ಸೋಮವಾರ, ಮಾರ್ಚ್ 11, 2024

ಸ್ವಾತಿ‌ ಮುತ್ತಿನ ಮಳೆಯ ಗಂಧ

 

ಸ್ವಾತಿ‌ ಮುತ್ತಿನ ಮಳೆಯ ಗಂಧ


ನಾನು ನನ್ನ ಹೆಸರಲ್ಲ, ನಾನು ನನ್ನ ದೇಹವಲ್ಲ, ನಾನು ನನ್ನ ಆಸ್ತಿ, ಮನೆ, ಸಂಸಾರವಲ್ಲ. ಹಾಗಾದರೆ ನಾನು ಯಾರು ಅನ್ನುವ ಪ್ರಶ್ನೆಗೆ ಈಗಾಗಲೇ ನಮ್ಮ ಪೂರ್ವಜರು ಉತ್ತರವನ್ನು ಕಂಡುಕೊಂಡು ಅದನ್ನು ನಮಗೂ ಬಿಟ್ಟುಹೋಗಿದ್ದಾರೆ. ತೆಗೆದುಕೊಂಡು ಹೋಗುವುದಾದರೂ ಏನನ್ನು, ಬಿಟ್ಟುಹೋಗದೇ! ಆದರೂ, ಸಹಸ್ರ ವರ್ಷಗಳಿಂದಲೂ ಹೇಳಿಕೊಂಡು ಬರುತ್ತಿರುವ 'ನಾನು' ಅನ್ನುವುದರ ಅರಿವು ನಮಗ್ಯಾರಿಗೂ ಇರುವುದಿಲ್ಲ. ಅದು ಮರೆತುಹೋಗುವಂತೆ ಬಹುಶಃ ವರವೋ ಶಾಪವೋ ಏನೋ ಒಂದು ಇರಬೇಕು. ನಶ್ವರದ ಅರಿವು ಮರೆಯಬೇಕು, ನಾವೆಲ್ಲಾ ಮೆರೆಯಬೇಕು, ಕೊನೆಗೊಂದು ದಿನ ಏನಾಯಿತು ಅನ್ನುವುದರ ಅರಿವೂ ನಮಗೆ ಆಗದ ಹಾಗೆ ನಾವು 'ಇನ್ನಿಲ್ಲ'ವಾಗುತ್ತೇವೆ. ಆದರೆ, ಅಲ್ಲಿಯವರೆಗೂ ನಾವು ಹೇಗೆಲ್ಲಾ, ಏನೆಲ್ಲಾ 'ಸಂಪಾದಿಸಬಹುದು' ಅಥವಾ ಏನೇನನ್ನೆಲ್ಲಾ ಅಂಟಿಸಿಕೊಳ್ಳಬಹುದು ಅಂತಂದುಕೊಳ್ಳುತ್ತಾ ನಿರಂತರವಾಗಿ ಪ್ರಯತ್ನಿಸುತ್ತಲೇ ಇರುತ್ತೇವೆ. ಧರ್ಮಾರ್ಥ ಕಾಮಗಳ ಆಚರಣೆಗಳಿಂದಲೇ ಮೋಕ್ಷಕ್ಕೆ ದಾರಿಯಾಗುತ್ತದೆ ಅನ್ನುವುದನ್ನು ಹೇಗೆ ಅರ್ಥೈಸಿಕೊಳ್ಳಬಾರದೋ ಹಾಗೆ ಅದನ್ನು ಅರ್ಥೈಸಿಕೊಂಡು ಶಾಶ್ವತದ ಪರಿಕಲ್ಪನೆಯಲ್ಲಿ ವಿಜೃಂಭಿಸುತ್ತೇವೆ. ಅದೆಷ್ಟೋ ತಲೆಮಾರುಗಳು ಕಳೆದಿವೆ, ಅದೆಷ್ಟೋ ಮನುಷ್ಯ ದೇಹಗಳು ಸುಟ್ಟಿವೆ, ಹೂಳಲ್ಪಟ್ಟಿವೆ, ಇನ್ನು ಕೆಲವಷ್ಟು ಸಂರಕ್ಷಿಸಲ್ಪಟ್ಟಿವೆ. ಆದರೆ, 'ನಾನು' ಅನ್ನಿಸಿಕೊಳ್ಳುತ್ತಿದ್ದ ಜೀವವೊಂದು ಅಲ್ಲಿಲ್ಲವೇ ಇಲ್ಲ. ಆದರೆ, ಒಂದೊಮ್ಮೆ ಸಾವು ಎದುರಿಗೇ ಇದೆ ಅಂತಾದಲ್ಲಿ, ಸಮೀಪಿಸುತ್ತಿರುವ ಆ ಸಾವಿನ ಅರಿವಿದೆ ಅಂತಾದಲ್ಲಿ, ಮನುಷ್ಯರು ಹೇಗೆಲ್ಲಾ ವರ್ತಿಸಬಹುದು, ಅಂಥ ಸಂದರ್ಭಗಳಲ್ಲಿ ಅವರಿಗಿರುವ ಆಲೋಚನೆಗಳೇನು ಅನ್ನುವುದನ್ನು ಹೇಳುತ್ತಾ ಸಾವಿಗೆ ಹೇಗೆ ತಯಾರಾಗಬೇಕು ಅಥವಾ ಹೇಗೆ ತಯಾರಾದರೆ ಚೆಂದ ಅನ್ನುವುದನ್ನು ಹೇಳುವ ಸಿನೆಮಾ ರಾಜ್ ಬಿ ಶೆಟ್ಟಿ ಅವರ 'ಸ್ವಾತಿ ಮುತ್ತಿನ ಮಳೆ ಹನಿಯೇ' 


