ಸೋಮವಾರ, ಮಾರ್ಚ್ 31, 2014

"ನೀನು...ನಾನು..ಮತ್ತು ಸಮಯ.."

   "ನೀನು...ನಾನು..ಮತ್ತು ಸಮಯ.."


ನಾ ಬರುವ ಸಮಯ ಕಣ್ಣೆವೆಯ ಬಳಿಗೆ
ತಂತಾನೇ ತಾನೇ ನಾಚಿಕೊಂಡಿತು ಕಾಡಿಗೆ
ನಾ ಬೆರೆವ ಆಶಯ ನಿನ್ನೆದೆಯ ಒಳಗೆ
ಮುಂಚೇನೇ ನೀನೇ ಕೊಡಲಾರೆಯಾ ಸಲಿಗೆ..

ಕನಸುಗಳಿಹ ಸಂಜೆಯಲಿ ನೀ ಚೆಂದ ಸೆಳೆತ
ಒನಪು ಬಳುಕಿದೆ ನವಿಲೇ ಸಮ್ಮಿಲನ ಗಳಿಗೆ
ತೊದಲುತಿಹ ಹೆರಳಿನಲಿ ಹೂವೆಲೆಯ ಬಿಗಿತ
ಹೊಳಪು ಇಣುಕಿದೆ ಚೆಲುವೆ ಯೌವನದ ಒಳಗೆ

ಶಿಶಿರಗಳಿಹ ಅವನಿಯಲಿ ನೀ ತಂಪು ಚಿಗುರು
ಮನದ ಮುಗಿಲಿಗೆ ದೊರೆತ  ಸಂಭ್ರಮದ ಹೆಸರು
ಅರಳುತಿಹ ಹೂಗಳಲಿ ನೀ ನಿತ್ಯ ಮಧುವು
ಎದೆಯ ಹವೆಯಲಿ ಬೆರೆತ ಪರಿಮಳದ ಕಾವು

ಭ್ರಮೆಗಳಿಹ ಸ್ವಪ್ನದಲಿ ನೀ ಸಾಲು ಬೆಳಕೇ
ಇರುಳು ಕುಲುಕಿದೆ ಎಲ್ಲೋ ನೆನಪುಗಳ ಕುಡಿಕೆ
ನಿನ್ನೆದೆಯ ಕಂಪನಕೆ ನಾ ನೀಳ ಮಿಡಿತ
ಒಲವು ಹುಡುಕಿದೆ ನಲ್ಲೆ ಭಾವಗಳ ಸುರತ..

ನಾನಿರುವ ಸಮಯ ನಿನ್ನ ಮೌನಗಳಿಗೆ
ಕಾಡಿಲ್ಲವೇನೇ ನನ್ನ ಸೇರೋ ತುಡಿತ..
ನಾ ಬರದ ಸಮಯ ನಿನ್ನ ತೋಳುಗಳಿಗೆ
ಕೂಡಿಲ್ಲವೇನೇ ಬೆನ್ನಾಗಿ ವಿರಹದಾ ಗಣಿತ..

                                                     ~‘ಶ್ರೀ’
                         ತಲಗೇರಿ

4 ಕಾಮೆಂಟ್‌ಗಳು:

  1. ’ಅರಳುತಿಹ ಹೂಗಳಲಿ ನೀ ನಿತ್ಯ ಮಧುವು
    ಎದೆಯ ಹವೆಯಲಿ ಬೆರೆತ ಪರಿಮಳದ ಕಾವು’
    ನಮ್ಮ ಚಿತ್ತವನ್ನು ಅತ್ತ ಕಡೆ ಸರಿಸುವ ಕವನ.

    ಪ್ರತ್ಯುತ್ತರಅಳಿಸಿ
  2. ಮೊದಲ ಸಲ ನಾನಿಲ್ಲಿಗೆ ಬಂದಿದ್ದು ...
    ಪದಗಳಲ್ಲಿನ ಭಾವಗಳು ಮೋಡಿ ಮಾಡಿದ್ದಂತೂ ಸುಳ್ಳಲ್ಲ...
    ಚಂದ ಪದ ಬಳಕೆ..ಇಷ್ಟವಾಯ್ತು ಭಾವಬರಹ

    ಪ್ರತ್ಯುತ್ತರಅಳಿಸಿ