ಭಾನುವಾರ, ಆಗಸ್ಟ್ 30, 2015

"ಸಂಚಿಕೆ..."

     "ಸಂಚಿಕೆ..."

ಕೆಂಪುರಂಗಿನ ಸಂಗಕೂ
ಚಾಚಿದಾ ಹೆಣದ ರಾಶಿ..
ಬರಲಾರನೇ ಬಾನೆಡೆಗೆ
ಕಂಪುರಾತ್ರಿಯ ಮೃದುಭಾಷಿ..
ಮೇಘಕ್ಕೂ ತಾಡಿಹುದೇ
ತಿಮಿರದಾ ಸಂವೇದನೆ...

ಅಂತರಂಗದ ಅಸಲಿ ಕತೆಗಳಾ
ಹರಿದ ಪುಟಗಳ ಅಕ್ಷರದ ಪಾಡು..
ಕುಂಟುತ್ತ ಎದೆಯೊಳಗೆ ತೊದಲುತಿದೆ
ಅಂಕಣದ ಜೀವಗಳು ಚೆದುರಿದಾ ಹಾಡು..
ತನನಕ್ಕೂ ತಾಡಿಹುದೇ
ತಿಮಿರದಾ ಸಂವೇದನೆ...

ನಡೆದಂತೆ ಋತುಮಾನ,ಬೀದಿಯಲಿ
ದ್ರವವಾಯ್ತು ಬಾನಿನಾ ಕರಿಧೂಳು..
ತುಂಬೀತು ಬೆಳಕು ಪೂರ ಕೋಣೆಯಲಿ
ಅರ್ಧ ತೆರೆದಿಟ್ಟರೂ ಪುಟ್ಟ ಬಾಗಿಲು..
ಬಿಡಿಗಳೊಂದೊಂದನೇ ಎದೆಯೊಳಗೆ ಕೂರಿಸಲು
ಕಾರಣದ ದಾರವು ನೀನೇನೇ..
ಕಂತುಗಳ ಸಂಚಿಕೆಯು ಈ ಬದಲಾವಣೆ...

                                           ~‘ಶ್ರೀ’
                                              ತಲಗೇರಿ

ಶುಕ್ರವಾರ, ಆಗಸ್ಟ್ 28, 2015

"ಮೊರೆತ..."

          "ಮೊರೆತ..."

ಕನಸುಗಾಡಿನ ಬಿಸಿಲ ನಡಿಗೆ
ಅಂತರದ ಸನಿಹಕ್ಕೆ ಅರ್ಥವಾಗದ ಬೆವರು..
ಮುರಿದು ಬಿದ್ದಿಹ ಬಿದಿರ ಕೋಲಿಗೆ
ರಂಧ್ರಗಳ ಜೊತೆ ಸಿಗಲು,ಸ್ವರಗಳಾ ತಳಿರು..
ಖಾಲಿಹಾಳೆಯ ನಾಳೆಯೊಳಗೂ
ಖಾಲಿಯಾಗದ ಕಡಲ ಮೊರೆತ...

ಬಿಗಿದ ಬಿಲ್ಲಿನ ದಾರಕೇನೋ ಬಯಕೆ
ತಲುಪಿದ್ದು ಕೊನೆಗೆ ಬೆರಳಚ್ಚಿನಾ ಬಾಣ..
ಚಿಗುರು ಹುಲ್ಲಿನ ಉಗುರ ತುದಿಗೆ
ಹಚ್ಚೆ ಹಾಕುವ ಕೆಲಸ ಹುಡುಕುವಾ ಕಿರಣ..
ಖಾಲಿಹಾಳೆಯ ನಾಳೆಯೊಳಗೂ
ಖಾಲಿಯಾಗದ ಕಡಲ ಮೊರೆತ...

ಎದೆಯ ಪನ್ನೀರು ತೊರೆಯಾಗಿ ಹರಿದಾಗ
ಹುಟ್ಟಿದ್ದು ಮಾತ್ರ ಅಂಬರದ ಅಲೆಗಳು..
ಕೂಡುವಾ ಆವೇಗ ಕವಲಾಗಿ ಬಿರಿದಾಗ
ಬದಲಾಗೋ ಪಾತ್ರಕ್ಕೆ ನೂರಾರು ಮುಖಗಳು..
ಖಾಲಿಹಾಳೆಯ ನಾಳೆಯೊಳಗೂ
ಖಾಲಿಯಾಗದ ಕಡಲ ಮೊರೆತ...

                                          ~‘ಶ್ರೀ’
                                             ತಲಗೇರಿ

ಭಾನುವಾರ, ಆಗಸ್ಟ್ 9, 2015

"ಮೌಲ್ಯ..."

        "ಮೌಲ್ಯ..."

ಗುಡಿಸಲಿನ ಕಿಂಡಿಗಳಲಿ ಬೆಳ್ಳಿ ಕಿರಣ
ಸಹಜ ಕಲೆಯ ನೈಜ ವ್ಯಾಕರಣ..
ಹಸಿದ ಗಳಿಗೆ ತಿಳಿಯಿತೆನಗೆ
ಅಗಳಿಗೂ ಬೆಲೆಯ ಕೊಡುವ ಕಾರಣ..

