ಸೋಮವಾರ, ಮಾರ್ಚ್ 11, 2024

ಕುಣಿಗಲ್‌ ಟು ಕಂದಹಾರ್


 ಕುಣಿಗಲ್ ಟು ಕಂದಹಾರ್


ಯುದ್ಧಭೂಮಿಗಳ ಕುರಿತಾಗಿ ನಾವು ಅಲ್ಲಲ್ಲಿ ಚೂರು ಚೂರು ಓದಿದ್ದೇವೆ. ಅಫ್ಘಾನಿಸ್ತಾನವನ್ನು ತಾಲಿಬಾನ್ ಮತ್ತೆ ತಮ್ಮ ಸುಪರ್ದಿಗೆ ತೆಗೆದುಕೊಂಡಾಗ ವಿಮಾನದ ರೆಕ್ಕೆಗಳ ಮೇಲೆಲ್ಲಾ ಜನರು ಹತ್ತುತ್ತಿದ್ದ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಆದರೆ, ಅಂಥದ್ದೇನಿತ್ತು ಹಾಗೆಲ್ಲಾ ದೇಶ ಬಿಟ್ಟು ಓಡುವುದಕ್ಕೆ? ಒಂದಷ್ಟು ವರ್ಷಗಳ ಕಾಲ ನ್ಯಾಟೋ ಸೈನ್ಯದ ಆಡಳಿತಕ್ಕೆ ಅಫ್ಘಾನಿಸ್ತಾನ ಒಳಪಟ್ಟಾಗ ಆದಂಥ ಬದಲಾವಣೆಗಳೇನಾಗಿದ್ದವು? ನಿಜಕ್ಕೂ ಆಗಿದ್ದವಾ? ಯುದ್ಧದ ನೆರಳು ಹೊತ್ತ ನಾಡು ಹೇಗೆಲ್ಲಾ ಇರಬಹುದು. ಯುದ್ಧದ ಕತೆ ಒಂದೆಡೆಯಾದರೆ, ಬೇರೆ ಬೇರೆ ದೇಶದ, ಸಂಸ್ಕೃತಿಯ, ಮತ ಪಂಥಗಳ ಮನುಷ್ಯ ಮನುಷ್ಯರ ನಡುವಣ ಸಂಬಂಧ ಇಂಥ ಸ್ಥಿತಿಗಳಲ್ಲಿ ಹೇಗಿರುತ್ತವೆ? ಅಂಥದ್ದೊಂದು ಜಾಗಕ್ಕೆ ಕೆಲಸಕ್ಕೆ ಕರೆದಾಗ ಅಲ್ಲಿಗೆ ಹೋದವರ ತಳಮಳಗಳೇನು? ಪ್ರವಾಸ ಕಥನವೆಂದರೆ ಅಲ್ಲಿ ಆರಾಮಾಗಿ ಮಜಾ ಮಾಡಬಹುದಾದ ಜಾಗ, ಆಹಾರ, ಚಟುವಟಿಕೆಗಳ ಕುರಿತಾದ ಸಂಗತಿ ಮಾತ್ರವಾ? ಹಾಗಿದ್ದರೆ, ಇಂಥ ಕಡೆಗಳಿಗೆ ಪ್ರವಾಸ ಹೋದಾಗ ಅದರ ಕಥನ ಹೇಗಿದ್ದೀತು? ಇಂಥ ಪ್ರವಾಸದೊಂದಿಗೆ ಅಂಟಿಕೊಂಡ ಪ್ರಯಾಸದ ಜೊತೆಗೆ ಒದಗಬಹುದಾದ ಬದುಕಿನ ಒಳನೋಟಗಳ ದಾಖಲಾತಿ ಏನಿದ್ದೀತು? ಮುಂದಿನ ಕ್ಷಣದ ಭರವಸೆಯಿಲ್ಲದೇ ಬದುಕುವುದಕ್ಕೆ ಸಾಧ್ಯವಾ? ಹಾಗೆ ಬದುಕುವವರ ಮನಸ್ಥಿತಿಗಳೇನು? ಯಾಕೆ ಮನುಷ್ಯ ತನ್ನ ಊರು, ದೇಶ ಬಿಟ್ಟು ಇನ್ನ್ಯಾವುದೋ ದೇಶಕ್ಕೆ ಹೋಗುವುದು? ಹಾಗೆ ಹೋದವರೆಲ್ಲಾ ವೈಭೋಗದ ಬದುಕನ್ನೇ ಪಡೆದಿದ್ದಾರಾ? ಇತ್ಯಾದಿ ಪ್ರಶ್ನೆಗಳಿಗೆ ಅತ್ಯಂತ ಸಂಯಮದಿಂದ ಉತ್ತರಿಸಬಲ್ಲ ಬಹಳ ಬಹಳ ಚೆಂದದ ಪುಸ್ತಕ ಶ್ರೀ ಮಂಜುನಾಥ್ ಕುಣಿಗಲ್ ಅವರ 'ಕುಣಿಗಲ್ ಟು ಕಂದಹಾರ್' 


