ಮಂಗಳವಾರ, ಡಿಸೆಂಬರ್ 25, 2012


    "ಕಾಡುವುದು ಮಳೆಬಿಲ್ಲು"...

 ತುಡಿಯುತಿದೆ ಲಹರಿ ಎದೆಯೊಳಗೆ
 ಸುಪ್ತಸ್ವರಗಳು ಹೊರಳಿವೆ ನಿನ್ನೆಡೆಗೆ..
 ಓ ನೆನಪುಗಳ ಮೌನದೇಕಾಂತವೇ
 ಮಾತಾದೆಯಾ ಹಾಗೇ ಮೆಲ್ಲಗೆ..

 ಅರ್ಥವಿಲ್ಲದ ಬಿಂದುಗಳ
 ಹಾಗೇ ಕೂಡಿಸಿಟ್ಟ ರಂಗೋಲಿ
 ನಿನ್ನೆಯಾ ಮನೆಯಲ್ಲಿ!
 ಮಿತಿಯಿರದ ಭಾವಗಳ
 ಮೆಲ್ಲ ಜೀಕುತ್ತಿದ್ದ ಜೋಕಾಲಿ
 ಒಲವಿನಾ ಕತೆಯಲ್ಲಿ!..

 ಇಣುಕುತಿದೆ ಅವಶೇಷ
 ಮಣ್ಣ ಹಣತೆಯಿಟ್ಟ ಕ್ಷಣದಲ್ಲೂ
 ಗೋರಿಯಾ ಸಂದಿಯಲ್ಲಿ..
 ಕೆಣಕುತಿದೆ ಆ ಸ್ಪರ್ಶ
 ಮತ್ತೆ ಸೋಕಿತೇ ಎನುವಂತೆ
 ಹೆಸರಿನಾ ಛಾಯೆಯಲ್ಲಿ!..

 ಶಿಶಿರದಾ ತರುವ
 ಚೈತ್ರ ಋತು ಸೆಳೆವಂತೆ
 ಕನಸುಗಳು ಸುಳಿವಂಥ ತೊದಲು!..
 ಆಗಾಗ ಕಾಡುವುದು
 ನನ್ನೇ ನಾ ಪ್ರೀತಿಸುವಂತೆ
 ಅವಳು ಕಟ್ಟಿದಾ ಮಳೆಬಿಲ್ಲು...!..

                            ~‘ಶ್ರೀ’
                              ತಲಗೇರಿ


       "ಸಾಯುವನು ಚಂದ್ರಮ"...

  ಪೌರ್ಣಿಮೆಯ ರಾತ್ರಿಯಲಿ
  ಆಚೆ ಬರದಿರು ಸಖಿಯೆ
  ನಾಚುವನು ಅಲ್ಲೇ ಚಂದ್ರಮನು
  ಉರುಳಿ ಮೋಡದ ಮರೆಯಲ್ಲಿ..

  ಮೃದು ತಂಗಾಳಿ ನಿನ್ನ ಸೋಕಿದಾಗ
  ಉಯ್ಯಾಲೆಯಾಡುವವು ಮುಂಗುರುಳು
  ನೆನಪಾಗಬಹುದೇ ನಾನು ನಿನಗಾಗ..
  ಎದೆಗೊರಗೆ,ಸ್ಪರ್ಶ ಹಿತವೆನಲು..

  ಆಗಾಗ ಇಣುಕುವನು ಚಂದ್ರಮನು
  ನಿನ್ನ ಸೆರಗು ಜಾರುವುದೆಂದು...
  ಮತ್ತಲ್ಲೇ ನಾಚುವನು ನೆನೆದು
  ನನ್ನ ನೆನಪಲ್ಲೇ ನೀ ನುಲಿಯುತಿರಲು..

  ಬೆಳದಿಂಗಳ ರಾತ್ರಿಯಲಿ
  ಮತ್ತೇರಿಸದಿರು ಸಖಿಯೆ
  ಮತ್ತೆಂದೂ ಬರಲಾರ ಚಂದ್ರಮ..
  ಸ್ನಿಗ್ಧ ಸೌಂದರ್ಯದುನ್ಮಾದದಿ ಸಾಯುವನು..
  ಸಖಿ...ಚಂದ್ರಮ ಬರನು...ಸಾಯುವನು...
  ಅಳುವುದು ಮುಗಿಲೊಂದಿಗೆ ಬಾನು....


                                 ~‘ಶ್ರೀ’
                                   ತಲಗೇರಿ

  "ನಾನು,ನೀನು...ಆ ಬಾನು.."

ಈ ಸಂಜೆ ಹೊತ್ತಲ್ಲಿ ಗೆಳತಿ
ನಾನು ನೀನು ಆ ಕೆಂಪಾದ ಬಾನು..
ಹೊರಟಿಹನು ಸೂರಿ ವಿದಾಯ ಹೇಳುತ್ತ
ಅಲೆಅಲೆಯ ರಾಗ ಅನುರಾಗ ಜೇನು..

ನಿನ್ನ ಬಿಸಿಯುಸಿರು ಎದೆ ಸೋಕಿದಾಗ
ಹುಚ್ಚಲ್ಲವಿದು ಬೆಚ್ಚನೆಯ ಅನುಭವ
ನೀ ಜೊತೆಯಿರುವೆ ಎನುವಾಗ
ಸೋಲಿಲ್ಲವೀಗ ಕೈಹಿಡಿದು ನಡೆವಾಗ..

ಕೆನ್ನೆಗೆ ನೀನಿಟ್ಟ ಸಿಹಿಗುರುತು
ಹೆಚ್ಚಲ್ಲವದು ಮುದ್ದಾದ ಮೃದು ಸಂಭ್ರಮ
ಸುಮ್ಮನೆ ನಸು ಮುನಿಸು ಬಂದಾಗ
ಸಮಾಧಾನ ಈ ಪ್ರೀತಿಯಾ ಆಲಿಂಗನ..

ಹಣೆಯಲ್ಲಿ ಮುಂಗುರುಳು ನುಲಿವಾಗ
ತುಂಟನಗೆ ಸುಳಿಯುವುದು ತುಟಿಯಲ್ಲಿ
ಎದೆಯೊಳಗೆ ನಿನ್ನ ಹೆಸರ ಬರೆದಾಗ
ಅಳಿಸಲಾಗದು ಮತ್ತೆ,ಇದು ಸುಖ ಮಿಲನ..

ನಾನು ನೀನು ಆ ಬಾನು ಗೆಳತಿ..
ನೀ ಭೂಮಿ ನಾ ಬಾನು ಮಳೆಬಿಲ್ಲು ಪ್ರೀತಿ...

                                     ~‘ಶ್ರೀ’
                                       ತಲಗೇರಿ

ಶನಿವಾರ, ಡಿಸೆಂಬರ್ 1, 2012


     "ಈ ಕ್ಷಣದ ಸಲಿಗೆಯಲ್ಲಿ"...


  ಬರೆಯಬೇಕು ಕವಿತೆಗಳ,ಗೆಳತಿ
  ಮರುಭೂಮಿಯಲಿ ಒಂಟಿಯಾಗಿ
  ನಿಂತ ಆ ಒಣಮರದ ಬಗೆಗೆ
  ಕ್ಷಣಗಳರಿವಿರದೆ ಬರೆವ
  ಕರಿಯ ರೇಖಾಚಿತ್ರಗಳ
  ತುಂಬು ಒಲವಿನ ಧ್ಯಾನಲಹರಿಗೆ...


  ಯಾವ ಅವಸರಗಳಿವೆ ಈ ಒಂಟಿ ಬದುಕಿಗೆ?
  ಯಾರ ಆಸರೆಯಿದೆ ಈ ಹೆಗಲ ಗಂಟಿಗೆ?
  ಮುರಿಯಬಹುದು ನಾಳೆಯ ಬಿರುಗಾಳಿಗೆ!
  ಹಕ್ಕಿ ಗೂಡು ಕಟ್ಟಲಿದೆ ಎಂಬಾಸೆಯಿಲ್ಲ..
  ಹಾರಿಹೋಗುವ ಹಕ್ಕಿ ಕ್ಷಣಕಾಲ ಕೂರುವುದಲ್ಲ!
  ದಾರಿಹೋಕರು ದಣಿಯೆ ಕೈಸವರಿ ಹೋಗುವರಲ್ಲ!
  ಆ ಪ್ರೀತಿ ಸ್ಪರ್ಶವೇ ಭರವಸೆಯ ಬೀಜ...
  ಹಣ್ಣಿಲ್ಲ,ಎಲೆಯಿಲ್ಲ,ದಟ್ಟ ನೆರಳಿಲ್ಲ
  ಉಸಿರೊಂದೇ ನಿಜ...


  ಆಗಾಗ ಸುಳಿಗಾಳಿ ಬಳಿ ಸುಳಿಯೆ
  ಮರಳ ಕಣಕೂ ಎಂಥದೋ ಸೆಳವು..
  ಇನ್ನೂ ಹಚ್ಚಿಕೊಂಡಿದೆ ಇಂಥ ಮುಪ್ಪಿನಲ್ಲೂ
  ಈ ಭೂಮಿಗೂ,ಅರ್ಥವಾಗದ ಚೆಂದ ಒಲವು!..
  ಭ್ರಮೆಯಲ್ಲ ಪ್ರೀತಿ ಈ ಕ್ಷಣದ ಸಲಿಗೆಯಲ್ಲಿ..
  ಈಗೀಗ ಅನಿಸುತ್ತಿದೆ ಗೆಳತಿ
  ಆ ಮರವೂ ಒಂಟಿಯಲ್ಲ!!
  ಕವಲುದಾರಿಗಳ ಜಂಟಿಯಾಗಿಪ ಗಟ್ಟಿಗುರುತು..
  ಸಾಲು ನೆರಳ ಸಂಗೀತ,ಮತ್ತೆ ಮೃದು ಗಾಳಿಯೊಡನೆ ಕಲೆತು...


                                                        ~‘ಶ್ರೀ’
                                                          ತಲಗೇರಿ

ಭಾನುವಾರ, ನವೆಂಬರ್ 18, 2012


          "ರಕ್ತದಾ ಶಾಯಿ ಖಾಲಿಯಾಗುವ ಮುನ್ನ"...


  ಬರೆಯಬಲ್ಲೆ ನಿನ್ನೆದೆಯ
  ಬಿಳಿಹಾಳೆಯ ತುಂಬ ತುಂಬ
  ಬೆಳಕೆನಿಸಿ,ಬೆಳಕುಣಿಸಿ ಸೆಳೆವ
  ಕರುನಾಡಿನ ಪೂರ್ಣಬಿಂಬ...


  ನನ್ನ ನಾಡು ಬರಿಯ ಸೋಗಲ್ಲ ಗೆಳತಿ
  ನನ್ನೆದೆಯ ಸಿಹಿ ಸ್ವಪ್ನ ಪಾರಿಜಾತ
  ಹಂಪೆ ಹಳೆಬೀಡು ಬರಿಯ ಮಣ್ಣಲ್ಲ ಗೆಳತಿ
  ಗತವೈಭವದ ಗಂಭೀರ ಆತ್ಮ ಚರಿತ
  ನನ್ನ ನುಡಿಯು ಒಣ ಶಬ್ದಗಳ ಬರಿಯ ಸಾಲಲ್ಲ ಗೆಳತಿ
  ಕಲ್ಲೆದೆಯ ಕರಗಿಸುವ ಸುಪ್ರಭಾತ..
  ಶಿಲಾಬಾಲಿಕೆಯದು ಅಶ್ಲೀಲವಲ್ಲ ಗೆಳತಿ
  ಸೌಂದರ್ಯದ ಉಪಾಸನೆಯ ಸ್ಪರ್ಶದಾ ತುಣುಕು..
  ಹಚ್ಚುತಿದೆ ಹೊಚ್ಚ ಹೊಸ ಹೊನ್ನಿನ ಅರಿವ ಬೆಳಕು..
  ಅಳಿದುಹೋದರೂ ಆಳಿಹೋದರು
  ಗಂಡುಮೆಟ್ಟಿನ ಬಾನ್ಮಣಿಗಳು
  ಮೈಮರೆವ ಮಳೆಯಲಿ ಕೊಚ್ಚಿಹೋಗುತಿವೆ
  ವಾಸ್ತವದ ನಿಜ ಸಂಗತಿಗಳು
  ಎಲ್ಲ ಇದೆ,ಇಲ್ಲದಿದೆ ಒಲವಿನೆದೆಯಲಿ
  ರಾಜಕೀಯದ ಹೊಳಪು
  ಕಳೆಯುತಿದೆ,ಕೊಳೆಯ ಹರಿವಾಣದಲಿ
  ಸೋಜಿಗದ ಮಳೆ ಹನಿಸಬೇಕಿದೆಯಿನ್ನು
  ಬದುಕು ಚಿಗುರಲು ನಾಳಿನಾ ಬೀದಿಯಲಿ

  ಬರೆಯಬೇಕಿದೆ ಗೆಳತಿ
  ನನ್ನೆದೆಯ ರಕ್ತದಾ ಶಾಯಿ ಖಾಲಿಯಾಗುವ ಮುನ್ನ
  ಬಸಿಯಬೇಕಿದೆ ಹನಿ ಹನಿ ಒಲವಿನಲೇ
  ಹರಿಬಿಡಬೇಕಿದೆ ಎದೆಯೊಳಗಣ ಲಹರಿಯನ್ನ
  ನಿನ್ನೊಲವು ಕೂಡ ನನ್ನದೇ ಆಗಬೇಕಿದೆಯಿನ್ನ..


                                          ~‘ಶ್ರೀ’
                                            ತಲಗೇರಿ

        "ಸ್ವಪ್ನ ಪಾರಿಜಾತ"

     ಮತ್ತೆ ಮತ್ತೆ ಕಾಡುತಿಹೆ ನೀನು
     ನನ್ನೆದೆಯ ಸಿಹಿಸ್ವಪ್ನ ಪಾರಿಜಾತ
     ಮೆತ್ತನೆಯ ಮೌನಮಲ್ಲಿಗೆಯು ನೀನು
     ತುಂಬುತಿದೆ ನಿನ್ನ ಪರಿಮಳ ನನ್ನ ಏಕಾಂತ

     ಸಿಹಿಲಜ್ಜೆಯಾ ಗೆಜ್ಜೆಯಾ ಒಡತಿ ನೀನು
     ಹುಟ್ಟುಹಾಕಿಹೆ ನೀನೇ
     ಹೃದಯದೊಳಗೆ ಹುಚ್ಚು ಸಂಗೀತ
     ಮುಂಜಾವಿನಾ ಮಂಜಿನಾ ಗೆಳತಿ ನೀನು
     ಅಪ್ಪಿಕೊಂಡಿಹೆ ನೀನೇ
     ಎಲೆಯ ಎದೆ ಮೇಲೆ ಚೆಂದ ಮಿಹಿಕಾ

     ನನ್ನೆದೆಯ ಕನ್ನಡಿಯ ಬಿಂಬ ನೀನು
     ಕೊಟ್ಟುಬಿಟ್ಟಿಹೆ ನೀನೇ
     ಗಾಜಿನಾ ಚೂರಿಗೂ ಹೆಚ್ಚು ಸೌಂದರ್ಯ
     ಜಡಿಮಳೆಯ ಹನಿಹನಿಯ ಒಲವು ನೀನು
     ನೆನೆಸುತಿಹೆ ನೀನೇ
     ನನ್ನೆದೆಯ ಗೋಡೆಗಳ ನೆನಪ ಆಂತರ್ಯ

     ಮತ್ತೆ ಮತ್ತೆ ಸೋಕುತಿಹೆ ನೀನೇ
     ನನ್ನೆಲ್ಲ ನಾಳೆಗಳು ನಿನ್ನಿಂದ...
     ಮತ್ತೆ ಮತ್ತೆ ಸೋಲುತಿಹೆ ನಾನು..
     ಗೆಲುವೇ ನೀನಾಗಿರುವಾಗ ಬೇಸರವೇ ಇಲ್ಲ...
     ನಾ ಸೋತಂತೆಯೂ ಅಲ್ಲ...


                                  ~‘ಶ್ರೀ’
                                    ತಲಗೇರಿ

ಶುಕ್ರವಾರ, ಅಕ್ಟೋಬರ್ 26, 2012


           "ಬೆಳಕಿನಾ ಬರದಿ"...


       ಕಾಯದಿರು ಗೆಳತಿ
       ಇರುಳ ಬೆಳಕಿನ ದಾರಿಯಲಿ
       ಮರಳಬಲ್ಲೆನೇ ನಾನು
       ಮತ್ತದೇ ನೆನಪಿನ ನೆರಳಿನಲಿ

       ಸುಳಿಗಾಳಿಯು ಬಳಿಯಲ್ಲಿ ಸುಳಿದಾಡಿ
       ಸೆಳೆಯುತಿದೆ ಇದು ಎಂಥ ಮೋಡಿ
       ಮರಮರಗಳ ಮರ್ಮರ ಸ್ವರವು
       ಕೆಣಕುತಿದೆ ಎದೆಯ ಜೀವನಾಡಿ
       ಇದು ಭಯದ ಸೌಗಂಧವೋ
       ತುಮುಲಗಳ ಸೌಂದರ್ಯವೋ
       ತಿಳಿಸದಾಗಿದೆ ಕಾಲದಾ ಪರಿಧಿ..!

       ಸಾವಿನಾ ಸ್ವಪ್ನವದು ಕಾಡಿಕಾಡಿ
       ಕಳೆಯುತಿದೆ ಯೌವನವು ಹಾಗೇ
       ಅರಳುವಾ ಕನಸ ಸನ್ನಿಧಿಯಲ್ಲಿ
       ಬೆರೆಯದಾಗಿದೆ ಬಣ್ಣ ಒಳಗೆ
       ಇದು ಬದುಕ ಪರಿಹಾಸವೋ
       ಅಮಲುಗಳ ಆಂತರ್ಯವೋ
       ಬಿಡಿಸಲಾರೆನು ಬೆಳಕಿನಾ ಬರದಿ!..

       ಕಾಯದಿರು ಗೆಳತಿ,ಸುರುಳಿ ನೆರಳಿನ ದಾರಿಯಲಿ
       ಅರಳಬಲ್ಲೆನೇ ನಾನು,ನನ್ನದೇ ನಾಳಿನಾ ಬೀದಿಯಲಿ


                                                 ~‘ಶ್ರೀ’
                                                   ತಲಗೇರಿ

ಶನಿವಾರ, ಸೆಪ್ಟೆಂಬರ್ 29, 2012


               "ನೆನಪ ಯಾನ"..

        ಅರ್ಥವಿಲ್ಲ ಕಡಲೇ
        ತೀರದಿ ಬರಿದೆ ನಡೆವುದಕೆ!
        ಕದಡಿದ ನಿನ್ನೆಯ ಬಿಂಬವ
        ಮತ್ತೆ ಕದಡುವುದಕೆ...

        ಅಲೆಗಳಲಿ ತೇಲಿಬರುವ
        ಹೊಂಬೆಳಕ ಹರಿವಾಣ
        ಮನಸಿನ ಮೂಲೆಯಲಿ
        ಭಾವಗಳ ಮಹಾಯಾನ
        ನಗದಿರು ಕಡಲೇ
        ಅವಳ ಹಾಗೇ ನೆನಪಿಸಿ
        ನನ್ನ ಸುಮ್ಮನೆ ಅಳುಕಿಸಿ..!
        ಗಾಳಿ ಕೂಡ ಅಳುವುದು..

        ಮಳಲಿನಲಿ ನಡೆವಾಗ
        ಮೂಡದಿವೆ ಹೆಜ್ಜೆಗಳು
        ಎದೆಯೊಳಗೆ ಬರೆವಾಗ
        ಕಾಣದಿವೆ ಸಾಲುಗಳು
        ಹುಚ್ಚನೆನ್ನದಿರು ಕಡಲೇ!
        ಹಚ್ಚಿಕೊಂಡ ಮೇಲೆ
        ನಿನ್ನದೂ ಹೆಚ್ಚಿನ ಪಾಲಿದೆ..
        ಅವಳ ನೆನಪಿನಲೇ
        ಇನ್ನೂ ಚೂರು ಒಲವಿದೆ....!

                                ~‘ಶ್ರೀ’
                                  ತಲಗೇರಿ

       "ಅನುವಾದ"
   ಪುಟ್ಟ ಹಣತೆಯ ಬೆಳಕಿನೊಲುಮೆಯ
   ತುಂಬಿಕೊಂಡಿದೆ ಅರಮನೆ
   ಸಪ್ತಸ್ವರಗಳ ಮಿಡಿತವಿರಲು
   ಕಾದಿಹಳು ಅಭಿಸಾರಿಕೆ ನನ್ನನೇ!

   ಇರುಳ ಮೊರೆತ
   ಸೆಳೆಯುತಿದೆ ಅನವರತ...
   ಮರಳಿ ಅರಳುವ ಭಾವದಿ
   ಬೆರೆಯುತಿದೆ ಸ್ವಪ್ನ ಕನವರಿಕೆ..

   ಸೋಕಿಬಿಡು ನೆನಪೆ
   ಸುಕ್ಕಾದ ಮನಸುಗಳ!
   ಬರಿದೆ ಹೃದಯದ ಜೀವದಿ
   ಬರೆಯಬೇಕು ಸಾಲು ಚಡಪಡಿಕೆ...

   ಕರಗಿಬಿಡು ಬೆಳಕೆ
   ಆಸೆಗಳ ಮುಸುಕಿನೊಳಗೆ
   ಹಚ್ಚಿಬಿಡು ಹಣತೆ
   ಸ್ವಚ್ಛ ಬೆಳಕ ಒಳಗೊಳಗೆ
   ಎದೆಯೊಳಗೆ..
   ನೀ ಆರಿಹೋಗುವ ಮುನ್ನ...
   ನಡೆಯಬೇಕಿದೆ ಇನ್ನು
   ನಿಶೆಯ ಮಸುಕಿನಲಿ
   ಉನ್ಮಾದದಾ ಅನುವಾದ
   ತುಂಬಿಕೊಳ್ಳಲಿ ಮತ್ತೆ
   ನಮ್ಮೊಳಗೆ
   ಕನಸುಗಳಾ ಹೊಸನಾದ..

ಮಂಗಳವಾರ, ಸೆಪ್ಟೆಂಬರ್ 18, 2012


           "ಹುಡುಕುತಿಹೆ ನನ್ನ ನೆರಳನೇ"...


      ಕತ್ತಲಿನ ಛಾಯೆಯಲಿ
      ಹುಡುಕುತಿಹೆ ನನ್ನ ನೆರಳನ್ನು
      ಕತ್ತರಿಯ ಅಂಚಿನಲಿ
      ಮಿನುಗುತಿದೆ ಹೊಂಬೆಳಕೊಂದು!..

      ಒಲವ ನೀರ ದಾಹದಲಿ
      ಉಸಿರು ಕುಸಿದು ಕೂತಿದೆ
      ಕವಲು ಗಾಮಿನಿ ಬಿರಿಯಲು
      ಕವಲು ಕವಲು ಒಲವಿದೆ
      ಬದಿಯ ಮರದ
      ನೆಳಲ ಮಳಲಿನಲ್ಲಿ
      ಹುಡುಕುತಿಹೆ ನನ್ನ ನೆರಳನೇ..

      ಇರುಳ ಒಂಟಿ ದಾರಿಯಲ್ಲಿ
      ಹೆಸರು ಮಾತ್ರ ಜೊತೆಯಿದೆ
      ಅರಳೋ ಮನದ ಬೀದಿಯಲ್ಲಿ
      ತಮದ ತೆವಲು ತೇಲಿದೆ
      ಬದಿಯ ಮರದ
      ನೆಳಲ ಮಡಿಲಿನಲ್ಲಿ
      ಹುಡುಕುತಿಹೆ ನನ್ನ ನೆರಳನೇ...

                                ~‘ಶ್ರೀ’
                                  ತಲಗೇರಿ

            "ಆಗಂತುಕಳಂತೆ"...


      ಮರುಭೂಮಿಯ ಮರಳಿನಲ್ಲಿ
      ಹುಡುಕುತಿಹೆ ನಿನ್ನ ಹೆಜ್ಜೆಗಳನ್ನು
      ಮರೀಚಿಕೆಯಾದೆಯಾ ನೀನು
      ಕನಸು ಕೆದರುವ ಮುನ್ನವೇ!

      ಸರಿದ ಮೋಡದ ಸಂದಿಯಲ್ಲಿ
      ಕಳಚಿಹೋಯಿತೇ ಮುಖವಾಡ?
      ಮಿಡಿವ ಮಂದ್ರ ನಾದದಲ್ಲಿ
      ಬರಿದಾಯಿತೇ ತನನನ?...

      ಅಪರಿಚಿತ ನಗೆಯಲ್ಲಿ
      ಬೆರೆಯದಾಯಿತೇ ಪರಿಚಯ?
      ಉಳಿಯಲಾರದ ಗುರುತನ್ನು
      ಬಿಡದೆ ಹುಡುಕಿಹೆ ಸುಮ್ಮನೆ...

      ಕೆರಳಿವೆ ಮರಳಿನಲೆಗಳು
      ಸೆಳೆದುಕೊಂಡಿವೆ ಸುರುಳಿಯೊಳಗೆ
      ನೆನಪುಗಳ ಪರಿಧಿಯೊಳಗೆ
      ಉಳಿದುಕೊಂಬವೇ ಸುಳಿವುಗಳು?!..

      ಮರಳಲಾರೆಯಾ ಮತ್ತೆ
      ಏನೂ ತಿಳಿಯದ ಆಗಂತುಕಳಂತೆ
      ಸಿಗಲಾರೆಯಾ ಮುಂದೆ ನಡೆದಂತೆ
      ಅಪರೂಪದ ನೆಳಲ ತಂಪಂತೆ!...


                                     ~‘ಶ್ರೀ’
                                       ತಲಗೇರಿ

ಶನಿವಾರ, ಆಗಸ್ಟ್ 25, 2012


           "ಮೆರಗಿನ ಡೇರೆಯೊಳಗೆ"...


    ಬರೆದುಬಿಡು ಮೌನ ನಿನ್ನ ಪ್ರೀತಿಯ ಹಾಡು
    ಬಿರಿದ ಎದೆಬದಿಯ ನಲ್ಮೆಯಾ ಗೂಡು
    ಮರೆತುಬಿಡು ಅವನ ಕಣ್ಣ ಬೆಳಕಿನ ಧ್ಯಾನ
    ಅರಿತು ನೀನೇ ಹೃದಯದ ಒಲ್ಮೆಯಾ ಕವನ

    ಅರಳೋ ನೆರಳಿನ ಪ್ರೀತಿಯೊಳಗೆ
    ಕೊಳಲ ದನಿಯ ಮೌನ ಬೆಸುಗೆ
    ಬರೆಯೋ ಒಲವಿನ ರೇಖೆಯೊಳಗೆ
    ಹರಡಿ ನೆರೆದ ಬಿಂದು ಮಳಿಗೆ!

    ಮರಳಿ ಬೆರೆಯುವ ನಿನ್ನೆಗಳಿಗೆ
    ನೆನಪ ನೋವಿನ ದಿವ್ಯ ಲೇಪನ
    ಮಿಡಿವ ಸ್ವರಗಳ ಸಾರದೊಳಗೆ
    ಸುರುಳಿ ಕನಸಿನ ಭವ್ಯ ತನನನ...

    ಬೆಸೆದ ಮನಸಿನ ಮಡಿಕೆಯೊಳಗೆ
    ಹೆಸರ ಕೊರೆಯುವ ಸಣ್ಣ ಯೋಚನೆ
    ಉಸಿರ ಮೆರಗಿನ ಡೇರೆಯೊಳಗೆ
    ಬೆಳಕು ತುಂಬುವ ಚೆಂದ ಕಲ್ಪನೆ...!!


                                  ~‘ಶ್ರೀ’
                                    ತಲಗೇರಿ

ಭಾನುವಾರ, ಆಗಸ್ಟ್ 19, 2012


                 "ಹೇಮಚಂದ್ರಾ"....
                              ..ರಾಗ ಸಂಜೆಯ ಬೆಳಕಿನ ಬಣ್ಣದ ಶೇಷ ಪ್ರವರ...


        ಅಂದು ಚಿತ್ರಕಲಾ ಸ್ಪರ್ಧೆ.ಬಗೆಬಗೆಯ ಬಣ್ಣಗಳಲ್ಲಿ ಮಿಂದೆದ್ದ ಬಿಳಿಯ ಕಾಗದಗಳೆಲ್ಲವೂ ಹೊಸವಸ್ತ್ರ ತೊಟ್ಟಂತೆ ಸಂಭ್ರಮಿಸುತ್ತಿದ್ದವು.ಬಿಡುವಿಲ್ಲದಷ್ಟು ದುಡಿದ ಕುಂಚಗಳೆಲ್ಲವೂ ಮನೆಯಲ್ಲಿ ವಿಶ್ರಮಿಸುತ್ತಿದ್ದರೆ,ಅವುಗಳಿಂದ ಚಿತ್ರಿಸಲ್ಪಟ್ಟ ಚಿತ್ರಗಳೆಲ್ಲವೂ ಇಲ್ಲಿ ತಮ್ಮತನವನ್ನು ಪ್ರಸ್ತುತಪಡಿಸಲು ಹೆಣಗುತ್ತಿದ್ದವು.ಇದು ಮೂವತ್ತು ವರ್ಷ ವಯಸ್ಸಿನೊಳಗಿನವರು ಮಾತ್ರ ಭಾಗವಹಿಸಬಹುದಾದ ಸ್ಪರ್ಧೆಯಾಗಿತ್ತು.ಯಂತ್ರದಂತೆ ದುಡಿವ ನೂರಾರು ಜನ,ಅನೇಕ ಕಲಾರಸಿಕರು ಮನಸ್ಸಿನ ಸಂತೋಷಕ್ಕೆ ಹಪಹಪಿಸಿ ಬಂದು,ಆ ಎಲ್ಲಾ ಚಿತ್ರಗಳನ್ನು ವೀಕ್ಷಿಸ್ತಾ ಇದ್ದಾರೆ.ಅನೆಕ ವಿಚಿತ್ರ ಚಿತ್ರಗಳೂ,ಅಷ್ಟೇ ವಿಶಿಷ್ಟ ಚಿತ್ರಗಳೂ ಅಲ್ಲಿದ್ದವು.ಬಂದ ಎಲ್ಲ ವೀಕ್ಷಕರಿಗೂ ಸ್ಪರ್ಧಿಗಳು ತಮ್ಮ ತಮ್ಮ ಚಿತ್ರದ ಬಗ್ಗೆ ವಿವರಿಸ್ತಾ ಇದ್ದರು.ಆದರೆ,ಇಷ್ಟೆಲ್ಲಾ ಇದ್ದಾಗ್ಯೂ ಒಂದು ಚಿತ್ರ ಮಾತ್ರ ಎಲ್ಲರ ಗಮನವನ್ನು ಸೆಳೆಯುತ್ತಾ ಇತ್ತು.ಆ ಚಿತ್ರಕ್ಕೆ ಯಾವ ವಿವರಣೆಕಾರನೂ ಇರಲಿಲ್ಲ.ಅದೊಂದು ಅತ್ಯಂತ ಅಪರೂಪದ ಚಿತ್ರ,ಅಷ್ಟೇ ವಿಶಿಷ್ಟ ಕೂಡಾ!ಆ ಚಿತ್ರದಲ್ಲಿ ನೀಲಿ ಆಗಸದ ತುಂಬ ಕಪ್ಪು ಮೋಡಗಳು ತುಂಬಿಕೊಂಡಿವೆ..ಜಗತ್ತಿಗೇ ಬೆಳಕು ಕೊಡಬೇಕಾದ ಭಾಸ್ಕರ ಮೇಣದ ಬತ್ತಿಯಂತೆ ಕರಗಿಹೋಗುತ್ತಿದ್ದಾನೆ.ತನ್ನದೇ ಝಳಕ್ಕೆ ತಾನು ಕರಗುತ್ತಿದ್ದಾನೋ ಅಥವಾ ಭೂಮಿಯ ತಾಪಕ್ಕೋ ಎನ್ನುವುದು ಪ್ರಶ್ನೆಯಾಗಿ ನಿಂತಿದೆ.ಮರಗಳ ತುಂಬ ಎಲೆಗಳು ತುಂಬಿಕೊಂಡಿರಬೇಕಾಗಿದ್ದ ಜಾಗದಲ್ಲಿ ಕರಗುವ ಗಡಿಯಾರಗಳು ತೂಗಾಡುತ್ತಿವೆ...ಚಿಗುರುತ್ತಿರುವ ಹಸಿರೆಲೆಗಳ ಜಾಗದಲ್ಲಿ ಪುಟ್ಟ ಪುಟ್ಟ ಗಡಿಯಾರಗಳು ಜನ್ಮತಳೆಯುತ್ತಿರುವಂತೆ ಚಿತ್ರಿಸಲಾಗಿದೆ.ಹರಿಯುವ ನೀರು ಒಮ್ಮೊಮ್ಮೆ ಹಿಮ್ಮುಖವಾಗಿಯೂ,ಜೊತೆಜೊತೆಗೇ ಮುಮ್ಮುಖವಾಗಿಯೂ ಹರಿಯುವಂತೆ ಚಿತ್ರಿಸಿ,ಅವೆರಡೂ ಸ್ವಲ್ಪ ದೂರದಲ್ಲಿ ಮಿಲನಗೊಂಡು ಮತ್ತೊಂದು ನದಿ ಸೃಷ್ಟಿಯಾಗಿ ಮುಂದೆ ಸಾಗಿದೆ.ಅದು ಇನ್ನೂ ಹಲವಾರು ನದಿಗಳೊಂದಿಗೆ ಸಂಗಮಿಸಿ,ಮಹಾಸಾಗರವೇ ಸೃಷ್ಟಿಸಲ್ಪಟ್ಟಿದೆ.ಹಾಗೆ ಸೃಷ್ಟಿಸಲ್ಪಟ್ಟ ಮಹಾಸಾಗರದಲ್ಲಿ ಅಲೆಗಳಾ ಹೊಸಮೋಡಿ ಶುರುವಾಗಿದೆ.ಜೊತೆ ಜೊತೆಗೇ ಮರದಲ್ಲಿ ತೂಗಾಡುತ್ತಿರುವ ಗಡಿಯಾರಗಳಿಂದ ಕರಗಿಬಿದ್ದ ಮೇಣದ ಹನಿಗಳು ಭೂಮಿಯ ಬಿರುಕುಗಳನ್ನು ಸೇರಿ,ಭೂತಲೋಕದ ಗೋರಿಯೊಳಗೆ ಹುದುಗಿಹೋಗುತ್ತಿವೆ.ಪಕ್ಕದಲ್ಲೇ ಇರುವ ಮಣ್ಣಿನ ರಸ್ತೆಯೊಳಗೆ ಒಂದು ಬಂಡಿ ಹೋಗುತ್ತಾ ಇದೆ.ಆದರೆ,ಎತ್ತುಗಳ ಬದಲಾಗಿ ಮನುಷ್ಯರನ್ನು ಆ ಬಂಡಿಗೆ ಕಟ್ಟಲಾಗಿದೆ.ಯಾವುದೋ ಒಬ್ಬ ವಿಚಿತ್ರ ಯಂತ್ರ ಮಾನವ ಆ ಬಂಡಿಯ ಸಾರಥಿಯಾಗಿದ್ದಾನೆ.ರಸ್ತೆಯ ಇಕ್ಕೆಲಗಳಲ್ಲಿ ಕಟ್ಟಿರುವ ಬೇಲಿಗಳಿಗೆ ಮರದ ಗೂಟದ ಬದಲಾಗಿ ಮನುಷ್ಯರನ್ನೇ ಹಿಡಿದು ಕಟ್ಟಲಾಗಿದೆ.ಅವರನ್ನು ಮೊಣಕಾಲಿನವರೆಗೆ ಮಣ್ಣಿನಲ್ಲಿ ಹೂಳಲಾಗಿದೆ.ಇದೊಂಥರ ಹಳ್ಳಿಯ ಚಿತ್ರವಾಗಿದ್ದು,ಉಳಿದರ್ಧ ಭಾಗದಲ್ಲಿ ನಿಧಾನವಾಗಿ ಕತ್ತಲಾವರಿಸತೊಡಗಿದೆ.ಆವರಿಸಿದ ತಮಸ್ಸನ್ನು ಕಳೆಯಲೋ ಎಂಬಂತೆ ಒಬ್ಬ ಪುಟ್ಟ ಮುಗ್ಧ ಬಾಲಕಿ ತನ್ನ ಕೈಯಲ್ಲಿ ಹಣತೆ ಹಿಡಿದು ನಿಂತಿದ್ದಾಳೆ.ಆದರೆ,ಆ ಬಾಲಕಿ ಹಿಂದೆ ಸರಿಯುತ್ತಾಳೋ,ಮುಂದುವರೆಯುತ್ತಾಳೋ ಎನ್ನುವುದು ಮತ್ತೊಂದು ಪ್ರಶ್ನೆಯೆಂಬಂತೆ ಗೋಚರಿಸುತ್ತಿದೆ...ಇವಿಷ್ಟು ಆ ಚಿತ್ರದಲ್ಲಿ ಕಂಡುಬರುತ್ತಿರುವ ಅಂಶಗಳು...ವ್ಹಾ..ವ್ಹಾ..ಎಂತಹ ಅದ್ಭುತ ಚಿತ್ರ,ಅದೆಂಥಹ ರಮ್ಯ ಕಲ್ಪನೆ!ಬಣ್ಣಗಳೊಡನೆ ಹೊಸ ಆಟವೋ ಎಂಬಂತಿದೆಯಲ್ಲಾ ಈ ಚಿತ್ರ..ಹೀಗೇ..ಹೀಗೇ..ಬಂದ ವೀಕ್ಷಕರೆಲ್ಲಾ ತಮ್ಮ ತಮ್ಮಲ್ಲೇ ಮಾತನಾಡಿಕೊಳ್ತಾ ಇದ್ದಾರೆ.ಅವರಲ್ಲಿ ಒಬ್ಬ,ಈ ಚಿತ್ರ ಬಿಡಿಸಿದಾತನನ್ನು ಪ್ರಶ್ನಿಸುತ್ತಾನೆ...ದಯವಿಟ್ಟು ಈ ಚಿತ್ರದ ಅರ್ಥವನ್ನು ವಿವರಿಸುತ್ತೀರಾ?..ಅದಕ್ಕೆ ಆತ,ಕ್ಷಮಿಸಿ..ಒಬ್ಬ ಕಲಾವಿದನ ಶ್ರಮ ಆತನ ಚಿತ್ರದಲ್ಲಿ ಬಿಂಬಿಸಲ್ಪಡುತ್ತದೆ.ಒಬ್ಬ ಕಲಾವಿದನ ಮನದಾಳದ ಭಾವನೆಗಳು ಎಲ್ಲರಿಗೂ ಅರ್ಥವಾಗಬೇಕೆಂಬುದೇ ಆತನ ಉದ್ದೇಶ.ಅದಕ್ಕೆಂದೇ ಆತ ತನ್ನೆಲ್ಲ ಪ್ರಯತ್ನಗಳನ್ನು ಮಾಡುತ್ತಾನೆ.ಅದು ಸಾಮಾನ್ಯರಿಗೂ ಅರ್ಥವಾಗದಿದ್ದಲ್ಲಿ ಆ ಕಲಾವಿದ ಕೈಗೆಟುಕದ ನಕ್ಷತ್ರವಾಗಿ ಮಾರ್ಪಾಡಾಗುತ್ತಾನೆ.ಆದರೆ ನಾನು,ಆ ನಕ್ಷತ್ರವಾಗೋದಿಕ್ಕೆ ಬಯಸೋದಿಲ್ಲಾ..ಆರಿಹೋದರೂ ಸರಿಯೇ,ಕೈಯಲ್ಲಿ ಹಿಡಿಯಬರುವ ಪುಟ್ಟ ಹಣತೆಯಾಗಲಿಚ್ಛಿಸುತ್ತೇನೆ...ನನ್ನ ಈ ಚಿತ್ರದಲ್ಲಿ ಅಂಥಾದ್ದೇನೂ ಇಲ್ಲ!ಮೂರ್ಖನ ಮನಸಿನಾಳದ ಒಂದೆರಡು ತುಡಿತಗಳಷ್ಟೇ ಚಿತ್ರಿತವಾಗಿವೆ.ದಯವಿಟ್ಟು ಸಹೃದಯಿಗಳಾಗಿ ಈ ಚಿತ್ರವನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಿ...ಸೂಕ್ಷ್ಮವಾಗಿ ಅವಲೋಕಿಸಿದಾಗ ನನ್ನ ಚಿತ್ರದ ಪ್ರತಿ ಬಣ್ಣವೂ ತಮ್ಮೆಲ್ಲರಿಗೂ ಸ್ಪಂದಿಸುತ್ತಿರುವುದು ಗೋಚರವಾಗುತ್ತದೆ.ದಯವಿಟ್ಟು ಕ್ಷಮಿಸಿ,ನಾನು ಇದರ ಅರ್ಥವನ್ನು ವಿವರಿಸುವುದಿಲ್ಲ.ನಾನೇ ಎಲ್ಲವನ್ನು ಹೇಳಿದರೆ ತಮ್ಮ ಭಾವನೆಗಳಿಗೆ ಅವಕಾಶವೆಲ್ಲಿ?ಅವರವರ ಮನಸಿಗೆ ಅನಿಸಿದ ಅರ್ಥಗಳನ್ನೇ ನನ್ನ ಚಿತ್ರ ಸ್ಫುರಿಸಬಹುದು..ಅದು ತಮಗೇ ಅರ್ಥವಾಗುತ್ತದೆ!ಪ್ರತಿಯೊಬ್ಬರ ವ್ಯಕ್ತಿತ್ತ್ವವನ್ನು ಬಿಂಬಿಸುವ ಕನ್ನಡಿಯಾಗಿಯೂ ನನ್ನ ಚಿತ್ರ ಪ್ರತಿನಿಧಿಸಲ್ಪಡಬಹುದು.ಅವರವರ ಎದೆಯಾಳದ ಭಾವವೇ ಅವರವರ ಮನದ ಆಲೋಚನೆಗಳಾಗಿ ವ್ಯಕ್ತವಾಗುತ್ತವೆ.ಅದನ್ನೇ ಅವರು ನನ್ನ ಚಿತ್ರದಲ್ಲಿ ಕಾಣುತ್ತಾರೆ...ಎಂದು ಹೇಳಿ,ಅವರೆಲ್ಲರಿಗೂ ಆತ ವಂದಿಸುತ್ತಾನೆ.ಅವನ ವಿನಯಕ್ಕೂ,ದಿಟ್ಟತನದ ಆ ಉತ್ತರಕ್ಕೂ,ಆತನಲ್ಲಿ ಇರುವ ಆತ್ಮವಿಶ್ವಾಸಕ್ಕೂ,ಆತನ ಮಾತಿನ ಪ್ರೀತಿಗೂ ಜನ ಮಂತ್ರಮುಗ್ಧರಾಗಿದ್ದರು.ಆತನನ್ನು ಮನದುಂಬಿ ಹರಸಿದರು.ಆತನ ಚಿತ್ರದಲ್ಲಿ ಅದೆಂಥದ್ದೋ ಒಂದು ಸೌಂದರ್ಯವಿತ್ತು.ಆದರೆ ಆತ...ಹುಚ್ಚನಂತೆ ಕಾಣುತ್ತಿದ್ದ.ಆ ಚಿತ್ರವನ್ನು ಬಿಡಿಸಿದವನು ಆತನೇನಾ ಎನ್ನುವಂತಿದ್ದನಾತ.ಆದರೆ ಆ ಸಾಧಾರಣತೆಯಲ್ಲೇ ಅಸಾಧಾರಣ ವ್ಯಕ್ತಿತ್ತ್ವ ಎಲೆಮರೆಯ ಕಾಯಂತೆ ಅವ್ಯಕ್ತವಾಗಿತ್ತು.ಈಗ ಚಿತ್ರಕಲಾ ಫಲಿತಾಂಶ ಎಂಬ ಘೋಷಣೆಯಾದ ಕೂಡಲೇ ಎಲ್ಲರ ಗಮನ ಅತ್ತ ಸೆಳೆಯಲ್ಪಟ್ಟಿತು.ಈ ಸುಂದರ ಸಂಜೆಯ ಜಿಟಿಜಿಟಿ ಮಳೆಯ ವೇಳೆ ತಮ್ಮೆಲ್ಲರಿಗೂ ಫಲಿತಾಂಶವನ್ನು ತಿಳಿಸಲು ಸಂತೋಷಿಸುತ್ತಿದ್ದೇವೆ...ಈ ಸ್ಪರ್ಧೆಯ ವಿಜೇತ ಚಿತ್ರ..."ಕಾಲ ಕರಗುವ ಹೊತ್ತು"...ವಿಜೇತರ ಹೆಸರು..‘ಅಭಿನವ್’...ಎಂದು ಘೋಷಿಸಲಾಯಿತು.ಕಿವಿಗಡಚಿಕ್ಕುವ ಕರತಾಡನದ ಸದ್ದಿನಲ್ಲಿ ಬಹುಮಾನವನ್ನು ತೆಗೆದುಕೊಳ್ಳಲಿಕ್ಕೆ ಆತ ವೇದಿಕೆಗೆ ಬಂದ.ಎಲ್ಲರೂ ಅಂದುಕೊಂಡಂತೆಯೇ ಆತ ಪ್ರಥಮ ಬಹುಮಾನ ಗಳಿಸಿದ್ದ.

