣ ಇತ್ಯಾದಿಗಳಿಂದೊಡಗೂಡಿ ನಿತ್ಯದ ಬದುಕಿನಿಂದಲೇ ಆಯ್ದುಕೊಂಡ ಅಥವಾ ಆಯ್ದುಕೊಂಡಂತೆ‌ ಅನಿಸಬಹುದಾದ ಸಂಗತಿಗಳನ್ನಿಟ್ಟುಕೊಂಡು ಬರೆಯಬಹುದಾದ ಪ್ರಕಾರ‌ ಲಲಿತ ಪ್ರಬಂಧ. ಮನಸ್ಸಿಗೆ ಹಿತವಾಗಬಹುದಾದ,‌ ಹತ್ತಿರವಾಗಬಹುದಾದ ಹಾಗೂ ಮನಸ್ಸನ್ನು ಹಗುರಗೊಳಿಸಬಹುದಾದ ಭಾವಗುಚ್ಛ ಅಂತಂದರೆ ಪೂರಾ ತಪ್ಪಾಗಲಿಕ್ಕಿಲ್ಲ ! ಅಂಥ ಲಲಿತ ಪ್ರಬಂಧಗಳ ಪುಸ್ತಕ 'ಒಂದು ವಿಳಾಸದ ಹಿಂದೆ', ಬರೆದವರು ಸ್ಮಿತಾ ಅಮೃತರಾಜ್, ಸಂಪಾಜೆ. 

ಎರಡು ವರ್ಷಗಳ ಹಿಂದೆ ಈ ಹೆಸರು ಕೇಳಿದಾಗ, ಮೊದಲೆಲ್ಲೋ‌‌ ಕೇಳಿದ್ದೇನಲ್ಲಾ ಅಂತ‌ ಅನ್ನಿಸೋದಕ್ಕೆ ಶುರುವಾಯಿತು. ಬಹುಶಃ ನಾನು ಕನ್ನಡದ‌ ವಾರಪತ್ರಿಕೆಗಳನ್ನು ಓದಲು ಶುರುಮಾಡಿದಾಗಿನಿಂದಲೂ ಅವರು ಬರೆಯುತ್ತಲೇ‌ ಇದ್ದಾರೆ! ಅವರಿಗೆ ಅಷ್ಟು ವಯಸ್ಸಾಯಿತು ಅಂತಲ್ಲ ಮತ್ತೆ ಹ್ಞ! ( ಇದನ್ನು ಅವರು ಓದಿದರೆ "ಏನಪ್ಪಾ ನಿನ್ ತರಲೆ" ಅಂತ ಮುದ್ದಾಗಿ ನಗ್ತಾರೆ ಖಂಡಿತಾ!) ಅಷ್ಟು ದೀರ್ಘಕಾಲದ ಬರವಣಿಗೆಯ ಹಿನ್ನೆಲೆಯಿರುವವರು. ಕವಿತೆ ಅವರ ಮೊದಲ ಆಯ್ಕೆಯಾದರೂ, ಲಲಿತ‌ ಪ್ರಬಂಧದಲ್ಲಿಯೂ ಸಾಹಿತ್ಯ ಕೃಷಿ ಮಾಡಿದ್ದಾರೆ. ಅದರ ಜೊತೆಗೆ ಕೃಷಿ ಅನ್ನುವ ಕೃಷಿಯನ್ನೂ ಮಾಡಿದ್ದಾರೆ. ತಾನು ಬರಹಗಾರ್ತಿ ಅನ್ನುವುದಕ್ಕೂ ಮೊದಲು ಅವರು ಹೇಳುವುದು ನಾನು ಗೃಹಿಣಿ, ಕೃಷಿಕ ಮಹಿಳೆ. ಒಂದು ಸಂವಾದದಲ್ಲಿ ಅವರದ್ದೊಂದು ಮಾತಿದೆ; "ಅಡುಗೆ ಮನೆಯ ಕಿಟಕಿಯನ್ನೇ ವಿಶಾಲವಾಗಿ ಮಾಡ್ಕೊಂಡು ಪ್ರಪಂಚವನ್ನು ನೋಡ್ಲಿಕ್ಕೆ ನಮಗೆ ಇವತ್ತು ಬರೆಹದ ಮೂಲಕ‌ ಸಾಧ್ಯ ಆಗಿದೆ ಅನ್ನಿಸ್ತದೆ". ಇದರದ್ದೇ ಮುಂದುವರೆದ ಭಾಗವಾಗಿ, ಇನ್ನೊಂದು ಸಂದರ್ಶನದಲ್ಲಿ ಅವರು ಹೇಳಿದ ಮಾತು, "ನಾನು ಅಡುಗೆ ಮನೆ ಮತ್ತು ತೋಟದ ಮೂಲಕ ಇಡೀ ವಿಶ್ವವನ್ನು ನೋಡಲಿಕ್ಕೆ ಬಯಸ್ತೇನೆ". ಅಡುಗೆಮನೆಯ ಕಿಟಕಿ ಹಾಗೂ ತೆರೆದುಕೊಳ್ಳುವ ತೋಟ ಇವೆರಡೂ ಈ ಅಭಿವ್ಯಕ್ತಿಗೆ, ವಿಶ್ವಮಾನವತೆಯ ತತ್ವಕ್ಕೆ ಹೊಸ ದನಿಯನ್ನು ಕೊಡುತ್ತಿವೆ ಅಲ್ವಾ. 

