ಶನಿವಾರ, ಜನವರಿ 7, 2017

"ಗುಬ್ಬಚ್ಚಿಗಳಿಗೆ ಬಿಡಾರ ಇರಬೇಕಿತ್ತು"...

            

    ಈ ನೆನಪು ಅನ್ನೋದು ಒಂಥರಾ ಪಾತರಗಿತ್ತಿ ಇದ್ದಂತೆ.. ಯಾವಾಗ್ ಬರತ್ತೆ, ಯಾವಾಗ್ ಹೋಗತ್ತೆ ಅನ್ನೋದೇ ವಿಸ್ಮಯ.. ಒಮ್ಮೊಮ್ಮೆ ಜಗತ್ತಿನೆಲ್ಲ ಬಣ್ಣಗಳ ಮೈಗಂಟಿಸಿಕೊಂಡು ಬಂದು ಸಾವಿರಾರು ಹೂಗಳ ಕತೆ ಹೇಳಿದರೆ, ಇನ್ನು ಕೆಲವೊಮ್ಮೆ, ರೆಕ್ಕೆ ಹರಿದುಕೊಂಡು, ಕುಂಟುತ್ತಾ, ತೆವಳುತ್ತಾ ಬಂದು ವಾಸ್ತವಕ್ಕೆ ಇನ್ನೊಂದಿಷ್ಟು ಮುಖಗಳನ್ನ ಕೊಡುತ್ತದೆ.. ಬಹುಶಃ ನಿಮಗೆ ಗೊತ್ತಿರಲಿಕ್ಕಿಲ್ಲ; ಈ ಅವಳೆನ್ನೋ ಅವಳ ನೆನಪುಗಳೂ ಹಾಗೇ !.. ಮರೀಚಿಕೆ ಅನ್ನೋದಕ್ಕೆ ಪಕ್ಕಾ ಉದಾಹರಣೆಯಾಗಿದ್ದವಳು ಅವಳು.. ಸಿಕ್ಕಾಗ ಕಣ್ತುಂಬಿಕೊಂಡ ಅವಳನ್ನು ಎದೆಯೊಳಗೆ ಅಷ್ಟಷ್ಟಾಗಿ ಇಳಿಸಿಕೊಂಬುದೇ ಉತ್ಸವದಂತಿತ್ತು.. ಅವಳೊಂಥರ ಪುಟಾಣಿ ಕೃಷ್ಣನ ಥರ; ಕಳ್ಳ ಹೆಜ್ಜೆ ಹಾಕ್ತಾ ಕಿಲಕಿಲ ಅನ್ನೋಳು.. ಸಮೃದ್ಧವಾಗಿ ಬೀಳೋ ಮೊದಲ ಮಳೆಗೆ ಹಿತವಾಗಿ ಹೃದಯವನ್ನ ತಲ್ಲಣಿಸೋ ಒಂಥರಾ ಮಣ್ಣಿನ ಪರಿಮಳ ಹುಟ್ಟಿಕೊಳ್ಳುತ್ತಲ್ವಾ, ಹಾಗೆ; ಅವಳ ಗೆಜ್ಜೆ ಸದ್ದು ಅಂದ್ರೆ.. ! ಮತ್ತೊಂದಿಷ್ಟು ಕಾಲ ಕೊನೇ ಕೊನೇ ಹನಿಗಳನ್ನ ಗುಟುಕುಗಳಂತೆ ಮೆಲುಕು ಹಾಕೋದು ನನ್ನ ಜಾಯಮಾನ..

   ಈಗಲೂ ಅಷ್ಟೇ.. ಅವಳಿಲ್ಲದ ಸಂಜೆಗಳಲ್ಲಿ ಹಲುಬುತ್ತೇನೆ.. ಆ ಎತ್ತರದ ಗುಡ್ಡವಿದೆಯಲ್ಲಾ, ಅದರ ತುತ್ತತುದಿಗೆ ಒಂದು ಬಿಡಾರ ಮಾಡಬೇಕಿತ್ತು.. ಎರಡು ಗುಬ್ಬಚ್ಚಿಗಳಿಗೆ ಪುಟ್ಟ ಗೂಡೊಂದು ಇರಬೇಕಿತ್ತು.. ಅವಳುಸಿರ ಏರಿಳಿತದ ಜೋಗುಳಕ್ಕೆ ನೀಲಿ ಹಾಸಿಗೆಯಲ್ಲಿ ಮುದುರಿದ್ದ ಚಂದ್ರಮ  ರಾತ್ರಿಪೂರ್ತಿ ತಲೆದೂಗುತ್ತಿದ್ದ. ನಾನು ಅವನನ್ನು ತೋರಿಸೆಂದು ಹಟ ಮಾಡೋ ಮಗುವಾಗುತ್ತಿದ್ದೆ!.. ಅವಳು ಮರೀಚಿಕೆಯಾಗುತ್ತಿರಲಿಲ್ಲ.. ನಾಚಿಕೆ ಹೊತ್ತ ಬಿಂಕವಾಗಿ ಶೀತಲ ರಾತ್ರಿಗಳಲ್ಲಿ ಸುದ್ದಿ ಹೇಳಬರುವ ಬೆವರ ಹನಿಗಳಿಗೆ ನಾ ಕಟ್ಟೋ ಸುಂಕಕ್ಕೆ ಸಾಕ್ಷಿಯಾಗುತ್ತಿದ್ದಳು... ! ನಿಜ, ಗುಬ್ಬಚ್ಚಿಗಳಿಗೊಂದು ಬಿಡಾರ ಇರಬೇಕಿತ್ತು...

~‘ಶ್ರೀ’
  ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