ಶಹರದ ಹೊಕ್ಕುಳೊಳಗೆ.. -೧
... ಕದಡಿದ ನಗೆಯ ಬಿಂಬಗಳ ಹುಡುಕಾಟ...
... ಕದಡಿದ ನಗೆಯ ಬಿಂಬಗಳ ಹುಡುಕಾಟ...
ಕಾಂಕ್ರೀಟ್ ಕಾಡು..ಕಪ್ಪು ಬಣ್ಣವನ್ನು ಉಗಿ ಮಾಡಿ ದಪ್ಪದಪ್ಪಗೆ ಹರಡಿದಂಥ ಹೊಗೆಯ ಪದರ..ಟ್ರಾಫಿಕ್ ಲೈಟಿನ ಎದುರುಗಡೆ ಒಂದೇ ಸಮನೆ ಬೊಬ್ಬಿರಿವ ಹಾರನ್ ಗಳು..ಆ ಭಾಷೆ ಈ ಭಾಷೆಯ ಅಚ್ಚ ಬೈಗುಳಗಳು..ಇಷ್ಟೇ ಇಷ್ಟೇ ಈ ಶಹರವೆಂಬ ದೊಡ್ಡಹೊಟ್ಟೆಯ ಹಣೆಬರಹ.. ಹೊಟ್ಟೆಪಾಡಿಗಾಗಿ ಇಲ್ಲಿ ಜೋತುಬೀಳಬೇಕಷ್ಟೇ, ಇಲ್ಲದಿದ್ದಲ್ಲಿ ಇಲ್ಲ್ಯಾಕೆ ಬರುತ್ತಿದ್ದೆ.. ಇಂತಹ ಅದೆಷ್ಟೋ ಮಾತುಗಳನ್ನ ದಿನನಿತ್ಯ ಕೇಳ್ತೀವಿ; ಅಷ್ಟೇ ಅಲ್ಲ , ಆಡ್ತೀವಿ.. ಶಹರ ಅಂದ್ರೆ ಇಷ್ಟೇನಾ? ಜರ್ಝರಿತ ರೋಗಿಷ್ಟ ದರಿದ್ರ ಅಶುದ್ಧ ವಾಂಛೆಗಳ ಅಸಹ್ಯ ಅನಾತ್ಮ ಕಸದ ತೊಟ್ಟಿ ಅನ್ನುವಷ್ಟರ ಮಟ್ಟಿಗೆ ಮೂಗುಮುರಿಯುತ್ತಲೇ ಕಾಲಚಕ್ರದ ನಿಟ್ಟುಸಿರಿನ ಇದಿರು ಕೈಕಟ್ಟಿ ನಿಲ್ಲುತ್ತೀವಲ್ಲಾ! ಇಷ್ಟೇನಾ ಶಹರ ಅಂದ್ರೆ?! ಅಲ್ಲ....