ಈಗೊಂದೆರಡು ವರ್ಷಗಳಿಂದ ವೈಯಕ್ತಿಕ ಕಾರಣಗಳಿಗಾಗಿ ನಾನು ಪುಸ್ತಕದ ಹಾರ್ಡ್ ಕಾಪಿ ಕೊಳ್ಳುವುದನ್ನು ಬಿಟ್ಟಿದ್ದೇನೆ. ಹಾಗಾಗಿ ಯಾರಾದರೂ ಪುಸ್ತಕ ಕಳುಹಿಸುತ್ತೇನೆ ಅಂದಾಗ ಏನು ಹೇಳಬೇಕೆಂದು ಗೊತ್ತಾಗದೇ ಒದ್ದಾಡುವುದೂ ಇದೆ. ಜೊತೆಗೆ ಯಾವ ಯಾವ ಪುಸ್ತಕಗಳನ್ನು ಓದಬೇಕು ಅನಿಸುತ್ತದೋ ಆ ಲೇಖಕರ ಬಳಿ ಇ-ಬುಕ್ ಅನ್ನು ಕೂಡಾ ಪ್ರಕಟಿಸಿ ಅಂತ ದುಂಬಾಲು ಬೀಳುವುದಕ್ಕೆ ಶುರು ಮಾಡಿದ್ದೇನೆ. 'ಒಂದು ವಿಳಾಸದ ಹಿಂದೆ' ಈ ಪುಸ್ತಕವನ್ನು ಅವರು ಕಳುಹಿಸಿ ಒಂದು ವರ್ಷದ ಮೇಲಾಯಿತು. ನನ್ನ ಓದು ಸ್ವಲ್ಪ‌ ನಿಧಾನ. ಈ ಪುಸ್ತಕವನ್ನು ಶುರುವಿನಲ್ಲಿ ರಕ್ಷಾಪುಟ, ಅರ್ಪಣೆ, ಮುನ್ನುಡಿ, ಮೊದಲ ಬರೆಹ ಹೀಗೇ ಓದುತ್ತಾ ಹೋದೆ. ಆಮೇಲೆ,‌ ಒಂದು ನಾಲ್ಕು ಬರೆಹಗಳನ್ನು ಓದಿದ ಮೇಲೆ ನನಗೆ ಬೇರೆ ಇನ್ನ್ಯಾವುದನ್ನೋ ಓದುವ ಮನಸ್ಸಾಯಿತು. ಈ ಪುಸ್ತಕ ಚೆನ್ನಾಗಿರಲಿಲ್ಲ ಅನ್ನುವ ಕಾರಣಕ್ಕಾಗಿ ಅಲ್ಲ , ಒಂದೇ ಸಲಕ್ಕೆ ಎರಡು ಮೂರು ಪುಸ್ತಕಗಳನ್ನು ಒಟ್ಟೊಟ್ಟಿಗೆ ಓದುವ ಅಭ್ಯಾಸವಿದೆ ಅಷ್ಟೇ!. ಅದಾದ ಮೇಲೆ ಸ್ವಲ್ಪ‌ ತಿಂಗಳುಗಳ ನಂತರ ಈ ಪುಸ್ತಕವನ್ನು ಮತ್ತೆ ಕೈಗೊತ್ತಿಕೊಂಡೆ, ಹಾಗೂ ಈ ಸಲ ಓದಿದ್ದು ಕೊನೆಯ ಬರೆಹದಿಂದ ಮೊದಲ ಬರಹದ ಕಡೆಗೆ. ಅವರ 'ಮೂಗುತಿ ಮುಂಭಾರ' ಪ್ರಬಂಧವನ್ನು ಓದಿದ‌ ಮೇಲೆ‌ ಪುಸ್ತಕದ ಹಿಂಬದಿಯಲ್ಲೇ ಇರುವ ಅವರ ಫೋಟೋ‌ ನೋಡಿ ಬಂದೆ ಒಮ್ಮೆ! 

ಪುರುಷ ಬರಹಗಾರ ಅದೆಷ್ಟೇ ಪರಕಾಯ ಪ್ರವೇಶ ಮಾಡಿ ತಾನು ಸ್ತ್ರೀಸಂವೇದನೆಗಳ‌ ಕುರಿತಾಗಿ ಬರೆಯುತ್ತೇನೆಂದರೂ, ಬರಹಗಾರ್ತಿಯರು ಅದನ್ನು ಬರೆದಾಗ ಅದಕ್ಕೆ ಸಿಗಬಹುದಾದ ಸಹಜತೆಯೇ ಬೇರೆ. ಅಲ್ಲಿ ತಾನಲ್ಲದ್ದನ್ನು ಆರೋಪಿಸಿಕೊಂಡು ಬರೆಯಬೇಕಾದ ಪ್ರಸಂಗವಿಲ್ಲ. ಬರೀ ಸ್ತ್ರೀಸಂವೇದನೆಗೆ ಮಾತ್ರ ಸೀಮಿತವಾ ಅದರಾಚೆಗೆ ಏನೂ ಇಲ್ವಾ ಅಂತೊಂದು ಪ್ರಶ್ನೆ ಬರಬಹುದು. ಅದು ಹಾಗಲ್ಲ; ಅದರಾಚೆಗೂ ಇರುತ್ತದೆ ಹಾಗೂ ಅದೇ ಎಲ್ಲವೂ ಆಗಿರುವುದಿಲ್ಲ. ಆದರೆ, ಅಲ್ಲೊಂದು ನವಿರಾದ ಸೂಕ್ಷ್ಮವಿರುತ್ತದೆ. ಅದು ಈ ಸಂವೇದನೆಗೆ ಅತ್ಯಂತ ಮುಖ್ಯವಾಗಿ ಬೇಕಾದ ಗುಣಲಕ್ಷಣ ಮತ್ತು ಈ ಸೂಕ್ಷ್ಮ ತೆರೆಯಬಹುದಾದ ಲೋಕ ನಮಗೆ ಅಷ್ಟು ಪರಿಚಿತವಲ್ಲದ್ದು. ಆಸಕ್ತಿ ಇನ್ನಷ್ಟು ಹೆಚ್ಚಾಗುವುದಕ್ಕೆ ಇದಕ್ಕಿಂತ ಬೇರೆ ಕಾರಣಗಳು ಬೇಕಿಲ್ಲ ಅಲ್ವಾ. "ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗುವ ಒಗ್ಗರಣೆಯ ಕರಿಬೇವು, ಬೆಳ್ಳುಳ್ಳಿ, ಮೆಣಸಿನ ಚೂರು ತಟ್ಟೆಕೊನೆಯಲ್ಲಿಯೇ ಉಳಿದುಬಿಡುವಾಗ ಅವುಗಳಿಗಾಗುವ ಬೇಗುದಿ ನಮಗಲ್ಲದೇ ಇನ್ನ್ಯಾರಿಗೆ ಅರ್ಥವಾಗಲು ಸಾಧ್ಯ" - ಅಡುಗೆಕೋಣೆಯಲ್ಲಿರುವ ಹೆಣ್ಣುಮಕ್ಕಳ‌ ಕತೆಯನ್ನು ಒಂದೇ ಸಾಲಲ್ಲಿ ಹೇಳಿದ ಮಾತು ಇದು. ಇಡೀ ಮನೆಯನ್ನು ಸಂಬಾಳಿಸುವ ಹೆಣ್ಣು, ಮನೆಯಲ್ಲಿ ಕೈಗೊಳ್ಳಬೇಕಾದ ನಿರ್ಧಾರದ ವಿಷಯ ಬಂದಾಗ ಎಂದಿಗೂ ನೇಪಥ್ಯದಲ್ಲೇ.. ಇದು ಇಡೀ ಮನೆಗೊಂದು ಘಮವನ್ನೂ, ಅಲ್ಲಿನ ಮನಸ್ಸುಗಳಿಗೆ ಆಹ್ಲಾದವನ್ನೂ‌ ತಂದುಕೊಡುವ ಹೆಣ್ಣಿನ ಸ್ಥಿತಿ. 