"ಮೆಲ್ಲಗೆ ಧ್ಯಾನಿಸು" ಹಾಡಿನಲ್ಲಿ ಒಂದು ಸಾಲು ಬರುತ್ತದೆ; 'ಹಗುರಾದೆ ನಾನು ಈಗ ರೆಕ್ಕೆ ಬಲಿತಂತೆ'. ರೆಕ್ಕೆ ಬಲಿತಾಗ ಹಕ್ಕಿಗೆ ಅದರ ದೇಹ ಭಾರವಲ್ಲ, ಅದು ಆರಾಮಾಗಿ ಗಾಳಿಯಲ್ಲಿ ತೇಲುತ್ತಾ ಹಾರುತ್ತದೆ. ಆದರೆ, ಮನುಷ್ಯರ ವಿಷಯದಲ್ಲಿ, ಆಯಸ್ಸು 'ಬಲಿತಾಗ' ದೇಹ ಭಾರವಾಗುತ್ತದೆ, ಕೆಲವೊಮ್ಮೆ ಸಂಸಾರದ ಮನಸ್ಸು ಭಾರವಾಗುತ್ತದೆ. ಆದರೆ ಇನ್ನೇನೋ ಒಂದು ಗೊತ್ತೂ ಆಗದ ಹಾಗೆ ಹಾರಿಹೋಗುತ್ತದೆ. ಅದನ್ನು ಹಲವರು ಪ್ರಾಣಪಕ್ಷಿಯೆಂದೂ, ಆತ್ಮವೆಂದೂ, ಜೀವವೆಂದೂ ಕರೆಯುತ್ತಾರೆ. ಅದೆಷ್ಟು ಹಗುರ; ಕೆಲವೊಮ್ಮೆ ಭೂಮಿಗೂ! ಈ ಸಿನೆಮಾದಲ್ಲಿ ಮೌನಕ್ಕೆ ಹೇಗೆ ಜಾಗವಿದೆಯೋ, ಹಾಗೆಯೇ ಸದ್ದಿಗೂ ವಿಶೇಷ ಸ್ಥಾನವಿದೆ. ನಿತ್ಯದ ಏಕತಾನತೆಯನ್ನು ಹೇಳಲೆಂದೇ ಒಂದು ಸದ್ದಿದೆ ಹಾಗೂ ಆ ಏಕತಾನತೆಯನ್ನು ಮುರಿಯುವುದಕ್ಕೂ ಒಂದು ಸದ್ದಿದೆ. ಸಾಯುವುದಕ್ಕೆ ಕೆಲವೇ ದಿನ ಇರುವವರು ಬಂದು ಸೇರುವ ಜಾಗದಲ್ಲಿ ಕೌನ್ಸಿಲರ್ ಆಗಿ ಕೆಲಸ ಮಾಡುತ್ತಿರುವವರಿಗೆ ಎಲ್ಲರ ನೋವನ್ನು ನಿತ್ಯವೂ ನೋಡಿ ಅಭ್ಯಾಸವಾಗಿರುವಾಗ, ಇನ್ನೊಂದು ರೋಗಿ ಬಂದಾಗಲೂ ಅಂಥದ್ದೇ ಒಂದು ನಿರೀಕ್ಷೆಯಿರುತ್ತದೆ ಅಥವಾ ಅಂಥ ಯಾವ ನಿರೀಕ್ಷೆಯೂ ಇರದೇ, ಅದು ಸಹಜವಾಗಿರುತ್ತದೆ. ಆದರೆ, ಮೊದಲ ಭೇಟಿಯಲ್ಲಿ ಏಕತಾನತೆಯನ್ನು ಮುರಿಯುವ ಒಂದು ಸದ್ದಿದೆ.‌ ನಿರೀಕ್ಷೆಗಳ ಹಾಗೂ ಬದುಕಿನ ಅಂದಾಜನ್ನೇ ಪಲ್ಲಟಗೊಳಿಸುವ ಒಂದು ಸದ್ದಿದೆ. ನಿರ್ದೇಶಕರು ಆ ಸನ್ನಿವೇಶವನ್ನು‌ ಹಾಗೂ ಕ್ಷಣದ ಬದಲಾವಣೆಯನ್ನು ಅದೆಷ್ಟು ಚೆಂದವಾಗಿ ಕಟ್ಟಿಕೊಟ್ಟಿದ್ದಾರೆ. 