ಒರಟು ತೊಗಟೆಯಷ್ಟನ್ನೇ ಕೆಕ್ಕರಿಸಿ ನೋಡುತ್ತಾ, ಒಳಗಿನ ರುಚಿಯ ಬಗೆಗೆ ದಾಖಲೆಯಿಲ್ಲದೇ ಮಾತನಾಡುವ ಖಯಾಲಿ ಇಂದಿನದಲ್ಲ.. ಪ್ರಕೃತಿಯ ಪರಿಭಾಷೆಯ ಉಕ್ತಿಗಳಲ್ಲಿ ಈ ಶಹರವೂ ಒಂದು..ವಾಸದ ಕೋಣೆಯಿಂದ ಹೊರಗೆ ಕಾಲಿಡುತ್ತಿದ್ದಂತೆಯೇ ಮುಖಕ್ಕೆ ರಾಚುವ ಸೂರ್ಯನ ಶ್ವಾಸಕ್ಕೆ ಬೈಯುತ್ತಲೇ ಬೀದಿಗಿಳಿಯುವ ನಾವು, ಎಳೆಬಿಸಿಲ ಮೆಲುದನಿಗೆ ಕಿವಿಗೊಟ್ಟಿದ್ದು ಎಂದು?! ಟ್ರಾಫಿಕ್ಕಿನ ರಗಳೆಯಲ್ಲಿ ಸುತ್ತಮುತ್ತಲು ಒಮ್ಮೆಯಾದರೂ ಕಣ್ಣು ಹರಿಸಿದ್ದೀವಾ..ಪಕ್ಕದ ಆಟೋದಲ್ಲಿ ಪಿಳಿಪಿಳಿ ಕಂಗಳ ಪುಟಾಣಿ, ಬೊಚ್ಚುಬಾಯಿಯಲ್ಲಿ ಆಗಷ್ಟೇ ಹುಟ್ಟುತ್ತಿರುವ ಮೊಗ್ಗು ಹಲ್ಲುಗಳನ್ನ ತೋರಿಸುತ್ತಿರಬಹುದು.. ದಿನಪತ್ರಿಕೆ ಮಾರುತ್ತ ,ಅರ್ಧ ಹರಿದ ಅಂಗಿಯ ಗುಂಡಿಗಳಲ್ಲಿ ಕನಸುಗಳ ಭದ್ರಪಡಿಸುತ್ತಿರುವ ಆ ಗಾಢ ಬಣ್ಣದ ಚರ್ಮದ ಹುಡುಗನ ಹೆಸರನ್ನೆಂದಾದರೂ ಕೇಳಿದ್ದೀವಾ.. ಧೂಮಪಾನ ಶ್ವಾಸಕೋಶದ ಕೋಣೆಗಳನ್ನ ಬಿಂಜಲು ಕಟ್ಟುವಂತೆ ಆವರಿಸುತ್ತದೆಂದು ಅರಿವಿದ್ದರೂ ಟ್ರಾಫಿಕ್ಕಿನ ಹೊಗೆಯಲ್ಲೇ ಬಿಳಿವಸ್ತ್ರ ತೊಟ್ಟು ,ಸಂಬಾಳಿಸುವ ಆ ಮನುಷ್ಯನೊಬ್ಬನಿಗೆ ಒಂದು ಧನ್ಯವಾದದ ನೋಟ ತಲುಪಿದೆಯಾ..
ದಾರಿಯಂಚಲ್ಲಿ ನಡೆವಾಗ ಮೆತ್ತನೆಯ ಒಂದು ಸ್ಪರ್ಶಕ್ಕಾಗಿ ಹಾತೊರೆದ ಪುಟಾಣಿ ನಾಯಿಮರಿಯ ಹೆಜ್ಹೆ ಸದ್ದು ನಮ್ಮ ಬಿರುಸಿನ ಹೆಜ್ಜೆಗಳಲ್ಲಿ ಕರಗಿಹೋಯಿತೇನೋ.. ಆಗಷ್ಟೇ ಮೈದಳೆದ ಬೇಲಿಬದಿಯ ಹೂವ ಗೆಳೆತನಕ್ಕೆ ಹಾತೊರೆಯುತ್ತಿರುವ ಚಿಟ್ಟೆಯ ಗೋಗರೆತ ನಮ್ಮ ಅಟ್ಟಹಾಸದ ತರಂಗಗಳಲ್ಲಿ ಉಸಿರುಗಟ್ಟಿ ಸತ್ತಿರಬಹುದು..ಅಪರೂಪಕ್ಕೆ ಕಾಣಸಿಗುವ ಮರದ ಟೊಂಗೆಯ ಎಲೆಗೊಂಚಲುಗಳಲ್ಲಿ ಕುಳಿತು ವೀಕ್ಷಕರ ಹಂಗಿಲ್ಲದೇ ಹಾಡಿದ ಹಕ್ಕಿಯ ದನಿಯನ್ನ ಗಮನಿಸಲೇ ಇಲ್ಲವಲ್ಲ... ನಮ್ಮ ಪ್ರೀತಿಯ ನಿವೇದನೆಗೆ ಇಷ್ಟುದ್ದ ಮಲ್ಲಿಗೆ ದಂಡೆಯನಿತ್ತು , ಚಂದ್ರನ ರಾತ್ರಿಗಳಿಗೆ ಬೆಳದಿಂಗಳ ಪನ್ನೀರ ಘಮ ತುಂಬಿದವನ ಹಗಲುಗಳು ಬೆವರ ಹನಿಗಳ ಬಿಕ್ಕಳಿಗೆ ಹಾಗೇ ಇಂಗಿಹೋಗುತ್ತದೆ...
