ಶನಿವಾರ, ಏಪ್ರಿಲ್ 30, 2016

"ಅಸ್ತಿತ್ವ"...

ರಾತ್ರಿ ಕಂಡ ಸ್ವಪ್ನಗಳ ಗಂಧ
ಅಂಟಿಕೊಂಡಿಲ್ಲ ಅಕ್ಷಿಪಟಲಕ್ಕೆ..
ಉಳಿದಿಲ್ಲ ಪರದೆಯಂತಿದ್ದ
ಅದ್ಯಾವುದೋ ವಿಸ್ತಾರದಲ್ಲಿ
ಬಣ್ಣಗಳ ನೆರಳು..
ಸ್ವಪ್ನವೂ ಬರಿಯ ಸ್ವಪ್ನವೇ!..

ಮುರುಕು ಗೋಡೆಯ ತೂತಿನಲ್ಲಿ
ಕಂಡಷ್ಟೇ ಜಗತ್ತೆಂದರೆ
ಬಿರುಕುಗಳಾಚೆ ಹರಡಿರುವ
ಇಟ್ಟಿಗೆಯ ಅಸ್ತಿತ್ವವೇನು!
ನೋಟ, ನಾವೇ ನಿರ್ಮಿಸಿಕೊಂಡ
ಆಗ ಈಗಿನ ಪರಿಧಿ..

ಈಗಷ್ಟೇ ಬಿರಿದ ಹೂವ ಪರಿಮಳದ
ತಂತು, ಮಣ್ಣಿನದೇ ಸೂರ್ಯನದೇ
ನೀರಿನದೇ, ಇಲ್ಲಾ
ದುಂಬಿಯ ಕಾಲ ಧೂಳಿನದೇ..
ಆಘ್ರಾಣಿಸಿದ ನಾಸಿಕಕ್ಕೆ
ನಿಲುಕಿದ್ದೇ ಅನುಭವ..

ಪ್ರಾಯದಾ ಧಾತುವಿನ ಪೊರೆಗೆ
ಒಸರಿಕೊಂಡ ನಾನು ನೀನು
ಕೇವಲ ಮತ್ತೊಬ್ಬನ ಭಾವವೇ!
ಅಲೆಯುತ್ತೇವೆ ವಿಳಾಸದ ಗುಂಗಿನಲ್ಲಿ..
ಅವರಿವರ ಮನೆಯ ಭಿತ್ತಿಗಳಲ್ಲಿ
ಮತ್ತೆ ಮತ್ತೆ ಹಳಸು ಹೊಸತು ಸುತ್ತಿನಲ್ಲಿ...

                               ~‘ಶ್ರೀ’
                                 ತಲಗೇರಿ

ಗುರುವಾರ, ಏಪ್ರಿಲ್ 14, 2016

"ಧ್ವನಿ"...

ಯಾರು ಹೇಳಿದ್ದು
ಅವು ಮಾತನಾಡುವುದಿಲ್ಲವೆಂದು!..
ನಮಗೆ ನಾವೇ
ಹಲ್ಲು ಮಸೆಯುವ ಶಬ್ದಕ್ಕೆ
ಸುಮ್ಮನಾಗಿವೆ ಬೇಕಂತಲೇ..

ಪಕ್ಕದ ಖಾನಾವಳಿಯ
ಖುರ್ಚಿಗಳಿಗೆ ಗೊತ್ತಿರಬಹುದು
ಹಸಿವಿನ ವಾಸನೆಯ ಅದೆಷ್ಟೋ ಕತೆ..
ಮೇಜುಗಳ ಮೇಲೆ ಬಿದ್ದ
ಚಹಾವನ್ನು ಒರೆಸಿಬಿಡುತ್ತೇವೆ
ಅದರ ಬಿಸಿ ಆರುವುದರೊಳಗೆ..

ಹಾದಿ ಬದಿಯಲ್ಲಿ ಹರಿದು ಬಿದ್ದ
ಚಪ್ಪಲಿಯ ಮೈಗೆ
ಅಂಟಿಕೊಂಡಿರಬಹುದು
ಅದೆಷ್ಟೋ ಹಗಲಿರುಳುಗಳ
ಬೆವರ ಹನಿಯ ಕಲೆಗಳು..
ಆದರೆ ಕೊನೆಗೆ ಕೆಲವೊಮ್ಮೆ
ಇನ್ನೊಂದು ಚಪ್ಪಲಿಯ
ಜೊತೆಯೂ ಸಿಗದ ಅನಾಥ..