                                                        ** ** **                            

          ಬಹುಮಾನಿತನಾದ ಅಭಿನವ್ ತನ್ನ ಮನೆಗೆ ಹೋಗಲಿಕ್ಕೆ ದಾರಿಯಲ್ಲಿ ನಡೆದುಬರುತ್ತಿದ್ದ..ಒಂದು ಕೈಯಲ್ಲಿ ಪ್ರಶಸ್ತಿ ಪತ್ರ,ಪದಕ ಮತ್ತು ಒಂದು ಸ್ಮರಣಿಕೆ ಇತ್ತು.ಇನ್ನೊಂದು ಕೈಯಲ್ಲಿ ಕೊಡೆಯನ್ನು ಹಿಡಿದಿದ್ದ.ಸಣ್ಣದಾಗಿ,ಹಿತವಾಗಿ ಮಳೆ ಬರುತ್ತಲಿತ್ತು.ಈತ ನಿಧಾನವಾಗಿ ಹೆಜ್ಜೆ ಹಾಕುತ್ತಲಿದ್ದ.ಅಷ್ಟರಲ್ಲಿ ಇದ್ದಕ್ಕಿದ್ದಂತೆ ಮಳೆ ಜೋರಾಗಿ ಬರತೊಡಗಿತು.ಜೊತೆಗೆ ಬೀಸುವ ಗಾಳಿಯ ರಭಸವೂ ಕ್ಷಣದಿಂದ ಕ್ಷಣಕ್ಕೆ ಜಾಸ್ತಿಯಾಯಿತು.ಈತ ಮುದುರಿಕೊಂಡು,ಗಟ್ಟಿಯಾಗಿ ಕೊಡೆಯನ್ನು ಹಿಡಿದುಕೊಂಡು ಬರುತ್ತಿದ್ದ.ಆದರೆ ಗಾಳಿಯ ರಭಸಕ್ಕೆ ಕೈಲಿದ್ದ ಕೊಡೆ ಹಾರಿಹೋಯಿತು.ಜೋರಾದ ಮಳೆ ಬೇರೆ ಬರುತ್ತಲಿದ್ದರಿಂದ,ಆತನ ಮೈ ಒದ್ದೆಯಾಗತೊಡಗಿತು.ತಕ್ಷಣ ಆತ ಆಲ್ಲೇ ರಸ್ತೆಯ ಪಕ್ಕದಲ್ಲೇ ಇದ್ದ ಮನೆಯೊಳಗೆ ಹೊಕ್ಕಿದ.ಮನೆಯ ಬಾಗಿಲು ಹಾಕಿತ್ತು.ಆ ಮನೆಯ ಹಜಾರದಲ್ಲೇ ನಿಂತುಕೊಂಡ.ಮಳೆ ನಿಲ್ಲುವ ಸೂಚನೆಗಳಿಲ್ಲ.ಮನೆಗೆ ಹೋಗಲಿಕ್ಕೆ ಬೇರೆ ದಾರಿ ಇರಲಿಲ್ಲ.ಮನೆಗೆ ಹೋಗಿಯೂ ಮಾಡುವುದೇನೂ ಇಲ್ಲ!ಯಾಕಂದ್ರೆ ಮನೆಯವರ ಲೆಕ್ಕದಲ್ಲಿ ತಾನೊಬ್ಬ ನಿಷ್ಪ್ರಯೋಜಕ..ಎಂದು ಯೋಚಿಸ್ತಾ ನಿಂತಿದ್ದ.

                                                        ** ** **

          ಅಭಿನವ್ ಒಬ್ಬ ಸಾಮಾನ್ಯ ಕುಟುಂಬದ ಯುವಕ.ಬಡತನ ಮನೆಯಲ್ಲಿ ಮನೆಮಾಡಿತ್ತು.ಈತನ ತಂದೆ ಖಾಸಗಿ ಸಂಸ್ಥೆಯ ಗುಮಾಸ್ತ.ತಾಯಿ ಮನೆಗೆಲಸ ಮಾಡಿಕೊಂಡು ಅವರಿವರ ಮನೆಯ ಕಸಮುಸುರೆ ತೆಗೆಯುತ್ತಿದ್ದಳು.ತಂದೆಯ ಸಂಬಳದಲ್ಲಿ,ತಾಯಿಯ ಅಲ್ಪಸ್ವಲ್ಪ ಆದಾಯದಲ್ಲೇ ಜೀವನ ನಡೆಯಬೇಕಾಗಿತ್ತು.ಬಾಡಿಗೆ ಮನೆಯಲ್ಲಿ ಇವರ ವಾಸ.ಇರುವ ಒಬ್ಬ ಮಗನಿಗೆ ಚೆನ್ನಾಗಿ ಓದಿಸಿ,ದೊಡ್ಡ ಉದ್ಯೋಗಧರನನ್ನಾಗಿ ಮಾಡಬೇಕೆಂಬ ಇಚ್ಛೆಯೇ,ಎಲ್ಲ ತಂದೆತಾಯಿಯರಂತೆ ಇವರಿಗೂ ಇತ್ತು.ಆದರೆ,ಅವರ ಮಗ ಓದುವುದಕ್ಕೇ ಮನಸ್ಸು ಮಾಡಲಿಲ್ಲ.ಆತನಿಗೆ ಅದರಲ್ಲಿ ಆಸಕ್ತಿಯೇ ಇಲ್ಲವಾಗಿತ್ತು.ತಂದೆತಾಯಿ ಪ್ರತಿದಿನವೂ ಆತನಿಗೆ ಬುದ್ಧಿ ಹೇಳುತ್ತಿದ್ದರು.ಅವರೆದುರು ತಲೆತಗ್ಗಿಸಿ ನಿಂತಿರುತ್ತಿದ್ದ.ಆದರೆ ಆತನ ಲೋಕವೇ ಬೇರೆಯದಾಗಿತ್ತು.ಆತ ಎಲ್ಲರಂತಲ್ಲ.ಕೊನೆಕೊನೆಗೆ ತಂದೆತಾಯಿಯರು ಬೇರೆ ದಾರಿಯಿಲ್ಲದೇ,ಆತ ಮಾಡುವ ಕೆಲಸಕ್ಕೆ ಎರಡು ಮಾತನ್ನಲಿಲ್ಲ;ತಮ್ಮಷ್ಟಕ್ಕೇ ತಾವೇ ಸುಮ್ಮನಾದರು.ಆದರೆ ಮನಸಿನೊಳಗಿನ ನೋವು,ಮನಸ್ಸಿನಲ್ಲೇ ಮಡುಗಟ್ಟಿಕೊಂಡಿತ್ತು.ಆದರೆ,ಅವರ ಮಗ ಇದಾವುದರ ಅರಿವಿಲ್ಲದ ಮುಗ್ಧನಾಗಿದ್ದ.ಆತನಿಗೆ ತಿಳಿದಿರುವುದು ಒಂದೇ..ಅದು ಚಿತ್ರಕಲೆ..ಚಿಕ್ಕವನಿದ್ದಾಗ ಆಟವಾಡಲು ಶುರುಮಾಡಿದಂದಿನಿಂದ ಅವನ ಆಟ ಕೇವಲ ಬಣ್ಣಗಳೆಂಬ ಬಣ್ಣಗಳ ಜೊತೆಯಲ್ಲಿ ಮಾತ್ರವೇ ಆಗಿತ್ತು.ಆತನಿಗೆ ಹೇಗೆ ಬಣ್ಣಗಳ ಬಗ್ಗೆ ಆಸಕ್ತಿಯೋ,ಅಂತೆಯೇ ಬಣ್ಣಗಳಿಗೂ ಈತನನ್ನು ಕಂಡರೆ ಏನೋ ಒಂಥರದ ವಿಶೇಷ ಒಲವು ಅನಿಸುತ್ತದೆ.ಯಾಕೆಂದರೆ ಆತ ಗೀಚಿದ ಪ್ರತಿ ರೇಖೆಯೂ ಚಿತ್ರವಾಗುತ್ತಿತ್ತು.ಇಟ್ಟ ಬಣ್ಣದ ಪ್ರತೀ ಚುಕ್ಕಿಯೂ ಅರ್ಥ ಕಟ್ಟಿಕೊಡುತ್ತಿತ್ತು.ಆತ,ಆತನ ಕಾಯಕದಲ್ಲಿ ಅಭಿನವನಷ್ಟೇ ಅಲ್ಲ,’ಅಭಿಜಾತ’ನೂ ಆಗಿಹೋಗಿದ್ದ...

                                                        ** ** **                        

          ತಾನೊಬ್ಬ ನಿಷ್ಪ್ರಯೋಜಕ ಎಂದು ತನ್ನಲ್ಲೇ ತಾನು ತಾನಾಗಿಯೇ ಸುಮ್ಮನೆ ಯೋಚಿಸುತ್ತಿರುವಾಗ..ಇಲ್ಲ,ನನ್ನೊಳಗೊಂದು ಶಕ್ತಿಯಿದೆ,ನಾನು ನಿಷ್ಪ್ರಯೋಜಕನಲ್ಲ,ನನಗೂ ಯಾವುದೋ ಒಂದು ಮೌಲ್ಯವಿದೆ;ಆದರೆ,ನನ್ನ ಮೌಲ್ಯ ಈ ಜಗತ್ತಿಗೆ ತಿಳೀತಾ ಇಲ್ಲ.ಆಸ್ವಾದಿಸುವ ಕಣ್ಣುಗಳು,ಜೊತೆಜೊತೆಗೇ ಸ್ಪಂದಿಸುವ ಹೃದಯವಿದ್ದರೆ ತಾನೇ ಅಸ್ವಾದನೆ ಸಾಧ್ಯ!ನಿಜ,ನನ್ನತನವನ್ನು ಮೊದಲು ನಾನೇ ಅರ್ಥೈಸಿಕೊಳ್ಳಬೇಕು,ಅಲ್ಲವಾ?..ಎಂದು ಆಲೋಚಿಸುತ್ತಾ ಅಭಿನವ್ ನಿಂತಿದ್ದ.ಜೋರಾಗಿ ಮಳೆ ಸುರಿಯುತ್ತಿದೆ.ಶ್ರಾವಣದ ಸಂಜೆಯ ಮಳೆಯ ಕಂಪು ಹಿತವಾಗೇನೋ ಇತ್ತು;ಆದರೆ,ಅಷ್ಟೇ ಬಿರುಸಾಗಿಯೂ ಇತ್ತು.ಮಳೆಯ ರಭಸ ಕ್ಷಣದಿಂದ ಕ್ಷಣಕ್ಕೆ ಏರುಪೇರಾಗುತ್ತಲಿತ್ತು.ಹಜಾರದಲ್ಲಿ ಹಾಗೇ ತಿರುಗಾಡುತ್ತಾ,ಅಭಿನವ್ ಕಿಟಕಿಯ ಬಳಿ ಬಂದ.ಸೂಕ್ಷ್ಮವಾಗಿ ಆಲಿಸತೊಡಗಿದ...ಗೆಜ್ಜೆಯ ದನಿ..ಧೋ ಧೋ ಎಂದು ಸುರಿವ ಮಳೆಯ ಆರ್ಭಟದಲ್ಲಿ ನೂಪುರಸ್ವರನಾದ ಈತನ ಕಿವಿಯ ಬಳಿ ಸುಳಿಯಲೇ ಇಲ್ಲವಾಗಿತ್ತು.ಆದರೆ,ಈಗ..ಆಲಿಸತೊಡಗಿದ..ಗೆಜ್ಜೆಯ ದನಿಯೇ ಮಧುರ,ಆಹಾ!ತಾಳಕ್ಕೆ ತಕ್ಕಂತೆ ಬೀಳುತ್ತಿದ್ದ ಹೆಜ್ಜೆಗಳಿಗನುಗುಣವಾಗಿ ಗೆಜ್ಜೆ ಲಜ್ಜೆಯಿಂದ ಬಳುಕುತ್ತಿತ್ತು.ಕುಲುಕುಲು ಕುಲುಕುವಿಕೆಯಿಂದ ನಾದ ನಿನಾದ ಪಸರಿಸುತ್ತಿತ್ತು.ನಿಧಾನವಾಗಿ ಕಣ್ಣುಮುಚ್ಚಿಕೊಂಡು ಆಲಿಸತೊಡಗಿದ.ಇದ್ದಕ್ಕಿದ್ದಂತೆ,ಯಾರಿರಬಹುದು ನರ್ತಿಸುತ್ತಿರುವವರು,ಎಂಬ ಆಲೋಚನೆ ಆತನನ್ನು ಪ್ರಶ್ನಿಸತೊಡಗಿತು.ಕಣ್ತೆರೆದು,ಕಿಟಕಿಯಲ್ಲಿ ಇಣುಕಿ ಹುಡುಕತೊಡಗಿದ..ಈ ಹುಚ್ಚು ಮಳೆಯಿಲ್ಲಿ ವಿಚಲಿತಗೊಂಡಿರೆ,ನಾಚಿ ನುಲಿಯುವ ಗೆಜ್ಜೆಗಳ ಪರಿಯೇನು!

                                                        ** ** **

           ಕಿಟಕಿಯಲ್ಲಿ ಇಣುಕುತ್ತಿದ್ದಾನೆ.ಸದಾ ಹೊಸತನಕ್ಕಾಗಿ ಹಂಬಲಿಸುವ ಆತನ ಕಂಗಳು ಹುಡುಕುತ್ತಿವೆ ಹೊಸತೇನನ್ನೋ!ಅದೊಂದು ಕತ್ತಲೆ ತುಂಬಿದ ಕೋಣೆ.ಒಂದು ಪುಟ್ಟ ಹಣತೆಯನ್ನು ಹಚ್ಚಿಟ್ಟಿದ್ದಾರೆ.ಆ ಪುಟ್ಟ ಹಣತೆಯೇ ಕೋಣೆಯ ತುಂಬ ಬೆಳಕು ಬೀರುವ ಪ್ರಯತ್ನವನ್ನು ಮಾಡುತ್ತಿದೆ.ಆದರೆ,ಇಡೀ ಜಗತ್ತಿಗೇ ಬೆಳಕು ಕೊಡಲು ಸೂರ್ಯನಿಗೇ ಸಾಧ್ಯವಾಗದ್ದು,ಈ ಪುಟ್ಟ ಹಣತೆಗೆ ಸಾಧ್ಯವೇ?ಯಾಕೆಂದರೆ,ಆ ಕೋಣೆಯೇ ಆ ಹಣತೆಯ ಪ್ರಪಂಚ ಅಲ್ಲವೇ?ಮಧುರ ಗಂಭೀರ ಶಾಂತ ವಾತಾವರಣದಲ್ಲಿ ಚಿನ್ನದ ಹೊಳಪಂತೆ ಬೆಳಕಿನ ಕಿರಣಗಳು ಗೋಡೆಗಳಲ್ಲಿ ಫಲಿಸುತ್ತಿವೆ.ಕತ್ತಲು ಬೆಳಕಿನ ಸಂಚಲನದಾಟದಲ್ಲಿ ಗೆಜ್ಜೆಯ ದನಿಯೇ ಸಾಕ್ಷಿಯಾಗಿದೆ.ಚಿನ್ನದ ನೀರಲ್ಲಿ ತೋಯ್ದಿದೆಯೋ ಎಂಬಂತಿಹ ನಟರಾಜನ ವಿಗ್ರಹ..ಆಹಾ!ಅದೆಂಥ ದೈವಕಳೆ!..ಆ ನಟರಾಜನ ಭಂಗಿಯೋ,ಅದೆಂಥ ಮೋಹಕ!..ಎಲ್ಲಿ ಎಲ್ಲಿ,ಗೆಜ್ಜೆ ಕಟ್ಟಿಹ ಪಾದಗಳೆಲ್ಲಿ?ಹುಡುಕುತ್ತಿದ್ದಾನೆ ಹಣಕಿ,ಹಣಕಿ..ಒಂದೆಡೆ ಏನೋ ಒಂಥರದ ದಿಗಿಲು,ಇನ್ನೊಂದೆಡೆ ಯಾರೆಂದು ನೋಡುವ ಸಹಜ ಕುತೂಹಲ!..ಯಾರೋ ಮನಸ್ಫೂರ್ತಿಯಾಗಿ ನರ್ತಿಸುತ್ತಿದ್ದಾರೆಂಬುದು ಈಗ ಸ್ಪಷ್ಟವಾಗತೊಡಗಿತ್ತು.ಗೆಜ್ಜೆಯ ದನಿ ಹತ್ತಿರವಾದಂತೆ ಅನಿಸತು.ನೋಡುತ್ತಿದ್ದಾನೆ..ಒಬ್ಬಳು ಯುವತಿ ಹೆಜ್ಜೆಹಾಕುತ್ತಿದ್ದಾಳೆ;ಗೆಜ್ಜೆಯ ಲಯ ತಪ್ಪದಂತೆ!

                                                        ** ** **

           ಹಳದಿ ಬಣ್ಣದ ಭರತನಾಟ್ಯದ ವಸ್ತ್ರವನ್ನು ಧರಿಸಿದ್ದಾಳೆ.ದೀಪದ ಬೆಳಕು ಆ ವಸ್ತ್ರದ ಮೇಲೆ ಬಿದ್ದು,ಇನ್ನಷ್ಟು ಶೋಭಾಯಮಾನವಾಗಿ ಕಾಣುತ್ತಿದೆ.ಡಾಬು,ತೋಳ್ಬಂದಿಗಳು ಥಳಥಳಿಸುತ್ತಿವೆ.ಕಿವಿಯೋಲೆಗಳೂ ಕೂಡ ನಾದಕ್ಕೆ ಮಿಡಿಯುತ್ತಿವೆ.ಅವಳು ಹಾಕುತ್ತಿರುವ ಕೈಯ ಪ್ರತಿ ಮುದ್ರೆಯಲ್ಲಿಯೂ ಪ್ರಭುತ್ವವಿದೆ.ಇಡುವ ಪ್ರತಿ ಹೆಜ್ಜೆಯಲ್ಲಿಯೂ ದಿಟ್ಟತೆಯಿದೆ;ಇದು ನನ್ನದು ಎಂಬ ಸ್ಪಷ್ಟ ಆತ್ಮವಿಶ್ವಾಸವಿದೆ.ಪರಿಪೂರ್ಣತೆಯೆಡೆಗಿನ ಪಯಣದ ಎಲ್ಲ ಕುರುಹುಗಳು ಅಲ್ಲಿವೆ.ಆತನಿಗೇ ತಿಳಿಯದಂತೆ ಏನೋ ಒಂದು ಉತ್ಸಾಹ ಆತನಲ್ಲಿ ಚಿಗುರತೊಡಗಿತ್ತು.ನೃತ್ಯದ ಪರಿಚಯ ಆತನಿಗೆ ಅಷ್ಟೇನೂ ಇಲ್ಲದಿದ್ದರೂ,ಯಾವುದೋ ಒಂದು ತಿಳಿಯದ ಅಮೂರ್ತ ಸಂಗತಿಯೊಂದು ಆತನನ್ನು ಪ್ರೇರೇಪಿಸುತ್ತಲಿತ್ತು.ಆತ ತಡಮಾಡಲಿಲ್ಲ.ಕಾಗದಕ್ಕಾಗಿ ಅತ್ತ ಇತ್ತ ಹುಡುಕಿದ.ಅವಳ ಚಿತ್ರವನ್ನು ಬರೆಯಲೇಬೇಕೆಂಬ ಅದಮ್ಯ ಆಕಾಂಕ್ಷೆ..ಎಲ್ಲಿ,ಎಲ್ಲಿಂದ ತರಲಿ ಕಾಗದವನ್ನು?ಕುಂಚವನ್ನು,ಮೆರಗಿನ,ಬೆರಗಿನ ಬಣ್ಣವನ್ನು?ತಡಕಾಡುತ್ತಿದ್ದಾನೆ..ಥಟ್ಟನೆ ನೆನಪಾಯಿತು.ತನ್ನದೇ ಪ್ರಶಸ್ತಿ ಪತ್ರವಿದೆಯಲ್ಲಾ!ಆ ಪ್ರಶಸ್ತಿ ಪತ್ರದ ಹಿಂದಿನ ಭಾಗ ಬಿಳಿಯಾಗಿದೆ.ಅದು ಸಾಕು,ಈ ಅಪೂರ್ವ ದೃಶ್ಯಕಾವ್ಯವನ್ನು ಸೆರೆಹಿಡಿಯಲಿಕ್ಕೆ!ತನ್ನ ಕಿಸೆಯಲ್ಲಿದ್ದ ಲೇಖನಿಯನ್ನು ತೆಗೆದು ಕಿಟಕಿಯೆಡೆಗೆ ಓಡಿದ.ಅವಳು ನರ್ತಿಸುತ್ತಲೇ ಇದ್ದಾಳೆ.ಒಂದು ಕಾಲು ಮೇಲೆತ್ತಿ,ಒಂದು ಕೈಯ ಮೇಲೆ ಇನ್ನೊಂದು ಕೈಯಿಟ್ಟು,ನಟರಾಜನ ವಿಗ್ರಹದ ನಿಲುವಿನಂತೆಯೇ ಕಣ್ಮುಚ್ಚಿ ನಿಂತಿದ್ದಾಳೆ;ಅಭಿನವನಿಗೆ ಚಿತ್ರರೂಪದರ್ಶಿಯೋ ಎಂಬಂತೆ!..ಅವಳನ್ನೇ ತದೇಕಚಿತ್ತದಿಂದ ಆತ ನೋಡತೊಡಗಿದ.ಆ ರೂಪವನ್ನು ಮನದಲ್ಲಿ ತುಂಬಿಕೊಂಡ.ಸರಸರನೆ ಬಿಳಿಯ ಕಾಗದದಲ್ಲಿ ರೇಖೆಗಳನ್ನೆಳೆಯತೊಡಗಿದ.ಆಕೆಯ ರೇಖಾಚಿತ್ರ ಕೇವಲ ಐದಾರು ನಿಮಿಷಗಳಲ್ಲಿ ಸಿದ್ಧವಾಯಿತು.ಮತ್ತೊಮ್ಮೆ ಆ ಭಂಗಿಯಲ್ಲಿ ನಿಂತ ಅವಳನ್ನು ಅವಲೋಕಿಸಿದ..ನೀಳವಾದ ಜಡೆ,ಕಪ್ಪಾದ ದಟ್ಟನೆಯ ಕೂದಲು,ಚೆಂದದ ಹಣೆ,ತೆಳ್ಳನೆಯ ಹುಬ್ಬುಗಳು..ಮುಚ್ಚಿರುವ ಕಣ್ರೆಪ್ಪೆಗಳಲ್ಲೂ,ಹಣೆಯ ಮುಂಬದಿಗೆ ತೂಗುಯ್ಯಾಲೆಯಾಡುತ್ತಿರುವ ಮುಂಗುರುಳಿನಲ್ಲೂ ಸೌಂದರ್ಯವಿತ್ತು.ಆ ಮುಖಕ್ಕೆ ಒಪ್ಪುವಂಥ ಎಳಸು ಎಳಸಾದ ಮೂಗು.ಬಿರಿದ ಚೆಂಗುಲಾಬಿಯಂಥ ತುಟಿಗಳು..ಮುದ್ದಾದ ಗಲ್ಲ,ಸಣ್ಣ ನಡು,ತುಂಬು ತೊಡೆಗಳು..ಇದೆ ಎಲ್ಲವೂ ಇದೆ..ಆದರೆ,ಆತನಿಗೆ ಇದವುದರ ಬಗ್ಗೆಯೂ ಪರಿವೆಯೇ ಇಲ್ಲ.ಅವಳು ಈಗ ಕಣ್ಣು ತೆರೆದು ನಿಂತಿದ್ದಾಳೆ..ಅವನಿಗೆ ಕಾಣುತ್ತಿರುವುದೀಗ ಆ ಮೊಗದಲ್ಲಿನ ಎಂದೂ ಮಾಸದಂತಿಹ ಆ ಮುಗ್ಧತೆ,ಸ್ಫುರಿಸುತ್ತಿರುವ ಸೌಂದರ್ಯಕ್ಕೆ ಮೆರಗು ಕೊಡುತ್ತಿರುವ ಮಂದಹಾಸ,ಜೊತೆಜೊತೆಗೇ ಕಣ್ರೆಪ್ಪೆಗಳ ನಾಜೂಕು..ಅದೆಂಥ ಆನಂದವಿದೆ ಅವಳ ಮೊಗದಲ್ಲಿ!ನಿಜಕ್ಕೂ ಇಂತಹ ಆನಂದವನ್ನು ಹೊಂದಲು ಸಾಧ್ಯಾನಾ?ಅಥವಾ ಇದೆಲ್ಲಾ ನನ್ನ ಭ್ರಮಾಲೋಕದ ಸ್ವಪ್ನ ತಪಸ್ಸಿನ ತಮಸ್ಸೋ!ಅಪೂರ್ವ ಆನಂದ,ಹಿಂದೆಂದೂ ಯಾರ ಮೊಗದಲ್ಲೂ ಕಂಡಿರದ ಪ್ರಸನ್ನತೆ,ಪ್ರಶಾಂತತೆ...ಈಗ ಹೊರಗಿನ ಮಳೆಯೂ ಶಾಂತವಾಗಿತ್ತು.ನೀರವ ಮೌನದಲ್ಲೂ ಇಂತಹ ಸೌಂದರ್ಯವಿದೆಯೇ?ನೀರಸವೆಂದುಕೊಂಡ ಮೌನದ ಪರಿಧಿಯಲ್ಲೂ ರಸಕಾವ್ಯ ಸೌರಭದ ಪರ್ವವಿದೆಯೇ?ಅರ್ಥವಾಗುತ್ತಲೇ ಇಲ್ಲವಲ್ಲ ಈ ಮೌನದ ಮಂದ ಮಂದ ಚೆಂದ ಸಂವಾದ!ಅರ್ಥವಿಲ್ಲದ ವ್ಯರ್ಥ ಕ್ಷಣವೆಂದುಕೊಳ್ಳಬೇಕಾಗಿದ್ದ ಕ್ಷಣವೂ ಕೂಡ ಬದುಕಿನ ಸುಪ್ರಭಾತವಾಗುವಂತೆ ಸನ್ನಿಹಿತವಾಗುತ್ತಿದೆಯಲ್ಲಾ!ಸರಿದ ಸದ್ದಿನ ಸುದ್ದಿಯ ಸರಹದ್ದಿನಲ್ಲಿ ಅಭೂತಪೂರ್ವ ಕ್ಷಣಗಳೇ ಬೇಲಿಯ ಗೂಟಗಳಾಗಿವೆಯಲ್ಲಾ!..ಎಂದು ಯೋಚಿಸುತ್ತಾ ಆತ ನಿಧಾನವಾಗಿ ಮನೆಯತ್ತ ಹೆಜ್ಜೆ ಹಾಕಿದ.ಕೈಯಲ್ಲಿ ಹಿಡಿದ ಅವಳ ಚಿತ್ರ ಹಾಗೇ ಕೈಯಲ್ಲೇ ಇತ್ತು..ಆದರೆ,ಇತ್ತ ಆತ ಸ್ಪರ್ಧೆಯಲ್ಲಿ ಗೆದ್ದ ಪ್ರಶಸ್ತಿ ಸ್ಮರಣಿಕೆ ಮಾತ್ರ ಆತನ ಬರವನ್ನು ಕಾಯ್ತಾ,ಅವಳ ಮನೆಯ ಹಜಾರದಲ್ಲಿ ಕುಳಿತಿತ್ತು..ಅದೂ ಮೌನವಾಗಿ,ತಾನೂ ಮೌನದರಗಿಣಿಯೆಂಬಂತೆ!...

                                                          ** ** **

             ಅಭಿನವ್ ಮೆಲ್ಲಮೆಲ್ಲನೆ ಹೆಜ್ಜೆಹಾಕುತ್ತಾ ಮನೆ ಸೇರಿದನು.ಮನೆ ಸೇರುತ್ತಲೇ ಆತನ ಅಮ್ಮ ಎದುರಾದಳು.ಅಮ್ಮಾ..ಅಮ್ಮಾ..ಸ್ಪರ್ಧೆಯಲ್ಲಿ ನಾನು ಪ್ರಥಮ ಬಹುಮಾನ ಪಡೆದುಕೊಂಡೆ..ಆಶೀರ್ವದಿಸಮ್ಮಾ..ಎನ್ನುತ್ತಾ ಅವಳ ಕಾಲಿಗೆರಗಿದನು.ತನಗಿಂತಲೂ ಎತ್ತರಕ್ಕೆ ಬೆಳೆದ ಮಗ,ಕಾಲಿಗೆರಗಿದ್ದನ್ನು ಕಂಡು ಅವಳ ಹೃದಯ ತುಂಬಿಬಂತು.ಊರಿಗೆ ಅರಸನಾದರೂ ತಾಯಿಗೆ ಮಗನೇ ಅಲ್ಲವೇ ಎಂಬುದನ್ನು ನೆನಪಿಸಿಕೊಳ್ಳುತ್ತಾ ಆಕೆ ಆತನನ್ನು ಎಬ್ಬಿಸುತ್ತಾಳೆ.ಏಳಪ್ಪಾ ಏಳು..ಖುಷಿಯಾಯ್ತಪ್ಪ,ಒಳ್ಳೇದಾಗ್ಲಿ..ಅಂತ ಸ್ವಲ್ಪ ಬೇಸರದಲ್ಲೇ ಹೇಳಿದಳು.ಯಾಕಮ್ಮಾ,ನಾನ್ ಗೆದ್ದುಬಂದಿದ್ದೀನಿ ಅಂದ್ರೂ ನಿನಗೆ ಸಂತಸ ಆಗ್ತಾ ಇಲ್ವಾ?ಏನಮ್ಮಾ,ನೀನು?!ಆತ ಪ್ರಶ್ನಿಸುತ್ತಾನೆ.ಅಭಿ..ನನ್ ಕಂದಾ..ನೀನು ಗೆದ್ದಿರೋದು ಸಂತೋಷಾನೇ ಕಣಪ್ಪಾ..ಆದರೆ ಪುಟ್ಟಾ,ಇದರಿಂದ ಹೊಟ್ಟೆಯೆಂಬ ಹೊಟ್ಟೆಗೆ ಹಿಟ್ಟು ಬೀಳಲ್ಲ ಅಲ್ಲವೇನಪ್ಪಾ?ಬಾಡಿಗೆಯ ಪುಟ್ಟ ಗುಡಿಸಲು ಅಷ್ಟೈಶ್ವರ್ಯಗಳ ಇಂದ್ರಭವನ ಆಗುವುದಿಲ್ಲ,ಅಲ್ಲವೇನಪ್ಪಾ?ಇದರ ಬದಲು,ನೀನು ಬೇರೆ ಏನೋ..ಡಾಕ್ಟರ್ ಅಥವಾ ಎಂಜಿನಿಯರ್,ಅಥವಾ ಓದಿ ಅತ್ತ್ಯುತ್ತಮ ಉದ್ಯೋಗದಲ್ಲಿದ್ದಿದ್ದರೆ,ಸುಖದ ಜೀವನ ನಮ್ಮದಾಗ್ತಾ ಇತ್ತು ಅಲ್ಲವೇನಪ್ಪಾ?ಸ್ವಲ್ಪ ಯೋಚಿಸು..ಎಂದು ಸ್ವಲ್ಪ ಅಳುಕುತ್ತಲೇ ನುಡಿಯುತ್ತಾಳೆ.ಅಮ್ಮಾ,ತಪ್ಪಾಗಿ ಅರ್ಥೈಸಿಕೊಳ್ಳಬೇಡ..ನಿಜ,ದುಡಿವ ಯಂತ್ರವಾಗಿ,ಬರಡು ಹೃದಯದ ವಾರಸುದಾರನಾಗಿ,ಹಣವೆಂಬ ಹಣಕ್ಕಾಗಿ,ಹೆಣದಂತೆ ಬದುಕಬಹುದಿತ್ತು..ಅದನ್ನೇ ನೀವು ಸುಖವೆಂದು ಕರೆಯುತ್ತಿರುವುದು..ಸುಖದ ಮರೀಚಿಕೆಯ ಹುಡುಕಾಟದಲ್ಲಿ ಪ್ರತಿನಿತ್ಯ ನರಳುವುದಕ್ಕಿಂತ,ನಮ್ಮಲ್ಲೇ ಇರುವ ಸಂತೋಷವನ್ನು ಹುಡುಕಿಕೊಂಡು,ಇದ್ದುದರಲ್ಲೇ ಸುಖಪಡಬಹುದು,ಅಲ್ಲವೇ?ನೀನು ಹೇಳಿದಂತೆ ಆಗಿದ್ದರೆ,ನಾನು ಮನಸ್ಸಿಲ್ಲದ ಮನಸ್ಸಿನಿಂದ ಸ್ವತಂತ್ರವಲ್ಲದ ಯಂತ್ರವಾಗಿ ಅತಂತ್ರವಾಗಿರಬೇಕಾಗಿತ್ತು...ಅಮ್ಮಾ,ಪ್ರೀತಿ ತುಂಬಿಹ ಪ್ರತೀ ಪುಟ್ಟ ಗೂಡೂ ಅರಮನೆಯೇ ಅಲ್ಲವೇನಮ್ಮಾ?ಹೊಟ್ಟೆಯನ್ನು ಕೊಟ್ಟವನೇ ತಟ್ಟೆಗೂ ಅನ್ನವೆಂಬ ಅನ್ನವನ್ನು ಕೊಡುತ್ತಾನೆ ಎನ್ನುವುದು ಅಸತ್ಯವೆನ್ನುತ್ತೀಯೇನಮ್ಮಾ?ಪುಟ್ಟ ಗುಬ್ಬಿ,ಬಿದ್ದ ಬಿದ್ದ ಕೂಳು ತಿನ್ನುವ ಕಾಗೆ ಇವೆಲ್ಲವೂ ಯಾವ ಡಾಕ್ಟರ್ ಅಥವಾ ಎಂಜಿನಿಯರುಗಳಲ್ಲವಲ್ಲವೇನಮ್ಮಾ!ಇದೊಂದು ಮೊಂಡುವಾದ ಅನ್ನಿಸಬಹುದಮ್ಮಾ,ಆದರೆ ದಾರಿಯಿಲ್ಲಮ್ಮಾ,ಬೇರೆ ದಾರಿಯೇ ಇಲ್ಲವಮ್ಮಾ,ನನ್ನನ್ನು ನಾನು ಸಮರ್ಥಿಸಿಕೊಳ್ಳಲೇಬೇಕಾಗಿದೆ.ಯಾಕಂದ್ರೆ ಕಲೆಗೆ ನುಡಿಯುವ ಒಂದೊಂದು ತಾತ್ಸಾರದ ಚುಚ್ಚುಮಾತಿಗೂ ನನ್ನ ಮನಸೆಂಬ ಮನಸು ಉಸಿರು ಹಿಸುಕಿದಂತಾಗಿ ನಲುಗುತ್ತಮ್ಮಾ...ನನ್ನೊಳಗೆ ನಾನಿಲ್ಲದೇ,ಇಷ್ಟವಿಲ್ಲದ್ದಕ್ಕಾಗಿ ಪ್ರತಿಷ್ಠೆಯ ಬದುಕು ನಡೆಸುವುದು ನನ್ನಿಂದ ಸಾಧ್ಯವಾಗುತ್ತಿಲ್ಲವಮ್ಮಾ..ಕ್ಷಮಿಸಿಬಿಡು..ಮುಗ್ಧವಾಗಿ ನುಡಿಯುತ್ತಾನೆ.ಆತನ ಮಾತಿನಿಂದ ತಾಯಿಗೆ ಅಳು ಉಕ್ಕಿಬರುತ್ತದೆ.ಆದರೆ ಮಗನೆದುರು ತೋರಿಸಿಕೊಳ್ಳಲಾಗದೇ,ಮುಖ ತಿರುಗಿಸಿ ನಿಲ್ಲುತ್ತಾಳೆ.ನಿಧಾನವಾಗಿ ಹೇಳುತ್ತಾಳೆ..ಪುಟ್ಟಾ..ನೀನು ಬಿಡಿಸುವ ಪ್ರತೀ ಚಿತ್ರವೂ ಬಣ್ಣಗಳಲ್ಲಿ ಮಿಂದೇಳುತ್ತದೆ.ನಿನ್ನ ಚಿತ್ರದಲ್ಲಿ ಬರುವ ಬೊಂಬೆಗಳೂ ಬಣ್ಣಬಣ್ಣದ ವಸ್ತ್ರ ಧರಿಸಿ ನಲಿಯುತ್ತವೆ..ನೀನು ಚಿತ್ರಿಸುವ ಪ್ರತೀ ಚಿತ್ರವೂ ಹೊಸತನದಿಂದ ಕೂಡಿ ಗರ್ವದಿಂದ ಬೀಗುತ್ತದೆ..ನಿರ್ಜೀವ ರೇಖೆಗಳೂ ಜೀವಂತ ಚಿತ್ರದಂತೆ ಬಣ್ಣಬಣ್ಣದ ಬಟ್ಟೆ ತೊಟ್ಟು ಬೀಗುತ್ತಿರುತ್ತವೆ...ಆದರೆ ಇಲ್ಲಿ,ಕಟು ವಾಸ್ತವ ಪ್ರಪಂಚದಲ್ಲಿ,ನಿನ್ನ ತಾಯಿ ನಾನು,ಮಾನ ಮುಚ್ಚುವ ಬಟ್ಟೆಗಾಗಿ ಕ್ಷಣಕ್ಷಣ ಪರಿತಪಿಸುತ್ತಿದ್ದೇನೆ...ತೇಪೆ ಹಚ್ಚಿದ ಚಿಂದಿ ಬಟ್ಟೆಯೇ ಹಬ್ಬದ ಸೀರೆಯಾಗುತ್ತದೆ ನನಗೆ!ದಾರಿಹೋಕರ,ಕಾಮುಕರ ಕಾಮದ ನೋಟಕ್ಕೆ ಕೊರಗಿ ಕೊರಗಿ ಪ್ರತೀ ಕ್ಷಣ ಚಿತ್ರಹಿಂಸೆಯನುಭವಿಸುತ್ತಾ ಬದುಕುತ್ತಿದ್ದೀನಪ್ಪಾ...ಹೇಳಿಕೊಳ್ಳಲೂ ಆಗದೇ,ಹೇಳದೆಯೇ ಇರಲೂ ಆಗದೇ,ಬೇಗುದಿಯಲ್ಲೇ ಹೊರಳಾಡುತ್ತಿದ್ದೀನಿ ಕಣೋ,ಒಮ್ಮೊಮ್ಮೆ ಅನಿಸುತ್ತದೆ ನೀನು ಬಿಡಿಸುವ ಚಿತ್ರವೇ ಆಗಿಬಿಡಬೇಕೆಂದು!..ಎನ್ನುತ್ತಾ ಆತನನ್ನು ನೋಡಿದರು.ಆತನ ಕಂಗಳಿಂದ ಎರಡು ಹನಿ ಕಣ್ಣೀರು ಕೆನ್ನೆಗಳ ಮೇಲೆ ಹಾಗೇ ಜಾರಿಹೋಯಿತು;ಮತ್ತೆ ನಿನ್ನನ್ನು ಸೇರುವುದಿಲ್ಲವೆಂಬಂತೆ!ಅಮ್ಮಾ..ಎಂದು ನುಡಿದವನೇ,ತನ್ನ ಪುಟ್ಟ ಕೋಣೆಯೊಳಗೆ ಓಡಿದ.ಅದು ಅವನದೇ ಪ್ರಪಂಚ...ಇತ್ತ ಅಮ್ಮ,ಆತ ಅತ್ತ ಹೋದ ಕೂಡಲೇ,ದುಃಖವನ್ನು ತಡೆಯಲಾರದೇ ಬಿಕ್ಕಳಿಸಿ ಅತ್ತಳು..

                                                           ** ** **

            ಅಮ್ಮನಾಡಿದ ಮಾತುಗಳಿಂದ ಬೇಸರದಿ ಓಡಿಬಂದು,ಅಭಿನವ್ ತನ್ನ ಕೋಣೆಯಲ್ಲಿ ಬರೀ ನೆಲದ ಮೇಲೆ ಮಲಗಿ ಯೋಚಿಸತೊಡಗುತ್ತಾನೆ..ಅಮ್ಮಾನಾಡಿದ ಮಾತುಗಳು ನಿಜ..ನಾನು ಕಲ್ಪನೆಯ ವಿಲಾಸದಲ್ಲೇ ಕನಸು ಕಾಣುವವನು...ಆದರೆ,ಅಪ್ಪ ಅಮ್ಮ ವಾಸ್ತವದ ವಿದ್ಯಮಾನಗಳ ಜಿದ್ದಿನ ಹೋರಾಟದಲ್ಲಿ ಹೋರುವವರು..ನನ್ನದು ಕೇವಲ ಕನಸುಗಳೊಂದಿಗಿನ ಸರಸ ಮಾತ್ರ..ಆದರೆ,ಅವರದು ಬದುಕೆಂಬ ಬದುಕಿನ ಭೀಕರತೆಯೊಂದಿಗಿನ ಭಯಂಕರ ಸೆಣಸು..ಅಲ್ಲವೇ?ಕಲೆ ನನ್ನನ್ನೇ ಕೊಲ್ಲುತ್ತಾ ಇದೆಯಾ?...ಎನ್ನುತ್ತಾ,ತಾನು ಬಿಡಿಸಿಕೊಂಡು ಬಂದಿದ್ದ ಅವಳ ಚಿತ್ರವನ್ನು ನೋಡತೊಡಗಿದನು.ಅವಳ ಮುಖದಲ್ಲಿನ ಮಂದಹಾಸ,ಮತ್ತೆ ಆತನನ್ನು,ಕಲೆ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಂತೆ ಮಾಡುತ್ತಿದೆ..ಎಲ್ಲವನ್ನೂ ಮರೆಯುತ್ತಾನೆ..ಈಗ ಕೇವಲ ಅವಳ ಚಿತ್ರದ್ದೇ ಯೋಚನೆ..ಹೌದು,ಚಿತ್ರವನ್ನು ಪೂರ್ತಿಗೊಳಿಸಬೇಕು.ರೇಖೆಯ ಅಂಚು ಕೂಡ ಬಣ್ಣದ ಪ್ರಪಂಚವಾಗಬೇಕಿದೆ...ಎಂದು ಅಂದುಕೊಳ್ಳುತ್ತಾ,ಅವಳ ದೊಡ್ಡದಾದ ಚಿತ್ರವನ್ನು ಬಿಡಿಸಲು ತೊಡಗುತ್ತಾನೆ.ರಾತ್ರಿಯಿಡೀ ಅವಳ ಚಿತ್ರದ ಕೆಲಸವೇ!..ಆದರೆ,ಅವಳ ಮನೆಯಲ್ಲಿ ಬಿಟ್ಟುಬಂದ ಪ್ರಶಸ್ತಿ ಸ್ಮರಣಿಕೆಯ ನೆನಪು ಎಳ್ಳಷ್ಟೂ ಆತನಿಗೆ ಆಗಲೇ ಇಲ್ಲ..ಅಲ್ಲೀಗ ಶ್ರಾವಣದ ತುಂಬು ಸಂಜೆಯ ಖಾಲಿ ಏಕಾಂತ..ಅದನ್ನು ತುಂಬಲೆಂಬಂತೆ ಘಮಘಮಿಸುವ ಪರಿಮಳದ ಅವಳ ನೆನಪುಗಳ ಗುನುಗುನಿಸುವ ಸಂಗೀತ...

