ಸೋಮವಾರ, ಮಾರ್ಚ್ 11, 2024

'ಮೈಸೂರ್ ಪೋಸ್ಟ್ : ಅರಮನೆ ನಗರಿಯ ಉಳಿದ ಚಿತ್ರಗಳು'

 

'ಮೈಸೂರ್ ಪೋಸ್ಟ್ : ಅರಮನೆ ನಗರಿಯ ಉಳಿದ ಚಿತ್ರಗಳು'


ಕೆಲವು ಸಂಗತಿಗಳು ಬಹಳ ವಿಭಿನ್ನವೂ, ವಿಶೇಷವೂ ಆಗಿರುತ್ತವೆ. ಅದರಲ್ಲಿ ಲೇಖಕರು ಹಾಗೂ ಓದುಗರ ನಡುವಿನ ಸಂಬಂಧ ಕೂಡಾ ಹೌದು. ಲೇಖಕರು ತಮ್ಮ ಅದ್ಯಾವುದೋ ಒಂದಷ್ಟು ಗಳಿಗೆಗಳಲ್ಲಿ ಎದುರಾದ ಭಾವ ತೀವ್ರತೆಯನ್ನು ಪದಗಳಲ್ಲಿ ಇಳಿಸಿ, ಅದರ ಭಾರವನ್ನು, ಅದರ ಆಳವನ್ನು, ಅದರ ಹಗುರವನ್ನು, ಅದರ ವೈಶಾಲ್ಯವನ್ನು, ಅದರ ಹಿಂಜರಿಕೆಗಳನ್ನು ಓದುಗರಿಗೆ ದಾಟಿಸಿಬಿಡುತ್ತಾರೆ. ಓದುಗರು ಇನ್ನ್ಯಾವುದೋ ಗಳಿಗೆಗಳಲ್ಲಿ, ಅವರ ಬದುಕಿನ ಅದೆಂಥದ್ದೋ ಕ್ಷಣಗಳಲ್ಲಿ ಇವುಗಳನ್ನು ಓದುವುದಕ್ಕೆ ಶುರುಮಾಡುತ್ತಾರೆ. ಪರಿಸ್ಥಿತಿ ಹಾಗೂ ಮನಸ್ಥಿತಿಗಳ ಆಧಾರದ ಮೇಲೆ ಆ ಬರಹಗಳು ಇಷ್ಟವಾಗಬಹುದು, ಅಥವಾ ಇಷ್ಟವಾಗದೇ ಇರಬಹುದು ಕೂಡಾ. ಆದರೆ, ಇಂಥದ್ದೊಂದು ಪ್ರಕ್ರಿಯೆ ಇದೆಯಲ್ಲಾ, ಇದು ಯಾವತ್ತಿಗೂ ಕೊನೆಯಾಗದಿರಲಿ ಅನ್ನುವುದು ಬಹುಶಃ ಎಲ್ಲ‌ ಕಾಲಕ್ಕೂ ಸಲ್ಲಬಹುದಾದ ಪ್ರಾರ್ಥನೆ ಅನ್ನಿಸುತ್ತದೆ. ನಾನು ಓದುವ ಪುಸ್ತಕಗಳ ಲೇಖಕರಿಂದ ಯಾವತ್ತೂ ದೂರ ಇರುವುದಕ್ಕೆ ಬಯಸುವವನು, ಅದು ಎಷ್ಟು ಸರಿ ಅಥವಾ ತಪ್ಪು, ಅದರಿಂದ ನನಗಾಗುವ ನಷ್ಟಗಳೇನು ಅನ್ನುವುದು ಬೇರೆ ಮಾತು. ಅಜ್ಞಾತ ಓದುಗರ ಕುರಿತಾಗಿ ನನಗಿರುವ ಸೆಳೆತವೂ ಇದಕ್ಕೆ ಕಾರಣವಿರಬಹುದು. ಆದರೂ, ಕೆಲವೊಮ್ಮೆ ಓದುಗರು ಮತ್ತು ಲೇಖಕರು ಒಂದೇ ಹಾದಿಯಲ್ಲಿ ಮತ್ತೆ ಮತ್ತೆ ಭೇಟಿಯಾಗುತ್ತಲೇ ಇರುತ್ತಾರೆ ಅಪರಿಚಿತರಾಗಿಯೂ! ಅಂಥ ಒಂದು ಸಂದರ್ಭ ನನಗೆ ಅಬ್ದುಲ್ ರಶೀದರ ಜೊತೆ ನೆನಪಿದೆ. ಕನ್ನಡದ ಹೆಸರಾಂತ ಲೇಖಕರೊಬ್ಬರು ಇಹಲೋಕ ತ್ಯಜಿಸಿದ ದಿನ ಅವರ ಕುರಿತಾಗಿ ಲೇಖನ ಬರೆದುಕೊಡುವಂತೆ ಒಂದು ಪತ್ರಿಕೆಯಿಂದ ಕರೆಬಂದಿತ್ತು. ಅಬ್ದುಲ್ ರಶೀದರು ನನ್ನನ್ನು ಕೇಳುವಂತೆ ಹೇಳಿದರೆಂದು ಕರೆ‌ ಮಾಡಿದವರು ಹೇಳಿದ್ದರು. ಆ ಕರೆ ಇನ್ನೊಬ್ಬ ಹಿರಿಯ ಲೇಖಕರಿಗೆ ಹೋಗುವ ಬದಲಾಗಿ ನನಗೆ ಬಂದಿತ್ತೆಂದು ಇವತ್ತಿಗೂ ನನ್ನ ನಂಬಿಕೆ. ಯಾಕೆಂದರೆ, ನಾನು ಅಬ್ದುಲ್ ರಶೀದರೊಂದಿಗೆ ಯಾವತ್ತೂ ಮಾತನಾಡಿದ್ದಿಲ್ಲ. ಅವರಿಗೆ ನನ್ನ ಪರಿಚಯವೂ ಇರಲಿಕ್ಕಿಲ್ಲ. ಆದರೆ, ಇಂಥ ಗಳಿಗೆಗಳು ಬಹಳ ವಿಶಿಷ್ಟವಾದವು ಅಂತ ನನಗನಿಸುತ್ತದೆ. ಅಬ್ದುಲ್ ರಶೀದರ ಬಹಳಷ್ಟು ಪುಸ್ತಕಗಳನ್ನು ನಾನು ಓದಿಲ್ಲ. ಕೆಲವೊಂದನ್ನು ಓದಿದ್ದೇನೆ, ಇನ್ನು ಕೆಲವನ್ನು ಓದುತ್ತಲೇ ಇದ್ದೇನೆ, ಅರ್ಧ ಓದಿದ್ದೇನೆ, ಕೆಲವಷ್ಟನ್ನು ಓದುವುದಕ್ಕೆ ನಾನಿನ್ನೂ ತಯಾರಾಗಿಲ್ಲ ಅನ್ನುವ ಕಾರಣಕ್ಕೆ ಮುಂದೂಡಿದ್ದೇನೆ. ಅದರಲ್ಲಿ ಕೆಲವು ಪುಸ್ತಕಗಳು 'ಲಾರ್ಡ್ ಕಾರ್ನ್ ವಾಲೀಸ್ ಮತ್ತು ಕ್ವೀನ್ ಎಲಿಜಬೆತ್' ಅನ್ನುವ ಕಥಾ ಸಂಕಲನ,  'ಹೂವಿನ ಕೊಲ್ಲಿ' ಅನ್ನುವ ಅವರ ಚೊಚ್ಚಲ ಕಾದಂಬರಿ, ಅಂಕಣ ಬರಹಗಳ ಸಂಗ್ರಹವಾದ 'ಕಾಲು ಚಕ್ರ' ಹಾಗೂ ಈಗ ಮಾತನಾಡುತ್ತಿರುವ ಪುಸ್ತಕ 'ಮೈಸೂರ್ ಪೋಸ್ಟ್' ಅನ್ನುವ ಅಂಕಣ ಬರಹಗಳ ಸಂಗ್ರಹ. ಹೀಗೆ ಅವರ ಹತ್ತಿರ ಇಷ್ಟು ಓದಲಿಲ್ಲ ಇನ್ನೂ ಅಂತಂದರೆ, ಒಳ್ಳೇ‌ ಕೆಲಸ ಮಾಡಿದೀಯಾ, ಓದಬೇಡ! ಅಂತ ಅಂದರೂ ಅನ್ನಬಹುದು ಎನ್ನುವ ಎಲ್ಲ ನಂಬಿಕೆಗಳೂ ನನಗಿವೆ! 


ಅಬ್ದುಲ್ ರಶೀದರ ಕುರಿತಾಗಿ ಚೆಂದದ ಸಂಗತಿಗಳನ್ನು ಕೇಳಿದ್ದು ಬಹಳ, ಹಾಗೆಯೇ ಅವರ ಮಾತುಗಳನ್ನೂ ಕೇಳಿದ್ದೇನೆ ಯುಟ್ಯೂಬ್ ಅಲ್ಲಿ ಬಹಳ ಸಲ. ಅವರದೇ ಒಂದು ಪುಸ್ತಕದ ಹೆಸರು ‌ಹೇಳುವಂತೆ ಕಾಲಿಗೆ ಚಕ್ರ ಕಟ್ಟಿಕೊಂಡೇ ಇರುತ್ತಾರೇನೋ ಅನ್ನಿಸಿದರೆ ಅದು ಅತಿಶಯೋಕ್ತಿ ಅಲ್ಲ ಅಂತಲೂ ಅನ್ನಿಸುತ್ತದೆ. ಅದು ಅವರ ಬರಹಗಳಲ್ಲಿಯೂ, ಅದರ ವೈವಿಧ್ಯತೆಗಳಲ್ಲಿಯೂ ಕಾಣಸಿಗುತ್ತದೆ. ಇಂಥ ತಿರುಗಾಟ ಬಹುಶಃ ಕೆಲವರಿಂದ ಮಾತ್ರ ಸಾಧ್ಯ. ಅಬ್ದುಲ್ ರಶೀದರಂಥವರು, ಡಾ. ಬ್ರೋ (ಗಗನ್ ಶ್ರೀನಿವಾಸ್ ) ಥರದಂಥವರು ಇಂಥ ಬದುಕನ್ನು ಹಾಗೂ ಅಲ್ಲಿನ ಕತೆಗಳನ್ನು ಹೇಳಬಲ್ಲರು. ಮಲೆಯಾಳಂನ ಒಂದು ಚಿತ್ರ 'ಚಾರ್ಲಿ' ಇಂಥದ್ದೇ ಕಾರಣಗಳಿಗಾಗಿ ಎಷ್ಟು ಸಲ ನೋಡಿದರೂ ಮತ್ತೆ ಮತ್ತೆ ತನ್ನತ್ತ ಕರೆಸಿಕೊಳ್ಳುವ ಚಿತ್ರ. ಸದಾ ಓಡಾಟ, ಒಡನಾಟ, ಜನರಲ್ಲಿ ಬೆರೆಯುವಿಕೆ ಇರುವ ಅಬ್ದುಲ್ ರಶೀದರ ಬರಹಗಳಲ್ಲಿ ಕೂಡಾ ಈ ಎಲ್ಲಾ ಭೇಟಿಗಳ, ಕ್ಷಣಗಳ, ವಿಷಯಗಳ ನೆರಳಿದೆ. ಹೀಗೆ ಅವರು ಭೇಟಿಯಾದ ಅಥವಾ ಯಾವುದೋ ಒಂದು ಹೆಸರಿಲ್ಲದ ಭೇಟಿಗಳಲ್ಲಿ ಸಿಕ್ಕವರ ಕಥನಗಳ ಸಂಗ್ರಹವೇ 'ಮೈಸೂರ್ ಪೋಸ್ಟ್'. ಸ್ವತಃ ಛಾಯಾಗ್ರಾಹಕರೂ ಆಗಿರುವ ಅಬ್ದುಲ್ ರಶೀದರೇ ತೆಗೆದ ಛಾಯಾಚಿತ್ರಗಳೂ ಇಲ್ಲಿವೆ. ಈ ಪುಸ್ತಕದ ಉಪಶೀರ್ಷಿಕೆ 'ಅರಮನೆ ನಗರಿಯ ಉಳಿದ ಚಿತ್ರಗಳು'. ಈ ಪುಸ್ತಕದಲ್ಲಿರುವ ಕಥನಗಳು ಸಾಮಾನ್ಯ ಜನರ, ಯಾರ ಗಮನಕ್ಕೂ ಬಾರದೇ ಬದುಕುವವರ, ಅಥವಾ ಅಸಾಮಾನ್ಯರಾಗಬೇಕಾಗಿಯೂ ಸಾಮಾನ್ಯರಂತಾದವರದ್ದೇ ಆಗಿವೆ. ಬೇರೆ ಬೇರೆ ಬದುಕಿನ ತುಣುಕುಗಳನ್ನು ಇಲ್ಲಿ ಅಬ್ದುಲ್ ರಶೀದರು ತೆರೆದಿಟ್ಟಿದ್ದಾರೆ. ಈ ಎಲ್ಲಾ ತುಣುಕುಗಳನ್ನು ಒಟ್ಟಗೂಡಿಸಿಕೊಂಡು ಬದುಕಿನ ಸಮಗ್ರ ಚಿತ್ರಣವನ್ನು ಕಟ್ಟಿಕೊಳ್ಳಬೇಕೋ ಅಥವಾ ಎಲ್ಲವನ್ನೂ ಬಿಡಿಬಿಡಿಯಾಗಿಯೇ ಇಟ್ಟು, ಸ್ವತಂತ್ರವಾಗಿಯೇ ನೋಡಿ, ಸುಮ್ಮನೆ ಇದ್ದುಬಿಡಬೇಕಾ ಅನ್ನುವುದು ಓದುಗರಿಗೆ ಬಿಟ್ಟಿದ್ದು ಅನಿಸುತ್ತದೆ. 