ಹರಕು ಚಾಪೆಯ ಮೇಲೆ ಮಲಗಿದಾಗಲೇ
ತಿಳಿದದ್ದು ಭೂತಾಯಿಯಾ  ಪ್ರೀತಿ..
ತಿಳಿನೀರು,ಗಂಟಲಲಿ ಇಳಿದಾಗಲೇ
ಅರಿವಾಯ್ತು ಸೃಷ್ಟಿಯಾ ನಿಜ ಶಕ್ತಿ..

ಹೂವಿರದ,ಹಣ್ಣಿರದ,ಎಲೆ ಮಾತ್ರ ಇರುವ
ಮರದಲ್ಲೂ ಇಹುದು ಬತ್ತದಾ ಮಮತೆ..
ದಣಿದ ದೇಹಕೆ,ಗೂಡಿಡುವ ಹಕ್ಕಿಗೆ
ಮಾತ್ರ ಸೀಮಿತ ಮಡಿಲಿನಾ ಕತೆ..

ಅರಮನೆಯ ಗಾಳಿಗೆ ದರ್ಪದಾ ಬಿಗುಮಾನ
ಚಂದಿರನ ಚಾವಡೀಲಿ ಚೆಲುವುಗಟ್ಟುವಾ ಪವನ..
ಪುಟಗಳಲಿ ಬೆಚ್ಚಗಿನ ನವಿಲಗರಿಗಿಂತ
ಹನಿಗಳಲಿ ಹದವರಿತು ನೆನೆವುದೇ ಮಧುರ ತನನ..

ನಕ್ಷತ್ರವೊಂದು ಚೆಂದದಾ ಆಸೆ
ಕೈದೀಪ ಜೊತೆಯಿರುವ ಒಲವಿನಾ ಬೊಗಸೆ..
ಕೊನೆತನಕ ಕರಗದೇ ಉಳಿಯಬೇಕೆಂದಿಲ್ಲ
ದಾರಿಹೋಕನ ಕಣ್ಣ ಖುಷಿ ಅದರ ಪಾಲಿಗೆಲ್ಲಾ...

                                                 ~‘ಶ್ರೀ’
                                                     ತಲಗೇರಿ

ಶನಿವಾರ, ಆಗಸ್ಟ್ 8, 2015

"ಅರಿಕೆ..."

   "ಅರಿಕೆ..."

ಹೆಚ್ಚಿತೇ ಬಯಕೆ
ನೀಲಾಕಾಶದ ಕನ್ನಡಿ..
ಅಡಗಿಸೆ ಪಳಗಿಸೆ
ಕಲ್ಲಿಗೂ ಹೊಳಪಿದೆ
ಕಾಲನ ಮೊರೆತದಲಿ..

ಅತ್ತಿಂದಿತ್ತ ಹೊಯ್ಯುತ್ತಿದ್ದ ನಾವೆಗೆಲ್ಲ
ಪಯಣ ಸಲೀಸು ಈಗ..
ಹುಟ್ಟು ಹಾಕುವ ತೋಳುಗಳಿಗೆ
ಕೊಂಚ ಸಡಿಲ ಕೆಲಸ..
ಸಾಗರವೇ ನೀನೇಕೆ ಶಾಂತವಾದೆ?!..

ಕಟ್ಟುತ್ತಲೇ ಮರಳ ಮನೆಯ,
ಓಡೋಡಿ ಬರುವ ಅಲೆಯ ಸದ್ದಿಲ್ಲ..
ಕೆಡವುವರ್ಯಾರಿಲ್ಲ..
ಚಿಣ್ಣರಲಿ,ಕಳೆದು ಪಡೆಯುವ
ಹಂಬಲವಿಲ್ಲ,ನಗುವಿಲ್ಲ;
ಅಲೆಯ ಭಯವೂ ಇಲ್ಲ..

ಕಂಪನದ ಹಂಗಿಲ್ಲದೆ
ಕಾಡಲಾರವು ನೆನಪುಗಳು..
ಒಂಚೂರು ದಿಟ್ಟತನ
ತುಂಬಿಕೊಡು ಹೆಜ್ಜೆಗಳಿಗೆ..
ಬೆನ್ನಟ್ಟಿಬನ್ನಿ ಅಲೆಗಳೇ....
ಚೀರುತ್ತ ಕಾಯುತಿದೆ
ಬಿಸಿ ನೆರಳು,ಹಸಿಯಾಗಬೇಕೆಂದು..
ಮತ್ತೆ ಚಿಗಿಯಲಿ,ದಡದಲಿ
ನನ್ನದೆಂಬುದನು ಉಳಿಸಿಕೊಳುವ
ಚೂರು ಹೋರಾಟ..
ಭವಿತವ್ಯಗಳ ಪುಟ್ಟ ಕಂಗಳಲಿ
ಇಣುಕಿ ಅರಳಲಿ
ಮರಳ ಮನೆಯ ಅಸ್ತಿತ್ತ್ವದ
ಸಂತೃಪ್ತ ನೋಟ...

                            ~‘ಶ್ರೀ’
                               ತಲಗೇರಿ