ಬುಧವಾರ, ಜನವರಿ 10, 2018

ಶಹರದ ಹೊಕ್ಕುಳೊಳಗೆ.. -೪

ಶಹರದ ಹೊಕ್ಕುಳೊಳಗೆ-೪
                         ... ಕದಡಿದ ನಗೆಯ ಬಿಂಬಗಳ ಹುಡುಕಾಟ...
     ಮುಗಿಲು ತಲುಪುವ ಹುರುಪಿನ ಎತ್ತರೆತ್ತರದ ಕಟ್ಟಡದ ಕೋಣೆಗಳಿಗೆ ಒಂದೆರಡು ಚಿಕ್ಕ ಕಿಟಕಿ , ಒಂದು ಬಾಗಿಲು..ಅಂತಸ್ತಿನ ಮೇಲೊಂದು ಅಂತಸ್ತು ಜೊತೆಗೆ ತಾರಸಿ.. ನಾಲ್ಕು ಗೋಡೆಗಳ ಮೈಗೆ ಬಿಸಿಲ‌‌ ನಾಚಿಸುವ ಬಣ್ಣ.. ಅಲ್ಲೇ ಒಂದಷ್ಟು ತೇಪೆ.. ಅಲ್ಲಿ ನಡೆದಾಡಿಕೊಂಡ ಕೈಕಾಲುಗಳ ಕತೆಗಳಲ್ಲಿ ನಗೆಯೆಂಬುದೊಂದು ಮರೀಚಿಕೆ.. ಹಣೆಯ ಮೇಲಿನ‌ ನೆರಿಗೆಗಳು ಒತ್ತೊತ್ತಾಗಿ ನಿಲ್ಲುತ್ತವೆ; ಕೆನ್ನೆಯೆಂಬುದಕ್ಕೆ ಇಲ್ಲಿ ವ್ಯಾಯಾಮವಿಲ್ಲ.. ಕಂಗಳು ಗಣಕಯಂತ್ರ ಮತ್ತು ಜಂಗಮವಾಣಿಯ ಪರದೆಗಳ ಪಿಕ್ಸೆಲ್ಗಳ ಜೊತೆಗಿನ ಸಂಭಾಷಣೆಯಲ್ಲಿ ತಮ್ಮ ಬಹುತೇಕ ಆಯಸ್ಸು ಕಳೆಯುತ್ತವೆ.. ರಾತ್ರಿಯೂಟಕ್ಕೆ ಬೆಳಗಿನ ತಿಂಡಿ, ಮಧ್ಯಾಹ್ನಕ್ಕೆ ಊಟದಂತಿರದ ಊಟ.. ಇನ್ನು ಬೆಳಿಗ್ಗೆ ಮತ್ತು ಸಂಜೆಯಲ್ಲಿ ಮೂಡ್ ಇದ್ದರೆ ಚಹಾ, ಕಾಫೀ ಹಾಗೇ ಒಂದಷ್ಟು ಚುರುಮುರಿ.. ಇಲ್ಲಾ , ತಳ್ಳುಗಾಡಿಯ ಮುಂದೆ ತನ್ನ ಅವಧಿಗಾಗಿ ಪೆಚ್ಚಾಗಿ ಕಾಯುವಿಕೆ.. ಚಪ್ಪರಿಸಿ ತಿನ್ನುವ ನಾಲಿಗೆಗೆ ಎಂದೂ ತೀರದ ರುಚಿ.. ಶಹರದ ಎಲ್ಲ ಕಟ್ಟಡದ ಗೋಡೆಗಳಿಗೂ ವಿಚಿತ್ರ ವಿಚಿತ್ರ ಕತೆಗಳ ಸೋಂಕು ತಗುಲಿರುತ್ತದೆ..
