ಬುಧವಾರ, ಜನವರಿ 10, 2018

ಶಹರದ ಹೊಕ್ಕುಳೊಳಗೆ.. -೩

ಶಹರದ ಹೊಕ್ಕುಳೊಳಗೆ-೩
                         ... ಕದಡಿದ ನಗೆಯ ಬಿಂಬಗಳ ಹುಡುಕಾಟ...
     ಮಹಾಪಟ್ಟಣವೊಂದಕ್ಕೆ ಮುಖಾಮುಖಿಯಾಗುವುದೆಂದರೆ ಬಹುಶಃ ನಮ್ಮೊಳಗಿನ ಹಲವು ಪಾತ್ರಗಳಿಗೆ ನಾವೇ ಪ್ರಶ್ನೆ ಕೇಳಿ, ಮತ್ತೆ ನಾವೇ ಉತ್ತರ ಕಂಡುಕೊಳ್ಳಲು ಹೆಣಗುವ ಒಂದು ಚಿಕ್ಕ ಪ್ರಕ್ರಿಯೆಯಷ್ಟೇ! ಒಂದಷ್ಟು ವರ್ಷಗಳ ಕಾಲ ಊರಿನ ಮನೆಗಳಲ್ಲಿ ವಾರಸ್ದಾರಿಕೆ ನಡೆಸುತ್ತಾ , ಊರಿನ ಹಾದಿಗಳಲ್ಲಿ ಸಿಕ್ಕ ಸಿಕ್ಕವರನ್ನೆಲ್ಲಾ ಮಾತನಾಡಿಸುತ್ತಾ, ಕೈಲೊಂದು ಚಿಕ್ಕ ಕೋಲು ಹಿಡಿದು , ಅದ್ಯಾವುದೋ ಸರಿಯಾಗಿ ರಾಗ ಬರದ ಹಾಡೊಂದ ಗುನುಗುತ್ತಾ ಹೊರಟ ನಾವು ಈ ಪಟ್ಟಣದ ಹಾದಿಗಳಲ್ಲಿ ಮೂಕರಾಗುತ್ತೇವೆ.. ರಸ್ತೆಯ ಎರಡೂ ಕಡೆಗಳಲ್ಲಿನ ವಾಹನಗಳು ಅವುಗಳದೇ ಭಾಷೆಯಲ್ಲಿ ಮಾತನಾಡಿಸುತ್ತವೆ; ನಾವು ಯಂತ್ರಗಳಲ್ಲವಲ್ಲ!.. ಮಹಾನಗರದ ಬೀದಿಗಳು ಅದೆಷ್ಟೇ ಪರಿಚಿತವಾಗಿದ್ದರೂ ಅಪರಿಚಿತವೇ..ಊರ ದಿಬ್ಬಗಳ ಏರಿಳಿಯುತ್ತಿದ್ದ ಅದೇ ಮುಖಗಳು, ಇಲ್ಲಿನ ಯಾವ ಸಮತಟ್ಟು ರಸ್ತೆಗಳಲ್ಲೂ ಕಾಣಸಿಗುವುದಿಲ್ಲ.. ನಮ್ಮೆಲ್ಲ ನೆನಪುಗಳು ಎಂದಿಗೂ ನಮ್ಮಮೊದಲ ಊರಿನ ವ್ಯಕ್ತಿಗಳ ಮೇಲೆಯೇ ಕಟ್ಟಲ್ಪಡುತ್ತದೆ.. `ಇವರು ಅವರಂತೆ' ಅನ್ನುವ ಆ ವಾಕ್ಯವೊಂದು ಸದಾ ಅಚ್ಚು ತೆಗೆದಿಟ್ಟಂತೆ !.. ಹೀಗೆ ಕಟ್ಟಲ್ಪಟ್ಟ ನೆನಪುಗಳು ಅದೆಷ್ಟು ಆವೃತ್ತಿಗಳಲ್ಲಿ ಪರಿಷ್ಕರಣೆಗೊಳ್ಳುತ್ತಲೇ ಹೋಗುತ್ತವೆಯೋ..
