ಗುರುವಾರ, ಡಿಸೆಂಬರ್ 31, 2015

‘ಬಿಡಿ’ತಗಳು...-೧

 ‘ಬಿಡಿ’ತಗಳು...-೧

ಗೋಡೆ ಕಟ್ಟಿಕೊಂಡೆ
ನನ್ನವಳು ಹಾಕಿಟ್ಟ ರಂಗೋಲಿ
ಇಲ್ಲಿಂದ ಕಾಣುತ್ತಲೇ ಇಲ್ಲ..

*****

ತಂಪು ಕನ್ನಡಕ ಹಾಕಿ ನೋಡಿದೆ
ಸುತ್ತಲೂ ಈಗ ಕತ್ತಲೆ..

*****

ಕೊಡೆಹಿಡಿದು ನಡೆದೆ
ಬಿಸಿಲ ಶಕ್ತಿ,ಮಳೆಯ ಪ್ರೀತಿ
ನನ್ನ ಸೋಕಲೇ ಇಲ್ಲ...

*****

ಪುಸ್ತಕದ ಬಣ್ಣಬಣ್ಣದ
ಹಾಳೆಗಳ ತೆರೆದಾಗ
ಚೆಂದ ಕಂಡಿದ್ದು ಮಾತ್ರ
ಕೊನೆಯಲ್ಲಿ ಇರುವ
ಬಿಳಿಯ ಆ ಖಾಲಿ ಕಾಗದ...

*****

ಕಂಡಿದ್ದು ಹೂವಾದರೂ
ಅರಳುವುದ ಹೇಳಿದ್ದು ಮುಗುಳು...

*****

ಪುಟಿಯುತ್ತ ಸೆಳೆದದ್ದು ಕಾರಂಜಿ
ಆದರೆ,ಹತ್ತಿರ ಸೇರಿಸಿದ್ದು ಮಾತ್ರ
ಮಳೆಯ ಹನಿ...

*****

ಅವನು ಹೇಳಿದ ಅಂತ
ಮುಖವಾಡ ಕಳಚಿ ಗೋರಿ ಕಟ್ಟಿದೆ..
ಈಗ ಕೇಳುತ್ತಿದ್ದಾನೆ,ಆ ಹಳೆಯ ಮುಖವೆಲ್ಲಿ!
ನಾನು ಈಗೆಲ್ಲಿಂದ ತರಲಿ..
ಗೋರಿಯ ಕಲ್ಲೂ ಕೂಡ
ಈಗ ಕತೆ ಹೇಳುತ್ತಿದೆ...

                       ~‘ಶ್ರೀ’
                         ತಲಗೇರಿ

ಶುಕ್ರವಾರ, ಡಿಸೆಂಬರ್ 25, 2015

"ಕನಸು"...

               "ಕನಸು"...

ಬಿದಿಗೆ ಚಂದ್ರಮನ ತೋಳ ತೆಕ್ಕೆಯಲಿ
ತಾರೆಗಳಿಗೆ ತಮ್ಮಿರುವ ಪ್ರಕಟಿಸುವಾಸೆಯಂತೆ..
ಸದ್ದಿಲ್ಲದೇ ಬಿದ್ದಿಹವು ಕದಪುಗಳಲಿ ಮುತ್ತಿನಾ ಕಲೆಗಳು
ನಾಚುತಲೇ ತಿಕ್ಕಿನೋಡಿವೆ ಇಣುಕುತಿಹ ಕಣ್ಣ ಕವಿತೆಗಳು..

ಉಬ್ಬಿದಾ ಮೊಗ್ಗುಗಳೆಲ್ಲಾ ಹುಟ್ಟುಹಾಕಿವೆ
ದುಂಬಿಯಾ ಕಾಲಸದ್ದನು ಅಳೆವ ಪುಳಕ..
ಅರಿವಿರದೆ ಬರಕೊಂಡ ಬಿಡಿಸಾಲುಗಳ
ಕನವರಿಕೆಗೆಲ್ಲಾ ಮುನ್ನುಡಿಯ ಹುಡುಕುತ್ತ..
ಅಟ್ಟದಾ ಮೇಲೀಗ ಲಾಂದ್ರಗಳ ಪಿಸುಮಾತು
ಹಟವಿರದೇ ಸೇರೀತೇ ಒಲವಿನಾ ಕೈತುತ್ತು..

ಸಮಯದಾ ಕಿಸೆಯಲ್ಲಿ ಚಂದಿರನ ಚಹರೆ
ಪರಿವಾರದಾ ಪರಿಧಿಯಲಿ ಹೃದಯಕ್ಕೆ ತುಂಬ ಹತ್ತಿರ..
ಹಬ್ಬಿಕೊಂಡ ನೀರಹನಿಗಳ ತುಂಬು ದಿಬ್ಬಕೆ
ತನಗೆ ಮಾತ್ರ ಇರಲಿ ಈತ ಅನ್ನೋ ಬಯಕೆ..
ಕತ್ತಲೆಯ ಪದರದಲಿ ಮಿಣುಕುಹುಳುವಿಗೂ ಅಸ್ತಿತ್ತ್ವ
ಮಿತದಲ್ಲೂ ಅರಳಬಹುದು ಎದೆಯಂಚ ಗಿಡದ ಹೂವ..

ಕಿಸೆಯ ಬಸಿರಿನಲಿ ಈಗ ಪ್ರಸವ..
ಗೂಡೊಳಗೆ ನಗುತಿತ್ತು ಅವನ ಬಿಂಬ...

                                                    ~‘ಶ್ರೀ’
                                                        ತಲಗೇರಿ

ಮಂಗಳವಾರ, ನವೆಂಬರ್ 10, 2015

"ವರದಿ"...

                "ವರದಿ"...

ನೇಸರನ ಕಿಸೆಯಲ್ಲಿ ಹಣತೆಯನು ಹಚ್ಚಿ
ನಿಶೆಯನ್ನು ಚಂದ್ರಮನ ದರ್ಬಾರಿಗೆ ಬರೆದು
ಗಡಿಯಾರದಾ ಮುಳ್ಳು ಮುಲುಗುತಿರಲಿ ಪುನಃ
ಒಂದಿನಿತೂ ಕದಲದೇ,ನೀ ಇರಲು ಸನಿಹ..
ಮುಂಗುರುಳು ಕರೆವಾಗ ಕುಣಿಯುವುದು ಹೃದಯ
ಕಾಲುಂಗುರವು ನಾಚಿರಲು ಹುಟ್ಟುವುದು ವಿಷಯ..

ಎದೆಯೆದೆಯ ಮೃದು ಪಲ್ಲಂಗದಿ
ಮಿಲನ ರೇಖೆಗಳದೇ ಮಂದಾರ ಕುಸುರಿ..
ಮುಗಿಲ ಬದುಗಳಿಗೆ ಕಟ್ಟಿದಾ ಕಮಾನಿಗೆ
ನೀನೀಗ ತಂದಿರುವೆ ಜೀವಗಳ ಬೆಸುಗೆ..
ಮೊದಲ ಮಳೆಯ ಪರಿಮಳದ ಸುವ್ವಾಲಿ
ಆಗಾಗ ಗರಿಗೆದರೋ ಶೀತಲದ ಗಾಳಿ..


ಬಿಡಾರದಾ ಹೊಸ್ತಿಲಲಿ ಉಷೆಯ ಹೆಜ್ಜೆಯ ಸದ್ದು
ಇಬ್ಬನಿಯು ಕರಗಿಹುದು,ಹಸಿರ ತೋಳಲಿ ಬೆಚ್ಚನೆಯ ಮುದ್ದು..
ಕಲರವದ ಮೆರವಣಿಗೆಗೆ ಅಣಿಯಾಯ್ತು ಬೀದಿ
ಕನಸುಗಳೆಲ್ಲಾ ಕಲೆತಿಹವು ರಂಗೋಲಿಯಾ ತೆರದಿ..
ಎಲ್ಲೆಲ್ಲೂ ನೀ ತಂದ ಋತುಮಾನದಾ ಸುದ್ದಿ..
ಈಗಷ್ಟೇ ತಲುಪಿಹುದು,ಪಾರಿಜಾತ ಅರಳಿದಾ ವರದಿ...

                                                   ~‘ಶ್ರೀ’
                                                      ತಲಗೇರಿ

ಮಂಗಳವಾರ, ನವೆಂಬರ್ 3, 2015

"ಹರಿವು"...

                 "ಹರಿವು"...

ಇಂದು,ನನ್ನೆದೆಯ ಅಂಗಳದಿ ಸೋನೆಯಂತೆ..
ತಾರಸಿಯಲಿ ತಂಗಿದ್ದ ಹನಿಗಳೆಲ್ಲಾ ಹೇಳುತಿವೆ
ಮುಗಿಲ ಸಂತೆಯ ಕುರಿತಂತೆ..
ಮೆಲ್ಲ ಮೆಲ್ಲ ಅರಳುತಿವೆ ಸಾಲಿನಲಿ
ಹಚ್ಚಿಕೊಂಡು ಪದರಕೆಲ್ಲಾ ಮಣ್ಣ ಮಿಲನ ಪುಳಕ..
ಕಾಡಲೆಂದು ಪಳೆಯುಳಿಕೆಯಂತೆ,ಜಾರಿದಾ ಬಳಿಕ...

ನೀರ ಕನ್ನಡಿಯಲಿ ತೇಲುವಾ ಚಂದಿರನ ಹೆಣವು
ತಿಳಿದೀತು ಎಂದು,ಮರಣದಾ ಕಲೆಗಳಲೂ
ಕನಸು ಕಟ್ಟುವವ ತಾನೆಂದು ಅವಗೆ..
ಮರುದಿನದ ಹಗಲು
ಹೂವಿಗೆಲ್ಲಾ ತುಂಬುವುದು ಘಮಲು..
ಹಲವು ಮೈಲಿ ಹರಿವ ನೀರಿಗೆ
ಚಂದಿರನೇ ಈಗ ಹೊಸ ನಗೆ..
ಹಾಯಿದೋಣಿಯ ಹಾದಿಗೀಗ
ಅಂಟಿಕೊಂಬುದು ಹದವಾದ ಪೂರ..
ಮತ್ತಷ್ಟು ದೂರ...

ತತ್ತಿಯೊಡೆಯಲು ಬಿಸಿಯ ಹಾಸಬೇಕು..
ಸತ್ತ ತಾರೆಗಳ ಎತ್ತರಕೆ ಭೂಮಿಯೊಂದೇ..
ಬಣ್ಣ ಬಣ್ಣದ ನೀರು ಕಲೆವ
ಭೂಮಿಕೆಯೂ ಒಂದೇ..
ಆದಿ ಅಂತ್ಯದ ಪಠ್ಯದಲಿ
ಬಸಿರ ಬಿಂದುವಲಿ ಮೊಳೆತು..
ಹರಿವು ಬದಲಾದಂತೆ,ಪಾತ್ರ ಬದಲಾದೀತು...!

