ಭಾನುವಾರ, ಜನವರಿ 31, 2016

"ಬೆಸುಗೆ"...

ಒರಟು ಬಿದಿರಿನಲೂ ಜೀವ ಸ್ವರವು
ನಿನ್ನುಸಿರ ಆಸೆಗಳ ಬಿಸಿ
ಅದರೆದೆಗೆ ಸೇರಿದಾಗ..
ಬೆರಳುಗಳ ಭಾಷೆಯನು
ನೀ ಒಲವಲ್ಲಿ ತಿದ್ದಿದಾಗ...

ನಿನ್ನೆಗಳ ನೆರಳಲ್ಲಿ
ಕಟ್ಟಿದಾ ಬಿಡಾರಕೆಲ್ಲ
ನಾಳೆಗಳ ಹೊದಿಕೆಯು ನಿನ್ನದೇನೇ..
ಬಣ್ಣ ಬಣ್ಣದ ಕನಸು
ರಂಗೋಲಿ ಇಡುತಿವೆ;
ಆ ಅಂಗಳವು ನಮ್ಮದೇನೇ...

ಒಂಟಿಗೂಡಿನ ಹಕ್ಕಿ
ಏಕಾಂಗಿಯಲ್ಲ;ಒಣಗಿದರೂ
ಮರ,ಹಚ್ಚಿಕೊಂಡಿರುವ ತನಕ..
ರೆಕ್ಕೆ ಹರಡಿ,ಮುಗಿಲ ದಾಟಿ
ಅನುಭವಿಸಿ ನೋಡಬೇಕು
ಮರದ ಬೇರ ಕಣ್ಣ ಪುಳಕ...

ಹರವು ಹಿರಿದಾದರೇನು;
ನಾ ನಿಂತಷ್ಟೇ ಜಾಗ
ಈ ಕ್ಷಣಕೆ ನನಗೆ..
ಬೆರಳು ಹಲವಿದ್ದರೇನು,
ತಟ್ಟಿ ಮಲಗಿಸಿ
ಹೊಸದಾರಿ ತೆರೆವವರೆಗೆ..
ಬೆಸೆದು ನಡೆವವರೆಗೆ!...

                       ~‘ಶ್ರೀ’
                          ತಲಗೇರಿ

ಶುಕ್ರವಾರ, ಜನವರಿ 22, 2016

"ಹೆಜ್ಜೆ"...

ಕೆಲವೊಂದು ಗಿಡಗಳು
ನಡೆದಾಡುತ್ತವೆ ಗಾಳಿಯ ಸಂಗಡ;
ತಮ್ಮ ತಮ್ಮ ಪರಿಧಿಯಲ್ಲಿ
ಸೌರಭದ ಮೂಲಕ..

ಇನ್ನು ಕೆಲವಷ್ಟು
ಪರಾಗದ ರೂಪದಲ್ಲಿ
ಚಿಟ್ಟೆಗಳ ಕಾಲಿಗಂಟಿಕೊಂಡು
ಇನ್ನೊಂದು ಹೂವಿನ
ಎದೆ ಸೇರುತ್ತವೆ..

ಈ ನಡಿಗೆ ಕೇವಲ
ಚಿಟ್ಟೆಯ ಮೇಲಿನ
ವ್ಯಾಮೋಹದಿಂದಲ್ಲ;
ಬದಲಾಗಿ,
ನಾಳೆಗಳ ಕಟ್ಟುವಿಕೆಗೆ!
ಒಲವ ಜೇನ ಹಸ್ತಾಂತರಕೆ
ಚಿಟ್ಟೆ ಇಲ್ಲಿ ರಾಯಭಾರಿ..

ಕಾಯೊಂದು ಹುಟ್ಟಿಕೊಳ್ಳುತ್ತದೆ
ಗುರುತಾಗಿ;
ಕಡೆದಾಗ ಮೂಡಿಬರುವ
ನವನೀತದಂತೆ..
ವ್ಯತ್ಯಾಸವಿಷ್ಟೆ;
ನಾವೂ ನೀವೂ ನಡೆಯುತ್ತೇವೆ
ಕೇವಲ ಹೆಜ್ಜೆ ಮಾತ್ರ ಇರುತ್ತದೆ;
ಗುರುತಿಲ್ಲದಂತೆ!...

