ಶನಿವಾರ, ಆಗಸ್ಟ್ 19, 2017

ಒದ್ದೆ ರಾತ್ರಿ...

ಕಿರೀಟ ಮುರಿದ ಅಂಟೆನಾದ
ಜೊಲ್ಲು , ಪೆಟ್ಟಿಗೆಯ ಗ್ರಂಥಿಗಳಲ್ಲಿ
ಮಾಡುತ್ತವೆ ಅಸಹಾಯಕ ಜಾಗರಣೆ..
ತಂತುಗಳ ರಕ್ತನಾಳದಲಿ
ಒದ್ದೆ ರಾತ್ರಿಗಳು ನಿಲ್ದಾಣಗಳಾಗಿ
ಜುಟ್ಟು ಬಿಟ್ಟು ಕೂತಿವೆ..
ಜಪಮಾಲೆಗಿಂದು ನಾಗಾಲೋಟ
ಸೊಳ್ಳೆಗಳ ಗಡೀಪಾರಿನಲ್ಲಿ
ಉಳಿದದ್ದು ಊದುಬತ್ತಿಯ ಚಿತಾಭಸ್ಮ
ಮತ್ತು ಚರ್ಮ ಹೊದೆಸದ ಎಲುಬು..

ಚೊಂಬು ಹಿಡಿದ ಚಂದ್ರ
ಮಹಾಬಯಲಿನಲ್ಲಿ ತೂಕಡಿಸಿದ್ದಾನೆ
ಕುಕ್ಕರಗಾಲಿನಲ್ಲಿ ಕುದುರೆಯಾಗಲು ಕನಸುತ್ತ..
ದೊಂದಿ ಹಿಡಿದ ಪೋರರು
ಶಿಥಿಲ ಗಡಿಯಾರದ ಸ್ಪ್ರಿಂಗಿನೊಳಗೆ
ಉಳಿದುಹೋದರು ತುಕ್ಕು ಪಳೆಯುಳಿಕೆಯಂತೆ..
ಬಾಚಣಿಗೆಯೊಂದು ಮೊಂಬತ್ತಿ ಬೆಳಕಲ್ಲಿ
ಸಿಕ್ಕುಗಳ ನಡುವೆ ಕಾಲು ಕೆರೆಯುತ್ತಿತ್ತು;
ಚಾರಣದ ದಿಕ್ಕಿಗಿಲ್ಲಿ ಹೊಸ ಶಕೆ..

ದಾರಿ ಬದಿಯ ಸಾಲು ಪೊಟರೆಗಳಲ್ಲೊಂದಕ್ಕೆ
ಹೆಗ್ಗಣದ ಬಿಡಾರದ ಜಾಹೀರಾತು..
ಇಣುಕುತ್ತದೆ ಕೆಣಕುತ್ತದೆ
ಆಗಾಗ ಭುಗಿಲಿಡುವ ಬಯಕೆ..
ಮಂದ ಮಾರುತವೊಂದು
ಹದಿನಾರಕ್ಕೆ ಹಲುಬುತ್ತದೆ..
ಗಾಳಿಮಾತುಗಳ ಹೆಕ್ಕುವಿಕೆ
ಗುಡಿಸುವಿಕೆಯಲ್ಲಿ ಪೊರಕೆಗೆ ಮರು ಯೌವನ..

ತೇಗಿದ ಹೊಗೆಯ ಸುಕ್ಕಿಗೆ
ಬೀದಿ ದೀಪದ ಆಯಸ್ಸು ಹೇಳುವ ಉಮೇದು;
ರೆಕ್ಕೆ ಮುರಿದ ಹುಳದ ಲೆಕ್ಕ
ನಮ್ಮ ಜೋಡುಗೆರೆ ಪಟ್ಟಿಯಲ್ಲಿಲ್ಲ..
ಆಚೆಯೆಲ್ಲೋ ಮುಲುಗುವಾಗ
ಬೆವರುವ ಗೋಡೆ, ಕಿಲಗುಟ್ಟುತ್ತದೆ
ಮಗುವೊಂದು ಮೊಲೆಹಾಲ ಕುಡಿವ
ಸೊರ ಸೊರ ಶಬ್ದಕ್ಕೆ..ಮನುಷ್ಯ ತಾಯಾಗುತ್ತಾನೆ..
ಮತ್ತು ಜಗತ್ತೂ..!

~`ಶ್ರೀ'
    ತಲಗೇರಿ

ಬುಧವಾರ, ಆಗಸ್ಟ್ 9, 2017

ಅಕ್ಕು : ಬಯಲು, ಗೋಡೆಯೊಳಗಣ ಹೂವಿನ ದಂತಕಥೆ..     ಅದೊಂದು ಕಾಲಘಟ್ಟ.. ಪುರುಷ ಪ್ರಧಾನ ಸಮಾಜ.. ಹೆಣ್ಣು , ಅದೊಂದು ಚೌಕಟ್ಟಿನ ಚಿತ್ರ ಮಾತ್ರವೇ ಆಗಬೇಕು ಅನ್ನುವ ಅಲಿಖಿತ ನಿಶ್ಚಿತ ಕೌಟುಂಬಿಕ ಸಂವಿಧಾನ.. ಎಲ್ಲಾ ವ್ಯವಸ್ಥಿತ ಕಾಲದ ಸಮಾಜದಲ್ಲಿ ಬಹುಶಃ ಇದೊಂದು ತುಂಬಾನೇ ಚರ್ಚಿತ ವಿಷಯ.. ಅಬಲೆ ಅನ್ನುವಂಥ ಒಂದಷ್ಟು ನೆಪಗಳ ಪೊಳ್ಳು ಪೊರೆಯೊಳಗೆ ಹುದುಗಿಕೊಂಡ ವ್ಯವಸ್ಥೆಯಲ್ಲಿ ಪದೇ ಪದೇ ಒಂದು ಧ್ವನಿ ಯಾರಿಗೂ ಕೇಳುವುದೇ ಇಲ್ಲ‌... ಅದೆಷ್ಟೋ ತಲೆಮಾರುಗಳ ಕೂಗು; ಕ್ಷೀಣ ತೀಕ್ಷ್ಣ ಎಲ್ಲಾ ಹಂತಗಳಲ್ಲಿ ಜಾಲಾಡಲ್ಪಟ್ಟ ಗಂಟಲಿನ ಮೊರೆತ.. ಒತ್ತಾಯದ ಬದುಕು ಹೆಣ್ಣು ಗಂಡೆಂಬುದ ನೋಡದೇ ಎಲ್ಲರನ್ನೂ ಹಿಂಸಿಸುವಂಥದ್ದು.. ಆದರೂ ಕೆಲವೊಮ್ಮೆ ಒಂದು ವರ್ಗ ಮಾತ್ರವೇ ಅದರ ಹಿಡಿತಕ್ಕೆ ಸಿಲುಕುವುದು ಬಹುಶಃ ಎಲ್ಲಾ ಕಾಲಘಟ್ಟದ ದುರಂತವೇನೋ ! ಸ್ವಾತಂತ್ರ್ಯ ಮತ್ತು ಸ್ವೇಚ್ಛೆಯ ತೆಳು ಗೆರೆಯನ್ನ ಗಮನಿಸುವ ಸೂಕ್ಷ್ಮಮತಿ, ಕೂರದ ಕಾಲದ ಬಗಲಿಗೆ ಜೋತುಬಿದ್ದ ನಮ್ಮ‌ಕಣ್ಣುಗಳಿಗಿಲ್ಲ.. ಹೀಗೆ , ಬಾಡಿದ ಹೂಗಳ ಅರೆಗಂದು ಬಣ್ಣದ ನೆರಿಗೆಗಳ ಕಥಾನಕವೇ ಅಕ್ಕು ...

     ಇದೆಲ್ಲಿಯದೋ ದೂರದ ಕತೆಯಲ್ಲ , ಈಗಲೂ ಅದೆಷ್ಟೋ ಹಳ್ಳಿಗಳ ನಿತ್ಯ ಅಜ್ಞಾತ ಸಂಘರ್ಷ.. ಹರೆಯಕ್ಕೆ ರೆಕ್ಕೆ ಬಹಳ; ಅದರಲ್ಲೂ ಹೆಣ್ಣಿನ ಬಯಕೆಗಳಲ್ಲಿ ಸಣ್ಣಪುಟ್ಟ ಸಂಗತಿಗಳೇ ಅಧಿಕ.. ಕನ್ನಡಿಯೊಂದು ಆಪ್ತಮಿತ್ರ.. ಎಲ್ಲ ಕಾಲಕ್ಕೂ ಜೊತೆಯಾಗಬಲ್ಲ ಗೆಳತಿ.. ಶೀರ್ಷಿಕೆಯಿರದ ಒಂದಷ್ಟು ಆಸೆಗಳ ಪಟ್ಟಿಮಾಡುವಾಗಲೆಲ್ಲಾ ಕೈಬೆಸೆದ ನೆರಳು ಹ್ಞೂಂ ಅಂತಿರಬೇಕು.. ಮತ್ತು ಹಟವೊಂದು ಹೆಣ್ಣಿಗೆ ಹುಟ್ಟು ಕೊಟ್ಟ ಬಳುವಳಿಯೇನೋ ಅನ್ನುವಂತಿರುತ್ತದೆ.. ಈ ಗುಣಗಳ ಮೂರ್ತರೂಪವೇ ಈ ಕಥಾನಕದ ಅಮ್ಮಚ್ಚಿ... ಲಹರಿ ತಂತ್ರಿ ಅನ್ನುವವರ ಮಾಗಿದ ಅಭಿನಯ ಅವರೆಲ್ಲೋ ನಮ್ಮದೇ ಮನೆಯ ಹುಡುಗಿಯೆನ್ನುವಷ್ಟು ಆಪ್ತವಾಗಿಸುತ್ತದೆ.. ಅಮ್ಮಚ್ಚಿ ಬಯಲ ಹೂವು.. ತನ್ನದೇ ಲೋಕದಲ್ಲಿ ತಂಗಾಳಿಯಂಥ ಕನಸಿನಲ್ಲಿ ಚಿಟ್ಟೆಯ ರೆಕ್ಕೆಯ ಮೆದುವಾದ ಸ್ಪರ್ಶದ ಕುರಿತಾಗಿ ಹಾತೊರೆಯುತ್ತಿದ್ದಂಥವಳು.. ಮಿಡತೆಯ ಕಾಲಿಗೆ ಸಿಕ್ಕಿ ಮನೆಯೊಳಗೆ ಬಂದು ಬಿದ್ದಂಥದು.. ಇನ್ನು , ಅದೆಷ್ಟೋ ವಸಂತಗಳನ್ನ ಒಂಟಿಯಾಗಿ ಕಳೆದ ಸುಕ್ಕು ಚರ್ಮವೊಂದಿದೆ.. `ಪುಟ್ಟಮ್ಮತ್ತೆ' ; ನಿರ್ಭಾವ ಜಾಗೃತಿಯ ಕಲಿಸುವಂಥವಳು.. ಎದೆ, ಕಲ್ಲಾದಲ್ಲಿ ಪ್ರಾಯದ ಹಸಿವನ್ನೂ ಮೀರಿ ನಿಲ್ಲಬಹುದೆನ್ನೋ ಗಟ್ಟಿಗಿತ್ತಿ.. ಸಾವಿಗಿಂತ ಬದುಕಿನ ಪ್ರೀತಿ , ಮಾತೃತ್ವದ ರೀತಿಯನ್ನ ನೆಚ್ಚಿ ಉಳಿದಂಥವಳು.. ಎಲ್ಲಾ ಏರಿಳಿತಗಳ, ಅದೆಷ್ಟೋ ಹಗಲಿರುಳುಗಳ ಮೂಕಸಾಕ್ಷಿಯಾಗಿಯೇ ಉಳಿದುಹೋದಂಥವಳು.. ಋಣಕ್ಕೆ ಬಿದ್ದ , ಮತ್ತು ತಿಳಿಯದೆಯೇ ಮಿಡತೆಗೆ ಬಾಗಿಲು ತೆಗೆದವಳು; ಕಾಲನ ಕ್ರೂರ ಹವೆಗೆ ಜರ್ಝರಿತಳು.. ರಾಧಾಕೃಷ್ಣ ಉರಾಳರಲ್ಲಿ ಪುಟ್ಟಮ್ಮತ್ತೆ ಬಹುಶಃ ಪರಕಾಯ ಪ್ರವೇಶ ಮಾಡಿರಲೇಬೇಕು ಅನ್ನುವಷ್ಟು ಏಕೀಭೂತರು.. ಇನ್ನು , ಮಾನಸಿಕ ಸ್ತಿಮಿತ ಕಳೆದುಕೊಂಡಂಥವಳು.. ಪುರುಷ ಡಾಂಭಿಕತೆಯನ್ನ ಮತ್ತು ಸಮಾಜದ ಕಾಠಿಣ್ಯತೆಯನ್ನ ಸವಿಸ್ತಾರವಾಗಿ ತೆರೆದಿಡಬಲ್ಲಂಥವಳು; ಅವಳೇ `ಅಕ್ಕು' .. ಸೋಗು ಹಾಕುತ್ತಲೇ ಸಾಗ ಹಾಕುತ್ತ , ಮದದ ಜಾತ್ರೆಯಲ್ಲಿ ದಿಗಿಲನ್ನೇ ಆಮದು ಮಾಡಿಕೊಂಡು ಭ್ರಮರಗಳ ರೆಕ್ಕೆ ಮುರಿದವಳು, ಹಾರದೇ ಉಳಿದವಳು.. ಮತ್ತೆ , ಇದ್ದೂ ಇಲ್ಲದವಳು.. ಇವಳು ಗೋಡೆಗಿಷ್ಟು ಹಬ್ಬಿ ಮುಗುಳು ಹಡೆವ ಹಸಿ ಹಂಬಲದವಳು..ಬರೀ ಹಂಬಲದವಳಾಗೇ ಉಳಿದವಳು.. ಅಕ್ಕುವಾಗಿ ಮತ್ತು ನಿರ್ದೇಶಕಿಯಾಗಿ ಚಂಪಾಶೆಟ್ಟಿಯವರು ಕಾಡುತ್ತಲೇ ಉಳಿದುಹೋಗುತ್ತಾರೆ.. ಕ್ಷಣ ಕ್ಷಣದ ಮುಖಭಾವದಲ್ಲೂ ಕಟ್ಟಿಕೊಟ್ಟ ರೀತಿ ತುಂಬಾ ತುಂಬಾ ಚೆಂದ... ಎಲ್ಲಾ ಸಹಕಲಾವಿದರೂ ಇಡೀ ಕತೆಯ ಓಘಕ್ಕೆ ಮತ್ತು ಪಾತ್ರಕ್ಕೆ ಬೆನ್ನೆಲುಬಾಗಿ ನಿಂತವರು... ನೆರಳು ಬೆಳಕಿನ ಸಂಯೋಜನೆ, ಒಂದಷ್ಟು ಅದ್ಭುತ ಕಲಾಕೃತಿಗಳನ್ನು ಕಟ್ಟಿಕೊಟ್ಟಿಕೊಡುತ್ತದೆ.. ಕಾಶಿನಾಥ್ ಪತ್ತಾರ್ ಅವರ ಹಿನ್ನೆಲೆ ಸಂಗೀತ ಮಾನವೀಯ ನೆಲೆಯನ್ನ ಜಾಗೃತಗೊಳಿಸುತ್ತ ಸಾಗುತ್ತದೆ..

    ವೈದೇಹಿ ಅವರ ಸಣ್ಣ ಕತೆಗಳನ್ನ ಆಧರಿಸಿ ಹುಟ್ಟಿಕೊಂಡ ಕಥಾನಕ ಈ ಅಕ್ಕು ; ಅಲ್ಲೇ ಹೇಳಿದಂತೆ‌ ಶವಕೆ ಇಡಲೆಂದೇ ಕೆಲ ಹೂಗಳು ಅರಳುತ್ತವೆ.. ! ಕೊನೆಯದಾಗಿ ಒಂದು ಮಾತು; ರಂಗಶಂಕರ ತುಂಬಿತ್ತು... ರಂಗಭೂಮಿಯ ಘಮಲಿಗೆ ಬದುಕಿನ  ಆ ಪುಟ್ಟ ಭಾಗವೊಂದು ತುಂಬಾನೇ ಆಪ್ತವಾಗಿತ್ತು...

~`ಶ್ರೀ'
    ತಲಗೇರಿ

ಶನಿವಾರ, ಜನವರಿ 7, 2017

"ಅಂದು.. ಬಂದಿದ್ದೆ ನಾನು..."

ದ್ರವ್ಯವೊಮ್ಮೆ ಬೆರೆವಾಗ
ನಾಚಿ ಕರಗಿತ್ತು ಲವಣ
ಆಯಸ್ಸುಗಳ ಪೇರಿಸುತ್ತ
ಆಕಾರ ಪಡೆಯಿತು ಮೌನ..
ರಕ್ತ ಸೋರುವ ಬಳ್ಳಿಗರಳಿದ
ಹೂವಿಗೆ ಶಿಶುವೆಂದು ನಾಮಕರಣ..
ಅಂದು.. ಬಂದಿದ್ದೆ ನಾನು..

ತುಂಬಿಟ್ಟುಕೊಂಡ ಚೀಲದಲ್ಲಿ
ತೂರಿಬರುತ್ತಿದ್ದ ಆಹಾರ..
ತುರುಬಿಗೆ ಸಿಕ್ಕಿಸಿದ ಬಣ್ಣಗಳ
ಆಗಾಗ ಹೇಳುತ್ತಿದ್ದಳು ಅವಳು..
ಕಥನದಂತಿದ್ದ ನಾನು
ವಾಸ್ತವದ ಚಿಹ್ನೆಯಾಗಿದ್ದು
ನರಳುವಿಕೆಯ ತುದಿಯಲ್ಲಿ..
ಖಾಯಂ ವರ್ಗಾವಣೆಗೊಂಡು
ಅಂದು.. ಬಂದಿದ್ದೆ ನಾನು..

ಮೊದಲ ಅಳುವಿಗೆ
ಹಬ್ಬವೆಂದರು ಅವರು..
ಬೆಳೆಯುತ್ತಿದ್ದ ಭಾಗಗಳ
ಕಡಿದಾದ ನೆರಳುಗಳಲ್ಲಿ
ಜಾರುತ್ತಿತ್ತು ಎದೆಯಿಂದಲೇನೋ..
ಅಂದು ಬಂದಿದ್ದ ನಾನು
ಮತ್ತೆ ಹೋಗಲೇ ಇಲ್ಲ..
ಓಡತೊಡಗಿದ್ದೇನೆ, ಸಿಗಲೂ ಇಲ್ಲ..
ಮತ್ತೆ ಬರಬೇಕೆಂದಿದೆ ಹೊಸದಾಗಿ;
ಕಿಂಡಿಯಿದೆಯಾ?!...

~‘ಶ್ರೀ’
  ತಲಗೇರಿ

"ಪ್ರಪಂಚ"...

ಇಣುಕಬೇಕು ಕತ್ತೆತ್ತಿ
ತೆರೆದುಕೊಳ್ಳುತ್ತದೆ ಪ್ರಪಂಚವೊಂದು
ಕತ್ತಲೆಯ ನೆರಿಗೆಗಳು ಹಾಸಿಕೊಂಡಿದ್ದರೂ..
ಪುಟ್ಟ ಪುಟ್ಟ ಗೋಡೆಗಳಿಗಿಲ್ಲಿ
ಹಸಿರು ಚರ್ಮ
ತಿಳಿ ಹಳದಿಯಾಗಿ ಅರಳುತ್ತದೆ
ಬಿಸಿಲು ಬಿದ್ದಾಗ..
ಅರ್ಧ ಬಿಳುಪು ತುಸು ಕಪ್ಪು
ಗೆರೆಗಳು ಅಂಗಿ ತುಂಬಾ..
ಹೊದ್ದುಕೊಂಡ ನಿನ್ನೆಗಳಿಗೆ
ತೇಪೆ ಹಚ್ಚಲೇಬೇಕೆ?!..

ಹೊರಗೆಷ್ಟೇ ಬಿಸಿಲು ಸುರಿದರೂ
ಪ್ರತಿಫಲನವೆಂಬುದು ಹಸಿ ಸುಳ್ಳು..
ಅಂಟಿಕೊಂಡ ಜಾಳಿಗೆಗಳಿಗೆ
ಯಾರ ಮುಖಸ್ತುತಿಯೋ..
ತೂಗಿಬಿಟ್ಟ ಪೊಟ್ಟಣಗಳು
ಕಟ್ಟಬಲ್ಲವೇ ಬೆಲೆಯ
ಹಸಿವು ಉಕ್ಕಿಸಿದ ಬೆವರ ಕಲೆಗಳು
ಬೀಡುಬಿಟ್ಟ ಚಿಲ್ಲರೆಗಳಿಗೆ..

ಎಲ್ಲ ಜಾತಿಯ ತಿಂಡಿಯೂ
ಅದರದ್ದೇ ಆದ ಶೀಷೆಗಳಲ್ಲಿ..
ಅದೊಂದು ಅಂಗಡಿ..!
ಒಳಸರಿದಂತೆ ಇಲ್ಲ ಯಾವ ಕುರುಹೂ..
ಮಾರಾಟಕ್ಕಿಡಬಹುದಿತ್ತು ಮಿಂಚುಹುಳುಗಳ
ಅಲ್ಲಲ್ಲಿ ಮೂಲೆಯಲಿ ಹುಟ್ಟಿದ್ದರೆ;
ಜೊತೆಗೆ ಒಂದಷ್ಟು ಕೆ.ಜಿ. ಪ್ರೀತಿಯನ್ನೂ..

ಇಣುಕಬೇಕು ಮತ್ತೆ ಮತ್ತೆ..
ನಾನು ತೊಟ್ಟಿರುವ ಬಣ್ಣಕ್ಕೂ
ಅಲ್ಲಲ್ಲಿ ಚೆಲ್ಲಿರುವುದಕ್ಕೂ
ಹೆಸರುಗಳ ಕೊಡಬೇಕು..
ಕೇಳಬೇಕು ಮೂಲ ಯಾವುದೆಂದು
ಉತ್ತರಿಸಲು ಬರಬಹುದು ಮಾಲೀಕ..

~‘ಶ್ರೀ’
  ತಲಗೇರಿ

"ಗುಬ್ಬಚ್ಚಿಗಳಿಗೆ ಬಿಡಾರ ಇರಬೇಕಿತ್ತು"...

            

    ಈ ನೆನಪು ಅನ್ನೋದು ಒಂಥರಾ ಪಾತರಗಿತ್ತಿ ಇದ್ದಂತೆ.. ಯಾವಾಗ್ ಬರತ್ತೆ, ಯಾವಾಗ್ ಹೋಗತ್ತೆ ಅನ್ನೋದೇ ವಿಸ್ಮಯ.. ಒಮ್ಮೊಮ್ಮೆ ಜಗತ್ತಿನೆಲ್ಲ ಬಣ್ಣಗಳ ಮೈಗಂಟಿಸಿಕೊಂಡು ಬಂದು ಸಾವಿರಾರು ಹೂಗಳ ಕತೆ ಹೇಳಿದರೆ, ಇನ್ನು ಕೆಲವೊಮ್ಮೆ, ರೆಕ್ಕೆ ಹರಿದುಕೊಂಡು, ಕುಂಟುತ್ತಾ, ತೆವಳುತ್ತಾ ಬಂದು ವಾಸ್ತವಕ್ಕೆ ಇನ್ನೊಂದಿಷ್ಟು ಮುಖಗಳನ್ನ ಕೊಡುತ್ತದೆ.. ಬಹುಶಃ ನಿಮಗೆ ಗೊತ್ತಿರಲಿಕ್ಕಿಲ್ಲ; ಈ ಅವಳೆನ್ನೋ ಅವಳ ನೆನಪುಗಳೂ ಹಾಗೇ !.. ಮರೀಚಿಕೆ ಅನ್ನೋದಕ್ಕೆ ಪಕ್ಕಾ ಉದಾಹರಣೆಯಾಗಿದ್ದವಳು ಅವಳು.. ಸಿಕ್ಕಾಗ ಕಣ್ತುಂಬಿಕೊಂಡ ಅವಳನ್ನು ಎದೆಯೊಳಗೆ ಅಷ್ಟಷ್ಟಾಗಿ ಇಳಿಸಿಕೊಂಬುದೇ ಉತ್ಸವದಂತಿತ್ತು.. ಅವಳೊಂಥರ ಪುಟಾಣಿ ಕೃಷ್ಣನ ಥರ; ಕಳ್ಳ ಹೆಜ್ಜೆ ಹಾಕ್ತಾ ಕಿಲಕಿಲ ಅನ್ನೋಳು.. ಸಮೃದ್ಧವಾಗಿ ಬೀಳೋ ಮೊದಲ ಮಳೆಗೆ ಹಿತವಾಗಿ ಹೃದಯವನ್ನ ತಲ್ಲಣಿಸೋ ಒಂಥರಾ ಮಣ್ಣಿನ ಪರಿಮಳ ಹುಟ್ಟಿಕೊಳ್ಳುತ್ತಲ್ವಾ, ಹಾಗೆ; ಅವಳ ಗೆಜ್ಜೆ ಸದ್ದು ಅಂದ್ರೆ.. ! ಮತ್ತೊಂದಿಷ್ಟು ಕಾಲ ಕೊನೇ ಕೊನೇ ಹನಿಗಳನ್ನ ಗುಟುಕುಗಳಂತೆ ಮೆಲುಕು ಹಾಕೋದು ನನ್ನ ಜಾಯಮಾನ..