ಇದು ಚೆಂದದ ಪುಸ್ತಕ ಅನ್ನುವುದಕ್ಕೂ ಕಾರಣಗಳಿವೆ. ಎಷ್ಟೆಲ್ಲಾ ನೋವುಗಳ ನಡುವೆಯೂ ಮನುಷ್ಯ ಜನಾಂಗ ಸಂಭ್ರಮವನ್ನು ಹುಡುಕಿಕೊಳ್ಳುತ್ತದೆ. ಭರವಸೆಯ ಆಕಾಶದೀಪದತ್ತ ಕಣ್ಣೋಣವನ್ನು ಸದಾ ನೆಟ್ಟಿರುತ್ತದೆ. ಬಹುಶಃ ಅಂಥ ಆಶಾಭಾವ ಇರದೇ ಹೋದಲ್ಲಿ ಮನುಷ್ಯರ ಸಾಹಸಗಾಥೆಗಳು ಇತಿಹಾಸದ ಪುಟಗಳಲ್ಲಿ ನಮಗೆ ಸಿಗುತ್ತಿರಲೇ ಇಲ್ಲ. ಇತಿಹಾಸಗಳಲ್ಲಿ ಇರದಿದ್ದ ಮೇಲೆ ಅದರ ಆಧಾರದ ಮೇಲೆ ಬೆಳೆವ ಮುಂದಿನ ಜನಾಂಗಗಳು ಬಹುಶಃ ದುರ್ಬಲವಾಗುತ್ತಲೇ ಹೋಗಬಹುದು. ಯುದ್ಧಭೂಮಿಯಂಥದ್ದೇ ವಾತಾವರಣವಿರುವ ಜಾಗಗಳಿಗೆ ಪದೇ ಪದೇ ಕೆಲಸಕ್ಕೆ ಹೋಗಬೇಕಾಗಿ ಬಂದಾಗ ಲೇಖಕರು ಹೇಗೆ ಪ್ರತಿಕ್ರಿಯಿಸಿದರು‌ ಅನ್ನುವಲ್ಲಿಂದ ಹಿಡಿದು, ಇಂಥ ಮಾನವೀಯ ಕ್ಷಣಗಳಲ್ಲೂ ಮನುಷ್ಯ ಲೋಕ ತನ್ನ ಲಾಭವನ್ನು ಹೇಗೆಲ್ಲಾ ಹುಡುಕಿಕೊಳ್ಳುತ್ತದೆ ಅನ್ನುವಲ್ಲಿಯ ತನಕ ಹಲವಾರು ಸಂಗತಿಗಳು ಇಲ್ಲಿ ಬಂದು ಹೋಗುತ್ತವೆ. 