                                                           ** ** **

            ಬೆಳಕು ಹರಿಯಿತು..ಹಕ್ಕಿಪಿಕ್ಕಿಗಳ ಕಲರವದಿಂದ ಭೂಮಿ ಗೆಲುವಾಯಿತು...ಮುಂಜಾನೆಯ ಎಳೆಬಿಸಿಲ ಕಿರಣಗಳು ಮಜವಾಗಿದ್ದವು..ನಿತ್ಯಕರ್ಮಗಳನ್ನು ಮುಗಿಸಿಕೊಂಡು,ಸ್ನಾನ ಮಾಡಿದ ಅಭಿನವ್,ಮತ್ತೆ ಚಿತ್ರದ ಬಗ್ಗೆ ಯೋಚಿಸಲಾರಂಭಿಸಿದ.ಹೌದು ಚಿತ್ರವನ್ನು ಪೂರ್ಣಗೊಳಿಸಬೇಕು..ಎಂದುಕೊಳ್ಳುತ್ತಾ,ತನ್ನ ಕೋಣೆಗೆ ಹೋಗಿ,ಅರ್ಧಂಬರ್ಧವಾಗಿದ್ದ ಚಿತ್ರವನ್ನೂ,ಚಿತ್ರ ಬಿಡಿಸಲು ಬೇಕಾದ ಬಣ್ಣ,ಕುಂಚಗಳೆಲ್ಲವನ್ನೂ ತೆಗೆದುಕೊಂಡು,ಮನೆಯ ಹಿಂಬದಿಗೆ ಇರುವ ಸಣ್ಣ ಕೈತೋಟದೆಡೆಗೆ ಹೋದ.ಅಲ್ಲಿ ಚಿತ್ರ ಬಿಡಿಸಲು ನೆರವಾಗುವ ಉಪಕರಣಕ್ಕೆ ಕಾಗದವನ್ನು ಅಂಟಿಸಿ,ಚಿತ್ರದ ಉಳಿದ ಭಾಗಕ್ಕೆ ಬಣ್ಣ ಹಚ್ಚಲಾರಂಭಿಸಿದ...ಕಣ್ಮುಚ್ಚಿ ಸ್ವಲ್ಪ ಹೊತ್ತು ನಿನ್ನೆ ಕಂಡ ಆ ದೃಶ್ಯವನ್ನು ಮತ್ತೆ ನೆನಪಿಸಿಕೊಂಡ...ಆ ದೃಶ್ಯ ಆತನ ಮನದಲ್ಲಿ ಅಚ್ಚೊತ್ತಿತ್ತು.ಚಿತ್ರಿಸತೊಡಗಿದ...ಚಿತ್ರಿಸುತ್ತಾ ಚಿತ್ರಿಸುತ್ತಾ ಅವಳು ಆತನನ್ನು ಸಂಪೂರ್ಣವಾಗಿ ಆವರಿಸಿಕೊಳ್ಳತೊಡಗಿದಳು.ಅವಳಲ್ಲಿ ಏನೋ ಒಂದು ಅಪರೂಪದ ವಿಭಿನ್ನ ಸೌಂದರ್ಯವಿದೆ...ಬಾಹ್ಯ ಸೌಂದರ್ಯವಿದೆ,ನಿಜ..ಆದರೆ,ಅವಳಿಗಿಂತ ಸುಂದರಿಯರನೇಕರನ್ನು ನಾನು ನೋಡಿದ್ದೇನೆ.ಆದರೆ ಅವರ್ಯಾರನ್ನೂ ಚಿತ್ರಿಸಬೇಕೆಂದು ನನಗನಿಸಿದ್ದೇ ಇಲ್ಲ..ನಾನಂದುಕೊಂಡಿದ್ದೆ ನನ್ನ ಬಾಳ ಸಂಗಾತಿಯನ್ನು ಮಾತ್ರ ಚಿತ್ರಿಸಬೇಕೆಂದು!ಆದರೆ ಇಂದು...!?ಎಲ್ಲರಂತಲ್ಲ ಇವಳು ಅಂತ ಅನಿಸುತ್ತಿದೆಯಲ್ಲಾ!ಆತ್ಯಂತಿಕವಾದ ಸೌಂದರ್ಯವೊಂದಿದೆ ಅವಳಲ್ಲಿ;ಅದು ಆಂಗಿಕ ಸೌಂದರ್ಯಕ್ಕಿಂತ ಸಮುನ್ನತವಾಗಿದೆ!ಅವಳ ತೆಳ್ಳನೆಯ ದೇಹ ನನ್ನನ್ನು ಮೋಹಿಸುತ್ತಿಲ್ಲ..ಆದರೆ,ಅದರೊಳಗಿನ ಗೇಹ ನನ್ನನ್ನು ಪ್ರೀತಿಸುತ್ತಿದೆಯಲ್ಲಾ...ಅಂತರಂಗದೊಳಗಿನ ಸೌಂದರ್ಯವೊಂದು ಪದೇ ಪದೇ ಸೆಳೆಯುತ್ತಲೇ ಇದೆ ನನ್ನನ್ನು!ಯಾರಿರಬಹುದು ಅವಳು..ನೆನಪಿಸಿಕೊಳ್ಳಲು ಪದರಗಳೊಂದೊಂದನ್ನೇ ಸರಿಸಿ ಸರಿಸಿ,ನೆನಪಿನಾಚೆಗೆ ಇಣುಕತೊಡಗುತ್ತಾನೆ..ಸಾವಿರ ಸಾವಿರ ಸಲ ಅವಳನ್ನು ನೋಡಿದ್ದೇನೆ ಎಂದನಿಸುತ್ತಿದೆಯಲ್ಲಾ!..ಆಕೆ ನರ್ತಿಸುತ್ತಿದ್ದ ಕೋಣೆಯಲ್ಲಿ ಅವಳದೇ ಚಿತ್ರವೊಂದಿತ್ತು...ಅದರ ಕೆಳಗೆ ‘ವಿನೀತಾ’ ಎಂಬ ಮೂರಕ್ಷರದ ಹೆಸರೊಂದು ಅಸ್ಪಷ್ಟವಾಗಿ ಕಂಡಿದ್ದು,ಈತನ ನೆನಪಿನ ಸುರುಳಿಯಿಂದ ಈಚೆ ಇಣುಕತೊಡಗಿತು.ಹೌದು,ಅವಳ ಹೆಸರು‘ವಿನೀತಾ’..ಅವಳು ವಿನೀತಾ ಅಷ್ಟೇ ಅಲ್ಲ,ನನ್ನಿಂದ ಪದೇಪದೇ ಸ್ತುತಿಸಲ್ಪಟ್ಟು,‘ವಿನುತಾ’ಕೂಡ ಆಗಿದ್ದಾಳಲ್ಲವೇ?..ಎಂದು ಅಂದುಕೊಳ್ಳುತ್ತಾ,ತುಟಿಗಳ ಮೇಲೆ ಕಿರುನಗೆ ಲಾಸ್ಯವಾಡುತ್ತಿರುವಾಗಲೇ,ಮತ್ತೆ ಬಣ್ಣ ಹಚ್ಚುವುದರಲ್ಲಿ ತಲ್ಲೀನನಾದ..

                                                       ** ** **

           ವಿನೀತಾ ತನ್ನ ಮನೆಯ ಬಾಗಿಲನ್ನು ತೆರೆದು,ದಿನನಿತ್ಯದಂತೆ ಹಜಾರವನ್ನು ಗುಡಿಸತೊಡಗುತ್ತಾಳೆ.ಪೊರಕೆಯಿಂದ ನೆಲವನ್ನು ಸ್ವಚ್ಛಗೊಳಿಸುತ್ತಿರುವಾಗ ಅವಳು ಗುಡಿಸಿದ ಕಸಗಳೆಲ್ಲವೂ ಅಭಿನವ್ ಬಿಟ್ಟುಹೋಗಿದ್ದ ಸ್ಮರಣಿಕೆಯ ಬುಡವನ್ನು ಮುತ್ತಿಕೊಂಡವು.ಹಾಗೇ ಗುಡಿಸುತ್ತಾ ಗುಡಿಸುತ್ತಾ ಪೊರಕೆಯನ್ನು ಆಚೀಚೆ ಆಡಿಸುವಾಗ ಆ ಗಾಳಿಯ ಹೊಯ್ದಾಟಕ್ಕೆ ಕಸಗಳೆಲ್ಲವೂ ಮತ್ತೆ ಸರಿದುನಿಂತವು;ಕೇವಲ ಅವನ ಹೆಸರು ಮಾತ್ರ ಕಾಣಿಸುವಂತೆ!.."ಅಭಿನವ್"....ಹೆಸರನ್ನು ಕಂಡೊಡನೆಯೇ ಏನೋ ಒಂಥರದ ಸಿಹಿತಲ್ಲಣ..ಆಹ್ಲಾದಕ ತಂಗಾಳಿ ಮುದವಾಗಿ ಅವಳ ಮುಖ ಸವರಿಹೋದಂತೆ ಅನಿಸಿತು.ಹೃದಯದಲ್ಲಿ ಅವರ್ಣನೀಯ ಆನಂದ..ನಿಧಾನವಾಗಿ ಆ ಕಸಗಳೆಲ್ಲವನ್ನೂ ಪೂರ್ತಿ ಬದಿಗೆ ಸರಿಸಿ,ಆ ಸ್ಮರಣಿಕೆಯನ್ನು ಎತ್ತಿಕೊಳ್ಳುತ್ತಾಳೆ.ಆ ಹೆಸರಿನ ಮೇಲೆ ಕೈಯಾಡಿಸುತ್ತಾಳೆ...ಅವನ ಹೆಸರು,ವಿಳಾಸ ಎಲ್ಲ ಇರುವ ಒಂದು ಚೀಟಿಯನ್ನು ಆ ಸ್ಮರಣಿಕೆಗೆ ತೂಗಿಬಿಡಲಾಗಿತ್ತು.ಅದನ್ನು ಓದಿಕೊಂಡು,ಆತನನ್ನು ನೋಡಿ ಸ್ಮರಣಿಕೆಯನ್ನು ಆತನಿಗೆ ಕೊಟ್ಟುಬರಲು ಆತನ ಮನೆಯೆಡೆಗೆ ಹೆಜ್ಜೆಹಾಕಿದಳು.ಬೆಳ್ಳಂಬೆಳಿಗ್ಗೆಯೇ ಬಿಳಿಯ ಮೋಡಗಳು ಆಕೆಗೆ ಕೊಡೆಯಂತೆ ಸಾಲುಸಾಲಾಗಿ ಹರಡಿಕೊಂಡಿದ್ದವು...ಮಧುಮೃದುಲ ತಂಗಾಳಿ ಬಳುಕಿ ಬಳುಕಿ ಚಾಮರವ ಬೀಸುತ್ತಿತ್ತು.ಸರಸರನೆ ಆತನ ಮನೆಯತ್ತ ನಡೆದಳು.

                                                        ** ** **

          ಆತನ ಮನೆಯ ಹತ್ತಿರ ಬಂದಾಗ ಮತ್ತೊಮ್ಮೆ ವಿಳಾಸ ನೋಡಿಕೊಂಡಳು.ಹೌದು,ಅದೇ ವಿಳಾಸ..ಚಪ್ಪಲಿ ಕಳಚಿಟ್ಟು,ಬಾಗಿಲ ಹತ್ತಿರ ಬಂದು,ಮನೆಯ ಬಾಗಿಲು ತಟ್ಟಿದಳು.ಒಬ್ಬರು ಸ್ವಲ್ಪ ವಯಸ್ಸಾದವರು ಹೊರಗೆ ಬಂದರು.ಅವಳನ್ನು ನೋಡುತ್ತಿದ್ದಂತೆಯೇ,ಆಘಾತಗೊಂಡವರಂತೆ ಚಡಪಡಿಸಿದರು.ಸರ್..ಕರೆದಳಾಕೆ.ತಕ್ಷಣ ಸಾವರಿಸಿಕೊಂಡು,ಯಾರು,ಯಾರಮ್ಮಾ ನೀನು?ಯಾರ್ ಬೇಕಾಗಿತ್ತು?..ಎಂದು ಪ್ರಶ್ನಿಸಿದರು.ಸರ್,ಅಭಿನವ್..ಇದ್ದಾರಾ?..ಈಗ ಅವರು ಗರಬಡಿದವರಂತೆ ನಿಂತುಬಿಟ್ಟರು.ಯಾರು..ಯಾರು,ಅಭಿನವ್ ಬೇಕಾ?ಏಕೆ?ತೊದಲುತ್ತಾ ಪ್ರಶ್ನಿಸಿದರು ಅಭಿನವ್ ತಂದೆ.ಏನಿಲ್ಲ,ಅವರು ನಮ್ಮನೆ ಹಜಾರದಲ್ಲಿ ಈ ಪ್ರಶಸ್ತಿ ಪದಕ ಮತ್ತು ಸ್ಮರಣಿಕೆಯನ್ನು ಬಿಟ್ಬಂದಿದ್ದಾರೆ.ಅದಿಕ್ಕೇ ಅವ್ರಿಗೆ ಕೊಡೋಣಾಂತ ತಗೊಂಡ್ ಬಂದೆ.ಇದನ್ನು ಅವ್ರಿಗ್ ಕೊಟ್ಬಿಡ್ತೀರಾ?..ಅಂತ ಹೇಳಿ ಪದಕ ಮತ್ತು ಸ್ಮರಣಿಕೆಯನ್ನು ಕೊಟ್ಟಳು.ಈಗ ಅಭಿನವನ ತಂದೆಯವರಿಗೆ ಪ್ರಾಣಹೋಗುವುದೊಂದೇ ಬಾಕಿ!ಉಸಿರನ್ನು ಯಾರೋ ಹಿಸುಕಿ ಹಿಸುಕಿ ಗಹಗಹಿಸಿ ನಕ್ಕು,ಅಟ್ಟಹಾಸ ಮೆರೆಯುತ್ತಿರುವಂತೆ ತೋರಿತು.ಹ್ಞಾ...ಅಭಿನವ್ ಅಲ್ಲೀಗ್ ಬಂದಿದ್ನಾ?..ಯಾ..ಯಾಕೆ..ಯಾಕೆ?...ಪ್ರಶ್ನಿಸಿದರು.ಏನೋ ಗೊತ್ತಿಲ್ಲ,ಅವರು ಬಂದಿದ್ದನ್ನು ನಾನು ನೋಡಿಲ್ಲ ಸರ್..ಆದ್ರೆ ನಮ್ಮನೆ ಹಜಾರದಲ್ಲಿ ಇದು ಇತ್ತು.ಇದರಲ್ಲಿ ತಮ್ಮ ಮನೆಯ ವಿಳಾಸ ನೋಡಿದೆ,ಅದಿಕ್ಕೇ ತೆಗೆದುಕೊಂಡು ಬಂದೆ.ದಯವಿಟ್ಟು ತಗೊಳ್ಳಿ...ಎಂದು ನುಡಿದು,ಅವುಗಳನ್ನು ಅವರ ಕೈಲಿಡಲು ಮುಂದೆ ಬಂದಳು.ಸರಿ ಸರಿ..ಕೊಡು ಕೊಡು,ನಾನ್ ಕೊಡ್ತೀನಿ ಅವನಿಗೆ...ಅಂದರು.ಸರ್...ಅಭಿನವ್ ಅವ್ರಿಲ್ವಾ?..ಅಂತ ಆಕೆ ಕೇಳಿದಳು.ಇ..ಇಲ್ಲ..ಇಲ್ಲ..ಅವ್ನಿಲ್ಲಮ್ಮ..ಅಂತ ಹೇಳಿ ಧಡ್ಡನೆ ಬಾಗಿಲು ಹಾಕಿಕೊಂಡರು.ಅಯ್ಯೋ,ಅಭಿನವ್ ಸಿಗ್ಲೇ ಇಲ್ವಲ್ಲಾ..ಅವರ ಹೆಸರನ್ನು ನೋಡಿದ ಕ್ಷಣದಿಂದ ಒಂದೇ ಸಮನೆ ಅವರನ್ನು ಒಮ್ಮೆ ನೋಡಬೇಕೆಂಬ ಪ್ರಬಲ ಆಕಾಂಕ್ಷೆ..ಅಂತ ಅಲ್ಲೇ ಚಡಪಡಿಸುತ್ತಾ,ಆ ಕಡೆ ಈ ಕಡೆ ನೋಡುತ್ತಾ ನಿಂತುಬಿಟ್ಟಳು.ಆಗ ಮನೆಯೊಳಗೆ ಅಭಿನವನ ಅಮ್ಮ,ಯಾರ್ರೀ ಅದು ಬಂದಿದ್ದು?ಅಂತ ಕೇಳಿದಾಗ,ಅದು..ಅದು...ಆ ವೇಶ್ಯೆ ಬಂದಿದ್ಳು ಕಣೇ..ಅಂದರು ಅಭಿನವ್ ತಂದೆ.ಹ್ಞಾ..!ಏನು?ಅವಳಾ..ಅವಳ್ಯಾಕ್ರೀ ಇಲ್ಲೀಗ್ ಬಂದಿದ್ಲು?ಹೇಳ್ರೀ..ಕೇಳ್ತಾ ಇದ್ದಾಳೆ ಅಭಿನವ್ ಅಮ್ಮ.ಈ ಮಾತುಗಳು ವಿನೀತಾಳ ಕಿವಿಯ ಮೇಲೂ ಬಿದ್ದವು.ಮುಂದೆ ಅವರು ಮಾತನಾಡಿಕೊಂಡಿದ್ದ್ಯಾವುದೂ ಅವಳ ಕಿವಿಗೆ ಬೀಳಲೇ ಇಲ್ಲ.ಅಳುತ್ತಾ ಓಡಿದಳು.ಅವಳ ಚಪ್ಪಲಿ ಮಾತ್ರ ಅಭಿನವ್ ಮನೆಯ ಬಾಗಿಲು ಕಾಯುತ್ತಲೇ ಇತ್ತು.ಅವಳು ಅಭಿಯ ಮನೆಯಿಂದ ಹೊರಬೀಳುತ್ತಿದ್ದಾಗಲೇ ಅವಳಿಗೆ ಭೈರಾಗಿಯೊಬ್ಬ ಎದುರಾದ.ಇವಳು ಆತನನ್ನು ನೋಡಿದೊಡನೆಯೇ,ಯಾವುದೋ ಒಂದು ವಾತ್ಸಲ್ಯದ ಹಸ್ತ ಕೈಚಾಚಿ ಕರೆವಂತೆ ಅನಿಸತೊಡಗಿತು.ಕೆನ್ನೆ ಮೇಲೆ ಜಾರಿಹೋಗುತ್ತಿರುವ ಕಣ್ಣೀರನ್ನು ಒರೆಸಿಕೊಂಡು,ಆತನನ್ನೇ ನೋಡುತ್ತಾ ನಿಧಾನವಾಗಿ ಹೆಜ್ಜೆಹಾಕತೊಡಗಿದಳು.ಅವಳನ್ನು ನೋಡಿದ ಆ ಭೈರಾಗಿಯ ಎದೆಯಲ್ಲಿ ಎಂಥದ್ದೋ ಅವ್ಯಕ್ತ ಅಲೆಗಳ ಭೋರ್ಗರೆತ ಭುಗಿಲೆದ್ದಿತು.ಆದರೆ,ಅದನ್ನು ತನ್ನಲ್ಲೇ ಅಡಗಿಸಿಕೊಳ್ಳಲು ಪ್ರಯತ್ನಿಸುತ್ತಾ ಅಭಿನವ್ ಇದ್ದಲ್ಲಿ ನಡೆದುಬಂದ ಆ ಭೈರಾಗಿ...

                                                                ** ** **

            ಅಭಿನವ್ ಚಿತ್ರ ಬಿಡಿಸುವುದರಲ್ಲಿಯೇ ಮಗ್ನನಾಗಿದ್ದ.ಅವಳ ಚಿತ್ರವನ್ನು ಬಿಡಿಸುತ್ತಾ ಬಿಡಿಸುತ್ತಾ ಅವಳ ಚಿತ್ರ ಪೂರ್ಣವಾಗುವುದರೊಳಗಾಗಿ ಆತ ಅವಳಲ್ಲಿ ಏನೋ ಒಂಥರದ ದಿವ್ಯತ್ತ್ವವನ್ನು ಕಂಡಿದ್ದ.ಆತ ಅವಳನ್ನು ಸಂಪೂರ್ಣವಾಗಿ ಪ್ರೀತಿಸತೊಡಗಿದ್ದ.ಭೈರಾಗಿ ಅಭಿನವನತ್ತ ನಡೆದುಬಂದ.ಭೈರಾಗಿ ಅಭಿನವನ ಹಿಂದೆ ಬಂದು ನಿಂತು,ಚಿತ್ರವನ್ನೇ ಸೂಕ್ಷ್ಮವಾಗಿ ನೋಡುತ್ತಾ,ಕ್ಷಣಕಾಲ ಭ್ರಮೆ ಹಿಡಿದವನಂತೆ ನಿಂತುಬಿಟ್ಟ.ನಂತರ,ಕೊಂಚ ಸುಧಾರಿಸಿಕೊಂಡು...ಈ ಚಿತ್ರದಲ್ಲಿ ಕೇವಲ ಮಾದಕತೆ ತುಂಬಿದೆ...ಅವಳು ನಿಂತ ಆ ಭಂಗಿಯಲ್ಲಿ ಮೋಹದ ಮದವುಕ್ಕಿ ಬರುತ್ತಿರುವಂತೆ ಕಾಣುತ್ತಿದೆ...ಎಂದು ನುಡಿದಾಗ,ಅಭಿನವ್ ಸರ್ರನೆ ಹಿಂದೆ ತಿರುಗಿದ.ಸ್ವಾಮೀಜಿ...ಎನ್ನುತ್ತಾ ಅವರ ಕಾಲಿಗೆರಗಿದ.ಏಳಪ್ಪಾ ಏಳು..ಏನಪ್ಪಾ ಇದು,ನೀನು ಬಿಡಿಸಿರೋ ಈ ಚಿತ್ರದಲ್ಲಿ ಹೆಣ್ತನದ ನಯ ನಾಜೂಕು,ನಾಚಿಕೆಗಳೆಲ್ಲವನ್ನೂ ತ್ಯಜಿಸಿ ನಿಂತು,ಉದ್ರೇಕಕ್ಕೆ ಒಳಗಾಗಿ ಈ ಯುವತಿ ಪ್ರಣಯಕ್ಕೆ ಆಹ್ವಾನಿಸುತ್ತಿರುವಂತೆ ಚಿತ್ರಿಸಿದ್ದೀಯಲ್ಲಾ?ಕಣ್ಣುಗಳನ್ನೇ ಚಿತ್ರಿಸಿಲ್ಲವಲ್ಲಪ್ಪಾ,ಕಣ್ಣುಗಳನ್ನು ಚಿತ್ರಿಸದೆಯೇ ಇಷ್ಟೊಂದು ಮಾದಕವಾಗಿರುವ ಇದು ಕಣ್ಣುಗಳನ್ನು ಚಿತ್ರಿಸಿದ ಮೇಲೆ ಹೇಗೆ ಕಾಣಬಹುದು?ಹೆಣ್ಣನ್ನು ಈ ರೀತಿ ಅಶ್ಲೀಲವಾಗಿ ಚಿತ್ರಿಸುತ್ತಾರೆಯೇ?ಇದು ಧರ್ಮವೇ,ಏನಿದರ ಮರ್ಮ?ಏನಿದು ಕಂದಾ?...ಸ್ವಾಮೀಜಿ ಪ್ರಶ್ನಿಸಿದರು.ಸ್ವಾಮೀಜಿ..ದಯವಿಟ್ಟು ಮನ್ನಿಸಿ..ಸೌಂದರ್ಯವೆನ್ನುವುದು ಆಸ್ವಾದಿಸುವ ಕಣ್ಣುಗಳಲ್ಲಿದೆ ಅಲ್ಲವೇ?ಹಾಗೆ ಯೋಚಿಸಿದಲ್ಲಿ,ಬೇಲೂರಿನ ಶಿಲಾಬಾಲಿಕೆಯನ್ನು ಅಶ್ಲೀಲವಾಗಿ ಕೆತ್ತಿದ್ದಾರೆ ಎನ್ನಲಾದೀತೇ?ಸಿಂಧೂ,ಹರಪ್ಪಾ,ಮೊಹಾಂಜೊದಾರೋ ಇತ್ಯಾದಿ ಇತ್ಯಾದಿ ನಾಗರಿಕತೆಗಳೆಲ್ಲದರಲ್ಲೂ ಈ ತರಹದ ವಿಗ್ರಹಗಳನ್ನೋ ಕಲಾಕೃತಿಗಳನ್ನೋ ನಾವು ಕಾಣುತ್ತೇವೆ.ಇವೆಲ್ಲಕ್ಕೂ ಅಶ್ಲೀಲವೆಂಬ ಪದವನ್ನೇ ಬಳಸಬಹುದೇ?ಆದರೆ,ಸ್ವಾಮೀಜಿ,ಇವೆಲ್ಲವೂ ಅಶ್ಲೀಲಭಾವದಿಂದ ರಚಿಸಲ್ಪಟ್ಟವುಗಳಲ್ಲ.ಈ ಅಶ್ಲೀಲತೆಯನ್ನು ಮೀರಿದ ಆತ್ಯಂತಿಕವಾದ ಸೌಂದರ್ಯವೊಂದಿದೆ.ಅದನ್ನೇ ನಮ್ಮ ಹಿರಿಯರು ಮತ್ತು ಈಗಲೂ ನಾವೂ ಕೂಡ ಆರಾಧಿಸುತ್ತಿರುವುದು.ಈ ಎಲ್ಲ ಬಾಹ್ಯ ಕಟ್ಟಳೆಗಳನ್ನು ಮೀರಿದ ಆ ದಿವ್ಯತ್ತ್ವ ದೇದೀಪ್ಯಮಾನವಾದದ್ದು.ಅದು ತಾನಾಗಿ ಬರುವಂಥದ್ದಲ್ಲ.ಯಾವುದೊ ಒಂದು ಕೈಂಕರ್ಯವನ್ನು ಮನಸ್ಫೂರ್ತಿಯಾಗಿ ಮಾಡಿದಾಗ ಸ್ಫುರಿಸುವಂಥಾದ್ದೇ ಈ ಅಂತರಂಗದ ಬೆಳಕು..ನನಗೆ ಅವಳ ಮೊಗದಲ್ಲಿ ಅಪೂರ್ವ ಆನಂದದ ತೇಜಸ್ಸು ಕಂಡಿತು;ಪರಿಪೂರ್ಣ ಸಂತೃಪ್ತಿಯ ಸಂಕೇತದಂತೆ!..ಆದರೆ ತಮಗೆ ಅವಳಲ್ಲಿನ ಪ್ರಣಯದ ಗುಂಗು ಕಾಡಿತು...ನನಗೆ ಕಂಡಿದ್ದನ್ನೇ ನಾನು ಪರಮಾನಂದದ ಉಚ್ಛಸ್ಥಾನ ಎನ್ನಬೇಕೆನಿಸುತ್ತಿದೆ!ನನ್ನ ಚಿತ್ರ ವ್ಯಕ್ತಿತ್ತ್ವದ ಕನ್ನಡಿಯಾಗಿ ಕೆಲಸ ಮಾಡುತ್ತದೆಂದು ಹೇಳಿಕೊಂಡಿದ್ದೆ..ಹಾಗೇ ಅಂದುಕೊಂಡಿದ್ದೆ.ಆದರೆ..ಆದರೆ,ಸ್ವಾಮೀಜಿ..ಈಗ ಎಲ್ಲವೂ ವ್ಯತಿರಿಕ್ತ ಅನಿಸುತ್ತಿದೆಯಲ್ಲಾ?ಅಶ್ಲೀಲತೆಯ ಚೌಕಟ್ಟು ಮೀರಿದ ಸುಶೀಲ ಆರಾಧನೆಯೇ ಸುಳ್ಳಾಯಿತೇ ಸ್ವಾಮೀಜಿ?ಆತ್ಯಂತಿಕವಾಗಿ ಸೃಜಿಸಿ,ಅಲೆ ಅಲೆಯಾಗಿ ಮೆದುವಾಗಿ ಹೃದಯ ತಾಕುವ ಈ ಅನುಭೂತಿಯನ್ನೇ ಅಲ್ಲವೇ ನಾವು "ಆನಂದ" ಎಂದಿರುವುದು?ಮಧುರ ಮೃದುಲ ನಾದವೆನ್ನಬೇಕಾಗಿತ್ತು ಈ ಅನುಭವದ ಅನುಭಾವವನ್ನು,ಅಲ್ಲವೇ ಸ್ವಾಮೀಜಿ?ಕವಿ,ಚಿತ್ರಕಾರ ಅಥವಾ ಯಾವುದೇ ಒಬ್ಬ ಕಲಾವಿದನಿಗೆ,ಈ ಎಲ್ಲ ಅಶ್ಲೀಲತೆಯ ಪರಿಧಿ ಮೀರಿದ ಭಾವಸಾಗರದ ಕಲಾಕೃತಿಯನ್ನು ರಚಿಸಲು ಸಾಧ್ಯ..ಅದಕ್ಕಾಗಿಯೇ ಅಲ್ಲವೇ,ಒಬ್ಬ ನಿಜವಾದ ಕಲಾವಿದನಿಂದ ರಚಿತವಾದ ಕಲಾಕೃತಿ ರಸಾಭಿವ್ಯಂಜಕವಾಗಿ ಸಾವಿರಾರು ವರುಷಗಳ ಕಾಲ ಶೋಭಿಸುತ್ತದೆ.ಪರಿಪೂರ್ಣವಾಗಿ ಚಿರಾಯುವಾಗುತ್ತದೆ...ಅಲ್ಲವೇ ಸ್ವಾಮೀಜಿ?ಆದರೀಗ ಏನು ಮಾಡಲಿ,ನಾನು ಪರಿಪೂರ್ಣನಲ್ಲ.ವಿರಕ್ತ ಭೋಗಿಯಲ್ಲೂ ಕಾಮದ ವಿನ್ಯಾಸ ಭಾವವರಳಲಿಕ್ಕೆ ಪ್ರಚೋದಿಸುತ್ತಿರುವ ಈ ಚಿತ್ರವನ್ನೇನು ಮಾಡಲಿ,ದಯವಿಟ್ಟು ಹೇಳಿ ಸ್ವಾಮೀಜಿ..ಅಭಿನವ್ ಅಳತೊಡಗಿದನು.ಹ್ಹಹ್ಹಹ್ಹಾ..ಕಂದಾ!..ವಿಚಲಿತನಾಗ್ಬೇಡ..ಸುಮ್ಮನೆ ಬೇಕಂತಲೇ ನಿನ್ನನ್ನು,ನಿನ್ನ ಸತ್ತ್ವವನ್ನು ತಿಳಿದುಕೊಳ್ಳಲೋಸುಗ ಈ ಮಾತುಗಳನ್ನಾಡಿದೆ.ನಿನ್ನ ಮೇಲೆ ನಿನಗೇ ನಂಬಿಕೆ ಇಲ್ಲವಾ?ಇಲ್ಲ ಕಣಪ್ಪಾ,ನಿನ್ನ ಈ ಚಿತ್ರದಲ್ಲಿ ಯಾವುದೋ ಒಂದು ಅಮೂರ್ತವಾದ ದೈವೀಕಳೆ ಉಕ್ಕುತ್ತಾ ಇದೆ.ಕಲೆಗೆ ಕೇವಲ ರೂಪದರ್ಶಿಯಾಗಿ ಅವಳು ಉಳಿದಿಲ್ಲ;ನಿನ್ನ ಮನಸಿನ ಭಾವಕ್ಕೆ ಹಿಡಿದ ಕನ್ನಡಿಯಂತೆ ಅವಳು ತೋರುತ್ತಿದ್ದಾಳೆ.ತುಂಬು ಮನಸ್ಸಿನಿಂದ ಚಿತ್ರಿಸಿದ ಈ ಚಿತ್ರ ನಿನ್ನ ಬಣ್ಣದ ಬದುಕಿನ ಶ್ರೇಷ್ಠ ಚಿತ್ರವಾಗುವುದರಲ್ಲಿ ಸಂದೇಹವೇ ಇಲ್ಲ.ಚಿತ್ರದ ಪ್ರತೀ ರೇಖೆಯಲ್ಲೂ ಅಷ್ಟೊಂದು ಪರಿಪೂರ್ಣತೆಯಿದೆ.ನಿನ್ನ ಬಗೆಗೆ ಆತ್ಯಂತಿಕವಾದ ಆರಾಧನಾ ಭಾವವೊಂದು ಎಲ್ಲರಲ್ಲೂ ಸ್ಫುರಿಸುವಂತೆ ಮಾಡುತ್ತಿದೆ ಈ ಚಿತ್ರ..ನಿಜಕ್ಕೂ ಅಭೂತಪೂರ್ವ ಅಪರೂಪ ಕಣಪ್ಪಾ ಇದು..ಅಷ್ಟೇ ಏಕೆ,ಏನೆಲ್ಲ ರಹಸ್ಯಗಳನ್ನು ಬಿಚ್ಚಿಡುವ ಸಾಹಸಿಯಂತೆ ಕಾಣುತ್ತಿದೆ ನನಗೆ!..ಪ್ರಶಾಂತಚಿತ್ತನಾಗಿ ಆ ಭೈರಾಗಿ ನುಡಿದನು.ಹೌದು,ಸ್ವಾಮೀಜಿ..ನಾನು ಮನಸ್ಫೂರ್ತಿಯಾಗಿ ಈ ಕನ್ಯೆಗೆ ಶರಣಾಗಿಬಿಟ್ಟಿದ್ದೇನೆ..ಕೇವಲ ನಾನಷ್ಟೇ ಅಲ್ಲ,ನನ್ನ ಬಣ್ಣ,ಕುಂಚ,ಕೊನೆಕೊನೆಗೆ ಕಾಗದ ಕೂಡ ಅವಳಲ್ಲಿ ಶರಣಾಗಿದೆ...ಕಾಣದ ಯಾವುದೋ ಬಂಧವೊಂದು ನನ್ನನ್ನು ಅವಳತ್ತ ಸೆಳೆಯುತ್ತಿದೆ.ಇದು ಮನಸ್ಸಿನ ವ್ಯಾಪಾರವೇ ಹೊರತು,ಮೋಹದ ವ್ಯವಹಾರವಲ್ಲ ಸ್ವಾಮೀಜಿ..ಅವಳನ್ನೇ ಸಂಗಾತಿಯಾಗಿ ಸ್ವೀಕರಿಸಬೇಕೆಂಬ ಹಂಬಲ ಕೂಡ ಆಗ್ತಾ ಇದೆ.ನನ್ನ ತಂದೆತಾಯಿಯರಿಗೆ ತಾವೇ ದಯವಿಟ್ಟು ಹೇಳಬೇಕು ಸ್ವಾಮೀಜಿ..ಪ್ರಾರ್ಥಿಸುತ್ತಾನೆ ಅಭಿನವ್.ಮಗೂ,ನಿಜ ಕಣಪ್ಪಾ.. ಮನವೆಂಬ ಮಾಯಾವಿ ಬಯಸಿಬಿಡುತ್ತದೆ ಏನನ್ನೋ ಒಂದು ಕ್ಷಣದಲ್ಲಿ!ಅದೆಷ್ಟು ಪ್ರಬಲವೆಂದರೆ ನಮ್ಮ ಬದುಕಿನ ಗತಿಯನ್ನೇ ಬದಲಿಸಿಬಿಡುವಂತೆ;ನಮ್ಮ ಬದುಕಿನ ಸ್ಥಿತಿಯನ್ನೇ ಬದಲಿಸಿಬಿಡುವಂತೆ!ನಮ್ಮತನವೇ ಬಿಕರಿಯಾಗಿ,ಕನಸುಗಳೆಲ್ಲವೂ ಭಿಕಾರಿಯಾಗುವಂತೆ ಮಾಡಿಬಿಡುತ್ತದೆ ಈ ಚಂಚಲೆ!..ನಿನ್ನ ತಂದೆತಾಯಿಯರನ್ನು ಕರೆಯಪ್ಪಾ,ಒಪ್ಪಿಸುತ್ತೇನೆ ಅವರನ್ನು!ಸಂಸಾರದಿಂದ ದೂರ ಸರಿದರೂ ನಿಮ್ಮನ್ನು ಸಂಸಾರಿಗಳನ್ನಾಗಿ ಮಾಡುವ ಸೋಗು ಹಾಕಬೇಕಿದೆಯೀಗ!..ಎಂದು ಏನನ್ನೋ ನೆನಪಿಸಿಕೊಳ್ಳುವವರಂತೆ ನುಡಿದರು.ಅಭಿನವ್ ಅತೀ ಉತ್ಸಾಹದಿಂದ ಮನೆಯತ್ತ ಓಡಿದ.ಅಷ್ಟರಲ್ಲಾಗಲೇ ಅಭಿನವ್ ಮಾತಾಡುತ್ತಾ,ಮಾತಾಡುತ್ತಲೇ ಅವಳ ಚಿತ್ರವನ್ನು ಪೂರ್ತಿಗೊಳಿಸಿಬಿಟ್ಟಿದ್ದ...