   ಈಗಲೂ ಅಷ್ಟೇ.. ಅವಳಿಲ್ಲದ ಸಂಜೆಗಳಲ್ಲಿ ಹಲುಬುತ್ತೇನೆ.. ಆ ಎತ್ತರದ ಗುಡ್ಡವಿದೆಯಲ್ಲಾ, ಅದರ ತುತ್ತತುದಿಗೆ ಒಂದು ಬಿಡಾರ ಮಾಡಬೇಕಿತ್ತು.. ಎರಡು ಗುಬ್ಬಚ್ಚಿಗಳಿಗೆ ಪುಟ್ಟ ಗೂಡೊಂದು ಇರಬೇಕಿತ್ತು.. ಅವಳುಸಿರ ಏರಿಳಿತದ ಜೋಗುಳಕ್ಕೆ ನೀಲಿ ಹಾಸಿಗೆಯಲ್ಲಿ ಮುದುರಿದ್ದ ಚಂದ್ರಮ  ರಾತ್ರಿಪೂರ್ತಿ ತಲೆದೂಗುತ್ತಿದ್ದ. ನಾನು ಅವನನ್ನು ತೋರಿಸೆಂದು ಹಟ ಮಾಡೋ ಮಗುವಾಗುತ್ತಿದ್ದೆ!.. ಅವಳು ಮರೀಚಿಕೆಯಾಗುತ್ತಿರಲಿಲ್ಲ.. ನಾಚಿಕೆ ಹೊತ್ತ ಬಿಂಕವಾಗಿ ಶೀತಲ ರಾತ್ರಿಗಳಲ್ಲಿ ಸುದ್ದಿ ಹೇಳಬರುವ ಬೆವರ ಹನಿಗಳಿಗೆ ನಾ ಕಟ್ಟೋ ಸುಂಕಕ್ಕೆ ಸಾಕ್ಷಿಯಾಗುತ್ತಿದ್ದಳು... ! ನಿಜ, ಗುಬ್ಬಚ್ಚಿಗಳಿಗೊಂದು ಬಿಡಾರ ಇರಬೇಕಿತ್ತು...

~‘ಶ್ರೀ’
  ತಲಗೇರಿ

ಶುಕ್ರವಾರ, ಡಿಸೆಂಬರ್ 16, 2016

ಅಪೂರ್ಣ...

ಚಿಟ್ಟೆ ಮೇಲಿನ ನೂರು ಕಣ್ಣುಗಳಲ್ಲಿ
ತೆರೆದುಕೊಂಡಿದ್ದು ಒಂದೆರಡು..
ಗುಮಾನಿಯಿದೆ, ಗಾಳಿಯೊಂದಿಗೆ
ಚಿಟ್ಟೆಯದ್ದು ದಾಖಲಾಗದ ಒಪ್ಪಂದ!
ನಡುವಲ್ಲಿ ಬಂದುಹೋಗೋ
ಸಂಗತಿಗಳು ಯಾರದೋ
ಎದೆಯ ತಂಗುದಾಣ..

ತೊದಲು ಕಿಲಗುಟ್ಟುತ್ತದೆ
ಬಿಸಿಗೆ ಬಿಸಿ ಸೋಕಿದಾಗ
ಎಂದು ಭೌತಶಾಸ್ತ್ರದ ಯಾವ
ಪುಸ್ತಕದ ಅಜ್ಞಾತ ಪುಟದಲ್ಲಿ
ಬರೆದಿದೆಯೋ; ಧೂಳು
ಒರೆಸಿಟ್ಟ ಮೇಲೆ ಗಮನಿಸಿದ್ದು ಕಡಿಮೆ!..

ಕವಿತೆ ಹುಟ್ಟುವುದಿಲ್ಲ
ಶಬ್ದಗಳ ಹಡೆದ ಮಾತ್ರಕ್ಕೆ;
ಕುಂತು ವಿರಮಿಸಬೇಕು ಒಮ್ಮೆ
ಅವಳ ನೋಟದಲ್ಲಿ ನಲುಗಿದ
ಹೆಕ್ಕಿ ತಂದು ಪೇರಿಸಿದ
ಅದೆಷ್ಟೋ ಮಾತು..

ಮೊದಲೆಲ್ಲ ಕಿಟಕಿಗಳಿಗೆ
ಅಂಟಿಕೊಳ್ಳುತ್ತಿದ್ದ ಚಂದ್ರ
ಈಗೀಗ ಕಂಬಿಗಳ
ನೆರಳಿನಲ್ಲಿ ಜಾರಿಹೋಗುತ್ತಾನೆ..
ಸಹಜ ಬಿಡಿ,
ಗಾಜುಗಳೂ ಮೊದಲಿನಂತಿಲ್ಲ
ಸೀಳು ಮತ್ತು ಗೀರುಗಳ
ನಡುವೆಯೇ ಹಿಂಜಿಹೋದ
ಹೆಸರೊಂದಿದೆ..
ಪಕ್ಕದ ಮರದ ಹಕ್ಕಿಗಳೆರಡು ಈಗಿಲ್ಲ..
ಒಂದು ಮಾತ್ರ ಆಚೆ ಈಚೆ
ನೋಡುತ್ತದೆ; ತಲೆ ಬಗ್ಗಿಸಿ ಏನೋ
ಹುಡುಕುತ್ತದೆ, ಕೆದರುತ್ತ..

ನಾನೂ ಸಹ ನಿನ್ನ, ಹಿತವಾಗಿ
ಬೈಯುತ್ತೇನೆ ಮಾಗಿಯಲ್ಲಿ..
ಒಮ್ಮೊಮ್ಮೆ ಚಹಾದ ಉಗಿಯಲ್ಲಿ
ಶೇಖರಿಸುತ್ತೇನೆ ನಿನ್ನುಸಿರ ಪರಿಮಳವ..
ಬದುಕು ಅಪೂರ್ಣ ಎನಿಸುತ್ತದೆ
ಅದೆಷ್ಟೋ ಋತುಗಳು ಹೂತುಹೋದರೂ...

~‘ಶ್ರೀ’
  ತಲಗೇರಿ

ಮಂಗಳವಾರ, ನವೆಂಬರ್ 8, 2016

"ಕತೆಗಳು"...

ಇಲ್ಲೊಂದಿಷ್ಟು ಕತೆಗಳು
ಹೊರಟಿವೆ ವಾಯುವಿಹಾರಕ್ಕೆ..
ಪರಿಚಿತ ಅಪರಿಚಿತ
ಚರ್ಮಗಳ ತಾಳೆಹಾಕುತ್ತಾ
ಓಡುತ್ತವೆ ಒಮ್ಮೊಮ್ಮೆ..
ತಮ್ಮ ತಮ್ಮ ಮೈಕಟ್ಟುಗಳ
ರೂಪಿಸುತ್ತವೆ ಚೌಕಟ್ಟಿನಲ್ಲಿ..
ಇಟ್ಟುಕೊಳ್ಳುತ್ತವೆ ಹೆಸರನ್ನೂ
ನಾನು ನೀನು ಅವನೆಂದು..

ಹಾದಿಬದಿಯ ಮರಗಳ
ಕೊಂಬೆಗೆ ತೂಗುತ್ತಿತ್ತು
ಜೋಕಾಲಿ, ಮೊದಲೆಲ್ಲ..
ಲಾಲಿಹಾಡೊಂದು ಮೆಲ್ಲ
ನೆರಳಿಗಷ್ಟು ತಂಪೀಯುತ್ತಿತ್ತು..
ಹುಟ್ಟುಡುಗೆಯಲ್ಲಿ ಸೋಜಿಗವೊಂದು
ಮಲಗುತ್ತಿತ್ತು ಹಾಯಾಗಿ
ಹರಿದ ಸೀರೆಗಳಲ್ಲಿ ತೂರಿಬರುವ
ಬೆಳಕ ಕೋಲುಗಳನ್ನು ಅಪ್ಪಿಕೊಂಡು..

ಕವಲುಗಳು ಬಿದ್ದುಕೊಂಡಿವೆ
ನಡೆದಷ್ಟೂ ಉದ್ದಕ್ಕೆ..
ತೆಗೆದುಕೊಂಡದ್ದಷ್ಟೇ ತಿರುವೇ!
ಅಲ್ಲಲ್ಲಿ ಪೊದೆಗಳಲ್ಲಿ
ತರಚಿಕೊಂಡ ಊಹಾಪೋಹಗಳ
ಲೆಕ್ಕವಿಲ್ಲ; ಅನುಮಾನವಿದೆ
ಈಗಲೂ ರಕ್ತದ ಬಣ್ಣದ ಬಗ್ಗೆ!
ಅಂಗಿಗುಂಡಿಗಳೊಂದಷ್ಟು ಜೋಲುತ್ತವೆ
ದಾರದಿಂದ ಮುಕ್ತವಾಗುವ ಭ್ರಮೆಯಲ್ಲಿ..
ಖಾಯಂ ಆಗಿ ನೋಡುತ್ತದೆ ಗಾಳಿ
ಅಂಟಿಕೊಂಬುದರ ಸುಖ
ವಿರಹದ ಮುಖ..

ದೊಡ್ಡದಾಗುತ್ತಿದೆ ಕತೆ
ಇನ್ನಷ್ಟು ಕತೆ ಸೇರಿ..
ಎಲ್ಲರನ್ನೂ ಯಾರೋ ಅಟ್ಟಿಸಿ ಬಂದಂತೆ
ಇಲ್ಲಾ, ಎಳೆದುಕೊಂಡು ಹೋದಂತೆ..
ದಿಕ್ಕಿಲ್ಲದ ಹೆಜ್ಜೆ ಸಪ್ಪಳ!
ಹಾರುತ್ತವೆ ಕೂಗುತ್ತವೆ ಹಸಿಯುತ್ತವೆ
ಹಲುಬುತ್ತವೆ ನೆರಳು ಸಿಗಲೆಂದು
ಹುಡುಕುತ್ತವೆ ಕೊಂಬೆಗಳನ್ನು
ಜೋಕಾಲಿ ಕಟ್ಟಲೆಂದು..
ದೊಡ್ಡದಾಗುತ್ತಲೇ ಇವೆ ಕತೆಗಳು
ಮತ್ತೆ ಮತ್ತೆ ಅಳೆಯಲ್ಪಡುತ್ತದೆ
ಮುಗಿಲು, ಜೊತೆಗದರ ಬಗಲು...

~‘ಶ್ರೀ’
  ತಲಗೇರಿ

ಮಂಗಳವಾರ, ಅಕ್ಟೋಬರ್ 18, 2016

"ಶೇಷ"..


ಆತ `ಎಲ್ಲಿಗೆ' ಅಂದಾಗಲೆಲ್ಲಾ
ಒದ್ದಾಡುತ್ತೇನೆ ಗೊತ್ತಾಗದೇ..
ಒಂದಿಷ್ಟಗಲದ ಚೀಟಿಯಲ್ಲಿ
ಬೆಲೆಯ ಅಚ್ಚೊತ್ತುತ್ತಾರೆ
ಅಂದಾಜಿಸಿದ ಆ ಉದ್ದಕ್ಕೆ..
ಕೆಲವೊಮ್ಮೆ ಉಳಿದು ಬಿಡುತ್ತವೆ
ಮಿಕ್ಕಿದ ಚಿಲ್ಲರೆಗಳು ಬೆಚ್ಚಗೆ..

ಬಸ್ಸಿನ ಫಲಕಗಳನ್ನು
ನೋಡಿದೊಡನೆ, ಗಮ್ಯವನ್ನೇ
ಬಾಚಿ ಎದೆಗಪ್ಪಿಕೊಂಡಷ್ಟೇ
ಸಂಭ್ರಮಿಸುತ್ತಾರೆ; ನನಗನಿಸುತ್ತದೆ
ನನಗೂ ಒಂದು ಫಲಕ ಬೇಕಿತ್ತು
ಓದುತ್ತಿದ್ದರು ನನ್ನನ್ನೂ ಯಾರೋ..

ಗಡ್ಡ ಕೆರೆಯುತ್ತಾ ಆಕಳಿಸಿ
ನೊಣಗಳ ರೆಕ್ಕೆ ಸದ್ದಿಗೆ
ಕಿವಿಯಾಗುತ್ತಾನೆ ಆತ..
ಅರ್ಧ ತಿಂದಿಟ್ಟ ಇಡ್ಲಿಗೆ
ಏನೋ ಹೇಳುವ ಹಸಿವು..
ವಿಳಾಸ ಕೇಳಲು ಬಂದವರ ಇದಿರು
ಅಕ್ಷರಗಳು ಅರ್ಧ ಸಾಯುತ್ತವೆ
ಮತ್ತದೇ ಆಕಳಿಕೆಯಲ್ಲಿ..
ಬಚಾವಾದವುಗಳು ಪುಕ್ಕಟೆಯಾಗೇ
ಬಿಕರಿಯಾಗುತ್ತವೆ..

ಎಷ್ಟೋ ಊರಿನ ಸುದ್ದಿ ಮೂಟೆಗಳು
ಜಮಾಗೊಳ್ಳುತ್ತವೆ ತಾತ್ಕಾಲಿಕ ಶಿಬಿರಗಳಲ್ಲಿ..
ಸವೆಯುತ್ತವೆ ಬಸ್ಸಿನ ಚಪ್ಪಲಿಗಳು,
ಕೇಳಬೇಕೆಂದಿದ್ದೆ, ಹಾದಿಯ ಕತೆಯೇನು!
ಗಾಳಿಸುದ್ದಿ; ಪಾತ್ರಗಳು ಅಲೆಯುತ್ತವಂತೆ..

ಆಗಷ್ಟೇ ಪರಿಚಯವಾಗಬೇಕಿದ್ದ ಚಿಟ್ಟೆ
ಹಾರಿಹೋಗುತ್ತದೆ ಹೆಗಲ ಪಕ್ಕದಲ್ಲೇ..
ಚಪ್ಪಾಳೆ, ಪ್ರೋತ್ಸಾಹಿಸಲೆಂದು ತಿಳಿದಿಲ್ಲ ಅದು..
ಕಚಗುಳಿಯಿಡುತ್ತಿಲ್ಲ ಜಂಗಮವಾಣಿಯಲ್ಲಿ
ಹುಡುಕಿಕೊಂಡ ಪಾತರಗಿತ್ತಿಯ ಚಿತ್ರ..

ಬಣ್ಣ ಕಿತ್ತ ಬರಹಗಳು ಅವಳ ಹೆಸರಲ್ಲಿ
ಆಸನದ ಹಿಂಬದಿಗೆ ಅಥವಾ ತಗಡಿಗೆ..
ಹೀಗೆಲ್ಲಾ ಗೋರಿ ಕಟ್ಟಬಹುದಂತೆ
ನೆನಪುಗಳಿಗೆ!
ಅದ್ಯಾರು ತಂದು ಬಿಟ್ಟುಹೋದವರು
ಆಸೆಗಳ ತುರುಬಲ್ಲಿ ಇಷ್ಟಿಷ್ಟೇ
ನಿನ್ನೆಗೆ ಜಾರಿದ ಮೌನದ ಸುಕ್ಕನ್ನು..

ಮರೆಯಬೇಡಿ, ನಿಮ್ಮ ಕಣ್ಣುಗಳ
ಹೊಕ್ಕಿನೋಡುವ ಚಾಳಿಯಿದೆ ನನಗೆ..
ಕಣ್ಣೀರು ತಂಗಿದ್ದು ನಗುವೊಂದು ತೇಲಿದ್ದು
ತಿಳಿಯುವುದು ಹೇಳದೆಯೇ..
ಏನೆಲ್ಲ ಬದಲಾದರೂ
ನೆರಳುಗಳಿಗೆ ಏಕತಾನತೆ..
ಹೊಸ ಬಟ್ಟೆ ತೊಟ್ಟ ಮಾತ್ರಕ್ಕೆ
ನನ್ನಲ್ಲೂ ಗೊಂದಲವಿಲ್ಲವೆಂದೇನಲ್ಲ..!

ಎಷ್ಟೋ ಸಲ ಹೇಳಿಯೇ ಇಲ್ಲ;
ನಮ್ಮೊಳಗೂ ಒಬ್ಬ ಹುಚ್ಚನಿದ್ದಾನೆ
ಜೋಪಾನವಾಗಿಟ್ಟುಕೊಳ್ಳಿ..ಹಾಗೆಯೇ..
ಹೆದ್ದಾರಿಯಲ್ಲಿ ಗಸ್ತು ತಿರುಗುವಾಗ
ನಮ್ಮ ಡ್ರೈವರಿನ ನಗೆಯೊಂದು
ಕಳೆದುಹೋಗಿದೆಯಂತೆ, ಎಂಜಿನ್ನಿನ
ಸದ್ದುಗಳ ಬಿಸಿಯ ಏದುಸಿರಿಗೆ ಮುರುಟಿ..
ಹುಡುಕಿಕೊಡಬೇಕು
ಚೂರು ಸಹಕರಿಸಿ..

~`ಶ್ರೀ'
    ತಲಗೇರಿ

ಶನಿವಾರ, ಅಕ್ಟೋಬರ್ 8, 2016

"ಮುಖವಾಡ ಕೊಡು, ಬದುಕಿಕೊಳ್ಳುತ್ತೇನೆ"...

                         

    ಹೌದು, ಕಡಲೇ.. ಚಿಕ್ಕವರಿದ್ದಾಗ ಜಾತ್ರೆ ಸಂತೆಗಳು ಬಂತೆಂದರೆ ಸಾಕು, ಅದೆಷ್ಟೋ ದಿನಗಳಿಂದಲೇ ಕನಸುಗಳ ಹೆಣೆಯುವಿಕೆ ಶುರುವಾಗಿಬಿಡುತ್ತಿತ್ತು. ತೆಗೆದುಕೊಂಡ ವಿಮಾನದ ರೆಕ್ಕೆ ಮುರಿದಿದೆ, ಕೀಲಿ ಕೊಡುವ ಹಕ್ಕಿ ಯಾಕೋ ಚೀಂವ್ ಚೀಂವ್ ಗುಡುತ್ತಿಲ್ಲ, ಬಡಿಯುವ ತಮಟೆಯ ಚರ್ಮ ಹರಿದುಹೋಗಿದೆ, ದುಡ್ಡಿಟ್ಟಾಗ ಬರುತ್ತಿದ್ದ ನಾಯಿಮರಿ ಬಾಗಿಲು ತೆಗೆಯುತ್ತಲೇ ಇಲ್ಲ.. ಈ ಸಲದ ಜಾತ್ರೆಯಲ್ಲಿ ಇವೆಲ್ಲವನ್ನೂ ಹೊಸದಾಗಿ ತೆಗೆದುಕೊಳ್ಳಬೇಕು ಅನ್ನೋ ಆಸೆಯ ಜೊತೆ, ಹಿಂದಿನ ಸಲ ಪಿಳಿ ಪಿಳಿ ಕಣ್ಣಿನ ಚಿಗುರು ಮೀಸೆಯ ಅಚ್ಚುಕಪ್ಪಿನ ಕಣ್ಣು ಹುಬ್ಬಿನ ಮುಖವಾಡ ತೆಗೆದುಕೊಂಡಿದ್ದೆ, ಈ ಸಲ ಒಂದೆರಡು ರಾಕ್ಷಸನ ಮುಖವಾಡ ಕೊಂಡುಕೊಳ್ಳಬೇಕು ಅಂತಂದುಕೊಳ್ಳುವಾಗ ಮುಖ ಮತ್ತು ಕಣ್ಣು ಇಷ್ಟಗಲ ಆಗುತ್ತಿತ್ತಲ್ಲಾ! ಆ ಮುಖವಾಡ ತೊಟ್ಟುಕೊಂಡು ಗೆಳೆಯನನ್ನೋ ಗೆಳತಿಯನ್ನೋ ಬೆಚ್ಚಿಬೀಳಿಸಿ ಹುಚ್ಚುಹುಚ್ಚಾಗಿ ಕುಣಿವಾಗ ಅದೆಷ್ಟು ಸಂಭ್ರಮವಿರುತ್ತಿತ್ತು. ಅಪ್ಪನ ಧ್ವನಿಯಲ್ಲಿ ಅಮ್ಮನ ಸೆರಗಿನಲ್ಲಿ ಹೊಕ್ಕಿಕೊಳ್ಳುತ್ತಿದ್ದ ಪ್ರೀತಿಯನ್ನು ಹೆಕ್ಕಿ ಹೆಕ್ಕಿ ಎತ್ತಿ ಎದೆಯಲ್ಲಿ ಬಚ್ಚಿಟ್ಟುಕೊಳ್ಳುವಿಕೆಯಿತ್ತಲ್ವಾ, ಅದೆಷ್ಟು ಮಧುರವಾಗಿತ್ತು! ಹಟ ಹಿಡಿದು ದಕ್ಕಿಸಿಕೊಂಡ ಮುಖವಾಡದ ಬಣ್ಣ ಮಾಸುವವರೆಗೆ ಮತ್ತೆ ಜಾತ್ರೆ ಬರುತ್ತದೆ, ಆಗ ಇನ್ನೊಂದು ಮುಖವಾಡ ಎಂಬ ಮುಗ್ಧತೆಯಲ್ಲಿ ಎಷ್ಟೊಂದು ಜೀವವಿತ್ತು.. ಬಹುಶಃ ಆಗ ಗೊತ್ತಿರಲಿಲ್ಲ ಕಡಲೇ, ದೊಡ್ಡವರಾಗುತ್ತ ಆಗುತ್ತ ಶಾಶ್ವತವಾಗಿ ಮುಖವಾಡ ತೊಟ್ಟುಕೊಂಡು ಅದರ ದಾಸರೇ ಆಗಿಬಿಡುತ್ತೇವೆಂದು.. ಕನ್ನಡಿಯೆದುರು ತಲೆಯೆತ್ತುವುದಕ್ಕೂ ಹೆದರುತ್ತೇವೆಂದು...

     ಕಿತ್ತಿಟ್ಟು ಬಂದಿದ್ದೇನೀಗ ಎಲ್ಲವನ್ನೂ.. ಇಷ್ಟು ದಿನಗಳ ಕಾಲ ಬಾಚಿ ಬಾಚಿ ಹಚ್ಚಿಕೊಂಡ ಮುಖವಾಡಗಳಲ್ಲಿ ಒಂದೂ ನನ್ನದಾಗಲೇ ಇಲ್ಲ, ಯಾವ ಮುಖವಾಡದ ಬಣ್ಣವೂ ನನ್ನ ಕೆನ್ನೆ ಮೇಲೆ ಆಪ್ತವಾಗಿ ಕೂರಲೇ ಇಲ್ಲ. ಚರ್ಮವನ್ನು ಸುಡುತ್ತ ಒಳಗೊಳಗೇ ಬೇಯುತ್ತಾ, ನನ್ನನ್ನು ನಾನು ಗುರುತಿಸಿಕೊಳ್ಳಲಾಗದ ಸ್ಥಿತಿಯಲ್ಲಿ ನನ್ನನ್ನು ಇಟ್ಟುಬಿಟ್ಟಿತ್ತು.. ನಾನು, ನನ್ನವರು ಎನ್ನುತ್ತಲೇ ಹೋದೆ; ಒಂದಷ್ಟು ಜನರ ಗುಂಪು ಅದನ್ನು ಸ್ವಾಭಿಮಾನ, ಪ್ರೀತಿ ಎಂದಿತು. ಎದುರು ಗುಂಪು ಅದನ್ನೇ ಸ್ವಾರ್ಥ ಎಂದಿತು. ಸಂಬಂಧಗಳ ಗೋಜಲನ್ನು ಬಿಡಿಸುತ್ತಾ ಹೋಗಬೇಕೆಂದುಕೊಂಡೆ ತತ್ವಜ್ಞಾನಿ ಎಂದರು. ನಿರ್ಲಿಪ್ತಳಾಗಿರಬೇಕೆಂದುಕೊಂಡೆ, ಕಲ್ಲುಬಂಡೆ ಅಂದರು.. ಚರ್ಮದ ಬಿಗಿತಕ್ಕೆ ಸ್ಪಂದಿಸುತ್ತಾ ಕತ್ತಲೆಯಲ್ಲಿ ದಿನನಿತ್ಯ ಚಿತ್ರಬಿಡಿಸಬೇಕೆಂದುಕೊಂಡೆ, ವೇಶ್ಯೆ ಅಂದರು. ಸಣ್ಣ ಸಣ್ಣ ವಯೋಸಹಜ ಬಯಕೆಗಳನ್ನು ಎದೆಯುಬ್ಬಿಸಿ ಈಡೇರಿಸಿಕೊಳ್ಳಹೋದೆ, ಗಂಡುಭೀರಿ ಎಂದರು. ಅನಿಸಿದ್ದನ್ನು ಎಲ್ಲರಲ್ಲೂ ಮನಬಿಚ್ಚಿ ಹೇಳಿಕೊಂಡೆ, ವಾಚಾಳಿ ಅಂದರು. ಮಾತುಗಳಿಗೆ ಲಗಾಮಿಟ್ಟು, ಎಲ್ಲ ಮೆಟ್ಟಿ ನಿಂತೆ; ವಿರಾಗಿಯೆಂದರು. ಎಲ್ಲರಂತೆ ಮನೆ ಜಮೀನು ಆಸ್ತಿಯೆಂದೆ, ಮೋಹಿಯೆಂದರು.. ಬೀದಿಗಳಲ್ಲಿ ಒಂದಷ್ಟು ದಿನ ಭಿಕ್ಷೆ ಬೇಡೋಣವೆಂದುಕೊಂಡೆ, ಮೈಬಗ್ಗಿಸಿ ದುಡಿಯೆಂದರು.. ಬಿಸಿಲಲ್ಲಿ ಚರ್ಮ ಸುಟ್ಟುಕೊಂಡರೆ, ಚಂದಿರನ ಬೆಳಕಲ್ಲಿ ಹವಾಮಾನದ ಬಿಸಿಯೇರಿಸುತ್ತೀಯಾ ಅಂತ ಕೇಳಿದರು.. ಹಸಿದಿದ್ದೇನೆ ಊಟ ಹಾಕೆಂದರೆ, ದುಡ್ಡು ಬೇಕೆಂದರು. ದುಡ್ಡಿನ ನೆರಳನ್ನಾದರೂ ಹಿಡಿಯಬೇಕೆಂದುಕೊಂಡೆ, ಲೋಭಿಯೆಂದರು. ಮೇಘಗಳೆಲ್ಲಾ ಒಟ್ಟುಗೂಡಿ ಹಬ್ಬ ಮಾಡುತ್ತಿದ್ದಾಗ, ಆಗ ತಾನೇ ಅರಳಿಕೊಂಡ ಘಮಲಿಗೆ ನಾಸಿಕದ ಸೊಗವಿಕ್ಕಿ, ಬೊಗಸೆಯಲಿ ಮುಗಿಲರಸ ಹಿಡಿಹಿಡಿದು ನಡುವಲ್ಲಿ ನವಿಲಾಗಬೇಕೆಂದುಕೊಂಡೆ, ಹುಚ್ಚುಚ್ಚಾಗಿ ಕುಣಿಯದಿರು; ನೀನು ಹುಡುಗಿಯೆಂದರು. ಅಮಾವಾಸ್ಯೆಯ ರಾತ್ರಿಯಲ್ಲಿ ಕಂದೀಲು ಹಿಡಿದು ಚಂದ್ರನನ್ನರಸುತ್ತಾ, ಅರಚುವ ಕಾಡುಜಿರಳೆಗಳ ಕತೆಗೆ ಕಿವಿಯಾಗಬೇಕೆಂದರೆ, ಹೊಕ್ಕುಳಿಗೆ ಹೂ ಬಿಡುವ ಸಮಯ, ಸಿಕ್ಕ ಸಿಕ್ಕ ಬೆರಳುಗಳಿಗಂಟಿ ಬಣ್ಣ ಕದಡೀತು ಪಕ್ಕಾ ಮಾಗುವ ಮುನ್ನವೇ ಎಂದು ಹೆದರಿಸಿದರು.. ಹೇಳು, ಕಡಲೇ.. ಹತ್ತೆಂಟು ಹುಚ್ಚು ಕಲ್ಪನೆಗಳಿದ್ದಿದ್ದರಿಂದಲೇ ನಾನು ಹೆಣ್ಣಲ್ಲವೇ!.. ರಾತ್ರಿ ನಕ್ಷತ್ರಗಳ ಕೊಯ್ದು ನನ್ನ ಹೆರಳಲ್ಲಿ ಸಿಕ್ಕಿಸಿ, ಮಧು ಬಟ್ಟಲ ಮಾಲೆ ಕಟ್ಟುವವನ ಎದೆಯ ರೋಮದ ಬೆವರಲ್ಲಿ ಕೈಯದ್ದಿ ಹೆಣ್ತನದ ಕ್ಯಾನ್ವಾಸಿಗಿಷ್ಟು ಕೈಯಚ್ಚು ಬರೆದುಕೊಳ್ಳುತ್ತೇನೆ ಅಂತ ಅಂದುಕೊಳ್ಳುವುದೂ ತಪ್ಪಾ ಕಡಲೇ.. ಇಷ್ಟೇ ಅಲ್ಲ ಕಡಲೇ, ಇನ್ನೂ ಏನೇನೋ.. ಇಷ್ಟೆಲ್ಲಾ ಮಾಡಿಯೂ ಯಾವ ಮುಖವಾಡವೂ ನನ್ನ ಸ್ವಂತದ್ದಾಗಲೇ ಇಲ್ಲ, ಇದೇ ನಾನೆಂದು ಹೇಳಿಕೊಳ್ಳುವಷ್ಟು ಆಪ್ತವಾಗಲೇ ಇಲ್ಲ.. ನಾನಾಗಲೇ ಇಲ್ಲ.. ಅಸಹ್ಯವಾಯಿತು. ಅದಕ್ಕೆಂದೇ ಇಂದು ಎಲ್ಲ ಮುಖವಾಡಗಳನ್ನು ಕಳಚಿಟ್ಟು ಬಂದಿದ್ದೇನೆ ಕಡಲೇ ನಿನ್ನಲ್ಲಿಗೆ. ನಾನು ಕೂತ ಈ ಕಲ್ಲಿನ ಮೇಲೆ ಅದೆಷ್ಟೋ ಪಾಚಿ  ಹಸಿರು ಹಸಿರಾಗಿ ಮೆರೆಯುತ್ತಿದೆ. ಒಂದಷ್ಟು ದಿನ.. ಅರೆಗಂದು ಬಣ್ಣದ ಹುಡಿಯಾಗಿ ಉದುರಿಹೋಗುತ್ತದೆ. ಈ ನೆನಪುಗಳೂ ಹೀಗೇ ಆಗಿದ್ದರೆ?!.. ಋತುಮಾನಗಳಿಗೆ ತಕ್ಕ ಫಸಲು ಯಾವತ್ತೂ ಬರುವಂತಿದ್ದರೆ!.. ಊಹ್ಞೂ.. ಕಳೆಗಳೇ ಜಾಸ್ತಿಯಾದಾಗ ಇಳುವರಿ ಎಲ್ಲಿಯದು.. ಹೀಗೇ ಎಷ್ಟೋ ವರ್ಷಗಳ ಬೆತ್ತಲೆ ಕಲ್ಲು ಮುಂದೊಂದು ದಿನ ಇನ್ನ್ಯಾರದೋ ಮನೆಯ ಮಣ್ಣಾಗಿ ಹೊಚ್ಚ ಹೊಸ ನೆರಳ ಬೇರಿಳಿಸಿಕೊಳ್ಳುವಾಗ ಈ ಪಾಚಿಯ ಗುರುತನ್ನು ಉಳಿಸಿಕೊಂಡು ಬಿಕ್ಕುತ್ತದೆಯೇ? ಮೋಡಗಳೆಲ್ಲವನ್ನೂ ತನ್ನೆದೆಗೆ ಬಿಟ್ಟುಕೊಂಡು , ಉಕ್ಕಿನ ಹಕ್ಕಿಗಳ ಧೂಮದ ಸುರುಳಿಸುರುಳಿಗೆ ಮತ್ತೆ ಮತ್ತೆ ತೆರೆದುಕೊಂಡು ತಿಳಿ ನೀಲಿ ತೊದಲಿನಲ್ಲಿ ಕಪ್ಪು ಬಿಳಿ ಕನಸುಗಳ ಬಾಯಿಪಾಠ ಮಾಡುವ ಓಹ್ ಗಗನಾ, ನಿನಗಿದು ಅರ್ಥವಾಗುವುದಿಲ್ಲ ಬಿಡು.. ನೀನು ಮತ್ತು ಭೂಮಿ  ಎಂದೂ ಭೇಟಿಯೇ ಆಗದ ಪ್ರೇಮಿಗಳಂತೆ.. ಅಥವಾ ದಿಗಂತದಲ್ಲಿ ಕೂಡಿಸಿದ್ದು ನಾವೇ; ಅದೂ ಭ್ರಮೆಯೇ!.. ಅದಕ್ಕೇ ಕಡಲೇ.. ಇದು ನಿನಗೆ ಮಾತ್ರ ಅರ್ಥವಾಗಬಹುದು.. ತವರು ಬಿಟ್ಟ ಅದೆಷ್ಟೋ ನದಿಗಳು ಬಂದು ನಿನ್ನ ಸೇರುತ್ತವೆ. ಎಲ್ಲಿಯದೋ ಕೊರಕಲು, ಎಲ್ಲಿಯದೋ ಮಣ್ಣ ಗಂಧ, ಎಲ್ಲಿಯದೋ ಸಸಿಯ ಕೊಳೆತ ಎಲೆಗಳ ಅಸ್ಥಿಪಂಜರ ಕರಗಿಸಿಕೊಂಡ ನೀರ ಪಾತ್ರಗಳು ನಿನ್ನೆದೆಯಲ್ಲಿ ಬೆರೆಯುತ್ತವೆ. ಇಷ್ಟೆಲ್ಲ ಆದರೂ ನಿನಗೊಂದು ಅಸ್ತಿತ್ವ ಸಿಕ್ಕಿಬಿಟ್ಟಿತು.; ಜೊತೆಗೆ ರುಚಿಯೂ.. ಅದೆಷ್ಟೋ ಭಾವಗಳು ನನ್ನೆದೆಯಲ್ಲಿ ಈಗಲೂ ಹುಟ್ಟಿಕೊಳ್ಳುತ್ತವೆ, ಇನ್ನೊಂದಿಷ್ಟು ಹುಟ್ಟಿಕೊಳ್ಳುವ ಮೊದಲೇ  ಗೋರಿ ಕಟ್ಟಿಕೊಳ್ಳುತ್ತವೆ. ಯಾರಿಗೂ ನನ್ನ ಅಸ್ತಿತ್ವವನ್ನು ಗಟ್ಟಿಪಡಿಸುವ ಎದೆಗಾರಿಕೆಯಿಲ್ಲ.. ಹೇಳು ಕಡಲೇ, ಹೇಳಲಿಲ್ಲವೇ ಯಾರೂ ನಿನಗೆ, ಹೂಟ್ಟೆಬಾಕನೆಂದು.. ಮಿಲನ ದರ್ಬಾರು ನಡೆಸುತ್ತಾ ಅದೇನೇನೋ ತನ್ನೊಳಗೇ ಬಚ್ಚಿಟ್ಟುಕೊಳ್ಳುವ ವ್ಯಾಮೋಹಿಯೆಂದು.. ಇಲ್ಲ, ಕಡಲೇ.. ನಿನ್ನೊಳಗೂ ಪಲ್ಲಟವಾಗುತ್ತಿರುವ ತುಂಡುಗಳಿವೆ.. ಅದಕ್ಕಾಗಿಯೇ ಅಲ್ಲವೇ ಒಮ್ಮೊಮ್ಮೆ ನೀನೂ ಸಿಡಿದೇಳುವುದು.. ಆದರೂ ಅದ್ ಹೇಗೆ ನೀನು ಆ ನಿರಂತರತೆಯನ್ನು ಕಾಯ್ದುಕೊಂಡೆ; ಬಹುತೇಕ ಒಂದೇ ತೆರನಾದ ಅಲೆ.. ಅದೆಷ್ಟೋ ತಪ್ಪಲುಗಳಲ್ಲಿ ಹಾಗೂ ಜಟೆಗಳಲ್ಲಿ ಮೂಲವಿಟ್ಟುಕೊಂಡು ಅದೆಷ್ಟೋ ಸಂಕ ಸೇತುವೆಗಳ ಕೆಳಗೆ ಹರಿದು, ಮತ್ತಿನ್ನೆಷ್ಟೋ  ಬಂಡೆಗಳ ಮೈಸವರಿ ಹೋಗುವ ನದಿಗಳು ನಿನ್ನೆದೆಯ ಸೇರಿದ ಮೇಲೆ ತಕರಾರೆತ್ತುವುದಿಲ್ಲವೇನೆ? ಅವೆಲ್ಲ ಮುಖವಾಡ ಕಳಚಿಟ್ಟವೇ, ಒಂದೇ ಒಳಗಾಗುವಂತೆ.. ಒಂದೇ ಹದವಾಗುವಂತೆ.. ಅಥವಾ ಪಾರದರ್ಶಕತೆಯ ಮುಖವಾಡ ತೊಟ್ಟಿದೆಯೇ?!.. ನಿನ್ನ ಆ ಅಗಾಧತೆಯ ಇದಿರು ನಾವೆಲ್ಲಾ ಅದೆಷ್ಟು ಚಿಕ್ಕವರಾಗಿಬಿಡುತ್ತೇವೆ ಅಲ್ವಾ!.. ಮತ್ತೆ ಮತ್ತೆ ಉಕ್ಕುತ್ತೀಯಾ ಗರ್ಭದೊಳಗಿನದೆಲ್ಲವನ್ನೂ ಗುಟ್ಟಾಗಿಯೇ ಇಟ್ಟುಕೊಂಡು; ಅದೆಂಥ ಕ್ರಿಯಾಶೀಲ ನೀನು..!

     ಗುರುತ್ವಗಳ ಗತಿಯಲ್ಲಿ ಏರುಪೇರಿದ್ದರೂ , ನಿನ್ನ ಮತ್ತು ದಡದ ಮರಳ ಸಂಬಂಧಗಳ ಮಧ್ಯ, ಮೈದಡವುತ್ತಾ ತಾಯ್ತನದ ಸುಖ ಪಡೆಯುತ್ತೀಯಾ.. ನೀಲ ನೀಲ ವಿಸ್ತಾರ.. ದೂರ ದೂರ ಹೋದಂತೆ ಇನ್ನೂ ಹತ್ತಿರ ಹತ್ತಿರ.. ಮುಳ್ಳುಪೊದೆಯ ಪುಟ್ಟ ಹೂವಿಗೆ ಹಾಡು ಹೇಳೋ ಗೆಳತಿ.. ನಿನ್ನ ಮೇಲೆ ಬಿದ್ದು ಬಿದ್ದು ನಿನ್ನ ಚೀಲದಿಂದ ಕದ್ದು ಕದ್ದು ತಿನ್ನುವ ಹದ್ದುಗಳಿಗೆ ಅಕ್ಕರೆಯ ಅಕ್ಕ.. ಭೂಮಿ ಮಡಿಲ ನೆರಿಗೆಯಲ್ಲಿ ಆಷ್ಟಷ್ಟೇ ಮೈಯ ಹರಡಿ, ಕಾಲು ಮುದುಡಿ ಮಲಗಿಕೊಂಡ ಮಗಳು.. ನಾನೂ ಒಬ್ಬ ಮಡದಿ.. ಬಹುಶಃ ಈ ನದಿಯಂತಿರಬೇಕು ನಾನು.. ಹರಿಯುತ್ತಿದ್ದರೆ ಮಾತ್ರ ಹಾಡು ಕೇಳುವುದು.. ಇನ್ನು ತಡ ಮಾಡುವುದಿಲ್ಲ; ಕಡಲೇ ಮತ್ತೆ ತಿರುಗಿ ಓಡಬೇಕು ನಾನು.. ಮತ್ತೆ ತಿರುಗಿ ನೋಡಬೇಕು ನಾನು.. ತುರ್ತಾಗಿ.. ತೊಟ್ಟುಕೊಂಡಿದ್ದೇನೆಂದೇ ತಿಳಿಯದ, ಮತ್ತೆ ಎಂದೂ ಕಳಚದ, ದಿಕ್ಕು ದಿಕ್ಕಿಗೆ ಬೇರೆ ಬೇರೆ ಬಣ್ಣ ತೋರುವ ಮುಖವಾಡ ಕೊಡು, ಬದುಕಿಕೊಳ್ಳುತ್ತೇನೆ.. ಬದುಕಿಸಿಕೊಳ್ಳುತ್ತೇನೆ.. ಸಂತೆ ಇನ್ನೂ ಮುಗಿದಿಲ್ಲ; ವ್ಯಾಪಾರವೂ...

~‘ಶ್ರೀ’
  ತಲಗೇರಿ

ಗುರುವಾರ, ಅಕ್ಟೋಬರ್ 6, 2016

"ಬಿಸಿಲು ಮಳೆ ಚಳಿಗೆ"...ಅವಳೂರ ಕಡಲಲ್ಲಿ ಪ್ರತಿರಾತ್ರಿ ಮೃದಂಗದಂತೆ ಗುಂಯ್ ಗುಟ್ಟುವ ಅಲೆಗಳಿಗೆ ಅವನೂರ ಚಂದ್ರಮನ ತೋಳತೆಕ್ಕೆಯಲಿ ಪಿಸುಗುಡುತ್ತಿದ್ದ ನಾಳೆಗಳ ಇಂದಿನುಸಿರ ಬಿಸಿ ಸೆಳೆತ ಕಾರಣವಂತೆ.. ಇಷ್ಟಕ್ಕೂ, ಅಷ್ಟುದ್ದ ಮೈಹರವಿ ಬಿದ್ದಿರುವ ದಾರಿಗದು ಗೊತ್ತಿಲ್ಲವಂತೆ..ಆಯತದ ತಲೆದಿಂಬು ಅವಳ ಸುರುಳಿ ಸ್ವಪ್ನಗಳ ಎಳೆಯನ್ನು ಇಣುಕಿಣುಕಿ ಓದಿತ್ತಂತೆ.. ಹೆರಳಿಗಂಟಿದ್ದ ಹಳೇ ತಲೆಮಾರಿನ ಜಿಗುಟು ಸ್ನಾನಕ್ಕೆ ಹೊರಡುವಾಗ ಅಳಿದುಳಿದ ಗುಸುಗುಸು, ಮಂಚದ ಚಿತ್ತಾರಕ್ಕೆ ಕಣ್ಣುಮುಚ್ಚಾಲೆಯಾಡುವುದನ್ನು ಹೇಳಲೆತ್ನಿಸುತ್ತಿತ್ತಂತೆ.. ಒಂದೇ ನೆರಳ ಹಿಂದೆ ಅಡಗಿದ್ದ ದೀಪ, ಬೇರೆ ಬಣ್ಣ ಹಚ್ಚಲು ಕುಂಚ ಹುಡುಕುತ್ತಿತ್ತಂತೆ.. ಅವನಂತೂ ಅರ್ಧರಾತ್ರಿಯಲ್ಲಿ ಸುರಿದ ಮಳೆಯನ್ನು ಕೊಡಗಟ್ಟಲೆ ಹಿಡಿದು ರುಚಿ ನೋಡುತ್ತೇನೆಂದು ಚಪ್ಪಲಿ ಮೆಟ್ಟಿ, ಕೊಡೆಹಿಡಿದು ನಿಂತಿದ್ದಾನಂತೆ.. ಹೆಸರಿಲ್ಲದ ಕಾಡಹೂವೊಂದು ಎದ್ದು ಕುಳಿತು ತನ್ನ ನೆರಿಗೆ ಸರಿಪಡಿಸಿಕೊಂಡು, ಮಣ್ಣಿನಲಿ ಯಾರೋ ಧೂಪ ಹಚ್ಚಿಟ್ಟ ಕನಸು ಕಾಣುತ್ತ ಮತ್ತೆ ಮಲಗಿತಂತೆ.. ಅಷ್ಟಿಷ್ಟು ಸಂಗೀತ ಕಲಿತಿದ್ದ ಮುಗಿಲು ಆಗಾಗ ಅಭ್ಯಾಸ ಮಾಡುತ್ತಿತ್ತಂತೆ.. ಮೊನ್ನೆ ಅದು ಹೇಳಿದ ಮೇಲೆಯೇ ತಿಳಿದದ್ದು, ನಾಚಿಕೆಗೂ ಬಹಳಷ್ಟು ಅರ್ಥವುಂಟಂತೆ.. ಹ್ಞಾ, ಹೇಳುವುದ ಮರೆತಿದ್ದೆ; ಆದರಲ್ಲಿ ಯಾರಿಗೂ ತಿಳಿದಿರಲಿಲ್ಲ.. ಪ್ರೀತಿಗೆ ಸ್ವಂತ ಬಣ್ಣ ರುಚಿ ವಾಸನೆಯಿಲ್ಲ; ಅದು ಅನುಭೂತಿ ಅಷ್ಟೇ..! ನೆನಪಿಡಿ, ಬಾಡಿಗೆಯ ಫಲಕಗಳ ವಿಳಾಸದ ಅಕ್ಷರಗಳು ಮಸುಕಾಗುತ್ತವೆ ಬಿಸಿಲು ಮಳೆ ಚಳಿಗೆ...

~`ಶ್ರೀ'
    ತಲಗೇರಿ

ಭಾನುವಾರ, ಸೆಪ್ಟೆಂಬರ್ 25, 2016

"ಸಾಂತ್ವನ"...

ಪ್ರತಿ ಹುಣ್ಣಿಮೆಯ ಸರಿ ರಾತ್ರಿ
ಬಸಿವ ಬೆಳದಿಂಗಳ
ಬೊಗಸೆಯಲಿ ಹಿಡಿದಿಟ್ಟು
ಇನ್ನೆರಡು ದಿನ ಬಿಸಿಲಲ್ಲೊಣಗಿಸಿ
ಹೊಸ ನಕ್ಷತ್ರಗಳ ಅಂಟಿಸುತ್ತೇನೆ
ಅಮಾವಾಸ್ಯೆಗೆ!..
ಒಮ್ಮೊಮ್ಮೆ ಮಿಂಚುಹುಳುಗಳು
ಹುಟ್ಟಿಕೊಳ್ಳುತ್ತವೆ ನನ್ನ ಕಣ್ಣಿನಲ್ಲೂ..

ಹರಿದ ಜೋಗಿಯ ಅರಿವೆಯ
ತೇಪೆ ಕೊನೆಯಲ್ಲಿ ಜೋಲುತಿಹ
ತಂಬೂರಿ ಸ್ವರಗಳ ಕೊಡು ನನಗೆ..
ನೆಂದಿವೆ ಕಾಗದಗಳು ಶಾಯಿಯಲ್ಲಿ
ಮರುಕ್ಷಣ ಒಣ ಪದಗಳು..
ಫಸಲು ನಾಳೆ ಹಸಿರಾಗಬೇಕಂತೆ!
ಬಿಸಿ ಸಾರಾದರೂ ಬರಲಿ ಹಳಸಿದನ್ನಕ್ಕೆ..

ಬತ್ತಿದ ಕೊರಕಲುಗಳ ನಕ್ಷೆ ಹಿಡಿ
ನನ್ನೆದೆಯ ಗದ್ದೆಯಲಿ ಮರು ವ್ಯವಸಾಯ..
ಒಂಟಿ ಕಾಲ ಧ್ಯಾನದ ಬೆಳ್ಳಕ್ಕಿಗೆ
ಹೇಳಿದ್ದೇನೆ ಹಸಿದುಕೊಂಡಿರಲು..
ಚೌಕಟ್ಟಿನಲ್ಲಿನ ಚಿತ್ರಕ್ಕೆ
ಗಟ್ಟಿ ದಾರ ಕಟ್ಟಿ
ಹಳೆಗೋಡೆ ಮೇಲೆ
ತೊಳೆದ ಮೊಳೆ ಹೊಡೆದು
ತೂಗುಹಾಕಬೇಕು ಸಮ್ಮತಿಸು..