ಸಾವು ಅಂದ ಮೇಲೆ ಹೂವಿರಲೇಬೇಕಲ್ಲ! ಈ ಸಿನೆಮಾದಲ್ಲೂ ಹೂವಿದೆ. ನಂದಿಬಟ್ಟಲು ಹೂವು ಬಹಳ ಮುಖ್ಯವಾದ ಪಾತ್ರವಾಗಿ ಇಡೀ ಸಿನೆಮಾದುದ್ದಕ್ಕೂ ಇರುತ್ತದೆ. ಇಂಥದಕ್ಕೇ ಬಹುಶಃ ನಾವು ಕಾವ್ಯ ಅನ್ನುತ್ತೇವೆ. ಹಾಗೆಯೇ ರಾಜ್ ಅವರು ಬಹಳ ಚೆಂದಕ್ಕೆ ಕವಿತೆ ಓದಬಲ್ಲರು ಅನ್ನುವುದನ್ನು ಒಂದಷ್ಟು ವರ್ಷಗಳ ಹಿಂದೆಯೇ ಕೇಳಿಸಿಕೊಂಡಿದ್ದ ನನಗೆ, ಈ ಸಿನೆಮಾದಲ್ಲಿ ಒಂದು ಬಹಳ ಚೆಂದದ‌‌ ಕವಿತೆ ಇದ್ದಿದ್ದು ಈ ಸಿನೆಮಾಕ್ಕೊಂದು ಧ್ಯಾನಸ್ಥ ಸ್ಥಿತಿಯನ್ನು ತಂದುಕೊಡುತ್ತದೆ ಅನಿಸಿತು. ಉದುರಿಹೋಗುವುದು ಎಲ್ಲಾ ಹೂವಿನ ಅಥವಾ ಇಡೀ ಜೀವಕುಲದ ಲಕ್ಷಣ. ಉದುರುವ ಕಾಲದ ಮಾಪನ‌ ಬೇರೆ ಬೇರೆಯಷ್ಟೇ. ಈ ಸಿನೆಮಾ ನೋಡಿದ ಬಳಿಕ ನಂದಿಬಟ್ಟಲನ್ನು ನಾವು ಬೇರೆಯದೇ ರೀತಿಯಲ್ಲಿ ಗಮನಿಸುತ್ತೇವೆ ಹಾಗೂ ಗ್ರಹಿಸುತ್ತೇವೆ ಅನ್ನುವ ಸಣ್ಣ ನಂಬಿಕೆ ನನ್ನದು. ಇನ್ನೂ ಒಂದು ಸಂಗತಿಯೆಂದರೆ ನಂದಿಬಟ್ಟಲು ಹೂವಿರುವವರೆಗೂ ಈ ಸಿನೆಮಾ ನೋಡಿದವರಿಗೆ ಈ ಸಿನೆಮಾದ ನೆನಪು ಮತ್ತೆ ಮತ್ತೆ ಆಗುತ್ತಲೇ ಇರುತ್ತದೆ. ಅದು ಸಿನೆಮಾದ, ನಿರ್ದೇಶಕರ ಜಾಣ್ಮೆ. ನನಗೆ ನಂದಿಬಟ್ಟಲು ಹೂವಿನ ಸಂಗತಿ ಬಂದಾಗ, 'ಅಕ್ಟೋಬರ್' ಸಿನೆಮಾದ ನೆನಪಾಯಿತು. ಎರಡರ ಕತೆಯೂ ಬೇರೆ. ಆದರೆ, ತಳಹದಿ ಒಂದೇ! ರಾಜ್ ಅವರು ಶುದ್ಧ ಮನುಷ್ಯನಾಗುವುದರ ಕುರಿತಾಗಿಯೂ ಆಗಾಗ ಮಾತಾಡುತ್ತಿರುತ್ತಾರೆ, ಅದು ಕೂಡಾ ಈ ಚಿತ್ರದ ಕತೆಗೆ ಜೀವಾಳ. 