ಪ್ರತಿ ಸಂಜೆ ಚಿಟ್ಟೆ ಹೂವಿನ
ಬಣ್ಣ ನೋಡಲು
ಉದ್ಯಾನದಲ್ಲಿ ನಡೆಯುವಾಗ
ಗಮನಿಸಿಲ್ಲ ನಾವು..
ಕಲ್ಲು ಆಸನಗಳ ಬಣ್ಣ
ಬದಲಾಗಿರಬಹುದೇ
ಅದೆಷ್ಟೋ ಪ್ರಣಯದ
ಪಿಸುಮಾತ ಕೇಳಿ..
ಅಥವಾ, ಚರ್ಮ
ಹಸಿಯಾಗುತ್ತಲೇ ಒಣಗಿರಬಹುದೇ
ಗೊತ್ತಾಗದೇ ಅತ್ತು, ಬಿದ್ದ ಕಣ್ಣೀರಿಗೆ..

ಯಾರು ಹೇಳಿದ್ದು
ಅವುಗಳೆಲ್ಲಾ ನಿರ್ಜೀವವೆಂದು!
ಇದೆ ಎಲ್ಲಕ್ಕೂ ಒಂದು ಧ್ವನಿ;
ಆಲಿಸುವ ಪ್ರೀತಿ ನಮಗಿದ್ದರೆ..
ನಮ್ಮೊಳಗೂ ಜೀವವಿದ್ದರೆ!..

                       ~‘ಶ್ರೀ’
                          ತಲಗೇರಿ

ಭಾನುವಾರ, ಏಪ್ರಿಲ್ 3, 2016

"ಅಲೆ"...

ಸಮುದ್ರದ ಇಳಿತ ಭರತಗಳಲಿ
ಮುಳುಗಿ ತೇಲುತ್ತ
ಕಿನಾರೆಯ ಉಸುಕಿನಲ್ಲಿ
ಮೈ ಹರಡಿ ಬಿದ್ದಿರುವ
ನಕ್ಷತ್ರ ಮೀನುಗಳ
ನಿಶ್ವಾಸದ ಗಾಳಿಯಲ್ಲಿರಬಹುದೇ
ಕಡಲ ಮನೆಯ ಕತೆ..

ಕಿರೀಟ ಪಗಡಿಗಳ
ಚಿನ್ನದ ಬೆಳಕಿರುವ ವಸ್ತ್ರಗಳ
ತೊಟ್ಟು ಕುಣಿವ
ಯಕ್ಷಗಾನ ಕಲಾವಿದನ
ಬಣ್ಣ ಕರಗಿದ ಬೆವರಿನಲ್ಲಿ
ಹಲವು ಪಾತ್ರಗಳ
ಖಾಸಗಿತನದ ಅಂಟು..
ತಾನಲ್ಲದ ತನ್ನನ್ನು
ತಾನೆಂದುಕೊಂಡಾಗ
ತನನಕ್ಕೆ ಯಾವ ರಾಗ...!

ಅರೆಸಂಜೆಯ ಅಮಲಿನಲ್ಲಿ
ಮಲ್ಲಿಗೆ ದಂಡೆ ಹಿಡಿದು
ರಸ್ತೆ ಬದಿಯಲ್ಲಿ ಕೂಗುತ್ತ
ಇನ್ಯಾರದೋ ರಾತ್ರಿಗೆ
ಗಂಧ ಕೊಡುವವನ
ದನಿಯಲ್ಲಿ ಅದೆಂಥದೋ
ಅವ್ಯಕ್ತ ಹರಿವು...

ಕನ್ನಡಿಗೆ ಮಾರಲ್ಪಟ್ಟ ನಾನೀಗ
ಭ್ರಮೆಗಾದರೂ ಸ್ವಂತವೇ?!..
ಹುಡುಕಿದ್ದೇನೆಯೇ..
ಇಲ್ಲಾ, ಹುಡುಕುತ್ತಲೇ
ಕಳೆದಿದ್ದೇನೆಯೇ...
ಕೇಂದ್ರ ಬಿಂದು ಮತ್ತು
ಪರಿಧಿಗಳ ನಡುವೆ
ವಿಸ್ತಾರವಾಗುತ್ತಲೇ ಇರುವ
ಅರ್ಥವಾಗದ ಅಲೆ...

                        ~‘ಶ್ರೀ’
                            ತಲಗೇರಿ