ಶನಿವಾರ, ಜುಲೈ 30, 2016

"ಬಿನ್ನಹ"...

ಖಾಲಿ ಹೆದ್ದಾರಿಯಲಿ
ಗೆಜ್ಜೆ ಸೋಕಿ ಬಂದ ತಂಗಾಳಿ
ಎಲೆಗಳೆದೆಯ ಮೆದೆಯಲ್ಲಿ
ಮುಖ ಹುದುಗಿಸಿದ ಹೂಗಳಿಗೆ
ಹೇಳುತ್ತಿತ್ತು ಕೂಜನದ ಕತೆಯ..
ಅದು ನಿನ್ನದೇ ವಿಷಯ...

ನಂಬಿರಲಿಲ್ಲ ನಾನೂ
ನೀ ಕುಂಚ ಹಿಡಿವವರೆಗೆ
ಅರೆಗಂದು ಬಣ್ಣದ ಕನಸ ಇದಿರು..
ದಿನನಿತ್ಯ ಜಾತ್ರೆಯೀಗ
ಗದ್ದಲದ ನಡುವೆಯೂ
ಕಣ್ತುಂಬಿಕೊಳಲು ನೀನೊಂದು ತೇರು..
ಬಿದಿಗೆಯಾ ರಾತ್ರಿಯಲಿ
ಸ್ವೇದದಲಿ ನೆನೆದಿತ್ತು ನಾಚಿಕೆಯ ನವಿರು..

ಚಂದ್ರ ಸೊಕ್ಕುತಿಹ
ನಿನ್ನ ಬೆವರ ಹನಿಗಳ ಬಿಂಕಕ್ಕೆ
ಲೆಕ್ಕವಿಡಬೇಡ ಆಕಾಶದಿಂದುದುರುವ
ಜೊಂಪೆ ಜೊಂಪೆ ನಕ್ಷತ್ರಗಳ..
ಕಿಟಕಿ ಪರದೆಯಲಿ ಇರಲಿ
ಉತ್ಸವಕೆ ಮುಗಿಲ ಫಸಲು..

ಬೆಳಕಿನ ಮೋಹದಿಂದಲ್ಲ
ಪುಟ್ಟ ಹಣತೆ ಹಚ್ಚಿ ನಕ್ಕಿದ್ದು..
ಹೀಗೊಮ್ಮೆ ನೋಡಿಕೊಳಲು
ನಮ್ಮೀರ್ವರ ನೆರಳು ಬೆಸೆವುದ, ಮೊದಲು..
ನಿನ್ನ ಅಂಗಾಲ ಮೇಲೆ
ಒಂದರೆಗಳಿಗೆ
ಬೆರಳ ಪಲ್ಲವಿ ಬರೆವ
ಹಕ್ಕೀಗ ನನಗೆ ದೊರೆಯಬಹುದೇ..
ಪ್ರೀತಿಯಲಿ
ಕವಿಯಾಗುವುದು ನನಗೂ ಹೊಸದೇ!...

                                    ~‘ಶ್ರೀ’
                                        ತಲಗೇರಿ

ಭಾನುವಾರ, ಜುಲೈ 24, 2016

"ಕರೆ"...

ಎದೆಯೆದೆಯ ಬದು ದಾಟಿ
ಯಾವ ದಿಕ್ಕಲೋ ಒಂದು ಭೇಟಿ..
ಅತ್ತ ವಾರಿಧಿ ದೂರದಳತೆ
ಕವಲು ಕಲೆತು ಕಡಲ ಕವಿತೆ..
ಗರ್ಭದಲೇ ಬಿರಿದು
ಹಾದಿಯುದ್ದ ಟಿಸಿಲು, ಮತ್ತೆ ಒಂದೇ ಉಸಿರು..

ಒರಟು ಚರ್ಮದ ಬೆವರ ದಾರಿ
ಯಾವ ಉಳಿಯ ಬಿಸಿಯು ಜಾರಿ..
ಹೊಸತು ರೂಪ, ಹಡೆದ ಮೊದಲಿಗೆ
ಬಿಡದೇ ಮಿಸುಕುವ ಕಸುವು, ಎದುರಿಗೆ..
ಅರ್ಧದಲೇ ಮುರಿದು
ಬೆರಳು ಬಿಕ್ಕುವ ಸಮಯ, ನೆನೆದು ಸ್ಥಿರವದು ಹೃದಯ...

