ಭಾನುವಾರ, ಮೇ 19, 2013


"ಕೊನೆಯ ಸಹಿ"...

ನನ್ನೆದೆಯ ಒಲವು ಆ ದಿವ್ಯ ಕಡಲು
ನಿನಗೆಂದೇ ಮೀಸಲು ಬಾ ಚಂದ್ರಿಕೆ
ನನ್ನೆದೆಯ ಪ್ರತಿಶಬ್ದ ನಿನ್ನ ಹೆಜ್ಜೆ ಕಾಗುಣಿತ
ನೀನೊಂದೇ ಕೊಳಲು ಈ ಬಡಜೀವಕೆ...

ಸಾಯುವುದು ಸಾವು ನಿನ್ನ ಕೈಯ
ಕೋಮಲತೆ ನನ್ನ ತುಸು ಸೋಕಲು
ತಣಿಯುವುದು ಕಾವು,ನಿನ್ನ ನೆರಳು
ನೆರಳಾಗಿ ನನ್ನಲ್ಲೇ ತಾ ಹಬ್ಬಿರಲು..
ಜೀಕು ಜೀಕು ಹೂವೆಸಳ ತೊಟ್ಟಿಲು
ಮತ್ತೆ ಬೇಕು ಎದೆಗರ್ಭದಾ ಲಾಲಿಸಾಲು..

ನೀನೊಂದು ಮೃದು ಮಳೆಸೊಲ್ಲು
ಮುದ್ದಾದ ಸ್ವಪ್ನಗಳ ಹೊಂಬಿಸಿಲು..
ನನದೆಲ್ಲ ನಾಳೆಗಳ ನೂರು ಬೆಳಕು
ನನ್ನ ಕೊರಳ ಅಲೆಅಲೆಯ ನೇಹ ಪಲುಕು
ಜೀಕು ಜೀಕು ಹೂವೆಸಳ ತೊಟ್ಟಿಲು
ಮತ್ತೆ ಬೇಕು ಎದೆಗರ್ಭದಾ ಲಾಲಿಸಾಲು...

ಆ ಚಂದ್ರ ಸರಿದಾನು
ತಾರೆಗಳ ಜೊತೆಯಲ್ಲಿ ಪರದೆಯೊಳಗೆ
ನನ್ನೆದೆಯ ಬಾಂದಳದ
ತಂಬೆಳಗು ತುಂಬಿರಲು ನಿನ್ನ ನಗೆಯೊಳಗೆ
ಜೋಪಾನ ಮಾಡುವೆನು ನಿನ್ನ ಗೆಳತಿಯೇ
ನನ್ನುಸಿರ ಕೊನೆಸದ್ದ ಸಹಿಯೆಂದೂ ನಿನಗಿರಲು...

                                         ~‘ಶ್ರೀ’
                                           ತಲಗೇರಿ

ಶನಿವಾರ, ಮೇ 18, 2013


"ಕನವರಿಕೆ ಕೊನೆಯಲ್ಲಿ"...

ಅಲೆ ಅಲೆಯಾಗಿ ಸೇರು ಬಾ ಚಂದ್ರಮ
ಮರೆಯಲ್ಲಿ ಅವಿತ ಅಭಿಸಾರಿಕೆಯ
ಹಸಿ ಮಳೆಯಾಗಿ ಇಳಿದು ಬಾ ಸಂಭ್ರಮ
ಎದೆಯಲ್ಲಿ ಬೆರೆಯೆ ಮೃದು ಪರಿಣಯ

ನೆರಳಲ್ಲಿ ಸೆರೆಯಾಗಿ ಮೌನ ಸಂವಾದ
ಕೊರಳಲ್ಲಿ ಕಂಪನದ ಚೆಂದ ಜಾದೂ..
ಬೆರಳಲ್ಲಿ ಬಲೆಯಾಗಿ ಕವಲ ಬಂಧ
ಮೂಡಿಹುದು ಆನಂದದ ಬಿಂದುವೊಂದು..