ಇಡೀ ಪುಸ್ತಕದ ತುಂಬಾ ಎದ್ದು ಕಾಣುವುದು‌ ಪ್ರಾಮಾಣಿಕತೆ. ತಾನು ಅಷ್ಟು ವರ್ಷಗಳಿಂದ ಬರೆಯುತ್ತಿದ್ದೇನೆ ಅನ್ನುವ ಹಮ್ಮು ಚೂರೂ ಇಲ್ಲ. ಕೆಲವೊಂದು ಕಡೆಗಳಲ್ಲಂತೂ ತನಗೆ ಈ ಹೊಸ ಯುಗದ ಹಲವು ಸಂಗತಿಗಳು ಗೊತ್ತಿಲ್ಲ ಅಂತ ಒಪ್ಪಿಕೊಂಡು ಅದನ್ನು ಸ್ವೀಕರಿಸುವ ಆ ಮನೋಭಾವ ಬಹುಶಃ ಈ ಬರಹಗಳು ಇನ್ನಷ್ಟು ಆಪ್ತವಾಗುವುದಕ್ಕೆ ಮತ್ತಷ್ಟು ಕಾರಣಗಳನ್ನು ಕೊಡುತ್ತದೆ. ಯಾವ ಪ್ರಚಾರವನ್ನು ಬಯಸದೆಯೇ ವರುಷ ವರುಷಗಳವರೆಗೆ ಬರೆಯುವುದು ಸುಲಭವಲ್ಲ. "ರೀಚ್ ತುಂಬಾ ಕಡಿಮೆ ಇದೆ" ಅನ್ನುವ ಈ ಕಾಲದಲ್ಲಿ, ಅದ್ಯಾವುದರ ಚಿಂತೆಯೂ ಇಲ್ಲದೇ ಬರೆಯುವವರನ್ನು ಕಂಡಾಗಲೆಲ್ಲಾ 'ಸಂತೆಯಲ್ಲಿ ನಿಂತ ಸಂತ'ನೇ ಸೂಕ್ತ ಪದ ಅವರ ಕುರಿತಾಗಿ ಹೇಳುವುದಕ್ಕೆ ಅಂತ ಅನಿಸುತ್ತದೆ. ಕಾಲಘಟ್ಟಗಳು ಹಾಗೂ ಅವುಗಳ ಬದಲಾವಣೆಗಳ ಕುರಿತಾಗಿ ಬಹಳಷ್ಟನ್ನು ಬರಹಗಾರ್ತಿ ದಾಖಲಿಸಿದ್ದಾರೆ ಈ ಪುಸ್ತಕದಲ್ಲಿ. ಒಂದೊಂದು ಸಲ ಕಳವಳದಂತೆ, ಇನ್ನು ಕೆಲವು ಸಲ ಈ ನವಯುಗ ಒದಗಿಸಿಕೊಟ್ಟ ಸೌಲಭ್ಯಗಳನ್ನು ಸಂಭ್ರಮಿಸುವಂತೆ. ಇಡೀ ಪುಸ್ತಕದುದ್ದಕ್ಕೂ ಅವರು ಉಲ್ಲೇಖಿಸುವ "ಅತಿ ರಂಜಕ ಕತೆಗಳಾಗಿತ್ತವೆಯೇನೋ ಅನ್ನುವ ಭಯ" ಅನ್ನುವ ವಾಕ್ಯ, ನಮ್ಮೀ ಹೊಸ ಜನಾಂಗ ಕಳೆದುಕೊಂಡ ಆ ಸಹಜ ಬದುಕಿನ ಕುರಿತಾಗಿ ಹೇಳುತ್ತದೆ. ಅಂದರೆ ಆಗ ಹೀಗೆಲ್ಲಾ ಇತ್ತು ಅಂದರೆ, ಅದನ್ನು ಹಾಗೂ ಆ ಸಹಜತೆಯನ್ನು ಅಸಹಜವೆಂಬಂತೆ ನೋಡಬೇಕಾದಲ್ಲಿಗೆ ನಾವು ಬದಲಾಗಿಹೋಗಿದ್ದೇವೆ. ನಾಗರಿಕತೆ ಅಥವಾ ಒಂದೋ ಎರಡೋ ತಲೆಮಾರು ಸಾಗಿಬಂದ ಹಾದಿಯನ್ನು ನಂಬುವುದಕ್ಕೂ ನಮ್ಮಿಂದ ಸಾಧ್ಯವಾಗ್ತಿಲ್ಲ ಅನ್ನುವಷ್ಟರ ಮಟ್ಟಿಗೆ ಇಲ್ಲಿ ಹಲವು ಸಂಗತಿಗಳು ಜರುಗಿಹೋಗಿವೆ ಅನ್ನುವ ಆತಂಕವೂ ಇಲ್ಲಿದೆ. ನಮ್ಮ ಅಮ್ಮನೋ, ಅಕ್ಕನೋ ನಮ್ಮ ಪಕ್ಕವೇ ಕೂತು ಈ ಎಲ್ಲವನ್ನೂ ಹೇಳುತ್ತಿರುವಂಥ ಆತ್ಮೀಯತೆಯೇ ಈ ಪುಸ್ತಕದ ಜೀವಾಳ.

