ಸೋಮವಾರ, ಮಾರ್ಚ್ 11, 2024

ಕಥಾಗತ - ನಮ್ಮ ಮಣ್ಣಿನ ಕಥನ


 ಕಥಾಗತ - ನಮ್ಮ ಮಣ್ಣಿನ ಕಥನ


ನಮ್ಮ ಕತೆಗಳೆಲ್ಲವನ್ನೂ ಕೇವಲ ಕಾಲ್ಪನಿಕವೆಂಬಂತೆಯೋ ಅಥವಾ ಎಲ್ಲರ ಕೈಯಲ್ಲೂ ಸೋತ ಕತೆಗಳಂತೆಯೂ ಬಿಂಬಿಸಿರುವಾಗ, ನಮ್ಮ ಇತಿಹಾಸದ ಬಗ್ಗೆ ಹೆಮ್ಮೆಯಾದರೂ ಹೇಗಿದ್ದೀತು? ಇತಿಹಾಸದ ಬಗ್ಗೆ ಹೆಮ್ಮೆ ಯಾಕೆ ಬೇಕು, ಭೂತಕಾಲವನ್ನು ಕಟ್ಟಿಕೊಂಡು ನಮಗೇನಾಗಬೇಕು ಅನ್ನುವ ಇಂದಿನ ತಲೆಮಾರಿಗೆ‌ ಅರ್ಥವಾಗಬೇಕಾದ ಒಂದು ವಿಷಯ ಏನೆಂದರೆ, ಯಾರಲ್ಲಿ ಹೆಮ್ಮೆಪಡಬಹುದಾದಂಥ ಭೂತಕಾಲವಿರುತ್ತದೆಯೋ ಅವರಲ್ಲಿ ಆತ್ಮವಿಶ್ವಾಸ ಯಾವಾಗಲೂ ಜಾಸ್ತಿ; ಹಾಗೆಯೇ, ಹಿಂದೆ ಆಗಿದ್ದನ್ನು ತಿಳಿದವರು ಅಂಥ ತಪ್ಪುಗಳನ್ನು ಮತ್ತೆ ಮತ್ತೆ ಮಾಡಲಾರರು. ಅದೇ ಕಾರಣಕ್ಕಾಗಿಯೇ‌ ಯಾವ ಜನಾಂಗವನ್ನಾದರೂ ನಾಶ ಮಾಡಬೇಕು ಅಂತಾದರೆ, ಆ ಜನಾಂಗದ ಇತಿಹಾಸವನ್ನು ಹಾಗೂ ಅದರಲ್ಲಿನ ಮಹಾನ್ ಸಂಗತಿಗಳನ್ನು ಮೊದಲು ಅಳಿಸಲಾಗುತ್ತದೆ. ಆತ್ಮವಿಶ್ವಾಸವಿಲ್ಲದ ಮನುಷ್ಯ ಜನಾಂಗ ಮಾಡುವುದಾದರೂ ಏನನ್ನು? ಒಂದು ವಿಷಯವನ್ನು ಮಾತ್ರ ಯಾವತ್ತಿಗೂ ನೆನಪಿಟ್ಟುಕೊಳ್ಳಬೇಕು. ಭಾರತದ ಇತಿಹಾಸವೂ ಗಟ್ಟಿಯಾಗಿತ್ತು ಹಾಗೂ ನಮ್ಮ ಕಥನ ಪರಂಪರೆಯೂ. ಅಂತೆಯೇ ಇತಿಹಾಸವೆಂದರೆ ಶುಷ್ಕ, ಅದರಲ್ಲೇನಿದೆ ಅನ್ನುವ ಹೊತ್ತಿನಲ್ಲಿ, ಇತಿಹಾಸದೊಂದಿಗೆ ಕಥನ ಪರಂಪರೆ ಜೊತೆಯಾದರೆ ಹೇಗಿರಬಹುದು ಅನ್ನುವ ಆಲೋಚನೆಯೊಂದಿಗೆ ಡಾ. ನವೀನ್ ಗಂಗೋತ್ರಿ ( Naveen Gangotri ) ಅವರು ಬರೆದಿರುವ, ಸ್ವಸ್ತಿ ಪ್ರಕಾಶನ ( Priya Bhat ) ತನ್ನ ದಶಮಾನೋತ್ಸವದ ಸಂಭ್ರಮದಲ್ಲಿ ಪ್ರಕಟಿಸಿರುವ ಕೃತಿಯೇ 'ಕಥಾಗತ'. ಅದಕ್ಕೆ ತಕ್ಕದಾದ ಉಪ ಶೀರ್ಷಿಕೆ‌ 'ನೆಲದ ನಿನ್ನೆಯ ಮರೆಯಬಾರದ ಕಥಾನಕ'.


