ಭಾನುವಾರ, ಏಪ್ರಿಲ್ 19, 2015

"ಅರ್ಥ"...

           "ಅರ್ಥ"...

ಬಿಗಿದ ಬಾಹುಗಳು ಸಡಿಲವಾಗುವ ಕ್ಷಣದಿ
ಕದಲಿತ್ತು ಸಾಲಿನಲಿ ಬೆವರ ಹನಿಗಳ ಪರಿಧಿ..
ಬರೆದ ಪದಗಳಾ ಅಂತರದ ನಿಲುವಿಗೆ
ಕಾರಣದ ಲೇಪವಿಹುದೇ ಲೇಖನಿಯ ತುದಿಗೆ..

ಇಂದ್ರಿಯದ ಹರೆಯಕ್ಕೆ ಹಂದರದ ಹಂಬಲ
ಹಬ್ಬಿಕೊಂಡೀತು ಬಳ್ಳಿ,ಬಿಸಿಲಿನಾ ತಾಸಿನಲಿ..
ಬದಲಾಗೋ ಮಾಸಗಳು ಚೆಂದಗೊಳಿಸುವವು ಹಗಲ
ತುಂಬಿಬಂದೀತು ಬಾನು,ಬೆಳಕ ನೆರಳಿನಲಿ..

ಅಂಕುಡೊಂಕಿನ ಪಥದ ಕೊನೆಗೆ
ಚಾಚಿಕೊಂಡಿದೆಯೇನು ನಿಟ್ಟುಸಿರ ಗಮ್ಯ..
ಬಿಂಕ ಸೋಕಿದ ಹೆಜ್ಜೆ ದನಿಗೆ
ಹೇಳಿಕೊಟ್ಟಿತೇ ಹವೆಯು ಹರಿತದಾ ರಮ್ಯ..

ಸುಮದ ಜೇನ ಸತತ ಹೀರಿಯೂ
ಪತಂಗದಾ ರೆಕ್ಕೆಗಿಲ್ಲ,ಎಸಳ ಬಣ್ಣ..
ಅಮಲು ಸ್ಪರ್ಶದ ಪ್ರವರ ಭೇಟಿಯು
ಹಂಗಿನಾಚೆಗೂ ಮೀರಿದೆ ಗರ್ಭದಾ ತನನ..

ಹನಿಯುದುರಿ ಹಸನಾಯ್ತು ಹರೆಯದಾ ಸ್ವಾರ್ಥ
ಮಣ್ಣಿನಲಿ ಚಿಗುರಿತ್ತು ನೂರು ಆಗಸ..
ವಿನಿಮಯದ ಕೊನೆಯಲ್ಲಿ ಉಳಿದಿದ್ದು ಅರ್ಥ
ಬರೆದಾಯ್ತು ಸೋಜಿಗದ ತಾಜಾ ವಿನ್ಯಾಸ..

                                           ~‘ಶ್ರೀ’
                                              ತಲಗೇರಿ

ಶುಕ್ರವಾರ, ಏಪ್ರಿಲ್ 17, 2015

"ಸಮಯ"...

            "ಸಮಯ"...

ಬದುವೆಲ್ಲಾ ಹದವಾಗಿ ಕಾದಿಹುದು ಮೃದುವ
ಅತ್ತ ತಂಪಿನ ಮಾಡು ಮೂಡುವ ಭ್ರಮೆಯಲಿ..
ನದಿಯೆಲ್ಲಾ ಕಡಲನ್ನು ಸೇರುವಾ ಸ್ವರವ
ಮತ್ತೆ ಇಂಪಿನ ಒನಪು ಮಾಡಿತು ಹೊಸತಿನಲಿ..

ನಿಶೆಯ ಪ್ರಸವದಲಿ ಚಂದ್ರನೆನ್ನುವ ಮಧುವು
ಹವೆಯೊಳಗೆ ಹಂಬಲದಿ ಅಲೆದಿಹುದು ಮುಗಿಲು..
ಸರಿಸಿ ತೆರೆದೀತೇ ಅಗಳಿಯನು ಕದವು
ತುಂಬೀತೇ ಮತ್ತೊಮ್ಮೆ ಖಾಲಿಯಾಗಿಹ ಬಿಸಿಲು..

ಗಾಳಿಯಾ ಗಡಿಬಿಡಿ ಋಣದ ಮಾತು
ಕಾಯದೇ ಉದುರಿತು ಕಾಲಕೆ ಹಳತು..
ಭೂಮಿಯಾ ಬಸಿರಿನ ಜೋಗುಳ ಸೆಳೆತ
ಕಾಮದ ಸಮಯವ ಕೇಳದೇ ಕಸಿಯಿತು..

ರೆಕ್ಕೆಯ ಬಿಚ್ಚಿತು ಬೆಳಕಿನ ಹಕ್ಕಿ
ಹಾದಿಯ ಮೋಹದ ಮಂಜನು ಕರಗಿಸಿ..
ಪಕ್ಕದ ಪಯಣಿಗ ಎಲೆಗಳ ಹೆಕ್ಕಿ
ಜೋಳಿಗೆ ತುಂಬಿಹ ಆಸೆಯ ಪೋಣಿಸಿ..

