ಶಹರದ ಹೊಕ್ಕುಳೊಳಗೆ-೨
... ಕದಡಿದ ನಗೆಯ ಬಿಂಬಗಳ ಹುಡುಕಾಟ...
... ಕದಡಿದ ನಗೆಯ ಬಿಂಬಗಳ ಹುಡುಕಾಟ...
ಬೆಳಿಗ್ಗೆ ಮಧ್ಯಾಹ್ನ ಅಥವಾ ಸಂಜೆಗಳ ವ್ಯತ್ಯಾಸವಿಲ್ಲದೇ ತಳ್ಳುಗಾಡಿಯ ಮೇಲೊಂದಿಷ್ಟು ಆಗಷ್ಟೇ ನೀರು ಚಿಮುಕಿಸಿದ ಹಸಿಸೊಪ್ಪು , ತರಕಾರಿಗಳ ಮಳಿಗೆ ಸಿದ್ಧಪಡಿಸಿ, ಯಾವುದೋ ಹೊಚ್ಚ ಹೊಸ ರಾಗದಲ್ಲಿ ಅರ್ಥವೂ ಆಗದಂತೆ ಅರಚುವ ಆತನೊಬ್ಬನು ಶಹರದ ಬೀದಿಗಳಲ್ಲಿ ಓಡಾಡುತ್ತಾನೆ.. ಅರೆ ಮುರಿದ ತಕ್ಕಡಿಯಲ್ಲಿ ಅರ್ಧರ್ಧ ಕೇಜಿಯ ವ್ಯಾಪಾರ ನಡೆಯುತ್ತದೆ ಚೌಕಾಸಿಯ ಸಮಕ್ಷಮದಲ್ಲಿ... ಇನ್ನೊಂದಷ್ಟು ಕಡೆ ತರಕಾರಿ ಹಣ್ಣುಗಳು ಬೈಯುತ್ತಲೇ ಸ್ನಾನಮಾಡಿ ಪಾರದರ್ಶಕ ವಸ್ತ್ರ ತೊಟ್ಟು ವ್ಯಾಪಾರಕ್ಕಿಳಿಯುತ್ತವೆ ! ಮೊಣಕಾಲು ಅಥವಾ ಅದಕ್ಕಿಂತ ಇನ್ನೂ ಒಂಚೂರು ಉದ್ದದ ಬಟ್ಟೆಯ ಹೆಣ್ಣು ಗಂಡುಗಳು ತಾವೇ ತಳ್ಳುಗಾಡಿಗಳಲ್ಲಿ ತುಂಬಿಕೊಂಡು ತಂಪುಕೋಣೆಗಳಲ್ಲಿ ವಾಯುವಿಹಾರದ ನೆಪ ಹೇಳುತ್ತಾ ಅಲೆಯುತ್ತಾರೆ.. ಸೂರ್ಯನ ಬೆಳಕಿನಲ್ಲಿ ತಿರುಗುವ ವಸ್ತುಗಳಿಗಿಂತ, ಮಂದ ಹಳದಿ ಬೆಳಕಿನ ಇಲ್ಲಾ ಗಾಜಿನ ಉಪಸ್ಥಿತಿ ಇದ್ದಲ್ಲಿ ಬೆಲೆ ಜಾಸ್ತಿ!..ಇನ್ನು ಅವನೊಬ್ಬನಿದ್ದಾನೆ ಹಳದಿ ಮತ್ತು ಹಸಿರು ಅಥವಾ ಕಪ್ಪು ಮೈಯ ರಥದ ಸಾರಥಿ.. ಗಲ್ಲಿಗಲ್ಲಿಗಳಲ್ಲಿ ಮೂರು ಚಕ್ರದ ಗಾಡಿ ಹಿಡಿದು ನುಗ್ಗುತ್ತಾನೆ.. ಅವನಿಗೆ ತಾನಾಗಿ ಮಾತಿಗಿಳಿವ ಹಂಬಲವಿಲ್ಲ.. ಆದರೆ ನಾವೇ ಅವನ ಮಾತನಾಡಿಸಿದರೆ, ಅವನ ಕತೆಗಳಿಗೆ ಬರವಿಲ್ಲ.. ಬಹುಶಃ ಅವನಿಗೂ ನಿತ್ಯ ರಸ್ತೆಯ ಜೊತೆ ಸವೆಸುವ ಸಮಯದ ಜಿಡ್ಡು ಹಿಡಿದಿರಬೇಕು.. ಸಿಕ್ಕಸಿಕ್ಕಲ್ಲಿ ತಾತ್ಸಾರದ ಜಿಗುಪ್ಸೆಯ ಒಂಟಿತನದ ಹಾರನ್ ಒತ್ತುತ್ತಾನೆ.. ಆದರೆ ಅವನೂ ನಗುತ್ತಾನೆ; ನಮ್ಮ ಒಂದು ಸಣ್ಣ ನಗೆಗೆ..!
