ಮಂಗಳವಾರ, ಮಾರ್ಚ್ 29, 2016

"ಸಂಜೆ"...

ಸಂಜೆ ಆರೇಳರ ಸಮಯ..
ತಳ್ಳುಗಾಡಿಯವನ ಚಕ್ರದ ತುಂಬೆಲ್ಲಾ
ಚಿತ್ರಿಸಿದ ಬಳ್ಳಿಗಳಿಗೆ
ಅರಳುತ್ತವಂತೆ ಹೂಗಳು;
ಅವನ ಕಾಲ್ಗಳ ಸದ್ದಿಗೆ..
ನೆರಳು ಕರಗುವ ಕ್ಷಣದಿ
ಗರಿ ಬಿಚ್ಚಲೆಂದೇ ಕಾದಿರುವ
ಕನಸುಗಳ ಸರದಿ...

ತೇಲಿಬಿಟ್ಟ ಹಿಟ್ಟಿನುಂಡೆ
ಮೈಬಿಚ್ಚಿಕೊಳ್ಳುತ್ತದೆ ಉಷ್ಣತೆಗೆ
ಎಣ್ಣೆಯ ಕಮಟು ವಾಸನೆಯ
ಅಭ್ಯಂಜನಕೆ
ನಾಸಿಕದ ರೋಮಗಳ ತಳಮಳ..
ಗಾಳಿಗೀಗ ತುಂಬು ಆಮಂತ್ರಣ...

ಕೋಲು ಹಿಡಿದ ಪೋರ
ಗೀಚುತ್ತಾನೆ ಮಣ್ಣಿನೆದೆಯ ತುಂಬಾ..
ಕಾಣಿಸುತ್ತದೆ ಆಗಸದಿ
ಮಂಟಪ ಕಟ್ಟುತಿಹ ಹಕ್ಕಿಹಿಂಡು;
ತಾನೂ ರೆಕ್ಕೆಗಳ ಹಚ್ಚಿಕೊಳುವಾಸೆ..
ಇನ್ನು ಕೆಲವರಿಗೆ
ಬರಲಿಷ್ಟವಿಲ್ಲ ಗೋಡೆಗಳಾಚೆ..
ತಾವಾಗಿಯೇ ಕೃತಕ ಬೆಳಕಿನಲಿ ಖೈದಿ...

ಕೊಲ್ಲುತ್ತ ಕೊಲ್ಲುತ್ತ ದಿನಗಳನ್ನು
ಹರಡಿಹೋಗುತ್ತಾನೆ ರಕ್ತ
ಕೊನೆಗೆ ಸೂರ್ಯ..
ಬಹುಶಃ ಅಣಕಿಸುತ್ತಿರುವವು
ಇರಬೇಕು ಅವುಗಳೇ
ಮತ್ತೊಬ್ಬನ ಅಧಿಪತ್ಯದಂಗಳದಿ
ತೂಗಿಬಿಟ್ಟ ಶ್ವೇತಾಗ್ನಿಗಳಾಗಿ..
ನಿನ್ನೆಯಷ್ಟೇ ಹೇಳಿದ್ದ ಆತ,
ಅಷ್ಟಕ್ಕೂ ಸುಳ್ಳಲ್ಲ;
ಗಡಿಯಾರಗಳು ಮಾತನಾಡುತ್ತವೆ..
ಪುಟ್ಟ ಬಟ್ಟಲಿನಲಿ ಹಚ್ಚಿಟ್ಟ ಧೂಪ
ಅಸ್ತಿತ್ತ್ವ ಪಡೆಯುತ್ತದೆ
ಗಾಳಿಯಲ್ಲೇ ಪರಿಮಳದ ಗೆರೆಗಳಾಗಿ...

                                  ~‘ಶ್ರೀ’
                                     ತಲಗೇರಿ

ಗುರುವಾರ, ಮಾರ್ಚ್ 24, 2016

"ಮಳೆ ಬಟ್ಟಲು"...