ಇಲ್ಲಿ ಎಂಟು ಕತೆಗಳಿವೆ. ಭಾರತದ ಇತಿಹಾಸ ಕೇವಲ ಎಂಟು ಕತೆಗಳಲ್ಲಿ ಹೇಳಬಹುದಾದದ್ದಾ ಅಂದರೆ ಖಂಡಿತಾ ಅಲ್ಲ. ಆದರೆ, ಇಲ್ಲಿ ಕೆಲವು ಮುಖ್ಯ ಸಂಗತಿಗಳನ್ನು ಮಾತ್ರ ಹೇಳಲಾಗಿದೆ. ಮುಖ್ಯ ಸಂಗತಿಗಳೂ ಕೇವಲ ೮ ಕತೆಗಳಲ್ಲಿ ಹೇಳಬಹುದಾದದ್ದಲ್ಲ.‌ ನಮ್ಮ ಗತದ ಕೆಲವು ಕಥಾನಕಗಳಿವೆ ಇಲ್ಲಿ ಅಂದರೆ ಹೆಚ್ಚು ಸೂಕ್ತವಾದೀತು. ಇತಿಹಾಸವೆಂದರೆ ಇಸವಿ, ಯುದ್ಧ, ಶಸ್ತ್ರಾಸ್ತ್ರ, ಸೈನ್ಯದ ಲೆಕ್ಕಾಚಾರ, ಕರ‌ ಪದ್ಧತಿ, ಸಮಾಜಕ್ಕೆ ಕೊಡುಗೆ ಇವಿಷ್ಟೇ ಅನ್ನುವಂತೆ ನಾವು ನಮ್ಮ ಪಠ್ಯದಲ್ಲಿ ಓದಿಕೊಂಡು ಬಂದಿದ್ದೇವೆ. ಆದರೆ, ಇದಕ್ಕೂ ಮೀರಿದ ಕತೆಗಳಿವೆಯಾ? ಇದ್ದರೆ ಆ ದಾಖಲಾತಿಗಳ್ಯಾಕೆ ನಮ್ಮ‌‌ ಪಠ್ಯಗಳಲ್ಲಿ ಇರಲಿಲ್ಲ ಅನ್ನುವುದು ಒಂದು ಕುತೂಹಲದ ಪ್ರಶ್ನೆಯಾಗಬಹುದು. ಒಂದು ಸಾಮ್ರಾಜ್ಯ ಹುಟ್ಟಿದ್ದರ ಹಿನ್ನೆಲೆ ಹಾಗೂ ಅದು ಸಾಂಸ್ಕೃತಿಕವಾಗಿ ಎಷ್ಟು ಸಮೃದ್ಧವಾಗಿತ್ತು ಅನ್ನುವುದನ್ನು ಹೇಳಹೊರಟರೆ ಭಾರತದ ಇತಿಹಾಸ ಒಂದು ಮಹಾನ್ ಇತಿಹಾಸವಾಗಿಬಿಡಬಹುದು ಅನ್ನುವ ಚಿಂತನೆಯೇನಾದರೂ ಪಠ್ಯ ತಯಾರಿಸುವವರಿಗೆ ಇತ್ತಾ ಅಂತಲೂ ಪ್ರಶ್ನೆ ಹುಟ್ಟಿಕೊಳ್ಳಬಹುದು. ನಮ್ಮಲ್ಲಿ, ನಮ್ಮ ಸಾಮ್ರಾಜ್ಯಗಳಲ್ಲಿ ಒಡಕುಗಳಿದ್ದುದು ನಿಜ. ಆದರೆ, ನಮ್ಮ ಜೀವನ ಪದ್ಧತಿಯ ಕುರಿತಾದ ನಂಬಿಕೆಗಳು ಛಿದ್ರವಾಗಿರಲಿಲ್ಲ. ಜೊತೆಗೆ, ಯಾವಾಗ ಸಮಾಜದಲ್ಲಿ ಬಿರುಕುಗಳು ಮೂಡಿದವೋ, ಭಯದ ನೆರಳು ಕವಿಯಿತೋ ಆಗೆಲ್ಲಾ ಯಾವುದೋ ಒಬ್ಬ ರಾಜ, ನಮ್ಮ ಸಮಾಜದ ಪುನರುತ್ಥಾನಕ್ಕಾಗಿ ಹುಟ್ಟಿಬಂದಿದ್ದಿದೆ. ಇವೆಲ್ಲವೂ ಓದುವುದಕ್ಕೆ, ಹೇಳುವುದಕ್ಕೆ, ಬಡಾಯಿ ಕೊಚ್ಚಿಕೊಳ್ಳುವುದಕ್ಕೆ ಚೆಂದ, ನಿಜ ಸ್ಥಿತಿ ಬೇರೆಯೇ ಇತ್ತು ಅಂತ ಹಲವರು ಅಂದುಕೊಳ್ಳಬಹುದು. ಆದರೆ, ನಿಜಕ್ಕೆ ಹಲವು ಮುಖಗಳಿಲ್ಲ; ನಾವು ನೋಡುವ ಕೋನದಿಂದ ಕಂಡಿದ್ದಷ್ಟೇ ನಿಜವಲ್ಲ ಅನ್ನುವ ಅರಿವು ನಮಗಿದ್ದರೆ 'ಎಲ್ಲ ಕಡೆಯಿಂದಲೂ ಜ್ಞಾನ ಹರಿದು ಬರಲಿ' ಅನ್ನುವ ವರ್ಗಕ್ಕೆ ನಾವು ಸೇರುತ್ತೇವೆ‌. 