                                                              ** ** **

            ಅಭಿನವನ ತಂದೆತಾಯಿ ಅವನ ಜೊತೆ ಬಂದು,ಸ್ವಾಮೀಜಿಗಳಿಗೆ ವಂದಿಸಿ ನಿಂತರು.ಅಯ್ಯ..ಏನೋ ಬರಹೇಳಿದಿರಂತೆ..ಎಂದು ಹೇಳಿ,ಏಕೆ ಎನ್ನುವಂತೆ ನೋಡಿದರು.ಆಗ ಆ ಭೈರಾಗಿಯು,ನೋಡಿ..ನಿಮ್ಮ ಮಗ ನನ್ನನ್ನು ನಿಮ್ಮ ಕುಟುಂಬದ ವಿಷಯದಲ್ಲಿ ಮಧ್ಯ ಪ್ರವೇಶಿಸುವಂತೆ ಮಾಡುತ್ತಿದ್ದಾನೆ.ಬೇಸರಿಸಿಕೊಳ್ಳಬೇಡಿ..ನೇರವಾಗಿ ವಿಷಯವನ್ನು ತಿಳಿಸಿಬಿಡುತ್ತೇನೆ.ಈ ಚಿತ್ರವನ್ನು ನೋಡಿ...ಎಂದು ಅಭಿನವ್ ಬಿಡಿಸಿದ್ದ ಚಿತ್ರವನ್ನು ತೋರಿಸಿದನು.ಆ ಚಿತ್ರವನ್ನು ನೋಡುತ್ತಿದ್ದಂತೆಯೇ ಅಭಿನವ್ ತಂದೆತಾಯಿ ಹೃದಯ ಸ್ತಂಭಿಸಿದಂತೆ ನಿಂತುಬಿಟ್ಟರು.ಅಭಿನವ್ ತಂದೆ,ಅಯ್ಯ..ಏನಿದು?ಅಭಿನವ್ ಏನೋ ಇದು?ಇ..ಇವಳು..ಇವಳು..ತಡಬಡಿಸುತ್ತಿದ್ದಾರೆ.ಪಪ್ಪಾ, ಇವಳು ಯಾರೂಂತ ಗೊತ್ತಿಲ್ಲಪ್ಪಾ,ಆದರೆ,ಆದರೆ..ನನ್ನ ಮಿಡಿತದ ಪ್ರತೀ ಸದ್ದಿನಲ್ಲೂ ಈಗ ಅವಳ ಸುದ್ದಿಯಿದೆ ಎಂದನಿಸುತ್ತಿದೆ...ತಲೆತಗ್ಗಿಸಿ ನುಡಿಯುತ್ತಾನೆ.ಏ..ಏ..ಏನೋ...ಎನ್ನುತ್ತಾ,ಅವನ ಕೆನ್ನೆಗೆ ಬಾರಿಸಲು ಮುಂದೆ ಬರುತ್ತಾರೆ ಅಭಿನವ್ ತಂದೆ.ಆಗ ಆ ಭೈರಾಗಿ ಅವರನ್ನು ಹಿಡಿದು ನಿಲ್ಲಿಸುತ್ತಾನೆ.ನಿಲ್ಲಿ,ನಿಲ್ಲಿ ರಾಯರೇ...ಏನು ಮಾಡ್ತಾ ಇದ್ದೀರಿ?ಅವನು ನಿಮ್ಮ ಮಗ..ಹಿಂದೆ ಮುಂದೆ ಯೋಚಿಸದೇ,ಹೀಗೆ ಕೋಪದ ಕೈಗೆ ಬುದ್ಧಿಯನ್ನು ಕೊಡುವುದೆಷ್ಟು ಸರಿ,ರಾಯರೇ?...ಅವನು ಹೇಳುವಷ್ಟರಲ್ಲೇ,ಅವನ ಮಾತುಗಳನ್ನು ತುಂಡರಿಸಿಬಿಟ್ಟಿರಲ್ಲಾ,ಅವನು ಹೇಳುವುದನ್ನೊಮ್ಮೆ ಸಂಪೂರ್ಣವಾಗಿ ತಾಳ್ಮೆಯಿಂದ ಕೇಳಿ ರಾಯರೇ,ನೀನ್ ಹೇಳಪ್ಪಾ ಕಂದಾ..ಎಂದು ಅಭಿನವನತ್ತ ನೋಡಿದನು.ಪಪ್ಪಾ,ಪಪ್ಪಾ..ನನಗೇ ಗೊತ್ತಿಲ್ಲದಂತೆ ನಾನವಳನ್ನು ತುಂಬಾ ಪ್ರೀತಿಸುತ್ತಿರುವಂತೆ,ಮನಸಿನ ತುಂಬಾ ಅವಳ ಗೆಜ್ಜೆಯ ನಾದ ತುಂಬುತ್ತಿರುವಂತೆ,ನನಗೂ ಅವಳಿಗೂ ಎಷ್ಟೋ ವರುಷಗಳ ಬಾಂಧವ್ಯವಿರುವಂತೆ ಅನ್ನಿಸ್ತಾ ಇದೆ,ಪಪ್ಪಾ,ನಾನೇನ್ ಮಾಡ್ಲಿ?..ಅಭಿನವ್ ಮುಗ್ಧನಾಗಿ ನುಡಿಯುತ್ತಾನೆ.ಏ..ಏ..ಅಭಿ..ಅವ್ಳು..ಅವಳ್ಳ್ಯಾರು ಗೊತ್ತೇನೋ ನಿಂಗೆ?ಗೊತ್ತೇನೋ?..ಅವ್ಳು..ಅವ್ಳು..ವೇಶ್ಯೆ ಕಣೋ..!ಅಂಥವಳನ್ನು ನೀನು..ಛೀ..ಮೂರು ಕಾಸು ಸಂಪಾದಿಸುವ ಯೋಗ್ಯತೆ ಇಲ್ಲದ ನಿನಗೆ ಪ್ರೇಮ..ಥೂ..ಎನ್ನುತ್ತಾ ಅಳತೊಡಗಿದರು ಅಭಿನವ್ ತಂದೆ.ರಾಯರೇ ಸಮಾಧಾನಿಸಿಕೊಳ್ಳಿ,ಸಮಾಧಾನಿಸಿಕೊಳ್ಳಿ..ಅಷ್ಟೊಂದು ಭಾವತೀವ್ರತೆಗೆ ಒಳಗಾಗಬೇಡಿ..ಸೈರಿಸಿಕೊಳ್ಳಿ..ಅವಳು ವೇಶ್ಯೆಯೆಂದು ನೀವು ಹೇಗೆ ಹೇಳುತ್ತೀರಿ,ನಿಮಗೆ ಹೇಗೆ ಗೊತ್ತು?ನಾನೀಗ ಭೈರಾಗಿ ಎನ್ನುವುದಕ್ಕಿಂತ,ಒಬ್ಬ ಮನುಷ್ಯನಾಗಿ ಈ ಮಾತುಗಳನ್ನು ಹೇಳಲಿಕ್ಕೆ ಇಚ್ಛಿಸುತ್ತೇನೆ.ನೀವ್ಯಾರಾದರೂ ಆಕೆ ಅನೈತಿಕವಾದವಳೆಂಬುದನ್ನು ಕಣ್ಣಾರೆ ಕಂಡು ಅವಲೋಕಿಸಿದ್ದೀರಾ,ಇಲ್ಲ ಅಲ್ಲವೇ?ಎಲ್ಲರೂ ಅಂದಂತೆಯೇ ನೀವೂ ಅಂದುಬಿಟ್ಟಿರಿ ಅಲ್ಲವೇ?ಸತ್ಯದ ಪರಿಶೋಧನೆ ಆಗಿದೆಯೇ?..ಪ್ರಶ್ನಿಸುತ್ತಾನೆ ಆ ಭೈರಾಗಿ.ಆಗ ಅಭಿನವ್ ತಂದೆ,ಏನ್ ಏನ್ ಹೇಳ್ತಿದ್ದೀರಾ ತಾವು?..ಅಂಗೈ ಹುಣ್ಣಿಗೆ ಕನ್ನಡಿ ಬೇರೆ ಬೇಕಾ?ಅಯ್ಯ..ಊರಿಗೆ ಊರೇ ಅವಳ ತಾಯಿಯ ಗುಣಗಾನ ಮಾಡುತ್ತದೆ.ಅವಳ ತಾಯಿ ವೇಶ್ಯೆಯೆಂದ ಮೇಲೆ ಅವಳೂ ಅದರಿಂದ ಹೊರತಾಗಿರುತ್ತಾಳೆಯೇ?ಇದಕ್ಕಿಂತ ಹೆಚ್ಚಿನ ಸಾಕ್ಷಿಯೇನು ಬೇಕು?ಮತ್ತೆಲ್ಲಿಯ ಸತ್ಯಶೋಧನೆ ಸ್ವಾಮೀಜಿ?ನಿಮಗೇನು ಗೊತ್ತು ಅವಳ ಬಗ್ಗೆ?..ಖಾರವಾಗಿಯೇ ಪ್ರಶ್ನಿಸುತ್ತಾರೆ.ಅಸಹನೆ ಎದ್ದು ಕಾಣುತ್ತಿತ್ತು.ಆಗ ಆ ಭೈರಾಗಿ ಖೇದದಿಂದ ನುಡಿಯುತ್ತಾನೆ.ರಾಯರೇ,ಇದೆ..ಯಾರಿಗೂ ತಿಳಿಯದ ಸತ್ಯ ಒಂದಿದೆ.ನಿಮ್ಮೆಲ್ಲರ ನಂಬಿಕೆಗಳನ್ನು ಅಲ್ಲಾಡಿಸುವ ಸತ್ಯವೊಂದಿದೆ.ಭೂತಲೋಕದೊಳಗೆ ಹೂತುಹೋಗಿದ್ದ ಸತ್ಯದ ಅಸ್ಥಿಪಂಜರಕ್ಕೆ ಮತ್ತೆ ರಕ್ತಮಜ್ಜೆಗಳನ್ನು ತುಂಬಿಕೊಡುವ ಪ್ರಯತ್ನ ಈಗ ಶುರುವಾದಂತೆ ಕಾಣುತ್ತಿದೆ...ಹೇಳಿಬಿಡುತ್ತೇನೆ..ನನ್ನೊಳಗೆ ಇಪ್ಪತ್ತು ವರ್ಷಗಳಿಂದ ಮಡುಗಟ್ಟಿಕೊಂಡಿದ್ದ ರಹಸ್ಯವೊಂದು ಇಂದು ರಹದಾರಿಯ ಬದಿಯ ಹಾಸಾಗಿ ಹೋಗಲಿ..ಎಂದು ಒಂದೇ ಸಮನೆ ನುಡಿದು,ಎರಡು ಕ್ಷಣ ಕಣ್ಮುಚ್ಚಿ ಕಣ್ತೆರೆದನು.ಎಲ್ಲರಿಗೂ ದಿಗ್ಭ್ರಮೆ!ಏನಿದು,ಈ ಸ್ವಾಮೀಜಿ ಏನು ಹೇಳುತ್ತಿದ್ದಾರೆಂದೇ ಅರ್ಥವಾಗುತ್ತಿಲ್ಲವಲ್ಲಾ ಎಂದು ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಾ,ಯೋಚಿಸುತ್ತಾ ನಿಂತಿದ್ದಾರೆ.ಆ ಭೈರಾಗಿಯೇ ಮುಂದುವರೆದು ಹೇಳಿದನು..ನೀವಂದುಕೊಂಡಂತೆ ಆಕೆ ವೇಶ್ಯೆಯಲ್ಲ,ಅವಳ ತಾಯಿಯೂ ವೇಶ್ಯೆಯಲ್ಲ!ಸಮಾಜದ ದೃಷ್ಟಿಯಲ್ಲಿ ಅವಳ ತಾಯಿ,ಅನೈತಿಕ ಹೆಣ್ಣೆಂಬಂತೆ ಬಿಂಬಿಸಲ್ಪಟ್ಟಳು.ಆದರೆ ,ಅವಳು ಅಪರಂಜಿಯಂಥವಳು..ಒಬ್ಬ ವ್ಯಕ್ತಿಯ ಪ್ರೀತಿಗಾಗಿ ತನ್ನ ಇಡೀ ಜೀವನವನ್ನೇ ಧಾರೆಯೆರೆದವಳು..ಯಾವ ಸಮಾಜ ಹೆಣ್ಣನ್ನು ತಾಯಿಯೆಂದು ಪೂಜಿಸುತ್ತಿತ್ತೋ,ಅದೇ ಸಮಾಜ ಅವಳಿಗೆ ಹೀಗೇ ಹೀಗೇ ವೇಶ್ಯೆಯೆಂಬ ಪಟ್ಟ ಕಟ್ಟಿತು.ಆದರೆ ಅವಳೆಂದೆಂದಿಗೂ ಆ ವ್ಯಕ್ತಿಯ ಪ್ರೀತಿಗೆ ಮೋಸ ಮಾಡಲೇ ಇಲ್ಲ.ತನ್ನ ಇಡೀ ಜೀವನವನ್ನು ಕೇವಲ ಆತನ ನೆನಪಿನಲ್ಲಿಯೇ ಕಳೆದಳು.ಹೇಳುತ್ತಾರೆ ಎಲ್ಲರೂ..ನೆನಪುಗಳೇ ಮಧುರ ಮಧುರವೆಂದು..ನಿಜ,ಒಂಥರಾ ಮಧುರವೇ ಆಗಿರಬಹುದು..ಆದರೆ..ಅದೇ ನೆನಪುಗಳು ಒಂದು ಹೆಣ್ಣಿಗೆ ವೇಶ್ಯೆಯೆಂಬ ಪಟ್ಟ ಕಟ್ಟಿತೆಂದರೆ ನೀವು ನಂಬ್ತೀರಾ?ನಿಜ,ಆಕೆ ಆತನ ಜೊತೆ ಕಳೆದ ಕ್ಷಣಗಳ ನೆನಪುಗಳ ಮಹಲು ಕಟ್ಟಿಕೊಂಡು,ಅದರಲ್ಲಿಯೇ ಜೀವಿಸಿದಳು.ಒಬ್ಬ ಹೆಣ್ಣಾಗಿ ತನ್ನ ಸರ್ವಸ್ವವೆಲ್ಲವನ್ನೂ ಆತನಿಗೊಬ್ಬನಿಗೇ ಅರ್ಪಿಸಿದರೂ,ವೇಶ್ಯೆಯೆಂಬ ಆಪಾದನೆ ಅವಳನ್ನು ತಟ್ಟದೇ ಇರಲಿಲ್ಲ.ಆದರೆ ಇದ್ಯಾವುದಕ್ಕೂ ಅಂಜದ ಆಕೆ ಒಬ್ಬ ಮಾದರಿ ಪ್ರೇಯಸಿಯಾಗಿ,ತಾಯಿಯಾಗಿ,ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ನೈತಿಕ ಹೆಣ್ಣಾಗಿ ಬದುಕಿದಳು.ಪ್ರಕೃತಿಯ ಪ್ರತೀ ಅಂಶದಲ್ಲೂ ಹೆಣ್ತನವಿದೆ.ಪುರುಷನೂ ಕೂಡ ಇದರಿಂದ ಹೊರತಾಗಿಲ್ಲ;ಹೆಣ್ಣೇ ಪ್ರಕೃತಿ,ಪ್ರಕೃತಿಯೇ ಹೆಣ್ಣು..ಅವಳು ಒಂಟಿಯೆಂದು ತಿಳಿದ ಕಾಮುಕರು ಅವಳನ್ನು ಬಯಸಿಬಂದಾಗ,ಆಕೆ ಎಲ್ಲವನ್ನೂ ನಿರಾಕರಿಸಿ,ಪ್ರೀತಿಗಿಂತ ಔನ್ನತ್ಯವಾದುದ್ಯಾವುದೂ ಇಲ್ಲವೆಂದು ಸಾರಿ ಸಾರಿ ಹೇಳಿದಾಗ,ಅವಕಾಶವಾದಿಗಳ  ಕುತಂತ್ರದಿಂದ ಅವಳಿಗೆ ದೊರಕಿದ್ದು ಈ ಸಮಾಜದಲ್ಲಿ ವೇಶ್ಯೆಯೆಂಬ ಪಟ್ಟ.ಆದರೂ ಬದುಕಿದಳು.ಎದೆತಟ್ಟಿ ನಿಂತು,ಒಂಟಿ ಹೆಣ್ಣಾಗಿಯೂ,ಸಮಾಜದಲ್ಲಿ ತನ್ನ ಶೀಲವನ್ನು ಕಾಪಾಡಿಕೊಂಡು,ಅದು ತನ್ನ ಪ್ರೇಮಿಗೆ ಮಾತ್ರ ಸೀಮಿತ ಎಂಬಂತೆ ಬದುಕಿದಳಲ್ಲಾ,ಆಕೆಯ ಪ್ರೀತಿಗೇನು ಹೇಳಲಿ?ಅವಳ ಪ್ರಿಯಕರ ಅವಳನ್ನು ಮದುವೆಯಾಗುವುದರಲ್ಲಿದ್ದ.ಆಕೆಯನ್ನು ತನ್ನ ಸಂಗಾತಿಯೆಂದು ಮನಸ್ಫೂರ್ತಿ ಒಪ್ಪಿಕೊಂಡಿದ್ದ.ಆದರೆ ಕಾಲನ ಕ್ರೂರ ಆಘಾತಕ್ಕೆ ಸಿಲುಕಿ,ಅವಳಿಂದ ಆತ ದೂರವಾದ.ಮಧುರ ಬಂಧ ಬಲವಂತದಿಂದ ಹರಿಯಲ್ಪಟ್ಟಿತು..ಅವರ ಮದುವೆಯನ್ನು ಮನೆಯವರು ವಿರೋಧಿಸಿದರು.ಕಾರಣ ಜಾತಿ!ಆದರೆ,ಅಷ್ಟರೊಳಗಾಗಲೇ,ಆಕೆ ದೈಹಿಕವಾಗಿಯೂ,ಮಾನಸಿಕವಾಗಿಯೂ ಎಲ್ಲವನ್ನೂ ಆತನೊಂದಿಗೆ ಹಂಚಿಕೊಂಡುಬಿಟ್ಟಿದ್ದಳು.ಮದುವೆ ಆಗಲು ಸಾಧ್ಯವಿಲ್ಲ ಎಂದು ಗೊತ್ತಾಗುವುದರೊಳಗಾಗಿ,ಅವಳ ಬಸಿರಿನಲ್ಲಿ ಮಗು ಬೆಳೆಯುತ್ತಿತ್ತು...ಈ ಇಬ್ಬರು ಗಂಡುಹೆಣ್ಣಿನ ಸಂಭ್ರಮದ ಮಿಲನಕೂಟ ಪರ್ವದ ಪರಮ ಔನ್ನತ್ಯ ಶಿಖರದ ತುದಿಯಲ್ಲಿ,ಪರಮೋನ್ನತ ಸ್ಥಿತಿಯಲ್ಲಿ ಕಾಮ,ಕ್ರೋಧ,ಲೋಭ,ಮೋಹ,ಮದ,ಮಾತ್ಸರ್ಯಗಳು ದಹಿಸಿ,ನೀರೂ ಕೂಡ ಸುಟ್ಟು ನಿಷ್ಕಲ್ಮಶವಾಗುವ ಪರಿಪೂರ್ಣ ಸಮ್ಮಿಲನದ ಗತಿಯ ವೇಳೆಯಲ್ಲಿ ರಕ್ತದ ಸಾಕ್ಷಿಯಾಗಿ ಹುಟ್ಟಿದ ಮಗುವಿಗೂ ವೇಶ್ಯೆ ಅನ್ನೋ ಪಟ್ಟ!..ಚೆನ್ನಾಗಿದೆ ರಾಯರೇ,ಈ ಸಮಾಜದ ಬಹಿರ್ಮುಖಿ ಚಿಂತನೆ!..ಅಂತರಂಗದ ಬಸುಕಿಗೆ ಬೆಲೆಯೇ ಇಲ್ಲವಾ?ಮನೆಯಲ್ಲಿ ಬೇರೆ ಮದುವೆಗೆ ಸಿದ್ಧತೆ ನಡೆಯುತ್ತಿದೆ ಎಂದು ತಿಳಿದ ಆಕೆಯ ಪ್ರೇಮಿ ಅವಳ ಹತ್ತಿರ,ಬಾ ಓಡಿಹೋಗಿ,ಮದುವೆಯಾಗಿ,ಬೇರೆಡೆ ಜೀವಿಸೋಣ ಎಂದಾಗ,ಆಕೆ ಸಮ್ಮತಿಸಲೇ ಇಲ್ಲ...ಹಿರಿಯರೆಲ್ಲರ ಆಶೀರ್ವಾದ ಪಡೆದೇ,ಅವರ ಸಮ್ಮುಖದಲ್ಲೇ ಮದುವೆಯಾದರೆ ಮಾತ್ರ ಮದುವೆ;ಇಲ್ಲದಿದ್ದಲ್ಲಿ ಮದುವೆಯೇ ಬೇಡ..ಇದು ಅವಳ ದಿಟ್ಟ ಉತ್ತರವಾಗಿತ್ತು.ಪರಿಪರಿಯಾಗಿ ಆತ ಬೇಡಿಕೊಂಡ.ಗೋಗರೆದ..ಸಮಾಜದ ದೃಷ್ಟಿಯಲ್ಲಿ ಹೆಣ್ಣೊಬ್ಬಳು ಅನುಭವಿಸಬೇಕಾದ ಕಷ್ಟಗಳ ಬಗೆಗೆ ತಿಳಿಸಿ ತಿಳಿಸಿ ಹೇಳಿದ.ಆದರೆ ಆಕೆ ಎಲ್ಲವುದಕ್ಕೂ ಸಿದ್ಧವಾದಂತೆ ದಿಟ್ಟತನದ ನಿಲುವು ಹೊಂದಿದ್ದಳು.ಆತ ಅವಳ ಪ್ರೀತಿಗೆ ಮೋಸ ಮಾಡಲಿಲ್ಲ...ಅವಳೂ ಆತನಿಗೆ ಮೋಸ ಮಾಡಲಿಲ್ಲ...ಆದರೆ,ಪರಿಸ್ಥಿತಿ ಅವರನ್ನು ದೂರ ಮಾಡಿಬಿಟ್ಟಿತು.ಹುಚ್ಚು ಹರೆಯ,ಬದುಕಿನ ಮಗ್ಗುಲನ್ನು ಬದಲಿಸಿತು.ಅವಳು ಗರ್ಭದಲ್ಲಿ ಆತನ ವಂಶದ ಕುಡಿಯನ್ನು ಹೊತ್ತಳು;ಹೆಣ್ಣಿನ ಜೀವನದ ಸಾರ್ಥಕ್ಯ ಅಡಗಿರುವುದೇ ತಾಯ್ತನದಲ್ಲಿ ಎನ್ನುವುದು ಅವಳ ಬದುಕಿನ ಪ್ರಬಲ ನಂಬಿಕೆ...ಇತ್ತ,ಈತ ತನ್ನೊಲವಿನ ಸಖಿ ತನಗೆ ಸಿಗುವುದಿಲ್ಲವೆಂದು,ವೈರಾಗ್ಯದತ್ತ ಹೊರಳಿದ.ಎಲ್ಲವನ್ನೂ ತ್ಯಜಿಸಿ ನಿಂತು,ಇಪ್ಪತ್ತು ವರ್ಷಗಳಿಂದ ಭೈರಾಗಿಯಾಗಿ,ಈಗ ನಿಮ್ಮ ಮುಂದೆ ನಿಂತಿದ್ದಾನೆ...!ಹ್ಞಾ..ಹ್ಞಾ...ಅಯ್ಯ..ಏನ್ ಹೇಳ್ತಾ ಇದ್ದೀರಿ...ಅಂದ್ರೆ?..ಹೌದು,ಅವಳನ್ನು ಪ್ರೀತಿಸಿದ ವ್ಯಕ್ತಿ ಮತ್ತ್ಯಾರೋ ಅಲ್ಲ,ಅದು ನಾನೇ..ಆ ಹುಡುಗಿ ಇನ್ನ್ಯಾರೋ ಅಲ್ಲ..ನನ್ನದೇ ರಕ್ತದ ಅಂಶ..ಅವಳು ನನ್ನ ಮಗಳು‘ವಿನೀತಾ’...ಪವಿತ್ರ ಪ್ರೀತಿಯ ಉತ್ತುಂಗದಲ್ಲಿ ಸೃಜಿಸಿದವಳು;ಪರಮ ಪವಿತ್ರಳು..ನಾನು ಭೈರಾಗಿಯಾದರೂ,ಯಾವುದೋ ಒಂದು ಕಾಣದ ವಾತ್ಸಲ್ಯ,ನನಗೆ ಅವಳ ಮೇಲೆ ಇನ್ನೂ ಹಾಗೆಯೇ ಇದೆ.ಬದುಕಿನೆಲ್ಲ ಮೌಲ್ಯಕ್ಕಿಂತ ಕಾಣದ್ದೊಂದು ಪ್ರೀತಿಯಿದೆಯಲ್ಲ,ಅದು ಅನಂತವಾದದ್ದು...ಕರುಳಬಂಧ ಹೊಕ್ಕಳ ಬಳ್ಳಿಯಂತಲ್ಲ!ಅದು ಚಿರಂತನ..ಈಗ ಹೇಳಿ,ಆಕೆ ವೇಶ್ಯೆಯ ಒಡಲ ವಲ್ಲಿಯೇ?..ಎಂದು ಹೇಳುತ್ತಿರುವಾಗ,ಇಪ್ಪತ್ತು ವರ್ಷಗಳಿಂದ ಕಲ್ಲಾಗಿದ್ದ ಹೃದಯ ಸರಸರನೆ ಕರಗಿ ಕಣ್ಣೀರಾಯಿತು!..ಎಲ್ಲರೂ ಸ್ತಂಭಿತರಾಗಿದ್ದಾರೆ.ಒಬ್ಬರಲ್ಲೂ ನಾಲಿಗೆ ಹೊರಳುತ್ತಿಲ್ಲ.ಗುಡುಗು ಮಿಂಚು ಕಾರ್ಮೋಡಗಳಿಂದ ಆರ್ಭಟಿಸಿದ ಮಳೆ ನಿಂತುಹೋದಂತೆಯೇ!ತಪ್ತವಾಯಿತು ಎಲ್ಲರ ಹೃದಯ,ಬದುಕಿನ ಮರ್ಮಗಳ ಸೆರೆಮನೆಯಲ್ಲಿ ಖೈದಿಯಾಗಿ,ಆ ಭೈರಾಗಿ ಪರದಾಡಿದ ಪರಿಯ ನೆನೆದು!ಪ್ರೀತಿ,ಎಂತಹ ತ್ಯಾಗಕ್ಕೂ ಸಿದ್ಧವಾಗಿಬಿಡುತ್ತದಲ್ಲವಾ,ಇದೆಂಥಹಾ ಪರಿ?ಬಿರಿಬಿರಿವ ಮಲ್ಲಿಗೆಯ ಮೊಗ್ಗು ಹಿಗ್ಗಿಹಿಗ್ಗಿ ಸುಗ್ಗಿಯಾದಂತಷ್ಟೇ ಬದುಕಲ್ಲ...ಕ್ಷಣಕಳೆದು,ಒಣಗೊಣಗಿ ಮುದುಡಿಹೋಗುವ ಎಸಳುಗಳ ಸಂತೆಯೂ ಹೌದು!ಭ್ರಮೆಗಳೆಲ್ಲವನ್ನೂ ಸಾಲಿನಲ್ಲಿಟ್ಟು ಸಂಭ್ರಮಿಸುವಾಗ ಮರೀಚಿಕೆಯ ನೆನಪೇ ಆಗುವುದಿಲ್ಲವಾ?ಕಳೆದುಳಿವ ಸೊಗಡೇ ಬದುಕಿನ ಬೆಡಗೇ? ಬಾಡಿಗೆಗೆ ಬಿಕರಿಯಾಗುವ ಕನಸುಗಳನ್ನು ಕತ್ತಲಲ್ಲಿಟ್ಟು,ಬಟ್ಟೆ ಬಿಚ್ಚಿ,ಹುಚ್ಚು ಹುಚ್ಚಾಗಿ ನಗುವ ಸಮಾಜದ ಸೊಕ್ಕಿಗೇನೆನ್ನಬೇಕು?ಬದಲಾವಣೆಯ ಬದುಕಿನಲ್ಲಿ ಬಗೆಬಗೆಯ ಮುಖವಾಡ ತೊಟ್ಟು,ಅದರಲ್ಲೇ ಎಲ್ಲವನ್ನು ಅಡಗಿಸಿಕೊಳ್ಳುವ ಮನುಷ್ಯರೆಲ್ಲರೂ,ಮುಖವಾಡ ಕಳಚಿಟ್ಟರೆ,ಕೇವಲ ರಕ್ತ,ಮಾಂಸ,ಅಸ್ಥಿಯ ಭಿತ್ತಿಯಂತೇ ಅಲ್ಲವೇ?ಮೇಲಿಲ್ಲ,ಕೀಳಿಲ್ಲ;ಒಂದೆಲ್ಲವೂ,ಒಂದೆಲ್ಲರೂ!!ಅಭಿನವ್ ಯೋಚಿಸುತ್ತಿದ್ದಾನೆ.ತಕ್ಷಣ ಆತನಿಗೆ ಏನೋ ಅನಿಸಿತು...ಆ ಭೈರಾಗಿಯ ಪಾದಕ್ಕೆರಗಿ,ಎಲ್ಲರ ಮೌನವನ್ನು ಮುರಿದನು.ಸ್ವಾಮೀಜಿ..ತಾವು ನನಗೆ ಮಹಾತ್ಮರಂತೆ ಗೋಚರಿಸುತ್ತಿದ್ದೀರಿ..ಎಲ್ಲರ ಬದುಕಿನ ಮನೆಯಲ್ಲೂ ಕಗ್ಗತ್ತಲೆಯ ಪಡಸಾಲೆಯೊಂದಿದೆ,ಬದಲಾವಣೆಯ ಹಣತೆ ಹಿಡಿದಾಗ,ಬೆಳಕಿನೆಡೆಗೆ ಮುಖ ತಿರುಗಿಸಿ ಹೆಜ್ಜೆ ಹಾಕಬೇಕು ಎಂಬುದಕ್ಕೆ ತಮ್ಮ ಬದುಕು ಒಂದು ನಿದರ್ಶನ..ಹರಸಿರಿ..ವಿನೀತಾ ಇನ್ನು ಎಂದೆಂದೂ ನನ್ನವಳು...ಎಂದು ಅಭಿನವ್ ಹೇಳಿದನು.ಅಭಿನವನ ತಂದೆತಾಯಿ ಆ ಭೈರಾಗಿಯ ಕಾಲಿಗೆರಗಿದರು.ಮೇಲ್ನೋಟಕ್ಕೆ ಅನೈತಿಕವೆಂಬಂತೆ ಕಂಡುಬಂದರೂ,ಅದರಾಳದಲ್ಲಿನ ಅಪ್ರತಿಮ ಪ್ರೀತಿಯ ಅನಂತತೆಯ ಇದಿರು,ಅವಳ ಈ ಬದುಕು,ಕಲ್ಲು ಅಹಲ್ಯೆ ರಾಮನ ಪಾದಸ್ಪರ್ಶದಿಂದ ಜೀವ ತಳೆದುಬಂದು ಪವಿತ್ರವಾದಂತೆ ಅನಿಸತೊಡಗಿತು!ಅಭಿನವನ ತಂದೆ,ಅಯ್ಯ...ದಯವಿಟ್ಟು ಕ್ಷಮಿಸಿಬಿಡಿ..ಎಂದು ಕಣ್ಣಂಚಿನಲ್ಲಿ ನೀರು ತುಂಬಿಕೊಂಡರು.ಆ ಭೈರಾಗಿ ಅಭಿನವನ ಹತ್ತಿರ,ಕಂದಾ..ಈ ಚಿತ್ರ ಅತ್ಯಂತ ವಿಶಿಷ್ಟವಾದದ್ದು..ದೃಶ್ಯಕಾವ್ಯರೂಪವಾದ ಈ ಚಿತ್ರ ಅವಳ ಬದುಕಿನ ಕತೆಯಾಗಿದೆ.ಇದಕ್ಕೆ ಏನೆಂದು ಹೆಸರಿಸುತ್ತೀಯಾ?..ಎಂದು ಪ್ರಶ್ನಿಸಿದನು.ಆಗ ಸ್ವಲ್ಪ ಹೊತ್ತು ಅಭಿನವ್ ಹಾಗೇ ಯೋಚಿಸುತ್ತಾ ನಿಂತುಬಿಟ್ಟನು..

                                                              ** ** **

           ಅಭಿನವನ ಮನೆಯಲ್ಲೇ ಬಿಟ್ಟುಹೋದ ಚಪ್ಪಲಿಗಳ ನೆನಪಾಗಿ,ಅದನ್ನು ತರಲೆಂದು ವಿನೀತಾ ಪುನಃ ಹಿಂದಿರುಗಿಬಂದಾಗ,ಅಭಿನವನ ಮನೆಯ ಹಿಂಬದಿಗೆ ಜೋರು ಮಾತು ಕೇಳಿಬರುತ್ತಿದುದರಿಂದ,ಅದೇನೆಂದು ತಿಳಿಯಲು ಅಲ್ಲಿಗೆ ಬಂದಳು.ಯಾವುದೋ ಅದೃಶ್ಯ ಹಸ್ತವೊಂದು ಹಿಡಿದು ನಿಲ್ಲಿಸಿದಂತಾಗಿ,ತನ್ನ ಬಗ್ಗೆಯೇ ನಡೆಯುತ್ತಿದ್ದ ಚರ್ಚೆಯನ್ನಾಲಿಸುತ್ತಾ,ಮರೆಯಲ್ಲಿ ನಿಂತುಬಿಟ್ಟಳು.ಭೈರಾಗಿಯ ಒಂದೊಂದು ಮತುಗಳೂ ಅವಳ ಹೃದಯದಲ್ಲಿ ಒಂದೊಂದು ಭದ್ರವಾದ ಗೋಡೆಯನ್ನು ಕಟ್ಟುವ ಇಟ್ಟಿಗೆಗಳಂತೆ ಭಾಸವಾಗತೊಡಗಿದವು.ಭೈರಾಗಿ ಎಲ್ಲವನ್ನೂ ಹೇಳಿದ ನಂತರ,ಅನಾಥೆ ಎಂದುಕೊಂಡವಳಿಗೆ ಬಾಂಧವ್ಯದ ಹೊಸ ಬೇರೊಂದು ಎದೆಯಾಳಕ್ಕಿಳಿದು ಆ ಗೋಡೆಗಳನ್ನು ಇನ್ನಷ್ಟು ಗಟ್ಟಿಗೊಳಿಸಿ,ಪ್ರೀತಿಯರಮನೆಯ ಕೋಟೆ ಕಟ್ಟಿದಂತೆ ಅನಿಸತೊಡಗಿತು.ಎದೆಯೊಳಗೆ ಸಿಹಿಕಂಪನ,ತವಕ ತಲ್ಲಣ!ಸ್ವಪ್ನಲೋಕದ ಕಲ್ಪನೆಯೇ?..ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡಳು.ಅಷ್ಟರಲ್ಲಿ ಅಭಿನವ್,ಸ್ವಾಮೀಜಿ,ಸ್ವಾಮೀಜಿ..ಈ ಕಲಾಕೃತಿಗೆ ಹೊಂದುವ ಹೆಸರು ಸಿಕ್ಬಿಡ್ತು..."ಹೇಮಚಂದ್ರಾ"..ಸ್ವಾಮೀಜಿ.."ಹೇಮಚಂದ್ರಾ"..ಈ ಚಿತ್ರದ ಹೆಸರು "ಹೇಮಚಂದ್ರಾ"..ಎನ್ನುತ್ತಾ,ಉತ್ಸಾಹದಿಂದ ನಲಿಯತೊಡಗಿದನು.ಆಗ ಆ ಭೈರಾಗಿಯು,"ಹೇಮಚಂದ್ರಾ",ಹಿತವಾಗಿದೆ ಶೀರ್ಷಿಕೆ;ಶುಭವಾಗಲಿ..ಎಂದು ನುಡಿಯುತ್ತಿರುವಾಗ,ಉತ್ಸಾಹದಿಂದ ಕುಣಿಯುತ್ತಿದ್ದ ಅಭಿನವ್ ಥಟ್ಟನೆ ನಿಂತುಬಿಟ್ಟನು.ಮರೆಯಲ್ಲಿ ನಿಂತಿದ್ದ ವಿನೀತಾಳನ್ನು ಆತ ನೋಡಿದನು.ಅವಳೆಡೆಗೆ ಸೆಳೆಸೆಳೆವ ಶಕ್ತಿಯನ್ನು ತಡೆಹಿಡಿಯಲೆತ್ನಿಸಿದ;ಸಾಧ್ಯವಾಗಲಿಲ್ಲ...‘ಹೇಮ’ಎಂದರೆ‘ಸ್ವರ್ಣ’..ಚಂದಿರನು ಎಂದೂ ಬೆಳದಿಂಗಳ ಮಗು..ಬೆಳ್ಳಿ ಬಟ್ಟಲು ಕಲಕಲ ನಗುವ ನಗು...ಬಿಳಿಹಾಲ ಬೆಳದಿಂಗಳ ಉಕ್ಕಿಸುವ ಕಡಲು ಒಳಗೊಳಗೂ..ಆದರೆ,ನನ್ನ ಈ ಬೆಳದಿಂಗಳ ಹುಡುಗಿ,ಚಂದ್ರನ ತಂಪಿನ,ಚಿನ್ನದ ಹೊಳಪಿನ ಬಾಲೆ..ಬೆಳ್ಳಿಯ ಚಂದಿರ ಎಲ್ಲರಿಗೂ ತಿಳಿದವನು..ಆದರೆ ಈಕೆಯೇ ವಿಶಿಷ್ಟಳು..ಅಂತೆಯೇ ಅವಳ ಈ ಚಿತ್ರ!ಸ್ವರ್ಣ ಶಶಿಯ ಕಾಂತಿ,ಎಲ್ಲ ಭ್ರಾಂತಿಯ ತಮಸ್ಸನ್ನು ತೊಳೆಯಲಿ...ವಿನೂತನಳು ಇವಳು..ಅದಕ್ಕೇ ಇವಳು ‘ಹೇಮಚಂದ್ರಾ’..ಎನ್ನುತ್ತಾ,ಅವಳಲ್ಲಿ ಬಂದು,ಅವಳ ಕೈಹಿಡಿದನು.ಅವಳ ಕಂಗಳಲ್ಲಿ ಉಕ್ಕುತ್ತಿದ್ದ ಆನಂದಕ್ಕೆ ಪಾರವೇ ಇರಲಿಲ್ಲ.ಪಾರಮ್ಯದ ಪರಿಧಿ ದಾಟಿದಾಗ ಸ್ಫುರಿಪ ತೇಜಸ್ಸು ಅವಳ ಕಂಗಳಲ್ಲಿ ಬೆಳಗುತ್ತಿತ್ತು.ಅರ್ಥವಾಗದ ದಿವ್ಯ ಭವ್ಯ ಧ್ಯಾನವೊಂದು ಮೊಗವನ್ನು ಆವರಿಸಿಕೊಂಡಿತ್ತು.ಜೊತೆಜೊತೆಗೆ ಕಣ್ಣಂಚಲ್ಲಿ ಮುತ್ತಂತೆ ಸಾಲಾಗಿ ಕುಳಿತ ಹನಿಹನಿ ಹನಿಗಳು...ಹೆಣ್ಣು ಜೀವದ ಆಭರಣವೆಂಬ ಲಜ್ಜೆಯಿಂದ ಕದಪುಗಳು ಕೆಂಪೇರಿದ್ದವು...ಅವಳನ್ನು ಬರಸೆಳೆದು ಅಪ್ಪಿಕೊಂಡು,ಅಭಿನವ್ ಅವಳ ಹಣೆಗೊಂದು ಮುತ್ತಿಟ್ಟನು.ಇತ್ತ...ಪ್ರತೀ ಹೃದಯದಲ್ಲೂ ಕವಿಯಿದ್ದಾನೆ;ಕಲಾವಿದನಿದ್ದಾನೆ...ಹೆಣ್ಣೆಂಬ ನಯ ನಾಜೂಕು,ಬೆಳಕಿನ ದೇವತೆಯನ್ನು ಆರಾಧಿಸುವ ದಿನದಂದಿನಿಂದ ಅವನ ಕಲೆ ಪಕ್ವವಾಗುತ್ತಾ ಹೋಗುತ್ತದೆ.ಪ್ರತೀ ಕಣದಲ್ಲೂ ಹೆಣ್ತನವಿದೆ...ಬಿರಿದಿದೆಯಿಲ್ಲಿ ಎದೆಗರ್ಭದ ಪ್ರೀತಿಯ ಸಿರಿಯ ಪರಿ..ತೆರೆದಿದೆ ಅಂತರಂಗದ ಕೊಳಲಿನ ಕರೆಗೆ ಒಲವಿನ ದಾರಿ..ಎನ್ನುತ್ತಾ,ಆ ಭೈರಾಗಿ ಮನೆಯ ಇನ್ನೊಂದು ಬದಿಯಿಂದ ನಡೆದುಹೋದ.ಹೋಗುತ್ತಾ,ಅವಳ ಚಪ್ಪಲಿಗಳನ್ನು ಕಂಡು ಮಂದಹಾಸ ಸೂಸಿದ...ಅಭಿನವನ ಚಪ್ಪಲಿಗಲ ಜೊತೆಗೆ ಅವಳ ಚಪ್ಪಲಿಗಳೂ ಜೊತೆಯಾಗಿದ್ದವು.ಚಪ್ಪಲಿಗಳೂ ಕೂಡ ಅವನ ಜೊತೆ ಹೆಜ್ಜೆ ಹಾಕಲು ನಿರ್ಧರಿಸಿದಂತಿದ್ದವು..ಸನಿಸನಿಹದ ಹೆಜ್ಜೆಗಾಗಿ ತವಕಿಸುತ್ತಿದ್ದವು..!ಕಳಚಿಕೊಂದಿತು ಸರಪಣಿಯ ಕೊನೆಯ ಕೊಂಡಿ..ಹುಡುಕಿಹೊರಟಿದೆ ಬದುಕಿನ ಒಂಟಿ ಹಾದಿಯ ಬೀದಿಲಿ ಹೊಸ ಸಂಬಂಧವನ್ನು,ಸುಮ್ಮನೆ ಈ ಬಂಡಿ..ಎನ್ನುತ್ತಾ,ಆ ಭೈರಾಗಿ ಹೊರಟುಹೋದ.ಜೋರಾಗಿ ಗಾಳಿ ಬೀಸಿತು.ಅಭಿನವ್ ಚಿತ್ರಿಸಿದ್ದ ಹೇಮಚಂದ್ರಾ ಅಭಿನವನ ಕಾಲಿನಲ್ಲಿ ಬಂದು ಬಿದ್ದಿತು.ಅಭಿನವ್ ಅದನ್ನೆತ್ತಿಕೊಂಡ.ಅದನ್ನು ನೋಡುತ್ತಲೇ ವಿನೀತಾ ವಿಸ್ಮಿತಳಾದಳು..ಇದು ಕೇವಲ ಆರಾಧನೆಯಲ್ಲ;ಎಲ್ಲರಿಗೂ ದಕ್ಕದ,ಪರಮ ಸೌಂದರ್ಯದ ಪರಿಪೂರ್ಣ ಉಪಾಸನೆ..ಸಾರ್ಥಕವಾಯಿತು ಈ ಜನ್ಮ..ಈ ಅದ್ಭುತ ಕಲಾವಿದನ ಕೈಯಲ್ಲಿ ನಾನೂ ಕುಂಚವಾಗಿಬಿಡಲೇ?..ನಿಮ್ಮ ಕಲೆಗೆ ನಾನು ವಿನೀತಳು..ಎನ್ನುತ್ತಾ,ವಿನೀತಾ ಅಭಿನವನ ಕಾಲುಗಳಿಗೆ ಹಣೆ ತಾಕಿಸಿದಳು ಮತ್ತು ಎದ್ದುನಿಂತು ಅವನನ್ನು ಬಿಗಿಯಾಗಿ ಅಪ್ಪಿಕೊಂಡು,ಅವನೆದೆಗೆ ತಲೆ ಒರಗಿಸಿಕೊಂಡಳು.ಅವನು ಅವಳ ತಲೆಯನ್ನು ನೇವರಿಸತೊಡಗಿದನು...ಅಭಿನವನ ತಂದೆತಾಯಿ ವಿಸ್ಮಯದಿಂದ ನೋಡುತ್ತಿದ್ದಾರೆ...ಅತ್ತ ಎಲ್ಲೋ ಒಂದು ಕಡೆ ಭೈರಾಗಿ ಗುನುಗುನಿಸುತ್ತಲೇ ಇದ್ದ...ಜಗತ್ತಿನ ಪ್ರೀತಿ ಕಾವ್ಯ ಚರಿತೆಯ ಪುಸ್ತಕಕ್ಕೆ ಮತ್ತೊಂದು ಪುಟದ ಕವಿತೆ ಸೇರಿಹೋಯಿತು...ಖಾಲಿ ಖಾಲಿ ಹಾಳೆಯಲ್ಲಿ ಇನ್ನು ಮುಂದೆ ಸಾಲು ಸಾಲು ಅಕ್ಷರಗಳ ಸಂಗಮದ ಹಂಗಾಮ...ಖಾಲಿ ಪುಟದ ಮೇಲೆ ಬಣ್ಣಬಿದ್ದರೂ ಕೂಡ,ಆ ಬಣ್ಣಕ್ಕೊಂದು ಅರ್ಥ ಬರುತ್ತದೆ...ಖಾಲಿ ಕಾಗದವೂ ಒಂಟಿತನದಿಂದ ಜಂಟಿತನಕ್ಕೆ ನಂಟಾಗುತ್ತದೆ.ಖಾಲಿ ಬದುಕಿಗೂ ನಾಳಿನ ಕಾಲುದಾರಿಯ ಕಾಯುವ ಮನಸ್ಸಾಗುತ್ತದೆ.ಖಾಲಿತನವೇ ಎಲ್ಲವನ್ನೂ ತುಂಬಿಕೊಡುವ ಗಾಳಿಯಾಗುತ್ತದೆ...ಶೂನ್ಯದಲ್ಲಿನ ಪರಿಪೂರ್ಣತೆಯೆಂದರೆ ಇದೇನಾ?ಪ್ರಕೃತಿಯ ಎರಡು ಜೀವಗಳ ಮಿಲನ,ಪ್ರಕೃತಿಯಿಂದಲೇ ರಚಿಸಲ್ಪಟ್ಟ ಅಪೂರ್ವ ಕಥನ ಕವನ..ಬರಿಯ ರೇಖೆಗೂ ಎರಡು ಬಿಂದು ಬೇಕು...ಅದೇ ಪ್ರೀತಿ!ಬಡ ಜೋಗಿಗೂ ಬಿಡಲಿಲ್ಲ ನೋಡು,ಸಂಸಾರದಾ ಹಾಡು..ಖಾಲಿಯಲ್ಲ ಯಾವುದೂ!..ಶೂನ್ಯವನ್ನೂ ತುಂಬುವುದು ಒಂಟಿ ಕೈಯ ಚಪ್ಪಾಳೆಯ ಶೂನ್ಯದಾ ಸದ್ದು..ಬಹುದೂರದವರೆಗೂ ಭೈರಾಗಿ ಗೊಣಗುತ್ತಲೇ ಇದ್ದ...ದೂರದ ದೇವಸ್ಥಾನದಲ್ಲಿ ಮಧ್ಯಾಹ್ನದ ಪೂಜಾಶಂಖನಾದ ಹೊಮ್ಮಿತು...ಸತ್ಯದ ಮಹಾಸಾಕ್ಷಿಯೆಂಬಂತೆ;"ಕ್ಷೇತ್ರೇ ಕ್ಷೇತ್ರೇ ಧರ್ಮಂ ಕುರು" ಎಂಬ ದಿವ್ಯ ನಿನಾದ ಝೇಂಕಾರದೊಂದಿಗೆ...


                                                         ** ** **



                                                                                                             ~‘ಶ್ರೀ’
                                                                                                               ತಲಗೇರಿ

ಶನಿವಾರ, ಆಗಸ್ಟ್ 18, 2012


              "ಪ್ರೀತಿಯ ಪರಿಚಯಕೆ"...


     ನನ್ನೆದೆ ಪುಟದೊಳಗೆ ಸಖೀ
     ನಿನ್ನದೇ ಬರವಣಿಗೆ
     ಪ್ರೀತಿಯ ಪರಿಚಯಕೆ ಸಖೀ
     ಪದಗಳ ಮೆರವಣಿಗೆ..

     ಮೀಟಿದ ರಾಗದ ಎಳೆಯ
     ಭೇಟಿಯು ನಿನ್ನದೇ ಕ್ಷಣವು
     ಗೀಚಿದ ಶಾಯಿಯ ಗೆರೆಯ
     ತಿದ್ದಲು ನಿನ್ನದೇ ಒಲವು
     ಪ್ರೀತಿಯ ಪರಿಚಯಕೆ ಸಖೀ
     ಹೃದಯದ ಕನವರಿಕೆ..

     ದಾಟಿದ ದಾರಿಯ ಕವಲು
     ನೀಡಿದೆ ಪ್ರೀತಿಯ ನೆರಳು
     ಸುರಿಯುವ ಸೋನೆಯ ಮಳೆಗೆ
     ನೆನೆದಿದೆ ನೆನಪಿನ ಮಹಲು
     ಪ್ರೀತಿಯ ಪರಿಚಯಕೆ ಸಖೀ
     ಕನಸಿನ ಚಡಪಡಿಕೆ..