                              ~‘ಶ್ರೀ’
                                  ತಲಗೇರಿ

ಮಂಗಳವಾರ, ಜನವರಿ 19, 2016

‘ಬಿಡಿ’ತಗಳು...-೪

‘ಬಿಡಿ’ತಗಳು...-೪

ಅತ್ತ,ಮುಗಿಲು ಬಿಕ್ಕಲು..
ಕಾದಿದ್ದ ಇಳೆಗೆ ಒಲವು ದಕ್ಕಿತೆಂದು,
ಇತ್ತ,ನವಿಲು ಲಯದಿ ಹೆಜ್ಜೆ ಹಾಕಿತು...

*****

ಅಂದು ರಾತ್ರಿ ನಕ್ಷತ್ರವೊಂದು
ಉದುರಿತು..
ಎತ್ತರದಲ್ಲಿದ್ದರೇನಂತೆ?..ಎಂದು ಹುಲ್ಲು
ಹಲುಬಿತು...

*****

ಕತ್ತಲ ಕಾಡಿನ
ಜೀರುಂಡೆಯ ಸದ್ದು
ಭಯದ ಬೆದರಿಕೆಯಲ್ಲ,
ನಾವೆಲ್ಲಾ ಎಚ್ಚರಿದ್ದೇವೆ
ಎಂಬ ಅಭಯಹಸ್ತ...

*****

ನನ್ನ ಮನೆ
ರಸ್ತೆ ಬದಿಗಿರಲಿ..
ದಿನಕ್ಕೊಬ್ಬ ಆಗಂತುಕ ಬರಲಿ,
ಒಲವ ತುತ್ತನ್ನ ಉಂಡುಹೋಗಲಿ...

*****

ಕರ್ಪೂರ
ಕರಗಿದ ಮೇಲೂ
ತಾನುರಿದುದರ ಬಗೆಗೆ
ಕಪ್ಪು ಕಲೆಯನ್ನಿಟ್ಟು ಹೋಗುತ್ತದೆ...

*****

ಒಂದು ಬಿಂದು,
ವಾಕ್ಯಕ್ಕೆ ಪೂರ್ಣವಿರಾಮ ಕೊಡುತ್ತದೆ;
ನಿಂತಲ್ಲೇ ನಿಂತರೆ!..
ಆದರೆ,ಅದೇ ಬಿಂದು
ಒಂದೆರಡು ಹೆಜ್ಜೆ ಮುನ್ನಡೆದರೆ
ಅದು ನಿರಂತರತೆ...!

*****

ಆ ಮರ ಬಳ್ಳಿಗಳು ಬೆತ್ತಲಾಗಿದ್ದು
ಕೇವಲ ಚಳಿಯ ತೀವ್ರತೆಗಲ್ಲ,
ಜೊತೆಗೆ ಮುಂದೆ ಬರಲಿರುವ
ಬದುಕಿನ ಚೈತ್ರಕ್ಕಾಗಿ...

                            ~‘ಶ್ರೀ’
                               ತಲಗೇರಿ

ಸೋಮವಾರ, ಜನವರಿ 11, 2016

‘ಬಿಡಿ’ತಗಳು-೩

ಹಾದಿ ಬದಿಗೆ
ಮುಳ್ಳುಗಳ ಮಧ್ಯ ಅರಳಿದ್ದರೂ
ಆ ಹೂವು ನಗುತ್ತಿತ್ತು...

*****

ಕಲ್ಲು,ಮಳೆ ಗಾಳಿ ಬಿಸಿಲಿಗೆ
ಮೈಯೊಡ್ಡಿ,ಒಳಗಿಂದ ಬಿರಿದಾಗ;
ಉದುರಿದೆಲೆಗಳ ಜೊತೆ ಬೆರೆತಾಗ
ದೊರಕುವುದು ಫಲವತ್ತಾದ ಮಣ್ಣು...