ಈಗ ಭಾರತದ ಅಥವಾ ಒಂದರ್ಥದಲ್ಲಿ ಇಡೀ ಜಗತ್ತಿನ ಬದ್ಧ ವೈರಿಯಾಗಿರುವ ಚೀನಾದ ಜನರಲ್ಲಿ ಒಂದು ಕಾಲದಲ್ಲಿ ಒಂದು ಕೊರಗು ಇತ್ತಂತೆ; ಅದೇನೆಂದರೆ "ಬುದ್ಧ ಹುಟ್ಟಿದ ನಾಡಿನಲ್ಲಿ ತಾವು ಹುಟ್ಟಲಿಲ್ಲವಲ್ಲ" ಅಂತ. ಚೀನಾದ ರಾಜಕಾರಣ ಹಾಗೂ ಅಲ್ಲಿನ ಮನಸ್ಥಿತಿ ಈಗ ಅದೆಷ್ಟು ಬದಲಾಗಿದೆಯೆಂದರೆ,‌‌‌ ಅಂಥ ಬದಲಾವಣೆಗೆ ಕೊಡುಗೆಗಳು ಏನೇನಿರಬಹುದು, ಒಮ್ಮೆ ಯೋಚಿಸಿ! ಚೀನಾದ ಯಾತ್ರಿಕನೊಬ್ಬ ಭಾರತಕ್ಕೆ ಬರುತ್ತಾನೆ ಹಾಗೂ ಆತ ಭಾರತದಲ್ಲಿ ಸುಮಾರು ವರ್ಷ ಅಧ್ಯಯನವನ್ನೂ ಕೈಗೊಳ್ಳುತ್ತಾನೆ ಅಂದರೆ, ಆತನಿಗೆ ಭಾರತದ ಕುರಿತಾಗಿ ಇದ್ದ ಪ್ರೀತಿ, ಗೌರವ ಅದೆಷ್ಟು ಗಾಢವಾಗಿದ್ದಿರಬಹುದು. ಹ್ಯು ಯೆನ್ ತ್ಸಾಂಗ್ ಅನ್ನುವ ಪ್ರವಾಸಿಯೊಬ್ಬ ಕೇವಲ ಪ್ರವಾಸಿಯಾಗಿರದೇ ಇನ್ನೂ ಏನೇನೆಲ್ಲಾ ಆಗಿದ್ದ, ಹಾಗೂ ಭಾರತ ಆತನನ್ನು ನಡೆಸಿಕೊಂಡ ಪರಿ, ಹಾಗೂ ಅಂಥ ವಿದೇಶಿ ಪ್ರವಾಸಿಗನೊಬ್ಬನ ಬರೆಹಗಳಿಂದ ನಾವೀಗ ನಮ್ಮ ಇತಿಹಾಸವನ್ನು ತಿಳಿಯುತ್ತಿರುವುದು ಇತ್ಯಾದಿಗಳನ್ನು ಬಹಳ ಹೆಮ್ಮೆಯಿಂದ ಲೇಖಕರು ಕಟ್ಟಿಕೊಟ್ಟಿದ್ದಾರೆ. ಹ್ಯು ಯೆನ್ ತ್ಸಾಂಗ್ ಅನ್ನುವ ಪ್ರವಾಸಿಗೆ ಸಲ್ಲಲೇಬೇಕಾದ ಗೌರವ ಅದು. 