ಲೇಖಕರ ಮಾತಿನಲ್ಲಿ ಲೇಖಕರು ಕೆಲವು ಬಹಳ ಅಗತ್ಯವಾದ ಹಾಗೂ ಹೇಳಲೇಬೇಕಾದ ಸಂಗತಿಗಳನ್ನು ಹೇಳಿದ್ದಾರೆ. "ಕಥೆ ಬರೆಯಲು ನೆನಪುಗಳು ಬೇಕಂತೆ, ಕವಿತೆಗಳಿಗೆ ಪ್ರತಿಮೆಗಳು ಬೇಕಂತೆ" ಇದು ಲೇಖಕರ ಒಂದು ಮಾತು. ನೆನಪುಗಳ ಬಣ್ಣ ವೈವಿಧ್ಯಮಯವಾದಷ್ಟೂ ಕತೆಯ ಸೊಗಡು ಹೆಚ್ಚುತ್ತದೆ ಅನ್ನುವುದು ಬಹುಶಃ ನಮ್ಮೆಲ್ಲಾ ಲೇಖಕರಿಗೆ, ಕತೆಗಾರರಿಗೆ, ಒಟ್ಟಾರೆ ಮನುಷ್ಯ ಕುಲಕ್ಕೆ ಅರಿವಾಗಬೇಕಾದ ವಿಚಾರ. ಹಾಗೆ ನೆನಪುಗಳ ಹರವು ದೊಡ್ಡದಾಗಬೇಕೆಂದರೆ ಬಹುಶಃ ಅಂಥ ಬದುಕನ್ನು ಬದುಕಬೇಕು.  ಅಂಥ ಬದುಕಿನ ಒಂದಷ್ಟು ಭೇಟಿಗಳ, ಅದರಲ್ಲಿ ಇದಿರಾದ ವ್ಯಕ್ತಿತ್ವಗಳ, ಸಹಸ್ರ ಸಹಸ್ರ ಕೋಟಿ ಜೀವಾಣುಗಳ ಮಧ್ಯದ ಕೆಲವೇ ಕೆಲವು ಹೋರಾಟಗಳ, ತೊಳಲಾಟಗಳ, ಎಲ್ಲಿಯೂ ಯಾವ ಪತ್ರಿಕೆ,‌ಮಾಧ್ಯಮಗಳಲ್ಲಿಯೂ ದಿನನಿತ್ಯ ತಲೆಬರಹಗಳಾಗದವರ, ನಮಗ್ಯಾರಿಗೂ ಬಹುಶಃ ಸಂಬಂಧವೇ ಇರದ ಚಿತ್ರಣಗಳು ಇಲ್ಲಿವೆ. ಲೇಖಕರು ತಮ್ಮ ಮಾತಿನಲ್ಲಿ ಮುಂದುವರೆದು ಹೇಳುತ್ತಾರೆ "ನಾನು ಬರೆಯಲೋಸುಗ ಇವರೆಲ್ಲಾ ನೆಪದಂತೆ ಆಗಿಬಿಟ್ಟರಲ್ಲಾ ಅಂತ". ಇಂಥದ್ದೊಂದು ಪ್ರಜ್ಞೆ ಹಾಗೂ ಅವಲೋಕನ ನಿಜವಾದ ಬರಹಗಾರರಿಗೂ, ಛಾಯಾಗ್ರಾಹಕರಿಗೂ ಆಗಾಗ ಕಾಣಿಸಿಕೊಳ್ಳಬೇಕು. ನಮಗೆ ಬರಹಕ್ಕೆ ವಸ್ತು ಸಿಗಬಹುದು, ನಮಗೆ ಒಂದು ಅದ್ಭುತವಾದ ಚಿತ್ರವೊಂದು ಆ ಕ್ಷಣಕ್ಕೆ ಸಿಗಬಹುದು. ಆದರೆ, ನಮ್ಮ ವಸ್ತುವಾದ ಅವರಿಗೆ ಸಿಕ್ಕಿದ್ದಾದರೂ ಏನು? ಅನ್ನುವ ಪ್ರಶ್ನೆ ಒಂದು ಸಲ ಹುಟ್ಟಿಕೊಂಡರೆ ಅದು ಬಹಳಷ್ಟು ವರ್ಷಗಳ ಕಾಲ ಕಾಡುತ್ತಲೇ ಇರುತ್ತದೆ. ಜೊತೆಗೆ, ನಮ್ಮ ಬರಹಗಳಲ್ಲಿ, ಛಾಯಾಚಿತ್ರಗಳಲ್ಲಿ ಬರುವ ವ್ಯಕ್ತಿತ್ವಗಳ ಕುರಿತಾಗಿ ನಾವು ಸದಾ ಕಾಲ ಜಾಗೃತರೂ, ಜಾಗರೂಕರೂ ಆಗಿರುವ ಹಾಗೆ ನಮ್ಮನ್ನು ಈ ಪ್ರಶ್ನೆ ಎಚ್ಚರಿಸುತ್ತದೆ. ಎಲ್ಲಕ್ಕಿಂತ ಮೊದಲು ಸಹಜವಾದ ಮನುಷ್ಯರಾಗಬೇಕಲ್ಲವಾ! ಆದರೆ, ಇಂಥ ಕತೆಗಳನ್ನು ಬಹಳ ಗೌರವಪೂರ್ಣವಾಗಿಯೂ, ಯಾವ ಕಲ್ಮಶಗಳಿಲ್ಲದೇ, ಅಭಿಪ್ರಾಯಗಳಿಲ್ಲದೇ, ಅಲಂಕಾರಗಳಿಲ್ಲದೇ ಹೇಗಿದೆಯೋ ಹಾಗೆ ಇಡುವುದೂ ಬರಹಗಾರರ, ಛಾಯಾಗ್ರಾಹಕರ ಜವಾಬ್ದಾರಿ. ಅಬ್ದುಲ್ ರಶೀದರ ಈ ಪುಸ್ತಕ ಓದಿದಾಗ ಅಂಥದ್ದೊಂದು ಜವಾಬ್ದಾರಿಯ ಸೂಕ್ಷ್ಮತೆಯೂ, ಅವರು ಅದನ್ನು ನಿರ್ವಹಿಸಿದ ರೀತಿಯೂ ಬಹಳ ಖುಷಿ ಕೊಡುತ್ತದೆ. 