ಈ ಸಿನೆಮಾ ಬೇಗ ಮುಗಿದುಹೋಗುತ್ತದೆ. ಇದನ್ನು ಎರಡು ರೀತಿಯಲ್ಲಿ ಸ್ವೀಕರಿಸಬಹುದು ಅಂತ ನನಗನ್ನಿಸಿತು. ಒಂದು, ಮೊದಲೇ ಸಾವಿನ ಗಾಢತೆ ಬಹಳ ಭಾರ, ಅದು ಅಚ್ಚೊತ್ತುವ ಮೊದಲೇ‌ ಸಿನೆಮಾ ಮುಗಿಯುತ್ತದೆ, ಸಾವಿನಲ್ಲೇ ಕಾಡುತ್ತಾ ಅಲ್ಲಲ್ಲೇ ಸುತ್ತುವುದಿಲ್ಲ. ಇದು ಕತೆ ಅಷ್ಟು ಗಾಢವಾಗಿ ತಟ್ಟದೇ ಹೋಗಬಹುದು ಅನ್ನುವುದು ಒಂದು ಕಡೆಯಾದರೆ, ಇನ್ನೊಂದು ಕೂಡಾ ಅಷ್ಟೇ ವಿಶಿಷ್ಟವಾಗಿ ಕಂಡಿತು. ಸಿನೆಮಾದ ಹಾಗೆಯೇ ನೋಡುನೋಡುತ್ತಿದ್ದಂತೆಯೇ ಬದುಕು ಮುಗಿದುಹೋಗುತ್ತದೆ; ಬಹಳ ಚಿಕ್ಕದು. ನಮ್ಮ ಬದುಕು ಇಲ್ಲಿನ ಮನಸ್ಸುಗಳಲ್ಲಿ ದಾಖಲಾಗುವುದರೊಳಗಾಗಿಯೇ ನಾವು ಹೊರಟಾಗಿರುತ್ತದೆ. ಹಾಗಾಗಿ ಈ ಸಿನೆಮಾದ ಒಟ್ಟು ಅವಧಿಯನ್ನು ಹೇಗೆ ಬೇಕಾದರೂ ಪರಿಗಣಿಸಬಹುದು. ಆದರೆ, ಸಿನೆಮಾ ಸಣ್ಣದು ಅಂದ ಮಾತ್ರಕ್ಕೆ ಸಿನೆಮಾದ ಸಂಗತಿ ಸಣ್ಣದಲ್ಲ.‌ ಸಿನೆಮಾ ಮುಗಿದ ಮೇಲೆ‌ ಹಲವು ಪ್ರಶ್ನೆಗಳನ್ನು ಹುಟ್ಟಿಸುತ್ತದೆ, ಸಿನೆಮಾವಾಗಿ ಅಷ್ಟು ಮಾಡಿದರೆ ಸಾಕು. ಇನ್ನೇನೋ ಬೇಕಿತ್ತು ಅನಿಸಿತು, ಆದರೆ, ಬಹಳಷ್ಟನ್ನು ಹೇಳಿದ್ದಾರಲ್ಲಾ ಅಂತ ಕೂಡಾ ಅನಿಸಿತು. 


