ಶನಿವಾರ, ಜನವರಿ 17, 2015

"ಪಾತ್ರ"...

      "ಪಾತ್ರ"...

ಜಗವ ಕಾಣುವ ಮೊದಲೇ
ಹಸಿವನ್ನು ಕಳೆದವಳು..
ಇಟ್ಟ ಪುಟ್ಟ ಹೆಜ್ಜೆಗೆಲ್ಲ
ಎದೆಹಾಲ ಕಸುವಿತ್ತವಳು..
ಗರ್ಭದಾ ಒಳಹೊರಗು
ಸ್ವರ್ಗವನೇ ಹರಸಿಹಳು..
ಇಲ್ಲಿ ‘ಅವಳೊಬ್ಬ’ ತಾಯಿ..

ಒಂದೇ ನೂಲಿನ ಒಡಲಲಿ
ಹುಟ್ಟಿದಾ ನವಿರು ಎಳೆಯು..
ಬಿಡಿ ದೇಹ ಹಿಡಿ ಜೀವ
ತುಸುಮುನಿಸಿನಲಿ ಗುದ್ದು
ಮರು ಗಳಿಗೆ ಮುಗುಧತೆಯ ಮುದ್ದು..
ಇಲ್ಲಿ ‘ಅವಳೊಬ್ಬ’ ಅನುಜೆ..

ತೊದಲಿನಾ ಸೊಗಡಿಗೆ
ಮೃದು ಸಲಿಗೆಯಾದವಳು..
ಶೈಶವದ ಬೆಳಗಿಂದ
ಸಂಜೆ ಬಿಸಿಲಾರುವ ತನಕ
ನೆರಳಂತೆ ಉಳಿದವಳು..
ಕೈ ಬೆರಳ ತುದಿಗಳಾ
ಮಣ್ಣಿನಲಿ ನೆನಪಾಗುವಳು..
ಇಲ್ಲಿ ‘ಅವಳೊಬ್ಬ’ ಗೆಳತಿ..

ಮಣ್ಣರಸಿ ಬೇರೊಂದು
ಎದೆಯೊಳಗೆ ಇಳಿದಾಗ
ಕಣ ಕಣಕೆ ಹರಡುವುದು
ಭದ್ರತೆಯ ಸುಳಿವು..
ಪೊರೆ ಕಳಚಿ ಕಲೆತಾಗ
ರಕ್ತದಲಿ ಹೊಸಗಂಧ
ಫಲವಾಗುವುದು ಒಲವು..
ಇಲ್ಲಿ ‘ಅವಳೊಬ್ಬ’ ಮನದನ್ನೆ..

ಮಡಿಲಲ್ಲಿ ವಾತ್ಸಲ್ಯ,ಬೊಗಸೆಯಲಿ ನೇಹ
ಪ್ರೀತಿಯಾ ಸಾನ್ನಿಧ್ಯ,ಅರ್ಪಣೆಯ ಗೇಹ..
ಎಲ್ಲ ದಿಕ್ಕಿನಲೂ ಸೋಕಿಹೋಗುತಿದೆ
ಋಣದ ಗಾಳಿ..
ನಿತ್ಯ ಪರ್ವದಾ ಪ್ರತಿ ಬಿಂದು ‘ಅವಳು’
ಭಿನ್ನ ಪಾತ್ರದಲಿ....

                                       ~‘ಶ್ರೀ’
                                           ತಲಗೇರಿ 

ಸೋಮವಾರ, ಜನವರಿ 12, 2015

"ಬುದ್ಧನಾಗಿಲ್ಲ..."

 "ಬುದ್ಧನಾಗಿಲ್ಲ..."

ಕಾಷಾಯದಾಶ್ರಯದಲ್ಲಿ
ಧರ್ಮ ಕರ್ಮಗಳ ಕಡೆದು
ನವನೀತ ಪಡೆವ
ತಾಳ್ಮೆ ನನಗಿಲ್ಲ...
ನನ್ನೆದೆಯರಮನೆಯ
ಮೂಲೆ ಮೂಲೆಯಲೂ ಅನುರಣಿಸುತಿದೆ
ನಾನಿನ್ನೂ ಬುದ್ಧನಾಗಿಲ್ಲ...