ತತ್ವಜ್ಞಾನ ಭಾರವಾಗಬಾರದು, ಬೇರೂರಬೇಕು. ಬೇರೂರಬೇಕು ಅಂದರೆ ಅದು‌ ಸಮಯ ಬೇಡುವ ಪ್ರಕ್ರಿಯೆ. ಹಾಗೆ ಬೇರೂರಿರುವ ತತ್ವಜ್ಞಾನವನ್ನು ಕಿತ್ತೊಗೆಯುವುದು ಕೂಡಾ ಅಷ್ಟು ಸಸಾರದ ಕೆಲಸವಲ್ಲ. ಭಾರತದ ಜೀವನ ಪದ್ಧತಿ ಕೂಡಾ ಅಂಥದ್ದೇ ಒಂದು ತತ್ವಜ್ಞಾನ. ಒಂದು ತತ್ವ ಜನಪ್ರಿಯವಾದಂತೆ ಹೇಗೆ ಕವಲುಗಳನ್ನು ಪಡೆದುಕೊಳ್ಳುತ್ತದೆ ಅನ್ನುವುದನ್ನು ಹಾಗೂ ಅದಕ್ಕಿರುವ ಉದಾಹರಣೆಗಳನ್ನೂ ಲೇಖಕರು ಇಲ್ಲಿ ತಿಳಿಸಿದ್ದಾರೆ. ಸಿದ್ಧಾಂತ ಮತ್ತು ಆರ್ಥಿಕತೆ ಇವೆರಡರಲ್ಲಿ ಯಾವುದು ಜಗತ್ತನ್ನಾಳುತ್ತದೆ ಎಂಬ ಪ್ರಶ್ನೆಯನ್ನಿಟ್ಟುಕೊಂಡು ಎರಡು ಚೆಂದದ ಪ್ರಸ್ತುತಿ ಅಥವಾ ವಾದಗಳಿವೆ. ಅವು ಬಹಳ ಗಹನ ಆಲೋಚನೆಗಳನ್ನು ಸ್ಫುರಿಸುತ್ತವೆ. ಹಾಗೆಯೇ ಈ ಪುಸ್ತಕದಲ್ಲಿ ಅಲ್ಲಲ್ಲಿ ಸಮಾಜಪರವಾದ ಧ್ವನಿಗಳಿವೆ, ಕಿವಿಮಾತುಗಳಿವೆ ಕೂಡಾ. 