ಮನಸು ಬಿಚ್ಚಿವೆ ಮರಗಳೆಲ್ಲಾ
ಕೆಂಪು ನೀಲಿ ಬಿಳಿ
ಚೆಂಡು ಹೂಗಳ ಮುಡಿದು..
ಪೋಣಿಸಿಹರು ಬೇಲಿಗಳಿಗೆಲ್ಲಾ
ನಕ್ಷತ್ರಗಳ ಜೊಂಪ ತಂದು...
ದಾರಿಹೋಕರ ದರ್ಶನಕೆ
ಕಾದ ಒಂದಷ್ಟು ಗೂಡಂಗಡಿಗಳು..
ಅಲ್ಲೇ ಬದಿಯ ಕಟ್ಟೆಯಲ್ಲಿ
ನಿನ್ನೆ ಸಂಜೆ ಸುರಿದ ಮಳೆಗೆ
ನೀರ ತುಂಬಿಕೊಂಡ ಬಟ್ಟಲು...
ಯಾರದ್ದೆಂದು ತಿಳಿದಿಲ್ಲ;
ಪರಿಧಿ ತುಂಬಾ ದೊಡ್ಡದು...

ಆವಿಯಾಗದೇ ಉಳಿದ ನೀರಲ್ಲಿ
ಬಿಂಬ ನೋಡಿದವರಲ್ಲಿ
ಮೊದಲಿಗ ಒಬ್ಬ ಹುಚ್ಚನಂತೆ!..
ಮೊನ್ನೆವರೆಗೆ ತಲೆ ತುಂಬ
ಮಣ್ಣ ಮೆತ್ತಿಕೊಳ್ಳುತ್ತಿದ್ದ ಆತ
ನಿಂತಿಹನಂತೆ ಇಂದು
ಕ್ಷೌರದಂಗಡಿಯ ಮುಂದೆ!...

ಹಾಕಿದ್ದ ಕವಳ ಉಗಿಯಲೆಂದು
ಬಂದಿದ್ದ ಆಚೆಮನೆಯ ಅಜ್ಜಿಯ
ಕನ್ನಡಕ ಮಸುಕೆಂದು
ನೋಡಿದರೆ, ಕಂಗಳಲಿ
ನೀರು ತುಂಬಿತ್ತಂತೆ...
ಕೇಳಿದಾಗ ಹೇಳಿದ್ದು,
ಮೊದಲೆಲ್ಲಾ ಜಾರುತ್ತಿದ್ದ ಕಣ್ಣೀರು
ನಿಲ್ಲುತ್ತದೆ ಈಗ ಅಲ್ಲಲ್ಲೇ
ಹೆಚ್ಚಾಗಿದೆ ಚರ್ಮದಲ್ಲಿನ ಸುಕ್ಕು...

ಹಾಗಂತೆ, ಹೀಗಂತೆ!
ಒಬ್ಬೊಬ್ಬರದು ಒಂದೊಂದು ಕತೆ..
ಇಣುಕಿದೆ ನಾನು
ಯೌವನದ ಮದ ನೋಡಲೆಂದು!..
ಕಣ್ಣುಜ್ಜಿಕೊಂಡು ನನ್ನನ್ನೇ
ನೋಡುತ್ತಿದೆ, ನೀರೊಳಗಿಂದ
ನನ್ನಂತೆಯೇ ಕೀಲು ಗೊಂಬೆ!...
ಅರ್ಥವಾಗಲಿಲ್ಲ,
ಓಡಿಸಿದೆ ನೀರು ಕುಡಿಯಲೆಂದು
ಬಂದ ಕಾಗೆಗಳ...