ಮಿಣುಕು ದೀಪದಿ ನೇಯ್ದು ಆಸೆಯ
ಯಾವ ಮಣ್ಣಲೋ ಕನಸ ಸಂಚಯ..
ಬಿಸಿಲ ತಾಪ, ಒಡೆದ ಗಳಿಗೆ
ಬಣ್ಣ ಬಳಿವುದು ಮೈಗೆ, ಕೊನೆಗೆ..
ಚಿಪ್ಪಿನಲೇ ಕಮರಿ
ಬೇರು ಬಿಡದಿರೆ ಹೇಗೆ, ಕಪ್ಪು ತಂಪಿನ ಕಾಯ!...

ಎಲ್ಲ ಇರುವಿನ ಹೆಗಲ ತುದಿಗೂ
ಜೋತುಬಿದ್ದ ಪುಟ್ಟ ಗಡಿಯಾರ..
ಪಿಸುದನಿಯ ಪರಿಮಿತಿಗೆ
ವೃತ್ತ ದಾಟುವ ಬಯಕೆ
ಹರಡಬಲ್ಲೆಯಾ ಕೇಳಿ, ಪಲುಕ ಲಹರಿ...

                                  ~‘ಶ್ರೀ’
                                      ತಲಗೇರಿ

ಬುಧವಾರ, ಜುಲೈ 20, 2016

"ಬೆರಗು"...

ಘಮ್ಮೆಂದು ಸದ್ದಿಲ್ಲದೆ
ಬಿರಿದ ಕತ್ತಲೆಯ ನಡುವಲ್ಲಿ
ಬಿತ್ತಿಹೆನು ಬೆಳಕಿನ ಬೀಜ..
ಗರ್ಭದಲಿ ಧಾತು
ಹೊರ ಕವಚ ಕಳಚಿ
ದಿಕ್ಕುಗಳ ಪಾದ ಧೂಳಿಯ
ಕಣಕೆ ಕೊಬ್ಬಿರಲು
ಒಸರುವುದು ಕಪ್ಪು ರಸವೋ,
ಇಲ್ಲಾ, ಬಿಳಿಯ ಬೂದಿಯೋ!
ಹುಡುಕಿದರೆ ನೆಪಕಷ್ಟೇ
ಎದೆಗೊಂದು ಬೇಲಿ...

ಇಹುದೇ, ಪೊರೆವ ಸದ್ದಿನ
ತೊದಲು ಕಡಲಿಗೆ
ಅಲೆಯ ಹಚ್ಚಿಕೊಳಲೊಂದು
ತಟದ ತುಡಿತ..
ಅರ್ಧ ರೆಕ್ಕೆಯ ಸುಳಿಗೆ
ಹುಟ್ಟಿಕೊಂತೇ
ಮುಕ್ತವಾಗುವ ಬಯಕೆ..
ಗಾಳಿಗುಂಟ ಅಂಟಿಬಂದು
ಕರೆವ ಹೆಜ್ಜೆ ಮೊರೆತ!..

ಹಡೆದ ಒಗರು ತಿಮಿರ
ಅರೆ ನಾಚಿಕೆಯ ಮುಗುಳು
ಅಲ್ಲಲ್ಲಿ ಬೇಲಿ ವೃತ್ತದಲಿ..
ಬೇರ ನರದಲಿ
ಹರಿದ ದ್ಯುತಿಗೆ
ಯಾರ ಕಸುವಿನ ಬಿಸಿಲು..
ಒಲವು ಹುಟ್ಟಿದ್ದೋ, ಹುಟ್ಟಿಸಿದ್ದೋ!..
ಬಿಕ್ಕುವಿಕೆ, ದನಿಯಿಲ್ಲದ ಸದ್ದು..
ಇಲ್ಲದಿದ್ದರೂ ಇದೆ ಬೆರಗು
ಒಳಗೂ ಹೊರಗೂ
ಅಂತರದ ನಡುವಲ್ಲಿ!...

                   ~‘ಶ್ರೀ’
                     ತಲಗೇರಿ