                                                  ~‘ಶ್ರೀ’
                                                     ತಲಗೇರಿ

ಶುಕ್ರವಾರ, ಅಕ್ಟೋಬರ್ 23, 2015

"ಅಮಲು"...

    "ಅಮಲು"...

ಪಾರಿಜಾತದಾ ಕೇರಿಯಲಿ
ಪರಿಪರಿಯ ಪರಿಧಿಯಲಿ
ನಿನ್ನ ಹಂಗೆನಗೆ..
ಹರಿದ ಎದೆ ಭಿತ್ತಿಯನು
ಹೊಲಿದುಕೊಡುವೆಯಾ ನನಗೆ..
ಒಮ್ಮೆ ಹೀಗೇ...

ಕವಳದಾ ತುಟಿಗಳಲಿ
ಹವಳಗಳನು ಅಳೆವವಳೇ
ಹೇಳಲಾರೆಯಾ ನನಗೆ ಸೋಜಿಗದ ಲೆಕ್ಕ..
ತುಸು ತುಸುವೇ ರಂಗಿನಾ ಗುಂಗು
ಹಂಚುವೆಯಾ ನನಗೂ
ಅರಳಿಸೆಯಾ ಕುಂಚ,ವಿರಹದಾ ಬಳಿಕ..
ಕಟ್ಟುವೆನು ಪ್ರೀತಿ ಸುಂಕ...

ಬಿದಿರು ಕೋಲಿನ ಒರಟಿಗೆ
ಹರಿತ ಸ್ವರಗಳ ಹದವಿಡುವವಳೇ
ಒಸರಲಿದೆ ತನಿಗವನ..
ಮೊದಲ ಬದಲಿನ ಒಗಟಿಗೆ
ನೀನೇ ತಾನೇ ಅದಿರು
ಬೇಕೀಗ ಖಾಸಗಿತನ..
ನವಿರು ಹಂಬಲಕೆ...

ಬಿಡಿಯ ಬಡಿತದ ಸೊಗಡಿನಲ್ಲಿ
ಹಕ್ಕು ನಿನ್ನದು ಬಿಡಾರ ಹೂಡಲು..
ಮಸುಕು ಕವಿದರೂ ಮತ್ತೆ ಮನಸಿನಲ್ಲಿ
ಒಮ್ಮೆ ನೋಡು,ಹೆಸರಿಡದೆ ನಾ ಕರೆದಾಗಲೂ..
ನೀನೇನೇ ಜೀವನದಾ ಅಮಲು...

                                ~‘ಶ್ರೀ’
                                    ತಲಗೇರಿ

ಭಾನುವಾರ, ಅಕ್ಟೋಬರ್ 11, 2015

"ನೇಹಿಗ"...

      "ನೇಹಿಗ"...

ಒಂದು ಹೆದ್ದಾರಿಯಾ ಬದಿಗೆ
ಮೈಚಾಚಿ ಮೆರೆಯುತ್ತಿತ್ತು ಅರಮನೆ..
ಮುಚ್ಚಿದಾ ಬಾಗಿಲ ಫಲಕದಾ ಮೇಲೆ
ಬರೆದಿತ್ತು..
ತಟ್ಟಬೇಡಿರಿ ಕದವ,ಭಿಕ್ಷುಕರು ನೀವು
ನನಗೆ ಸರಿಸಮರಲ್ಲ..

ದಾರಿಹೋಕನ ಧ್ಯಾನಕೀಗ
ಹೂಬಿಡುವ ಸಮಯ..
ಮಗ್ಗಲು ಬದಲಿಸಿತು
ಕುತೂಹಲದ ಖಯಾಲಿ..
ಬಾಗಿಲಿಗೆ ಬಂದು ದೂಡಿದೆ;
ತೆರೆದುಕೊಂಡಿತು,ಚಿಲಕ ಹಾಕಿರಲಿಲ್ಲ..

ಅತಿಥಿಯೆಂದು ನೀ ತುತ್ತನಿಡಲಿಲ್ಲ;
ನೀರ ಕರೆಯಿಲ್ಲ..
ಹಂಗೆಂದರೆ ನಾ ಮೆಟ್ಟಿದಾ ನೆಲ ಮಾತ್ರ..
ನೀನೆಸೆದ ತಾತ್ಸಾರಕೆ,ಹಂಚಿಕೊಳಬಲ್ಲೆ ನಾನು
ಜೀವ ತುಂಬಿದಾ ಒಲವ ನಗೆ ಜೇನು..

ದ್ವೇಷ ಮತ್ಸರ ಮೋಹದಾಸೆಗಳ ಸಂಗ್ರಾಮದಲಿ
ನಿನ್ನ ಹೃದಯದಾ ತುಂಬೆಲ್ಲ ಗೀರುಗಳು..
ಕೊಡಲೆಂದೇ ಬಂದಿಹೆ,ಅದಕೊಂದು ವಿನ್ಯಾಸ..
ನೀ ಬಯಸದಿದ್ದರೇನಂತೆ!..
ಅರ್ಥಗಟ್ಟೀತು ಬೆವರು,ಆವಿಯಾಗುವಾ ಮುನ್ನ..
ನಿನ್ನಲ್ಲೇ ತಂಗೀತು ತನಿಗಂಪು ರಸವು..

ಹಲವು ನದಿಗಳು ಸೇರದೇನೇ
ಹುಟ್ಟೀತು ಹೇಗೆ ಉಕ್ಕುವಾ ಕಡಲು..
ಈಗಷ್ಟೇ ನಾ ತೆರೆದ ಕಿಟಕಿಗಳಲಿ,ನುಸುಳೀತು ಬೆಳಕು
ಚಿಗುರೀತು ನಿನ್ನೆದೆಯಲ್ಲಿ ಬಿತ್ತಿದಾ ಬೀಜ
ಮಣ್ಣಿಗೂ ಬೇರಿಗೂ ಎಷ್ಟೋ ಜನುಮದ ಬಂಧ..

ಮಸಣ ಮೌನವ ಕಳೆದು
ಚಿಲಿಪಿಲಿಯ ಕರೆತಂದ
ನೀನ್ಯಾರೆಂಬ ನಿನ್ನ ಪ್ರಶ್ನೆಗಿಲ್ಲಿದೆ  ಉತ್ತರ..
ಪದಗಳನು ಹೆಕ್ಕುತಾ,ಭಾವಗಳನು ಚೆಲ್ಲುತಾ
ಅಲೆಮಾರಿಯಂತೆ ಎದೆಯೆದೆಗೆ ನಡೆವಾ
ನಾನು ‘ಕವಿ’ಯು....!!

                                  ~‘ಶ್ರೀ’
                                    ತಲಗೇರಿ

ಶನಿವಾರ, ಅಕ್ಟೋಬರ್ 3, 2015

"ಹ್ರಸ್ವ..."

        "ಹ್ರಸ್ವ..."

ಬಿಸಿಲ ಬನದಲಿ ಹಾಯಿದೋಣಿಗೆ
ಮೈದಡವುತಿರುವ ಅಲೆಗಳಲ್ಲೇ ಸಂಭ್ರಮ..
ಹೆಗಲಿಗೇರಿದಾ ಮುಗಿಲ ತೊದಲಿಗೆ
ಗಗನ,ನಂಟು ಬೆಸೆಯುವ ಮಾಧ್ಯಮ..

ಶೀತಗಾಳಿಯ ಸಲಿಗೆಗೆಲ್ಲಾ
ಬರೆದು ಇಟ್ಟಿದೆ ಗಳಿಗೆಯಾ ಸಹಿಯನು;
ನಾವೆಯನು ಧ್ವನಿಸುವಾ ಆ ಬಿಳಿಯ ಧ್ವಜವು..
ಮಾತು ಸರಿಯದ ಕೊರಳ ತುಂಬ
ತಂತು ಕಂಪನ,ಜನ್ಯ ಶ್ರಾವಣ..

ರಂಗು ಕುಸುರಿಯಾ ಚಿಟ್ಟೆಯಂತೆ
ಹ್ರಸ್ವವೆಂದೂ ಎಲ್ಲ ಋತುಮಾನ..
ಬತ್ತಿಹುದು ಒಡನಾಡಿ ಕಡಲು
ಗೆದ್ದಲಿಗೂ ಎದೆಯ ಕೊಟ್ಟಿವೆ
ದೋಣಿಯಾ ದಳಗಳು..

ಉಸುಕ ಹಸೆಯ ಚಾದರದಿ
ಡೇರೆ ಹೂಡಿವೆ ಆಸೆಗಳ ವಿನ್ಯಾಸಗಳು..
ಮತ್ತೊಮ್ಮೆ ಹರೆಯವಾ
ಎದುರುನೋಡುತಿದೆ ಆ ಬಿಳಿಯ ಧ್ವಜವು..
ಕಡಲಿನಾ ಪ್ರೀತಿಯಲಿ...

                                  ~‘ಶ್ರೀ’
                                     ತಲಗೇರಿ

ಭಾನುವಾರ, ಸೆಪ್ಟೆಂಬರ್ 27, 2015

"ನಿವೇದನೆ..."

         "ನಿವೇದನೆ..."

ಲಾಂದ್ರದಾ ಹಾಡಿನಲಿ ನನ್ನ ನೆರಳ ಹುಡುಕಿದರೆ
ಕೇಳಿದ್ದು ಮಾತ್ರ ನಿನ್ನ ಹೆಸರ ಪಿಸುಮಾತು..
ಹಿತವಾದ ಋತುಮಾನವೊಂದು
ಪಲ್ಲವಕೆ ಅಣಿಯಾಯ್ತು..

ಕನಸಲ್ಲೂ ಕೂಡ ಮಳೆಯಲ್ಲಿ ತೋಯ್ದು
ಎದುರಲ್ಲಿ ಬಂದು ನಾಚದಿರು ಗೆಳತಿ!
ಕಳೆದುಹೋಗುವೆ ನಾನು,ನನಗೇ ಸಿಗದಂತೆ
ಮಡಿವಂತಿಕೆಯ ಬೀದಿಯಲಿ
ಬಣ್ಣ ಮಾಗಿದಾ ಜಾತ್ರೆ..

