ಶನಿವಾರ, ಜನವರಿ 7, 2017

"ಅಂದು.. ಬಂದಿದ್ದೆ ನಾನು..."

ದ್ರವ್ಯವೊಮ್ಮೆ ಬೆರೆವಾಗ
ನಾಚಿ ಕರಗಿತ್ತು ಲವಣ
ಆಯಸ್ಸುಗಳ ಪೇರಿಸುತ್ತ
ಆಕಾರ ಪಡೆಯಿತು ಮೌನ..
ರಕ್ತ ಸೋರುವ ಬಳ್ಳಿಗರಳಿದ
ಹೂವಿಗೆ ಶಿಶುವೆಂದು ನಾಮಕರಣ..
ಅಂದು.. ಬಂದಿದ್ದೆ ನಾನು..

ತುಂಬಿಟ್ಟುಕೊಂಡ ಚೀಲದಲ್ಲಿ
ತೂರಿಬರುತ್ತಿದ್ದ ಆಹಾರ..
ತುರುಬಿಗೆ ಸಿಕ್ಕಿಸಿದ ಬಣ್ಣಗಳ
ಆಗಾಗ ಹೇಳುತ್ತಿದ್ದಳು ಅವಳು..
ಕಥನದಂತಿದ್ದ ನಾನು
ವಾಸ್ತವದ ಚಿಹ್ನೆಯಾಗಿದ್ದು
ನರಳುವಿಕೆಯ ತುದಿಯಲ್ಲಿ..
ಖಾಯಂ ವರ್ಗಾವಣೆಗೊಂಡು
ಅಂದು.. ಬಂದಿದ್ದೆ ನಾನು..

ಮೊದಲ ಅಳುವಿಗೆ
ಹಬ್ಬವೆಂದರು ಅವರು..
ಬೆಳೆಯುತ್ತಿದ್ದ ಭಾಗಗಳ
ಕಡಿದಾದ ನೆರಳುಗಳಲ್ಲಿ
ಜಾರುತ್ತಿತ್ತು ಎದೆಯಿಂದಲೇನೋ..
ಅಂದು ಬಂದಿದ್ದ ನಾನು
ಮತ್ತೆ ಹೋಗಲೇ ಇಲ್ಲ..
ಓಡತೊಡಗಿದ್ದೇನೆ, ಸಿಗಲೂ ಇಲ್ಲ..
ಮತ್ತೆ ಬರಬೇಕೆಂದಿದೆ ಹೊಸದಾಗಿ;
ಕಿಂಡಿಯಿದೆಯಾ?!...

~‘ಶ್ರೀ’
  ತಲಗೇರಿ

"ಪ್ರಪಂಚ"...

ಇಣುಕಬೇಕು ಕತ್ತೆತ್ತಿ
ತೆರೆದುಕೊಳ್ಳುತ್ತದೆ ಪ್ರಪಂಚವೊಂದು
ಕತ್ತಲೆಯ ನೆರಿಗೆಗಳು ಹಾಸಿಕೊಂಡಿದ್ದರೂ..
ಪುಟ್ಟ ಪುಟ್ಟ ಗೋಡೆಗಳಿಗಿಲ್ಲಿ
ಹಸಿರು ಚರ್ಮ
ತಿಳಿ ಹಳದಿಯಾಗಿ ಅರಳುತ್ತದೆ
ಬಿಸಿಲು ಬಿದ್ದಾಗ..
ಅರ್ಧ ಬಿಳುಪು ತುಸು ಕಪ್ಪು
ಗೆರೆಗಳು ಅಂಗಿ ತುಂಬಾ..
ಹೊದ್ದುಕೊಂಡ ನಿನ್ನೆಗಳಿಗೆ
ತೇಪೆ ಹಚ್ಚಲೇಬೇಕೆ?!..