ಪರಿಚಯವಿಲ್ಲದ ರಾತ್ರಿಯಲಿ
ಬೇಲಿಗೂಟಗಳ ಕಿತ್ತೆಸೆದು
ಬಾನಂಗಳಕೆ ಕಾಲು ಚಾಚಿ
ಮಲಗಬೇಕು ನನ್ನದೇ ನೆರಳ ಹೊದ್ದು..
ಕನಸುಗಳಾದರೂ ಗುರುತಿಸಿಕೊಳ್ಳಲಿ ಬೇರಿಳಿದು..
ಮುದುರಿ ಕೂರಲಿ ವಿಶ್ವವೇ ನನ್ನೊಳಗೆ
ಪ್ರೀತಿ ಕೊಟ್ಟು ಸಾಕಿಕೊಳ್ಳುತ್ತೇನೆ;
ಮೊಗ್ಗುಗಳ ಮೈದಡವುವುದು ಗೊತ್ತೆನಗೆ...

~‘ಶ್ರೀ’
  ತಲಗೇರಿ

ಶುಕ್ರವಾರ, ಸೆಪ್ಟೆಂಬರ್ 23, 2016

"ನಿಲ್ದಾಣ"...

ದಪ್ಪ ದಪ್ಪ ಗೂನು ಮೋಡಗಳು
ಗಾಳಿ ಕೂದಲ ಗಂಟಿಗೆ ಸಿಕ್ಕಿ
ಹೆಣ್ಣು ಗಂಡೆಂಬುದ ನೋಡದೇ
ಉದುರುತ್ತಿವೆ ಗುಂಪುಗಳಲ್ಲಿ
ಗೆರೆಯೆಳೆದಿರಲಿಲ್ಲ
ಒಳಗೊಳಗೇ ಗೀಚುವಾಗ...

ಅಚ್ಚ ಕಪ್ಪಿನ ಉಸಿರು
ಕೊಳವೆ ತುಂಬ ಬಿಡುವಾಗ
ಯಾರೋ ಮೂಗುದಾರ ಎಳೆದಂತೆ..!
ಒರಟು ಚರ್ಮಗಳ ತಿಕ್ಕಾಟಕ್ಕೆ
ಹುಟ್ಟಿಕೊಂಡ ಶಬ್ದಕ್ಕೆ
ಬೆಂಕಿಯುಗುಳುವ ತಾಕತ್ತಿತ್ತೆಂದು
ತಿಳಿದದ್ದು ಹವೆ ಹೆದರಿಕೊಂಡಾಗಲೇ!..
ಹೇಳಿದರು ಯಾರೋ,
ರೈಲು ಬಂತೆಂದು..

ಬೋಗಿಗಳ ಮೆಟ್ಟಿಲಿಗೆ
ಅದೆಷ್ಟು ಕೆಸರು ಮೆತ್ತಿಕೊಂಡಿತ್ತು!
ನೆನಪಾಗುತ್ತಿತ್ತೇನೋ ಒರೆಸುವಾಗ
ಅದೆಷ್ಟೋ ಚಪ್ಪಲಿಗಳ
ಬೆವರಿಗೆ ಬಣ್ಣವಿರಬೇಕಿತ್ತು...

"ಎರಡು ನಿಮಿಷ ಮಾತ್ರ..
ಹೊರಡುತ್ತದೆ ರೈಲು"...
ಗಡಿಬಿಡಿಯ ಕುಂಟೆಬಿಲ್ಲೆಯಲ್ಲಿ
ನೂಕು ನುಗ್ಗಲು ಕೈ ಬೀಸಲು..
ಕಿಟಕಿ ಸರಳುಗಳ ಹಿಂದೆ,
ದೂರದಲ್ಲಿ ನಿಂತ ನಾಯಿಮರಿಯ
ಬಿಂಬ ಮೂಡುತ್ತದೆ ಅವಳ ಕಂಗಳಲ್ಲಿ..
ಮೊನ್ನೆಯಷ್ಟೇ ಹುಟ್ಟಿದ್ದ
ಬಿಳಿಹಲ್ಲುಗಳೆರಡು ನಾಚುತ್ತವೆ
ಹೆಸರು ಹೇಳಲು..
ಎಳೆದಾಡಿಕೊಳ್ಳುತ್ತವೆ ಕೀಲುಗಳು
ಇಷ್ಟಗಲದ ಜಾಗದಲ್ಲಿ
ಗಿರಕಿ ಹೊಡೆಯುತ್ತ...

ಅಂಟಿಕೊಂಡ ಹನಿಗಳು
ಜಾರಿಕೊಳ್ಳುತ್ತವೆ ಎಲೆಯ ನರಗಳ
ಮೇಲ್ಮೈಯ ಇಳಿಜಾರಿನಲ್ಲಿ..
ಅಲ್ಲೂ ಬಣ್ಣಬಿಟ್ಟಿಲ್ಲ ಎಲೆಗಳು
ಕುಂತುಹೋದವರಿಗೂ ಅದರ ಹಕ್ಕಿಲ್ಲ..

ಹೊರಟಿದ್ದೇನೆ ಚೀಲ ಹಿಡಿದು..
ಹಳಿಗಳ ಅಕ್ಕಪಕ್ಕದಲ್ಲಿ
ಅಪ್ಪುಗೆಯ ಮೇಣದ ಕಲೆಗಳಲ್ಲಿ
ಬಿದ್ದುಕೊಂಡಿರಬಹುದೇನೋ
ಒಂದೆರಡು ತುಂಡು ಮಾತುಗಳು..
ನಾಳೆ ಸಂಜೆಯ ಬಯಲಲಿ
ಕುಳಿತುಕೊಳಲು ಎರಡು ನೆಳಲು...

~‘ಶ್ರೀ’
  ತಲಗೇರಿ

ಸೋಮವಾರ, ಸೆಪ್ಟೆಂಬರ್ 19, 2016

"ಹೌದು, ಗಡಿಯಾರಗಳು ಮಾತನಾಡುತ್ತವೆ"...

                    

     ಇಷ್ಟಿಷ್ಟೇ ಮಾತನ್ನು ತಡೆತಡೆದು ಹೇಳಬಹುದೇ, ಅಷ್ಟೇನೂ ಗಮನಿಸದೆ ವಾಕ್ಯಗಳ ತಿದ್ದದೇನೆ.. ಪಾರಿಜಾತದ ನಗೆಯ ನಿನ್ನ ಕಂಗಳ ಕುಡಿಯ ಮೇಲುದುರಿದ ಇಬ್ಬನಿಯ ಕತೆಗಳನು ಹೆಕ್ಕಿ ಹೆಕ್ಕಿ ತಂದು ನಾ ಬರೆಯಲೇನು.. ಪರಿಚಯದ ಪುರವಣಿಯ ಗರಿಗರಿಯ ಹಾಳೆಗಳ ಎದೆಯೊಳಗೆ ಬೆಚ್ಚಗೆ ನಿನ್ನನ್ನು ಇರಿಸಲೇನು.. ನಾ ಒರಗಲೇನು ಹಾಗೇ ತಬ್ಬಿಕೊಂಡು.. ನೆನಪುಗಳನು ಮುದ್ದಾಗಿ ಹೊದ್ದುಕೊಂಡು...ಹೌದಂತೆ ಗೆಳತೀ.. ಈ ನೆನಪುಗಳಿಗೂ ಮತ್ತು ಕನಸುಗಳಿಗೂ ಒಂದೇ ರೂಪವಂತೆ.. ಸುರುಳಿ ಸುರುಳಿ ಮೆದುಳಿನಲಿ ಅಲ್ಲಲ್ಲಿ ಅಂಟಿ ಕೂತ ಇಬ್ಬರದೂ ಒಂದೇ ಗಮಕವಂತೆ.. ನುಸುಳಿಬರುವ ಪದಗಳಲ್ಲಿ ಪಲುಕು ಮಾತ್ರ ಬೇರೆಯಂತೆ!.. ಎಲ್ಲಕ್ಕೂ ಮೂಲ ಕಾಲವಂತೆ...

     ತುಂಬಾನೇ ವಿಚಿತ್ರ ಕಣೇ ಹುಡುಗಿ.. ಬದಲಾವಣೆಯನೇ ಕಾಲವೆಂದರೋ ಇಲ್ಲಾ, ಕಾಲವನೇ ಬದಲಾವಣೆಯೆಂದರೋ.... ಅಲ್ಲಿ ಇಲ್ಲಿ ಅದಲು ಬದಲೋ ಅಥವಾ ಒಂದೇ ತೊಗಲೋ.. ಗಟ್ಟಿ ಬಿಗಿದ ಮಾಂಸಖಂಡ ಹವೆಯ ಹಟದಲಿ, ಜೋತುಬೀಳೋ ತನಕ ತಿಕ್ಕಿಕೊಂಡ ‘ನಾನೂ’ ಕೂಡ ಹದಕೆ ಬರುವ ಹರಿವಿಗೆಂದೂ ತುಂಬು ಪ್ರಾಯವೇ?.. ಅಲ್ಲೂ ಎಳೆಯ ಮಧ್ಯ ಮುಪ್ಪುಗಳ ನ್ಯಾಯವೇ!.. ಅನುಕ್ರಮದ ಸರಣಿಯಲ್ಲಿ ಕಾಲವೆಂಬುದು ಭ್ರಮೆಯೇ.. ಅಥವಾ ತೀರಲಾರದ ಉಪಮೆಯೇ!.. ಒಂದಷ್ಟು ಕಿಸೆಗಳನು ಹೊಲಿದುಕೊಡು ಮಾರಾಯ್ತೀ, ನೆನಪುಗಳನು ಜೋಪಾನವಾಗಿ ಇಟ್ಟುಕೊಳ್ಳುತ್ತೇನೆ ಎದೆಗೆ ತುಂಬ ಹತ್ತಿರದಲ್ಲಿ... ತೇಪೆ ಹಚ್ಚಿದ ಎದೆಯೊಳಗೆ ತಡವಿಕೊಂಡಂತೆಲ್ಲಾ.., ಎಂದೋ ಮಾಸಿದ ನುಣುಪು, ಮೊನ್ನೆಯಷ್ಟೇ ಹೊಲಿದುಕೊಂಡ ಹಸಿ ಹುರುಪು, ಜೊತೆ ಜೊತೆಗೇ ಅರ್ಧರ್ಧ ಬಿಟ್ಟ ದಾರದ ಸೋಂಕು.. ಇರಲಿಬಿಡು, ನೆನಪುಗಳಲಾದರೂ ನೀನು ಪಾಲುದಾರಳಾದೆಯಲ್ಲ!.. ನೇರಳೆ ಮರದ ನೆರಳ ಕೆಳಗೆ ನವಿಲುಗರಿ ತಂದು ಬಣ್ಣಗಳ  ಬೇರ್ಪಡಿಸು ಎಂದಿದ್ದೆಯಲ್ಲ.. ಕಾಲುದಾರಿಯ ಬೇಲಿತುದಿಗೆ ಅಡಗಿಕೊಂಡ ಮೊಗ್ಗ ತಂದು ಹೆರಳ ಸಲಿಗೆಯ ಕೇಳಿಕೊಂಡ ನನಗೆ ಪೂರ್ತಿ ಹಕ್ಕು ಕೊಟ್ಟ ಮೇಲೂ, ಬಾಡಲಿಲ್ಲ ಮೊಗ್ಗು.. ಅರಳಿಕೊಂತು ಬಿಸಿಲು ಬಿದ್ದ ಹಾಗೆ..! ಅಂದು ಒಮ್ಮೆ ಕೆಸರಿನಲ್ಲಿ ಹೆಸರ ಬರೆದು ಕೆನ್ನೆಗೊಂದು ಬೊಟ್ಟು ಇಟ್ಟ ಮೇಲೆ ಸ್ಪರ್ಶಕೊಂದು ಅರ್ಥ ಬಂದಿತ್ತು..

     ಆಗಾಗ ಹಲುಬುತ್ತೇನೆ ಹುಡುಗೀ.. ಒಮ್ಮೆ ಜೋರಾದ ಮಳೆಯಲ್ಲಿ ತುಂಬಾನೇ ನೆನೆಯಬೇಕು.. ನಿನಗೆಂದೇ ನಾ ಹಚ್ಚಿಕೊಂಡ ಬಣ್ಣಗಳೆಲ್ಲಾ ತೊಳೆದುಹೋಗಿ ಖಾಲಿಯೆಂಬ(?) ನಾನುಳಿಯಬೇಕು.. ಬೆರಕೆ ಬಣ್ಣಗಳು ನೀರಿನಲಿ ಅದೆಷ್ಟು ಚಿತ್ರ ಬಿಡಿಸುವವೋ, ನಾ ಕಾದು ನೋಡಬೇಕು.. ಬೇಡ, ಬೇಡ.. ಮಳೆ ಬರುವುದೇ ಬೇಡ.. ನಿನಗೆಂದೇ ನಾ ಒಣಗಿಸಿಟ್ಟ ನಿನ್ನದೇ ಚಹರೆಗಳವು ಗೆಳತೀ.. ಹೇಳಿದೆನಲ್ಲ, ಮತ್ತೊಂದು ಮಗ್ಗುಲಲ್ಲಿ ಕನಸುಗಳಿವೆ.. ನನ್ನತನವ ಅಡವಿಡಬೇಕಿಲ್ಲವಂತೆ ಕನಸು ಕಾಣೋದಿಕ್ಕೆ.. ನೆನಪುಗಳೇ ಕನಸುಗಳೆಂದು, ಕನಸುಗಳೇ ನೆನಪುಗಳೆಂದು ಬಿಕರಿಗಿಡುತ್ತೇನೆ.. ದರ ಮಾತ್ರ ಕೇಳಬೇಡ; ಇದು ಮನಸಿನ ವ್ಯಾಪಾರ.. ! ಇನ್ನೊಂದಿಷ್ಟು ದಿನದಲ್ಲಿ ಹೊಸ ಒಪ್ಪಂದ ಶುರುವಾಗಬಹುದು.. ಮತ್ತ್ಯಾವುದೋ ಲೇಖನಿ ಇನ್ನೊಂದು ಶೀರ್ಷಿಕೆಯ ಬರೆಯಬಹುದು.. ನಾನು ಕೇಳಿಸಿಕೊಳ್ಳುತ್ತೇನೆ; ಹೌದು, ಇನ್ನು ಮುಂದೆ ಗಡಿಯಾರಗಳು ಮಾತನಾಡುತ್ತವೆ...


~‘ಶ್ರೀ’
  ತಲಗೇರಿ 

ಶನಿವಾರ, ಸೆಪ್ಟೆಂಬರ್ 17, 2016

‘ಅನ್ವೇಷಣ’ದ ಹಾದಿಯಲ್ಲಿ...

                 


     ಈ ಹುಡುಕಾಟ ಎನ್ನುವುದು ಹೇಗೆ ಮತ್ತು ಯಾಕೆ ಹುಟ್ಟಿಕೊಳ್ಳುತ್ತದೆ ಅನ್ನುವುದು ಒಂಥರಾ ವಿಸ್ಮಯ.. ಯಾರೂ ಇದರಿಂದ ಹೊರತಾಗಿಲ್ಲ; ಈ ಹುಡುಕಾಟವನ್ನೇ ವಸ್ತುವಾಗಿಸಿಕೊಂಡು ಶ್ರೀ ಎಸ್ ಎಲ್ ಭೈರಪ್ಪನವರು ಬರೆದಂಥ ಕಾದಂಬರಿ ‘ಅನ್ವೇಷಣ’. ಪಾತ್ರಗಳ ಗಟ್ಟಿತನ, ಕತೆಯ ಓಘ ಇತ್ಯಾದಿಗಳ ಬಗ್ಗೆ ಹೇಳಿ ವಿಮರ್ಶಾತ್ಮಕ ಓದುಗನಾಗುವುದಕ್ಕಿಂತ, ಅದರ ಸೌಂದರ್ಯವನ್ನು ಹಾಗೇ ಎದೆಗೆ ತುಂಬಿಕೊಂಡು ರಸಾಸ್ವಾದಕನಾಗುವುದೇ ಆಪ್ಯಾಯಮಾನ ಎನಿಸಿತು.‘ಅನ್ವೇಷಣ’ದ ಹಾದಿಯಲ್ಲಿ ನಾನು ಕಂಡ ನೆರಳು ಬೆಳಕುಗಳ ಸಂಯೋಜನೆಯನ್ನು ತಮ್ಮ ಮುಂದೆ ಈಗ ಹೀಗೆ ಹರಡುತ್ತಿದ್ದೇನೆ...

     ವ್ಯಕ್ತಿತ್ವಕ್ಕನುಗುಣವಾಗಿ ಆಲೋಚನೆ, ನಿರ್ಧಾರ, ಕೆಲಸಗಳ ಸರಣಿಯಲ್ಲಿ ಏರುಪೇರಾಗುತ್ತದೆ; ಅನುಕ್ರಮವಾಗೇ ಜರುಗಬೇಕೆಂದೇನಿಲ್ಲ.. ಇದು ಊಟ ಮಾಡುವಾಗ ಹಾಕಿಸಿಕೊಳ್ಳುವ ಪದಾರ್ಥಗಳಂತೆ!.. ಒಂದು ವಿಷಯ ಹೊರಗಿನಿಂದ ನೋಡುವವರಿಗೆ ಬೇರೆಯದಾಗಿಯೇ ಕಾಣಬಹುದು. ಆದರೆ, ಅದರಲ್ಲಿನ ತಿರುಳು ಇನ್ನೇನೋ ಆಗಿರಬಹುದು. ಅಂತೆಯೇ ಸಂಬಂಧಗಳು; ಹೊರಗಿನಿಂದ ಒಂದು ಹೆಣ್ಣು ಗಂಡಿನ ಸಂಬಂದ್ಘಕ್ಕೆ ಕಲ್ಪನೆಯ ರೆಕ್ಕೆ ಕೊಟ್ಟು, ಅದನ್ನು ಎಷ್ಟು ಕೆಳ ಮಟ್ಟಕ್ಕಾದರೂ ಇಳಿಸಬಹುದು ( ಇಳಿಸುತ್ತೇವೆಂಬುದೂ ಭ್ರಮೆಯೇ?! ).. ಆದರೆ ಆ ಸಂಬಂಧದ ಒಳ, ತಾಯಿ ಮಕ್ಕಳಷ್ಟು ಪವಿತ್ರವೂ ಆಗಿರಬಹುದು. ನಮ್ಮವರು ಎಂದುಕೊಡವರ ಬಗೆಗಿನ ಯೋಚನೆಗಳ ವರ್ತುಲದಲ್ಲಿ ಅವರ ಬಗೆಗೆ ಒಂದಷ್ಟು ಚಿತ್ರಗಳು ಗಾಢವಾಗಿ ಅಚ್ಚೊತ್ತಿಕೊಂಡಿರುತ್ತವೆ; ಅದು ಎಂಥಹುದೇ ಸ್ಥಿತಿಯಲ್ಲಿ ನಾವಿದ್ದರೂ!.. ಮನುಷ್ಯ ಸಂಬಂಧಗಳ ಕುರಿತಾಗಿ ಹೇಳುತ್ತಾ, ಒಂದು ಕಡೆ, ದಾರಿಯಲ್ಲಿ ನಡೆದುಹೋಗುವ ಪಾತ್ರವೊಂದನ್ನು ಮಾತನಾಡಿಸುವ ಜನರ ಮೂಲಕ ಅಂದಿನ ಹಳ್ಳಿಯ ಜೀವನಶೈಲಿಗೂ, ಇಂದಿನ ನಮ್ಮ ಜೀವನಶೈಲಿಗೂ ಇರುವ ವ್ಯತ್ಯಾಸವನ್ನು ಥಟ್ಟನೆ ನಮ್ಮೆದುರಿಗೆ ತಂದು ನಿಲ್ಲಿಸುತ್ತಾರೆ.

     ಸಾವಿರಾರು ಜನ ಓಡಾಡೋ ದಾರಿಯಲ್ಲಿ ಗರಿಕೆಯೂ ಬೆಳೆಯೋದಿಲ್ಲ. ಆದರೆ ಆ ದಾರಿಗೂ ‘ತನ್ನವರದ್ದು’ ಅನ್ನುವ ಹೆಜ್ಜೆಗಳು ಶಾಶ್ವತವಾಗಿ ಉಳಿಯಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ ಆ ದಾರಿಯ ಧ್ವನಿ ಯಾರಿಗೂ ಕೇಳುವುದಿಲ್ಲ. ಎಲ್ಲೋ ಒಂದು ಚಿಗುರು ಕಾಣಿಸಿಕೊಳ್ಳಲಿ ಅಥವಾ ಉಳಿದುಹೋಗಲಿ ಅನ್ನುವಾಗ ಸಂಬಂಧದ ಬೇರುಗಳ ಗಟ್ಟಿತನ ಪ್ರಶ್ನೆಯಾಗುತ್ತದೆ. ಅಸಹಾಯಕ ದಾರಿಯ ಮೌನವು ಕಣ್ಣನ್ನು ತೇವವಾಗಿಸುತ್ತದೆ. ನೆನಪುಗಳು ಅದೆಷ್ಟು ಕೊಲ್ಲುತ್ತವೆ ; ಆದರೆ ಭಯವನ್ನು ಮೀರಿದವನು ಸಾವಿಗೆ ಹೆದರುವುದಿಲ್ಲ.. ಯಾವಾಗಲೂ ಕೇವಲ ದುಡ್ಡು ಕೊಟ್ಟು ತಂದ ವಸ್ತುವಿನಲ್ಲಿ ಋಣದ ಭಾರ ಕಡಿಮೆ ಅನ್ನುತ್ತಾ, ಅದು ಪ್ರೀತಿಗೆ ಅಂಟಿಕೊಳ್ಳುವುದು ಕೂಡಾ ಕಡಿಮೆಯೆಂದು ಶ್ರೀಯುತರು ಹೇಳಿದ್ದಾರೆ.

     ಒಂದು ಕಡೆ ಓದುವ ಮನಸ್ಸು (ಕರ್ತವ್ಯ), ಬಣ್ಣದ ಬದುಕಿನ ಸೆಳೆತ (ನಾವು ಹಾಕುವ ಸೋಗು), ಅಮ್ಮನನ್ನು ಹುಡುಕುತ್ತಾ ಅಲೆಯುವಿಕೆ (ನಮ್ಮೊಳಗಿನ ಮಗುತನ), ಹುತ್ತದೊಳಗೆ ಕೈಯಿಡುವಿಕೆ, ರೈಲುಹಳಿಗಳಲ್ಲಿ ನಡೆಯುವುದು (ಭಂಡತನ), ಆಗಾಗ ಅಳುವ ಹುಡುಗ (ಎಲ್ಲವನ್ನೂ ಕಳೆದುಕೊಳ್ಳುವ ಹತಾಶ ಭಾವ), ಒಂದಷ್ಟು ಗುಟ್ಟುಗಳು, ಎಲ್ಲವನ್ನೂ ತಿಳಿದು ನಿರ್ಲಿಪ್ತ ಸ್ಥಿತಿ, ನಮ್ಮೊಳಗೇ ಇರುವ ಒಂದು ಸತ್ತ್ವಯುತ ಅಧಿಕಾರ, ಎಲ್ಲೇ ಹೋದರೂ ನಮ್ಮ ಜೊತೆಗೇ ಸಾಗುವ ಗಾಯ, ಬೇನೆಗಳು, ನಮ್ಮನ್ನು ತಿದ್ದಿ ತೀಡುವ ಅನುಭವ ಮುಪ್ಪಂತೆ ಒಬ್ಬ ಪ್ರೌಢ, ತನ್ನನ್ನೇ ತಾನು ಒರೆಹಚ್ಚಿಕೊಳ್ಳುವ ಪ್ರಕ್ರಿಯೆ, ಪುರುಷಾರ್ಥಗಳೊಂದರ ಅಭಿವ್ಯಕ್ತಿ ಇದ್ದುದನ್ನು ಬಿಟ್ಟು ಇಲ್ಲದಿದ್ದುದರ ಕಡೆ ಅಥವಾ ಬೇರೆಯವರ ವಸ್ತುವಿನ ಕಡೆಗೆ ಸೆಳೆವ ಮನಸ್ಸು ಹೀಗೇ ಹೀಗೇ ಪ್ರತಿಯೊಂದು ಭಾವವೂ ಇಲ್ಲಿ ಒಂದೊಂದು ಪಾತ್ರವಾಗಿ ಕತೆಯ ತುಂಬಾ ಅಲೆದಾಡುತ್ತವೆ

     ನಮ್ಮ ಬೆನ್ನ ಮೇಲಿನ ಗಾಯ ನಮಗೆ ಕಾಣಿಸೋದಿಲ್ಲ, ಅದಕ್ಕೆ ಕನ್ನಡಿ ಹಿಡಿಯುವ ಪ್ರಯತ್ನವನ್ನೂ ನಾವು ಮಾಡೋದಿಲ್ಲ. ನೋವು ದೈಹಿಕವಾಗಿರಲಿ ಅಥವಾ ಮಾನಸಿಕವಾಗಿರಲಿ, ಗಮನಿಸಿದರೆ ಮಾತ್ರವೇ ಅರಿವಿಗೆ ಬರುತ್ತದೆ; ಅಂದರೆ ಇದಕ್ಕೆಲ್ಲಾ ಕಾರಣ ಮನಸ್ಸು ಮಾತ್ರ...