ಬಯಕೆಯಾ ಕದಿರುಗಳಿಗೆ ನೀನೊಂದು ಆಕಾಶ..
ಒತ್ತಾಗಿ ನೇಯಬೇಕು ಚಂದ್ರ ಜಾರದಂತೆ..
ಗೆರೆಗಳಿಗೆ ಅಂಟಿರುವ ಪದಗಳೆಲ್ಲಾ
ಎದೆಯೆದೆಯ ಗೋಡೆಗಳ ನೆಚ್ಚಿನಾ ಸಾಲುಗಳು..
ಕೋಣೆಗಳಿಗೆ ಎಂದೂ ಅವು ಖಾಸಗಿ..

ಗಾಳಿಯಲಿ ಬೆರೆತಂತೆ ನಿನ್ನ ನೆನಪ ಸೌರಭವು
ನನ್ನೆದೆಯ ತೋಟದಲಿ
ಬೀಡುಬಿಟ್ಟಿವೆ ಚಿಟ್ಟೆಯಾ ಹಿಂಡು..
ನಿನ್ನ ಸ್ವಪ್ನದಲಿ ನಾ ಬರುವ ನಿಮಿಷವ
ಕಾಯ್ದಿರಿಸಿ ಬರೆಯುತಿದೆ
ನಿನ್ನೆದೆಯ ತಕರಾರು..
ಅನುಮತಿಸು ಒಂಚೂರು...

                                     ~‘ಶ್ರೀ’
                                         ತಲಗೇರಿ

ಶನಿವಾರ, ಸೆಪ್ಟೆಂಬರ್ 12, 2015

"ಕನ್ನಡಿಯೂ ಸುಳ್ಳಾಡುತ್ತಿದೆ..."

"ಕನ್ನಡಿಯೂ ಸುಳ್ಳಾಡುತ್ತಿದೆ..."

ಅರೇ! ಕನ್ನಡಿಯೂ ಈಗೀಗ
ಸುಳ್ಳಾಡುತ್ತಿದೆ..
ಮೊನ್ನೆಯಷ್ಟೇ ತೋರಿಸಿತ್ತು ನನಗೆ
ಬೊಚ್ಚು ಬಾಯಿಯ,ಅಚ್ಚ ತೊದಲಿನ
ಆಪ್ತ ನಗುವನ್ನ..
ನಿನ್ನೆ ಕೂಡ ಬದಲಾಗಿತ್ತು,
ಕನ್ನಡಿಯ ಮೈಗೆಲ್ಲ
ಇಂದ್ರಿಯದ ಆಸೆಗಳ
ವಾಸನೆ ಅಂಟಿತ್ತು..
ಆದರೆ,ಇಂದು..
ಮತ್ತದೇ ಬೊಚ್ಚುಬಾಯಿಯ ಜೊತೆಗೆ
ಜೋಲುತಿಹ ಚರ್ಮ,ಕಾಡುತಿಹ ಕರ್ಮ..
ಕ್ಷಣಗಳೆಲ್ಲಾ ಕಾದಿದ್ದು,
ಒಟ್ಟಾಗಿ ಪರಚಿದಾ ಮುಖದ ಮೇಲೀಗ
ಕತೆ ಹೇಳುವಾ ಗೀರುಗಳು..
ಚೌಕಟ್ಟಿನಾ ಗಾಜಿನಲಿ
ಸಂಜೆಗಳ,ಆದ್ಯ ಮರ್ಮ..

ನಾ ತೊಟ್ಟ ಮುಖವಾಡಕೆಲ್ಲ
ಜೀವ ಸುರಿದಂತೆ ಕಂಡಿತ್ತು..
ನಾ ಬಯಸಿದಾ ಬಗೆಗೆಲ್ಲಾ
ರೆಕ್ಕೆಗಳ ಹಡೆದಿತ್ತು..
ಈ ಸಂಜೆ..ಯಾಕೋ
ಕುಳಿತಿಹುದು,ವೈರಾಗಿಯಂತೆ..
ಈವರೆಗೆ ತೋರಿದ್ದ ನನ್ನೆಲ್ಲಾ
ಚಾರುಬಿಂಬಗಳು ಅದಕೀಗ ಬೇಕಿಲ್ಲ..
ಮಸುಕಾದ ಮೇಲೆ
ಹುಡುಕುತ್ತಾ ಹೊರಟ ನನಗೆ..
ಕನ್ನಡಿಯೂ ಈಗೀಗ ಸುಳ್ಳಾಡುತ್ತಿದೆ...

                                 ~‘ಶ್ರೀ’
                                     ತಲಗೇರಿ

ಭಾನುವಾರ, ಆಗಸ್ಟ್ 30, 2015

"ಸಂಚಿಕೆ..."

     "ಸಂಚಿಕೆ..."

ಕೆಂಪುರಂಗಿನ ಸಂಗಕೂ
ಚಾಚಿದಾ ಹೆಣದ ರಾಶಿ..
ಬರಲಾರನೇ ಬಾನೆಡೆಗೆ
ಕಂಪುರಾತ್ರಿಯ ಮೃದುಭಾಷಿ..
ಮೇಘಕ್ಕೂ ತಾಡಿಹುದೇ
ತಿಮಿರದಾ ಸಂವೇದನೆ...

ಅಂತರಂಗದ ಅಸಲಿ ಕತೆಗಳಾ
ಹರಿದ ಪುಟಗಳ ಅಕ್ಷರದ ಪಾಡು..
ಕುಂಟುತ್ತ ಎದೆಯೊಳಗೆ ತೊದಲುತಿದೆ
ಅಂಕಣದ ಜೀವಗಳು ಚೆದುರಿದಾ ಹಾಡು..
ತನನಕ್ಕೂ ತಾಡಿಹುದೇ
ತಿಮಿರದಾ ಸಂವೇದನೆ...

ನಡೆದಂತೆ ಋತುಮಾನ,ಬೀದಿಯಲಿ
ದ್ರವವಾಯ್ತು ಬಾನಿನಾ ಕರಿಧೂಳು..
ತುಂಬೀತು ಬೆಳಕು ಪೂರ ಕೋಣೆಯಲಿ
ಅರ್ಧ ತೆರೆದಿಟ್ಟರೂ ಪುಟ್ಟ ಬಾಗಿಲು..
ಬಿಡಿಗಳೊಂದೊಂದನೇ ಎದೆಯೊಳಗೆ ಕೂರಿಸಲು
ಕಾರಣದ ದಾರವು ನೀನೇನೇ..
ಕಂತುಗಳ ಸಂಚಿಕೆಯು ಈ ಬದಲಾವಣೆ...

                                           ~‘ಶ್ರೀ’
                                              ತಲಗೇರಿ

ಶುಕ್ರವಾರ, ಆಗಸ್ಟ್ 28, 2015

"ಮೊರೆತ..."

          "ಮೊರೆತ..."

ಕನಸುಗಾಡಿನ ಬಿಸಿಲ ನಡಿಗೆ
ಅಂತರದ ಸನಿಹಕ್ಕೆ ಅರ್ಥವಾಗದ ಬೆವರು..
ಮುರಿದು ಬಿದ್ದಿಹ ಬಿದಿರ ಕೋಲಿಗೆ
ರಂಧ್ರಗಳ ಜೊತೆ ಸಿಗಲು,ಸ್ವರಗಳಾ ತಳಿರು..
ಖಾಲಿಹಾಳೆಯ ನಾಳೆಯೊಳಗೂ
ಖಾಲಿಯಾಗದ ಕಡಲ ಮೊರೆತ...

ಬಿಗಿದ ಬಿಲ್ಲಿನ ದಾರಕೇನೋ ಬಯಕೆ
ತಲುಪಿದ್ದು ಕೊನೆಗೆ ಬೆರಳಚ್ಚಿನಾ ಬಾಣ..
ಚಿಗುರು ಹುಲ್ಲಿನ ಉಗುರ ತುದಿಗೆ
ಹಚ್ಚೆ ಹಾಕುವ ಕೆಲಸ ಹುಡುಕುವಾ ಕಿರಣ..
ಖಾಲಿಹಾಳೆಯ ನಾಳೆಯೊಳಗೂ
ಖಾಲಿಯಾಗದ ಕಡಲ ಮೊರೆತ...

ಎದೆಯ ಪನ್ನೀರು ತೊರೆಯಾಗಿ ಹರಿದಾಗ
ಹುಟ್ಟಿದ್ದು ಮಾತ್ರ ಅಂಬರದ ಅಲೆಗಳು..
ಕೂಡುವಾ ಆವೇಗ ಕವಲಾಗಿ ಬಿರಿದಾಗ
ಬದಲಾಗೋ ಪಾತ್ರಕ್ಕೆ ನೂರಾರು ಮುಖಗಳು..
ಖಾಲಿಹಾಳೆಯ ನಾಳೆಯೊಳಗೂ
ಖಾಲಿಯಾಗದ ಕಡಲ ಮೊರೆತ...

                                          ~‘ಶ್ರೀ’
                                             ತಲಗೇರಿ

ಭಾನುವಾರ, ಆಗಸ್ಟ್ 9, 2015

"ಮೌಲ್ಯ..."

        "ಮೌಲ್ಯ..."

ಗುಡಿಸಲಿನ ಕಿಂಡಿಗಳಲಿ ಬೆಳ್ಳಿ ಕಿರಣ
ಸಹಜ ಕಲೆಯ ನೈಜ ವ್ಯಾಕರಣ..
ಹಸಿದ ಗಳಿಗೆ ತಿಳಿಯಿತೆನಗೆ
ಅಗಳಿಗೂ ಬೆಲೆಯ ಕೊಡುವ ಕಾರಣ..

ಹರಕು ಚಾಪೆಯ ಮೇಲೆ ಮಲಗಿದಾಗಲೇ
ತಿಳಿದದ್ದು ಭೂತಾಯಿಯಾ  ಪ್ರೀತಿ..
ತಿಳಿನೀರು,ಗಂಟಲಲಿ ಇಳಿದಾಗಲೇ
ಅರಿವಾಯ್ತು ಸೃಷ್ಟಿಯಾ ನಿಜ ಶಕ್ತಿ..

ಹೂವಿರದ,ಹಣ್ಣಿರದ,ಎಲೆ ಮಾತ್ರ ಇರುವ
ಮರದಲ್ಲೂ ಇಹುದು ಬತ್ತದಾ ಮಮತೆ..
ದಣಿದ ದೇಹಕೆ,ಗೂಡಿಡುವ ಹಕ್ಕಿಗೆ
ಮಾತ್ರ ಸೀಮಿತ ಮಡಿಲಿನಾ ಕತೆ..

ಅರಮನೆಯ ಗಾಳಿಗೆ ದರ್ಪದಾ ಬಿಗುಮಾನ
ಚಂದಿರನ ಚಾವಡೀಲಿ ಚೆಲುವುಗಟ್ಟುವಾ ಪವನ..
ಪುಟಗಳಲಿ ಬೆಚ್ಚಗಿನ ನವಿಲಗರಿಗಿಂತ
ಹನಿಗಳಲಿ ಹದವರಿತು ನೆನೆವುದೇ ಮಧುರ ತನನ..