                               ~‘ಶ್ರೀ’
                                 ತಲಗೇರಿ

ಬುಧವಾರ, ಜುಲೈ 11, 2012


          "ಮೌನವಾಗಿದೆ ಯೋಚನೆ"....


   ಕನಸುಗಳ ನಾವೆಯಲಿ ನೀ ದೂರಹೋಗು
   ನೆನಪುಗಳ ಛಾಯೆಯಲಿ ನೀನಿಲ್ಲವಾಗು
   ಮರೆತುಬಿಡು ನನ್ನೊಲವೇ ನಿನ್ನೊಲವ ಸೋಲು
   ಬಿರಿದ ಬದಿ ಎದೆಯೊಳಗೆ ನೋವಿನಾ ನೆಳಲು..

   ಸುಳಿವ ಚಂದಮಾಮನ ಬೆಳಕ
   ಬಳಿದು ನಿಂತಿದೆ ಭರವಸೆ
   ಸೆಳೆವ ಅಂದಗಾತಿಯ ಚಳಕ
   ಒಳಗೆ ತುಂಬಿದೆ ಹೊಸನಶೆ
   ಮನಸು ಮರೆಯುವ ಮುನ್ನವೇ
   ಮತ್ತೆ ಹುಟ್ಟಿದೆ ಯಾತನೆ...

   ನಗುವ ಚೆಂದಸಾಲನು ಹುಡುಕಿ
   ಕಳೆದುಹೋಗಿದೆ ಕವಿತೆಯು
   ಮುಗಿದ ಬಿಂದುವಾಗಲು ಇಣುಕಿ
   ಕವಿಯತೊಡಗಿದೆ ಛಾಯೆಯು
   ನೆನಪು ಕೆನೆಯುವ ಮುನ್ನವೇ
   ಮೌನವಾಗಿದೆ ಯೋಚನೆ...

   ತೀರತೀರದ ಮಳಲತೀರದಿ
   ನೀನಾಗಿಹೋಗು ಅಳಿವ ಹೆಸರು
   ನೂರುನೋವಿನ ಮನದ ಬೀದಿಲಿ
   ಅಳಿಸಿಹೋಗಲಿ ನಿನ್ನ ಸೂರು...


                                 ~‘ಶ್ರೀ’
                                   ತಲಗೇರಿ

ಮಂಗಳವಾರ, ಜುಲೈ 10, 2012


                    ಒರಟು ಪ್ರೀತಿ...


     ಬಿಳಿಯ ಹಾಳೆಯಲಿ ಬರೆದುಬಿಡುವೆನು
     ಗೆಳತಿ ನನ್ನ ಪರಿಚಯ
     ಬರಿಯ ಹೃದಯದಿ ಭಾವ ಅರಳಿಸು
     ತೊರೆದು ಎಲ್ಲ ಸಂಶಯ..


     ಎದೆಯ ತೀರದಿ ಕಡಲ ಅಲೆಗಳು
     ನಿನ್ನ ಬರವನೇ ಕಾದಿವೆ
     ಅಧರ ಬೆಸೆಯಲು ಮಧುರ ಮಡಿಲೊಳು
     ನಾನು ಕಂದನೇ ಆಗುವೆ
     ಬೆರೆತಿದೆ ಕಲ್ಪನೆ
     ಮುಗಿಯದಾ ಬಣ್ಣನೆ..


     ಉಸಿರು ಮೀಟಿದ ಹೊಸತು ರಾಗದಿ
     ನಿನ್ನ ಹೆಸರನೇ ಗುನುಗಿಹೆ
     ಹೆಸರು ಬಯಸದ ಒರಟು ಪ್ರೀತಿಗೆ
     ನಿನ್ನ ಆಸರೆ ಬಯಸಿಹೆ
     ಮರೆಸಿದೆ ಮೈಮನ
     ಸರಸದಾ ಜೀವನ...



                                 ~‘ಶ್ರೀ’
                                   ತಲಗೇರಿ

ಭಾನುವಾರ, ಜೂನ್ 24, 2012


                               "ಹನಿ ಹನಿಯ ಋತು ಪರ್ವ...."!!

          ಕಪ್ಪು ಮುಗಿಲ ತನುವಿನ ತುಂಬ ಬೆಳಕಿನ ಬಳ್ಳಿ ಹಬ್ಬಿದಾಗ,ಕರಿಯ ಬಂಡೆಯಲಿ ಶ್ವೇತ ಬಿರುಕುಗಳೋ ಎಂಬಂತೆ ರೇಖೆಗಳ ಸೆಲೆಯೊಂದು ಹೊರಳಿದಾಗ,ತಣಿತಣಿವ ಹಕ್ಕಿಯೊಡಲ ಹಾಡು,ಸುಳಿಸುಳಿವ ಪರಿಮಳದ ಜಾಡು ಹಿಡಿದ ಗೆದ್ದಲಿನ ಗೂಡುಗಳ ಅವಸಾನದ ಪಾಡು,ಸುಡುಸುಡುವ ಎದೆಯೊಳಗಣ ತುಮುಲಗಳ ಸಹವಾಸದಿ ಪರವಶವಾಗಿಹ ಎದೆಗೂಡಿನ ಜಿದ್ದನು ನೋಡು..ಕರಗಿ ಕರಗಿ ಧಾರೆಯಾಗಿ ಧರೆಗಿಳಿವ ಕಂಬನಿಯ ಕಾರುಬಾರು..ಎಲೆ ಎಲೆಗಳ ಮೇಲೆ ಬಿದ್ದು,ಮುದ್ದಾಗಿ ಮುತ್ತಾಗುವ ಹನಿಹನಿಗಳದೇ ದರ್ಬಾರು..

          ಹೃದಯದೊಳಗೆ ಕಟ್ಟಿಕೊಂಡಿಹ ಕೋಟೆಯೊಳಗೆ ಹೆಪ್ಪುಗಟ್ಟಿಹ ನೋವಿನೆಳೆಗಳ ನೆರಳುಗಳೆಲ್ಲ ಸುಳಿಸುಳಿಯಾಗಿ ಬಳಗವಾಗಿ ಹನಿಯಾಗುತಿವೆ..ಎಂಥದ್ದೋ ಅವ್ಯಕ್ತ ಭ್ರಮೆಯ ಸಂಭ್ರಮದ ವಿಭ್ರಮದಲ್ಲಿ ಅಳುತ್ತಿದೆ ವಿಹ..ಅದಕೂ ಕಾರಣ ವಿರಹ!ಬಾನು ಭುವಿಗಳ ಮಿಲನಪರ್ವ,ಕನಸಿನ ಧ್ಯಾನಗರ್ವವೇ ಆಗಿಹೋಗಿದೆಯೇ?..ಕ್ಷಿತಿಜದಲ್ಲಿ ಸಮಾಗಮವೆಂಬುದಲ್ಲ ಸತ್ಯ!ಅಂತ್ಯವಿಲ್ಲದ ಪರಿಧಿಗೆ ಆದಿಯೆಂಬುದೇ ಮಿಥ್ಯ!..ಮೃದುಲ ಕ್ಷಿತಿಯ ಮಡಿಲ ಒಡಲಿಗೆ ಚಾಚಿಕೊಳುವ ಕಾತರ..ವಿರಹ ತಾಪದಿ ತಪ್ತವಾದ ಹೃದಯಕ್ಕೆ ಲಗ್ಗೆಯಿಟ್ಟು,ಆಪ್ತವಾಗುವ ಉಪಾಸನೆಯ ತಪಸ್ಸು..ನೊಂದ ಜೀವಕ್ಕೆ ಸಾಂತ್ವನದ ಸಹಸ್ಪರ್ಶ ನೀಡುವ ಅವಸರ..ನವಿಲಿಗೋ,ಅಳುವ ಮುಗಿಲ ಕಣ್ಣ ಹನಿಗಳಲಿ ಮಿಂದು,ನೃತ್ಯ ಮಾಡುವ ಆತುರ..ಗರಿಬಿಚ್ಚಿ ಬೆರಗಾಗಿ,ಸ್ವರತನ್ಮಯವಾಗಿ ಆಸ್ವಾದಿಸುವ ಆ ಕ್ಷಣದ್ದೆಂಥ ಚಮತ್ಕಾರ..ಸೃಷ್ಟಿ ಗೀಚಿದ ಸುರುಳಿರೇಖೆಗೆ ಬಣ್ಣ ಹಚ್ಚಿಹನ್ಯಾರೋ ಒಬ್ಬ ಪೋರ..!ಸೊಗಡಿಗೇ ಸೋಗು ಹಾಕಿ,ಬೆಡಗಿಗೇ ಬೀಗವಿಕ್ಕಿ,ಜೋಪಾನವಾಗಿ ಎದೆಯ ಜಗುಲಿಯಲ್ಲಿ ಜಾಗಕೊಡುವ ಹೃದಯಂಗಮ ಸೌಂದರ್ಯದ ಸಂಗಮವಲ್ಲವೇ ಈ ಚಿತ್ರ!!..

          ಪತ್ರ ಬರೆವ ಚಾಳಿಗೆ ಪಾತ್ರವಿರದೆ,ಬಿತ್ತರಗೊಳ್ಳದೆಯೇ ಸತ್ತಿವೆಯೇ ಭಾವಗಳು?!ಕಂತಿರದ ಬದುಕಿನ ಅಧ್ಯಾಯವ,ಹೊಸಕಂತಿನ ಕ್ರಾಂತಿಗೆ ವಿಸ್ತರಿಸುವ ಅಲೆಮಾರಿಯ ತಲೆಮಾರಿನ ಪರ್ವವೇ?ಬೀಸುವ ವಿರಸದ ಬಿಸಿಗಾಳಿಗೂ ತುಸುತುಸು ಪ್ರೀತಿಯ ತಾನೊಯ್ಯುವ ಹಸಿವಿದೆ..ಮಡಿಚಿಟ್ಟ ಮನಸಿನ ಮಡಿಕೆಗಳ ಮಗ್ಗುಲಲ್ಲೂ ತುಡಿತುಡಿವ ಮೌನದ ಸಂವೇದನೆ!..ಮುದುಡಿರುವ ಮೌನಕ್ಕೆ ಹದವಾಗಿ ಬದಲಾಗಿ,ಕತೆಯಾಗುವ ಯೋಚನೆ!ಬದಿಬದಿಗೆ ತಹಬದಿಗೆ ಬರದ ಮಿಲನಗಳಿಗೆಯದೇ ಯಾಚನೆ!..ದಿನದಿನವೂ ಎದುರುಬದುರಾಗಿ ನಿಂದು,ಅವಕಾಶದಿ ಚುಂಬನವ ಇದಿರುಗೊಳ್ಳುವ ಕಾಮನೆ..ಇನಿಯೆಯ ಸ್ಪರ್ಶದಿ ನಶೆಯ ವಶವಾಗುವ ಇಂಗಿತ..ಹನಿ ಹನಿ ಕಂಬನಿ,ಇಳೆಯ ತಬ್ಬುವ ವೇಳೆಗೆ ಕಲ್ಲಲ್ಲೂ ಅಲೆಯುವುದು ಅಲೆಅಲೆಯ ಸಂಗೀತ..ಅಟ್ಟಹಾಸದ ಸದ್ದಿನಲ್ಲಿ,ಮಂದಹಾಸದ ಸುದ್ದಿಯಲ್ಲಿ ಅಂದಗಟ್ಟಿದೆ ಈ ಮಧುಚಂದ್ರವಿರದ ಮಿಲನ ಮನ್ವಂತರದ ಋತು..ಸೆರೆಯಾಯಿತು ವಿಧಿ,ಎದೆಗರ್ಭದ ಪ್ರೀತಿಗೆ ಸೋತು...!

          ವಿಷಾದದ ಬಸಿರಲ್ಲಿ ವಿನೋದದ ಸಂವಾದ..ಶೈಶವದ ಶೀಷೆಯಲಿ ಮಲಗಿರುವ ಅವಶೇಷಗಳು ಇತಿಹಾಸವ ಧ್ವನಿಸುತ್ತವೆ;ಹಿತದ ಕಚಗುಳಿಯಾಗುತ್ತವೆ..ಅಂತೆಯೇ,ಈ ಹನಿಗಳ ಚಳುವಳಿಯು..ಅಂತರಾಳದ ಸ್ವರಸ್ಯಂದನ ಮುನ್ನಡೆದಿರೆ,ಪ್ರೀತಿಯ ಪರಿಚಯವು..ಮರುಭೂಮಿಗೂ ಖುಷಿಕೊಡುವುದು ಹನಿಗಳ ತಂಪನೆ ಸಿಂಚನವು..ಕಂಬನಿಯೇ ಜಾಹ್ನವಿಯಾಗಿ,ಜೀವ ಸೃಜನಕ್ಕೆ ಮುನ್ನುಡಿಯಾಗಿ,ಮಗುವಿನ ಮಂದಸ್ಮಿತ,ಸ್ಫಟಿಕದ ತೆರ ಕಣ್ಣುಕುಕ್ಕುವ ವೇಳೆಗೆ,ಮತ್ತದೇ ಗಗನದಿ ಮುಗಿಲು,ಕಾಮನಬಿಲ್ಲಿನ ಜೊತೆ ಮಗುವಾಗುವುದು..ಹೊಸ ಬಾಂಧವ್ಯದ ಸೇತು,ಕತೆಯಾಗಲು ಕನವರಿಸುವುದು...!!!....


                                                                                                          ~‘ಶ್ರೀ’
                                                                                                            ತಲಗೇರಿ

                        ಖಾಲಿ ಪುಟದ ಕವಲುದಾರಿ...

            ಬರೆಯುವ ಮನಸಿಲ್ಲದೆ ಪದಗಳಿಗೆ ಸೆರೆಯಾಗೋ ಸರಸವೀ ಬದುಕು!ಮನಸು,ಕನಸು,ನನಸು ಈ ಮೂರರ ಸುಗಳಿಗೆಗಾಗಿ ಕಾತರಿಸುವ ಭಾವಗಳಲ್ಲಿ ಸಂತೃಪ್ತಿಯ ಸಂಗೀತ ಹೊರಹೊಮ್ಮುವಾಗ ಮತ್ತದೇ ಬದುಕಲ್ಲಿ ಎಂಥದ್ದೋ ಅರ್ಥವಾಗದ ಆನಂದ ಮನೆಮಾಡಿದ ಸಂಭ್ರಮದ ಸಂಗಮ..ನೆರಳ ಹೆರುವ ನಮಗೂ,ಬೆಳಕ ಸುರಿವ ಸೂರಿಗೂ ಏನೋ ಒಂಥರದ ನಂಟು..ಖಾಲಿಯಾಗುತ್ತಲೇ ಇರುತ್ತವೆ ದಿನದಿನವೂ ಬದುಕಿನ ಪುಟಗಳು ‘ತಾವೂ ಖಾಲಿ’ ಎಂಬ ಕೀರ್ತನೆಯೊಂದಿಗೆ,ಬರುವ ನಾಳೆಗಳ ಬಗೆಗಿನ ಹಳೆಯದೇ ಹೊಸ ಭರವಸೆಯೊಂದಿಗೆ...

            ಅರ್ಥವಾಗದ ಸಮಯದಲ್ಲಿ,ಅರ್ಥವಿಲ್ಲದ ಅರ್ಥಗಳು ಸ್ಫುರಿಸುತ್ತಾ,ಖಾಲಿ ಪುಟಗಳಲ್ಲೂ ಕುಣಿಕುಣಿವ ಅಕ್ಷರಗಳಾಗಿ ‘ಕಣಿ’ ಹೇಳುತ್ತವೆ..ಆಸೆಗಳಿಗೆ ಮಣಿವ ಮನಸಿಗೆ ಭಿಕ್ಷೆ ಹಾಕುತ್ತವೆ..ಉನ್ಮಾದದ ಉನ್ನತಿಯಲ್ಲಿ ಸೋಲುವ ಉದಾಹರಣೆಗಳಾಗಿ ಶರಣಾಗುತ್ತವೆ..ಅಲ್ಪನೆಯ ಕಲ್ಪನೆಗೂ,ಸ್ವಲ್ಪಸ್ವಲ್ಪವೇ ಸಾಕ್ಷಾತ್ಕರಿಸಲ್ಪಡುವ ಶಿಲ್ಪಕ್ಕೂ ಎಷ್ಟೊಂದು ಅಂತರ!ಸುರಿವ ಮಳೆಹನಿಗಳ ಸನ್ನಿಧಿಯಲ್ಲಿ ಮಗುವಾಗುವ ಮನಸ್ಥಿತಿ ಎಲ್ಲರಲ್ಲಿಯೂ ಇಲ್ಲ..ಆ ದೃಶ್ಯವೂ ಒಂದು ಸುಂದರ ಕಲಾಕೃತಿಯೇ ಅಲ್ಲವೇ?ಚಿಕ್ಕಪುಟ್ಟ ಸಂಗತಿಗಳು ಸುಕ್ಕಾಗುವಾಗ,ಅದರ ಸವಿಗೆ ಸಂಗಾತಿಯಾಗುವುದು ತಪ್ಪಲ್ಲ ಅಲ್ಲವೇ?ಸ್ಮೃತಿಯ ಪ್ರತಿ ಪದರಿನಲ್ಲೂ ನೆನಪಿನಾಚೆಯ ಪರಿಧಿಯೊಂದು ಪರದೆಯಾಗಿ ಹರಡಿಕೊಂಡಿರುತ್ತದೆಯೇ?ಸರಿಸರಿವ ಮಂದ್ರ ಗಾಳಿಗೆ ಉಸಿರ ಕಸಿಯುವ ಮನಸಿರುವುದಿಲ್ಲ,ಬದಲಾಗಿ,ಬಾಂಧವ್ಯ ಬೆಸೆಯುವ,ಹೆಸರ ಹೊಸೆಯುವ ಹೊಸ ನಾದದ ಆಂತರ್ಯವಿರುತ್ತದೆ..ಚಕ್ರವಾಕ ಪಕ್ಷಿಗಳ ಸಮ್ಮಿಲನಕ್ಕೆ ಸಾಕ್ಷಿಯಾಗುವ ಚಂದ್ರಮನ ಬಗಲಲ್ಲಿ ತಾರೆಗಳು ಚೆಲ್ಲಾಟವಾಡುತ್ತವೆ.ಖಾಲಿ ಖಾಲಿ ಪುಟಗಳ ಅಂಗಳದಲ್ಲಿ ಕಾಣದ ರೇಖೆಗಳು ಕಾಡಿಸಿಬಿಡುತ್ತವೆ;ಬೆಳದಿಂಗಳ ರಾತ್ರಿಯಂತೆ!..

            ಸತ್ತಂತೆ ಮಲಗಿರುವ ಗೊಂಚಲಿ ಗೊಂಚಲು ಕವಲುದಾರಿಗಳು ನೂರಾರು ಕತೆ ಹೇಳುತ್ತವೆ..ನವಿಲೂರ ಮಯೂರಚಂದ್ರಿಕೆಯನ್ನು ಸಂಗಮಿಸುವ ಕ್ಷಣಕ್ಕೆ ಸಾಕ್ಷಿಯಾಗುತ್ತವೆ.ಅರಳಿರುವ ಪರಿಮಳದ ಹೂವ ಪ್ರೀತಿಗೆ ಪರವಶವಾಗುತ್ತವೆ..ಒಂದೊಂದು ಕವಲುದಾರಿಯ ಭೂತಲೋಕದ ಗೋರಿಯೊಳಗೂ ಮಾಸಿಹೋಗದ ವ್ಯಥೆಯಿದೆ..ಬಾರಿ ಬಾರಿ ಸಾರಿ ಹೇಳುವ ಅನುಭವದ ಅಭಿಮಾನಕ್ಕೆ ಯಶಸ್ಸಿನ ಅಭಿಯಾನವಾಗುವ ಕಸುವಿದೆ..ತೆರೆದಂತೆ ತೆರೆದುಕೊಳ್ಳುತ್ತಾ,ಭವಿಷ್ಯಕ್ಕೆ ತನ್ನತನವನ್ನೇ ಬಿಕರಿ ಮಾಡುವ ಖಾಲಿಪುಟಗಳ ವೈಖರಿಯೇ ವಿಸ್ಮಯ!ಖಾಲಿಪುಟದೊಳಗೂ ಬ್ರಹ್ಮಾಂಡವಿದೆ..ಖಾಲಿ ಖಾಲಿ ಎನ್ನುತ್ತಲೇ ಎಲ್ಲವನ್ನು ತುಂಬಿಕೊಡುವ ಆ ಖಾಲಿತನಕ್ಕೆ ಅದೆಂಥಹ ಖಯಾಲಿ!ಅಲ್ಲಲ್ಲಿ ಹರಡಿಕೊಂಡಿರುವ ರಸದ ನೆಳಲ ಕವಲುದಾರಿಗಳು ಮತ್ತೆ ಮತ್ತೆ ಸಂಧಿಸುತ್ತವೆ..ಅವೇ ರಸನಿಮಿಷಗಳೆಂದು ಹೆಸರಾಗುತ್ತವೆ,ಹಸಿರಾಗುತ್ತವೆ!..ಏನೂ ಇಲ್ಲದ ಖಾಲಿಯಲ್ಲೂ ರೂಪುಗೊಳ್ಳುತ್ತವೆ ಎಲ್ಲವನ್ನು ಮುಟ್ಟಿಸುವ ಗುರಿಯ ದಾರಿಗಳು..ಶೂನ್ಯದಲ್ಲೂ ಪರಿಪೂರ್ಣತ್ವವನ್ನು ಬಿಂಬಿಸಿದ ಸುಳಿವುಗಳು..ಹೀಗೇ ಬದುಕಿನೆಲ್ಲ ಕುಹಕ,ತವಕ,ತಹತಹಿಸುವಿಕೆಯ ಬಳುಕು,ಬೆಳಕುಗಳ ಅನಾವರಣದ ತಾಣವೀ ಖಾಲಿ ಪುಟದ ಕವಲುದಾರಿ....

                                                                                                 ~‘ಶ್ರೀ’
                                                                                                   ತಲಗೇರಿ

ಭಾನುವಾರ, ಜೂನ್ 10, 2012


                           ‘ಸಂಜೆಗಡಲು’
                                      ....ಮಳಲ ಮೇಲೆ ಪ್ರೀತಿ,ಸಾವು ಮತ್ತು ನೆಳಲು...!


           ಮುಸ್ಸಂಜೆಯ ಸಮಯ..ಬಾನ ತುಂಬೆಲ್ಲಾ ರಂಗುರಂಗಿನ ರಂಗವಲ್ಲಿ...ಒಂದೊಂದು ರೂಪದ ಒಂದೊಂದು ಚಿತ್ರಗಳೋ ಎಂಬಂತೆ ಮೋಡಗಳ ಹಾವಳಿ..ವಿವಿಧ ಬಣ್ಣಗಳ ಸಂಗಮದಿ ಸೃಷ್ಟಿ ರಚಿಸಿದ ಚಿತ್ರವೇ ಅದೆಂಥ ಮನೋಹರ..ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಬಣ್ಣಬಣ್ಣಗಳಲ್ಲೂ ಅದಾವ ಚಂಚಲತೆ?ಸೃಷ್ಟಿಯ ಕುಂಚದ ಹೊರಳಾಟಕ್ಕೆ ಕಾಗದವಾಗುತ್ತಿರುವ ಆ ಬಾನಿಗೋ ಅದಾವ ಪರವಶತೆ?ಆದರೂ ಬಿಡಲೊಲ್ಲದಲ್ಲ ಇದರ ಬಗೆಗಿನ ಮೋಹಕತೆ!ಹಕ್ಕಿಗಳೆಲ್ಲಾ ಬಳಗವ ಕರೆದು ಮಾಡುತಿವೆ ಚಿಲಿಪಿಲಿಯ ಕಲರವವ..ಗೂಡು ಸೇರುವ ಮುನ್ನ ತನ್ನವರನ್ನೆಲ್ಲಾ ಒಮ್ಮೆ ನೋಡುವ ತವಕವೇ?ಅಥವಾ ಸೋತ ಮನಸುಗಳಿಗೆ ನಾಳೆಯಿದೆ ಮತ್ತೆ ಸಾಧಿಸಲಿಕ್ಕೆ ಎಂಬ ಸಾಂತ್ವನದ ಸಂಗತಿಯೇ?ಕಡಲ ತೀರದ ತುಂಬೆಲ್ಲಾ ಹರಡಿಕೊಂಡಿರುವ ಮಳಲು..ಅಲ್ಲಲ್ಲಿ ಬಿದ್ದಿರುವ ಶಂಖ ಚಿಪ್ಪುಗಳು..ಹಾಗೇ ಮಲಗಿರುವ ನಕ್ಷತ್ರ ಮೀನುಗಳು..ಮಂದಮಂದವಾಗಿ ಬೀಸುವ ಆ ಗಾಳಿಗೋ ಅದಾವ ತನ್ಮಯತೆ?!ಗಾಳಿಯ ಶೀತಲ ಸುಖಸ್ಪರ್ಶಕೆ ಅವಳ ಮುಂಗುರುಳಿಗೂ ಹಾರಿಹೋಗುವ ಬಯಕೆ..ಮತ್ತೆ ಮತ್ತೆ ಅದೆಂಥ ಮಾದಕತೆ ಆ ಗಾಳಿಯ ಹಂಬಲಕೆ!!...