ನಾಚಿಕೆಯ ನೆಪದಲ್ಲಿ ಒನಪು ಅವಳಿಂದ
ಕನವರಿಕೆ ಕೊನೆಯಲ್ಲಿ ಸಣ್ಣ ಉಸಿರು..
ಯೌವನದ ಹೊಸ್ತಿಲಲಿ ಮನಸು ಮಕರಂದ
ಬಿಸಿಯಿರುವ ಎದೆಯಲ್ಲೂ ಹಚ್ಚ ತಳಿರು..

ಬಚ್ಚಿಡುವ ಬಯಕೆಗಳ ಎಣಿಕೆ ಒಳಗಿಂದ
ಹುಸಿ ಮುನಿಸ ಬಗಲಲ್ಲಿ ಮೆಲ್ಲ ಬೆವರು
ಕಟ್ಟಿರುವ ಗೆಜ್ಜೆಯಲೂ ಮಿಡಿತ ನಿನಗಂತ
ತುಸು ಕನಸ ಸೆರಗಲ್ಲಿ ಹಾಗೇ ಸವರು..

ಬರೆದಿಡುವೆ ನಿಮಿಷಗಳ ಮೀಸಲು ಪುಟದಲ್ಲಿ
ಎನುತಿಹಳೇ ಅವಳಿಲ್ಲಿ ನೆನೆದು ಚಂದ್ರಮನ
ಬಿಡಬಾರದೇ ಬಿಡಾರವನು ಅವಳೆಡೆ ಯಾನದಲ್ಲಿ
ಬೆರೆಯುತ್ತ ಒಲವಲ್ಲಿ ಕರಗಿ ಈ ಕ್ಷಣ..

                                      ~‘ಶ್ರೀ’
                                        ತಲಗೇರಿ

             "ದಿವ್ಯ ಸಂಭವ"...

ಮೆಲ್ಲ ಮೆಲ್ಲ ಎದೆಯ ತಾಕು
ಬಿಸಿಯ ಕರಗಿಪ ಮುಗಿಲ ಹನಿಯೆ
ಇಳೆಯ ಕೂಡ ಗುನುಗಬೇಕು
ಹಳೆಯ ಕತೆಯ ಹೊಸತು ದನಿಯೆ..

ಮುಗಿಲ ಎದೆಯ ಜೀವಕಣದಿ
ಹೊಸೆದು ಬೆಸೆದಿದೆ ನಿತ್ಯ ನೇಹವ
ಹಲವು ಕ್ಷಣದ ಬೆಸುಗೆ ಮೌನದಿ
ಒಲವ ಧ್ಯಾನದ ದಿವ್ಯ ಸಂಭವ..

ದಿನವು ಸೇರುವ ಬಯಕೆ ಹಸಿದು
ಸೋತು ಮುಲುಕಿತೇ ದಿಗಂತದಲಿ
ನೆಗೆದು ಜೀಕುವ ವಯಸು ಮುಗಿದು
ಉನ್ಮಾದ ಕರಗಿತೇ ಕಣ್ಣೀರಿನಲಿ!..

ತಪ್ತ ವಿರಹ ತಪದಿ ಬೆರೆತೀತೇ
ಋತುವ ಕಾಡುವ ಮಣ್ಣಗಂಧ..
ಆಪ್ತ ಕನಸ ಹೆಸರ ಕರೆದೀತೇ
ಕೊರಳ ಕೊಳಲು ಚೆಂದದಿಂದ...

ಮೆಲ್ಲ ಮೆಲ್ಲ ಇಳಿಯೇ ಬಿಂದುವೇ
ಕ್ಷಿತಿಯ ತನುವದು ಹಾಗೇ ಚಿಗುರಲು
ನೆನಪಿನಲ್ಲೇ ಮೊಗ್ಗ ತುಟಿಯು ಬಿರಿಯೆ
ನಾಳೆಗಳ ಸ್ವಾಗತಕೆ ತಾಜಾ ಹೂಗಳು

                                 ~‘ಶ್ರೀ’
                                   ತಲಗೇರಿ