ನಕ್ಷತ್ರವೊಂದು ಚೆಂದದಾ ಆಸೆ
ಕೈದೀಪ ಜೊತೆಯಿರುವ ಒಲವಿನಾ ಬೊಗಸೆ..
ಕೊನೆತನಕ ಕರಗದೇ ಉಳಿಯಬೇಕೆಂದಿಲ್ಲ
ದಾರಿಹೋಕನ ಕಣ್ಣ ಖುಷಿ ಅದರ ಪಾಲಿಗೆಲ್ಲಾ...

                                                 ~‘ಶ್ರೀ’
                                                     ತಲಗೇರಿ

ಶನಿವಾರ, ಆಗಸ್ಟ್ 8, 2015

"ಅರಿಕೆ..."

   "ಅರಿಕೆ..."

ಹೆಚ್ಚಿತೇ ಬಯಕೆ
ನೀಲಾಕಾಶದ ಕನ್ನಡಿ..
ಅಡಗಿಸೆ ಪಳಗಿಸೆ
ಕಲ್ಲಿಗೂ ಹೊಳಪಿದೆ
ಕಾಲನ ಮೊರೆತದಲಿ..

ಅತ್ತಿಂದಿತ್ತ ಹೊಯ್ಯುತ್ತಿದ್ದ ನಾವೆಗೆಲ್ಲ
ಪಯಣ ಸಲೀಸು ಈಗ..
ಹುಟ್ಟು ಹಾಕುವ ತೋಳುಗಳಿಗೆ
ಕೊಂಚ ಸಡಿಲ ಕೆಲಸ..
ಸಾಗರವೇ ನೀನೇಕೆ ಶಾಂತವಾದೆ?!..

ಕಟ್ಟುತ್ತಲೇ ಮರಳ ಮನೆಯ,
ಓಡೋಡಿ ಬರುವ ಅಲೆಯ ಸದ್ದಿಲ್ಲ..
ಕೆಡವುವರ್ಯಾರಿಲ್ಲ..
ಚಿಣ್ಣರಲಿ,ಕಳೆದು ಪಡೆಯುವ
ಹಂಬಲವಿಲ್ಲ,ನಗುವಿಲ್ಲ;
ಅಲೆಯ ಭಯವೂ ಇಲ್ಲ..

ಕಂಪನದ ಹಂಗಿಲ್ಲದೆ
ಕಾಡಲಾರವು ನೆನಪುಗಳು..
ಒಂಚೂರು ದಿಟ್ಟತನ
ತುಂಬಿಕೊಡು ಹೆಜ್ಜೆಗಳಿಗೆ..
ಬೆನ್ನಟ್ಟಿಬನ್ನಿ ಅಲೆಗಳೇ....
ಚೀರುತ್ತ ಕಾಯುತಿದೆ
ಬಿಸಿ ನೆರಳು,ಹಸಿಯಾಗಬೇಕೆಂದು..
ಮತ್ತೆ ಚಿಗಿಯಲಿ,ದಡದಲಿ
ನನ್ನದೆಂಬುದನು ಉಳಿಸಿಕೊಳುವ
ಚೂರು ಹೋರಾಟ..
ಭವಿತವ್ಯಗಳ ಪುಟ್ಟ ಕಂಗಳಲಿ
ಇಣುಕಿ ಅರಳಲಿ
ಮರಳ ಮನೆಯ ಅಸ್ತಿತ್ತ್ವದ
ಸಂತೃಪ್ತ ನೋಟ...

                            ~‘ಶ್ರೀ’
                               ತಲಗೇರಿ

ಸೋಮವಾರ, ಜುಲೈ 20, 2015

"ವ್ಯಕ್ತ.."

   "ವ್ಯಕ್ತ.."

ಕರಿಯ ಸರಳುಗಳ
ಪುಟ್ಟ ಗೂಡಲಿ
ತಟ್ಟಿ ಮಲಗಿಸಿರುವ
ಹಕ್ಕಿ ನಾನು..
ಸಲಹೋ ಬೆರಳಿನ
ಮಮತೆ ಪ್ರೀತಿ
ಹಚ್ಚಿಕೊಂಡಿಹ ರೀತಿ..
ಆದರೂ ರೆಕ್ಕೆ ಬೀಸದಂತೆ
ಗಾಳಿಗೊರಗದಂತೆ
ತಡೆದ ಜಾಲ
ಈ ಕುರುಡು ಶಾಪ..

ಅತ್ತ ಚಿಗುರೆಲೆಯ
ತುದಿಗಳಾ ತೀಡಿ..
ಮನದುಂಬಿ ಭೂರಮೆಗೆ
ಜೋಗುಳವ ಹಾಡಿ..
ಕಸಕಡ್ಡಿಗಳ ಗೂಡಿನಲಿ
ನಿತ್ಯ ತೂಗಾಡಿ..
ಕಾಳು ಹೆಕ್ಕುವ ಕಾಡಹಕ್ಕಿಗೆ
ಬೇಟೆಗಾರನ ಹೆದರಿಕೆ..

ನಾಲ್ಕು ಗೋಡೆಯ ಮಧ್ಯ
ಅಳೆದಳೆದು ತೂಗಿ
ಹಣೆಬೊಟ್ಟು ಇಡುವ ಗರತಿ..
ಭಾಷೆಯಿದ್ದರೂ ಹಾಡಾಗದೆ
ಎದೆಯೊಳಗೇ ಬಿಕ್ಕಳಿಸುವ ಸ್ಥಿತಿ..
ಅಂದ ಸ್ವಚ್ಛಂದದಲಿ
ಬಣ್ಣ ಹೀರುವ ದುಂಬಿಯಾ
ಕಾಮ ದುಂದುಭಿ..
ಅಗಲ ಬಾನಿನ ಎಲ್ಲ ದಿಶೆಯಲೂ
ಹೊಂಚುಹಾಕುವ ‘ಬೇಡ ಬಾಣ’..

ಸ್ವಾತಂತ್ರ್ಯವಿದು..
ದೇಹಕ್ಕೋ..
ಇಲ್ಲಾ,ದೇಹಧಾರಿಗೋ..
ಬದುಕು..
ಒಳಗಿನಾ ಬೆರಗು..
ಹೊರಗಿನಾ ಸೋಗು...

                        ~‘ಶ್ರೀ’
                           ತಲಗೇರಿ

ಶುಕ್ರವಾರ, ಜುಲೈ 3, 2015

"ಸ್ಥಿತಿ"...

          "ಸ್ಥಿತಿ"...

ಸುತ್ತಮುತ್ತಲೂ ಮಳಲ ರಾಶಿ
ಮಂದಗಾಳಿಗೂ ನೆಲದ ಸೆಳೆತ ಮೀರಿ
ಮೇಲೆ ಹಾರುತಿಹವು ಕಣಗಳು..
ಎಲ್ಲಿಹೆನು ನಾನು !
ಸರಳ ಸ್ವಪ್ನದ ಸೆರಗ ಹುಡುಕಿ
ಸೂರಿರದ ಅಲೆಮಾರಿ
ಮರಳುಗಾಡಿನ ಮಡಿಲಲಿ..

ಕಂಡಂತೆ ಎಲ್ಲೋ ಜಲದ ಬಿಂಬ
ಮತ್ತೆ ಮರಳು..
ನೀರ ನೆರಳು ಬರಿಯ ಭ್ರಮೆ..
ತೆಂಗುಗರಿಗಳ ನೆರಿಗೆ
ಬಿಸಿಲ ಹಸಿವಿಗೆ ಸೊರಗಿದೆ
ಅಲ್ಲೂ ಕಂಡೂ ಕಾಣದ
ಚೂರು ತಂಪಿದೆ..

ಏನಿದು ಹಸಿ ವಿಸ್ಮಯ !
ಇಷ್ಟೊತ್ತು ಕಂಡ
ಉಸುಕ ರಾಶಿ ಈಗಿಲ್ಲ..
ಹಸಿರು ರೆಕ್ಕೆಯ ಹಚ್ಚಿಕೊಂಡು
ತೂಗುತಿರುವ ಕೊಂಬೆ ನೂರು..
ನಾ ನಿಂತ ನೆಲವದು ಈಗ
ಮರುಭೂಮಿಯಲ್ಲ..

ಈ ಬಾರಿ,ಬಿಸಿಲ ಸಾರವ ಹೀರಿ
ಮುಗಿಲಿಗೆಲ್ಲ ಮಾಡು ಕಟ್ಟುವ ಹುರುಪಲಿ
ಹಕ್ಕಿ ಗೂಡಿಗೂ ಹೆಗಲು ಕೊಟ್ಟಿವೆ
ಅದೇ ತೆಂಗಿನ ಮರಗಳು..
ತೆರೆಗಳಿರದ ನೀರ ನುಣುಪಲಿ
ನನ್ನೇ ನಾ ನೋಡಿದರೆ
ಅರೇ ! ನಾನೆಂಬ ನಾನಿಲ್ಲ..
ಬದಲು,ನನ್ನಂತೆಯೇ ಇರುವ
ಒರಟು ಕೀಲು ಗೊಂಬೆ... !!

                               ~‘ಶ್ರೀ’
                                   ತಲಗೇರಿ

ಭಾನುವಾರ, ಮೇ 31, 2015

"ಮತ್ತೆ..."

      "ಮತ್ತೆ..."

ತಾರೆಯಿರದ ರಾತ್ರಿಗಳಲಿ
ನಾವೆಗ್ಯಾರು ದಾರಿದೀಪ..
ಚಾಚೋ ಹುಟ್ಟಿನ ಹಟದಲಿ
ಕರಗೀತೇ ಕರಿಸ್ವರದ ಶಾಪ..

ನೀನೇ ಹಾಕಿದ ಬೇಲಿಯೊಳಗೆ
ಮುದುಡಿ ಕೂತಿದೆ ಮೌನ ಬಿಡಾರ..
ಬಾನು ತಾಕಿದ ಅಗಲ ದಿಶೆಗೆ
ಬೆಳಕು ಇಡುವುದೇ ನೆರಳ ಚಿತ್ತಾರ..

ಹಾರಿಹೋದ ಮೋಡವಿನ್ನು
ಮಳೆಯ ತರದೇ ‘ಕಾದ’ ಎದೆಗೆ..
ಹೀರಿಕೊಂಡ ಅರಳು ಜೇನು
ಹಸಿವ ಮರೆಸೀತೇ ಕೊನೆಯವರೆಗೆ..