     ಬದುಕಿನ ಹೋರಾಟಕ್ಕೆ ಅಣಿಯಾದವರಂತೆ, ಯುದ್ಧಭೂಮಿಯೆಂಬಂತೆ ನಾವೀ ಮಹಾನಗರವನ್ನ ಪ್ರವೇಶಿಸುತ್ತೇವೆ. ದಿನನಿತ್ಯದ ಶಸ್ತ್ರಾಭ್ಯಾಸದಲ್ಲೇ ಸೋಲಿನ ನೆರಳನ್ನ ಇದಿರುಗೊಳ್ಳುತ್ತ ಪರಿತಪಿಸುತ್ತೇವೆ.. ಯಾಕೆ?.. ಬಹುಶಃ, ಆತುಕೊಳ್ಳುವ ಹೆಗಲುಗಳ, ಅಥವಾ ಸುತ್ತಲೂ ನಿಂತು ಧೈರ್ಯತುಂಬುವ ಕೌಟುಂಬಿಕತೆಯ ಕೊರತೆಯೇ?!.. ಮನುಷ್ಯ ಸಂಬಂಧಗಳ ನಿಜವಾದ ವಿಶ್ಲೇಷಣೆಗೆ ನಗರದಂತಹ ಪುಟವೊಂದು ಬಿಟ್ಟರೆ ಬೇರೆ ದೊರಕಲಾರದೇನೋ!..ಅದೆಷ್ಟೋ ಜಗತ್ತುಗಳು ಒಂದು ಪುಟ್ಟ ಪ್ರದೇಶದಲ್ಲಿ ಸೇರುತ್ತವೆ.. ಇಡೀ ಜಗತ್ತು ಏಕೀರ್ಭವಿಸುತ್ತದೆ.. ಇಲ್ಲಿನ ಬಹುತೇಕ ಸಂಬಂಧಗಳಿಗೆ ಒಂದು ನಿರ್ದಿಷ್ಟ ಮೇರೆಯಿರುತ್ತದೆ.. ನಮ್ಮವರು ಅನ್ನಿಸುವ ಜೀವಗಳು ಎಲ್ಲೋ ಬೆರಳೆಣಿಕೆಯಷ್ಟು; ಜಗತ್ತಿನ ಸುಗಂಧ ದ್ರವ್ಯಗಳ ಪ್ರಚಾರಕ್ಕಾಗಿ ಆಚೆ ಈಚೆ ಓಡಾಡುವ ದೇಹಗಳೇ ಹಲವು ಎನಿಸಿಬಿಡುತ್ತವೆ.. ಇಂಥ ಒಂದು ಪರಿಸರದಲ್ಲಿಯೇ ಅಮ್ಮನ ಕೈತುತ್ತು, ಅಪ್ಪನ ಸವೆದ ಚಪ್ಪಲಿ, ಮನೆಯ ಮೂಲೆಯಲ್ಲಿ ಚಳಿಯಲ್ಲಿ ಕುಯ್ ಗುಡುತ್ತಿದ್ದ ನಾಯಿ, ಈಗ ಭೂಮಿಯ ಇನ್ಯಾವುದೋ ಭಾಗದಲ್ಲಿ ಇರುವ ಅಕ್ಕ ಅಣ್ಣ ತಮ್ಮ ತಂಗಿ‌ಯರ ತರಹೇವಾರಿ ಜಗಳಗಳು, ಗದ್ದೆಯ ಅಂಚಿನ ವಿಹಾರ, ಕೊಕ್ಕರೆಗಳ ಒಂಟಿ ಕಾಲು, ಅರ್ಧ ಮುರಿದ ಸೇತುವೆ, ಯಾವುದೇ ನಿರ್ದಿಷ್ಟ ಆಕಾರವಿಲ್ಲದ ದೇವರ ಮೂರ್ತಿ, ಕೆಸರಿನಲ್ಲಿ ಕಲ್ಲು ಹೊಡೆಯುವ ಚೇಷ್ಟೆ, ಗಾಳಕ್ಕೆ ಸಿಕ್ಕಿಸುವ ನಂಜುಳ, ಫಟಕ್ಕನೆ ಎಳೆದಾಗ ಸಿಕ್ಕಿಕೊಂಡ ಮೀನು, ಕಲ್ಲು ಪೊಟರೆಗಳಲ್ಲಿ ಪುಟುಪುಟು ಅನ್ನುತ್ತಾ ಮರೆಯಾಗೋ ಏಡಿಗಳು, ಹುಣಸೇಮರ, ಜೊತೇಲ್ ಪಾಟಿಚೀಲ ಹಿಡ್ದು ಬರ್ತಿದ್ ಗೆಳೆಯರ ತಂಡ ಎಲ್ಲವೂ ಎಲ್ಲವೂ ಬಹುವಾಗಿ ಆವರಿಸಿಕೊಂಡುಬಿಡುತ್ತವೆ..