ಇನ್ನು ಸಿರಿಯವರು ಯಾಕೆ ಹಾಗೆ 'ಕಾಣುತ್ತಾರೆ' ಅಂತ ಯೋಚಿಸುತ್ತಿದ್ದ ನನಗೆ ಉತ್ತರ ಸಿನೆಮಾದಲ್ಲಿ ಸಿಕ್ಕಿತು. ನನ್ನ ಪ್ರಶ್ನೆಯನ್ನೇ ಸಿನೆಮಾದ ಇನ್ನೊಂದು ಪಾತ್ರವೂ ಕೇಳುತ್ತದೆ. ಅದು ಸಿರಿಯವರ ಪಾತ್ರದ ಪ್ರಸ್ತುತಿಗೆ ಕೊಟ್ಟ ಮಹತ್ವ. ಸಾಯುವುದನ್ನು ನೋಡುವುದು, ಅಥವಾ ಸಾಯುವವರನ್ನು ತಯಾರುಮಾಡುವುದೇ ಅಭ್ಯಾಸವಾದರೆ ಏನಾಗಬಹುದು. ಶೋಕ ಯಾರಿಗೆ? ಶೋಕದ ಮಧ್ಯ ಬೇರೆ ಸಂಗತಿಗಳಿಗೆ ಜಾಗವಿದೆಯಾ? ಕೌನ್ಸಿಲರ್ ಹಾಗೂ ರೋಗಿ ಇಬ್ಬರೂ ಮನುಷ್ಯರೇ ಆದರೂ, ಬೇರೆ ಬೇರೆ ರೋಗಿಯ ಜೊತೆಗಿನ ಕೌನ್ಸಿಲರ್ ಅವರ ಭಾವನಾತ್ಮಕ ಬಂಧವೇನು? ನಿತ್ಯವೂ ಸಾವಿನ ಸುತ್ತಲೇ ಬದುಕು ಕಟ್ಟಿಕೊಂಡವರ ಬದುಕಿನ ನಿತ್ಯದ ಸಂಗತಿಗಳೇನು? ಇತ್ಯಾದಿಗಳೆಲ್ಲವನ್ನೂ ನಿರ್ದೇಶಕರು ಬಹಳ‌ ನಾಜೂಕಾಗಿ ಕಟ್ಟಿಕೊಟ್ಟಿದ್ದಾರೆ. ಹಲವಾರು ಸಂಗತಿಗಳನ್ನು ಮುಟ್ಟಿಹೋಗಿದ್ದಾರೆ 'ಅನಿಕೇತ್'. ಯಾಕೆಂದರೆ, ಆ ಸಂಗತಿಗಳಲ್ಲೇ ಬದುಕುವುದಕ್ಕೆ ಅವರು 'ಅನಿಕೇತ್' ಅಲ್ಲವಾ, ಅಲ್ಲಿಯೇ ಇರುವ ಹಾಗಿಲ್ಲ, ಅನಿಕೇತನ ಆಗಲೇಬೇಕು!


ಕವಿತೆ ಇಷ್ಟವಾಗುತ್ತದೆ ಅಂತಾದರೆ, ಸಾವು‌ ಕಾಡುತ್ತದೆ ಅಂತಾದರೆ, ಸಾವಿನ ಕುರಿತಾಗಿ ವಿಶೇಷ ಆಸಕ್ತಿ ಇದೆ ಅಂತಾದಲ್ಲಿ, ಬದುಕಿನ ಕ್ಷಣಿಕತೆಯ ಕುರಿತಾಗಿ ಎಂದಾದರೂ ಯೋಚಿಸಿದ್ದೀರಿ ಅಂತಾದಲ್ಲಿ ಈ ಸಿನೆಮಾ ಇಷ್ಟವಾಗುತ್ತದೆ. 


ಧನ್ಯವಾದಗಳು Raj B Shetty ಅವ್ರೇ, Siri Ravikumar ಅವ್ರೇ, Applebox Studios ನ Divya Spandana/Ramya ಅವ್ರೇ, ಒಂದು ಚೆಂದದ ಸಿನೆಮಾಕ್ಕಾಗಿ ✨✨✨


~`ಶ್ರೀ' 

‌‌‌    ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