     ಮನುಷ್ಯ ತನಗೇ ತಾನು ಸತ್ಯ ಹೇಳಿಕೊಳ್ಳುವಲ್ಲಿಯೂ ತಡವರಿಸುತ್ತಾನೆ. ತನ್ನ ನಿಜವಾದ ಚಿತ್ರ ಮನಸ್ಸಿನಲ್ಲಿ ಮೂಡಿದಾಗ, ಅರೆಬರೆ ಸುಳ್ಳು ಅಲ್ಲಿಂದಲೇ ಆರಂಭವಾಗುತ್ತದೆ. ಅದಕ್ಕೆ ಸಮರ್ಥನೆಗಳೂ ಹುಟ್ಟಿಕೊಳ್ಳುತ್ತವೆ. ಈ ಸತ್ಯ ಸುಳ್ಳುಗಳೆಲ್ಲಾ ಅವರವರ ದೃಷ್ಟಿಗೆ ಸಂಬಂಧಿಸಿದ್ದಷ್ಟೇ ಅಲ್ಲವೇ! ಯಾವತ್ತು ಮನುಷ್ಯ ತನಗೇ ತಾನು ನಿಜ ಹೇಳಿಕೊಳ್ಳುವ ಶಕ್ತಿ ಪಡೆಯುತ್ತಾನೋ, ಆಗ ಆತ ಒಂದು ಮಟ್ಟ ಮುಟ್ಟಿದ ಅಂತ ಅರ್ಥ. ಕೆಲವೊಮ್ಮೆ ಪರಿಸ್ಥಿತಿ ಮನುಷ್ಯನ ಆಚಾರ ವಿಚಾರಗಳನ್ನು ರೂಪಿಸುತ್ತದೆ.

     ಪುರುಷಾರ್ಥಗಳಲ್ಲಿನ ಆಸಕ್ತಿ ಕಡಿಮೆಯಾದಂತೆ ನಾವು ಮಾಗುತ್ತಿದ್ದೇವೆ ಅಂತ ಅರ್ಥ. ಆ ನಿರಾಸಕ್ತಿ, ಒಳಗಿನ ಆಸಕ್ತಿಗೆ ಪೂರಕ. ನಮ್ಮನ್ನು ನಾವು ತಿಳಿಯುವ ಈ ಪ್ರಕ್ರಿಯೆಯಲ್ಲಿ, ಆಸಕ್ತಿ ನಿರಾಸಕ್ತಿಗಳು ಹಗಲು ರಾತ್ರಿಗಳಿದ್ದಂತೆ. ಅಕ್ಕಿ ಬೇಯುತ್ತದೆ, ಬೇಳೆಯೂ ಬೇಯುತ್ತದೆ.. ಆದರೆ ಉತ್ತಮ ಊಟದ ರುಚಿ ನಮ್ಮ ಕೈಯಲ್ಲೇ ಇದೆ. ಕೆಲವೊಮ್ಮೆ ಮನುಷ್ಯನ ಆಸೆಗಳು ಆತನನ್ನು ಮತ್ತೆ ಜೀವನ್ಮುಖಿಯಾಗಿಸುತ್ತವೆ. ನಮ್ಮಲ್ಲಿ ಅಂದರೆ, ಪ್ರಕೃತಿಯಲ್ಲಿ ಎಲ್ಲವೂ ಇದೆ. ಆದರೆ, ನಮ್ಮಲ್ಲಿನ ಸೌಂದರ್ಯಕ್ಕೆ ಅದನ್ನು ಬಳಸಿಕೊಳ್ಳಬೇಕಾದುದು ನಮಗೇ ಬಿಟ್ಟಿದ್ದು.

     ಬೇರೆಯವರ ಮೇಲೆ ಹೊರಿಸುವ ತಪ್ಪುಗಳು ನಮ್ಮ ತಪ್ಪುಗಳಿಂದ ನಮ್ಮ ಮೇಲಾದ ಕಲೆಯನ್ನು ಅಳಿಸಿಹಾಕುವುದಿಲ್ಲ. ಆ ಕಲೆಯನ್ನು ತಿಕ್ಕಬೇಕು, ಹಳೇ ಪೊರೆ ಕಳಚಿ ಮತ್ತೆ ಮರುಹುಟ್ಟು ಇರಬೇಕು.

     ಅಧ್ಯಾತ್ಮ ಎನ್ನುವುದು ಜೀವನವನ್ನು ತುಂಬ ಕಂಡವರಲ್ಲಿ ಮತ್ತು ಅನುಭವಿಸಿದವರಲ್ಲಿ ಜಾಗೃತವಾಗುತ್ತದೆ. ಏನೂ ಕಾಣದವರಲ್ಲಿ ಅದರ ಕಲ್ಪನೆಯಷ್ಟೇ ಮೂಡುತ್ತದೆ.

     ಬರೆಯುವಿಕೆಯ ಮಹತ್ವವನ್ನೂ ಸೂಚ್ಯವಾಗಿ ಶ್ರೀಯುತರು ಹೇಳುತ್ತಾರೆ. ಬರೆಯುತ್ತಾ ಹೋದರೆ ಎಷ್ಟು ಪುಸ್ತಕ ಪ್ರಕಟಿಸಬಹುದಾಗಿತ್ತು ಎಂದು ಒಂದು ಪಾತ್ರದ ಮೂಲಕ ಹೇಳುತ್ತಾ, ಬರವಣಿಗೆಯಲ್ಲಿ ಗಟ್ಟಿತನ ಇರಬೇಕು, ಬರೆದದ್ದು ನೆಲೆ ಕೊಡಬೇಕು, ಅನಿಸಿದ್ದೆಲ್ಲವೂ ಬರವಣಿಗೆಯ ರೂಪ ಪಡೆದುಕೊಳ್ಳಲಿಕ್ಕಾಗುವುದಿಲ್ಲ ಎಂಬುದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ.

     ಹುಡುಕಾಟದಲ್ಲಿ ಹತ್ತಿರ ಬಂದ ನಮ್ಮನ್ನೇ ನಾವು ಕೆಲವೊಮ್ಮೆ ದೂರ ತಳ್ಳಿಕೊಳ್ಳುತ್ತೇವೆ. ಬಹುಶಃ ಅಷ್ಟು ವರ್ಷಗಳ ತಿಕ್ಕಾಟದ ಮೇಲಿನ ಜಿಗುಪ್ಸೆಯೋ ಅಥವಾ ಅಸ್ತಿತ್ವಕ್ಕೊಂದು ಅರ್ಥ ಕಂಡುಕೊಳ್ಳಲಾರದ ತಳಮಳದ ಇನ್ನೊಂದು ಮುಖವೋ.. ಹಪಹಪಿಸುತ್ತೇವೆ, ಸುಕ್ಕಾಗುತ್ತೇವೆ, ಮತ್ತೆ ಮತ್ತೆ ಬಿದ್ದು ಬಿದ್ದು ಏಳುತ್ತೇವೆ, ಗಟ್ಟಿಯಾಗುತ್ತೇವೆ. ಇನ್ನ್ಯಾವುದರಲ್ಲೋ ಅರ್ಥ ಹುಡುಕಲು ಶುರುವಿಟ್ಟುಕೊಳ್ಳುತ್ತೇವೆ. ಕೊನೆಗೆ ಯಾವುದೋ ಒಂದು ಮುಖವನ್ನಿಟ್ಟುಕೂಂಡು ಸಮಾಧಾನದ ಭ್ರಾಂತಿಯಲ್ಲಿ ಕಣ್ಣು ಮುಚ್ಚುತ್ತೇವೆ.

     ನಾವದೆಷ್ಟು ಜನ ಸ್ಥಿರಚಿತ್ತರಿದ್ದೇವೆ? ಏನೋ ಆಗಬೇಕೆಂದು ಕನವರಿಸುತ್ತೇವೆ. ಆ ಕನವರಿಕೆ ಒಳ್ಳೆಯ ನಿದ್ರೆಯಲ್ಲಿನ ಒಂದೆರಡು ಕ್ಷಣಗಳಾಗಿ ಹೊರಟುಹೋಗುತ್ತದೆಯೇ ಹೊರತು, ಹಗಲಿನ ಚುರುಕಾಗುವುದೇ ಇಲ್ಲ. ಸುಮ್ಮನೆ ನಡೆಯುತ್ತೇವೆ ಸಿಕ್ಕ ಸಿಕ್ಕ ಕಾಲುದಾರಿಗಳಲ್ಲಿ ಉದ್ದೇಶವೇ ಇರದೆ!.. ಸಂಬಂಧಗಳಿಗೆ ವ್ಯಾಖ್ಯೆ ಮತ್ತು ಅರ್ಥವನ್ನು ಕೊಟ್ಟುಕೊಳ್ಳುವವರು ನಾವೇ.. ಸಂಬಂಧಗಳ ಹೆಸರಿಗಿಂತಲೂ ಹೆಚ್ಚಾದ ಅನುಭೂತಿಯನ್ನು ನಾವೇ ಹುಟ್ಟಿಸಿಕೊಳ್ಳಬಹುದಲ್ವಾ?..

     ಬದುಕಿನ ಒಂದಷ್ಟು ಪುಟಗಳು ಖಾಲಿ ಅನ್ನುವುದಕ್ಕಿಂತ ಅವು ಮುಂದೆ ಬರೆಯಬೇಕಾದವುಗಳು ಅಂತ ಅಂದುಕೊಳ್ಳುವುದರಲ್ಲಿ ಅದೆಂಥ ಜೀವನೋತ್ಸಾಹವಿದೆ ಅಲ್ಲವೇ!.. ಬಹುಶಃ ಇದನ್ನೇ ಹುಡುಕಾಟ ಎನ್ನಬಹುದೇನೋ..!

     ಸಾವು ಭೌತಿಕವಾದದ್ದಲ್ಲ; ಅದು ಬೌದ್ಧಿಕವಾದದ್ದು.. ಹೊಸಹುಟ್ಟು, ಪುನರ್ ಸೃಷ್ಟಿಗೊಳ್ಳುತ್ತಲೇ ಇರುವ ನಮ್ಮ ವ್ಯಕ್ತಿತ್ವದ ಪಕ್ವತೆಗೆ ಪರಿಕರವಾಗಬೇಕು.. ನಿಜ, ಅದೆಷ್ಟೋ ಜನ ತಮ್ಮನ್ನು ತಾವು ಅರಿತಿದ್ದರೆ, ಪರಿಸ್ಥಿತಿಯ ಪರಿಹಾಸ್ಯಕ್ಕೆ ಪೆಚ್ಚು ಮೋರೆ ಹಾಕಿಕೊಂಡು ಆಗ ಸಿಕ್ಕ ಮುಖವಾಡಗಳನ್ನು ಹಾಕಿಕೊಳ್ಳುತ್ತಾ, ಒಂದಷ್ಟು ದಿನ ಭ್ರಮೆಯಲ್ಲಿ ಮೆರೆಯುತ್ತಾ ಮತ್ತೆ ಮತ್ತೆ ಸಾಯುತ್ತೇವೆ, ಹಾಗೇ ಹುಟ್ಟುತ್ತೇವೆ (ಕೆಲವೊಮ್ಮೆ!).. ಆಗಾಗ ಸತ್ತು ಹುಟ್ಟಬೇಕಂತೆ, ಹೇಗೆ?.. ಹೊಸ ಬದುಕಿನ ಅಥವಾ ಹೊಸ ಚೈತನ್ಯದ ಮರುಹುಟ್ಟೇ ಅಥವಾ ಹೊಸ ವ್ಯಕ್ತಿತ್ವದ್ದೇ?.. ಪ್ರತೀ ಸಲ ಮುಖವಾಡ ಬದಲಿಸಿಕೊಂಡಾಗಲೂ ಸಾವು ಹುಟ್ಟಿನ ಸರಸ ಖಚಿತವೇ? ಇಷ್ಟೆಲ್ಲಾ ಪಾತ್ರಗಳ ಭಾಗವಾಗುವಾಗ ‘ನಮ್ಮದು’ ಅಂತ ಒಂದು ಭಾವ ಆವರಿಸಿಕೊಳ್ಳುವುದಿಲ್ಲವೇ? ಒಂದಕ್ಕೇ ಆತುಕೊಳ್ಳುವವ ಬಹುಶಃ ಮನುಷ್ಯನಾಗಿರುವುದೇ ಇಲ್ಲವೇನೋ!.. ಪಾತ್ರಗಳ ಮತ್ತು ಅವುಗಳ ಸಂಬಂಧಗಳ ನಡುವಿನ ಎಳೆತ, ಸೆಳೆತ, ಬಿಗಿತಗಳೇ ಮನುಷ್ಯನನ್ನು ಕ್ರಿಯಾಶೀಲನಾಗಿಸುವುದು?!.. ಅಥವಾ ತಡೆದು ತಡೆದು ಬಣ್ಣಬಿಡುವ ತೀವ್ರತೆಯ ಹೆಚ್ಚಿಸುವುದು.. ಹುಡುಕುತ್ತೇವೆ, ಹುಡುಕಿಯೇ ಹುಡುಕುತ್ತೇವೆ ಯಾವುದೋ ಒಂದು ಘಟ್ಟದಲ್ಲಿ.. ಅದುವೇ ನಮ್ಮದೆಂದು ಅಥವಾ ಅದೇ ನಾವೆಂದು ಒಪ್ಪಿಕೊಳ್ಳುವ ಧೈರ್ಯ ಅಥವಾ ಮನಃಸ್ಥಿತಿ ಬಹುಶಃ ನಮಗಿರುವುದು ತುಂಬಾ ಕಡಿಮೆ. ಸಿಕ್ಕಿದೆ ಅಂದುಕೊಳ್ಳುತ್ತಿರುವಾಗಲೇ ಕಳೆದುಕೊಂಡಿರುತ್ತೇವೆ. ಯಾಕೆಂದರೆ ನಾವು ಹುಡುಕುವುದು ನಾವಾಗಿ ಅಲ್ಲ; ಅವರಾಗಿ!.. ನನಗೆ ಗೊತ್ತಿರುವ ನಾನಾದರೂ ಎಷ್ಟು ಸತ್ಯ? ಅಥವಾ ನಾನು ನನ್ನ ಚಿತ್ರ ಇಷ್ಟೇ ಇರಬೇಕೆಂದು ನನ್ನ ಸಂತೋಷಕ್ಕೆ ನಾನೇ ಎಳೆದ ಗೆರೆಗಳಲ್ಲಿ ಅದೆಷ್ಟು ನಾನಿದ್ದೇನೆ?!.. ಇದೇ ‘ಅನ್ವೇಷಣ’... :) :) :)


~‘ಶ್ರೀ’
  ತಲಗೇರಿ

ಗುರುವಾರ, ಸೆಪ್ಟೆಂಬರ್ 8, 2016

ಇದಿರು...

ಕಲ್ಲು ಮೂಳೆಗೆ ಮಣ್ಣ ತೊಗಲು
ಗೋಡೆ ಮೇಲೆ ಕುಂತ ಪಾತ್ರೆ
ಹಗುರ ದಪ್ಪ ಉದ್ದ ವಿರಳ
ಒರಟು ಡೊಂಕು ಕಣ್ಣ ತಂಪು
ಅರ್ಧ ಸೀಳಿದ ನಗ್ನ ಸೌದೆ..
ಗೆದ್ದಲಿಡಿವ ಮುನ್ನ ಸೇರಿಕೊಂಡ
ನೀರನೊಸರದ ತೆಂಗು
ತೂತು ಕೊರೆದ ಮಧ್ಯ ಕೋಟೆ..
ತಿಕ್ಕಿಕೊಂಡ ಬಣ್ಣಗಳ ಕಾವಿಗೆ
ಸುಟ್ಟಿಕೊಂಡವು ತಮ್ಮ ಕೂದಲು..
ಮಧ್ಯ ಮಧ್ಯ ಉಸಿರು ಅವಳದು...

ತಳವ ಸೋಕಿ ಗಾಳಿ ಜೀಕಿ
ಅಲ್ಲೇ ನಿಂತುಕೊಂತು ಧೂಮ
ಮೊದಲ ಬಾರಿಗೆ
ಗೆಜ್ಜೆ ತೊಟ್ಟ ಹುಡುಗಿಯಂತೆ..
ಹಂಗುಗಳ ಎಂಜಲು ತಿಕ್ಕಿದ
ಪುಟದಿ ಹೊಸ ಪೀಠಿಕೆ..
ಒಮ್ಮೊಮ್ಮೆ ಅಲ್ಲೇ ಎದ್ದು ಕೂರುವಾಸೆ
ಎಲ್ಲ ಅಕ್ಷರಕೆ...

ಅಕ್ಕಿ ಬೆಂದ ಬೆಂಕಿಯಲ್ಲೇ
ಕದ್ದು ಸುಟ್ಟನಂತೆ, ಓ ಅವನು..
ಗೋಗರೆದು ಕೊಂಡ ನಾಲ್ಕು ಮೀನು
ಬೆಂದು ತಿಂದ ಮೇಲೆ
ಶವಕೆ ಮುಕ್ತಿ..
ಸಾಕ್ಷಿಗಂತೆ ಎದೆಯ ಮುಳ್ಳು
ಸರಸದಲ್ಲಿ ಹರಡಿಕೊಂಡ
ಒಂದೇ ಬಣ್ಣದ ಪುಡಿ
ಒಟ್ಟು ಸ್ರವಿಸಿ ಉಳಿದ ಹೆಪ್ಪು ಮೇಣ
ಇಂಗಿಕೊಂಡ ಗಂಧ..
ಕಕ್ಕಬೇಕೇ ಸಹ್ಯ ಅಸಹ್ಯಗಳ
ಉದುರಿಬಿದ್ದ ಒಂಟಿ ರೆಕ್ಕೆ ಮೇಲೆ!..

ಮುಖಾಮುಖಿಯಾಗುತ್ತೇವೆ ನಾಳೆ
ಹಳಸಲು ತಿಂದ ಆ
ತಗಡು ಪಾತ್ರೆ ದಂಟುಕೋಲಿನವನು
ಮತ್ತು ಹೊಟ್ಟೆಯುಬ್ಬಿದ ನಾನು..
ಯಾರ ನಗುವಿನಲ್ಲಿ ಅನ್ನದಗಳು
ಕಂತ ಹಸಿವ
ನೀಳ ನೆರಳ ಬಿಟ್ಟಿಹುದೋ
ಯಾರ ಕಣ್ಣ ರೆಪ್ಪೆಗೆಷ್ಟು ತೂಕವೋ‌..
ಮತ್ತೆ ಅವಳು ಒಲೆಯ ಇದಿರು...

~`ಶ್ರೀ'
    ತಲಗೇರಿ


ಗುರುವಾರ, ಸೆಪ್ಟೆಂಬರ್ 1, 2016

ಪಾಚಿಗಟ್ಟಿದ ಛಾವಣಿಯ
ತೆಳು ಬಿರುಕಿನಲಿ ನುಸುಳಿಬಂದ
ಬಿಸಿಲ ಕೋಲಿಗೇನು ಕೆಲಸ ಅಟ್ಟದಲ್ಲಿ!..
ಹದಿನೆಂಟರ ಪ್ರಾಯದಲ್ಲಿ ಮಾಗಿಯಲ್ಲಿ
ಅವಳ ಎದೆಭಾರ ನೆನೆಯುತ್ತ
ಕಾಲುಗುರಿಂದ ತಲೆಗೂದಲ ತನಕ
ಬಿಸಿ ದಾಸ್ಯಕೊಳಪಟ್ಟ ಗಳಿಗೆಗೆಲ್ಲಾ
ಒಳಗೊಳಗೇ ಉನ್ಮತ್ತ ಮರದ
ತುಣುಕೊಂದು ಬಿದ್ದಿಹುದು..
ಕಾಲವೆಂಬುದು ಶಾಪವೇ;
ಈ ಓಟದಲ್ಲಿ...

ಗಟ್ಟಿ ಅಪ್ಪಿ ನಿಂತುಕೊಂಡವು
ಪುಟ್ಟ ಪುಟ್ಟ ಬೆರಳು, ಕಾಲು..
ತುಂಬು ಕೆನ್ನೆ ಒಮ್ಮೆ ತಿಕ್ಕಿ
ಕಚ್ಚಲೂನು ನನ್ನೇ ಹುಡುಕಿ
ಅತ್ತು ಸುತ್ತಿ ಮತ್ತೆ ನಕ್ಕವು
ಅವರ ಮನೆಯ ಎಳೆಯ ತೊಗಲು..
ಗಟ್ಟಿ ಬಿಗಿದ ವಸ್ತ್ರದಲ್ಲಿ
ಯಾವ ಚಿಟ್ಟೆಯದೋ ಹೂವ ಎಸಳು...

ನಾಲಿಗೆಯ ಅಂಕುಡೊಂಕಿಗೆ
ಕಟ್ಟಕಡೆಯ ನೀಳ ಉಸಿರು..
ಆಚೆ ಮನೆಯ ಮೂಲೆ ಬದಿಯ
ಎರಡು ತಿರುವನೂ ದಾಟಿ ಬಂದ
ಕಾಲ ಕತೆಯ ಕೇಳುಗ..
ಎದೆಯ ಹೊಲದಿ
ಒಂಟಿಕಾಲಲಿ ತಂಗಿಹೋಗುವ
ಕೊಕ್ಕರೆಯ ಕೊರಳಿಗೂ
ಗೂಡುಕಟ್ಟುವ ಕನಸ
ಹೆಣೆದಿದ್ದು ಇದರ ಮಡಿಲಲ್ಲಿ..

ಆಗಾಗ ಎಣ್ಣೆಯಲಿ ಅರೆಗಂದು ಬಣ್ಣ
ಹಚ್ಚುವವರಿಲ್ಲ, ಚಪ್ಪಲಿಯ ಜೊತೆಗಳು
ಬೇರೆ ದಾರಿಯಲಿ ನಡೆದಾಗ..
ಜೇಡಬಲೆಯ ಸುತ್ತೋ ಪೊರಕೆ
ಅಟ್ಟಕೊಮ್ಮೆ ಬಂದರೆ
ಕುಂಟುತ್ತಲೇ ಗೀರುಗಳ ತೋರಬಹುದಿತ್ತು..
ತಲೆಮಾರುಗಳ ತೊದಲು
ತಿದ್ದಿಕೊಂಡ ಸಾಕ್ಷಿಯಿಂದುಸುರುತಿಹುದು
ಬರೀ ಮೂಕಧಾಟಿಯ ಪಲುಕು..
ಗೆದ್ದಲಿಗೆ ಅರ್ಧರ್ಧ ಖಾಲಿಯಾಗುವಾಗ
ಮರುಗುತ್ತಿತ್ತು ಕರೆಯದೇ ಬಂದ ಬಿಸಿಲು..
ಮತ್ತೆ ಅವನೆದುರು
ಪಳೆಯುಳಿಕೆಯೆಂದೇ ರುಜುವಾತಾಗಿತ್ತು..
ಉಳಿಯಬೇಕಂತೆ ನೆನಪುಗಳಿಗೆಂದೇ
ಒಂದು ಗುರುತು...

ಶೀರ್ಷಿಕೆ: ‘ಮುರಿದ ಕುರ್ಚಿ’

ನಮ್ಮೆಲ್ಲರ ಹಳ್ಳಿಮನೆಗಳಲ್ಲಿ ಒಂದಾದರೂ ಮುರಿದ, ಮರದ ಕುರ್ಚಿ ಕಾಣಸಿಗುತ್ತದೆ.. ನಮ್ಮೆಲ್ಲರ ಬಾಲ್ಯದ ಭಾಗವೇ ಆಗಿದ್ದ, ಅಮ್ಮನ ಮಡಿಲಿನ ಲಾಲಿತ್ಯದ ಆ ಸ್ಥಿರಜೀವಗಳಿಗೆ ಈ ಕವಿತೆ ಅರ್ಪಣೆ :) ಒಂದೊಮ್ಮೆ ಆ ಕುರ್ಚಿಗಳ ಮೈದಡವುವ ಖುಶಿಯು ನಮ್ಮದಾಗಲಿ :) :) :)

~‘ಶ್ರೀ’
  ತಲಗೇರಿ

ಭಾನುವಾರ, ಆಗಸ್ಟ್ 21, 2016

                                                  "ಅರ್ಧ ಅರ್ಧವೇ ಆವರಿಸು"...