ಕತೆಯಂಥ ನಿಜಸಂಗತಿಯೊಂದು ಕತೆಯಂತೆ ಬಂದುಹೋಗುತ್ತದೆ ಈ ಬರೆಹಗಳಲ್ಲಿ. ಒಂದು ಪ್ರದೇಶದ ಜನಜೀವನ ಹಾಗೂ ಅದರ ದಾಖಲಾತಿ ಅದೆಷ್ಟು ಮುಖ್ಯವೆಂದರೆ ಮನುಷ್ಯರು ಹೀಗೆಲ್ಲಾ ಬದುಕಿದ್ದರಾ ಅಂತ ಮುಂದೊಂದು ದಿನ ನಮ್ಮದೇ ಜನಾಂಗಗಳು ಆಶ್ಚರ್ಯಪಡಬಹುದು. ಈ ಪುಸ್ತಕ‌ ಹಿಡಿದು ಕೂತರೆ ಬಹುತೇಕ ಬಾರಿ ನಾವು ನಮ್ಮ ನಮ್ಮ ಊರುಗಳ ನೆನಪುಗಳೆಡೆಗೆ ಹೊರಳಿಕೊಳ್ಳುತ್ತೇವೆ. ನಮ್ಮ ನಮ್ಮ ಬಾಲ್ಯ, ಹದಿಹರೆಯದ ದಿನಗಳನ್ನು ನೆನೆಯುತ್ತೇವೆ. ಆಗಲೇ ಒಂದು ಜೋರು ಮಳೆ ಬಂದು ನಿಂತು, ಮಬ್ಬು ಮಬ್ಬು ವಾತಾವರಣದಲ್ಲಿ ಯಾವುದೋ ಬೆಚ್ಚಗಿನ ಅನುಭವವೊಂದು ಬಂದು ನಮ್ಮನ್ನು ಆಲಂಗಿಸಿ, ಬದುಕು ಚೆಂದವಿದೆ, ಇನ್ನಷ್ಟು ಸಂಭ್ರಮಿಸು ಅಂದ ಹಾಗೆ ಭಾಸವಾಗುತ್ತದೆ. ಲೇಖಕಿಯೇ ಹೇಳುವ ಹಾಗೆ, "ಕೊಡೆ ಮಳೆಯಲ್ಲಿ ನೆನೆಯುವುದೇ ಅದರ ಬದುಕಿನ ಭಾಗ್ಯ" 

- 'ಶ್ರೀ'
   ತಲಗೇರಿ

ಭಾನುವಾರ, ಜುಲೈ 17, 2022

'ಶಂಕರ ವಿಹಾರ : ಆಧುನಿಕನೊಬ್ಬನ ಅದ್ವೈತ ಯಾತ್ರೆ'


 'ಶಂಕರ ವಿಹಾರ : ಆಧುನಿಕನೊಬ್ಬನ ಅದ್ವೈತ ಯಾತ್ರೆ' 


