ಶನಿವಾರ, ಫೆಬ್ರವರಿ 13, 2016

"ಕಾಗದದ ದೋಣಿ"...

ಹೆಪ್ಪುಗಟ್ಟಿದ ಮೋಡವುದುರಿ
ಕಾದ ಮನದಲಿ ಪುಳಕ ತುಳುಕಿಸೆ
ಬೆರಗು ಬಾನಿಗೆ ರೆಕ್ಕೆ ಹಚ್ಚಿತು ನವಿಲು..
ಜಿಟಿ ಜಿಟಿಯ ಮಳೆಯ ಸದ್ದಿಗೆ
ಕೊಳಗಳೆಲ್ಲವೂ ಬಳೆಯ ತೊಡುತಿರೆ
ಮೆರಗು ತಂದಿತು ಇಳೆಗೆ ಒದ್ದೆ ಮುಗುಳು...

ಎಲೆಯ ಮೈಗೆ ಅಂಟಿ ಕುಳಿತು
ಬೀಳೋ ಹನಿಗಳ ತೂಕಡಿಕೆ ಕಂಡು
ರಸ್ತೆಗಿಳಿದವು ಮೆಲ್ಲ ಪುಟ್ಟ ಕಾಲ್ಗಳು..
ನೆನೆದ ಮಣ್ಣು ಸೂಸೋ ಘಮದಿ
ಬೆರೆಯಬಯಸಿತು ಹಳೆಯ ಕಾಗದ
ರೂಪ ತಂದವು ಈಗ ಕನಸ ಕಂಗಳು...

ಬಣ್ಣ ಬಣ್ಣದ ಕೊಡೆಯ ಹಿಡಿದು
ಪುಟ್ಟ ಗೆಜ್ಜೆಗೆ ಮಾತು ಕಲಿಸಿ
ದಡವ ಬಿಡಲು ಸಿದ್ಧಗೊಂಡಿತು ದೋಣಿ..
ಕಲ್ಲು ಕೊರಕಲು ಮುಳ್ಳು ಕಸಗಳು
ಬಲೆಯ ಹೆಣೆದಿಹ ಹಲವು ಪೊದೆಗಳು
ಎಲ್ಲ ದಾಟಿಸೋ ಅವನ ನೆಳಲಿನ ಗಾಮಿನಿ...

ದೋಣಿಯೆಂದರೆ ಅದು ಕಾಗದದ ವಸ್ತುವಲ್ಲ;
ಮುಗುಧ ಮುನಿಸು, ತೊದಲು ಒಲವು
ರಾಜಿಯಾಗಿಹ ಕ್ಷಣಗಳ ಮೂರ್ತ ಸಾಕ್ಷಿ..
ನೆನಪಿನೆಸಳಿಗೆ ಲಾಲಿ ಹಾಡುತ
ಎದೆಯ ಜಗುಲಿಗೆ ತಳಿರ ಮುದವಿಟ್ಟು
ಬಾಲ್ಯ ಕಟ್ಟಿಹ ಹಲವು ಭಾವ ಭಾಷಿ...

                                     ~‘ಶ್ರೀ’
                                         ತಲಗೇರಿ

ಮಂಗಳವಾರ, ಫೆಬ್ರವರಿ 9, 2016

"ಮೈಲಿಗಲ್ಲು"...

ನೀಳ ಚಾಚಿದ ದಾರಿ
ಅತ್ತಿತ್ತ ಸರಿಯದಂತೆ
ನಿಂತು ಕಾಯುವ ಬಗಲ ದಳಗಳು..
ಅರಸಿ ಬರುವ ಆಸೆಗಳಿಗೆ
ಗರಿಯ ತೇರು ಚಿಗುರುವಂತೆ
ಇದಿರುಗೊಳ್ಳುವ ಬಳಗ ಸಾಲು...

ಬಿಸಿಲ ಕೊರಳ ಬೆವರ ಕುಡಿದು
ತೊದಲು ಚಂದ್ರನ ಜೊಲ್ಲ ಅಳೆದು
ಮನೆಯ ತೋರುವ ಅನಿಕೇತನ..
ಭೃಂಗ ಗಾನದ ಪಲುಕ ಶೃಂಗಕೂ
ಹೂವು ಹಡೆಯುವ ಅಮಲು ಗಂಧಕೂ
ಸಡಿಲಗೊಳ್ಳದ ಬುದ್ಧ ಧ್ಯಾನ...

ಹಲವು ಹೆಸರ ಬರೆಸಿಕೊಂಡರೂ
ಎಷ್ಟೋ ಸದ್ದಿಗೆ ತೆರೆದುಕೊಂಡರೂ
ವರ್ಣಸಂತೆಯ ಅನಾಮಿಕ..
ಖಾಲಿಗೂಡನು ಕಾಯ್ವ ಮರಕೆ
ಅಂಟಿಕೊಂಡ ಕಲೆಯ ರಕ್ತಕೆ
ಮರುಗುಭಾಷೆಯ ಮೂಕ...

ದಾರಿಹೋಕನ ನೆರಳ ಸದ್ದಲೇ
ಧರಣಿ ನನ್ನೊಳು ಬೆರೆತ ಭಾವ..
ಕರಡು ಕನಸದು ಕಳೆವ ಮುನ್ನವೇ
ಬಿಡಲೇಬೇಕು ಇರುವ ಕುರಿತು
ಒಂದೆರಡು ಸುಳಿವ,ಕಟ್ಟಿ ಕಾಲವ...

                             ~‘ಶ್ರೀ’
                                ತಲಗೇರಿ