ಸ್ಖಲಿತ
ಬೆಳಕ ಚೂರಿನ ಸ್ವಪ್ನ
ಎಡೆಬಿಡದೇ
ಕದಡುತಿದೆ ಬಿಂಬ...
ಭ್ರಮೆಯ ತೊಲಗಿಪ ರವಿಯು
ಬಾಂದಳದಿ ಹುಟ್ಟಿಲ್ಲ...
ನಾನಿನ್ನೂ ಬುದ್ಧನಾಗಿಲ್ಲ...

ಕಲ್ಲೆದೆಯ ರಾಗ
ಕುಸುರಿಯಲಿ ಸೃಜಿಸಿಲ್ಲ...
ಉಳಿಪೆಟ್ಟು ಬಿದ್ದಿಲ್ಲ..
ಕರಗಬೇಕಿದೆ ದಾಹ..
ನಾನಿನ್ನೂ ಬುದ್ಧನಾಗಿಲ್ಲ...

ಅವಸರದ ಕರೆಗೆ
ಪ್ರತಿ ಗಳಿಗೆ ಮೆರವಣಿಗೆ..
ಕಮಲದಾ ಎಲೆಯ
ಹನಿ ಜಾರಿ ಬೆರೆತೀತು...
ಬೇರುಗಳಲಿ
ಹರಡಿಹುದೇ ಮೋಹ...
ನಾನಿನ್ನೂ ಬುದ್ಧನಾಗಿಲ್ಲ...

                        ~‘ಶ್ರೀ’
                           ತಲಗೇರಿ


ಬುಧವಾರ, ಜನವರಿ 7, 2015

"ಪುನರಾವರ್ತನ".....

            "ಪುನರಾವರ್ತನ".....

ಆಗಸವು ಬಿರಿದು,ಬಣ್ಣಗಳು ಹರಿದು
ಒತ್ತಾಗಿ ಸುರಿವುದು ದ್ಯುತಿಯ ಬಾಣ..
ಶೈತ್ಯ ರಾತ್ರಿಯ ಅಮಲು ಇಳಿದು
ಕಾಡುತ್ತ ಕಳೆವುದು ಹುಲ್ಲಿನೆದೆಯ ಶ್ರಾವಣ..

ನಿಲುಕು ನೋಟಕೆ ನೆಲದ ಸಲುಗೆ
ಪರಿಮಿತಿಯ ಪಥ್ಯದಲಿ ಘಮಿಸುವಾ ಹೂವು..
ಅಲೆದು ಕಲೆಯುವ ಬಯಲ ಗಾಳಿಗೆ
ಕವಲೆಸೆದು ನಿಲ್ಲುವುದು ತಾನೊಂಟಿ ಮರವು..

ರತಿರಾಗ ಭ್ರಮೆಯ ನವಿರಾದ ಮೊರೆತ
ಹೊಂಬೆಳಕ ತುರುಬಲ್ಲಿ ರಸಿಕತೆಯ ಕದಿರು..
ಬಿಸಿಲ ಭಾಷೆಯಲಿ ಕರಗುವಾ ತುಡಿತ
ತನಿನಾದ ಸ್ಫುರಿಸುವುದು ಒರಟಾದ ಬಿದಿರು..

ಚಿಪ್ಪಿನಾ ಸೆರೆಯೊಡೆದು ಪುಟಿಯುವಾ ಚಿಗುರು
ಕಂಪನದ ತಳದೊಳಗೆ ಇಳಿಯುವುದು ಬೇರು..
ಮುಪ್ಪಿನಾ ಗೆರೆ ಬಿಡಿಸಿ ಸಂಜೆಯದು ತೃಪ್ತ
ಕಂತಲಿಹ ದಿನಮಣಿಗೆ ಆಚೆಲೋಕದ ಸೆಳೆತ..

ಹಗಲ ಹಿರಿತನ ಮುಗಿದ ಗಳಿಗೆ
ಮತ್ತೆ ಮುಗಿಲಲಿ ನಡೆದೀತು ಪ್ರತಿಫಲನ..
ಅಂತ್ಯ ಆದಿಗೆ ಯುಗದ ಬೆಸುಗೆ
ಸತ್ಯ ಮಿಥ್ಯದ ಕೂಟದ ಪುನರಾವರ್ತನ...