ಇದೆಂಥದು? ಈ ಥರದ್ದೊಂದು ಪುಸ್ತಕದ ಕುರಿತಾಗಿ ಇವ ಯಾಕಾದ್ರೂ ಹೇಳ್ಬೇಕು ಅಂತ ಹಲವರಿಗೆ ಅನ್ನಿಸಬಹುದು,‌ ಕೆಲವರಿಗೆ ಇಷ್ಟವಾಗದೇ ಹೋಗಬಹುದು, ಇನ್ನು ಕೆಲವರಿಗೆ 'ಇವರೆಲ್ಲಾ ಇಷ್ಟೇ' ಅಂತಲೂ ಅಥವಾ ಇನ್ನೂ ಏನೇನೋ ಅನ್ನಿಸಬಹುದು. ಆದರೂ, ಬಹಳಷ್ಟು ದಿನಗಳ ನಂತರ ಒಂದು ಗಹನವಾದ ಹಾಗೂ ಗಾಢವಾದ ಕ್ಷಣಗಳನ್ನು ಒಂದು ಪುಸ್ತಕ ಓದುವುದರಿಂದ ಅನುಭವಿಸಿದ್ದಕ್ಕಾದರೂ ಈ ಪುಸ್ತಕದ ಬಗ್ಗೆ ಬರೆಯಲೇಬೇಕು. ನಿಜ ಹೇಳಬೇಕೆಂದರೆ, ಈ ಪುಸ್ತಕದ ಅಡಿಬರಹವನ್ನು ತಪ್ಪಾಗಿ ಅರ್ಥೈಸಿಕೊಂಡಲ್ಲಿಂದ ಈ ಪುಸ್ತಕದೊಂದಿಗಿನ ಪ್ರಯಾಣ ಶುರುವಾಗಿದ್ದು. ಆಮೇಲೆ ಪುಸ್ತಕ ಶುರುಮಾಡಿದ‌ ಮೇಲೆ ತಿಳಿಯಿತು ನಾನಂದುಕೊಂಡಿದ್ದು ಬೇರೆ ಅಂತ. ಆದರೆ, ಪುಸ್ತಕದ ಮೊದಲ‌ ಅಧ್ಯಾಯದಲ್ಲೇ ಒಂದು ವಿನಮ್ರ ವಿಜ್ಞಾಪನೆಯಿದೆ. ಆ ವಿಜ್ಞಾಪನೆಯೇ ಈ ಪುಸ್ತಕಕ್ಕೆ ಒಂದು ಗಟ್ಟಿ ದನಿಯನ್ನು ಕೊಟ್ಟಿದೆ. ಕೆಲವೊಮ್ಮೆ ನಾವು ಏನನ್ನು ಓದಲು ಬಯಸುತ್ತೇವೆಯೋ ಅದನ್ನು ಯಾರೂ ಬರೆಯದಿದ್ದಾಗ ನಾವೇ ಬರೆಯಲು ಮುಂದಾಗಬೇಕಾಗುತ್ತದೆ. ಇದು ಅಂಥದ್ದೇ ಪ್ರಯತ್ನ ಅಂತ ಲೇಖಕರು ಹೇಳಿದ್ದಾರೆ. ನನಗೆ ಈ ಸಂದರ್ಭದಲ್ಲಿ ಚಿತ್ರನಟ, ನಿರ್ದೇಶಕ‌ ರಕ್ಷಿತ್ ಶೆಟ್ಟಿಯವರು ಒಂದು ಸಂದರ್ಶನದಲ್ಲಿ ಹೇಳಿದ ಒಂದು ಮಾತು ಕೂಡಾ ನೆನಪಿಗೆ ಬಂತು; "ನನ್ ಸಿನೆಮಾ ಯಾರೂ ಮಾಡೋದಿಲ್ಲ, ನಾನೇ ಮಾಡ್ಕೋಬೇಕು"! ನಾನು ಯಾವ ಥರದ ಕತೆಯನ್ನು, ಸಂಗತಿಯನ್ನು ಕೇಳಲು ಬಯಸುತ್ತೇನೋ ಆ ಥರದ್ದನ್ನು ಯಾರೂ ಹೇಳದಿದ್ದಾಗ, ನಾನೇ ಆ ಪ್ರಾರಂಭಕ್ಕೆ ಒಂದು ಆರಂಭ ಕೊಡಬೇಕು. ಇದು ಕೇವಲ ಯಾವುದೋ ಒಂದು ಸಿದ್ಧಾಂತದ ಪ್ರಚಾರಕ್ಕಾಗಿಯೋ, ಇದೊಂದೇ ಶ್ರೇಷ್ಠ ಅನ್ನುವುದನ್ನು ಸಾರುವುದಕ್ಕಾಗಿಯೋ ಬರೆದ ಪುಸ್ತಕವಿರಬಹುದು ಅಂತ ಅಂದುಕೊಂಡಲ್ಲಿ ಅದು ತೀರಾ ಬಾಲಿಶವಾದೀತು. ಭಾರತದ ಹಲವು ದರ್ಶನಗಳನ್ನು ಒಟ್ಟಿಗೆ ಇಟ್ಟು, ಅವುಗಳನ್ನು ಸರಳವಾಗಿ ನೋಡುವ ಹಾಗೂ ಅವುಗಳ ಸಾಮ್ಯತೆಗಳನ್ನು ಗುರುತಿಸುವುದರ ಜೊತೆಗೆ ಅದ್ವೈತ ಎಷ್ಟರ ಮಟ್ಟಿಗೆ ಹೆಚ್ಚು ಪ್ರಸ್ತುತವಾಗಬಲ್ಲದು ಅನ್ನುವುದನ್ನೂ ಹೇಳುವ ಸಂಕಲ್ಪದ ಭಾಗವೇ ಶ್ರೀ ಅಕ್ಷರ ಕೆ ವಿ ಅವರ 'ಶಂಕರ ವಿಹಾರ : ಆಧುನಿಕನೊಬ್ಬನ ಅದ್ವೈತ ಯಾತ್ರೆ' 


ನಾವು ಅದೆಷ್ಟೇ ಜಾಗಗಳಿಗೆ ಹೋಗಲಿ, ಅದೆಷ್ಟೇ ದೇಶಗಳನ್ನು ಸುತ್ತಲಿ, ಕೊನೆಗೆ ಎಲ್ಲವನ್ನೂ ಸಮೀಕರಿಸಿಕೊಳ್ಳುವುದು ನಮ್ಮೂರಿನ ಯಾವುದೋ ಒಂದು ಜಾಗಕ್ಕೆ; ಇದು ಅದರ ಹಾಗಿಲ್ಲ, ಅದಕ್ಕಿಂತ‌ ಚೂರು‌‌ ಜಾಸ್ತಿ ಅಥವಾ ಕಡಿಮೆ ಅಂತಲೋ, ಎಷ್ಟೇ ವ್ಯಕ್ತಿಗಳನ್ನು ಭೇಟಿ ಮಾಡಲಿ; ಇವ ಅವರ ಥರವೇ ಅಲ್ವಾ ಅಂತಲೋ, ಇನ್ನೂ ಏನೇನೋ ಹೀಗೆ. ಅಂದರೆ, 'ಮನುಷ್ಯ ಎಲ್ಲಿ ಹೋದರೂ ತನ್ನ ಪರಿಚಿತ ನೆನಪುಗಳೊಂದಿಗೆ ಮಾತ್ರವೇ ಎಲ್ಲವನ್ನೂ ನೋಡುತ್ತ ಹೋಗುತ್ತಾನೆ'. ಸ್ವತಂತ್ರವಾದಂಥ ಚಿತ್ರಣವೊಂದು ತಾನಾಗೇ ಮೂಡುವುದಕ್ಕೆ ಬಹುತೇಕವಾಗಿ ಕಷ್ಟಸಾಧ್ಯವೇ ಆಗಿರಬಹುದು.