    
     ದಿನ ಬೆಳಿಗ್ಗೆ ಕೆಲಸಕ್ಕೆ ಹೋಗುವ ಮುಖದಲ್ಲಿ ಅದೆಷ್ಟೋ ನೆನಪುಗಳು ಸತ್ತ ಸೂತಕದ ಛಾಯೆ ಅಥವಾ ಭವಿಷ್ಯದ ಬೀಗದ ಕೈ ಹುಡುಕುವ ಚಿಂತೆ.. ದಪ್ಪ ದಪ್ಪ‌ ‌ಕನ್ನಡಕ ಹೊತ್ತ ಚಿಕ್ಕ ಮಕ್ಕಳ ಮೂಗಿನ ಅಳಲಿಗಿಲ್ಲಿ ನಾವು ಜಾಣ ಕಿವುಡರು.. ಕೇಜಿಗಟ್ಟಲೆ ಪುಸ್ತಕ ಹೊತ್ತ ಎರಡು ಕಾಲಿನ ಗಾಡಿಯೊಂದು ವಾಲುತ್ತಾ ವಾಲುತ್ತಾ ಶಾಲೆ ಸೇರಿಕೊಳ್ಳುತ್ತದೆ.. ( ಈ ಶಾಲೆ ಅನ್ನೋ ಶಬ್ದ ಸ್ವಲ್ಪವೇ ದಿನದಲ್ಲಿ ಶಬ್ದಕೋಶದಲ್ಲಿ ಮಾತ್ರ ಅಸ್ತಿತ್ವ ಪಡೆದು ವಿಷಾದದ ನಗೆಯೊಂದ ಬೀರುತ್ತದೆ ) ದೂರದರ್ಶನದ ಮುಂದೆ ಕುಳಿತ ಆತ್ಮವೊಂದು ಅಲ್ಲಿನ ಧಾರಾವಾಹಿಗಳ ಪಾತ್ರದ ವಿಮರ್ಶೆ ಮಾಡುತ್ತಾ ಅವುಗಳ ಕಣ್ಣೀರಿಗೆ ಇಲ್ಲಿ ಬೊಬ್ಬೆ ಹೊಡೆಯುತ್ತದೆ.. ಹೊರಗೆ ಹೋದಂಥ ಆಕೃತಿಗಳು ಟ್ರಾಫಿಕ್ಕಿನಲ್ಲಿ ಜೊತೆಗೆ ಸಿಕ್ಕಸಿಕ್ಕಲ್ಲಿ , ತಮ್ಮ‌ ಭಾಷಾಪಾಂಡಿತ್ಯ ಮೆರೆಯುವ ಎಲ್ಲ ಕಸರತ್ತು ನಡೆಸುತ್ತದೆ.. ಊರಿನ ನೆನಪಾದಾಗ ಭಾವುಕವಾಗುವ ಜೀವಗಳು ಇಲ್ಲಿ ಬಹುಶಃ ಬಹಳಷ್ಟಿವೆ.. ಅನಿವಾರ್ಯತೆ ಎಂಬ ನಾಟಕದಲ್ಲಿ ಕೈಗೆ ಸಿಕ್ಕ ಬಣ್ಣ ಮೆತ್ತಿಕೊಂಡು ರಂಗಸ್ಥಳಕ್ಕೆ ಧುಮುಕಿದವರು ನಾವುಗಳು.. ಇಂದಿಗೂ ನಮ್ಮ ನಮ್ಮ ಪಾತ್ರದ ಸ್ಪಷ್ಟ ಚಿತ್ರಣ ನಮ್ಮ ಕಣ್ಣ ರೆಪ್ಪೆಗಳ ಅಡಿಯಲ್ಲೇ ನಜ್ಜುಗುಜ್ಜಾಗಿ ನರಳುತ್ತಿದೆ.. ಸಮಾಜದ ವ್ಯವಸ್ಥಿತ ಫಿತೂರಿಯೊಳಗೆ ಸಸಾರಕ್ಕೆ ನಮ್ಮನ್ನ ನಾವು ತಳ್ಳಿಕೊಂಡು ಸಂಸಾರ ನಡೆಸುತ್ತಿರುವಂಥ ಅಕ್ಷರಸ್ಥ ಸಾಮಾನ್ಯ ಪ್ರಜೆಗಳು..
     ಇನ್ನು ಕೆಲಸ ಸಿಗದೇ ಬೇರೆ ಬೇರೆ ಊರಿನಿಂದ ಸಣ್ಣ ಸಣ್ಣ ಕೋರ್ಸ್ಗಳನ್ನ ಮಾಡಲಿಕ್ಕೆಂದು ಬರುವವರ ಅನುಭವಗಳು ಬದುಕಿನ ಇನ್ನೊಂದು ಮಗ್ಗುಲನ್ನೇ ಪರಿಚಯಿಸಿಬಿಡುತ್ತವೆ..