ಪ್ರವಾಸ ಕಥನವೆಂದರೆ ಹೀಗೂ ಇರಬಹುದು ಅನ್ನುವ ಹೊಸ ಪಂಕ್ತಿಯನ್ನು ಹಾಕಿಕೊಟ್ಟ ಲೇಖಕರಿಗೆ ಧನ್ಯವಾದಗಳು. ಯಾವತ್ತಿನ ಶೈಲಿಯಲ್ಲಿ ಈ ಪುಸ್ತಕದ ಕುರಿತು ಬರೆಯುವುದು ತುಸು ಕಷ್ಟವೇ ಆಗುತ್ತಿದೆ; ಕಾರಣ ಇಷ್ಟೇ, ಈ ಪುಸ್ತಕವನ್ನು ಸುಮ್ಮನೆ ಹೀಗೆ ಕಾಟಾಚಾರಕ್ಕೆ ನಾಲ್ಕು ಸಾಲುಗಳಲ್ಲಿ ಹೊಗಳಲು ಹೋದರೆ ಅದು ನೀರಸ ಪ್ರಯತ್ನವಷ್ಟೇ ಆದೀತು. ಬೇರೆ ಭಾಷೆಯ ಹಲವರು ಈ ಥರದ ಪುಸ್ತಕಗಳನ್ನು ಬರೆದಿರಬಹುದು. ಆದರೆ, ನಮ್ಮ ಕನ್ನಡದಲ್ಲೇ ನಮ್ಮ ಕನ್ನಡದವರದ್ದೇ ಕಥನವನ್ನು ಓದುವಾಗ ಇರುವ ಆಪ್ತತೆ ಕನ್ನಡಕ್ಕೆ ಇಂಥದ್ದೊಂದು ಪುಸ್ತಕ ಬೇಕಾಗಿತ್ತು ಅಂತ ಅನ್ನಿಸುವ ಹಾಗೆ ಮಾಡಿದರೆ ಅದು ಅತಿಶಯೋಕ್ತಿಯಲ್ಲ ಅಂತಂದುಕೊಳ್ಳುತ್ತೇನೆ. ನಾವೆಲ್ಲರೂ ಅದೆಷ್ಟು ಆರಾಮಾಗಿ ಆ ದೇಶ ಹೀಗೆ ಮಾಡಬೇಕಿತ್ತು, ಈ ದೇಶ ಹಾಗೆ ಮಾಡಬೇಕಿತ್ತು ಅಂತನ್ನುತ್ತಾ ರಾಜಕೀಯದ ನಿಪುಣರಂತೆ ವರ್ತಿಸುವಾಗ ದೇಶ ದೇಶಗಳ ನಡುವಿನ ಆಯಾಮಗಳು ಬೇರೆಯೇ ಅನ್ನುವುದನ್ನು ಈ ಪುಸ್ತಕ ಸೂಚ್ಯವಾಗಿ ಹೇಳುತ್ತದೆ. ಹಾಗೆಯೇ, ಅಫ್ಘನ್ನರ  ಕನಸುಗಳನ್ನು, ಶಾಂತಿಯ ಕುರಿತಾಗಿನ ತಹತಹಗಳನ್ನೂ ಈ ಪುಸ್ತಕ ಸೂಕ್ಷ್ಮವಾಗಿ ಹೇಳುತ್ತದೆ. ಲೇಖಕರು ಅವರ ಹಳೆಯ ಕಂಪನಿಯ ಕುರಿತಾಗಿಯೂ, ಕಾರ್ಪೋರೇಟಿನ ಕುರಿತಾಗಿಯೂ ಕೆಲವು ಸಂಗತಿಗಳನ್ನು ಬರೆದಿದ್ದಾರೆ; ಅದು ಅವರು ಈ ಬರೆಹದಲ್ಲಿ ಅದೆಷ್ಟು ಪ್ರಾಮಾಣಿಕರಾಗಿದ್ದರು ಅನ್ನುವುದನ್ನು ಸೂಚಿಸುತ್ತದೆ. 


~`ಶ್ರೀ'

   ತಲಗೇರಿ


ಒಂದೊಳ್ಳೆಯ ಪುಸ್ತಕಕ್ಕಾಗಿ ತಮಗೆ ಧನ್ಯವಾದಗಳು Manjunath Kunigal ಅವರೇ🙏💐

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