*****

ಅಷ್ಟೊತ್ತಿಂದ
ತುಂಬಿಕೊಳ್ಳುತ್ತಿದ್ದ ಬೆಳಕು
ಎಣ್ಣೆ ಮುಗಿದಾಗ
ಎಲ್ಲಿ ಹೋಯಿತು..!

*****

ಬಿಳಿಯ ಹಾಳೆಯ ಮೇಲೆ
ನೀನೇನೇ ಬರೆದರೂ
ಅದು ಚಿತ್ತಾರವೇ!..

*****

ನೀ ನಕ್ಕ ಮೇಲೇನೇ
ತಿಳಿದದ್ದು,
ನಗುವಿಗೂ ಸೌಂದರ್ಯ
ನಿನ್ನಿಂದಲೇ ಬಂದಿದ್ದೆಂದು!..

*****

ನನ್ನ ಕವಿತೆಯ ಪದಗಳು
ಹುಚ್ಚೆದ್ದು ಕುಣಿಯಬೇಕಿಲ್ಲ,
ಇಂದು ಬರೆದಿದ್ದು
ನಾಳೆ ಮಾಸದಿದ್ದರೆ ಸಾಕು...

*****

ಸಮುದ್ರದ ತೆರೆಗಳು
ತೀರದ ಮೇಲಿನ
ಹೆಜ್ಜೆಗುರುತುಗಳನ್ನು ಅಳಿಸುವುದಿಲ್ಲ;
ಬದಲಾಗಿ,ವಿಲೀನಗೊಳಿಸುತ್ತವೆ..!
ಅವೆಲ್ಲವನ್ನೂ ಮೈಗಂಟಿಸಿಕೊಂಡ ಮರಳು
ಇನ್ಯಾರದೋ ಕನಸಿನ ಮನೆ ಕಟ್ಟುತ್ತದೆ...

                                     ~‘ಶ್ರೀ’
                                        ತಲಗೇರಿ

ಬುಧವಾರ, ಜನವರಿ 6, 2016

"ಖಾಲಿಯಾಗಬೇಕೆಂದಿದ್ದೇನೆ"...

ಬಿಸಿಯುಸಿರ ತುದಿಗೆ ಅಂಟಿಕೊಂಡಿಹ
ಹೊಟ್ಟೆಕಿಚ್ಚಿನ ಹೊಗೆಯ ವಾಸನೆ..
ಅಸಹ್ಯವಾಗಿ ಮೈಯೆಲ್ಲಾ ಹರಡಿರುವ
ನಾನೆಂಬ ಝೇಂಕಾರದ ಆಲಾಪನೆ..
ಮತ್ತೆಂದೂ ಎದೆಯ
ತುಂಡಿನ ಬದಿಗೂ ಹುಟ್ಟದಂತೆ
ಖಾಲಿಯಾಗಬೇಕೆಂದಿದ್ದೇನೆ...

ನುಣುಪು ಸೀರೆಯ ಚಿತ್ತಾರದಾ ಅಂಚಲ್ಲಿ
ಜಾರಿಬಿಡುವ ಜೋರು ತುಡಿತಗಳಿಗೆ
ನನ್ನದಲ್ಲದ ಚಂದ್ರಬಿಂಬದ ಚಾವಡಿಯ ಒಳಗೆ
ಹಚ್ಚೆ ಹಾಕುವ ಬೆರಳಿನೆಲ್ಲ ಉದ್ವೇಗಗಳಿಗೆ
ನನ್ನಿಂದ ನಾನಾಗೇ
ಹೊರಬಂದು ವಿದಾಯ ಹೇಳಿ
ಖಾಲಿಯಾಗಬೇಕೆಂದಿದ್ದೇನೆ...