ತೊದಲುತ್ತ ಬಂತು ಮಗುವೊಂದು ಅತ್ತ
ಯಾರೋ ಕಟ್ಟೆ ಹತ್ತಿಸಿದ ಮೇಲೆ..
ಅನಿಸಿತು ಕಟ್ಟಿಕೊಳ್ಳುತ್ತಲಿರುವಂತೆ
ತನ್ನದೇ ಪ್ರಪಂಚವನ್ನ ಬೆರಗುಗಣ್ಣಿಂದ
ಕಿಲ ಕಿಲ ನಗುವಿಂದ...
ನೀರು ಕುಡಿಯತೊಡಗಿದವು
ಕಾಗೆಗಳು ಈಗ..
ಮುದ್ದಿಸುತ್ತಿತ್ತು ಮಗು
ಅವುಗಳನ್ನೂ ತನ್ನ ಕಂಗಳಿಂದ...

                               ~‘ಶ್ರೀ’
                                  ತಲಗೇರಿ

ಶನಿವಾರ, ಮಾರ್ಚ್ 12, 2016

"ಜಾತ್ರೆ"...

ತೂಗಿಬಿಟ್ಟಿದ್ದ ಗೊಂಬೆಗಳೆಲ್ಲಾ
ಮಾತಾಡಿಕೊಳ್ಳುತ್ತಿದ್ದವೋ ಏನೋ
ತಮ್ಮ ತಮ್ಮಲ್ಲೇ..
ಹಲ್ಕಿರಿದದ್ದು ಮಾತ್ರ
ನೆನಪಿದೆ, ನಾ ನೋಡಿದಾಗ...
ಮಾರಾಟಕಿಟ್ಟಿದ್ದ
ಒಂದೊಂದು ಮುಖವಾಡಗಳಿಗೂ
ಒಂದೊಂದು ಬೆಲೆ...

ಯಾರೋ ಪೇರಿಸಿಟ್ಟ
ಬಣ್ಣ ಬಣ್ಣದ ಪುಗ್ಗೆಗಳ
ಮೇಲೆ ಇನ್ಯಾರದೋ ಕಣ್ಣು;
ಕಟ್ಟಿದಾ ದಾರಕ್ಕೆ
ಮಾತ್ರ ತಿಳಿದಿತ್ತೇ
ಬಂಧಿಸಿಡುವ ಕಷ್ಟ..
ಇಲ್ಲಾ, ಒಳಗಿದ್ದ ಗಾಳಿಗೂ
ಕಾಡಿತ್ತೇ ಮುಕ್ತವಾಗುವ ಪರಿಮಳ...

ಧೂಳೆಬ್ಬಿಸಿದ ಭೂಮಿ
ಲೆಕ್ಕವಿಟ್ಟಂತಿಲ್ಲ
ಜಾರಿದ್ದ ಬೆವರ ಹನಿಗಳ..
ಬಿಸಿಲಿಗೋ,
ಹೊಸ ಹೊಸ ವಿನ್ಯಾಸದ
ಕೊಡೆಗಳ ನೋಡೋ ಹಂಬಲ..
ಕೊರೆದಿಟ್ಟ ಕಲ್ಲಂಗಡಿಗೆ
ಮಾತ್ರ ಅರಿವಿಹುದೇ
ನಡೆದಾಡಿದ ಚಪ್ಪಲಿಗಳ ಕುರಿತು...

ಅಲ್ಲೊಂದಿಷ್ಟು ಪರಿಧಿ..
ದಾಟಿ ನಡೆದಂತೆ
ಅಲ್ಲಲ್ಲಿ ಹರಡಿರುವ
ಬೇಲಿಗಳ ನಡುವೆ
ಬಿಟ್ಟಿರುವ ಹೂಗಳಿಗೆ
ಈಗ ನಾ ಬಣ್ಣ ಹಚ್ಚುವ ಸಮಯ..
ಜಾತ್ರೆ ಮುಗಿದಿಲ್ಲ;
ತೆರೆದೇ ಇವೆ ಅಂಗಡಿಗಳೆಲ್ಲಾ...

                            ~‘ಶ್ರೀ’
                               ತಲಗೇರಿ