ಕೆಲವೊಮ್ಮೆ ಇಲ್ಲಿನ ಬರಹಗಳು ಕತೆಯ ಅರ್ಧಕ್ಕೆ ಎದ್ದು ನಡೆದ ಹಾಗೆ ಗೋಚರಿಸುತ್ತವೆ. ಇನ್ನೇನೋ ಗಹನವಾದದ್ದು ಶುರುವಾಗುತ್ತದೆ ಅನ್ನುವಾಗ, ಏನೂ ಇಲ್ಲವೆಂಬಂತೆ ನಿರಾಯಾಸವಾಗಿ ಮುಗಿದುಹೋಗುತ್ತದೆ, ಇಷ್ಟು ಹೊತ್ತು ಹೇಳಿದ್ದು ಏನೂ ಅಲ್ಲ, ಅದು ಇಷ್ಟೇ ಅನ್ನುವಂತೆ ಅಪೂರ್ಣವಾಗಿಬಿಡುತ್ತದೆ. ಮೊದಮೊದಲ ಬರಹಗಳಲ್ಲಿ ಇದು ಚೂರು " ಅರೇ, ಇದೇನಿದು!" ಅಂತ ಅನ್ನಿಸುವ ಹಾಗೆ ಮಾಡಿದರೂ, ಆಮೇಲೆ "ಬಹುಶಃ ಬದುಕು ಕೂಡಾ ಹೀಗೆಯೇ" ಅನ್ನಿಸುವಷ್ಟರ ಮಟ್ಟಿಗೆ ಹೊಂದಿಕೊಂಡೆ. 