                                                    ~`ಶ್ರೀ'
                                                        ತಲಗೇರಿ

"ಮಾರುವೇಷ"....

         "ಮಾರುವೇಷ"....

ಹಗಲ ಬಗಲಿಗೆ ಹರಿದ ಜೋಳಿಗೆ
ನಿಶೆಯ ಮೈತುಂಬ ಚಂದಿರನ ಬೆವರು..
ಕಡಲ ಮಡಿಲಿಗೆ ಕರೆದಂತೆ ಬೆಸುಗೆ
ನದಿಯ ಹರಿವಿನಲಿ ನೆನಪಾಗೋ ತವರು..

ಬಿಸಿಲ ಕುಸುರಿಯಲಿ ಅರಳುವುದು ಗಂಧ
ಮುಳ್ಳ ಜತನದಲಿ ದುಂಬಿಗೆ ಮಕರಂದ..
ತರಗೆಲೆಯ ಪ್ರಣಯಕ್ಕೆ ತರತರದ ಸ್ವರವು
ಹೆಜ್ಜೆಗಳ ಕಚಗುಳಿಗೆ ಅನುಭವದ ಮಧುವು...

ಕಂಪನದ ಪಿಸುದನಿಗೆ ಮರುದನಿಯ ಮದಿರೆ
ಸಂವಹನ ಹದವರಿತ ಯೌವನದ ಥಳುಕು..
ಬಿಡಿತನದ ಒಡೆತನಕೆ ಕೆನೆಯುವಾ ಕುದುರೆ
ಮುಗಿಯದಾ ಮಾಗಿಯಲಿ ಬೆಚ್ಚನೆಯ ಅಳುಕು..

ಗರಗೆದರಿದಾ ಹಕ್ಕಿ ಗೆರೆ ದಾಟಿ ಬರಲು
ಆಸೆಗಳ ರೆಕ್ಕೆಗೆ ಹೊಸ ಮಾರುವೇಷ..
ಬರಿ ಭ್ರಾಂತಿಯಾ ಹಗಲು ನವಿರಾಗಿ ನಗಲು
ಕತ್ತಲಿನ ಪಕ್ಕೆಯಲಿ ಬಣ್ಣಗಳ ಸಮಾವೇಶ..

ಬೆರಗಿನಾ ಮುಗಿಲು ಬಾಗಿನದ ತೆರದಿ
ಪುಳಕ ತರುವುದು ಬಾನೆದೆಯ ಪದರದಿ..
ಕರಗಿದಾ ಕಲ್ಲು ಹೊಸ ಮನ್ವಂತರದಿ
ಬೆಳಕ ಹಡೆವುದು ಹಣತೆಯಾ ಪಾತ್ರದಿ...

                                                      ~`ಶ್ರೀ'
                                                          ತಲಗೇರಿ

ಸೋಮವಾರ, ಜನವರಿ 5, 2015

"ಪುನರ್ಮಿಲನ.."

           "ಪುನರ್ಮಿಲನ.."

ಎದೆಯ ಗಾಳಿ ಕೊರಳೊಳಗೆ ಹರಿದು
ಕೊಳಲೊಳಗೆ ಕಳೆದು,ಬೆರಳ್ತುದಿಗೆ ಸುಳಿದು
ಅವಕಾಶದಲಿ ಮತ್ತೆ ಲೀನ..
ಗ್ರೀಷ್ಮದಲಿ ಮುಗಿಲು ಕಟ್ಟುವ ತವಕ
ಮತ್ತೆ ಬಿಂದುವಲಿ ಉದುರುವಾ ಪುಳಕ..

ಒಡಲ ಸುಳಿಯು ಒಳಗೊಳಗೆ ಬೆಳೆದು
ಅಲೆಯೊಳಗೆ ಅಳೆದು,ದಡ ತಲುಪಿ ಅಲೆದು
ಕಡಲಾಳದಲಿ ಮತ್ತೆ ಧ್ಯಾನ..
ಸ್ಪರ್ಶದಲಿ ನಿಶೆಯ ಬಿತ್ತುವ ಗಣಿತ
ಭಿನ್ನ ಬಂಧದಲಿ ಚಂದ್ರಮನ ಸಹಿತ..