ಹರಿದ ಚೀಲದ ಮೈಗೆ,ತೇಪೆಗಳ ಉಪಚಾರ
ಬೊಗಸೆಯಲಿ ಉಳಿದಿಹುದು ಬರಿಯ ಮಣ್ಣಿನ ವಾಸನೆ..
ಬಿರಿದ ಹೂಗಳು ಕೈಗೆ,ಎಟುಕದಾ ಪರಿವಾರ
ಕಿಸೆಯೊಳಗೆ,ಕದಲುತಿದೆ ಗಡಿಯಾರದಾ ಮುಳ್ಳು ತಂತಾನೇ..


                                                                  ~‘ಶ್ರೀ’
                                                                      ತಲಗೇರಿ

"ನೀನು..."

         "ನೀನು..."

ನನ್ನಯ ಹಾಡಿನ ಪ್ರತಿ ಪದ ನೀನು
ಅಕ್ಷರ ಅಕ್ಷರ ನಿನ್ನದೇ ಧ್ಯಾನ..
ಒಲವಿನ ಬಿಂಬಕೆ ಕನ್ನಡಿ ನೀನು
ಬಿಂದುವು ಬಿಂದುವು ಸೋಜಿಗ ರಚನಾ..

ಕೇಳದೇ ಕಾಡಿದೆ ನಿನ್ನಯ ಹೆರಳು
ಅರಳಿದೆಯೀಗ ಗಾಳಿಯ ತೋಳು..
ಬಾರದೆ ಬೆರೆಯದೆ ನಿಂತಿದೆ ನೆರಳು
ಚಿಗುರಿದೆಯೀಗ ನಾಚಿಕೆ ಮುಗುಳು..
ಕ್ಷಣಕೂ ಕೂಡ ಒನಪು ತಂತು
ಚೈತ್ರಕೀಗ ವಯಸು ಬಂತು..

ನನ್ನೆದೆ ಹೂವಿಗೆ ನಿನ್ನಯ ಕಣ್ಣು
ತಂದಿದೆಯೀಗ ಬಣ್ಣದ ಬಂಧ..
ಅದರೆದೆ ಬೀದಿಗೆ ನಿನ್ನಯ ಸ್ಪರ್ಶ
ತುಂಬಿದೆಯೀಗ ಹೊಸತರ ಗಂಧ..
ಹವೆಗೂ ಕೂಡ ಹುರುಪು ತಂತು
ಚೈತ್ರಕೀಗ ವಯಸು ಬಂತು..

                                 ~‘ಶ್ರೀ’
                                     ತಲಗೇರಿ

ಭಾನುವಾರ, ಏಪ್ರಿಲ್ 12, 2015

"ಸಂಭ್ರಮ..."

  "ಸಂಭ್ರಮ..."

ಗೂಡು ಕಟ್ಟುವಾ
ಹಕ್ಕಿ ಕಂಗಳಲಿ
ಮೋಡಗಳ ಮೀರಿ ಬೆಳೆವಾಸೆ..
ತುತ್ತು ಕಾಯುವಾ
ಚುಂಚಿನುಸಿರಲ್ಲಿ
ಅಮ್ಮನೆದೆಗೆ ಒರಗಿ ನಗುವಾಸೆ..

ಬಿಸಿಲು ಚಾಚಲು
ತೆರೆವ ಮೊಗ್ಗಿಗೆ
ಸೌಗಂಧ ಬೀರೋ ತವಕ..
ಒಲವ ತೊದಲಲಿ
ಬೆರೆವ ದುಂಬಿಗೆ
ಮಕರಂದ ಹೀರೋ ಪುಳಕ..

ಶಿಲೆಯ ಚೂರಿಗೆ
ಉಳಿಯ ಏಟಿಗೆ
ಶಿಲ್ಪವೆಂದೆನಿಸಿಕೊಳುವ ಅವಸರ..
ಕಲೆಯ ಹಸಿವಿಗೆ
ದಿನದ ಕಸುಬಲಿ
ಅನ್ನ ಕಲಸಲು ಬೆರಳಿಗಾಧಾರ..

ಋತುವಂಥ ನೆಪದಲ್ಲಿ
ಬಣ್ಣಗಳ ಸೃಜಿಸುವವು
ಎದೆತುಂಬ ಭೂಮಿ ಆಕಾಶ..
ಸ್ವಪ್ನಗಳ ತಪದಲ್ಲಿ
ರೂಪಿಸುತ್ತ ಸ್ತರವನ್ನು
ಬರೆಯಬೇಕಿದೆ ನಿನ್ನದೇ ವಿನ್ಯಾಸ..
ಶೂನ್ಯದೆಳೆಗಳ ತುಂಬ ತುಂಬ
ತಾಜಾತನವ ತುಂಬಿಸಿ..
ತೋರಬೇಕಿದೆ ಗಳಿಗೆ ಗಳಿಗೆ
ದಿವ್ಯ ಸಂಭ್ರಮಕೆ ಸಾಕ್ಷಿ..

                         ~‘ಶ್ರೀ’
                           ತಲಗೇರಿ