ಆಳ ಗಾಯದ ನೋವ ತುದಿಗೂ
ಅಳೆದು ಕೂತಿದೆ ವಾಸಿಯಾಗುವ ಭರವಸೆ..
ಹೇಳಲಾಗದ ಹಲವು ಮಾತಿಗೂ
ಬಳಿದುಕೊಂಡಿಹೆ ಅರ್ಥ ದೊರಕಿಸೋ ಆಸೆ..

ಪರಿಧಿ ಕ್ರಮಿಸುವ ಸಮಯ
ದಾಟಿ ಬಂದಿದೆ ವಾಸ್ತುಬಾಗಿಲ ಒಳಗೆ..
ತೊರೆದು ಬಿರುದು,ದಾರದ ಭ್ರಮೆಯ
ಹೆಜ್ಜೆಯಿಡುವೆ ಮತ್ತೆ ಪರಸೆಯಾ ಒಡಲಿಗೆ...

                                                   ~‘ಶ್ರೀ’
                                                       ತಲಗೇರಿ

ಭಾನುವಾರ, ಮೇ 17, 2015

"ನೆನಪು ಗೀಚಿದ ಸಾಲಿಗೂ..."

"ನೆನಪು ಗೀಚಿದ ಸಾಲಿಗೂ..."

ಸ್ವಪ್ನಗಳ ಸಾರಥಿಯೇ
ಹರೆಯ ಸೆಳೆದಿದೆ ಋತುವ
ಪರಿಚಯದ ಭ್ರಾಂತಿಯೇ
ಮರೆವು ಕಳೆದಿದೆ ಹೆಜ್ಜೆ ಹೂವ..

ಬೆರಳು ಜಾರಿದ ಅವಧಿ
ಮೂಕವಾಗಿದೆ ಅಂಬರ..
ಮತ್ತೆ ಸೇರದ ನೆರಳಿಗೇಕೆ
ದೂರ ಎಣಿಸುವ ಕಾತರ..
ಎಲೆಗಳುದುರದ ರೆಂಬೆಗೂ
ಕಟ್ಟಲಿಲ್ಲ ಹಕ್ಕಿಗೂಡು..

ಅಗಲ ಬಾನಿನ ಬಿಸಿಲು
ಹೀರುವುದು ಎದೆಯೆದೆಯ ಹನಿಯ..
ಹೆಗಲಿಗೊರಗದ ಮುಗಿಲು
ಮೂಡಿಸದೇ ಮಳೆಬಿಲ್ಲ ಕಲೆಯ..
ಸರಿಯಲೊಲ್ಲದ ಸಲಿಗೆ
ಸೇರಲಿಲ್ಲ ಒಲವ ಜಾಡು..

ನೆನಪು ಗೀಚಿದ ಹಲವು ಸಾಲಿಗೂ
ತಾವೇ ಹುಟ್ಟಿವೆ ಬದಲು ಉತ್ತರ..
ಅರ್ಥವಾಗದೇ ಉಳಿಯಿತೇ ಕೊನೆಗೂ
ಎರಡು ಪದಗಳ ನಡುವಿನಾ ಅಂತರ..


                                      ~‘ಶ್ರೀ’
                                         ತಲಗೇರಿ

ಭಾನುವಾರ, ಏಪ್ರಿಲ್ 19, 2015

"ಅರ್ಥ"...

           "ಅರ್ಥ"...

ಬಿಗಿದ ಬಾಹುಗಳು ಸಡಿಲವಾಗುವ ಕ್ಷಣದಿ
ಕದಲಿತ್ತು ಸಾಲಿನಲಿ ಬೆವರ ಹನಿಗಳ ಪರಿಧಿ..
ಬರೆದ ಪದಗಳಾ ಅಂತರದ ನಿಲುವಿಗೆ
ಕಾರಣದ ಲೇಪವಿಹುದೇ ಲೇಖನಿಯ ತುದಿಗೆ..

ಇಂದ್ರಿಯದ ಹರೆಯಕ್ಕೆ ಹಂದರದ ಹಂಬಲ
ಹಬ್ಬಿಕೊಂಡೀತು ಬಳ್ಳಿ,ಬಿಸಿಲಿನಾ ತಾಸಿನಲಿ..
ಬದಲಾಗೋ ಮಾಸಗಳು ಚೆಂದಗೊಳಿಸುವವು ಹಗಲ
ತುಂಬಿಬಂದೀತು ಬಾನು,ಬೆಳಕ ನೆರಳಿನಲಿ..

ಅಂಕುಡೊಂಕಿನ ಪಥದ ಕೊನೆಗೆ
ಚಾಚಿಕೊಂಡಿದೆಯೇನು ನಿಟ್ಟುಸಿರ ಗಮ್ಯ..
ಬಿಂಕ ಸೋಕಿದ ಹೆಜ್ಜೆ ದನಿಗೆ
ಹೇಳಿಕೊಟ್ಟಿತೇ ಹವೆಯು ಹರಿತದಾ ರಮ್ಯ..

ಸುಮದ ಜೇನ ಸತತ ಹೀರಿಯೂ
ಪತಂಗದಾ ರೆಕ್ಕೆಗಿಲ್ಲ,ಎಸಳ ಬಣ್ಣ..
ಅಮಲು ಸ್ಪರ್ಶದ ಪ್ರವರ ಭೇಟಿಯು
ಹಂಗಿನಾಚೆಗೂ ಮೀರಿದೆ ಗರ್ಭದಾ ತನನ..

ಹನಿಯುದುರಿ ಹಸನಾಯ್ತು ಹರೆಯದಾ ಸ್ವಾರ್ಥ
ಮಣ್ಣಿನಲಿ ಚಿಗುರಿತ್ತು ನೂರು ಆಗಸ..
ವಿನಿಮಯದ ಕೊನೆಯಲ್ಲಿ ಉಳಿದಿದ್ದು ಅರ್ಥ
ಬರೆದಾಯ್ತು ಸೋಜಿಗದ ತಾಜಾ ವಿನ್ಯಾಸ..

                                           ~‘ಶ್ರೀ’
                                              ತಲಗೇರಿ

ಶುಕ್ರವಾರ, ಏಪ್ರಿಲ್ 17, 2015

"ಸಮಯ"...

            "ಸಮಯ"...

ಬದುವೆಲ್ಲಾ ಹದವಾಗಿ ಕಾದಿಹುದು ಮೃದುವ
ಅತ್ತ ತಂಪಿನ ಮಾಡು ಮೂಡುವ ಭ್ರಮೆಯಲಿ..
ನದಿಯೆಲ್ಲಾ ಕಡಲನ್ನು ಸೇರುವಾ ಸ್ವರವ
ಮತ್ತೆ ಇಂಪಿನ ಒನಪು ಮಾಡಿತು ಹೊಸತಿನಲಿ..

ನಿಶೆಯ ಪ್ರಸವದಲಿ ಚಂದ್ರನೆನ್ನುವ ಮಧುವು
ಹವೆಯೊಳಗೆ ಹಂಬಲದಿ ಅಲೆದಿಹುದು ಮುಗಿಲು..
ಸರಿಸಿ ತೆರೆದೀತೇ ಅಗಳಿಯನು ಕದವು
ತುಂಬೀತೇ ಮತ್ತೊಮ್ಮೆ ಖಾಲಿಯಾಗಿಹ ಬಿಸಿಲು..

ಗಾಳಿಯಾ ಗಡಿಬಿಡಿ ಋಣದ ಮಾತು
ಕಾಯದೇ ಉದುರಿತು ಕಾಲಕೆ ಹಳತು..
ಭೂಮಿಯಾ ಬಸಿರಿನ ಜೋಗುಳ ಸೆಳೆತ
ಕಾಮದ ಸಮಯವ ಕೇಳದೇ ಕಸಿಯಿತು..

ರೆಕ್ಕೆಯ ಬಿಚ್ಚಿತು ಬೆಳಕಿನ ಹಕ್ಕಿ
ಹಾದಿಯ ಮೋಹದ ಮಂಜನು ಕರಗಿಸಿ..
ಪಕ್ಕದ ಪಯಣಿಗ ಎಲೆಗಳ ಹೆಕ್ಕಿ
ಜೋಳಿಗೆ ತುಂಬಿಹ ಆಸೆಯ ಪೋಣಿಸಿ..

ಹರಿದ ಚೀಲದ ಮೈಗೆ,ತೇಪೆಗಳ ಉಪಚಾರ
ಬೊಗಸೆಯಲಿ ಉಳಿದಿಹುದು ಬರಿಯ ಮಣ್ಣಿನ ವಾಸನೆ..
ಬಿರಿದ ಹೂಗಳು ಕೈಗೆ,ಎಟುಕದಾ ಪರಿವಾರ
ಕಿಸೆಯೊಳಗೆ,ಕದಲುತಿದೆ ಗಡಿಯಾರದಾ ಮುಳ್ಳು ತಂತಾನೇ..


                                                                  ~‘ಶ್ರೀ’
                                                                      ತಲಗೇರಿ

"ನೀನು..."

         "ನೀನು..."

ನನ್ನಯ ಹಾಡಿನ ಪ್ರತಿ ಪದ ನೀನು
ಅಕ್ಷರ ಅಕ್ಷರ ನಿನ್ನದೇ ಧ್ಯಾನ..
ಒಲವಿನ ಬಿಂಬಕೆ ಕನ್ನಡಿ ನೀನು
ಬಿಂದುವು ಬಿಂದುವು ಸೋಜಿಗ ರಚನಾ..

ಕೇಳದೇ ಕಾಡಿದೆ ನಿನ್ನಯ ಹೆರಳು
ಅರಳಿದೆಯೀಗ ಗಾಳಿಯ ತೋಳು..
ಬಾರದೆ ಬೆರೆಯದೆ ನಿಂತಿದೆ ನೆರಳು
ಚಿಗುರಿದೆಯೀಗ ನಾಚಿಕೆ ಮುಗುಳು..
ಕ್ಷಣಕೂ ಕೂಡ ಒನಪು ತಂತು
ಚೈತ್ರಕೀಗ ವಯಸು ಬಂತು..

ನನ್ನೆದೆ ಹೂವಿಗೆ ನಿನ್ನಯ ಕಣ್ಣು
ತಂದಿದೆಯೀಗ ಬಣ್ಣದ ಬಂಧ..
ಅದರೆದೆ ಬೀದಿಗೆ ನಿನ್ನಯ ಸ್ಪರ್ಶ
ತುಂಬಿದೆಯೀಗ ಹೊಸತರ ಗಂಧ..
ಹವೆಗೂ ಕೂಡ ಹುರುಪು ತಂತು
ಚೈತ್ರಕೀಗ ವಯಸು ಬಂತು..