           ಆಕೆ ಕುಳಿತಿದ್ದಾಳೆ ಕಡಲ ತೀರದಲ್ಲಿನ ಆ ಕಲ್ಲುಬಂಡೆಯ ಮೇಲೆ..ಆ ಕಲ್ಲೋ ಎಂದೋ ತನ್ನ ಬಣ್ಣ ಕಳೆದುಕೊಂಡಿದೆ..ಆ ಕಡಲ ಅಲೆಗಳ ಸ್ಪರ್ಶಕ್ಕಾಗಿ ಅಲ್ಲೇ ಕುಳಿತಿದೆ.ಒಮ್ಮೊಮ್ಮೆ ಬಂದು ಬಡಿವ ಅಲೆಗಳಿಗೂ,ಹಾಗೇ ಬಂದು ಸೋಕಿಹೋಗುವ ಅಲೆಗಳಿಗೂ ಎಷ್ಟೊಂದು ಅಂತರ!..ಎಂತಹ ಭಿನ್ನತೆ..ಅಲೆಗಳ ಒಂದು ಕ್ಷಣದ ಸ್ಪರ್ಶಕ್ಕಾಗಿ ಆ ಬಂಡೆ ಎಷ್ಟೋ ವರ್ಷಗಳಿಂದ ಅಲ್ಲೇ ತಪಸ್ಸನ್ನಾಚರಿಸುತ್ತಿರುವಂತೆ ತೋರುತ್ತಿದೆ.ಕಲ್ಲನ್ನು ಪುಡಿಗಟ್ಟಲೋ ಎಂಬಂತೆ ನುಗ್ಗಿಬರುವ ಅಲೆಗಳಿಗೂ,ತೋಯ್ದು ತೋಯ್ದು ಶೀತವಾಗಿಸಲೋ ಎಂಬಂತೆ ಸುರಿವ ಮಳೆಯ ಒಲವಿಂದಲೂ ತಲ್ಲಣದ ತವಕ..ಆದರೂ ಕ್ಷಣಕ್ಷಣಕ್ಕೂ ಏನೋ ಒಂಥರಾ ಸಿಹಿಯ ಪುಳಕ..ಅದಕ್ಕೇ ಅಲ್ಲವೇ ಆ ಬಂಡೆಯಿನ್ನೂ ಹಾಗೇ ಸ್ಥಿರವಾಗಿರುವುದು..ಯಾವ ಕನಸುಗಳಿಲ್ಲದ ಆ ಬಂಡೆಗಾದರೂ ಹೇಗೆ ಬಂತು ಆ ತರದ ಮನಸು?ಎಲ್ಲ ಆ ರೀತಿಯ ಪ್ರೀತಿಯ ಒಂದು ಸ್ಪರ್ಶಕ್ಕಾಗಿಯೇ ಅಲ್ಲವೇ ಎನಿಸುತ್ತದೆ..ಇಂತಹ ಬಂಡೆಯ ಮೇಲೆ ಕುಳಿತಿದ್ದಾಳೆ ಆಕೆ ಬಹಳ ಹೊತ್ತಿನಿಂದ..ಈಗ ಗಾಳಿ ಒಮ್ಮೆ ಮಂದ್ರವಾಗಿ,ಇನ್ನೊಮ್ಮೆ ಪ್ರಬಲವಾಗಿ ಬೀಸುತ್ತಿದೆ..ಸಾಂದ್ರವಾಗಿರುವ ಅವಳ ಮುಂಗುರುಳೂ ನವೋತ್ಸಾಹದಿಂದ ಬಳುಕಾಡುತ್ತಿದೆ.ಆದರೆ ಅವಳಲ್ಲಿ ಮಾತ್ರ ಬತ್ತದ ನೀರವತೆ!..ಮೌನ ಮಲ್ಲಿಗೆಯೋ ಎಂಬಂತೆ ಕುಳಿತಿದ್ದಾಳೆ ಸ್ನಿಗ್ಧ ಸೌಂದರ್ಯವತಿ ನಿರಾಭರಣ ಸುಂದರಿಯಾಗಿ!..ಮೊಗದ ಮೇಲೆ ಅಲ್ಲಲ್ಲಿ ಬಿದ್ದಿರುವ ರಸದ ನೆಳಲು...ಮಂಕುದಿಬ್ಬಗಳಾದಂತಿಹ ಕಣ್ಣುಗಳು..ಆ ದಿಬ್ಬಗಳ ಬೇಲಿಯೋ ಎಂಬಂತೆ ಚೆಂದದ ಹುಬ್ಬುಗಳು..ಬಣ್ಣದ ಜಗತ್ತಿನಲ್ಲಿ ಕಪ್ಪು ಬಿಳಿ ಬಣ್ಣಗಳೇ ಅವಳ ಸಂಗಾತಿಗಳಾಗಿವೆ;ಕಪ್ಪು ಮನಕ್ಕೆ,ಬಿಳಿ ದೇಹಕ್ಕೆ...!ಮುದ್ದು ಮನಸಿನ ತುಂಬೆಲ್ಲಾ ಛಿದ್ರವಾಗಿ ಹರಿದ,ಹರಡಿದ ಕನವರಿಕೆಗಳು..ಕತ್ತಲೆಯಲ್ಲಿ ನರಳಿದಂತೆ ಅವಳಿಗೆ ಅನಿಸುತ್ತಿದೆ.ಸಾಯಂಕಾಲದ ಸಮಯವಲ್ಲವೇ?ಸಮುದ್ರತೀರದಲ್ಲಿ ಮಳಲ ಮೇಲೆ ಹೆಜ್ಜೆ ಮೂಡಿಸುವ ಪಾದಗಳೇನು ಕಡಿಮೆ ಇರಲಿಲ್ಲ.!ಅದಾವುದರ ಮೇಲೆಯೂ ಈಗ ಅವಳ ಗಮನವಿಲ್ಲ.ಸಮುದ್ರದಲೆಗಳು ಶಾಂತವಾಗಿ ಹೊಯ್ದಾಡುತ್ತಿವೆ.ನೋಡುತ್ತಿದ್ದಾಳೆ,ಸಮುದ್ರದಲೆಗಳನ್ನೇ ನೆಟ್ಟ ದೃಷ್ಟಿಯಿಂದ...ಅರೇ!ಎಷ್ಟು ಹೊತ್ತು?ಅವಳ ಕಣ್ಣ ರೆಪ್ಪೆಗಳೇಕೆ ಮುಚ್ಚುತ್ತಲೇ ಇಲ್ಲ?ಇದ್ದಕ್ಕಿದ್ದಂತೆ ಸಾಗರದಲೆಗಳು ಭಯಾನಕವಾಗತೊಡಗಿದವು...ಸಮುದ್ರದಲ್ಲಿರುವ ನೌಕೆಗಳೆಲ್ಲಾ ಓಲಾಡತೊಡಗಿದವು.ಸಾಗರದಲ್ಲಿ ಈಜಾಡುತ್ತಿದ್ದ ಮಂದಿ ಭೀತಿಯಿಂದ ತೀರಕ್ಕೆ ಓಡಿಬರತೊಡಗಿದರು.ಇವರನ್ನು ನೋಡಿ ಈಕೆ ಗಹಗಹಿಸಿ ನಗುತ್ತಿದ್ದಾಳೆ..ದೊಡ್ಡದಾಗಿ,ಹ್ಹಹ್ಹಹ್ಹಾ..ಹ್ಹೊಹ್ಹೋ..ಹ್ಹೆಹ್ಹೆಹ್ಹೇ!!!ಎಂದು...ಅವಳ ಹತ್ತಿರದಲ್ಲೇ ಇಬ್ಬರು ಪುಟ್ಟ ಮಕ್ಕಳು ಇದ್ಯಾವುದರ ಪರಿವೆಯಿಲ್ಲದೇ ಮರಳಿನಲ್ಲಿ ಗೊಂಬೆಗಳನ್ನು ಮಾಡುತ್ತಾ ಮದುವೆಯ ಆಟವಾಡುತ್ತಿದ್ದಾರೆ.ಆ ಇಬ್ಬರು ಪುಟ್ಟ ಮಕ್ಕಳು ಅಲ್ಲೇ ಒಬ್ಬರನ್ನೊಬ್ಬರು ಮುದ್ದಿಸುತ್ತಿದ್ದಾರೆ.ಯಾವ ಕಲ್ಮಶವಿಲ್ಲದ ಆ ಪ್ರತಿ ಪ್ರೀತಿಯ ಮುತ್ತಿನಲ್ಲಿ ಎಂತಹ ಅಮೃತತ್ವವಿದೆಯೇನೋ ಎಂದನಿಸುತ್ತಿತ್ತು.ಇಷ್ಟು ಹೊತ್ತು ನಗುತ್ತಿದ್ದಳು ಈಕೆ.ಆದರೆ,ಈ ಇಬ್ಬರು ಮಕ್ಕಳನ್ನು ನೋಡಿದೊಡನೆ,ನಿಧಾನವಾಗಿ ಅವಳ ನಗು ವಿಕಾರವಾಗತೊಡಗಿತ್ತು..ನಗುತ್ತಾ ನಗುತ್ತಾ ನರಳುವಿಕೆಯಂತೆ,ಈಗ ಆ ನಗುವೇ ಅಳುವಾಗತೊಡಗಿತ್ತು.ಒಮ್ಮೆಲೇ ಜೋರಾಗಿ ಬಿಕ್ಕಳಿಸತೊಡಗಿದಳು.ಕೂಗತೊಡಗಿದಳು..ಆಚೆ ಈಚೆ ನೋಡಿದಳು..ಯಾರಿಗೂ ಅವಳ ಮೇಲೆ ಗಮನವಿರಲಿಲ್ಲ.ಸಣ್ಣದಾಗಿ ಅಳತೊಡಗಿದಳು.ಒಮ್ಮೆಲೇ ಬೆಚ್ಚಿಬಿದ್ದಳು.ತನ್ನ ನೆರಳನ್ನೇ ನೋಡುತ್ತಿದ್ದಾಳೆ..ಮುಖದಲ್ಲಿ ಒಂಥರದ ಭಯ ಆವರಿಸತೊಡಗಿತ್ತು...ಕಣ್ಣುಗಳಲ್ಲಿ ಒಂದೇ ಸಮನೆ ನೀರು ಸುರಿಯುತ್ತಿದೆ..ಹಾಗೇ ನೋಡುತ್ತಿದ್ದಾಳೆ ತನ್ನ ನೆರಳನ್ನೇ!ಮತ್ತೆ ಮತ್ತೆ ಬೆಚ್ಚಿಬೀಳುತ್ತಿದ್ದಾಳೆ.ನೆರಳು! ನನ್ನದೇ ನೆರಳು!!ಎಲ್ಲಿತ್ತು ಇಷ್ಟು ಹೊತ್ತು?ನನ್ನ ಜೊತೆಯೇ ಇತ್ತೇ ಅಥವಾ ವಿಹರಿಸಲು ಎಲ್ಲಿಯೋ ಹೋಗಿತ್ತೇ?ಅಥವಾ ನಾನೇ ಗಮನಿಸಿಯೂ ಗಮನಿಸಿರಲಿಲ್ಲವೇ?ನನ್ನ ಪ್ರತಿಬಿಂಬವೇ ಇದು?ಹೀಗೇ ಹೀಗೇ ಅವಳ ಮನದಲ್ಲಿ ಹತಾರು ಪ್ರಶ್ನೆಗಳು ಹುಟ್ಟಿಕೊಳ್ಳತೊಡಗಿದವು..ಅವಳ ಅಳು ಈಗ ಒಂದು ಕ್ಷಣ ನಿಂತಿತ್ತು.ಅವಳೆಲ್ಲ ಗಮನ ಈಗ ಅವಳ ನೆರಳಿನ ಮೇಲೆಯೇ ಕೇಂದ್ರೀಕೃತವಾಗಿದೆ!ನನ್ನದೆನ್ನುವ ಈ ನೆರಳು ನನ್ನ ಸ್ವಂತದ್ದೇ?ಅನುಕ್ಷಣವೂ ನನ್ನನ್ನೇ ಹಿಂಬಾಲಿಸಿ ಬರುತ್ತಿದೆಯೇ?ಇದೆಂತು ಸಾಧ್ಯ;ಬಿಟ್ಟಿರದ ಅನುಬಂಧವಿರಲೆಂತು ಸಾಧ್ಯ?ಇದು ಕಪ್ಪನೆಯ ದಿಬ್ಬವಲ್ಲ,ಮಬ್ಬು ಮಬ್ಬು ದೀಪವೂ ಅಲ್ಲ!!ಒಂಚೂರು ಸದ್ದಾಗದಂತೆ ಪ್ರತಿಕ್ಷಣವೂ ನನ್ನೊಡನಿರಲೆಂತು ಸಾಧ್ಯ?ಇದರ ಮೌನವೇ ಸಾವಿರ ಮಾತಾಗುತ್ತಿದೆಯೇ?ಇದರ ಮೌನವೇ ಸಾವಿನ ಮಾತಾಗುತ್ತಿದೆಯೇ?ಅರ್ಥವಾಗುತ್ತಿಲ್ಲ ನನಗೆ..!ತಣ್ಣನೆಯ ಮೌನ..ಅಲ್ಲ ಅಲ್ಲ!ಉಸಿರನ್ನೇ ಹಿಸುಕಿದಂತಿನಿಸುವ ಭಯಂಕರ ಮೌನ..!ಧಗಧಗಿಸುತ್ತಿರುವ ಮೌನ..ಇರಲಾರದೇ?..ಇರಬಾರದೇ?..ಮನಸು ನುಡಿಸುವ ಮೌನ ತರಂಗದಿ ಅಪಶೃತಿಯ ತರಂಗ ಮೇಳೈಸಿದೆಯೇ?..ಅಪಶೃತಿ??!!..ಹ್ಹಹ್ಹಾ..ಅಪಶೃತಿಯೇ?ಹಾಗಾದರೆ ಶೃತಿಯೆಂದರೇನು?ಶೃತಿ ಅಪಶೃತಿಗಳ ನಡುವಿನ ಸಂಗತಿಯನ್ನು ಅರಿಯಲೇ?ಅಥವಾ ಬದುಕಿನ ಅರ್ಥವನ್ನೇ ಕಾಣದ ನನಗೆ ಇವುಗಳ ಅರ್ಥ ಹುಡುಕುವ ವ್ಯರ್ಥ ಪ್ರಯತ್ನ ಬೇಡವೇ?..ಇರಲಾರವೇ ಎರಡೆರಡು?ಮಂಜುಗಡ್ಡೆ ನೀರಾದಂತೆ,ನೀರೇ ಮಂಜುಗಡ್ಡೆಯಾದಂತೆಯೇ ಮತ್ತೆ?ಶೃತಿಯೇ ಅಪಶೃತಿಯಾಗಿ,ಅಪಶೃತಿಯೇ ಶೃತಿಯಾಗಿ ಬಾಳಸಂಗೀತ ಸರಿಗಮದ ರಸದ ತನನವೇ?ಇಂದು ವಿಭ್ರಮವೆನಿಸಿದ್ದು ನಾಳೆ ಸಂಭ್ರಮವಾದೀತೇ?ಮಾವಿನ ಕಾಯೊಳಗೆ ಬೀಜ ಮೊಳೆತುಬಂದಂತೆ!ಮೃದುಲ ಬೀಜವೇ ಕೊನೆಗೆ ಗಟ್ಟಿಯಾದಂತೆ!ಹಣ್ಣಾಗಿ ಮಾಗೆ ಕಾಯೇ ಸಿಹಿಯಾದಂತೆ!..ಅಪಶೃತಿಯೊಳಗೇ ಒಲ್ಮೆಯ ಶೃತಿ ಮೂಡಿಬರಬಹುದೇ?ಮಜ್ಜಿಗೆಯೊಳಗೆ ನವನೀತ ಸ್ಫುರಿಸಿಬಂದಂತೆ!!!ಆ ಮೌನದೊಳಗೂ ಇರಬಹುದೇ ಮಾತುಮಾತಿಗೂ ಕವನ?!ಈ ಮೌನಕ್ಕೂ ಕಾರಣ ಈ ನೆಳಲೇ ಅಲ್ಲವೇ?ಪ್ರತಿಕ್ಷಣವೂ ನನ್ನೊಡನಿರುವ ಈ ನೆಳಲು ಕತ್ತಲೆಯಲ್ಲ್ಯಾಕೆ ಕಾಣುವುದಿಲ್ಲ?ಎಲ್ಲಿಹೋಗುತ್ತದೆ ಆಗ?ಏಕಾಂಗಿಯಲ್ಲ ನೀನು;ನಾನಿರುವೆನಲ್ಲಾ ನಿನ್ನೊಡನೆ ಎಂದು ಕ್ಷಣಕ್ಷಣವೂ ಹೇಳುತ್ತಾ,ತಂಪುಕತ್ತಲೆ ದೊರೆತಾಗ ನನಗೆ ಕಾಣುವುದಿಲ್ಲವೇಕೆ?ಬೆಳಕಲ್ಲಿದ್ದರೆ ಮಾತ್ರ ನೆರಳು ಗೋಚರಿಸುವುದೇ?ಬೆಳಕಲ್ಲಿ ಮಾತ್ರ ನಿನ್ನ ಜೊತೆ ಬರುತ್ತೇನೆ ಎನ್ನುತ್ತಿದೆಯೇ ಈ ನೆಳಲು?ಈ ನೆರಳಿನಂತೆಯೇ ಸಾವೇ?ಆ..ಆ..ಸಾವು!ಸಾವು..!!ಅವಳ ಮೈ ಕಂಪಿಸತೊಡಗಿತ್ತು.ಅಲ್ಲೇ ಕಲ್ಲು ಬಂಡೆಯ ಮೇಲೆ ತನ್ನ ಕೈಗಳನ್ನು ನರಳುತ್ತಾ ಹೊಸೆಯತೊಡಗಿದಳು.ಕಣ್ಣಲ್ಲಿ ಮಾತ್ರ ಈಗ ನಿಧಾನವಾಗಿ ಮತ್ತೆ ಕಣ್ಣೀರು ತುಂಬಿಕೊಳ್ಳತೊಡಗಿದೆ.ಸಾವು..ಸಾವು..ಮುಲುಗುತ್ತಿದ್ದಾಳೆ!ನನ್ನ ಇನಿಯನ ಸಾವು..ನನ್ನ ಭಾವದ ಗೆಳೆಯನ ಸಾವು..ನನ್ನದೆಲ್ಲದರ ಒಡೆಯನ ಸಾವು..ನನ್ನವನ ಸಾವು..ಹ್ಹಹ್ಹಹ್ಹಾ..ಸತ್ತೋದಾ!..ಆತ ಸತ್ತೋದ..ನಾನು..ನಾನು..ಬದುಕಿಯೇ ಇದ್ದೇನೆ;ಬದುಕಿಲ್ಲದಂತೆ..ಬೆಳಕಿಲ್ಲದಂತೆ!!..ತನ್ನೆದೆಯ ಮೇಲೆ ಕೈಯಿಟ್ಟುಕೊಂಡು,ಎದೆಯನ್ನು ಸವರುತ್ತಾ ಹೇಳ್ತಿದ್ದಾಳೆ..ಮುದ್ದೂ!..ಕೋಪಾನಾ?ಮಾತಾಡೊಲ್ವಾ?..ಮಲ್ಕೊಂಡಿದ್ದೀಯಾ ನನ್ ಚಿನ್ನೂ?..ಪಾಪು ಮಲಗಿದ್ದಾನೆ,ಯಾರೂ ಏಳಿಸ್ಬೇಡಿ..ಉಶ್!ಎನ್ನುತ್ತಿದ್ದಾಳೆ..ಉಹ್ಹೂ..ಇಲ್ಲ..ಅವನಿಲ್ಲವಿಲ್ಲಿ..ಅವನು ಅಲ್ಲಿ ಮಲಗಿದ್ದಾನೆ.ಇಲ್ಲಿ ಅವನ ನೆನಪುಗಳು ಮಾತ್ರ ಮಲಗಿವೆ.ಅವನ ಚೆಂದದ ರೂಪ,ನೆನಪುಗಳ ತಾಪ ನನ್ನ ಹೃದಯವನ್ನಾವರಿಸಿದೆ.ಅವನು..ಅವನು..?ಎಲ್ಲಿ ಹೋದ?ಹೊರಟೇಹೋದ ನನ್ನಿನಿಯ...ಅವ ಚೆಂದದಳಿಯ..ಸಾವೂ ಕೂಡ ಚೆಂದ ಮಕರಂದವೇ?ಆತ ನನಗೆ ಏನಾಗಿದ್ದ?ಗಂಡನೇ?..ಗೆಳೆಯನೇ?...ನಲ್ಲನೇ?...ಮಾವನ ಮಗನೇ?..ಎಲ್ಲವೂ..ಎಲ್ಲವೂ ಅಲ್ಲವೇ?..ಯಾವುದಾಗಿರಲಿಲ್ಲ ಆತ?ನನಗೆ ಜ್ವರ ಬಂದಾಗ,ಮಾತ್ರೆ ತೆಗೆದುಕೊಳ್ಳುವುದಿಲ್ಲವೆಂದು ಹಟ ಮಾಡಿದಾಗ,ಆತ ತಾನೇ ತೆಗೆದುಕೊಳ್ಳುತ್ತಿದ್ದ,ಬಿಡದೇ ನನಗೂ ತಿನ್ನಿಸುತ್ತಿದ್ದ.ಕೇಳಿದರೆ,ನನಗೆ ನೀನಲ್ಲವೇ,ನಿನಗೆ ನಾನಲ್ಲವೇ?ನಾವಿಬ್ಬರೂ ಒಂದೇ ಅಲ್ಲವೇ?ಎನ್ನುತ್ತಿದ್ದ.ಆಶ್ಚರ್ಯವೆಂದರೆ,ನನ್ನ ಜೊತೆ ಅವನೂ ಔಷಧ ತೆಗೆದುಕೊಂಡರೆ ಮಾತ್ರ ನನಗೆ ಬೇಗ ವಾಸಿಯಾಗುತ್ತಿತ್ತು.ಇಲ್ಲದಿದ್ದಲ್ಲಿ ಗುಣವಾಗುವುದೇ ಇಲ್ಲವಾಗಿತ್ತಲ್ಲವೇ?ನಾನು ಅಳುತ್ತಿದ್ದಾಗಲೆಲ್ಲಾ ತಾಯಿಯಂತೆ ಬರಸೆಳೆದು ಬಿಗಿದಪ್ಪಿ,ಹಣೆಗೆ ಪಪ್ಪಿ ಕೊಡ್ತಿದ್ದ.ಆ ಒಂದು ಚುಂಬನಕ್ಕಾಗಿಯೇ ಅಲ್ಲವೇ ನಾನು ಪ್ರತಿ ಸಲವೂ ಸುಮ್ ಸುಮ್ನೆ ಅಳ್ತಾ ಇದ್ದಿದ್ದು..!ಸುಳ್ಳು ಸುಳ್ಳೇ ಅಳ್ತಿದ್ದೆ ಎಂದು ಗೊತ್ತಾದರೆ,ಕಳ್ಳಾ..ಎನ್ನುತ್ತ,ಕಿವಿ ಹಿಂಡುತ್ತಿದ್ದ.ಈ ಸಲ ಕೆನ್ನೆಗೆ ಮುತ್ತು ಕೊಡ್ತಿದ್ದ.ಕಂಗಳಿಗೂ ಕೂಡಾ!ಪ್ರತಿಸಲ ಅವನ ಎದೆಯ ಮೇಲೆ ಒರಗಿದಾಗಲೂ ಅದೆಂಥ ಮೋಹಕ ಸುಖ..ಬೆಚ್ಚನೆಯ ಆ ಸ್ಪರ್ಶಕ್ಕಾಗಿಯೇ ಅಲ್ಲವೇ ನಾನವನನ್ನು ಸದಾ ತಬ್ಬಿಕೊಂಡಿರುತ್ತಿದ್ದುದು..ಅವನ ಕೊರಳಿಗೆ ಹೋಗಿ ಜೋತುಬೀಳುತ್ತಿದ್ದುದು..!ಅದೆಷ್ಟು ಸಲ ನನ್ನ ಮಡಿಲಲ್ಲಿ ಮಲಗಿ ಮಗುವಾಗುತ್ತಿದ್ದ!ನಾನದೆಷ್ಟು ಸಲ ಅವನೊಂದಿಗೆ ನಗುವಾಗುತ್ತಿದ್ದೆ!ಅದೆಂಥ ಪ್ರೀತಿ,ಅದೆಂಥ ವಾತ್ಸಲ್ಯ!!ಅಮ್ಮನ ಮಮತೆಯಿಲ್ಲದ ನನಗೆ ಮಾವ ತಂದೆಯಂತಿದ್ದರೆ,ಈತ ನನಗೆ ತಾಯಿಯೇ ಆಗಿಬಿಡುತ್ತಿದ್ದನಲ್ಲವೇ?ಈಗ..ಈಗ ಏನು ಮಾಡಲಿ?...ಭಣಗುಡುವ ನನ್ನೊಡಲ ಏಕಾಂತಕ್ಕೆ ಏನು ಹೇಳಲಿ?..ಬಾಡದಿರಿ ನೆನಪುಗಳೇ ಉಸಿರು ನಿಲ್ಲುವ ಮುನ್ನ..ಕಾಡಿಬಿಡಿ ಪ್ರತಿಕ್ಷಣವೂ ಒಲವ ಸಂಗತಿಯನ್ನ...ನೆನಪಾಗುತ್ತಾಳಲ್ಲವೇ ಮತ್ತೆ ಮತ್ತೆ ಅಮ್ಮ!?.ಇಲ್ಲ,ಹೇಗೆ ನೆನಪಾದಾಳು?ನಾನವಳನ್ನು ನೋಡಿಯೇ ಇಲ್ಲವಲ್ಲ!!ಅಮ್ಮ ಒಂಭತ್ತು ತಿಂಗಳ ಗರ್ಭಿಣಿಯಾಗಿದ್ದಾಗ ನನ್ನಪ್ಪ ತೀರಿಕೊಂಡರಂತೆ..ಆಮೇಲೆ..ಆಮೇಲೆ ನನ್ನನ್ನು ಹೆರುವ ಸಮಯದಲ್ಲಿ ನನ್ನಮ್ಮ ನನ್ನೊಬ್ಬಳನ್ನೇ ಬಿಟ್ಟು ಹೊರಟುಹೋದಳಂತೆ;ತಣ್ಣನೆಯ ಸಾವಿನ ಲೋಕಕ್ಕೆ!ಆದರೆ ನಾನು ಒಬ್ಬಂಟಿಯಾಗಲಿಲ್ಲ..ನನ್ನ ಮಾವ ಅವನ ಮಗನಿಗೆ ಮತ್ತು ನನಗೆ ತಾಯಿಯಾಗಿ,ತಂದೆಯಾಗಿ,ಗುರುವಾಗಿ,ಗುರಿಯಾಗಿ ಬೆಳೆಸಿದನು.ನಾನು ಹುಟ್ಟುವುದಕ್ಕಿಂತ ನಾಲ್ಕು ತಿಂಗಳು ಮೊದಲು ಮಾವನ ಮಗ ಹುಟ್ಟಿದ್ದನಲ್ಲವೇ?ಇದು ಅದೃಷ್ಟವೋ ಅಥವಾ ದುರಾದೃಷ್ಟದ ಅತಿರೇಕವೋ ಅವನಿಗೂ ಅವನ ತಾಯಿ ಹೆರಿಗೆಯ ಸಮಯದಲ್ಲಿ ಆತನನ್ನು ತೊರೆದು ಒಬ್ಬಳೇ ಪರಲೋಕಕ್ಕೆ ಹೊರಟುಹೋದಳಂತೆ..ಮಾವನಿಗೆ ನಾನು ಮತ್ತು ಅವನ ಮಗ ಮಾತ್ರ..ನಾವೇ ಅವನ ಎರಡು ಕಂಗಳಾಗಿದ್ದೇವೆ..ಮಾವ ಎಂದು ನಾನವನನ್ನು ಕರೆದೇ ಇಲ್ಲ.ಪಪ್ಪಾ ಎಂದೇ ಹೇಳುತ್ತೇನೆ ಈಗಲೂ..ಪಪ್ಪ ಸಂಜೆಯ ಸಮಯ ತಿರುಗಾಡಲು ಹೋಗುವಾಗ,ನಾನು ಪಪ್ಪನ ಕೈಯನ್ನು,ಅವನ ಮಗ ನನ್ನ ಕೈಯನ್ನೂ ಹಿಡಿದುಕೊಳ್ಳುತ್ತಿದ್ದ..ಒಮ್ಮೊಮ್ಮೆ ಪಪ್ಪ ನಮ್ಮಿಬ್ಬರನ್ನೂ ಅವನ ಎರಡು ಹೆಗಲುಗಳ ಮೇಲೆ ಕೂರಿಸಿಕೊಂಡು ಸಮುದ್ರತೀರದಲ್ಲಿ ಓಡುತ್ತಿದ್ದ.ನಾವು ನಗುತ್ತಿದ್ದೆವು.ಕುಳಿತಲ್ಲೇ ಹಾರಿ ಹಾರಿ,ಪಪ್ಪಾ ಓಡು ಓಡು ಅನ್ನುತ್ತಿದ್ದೆವು.ಪಪ್ಪ ನಮ್ಮನ್ನು ಖುಷಿಪಡಿಸುತ್ತಿದ್ದ.ಅವನೂ ನಮಗಿಂತ ಹೆಚ್ಚು ಖುಷಿಪಡುತ್ತಿದ್ದ.ವ್ಹಾ!ಅವೆಂಥ ಚೆಂದದ ಕ್ಷಣಗಳು..ಮರೆತುಹೋಗುವವೇ ಮುನಿಸಿ ನಗಿಸಿಹ ಆ ದಿನಗಳು..ಅದೇಕೋ ಕಾಣೆ ಅವನ ಮಗನಿಗೆ ನಾನೆಂದರೆ ಎಲ್ಲಿಲ್ಲದ ಪ್ರೀತಿ..ಆತ ಎಂದೂ ನನ್ನನ್ನು ತಂಗಿ ಅಂತ ಕರೆಯಲೇ ಇಲ್ಲ.ನಾನೂ ಕೂಡಾ ಅಷ್ಟೇ;ಅವನನ್ನು ಎಂದೂ ‘ಅಣ್ಣಾ’ ಎನ್ನಲೇ ಇಲ್ಲ..ಪಪ್ಪನೂ ಕೂಡಾ ಹೀಗೇ ಕರೀ ಅಂತ ಎಂದೂ ಹೇಳಲೇ ಇಲ್ಲ.ಅವನ ಮಗ ನನ್ನನ್ನು ‘ಜೀವಾ’ ಎಂದೇ ಕರೆಯುತ್ತಿದ್ದ.ನಾನೂ ಕೂಡಾ ಅಷ್ಟೇ..ಮುದ್ದೂ ಅಂತಾನೇ ಆತನನ್ನು ಕರೆಯುತ್ತಿದ್ದೆ.ಬಹುಶಃ ಯಾವುದೋ ಲೋಕದಲ್ಲಿ ಯಾವುದೋ ಗಳಿಗೆಯಲ್ಲಿ ನನ್ನ ಮತ್ತು ಅವನ ಸಂಬಂಧ ನಿಶ್ಚಯಿಸಲ್ಪಟ್ಟಿತ್ತೇನೋ!ಜೊತೆಯಲ್ಲೇ ಬೆಳೆದ್ವಿ..ನಾನು ಮತ್ತು ಅವನು ಚಿಕ್ಕವರಿದ್ದಾಗ ಒಮ್ಮೆ ಯಾವುದೋ ಸಣ್ಣ ವಿಷಯಕ್ಕೆ ಮುನಿಸಿಕೊಂಡಿದ್ವಿ... ಆತ ನನ್ನಿಂದ ಅಲ್ಲೇ ಸ್ವಲ್ಪ ದೂರದಲ್ಲಿ ಕುಳಿತುಕೊಂಡಿದ್ದ.ಆಗ ಪಕ್ಕದ ಮನೆಯವನು,ಸ್ವಲ್ಪ ದೊಡ್ಡವನು ಬಂದು,ನನಗೆ ಯಾಕೋ ಸುಮ್ಮನೆ ಬೈಯತೊಡಗಿದ.ನಾನು ಅಳತೊಡಗಿದೆ.ಆಗ ಈತನಿಗೆ ಅದೆಲ್ಲಿಂದ ಕೋಪ ಬಂತೋ!ಹೋಗಿ ಅವನ ಎರಡೂ ಕಾಲುಗಳನ್ನು ಎಳೆದುಬಿಟ್ಟಿದ್ದ.ಆತ ಧಡ್ಡನೆ ನೆಲಕ್ಕೆ ಬಿದ್ದುಬಿಟ್ಟಿದ್ದ.ನಾನು ಅಳುತ್ತಿದ್ದವಳು ಒಮ್ಮೆಲೇ ನಗುತ್ತಾ,ಚಪ್ಪಾಳೆ ತಟ್ಟತೊಡಗಿದೆ.ಆಗ ಆತ ಹೇಳಿದ್ದೇನು?..ನನ್ನ ಪಾಪುವಿಗೆ ನೀನೇನಾದರೂ ಅಂದ್ರೆ ಸುಮ್ನಿದ್ಬಿಡ್ತೀನಾ?...ನನ್ನ ಚಿನ್ನು ಕಣೋ ಅವ್ನು..ಅಂದಿದ್ನಲ್ಲವೇ!ಹ್ಹೂ...ಎಂಟು ವರ್ಷದ ಈತ ನನಗೋಸ್ಕರ ಆ ಹದಿನೆಂಟು ವರ್ಷದ ಹುಡುಗನನ್ನು ಎದುರಿಸಲು ಹೋಗಿದ್ದನಲ್ಲಾ!ಅದೆಂಥ ಉತ್ಕಟ ಪ್ರೀತಿ;ಅದೆಂಥ ಅಚಲ ಆತ್ಮವಿಶ್ವಾಸ..ಹೀಗೇ ಇತ್ತಲ್ಲವೇ ನಮ್ಮ ಅನುಬಂಧ!ಆತ ಸಾಯುವ ಹಿಂದಿನ ದಿನ,ಚಿನ್ನೂ..ನನ್ ಜೀವ...ಯಾಕೋ ಒಂಥರಾ ಇದ್ದೀಯಾ..ಅಂತ ಕೇಳಿದ್ದ.ನಾನು,ಏನಾಗಿದ್ಯೋ ನಂಗೆ;ಚೆನ್ನಾಗೇ ಇದ್ದೀನಲ್ಲೋ..ಏನೋ,ಏನಾಯ್ತೋ ನಿಂಗೆ..?ಅಂತ ಕೇಳಿದ್ದೆ.ನನಗ್ಯಾಕೋ ಅಂದೇ ತಳಮಳ ಶುರುವಾಗಿತ್ತು.ಆದರೂ ಆತನಲ್ಲಿ ಹಾಗೆ ಹೇಳಿದ್ದೆ.ಬಹುಶಃ ಆತನ ಸಾವಿನ ಮುನ್ಸೂಚನೆ ನನ್ನ ಹೃದಯಕ್ಕೆ ಅರಿವಾಗಿತ್ತೇ?ಅದು ಅವನಿಗೆ ನನ್ನೊಳಗಿನ ತುಮುಲವಾಗಿ,ನನ್ನ ಕಣ್ಣುಗಳಲ್ಲಿ ಕಂಡಿತ್ತೇ?ದಿನಾ ಒಂದು ಚೆಂದದ ಚೆಂಗುಲಾಬಿಯನ್ನು ತಂದುಕೊಡುತ್ತಿದ್ದವನು,ಆ ದಿನ ಮಾತ್ರ ಕೆಂಗುಲಾಬಿಯ ಜೊತೆಗೆ,ಅದ್ಭುತ ಕಲಾಕೃತಿಯಂತಿರುವ,ಪ್ಲಾಸ್ಟಿಕ್ ಗುಲಾಬಿಯನ್ನೂ ತಂದಿದ್ದ.ಪ್ಲಾಸ್ಟಿಕ್ ಗುಲಾಬಿಯನ್ನು ಕೊಟ್ಟು ಹೇಳಿದ್ದ..ಪ್ರೀತೀ..ಈ ರೋಜಾ ಹೂ ಬಾಡಿಹೋಗುವವರೆಗೂ ನಾನು ನಿನ್ನೊಂದಿಗೆ ಇರ್ತೀನಿ..ನಿನ್ನ ನಗುವಾಗಿ..ನಿನ್ನ ಮಗುವಾಗಿ..ನಿನ್ನ ಜೀವದ ಚೆಲುವಾಗಿ..ಹೃದಯದ ಗೆಲುವಾಗಿ..ಎಂದೆಂದೂ ನಿನಗೇ ಅಂಟಿಕೊಂಡು ನಿನ್ನ ಬೆಚ್ಚನೆಯ ಸ್ಪರ್ಶಸುಖದಲ್ಲೇ ತೇಲುತ್ತಾ,ನಿನ್ನ ಹೃದಯದ ಪ್ರತೀ ಕೋಣೆಯ ಕಿಟಕಿ ಬಾಗಿಲುಗಳನ್ನು ಬಡಿಯುತ್ತಾ,ನಿನ್ನನ್ನು ಅಳಿಸುತ್ತಾ,ನಗಿಸುತ್ತಾ,ಅಮೂರ್ತ ಪ್ರೀತಿಯೊಂದಿಗೆ ನಿನ್ನನ್ನು ಮುದ್ದಿಸುತ್ತಾ ಇರ್ತೀನಿ..ನಿನ್ನ ಪ್ರತೀ ಕಣದಲ್ಲೂ..ಪ್ರತೀ ಕ್ಷಣದಲ್ಲೂ...!ಎಂದಿದ್ದನಲ್ಲವೇ?ಈಗಲೂ..ಈ ಕ್ಷಣವೂ,ಹಾಗೆಯೇ?ನನ್ನ ಹೃದಯದ ಹೊಸ್ತಿಲಲ್ಲಿ ಕುಣಿಯುತ್ತಿದ್ದಾನಲ್ಲವೇ?ಹೊರಗೆ ಹೋಗಲೇ ಎಂದು ಹೆದರಿಸುತ್ತಿದ್ದಾನಲ್ಲವೇ?ಅವನೇ ಪದೇ ಪದೇ ಧ್ವನಿಸುತ್ತಿದ್ದಾನಲ್ಲವೇ?ಅವನ ನೆನಪುಗಳು ಎಂದಿಗೂ ಮಿಂಚಿನ ಸಂಚಲನದಂತೆ ಕ್ಷಣಿಕವಲ್ಲ..ಅದು ಕ್ಷಣ ಕ್ಷಣವೂ ಪುಳಕ..ಪವಿತ್ರ ಸೋನೆಮಳೆಯ ಮೈಜಳಕ..ಎಲೆಗಳ ಮೇಲೆ ಹೊರಳಾಡೋ ಚೆಂದ ಚೆಂದ ಮಿಹಿಕಾ..ನೆನಪುಗಳೇ ಹೀಗೆ..ಕಾಡುತ್ತಲೇ ತೃಪ್ತಿಪಡಿಸುತ್ತವೆ.ಕಾಡುತ್ತಲೇ ಮಾತಾಡದೆಯೇ ಮಾತಾಗುತ್ತವೆ.ಆದರೆ ಈತನ ನೆನಪುಗಳು ನನ್ನನ್ನು ಸುಡುತ್ತಿವೆಯಲ್ಲವೇ?ಅವನ ನೆನಪುಗಳೆಂದರೆ ಬೂದಿ ಮುಚ್ಚಿದ ಕೆಂಡವೇ?ಈತನ ಎಲ್ಲ ನೆನಪುಗಳ ಭಾರಕ್ಕೆ ಮನವೇಕೋ ಕಲಕುತ್ತಿದೆ.ಆತ ನನಗಾಗಿ ಎಲ್ಲವೂ ಆಗಿದ್ದನಲ್ಲವೇ?ಹೌದು..ಈಗದು ಕೇವಲ ಕುರುಹುಗಳು ಮಾತ್ರವಲ್ಲವೇ?ಎಷ್ಟು ಹಂಬಲಿಸಿದ್ದೆ ಅವನ ಜೊತೆ ಬಾಳಲು?..ಬಾಳಲಿಲ್ಲವೇ?..ಬಾಳಿದ್ದೇನಲ್ಲವೇ?..ಎಂದೂ ಬತ್ತಿಹೋಗದ ಬಾಲ್ಯದ ಮಧುರ ಕ್ಷಣಗಳೊಂದೇ ಸಾಕಲ್ಲವೇ ಈ ಜನುಮಕೆ..ಮಿಡಿವ ಹೃದಯಕೆ..!ನನ್ನ ಅವನ ಬಾಂಧವ್ಯದಂತೆ ಈ ಕಡಲಿನೊಂದಿಗಿನ ಸಂಬಂಧ..ಹಠಮಾಡಿ ಕಡಲ ತಡಿಯಲ್ಲೇ ಮಲಗಿದ ದಿನಗಳೆಷ್ಟಿಲ್ಲ?ನಾವು ಮೂವರೂ ಒಟ್ಟಾಗಿ ಕಳೆದ ಚಣಗಳೆಷ್ಟಿಲ್ಲ?ಈ ಕಡಲ ಮಡಿಲಲ್ಲಿ..!ಎಂದು ಅಂದುಕೊಳ್ಳುತ್ತಾ ಇರುವ ಸಮಯದಲ್ಲೇ,ಅಲ್ಲಿಗೆ ಒಬ್ಬ ಸಣ್ಣ ಹುಡುಗ ಬಲೂನುಗಳನ್ನು ಮಾರುತ್ತಾ ಬಂದ.ಕಡಲಿನ ಪ್ರಕ್ಷುಬ್ಧತೆ ಈಗ ಮಾಯವಾಗಿತ್ತು.ಸೂರಿ ಪಡುವಣದಿ ತನ್ನ ನಿರ್ಗಮನದ ಕೊನೆಯ ಅಂಚಿನಲ್ಲಿದ್ದ..ಕಡಲದಂಡೆಯಲ್ಲಿ ಮತ್ತೆ ಜನ ತುಂಬಿಕೊಂಡಿದ್ದರು.ಬಲೂನು ಮಾರುವ ಆ ಹುಡುಗ ನಡೆಯುತ್ತಾ ನಡೆಯುತ್ತಾ ಈಕೆಯಲ್ಲಿಗೆ ಬಂದ.ಅಕ್ಕಾ,ಬಲೂನು ಬೇಕಾ?...ಎಂದ.ಆಕೆ ಉತ್ತರಿಸಲಿಲ್ಲ.ಮತ್ತೆ ಮತ್ತೆ ಕೇಳತೊಡಗಿದ.ಆಕೆ ಉತ್ತರಿಸದೇ ಹಾಗೇ ಕುಳಿತಿದ್ದಳು.ತನ್ನ ಪುಟ್ಟ ಕೈಯಿಂದ ಅವಳ ಹೆಗಲನ್ನು ಅಲುಗಿಸಿದ.ಆತ ಹಾಗೆ ಸ್ಪರ್ಶಿಸಿದ ಮರುಕ್ಷಣವೇ ಆಕೆಯಲ್ಲಿ ಯಾಕೋ ಮಾತೃವಾತ್ಸಲ್ಯ ಉಕ್ಕಿ ಹರಿಯತೊಡಗಿತು.ಆತನನ್ನು ನೋಡಿದಳು.ಮುಗ್ಧತೆ ತುಂಬಿದ ಆ ಮುಖ ಎಷ್ಟು ಚೆಂದವಿತ್ತು ಎಂದರೆ,ಅವಳಿಗೆ ಕೂಡಲೇ ತನ್ನಿನಿಯನ ಮಾಸದ ಆ ನಗು ಇವನ ಮುಖದಲ್ಲಿ ಕಾಣತೊಡಗಿತ್ತು.ದಂತದ ಗೊಂಬೆಯಂತಿದ್ದ.ಅವನನ್ನೇ ನೋಡತೊಡಗಿದಳು.ನಿನ್ನೆಯ ನೆನಪಿರದ,ನಾಳೆಯ ಚಿಂತೆಯಿರದ,ಇಂದಿನ ಹಂಗಿರದ ಆ ಮುಖ ಪ್ರಶಾಂತವಾಗಿ ಕಂಡಿತು.ಹಳೆಯ ಅಂಗಿಯನ್ನು ಧರಿಸಿದ್ದರೂ ಸೌಂದರ್ಯ ಎದ್ದು ನಲಿಯುತ್ತಿತ್ತು.ತೀಕ್ಷ್ಣ ಕಣ್ಣುಗಳು ಕಾಂತಿಯುತವಾಗಿದ್ದವು.ಜೀವನೋತ್ಸಾಹ ತುಂಬಿತುಳುಕುತ್ತಿತ್ತು.ಆತ ಮತ್ತೆ ಮತ್ತೆ ಅಕ್ಕಾ ಅಕ್ಕಾ ಎಂದು ಕರೆಯುತ್ತಿದ್ದ.ಆತನ ಹೆಗಲ ಮೇಲೆ ಕೈಯಿಟ್ಟ ಆಕೆ,ಕುಳಿತಲ್ಲಿಂದಲೇ,ಕುಳಿತುಕೋ ಎಂದು ಸನ್ನೆ ಮಾಡಿದಳು.ಆತ ಕುಳಿತ ತಕ್ಷಣ,ಆತನನ್ನು ಬರಸೆಳೆದು ಬಿಗಿದಪ್ಪಿ,ಹಣೆಯ ಮೇಲೆ ಮುತ್ತಿಟ್ಟಳು.ಅವಳು ಹಾಗೆ ಮಾಡಿದ ತಕ್ಷಣ ಆತನಲ್ಲಿ ಏನಾಯಿತೋ ಏನೋ ಕಣ್ಣಿಂದ ಭಾಷ್ಪಗಳು ಉದುರತೊಡಗಿದವು.ಆತನ ಕಣ್ಣೀರನ್ನು ತನ್ನ ಬೆರಳುಗಳಿಂದ ಒರೆಸಿದಳು.ಆತನನ್ನು ತನ್ನ ಮಡಿಲಲ್ಲಿ ಮಲಗಿಸಿಕೊಂಡಳು.ಆತನಿಗೆ ಇದ್ಯಾವುದರ ಅರಿವೂ ಇಲ್ಲ.ಯಾವುದೋ ಒಂದು ಅಮೂರ್ತ ಲೋಕದೊಳಗೆ ಆತ ಜಾರಿಹೋಗಿದ್ದ.ಅವಳ ಪ್ರೀತಿಯ ಒಂದು ನೇವರಿಕೆ ಆತನಿಗೆ ಅಷ್ಟೊಂದು ಅಪ್ಯಾಯಮಾನವಾಗಿತ್ತು.ಆತನಿಗೆ ಅರಿವಿಲ್ಲದೇ ,ಅಯಾಚಿತವಾಗಿ ಜಗದ ಶ್ರೇಷ್ಠ ಪದ ‘ಅಮ್ಮಾ’ ಎಂಬ ಉದ್ಘಾರ ಆತನ ಬಾಯಿಂದ ಹೊರಬಂತು.ದನಿಯಲ್ಲಿ ಉತ್ಕಟ ಪ್ರೀತಿಯಿತ್ತು.ಕರೆದ ಆ ಬಗೆಯಲ್ಲಿ ಮೊಟ್ಟಮೊದಲು ಅಮ್ಮಾ ಎಂದು ಕರೆದ ಮಿಡಿತವಿತ್ತು.ಆ ನುಡಿಯನ್ನು ಕೇಳಿದ ಕೂಡಲೇ ಆಕೆಯ ಕಣ್ಣುಗಳಲ್ಲಿ ಅದೆಂಥದೋ ಉತ್ಸಾಹ.ಅವರ್ಣನೀಯವಾದಂತಹ ಅತಿಮಧುರ ಸಿಹಿಸ್ವಪ್ನ ನಗು..ಕಣ್ಣುಗಳು ಸುಮ್ಮನಿರಬೇಕಲ್ಲ;ಯಾರನ್ನೂ,ಯಾವುದನ್ನೂ ಕೇಳದೆಯೇ ಸಂತೃಪ್ತಿಯ ಒಂದೆರಡು ಬಿಂದುಗಳು ಆಕೆಯ ಕೆನ್ನೆ ಮೇಲಿಂದ ಹಾಗೇ ಜಾರಿಹೋಗಿ ಆತನ ಕಪೋಲಗಳ ಮೇಲೆ ಬಿತ್ತು.ಆಗ ಆತ ಅವಳೆಡೆಗೆ ನೋಡಿದ.ತನ್ನ ಕೈಗೆ ಮುತ್ತಿಕ್ಕಿಕೊಂಡ.ತನ್ನ ಪುಟ್ಟ ಪುಟ್ಟ ಬೆರಳುಗಳಿಂದ ಅವಳ ಕಣ್ಣೀರೊರೆಸುವ ಪ್ರಯತ್ನ ಮಾಡಿದ.ಇಬ್ಬರೂ ಮಾತನಾಡುತ್ತಿಲ್ಲ.ಆದರೂ ಅದೊಂದು ಅಭೂತಪೂರ್ವ ಅನುಭೂತಿ!ಮಾತಿಲ್ಲದ ಆ ಸಂವಹನದ ಸಂವೇದನೆಯೇ ಅದೆಷ್ಟು ಚೆಂದ!ಇದ್ದಕ್ಕಿದ್ದಂತೆ,ಅವಳು ಕುಳಿತ ಆ ಬಂಡೆಯ ಮೇಲೆ ಒಂದು ಚಿಟ್ಟೆ ಹಾರಿಬಂದು ಕುಳಿತಿತು.ಆಕೆ ಒಂದು ಕೈಯಿಂದ ಆತನ ತಲೆಯನ್ನು ನೇವರಿಸುತ್ತಾ,ಇನ್ನೊಂದು ಕೈಯನ್ನು ಬಂಡೆಯ ಮೇಲಿಟ್ಟಳು.ಆದರೆ, ಆಕೆಯ ಕೈ ಆ ಚಿಟ್ಟೆಯ ಮೇಲೆ ಬಿದ್ದಾಗ,ಚಿಟ್ಟೆ ವಿಲವಿಲನೆ ಒದ್ದಾಡಿದಾಗ,ಆಕೆ ಕುಳಿತಲ್ಲಿಯೇ ಚಡಪಡಿಸಿದಳು.ರಂಗುರಂಗಿನ ಆ ಚಿಟ್ಟೆಯ ವಯಸ್ಸು ಕೇವಲ ಹದಿನಾಲ್ಕು ದಿನಗಳು.ಆದರೆ,ಅದರ ಚೈತನ್ಯಕ್ಕೆ ಅದಕ್ಕದು ಮಾತ್ರವೇ ಸಾಟಿ ಅಲ್ಲವೇ?ಪತಂಗದ ಮೇಲೆ ಕೈಬಿದ್ದಾಗ,ಆ ಪುಟ್ಟ ಜೀವ ಎಷ್ಟೊಂದು ಚಡಪಡಿಸಿರಬೇಕು ಎಂದು ಈಕೆಯ ಮನಸ್ಸು ಕೊರಗತೊಡಗಿತ್ತು.ಮತ್ತೆ ಮತ್ತೆ ಕುಳಿತಲ್ಲಿಯೇ ಚಡಪಡಿಸುತ್ತಿದ್ದಳು.ಆ ಚಿಟ್ಟೆಯು ಸತ್ತಂತೆ ಬಿದ್ದುಕೊಂಡಿತ್ತು.ಸತ್ತಿತ್ತೇ?ಅಥವಾ ಬದುಕಿಯೇ ಇತ್ತೇ?ಒಂದೆರಡು ಕ್ಷಣ ರೆಕ್ಕೆ ಬಡಿದಾಡಿತ್ತು.ಒಂದೇ ಸಮನೆ ಜೋರಾಗಿ ಗಾಳಿ ಬೀಸತೊಡಗಿತು.ಜೊತೆಗೆ ಧೋಧೋ ಎಂದು ಮಳೆ ಸುರಿಯತೊಡಗಿತು.ಆ ಹುಡುಗ ಆಕೆಯ ಮಡಿಲಿನಿಂದ ಎದ್ದ.ಎದ್ದವನೇ ತನ್ನ ಬಲೂನುಗಳನ್ನು ನೋಡಿದ.ಈಕೆಯನ್ನು ನೋಡಿ,ಯಾವುದೋ ಅರ್ಥವಾಗದ ಭಾವದ ನೋಟವೊಂದನ್ನು ಬೀರಿದ..ಆದರೆ, ಆ ನೋಟ ನಿರ್ವಿಕಲ್ಪ ನಿರ್ಭರ ನಿಸ್ತುಲ ಭಾವದ ಹೃದಯಪದ್ಮದ ಕುಸುಮವಾಗಿತ್ತು.ತನ್ನ ಬಲೂನುಗಳೊಂದಿಗೆ ಆತ ನಡೆಯತೊಡಗಿದ.ಆಕೆ ಮತ್ತೆ ಮಾತನಾಡಲಿಲ್ಲ.ಆತನೂ ಕೂಡಾ!ಆಕೆ ಹೋಗಬೇಡವೆಂದು ಹೇಳಲಿಲ್ಲ.ಆತನೂ ಹೋಗುತ್ತೇನೆ ಅನ್ನಲೇ ಇಲ್ಲ.ಆತ ದೂರ ದೂರ ನಡೆದುಹೋಗುತ್ತಿದ್ದ.ಈಕೆ ನೋಡುತ್ತಿದ್ದಾಳೆ.ಆತನ ಬಲೂನುಗಳ ರಾಶಿಯಲ್ಲಿ ಒಂದು ಬಲೂನಿನ ತುತ್ತತುದಿಯಲ್ಲಿ ಆ ಚಿಟ್ಟೆ ನಾಟ್ಯವಾಡುತ್ತಿತ್ತು.ವ್ಹಾ!ಬದುಕು ಅದೆಷ್ಟು ಸುಂದರ.ಮುಗ್ಧ ಮನೋಹರ..ಆ ಹುಡುಗ ಎಲ್ಲಿಂದ ಬಂದ,ಹೇಗೆ ಬಂದ ಮತ್ತು ಯಾಕಾಗಿ ಬಂದ?ಈಗ ಆಗಂತುಕನಂತೆ ಮಾಯವಾದ..ಪರಿಚಿತನಾಗುವ ಮುನ್ನವೇ ಮತ್ತೆ ಅನಾಮಿಕನಾಗಿ ಹೋದನಲ್ಲವೇ?ಆಕೆ ಯೋಚಿಸುತ್ತಲೇ ಇದ್ದಾಳೆ.ಬಲೂನು ಮಾರುವ ಆ ಹುಡುಗ ಒಂದು ನೆಪವೇ?ಹೃದಯ ಬಯಸುವುದು ಎಂದೂ ಒಂದು ಹಿಡಿ ಪ್ರೀತಿಯನ್ನು ಅಲ್ಲವೇ?ಬೇಸರವಾದಾಗ ಸಾಂತ್ವನದ ಒಂದು ಮೃದುಲ ಸ್ಪರ್ಶಕ್ಕಾಗಿ ಮನಸ್ಸು ಹಂಬಲಿಸುತ್ತದಲ್ಲವೇ?ಯಾಕೆ ಪ್ರೀತಿ ಪ್ರೀತಿ ಪ್ರೀತಿ..!ಈ ಥರದ ರೀತಿ?ಅದನ್ನು ಬಿಟ್ಟು ಮನುಷ್ಯ ಬದುಕಲಾರನೇ?ನೆರಳು,ಸಾವುಗಳಂತೆಯೇ ಈ ಪ್ರೀತಿಯೇ?ಸಾವನ್ನು ಯಾರೂ ಬಯಸದಿದ್ದರೂ ಅದು ನಮ್ಮನ್ನು ಬಯಸುತ್ತದಲ್ಲವೇ?ನೆರಳೂ ಕೂಡ ಹಾಗೇ..ನಾನು ನಿನ್ನವನು,ನೀನು ನನ್ನವನು ಎನ್ನುತ್ತಲೇ ಕತ್ತಲಲ್ಲಿ ಕರಗಿಹೋಗುತ್ತದೆ,ಕಳೆದುಹೋಗುತ್ತದೆ...ಈ ಹುಡುಗನಂತೆಯೇ!ಆದರೆ,ಜೊತೆಗಿದ್ದಷ್ಟು ಕಾಲ ಒಂಟಿತನದ ಏಕಾಂತದಲ್ಲೂ ಜಂಟಿಯಾಗುತ್ತದೆ.ಅಮೃತತ್ವದ ಸಿಂಚನದ ಕಾಲವದು!..ಬಾಂಧವ್ಯದ ಹಾದಿಯಲ್ಲಿ ಕ್ರಮಿಸಿದ ಹೆಜ್ಜೆ ಸುಳಿವೂ ಕೂಡಾ ಎಷ್ಟೊಂದು ಚೆಂದ ಅಲ್ಲವೇ?ಈಗ ಅಳುತ್ತಿದೆ ಮುಗಿಲು;ನನ್ನ ಬದಲು..ಆದರೆ ತಂಪಾಗಿದೆ ನನ್ನೊಡಲು..ಹಿತವಾಗಿದೆ ಅಲೆಯ ಕಡಲು..ಕ್ಷಿತಿ ಮತ್ತು ವಿಹಗಳು ಎಂದಿಗೂ ಒಂದಾಗಲು ಸಾಧ್ಯವೇ ಇಲ್ಲವೇ?ದಿಗಂತದಲ್ಲಿ ಸೇರುತ್ತವಲ್ಲವೇ?ಅಥವಾ ಸೇರಿದಂತೆ ಅನಿಸುತ್ತದೆಯೇ?ಭ್ರಮೆಯ ಮಗ್ನತೆಯಲ್ಲಿ,ಭಗ್ನಗೊಂಡ ಮುಗಿಲ ಕನಸುಗಳು ಕಾಣುವುದೇ ಇಲ್ಲವಲ್ಲ..ಒಬ್ಬರನ್ನೊಬ್ಬರು ಕೇವಲ ನೋಡುತ್ತಲೇ ಕಾಲ ನೂಕುವ,ಗಗನ ಮತ್ತು ಧರಣಿಗಳ ಪ್ರೀತಿ ಚಿರಂತನ ಅಲ್ಲವೇ?..ಮಿಲನದ ಸುಳಿವುಗಳಲ್ಲಿ ಮಲಿನ ಮನಸುಗಳಿಲ್ಲ..ಪ್ರತಿಸಲವೂ ಆಕಾಶ ಮತ್ತು ಭುವಿಯು ವರಿಸುತ್ತಲೇ ಇರುತ್ತವಲ್ಲವೇ?ಪ್ರತೀ ಬಾರಿಯೂ ಕಂಬನಿಯ ಮಾಲೆ!ಮಧುಚಂದ್ರವಿರದ ಮನ್ವಂತರದ ಬದುಕೇ!!...ದಿಗಂತವೆಂಬುದು ಅನಂತದಲ್ಲಿರುವಾಗ ಕಣ್ಣುಗಳಿಗೆಲ್ಲಿ ಅದನ್ನು ಸೆರೆಹಿಡಿಯುವ ಅವಕಾಶ?..ಹಂಬಲಗಳ ಹಂಗಿನಲ್ಲಿ ಬದುಕು ಒಂದು ಹಂದರ ಅಲ್ಲವೇ?ನನ್ನ ಒಲುಮೆಯ ಬೃಂದಾವನದಿ ನೆನಪುಗಳೇ ಅವನ ರಾಯಭಾರಿ..ಇತಿಹಾಸದಲ್ಲಿ ಮತ್ತೆ ಮತ್ತೆ ಕಾಡುವ,ಕೃಷ್ಣನ ತೋರುವ ಪ್ರೀತಿ ಕಣ್ಣಾಗಿ,ರಾಧೆಯಾಗಿಬಿಡಲೇ?ಪರಿತಾಪವೆಲ್ಲಾ ಈಗ ಪರಿಧ್ಯಾನವಾಗಿ ಅನುಭಾವವಾಗುತ್ತಿದೆಯಲ್ಲಾ..ಸಾವಿನಾ ಸಂಚಿನೊಳಗೆಲ್ಲ ಸ್ವಚ್ಛಂದವಾಗಿ ವಿಹರಿಸಿಬಿಡಬೇಕಲ್ಲವೇ?ನನ್ನದೆನ್ನುವ ನೆರಳು ನನ್ನೊಂದಿಗೇ ಇದೆ..ಸಾವೂ ಕೂಡಾ ಇದೆ;ಬೆನ್ತಟ್ಟುವ ಬೆರಳುಗಳಂತೆಯೇ!ಸಾವು,ನೆರಳು ಮತ್ತು ಪ್ರೀತಿಯ ವಿಶ್ಲೇಷಣೆಗಳಲ್ಲಿ ನಾನು ಸೋತುಹೋಗಿದ್ದೇನೆ..ಆದರೆ,ಹೆಣ್ತನದ ವಾತ್ಸಲ್ಯದ ಪರಿಧಿಯೊಳಗೆ ಏನೋ ಒಂಥರದ ಸಮಾಧಾನದ ಗೆಲುವನ್ನು ಹೊಂದಿದ್ದೇನಲ್ಲವೇ?ಮಾತೃತ್ವವೆಂಬುದು ಜೀವಕಾವ್ಯದಂತೆ..ಸಾವಿರದ ಚರಿತ್ರೆಯಂತೆ..ನನಗೆ ಅದು ದೊರೆತಾಯಿತು!ನಾನು ತಾಯಿಯಾದೆ..!ಮಾತೃತ್ವದ ಜೀವಸೆಲೆಯ ಸನ್ನಿಧಿಯಲ್ಲಿ ವಾಸ್ತವದ ಪವಿತ್ರ ಸಂಗತಿಯಾದೆ..ಭಣಗುಡುವ ನನ್ನೊಡಲ ಏಕಾಂತಕ್ಕೆ ಇನ್ನೇನೂ ಹೇಳಬೇಕಿಲ್ಲ!ಅದೀಗ ಭಣಗುಡುತ್ತಲೂ ಇಲ್ಲ,ಅದೀಗ ಏಕಾಂಗಿಯೂ ಅಲ್ಲ!!ಮೌನದೊಂದಿಗೆ ಮನದ ಸಂಧಾನವಾಗಿದೆ.ಶಬ್ದಗಳು ಹೇಳಲಾಗದ ಮಾತೃತ್ವದ ಜೀವನ ಸೌಂದರ್ಯವನ್ನು ಕೇವಲ ಪ್ರೀತಿಯ ಒಂದು ಸ್ಪರ್ಶ ನೀಡಿದೆಯಲ್ಲವೇ?ಮಳೆ ಹನಿಸುತ್ತಲೇ ಇದೆ ಅಲ್ಲವೇ?ಹೀಗೇ ಇರಲಿ..ಮನಸ್ಸಿಗೆ,ದೇಹಕ್ಕೆ ತಂಪು ಕೊಡುವ ಈ ಹನಿಗಳ ಬಳಗದ ಚಳುವಳಿಯ ಸೊಗಡು ಸೊಬಗಲ್ಲವೇ?..ಚಂದಮಾಮ ನಿನ್ನ ಬೆಳಗು..ನೀರ ಗಾಜಿನ ಲೋಕದೊಳಗು!!..ಅಂದುಕೊಳ್ಳುತ್ತಿದ್ದಾಳೆ.ಮರಳಲ್ಲಿ ನಡೆಯಬೇಕೆಂದರೆ ಕಾಲೆಳೆಯುತ್ತ ಸಾಗಬಾರದು..ಕಾಲನ್ನು ಎತ್ತಿಹಾಕುತ್ತಾ ಹೋಗಬೇಕು..ಅಂದಾಆಅಗ ಮಾತ್ರ ದಿಟ್ಟ,ಸ್ಪಷ್ಟ ಹೆಜ್ಜೆ ಮೂಡಲು ಸಾಧ್ಯ..ಕುಳಿತ ಕಲ್ಲಿನಿಂದ ಕೆಳಗಿಳಿದು ಬಂದಳು.ಸಮುದ್ರದಲೆಗಳು ತೀರ ತಾಕುವ ಜಾಗಕ್ಕಿಂತ ಸ್ವಲ್ಪ ದೂರದಲ್ಲಿ ಬಂದು ನಿಂತಳು..ಚಂದಮಾಮನನ್ನು ನೋಡಿದಳು..ಹಾಗೇ ಸಮುದ್ರವನ್ನು ನೋಡಿದಳು..ಮಂದಸ್ಮಿತಳಾದಳು..ಕಡಲಿಗೆ ಹೇಳಿದಳು..ನೋಡು ನೋಡು,ಸಾಲು ಸಾಲು!ಕಾದು ಕುಳಿತಿವೆ ಪ್ರಸವಕ್ಕೆ ಭಾವ ಹಣತೆಗಳು..ಇದು ನನ್ನೊಬ್ಬಳ ಕತೆಯಲ್ಲ,ಎಲ್ಲರ ಕತೆ!..ಎನ್ನುತ್ತಾ ಅಲ್ಲೇ ಮಳಲ ಮೇಲೆ ಕುಳಿತಳು..ಆ ಇಬ್ಬರು ಪುಟ್ಟ ಮಕ್ಕಳು ಮಾಡಿದ್ದ ಗೊಂಬೆಯ ಅವಶೇಷದ ಸುಳಿವು ದೊರಕುತ್ತಿತ್ತು.ಈಕೆ ಮಳಲನ್ನು ಒಟ್ಟುಗೂಡಿಸತೊಡಗಿದಳು..ಈಗ ಅವಳ ಅಂತರಂಗದಲ್ಲಿ ಬೆಳಕಿತ್ತು..ಹೊಸ ಭರವಸೆಯ ಹೊಳಹಿತ್ತು..ಮಳಲಿನ ಮನೆಯನ್ನು ಕಟ್ಟುತ್ತಾ ಹೇಳತೊಡಗಿದಳು...ನನ್ನ ಕಡಲು ಈಗ ಅಗಾಧವಾಗಿದೆ,ಪ್ರಶಾಂತವಾಗಿದೆ..ಅದರ ಕಿನಾರೆಯ ತುಂಬೆಲ್ಲ ಹರಡಿದ್ದ ನೆನಪ ಮಳಲ ಮೇಲೆ ಇದ್ದ ಪ್ರೀತಿ,ಸಾವು ಮತ್ತು ನೆಳಲಿನ ಹೆಜ್ಜೆಗುರುತುಗಳು ಮುಗಿಲ ಕಂಬನಿಯಿಂದ ಮತ್ತಷ್ಟು ಸ್ಪಷ್ಟವಾಗಿವೆ..ಸ್ಥಿರವಾಗಿವೆ..ಅಳಿಸಿಹೋಗಬೇಕಾದವು ಅರಳಿನಿಂತಿವೆ..!!ಸಾಧನೆಯ ಬೀದಿಗೆ ಅವೇ ನನಗೆ ದಾರಿಯಾಗಿವೆ..ಕಡಲೇ..ಕಲ್ಪನೆಗೂ,ವಾಸ್ತವಕ್ಕೂ ಎಲ್ಲಿಯ ಹೋಲಿಕೆ?...ಕನಸೆಂಬುದು ಎಂದೂ ಗಾಜಿನಾ ಬಾಲಿಕೆ..ಅರ್ಥವಾಗುತ್ತದೋ ಇಲ್ಲವೋ ಅದೆಲ್ಲ ‘ಅವನಿಗೆ’..ಆದರೂ ನಿನ್ನೆಗೆ ನಾಳೆಗೆ ಒಲವಿನ ಬೆಸುಗೆ!ಕಳೆದ ಕ್ಷಣಗಳ,ಬೆಸೆದ ಮನಗಳ ನೆನಪುಗಳ ಮಹಲು..ಕನವರಿಸಿ ಕನಿಕರಿಸಿ ಕುಳಿತಿಹವು ಈಗ ಕನಸುಗಳು...ನನ್ನ ಮನದ ತುಂಬ ತುಂಬ ನೆನಪುಗಳ ರಾಯಭಾರ...ಬರೆದುಬಿಡಿ ಭಾವಗಳೇ,ನನ್ನೆದೆಯ ಮಳಲ ಮೇಲೆ ಚೂರು ಹಸ್ತಾಕ್ಷರ...!!!....