ಇನ್ನು, ಬಹುತೇಕರು ಆಧುನಿಕತೆಯೆಂದರೆ ಸಂಪ್ರದಾಯಕ್ಕೆ ವಿರುದ್ಧ ಅಂತಲೇ ಅಥವಾ ಸಂಪ್ರದಾಯದ ವಿರುದ್ಧವಾಗಿದ್ದರೆ ಮಾತ್ರ ತಾವು ಆಧುನಿಕರು ಅಂತ ಭಾವಿಸಿದ್ದಾರೆ. ಆಧುನಿಕತೆಯೆಂದರೆ ನಂಬಿಕೆಗಳ ನವೀಕರಣ; ಅದು ಸಂಪ್ರದಾಯದಿಂದ ವಿಮುಖವಾಗಬೇಕಿಲ್ಲ. ಒಂದು ಸಂಕುಚಿತ ಅರ್ಥದಲ್ಲಿ ನೋಡಿದರೆ ಬಹುಶಃ ಎರಡೂ ಪರಸ್ಪರ ತಾಳೆಯಾಗದ ಪದಗಳಾಗಿ ಕಂಡರೆ ಅದು ಅವರವರ ಮಿತಿ ಅಷ್ಟೇ. ಯಾಕೆಂದರೆ ಸತ್ಯಕ್ಕೆ ಕೇವಲ ಎರಡು ಮುಖಗಳೇ ಇರಬೇಕು ಅಂತೇನೂ ಇಲ್ಲವಲ್ಲ ! ಈ ಎರಡು ಮುಖಗಳ  ನಂಬಿಕೆಯಾಚೆಗಿನ ಇನ್ನೊಂದು ಸಾಧ್ಯತೆಯೂ ಇರಬಹುದು. ಅಂಥ ಒಂದು ಸಾಧ್ಯತೆಯನ್ನು ಪರಿಕಲ್ಪನೆಯಲ್ಲಿಯೂ ಸಹ ನಿರೀಕ್ಷಿಸಿರದೇ ಇದ್ದವರಿಗೆ ಮಾತ್ರ ಅದು ಕೇವಲ ಎರಡು ರೂಪಗಳಿಗೆ ಸೀಮಿತ. ಜೊತೆಗೆ, ನಮ್ಮಲ್ಲೊಂದು ಪರಿಪಾಠವಿದೆ. ಆಧುನಿಕವೆಂಬಂತೆ ತೋರಿಸಿಕೊಳ್ಳಬೇಕೆಂದರೆ ಸಂಪ್ರದಾಯವನ್ನು ಹೀಯಾಳಿಸಬೇಕು. ಅದನ್ನು ಕಂಡಕಂಡ ಪದಗಳಲ್ಲಿ ಲೇವಡಿ ಮಾಡಬೇಕು. ಸಂಪ್ರದಾಯವಾದಿಗಳೆಂದವರನ್ನು‌ 'ಹೋ' ಎಂಬ ಕಿರುಚಾಟದ ನಡುವೆ ಅವಮಾನಿಸಬೇಕು. ವೈಚಾರಿಕತೆಯ ಗಂಧವೂ ಇರದ ಇಂಥ ಮನಸುಗಳು ಹೆಚ್ಚಾಗುತ್ತಿರುವುದು ಹಾಗೂ ಅದನ್ನು ಪೋಷಿಸುತ್ತಿರುವುದು‌ ಈ ಕಾಲದ ದುರಂತಗಳಲ್ಲಿ ಒಂದು. 


ಇತ್ತೀಚೆಗೆ ವಿಶ್ವವಿದ್ಯಾಲಯಗಳನ್ನು ದೊಡ್ಡ ದೊಡ್ಡ ಕಂಪೌಂಡುಗಳು ಸುತ್ತುವರೆದಿರುತ್ತಾವಲ್ಲಾ, ಅದನ್ನಿಲ್ಲಿ ಒಂದು ಆಳವಾದ ವ್ಯಂಗ್ಯದೊಂದಿಗೆ ಹೇಳಲಾಗಿದೆ. ವಿಶ್ವವಿದ್ಯಾಲಯಗಳು ಹಾಕುವ ಎತ್ತರದ ಬೇಲಿಗಳು ಕೇವಲ ಭೌತಿಕ ಬೇಲಿಯಲ್ಲ, ಅದು ಅಲ್ಲಿ ಬೋಧಿಸುವ ಸಂಗತಿಗಳ ಕುರಿತಾಗಿಯೂ ಇರುವ ಬೇಲಿ. ಅದೆಷ್ಟು ವಿಶ್ವವಿದ್ಯಾಲಯಗಳು ಕೇವಲ ತಮ್ಮದೇ ರಾಜಕೀಯ ಸಿದ್ಧಾಂತಗಳ‌ ಬೇಲಿ ಹಾಕಿಕೊಂಡು ಕುಳಿತಿಲ್ಲ ಹೇಳಿ! ವಿಶ್ವದ ಎಲ್ಲ ಕಡೆಯಿಂದಲೂ ಜ್ಞಾನದ ಬೆಳಕು ಹರಿದುಬರಲಿ ಅನ್ನುವುದು ಭಾರತೀಯತೆಯ ಪ್ರಾರ್ಥನೆ. ಆದರೆ, ಈಗ ಕೇವಲ ಕೆಲವರು ಆರಿಸಿಕೊಟ್ಟ ಆ‌ ಕೆಲವು ವಿಷಯಗಳ ಕುರಿತಾಗಿ ಮಾತನಾಡಿದರಷ್ಟೇ ನಮ್ಮನ್ನು ವೈಚಾರಿಕ ವ್ಯಕ್ತಿಯೆಂದು ಗುರುತಿಸಲಾಗುತ್ತದೆ; ಇಲ್ಲದಿದ್ದಲ್ಲಿ ಗೊಡ್ಡು ಸಂಪ್ರದಾಯವಾದಿ! 


