ನಾಗರಿಕತೆಯ ವಿಕಾಸವಾದಂತೆ ಹಳ್ಳಿಗಳು ಪಟ್ಟಣಗಳು ಮಹಾನಗರಗಳು ಅನ್ನುತ್ತಾ , ಭೌಗೋಳಿಕ ಭಿನ್ನ ಪ್ರದೇಶಗಳು ಸೃಷ್ಟಿಯಾಗ್ತಾ ಹೋದವು.. ಒಂದೇ ಭೂಮಿ , ಆದರೆ ಅಲ್ಲಿನ ಮನಃಸ್ಥಿತಿ , ಆಹಾರ ಪದ್ಧತಿ , ಜೀವನ ಶೈಲಿ ಮತ್ತು ಪ್ರಾಕೃತಿಕ ಭಿನ್ನತೆಗಳು ಎಲ್ಲಕ್ಕೂ ಅದರದ್ದೇ ಆದ ವಾತಾವರಣವನ್ನ ಕಟ್ಟಿಕೊಟ್ಟವು.. ಮಹಾನಗರದ ರಸ್ತೆಗಳ ನಿಯಾನ್ ದೀಪಗಳಿಗೂ, ಹಳ್ಳಿಯ ಗುಡಿಸಲಿನ ಲಾಟೀನು ಮತ್ತು ಚಿಮಣಿ ಬುರುಡೆಗಳಿಗೂ ಬಹುಶಃ ತಾಳೆ ಮಾಡಲು ಆಗದೇ ಇರುವಷ್ಟು ಅಂತರವೇನೋ! ಎರಡೂ ಬೆಳಕನ್ನು ಕೊಡುತ್ತವೆ ಅನ್ನುವುದು ಮಾತ್ರ ಎರಡಕ್ಕೂ ಇರುವ ಸಾಮ್ಯತೆ.. ಒಂದು ವೈಭೋಗದ ಸಂಕೇತವಾದರೆ ಇನ್ನೊಂದು ಪುರಾತನ ಜೀವನ ಪದ್ಧತಿಯ ಮೂಕ ಸಾಕ್ಷಿ.. ಹೀಗೆ ಮುಂಬೈ ಮಹಾನಗರದ ಪುಟ್ಟ ಪ್ರಪಂಚ ಮತ್ತು ಗೋಕರ್ಣದ ರಥಬೀದಿಯ ದೊಡ್ಡ ಜಗತ್ತಿನ ಸಮೀಕರಣವೇ `ಬಣ್ಣದ ಕಾಲು'
ಜಯಂತ ಕಾಯ್ಕಿಣಿ ಅನ್ನುವ ಈ ಜಾದೂಗಾರ ನನ್ನ ಮಟ್ಟಿಗೆ ಯಾವತ್ತೂ ಒಂದು ಪಿಳಿಪಿಳಿ ಕಂಗಳನ್ನ ಸದಾ ತೆರೆದಿಡುವಂತೆ ಮಾಡಬಲ್ಲ ವಿಸ್ಮಯದ ಮೂಟೆ.. ಅವರ ಪುಸ್ತಕಗಳನ್ನ ಓದುವುದಕ್ಕೆಂದು ಕೈಗೆತ್ತಿಕೊಳ್ಳುವಷ್ಟರಲ್ಲೇ ಪುಟಾಣಿ ನಗೆಯೊಂದು ಪ್ರಶಾಂತವಾಗಿ ತುಟಿಗಳಲ್ಲಿ ಅರಳುತ್ತದೆ.. ಬದುಕಿನ ದಿವ್ಯತೆಯನ್ನ ನಮ್ಮದೇ ಮನೆಯ ಪುಟ್ಟ ಪೋರನೊಬ್ಬ ಹಾಗೆ ಹೀಗೆಲ್ಲ ಓಡಾಡಿ ಹೇಳಿದಷ್ಟು ಮುದ್ದು ಮುದ್ದು.. ಅವರದೇ ಗೆಳೆಯ ಎಸ್ ಮಂಜುನಾಥ್ ಹೇಳಿದಂತೆ ಭಗ್ನ ಬದುಕಿನ ಅದೆಷ್ಟೋ ಜೀವಂತ ವಿವರಗಳು ಇವರಿಗೆ ಗೊತ್ತು ಮತ್ತು ಅವುಗಳಲ್ಲೇ ಈ ಬದುಕು ಒಂದು ದಿವ್ಯ ಎಂದು ಹೊಳೆಸುತ್ತಾರೆ.. ಬದುಕಿನ ಪರಿಶುದ್ಧ ಆವೃತ್ತಿಗಳಾದ ಇವರ ಕತೆಗಳ ಚೆಂದ ಓದುವುದರಿಂದ ಮಾತ್ರವೇ ದಕ್ಕಲಿಕ್ಕೆ ಸಾಧ್ಯ.. ಅಂಥ ಒಂದು ಓದು ನನಗೆ ಸಿಕ್ಕಿದ್ದಕ್ಕೆ ಕೆಲವು ಸಾಲುಗಳಲ್ಲಿ ನನಗೆ ದಕ್ಕಿದ್ದನ್ನ ಹೀಗೆ ತೆರೆದಿಡಲು ಹೊರಟಿದ್ದೇನೆ..