                                                                                                   ~‘ಶ್ರೀ’
                                                                                                     ತಲಗೇರಿ

ಗುರುವಾರ, ಮೇ 24, 2012


                 "ಸಾಕ್ಷಿ"...


         ಬಿಳಿಯ ಮುಗಿಲ
         ಬಗಲಲ್ಲಿ ತಾರೆಗಳ ಪ್ರಣಯ
         ಸುಳಿವ ಬೆಳಕ
         ಸುಳಿಯಲ್ಲಿ ಮೀಟುವುದು ಹೃದಯ

         ಅಳುವಾ ಗಾಳಿ
         ನಗುವಾ ಎಲೆಗಳನು ಸೋಕಿ
         ಬಳುಕಿ ಬಾಗಿ
         ಗೆಲುವಾಗುವುದು ಇಣುಕಿ

         ಕವಲು ದಾರಿ
         ಬರಿಯ ಬಿದಿರುಗಳಾ ಸಂತೆ
         ಕೊಳಲ ಮಾಡೆ
         ಕಲ್ಲಲ್ಲೂ ಉಕ್ಕುವುದು ಕವಿತೆ!

         ನೆರಳ ಮೇಳ
         ಬೆಳಕ ಕನಸುಗಳನು ಕೆಣಕಿ
         ಬಿರಿಯೆ ನಾಳೆ
         ಜೊತೆಯಾಗುವುದು ಬದುಕಿ..

         ಮೃದುಲ ಚಂದ್ರ
         ಸರಿದ ರಾತ್ರಿಗಳಾ ಸಾಕ್ಷಿ
         ಮುರಿದ ಮನಸ
         ಸೆರಗಲ್ಲೂ ಸ್ಫುರಿಸಲಿ ಪ್ರೀತಿ...!!


                                      ~‘ಶ್ರೀ’
                                        ತಲಗೇರಿ

ಮಂಗಳವಾರ, ಮೇ 22, 2012


           "ಮುರುಕು ಸ್ವಪ್ನ ಬಿಂಬ"....
                                    ...ಬಿಡುಗಡೆಗೆ ಹಂಬಲಿಸುತಿಹ ಅಂತರ್ಮುಖಿಯ ನಭ....