ಈ ನಗರದ ಬೀದಿಗಳಲ್ಲಿ ಅದೆಷ್ಟೋ ಜನ ಓಡಾಡುತ್ತಾರೆ. ದಪ್ಪ ಸಪೂರ ಉದ್ದ ಗಿಡ್ಡ ಮತ್ತು ಹಲವು ಚರ್ಮದವರು.. ಯಾರು ಯಾರಿಗೂ ಪರಿಚಿತರಲ್ಲ ; ಆದರೂ ಸಂಬಂಧಿಗಳೇ ಅನ್ನೋದು ಈ ನಗರಕ್ಕೆ ಮಾತ್ರವೇ ಗೊತ್ತು.. ನಂದಿನಿ ಹಾಲಿನ ಬಸಪ್ಪ , ಪೇಪರ್ ತರುವ ರಮೇಶ, ಕುಡಿಯುವ ನೀರಿನ ಕ್ಯಾನಿನ ನಾಗೇಶ, ಮನೆಗೆಲಸದ ವೆಂಕ್ಟಮ್ಮ ಹೀಗೇ ಹೀಗೇ.. ಎಲ್ಲರೂ ಒಂದೇ ಮನೆಗೆ ಬೇರೆ ಬೇರೆ ಸಮಯಕ್ಕೆ ಬರುತ್ತಾರೆ, ತಂತಮ್ಮ ಕೆಲಸ ಮುಗಿಸಿ ಹೊರಡುತ್ತಾರೆ.. ಇನ್ನು 20 ರೂಪಾಯಿಗೆ 3 ಅಥವಾ 4 ತಟ್ಟೆ ಇಡ್ಲಿ ಕೊಡುವ ಗೂಡು ಹೋಟೆಲ್ಲಿನ ಅಂಕಲ್,
ದಿನಸಿ ಸಾಮಾನಿನ ಅಂಗಡಿಯ ಶೆಟ್ರು , ಚಪ್ಪಲಿ ಅಂಗಡಿಯ ರಹೀಂ ಸಾಬ್, ದರ್ಜಿ ಗಜಾನನ, ಬೇಕರಿಯ ಸತೀಶಣ್ಣ ಎಲ್ಲರೂ ಒಂದೇ ನಗರದ ಬೇರೆ ಬೇರೆ ಬೀದಿಯ ಪಾಲುದಾರರು..
ದಿನಸಿ ಸಾಮಾನಿನ ಅಂಗಡಿಯ ಶೆಟ್ರು , ಚಪ್ಪಲಿ ಅಂಗಡಿಯ ರಹೀಂ ಸಾಬ್, ದರ್ಜಿ ಗಜಾನನ, ಬೇಕರಿಯ ಸತೀಶಣ್ಣ ಎಲ್ಲರೂ ಒಂದೇ ನಗರದ ಬೇರೆ ಬೇರೆ ಬೀದಿಯ ಪಾಲುದಾರರು..
ಬಹುಶಃ ನಮಗೇ ತಿಳಿಯದೆಯೇ, ಸಾವಿರಾರು ಗ್ರಾಹಕರಲ್ಲಿ ನಾವೊಬ್ಬರಾಗಿದ್ದರೂ, ಈ ಎಲ್ಲ ವ್ಯಾಪಾರಿಗಳ ತಲೆಯಲ್ಲಿ ನಮ್ಮ ಹೆಸರು ಉಳಿದಿರುತ್ತವೆ.. ಯಾರೂ ಗೊಡವೆಗೇ ಹೋಗದ ಆತ್ಮೀಯತೆಯೊಂದು ಸೇತುವಾಗಿರುತ್ತದೆ.. ಕೆಲವಷ್ಟು ಪರಿಚಯಗಳು ಹಾಗೆಯೇ, ಆಕಾಶದಲ್ಲಿ ತಾನಾಗೇ ಪ್ರತ್ಯಕ್ಷವಾಗುವ ಗಾಳಿಪಟದ ಹಾಗೆ.. ಯಾರು ಇದರ ರೂವಾರಿ, ಯಾಕಾಗಿ ಅದರ ಉಸ್ತುವಾರಿ ಅನ್ನುವುದರ ಕಿಂಚಿತ್ತೂ ಯೋಚನೆಯಿಲ್ಲದೆ ಗಾಳಿ ಇರುವ ತನಕ ಗಾಳಿಪಟ ಹಾರುತ್ತಿರುತ್ತದೆ.. ಯಾವುದೋ ಒಂದು ಕ್ಷಣದಲ್ಲಿ ಕಣ್ಮರೆಯಾಗುತ್ತದೆ ; ಆದರೂ ಮನಸ್ಸಲ್ಲೊಂದು ಪುಟ್ಟ ಜಾಗವನ್ನ ತನ್ನ ಹೆಸರಿಗೆ ಬರೆಸಿಕೊಳ್ಳುವ ಜಾಣ್ಮೆಯೇ ವಿಸ್ಮಯ.. ಇಲ್ಲಿ ನಗರದ ಯಾವ ಸಂಬಂಧಗಳಿಗೂ ಹೆಸರಿಲ್ಲ ; ಅವುಗಳ ಅವಧಿ ಮನೆ ಬದಲಾಗುವ ತನಕ ಅಥವಾ ಮನಸ್ಸು..!
