ಶುಕ್ರವಾರ, ಏಪ್ರಿಲ್ 17, 2015

"ಸಮಯ"...

            "ಸಮಯ"...

ಬದುವೆಲ್ಲಾ ಹದವಾಗಿ ಕಾದಿಹುದು ಮೃದುವ
ಅತ್ತ ತಂಪಿನ ಮಾಡು ಮೂಡುವ ಭ್ರಮೆಯಲಿ..
ನದಿಯೆಲ್ಲಾ ಕಡಲನ್ನು ಸೇರುವಾ ಸ್ವರವ
ಮತ್ತೆ ಇಂಪಿನ ಒನಪು ಮಾಡಿತು ಹೊಸತಿನಲಿ..

ನಿಶೆಯ ಪ್ರಸವದಲಿ ಚಂದ್ರನೆನ್ನುವ ಮಧುವು
ಹವೆಯೊಳಗೆ ಹಂಬಲದಿ ಅಲೆದಿಹುದು ಮುಗಿಲು..
ಸರಿಸಿ ತೆರೆದೀತೇ ಅಗಳಿಯನು ಕದವು
ತುಂಬೀತೇ ಮತ್ತೊಮ್ಮೆ ಖಾಲಿಯಾಗಿಹ ಬಿಸಿಲು..

ಗಾಳಿಯಾ ಗಡಿಬಿಡಿ ಋಣದ ಮಾತು
ಕಾಯದೇ ಉದುರಿತು ಕಾಲಕೆ ಹಳತು..
ಭೂಮಿಯಾ ಬಸಿರಿನ ಜೋಗುಳ ಸೆಳೆತ
ಕಾಮದ ಸಮಯವ ಕೇಳದೇ ಕಸಿಯಿತು..

ರೆಕ್ಕೆಯ ಬಿಚ್ಚಿತು ಬೆಳಕಿನ ಹಕ್ಕಿ
ಹಾದಿಯ ಮೋಹದ ಮಂಜನು ಕರಗಿಸಿ..
ಪಕ್ಕದ ಪಯಣಿಗ ಎಲೆಗಳ ಹೆಕ್ಕಿ
ಜೋಳಿಗೆ ತುಂಬಿಹ ಆಸೆಯ ಪೋಣಿಸಿ..

ಹರಿದ ಚೀಲದ ಮೈಗೆ,ತೇಪೆಗಳ ಉಪಚಾರ
ಬೊಗಸೆಯಲಿ ಉಳಿದಿಹುದು ಬರಿಯ ಮಣ್ಣಿನ ವಾಸನೆ..
ಬಿರಿದ ಹೂಗಳು ಕೈಗೆ,ಎಟುಕದಾ ಪರಿವಾರ
ಕಿಸೆಯೊಳಗೆ,ಕದಲುತಿದೆ ಗಡಿಯಾರದಾ ಮುಳ್ಳು ತಂತಾನೇ..


                                                                  ~‘ಶ್ರೀ’
                                                                      ತಲಗೇರಿ

2 ಕಾಮೆಂಟ್‌ಗಳು:

  1. ಬದುಕಿನ ಓಘವೇ ಹಾಗೆ, ಅದು ಕಾಲದೊಡನೆ ಸಂವಾದಕಿಳಿಯದ ದಿವ್ಯ ಮೌನಿ!
    ಕದ ತೆರೆದ ಶುಭ ಗಳಿಗೆಯಲಷ್ಟೇ ತುಸು ಬಿಸಿಲಿಗೂ ಪ್ರವೇಶ.
    ಕವನ ತೆರೆದುಕೊಳ್ಳುವ ಅಂತರಂಗ ಮತ್ತದರ ವೈಚಾರಿಕತೆಯು ಅಚ್ಚರಿ ಉಳಿಸಿತು.

    ಪ್ರತ್ಯುತ್ತರಅಳಿಸಿ