         ಮೌನ...ಎದೆ ಕರಗಿಸುವ ಮೌನ..ಮರುಕ್ಷಣ ರಕ್ತಹೆಪ್ಪುಗಟ್ಟುವ ಆಕ್ರಂದನ..ಹೃದಯ ಮಿಡಿವ ಮೃದು ತಂಗಾಳಿಯಲ್ಲಿ ಬಿರುಗಾಳಿಯ ಭೋರ್ಗರೆತದ ಝೇಂಕಾರವೇಕೆ?ನಂದಗೋಕುಲದಂತಾಗಬೇಕಿದ್ದ ಮನೆಯ ನಂದಾದೀಪ ನಂದಿದ್ದೇಕೆ?ನೆಲಕ್ಕೆ ಏನೋ ಬಡಿದಂತೆ ಸದ್ದು..ಕಿಟಾರನೆ ಕಿರುಚಿಕೊಂಡಿದ್ದಾರೆ ಯಾರೋ!ದೇವರ ಕೋಣೆಯೊಳಗಿಂದ ಓಡಿಬಂದಳು ಜಾನಕಿ...ಕೆಲಸದವಳು ಗರಬಡಿದವರಂತೆ ನಿಂತುಬಿಟ್ಟಿದ್ದಾಳೆ.ಜಾನಕಿಗೆ ಗಾಬರಿ!ಹೇ!ಸೀಮಾ,ಏನಾಯ್ತೇ ಏನಾಯ್ತೇ?..ಸೀಮಾ ಮಾತನಾಡಲು ತೊದಲುತ್ತಿದ್ದಾಳೆ.ಅಮ್ಮಾ...ಅಮ್ಮಾ..ಅಲ್ಲಿ...ಅಲ್ಲಿ ನೋಡಿ...ಎಂದು ಕೈತೋರಿಸಿದಳು.ಜಾನಕಿಯ ಗಂಡ ರಘುನಾಥರಾಯರು ಪ್ರಜ್ಞೆ ತಪ್ಪಿಬಿದ್ದಿದ್ದರು.ಅವರ ಹಣೆಯಿಂದ ರಕ್ತ ಒಸರುತ್ತಿತ್ತು.ಜಾನಕಿ ನೋಡುನೋಡುತ್ತಿದ್ದಂತೆಯೇ ಕುಸಿದಳು.ಸೀಮಾ ತಡಮಾಡಲಿಲ್ಲ.ಅದೆಲ್ಲಿಂದ ಅವಳಲ್ಲಿ ಕರ್ತವ್ಯಪ್ರಜ್ಞೆ ಜಾಗೃತವಾಯಿತೋ,ತಕ್ಷಣ ಜಾನಕಿಯನ್ನು ಹಿಡಿದಳು ಮತ್ತು ಖುರ್ಚಿಯ ಮೇಲೆ ಕೂರಿಸಿದಳು.ಅವಳಿಗೆ ಎತ್ತ ಹೋಗಬೇಕೆಂದು ತಿಳಿಯುತ್ತಿಲ್ಲ;ಏನು ಮಾಡಬೇಕೆಂದು ಕೂಡಾ ತಿಳಿಯುತ್ತಿಲ್ಲ.ತತ್ಕ್ಷಣ ರಘುನಾಥರಲ್ಲಿಗೆ ಓಡಿದಳು.ರಾಯರೇ,ರಾಯರೇ...ಕೈ ಹಿಡಿದು ಅಲುಗಾಡಿಸುತ್ತಿದ್ದಾಳೆ.ಎಚ್ಚರಾಗುತ್ತಿಲ್ಲ.ನೀರು ತರಲಿಕ್ಕೆ ಮತ್ತೆ ಓಡಿದಳು.ಹಾಗೆಯೇ,ಅಲ್ಲಿಯೇ ಇದ್ದ ಜಾನಕಿಯ ಮುಖಕ್ಕೆ ನೀರು ಸಿಂಪಡಿಸಿ,ಮತ್ತೆ ರಘುನಾಥರಲ್ಲಿಗೆ ಬಂದಳು.ಅವರ ಮುಖಕ್ಕೆ ನೀರು ಹಾಕಿ,ಕರೆದಳು,ರಾಯರೇ,ಎದ್ದೇಳಿ ಎದ್ದೇಳಿ..ಅಷ್ಟೊತ್ತಿಗೆ,ಸಾವರಿಸಿಕೊಂಡ ಜಾನಕಿ ಅಲ್ಲಿಗೆ ಓಡಿಬಂದಳು.ರ್ರೀ...ಏಳ್ರೀ...ಏ...ರ್ರೀ..ಎದ್ದೇಳ್ರೀ..ಎರಡೂ ಭುಜ ಹಿಡಿದು ಅಲುಗಾಡಿಸಿದಳು..ಇಲ್ಲ ರಘುನಾಥರಿಗೆ ಎಚ್ಚರವಾಗುತ್ತಲೇ ಇಲ್ಲ.ಅಯ್ಯೋ ದೇವ್ರೇ!ಈಗ್ ಏನ್ ಮಾಡೋದಪ್ಪಾ..ಸೀಮಾ!ಹೋಗು,ಪ್ರಣವನಿಗೆ ಫೋನ್ ಮಾಡು,ಹೋಗು..ಜಾನಕಿ ಸೀಮಾಳನ್ನು ದೂಡಿದಳು.ಸೀಮಾ ಓಡಿಹೋಗಿ ಪ್ರಣವನಿಗೆ ಫೋನ್ ಮಾಡಿ ವಿಷಯ ತಿಳಿಸಿದಳು.ರಘುನಾಥರನ್ನು ಎಬ್ಬಿಸಲು ಜಾನಕಿಯ ಪ್ರಯತ್ನ ನಡೀತಾನೇ ಇತ್ತು...ರ್ರೀ..ಏಳ್ರೀ..ಅಯ್ಯೋ...ಏನಾಯ್ತ್ರೀ..ಏ...ರ್ರೀ..ಎದ್ದೇಳ್ರೀ...ರಘುನಾಥರ ಅಂಗೈ ಹಿಡಿದು ಉಜ್ಜಿದಳು.ಸೀಮಾ ರಘುನಾಥರ ಕಾಲುಗಳನ್ನು ಉಜ್ಜಲು ಹಿಡಿದುಕೊಂಡಾಗ,ಏನೋ ಒಂಥರ ತಲ್ಲಣ..ಮರಗಟ್ಟಿದಂತೆ ಭಾಸ..!ಆದರೂ ಕಾಲುಗಳನ್ನು ಉಜ್ಜುತ್ತಲೇ ಹೋದಳು.ಇತ್ತ ಜಾನಕಿ,ರಘುನಾಥರನ್ನು ಎಬ್ಬಿಸಲು ಪ್ರಯತ್ನಿಸುತ್ತಲೇ ಇದ್ದಾಳೆ.ಅಷ್ಟೊತ್ತಿಗೆ ಡಾಕ್ಟರ್ ಪ್ರಣವ್ ಬಂದರು.ನಾಡಿ ಹಿಡಿದಾಗ ಸಣ್ಣದಾಗಿ ಹೊಡೆದುಕೊಳ್ಳುತ್ತಲೇ ಇತ್ತು.ಡಾಕ್ಟರ್..ಡಾಕ್ಟರ್..ನೋಡಿ ನಮ್ಮೆಜಮಾನ್ರು...ರ್ರೀ...ಏಳ್ರೀ...ಎದ್ದೇಳ್ರೀ..ಏ..ರ್ರೀ..ಏಳ್ರೀ...ಅಮ್ಮಾ,ಭಯಪಡಬೇಡಿ,ಏನೋ ಆಗಲ್ಲ,ಇರಿ,ನಾ ನೋಡ್ತಿದ್ದೀನಲ್ಲಾ..ಪ್ರಣವ್ ಹೇಳ್ತಾ ಇದ್ದಾರೆ.ಪ್ರಣವ್ ರಘುನಾಥರಿಗೆ ಒಂದು ಚುಚ್ಚುಮದ್ದನ್ನು ಕೊಟ್ಟರು.ಪ್ರಣವ್ ರಘುನಾಥರ ಎದೆಯ ಮೇಲೆ ಕೈಯಿಟ್ಟು,ನಿಧಾನವಾಗಿ,ಮೃದುವಾಗಿ ಗುದ್ದಿದರು...ಎರಡು ಮೂರು ಸಲ ಹಾಗೇ ಮಾಡಿದರು.ರಘುನಾಥರ ಕಣ್ರೆಪ್ಪೆಗಳು ಅಲುಗಾಡಿದವು.ನನ್ ಮಗ..ನನ್  ಮಗ...ಮಲಗಿದಲ್ಲಿಯೇ ಮುಲುಗುತ್ತಿದ್ದಾರೆ.ಜಾನಕೀ..ಅಂತ ಒಮ್ಮೆಲೇ ಜೋರಾಗಿ ಕಿರುಚಿದರು...ಮತ್ತೆ ಪ್ರಜ್ಞೆ ತಪ್ಪಿದರು.ಡಾಕ್ಟರ್ ಪ್ರಣವ್ ಅರಿತುಕೊಳ್ಳುವಷ್ಟರಲ್ಲಿ ಪರಿಸ್ಥಿತಿ ಬದಲಾಗಿಬಿಟ್ಟಿತ್ತು.ಜಾನಕಿ ರೋದಿಸುತ್ತಿದ್ದಾಳೆ.ಸೀಮಾ ಜಾನಕಿಯತ್ತ ನೋಡಿದಳು.ಜಾನಕಿಯ ಹಣೆಯ ಮೇಲಿನ ಸಿಂಧೂರ ಕಾಣೆಯಾಗಿ,ಅವಳ ಹಣೆ ಬೋಳುಬೋಳಾಗಿತ್ತು.ಸೀಮಾಳ ಎದೆ ‘ಝಲ್’ ಎಂದಿತು.ರಘುನಾಥರತ್ತ ನೋಡಿದಳು.ಜಾನಕಿಯ ಹಣೆಬೊಟ್ಟು ರಘುನಾಥರ ಹಣೆಗೆ ಅಂಟಿಕೊಂಡಿತ್ತು.ಇತ್ತ ಪ್ರಣವ್ ರಘುನಾಥರ ನಾಡಿ ಹಿಡಿದು ಮತ್ತೆ ನೋಡಿದರು.ಹಿಡಿದ ನಾಡಿ ಮಿಡಿಯುತ್ತಿಲ್ಲ.ಪಟಪಟನೆ ಹೊಡೆದುಕೊಳ್ಳಬೇಕಾಗಿದ್ದ ಹೃದಯ ಸ್ತಬ್ಧವಾಗಿತ್ತು.ನಾಡಿ ಹಿಡಿದು ನೋಡಿ ರಘುನಾಥರ ಕೈ ಬಿಟ್ಟಾಗ,ಕೈ ಧಡ್ಡನೆ ನೆಲಕ್ಕೆ ಬಿತ್ತು.ಜಾನಕಿಗೆ ದಿಕ್ಕೇ ತೋಚುತ್ತಿಲ್ಲ.ಪ್ರಣವ್ ಎದ್ದುನಿಂತರು.ಅಮ್ಮಾ...ಧೈರ್ಯ ತಗೊಳ್ಳಿ...ಎಂದಷ್ಟೇ ಹೇಳಿ,ಹೊರಬಿದ್ದು,ಸೀಮಾಳನ್ನು ಕರೆದರು.ಸೀಮಾ,ಇವರ ಬಂಧುಬಳಗದವರಿಗೆಲ್ಲ ಬರಹೇಳು,ರಾಯರು ಹೋಗ್ಬಿಟ್ರು..ಅಂತಷ್ಟೇ ಹೇಳಿ ಪ್ರಣವ್ ಹೊರಟುಬಿಟ್ರು.ಸೀಮಾಳಿಗೆ ಕತ್ತಲು ಕವಿದಂತಾಯಿತು.ತಕ್ಷಣ ಸಾವರಿಸಿಕೊಂಡು ಒಳಗೆ ಬಂದಳು.ರಘುನಾಥರ ಹತ್ತಿರವೇ ಕುಳಿತಿದ್ದ ಜಾನಕಿ,ಸೀಮಾ,ಏನಂದ್ರೇ ಡಾಕ್ಟರ್ ಪ್ರಣವ್ ಏನಂದ್ರೇ?..ಅಂತ ಕೇಳಿದಳುಅಮ್ಮಾ..ಅಮ್ಮಾ...ಎಲ್ಲಾ ಮುಗೀತಮ್ಮಾ!...ಸೀಮಾ ಕೈ ತಿರುಗಿಸಿದಳು,ಹಾಗೇ ಮೇಲೆ ನೋಡಿದಳು...ಆ...ರ್ರೀ...ಜಾನಕಿ ಎದೆ ಬಡಿದುಕೊಳ್ಳತೊಡಗಿದಳು.ಅವಳ ಕೈಗಳೆರಡು ಪರಸ್ಪರ ಘರ್ಷಿಸಿ,ಅವಳ ಕೈಬಳೆಗಳು ಒಂದೊಂದಾಗಿ ಚೂರಾಗಿ ಬೀಳತೊಡಗಿದವು.ಅಯ್ಯೋ ದೇವ್ರೇ ಅಂತ ತಲೆಮೇಲೆ ಕೈಯಿಟ್ಟುಕೊಂಡು ಕೂದಲು ಕೆದರಿಕೊಂದಳು.ಬಿದ್ದು ಬಿದ್ದು ಹೊರಳಾಡಿದಳು.ಅಳಿದುಳಿದ ಬಳೆಗಳೂ ಚೂರುಚೂರಾಗಿ ನೆಲದ ಮೇಲೊರಗಿದವು;ಜಾನಕಿಯಂತೆಯೇ!ಇತ್ತ ಸೀಮಾ,ರಘುನಾಥರ ಹೆಣ್ಮಕ್ಕಳಿಗೆ,ಬಂಧುಬಳಗದವರಿಗೆಲ್ಲಾ ಫೋನ್ ಮೂಲಕ ವಿಷಯ ತಿಳಿಸಿದಳು.ಜಾನಕಿಯನ್ನು ಸಮಾಧಾನಪಡಿಸುವುದಾದರೂ ಹೇಗೆ?ಸೀಮಾಳಿಗೆ ಜಾನಕಿಯನ್ನು ಹೇಗೆ ಸಮಾಧಾನಿಸಬೇಕೆಂದೇ ತಿಳಿಯುತ್ತಿಲ್ಲ.ವಿಲವಿಲನೆ ಒದ್ದಾಡಿದಳು.ಹೇಗೆ,ಹೇಗೆ ಸಮಾಧಾನಿಸಲಿ?...ಅರ್ಥವೇ ಆಗುತ್ತಿಲ್ಲ.ಜಾನಕಿಯ ಹತ್ತಿರ ಬಂದಳು.ಅಮ್ಮಾ..ಅಮ್ಮಾ..ಎಂದು ರೋದಿಸುತ್ತಾ ಒಂದು ಕಡೆ ಕುಳಿತುಬಿಟ್ಟಳು.ಅಷ್ಟೊತ್ತಿಗೆ ಅವರ ರೋದನವನ್ನು ಕೇಳಿ,ಅಕ್ಕಪಕ್ಕದ ಮನೆಯವರೆಲ್ಲಾ ಬಂದುಸೇರಿದ್ದರು.ಎಲ್ಲರೂ ಮರುಕಪಡುವವರೇ!ಒಬ್ಬ ಮನುಷ್ಯನ ನಿಜವಾದ ಘನತೆ,ಬದುಕಿನ ಔನ್ನತ್ಯ ತಿಳಿಯುವುದು ಆತನ ಸಾವಿನಲ್ಲಂತೆ!ಎಲ್ಲರೂ ಸತ್ತ ರಘುನಾಥರಿಗಾಗಿ ಕಂಬನಿ ಮಿಡಿಯುವವರೇ!ಅವರನ್ನು ಹಾಡಿಹೊಗಳುವವರೇ!ಎಂತಹ ಮೃದುತ್ವವನ್ನು ಹೊಂದಿದವರಾಗಿದ್ದರು...ಅಂಥವರಿಗೆ ೫೮ನೇ ವರ್ಷಕ್ಕೇ ಸಾವೇ?ದೇವರು ಕ್ರೂರಿ,ಆತನಿಗೆ ಕರುಣೆಯೆಂಬುದೇ ಇಲ್ಲ..ಅಂತ ಒಬ್ಬರು ಹೇಳಿದರೆ,ಇನ್ನೊಬ್ಬರು,ನಿನ್ನೆ ಸಂಜೆ ನನ್ ಜೊತೆ ನಗ್ ನಗ್ತಾ ಮಾತಾಡಿದ್ರು..ಇವತ್ ಸಂಜೆ ವಾಕಿಂಗಿಗೆ ಹೋಗಿ,ದೇವಸ್ಥಾನಕ್ಕೆ ಹೋಗ್ಬರೋಣ ಅಂತ ಹೇಳ್ತಾ ಇದ್ರು...ಅಂತ ಹೇಳ್ತಾ ಇದ್ದಾರೆ.ಅಷ್ಟೊತ್ತಿಗಾಗಲೇ ಇಡೀ ಊರಿಗೇ ಸುದ್ದಿ ತಲುಪಿತ್ತು.ಎಲ್ಲರೂ ರಘುನಾಥರ ಮನೆ ಮುಂದೆ ಸೇರತೊಡಗಿದರು.ಎಲ್ಲರಿಗೂ ರಘುನಾಥರನ್ನು ಕಂಡರೆ ಅಕ್ಕರೆ,ಗೌರವ.ಆದರೆ,ಈಗ ರಘುನಾಥರ ಜೀವ, ವಿಧಿಯ ಬೊಕ್ಕಸ ಸೇರಿತ್ತು.ಎಲ್ಲರೂ ರಘುನಾಥರ ಗುಣಗಾನ ಮಾಡುತ್ತಿದ್ದಾರೆ.ರಘುನಾಥರ ಬಂಧುಬಳಗದವರೆಲ್ಲಾ ಸೇರತೊಡಗಿದರು.ಅವರ ಇಬ್ಬರು ಹೆಣ್ಮಕ್ಕಳು ಬಂದು ಸೇರಿದರು.ರಘುನಾಥರ ಹಿರಿಮಗಳು ಮತ್ತು ಅವಳ ಮಗಳು,ರಘುನಾಥರ ಕಿರಿಮಗಳು ಮತ್ತು ಅವಳ ಮಗ...ಹೀಗೆ ಎಲ್ಲರೂ ನೆರೆದಿದ್ದಾರೆ.ಆದರೂ,ಎಲ್ಲರೂ ಇನ್ನೂ ಒಬ್ಬರ ಬರುವಿಕೆಗಾಗಿ ಕಾಯ್ತಾ ಇದ್ದಾರೆ.ರಘುನಾಥರ ಹಿರಿಮಗಳು ಸಾರಿಕಾ,ಸೀಮಾ!ಸಿದ್ದಾರ್ಥನಿಗೆ ವಿಷ್ಯ ತಿಳ್ಸಿದ್ದೀಯಾ?ಅಂತ ಕೇಳಿದಳು.ಹೌದಮ್ಮಾ..ತಿಳ್ಸಿದ್ದೀನಮ್ಮಾ..ಹೌದಾ,ಅಂತ ಕೇಳಿ,ಫೋನ್ ಇಟ್ಬಿಟ್ರು..ಬರ್ತೀನೋ ಇಲ್ವೋ ಅಂತಾನೂ ಹೇಳಿಲ್ಲಮ್ಮಾ..ಅಂತ ಸೀಮಾ ಹೇಳಿದಾಗ,ಅವ್ನ್ ನಂಬರ್ ಕೊಡು,ನಾನ್ ಮಾತಾಡ್ತೀನಿ,ಅಂತ ಸಾರಿಕಾ ಸಿದ್ದಾರ್ಥನಿಗೆ ಕರೆ ಮಾಡಿದಳು.ಹಲೋ ನಮಸ್ತೇ..ಸಿದ್ದಾರ್ಥ ಇದ್ದಾನಾ...ಸ್ವಲ್ಪ ಕರೀತೀರಾ?..ಸಾರಿಕಾ ಕೇಳಿದಳು.ಆ ಕಡೆಯಿಂದ,ಹ್ಞ..ಮಾ ಅವ್ರು ತನಗೆ ಯಾವ್ದೇ ಕರೆ ಬಂದ್ರೂ ಈಗ ಆಗೋದಿಲ್ಲಾ ಅಂತ ಹೇಳ್ಲಿಕ್ ಹೇಳಿದ್ದಾರೆ...ಅಂತ ಆತ ಹೇಳಿದ.ಇಲ್ಲ,ತುಂಬಾ ತುರ್ತು ವಿಷಯ..ನೀವು ಆತನನ್ನು ಕರೀಲೇಬೇಕು..ದಯಮಾಡಿ ಕರೀರಿ,ಅವ್ನ ತಂದೆಯವರು ತೀರ್ಕೊಂಡಿದ್ದಾರೆ,ದಯವಿಟ್ಟು ಕರೀರಿ..ಸಾರಿಕಾ ಹೇಳಿದಳು.ಆತ,ಹ್ಞ, ಕರೀತೀನಮ್ಮಾ ಅಂತ ಹೇಳಿದ.ಎರಡು ಕ್ಷಣ ಬಿಟ್ಟು...ಹ್ಹ,ಹೇಳಿ ಮಾ..ಅನ್ನೋ ಪ್ರಶಾಂತವಾದ ಧ್ವನಿ.ಏ ಸಿದ್ದಾರ್ಥ್,ನಾನು ಕಣೋ,ಅಮ್ಮ ಅಲ್ಲ,ನಿನ್ನ ಅಕ್ಕ ಸಾರಿಕಾ ಮಾತಾಡ್ತಿದ್ದೀನಿ..ಹ್ಹ,ಗೊತ್ತಾಯ್ತು,ಆದರೆ,ನಾನೀಗ ನನಗಿಂತ ಹಿರಿಯ ಸ್ತ್ರೀಯರೆಲ್ಲರನ್ನೂ ‘ಅಮ್ಮಾ’ ಅಂತಾನೇ ಕರೆಯೋದು..ಹೇಳಿ...ಅಂತ ಮತ್ತೆ ಅಷ್ಟೇ ಪ್ರಶಾಂತವಾದ ಧ್ವನಿಯಲ್ಲಿ ಆತ ಹೇಳಿದ.ಇವಳಿಗೆ ಆಶ್ಚರ್ಯ,ಇನ್ನೊಂದೆಡೆ ಆತಂಕ.ಇತ್ತ ಎಲ್ಲರೂ ಬಿಕ್ಕಿ ಬಿಕ್ಕಿ ಅಳ್ತಾ ಇದ್ದಾರೆ.ಹೇ ಸಿದ್ದಾರ್ಥ್..ಅಪ್ಪ...ಅಪ್ಪ ಹೋಗ್ಬಿಟ್ರು ಕಣೋ..ನೀನು ಆದಷ್ಟ್ ಬೇಗ ಬಾರೋ..ಎಲ್ರೂ ನಿನಗೋಸ್ಕರ ಕಾಯ್ತಾ ಇದ್ದೀವಿ.ಬೇಗ್ ಬಾರೋ..ಅಳ್ತಾ ಹೇಳ್ತಾಳೆ.ಆದ್ರೆ ನಾನೀಗ ಬರೋ ಹಾಗಿಲ್ಲ,ಬರೋವಂಥ ಸ್ಥಿತೀಲೂ ನಾನಿಲ್ಲ.ಬರ್ಲಿಕ್ಕಾಗೋದಿಲ್ಲಮ್ಮಾ...ಸಿದ್ದಾರ್ಥನ ದೃಢವಾದ ಮತ್ತು ಮತ್ತಷ್ಟೇ ಪ್ರಶಾಂತವಾದ ಧ್ವನಿ..ಹೇ ಸಿದ್ದಾರ್ಥ್,ನಿಂಗ್ ಏನ್ ತಲೆ ಕೆಟ್ಟಿದ್ಯೇನೋ?ಅಪ್ಪ ಸತ್ತಿದ್ದಾರೆ,ಬಾರೋ ಅಂದ್ರೆ ಬರೋಕ್ಕಾಗಲ್ಲ ಅಂತಿದ್ದೀಯಲ್ಲೋ.ಹುಚ್ಚು ಹಿಡ್ದಿದ್ಯೇನೋ?...ಫೋನಲ್ಲೇ ಬಿಕ್ಕಳಿಸ್ತಾ,ಗದರ್ತಾ ಇದ್ದಾಳೆ,ಸಾರಿಕಾ.ಕ್ಷಮಿಸಮ್ಮಾ,ಎಲ್ಲವನ್ನು ಬಿಟ್ಟುಬಂದವನಿಗೆ ಇನ್ನೆಲ್ಲಿಯ ಸಂಬಂಧ!ಸಂಬಂಧ ಬಿಂದುಗಳ ಪರಿಧಿಯಿಂದ ಆಚೆ ಬಂದವನಿಗೆ ಇನ್ನೆಲ್ಲಿಯ ಅಪ್ಪನೆಂಬ ಬಾಂಧವ್ಯ!ಎಲ್ಲವನ್ನೂ ತೊರೆದಾಗಿದೆ..ಮತ್ತ್ಯಾಕೆ ಸಂಸಾರದ ಮೋಹದ ಪರದೆಯನ್ನು ನನ್ನ ಸುತ್ತಲೂ ಹರಡುತ್ತಿದ್ದೀರಾ?ಜಾಲು ಜಾಲಾದ ಬಲೆಯೊಳಗೆ ಜಗತ್ತಿಲ್ಲ,ಪರದೆ ಸರಿಸಿ,ಪರಿಧಿಯನ್ನು ದಾಟಿದವನನ್ನು ಮತ್ತ್ಯಾಕೆ ಕಾಯುತ್ತೀರಾ?ಮುಂದಿನ ಕೆಲಸಗಳನ್ನು ನೆರವೇರಿಸಿ...ವಿಚಿತ್ರ ಧ್ವನಿಯಲ್ಲಿ ಆತ ಉಸುರಿದ.ಇತ್ತ ಸಾರಿಕಾಳಿಗೆ ಸಿಡಿಲು ಬಡಿದಂತಾಯಿತು.ಹೆತ್ತ ಅಪ್ಪನ ಹೆಣ ನೋಡಲೂ ಬರೋದಿಲ್ಲ ಅಂತ ಹೇಳ್ತಿದ್ದೀಯಲ್ಲೋ,ತಲೆ ನೆಟ್ಟಗಿಲ್ವೇನೋ ನಿಂಗೆ...ಹ್ಹೇ..ಯಾಕೋ ಯಾಕೋ ಹೀಗ್ ಮಾಡ್ತಾ ಇದ್ದೀಯಾ?..ಜೋರಾಗಿ ಕಿರುಚ್ತಾನೇ ಹೇಳ್ತಿದ್ದಾಳೆ.ತಕ್ಷಣ ಸಾರಿಕಾಳ ಮಗಳು ಸ್ವಪ್ನಾ ಫೋನ್ ತೆಗೆದುಕೊಂಡಳು.ಮಾವ..ದಯವಿಟ್ಟು ಬನ್ನಿ ಮಾವ..ನಿಮಗೋಸ್ಕರ ಎಲ್ರೂ ಕಾಯ್ತಿದಾರೆ..ಅಂತ ಹೇಳ್ತಿದ್ದಾಳೆ.ಸಾರಿಕಾ ತನ್ನ ಮಾವನ ಹತ್ತಿರ,ಮಾವ ಅವನು ಬರೋದಿಲ್ವಂತೆ..ಅಂತ ಗೋಳಾಡ್ತಾ ಇದ್ದಾಳೆ.ಆಗ ಸ್ವಪ್ನಾಳ ಕೈಯಿಂದ ಸಾರಿಕಾಳ ಮಾವ ಫೋನ್ ತೆಗೆದುಕೊಂಡರು.ಸಿದ್ದಾರ್ಥ..ನಾನು ಸಾರಿಕಾಳ ಮಾವ ಅರವಿಂದ ಮಾತ್ನಾಡ್ತಾ ಇರೋದು..ಯಾಕಪ್ಪಾ,ಏನಾಯ್ತು?ಹೆತ್ತ ತಂದೆ ಸತ್ತಿರುವ ಸಮಯದಲ್ಲೂ ಆತನನ್ನು ನೋಡೋದಿಕ್ಕೆ ಬರೋದಿಲ್ಲ ಅಂತ ಹೇಳ್ತಿದ್ದೀಯಲ್ಲಾ,ಯಾಕಪ್ಪಾ,ಯಾಕಪ್ಪಾ ಈ ದ್ವೇಷ?..ಅಂತ ಅರವಿಂದರಾಯರು ಹೇಳಿದರು.ಕ್ಷಮಿಸಿ..ನಾನು ಬರೋದಿಲ್ಲ.ದ್ವೇಷವಲ್ಲ,ಸಂಬಂಧಗಳನ್ನು ತ್ಯಜಿಸಿ ನಿಂತ ನನಗೆ ಮತ್ತೆಲ್ಲಿಯ ಸಂಬಂಧಗಳ ಗಂಟು?ಯಾಕಾಗಿ ಬರಲಿ ನಾನಲ್ಲಿಗೆ?..ಸಿದ್ದಾರ್ಥ ಪ್ರಶ್ನಿಸುತ್ತಾನೆ.ನೋಡು ಸಿದ್ದಾರ್ಥ,ಇದು ವಾದ ಮಾಡಬೇಕಾದ ಸಮಯವಲ್ಲ ಅಥವಾ ಸಂಸಾರದೊಳಗಿನ ಬದುಕು ಮತ್ತು ಸಂಸಾರದಾಚೆಗಿನ ಬದುಕಿನ ಬಗ್ಗೆ ಚರ್ಚಿಸಿ,ನಿಧಾನವಾಗಿ ನಿರ್ಧಾರ ತೆಗೆದುಕೊಳ್ಳುವ ಸಮಯವೂ ಅಲ್ಲ.ನಿನಗೆ ಕೈ ಮುಗಿದು ಕೇಳ್ಕೋತೀನಿ,ಹೆತ್ತವರ ಋಣ ತೀರಿಸುವ ನೆಪಕ್ಕಾದರೂ ದಯವಿಟ್ಟು ಬಾ..ಮಗನಾದ ನಿನ್ನ ಪಾಲಿನ ಕರ್ತವ್ಯಗಳನ್ನು ಮರೆಯಬೇಡ.ನೀನು ಬಂದ ನಂತರ,ಮುಂದಿನ ಬದುಕಿನ ಬಗ್ಗೆ ವಿಮರ್ಶಿಸೋಣ.ನಿನ್ನ ಈ ಭೂಮಿಗೆ ತಂದ ತಪ್ಪಿಗೆ,ಸತ್ತ ನಿನ್ನ ತಂದೆ ಪಶ್ಚಾತ್ತಾಪಪಡಲಿ.ನಿನ್ನಲ್ಲಿ ಬದುಕನ್ನಿಟ್ಟುಕೊಂಡು,ಬದುಕಿನ ಅರ್ಥವನ್ನೇ ಕಳೆದುಕೊಂಡ,ನಿನ್ನ ಆ ನತದೃಷ್ಟ ತಂದೆಯ ಮುಖವನ್ನು ಕೊನೇ ಬಾರಿ ಒಮ್ಮೆ ನೋಡಲಿಕ್ಕಾದರೂ ಬಾರೋ.ಮತ್ತೆಂದೂ ಆ ಪುಣ್ಯಾತ್ಮನ ಮುಖ ನಿನಗೆ ನೋಡೋದಿಕ್ಕೆ ಸಿಗೋದಿಲ್ಲಾ..ಕೈಮುಗೀತೀನಿ ಕಣೋ..ಹೇಳುತ್ತಲೇ ಇದ್ದಾರೆ.ದಯವಿಟ್ಟು ಕ್ಷಮಿಸಿ,ತಾವು ಹಿರಿಯರು,ನನಗೆ ಕೈಮುಗಿಯುವುದು ಅಷ್ಟೊಂದು ಸಮಂಜಸವಲ್ಲ.ಬರುತ್ತೇನೆ,ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಿ.ನಾನು ಬರುವ ದಾರಿಯಲ್ಲಿ ಮೂರು ಹಣತೆಗಳನ್ನು ಹಚ್ಚಿಡಿ.ಒಂದೊಂದು ಹಣತೆಯ ಬಳಿಯೂ ಒಂದೊಂದು ಹೂವನ್ನಿಡಿ..ಅಂತ ಸಿದ್ದಾರ್ಥ ಹೇಳುತ್ತಾನೆ.
          ಎಲ್ಲರ ಮುಖದಲ್ಲೂ ಪ್ರಶ್ನಾಭಾವ!ಎಲ್ಲಿ,ರಘುನಾಥರ ಮಗನೆಲ್ಲಿ?ಈಗ ಆತ ಎಲ್ಲಿದ್ದಾನೆ?ಏನು ಮಾಡುತ್ತಿದ್ದಾನೆ?ಆತ ಊರಿಗೆ ಬಂದದ್ದನ್ನು ನೋಡಿ ಮೂರ್ನಾಲ್ಕು ವರ್ಷಗಳೇ ಕಳೆದುಹೋಗಿವೆ..ಈಗ ನಿಮ್ಮ ಮನದಲ್ಲೂ ಎದ್ದಿರಬೇಕಲ್ಲವೇ ಈ ಎಲ್ಲ ಪ್ರಶ್ನೆಗಳು?ಯಾರು ಈ ಸಿದ್ದಾರ್ಥ ಅಂತ,ಯಾಕೆ ಆತ ಹಾಗೆಲ್ಲಾ ಹೇಳುತ್ತಿದ್ದಾನೆ ಅಂತ!ನಿಮ್ಮ ಎಲ್ಲ ಪ್ರಶ್ನೆಗಳಿಗೂ ಮುಂದೆ ಓದ್ತಾ ಓದ್ತಾ ಉತ್ತರ ಸಿಗುತ್ತೆ...
          ಅರವಿಂದರಾಯರು ಸಿದ್ದಾರ್ಥ ಬರುತ್ತಾನಂತೆ ಅಂತ ಹೇಳುತ್ತಾರೆ.ಸಾರಿಕಾ ನಿಟ್ಟುಸಿರುಬಿಡುತ್ತಾಳೆ.ಸಿದ್ದಾರ್ಥ ವಿಮಾನದಲ್ಲಿ ಬರುತ್ತಾನೆ.ಮನೆಗೆ ಬರುವಾಗ ಸಂಜೆ ಸುಮಾರು ೫ ಗಂಟೆ.ಮನೆಯಲ್ಲಿ ಬೆಳಿಗ್ಗೆಯಿಂದ ಯಾರೂ ಅನ್ನಾಹಾರ ಸೇವಿಸಿಲ್ಲ.ಎಲ್ಲರೂ ಆತನ ಬರುವಿಕೆಗಾಗಿ ಕಾಯುತ್ತಲೇ ಇದ್ದರು.ಸಿದ್ದಾರ್ಥ ಮನೆ ಬಾಗಿಲಿಗೆ ಬಂದಿಳಿದ.ಆತ ಹೇಳಿದಂತೆಯೇ,ಮೂರು ಹಣತೆಗಳು ಬೆಳಗುತ್ತಿದ್ದವು.ಹಣತೆಗಳಿಗೆ ಅಲ್ಲಿಯೇ ಇದ್ದ ಹೂಗಳನ್ನು ತಾಗಿಸಿದ.ಹಣತೆಗಳಿಗೆ ಕೈಮುಗಿದ.ಮನಸ್ಸಿನಲ್ಲೇ ಧ್ಯಾನಿಸಿದ...ಹೇ ಹಣತೆಗಳೇ!..ನಿಮ್ಮನ್ನೇ ಬ್ರಹ್ಮ ವಿಷ್ಣು ಮಹೇಶ್ವರರೆಂಬ ತ್ರಿಮೂರ್ತಿಗಳನ್ನಾಗಿ ಕಲ್ಪಿಸಿಕೊಳ್ಳುತ್ತಿದ್ದೇನೆ.ಹೇ ಶಕ್ತಿಯೇ..ಮುಸುಕಿದ ಮಾಯೆಯ ಮಸುಕನ್ನು ಕಳೆದು ದೇದೀಪ್ಯಮಾನವಾದ ಬೆಳಕನ್ನು ನೀಡುತ್ತೀದ್ದೀಯೆಂದೇ ಭಾವಿಸುತ್ತೇನೆ.ನನ್ನ ಮನಸ್ಸಿನಲ್ಲಿ ದುಗುಡವಿಲ್ಲ;ಆದರೆ..ಈಗೀಗ ದ್ವಂದ್ವ ಶುರುವಾಗುತ್ತಿದೆ.ಆ ದ್ವಂದ್ವ ಕಳೆದು ಏಕತ್ವದೊಂದಿಗೆ ಸಂಧಾನವಾಗಬೇಕು.ಹರಸಿರಿ..ಈಗ ನಾನು ಮಾಡುತ್ತಿರುವ ಕಾರ್ಯ ಸರಿಯೋ ತಪ್ಪೋ ತಿಳಿಯುತ್ತಿಲ್ಲ,ಮನ್ನಿಸಿ...ತಂದೆಯ ಅಪರಕ್ರಿಯೆಗಳನ್ನು ಮಾಡಲಿಕ್ಕೆ ಮನೆಯೊಳಗೆ ಅಡಿಯಿಡುತ್ತಿದ್ದೇನೆ.ಅಪರಿಮಿತ ಆಶೀರ್ವಾದಗಳಿರಲಿ,ಅನುಗ್ರಹವಿರಲಿ..ಮನೆಯ ಹೊಸ್ತಿಲನ್ನು ದಾಟಿ ಒಳಗೆ ಪ್ರವೇಶಿಸುತ್ತಾನೆ.ಒಂದು ಕ್ಷಣ ಮೈ ‘ಜುಂ’ ಅನ್ನುತ್ತದೆ.ಕ್ಷಣಕಾಲ ಕಣ್ಮುಚ್ಚಿ ನಿಂತು,ಕಣ್ತೆರೆಯುತ್ತಾನೆ.ಎಲ್ಲರೂ ಅವನತ್ತಲೇ ನೋಡುತ್ತಿದ್ದಾರೆ.ಆತನ ಕಣ್ಣುಗಳಲ್ಲಿ ತೇಜಸ್ಸು ಸ್ಫುರಿಸುತ್ತಿದೆ.ಕಂಗಳ ಕಾಂತಿ,ಮುಗುಳ್ನಗುವ ವದನ ತಿಂಗಳ ಹುಣ್ಣಿಮೆಯಂತೆ ಕಂಗೊಳಿಸುತ್ತಿದೆ.ಆ ಕಣ್ಣುಗಳಲ್ಲಿ ಯಾವುದೋ ಕಾಣದೊಂದು ಆಹ್ಲಾದ ದಿವ್ಯ ಧ್ಯಾನವಿದೆ...ಮಂದಸ್ಮಿತ ಲಾಸ್ಯವಾಡುತ್ತಿದೆ.ಪ್ರಶಾಂತವಾದ ಮೊಗದಲ್ಲಿ ಪ್ರಸನ್ನತೆಯಿದೆ.ನಿಂತ ಆ ಶೈಲಿಯಲ್ಲಿ ಗಾಂಭೀರ್ಯವಿದೆ.ದೇಹದ ಸುತ್ತ ಏನೋ ಒಂಥರದ ಪ್ರಭೆಯಿದ್ದಂತೆ ಗೋಚರಿಸುತ್ತಿದೆ.ಬೆಳಕಿನ ಸ್ಯಂದನವೋ ಎಂಬಂತೆ ತೋರುತ್ತಿದ್ದಾನೆ.ಸ್ಫುರದ್ರೂಪಿ ಸಿದ್ದಾರ್ಥನ ತನುವಿನಲ್ಲಿ ಯೌವನ ನಳನಳಿಸುತ್ತಿದೆ.ದೇಹ ಸದೃಢವಾಗಿದೆ;ಆತನ ಮನಸ್ಸಿನಂತೆಯೇ!ಈ ಎಲ್ಲ ಕಾಂತಿಯೊಂದಿಗಿನ ಆತ ಯಾವುದೋ ಒಂದು ಮನೋಹರ ಸುಂದರ ಅಗೋಚರ ಶಕ್ತಿಯಂತೆ ಗೋಚರಿಸುತ್ತಿದ್ದಾನೆ.ಆತ ಮುಂದೆ ಮುಂದೆ ನಡೆದುಬಂದು,ತಂದೆಯ ಶವದ ಬಳಿಗೆ ಬಂದ.ಶವದ ಮುಂದೆ ಕುಳಿತ.ಶವವನ್ನು ಮುಟ್ಟಲು ಮುಂದಾದ.ಇದ್ದಕ್ಕಿದ್ದಂತೆ,ನಿಲ್ಲು..ಮುಟ್ಟಬೇಡ..ಎಂಬಂತಹ ಕರ್ಕಶ ಧ್ವನಿ..ಯಾರದ್ದು ಆ ಧ್ವನಿ?..ಆತನ ತಾಯಿ ಜಾನಕಿಯಲ್ಲಿ ಆಕ್ರೋಶ ಭುಗಿಲೆದ್ದಿತ್ತು.ಮುಟ್ಬೇಡ...ಬೇಡ..ಮನುಷ್ಯ ಸಂಬಂಧಗಳ ಮೌಲ್ಯವೇ ಗೊತ್ತಿರದ,ಹೆತ್ತವರ ಮೇಲೆ ಗೌರವ ಪ್ರೀತ್ಯಾದರಗಳಿರದ,ಅನಾಗರಿಕತೆಯ ಪಿಪಾಸು ನೀನು...ಹಸಿಮಾಂಸ ತಿನ್ನುವ ಅಘೋರಿಗಳಂತೆ ನೀ ನನಗೆ ಗೋಚರಿಸ್ತಾ ಇದ್ದೀಯಾ!..ಮುಟ್ಟಬೇಡ..ಅವರ ಸಾವಿಗೆ ಕಾರಣ ನೀನೇ..ನೀನೇ...ನೀನೇ...ಕೊಂದೇಬಿಟ್ಯಲ್ಲೋ ಪಾಪೀ...ಜಾನಕಿ ಬಿಕ್ಕಳಿಸುತ್ತಾಳೆ.ಆದರೆ,ಆತನ ಮುಖದಲ್ಲಿ ಪಶ್ಚಾತ್ತಾಪ ಇಲ್ಲ.ದೃಢವಾದ ನೋಟ,ಮತ್ತದೇ ಮಾಸದ ಮಂದಹಾಸ!..ಹೇಳುತ್ತಾನೆ,ಎಲ್ಲರೂ ಅವರವರ ಸಮಯ ಬಂದಾಗ ಸಾವಿನ ಪರದೆಯ ಹಿಂದೆ ಸರಿಯಲೇಬೇಕು..ಯಾರ ಸಾವಿಗೆ ಯಾರೂ ಕಾರಣರಲ್ಲ..ನೀವು ಕೊಡುವ ಕಾರಣಗಳೆಲ್ಲ ನೆಪಗಳಷ್ಟೇ..!ಸಾವು ಶಾಶ್ವತವಾದದ್ದು,ಸಾವು ನಿಶ್ಚಿತವಾದದ್ದು...!ಎಂದಷ್ಟೇ ಹೇಳಿದ.ಹೆತ್ತ ಕರುಳು ರೋಧಿಸುತ್ತಿತ್ತು.ಜಾನಕಿ ಮತ್ತೆ ಕೂಗಿದಳು,ಮಗನಾಗಿ ಮಾಡಬೇಕಾದ ಎಲ್ಲ ಕಾರ್ಯಗಳನ್ನು ಮುಗಿಸುತ್ತೀಯಾ ಎಂದಾದಲ್ಲಿ ಮಾತ್ರ ಅವರ ಶವವನ್ನು ಮುಟ್ಟು..ಇಲ್ಲವಾದಲ್ಲಿ ಅದನ್ನು ಮುಟ್ಟುವ ಅಧಿಕಾರ ನಿನಗಿಲ್ಲ,ಹೊರಟೋಗು ಇಲ್ಲಿಂದ!!..ನನಗಿರುವ ಹೆಣ್ಮಕ್ಕಳಲ್ಲಿ ಒಬ್ಬಳನ್ನು ಮಗನೆಂದು ತಿಳಿದು,ಅವಳ ಕೈಯಿಂದಲೇ ಎಲ್ಲ ಕ್ರಿಯೆಗಳನ್ನು ಮಾಡಿಸುತ್ತೇನೆ.ಮದದಿಂದ ಕೊಬ್ಬಿದ ಮಗನ ಹಂಗು ನನಗಿಲ್ಲ!..ಎಂದು ಹೇಳುತ್ತಾ ಮೂರ್ಛೆಹೋದಳು.ಕಿರಿಯ ಮಗಳು ಲತಿಕಾ,ತನ್ನ ತಾಯಿ ಜಾನಕಿಯನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡಳು.ಮಂದಮಂದ ಮಕರಂದದ ನಗುವಿನೊಂದಿಗೆ ಸಿದ್ದಾರ್ಥ ಕುಳಿತಿದ್ದ.ಸ್ಥಿತಪ್ರಜ್ಞತೆಯೆಂದರೆ ಇದೇ ಇರಬೇಕು!ತಾಯಿಯೆಡೆಗೆ ನೋಡಿದ.ಕಣ್ಮುಚ್ಚಿ,ತನ್ನ ಚೀಲದಿಂದ ವಿಭೂತಿಯನ್ನು ತೆಗೆದು,ಬೊಗಸೆಯಲ್ಲೇ ಹಿಡಿದು ಧ್ಯಾನಿಸಿದ.ನೀರವ ಮೌನ...ಆ ವಿಭೂತಿಯನ್ನು ತನ್ನ ತಂದೆಯ ಶವಕ್ಕೆ ಸಂಪೂರ್ಣವಾಗಿ ಲೇಪಿಸಿದ.ಕೈಮುಗಿದು ಎದ್ದು ನಿಂತ.ನೆಪಕ್ಕೂ ಕೂಡ ಆತನಿಗೆ ಕಣ್ಣೀರಿನ ನೆನಪಾಗಲಿಲ್ಲ.ಒಂದು ತೊಟ್ಟು ಕಂಬನಿಯೂ ಬಸಿಯಲಿಲ್ಲ!ತಾಯಿಗೆ ಎಚ್ಚರವಾಯಿತು.ಆತ ಕೈಸನ್ನೆಯ ಮೂಲಕವೇ,ಮುಂದುವರೆಸಿ ಎಂದು ಎಲ್ಲರಲ್ಲೂ ವಿನಂತಿಸಿಕೊಂಡ.ಹೆತ್ತ ಬಸಿರಿನ ಉಸಿರ ಕಲಕುವ ಆಕ್ರಂದನ ಮಾರ್ದನಿಸುತ್ತಲೇ ಇತ್ತು.೩೫ ವರ್ಷಗಳ ಜಾನಕಿಯ ದಾಂಪತ್ಯದ ಕೊಂಡಿ ಬಲವಂತವಾಗಿ ಹರಿಯಲ್ಪಟ್ಟಿದೆ.ಎದೆಯ ತಳಮಳ,ತವಕ ತಲ್ಲಣಗಳಿಗೆ ಸಾಕ್ಷಿಯಾಗಿದ್ದ,ಸಾಂತ್ವನವಾಗಿದ್ದ ಒಂದು ದೇಹ ಈಗ ಎಲ್ಲ ಜಂಜಾಟಗಳಿಂದ ಮುಕ್ತವಾಗಿ ಮಣ್ಣೊಳಗೆ ಜಾರಿಹೋಗುತ್ತಿದೆ.ಕರುಳು ಹಿಂಡುವ ಆ ಹೃದಯವಿದ್ರಾವಕ ದೃಶ್ಯಕ್ಕೆ ಸಾಕ್ಷಿಯಾದ ಸಿದ್ದಾರ್ಥನ ಮೊಗದ ಮೇಲೆ ಮಗುವಿನ ಆ ಮುಗ್ಧ ಮಂದಹಾಸ ಇನ್ನೂ ಮಾಸದೇ,ಹಾಗೆಯೇ ಇದೆ.ರಘುನಾಥರ ದೇಹಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು.ಅವರ ದೇಹ ಪಂಚಮಹಾಭೂತಗಳಲ್ಲಿ ಲೀನವಾಯಿತು..
           ಸ್ನಾನಾದಿಗಳನ್ನು ಮುಗಿಸಿದ ಸಿದ್ದಾರ್ಥ,ಏಕಾಂತದಲ್ಲಿ ತನ್ನೊಳಗೆ ತಾನೇ ತನಗೇ ತಾನು ಮುಖಾಮುಖಿಯಾಗುತ್ತಿರುವ ಸಂದರ್ಭ..!ಸೂತಕದ ಕರಿಛಾಯೆಯ ಮಂಪರು ಇನ್ನೂ ಸರಿದಿರಲಿಲ್ಲ.ಮೋಹಕ,ಮಾದಕ ಬಟ್ಟೆ ತೊಟ್ಟ ಸ್ವಪ್ನಾ ಸಿದ್ದಾರ್ಥನ ಕೋಣೆಯನ್ನು ಪ್ರವೇಶಿಸುತ್ತಾಳೆ.ಮಾವ...ಮಾದಕವಾಗಿ ಉಲಿಯುತ್ತಾಳೆ.ಸಿದ್ದಾರ್ಥ ತಲೆ ಎತ್ತಿದ;ಏನು ಎಂಬಂತೆ ಪ್ರಶ್ನಾರ್ಥಕವಾಗಿ ಆಕೆಯತ್ತ ನೋಡಿದ.ಆತನ ಹತ್ತಿರ ಬಂದಳು.ಆತನ ಪಕ್ಕದಲ್ಲೇ ಅವನ ಮೈಗೆ ಅವಳ ಮೈ ತಾಕುವಂತೆ ಕುಳಿತಳು..ಆತ ಅಲ್ಲಿಂದ ಏಳಲು ಮುಂದಾದಾಗ,ಆತನ ಕೈ ಹಿಡಿದೆಳೆದಳು.ಕೈ ಬಿಡಿಸಿಕೊಂಡ.ಮಾವ...ಇಷ್ಟು ವರ್ಷ ನಿನಗೋಸ್ಕರ ಕಾಯ್ತಾ ಇದ್ದೆ...ಫೋನಲ್ಲಿ ಮಾತಾಡುವಾಗಿನ ಬಹುವಚನ ಈಗ ಏಕವಚನಕ್ಕೆ ತಿರುಗಿತ್ತು.ಹೇಳುತ್ತಿದ್ದಾಳೆ..ವಿರಹವೇದನೆಯಲ್ಲೇ ಕ್ಷಣಕ್ಷಣವೂ ಬೆಂದು ‘ನೀರಸ’ವಾಗಿದ್ದೆ.ನಿನ್ನಾಗಮನಕ್ಕಾಗಿ ಮನಸ್ಸು ತವಕಿಸುತ್ತಿತ್ತು.ಈಗ ‘ನೀ’ಬಾಳ‘ರಸ’ವಾಗಿ ಬಂದಿದ್ದೀಯಾ..ನಿನ್ನ ದೇಹದ ಬಿಸಿಗೆ ಬೆಣ್ಣೆಯಾಗಬೇಕೆಂದಿದ್ದೇನೆ...ಸಿದ್ದಾರ್ಥ ಬೇರೇನೋ ಯೋಚಿಸುತ್ತಿದ್ದಾನೆ,ಅವಳು ಹೇಳುತ್ತಲೇ ಇದ್ದಾಳೆ.ನಿನ್ನ ಸ್ಪರ್ಶದ ಪಾಶದಲ್ಲಿ ಖೈದಿಯಾಗಬೇಕೆಂದಿದ್ದೇನೆ,ಬಾ ಬಂಧಿಸು ನಿನ್ನ ತೋಳ್ಗಳಿಂದ...ಅವನನ್ನು ತಬ್ಬಲು ಮುಂದಾಗುತ್ತಾಳೆ.ಅವಳ ಕೈಗಳಿಂದ ಬಿಡಿಸಿಕೊಂಡು,ಸಿದ್ದಾರ್ಥ ಎದ್ದುನಿಲ್ಲುತ್ತಾನೆ.ಸ್ವಪ್ನಾ...ಆತ ಕರೆದ.ಆಹಾ!ಎಂಥ ಮಧುರ ಗಂಭೀರ ಧ್ವನಿ...ಧ್ವನಿಯಲ್ಲಿ ಅದೆಂಥ ಸಂಗೀತದ ನಾದವಿದೆ!..ಸ್ವಪ್ನಾ ಮನದಲ್ಲೇ ಯೋಚಿಸುತ್ತಿದ್ದಾಳೆ.ಸ್ವಪ್ನಾ...!ಇದೇನ್ ಮಾಡ್ತಾ ಇದ್ದೀಯಾ?ತಂದೆಯ ಶವವನ್ನು ಸುಟ್ಟುಬಂದು ಮಾಡಿದ ಸ್ನಾನದ ಮೈಯಿನ್ನೂ ಒಣಗದೇ ಹಸಿಯಾಗಿಯೇ ಇದೆ.ಸೂತಕದ ಮೂಕಸಾಕ್ಷಿಯಾಗಿ ಇಡೀ ಊರು ಶೋಕಿಸುತ್ತಿದೆ.ಇಂಥ ಸಮಯದಲ್ಲಿ ನಿನಗೆ ಪ್ರಣಯದ ಗುಂಗೇ?ಸ್ವಪ್ನಾ..ನಿನಗೆ ತಿಳಿದೇ ಇದೆ..ರಘುನಾಥರ ಒಬ್ಬನೇ ಮಗ ನಾನು.ಲಕ್ಷ ಲಕ್ಷ ಸಂಬಳ ಎಣಿಸುತ್ತಿದ್ದ ನಾನು,ಈ ಎಲ್ಲವುಗಳನ್ನು ತ್ಯಜಿಸಿದ್ದೇನೆ.ತಿಳಿದೇ ಇದೆ ಅಲ್ವಾ?ಐಹಿಕ ಲಾಲಸೆಗಳನ್ನು ಮೋಹಿಸದೆ ಪಾರಮಾರ್ಥಿಕ ಪಾರಮ್ಯದೆಡೆಗೆ ನಡೆಯುತ್ತಿರುವವನು ನಾನು..ಸಂಸಾರದ ಎಲ್ಲ ಬಾಂಧವ್ಯಗಳ ಸಂಕೋಲೆಗಳನ್ನು ಹರಿದು,ಕಿತ್ತೆಸೆದು ಸನ್ಯಾಸಿಯಾಗಬಯಸಿದವನು ನಾನು...ಬುದ್ಧನಾಗಬೇಕೆಂದಿದ್ದೇನೆ!ನನ್ನಲ್ಲಿ ನಿನಗದೆಂಥ ಕಾಮ?ಆತ ಪ್ರಶ್ನಿಸುತ್ತಾನೆ.ಮಾವ..ನೀನು ನನ್ನವನಾಗಬೇಕೆಂದು ಪರಿತಪಿಸುತ್ತಿದ್ದವಳು ನಾನು...ಈ ಸಮಯವನ್ನು ನಾನು ಕಳೆದುಕೊಂಡರೆ,ನೀ ನನಗೆಂದೆಂದೂ ಮತ್ತೆ ಸಿಗುವುದೇ ಇಲ್ಲ.ನಿನ್ನ ಪಡೆದುಕೊಳ್ಳಲಿಕ್ಕೆ ನನಗಿರುವುದು ಈ ಕಾಲವೊಂದೇ...!ಒಬ್ಬ ಹೆಣ್ಣಾಗಿಯೂ ನನ್ನೆಲ್ಲಾ ನಾಚಿಕೆಗಳನ್ನು ಬಿಟ್ಟು ನಿನ್ನಲ್ಲಿಗೆ ಬಂದಿದ್ದೇನೆ.ಮದನನ ಮೋಹದ ಕುಸುಮಶರವು ನನ್ನ ಅಂಗಾಂಗಗಳಲ್ಲಿ ಕಚಗುಳಿಯಿಡುತ್ತಿದೆ.ಬಾ,ನಿನ್ನನ್ನು ಸುಂದರ ಸ್ವಪ್ನಗಳ ಮಾಯಾಲೋಕದಲ್ಲಿ ತೇಲಾಡಿಸುತ್ತೇನೆ.ಹಪಹಪಿಸುವ ಯೌವನದ ಪರಿಮಳದಲ್ಲಿ ಹೊರಳಿಸುತ್ತೇನೆ.ಹಿತವಾಗಿ,ಮೃದುವಾಗಿ,ಸುಖವಾಗಿ ನರಳಿಸುತ್ತೇನೆ!ಏನಂದೆ ನೀನು?ಬುದ್ಧನಾಗಬೇಕೆಂದಿದ್ದೇನೆ,ಎಂದಲ್ಲವೇ?ಬುದ್ಧನಾಗಬಹುದು...ಆಗು,ನನ್ನದೇನೂ ಅಭ್ಯಂತರವಿಲ್ಲ!ಆದರೆ..ಈಗ ಬುದ್ಧನಾಗುವುದಕ್ಕಿಂತ ಮೊದಲಿನ ಸಿದ್ದಾರ್ಥನಾಗು,ಸಾಕು...ಆ ಸಿದ್ದಾರ್ಥ ಸಂಸಾರದ,ಸಂಭೋಗದ ಎಲ್ಲ ಸುಖಗಳನ್ನೂ ಅನುಭವಿಸಿದ್ದನಲ್ಲವೇ?ನನ್ನೊಡಲ ಮೋಹದ ಕಿಚ್ಚನ್ನು ತಣ್ಣಗಾಗಿಸು ಬಾ..ಹೇಳುತ್ತಾಳೆ ಸ್ವಪ್ನಾ.ತರಳೆ!..ಹ್ಹಹ್ಹಹ್ಹಾ...ಒಡಕು ಬಿಂಬಗಳ ಮುರುಕು ಸ್ವಪ್ನದ ದರ್ಶನ ನನಗೆ ಬೇಕಿಲ್ಲ.ಪೌರ್ಣಿಮೆಯ ಪೂರ್ಣಚಂದ್ರಪ್ರಭಾಬಿಂಬಕ್ಕಾಗಿ ಕಾತರಿಸುತ್ತಿರುವವನು ನಾನು..ಸ್ವಪ್ನ ಎಂಬ ಕಾಲ್ಪನಿಕ ಮಾಯೆಯ ಹಂಗು ನನಗೆ ಬೇಕಿಲ್ಲ ಕೂಡಾ..!ಸ್ವಪ್ನದಲ್ಲಿ ಕಂಡ ಸುಪ್ತ ಮನಸ್ಸಿನ ಸಂಗತಿಗಳು ಕೇವಲ ಕಾಲ್ಪನಿಕವೂ ಆಗಬಹುದಲ್ಲವೇ?ಸತ್ಯವೇ ಆಗುತ್ತವೆ ಎಂದೇನಿಲ್ಲವಲ್ಲ.ಸತ್ಯವಾಗಲೇಬೇಕು ಎಂದೂ ಕೂಡಾ ಇಲ್ಲ ಅಲ್ಲವೇ?ನಾನು ರುಥದ ಹುಡುಕಾಟದಲ್ಲಿದ್ದೇನೆ.ಸುಪ್ತ ಮನಸ್ಸು ಕೂಡಾ ಜಾಗೃತವಾಗಲೆಂದೇ ಕಾತರಿಸುತ್ತಿದ್ದೇನೆ.ಆ ಋತುವಿಗಾಗಿ ಕನವರಿಸುತ್ತಿದ್ದೇನೆ.ಸಾಧಿಸಬೇಕಾಗಿದೆ ಸತ್ಯವನ್ನು!..ಆರಾಧನೆಯೆಂಬುದು ಸನಾತನವೂ ಹೌದು,ನೂತನವೂ ಹೌದು.ಅದು ನಮ್ಮೊಳಗೆ ತಾನಾಗೇ ಸ್ಫುರಿಸಿಬರಬೇಕು.ಕಾಮವನ್ನು ಪುರುಷಾರ್ಥಗಳ ಮುಖೇನ ನೋಡು.ವಿಕೃತ ಆಸೆಗಳಿಗೆಲ್ಲ ಒಂದು ಶುಭದ ಸಂಕ್ರಮಣ ಬರಲಿ.ಗಂಡು ಹೆಣ್ಣಿನ ಮಧ್ಯೆ ಇರುವ ಮೋಹದ ಗೆರೆಯನ್ನು ದಾಟಿ ಈಚೆ ಬಾ..ಸನ್ಯಾಸಿಯಾಗುವಾಗ ನಮ್ಮ ಅಪರಕ್ರಿಯೆಗಳನ್ನು ನಾವೇ ಮಾಡಿಕೊಂಡು,ಈ ಲೋಕದಿಂದ ಬಿಡುಗಡೆ ಹೊಂದುತ್ತೇವೆ.ಈ ಕಳೇಬರದೊಂದಿಗೆ ನಿನಗದಾವ ಸುಖ?ಪೈಶಾಚಿಕ ಆನಂದಕ್ಕಾಗಿ ಹಾತೊರೆಯುತ್ತೀಯಾ?ಬದುಕನ್ನು ನಂಬು,ಪ್ರೀತಿ ಸಿಗುತ್ತದೆ.ಪ್ರೇಮ ಕಾಮದ ಸಂಘರ್ಷದಲ್ಲಿ ಮೂಕವಾಗಿ ತಿಕ್ಕಾಟಕ್ಕೆ ಒಳಗಾಗಿ ಸುಕ್ಕಾಗಬೇಡ..!ಸ್ಫುಟವಾಗು...ಹೋಗು,ಒಂದೊಳ್ಳೆಯ ಬದುಕು ಕಟ್ಟಿಕೋ..ಅತ್ಯಂತ ಪ್ರಶಾಂತನಾಗಿ ಅಷ್ಟೇ ಪ್ರಬುದ್ಧನಾಗಿ ಸಿದ್ದಾರ್ಥ ಹೇಳಿದ.ಸ್ವಪ್ನಾ ಅಳುತ್ತಾ ಹೊರಗೋಡಿದಳು.ಸಿದ್ದಾರ್ಥ ಯೋಚಿಸುತ್ತಲೇ ಇದ್ದ...ಮನುಷ್ಯ ತುಡಿತುಡಿವ ಕ್ಷಣಿಕತೆಗಾಗಿ ಅದೆಷ್ಟು ಹಂಬಲಿಸುತ್ತಾನೆ.ಸೂತಕದ ಜಾಗದಲ್ಲೂ ಸಂಭೋಗದ ಸಂಭ್ರಮಕ್ಕಾಗಿ ಅದೆಷ್ಟು ಹಪಹಪಿಸುತ್ತಾನೆ!!ಆದಷ್ಟು ಬೇಗ ಈ ಭೀಕರ ಸಂಸಾರದಂಗಳದಿಂದ ದೂರಾಗಿಬಿಡಬೇಕು...!!
         ಬಾನಲ್ಲಿ ಶಶಿ ಅಸ್ತಮಿಸೆ,ದಿನಮಣಿಯು ತೊದಲುತ್ತ ಬಂದ!ಇತ್ತ ಸಿದ್ದಾರ್ಥ ಹೊರಟುನಿಂತಿದ್ದಾನೆ.ತಾಯಿ ಜಾನಕಿಯ ಅತ್ತೂ ಅತ್ತೂ ಕೆಂಪಾದ ಕಣ್ಣುಗಳಿನ್ನೂ ಸಹಜ ಸ್ಥಿತಿಗೆ ಬಂದಿರಲಿಲ್ಲ.ಮತ್ತೆ ಬೊಬ್ಬಿಡುತ್ತಿದ್ದಾಳೆ....ಹೆತ್ತ ತಾಯಿಯನ್ನು ಒಬ್ಬಂಟಿಯಾಗಿ ಬಿಟ್ಟು,ಮತ್ತೆಲ್ಲಿಗೋ ಹೋಗಿ,ಅರ್ಥವಾಗದ ಪ್ರಶ್ನೆಯ ಕಗ್ಗಂಟಾಗಿ ಯಾಕೆ ಉಳಿಯುತ್ತೀಯಾ? ಎಲ್ಲರೂ ಹೆತ್ತವರ ಋಣ ತೀರಿಸಲು ಹೆಣಗುತ್ತಾರೆ.ಆದರೆ,ನೀನು..ಥೂ...ಹೆತ್ತವರ ಹೆಣ ಕೆಡವಲು ಹವಣಿಸುತ್ತಿದ್ದೀಯಲ್ಲಾ!ನಿನ್ನ ಕೊರಗಿನಲ್ಲೇ ನಿನ್ನ ತಂದೆ ಪ್ರಾಣ ಬಿಟ್ಟರು.ಅವರ ಸಾವಿಗೆ ನೀನೇ ಕಾರಣವಾದೆ!ಸಾಯುವಾಗಲೂ ಅವರು "ನನ್ ಮಗ" ಅಂತಾನೇ ಸತ್ತೋದ್ರು.ಈಗ ನಿನ್ನ ತಾಯಿಯ ಸಾವಿಗೂ ನೀನೇ ಕಾರಣವಾಗುತ್ತೀಯಾ?.ದಯವಿಟ್ಟು ಹೇಳಿಬಿಡು,ಇನ್ನೆಷ್ಟು ಜೀವಗಳ ಬಲಿಗಾಗಿ ನೀನು ಪರಿತಪಿಸುತ್ತಿದ್ದೀಯಾ?..ಸನ್ಯಾಸಿಯಂತೆ!ಹೆತ್ತವರ ಒಡಲಲ್ಲಿ ಬೆಂಕಿಯಿಟ್ಟು ತಪ್ತವಾಗುವುದೆಂಥ ತಪಸ್ಸು?!ಹೆತ್ತ ತಾಯಿಗಿಂತ ಮೊನ್ನೆ ಮೊನ್ನೆ ಹುಟ್ಟಿಕೊಂಡ ಸನ್ಯಾಸದ ಆಸೆಯೇ ಸತ್ವವಾಯಿತಾ?ನವಮಾಸಗರ್ಭದ ಋಣ,ಬುದ್ಧಿ ಬಲಿತು ಮಾಗುವವರೆಗಿನ ಅನ್ನದ ಋಣ,ಮತ್ತೆ ಮತ್ತೆ ನೆನಪಾಗುವ ವಾತ್ಸಲ್ಯದ ಋಣ,ಕಲ್ಮಶವೇ ಗೊತ್ತಿರದ ಆ ಪ್ರೀತಿಯ ಋಣ..ಈ ಎಲ್ಲವುಗಳ ಲೆಕ್ಕ ಚುಕ್ತಾ ಆಯಿತೇ?ಅಥವಾ ಇವೆಲ್ಲ ಗೌಣವಾದವೇ?ಸತ್ಯ ಸತ್ಯ ಎಂದು ಸಂಭ್ರಮಿಸುತ್ತೀಯಲ್ಲಾ,ತವಕಿಸುತ್ತೀಯಲ್ಲಾ,ತಾಯಿ ಎನ್ನುವವಳೂ ಕೂಡಾ ಒಂದು ಸುಳ್ಳಾದಳೇ ಹಾಗಾದರೆ?...ನಿನ್ನ ಆ ಸತ್ಯದ ಪಟ್ಟಿಯಲ್ಲಿ ತಾಯಿ ಎನ್ನುವವಳೊಬ್ಬಳಿಲ್ಲವೇ ಹಾಗಾದರೆ?ನಿನ್ನ ಆ ಸಂಭ್ರಮದ ಸರಹದ್ದಿನಲ್ಲಿ ತಾಯಿ ಎನ್ನುವವಳು ಸತ್ಯದ ಸಂಭ್ರಮವಾಗಲೇ ಇಲ್ಲವೇ ಹೇಳು ಸಿದ್ದಾರ್ಥ ಹೇಳು...ಹೇಳು ಕಂದಾ...!ಅಮ್ಮಾ..ಸಿದ್ದಾರ್ಥ ಅರುಹತೊಡಗುತ್ತಾನೆ...ಮಹಾತ್ಮನಾಗಲು ಹೊರಟ ಈ ನಿಮ್ಮ ಮಗನನ್ನು ನೋಡಿ ಹರಸಬೇಕಾಗಿತ್ತು ನೀವು!ಆದರೆ?...ಅಮ್ಮಾ,ಸಮಾಧಿಯಾದ ಸಂಗತಿಗಳ ಮುಂದೆ ಹಣತೆ ಹಚ್ಚಿಬಿಡಿ ಅಮ್ಮಾ,ಬೆಳಕಾದರೂ ತುಂಬಿಕೊಳ್ಳುತ್ತದೆ.ಯಾರ ಗೋರಿಯ ಮೇಲೂ ಆತನ ಸಂಸಾರದ ವರದಿಯಿರುವುದಿಲ್ಲ.ಯಾರನ್ನು ಸುಡಬೇಕಾದರೂ,ಆತನ ಜೊತೆ ಆತನ ಪತ್ನಿ,ಮಕ್ಕಳ್ಯಾರೂ ಬೂದಿಯಾಗಲು ಚಿತೆಯನ್ನಲಂಕರಿಸುವುದಿಲ್ಲ ಅಲ್ಲವೇನಮ್ಮಾ?ಬದುಕಿನ ಸಾರದ ಪೂರ್ಣರೂಪವೇ ಅಲ್ಲವೇನಮ್ಮಾ ಮೋಕ್ಷ!ಸನ್ಯಾಸವೆಂಬುದು ಸಾಮಾನ್ಯವಲ್ಲಮ್ಮ...ಸಹಸ್ರ ಸಹಸ್ರ ಜನುಮಗಳ ಸುಕೃತಗಳ ಸಾರದ ಅಮೂರ್ತ ರೂಪದ ಮೂರ್ತ ಜನುಮ ಕಣಮ್ಮಾ...ಸಂತನಾಗುವುದೆಂದರೆ,ಬದುಕಿನ ವಸಂತವಮ್ಮಾ!...ಹೇಳುತ್ತಿದಾನೆ ಸಿದ್ದಾರ್ಥ...ಬಾಯ್ಮುಚ್ಚು,ಹೆತ್ತ ತಾಯಿಯ ಬದುಕಿಲ್ಲಿ ಧಗಧಗಿಸುತ್ತಿರುವಾಗ ನಿನಗದೆಲ್ಲಿಯ ವಸಂತ?ಶಂಕರರೂ ಸನ್ಯಾಸಿಗಳಾದರು.ಆದರೆ,ಶಂಕರರು ತಾಯಿಯ ಅಣತಿಯನ್ನು ಪಡೆದೇ ಸನ್ಯಾಸಿಯಾದರು.ಸರ್ವಸಂಗಪರಿತ್ಯಾಗಿಯಾದ ಮೇಲೂ ತಾಯಿಯ ಅಂತ್ಯಸಂಸ್ಕಾರಕ್ಕಾಗಿ ಆಗಮಿಸಿದರು...ನಮ್ಮ ಈ ಜನಾಂಗ,ನಮ್ಮ ಈ ಪರಂಪರೆ,ನಮ್ಮ ಈ ಪುರಾಣೇತಿಹಾಸಗಳು ಜಡಚೇತನಗಳಲ್ಲೂ ಕೂಡಾ ಮಾತೃತ್ವವನ್ನು ಕಂಡಿವೆ.ಮಾತೃತ್ವವನ್ನು ಆದಿಶಕ್ತಿ ಎಂದು ಆರಾಧಿಸುತ್ತಿವೆ.ಈ ಎಲ್ಲ ಮಹಾನ್ ಮಹಾನ್ ಮಹಾತ್ಮೆಗಳಿಗಿಂತ ದೊಡ್ಡವನೇನಲ್ಲವಲ್ಲ ನೀನು!ಹೆತ್ತವರನ್ನೇ ಸರಿಯಾಗಿ ಪಾಲಿಸದ ನೀನು,ಜಗತ್ತಿಗೇನು ಕೊಡಬಲ್ಲೆ?ಸಚ್ಚಿದಾನಂದಸ್ವರೂಪವೇನೆಂದರೇನೆಂದರಿಯದ ಪಾಮರಳು ನಾನೆಂದುಕೊಂಡೆಯಾ?ಸಂಸಾರದೊಳಗೊಮ್ಮೆ ಧುಮುಕಿ ನೋಡು.ತೀರವಿರದ ಆ ಸಾಗರದಲ್ಲಿ ಈಜುವುದೇ ಒಂಥರದ ರೋಮಾಂಚನ!..ಕ್ಷಣಕ್ಷಣವೂ ಮೈದಡವುವ ಪ್ರೀತಿಯ ಆಲಿಂಗನ!..ನಮ್ಮ ನಮ್ಮ ತೀರಗಳನ್ನು ನಾವು ನಾವೇ ಸೃಷ್ಟಿಸಿಕೊಳ್ಳುವಂತೆ ಮಾಡುವುದೇ ಅದರ ಜಾಯಮಾನ..!ಸತ್ತ ನಂತರದ ಮೋಕ್ಷಕ್ಕಿಂತ ಬದುಕಿನೊಳಗಿನ ಐಕ್ಯ ಚೆಂದ,ಅಲ್ಲವೇ?ಮೋಕ್ಷ ಸಿಗುತ್ತದೋ ಇಲ್ಲವೋ ತಿಳಿದವರಾರು?ಆದರೆ,ನೆಚ್ಚಿಕೊಂಡ ಹಚ್ಚಿಕೊಂಡ ಬದುಕಿನಲ್ಲಿ ಪ್ರೀತಿ ಸಿಗುತ್ತದೆ.ಆ ಪ್ರೀತಿಯಲ್ಲೇ ನೀ ಹುಡುಕುವ ಸಚ್ಚಿದಾನಂದ ಸ್ವರೂಪವಿದೆ...ದೀಪ ಹಚ್ಚುವುದು ಸುಲಭ.ಆದರೆ,ಆರದಂತೆ ನೋಡಿಕೊಳ್ಳುವುದು ಕಷ್ಟ ಕಣೋ!..ಸಂಸಾರವೆಂಬುದು ಒಂದು ಸುಂದರ ಅನುಭೂತಿ!ಅನುಭವಿಸಿ ನೋಡು,ಅರ್ಥವಾಗುತ್ತದೆ!!ಅರ್ಥಗಳು ತಾನಾಗಿ ಹುಟ್ಟುವುದಿಲ್ಲ.ಅವುಗಳ ಸೆಲೆಗಳಿಗಾಗಿ ಅನ್ವೇಷಿಸಬೇಕು.ಅವುಗಳ ಹುಟ್ಟಿಗಾಗಿ ಧೇನಿಸಬೇಕು.ಹೋಗ್ಬೇಡ್ವೋ...ಅಂತ ಜಾನಕಿ ಸಿದ್ದಾರ್ಥನ ಕಾಲಗಳನ್ನು ಹಿಡಿದುಕೊಂಡಳು.ಅಮ್ಮಾ!ಇದೇನ್ ಮಾಡ್ತಾ ಇದ್ದೀರಿ,ನೀವು?ದೇವತೆಯ ಪ್ರತಿರೂಪದಂತಿರುವ ತಾಯಿ,ಮಗನ ಕಾಲನ್ನೆಲ್ಲಾ ಹಿಡಿಯಬಾರದಮ್ಮಾ...ಅಂತ ಹೇಳುತ್ತಾ,ಮನೆಯ ಹೊಸ್ತಿಲೆಡೆಗೆ ಬಂದ.ತನ್ನ ಕೈಲಿದ್ದ ಚೀಲವನ್ನು ತೆಗೆದು,ಅಲ್ಲೇ ಕೆಳಗಿಟ್ಟು,ದೇಹದ ಅರ್ಧಭಾಗ ಮನೆಯ ಒಳಗೂ,ಇನ್ನರ್ಧ ಭಾಗ ಮನೆಯ ಹೊರಗೂ ಇರುವಂತೆ,ಹೊಸ್ತಿಲ ಮೇಲೆ ಕಣ್ಮುಚ್ಚಿ ಕುಳಿತುಬಿಟ್ಟ.ಆಚೆ ಹೋಗಲೋ,ಇಲ್ಲೇ ಇರಲೋ ಎಂಬ ದ್ವಂದ್ವ ಮನಸ್ಥಿತಿ..ಮನಸ್ಸು ಡೋಲಾಯಮಾನವಾಗತೊಡಗಿತ್ತು...ತಂತಾನೇ ಕಣ್ಣಿಂದ ಎರಡು ಹನಿ ಉದುರಿತ್ತು.ಪಶ್ಚಾತ್ತಾಪಕ್ಕೋ,ಅಥವಾ ಸನ್ಯಾಸದ ಪರಿತಾಪಕ್ಕೋ ತಿಳಿಯುತ್ತಿಲ್ಲ.ಆದರೆ,ಸ್ವಪ್ನಾ ಓಡಿಬಂದು,ಆತನ ಕೆನ್ನೆಯ ಮೇಲಿಂದಿಳಿದ ನೀರಿನ ಬಿಂದುಗಳನ್ನು ತನ್ನ ಬೊಗಸೆಯಲ್ಲಿ ಹಿಡಿದಳು.ಬದುಕಿಗೆ ಬೇಕಿರುವುದೂ ಕೂಡಾ,ಕಣ್ಣೀರೊರೆಸುವ ಕೈಗಳೇ ಅಲ್ಲವೇ?ಆತ ಕಣ್ಮುಚ್ಚಿ ಹೊಸ್ತಿಲ ಮೇಲೆ ಹಾಗೇ ಪದ್ಮಾಸನದಲ್ಲಿಯೇ ಕುಳಿತಿದ್ದ..ದಾರಿಯಲ್ಲಿ ಹೋಗುತ್ತಿದ್ದ ಭೈರಾಗಿಯೊಬ್ಬ ಇವನನ್ನು ನೋಡಿ ನಗುತ್ತಾನೆ..ಸಂಸಾರವೇ ಹಾಗೆ..ಮರಳಿ ಮರಳಿ ಸುತ್ತಿಕೊಳ್ಳುವ ಮಾಯಾವರ್ತುಲ..ಮನಸ್ಸು ಪಕ್ವವಾಗಬೇಕು..ನಮ್ಮೊಳಗಿನ ನಮ್ಮಲ್ಲಿ ನಾವು ಒಂದಾಗಬೇಕು..ಸನ್ಯಾಸ ಸುಲಭವಾಗಿ ದಕ್ಕುವಂಥದ್ದಲ್ಲ..!!ವೈರಾಗ್ಯದ ಮೇಲೆ ಅನುರಾಗವುದಿಸಬೇಕು...ಎಲ್ಲರಿಗೂ ಒದಗದ ಈ ಸುಯೋಗದಿಂದ ಆತನನ್ನು ಈ ಜನ ವಂಚಿಸುತ್ತಿದ್ದಾರೆ...ನಶ್ವರತೆ ಅರಿವಾಗುವುದರೊಳಗೆ ಆಚೆಗಿನ ತೀರ ತಲುಪುವುದು ಸ್ವಪ್ನವೇ ಆಗಿಹೋಗುತ್ತದೆ..ಋತು ಚಕ್ರ ಮರಳಿ ಮರಳಿ ತಿರುಗುತ್ತಿದೆ,ತಿರುಗುತ್ತಲೇ ಇರುತ್ತದೆ...ಹ್ಹಹ್ಹಹ್ಹಾ..ಹ್ಹಹ್ಹಹ್ಹಾ...ಎನ್ನುತ್ತಾ ಆ ಭೈರಾಗಿ ಮತ್ತೆ ಈ ಮನೆಯತ್ತ ತಿರುಗಿಯೂ ನೋಡದೇ ಹಾಗೇ ನಡೆದುಬಿಟ್ಟ..ಸಿದ್ದಾರ್ಥ ಹಾಗೆಯೇ ಕುಳಿತಿದ್ದಾನೆ...ಒಂದು ಕಡೆ ಬುದ್ಧನಾಗುವ ಮನಸ್ಸು ಹೊತ್ತು..ಇನ್ನೊಂದೆಡೆ ಸಂಸಾರಸ್ವಪ್ನದ ಖೈದಿಯಾಗಿದ್ದಾನೆ;ನೆನೆದು ಅಮ್ಮನ ಕೈತುತ್ತು..!!...


                                                                                                 ~‘ಶ್ರೀ’
                                                                                                   ತಲಗೇರಿ