ಹೊರಗೆಷ್ಟೇ ಬಿಸಿಲು ಸುರಿದರೂ
ಪ್ರತಿಫಲನವೆಂಬುದು ಹಸಿ ಸುಳ್ಳು..
ಅಂಟಿಕೊಂಡ ಜಾಳಿಗೆಗಳಿಗೆ
ಯಾರ ಮುಖಸ್ತುತಿಯೋ..
ತೂಗಿಬಿಟ್ಟ ಪೊಟ್ಟಣಗಳು
ಕಟ್ಟಬಲ್ಲವೇ ಬೆಲೆಯ
ಹಸಿವು ಉಕ್ಕಿಸಿದ ಬೆವರ ಕಲೆಗಳು
ಬೀಡುಬಿಟ್ಟ ಚಿಲ್ಲರೆಗಳಿಗೆ..

ಎಲ್ಲ ಜಾತಿಯ ತಿಂಡಿಯೂ
ಅದರದ್ದೇ ಆದ ಶೀಷೆಗಳಲ್ಲಿ..
ಅದೊಂದು ಅಂಗಡಿ..!
ಒಳಸರಿದಂತೆ ಇಲ್ಲ ಯಾವ ಕುರುಹೂ..
ಮಾರಾಟಕ್ಕಿಡಬಹುದಿತ್ತು ಮಿಂಚುಹುಳುಗಳ
ಅಲ್ಲಲ್ಲಿ ಮೂಲೆಯಲಿ ಹುಟ್ಟಿದ್ದರೆ;
ಜೊತೆಗೆ ಒಂದಷ್ಟು ಕೆ.ಜಿ. ಪ್ರೀತಿಯನ್ನೂ..

ಇಣುಕಬೇಕು ಮತ್ತೆ ಮತ್ತೆ..
ನಾನು ತೊಟ್ಟಿರುವ ಬಣ್ಣಕ್ಕೂ
ಅಲ್ಲಲ್ಲಿ ಚೆಲ್ಲಿರುವುದಕ್ಕೂ
ಹೆಸರುಗಳ ಕೊಡಬೇಕು..
ಕೇಳಬೇಕು ಮೂಲ ಯಾವುದೆಂದು
ಉತ್ತರಿಸಲು ಬರಬಹುದು ಮಾಲೀಕ..

~‘ಶ್ರೀ’
  ತಲಗೇರಿ

"ಗುಬ್ಬಚ್ಚಿಗಳಿಗೆ ಬಿಡಾರ ಇರಬೇಕಿತ್ತು"...

            