ವೇದವಾಕ್ಯಗಳು ಎಂದಿಗೂ ಯಾವ ಕೆಲಸವನ್ನೂ ಮಾಡಿ ಯಾ ಮಾಡಬೇಡಿರೆಂದು ವಿಧಿಸುವುದಿಲ್ಲ. ಅವು ಕೇವಲ‌ ಅಭಿವ್ಯಕ್ತಿಯಾಗಿ ಮಾತ್ರವೇ ಇವೆ. ಅಂದರೆ, ಒಂದು ಕೆಲಸವನ್ನು ಹೀಗೆ ಮಾಡಿದರೆ‌ ಹೀಗಾಗಬಹುದು ಅನ್ನುವ ದಾರಿಯ ಪರಿಕಲ್ಪನೆಯನ್ನು ಸೂಚಿಸುತ್ತವೆಯೇ ಹೊರತೂ ಅಲ್ಲಿ ವಿಧಿಸುವಿಕೆ ಇಲ್ಲ. ಇದು ಮಾತ್ರವೇ ನಿನಗಿರುವ ದಾರಿ ಅನ್ನುವ ಕಟ್ಟಪ್ಪಣೆ ಇಲ್ಲ. ಭಾರತ ಯಾವತ್ತಿಗೂ ಅನ್ವೇಷಕರ ಭೂಮಿ ( land of seekers ). ಇದು ಹೀಗೆಯೇ ಅಂತಂದು ಷರಾ ಬರೆದ ಮರುಕ್ಷಣವೇ ಅನ್ವೇಷಣೆಗೆ ಅವಕಾಶವಾದರೂ ಎಲ್ಲಿ? ಭಾರತದಲ್ಲಿ ಇದ್ದಿದ್ದು ಇದು ಹೀಗೆ; ಬೇಕಾದರೆ ಹುಡುಕಿಕೋ ಅನ್ನುವ ಸಂಜ್ಞೆ. ಜೊತೆಗೆ ಹುಡುಕದೇ‌ ಯಾವುದರ ಸಾಕ್ಷಾತ್ಕಾರವೂ ಆಗುವುದಿಲ್ಲ. ಕಾರಣ, ಪ್ರತೀ ವ್ಯಕ್ತಿಯ ಅನುಭವವೂ ಭಿನ್ನ. ಹಾಗೆಯೇ, ಪ್ರತಿ ವ್ಯಕ್ತಿಯ ಅಂತರಂಗವೂ ಭಿನ್ನ. ಅದೇ ಅಧ್ಯಾತ್ಮ; ಆತ್ಮದ ಕುರಿತಾಗಿದ್ದು! ಅಪಾರದರ್ಶಕ ವಸ್ತುವಿನ ಮೇಲೆ ಬೆಳಕು ಬಿದ್ದಾಗ, ಬೆಳಕು ಬೀಳುತ್ತಿರುವ ಕೋನದಿಂದ ನೋಡಿದವನಿಗೆ ಅಪಾರದರ್ಶಕದ ನೆರಳು ಗೋಚರಿಸದೇ‌ ಹೋಗಬಹುದು. ಆಗ, ನೆರಳೇ ಇಲ್ಲ ಅಂತ ವಾದಿಸುವುದು ಮತ್ತು ನಂಬುವುದು ಪೂರ್ಣ ದರ್ಶನದ ಭಾಗವಲ್ಲ. ಅದಕ್ಕಾಗಿಯೇ ಭಾರತದಲ್ಲಿ ಕೇವಲ ಯಾವುದೋ ಒಂದು ದರ್ಶನವಿರಲಿಲ್ಲ. ಎಲ್ಲ ದರ್ಶನಗಳ ಒಟ್ಟೂ ಸತ್ಯ‌ ಮತ್ತೆ ಸತ್ಯದ‌ ಮೂಲ ರೂಪಕ್ಕೇ ಹೋಗಿ ನಿಲ್ಲುತ್ತದೆ. ಯಾವಾಗಲೂ ಒಂದು ಮಾತಿದೆ; ಮೀನು ಹಿಡಿಯುವುದನ್ನು ಕಲಿಸು ಆದರೆ ನೀನೇ ಮೀನು ಹಿಡಿದುಕೊಡಬೇಡ ಅಂತ. ಹೀಗೂ ಇರಬಹುದು ಅನ್ನುವ ಹಲವು ದಾರಿಗಳನ್ನು ತೆರೆದಿಡು, ಆದರೆ ಯಾವ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಅನ್ನುವ ನಿರ್ಧಾರವನ್ನು ಆ ವ್ಯಕ್ತಿಗೆ ಬಿಡು, ಇದನ್ನೇ ವೇದವಾಗಲೀ ಭಗವದ್ಗೀತೆಯಾಗಲೀ ಮಾಡುವುದು - ಯಥೇಚ್ಛಸಿ ತಥಾ ಕುರು. 