ಇನ್ನು ಪಾರ್ಕಿನ ಗೆಳೆಯರ ಬಗ್ಗೆ ಹೇಳದಿದ್ದರೆ ಹೇಗೆ, ಅಲ್ವಾ? ಉದ್ಯಾನವನದಲ್ಲಿ ಕೆಲವೊಮ್ಮೆ ಸಮಾನ ಮನಃಸ್ಥಿತಿಯ ದೇಹಗಳು ಭೇಟಿಯಾಗುತ್ತವೆ.. ಸೊಕ್ಕಿನಿಂದ ಹಿಡಿದು ಸುಕ್ಕುಗಟ್ಟಿದವರಿಗೂ ಉದ್ಯಾನವನ ಒಂಥರಾ ಸಮಾಧಾನದ ಸ್ಥಳ.. ಎತ್ತರೆತ್ತರದ ಕಾಂಕ್ರೀಟ್ ಕಟ್ಟಡದ ಮಧ್ಯೆ ಮತ್ತೆ ಮತ್ತೆ ಊರಿನ ಒಂದು ಭಾಗವನ್ನ ಮರುಕಳಿಸುವ ವ್ಯವಸ್ಥಿತ ಹಸಿರು ಜಾಗಕ್ಕೆ ಒಂದೈದತ್ತು ನಿಮಿಷದಿಂದ ಹಿಡಿದು ಒಂದೂವರೆ ಎರಡು ತಾಸುಗಳ ತನಕವೂ ಇದ್ದು ಆರೋಗ್ಯ ಪಡೆದುಕೊಳ್ಳುವ ಬಳಗವಿದೆ.. ಸುದ್ದಿ ಚಾವಡಿಯೆಂದೇ ಹೇಳಬಹುದೇನೋ ಕೆಲವೊಮ್ಮೆ; ಹಳೆ ತಲೆಮಾರುಗಳು ತಮ್ಮ ಯೌವನದ ದಿನದಿಂದ ಶುರುಮಾಡಿ ಇಂದಿನ ಯುವಪೀಳಿಗೆಯ ಕುರಿತು ನಿಟ್ಟುಸಿರು ಬಿಟ್ಟಾಗ ಒಂದು ಸಣ್ಣ ವಿರಾಮ.. ಹೊಸತಲೆಮಾರಿಗೆ ಪಾರ್ಕುಗಳ ಉಪಯೋಗ ಪಿಸುಮಾತುಗಳ ವಿಲೇವಾರಿ ಮತ್ತು ಇನ್ನೊಂದಿಷ್ಟು ಸರಕುಗಳ ಆಮದಿಗೆ ಮಾತ್ರವೇ! ಇನ್ನು ಕೆಲವರಿಗೆ ಲೇಖನಿಯ ತುದಿಗೆ ಅಕ್ಷರಗಳ ಇಳಿಸಲು ಸ್ಫೂರ್ತಿ ಕೊಡುವ ಜಾಗ.. ಇಲ್ಲಿ ನಾಳೆಯ ನೀರಸ ಯೋಚನೆಗಳಿವೆ, ಪ್ರಸ್ತುತ ವಿದ್ಯಮಾನದ ಚಿಂತನೆಗಳಿವೆ, ನಿನ್ನೆಯ ಊಹಾಪೋಹಗಳೂ ಇವೆ.. ಇಲ್ಲಿನ ಬೆಂಚುಗಳು ಬಹುಶಃ ಎಲ್ಲಕ್ಕೂ ಸಾಕ್ಷಿಯಾಗುತ್ತವೆ; ಆದರೂ ಕರಗುವುದಿಲ್ಲ..
~`ಶ್ರೀ'
ತಲಗೇರಿ
ತಲಗೇರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