     ಹೀಗೇ ಮನಸ್ಸಿನ ಅದ್ಯಾವ್ದೋ ಅಡ್ಡಾದಿಡ್ಡಿ ಮೂಲೆಯಲ್ಲಿ ಅಜ್ಞಾತವಾಗಿ ಹುದುಗಿದ್ದ ಈ ನೆನಪುಗಳಿಗೆ ಹೊಸ ಜಾತ್ರೆ ಶುರುವಾಗೋದು ಈ ಮಳೆಯಲ್ಲಿ.. ! ರೋಮಗಳ ತುದಿಗೋ ಇಲ್ಲಾ ತೆಳು ಧೂಳಿನ ರಸ್ತೆಯ ಬೊಗಸೆಗೋ ಹನಿಯೊಂದು ಬಿದ್ದಾಗ ಕತ್ತೆತ್ತಿ ನೋಡುವ ನಾವು ಸೇರುವುದು ಯಾವುದೋ ಸೂರನ್ನಾದರೂ, ಈ ನೆನಪುಗಳು ಒಮ್ಮೊಮ್ಮೆಇರುವೆಗಳಂತೆ ಸಾಲಲ್ಲಿ , ಕೆಲವೊಮ್ಮೆ ಸಿಕ್ಕಸಿಕ್ಕ ಕಡೆಗಳಲ್ಲೆಲ್ಲಾ ನುಗ್ಗಿಬಿಡುತ್ತವೆ ಹೃದಯದ ಮುಖ್ಯ ಬೀದಿಗೆ.. ಸಂಜೆ ಸಮಯಕ್ಕೆ ಶುರುವಾಗುವ ಮಳೆಗಂತೂ ಅದೇನು ಖಯಾಲಿಯೋ..! ನಾಲ್ಕು ಪುಟಾಣಿ ಗೋಡೆಗಳ ಯಾವುದೋ ಮೂಲೆ ಅಥವಾ ಮಧ್ಯದಲ್ಲಿ , ಬೆಳದಿಂಗಳಂಥ ದೀಪಗಳಿದ್ದರೂ ಕತ್ತಲೆಯನ್ನೇ ಹಚ್ಚಿಕೊಂಡು ಕೂತು ಒಂದು ಕಪ್ ಚಹಾ ಅಥವಾ ಕಾಫಿಯನ್ನ ನೆನೆನೆನೆದು ಕೊರಗುವ ಪರದೇಶಿ ಬದುಕು ಬಹುಶಃ ಬ್ಯಾಚುಲರ್ ಎನಿಸಿಕೊಂಡವರ ಕರ್ಮ‌ಸಿದ್ಧಾಂತ ಅಥವಾ ನಿಧಾನಕ್ಕೆ ಸಂಪಾದಿಸಿಕೊಂಡ ಹಕ್ಕು ಎನ್ನಬಹುದೇನೋ!..
     ನಗರದ ಮನೆಗಳ ತಾರಸಿಯಲ್ಲಿ ಮನುಷ್ಯನ ಅದೆಷ್ಟು ಕತೆಗಳು ಓದಲಾಗದಂತೆ ಬಿದ್ದಿವೆಯೋ.. ಏಕಾಂತ ಮತ್ತು ಏಕಾಂಗಿತನದ, ಹರೆಯ ಮತ್ತು ಪ್ರಣಯದ ಅದೆಷ್ಟು ಸಂಚಿಕೆಗಳು ನಿರಂತರವಾಗಿ ಪ್ರಸಾರವಾಗಿವೆಯೋ, ತಾರಸಿ ಕೇವಲ ತಟಸ್ಥ ಮಾಧ್ಯಮ.. ಈ ನಗರವೋ ಧೀಮಂತ ಮೌನಿ..ಹೆಣ್ಣಿನಂತೆ! ಆಳಕ್ಕೆ ಇಳಿದಂತೆ ಇನ್ನಷ್ಟು ಮತ್ತಷ್ಟು ಕುತೂಹಲ ಹುಟ್ಟಿಸಿ, ತನ್ನ ತೆಕ್ಕೆಗೆ ಎಳೆದುಕೊಳ್ಳುವ ಚಾಲಾಕಿ.. ಒಮ್ಮೊಮ್ಮೆ ಕಾಲೆಳೆಯುತ್ತ , ಇನ್ನೊಮ್ಮೆ ಕುಪ್ಪಳಿಸುತ್ತ ಸಾಗಿದಾಗಲೆಲ್ಲ‌ ಸಲವೂ ವಿಸ್ಮಯಗಳು ಎದುರಾಗುತ್ತಲೇ ಇರುತ್ತವೆ.. ನಗರ ಪೂರ್ತಿ ಸ್ವಾತಂತ್ರ್ಯದ ಬಂಧೀಖಾನೆ, ಅಂದುಕೊಳ್ಳುವವರಿಗೆ; ಗಡಿಗಳಿಲ್ಲದ ನಕ್ಷೆ, ಅಪ್ಪಿಕೊಳ್ಳುವವರಿಗೆ..ಇನ್ನು ಕೆಲವರಿಗೆ ಬೆರಳು ತಾಕದ ಆಕಾಶ..!!

~`ಶ್ರೀ'
    ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