                                 ~‘ಶ್ರೀ’
                                     ತಲಗೇರಿ

ಭಾನುವಾರ, ಏಪ್ರಿಲ್ 12, 2015

"ಸಂಭ್ರಮ..."

  "ಸಂಭ್ರಮ..."

ಗೂಡು ಕಟ್ಟುವಾ
ಹಕ್ಕಿ ಕಂಗಳಲಿ
ಮೋಡಗಳ ಮೀರಿ ಬೆಳೆವಾಸೆ..
ತುತ್ತು ಕಾಯುವಾ
ಚುಂಚಿನುಸಿರಲ್ಲಿ
ಅಮ್ಮನೆದೆಗೆ ಒರಗಿ ನಗುವಾಸೆ..

ಬಿಸಿಲು ಚಾಚಲು
ತೆರೆವ ಮೊಗ್ಗಿಗೆ
ಸೌಗಂಧ ಬೀರೋ ತವಕ..
ಒಲವ ತೊದಲಲಿ
ಬೆರೆವ ದುಂಬಿಗೆ
ಮಕರಂದ ಹೀರೋ ಪುಳಕ..

ಶಿಲೆಯ ಚೂರಿಗೆ
ಉಳಿಯ ಏಟಿಗೆ
ಶಿಲ್ಪವೆಂದೆನಿಸಿಕೊಳುವ ಅವಸರ..
ಕಲೆಯ ಹಸಿವಿಗೆ
ದಿನದ ಕಸುಬಲಿ
ಅನ್ನ ಕಲಸಲು ಬೆರಳಿಗಾಧಾರ..

ಋತುವಂಥ ನೆಪದಲ್ಲಿ
ಬಣ್ಣಗಳ ಸೃಜಿಸುವವು
ಎದೆತುಂಬ ಭೂಮಿ ಆಕಾಶ..
ಸ್ವಪ್ನಗಳ ತಪದಲ್ಲಿ
ರೂಪಿಸುತ್ತ ಸ್ತರವನ್ನು
ಬರೆಯಬೇಕಿದೆ ನಿನ್ನದೇ ವಿನ್ಯಾಸ..
ಶೂನ್ಯದೆಳೆಗಳ ತುಂಬ ತುಂಬ
ತಾಜಾತನವ ತುಂಬಿಸಿ..
ತೋರಬೇಕಿದೆ ಗಳಿಗೆ ಗಳಿಗೆ
ದಿವ್ಯ ಸಂಭ್ರಮಕೆ ಸಾಕ್ಷಿ..

                         ~‘ಶ್ರೀ’
                           ತಲಗೇರಿ

ಶನಿವಾರ, ಮಾರ್ಚ್ 21, 2015

"ಗಮ್ಯ"...

        "ಗಮ್ಯ"...

ಮುಗಿಲ ತೂಕಕೆ ಮೂಲ
ಒಳಹನಿಯ ಕೂಟವೋ...
ಮೈ ತುಂಬ ಹರಿವ
ಗಾಳಿಯಲೆಗಳ ಮಾಟವೋ...
ಬೊಗಸೆ ಚಾಚುವ ಇಳೆಯ
ಕೈ ಗೆರೆಗಳಾ ಸೆಳೆತವೋ...
ಕರಗುವುದು ಘನತಿಮಿರ
ಕಳೆಯುತ್ತ ಎದೆಭಾರ...

ಶಶಿಯ ತೊಗಲಿಂದ ಬಸಿವ
ತಂಗದಿರು ಯಾವ ಮಾಪನ..
ಉಬ್ಬು ತಗ್ಗುಗಳ ಇದಿರು
ಪ್ರತಿಫಲಿಸಿಹ ತನಗೊದಗಿದ ಬಿಸಿಲನ್ನ..
ನೆರೆಮನೆಯ ಒಳಮನೆಯು
ಕನಸುಗಳ ಹೆಕ್ಕಿ ಇಡಲೆಂದು..
ಅದುಮಿಟ್ಟ ಒಳದನಿಯು
ನವಿರಾಗಿ ನಗಲೆಂದು...

ಕೂಡದಿರು ಕಡಲನ್ನ
ಹೆಸರಿರದ ತೊರೆಯಂತೆ..
ಎದೆಯೊಳಗೆ ಬದು ಕಟ್ಟಿ
ಬದಲಿಸು ಹರಿವನ್ನ..
ಚಿಗಿತು ಬೀಗಲಿ ದಡವು
ತುತ್ತು ಕಾಣಲಿ ಮಗುವು..
ಚಾಚಿಕೊಳಲಿ ಕವಲು ಕವಲಲಿ
ದೂರ ದೂರದ ಊರಲಿ...

                          ~‘ಶ್ರೀ’
                             ತಲಗೇರಿ

"ಗತಿ..."

     "ಗತಿ..."

ಕಾಲನಾ ಕವಿತೆಯಲಿ
ಅಕ್ಷರವ ಬಿತ್ತು
ಕನಸು ತುಂಬಿದ ಲೇಖನಿಯೇ..
ಆಲದಾ ಮೂಲವನು
ನನಗೆ ತೋರಿಸಿಯೇನು
ಕಾಡು ಮಣ್ಣಿನಾ ವಾಸನೆಯೇ..

ಹಸ್ತರೇಖೆಯು ಯಾಕೋ
ಹರಡುತ್ತ ಹುಡುಕುತಿಹುದೇ,
ಆದಿಯನು,ಅಂತ್ಯವನು
ಇಲ್ಲಾ ಮಧ್ಯಂತರದ ಸ್ಥಿತಿಯನು..
ಮತ್ತೆ ಮಾಗುವ ಗತಿಯನು..

ಹದ ಬೇಕೇ ನಿಲುವಿಗೆ,
ಮುಗಿವ ಚಂದ್ರನ ಬೆಳಕು
ಕರಗಿಸೀತೇ ಇಷ್ಟುದ್ದ ನೆಳಲನು..
ಹಗಲು ಬಂದರೆ ಸಾಕೇ,
ಶೂನ್ಯವೆಲ್ಲವೂ ತುಂಬಿಕೊಳಲು ಇನ್ನು..
ಪರಿಧಿ ಹೇಗೆ ಇದ್ದೀತು ಹೊರಗೆ
ಮೀರಿ
ಕೇಂದ್ರ ಬಿಂದುವಿನ ಸೆಳೆತವನ್ನು..

ವಕ್ರದೇಹದ ಅವಧಿ ಮುಗಿಸಲು
ಲೆಕ್ಕವಿಟ್ಟಿದೆ ಋತುವು..
ಸೊಕ್ಕುವಾಗಿನ ಬಡಿತ
ಮುಟ್ಟಬಲ್ಲದೇ ಕೊನೆಯ ಪಲುಕು..
ಆರುವಾ ಮುನ್ನ ಎಂದೋ ಹಚ್ಚಿಟ್ಟ ಮಿಣುಕು..

                                              ~‘ಶ್ರೀ’
                                                  ತಲಗೇರಿ

ಭಾನುವಾರ, ಫೆಬ್ರವರಿ 22, 2015

"ಭಿತ್ತಿ ಮೀರಿ"....

"ಭಿತ್ತಿ ಮೀರಿ"....

ಇಟ್ಟಿಗೆಯ ಪೇರಿಸಿಡಲು
ಭಿನ್ನವಾಗುವ ಹಂಬಲಕೆ
ಮೊದಲ ಮಜಲು...
ಎಲ್ಲ ದಿಕ್ಕಲೂ
ಕಲ್ಲ ಸಾಲಿಗೆ
ತಳವ ಕೊಡಲು
ಮನೆಯ ಮಧ್ಯವೇ
ಹುಟ್ಟುತಿಹವು
ಮತ್ತೆ ಗೋಡೆಗಳು...

ಕತ್ತಲೆಯ ಸಂಗ್ರಹಕೆ
ಬೆಳಕು ದಾಟದ ಹೊದಿಕೆ...
ತಪ್ತ ಬಯಕೆಯ ಝಳಕೆ
ಸಂದು ಸಂದಿಗೂ
ಬಿಸಿಯು ಸೋಕಲು
ಸದ್ದು ಮಾಡೀತೇ ಇನ್ನು
ಸ್ತಬ್ಧ ಕುರ್ಚಿಯಾ ಕೀಲು...

ಮುಗಿಲೆದೆಯ ಬಿಗಿಯು
ನೆರಿಗೆಯನು ಕರಗಿಸಲು..
ತೆರೆ ಕದವ,ಮಳೆ ಹನಿಯ
ಬೊಗಸೆಯಲಿ ಹಿಡಿದುಕೊಳಲು..
ಗರಿಗೆದರಿ ಹಬ್ಬಿಕೊಳಲಿ ಹಕ್ಕಿ
ಇಣುಕಿರಲು ಎಳೆಬಿಸಿಲು...
ತುಂಬಿಕೊಳಲಿ ಗೋಡೆಗಳ ಮೀರಿ
ರಂಗು ರಂಗಿನ ಬೆಳಕಿನೆಸಳು...

                                   ~`ಶ್ರೀ'
                                        ತಲಗೇರಿ

ಶನಿವಾರ, ಫೆಬ್ರವರಿ 7, 2015

"ವರ್ತಮಾನ..."

   "ವರ್ತಮಾನ..."

ಬಿಂದುವಿನ ಸೆಳೆತದಲಿ
ಪರಿಧಿಗೊಂದು ಅಸ್ತಿತ್ತ್ವ..
ಚೆದುರದಂತೆ ಚಲನೆಯಲಿ
ಅಂಟಿಕೊಂಡಿದೆ ಹದವ...
ಅಂತರದ ಕಾವಿಗೆ
ಸ್ವಂತವಾಗಿದೆ ಹೊಸ ಮೊರೆತ...

ಹೇಳಲಿಲ್ಲವೇ ನಿನಗೆ..
ನಿಂತ ನೀರಿಗೂ,ತೆರೆದ ಕವಲಿಗೂ
ಬೇರೆ ಬೇರೆಯದೇ ವಿನ್ಯಾಸ...
ಜೀಕುತಿರೆ,ಜೋಕಾಲಿ..
ಗಾಳಿಗೊರಗೆ,ಬಾನಾಡಿ..
ಬೆರಗ ತುಳುಕಿಸುವ ಆಗಸ...