ಈ ಎಲ್ಲಾ ಹೋರಾಟಗಳು ಮೂರು ಹೊತ್ತಿನ ಊಟ ಮತ್ತು ಕಣ್ತುಂಬ ನೆಮ್ಮದಿಯ ನಿದ್ರೆಗಾಗಿ.. ಬಹುಶಃ ಇವೆಲ್ಲವನ್ನೂ ದಕ್ಕಿಸಿಕೊಳ್ಳುವ ಓಟದಲ್ಲಿ ಎಲ್ಲರೊಂದಿಗೆ ಓಡುತ್ತಾ ಓಡುತ್ತಾ ಓಟದ ಮುಕ್ತಾಯದ ಗೆರೆ ಕಾಣಲಾಗದೇ ಕಕ್ಕಾಬಿಕ್ಕಿಯಾಗುತ್ತೇವಲ್ಲಾ ; ಅಲ್ಲಿಗೆ ಕೂದಲಿಗೆ ಬಣ್ಣ ಹಚ್ಚುವ ಸಮಯ ಬಂದಿರುತ್ತದೆ.. ಓಟದ ಮಧ್ಯ , ರಸ್ತೆಯ ಪಕ್ಕ ನಮ್ಮ ಹಳೆಯ ಸ್ನೇಹವೊಂದು ನಮ್ಮ ಕುಟುಂಬದ ಜೊತೆ ನಿಂತು ಕೈಬೀಸಿತ್ತೇನೋ ; ಗಮನಿಸಲೇ ಇಲ್ಲ.. ಒಂದು ಕಿರುನಗೆ ನಮ್ಮ‌‌ ಜೊತೆಯೇ ಓಡುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬನನ್ನ ಪರಿಚಯಿಸುತ್ತಿತ್ತೇನೋ ; ಆ ಕಡೆ ತಿರುಗುವುದನ್ನೇ ಮರೆತುಬಿಟ್ಟೆವಲ್ಲಾ... ನಾವೇ ಚಿಕ್ಕವರಿದ್ದಾಗ ನೆಟ್ಟಿದ್ದ ಗಿಡವೊಂದು ಈಗ ಹಣ್ಣು ಕೊಡಲು ಹಂಬಲಿಸುತ್ತಿತ್ತೇನೋ, ಗುರುತೇ ಹತ್ತಲಿಲ್ಲ.. ಈಗ ಮೈಲಿಗಲ್ಲುಗಳು ದಾಟಿಹೋದವು ; ಎಲ್ಲೂ ನಮ್ಮ ಹೆಸರಿಲ್ಲ.. ಬರೀ ದೂರದ ಅಳತೆಗಷ್ಟೇ ಅದನ್ನ ಬಳಸಿಕೊಂಡೆವು.. ದೂರ ಮುಗಿಯಲೇ ಇಲ್ಲ.. ಹತಾಶ ಸಂಜೆಯಲ್ಲಿ ಹಪಹಪಿಸುತ್ತೇವೆ, ಕಾಲು ಸೋತಿದ್ದು ಅರಿವಾಗುತ್ತದೆ.. ಕೈಕೊಟ್ಟು ನಿಲ್ಲೋಣವೆಂದರೆ ಯಾರೊಬ್ಬರ ಹೆಗಲಿಗೂ ನಮ್ಮ ಬೆವರಿನ ಕಲೆಯಿಲ್ಲ..
     ಮಹಾನಗರಕ್ಕೆ ಬಹಳಷ್ಟು ಬಣ್ಣದ ನೆರಳುಗಳಿವೆ..ಗಡಿಬಿಡಿಯನ್ನ ಬಗಲಿಗೇ ಜೋತುಹಾಕಿಕೊಂಡು ಏಳುವ ನಗರ, ಮಧ್ಯಾಹ್ನದ ಹೊತ್ತಿಗೆ ಹೊಟ್ಟೆಗಿಷ್ಟು ಬೀಳಲೆಂದು ಹಾತೊರೆಯುತ್ತದೆ.. ಸಂಜೆಯಾಗುತ್ತಿದ್ದಂತೆ ಎಣ್ಣೆಯ ಕಮಟು ವಾಸನೆಯನ್ನ ಸೂಸುತ್ತ ನಿಯಾನ್ ದೀಪಗಳ ಮಾದಕತೆಗೆ ಮೈಮುರಿಯುತ್ತದೆ.. ಬೀದಿಗಳಲ್ಲಿ ಬೆಳಕು ಮಾರಾಟಕ್ಕೆ ಸಿಗುತ್ತದೆ; ಕತ್ತಲೆಯಲ್ಲಿ ಯಾರಿಗೂ ಗೊತ್ತಿರದೇ ಸಣ್ಣ ಸಣ್ಣ ನರಳುವಿಕೆಯ ಹಂಚಿಕೊಂಡಂತೆ.. ರಾತ್ರಿ ಬೆಳಗಾಗುತ್ತದೆ, ಕೀಲುಗಳು ಎಂದಿನಂತೆ ಸಹಕರಿಸುತ್ತವೆ; ಒಮ್ಮೊಮ್ಮೆ ಶಪಿಸಿಕೊಳ್ಳುತ್ತ.. ಮಹಾನಗರ ಎಂದಿನಂತೆ ಎಲ್ಲವನ್ನೂ ಬಚ್ಚಿಟ್ಟುಕೊಂಡ ತಟಸ್ಥ ಗುಟ್ಟಂತೆ ಉಳಿದುಬಿಡುತ್ತದೆ.. ಶಹರದ ಹೊಕ್ಕುಳೊಳಗೆ ನಗೆಯ ಬಿಂಬಗಳ ಹುಡುಕಾಟ ಮತ್ತೆ ಮತ್ತೆ ನಡೆಯುತ್ತಲೇ ಇರುತ್ತದೆ; ಅಷ್ಟಿಷ್ಟು ವಿರಾಮದ ಆಚೆಗೂ..

~`ಶ್ರೀ'
    ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