     ಮೊದಲೇ ಹೇಳಿಬಿಡುತ್ತೇನೆ ಹುಡುಗೀ.. ಇವು ದಿನರಾತ್ರಿ ಸರಿವ, ಪೋಲಿ ಹುಡುಗನ ಸರಣಿ ಸ್ವಪ್ನದ ಕಂತುಗಳ ತುಣುಕುಗಳಲ್ಲ.. ಎಲ್ಲೋ ಮುಚ್ಚಿಟ್ಟ ನಕ್ಷತ್ರದೆದೆಯಿಂದ ಸ್ರವಿಸಿದ ಹಾಲ್ನೊರೆಯ ಹಸೀ ಸುಳ್ಳುಗಳೂ ಅಲ್ಲ!. ಪ್ರಾಯದ ಹರಿವಾಣದಲ್ಲಿ ಹಚ್ಚಿಟ್ಟ ಕಿರುಹಣತೆಗಳ ಹೊಂಬೆಳಕಿಗೆ ಚಿತ್ರ ಬರೆವ ಧೀಮಂತ ನೆರಳುಗಳ ಪಲ್ಲವಿಯಿದು..ಬಿಸಿಯೆದೆಯ ಅದೆಷ್ಟೋ ಕಂಪನಗಳಿಗೂ ಆರದೇ ಉಳಿದ ನನ್ನದೆಂಬುವ ಪ್ರೀತಿ ಬಿಂದುಗಳ ಜೋಡಿ ಜೋಡಿ ಕನವರಿಕೆಗಳ ತುಸು ತಲ್ಲಣವಿದು.. ನನಗೂ ನಿನಗೂ ಇಲ್ಲೊಂದು ಕತೆಯ ಕಟ್ಟುತಿದೆ ನೋಡು, ಗೊತ್ತಿಲ್ಲದೇ ಹುಟ್ಟಿಕೊಂಡ ಪದಪುಂಜಗಳ ಬಿಡಿಬಿಡಿಯ ಲಹರಿಗಳು ಒಟ್ಟಾಗಿ ಹರಿದಂಥ ಹಾಡು...

     ಗೆಳತೀ.. ಚಂದ್ರಮನ ಮೈಯಿಂದ ಜಾರಿದ ಬೆವರಿಗೆ ಆಯಸ್ಕಾಂತೀಯ ಗುಣವಿದೆಯೆಂದು ತಿಳಿದಿದ್ದೇ ಅದು ನಿನ್ನ ಹೆರಳುಗಳಲ್ಲಿ ಹೆಪ್ಪುಗಟ್ಟಿ ಮತ್ತೆ ಕರಗಿ ಮೈಯೆಲ್ಲಾ ಚದುರಿದಾಗ..ಮುಗಿಲ ದಿಬ್ಬಗಳು ಒಂದಾಗಿ ನಿನ್ನ ಮುಟ್ಟಲು ರಾಯಭಾರಿಯ ಅಟ್ಟಿದಾಗ ನಾ ಸುಮ್ಮನಿರುವುದು ಶಾಸ್ತ್ರ ಸಮ್ಮತವೇನೇ ಹುಡುಗೀ..!

                          ಸ್ವಪ್ನಗಳಿಗೆ ಸೇತುವೆಯ ಕಟ್ಟು ಗೆಳತಿ
                          ಈ ಸಂಜೆ ಕಿರಣಗಳ ಹಗ್ಗ ಹೊಸೆಯುತ್ತ..
                          ನನ್ನೆದೆಯ ಅಂಗಳದಿ ನಡೆದಾಡು ಗೆಳತಿ
                          ಅದಕಿರಲಿ ತಂಪು ಜಡಿಮಳೆಯ ಸಂಗೀತ...

     ಬಿಟ್ಟುಬಿಡೆಂದು ನಟ್ಟ ನಡುವೆ ಅಲ್ಲಲ್ಲಿಯೇ ಕನವರಿಸುವಾಗ, ಕದ್ದು ಕದ್ದು ಪಿಸುಮಾತ ಉಸುರಿದ್ದವಂತೆ ಸುತ್ತಲಿದ್ದ ಮಿಂಚುಹುಳುಗಳು..ಕತ್ತಲೆಯ ಹಂಗಿನಲ್ಲೂ ಕಡು ಶಾಪ ಕರಗಿದಂತೆ ಉರಿದುರಿದು ಮೆರೆದ ಮೇಣದ ಬತ್ತಿಯ ಬಿಸಿ ಗಂಧಕ್ಕೆ ರೆಕ್ಕೆ ಸುಟ್ಟಿದ ಪತಂಗಗಳು ಕೊರಗಲಿಲ್ಲವಂತೆ! ಬೆಳಕಿನೆದೆಯಲ್ಲಿ ಈಜುವುದು ಒಪ್ಪಂದವಿರದ ಹಕ್ಕೆಂದು ನೆನಪಾಗಿ ಉಳಿದವಂತೆ!.. ಇನ್ನು, ಇಷ್ಟು ವರ್ಷಗಳ ಕಾಲ ನಿನ್ನ ಮುಂಗುರುಳ ಜೋಕಾಲಿಯನು ಜೀಕಿದ್ದ ತಂಗಾಳಿಗೆ ನನ್ನ ಬೆರಳುಗಳ ಮೇಲೆ ಹೊಸದಾದ ಹೊಟ್ಟೆಕಿಚ್ಚಂತೆ... ನನ್ನುಸಿರ ಮೊಗೆಮೊಗೆದು ನಿನ್ನೆದೆಗೆ ತುಂಬುವ ಹೊಸ ಹುನ್ನಾರದ ರೂವಾರಿ ತಂಗಾಳಿಗೀಗ ನಮ್ಮಿಬ್ಬರಲೂ ಒಂದಾಗೋ ತವಕವಂತೆ.. ಸದಾ ಹಸಿವೆಂದು ಭೋರ್ಗರೆವ ಕಡಲ ಮೊರೆತಕ್ಕೆ, ನಮ್ಮ ಹೆಜ್ಜೆಗಳು ಕೂಡಿ, ಅದರ ತೀರದಲ್ಲಿ ಮೆಲ್ಲ ಮೆಲ್ಲ ಗುರುತು ಬಿಟ್ಟಾಗ, ಕಿರು ಬೆರಳಿಂದ ಹೆಬ್ಬೆರಳ ತನಕ ಹಬ್ಬಿಕೊಂಡ ಪುಟ್ಟ ಪುಟ್ಟ ಆಸೆಗಳ ಭಾಷೆ ಅರ್ಥವಾಯಿತಂತೆ! ಕಡಲೂ ತನ್ನ ಒಳಹರಿವ ನಿರಂತರತೆಗೆ ದನಿಯಾದ ನದಿಗಳ ಕುರಿತು ಪದ್ಯ ಬರೆಯುತ್ತೇನೆಂದು ಸದ್ಯ ಪ್ರೀತಿಯಲ್ಲಿ ಮತ್ತೊಮ್ಮೆ ಒದ್ದೆಯಾಗಲು ಕಾಯುತ್ತಿದೆಯಂತೆ!..

     ಹುಡುಗೀ.. ಋತುಮಾನವೆಲ್ಲ ನಿನ್ನದೇ ಗುಂಗಿನಲಿ ಬೀಗಬೇಕೆಂದು ಕಾದು ಕುಳಿತವನು ನಾನು.. ಮುದ್ದು ಮುದ್ದು ಅಂತರದಲ್ಲಿ ಅದೇನೋ ಸೆಳೆತ.. ಇದ್ದರೂ ಇಲ್ಲದಂತೆ, ಒಮ್ಮೊಮ್ಮೆ ಉಬ್ಬು ತಗ್ಗುಗಳಲ್ಲೆಲ್ಲಾ ಅಲೆದಲೆದು ಇಳಿದಿಳಿದು ಬಸವಳಿದು, ಕಣಿವೆಯಲ್ಲರಳಿದ ಹೂವ ಕಿಸೆಯಲ್ಲಿ ಜೋಪಾನವಾಗಿಟ್ಟು, ಬೊಗಸೆಯಲ್ಲೇ ತಬ್ಬುವ ಭಾಗ್ಯ ತೊದಲಿದಾ ತಕಧಿಮಿತಾ.. ಪೂರ್ತಿ ದಕ್ಕುವ ಪರಿಚಯದ ದಿಕ್ಕಾಗಬೇಡ ಹುಡುಗೀ..ಮೊಗ್ಗು ಮುಸುಕಿದ ಇಡಿಯ ಪಲ್ಲಂಗದಿ ಅರ್ಧ ಅರ್ಧವೇ ಆವರಿಸು.. ಅರಳುವಾಗಲೂ ಇರಲಿ ಅಲ್ಪ ವಿರಾಮ...


 ~`ಶ್ರೀ'
     ತಲಗೇರಿ 

ಸೋಮವಾರ, ಆಗಸ್ಟ್ 8, 2016

ಮನುಷ್ಯರು...

ಕಂಕುಳ ಬಿಸಿಯಲ್ಲಿ
ಸಿಕ್ಕಿಸಿಕೊಂಡ ಹೂವಿಗಿಂತ
ಆಚೆ ಮನೆಯ ಬೇಲಿ ಸಂಧಿಯಲಿ
ಬೀಡುಬಿಟ್ಟ ಮೊಗ್ಗು
ತಡವುತ್ತದೆ ರೋಮಗಳ ಹೆಚ್ಚೆಚ್ಚು..
ಆಗಲೂ ಮನುಷ್ಯರು ನಾವು...

ಕಾಮಾಟಿಪುರದ ಗಲ್ಲಿಗಲ್ಲಿಯ
ಕತ್ತಲಲಿ ಅಲೆದಲೆದು
ಸುಸ್ತಾಗಿ ಪಡೆದದ್ದು ಭಾಸ!
ಭೇದಿಸಿದ ರಹಸ್ಯದಸ್ತಿತ್ವಕೆ
ಬೇಕೇನು ಸುಟ್ಟಗಾಯದ
ಸುತ್ತ ಜಾರಿದ ಹನಿಗಳ ಸಾಕ್ಷಿ..
ಕತೆಯಾಗುತ್ತದೆ
ಕಪ್ಪು ಬಿಳುಪಿನ ಏರಿಳಿತಕ್ಕೆ
ಅಂಗಿಗಂಟಿದ ಬೆವರು..
ಆಗಲೂ ಮನುಷ್ಯರು ನಾವು...

ಋತುಮಾನಗಳಿಗೆ ಗೋಗರೆದು
ಎದೆರಸವ ಬಸಿದು
ಮೊಳಕೆಗೆಂದು ಬಿಟ್ಟಿದ್ದ
ಬೀಜಗಳ ಮೈಯೆಲ್ಲಾ
ಕೆಂಪು ಸಾಲಿನ ಗೀರುಗಳು..
ಬರಿಯ ರಕ್ತದ ವಾಸನೆಗೆ
ತೀರುವುದೇ ಯಾರ ಹಸಿವೂ!..
ಆಗಲೂ ಮನುಷ್ಯರು ನಾವು...

ಕೊಳೆತು ನಾರುವ
ಆಸ್ಪತ್ರೆಯ ತೊಟ್ಟಿಯಲ್ಲಿ
ಕಣ್ಬಿಟ್ಟಿರದ ಧ್ಯಾನಸ್ಥ ಹೆಣ..
ಮಡಚಿಕೊಳ್ಳುತ್ತದೆ ಪುಟ್ಟ ಪ್ರಪಂಚ
ಸೆರಗು ಹೊರಗಿನ ಗೋಡೆಯಲ್ಲಿ..
ಇನ್ನೆಲ್ಲೋ ನಿಲ್ಲುತ್ತದೆ ಗಕ್ಕನೆ
ಕೊಸರುತ್ತ, ಅರ್ಧ ಮುರಿದ
ಬೀದಿದೀಪಗಳಡಿಯಲ್ಲಿ
ತಾಜಾ ಚರ್ಮ ಹರಿದು
ಯಾರದೋ ಅಕ್ಕತಂಗಿಯ ಉಸಿರು..
ಈಗಲೂ?!...

             
                                          ~`ಶ್ರೀ'
                                              ತಲಗೇರಿ

ಬುಧವಾರ, ಆಗಸ್ಟ್ 3, 2016

"ಪ್ರಕ್ರಿಯೆ"...

ಧರೆಯೊಳಗೆ ಅಧರವನ್ನಿಟ್ಟು
ಎಂದೋ ಕದ್ದ ಗುಲಾಬಿ ಪಕಳೆಗೆ
ಬಿಂಕ ತುಂಬಿದ ಕಾಲ..
ದಾರಿ ತುಂಬ ಸುಳಿವು
ಅಲೆದಿದ್ದು ಯಾಕೆ!..
ದುಂಬಿಗೀಗ ತಿಳಿದಿಹುದು
ಅರೆ ಒಗರು ಜೇನ
ನೀನಲ್ಲಿ ಮೆತ್ತಿದ್ದು...

ತಗ್ಗಿನಲೂ ಉಬ್ಬುಗಳ
ಕಾಯ್ದುಕೊಳ್ಳುವಿಕೆ ಹೊಸತಲ್ಲ
ಪ್ರಕೃತಿಗೆ...
ಬಣ್ಣದಾ ಹನಿ
ಜಾರಿದಾ ಬಳಿಕವೂ
ಹಗ್ಗದಂತೆ ಹುರಿಗೊಳಿಸಿ
ಮೈಗಂಟಿಕೊಂಬುದರ
ತಾತ್ಪರ್ಯವೇನು!
ಕಣಿವೆಯ ಅಂಚುಗಳ
ತೀಡಿತೇ ಮಳೆಬಾನು...

ಕಳೆದದ್ದು ಹುಡುಕುವುದು
ಕಳೆದುಹೋದದ್ದರಲ್ಲಲ್ಲ;
ಉಳಿದುಕೊಂಡಿದ್ದರಲ್ಲಿ!..
ಬೆಳಕು ತೀರಿದ್ದು
ಕಾವು ಇಳಿಯಿತೆಂದಲ್ಲ;
ಟಿಸಿಲೊಡೆವ ಗಳಿಗೆಗೆ
ಮತ್ತೆ ಅಣಿಯಾಗಲೆಂದು..
ಯಾರೋ ಬಚ್ಚಿಟ್ಟ ಹಿತವಿದೆ
ಅಲ್ಲೂ ಇಲ್ಲೂ;
ಕಪ್ಪಿನಲಿ ಕರಗಿರುವ
ಕಸುವ ಹುಡುಕುವುದರಲ್ಲಿ..
ಮೈಬಿರಿದು, ತೊದಲಿಗೆ
ಬಿಡಿಬಿಡಿಯ ಕಡಲಾಗುವುದರಲ್ಲಿ..
ಹಗಲು ಹರೆಯದಿ ಕೊಟ್ಟ
ಕಲೆಯಿಹುದು ಚಂದ್ರನಲ್ಲೂ..!

                        ~‘ಶ್ರೀ’
                          ತಲಗೇರಿ

ಮಂಗಳವಾರ, ಆಗಸ್ಟ್ 2, 2016

ಮಳೆಗಾಲದಲ್ಲಿ ನಾ ಕಂಡ ‘ಗ್ರಹಣ’

    ಶ್ರೀ ಎಸ್ ಎಲ್ ಭೈರಪ್ಪನವರ ಕಾದಂಬರಿ ‘ಗ್ರಹಣ’. ಗ್ರಹಣದ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು ರೂಪುಗೊಂಡಂತಹ ಕಾದಂಬರಿ ಇದು. ಮನೋವೈಜ್ಞಾನಿಕ ವಿಷಯಗಳ ಜೊತೆಗೆ ಧರ್ಮದ ತಳಹದಿಯೊಟ್ಟಿಗೆ ಮತ್ತೆ ಒಂದಷ್ಟು ನಂಬಿಕೆಗಳ ಪ್ರಶ್ನೆಗಳು ಸೇರಿಕೊಂಡಂತಹ ವಿಶೇಷ ಕೃತಿ. ವಿಭಿನ್ನ ಕಥಾವಸ್ತು, ಧರ್ಮದ ಬಗೆಗಿನ ವಿಶ್ಲೇಷಣೆ, ಸ್ವಾವಲಂಬನೆಯ ಪರಿಕಲ್ಪನೆ, ಅಂತಃಸತ್ವಗಳ ದೃಢತೆ ಮುಂತಾದವುಗಳು ಇಲ್ಲಿನ ಪ್ರಮುಖ ಅಂಶಗಳು.

   ಗ್ರಹಣದ ಬಗೆಗಿನ ವೈಜ್ಞಾನಿಕ ಉಪನ್ಯಾಸದೊಂದಿಗೆ ಆರಂಭವಾಗುವ ಕತೆ ಮುಂದೆ ಇನ್ನಷ್ಟು ಆಳಕ್ಕಿಳಿಯುತ್ತದೆ. ಮುಖದ ತೇಜಸ್ಸಿಗೆ ವರ್ಣ ಕಾರಣವಲ್ಲ, ಕಲಿತ ವಿದ್ಯೆ ಕಾರಣ ಅನ್ನುತ್ತಾ ಶ್ರೀಯುತರು ಜ್ಞಾನದ ಮಹತ್ತತೆಯನ್ನು ಹೇಳಿದ್ದಾರೆ. ವಿಜ್ಞಾನವನ್ನು ಎಷ್ಟೇ ನಂಬಿದರೂ ಭಾರತೀಯರ ಮನಸ್ಸಿನಲ್ಲಿರುವ ಗ್ರಹಣದ ಪರಿಕಲ್ಪನೆ, ಸಂಬಂಧಗಳ ವಿಷಯ ಬಂದಾಗ ವಿಜ್ಞಾನಕ್ಕಿಂತ ನಂಬಿಕೆಗಳಿಗೆ ಒತ್ತುಕೊಡುವ ಜನಾಂಗದ ಮನಃಸ್ಥಿತಿ ಇಲ್ಲಿ ವ್ಯಕ್ತ. ಒಂದೊಮ್ಮೆ ದ್ವೇಷಿಸಿದವರೂ ಮುಂದೊಮ್ಮೆ ಆಪ್ತರಾಗಬಹುದಾದ ಸಾಧ್ಯತೆಯನ್ನು  ಹೇಳಿದ್ದಾರೆ. ಆಶ್ರಮ ಪದ್ಧತಿಯ ವಿಶ್ಲೇಷಣೆ ಇದರ ಮೂಲ ಕಥಾವಸ್ತುವಾಗಿದೆ. ಅದರಲ್ಲೂ ಸನ್ಯಾಸ ಮತ್ತು ಗಾರ್ಹಸ್ಥ್ಯದ ನಡುವಣ ತಾಕಲಾಟಗಳು ಪ್ರತಿಬಿಂಬಿಸಲ್ಪಟ್ಟಿವೆ.

   ಸನ್ಯಾಸಿಯಂತೆ ಜೀವನ ನಡೆಸಿದಾತ ಇದ್ದಕ್ಕಿದ್ದಂತೆ ಮದುವೆಯಾಗುತ್ತೇನೆಂದರೆ ಅದು ತಪ್ಪಾಗುತ್ತದೆಯೇ? ಅದು ಚಿಂತಿಸುವವರ ಮನಃಸ್ಥಿತಿಗಳ ಮೇಲೆ ನಿರ್ಧರಿಸಲ್ಪಡುತ್ತದೆ. ಒಂದು ಕೆಲಸ ಮಾಡುವಾಗ ಅದಕ್ಕೊಂದು ಪ್ರೇರಣೆ, ನೈತಿಕ ಸ್ಥೈರ್ಯ ಮತ್ತು ಒಂದು ಶಕ್ತಿಶಾಲಿ ಹಿನ್ನೆಲೆ ಬೇಕು ಎನ್ನುತ್ತಾ ಬಹುಶಃ ಅದಕ್ಕಾಗಿಯೇ ದೇವರ ಅಸ್ತಿತ್ವ ಬಲವಾಯಿತೇನೋ ಎನ್ನುವ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಪ್ರತಿಯೊಂದು ಕ್ರಿಯೆಗೂ ಒಂದು ನಿಮಿತ್ತವಿರಬೇಕು. ಎಲ್ಲ ಕ್ರಿಯೆಗಳಲ್ಲೂ ಒಂದು ಇನ್ನೊಂದನ್ನು ಉದ್ದೀಪಿಸುವಂತಿರುತ್ತವೆ; ಪರೋಕ್ಷ ಅಥವಾ ಅಪರೋಕ್ಷವಾಗಿ.. ದೇವರು ಅನ್ನುವುದು ನಮ್ಮ ಅಜ್ಞತೆಯನ್ನು ಮುಚ್ಚಿಕೊಳ್ಳುವ ಒಂದು ಒಣಮಾತು ಅನ್ನುತ್ತಾ ಒಂದು ವಿಭಿನ್ನ ವಾದವನ್ನು ಮಂಡಿಸುತ್ತಾರೆ. ಹಿಮಾಲಯ ಅನ್ನುವುದು ಕೇವಲ ಭೌತವಸ್ತುವಾಗದೆಯೇ ಅಹಂಕಾರವನ್ನು ಮೆಟ್ಟಿ ನಿಲ್ಲುವ ಒಂದು ಪ್ರಚಂಡ ಶಕ್ತಿ, ಇಂತಹ ಶಕ್ತಿಯನ್ನೇ ದೈವತ್ವವೆನ್ನಬಹುದೆಂಬ ಅರ್ಥಕ್ಕೆ ಇಲ್ಲಿ ನೆಲೆಯಿದೆ. ಮಾಡುವ ಕೆಲಸಕ್ಕೆ ಪ್ರತಿಯಾಗಿ ಏನನ್ನಾದರೂ ಪಡೆಯಬಹುದು, ಇಲ್ಲದಿದ್ದಲ್ಲಿ ಅದು ಅಹಂಕಾರಕ್ಕೆಡೆ ಮಾಡಬಹುದು ಎಂಬ ಸಂಶಯವನ್ನೂ ಹೊರಹಾಕಿ, ಸೇವೆ ಎನ್ನುವುದು ಪವಿತ್ರವಾದದ್ದು, ಆದರೆ ಅದಕ್ಕೆ ಮತಧರ್ಮವೆಂಬ ಆಧಾರ ಬೇಕೆ? ಇದ್ಯಾವುದೂ ಇಲ್ಲದೆಯೂ ಸೇವೆ ಇರಲಾರದೇ, ಇರಬಾರದೇ ಎಂದು ಪ್ರಶ್ನಿಸುತ್ತಾರೆ. ದಯವಿಲ್ಲದ ಧರ್ಮವಿಲ್ಲ ಧರ್ಮವಿಲ್ಲದ ದಯವೂ ಇಲ್ಲ, ಪರೋಪಕಾರಕ್ಕೆ ಅಧ್ಯಾತ್ಮದ ಆಧಾರವೇ ಬೇಕಿಲ್ಲ, ಸಹಕಾರ ಅನ್ನೋದು ಕೆಳವರ್ಗದ ಪ್ರಾಣಿಗಳಲ್ಲಿಯೂ ಇರುತ್ತದೆ ಅನ್ನುವ ಮಾತು, ಮಾನವನ ಹೆಚ್ಚುವಂತಿಕೆಯ ಜಂಭಕ್ಕೆ ಕಡಿವಾಣ ಹಾಕುತ್ತದೆ.