ಕಂಡಿದ್ದೆ ನಿನ್ನೆಗಳಲಿ
ಬಣ್ಣ ಬಣ್ಣದ ಬುಗುರಿ;
ಅಂಗಳದ ತುಂಬೆಲ್ಲ
ದಾರಗಳು ಚೆದುರಿ...
ರಾತ್ರಿ ಇಟ್ಟ ಚುಕ್ಕಿಗಳಿಗೆ
ಚಂದ್ರ ಹರಡಿಹ ಮೌನ...
ಸ್ವಪ್ನಗಳ ಗುಡಿಸಲಿಗೆ
ಬಳಿದು ಇಡಲೇ
ವಾಸ್ತವಿಕ ಬಣ್ಣ...

                        ~‘ಶ್ರೀ’
                           ತಲಗೇರಿ


ಶನಿವಾರ, ಜನವರಿ 17, 2015

"ಪಾತ್ರ"...

      "ಪಾತ್ರ"...

ಜಗವ ಕಾಣುವ ಮೊದಲೇ
ಹಸಿವನ್ನು ಕಳೆದವಳು..
ಇಟ್ಟ ಪುಟ್ಟ ಹೆಜ್ಜೆಗೆಲ್ಲ
ಎದೆಹಾಲ ಕಸುವಿತ್ತವಳು..
ಗರ್ಭದಾ ಒಳಹೊರಗು
ಸ್ವರ್ಗವನೇ ಹರಸಿಹಳು..
ಇಲ್ಲಿ ‘ಅವಳೊಬ್ಬ’ ತಾಯಿ..

ಒಂದೇ ನೂಲಿನ ಒಡಲಲಿ
ಹುಟ್ಟಿದಾ ನವಿರು ಎಳೆಯು..
ಬಿಡಿ ದೇಹ ಹಿಡಿ ಜೀವ
ತುಸುಮುನಿಸಿನಲಿ ಗುದ್ದು
ಮರು ಗಳಿಗೆ ಮುಗುಧತೆಯ ಮುದ್ದು..
ಇಲ್ಲಿ ‘ಅವಳೊಬ್ಬ’ ಅನುಜೆ..

ತೊದಲಿನಾ ಸೊಗಡಿಗೆ
ಮೃದು ಸಲಿಗೆಯಾದವಳು..
ಶೈಶವದ ಬೆಳಗಿಂದ
ಸಂಜೆ ಬಿಸಿಲಾರುವ ತನಕ
ನೆರಳಂತೆ ಉಳಿದವಳು..
ಕೈ ಬೆರಳ ತುದಿಗಳಾ
ಮಣ್ಣಿನಲಿ ನೆನಪಾಗುವಳು..
ಇಲ್ಲಿ ‘ಅವಳೊಬ್ಬ’ ಗೆಳತಿ..

ಮಣ್ಣರಸಿ ಬೇರೊಂದು
ಎದೆಯೊಳಗೆ ಇಳಿದಾಗ
ಕಣ ಕಣಕೆ ಹರಡುವುದು
ಭದ್ರತೆಯ ಸುಳಿವು..
ಪೊರೆ ಕಳಚಿ ಕಲೆತಾಗ
ರಕ್ತದಲಿ ಹೊಸಗಂಧ
ಫಲವಾಗುವುದು ಒಲವು..
ಇಲ್ಲಿ ‘ಅವಳೊಬ್ಬ’ ಮನದನ್ನೆ..

ಮಡಿಲಲ್ಲಿ ವಾತ್ಸಲ್ಯ,ಬೊಗಸೆಯಲಿ ನೇಹ
ಪ್ರೀತಿಯಾ ಸಾನ್ನಿಧ್ಯ,ಅರ್ಪಣೆಯ ಗೇಹ..
ಎಲ್ಲ ದಿಕ್ಕಿನಲೂ ಸೋಕಿಹೋಗುತಿದೆ
ಋಣದ ಗಾಳಿ..
ನಿತ್ಯ ಪರ್ವದಾ ಪ್ರತಿ ಬಿಂದು ‘ಅವಳು’
ಭಿನ್ನ ಪಾತ್ರದಲಿ....

                                       ~‘ಶ್ರೀ’
                                           ತಲಗೇರಿ 

ಸೋಮವಾರ, ಜನವರಿ 12, 2015

"ಬುದ್ಧನಾಗಿಲ್ಲ..."

 "ಬುದ್ಧನಾಗಿಲ್ಲ..."

ಕಾಷಾಯದಾಶ್ರಯದಲ್ಲಿ
ಧರ್ಮ ಕರ್ಮಗಳ ಕಡೆದು
ನವನೀತ ಪಡೆವ
ತಾಳ್ಮೆ ನನಗಿಲ್ಲ...
ನನ್ನೆದೆಯರಮನೆಯ
ಮೂಲೆ ಮೂಲೆಯಲೂ ಅನುರಣಿಸುತಿದೆ
ನಾನಿನ್ನೂ ಬುದ್ಧನಾಗಿಲ್ಲ...

ಸ್ಖಲಿತ
ಬೆಳಕ ಚೂರಿನ ಸ್ವಪ್ನ
ಎಡೆಬಿಡದೇ
ಕದಡುತಿದೆ ಬಿಂಬ...
ಭ್ರಮೆಯ ತೊಲಗಿಪ ರವಿಯು
ಬಾಂದಳದಿ ಹುಟ್ಟಿಲ್ಲ...
ನಾನಿನ್ನೂ ಬುದ್ಧನಾಗಿಲ್ಲ...

ಕಲ್ಲೆದೆಯ ರಾಗ
ಕುಸುರಿಯಲಿ ಸೃಜಿಸಿಲ್ಲ...
ಉಳಿಪೆಟ್ಟು ಬಿದ್ದಿಲ್ಲ..
ಕರಗಬೇಕಿದೆ ದಾಹ..
ನಾನಿನ್ನೂ ಬುದ್ಧನಾಗಿಲ್ಲ...

ಅವಸರದ ಕರೆಗೆ
ಪ್ರತಿ ಗಳಿಗೆ ಮೆರವಣಿಗೆ..
ಕಮಲದಾ ಎಲೆಯ
ಹನಿ ಜಾರಿ ಬೆರೆತೀತು...
ಬೇರುಗಳಲಿ
ಹರಡಿಹುದೇ ಮೋಹ...
ನಾನಿನ್ನೂ ಬುದ್ಧನಾಗಿಲ್ಲ...

                        ~‘ಶ್ರೀ’
                           ತಲಗೇರಿ


ಬುಧವಾರ, ಜನವರಿ 7, 2015

"ಪುನರಾವರ್ತನ".....

            "ಪುನರಾವರ್ತನ".....

ಆಗಸವು ಬಿರಿದು,ಬಣ್ಣಗಳು ಹರಿದು
ಒತ್ತಾಗಿ ಸುರಿವುದು ದ್ಯುತಿಯ ಬಾಣ..
ಶೈತ್ಯ ರಾತ್ರಿಯ ಅಮಲು ಇಳಿದು
ಕಾಡುತ್ತ ಕಳೆವುದು ಹುಲ್ಲಿನೆದೆಯ ಶ್ರಾವಣ..

ನಿಲುಕು ನೋಟಕೆ ನೆಲದ ಸಲುಗೆ
ಪರಿಮಿತಿಯ ಪಥ್ಯದಲಿ ಘಮಿಸುವಾ ಹೂವು..
ಅಲೆದು ಕಲೆಯುವ ಬಯಲ ಗಾಳಿಗೆ
ಕವಲೆಸೆದು ನಿಲ್ಲುವುದು ತಾನೊಂಟಿ ಮರವು..

ರತಿರಾಗ ಭ್ರಮೆಯ ನವಿರಾದ ಮೊರೆತ
ಹೊಂಬೆಳಕ ತುರುಬಲ್ಲಿ ರಸಿಕತೆಯ ಕದಿರು..
ಬಿಸಿಲ ಭಾಷೆಯಲಿ ಕರಗುವಾ ತುಡಿತ
ತನಿನಾದ ಸ್ಫುರಿಸುವುದು ಒರಟಾದ ಬಿದಿರು..

ಚಿಪ್ಪಿನಾ ಸೆರೆಯೊಡೆದು ಪುಟಿಯುವಾ ಚಿಗುರು
ಕಂಪನದ ತಳದೊಳಗೆ ಇಳಿಯುವುದು ಬೇರು..
ಮುಪ್ಪಿನಾ ಗೆರೆ ಬಿಡಿಸಿ ಸಂಜೆಯದು ತೃಪ್ತ
ಕಂತಲಿಹ ದಿನಮಣಿಗೆ ಆಚೆಲೋಕದ ಸೆಳೆತ..

ಹಗಲ ಹಿರಿತನ ಮುಗಿದ ಗಳಿಗೆ
ಮತ್ತೆ ಮುಗಿಲಲಿ ನಡೆದೀತು ಪ್ರತಿಫಲನ..
ಅಂತ್ಯ ಆದಿಗೆ ಯುಗದ ಬೆಸುಗೆ
ಸತ್ಯ ಮಿಥ್ಯದ ಕೂಟದ ಪುನರಾವರ್ತನ...

                                                    ~`ಶ್ರೀ'
                                                        ತಲಗೇರಿ

"ಮಾರುವೇಷ"....

         "ಮಾರುವೇಷ"....

ಹಗಲ ಬಗಲಿಗೆ ಹರಿದ ಜೋಳಿಗೆ
ನಿಶೆಯ ಮೈತುಂಬ ಚಂದಿರನ ಬೆವರು..
ಕಡಲ ಮಡಿಲಿಗೆ ಕರೆದಂತೆ ಬೆಸುಗೆ
ನದಿಯ ಹರಿವಿನಲಿ ನೆನಪಾಗೋ ತವರು..

ಬಿಸಿಲ ಕುಸುರಿಯಲಿ ಅರಳುವುದು ಗಂಧ
ಮುಳ್ಳ ಜತನದಲಿ ದುಂಬಿಗೆ ಮಕರಂದ..
ತರಗೆಲೆಯ ಪ್ರಣಯಕ್ಕೆ ತರತರದ ಸ್ವರವು
ಹೆಜ್ಜೆಗಳ ಕಚಗುಳಿಗೆ ಅನುಭವದ ಮಧುವು...

ಕಂಪನದ ಪಿಸುದನಿಗೆ ಮರುದನಿಯ ಮದಿರೆ
ಸಂವಹನ ಹದವರಿತ ಯೌವನದ ಥಳುಕು..
ಬಿಡಿತನದ ಒಡೆತನಕೆ ಕೆನೆಯುವಾ ಕುದುರೆ
ಮುಗಿಯದಾ ಮಾಗಿಯಲಿ ಬೆಚ್ಚನೆಯ ಅಳುಕು..