ಖುಷಿಯ ವಿಷಯವೆಂದರೆ, ಬಹಳಷ್ಟು ಬರಹಗಾರರು, ಪ್ರಕಾಶಕರು ಇ-ಪುಸ್ತಕಗಳನ್ನು ಮಾಡಲು ಅದ್ಯಾಕೋ ಇನ್ನೂ ಹಿಂಜರಿಯುತ್ತಲೇ ಇರುವ ಸಂದರ್ಭದಲ್ಲಿ ಅಬ್ದುಲ್ ರಶೀದರ ಈ ಎಲ್ಲಾ ಪುಸ್ತಕಗಳು ಇ-ಪುಸ್ತಕಗಳಾಗಿ ಋತುಮಾನ, ಗೂಗಲ್ ಪ್ಲೇ ಬುಕ್ಸ್ ಗಳಲ್ಲಿ ಲಭ್ಯ. 


ಯಾವ ನಿರೀಕ್ಷೆಯೂ ಇರದೇ, ಯಾವ ಪೂರ್ವಾಲೋಚನೆಗಳೂ ಇಲ್ಲದೇ, ಬೇರೆ ಬೇರೆ ಬದುಕುಗಳಲ್ಲಿ ನಿರ್ಭಾವುಕರಾಗಿ ಒಂದೊಮ್ಮೆ ಇಣುಕಿ ಅಲ್ಲಿಂದ ನಮ್ಮ ಬದುಕನ್ನು ಇನ್ನಷ್ಟು ಸರಳೀಕರಿಸಿಕೊಳ್ಳಬಹುದು ಅಥವಾ ಇನ್ನಷ್ಟು ಸಂಭ್ರಮಿಸಬಹುದು ಅಂತಾದಲ್ಲಿ 'ಮೈಸೂರ್ ಪೋಸ್ಟ್' ಅನ್ನು ಒಮ್ಮೆ ತೆರೆದು ನೋಡಿ. 


ಧನ್ಯವಾದಗಳು Abdul Rasheed  ಸರ್ ಹಾಗೂ ಋತುಮಾನದ Kuntady Nithesh  ಅವ್ರೇ ಈ ಎಲ್ಲಾ ಇ-ಪುಸ್ತಕಗಳಿಗಾಗಿ ✨🙏


~`ಶ್ರೀ'

 ‌  ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