`ಬಣ್ಣದ ಕಾಲು' , ಒಟ್ಟು ೧೩ ಕತೆಗಳ ಸಂಕಲನ..ಒಂದೇ ಪುಸ್ತಕದಲ್ಲಿ ಎರಡು ಭಾಗಗಳಲ್ಲಿ ಕತೆಗಳನ್ನ ಪ್ರಸ್ತುತಪಡಿಸಲಾಗಿದೆ.. ಮೊದಲನೇ ಕತೆ `ಬಣ್ಣದ ಕಾಲು' ,ಇದರಲ್ಲಿ ಮುಂಬೈ ನಗರದ ನಿಬಿಡತೆಯ ಬಗ್ಗೆ ಮತ್ತು ಸಣ್ಣ ಸಣ್ಣ ಖೋಲಿಗಳಲ್ಲಿ ಬದುಕು ನೂಕುವವರ ಚಿತ್ರಣವಿದೆ. ಮಹಾನಗರದ ಕನಸು ಕಂಡ ಪುಟ್ಟ ಪೋರನೊಬ್ಬ ಅಲ್ಲಿ ತನ್ನ ಗೆಳೆಯನಿಗಾಗಿ ಬಣ್ಣದ ಕಾಲು ತರುವ ಕನಸು ಕಾಣುತ್ತಾನೆ. ಮಗನ ಕೀಟಲೆಗಳನ್ನು ಸಹಿಸಲಾರದೇ ಅವನನ್ನು ರಿಮಾಂಡ್ ಹೋಮಿಗೆ ಸೇರಿಸುವ ತವಕ ಈ ಪುಟ್ಟ ಹುಡುಗನ ತಂದೆ ತಾಯಿಯರದ್ದು.. ಮಹಾನಗರದ ಗಡಿಬಿಡಿ ತಂದೆ ಮತ್ತು ಮಗ ಇಬ್ಬರನ್ನೂ ಬೆಚ್ಚಿಬೀಳಿಸುತ್ತದೆ.. ಪುಟ್ಟ ಕನಸುಗಳನ್ನ ಬೆನ್ನಟ್ಟಿದವರ ಕತೆ ಇದು. ಇನ್ನು ಎರಡನೇ ಕತೆ ಚೌತಿ ಚಂದ್ರ.. ಬಸ್ಸಿನ ಡ್ರೈವರನೊಬ್ಬ ತನ್ನ ನಿತ್ಯದ ಚಾಕರಿಯಿಂದ ಬೇಸತ್ತು ತನ್ನ ಒಳಮನಸ್ಸಿನ ತುಡಿತದ ಬಾಲ ಹಿಡಿದು ಊರಿಗೆ ಬಂದಾಗ , ಅಲ್ಲಿನ ಅವನ ಪ್ರಶ್ನೆಗಳಿಗೆ ಸಿಗುವಂಥ ಉತ್ತರ ಮತ್ತು ಆ ಉತ್ತರ ಕೊಟ್ಟ ವ್ಯಕ್ತಿಗೂ ವೃತ್ತಿಗೂ ಇರುವಂಥ ಸಂಬಂಧಗಳು, ಮಾನವೀಯ ತುಡಿತಗಳು ಮತ್ತು ಅನಿರೀಕ್ಷಿತ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲುತ್ತವೆ. ಇನ್ನು ಮುಂದಿನ ಕತೆ ಸೇವಂತಿ ಹೂವಿನ ಟ್ರಕ್ಕು.. ವಯಸ್ಸಾಗಿ ಓಡಾಡಲು ಆಗದೇ ಇರುವವಳೊಬ್ಬಳ ಕತೆ; ಮುದುಕಿ ಮತ್ತು ಆ ಮನೆಯವರು ಇಬ್ಬರೂ ಒಬ್ಬರಿಗೊಬ್ಬರು ಋಣದ ನೆರಳಿನಲ್ಲಿರುವವರು.. ಇಬ್ಬರ ಮನಸ್ಸಿನಲ್ಲಿಯೂ ನಡೆಯುವ ಜವಾಬ್ದಾರಿಯ ಕದನ ಮತ್ತು ಪೀಕಲಾಟದ ವ್ಯಥೆ ಈ ಕತೆ.. ನಾಲ್ಕನೆಯ ಕತೆಯ ಹೆಸರು ಅಪರೂಪ.. ಅಂಗವೈಫಲ್ಯದಿಂದ ಸಮಾಜದ ಕಣ್ಣಿನಿಂದ ದೂರವೇ ಉಳಿಯುತ್ತಿದ್ದ ಹುಡುಗಿಯ ಭಾವಚಿತ್ರ ತೆಗೆಯುವ ಒಂದು ಸಣ್ಣ ಅಂಶವಿಟ್ಟುಕೊಂಡ ಕತೆಯ ಅಂತ್ಯ ಎಂಥವರನ್ನೂ ಒಂದು ಕ್ಷಣ ವಿಚಲಿತರನ್ನಾಗಿಸುತ್ತದೆ. ಆದರೆ ಆ ಹುಡುಗಿ ಒಂದು ಚೆಂದ ಶಿಶುವಿನಂತೆ ಉಳಿದುಬಿಡುತ್ತಾಳೆ ಅದೇ ಮಂದಹಾಸದಲ್ಲಿ!.. ಮತ್ತೊಂದು ಕತೆ `ಹೊಸ್ತಿಲು'.. ಇಲ್ಲಿ ಸಾಂಸಾರಿಕ ಬದುಕನ್ನು ಕಟ್ಟಿಕೊಡುತ್ತಾ , ಸತ್ಯತೆಯ ಹುಡುಕಾಟ ಮತ್ತು ಪ್ರೀತಿಯ ಹಂಬಲ ವ್ಯಕ್ತವಾಗಿದೆ.. ಇನ್ನು ಮೊದಲನೇ ಭಾಗದ ಕೊನೆಯ ಕತೆ ದಿಟ್ಟಿಬೊಟ್ಟು , ಒಬ್ಬ ಕಲಾವಿದನ ಬದುಕನ್ನ ಒಂದು ಕಡೆಯಲ್ಲಿ ಹೇಳ್ತಾ , ಸಮಾಜದ ಚಿಂತಕನೊಬ್ಬ ಆಸ್ಪತ್ರೆಯಲ್ಲಿ ಮರುಗುವ ಕಥಾನಕ ಇದು.. ಖಾಯಿಲೆ ಕೂಪದಲ್ಲೂ ಬದುಕು ಜಡೆ ಹೆಣೆದ ಪುಟ್ಟ ಬಾಲೆಯಂತೆ ಮತ್ತು ಜಡೆ ಹೆಣೆವ ಅಮ್ಮನಂತೆ ಜೀವಂತವಾಗಬಲ್ಲದು ಅನ್ನುತ್ತದೆ ಈ ಕತೆ..
ಇನ್ನು ಭಾಗ ಎರಡರಲ್ಲಿನ ಮೊದಲ ಕತೆ ಸ್ವಪ್ನದೋಷ.. ಸಂಸಾರವಿದ್ದೂ ಕೆಲಸದ ನಿಮಿತ್ತ ದೂರ ಇರುವವನೊಬ್ಬ ಮತ್ತು ಚಿನ್ನದ ಬಳೆಯ ಕನಸು ಕಾಣುವ ಅವನ ಹೆಂಡತಿ.. ಇಲ್ಲಿ ಹೆಣ್ಣು ಇರಬಹುದಾದ ವಿವಿಧ ಪಾತ್ರಗಳಲ್ಲಿ ಆಕೆ ಅವನಿಗೆ ಎದುರಾಗುತ್ತಾಳೆ.. ಸ್ವಾವಲಂಬನೆಯ ಪ್ರತಿಜ್ಞೆಯಾಗಿ ಕತೆ ಉಳಿದುಹೋಗುತ್ತದೆ.. ಮುಂದಿನ ಕತೆ ಟ್ರೈಸಿಕಲ್.. ಬಾಲ್ಯವನ್ನ ಕೆದಕುವ ಮತ್ತು ನೆರೆಹೊರೆಗಳ ಆತ್ಮೀಯತೆಯನ್ನ ವರ್ಷಾನುವರ್ಷಗಳವರೆಗೂ ಕಾಪಿಡುವ ಕತೆ..