ಇನ್ನೊಂದು ಮಜದ ಸಂಗತಿಯೆಂದರೆ, ನಮ್ಮಲ್ಲಿ ಹಲವರು ಮೂಲಗ್ರಂಥಗಳನ್ನು ಓದದೆಯೇ ಅಲ್ಲ್ಯಾರೋ ಇನ್ನು ಹೇಗೋ ಅಸಂಬದ್ಧವಾಗಿ ಅರ್ಥೈಸಿಕೊಂಡಿರುವುದನ್ನು ಬರೆದಿದ್ದನ್ನೇ ಓದಿ ಇನ್ನೇನೋ ಅರ್ಥೈಸಿಕೊಳ್ಳುತ್ತೇವೆ. ಆ ಗ್ರಂಥದಲ್ಲಿ ಆ ಸಾಲಿನ ಮೂಲ ಉದ್ದೇಶ ಇನ್ನೇನೋ ಆಗಿರಬಹುದು. ಒಂದು ಸಂಗತಿಯ ಹಿಂದೆ ಮುಂದೆ ಬೇರೆ ಏನಾದರೂ ಇದ್ದರೆ, ಆ ಇಡೀ ಸಂಗತಿ ಅರ್ಥವಾಗುವ ರೀತಿಯೇ ಬೇರೆ!‌ ಕೇವಲ ಒಂದು ಸಾಲನ್ನು ಮಾತ್ರವೇ ತೆಗೆದುಕೊಂಡು ಅದರ ಅರ್ಥವನ್ನು ವಿಶ್ಲೇಷಿಸಿ ಮಹಾನ್ ವೈಚಾರಿಕರೆನಿಸಿಕೊಳ್ಳುವ ಹಂಬಲದಲ್ಲಿರುತ್ತೇವೆ. ಉದಾಹರಣೆಗೆ, 'ಅವನು ಊಟ ಮಾಡಿದನು' ಇದೊಂದು ಸರಳವಾದ ವಾಕ್ಯ ಸ್ವತಂತ್ರವಾಗಿ;ಅರ್ಥವೂ ಅಷ್ಟೇ ಸರಳ. ಆ ವಾಕ್ಯದ ಹಿಂದೆ ಈಗ ಈ ವಾಕ್ಯವನ್ನು ಸೇರಿಸುವ; "ಯಾರ ಹತ್ತಿರವೋ ಬೇಡಿ ಅವರು ಊಟ ಪಡೆದಿದ್ದರು, ಅವರ ಕೈಯಿಂದ ಅದನ್ನು ಕಸಿದುಕೊಂಡು ಅವನು ಊಟ ಮಾಡಿದನು". ಇನ್ನೂ ಒಂದು ವಾಕ್ಯ " ನಡುಗುವ ಕೈಗಳ ಅಮ್ಮನ ಕೈಯಿಂದ ಅವನು ಊಟ ಮಾಡಿದನು". ಅವನು ಊಟ ಮಾಡಿದ್ದು ಸತ್ಯವೇ ಆದರೂ, ವಾಕ್ಯದ ನಿಜ ಅರ್ಥ ಹಾಗೂ ಧ್ವನಿ ಮೂರೂ ಸಂಗತಿಗಳಲ್ಲಿ ಬೇರೆಬೇರೆಯೇ ಅಲ್ವಾ! ಈಗ ನಮ್ಮ ವೇದ, ಉಪನಿಷತ್ತು, ಪುರಾಣ,‌ ಮಹಾಕಾವ್ಯದ ವಿಷಯಗಳಲ್ಲಿ ಆಗುತ್ತಿರುವುದು ಇದೇ. 


ಹೇಗೆ ತತ್ವಗಳಿಗೆ ದೇವರ ರೂಪ ಕೊಡಲಾಗುತ್ತದೋ ಹಾಗೆಯೇ, ಅವತಾರಗಳ ಮೂಲಕ ದೇವರಿಗೆ ಮನುಷ್ಯ ರೂಪ ಕೊಡಲಾಗುತ್ತದೆ. ಈ ಸಂಗತಿ ಅದೆಷ್ಟು ಆಪ್ತವೆಂದರೆ, ದೇವರು ಅಂದ ಮಾತ್ರಕ್ಕೆ ಮನುಷ್ಯ ನಿಯಮಗಳನ್ನು ಮೀರುವ ಹಾಗಿಲ್ಲ. ಮನುಷ್ಯ ದೇಹವನ್ನು ಪ್ರವೇಶಿಸಿದ ಮೇಲೆ ಮನುಷ್ಯ ಅನುಭವಿಸಬೇಕಾದ ಎಲ್ಲ‌ ಕ್ಲೇಶಗಳನ್ನು ದೇವರೆಂಬ ದೇವರೂ ಅನುಭವಿಸಬೇಕು! ಯುದ್ಧ ಮುಗಿದ ಮೇಲೆ‌ ರಾಮ ಹೇಳುತ್ತಾನಲ್ಲಾ; "ಆತ್ಮಾನಂ ಮಾನುಷಂ ಮನ್ಯೇ ರಾಮಂ ದಶರಥಾತ್ಮಜಂ". ಇವೆಲ್ಲವೂ ಒಂಥರಾ ಫ್ಯಾನ್ಸಿ ಅಥವಾ ಅತಿರೇಕದ ಹೇಳಿಕೆಗಳಂತೆ ಭಾಸವಾಗಬಹುದು. ಆದರೆ, ನಾನೂ ನೀನೂ ಬೇರೆಯಲ್ಲ ಅನ್ನುವುದನ್ನು ಇದಕ್ಕಿಂತ ಇನ್ನೊಂದು ದೃಷ್ಟಾಂತದ‌ ಮೂಲಕ ಹೇಳುವುದಕ್ಕೆ ಸಾಧ್ಯವಾ! 


~'ಶ್ರೀ' 

   ತಲಗೇರಿ