ನಾ ಬರೆದ ರೇಖೆಗಳ ಅಳತೆಯನು ಪ್ರಶ್ನಿಸಿದ
ನಿನ್ನ ಹೆಜ್ಜೆಗಳ ಮೇಲೆ ಸುರಿದ ಕೆಂಬಣ್ಣ..
ಅಂಗಳದ ಬೇಲಿಯನು ಊರಗಲ ಹಬ್ಬಿಸಲು
ನಾ ಬೇಕಂತಲೇ ತುಳಿದ ಹಾದಿಯಾ ರಾಡಿ ಮಣ್ಣ..
ಈ ದಿನವೇ ದೂರ ಒಯ್ದು
ಚೆಂಗುಲಾಬಿ ಗಿಡವಲ್ಲಿ ನೆಟ್ಟು
ಖಾಲಿಯಾಗಬೇಕೆಂದಿದ್ದೇನೆ...

ಮುಂದೊಂದು ದಿನ ಹೂ ಬಿಡುವ ಮಧ್ಯಂತರದಿ
ಬುದ್ಧ ನಗುತ್ತಾನೆ..
ನನ್ನಲ್ಲೂ ಕೊಂಚ ಇಟ್ಟು ಕೂರುತ್ತಾನೆ..!
ಈಗ..
ಶೂನ್ಯದಲ್ಲಿಯೇ ನಾ
ಪೂರ್ಣನಾಗಬೇಕೆಂದಿದ್ದೇನೆ...

                                           ~‘ಶ್ರೀ’
                                              ತಲಗೇರಿ

ಭಾನುವಾರ, ಜನವರಿ 3, 2016

‘ಬಿಡಿತ’ಗಳು-೨

‘ಬಿಡಿತ’ಗಳು-೨

ಹುಟ್ಟಿದಾಗ,
ತೆರೆದ ಎದೆ,ಬೊಚ್ಚು ಬಾಯಿ..
ಈಗ,
ಸಣ್ಣ ಮನಸಿನ ಮೇಲೆ ಜಾರದ ಹೊದಿಕೆ,
ಭೋಗದ ಬಿಚ್ಚು ಬಾಯಿ...

*****

ಅವಳು ಕಾದಿದ್ದು
ಕೇವಲ ವ್ಯಕ್ತಿಗಾಗಿ ಅಲ್ಲಾ,
ಜೊತೆಗೆ ಭಕ್ತಿಗಾಗಿ...

*****

ಹೊಸ ಸೀರೆ
ಮುಳ್ಳು ತಾಕಿ ಹರಿದೀತು ಎಂದಿದ್ದ..
ಆಗೊಮ್ಮೆ ಈಗೊಮ್ಮೆ ಮಾತನಾಡುವ
ಅವನಿಗೇನು ಗೊತ್ತು,
ನಿತ್ಯ ಹತ್ತಿಕ್ಕಿದಾ ಭಾವಗಳು
ಮುಲುಗಿ ಎದೆಯಲ್ಲಿ ಬಿದ್ದ ಗೀರುಗಳು...

*****

ನನ್ನ ರಾತ್ರಿಗಳು ಈಗ
ಬಣ್ಣಗಳಿಂದ ತುಳುಕುತ್ತಿವೆ..
ಏಕೆಂದರೆ ನಾನು ಕನಸು ಕಾಣಲು
ಶುರು ಮಾಡಿದ್ದೇನೆ..

*****

ಕಾಗೆ ಮತ್ತು ಕೋಗಿಲೆ,
ಇಬ್ಬರದೂ ಬಣ್ಣ ಒಂದೇ,
ಆದರೆ ಗಂಟಲಿನ ಕೆರೆತ ಬೇರೆ...

*****

ನನ್ನ ನೆರಳಿಗೆ
ಬಗೆಬಗೆಯ ಬೆಳಕಿನ ಬಣ್ಣಗಳ ಲೇಪನವಿಲ್ಲ..
ಯಾಕೆಂದರೆ,ನಾನು ‘ಪಾರದರ್ಶಕ’ನಲ್ಲ...

*****

ನಿನ್ನೆ ಕಂಡ ಸ್ವಪ್ನಗಳಲ್ಲಿ
ನೀನು ಅನಾಮಿಕ..
ಆದರೆ,
ಇಂದಿನ ಸರಣಿಯಲ್ಲಿ ನೀನೇ ನಾವಿಕ...

                                   ~‘ಶ್ರೀ’
                                       ತಲಗೇರಿ