ಮುಗ್ಧತೆಯೆದುರು ಸ್ವಾರ್ಥ ಕರಗಬೇಕು ಅನ್ನುವುದನ್ನ ಸೂಕ್ಷ್ಮವಾಗಿ ಕಟ್ಟಿಕೊಡುವ ಕತೆಯಿದು.. ಗಾಳಿಮರದ ನೆಳಲು ಅನ್ನುವ ಕತೆಯಲ್ಲಿ ಜೈಲಿಗೆ ಹೋದ ಗಂಡನನ್ನ ಕಾಣಲು ಹಾತೊರೆಯುವ ಮತ್ತು ಅವನ ಬರುವಿಕೆಯಲ್ಲಿ ಮಾಯವಾಗುವ ಅಸೂಯೆ ಮತ್ತು ಅವನೆಡೆಗಿನ ತಹತಹಿಕೆ, ಚಡಪಡಿಕೆಗಳ ಕತೆಯಲ್ಲಿ ಅವ ಒಂದು ಕ್ಷಣದ ಗಾಳಿಯಂತೆ ಬಂದುಹೋಗುತ್ತಾನೆ.. ಇನ್ನು ತೀರ ಎನ್ನುವ ಕತೆಯಲ್ಲಿ ಸಾವು ಅಪರಿಚಿತರನ್ನೂ ಬಂಧುಗಳನ್ನಾಗಿಸುತ್ತದೆ; ಸತ್ತುಬಿದ್ದ ಮೀನಿಗೆ ಜೀವ ಬರಲಿ ಎಂದು ಗೋಳಾಡುವವರ ಕತೆ, ಆದರೆ ಕೊನೆಗೆ ಎಲ್ಲರೂ ಅವರವರ ದಾರಿ ಹಿಡಿಯಲೇಬೇಕು, ಬದುಕು ಎಂದಿನಂತೆ ಮಾಮೂಲಿಯಾಗಿಬಿಡುತ್ತದೆ ಅನ್ನುತ್ತದೆ ಈ ಕತೆ.. ಚುಕ್ಕಾಣಿ ಅನ್ನೋ ಕತೆಯಲ್ಲಿ ಯಾರದೋ ಆಗಮನದಲ್ಲಿದ್ದವರಿಗೆ ಇನ್ನ್ಯಾರದ್ದೋ ಆಗಮನವಾಗಿ, ಸಮುದ್ರದಲ್ಲಿನ ಅಲೆಗಳು ಇನ್ಯಾವುದರದ್ದೋ ಮುನ್ಸೂಚನೆಯಂತೆಲ್ಲಾ ಭಾಸವಾಗಿ ಕೊನೆಗೆ ಆಸೆಯ ಲಾಂಚು ಮರಳಿ ಬಂದು ನಿಟ್ಟುಸಿರುಬಿಡುತ್ತದೆ.. ಮತ್ತೊಂದು ಕತೆ `ಬಿಡು ಬಿಡು ನಿನ್ನಯ..' , ಇದು ಮಾಸ್ತರರಿಬ್ಬರ ಕತೆ.. ಪ್ರಕೃತಿಯನ್ನ ಉಳಿಸಿಕೊಳ್ಳಬೇಕು ಅನ್ನುವವರೊಬ್ಬರಾದರೆ, ಅವರನ್ನ ಕಂಡರೆ ಭುಸುಗುಡುವ ಇನ್ನೊಬ್ಬರು.. ಇಬ್ಬರ ಬದುಕೂ ಬದಲಾದಾಗ ಇಬ್ಬರಲ್ಲೂ ಚಡಪಡಿಕೆ.. ಕೊನೆಗೆ ವೃದ್ಧಾಪ್ಯದಲ್ಲೂ ದ್ವೇಷದ ಕಿಚ್ಚಿದ್ದವನಲ್ಲಿ ನಿಸ್ತೇಜ ಬೂದಿ ಮಾತ್ರ ಇದ್ದಂತೆನಿಸತೊಡಗುತ್ತದೆ.. ಆಕ್ರೋಶವೆಲ್ಲ , ದೈನ್ಯತೆಯ ದನಿಯಾಗಿ ಬದಲಾದಂತನಿಸುತ್ತದೆ.. ವಿಕೃತ ಗೆಲುವಿನ ಆನಂದದಲ್ಲಿದ್ದವನೊಬ್ಬ ಕಳೆದುಕೊಂಡ ಬದುಕಿಗಾಗಿ ಹಲುಬುವ ಒಳದನಿಯಲ್ಲಿ ಸೋತುಹೊಗುತ್ತಾನೆ.. ಇನ್ನು ಕೊನೆಯ ಕತೆ ಚಂದ್ರಶಾಲೆ.. ಜಾತ್ರೆಯ ಸಂದರ್ಭವೊಂದನ್ನ ತೆಗೆದುಕೊಂಡು ಅಲ್ಲಿನ ಮೂರು ಭಿನ್ನ ವ್ಯಕ್ತಿಗಳ ಕುರಿತಾಗಿ ಕತೆಯಿದೆ.. ರಥಬೀದಿಯೇ ಈ ಎಲ್ಲಾ ಕತೆಗಳು ಸಂಧಿಸುವ ಜಾಗ.. ತೇರೊಂದು ಕಡೆ ಕದಲದೇ ನಿಂತಿದ್ದರೆ ತೇರನ್ನೇ ತನ್ನ ಗಂಡ ಎನ್ನುವವಳೊಂದು ಕಡೆ , ತೇರನ್ನ ನೋಡಲು ಬರುವಳೇನೋ ಎಂದು ಇಷ್ಟದ ಹುಡುಗಿಗೆ ಕಾದು ಕೂತಂಥವನೊಬ್ಬ , ಇನ್ನು ಕುಂಕುಮದ ಅಂಗಡಿಯಲ್ಲಿ ಕೂತಿರಬೇಕಾದವನೊಬ್ಬ ಬೆಟ್ಟದಲ್ಲಿ ಬಳೆಯೊಂದಿಗೆ ಪಾಳು ಗೋಡೆಗಳ ನಡುವೆ ಉಬ್ಬಸ ಬಂದಂತೆ ಆಡುತ್ತಿದ್ದ .. ಹೀಗೆ ಬೇರೆ ಬೇರೆ ಬಣ್ಣ ಆ ಜಾತ್ರೆಗೆ.. !
ಇವಿಷ್ಟು ಕತೆಗಳ ಸಾರಾಂಶಗಳಾದರೆ , ವಿವರಗಳನ್ನ ಓದಿಯೇ ಅನುಭವಿಸಬೇಕು.. ಅದರಲ್ಲೂ ನನ್ನಂಥವನಿಗೆ ನನ್ನ ಊರಿನಲ್ಲಿ ನಡೆದಿರಬಹುದಾದ ಸಾಧ್ಯತೆಗಳನ್ನ ಹೀಗೆಲ್ಲಾ ಕಾಣಬಹುದಾ ಅನ್ನುವ ಅಚ್ಚರಿಯನ್ನ ಉಳಿಸಿಕೊಳ್ಳುವ ಸಂಕಲನ ಇದು..ಸಣ್ಣ ಸಣ್ಣ ಸಂಗತಿಗಳನ್ನ ನಾವು ಗಮನಿಸುವುದು ತುಂಬಾನೇ ಕಡಿಮೆ, ಅದಕ್ಕೆಂದೇ ಬಹುಶಃ ಹತಾಶರಾಗಿ ನರಳುತ್ತೇವೆ ಬದುಕಿನ ಪುಟ್ಟ ಖುಷಿಗಾಗಿ.. ಕಾಯ್ಕಿಣಿಯವರ ಕತೆಗಳಲ್ಲಿ ಎಲ್ಲಕ್ಕೂ ಜೀವವಿದೆ, ಕೈಮುರಿದ ಕುರ್ಚಿ, ರಾತ್ರಿ ಪಾಳಿಯ ಬಸ್ಸು , ಇಂಜೆಕ್ಷನ್ನಿನ ವಾಸನೆ ಸೂಸುವ ಅಸ್ಪತ್ರೆ , ಉಪ್ಪುಗಾಳಿ , ಕಂಕುಳ ಬೆವರು , ರಸ್ತೆ ಬದಿಯ ಅಂಗಡಿ, ಕದ್ದುತಂದ ಸೀಯಾಳ, ರಾತ್ರಿ ಕಳ್ಳ ಚಂದ್ರ.. ಹೀಗೇ ಹೀಗೇ.. ಯಾಂತ್ರಿಕತೆಯ ಈ ಹೊಸ್ತಿಲಲ್ಲಿ ಮತ್ತು ಹೊತ್ತಿನಲ್ಲಿ ಬರಮಾಡಿಕೊಳ್ಳಬಹುದಾದ ಬರಹಗಳು ಶ್ರೀ ಜಯಂತ ಕಾಯ್ಕಿಣಿ ಅವರದ್ದು..
~`ಶ್ರೀ'
ತಲಗೇರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