ಗರಗೆದರಿದಾ ಹಕ್ಕಿ ಗೆರೆ ದಾಟಿ ಬರಲು
ಆಸೆಗಳ ರೆಕ್ಕೆಗೆ ಹೊಸ ಮಾರುವೇಷ..
ಬರಿ ಭ್ರಾಂತಿಯಾ ಹಗಲು ನವಿರಾಗಿ ನಗಲು
ಕತ್ತಲಿನ ಪಕ್ಕೆಯಲಿ ಬಣ್ಣಗಳ ಸಮಾವೇಶ..

ಬೆರಗಿನಾ ಮುಗಿಲು ಬಾಗಿನದ ತೆರದಿ
ಪುಳಕ ತರುವುದು ಬಾನೆದೆಯ ಪದರದಿ..
ಕರಗಿದಾ ಕಲ್ಲು ಹೊಸ ಮನ್ವಂತರದಿ
ಬೆಳಕ ಹಡೆವುದು ಹಣತೆಯಾ ಪಾತ್ರದಿ...

                                                      ~`ಶ್ರೀ'
                                                          ತಲಗೇರಿ

ಸೋಮವಾರ, ಜನವರಿ 5, 2015

"ಪುನರ್ಮಿಲನ.."

           "ಪುನರ್ಮಿಲನ.."

ಎದೆಯ ಗಾಳಿ ಕೊರಳೊಳಗೆ ಹರಿದು
ಕೊಳಲೊಳಗೆ ಕಳೆದು,ಬೆರಳ್ತುದಿಗೆ ಸುಳಿದು
ಅವಕಾಶದಲಿ ಮತ್ತೆ ಲೀನ..
ಗ್ರೀಷ್ಮದಲಿ ಮುಗಿಲು ಕಟ್ಟುವ ತವಕ
ಮತ್ತೆ ಬಿಂದುವಲಿ ಉದುರುವಾ ಪುಳಕ..

ಒಡಲ ಸುಳಿಯು ಒಳಗೊಳಗೆ ಬೆಳೆದು
ಅಲೆಯೊಳಗೆ ಅಳೆದು,ದಡ ತಲುಪಿ ಅಲೆದು
ಕಡಲಾಳದಲಿ ಮತ್ತೆ ಧ್ಯಾನ..
ಸ್ಪರ್ಶದಲಿ ನಿಶೆಯ ಬಿತ್ತುವ ಗಣಿತ
ಭಿನ್ನ ಬಂಧದಲಿ ಚಂದ್ರಮನ ಸಹಿತ..

ತೊದಲ ಕುಡಿಯು ಮಿಗಿಲೆಲೆಯ ತಳೆದು
ಪರಿಮಳದಿ ಪುಟಿದು,ಹಗಲ ತೇಗಿಗೆ ಸೆಟೆದು
ಮಣ್ಣಿನೆದೆಯಲಿ ಮತ್ತೆ ಮೌನ..
ದೃಶ್ಯದಲಿ ಹಸಿವ ತುತ್ತಿನ ಒಲವು
ನಿತ್ಯ ದ್ರವ್ಯದಲಿ ಬಯಕೆಯಾ ಹರವು..

ಬಿಗಿದ ತಂತಿಗೆ ಬೆಸುಗೆ ಬಿಸಿಯು
ಮೀಟಿದಾಗ ತಾನೇ ನಾದ ಲಹರಿಯು..
ನವಿರು ಗರ್ಭದಿ ಕಂಪನದ ಗುಣಕ
ಮರಳಬೇಕು ಆದಿಗೆ ಅಂತ್ಯದಾ ಮೂಲಕ..

                                                      ~`ಶ್ರೀ'
                                                          ತಲಗೇರಿ

ಭಾನುವಾರ, ಜನವರಿ 4, 2015

"ಹಂಗು.."

         "ಹಂಗು.."

ಮುಗಿಲ ಹಕ್ಕಿ ಹಾರೋ ಪಥದಿ
ಸರಿದು ನಿಲುವ ಬಾನ ಗಾಳಿ..
ಕಡಲು ಉಕ್ಕಿ ಅಲೆವ ಕ್ಷಣದಿ
ಎದೆಯ ಕೊಡುವ ಮರಳ ಕೇಳಿ..

ಚೆದುರಿರುವ ಅಕ್ಷರವ ಕರೆದು
ನಡೆಯುವುದು ಪದಗಳಾ ಅಧಿವೇಶನ..
ಹವೆಯೊಳಗೆ ಪರಿಮಳವ ಹೊಸೆದು
ಕರೆಯುವುದು ಭ್ರಮರವಾ ಸುಮದ ಗಾನ..

ಕಳೆದಿರುವ ಪ್ರಾಯವನು ನೆನೆದು
ಬಯಸುವುದು ಆ ಬಾನು ಚಂದ್ರಮನ ಸಂಗ..
ಅಲೆಯುತಿಹ ಕಾಲುಗಳ ಸೆಳೆದು
ಕೆಣಕುವುದು ಸತ್ತ್ವವನು ಮೃಗಜಲದ ವೇಗ..

ಬೊಗಸೆ ಹಸಿವಿಗೆ ಇಡಲು ಮಧ್ಯಂತರ
ಶೃತಿಲಯದ ಸಲ್ಲಾಪ ಕಂಪಿಸಲು ತಂತು..
ಮೊಗದ ಗೆರೆಗಳ ನಡುವೆ ಆನಂತರ
ಋತು ಬರೆವ ಸರದಿ ಕವಲುಗಳ ಕುರಿತು...

ಯಾರು ತಂಗುವರೋ ನನ್ನೆದೆಯ ಜಗುಲಿಯಲಿ
ಅಂತರಂಗದ ಅಗಳಿಗೆ ಬೇಕೇನು ಕೀಲಿ!..
ಸೂರ ಹಂಗಿಗೇಕೋ ಬಣ್ಣಗಳ ವೇಷಾವಳಿ
ನಿಲಬಹುದೇ ನಾನು ನನ್ನದೇ ನೆರಳಿನಲಿ!!..

                                                  ~`ಶ್ರೀ'
                                                      ತಲಗೇರಿ


ಶನಿವಾರ, ಜನವರಿ 3, 2015

"ಒಲವ ಕೊಡು..ಅಲೆಗಳಿಗೆ.."

 "ಒಲವ ಕೊಡು..ಅಲೆಗಳಿಗೆ.."

ಗಾಳಿಯಲಿ ಗೀಚಿದಾ ಗೆರೆಗೆ
ಮರುಗಳಿಗೆ ಉಳಿದೀತೇ ಅಸ್ತಿತ್ತ್ವ..
ಬಾನಿನಲಿ ಸೋರುವಾ ಬಿದಿಗೆಗೆ
ತಿಂಗಳಿಗೆ ಕಾಡುವುದೇ ವ್ಯಕ್ತಿತ್ತ್ವ...
ಬೇಕೇನು ನಿನಗೆ ತೀರದಾ ಒಂಟಿ ನಡಿಗೆ
ಒಲವ ಕೊಡು ಸಾಗರದ ತುಂಬು ಅಲೆಗಳಿಗೆ..

ನೀರಿನಲಿ ಬರೆದಾಗ ಅಕ್ಷರವ
ಹನಿಗಳಲಿ ಕರಗೀತೇ ಅದರರ್ಥ..
ಮಣ್ಣಿನಲಿ ಉದುರಿಸಲು ಹೂದಳವ
ಅದರೊಳಗೆ ಇಳಿದೀತೇ ಕಂಪಹಿತ..
ಬೇಕೇನು ನಿನಗೆ ತೀರದಾ ಒಂಟಿ ನಡಿಗೆ
ಒಲವ ಕೊಡು ಸಾಗರದ ತುಂಬು ಅಲೆಗಳಿಗೆ..

ತಾವರೆಯ ಎಲೆ ಮೇಲಿನ ಹನಿಯು
ಜಾರುತಲಿ ಮರೆತೀತು ಅನುಬಂಧ..
ಹುಲ್ಲಿನಲಿ ಎದೆಚಾಚಿದಾ ಇಬ್ಬನಿಯು
ಆರುತಲಿ ಸರಿದೀತು ನೆನಪಿಂದ..
ಬೇಕೇನು ನಿನಗೆ ತೀರದಾ ಒಂಟಿ ನಡಿಗೆ
ಒಲವ ಕೊಡು ಸಾಗರದ ತುಂಬು ಅಲೆಗಳಿಗೆ..

                                                          ~`ಶ್ರೀ'
                                                              ತಲಗೇರಿ

ಗುರುವಾರ, ಜನವರಿ 1, 2015

"ಋಣ"....

          "ಋಣ"....

ನೀಲರಾಶಿಯ ಉಲಕ ರಾಗದಿ
ಹಾಯಿದೋಣಿಯ ಹಗುರ ಚಲನ
ಮರಳ ಮೌನದಿ ಬೆರೆವ ತವಕದಿ
ಬೀರಿ ಸೋಕಿದೆ ಅಲೆಯ ಗಮನ..

ದೂರ ಯಾನವ ನೆನೆದು ಸಾಗಿದೆ
ಅಂತರದ ಹಳಿಗಳ ಅಂತರಂಗದ ಪ್ರೀತಿ..
ಭ್ರಮರ ನೇಹದ ನೆಪದಿ ಅರಳಿದೆ
ಮಂದಾರ ಮಧುವಿನ ಚೆಂದಚಾಮರ ವಿತತಿ..

ಕೊರಳ ಗಾಳಿಗೆ ಶ್ರುತಿಯ ಹಿಡಿಯಲು
ಬಿದಿರ ಕೊಳವೆಯ ನುಡಿಸಬೇಕು ಬೆರಳು..
ವಿರಳ ದಾರಿಗೆ ಸೆಳೆತ ಕೊಡಲು
ಎದೆಯ ಕೊಳದಲಿ ಕರೆಯಬೇಕು ಅಮಲು..

ಮಳೆಯ ಉಲಿಯ ಲಹರಿ ಸುಳಿಯಲು
ನವಿಲು ಸಲುಗೆಗೆ ನೆಲದ ತೀರ ಕಾತರ..
ಉಳಿದ ಎಲೆಯ ಜೊತೆಗೆ ಕೂಡಲು
ತಳಿರ ತವಕಕೆ ಉರುಳಬೇಕು ಶಿಶಿರ..

ಮನೆಗೆ ಬೇಲಿಯು ಮಿತಿಯ ಪರಿಧಿ
ಬಂಧಿಯಲ್ಲ ಬಿಂದುವಲ್ಲಿ ಹವೆಯ ಋಣವು..
ನನಗೆ ಸೇರಿಯೂ ಬೇರೆ ತರದಿಂದಲೂ
ಬೆಳಕಿನಲ್ಲಿ ಆಚೆ ನಿಲದೇ ನೆರಳ ಹರವು..!!

                                                   ~`ಶ್ರೀ'
                                                       ತಲಗೇರಿ