   ಸನ್ಯಾಸವೆಂದರೆ ಸಾಗರ, ಮಾತೃ ಗರ್ಭದಿಂದ ಹೊರಬಂದು ಮಗುವಿನಂತೆ ಹರಿದು, ಗೃಹಸ್ಥನಾಗಿ ಹರವಿಕೊಂಡು, ವಾನಪ್ರಸ್ಥನಂತೆ ಸಮುದ್ರ ತಟದಲ್ಲಿ ಹರಿದು, ಅನಂತರ ಮಹಾಜಲದಲ್ಲಿ ತನ್ನ ಪ್ರತ್ಯೇಕತೆಯನ್ನು ಅಳಿಸಿಹಾಕುತ್ತದೆ ಈ ನದಿ. ಸನ್ಯಾಸವೆಂದರೆ ಐಕ್ಯತೆಯ ಅಥವಾ ಸಂಗಮದ ಸಮಯ. ತನ್ನ ಅಸ್ತಿತ್ವವನ್ನು ಇನ್ನೊಂದು ಮಹಾನ್ ಅಸ್ತಿತ್ವದೊಂದಿಗೆ ಬೆರೆಸಿ ಆ ಶಕ್ತಿಯಲ್ಲಿ ಲೀನವಾಗುವ ಪ್ರಕ್ರಿಯೆ. ಉಗಮವು ಯಾವಾಗಲೂ ಕೆಳಗಿನ ಪಾತ್ರಕ್ಕಿಂತ ಸಣ್ಣದು, ಬೆಟ್ಟ ಗುಡ್ಡಗಳ ಸಾವಿರಾರು ಜಿನುಗು ಸ್ಥಳಗಳ ನೀರು ಕೂಡಿ ಹರಿದು ಕೆಳಗಿನ ವಿಸ್ತಾರದಿಂದ ನದಿ ಎಂಬ ಹೆಸರನ್ನು ಪಡೆಯುತ್ತದೆ. ಈ ಜಿನುಗುಗಳಲ್ಲಿ ಎದ್ದು ಕಾಣುವಂಥದ್ದನ್ನು ಗುರುತಿಸಿ ಅದಕ್ಕೆ ಮೂಲದ ಪಟ್ಟ ಕಟ್ಟುತ್ತೇವೆ. ಇಷ್ಟೇ ನಮ್ಮ ತಿಳಿವಳಿಕೆ ಎಂದು ತಿಳಿಸುತ್ತಾರೆ. ಶುದ್ಧ ನೀತಿಯ, ಆತ್ಮ ಸಾಕ್ಷಿಯ ಜೀವನ ನಡೆಸುವುದು ಸಂಸಾರಿಗೆ ಸಾಧ್ಯವಿಲ್ಲ; ಅದಕ್ಕೇ ಅದನ್ನು ಬಂಧನವೆನ್ನುತ್ತಾರೆ ಅನ್ನುವಾಗ ಅರ್ಥಕ್ಕೀಗ ರೆಕ್ಕೆ ಮೂಡುತ್ತದೆ. ಗೆಲುವು ಸೋಲುಗಳು ಕೇವಲ ಭಾಸಗಳು ಅನ್ನುವ ಸತ್ಯ ಇಲ್ಲಿ ಹೇಳಲ್ಪಟ್ಟಿದೆ. ಸನ್ಯಾಸ ಅನ್ನುವುದನ್ನು ಪ್ರತಿಯೊಬ್ಬ ಸಂಸಾರಿಯೂ ಪಾಲಿಸತಕ್ಕದ್ದು, ಅದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗ.

   ಮನುಷ್ಯನಿಗೆ ಬದುಕುವುದಕ್ಕೆ ಪೊರೆಯ ಅಗತ್ಯ ಬೇಕೇ? ಎಂದು ಕೇಳುತ್ತಾ, ಬಿರುದನ್ನು ಸ್ವೀಕರಿಸಿದವನು ತನ್ನ ಸ್ವಂತ ಹೆಸರನ್ನು ಕಳೆದುಕೊಂಡಂತೆಯೇ ಅನ್ನುತ್ತಾರೆ. ಹೆಸರಿನೊಂದಿಗೆ ವ್ಯಕ್ತಿತ್ವವನ್ನು ತಳುಕು ಹಾಕಿ ಆತ್ಮವಿಮರ್ಶೆ ಮಾಡಿಕೊಳ್ಳುವುದಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಮಗುವಿಗೆ ಹೆಸರಿಡುವಾಗ ಯಾರೂ ಅದರ ಒಪ್ಪಿಗೆಯನ್ನು ಕೇಳುವುದಿಲ್ಲ, ಮಗುವಿನೊಂದಿಗೆ ಹೆಸರೂ ಬೆಳೆಯುತ್ತದೆ, ಹೆಸರಿನೊಂದಿಗೆ ಮಗುವೂ.. ವ್ಯಕ್ತಿತ್ವ ಮತ್ತು ಹೆಸರು ಅವಿಭಾಜ್ಯವಾಗುತ್ತದೆ; ಹೆಸರು ಬದಲಾದರೆ ವ್ಯಕ್ತಿತ್ವ ಬದಲಾದಂತೆ ಅನ್ನುತ್ತಾ ಪ್ರತಿಯೊಬ್ಬರ ಬದುಕಿನಲ್ಲಿ ಹೆಸರೆನ್ನುವುದು ಅಸ್ತಿತ್ವದ ಕುರುಹೇ? ಎಂಬುದನ್ನು ಯೋಚಿಸುವಂತೆ ಮಾಡುತ್ತಾರೆ.

  ಒಂದು ವಿಭಿನ್ನ ಮನೋರೋಗವನ್ನು ಕತೆಯಲ್ಲಿ ಸಮರ್ಥವಾಗಿ ಬಳಸಲಾಗಿದೆ. ಮೋಹ ಮನಸ್ಸನ್ನು ಮುಚ್ಚುವಂಥದ್ದು ಪ್ರೀತಿ ಮನಸ್ಸನ್ನು ತೆರೆಯುವಂಥದ್ದು. ತುಂಬಿದ ಎಲ್ಲ ಕರಿಮೋಡ ಮಳೆ ತರಿಸುವುದಿಲ್ಲ; ಇದ್ದ ಮೋಡ ಮುಂದೆ ಸಾಗುತ್ತದೆ, ಹೊಸ ಮೋಡ ಬರುತ್ತದೆ ಅನ್ನುತ್ತಾ ಯೋಚನೆಗಳ ಪ್ರಕ್ರಿಯೆಯನ್ನು ಅವುಗಳಿಂದುಂಟಾಗುವ ಸನ್ನಿವೇಶಗಳನ್ನು ಬಣ್ಣಿಸಿದ್ದಾರೆ. ಮಳೆಯಲ್ಲಿ ನಿಂತ ಕೈ ಗಡಿಯಾರ ಮತ್ತೆ ಸದ್ದು ಮಾಡಲಿಲ್ಲ ಅನ್ನುತ್ತಾ ಆ ಕತೆಯಲ್ಲಿನ ಒಂದು ಪಾತ್ರದ ಸಂಬಂಧದ ಪರಿಸ್ಥಿತಿಯನ್ನು ಹೇಳಿದ ಪರಿ ಚೆಂದ.

  ಹೀಗೆ, ಗ್ರಹಣ ಅನ್ನುವುದು ಒಂದಷ್ಟು ಹೊತ್ತಿನ ಮಂಕೇ? ಎಂದು ವಿಶ್ಲೇಷಣೆಗೊಳಪಡಿಸಿದ, ಆಶ್ರಮ ಪದ್ಧತಿಯ ಕೊನೆಯ ಸ್ತರವಾದ ಸನ್ಯಾಸಕ್ಕೆ ಧುಮುಕಿ ಮತ್ತೆ ಗೃಹಸ್ಥನಾಗುವ ಬಯಕೆ ಏನೆಲ್ಲಾ ಪರಿವರ್ತನೆಗಳನ್ನು ತರಬಲ್ಲದು, ಅದರ ಪರಿಣಾಮಗಳೇನಾಗಬಹುದು, ಪ್ರಕೃತಿ ನಿಯಮದ ವಿಶೇಷತೆಗಳೇನು, ಧರ್ಮಕ್ಕೆ ಯಾವ ವ್ಯಾಖ್ಯಾನ ಕೊಡಬಹುದು ಎಂಬಿತ್ಯಾದಿ ಪ್ರಶ್ನಾವಳಿಗಳ ಒಟ್ಟು ಮೊತ್ತ ಗ್ರಹಣ. ಕೆಲವರಿಗೆ ಕತೆ ಅಪೂರ್ಣವೆನಿಸಿದರೆ ಕೆಲವರಿಗೆ ಪೂರ್ಣ ಅನಿಸಬಹುದು. ಯಾವುದೇ ಕತೆಯಲ್ಲಾದರೂ ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಅಂತ್ಯ ಇರುತ್ತದೆ. ಆ ಅಂತ್ಯಕ್ಕೂ ಒಂದು ಅರ್ಥ ಇರುತ್ತದೆ. ನನಗೀ ಕತೆ ಅಪೂರ್ಣವಾದಂತೆ ಕಂಡಿಲ್ಲ, ತಾವೂ ಒಮ್ಮೆ ಓದಿ, ಅಭಿಪ್ರಾಯ ಹಂಚಿಕೊಳ್ಳಿ...

                                                                                                                               ~‘ಶ್ರೀ’
                                                                                                                                  ತಲಗೇರಿ

"ಯಾನ"ದ ಜೊತೆ ಮಳೆಗಾಲದ ಸಂಜೆ...

     ಶ್ರೀ ಎಸ್ ಎಲ್ ಭೈರಪ್ಪನವರಿಂದ ರೂಪುಗೊಂಡಂತಹ ಕಾದಂಬರಿ ‘ಯಾನ’..ನನ್ನ ಬುದ್ಧಿಮಟ್ಟಕ್ಕೆ ನಿಲುಕಿದಷ್ಟನ್ನು ತಮ್ಮೊಂದಿಗೆ ಹಂಚಿಕೊಳ್ಳುವಾಸೆ, ಅದಕ್ಕಾಗಿಯೇ ಈ ಲೇಖನ..

    ಬರೆಯುವಿಕೆಯನ್ನ ತಪಸ್ಸಂತೆ ಸ್ವೀಕರಿಸಿದವರಲ್ಲಿ ಶ್ರೀಯುತರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಬಹುಶಃ ಇಂಥದ್ದೊಂದು ವಸ್ತುವನ್ನು ಇಷ್ಟು ಸಮರ್ಥವಾಗಿ ಇವರು ಮಾತ್ರವೇ ಬರೆಯಲಿಕ್ಕೆ ಸಾಧ್ಯ ಅನಿಸುತ್ತದೆ. ವಿಭಿನ್ನ ದೃಷ್ಟಿಕೋನದಲ್ಲಿ ಎಲ್ಲಿಯೂ ಲಯ ತಪ್ಪದಂತೆ ಒಂದು ವಿಷಯವನ್ನು ಮಂಡಿಸುವುದು ಅಷ್ಟು ಸುಲಭದ ಕೆಲಸವಲ್ಲ. ಈ ಕಾದಂಬರಿಯಲ್ಲಿ ಎಲ್ಲವುಗಳ ಸಮಾಗಮವಿದೆ. ಅವರೇ ಹೇಳಿರುವಂತೆ, ಇದು ಕೇವಲ ವಿಜ್ಞಾನದ ಕತೆಯಲ್ಲ; ಯಾವುದೇ ವರ್ಗಕ್ಕೂ ಸೇರುವುದಿಲ್ಲ. ಮನುಷ್ಯನ ಅನುಭವಗಳ ಶೋಧದ ಗುಚ್ಛ ಇದು, ಅಸ್ತಿತ್ವದ ಹುಡುಕಾಟ ಇದು. ಒಂದಷ್ಟು ನಂಬಿಕೆಗಳನ್ನ ಪ್ರಶ್ನಿಸುತ್ತಲೇ ಅದರಾಳಕ್ಕೆ ನಮ್ಮನ್ನೂ ಇಳಿಸಿ, ಮತ್ತೆ ಅಲ್ಲೇ ಉತ್ತರವನ್ನೂ ದೊರಕಿಸುವ ಅವರ ಪಾಂಡಿತ್ಯಕ್ಕೆ ಯಾರಾದರೂ ಶರಣಾಗಲೇಬೇಕು. ಒಂದು ಕಾದಂಬರಿ ಬರೆಯುವಾಗ ಪೂರ್ವಭಾವಿಯಾಗಿ ಒಂದಷ್ಟು ಸಂಶೋಧನೆಗಳಿರುತ್ತವಲ್ಲಾ, ಬಹುಶಃ ಮತ್ತ್ಯಾರೂ ಒಂದು ಕಾದಂಬರಿಗಾಗಿ ಇಷ್ಟು ಆಳಕ್ಕಿಳಿಯುವುದಿಲ್ಲವೇನೋ; ಕೇವಲ ಆಳವಲ್ಲ, ವಿಸ್ತಾರಕ್ಕೂ ಕೂಡ...

    ಅಸ್ತಿತ್ವದ ಹುಡುಕಾಟದ ಈ ಕತೆ ಒಂದು ವಿಶಿಷ್ಟ ವಿಷಯದೊಂದಿಗೆ ಶುರುವಾಗುತ್ತದೆ. ಅಕ್ಕ ಮತ್ತು ತಮ್ಮನ ನಡುವಿನ ಮದುವೆ..! ಅಲ್ಲಿಂದಲೇ ಕಾದಂಬರಿ ನನ್ನನ್ನ ಸಂಪೂರ್ಣವಾಗಿ ಆವರಿಸಿಕೊಂಡುಬಿಟ್ಟಿತು. ಮೇಲ್ನೋಟಕ್ಕೆ ನಮ್ಮ ನಂಬಿಕೆಗಳಿಗೆ ವಿರುದ್ಧವಾಗಿರುವಂತೆ ತೋರಿದರೂ ಕೊನೆಯಲ್ಲಿ ಇದಕ್ಕೆ ನ್ಯಾಯ ಒದಗಿಸುತ್ತಾರೆ. ನಮ್ಮೆಲ್ಲರ ಮನಸುಗಳ ಪಾವಿತ್ರ್ಯವನ್ನ ಎತ್ತಿ ಹಿಡಿಯುತ್ತಾ ಭಾರತೀಯತೆಯನ್ನ ಮತ್ತೆ ಮತ್ತೆ ಪ್ರತಿಬಿಂಬಿಸುತ್ತಾರೆ. ಕರ್ತವ್ಯ ಮತ್ತು ನೈತಿಕತೆಯ ವಿಷಯ ಬಂದಾಗ ಕರ್ತವ್ಯವನ್ನೇ ಮೊದಲಾಗಿಸಿ, "ಕ್ಷೇತ್ರೇ ಕ್ಷೇತ್ರೇ ಧರ್ಮಂ ಕುರು" ಎಂಬ ತತ್ತ್ವಕ್ಕೆ ಒತ್ತು ಕೊಡುತ್ತಾರೆ. ಒಂದು ವಿಶಿಷ್ಟ ಕರ್ತವ್ಯವನ್ನು ಪೂರೈಸಬೇಕಾದ ಹೆಣ್ಣೊಬ್ಬಳಿಗೆ ನೈತಿಕತೆ ಮತ್ತು ಕರ್ತವ್ಯದ ಬಗೆಗಿನ ದ್ವಂದ್ವಕ್ಕೆ ಸಮರ್ಥ ಧ್ವನಿ ಈ ಕಾದಂಬರಿಯಲ್ಲಿದೆ. ಕೇದಾರನಾಥನನ್ನು ಬಣ್ಣಿಸುತ್ತಾ ಒಂದಷ್ಟು ವರ್ಷಗಳ ಹಿಂದಿನ ಭಾರತದ ಭೌಗೋಳಿಕ ಸ್ಥಿತಿ ಮತ್ತು ಇಂದಿನ ಭಾರತದ ಪರಿಸ್ಥಿತಿಯನ್ನ ಹೇಳುತ್ತಾರೆ. ವಾಣಿಜ್ಯೀಕರಣದ ಸ್ಪರ್ಶದಿಂದ ಪವಿತ್ರ ಕ್ಷೇತ್ರಗಳಲ್ಲಾಗುವ ಬದಲಾವಣೆಗೆ ಮನಸ್ಸು ದುಃಖಿಸುತ್ತದೆ. ಜೊತೆಗೆ ವೈಜ್ಞಾನಿಕತೆಯ ಇಂದಿನ ಯುಗದಲ್ಲೂ ಅಪ್ಪಟ ಭಾರತೀಯ ನಾರಿಯೋರ್ವಳ ಮನಃಸ್ಥಿತಿ ಹೇಗಿರುತ್ತದೆ ಅನ್ನುವುದನ್ನ ಕತೆಯುದ್ದಕ್ಕೂ ಹೇಳುತ್ತಾ ಸಾಗುತ್ತಾರೆ; ಅದು ಭಾರತದ ಪೂಜನೀಯ ಸ್ಥಾನಕ್ಕೆ ಪುಷ್ಟಿ ಕೊಡುತ್ತದೆ. ಇಲ್ಲಿನ ನಾರಿ ಎಂದಿಗೂ ಪ್ರಬುದ್ಧಳು, ಮಾನಸಿಕವಾಗಿ ಹಾಗೇ ದೈಹಿಕವಾಗಿ ಅಷ್ಟೇ ಗಟ್ಟಿಗಳು ಅನ್ನುತ್ತಾ ಅವಳ ಮಹತ್ತತೆಯನ್ನ ಗಹನತೆಯನ್ನ ಪಾವಿತ್ರ್ಯತೆಯನ್ನ ಪ್ರತಿಧ್ವನಿಸುತ್ತಾರೆ.

    ಜಗತ್ತಿನಲ್ಲಿ ಅದೆಷ್ಟೇ ಧರ್ಮಗಳಿದ್ದರೂ, ಎಲ್ಲ ನಂಬಿಕೆಗಳೂ ಆಯಾ ಕಾಲಘಟ್ಟಕ್ಕೆ, ಆಯಾ ಪರಿಸ್ಥಿತಿಗೆ ತಕ್ಕಂತೆ ಪುನರ್ರಚನೆಗೊಳ್ಳುತ್ತವೆ. ಆ ಧರ್ಮಗಳ ಹೊರತಾಗಿಯೂ ಕೆಲವೊಮ್ಮೆ ನಂಬಿಕೆಗಳು ಅಸ್ತಿತ್ವ ಪಡೆಯುತ್ತವೆ. ಪರಿಸ್ಥಿತಿಗೆ ತಕ್ಕಂತೆ, ಮನಃಸ್ಥಿತಿಗೆ ತಕ್ಕಂತೆ ಒಂದು ವಿಷಯ/ವಸ್ತು ವಿಭಿನ್ನ ಅರ್ಥವನ್ನು, ವಿಭಿನ್ನ ದೃಷ್ಟಿಕೋನವನ್ನು ಪಡೆಯುತ್ತದೆ. ಅದಕ್ಕೆ ಉದಾಹರಣೆಯೆಂಬಂತೆ ಅರಳು ಮಲ್ಲಿಗೆಯಂತೆ ಕಂಡ ನಕ್ಷತ್ರ ಇನ್ನೊಮ್ಮೆ ಉರಿವ ಜ್ವಾಲೆಯಾಗಿ ಕಾಣುವಿಕೆಯನ್ನ ಹೇಳಿದ್ದಾರೆ. ಇದು ಒಂದೇ ವ್ಯಕ್ತಿಯ ಬೇರೆ ಬೇರೆ ಮನಃಸ್ಥಿತಿ ಮತ್ತು ಸನ್ನಿವೇಶಗಳಲ್ಲಿನ ಎರಡು ವಿಭಿನ್ನ ದೃಷ್ಟಿಕೋನಗಳು. ಅನಂತದ ಬಗೆಗಿನ ಆಸಕ್ತಿ, ಅನಂತತೆಯಲ್ಲೇ ಕೊನೆಗೊಳ್ಳುತ್ತದೆ. ಆಸಕ್ತಿ ಅಥವಾ ಮಗ್ನತೆ ಕೊನೆಯಲ್ಲಿ ನಮ್ಮನ್ನೇ ತಾನಾಗಿಸಿಕೊಳ್ಳುತ್ತದೆ. ಅದಕ್ಕಾಗಿಯೇ ಇಲ್ಲಿನ ಪ್ರತಿ ಪಾತ್ರವೂ ಒಂದೊಂದು ಭಾವವಾಗಿ ರೂಪುಗೊಂಡಿದ್ದು.. ವೈಜ್ಞಾನಿಕತೆ ಅನ್ನುವುದು ಅನಂತದ ಹೊರತಾಗಿಲ್ಲ; ಅದೂ ಕೂಡ ಪೂರ್ಣತೆ ಮತ್ತು ಶೂನ್ಯತೆಗಳ ಹುಡುಕಾಟದಲ್ಲಿದೆ..

    ಭೂಮಿಯಿಂದ ಆಚೆ ಬಂದಾಗ, ಹಿಮಾಲಯದಲ್ಲಿನ ಅವಘಡಗಳು ಬೆಂಗಳೂರಿನ ಸ್ವಂತ ಮನೆಯಲ್ಲಾಗುವ ಅವಘಡದಂತೆ ಏಕರೂಪವಾಗುತ್ತದೆ. ಒಂದು ಪರಿಧಿಯಿಂದಾಚೆಗೆ ಎಲ್ಲವೂ ಏಕತ್ವದಲ್ಲಿ ಸಂಗಮಿಸುತ್ತವೆ. ಪ್ರಜ್ಞೆ ಮತ್ತು ನೋವು ಒಂದಕ್ಕೊಂದು ಸಂಬಂಧಿಸಿದವುಗಳು.. ಇಲ್ಲಿ ಎಲ್ಲವೂ ನಮ್ಮ ಮನಃಸ್ಥಿತಿಗೆ ಸಂಬಂಧಿಸಿದ್ದು.. ನಮ್ಮ ಮನಃಸ್ಥಿತಿಗೆ ತಕ್ಕಂತೆ ಬದಲಾಗುತ್ತವೆ; ರೂಪುಗೊಳ್ಳುತ್ತವೆ.. ಒಂದಕ್ಕೊಂದು ಪರೋಕ್ಷವಾಗಿಯೋ ಅಪರೋಕ್ಷವಾಗಿಯೋ, ಆದರೆ ಪೂರಕವಾಗಿ.. ! ಎಲ್ಲಕ್ಕೂ ಒಂದು ಅಂತ್ಯ ಅನ್ನುವುದು ಇದ್ದೇ ಇದೆ; ಅದೇ ತರ ವೈಭವ ಅನ್ನುವುದು ಒಂದು ಸಲ ನೇಪಥ್ಯಕ್ಕೆ ಸರಿದ ಮೇಲೆ ಜನರ ಮನಸ್ಸಿನಿಂದಲೂ ಕ್ರಮೇಣ ಅದು ಮರೆಯಾಗುತ್ತದೆ, ಅದೇ ತರ ನಮ್ಮೆಲ್ಲರ ಬೇರೆ ಬೇರೆ ಸ್ತರಗಳ ಸ್ಥಿತಿಗಳು..

    ಸೂರ್ಯನನ್ನು ಸತ್ಯದ ನೆಲೆಯಾಗಿರಿಸಿಕೊಂಡು ಅದರ ಮೂಲವನ್ನು ಹುಡುಕುತ್ತಾ, ಕಪ್ಪು ರಂಧ್ರದಲ್ಲಿನ ವಿಸ್ಮಯವನ್ನ ಹೆಣ್ಣೊಳಗಿನ ಭಾವಕ್ಕೆ ಏಕೀರ್ಭವಿಸುತ್ತಾ, ತತ್ತ್ವಜ್ಞಾನ ಮತ್ತು ಭೌತವಿಜ್ಞಾನಗಳೊಂದಿಗೆ ಸಮೀಕರಿಸಿಕೊಂಡು ಹೋಗುವಿಕೆಯ ಚೆಂದವನ್ನ ನಾವಾಗೇ ಅನುಭವಿಸಬೇಕು. ನನ್ನೊಳಗೇ ನಾನಾಗಿ, ನಾನೇ ನನ್ನೊಳಗಾಗುವ ಪ್ರಕ್ರಿಯೆ, ಹಾಗೆಯೇ ಮೆದುಳು ಭೌತ ವಸ್ತುವೇ ಅಥವಾ ಭೌತ ವಸ್ತು ಎನ್ನುವುದು ಬುದ್ಧಿಯ ರೂಪವೇ ಎನ್ನುವಂತಹ ಸಿದ್ಧಾಂತ.. ಸತ್ಯವೆಂದರೇ ಬರಿ ಭಾವವೇ? ಅಂತ ಪ್ರಶ್ನಿಸುತ್ತಾ, ಸಾರ್ವಕಾಲಿಕ ಮತ್ತು ಸಾರ್ವದೇಶಿಕ ಸತ್ಯವೆಂಬುದಿಲ್ಲ ಅನ್ನುವುದನ್ನ ಅನಾವರಣಗೊಳಿಸುತ್ತಾರೆ. ಅರಿವಿನ ಅರಿವಿಲ್ಲದೇ ಅಪೂರ್ಣ ಎಲ್ಲಾ, ಒಲಿಯದ ಪ್ರಕೃತಿಯಿಂದ ವಿಮುಖನಾದಾಗ ಮಾತ್ರವೇ ಅಧ್ಯಾತ್ಮದ ಅಗತ್ಯ ಕಾಣುವುದು ಅನ್ನುತ್ತಾ, ನಾವು ಭಾರತೀಯರು ಗಂಡು ಹೆಣ್ಣಿನ ಮಿಲನವನ್ನು ಕೇವಲ ಭೌತಿಕ ಕ್ರಿಯೆಯಾಗಿ ಕಾಣುವುದಿಲ್ಲ, ಅದು ಕೇವಲದ ಭೌತಿಕತೆ ಅಲ್ಲಾ, ಅದು ಆತ್ಮಗಳಿಗೆ ಸಂಬಂಧಿಸಿದ್ದು ಅನ್ನುವುದನ್ನ ಸೂಚ್ಯವಾಗಿ ಹೇಳಿದ್ದಾರೆ.. ಹೀಗೇ ಭೌತವಿಜ್ಞಾನ, ತತ್ತ್ವಜ್ಞಾನ, ಖಗೋಳ, ಭೂಗೋಳ, ಮನಃಶ್ಶಾಸ್ತ್ರ ಹೀಗೆ ಹತ್ತು ಹಲವು ಮಜಲುಗಳ ಪ್ರಬುದ್ಧ ಅಂಶಗಳನ್ನು ಒಂದೇ ಕಡೆ ಕಲೆ ಹಾಕಿದ್ದು ಈ ಕಾದಂಬರಿಯಲ್ಲಿ ಕಂಡುಬರುತ್ತದೆ.. ನಿಮ್ಮಲ್ಲೂ ಯಾರಿಗಾದರೂ ‘ಯಾನ’ದ ಬಗೆಗೆ ಹೇಳಿಕೊಳ್ಳಬೇಕೆನಿಸಿದರೆ ದಯವಿಟ್ಟು ಹಂಚಿಕೊಳ್ಳಿ, ಹೊಸ ಜಗತ್ತಿಗೆ ಮತ್ತೆ ಮತ್ತೆ ತೆರೆದುಕೊಳ್ಳುತ್ತಾ ಇರೋಣ... :) :) :)

                                                                                                                                       ~‘ಶ್ರೀ’
                                                                                                                                          ತಲಗೇರಿ

ಎಚ್ಚೆಸ್ವಿ ಕಥಾಲೋಕದಲ್ಲೊಂದಷ್ಟು ಹೊತ್ತು...