ತೊದಲ ಕುಡಿಯು ಮಿಗಿಲೆಲೆಯ ತಳೆದು
ಪರಿಮಳದಿ ಪುಟಿದು,ಹಗಲ ತೇಗಿಗೆ ಸೆಟೆದು
ಮಣ್ಣಿನೆದೆಯಲಿ ಮತ್ತೆ ಮೌನ..
ದೃಶ್ಯದಲಿ ಹಸಿವ ತುತ್ತಿನ ಒಲವು
ನಿತ್ಯ ದ್ರವ್ಯದಲಿ ಬಯಕೆಯಾ ಹರವು..

ಬಿಗಿದ ತಂತಿಗೆ ಬೆಸುಗೆ ಬಿಸಿಯು
ಮೀಟಿದಾಗ ತಾನೇ ನಾದ ಲಹರಿಯು..
ನವಿರು ಗರ್ಭದಿ ಕಂಪನದ ಗುಣಕ
ಮರಳಬೇಕು ಆದಿಗೆ ಅಂತ್ಯದಾ ಮೂಲಕ..

                                                      ~`ಶ್ರೀ'
                                                          ತಲಗೇರಿ

ಭಾನುವಾರ, ಜನವರಿ 4, 2015

"ಹಂಗು.."

         "ಹಂಗು.."

ಮುಗಿಲ ಹಕ್ಕಿ ಹಾರೋ ಪಥದಿ
ಸರಿದು ನಿಲುವ ಬಾನ ಗಾಳಿ..
ಕಡಲು ಉಕ್ಕಿ ಅಲೆವ ಕ್ಷಣದಿ
ಎದೆಯ ಕೊಡುವ ಮರಳ ಕೇಳಿ..

ಚೆದುರಿರುವ ಅಕ್ಷರವ ಕರೆದು
ನಡೆಯುವುದು ಪದಗಳಾ ಅಧಿವೇಶನ..
ಹವೆಯೊಳಗೆ ಪರಿಮಳವ ಹೊಸೆದು
ಕರೆಯುವುದು ಭ್ರಮರವಾ ಸುಮದ ಗಾನ..

ಕಳೆದಿರುವ ಪ್ರಾಯವನು ನೆನೆದು
ಬಯಸುವುದು ಆ ಬಾನು ಚಂದ್ರಮನ ಸಂಗ..
ಅಲೆಯುತಿಹ ಕಾಲುಗಳ ಸೆಳೆದು
ಕೆಣಕುವುದು ಸತ್ತ್ವವನು ಮೃಗಜಲದ ವೇಗ..

ಬೊಗಸೆ ಹಸಿವಿಗೆ ಇಡಲು ಮಧ್ಯಂತರ
ಶೃತಿಲಯದ ಸಲ್ಲಾಪ ಕಂಪಿಸಲು ತಂತು..
ಮೊಗದ ಗೆರೆಗಳ ನಡುವೆ ಆನಂತರ
ಋತು ಬರೆವ ಸರದಿ ಕವಲುಗಳ ಕುರಿತು...

ಯಾರು ತಂಗುವರೋ ನನ್ನೆದೆಯ ಜಗುಲಿಯಲಿ
ಅಂತರಂಗದ ಅಗಳಿಗೆ ಬೇಕೇನು ಕೀಲಿ!..
ಸೂರ ಹಂಗಿಗೇಕೋ ಬಣ್ಣಗಳ ವೇಷಾವಳಿ
ನಿಲಬಹುದೇ ನಾನು ನನ್ನದೇ ನೆರಳಿನಲಿ!!..

                                                  ~`ಶ್ರೀ'
                                                      ತಲಗೇರಿ


ಶನಿವಾರ, ಜನವರಿ 3, 2015

"ಒಲವ ಕೊಡು..ಅಲೆಗಳಿಗೆ.."

 "ಒಲವ ಕೊಡು..ಅಲೆಗಳಿಗೆ.."

ಗಾಳಿಯಲಿ ಗೀಚಿದಾ ಗೆರೆಗೆ
ಮರುಗಳಿಗೆ ಉಳಿದೀತೇ ಅಸ್ತಿತ್ತ್ವ..
ಬಾನಿನಲಿ ಸೋರುವಾ ಬಿದಿಗೆಗೆ
ತಿಂಗಳಿಗೆ ಕಾಡುವುದೇ ವ್ಯಕ್ತಿತ್ತ್ವ...
ಬೇಕೇನು ನಿನಗೆ ತೀರದಾ ಒಂಟಿ ನಡಿಗೆ
ಒಲವ ಕೊಡು ಸಾಗರದ ತುಂಬು ಅಲೆಗಳಿಗೆ..

ನೀರಿನಲಿ ಬರೆದಾಗ ಅಕ್ಷರವ
ಹನಿಗಳಲಿ ಕರಗೀತೇ ಅದರರ್ಥ..
ಮಣ್ಣಿನಲಿ ಉದುರಿಸಲು ಹೂದಳವ
ಅದರೊಳಗೆ ಇಳಿದೀತೇ ಕಂಪಹಿತ..
ಬೇಕೇನು ನಿನಗೆ ತೀರದಾ ಒಂಟಿ ನಡಿಗೆ
ಒಲವ ಕೊಡು ಸಾಗರದ ತುಂಬು ಅಲೆಗಳಿಗೆ..

ತಾವರೆಯ ಎಲೆ ಮೇಲಿನ ಹನಿಯು
ಜಾರುತಲಿ ಮರೆತೀತು ಅನುಬಂಧ..
ಹುಲ್ಲಿನಲಿ ಎದೆಚಾಚಿದಾ ಇಬ್ಬನಿಯು
ಆರುತಲಿ ಸರಿದೀತು ನೆನಪಿಂದ..
ಬೇಕೇನು ನಿನಗೆ ತೀರದಾ ಒಂಟಿ ನಡಿಗೆ
ಒಲವ ಕೊಡು ಸಾಗರದ ತುಂಬು ಅಲೆಗಳಿಗೆ..

                                                          ~`ಶ್ರೀ'
                                                              ತಲಗೇರಿ

ಗುರುವಾರ, ಜನವರಿ 1, 2015

"ಋಣ"....

          "ಋಣ"....

ನೀಲರಾಶಿಯ ಉಲಕ ರಾಗದಿ
ಹಾಯಿದೋಣಿಯ ಹಗುರ ಚಲನ
ಮರಳ ಮೌನದಿ ಬೆರೆವ ತವಕದಿ
ಬೀರಿ ಸೋಕಿದೆ ಅಲೆಯ ಗಮನ..

ದೂರ ಯಾನವ ನೆನೆದು ಸಾಗಿದೆ
ಅಂತರದ ಹಳಿಗಳ ಅಂತರಂಗದ ಪ್ರೀತಿ..
ಭ್ರಮರ ನೇಹದ ನೆಪದಿ ಅರಳಿದೆ
ಮಂದಾರ ಮಧುವಿನ ಚೆಂದಚಾಮರ ವಿತತಿ..

ಕೊರಳ ಗಾಳಿಗೆ ಶ್ರುತಿಯ ಹಿಡಿಯಲು
ಬಿದಿರ ಕೊಳವೆಯ ನುಡಿಸಬೇಕು ಬೆರಳು..
ವಿರಳ ದಾರಿಗೆ ಸೆಳೆತ ಕೊಡಲು
ಎದೆಯ ಕೊಳದಲಿ ಕರೆಯಬೇಕು ಅಮಲು..

ಮಳೆಯ ಉಲಿಯ ಲಹರಿ ಸುಳಿಯಲು
ನವಿಲು ಸಲುಗೆಗೆ ನೆಲದ ತೀರ ಕಾತರ..
ಉಳಿದ ಎಲೆಯ ಜೊತೆಗೆ ಕೂಡಲು
ತಳಿರ ತವಕಕೆ ಉರುಳಬೇಕು ಶಿಶಿರ..

ಮನೆಗೆ ಬೇಲಿಯು ಮಿತಿಯ ಪರಿಧಿ
ಬಂಧಿಯಲ್ಲ ಬಿಂದುವಲ್ಲಿ ಹವೆಯ ಋಣವು..
ನನಗೆ ಸೇರಿಯೂ ಬೇರೆ ತರದಿಂದಲೂ
ಬೆಳಕಿನಲ್ಲಿ ಆಚೆ ನಿಲದೇ ನೆರಳ ಹರವು..!!

                                                   ~`ಶ್ರೀ'
                                                       ತಲಗೇರಿ