    ಈ ನೆನಪು ಅನ್ನೋದು ಒಂಥರಾ ಪಾತರಗಿತ್ತಿ ಇದ್ದಂತೆ.. ಯಾವಾಗ್ ಬರತ್ತೆ, ಯಾವಾಗ್ ಹೋಗತ್ತೆ ಅನ್ನೋದೇ ವಿಸ್ಮಯ.. ಒಮ್ಮೊಮ್ಮೆ ಜಗತ್ತಿನೆಲ್ಲ ಬಣ್ಣಗಳ ಮೈಗಂಟಿಸಿಕೊಂಡು ಬಂದು ಸಾವಿರಾರು ಹೂಗಳ ಕತೆ ಹೇಳಿದರೆ, ಇನ್ನು ಕೆಲವೊಮ್ಮೆ, ರೆಕ್ಕೆ ಹರಿದುಕೊಂಡು, ಕುಂಟುತ್ತಾ, ತೆವಳುತ್ತಾ ಬಂದು ವಾಸ್ತವಕ್ಕೆ ಇನ್ನೊಂದಿಷ್ಟು ಮುಖಗಳನ್ನ ಕೊಡುತ್ತದೆ.. ಬಹುಶಃ ನಿಮಗೆ ಗೊತ್ತಿರಲಿಕ್ಕಿಲ್ಲ; ಈ ಅವಳೆನ್ನೋ ಅವಳ ನೆನಪುಗಳೂ ಹಾಗೇ !.. ಮರೀಚಿಕೆ ಅನ್ನೋದಕ್ಕೆ ಪಕ್ಕಾ ಉದಾಹರಣೆಯಾಗಿದ್ದವಳು ಅವಳು.. ಸಿಕ್ಕಾಗ ಕಣ್ತುಂಬಿಕೊಂಡ ಅವಳನ್ನು ಎದೆಯೊಳಗೆ ಅಷ್ಟಷ್ಟಾಗಿ ಇಳಿಸಿಕೊಂಬುದೇ ಉತ್ಸವದಂತಿತ್ತು.. ಅವಳೊಂಥರ ಪುಟಾಣಿ ಕೃಷ್ಣನ ಥರ; ಕಳ್ಳ ಹೆಜ್ಜೆ ಹಾಕ್ತಾ ಕಿಲಕಿಲ ಅನ್ನೋಳು.. ಸಮೃದ್ಧವಾಗಿ ಬೀಳೋ ಮೊದಲ ಮಳೆಗೆ ಹಿತವಾಗಿ ಹೃದಯವನ್ನ ತಲ್ಲಣಿಸೋ ಒಂಥರಾ ಮಣ್ಣಿನ ಪರಿಮಳ ಹುಟ್ಟಿಕೊಳ್ಳುತ್ತಲ್ವಾ, ಹಾಗೆ; ಅವಳ ಗೆಜ್ಜೆ ಸದ್ದು ಅಂದ್ರೆ.. ! ಮತ್ತೊಂದಿಷ್ಟು ಕಾಲ ಕೊನೇ ಕೊನೇ ಹನಿಗಳನ್ನ ಗುಟುಕುಗಳಂತೆ ಮೆಲುಕು ಹಾಕೋದು ನನ್ನ ಜಾಯಮಾನ..

   ಈಗಲೂ ಅಷ್ಟೇ.. ಅವಳಿಲ್ಲದ ಸಂಜೆಗಳಲ್ಲಿ ಹಲುಬುತ್ತೇನೆ.. ಆ ಎತ್ತರದ ಗುಡ್ಡವಿದೆಯಲ್ಲಾ, ಅದರ ತುತ್ತತುದಿಗೆ ಒಂದು ಬಿಡಾರ ಮಾಡಬೇಕಿತ್ತು.. ಎರಡು ಗುಬ್ಬಚ್ಚಿಗಳಿಗೆ ಪುಟ್ಟ ಗೂಡೊಂದು ಇರಬೇಕಿತ್ತು.. ಅವಳುಸಿರ ಏರಿಳಿತದ ಜೋಗುಳಕ್ಕೆ ನೀಲಿ ಹಾಸಿಗೆಯಲ್ಲಿ ಮುದುರಿದ್ದ ಚಂದ್ರಮ  ರಾತ್ರಿಪೂರ್ತಿ ತಲೆದೂಗುತ್ತಿದ್ದ. ನಾನು ಅವನನ್ನು ತೋರಿಸೆಂದು ಹಟ ಮಾಡೋ ಮಗುವಾಗುತ್ತಿದ್ದೆ!.. ಅವಳು ಮರೀಚಿಕೆಯಾಗುತ್ತಿರಲಿಲ್ಲ.. ನಾಚಿಕೆ ಹೊತ್ತ ಬಿಂಕವಾಗಿ ಶೀತಲ ರಾತ್ರಿಗಳಲ್ಲಿ ಸುದ್ದಿ ಹೇಳಬರುವ ಬೆವರ ಹನಿಗಳಿಗೆ ನಾ ಕಟ್ಟೋ ಸುಂಕಕ್ಕೆ ಸಾಕ್ಷಿಯಾಗುತ್ತಿದ್ದಳು... ! ನಿಜ, ಗುಬ್ಬಚ್ಚಿಗಳಿಗೊಂದು ಬಿಡಾರ ಇರಬೇಕಿತ್ತು...

~‘ಶ್ರೀ’
  ತಲಗೇರಿ