     ‘ಎಚ್ಚೆಸ್ವಿ ಅವರ ಈವರೆಗಿನ ಕತೆಗಳು’ ಅನ್ನುವ ಪುಸ್ತಕದಲ್ಲಿ ಎಚ್ಚೆಸ್ವಿ ಅವರು ಬರೆದಂಥ ಕತೆಗಳನ್ನ ಕಲೆಹಾಕಲಾಗಿದೆ. ಆ ಪುಸ್ತಕದ ಜೊತೆ ನಾನು ಕಳೆದ ಕ್ಷಣಗಳನ್ನು ಹೀಗೆ ಹಂಚಿಕೊಂಬಾಸೆ...

     ಸುಮಾರು ಮೂವತ್ತು ವರ್ಷಗಳಿಗಿಂತಲೂ ಹಳೆಯದಾದ ಕತೆಗಳು ಈ ಪುಸ್ತಕದಲ್ಲಿರುವುದರಿಂದ, ಇಂದಿನ ಓದುಗನಿಗೆ ಒಂದು ಹೊಸ ಅನುಭವ ದಕ್ಕುತ್ತದೆ. ಕ್ರಾಂತಿಗಳೆಲ್ಲಾ ವೈಯಕ್ತಿಕ ಒತ್ತಡಗಳ ಮೂಲದಿಂದಾನೇ ಹುಟ್ಟುತ್ತವೋ ಏನೋ ಯಾರಿಗೆ ಗೊತ್ತು ಅನ್ನುತ್ತಾ ಅಂತರ್ಜಾತೀಯ ವಿವಾಹವಾಗಲು ಯೋಚಿಸುವ ಒಬ್ಬ ವ್ಯಕ್ತಿಯ ಬಗೆಗೆ ಹೇಳಿದ್ದಾರೆ. ಪ್ರವಾಹವನ್ನು ಪ್ರೇಮಕ್ಕೆ ಹೋಲಿಸಿ, ಕೊನೆಯಲ್ಲಿ ಕ್ಷಣ ಕ್ಷಣಕ್ಕೆ ಅವಳು ದೂರಾಗುತ್ತಿದ್ದಳು ಅನ್ನುವಾಗ ನಾವೇ ನಮ್ಮ ಸ್ವಂತದ್ದೇ ಏನನ್ನೋ ಕಳೆದುಕೊಳ್ಳುತ್ತಿದ್ದೇವೆ ಅನ್ನುವ ಭಾವ ಆವರಿಸಿಕೊಳ್ಳುತ್ತದೆ. ಪ್ರವಾಹ ಇಳಿಯುವುದು ಹೇಗೆ ಒಳ್ಳೆಯದೋ ಹಾಗೇ ಕೆಲವೊಮ್ಮೆ ದೂರಾಗುವ ಪ್ರೀತಿ ಕೂಡಾ ಭವಿಷ್ಯದ ಹಿತಕ್ಕಾಗಿ ಎಂಬುದನ್ನ ಸೂಚ್ಯವಾಗಿ ತಿಳಿಸಿದ್ದಾರೆ.

     ಅವರ ಇನ್ನೊಂದು ಕತೆಯಲ್ಲಿ, ಹೆಣವೊಂದು ದೇವಸ್ಥಾನದ ಎದುರಿಗಿದ್ದರೂ ಜನರು ತಮ್ಮದೇ ಧಾಟಿಗಳಲ್ಲಿ ಅದನ್ನು ವಿಶ್ಲೇಷಿಸಿ, ತಮ್ಮ ತಮ್ಮ ಕೆಲಸಗಳನ್ನು ಮುಗಿಸಿಕೊಳ್ಳುವತ್ತ ಗಮನ ಹರಿಸುತ್ತಾರೆ, ಶವ ಸಂಸ್ಕಾರಕ್ಕಾಗಿ ಒಟ್ಟಾದ ಹಣ ಅವಳ ಹಸಿವನ್ನು ನೀಗಿಸಲೂ ಸಹಾಯ ಮಾಡುತ್ತದೆ. ಅಸಹಾಯಕತೆ, ಆಸೆ ಕೊನೆಗೆ ಗಟ್ಟಿಯಾಗಿ ಅಳುವಲ್ಲಿಗೆ ಕಾಡುವ ವಿಷಯವಾಗಿ ಉಳಿಯುತ್ತದೆಯಷ್ಟೆ..

    ‘ತಲೆಗೊಂದು ಕೋಗಿಲೆ’ ಎನ್ನುವ ಕತೆಯಲ್ಲಿ ಊಹೆಯೆಂಬುದು ಕಟ್ಟುವಿಕೆಗೆ ಸಹಕಾರಿಯಾಗುತ್ತದೆ, ಆದರೆ ಯೋಚನೆ ಏನನ್ನೂ ಕಟ್ಟಲಾರದು ಎಂದು ಹೇಳುತ್ತಾರೆ. ಊಹೆ ಸುಳ್ಳನ್ನು ಅಲಂಕರಿಸುತ್ತದೆ, ಸತ್ಯವನ್ನು ಸುಳ್ಳಿನ ಕೋಟೆಯಲ್ಲಿಟ್ಟು ಕಾಪಾಡುತ್ತದೆ. ಪ್ರಾಣಿ ಪಕ್ಷಿಗಳ ಹೆಸರನ್ನು ಬರೆದಿಟ್ಟ ಹಲಗೆಗಳು ಯಾರಿಗಾಗಿ ಮತ್ತು ಯಾತಕ್ಕಾಗಿ ಇವೆ ಎಂದು ಕೇಳುತ್ತಾ ಅಸ್ತಿತ್ವದ ಬಗೆಗೆ ವಿಶ್ಲೇಷಿಸಿದ್ದಾರೆ.

     ಮನಸ್ಸಿನಲ್ಲಿರುವ ಆಸೆಗಳೇ ಕನಸುಗಳಾಗುತ್ತವೆ ಎಂಬುದು ‘ಉಳಿಕೆ’ ಕತೆಯಲ್ಲಿ ವ್ಯಕ್ತವಾಗಿದೆ. ಕಣ್ಣಿಗೆ ಕಾಣುವುದಷ್ಟೇ ಸತ್ಯ ಎನ್ನುವುದೂ ಸೂಚ್ಯ. ಬೆಳಕಿನಲ್ಲಿ ಕಲ್ಪನೆ ಬೆಳೆಯಲಾರದು, ಕತ್ತಲಿನಲ್ಲಿ ಮಾತ್ರವೇ ಕಲ್ಪನೆ ಬೆಳೆಯುವುದು, ಯಾಕಂದ್ರೆ ಕತ್ತಲೆಗೆ ನಿರ್ದಿಷ್ಟ ರೂಪು ಇರುವುದಿಲ್ಲ.. ಆದರೆ ಬೆಳಕಿನಲ್ಲಿ ಜಗತ್ತು ಸೀಮಿತವಾಗುತ್ತದೆ ಎಂಬುದು ಅತ್ಯಂತ ಆಳದ ವಿಷಯ. ಮರವೊಂದು ಉದುರಿದಾಗ ಅದರಲ್ಲಿ ಗೂಡು ಕಟ್ಟಿದ್ದ ಹಕ್ಕಿಗಳೆಲ್ಲಾ ಹಾರಿಹೋಗುತ್ತವೆ ಅನ್ನುವಾಗ ಸಂಬಂಧಗಳ ಪದರಗಳು ಒಂದೊಂದೇ ಕಳಚಿಕೊಂಡಂತಾಗುತ್ತದೆ.

    ಸಾಯುವ ಕನಸೂ ಕೂಡ ಕೆಲವೊಮ್ಮೆ ಸುಂದರವಾಗಿ ಕಾಣುತ್ತದೆ ಎಂದಾಗ, ಬದುಕಿನ ಬಗೆಗಿನ ಒಬ್ಬ ವ್ಯಕ್ತಿಯ ದ್ವೇಷ ಅನಾವರಣವಾಗುತ್ತದೆ. ಅವನು ಬದುಕಿನ ಕ್ರೂರ ಆಘಾತಕ್ಕೆ ಸಿಲುಕಿ ಅದೆಷ್ಟು ನಲುಗಿರಬಹುದು ಎಂಬುದು ತಿಳಿಯುತ್ತದೆ. ಅಸಹಾಯಕತೆ, ಬಡತನ ಇದ್ದರೂ ಕೂಡ ಬಿಡದ ಸ್ವಾಭಿಮಾನ ಒಂದು ವಿಶಿಷ್ಟ ಅಂಶವಾಗಿ ಸ್ಥಾನ ಪಡೆದ ಕತೆ ‘ಚಂಬಣ್ಣನ ಬೊಂಬೆ ವ್ಯಾಪಾರ’. ಇಲ್ಲಿ ಹಣ ಕೂಡ ಗೌಣವಾಗಿದೆ ಸ್ವಾಭಿಮಾನದ ಇದಿರು..

    ‘ಅದೇ ಮುಖ’ ಎಂಬ ಕತೆಯಲ್ಲಿ ಚೌಕವನ್ನ ಚೌಕದ ಪಾಲಿಗೆ ಬಿಟ್ಟು ಚಲಿಸಲಾಗದೆ ಹೆಜ್ಜೆ ಕಿತ್ತಿಡಲಾಗದೆ ಇರುವ ಮರವನ್ನ ತಮ್ಮ ತಮ್ಮಲ್ಲೇ ಚೌಕಟ್ಟು ನಿರ್ಮಿಸಿಕೊಂಡು ಅದರಲ್ಲೇ ಒದ್ದಾಡುವ ಜನರ ಮನಃಸ್ಥಿತಿಯಯ ಚಿತ್ರಣವಿದೆ. ಯಾವುದೇ ಒಬ್ಬ ವ್ಯಕ್ತಿ, ಯಾವುದೋ ಒಂದು ಪ್ರದೇಶವನ್ನ ಅಥವಾ ಸಂಬಂಧವನ್ನ ಅತಿಯಾಗಿ ಹಚ್ಚಿಕೊಳ್ಳುವುದೆಂದರೆ ಅದು ಮಣ್ಣಿನಲ್ಲಿ ಸಿಕ್ಕಿಕೊಂಡ ಮರದ ಹಾಗೆ ಭಯಂಕರ ಹಿಂಸೆ, ಕೆಲವೊಮ್ಮೆ ಬಿಡಿಸಿಕೊಳ್ಳುವುದರಲ್ಲಿ ಮತ್ತು ಕ್ಷಮಿಸುವುದರಲ್ಲಿ ಬದುಕಿನ ಅರ್ಥ ಹುದುಗಿರಬೇಕು ಅಲ್ಲವೇ ಎಂದು ಪ್ರಶ್ನಿಸುತ್ತಾರೆ.

    ‘ಪುಟ್ಟಾರಿಯ ಮತಾಂತರ’ ನನ್ನನ್ನು ತುಂಬಾನೇ ಕಾಡಿದ ಕತೆ. ಸಂಬಂಧ ಎಂದರೇನು ಎಂಬ ಪ್ರಶ್ನೆಗೆ ಹಚ್ಚಿಕೊಂಡರೆ ಉಂಟು, ಬಿಟ್ಟರೆ ಇಲ್ಲ ಎಂಬ ಅತ್ಯಂತ ಸಮರ್ಪಕ ಉತ್ತರವನ್ನು ಕೊಟ್ಟಿದ್ದಾರೆ.  ನೆನಪುಗಳ ಮಹತ್ವವನ್ನು ಹೇಳುತ್ತಾ, ನೆನಪುಗಳು ಬೆಳೆಯದ ಯಾವ ವಸ್ತುವೂ ಸ್ವಂತದ್ದಾಗುವುದಿಲ್ಲವೇನೋ ಅನ್ನುತ್ತಾರೆ. ಧರ್ಮ ಶಾಸ್ತ್ರಗಳು ಒಬ್ಬ ಮನುಷ್ಯನ ಬದುಕನ್ನು ಕಟ್ಟಬೇಕು, ಮನಃಶಾಂತಿಯನ್ನು ನೀಡಬೇಕು. ಸಂತಸರಹಿತ ಧರ್ಮ ಆಚರಣೆ ಮತ್ತು ಕಟ್ಟಳೆಗಳು ಬದುಕಿನ ಅರ್ಥದಿಂದ ಬಲು ದೂರ ಎಂಬುದು ಸೂಕ್ಷ್ಮವಾಗಿ ಹೇಳಲ್ಪಟ್ಟಿದೆ.

    ಎಚ್ಚೆಸ್ವಿ ಅವರ ಪ್ರತಿಯೊಂದು ಕತೆಯಲ್ಲಿಯೂ ಹಳ್ಳಿಯ ಪರಿಸರದ ಸೊಗಡಿದೆ. ಮನುಷ್ಯ ಸಂಬಂಧಗಳ ವಿವಿಧ ಸ್ತರಗಳ ಜೀವನಾಡಿಯಂತೆ  ಅವರ ಕತೆಗಳಲ್ಲಿನ ಪಾತ್ರಗಳು ಮಿಡಿಯುತ್ತವೆ. ವಿಭಿನ್ನ ಮನಃಸ್ಥಿತಿಯ ಸಂವೇದಿನಿಯಾಗಿ ನಿಲ್ಲುತ್ತವೆ. ಒಂದಷ್ಟು ಕತೆಗಳು ಮೇಲ್ನೋಟಕ್ಕೆ ಸಾಮಾನ್ಯವಾಗಿರುವಂತೆ ಕಂಡರೂ  ಆಳ ಬೇರೆಯದೇ ಇದೆ. ಮೇಲ್ಪದರ ಕಳಚಿ ಒಳಗಿಳಿದರೆ ಅದರ ಅನುಭೂತಿಯೇ ಬೇರೆ. ಹಲವಾರು ವಿಷಯಗಳು ಅವ್ಯಕ್ತವಾಗಿಯೂ ವ್ಯಕ್ತವಾಗಿರುವುದು ಅವರ ಕತೆಗಳ ಸೌಂದರ್ಯ. ಹೀಗಾಗಿ ಅವರ ಪ್ರತೀ ಕತೆಯೂ ತನ್ನ ಪ್ರತ್ಯೇಕತೆಯನ್ನ ಉಳಿಸಿಕೊಂಡಿದೆ...

                                                                                                                                             ~‘ಶ್ರೀ’
                                                                                                                                                 ತಲಗೇರಿ

ಶನಿವಾರ, ಜುಲೈ 30, 2016

"ಬಿನ್ನಹ"...

ಖಾಲಿ ಹೆದ್ದಾರಿಯಲಿ
ಗೆಜ್ಜೆ ಸೋಕಿ ಬಂದ ತಂಗಾಳಿ
ಎಲೆಗಳೆದೆಯ ಮೆದೆಯಲ್ಲಿ
ಮುಖ ಹುದುಗಿಸಿದ ಹೂಗಳಿಗೆ
ಹೇಳುತ್ತಿತ್ತು ಕೂಜನದ ಕತೆಯ..
ಅದು ನಿನ್ನದೇ ವಿಷಯ...

ನಂಬಿರಲಿಲ್ಲ ನಾನೂ
ನೀ ಕುಂಚ ಹಿಡಿವವರೆಗೆ
ಅರೆಗಂದು ಬಣ್ಣದ ಕನಸ ಇದಿರು..
ದಿನನಿತ್ಯ ಜಾತ್ರೆಯೀಗ
ಗದ್ದಲದ ನಡುವೆಯೂ
ಕಣ್ತುಂಬಿಕೊಳಲು ನೀನೊಂದು ತೇರು..
ಬಿದಿಗೆಯಾ ರಾತ್ರಿಯಲಿ
ಸ್ವೇದದಲಿ ನೆನೆದಿತ್ತು ನಾಚಿಕೆಯ ನವಿರು..

ಚಂದ್ರ ಸೊಕ್ಕುತಿಹ
ನಿನ್ನ ಬೆವರ ಹನಿಗಳ ಬಿಂಕಕ್ಕೆ
ಲೆಕ್ಕವಿಡಬೇಡ ಆಕಾಶದಿಂದುದುರುವ
ಜೊಂಪೆ ಜೊಂಪೆ ನಕ್ಷತ್ರಗಳ..
ಕಿಟಕಿ ಪರದೆಯಲಿ ಇರಲಿ
ಉತ್ಸವಕೆ ಮುಗಿಲ ಫಸಲು..

ಬೆಳಕಿನ ಮೋಹದಿಂದಲ್ಲ
ಪುಟ್ಟ ಹಣತೆ ಹಚ್ಚಿ ನಕ್ಕಿದ್ದು..
ಹೀಗೊಮ್ಮೆ ನೋಡಿಕೊಳಲು
ನಮ್ಮೀರ್ವರ ನೆರಳು ಬೆಸೆವುದ, ಮೊದಲು..
ನಿನ್ನ ಅಂಗಾಲ ಮೇಲೆ
ಒಂದರೆಗಳಿಗೆ
ಬೆರಳ ಪಲ್ಲವಿ ಬರೆವ
ಹಕ್ಕೀಗ ನನಗೆ ದೊರೆಯಬಹುದೇ..
ಪ್ರೀತಿಯಲಿ
ಕವಿಯಾಗುವುದು ನನಗೂ ಹೊಸದೇ!...

                                    ~‘ಶ್ರೀ’
                                        ತಲಗೇರಿ

ಭಾನುವಾರ, ಜುಲೈ 24, 2016

"ಕರೆ"...

ಎದೆಯೆದೆಯ ಬದು ದಾಟಿ
ಯಾವ ದಿಕ್ಕಲೋ ಒಂದು ಭೇಟಿ..
ಅತ್ತ ವಾರಿಧಿ ದೂರದಳತೆ
ಕವಲು ಕಲೆತು ಕಡಲ ಕವಿತೆ..
ಗರ್ಭದಲೇ ಬಿರಿದು
ಹಾದಿಯುದ್ದ ಟಿಸಿಲು, ಮತ್ತೆ ಒಂದೇ ಉಸಿರು..

ಒರಟು ಚರ್ಮದ ಬೆವರ ದಾರಿ
ಯಾವ ಉಳಿಯ ಬಿಸಿಯು ಜಾರಿ..
ಹೊಸತು ರೂಪ, ಹಡೆದ ಮೊದಲಿಗೆ
ಬಿಡದೇ ಮಿಸುಕುವ ಕಸುವು, ಎದುರಿಗೆ..
ಅರ್ಧದಲೇ ಮುರಿದು
ಬೆರಳು ಬಿಕ್ಕುವ ಸಮಯ, ನೆನೆದು ಸ್ಥಿರವದು ಹೃದಯ...

ಮಿಣುಕು ದೀಪದಿ ನೇಯ್ದು ಆಸೆಯ
ಯಾವ ಮಣ್ಣಲೋ ಕನಸ ಸಂಚಯ..
ಬಿಸಿಲ ತಾಪ, ಒಡೆದ ಗಳಿಗೆ
ಬಣ್ಣ ಬಳಿವುದು ಮೈಗೆ, ಕೊನೆಗೆ..
ಚಿಪ್ಪಿನಲೇ ಕಮರಿ
ಬೇರು ಬಿಡದಿರೆ ಹೇಗೆ, ಕಪ್ಪು ತಂಪಿನ ಕಾಯ!...

ಎಲ್ಲ ಇರುವಿನ ಹೆಗಲ ತುದಿಗೂ
ಜೋತುಬಿದ್ದ ಪುಟ್ಟ ಗಡಿಯಾರ..
ಪಿಸುದನಿಯ ಪರಿಮಿತಿಗೆ
ವೃತ್ತ ದಾಟುವ ಬಯಕೆ
ಹರಡಬಲ್ಲೆಯಾ ಕೇಳಿ, ಪಲುಕ ಲಹರಿ...

                                  ~‘ಶ್ರೀ’
                                      ತಲಗೇರಿ

ಬುಧವಾರ, ಜುಲೈ 20, 2016

"ಬೆರಗು"...

ಘಮ್ಮೆಂದು ಸದ್ದಿಲ್ಲದೆ
ಬಿರಿದ ಕತ್ತಲೆಯ ನಡುವಲ್ಲಿ
ಬಿತ್ತಿಹೆನು ಬೆಳಕಿನ ಬೀಜ..
ಗರ್ಭದಲಿ ಧಾತು
ಹೊರ ಕವಚ ಕಳಚಿ
ದಿಕ್ಕುಗಳ ಪಾದ ಧೂಳಿಯ
ಕಣಕೆ ಕೊಬ್ಬಿರಲು
ಒಸರುವುದು ಕಪ್ಪು ರಸವೋ,
ಇಲ್ಲಾ, ಬಿಳಿಯ ಬೂದಿಯೋ!
ಹುಡುಕಿದರೆ ನೆಪಕಷ್ಟೇ
ಎದೆಗೊಂದು ಬೇಲಿ...

ಇಹುದೇ, ಪೊರೆವ ಸದ್ದಿನ
ತೊದಲು ಕಡಲಿಗೆ
ಅಲೆಯ ಹಚ್ಚಿಕೊಳಲೊಂದು
ತಟದ ತುಡಿತ..
ಅರ್ಧ ರೆಕ್ಕೆಯ ಸುಳಿಗೆ
ಹುಟ್ಟಿಕೊಂತೇ
ಮುಕ್ತವಾಗುವ ಬಯಕೆ..
ಗಾಳಿಗುಂಟ ಅಂಟಿಬಂದು
ಕರೆವ ಹೆಜ್ಜೆ ಮೊರೆತ!..

ಹಡೆದ ಒಗರು ತಿಮಿರ
ಅರೆ ನಾಚಿಕೆಯ ಮುಗುಳು
ಅಲ್ಲಲ್ಲಿ ಬೇಲಿ ವೃತ್ತದಲಿ..
ಬೇರ ನರದಲಿ
ಹರಿದ ದ್ಯುತಿಗೆ
ಯಾರ ಕಸುವಿನ ಬಿಸಿಲು..
ಒಲವು ಹುಟ್ಟಿದ್ದೋ, ಹುಟ್ಟಿಸಿದ್ದೋ!..
ಬಿಕ್ಕುವಿಕೆ, ದನಿಯಿಲ್ಲದ ಸದ್ದು..
ಇಲ್ಲದಿದ್ದರೂ ಇದೆ ಬೆರಗು
ಒಳಗೂ ಹೊರಗೂ
ಅಂತರದ ನಡುವಲ್ಲಿ!...

                   ~‘ಶ್ರೀ’
                     ತಲಗೇರಿ