ಬದುಕು ಹೋರಾಟ ಎಂಬುದರ ನಿಜವಾದ ಅಭಿವ್ಯಕ್ತಿ ಬಹುಶಃ ಶಹರಗಳಲ್ಲಿ ಮಾತ್ರವೇ ನ್ಯಾಯಯುತವಾಗಿ ದಕ್ಕುತ್ತದೆಂದು ಅನಿಸುತ್ತದೆ! ತೇಪೆ ಹಚ್ಚಿದರೂ ಹರಿದು ಗಾಢ ಚರ್ಮ ಕಿಸಕ್ಕನೆ ನಗುವ ದಂಟುಕೋಲಿನ ಅವಳು , ಅರ್ಧ ಉರಿದ ಸಿಗರೇಟಿಗೆ ಇನ್ನಷ್ಟು ಪ್ರಾಯ ಕೊಡಲು ತನ್ನುಸಿರ ಸವೆಸುತಿರುವ ಸಾಲು ಎಲುಬಿನ ಅವನು.. ದಪ್ಪ ದಪ್ಪ ಅಂಗೈಗಳಲ್ಲಿ ಚಿಲ್ಲರೆಗಳ ಬೆವರ ವಾಸನೆಗೆ ಒಂದೊತ್ತಿನ ತುತ್ತು ನುಂಗುತ್ತಾರೆ.. ಅದರಲ್ಲೂ ಕೆಲವೊಮ್ಮೆ ನಾಯಿಗಳಿಗೆ ಹಂಚುತ್ತಾರೆ.. ! ಅರೆ ಬರೆ ನೆರಳ ಮರದಡಿಯಲ್ಲಿ ಅವನೊಬ್ಬ ನಿಂತಿರುತ್ತಾನೆ ಚಿಕ್ಕ ಕೈಗಾಡಿ ಅಥವಾ ಸೈಕಲ್ಲಿನ ಮೇಲೆ ಒಂದಷ್ಟು ಎಳನೀರು ಹೇರಿಕೊಂಡು.. ಪರಮಜ್ಞಾನಿಯಂತೆ ಆತ ನೀರು ಗಂಜಿಗಳ ಎಳನೀರು ತೆಗೆದುಕೊಡುವಾಗ ಕೆಕ್ಕರಿಸಿ ನೋಡುತ್ತೇವೆ ; ಅವನ ಗಂಟಲಲಿ ಬತ್ತಿದ ನೀರ ಬಗ್ಗೆ ಕೇಳುವುದೇ ಇಲ್ಲ !.. ಅವ ಮೆತ್ತನೆಯ ದನಿಯಲ್ಲಿ ಅಲ್ಲಿ ನಿಂತಷ್ಟು ಹೊತ್ತಿನ ಬಿಸಿಲ ಬಾಡಿಗೆಗೆ ಗೋಗರೆವಾಗ ನಮ್ಮ ಧ್ವನಿಗೆ ಎತ್ತರದ ಅಲಂಕಾರ! ನೆಲದ ಮೇಲೆ ಒಂಚೂರು ದಪ್ಪನೆಯ ಹೊದಿಕೆ ಹಾಸಿ ಅದರ ಮೇಲೊಂದಿಷ್ಟು ತರಕಾರಿ ಹಣ್ಣುಗಳ ಕೂಡಿಟ್ಟು ಅದನ್ನು ಮುಟ್ಟುವ ಕೈಗಳಿಗಾಗಿ ಇದಿರು ನೋಡುತ್ತಿರುವ ಆಕೆಯ ಮನಸ್ಸಿನಲ್ಲಿ ಯಾರಿರಬಹುದು..?! ತನ್ನ ನಾಳೆಗಳ ರೂಪಿಸಲು ಈಗ ತೊಟ್ಟಿಲಲ್ಲಿ ಮಲಗಿರುವ ಕಂದ ಅಥವಾ ಜಾರುವ ಚಡ್ಡಿಯ ಎಳೆದೆಳೆದು ಮೂಗಿನ ಸಿಂಬಳ ಒರೆಸುತ್ತ ಹರಿದ ಚಪ್ಪಲಿಗೆ ಬಳ್ಳಿ ಕಟ್ಟಿ ಕಾಲು ತೂರುತ್ತ ನಡೆವ ಸರ್ಕಾರಿ ಶಾಲೆಯ ಸಮವಸ್ತ್ರಧಾರಿ ಕುರುಚಲು ತಲೆಗೂದಲ ಪುಟಾಣಿ ತಮ್ಮ..?! ಬೇಲಿ ತುದಿಗೆಲ್ಲಾ ರಾತ್ರಿ ಯಾರೋ ಅಂಟಿಸಿದ್ದ ಮೊಗ್ಗುಗಳ ಕಿತ್ತು, ಈಗ ಕನಸುಗಳ ಹೆಣೆಯುತ್ತಾ ಒಂದೊಂದೇ ಮೊಗ್ಗುಗಳ ಪೋಣಿಸುವ ತಂಗಿಯೋ ಇಲ್ಲಾ ಹೆಸರಿಸದ ನೆಂಟರೋ!.. ಇನ್ನು , ಟೀ ಅಂಗಡಿಗಳಲ್ಲಿ ಅಕ್ಕಪಕ್ಕದ ದೇಹಗಳಿಗೆ ಚಹಾ ವಿತರಿಸುವ ಆತನೊಬ್ಬನಿದ್ದಾನೆ ಅಲ್ವಾ! ಒಂದು ಕೈಯಲ್ಲಿ ೪ ಅಥವಾ ೫ ಬಿಸಿ ಚಹಾ ಲೋಟಗಳ ಹಿಡಿದು ರಸ್ತೆಗಳ ಪಟಪಟನೆ ದಾಟುತ್ತ ಯಾವ್ಯಾವಾಗಲೋ ಒಬ್ಬೊಬ್ಬನೇ ನಗುವ ಆತನ ಹೆಸರು ಕೇಳಿದ ನೆನಪೇ ಇಲ್ಲ ನಂಗೆ.. ಕೇವಲ ಚಹಾ ಖಾಲಿಯಾದ ಆ ಲೋಟ ಮಾತ್ರವೇ ಉಳಿದುದು.. ಅಲ್ಲಿ ಅವನೂ ಮತ್ತು ಅಕ್ಕಪಕ್ಕದಲ್ಲಿದ್ದವರಲ್ಲಿ ಇದ್ದ ನಾನೂ ರಸ್ತೆಯ ವಿರುದ್ಧ ತುದಿಗಳಿಗೆ ಮುಖಮಾಡುತ್ತೇವೆ.. ಚಹಾದ ಬಿಸಿ ನನ್ನ ಎದೆಗೂಡುಗಳ ಬೆಚ್ಚಗಾಗಿಸುತ್ತದೆ.. ಅವನ ನಿಟ್ಟುಸಿರ ಬಿಸಿಗೆ ಚಹಾದ ಬೀಜಗಳು ಮಾತ್ರವೇ ಬಲ್ಲವೇನೋ ಇಲ್ಲಾ ಲೋಟ ತೊಳೆವಾಗ ಚೂರೇ ಚೂರು ಉಳಿದ ಎಂಜಲು ಚಹಾದೊಂದಿಗೆ ಅರಬ್ಬೀ ಸಮುದ್ರ ಸೇರುತ್ತವೇನೋ !!
~`ಶ್ರೀ'
ತಲಗೇರಿ
ತಲಗೇರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