ಭಾರತದಲ್ಲಿ ಉಚಿತವಾಗಿ ಏನನ್ನು ಹಂಚುತ್ತಿದ್ದರು ಹಾಗೂ ಅಂಥ ದೇಶದ ಸ್ಥಿತಿ ಹೇಗಿದ್ದಿರಬಹುದು ಅನ್ನುವುದಕ್ಕೆ ಒಂದು ಮಾತನ್ನು ಲೇಖಕರು ಬಳಸಿದ್ದಾರೆ. ವರ್ತಮಾನದ ಕೆಲವು‌ ಸಂಗತಿಗಳನ್ನು ನೋಡಿದಾಗ, ಅದರಲ್ಲೂ ಕೊರೊನಾದ ಕಾಲಘಟ್ಟದಲ್ಲಿ ಭಾರತ ಜಗತ್ತಿನೊಡನೆ ನಡೆದುಕೊಂಡ ರೀತಿಯನ್ನು ಗಮನಿಸಿದಾಗ ತನ್ನಿಂದ ತಾನಾಗಿಯೇ ತಾಳೆಹಾಕಬೇಕು ಅನಿಸುತ್ತದೆ. ಭಾರತವನ್ನಾಶ್ರಯಿಸಿ ಬಂದ ಯಾರೂ ಭಾರತೀಯರಿಂದ ಘಾಸಿಗೊಳಗಾಗಿಲ್ಲ ಅಂದರೆ ಅದು ಭಾರತದ ಹಿರಿಮೆ! ಹಿಂದೆಲ್ಲಾ ಆಶ್ರಯ ಬೇಡಿ ಬಂದ‌ ಜನಾಂಗ, ಬರುವಾಗ ಯಾವ ಧರ್ಮದ್ದಾಗಿತ್ತೋ ಮತ್ತೆ ವಾಪಸ್ ಹೋಗುವಾಗ ಅದೇ ಧರ್ಮಕ್ಕೆ ಸೇರಿದ ಜನಾಂಗವಾಗಿಯೇ ಹೋಗಿದ್ದು ಕೆಲವೇ ದೇಶಗಳಿಂದ. ಅಂಥ‌‌ ದೇಶಗಳಲ್ಲಿ ಭಾರತವೂ ಒಂದು ಅಂದರೆ ಅದು ಹೆಮ್ಮೆಯ ವಿಷಯವಲ್ವಾ!


"ಸಾವಿರ ದೇವರನ್ನು ಪೂಜಿಸುವ ನೆಲದಲ್ಲಿ ಇನ್ನೊಂದು ದೇವರನ್ನು ಸೇರಿಸಿಕೊಳ್ಳುವುದು ದೊಡ್ಡ ಕೆಲಸವೂ ಆಗಿರಲಿಲ್ಲ" ಅನ್ನುವ ಮಾತು ಭಾರತದ ಸಹಿಷ್ಣುತೆಯ ಸಾರಾಂಶವಲ್ಲದೇ ಇನ್ನೇನೂ ಅಲ್ಲ. ಅದಕ್ಕಾಗಿಯೇ ಹೇಳುವುದಲ್ವಾ 'ಭಾರತ ಯಾವತ್ತಿಗೂ ಅನ್ವೇಷಕರ ನಾಡು' ಅಂತ.  ಜೊತೆಗೆ, ಇಂಥದ್ದೊಂದು ಸಂಸ್ಕೃತಿಯ ಭಾಗವಾಗಿರುವುದಕ್ಕೆ ನಾವು ಸದಾ ಈ ಬದುಕಿಗೆ, ಇಂಥ ತತ್ವಜ್ಞಾನಗಳನ್ನು ಕೊಟ್ಟ ನಮ್ಮ ಪೂರ್ವಜರಿಗೆ ಕೃತಜ್ಞರಾಗಿರಬೇಕು. ಇಡೀ ಜೀವಕುಲದ ವಿಕಸನಕ್ಕೆ 'ಅನ್ವೇಷಣೆ'ಯ ಮನಸ್ಥಿತಿ ಮಹತ್ವದ ಕೊಡುಗೆ ಕೊಟ್ಟಿದೆಯೆಂದರೆ ತಪ್ಪಲ್ಲವೇನೋ. 'ಮಾಗಧಿಯ ಕಂಗಳಲ್ಲಿ' ಅನ್ನುವ ಲೇಖನದಲ್ಲಿ ಮಣ್ಣಿನ ಕುರಿತಾದ ಅದ್ಭುತವಾದ ಮಾತೊಂದಿದೆ. ಅದನ್ನು ಓದಿಯೇ ಮನಸ್ಸು ತುಂಬಿಕೊಳ್ಳಬೇಕು. 


ಕಲೆಗಳೆಲ್ಲವೂ ಬೇರೆಬೇರೆಯಲ್ಲ. ಒಂದು ಇನ್ನೊಂದಕ್ಕೆ ಪೂರಕ ಅನ್ನುವ ಅರಿವಿದ್ದವರು ಮಾತ್ರವೇ ಕಲೆಯ ಉಪಾಸನೆಯನ್ನು ಪಕ್ವವಾಗಿಸಿಕೊಳ್ಳುತ್ತಾರೆ ಅನ್ನುವುದು ಅದೆಷ್ಟು ಸತ್ಯದ ಮಾತು. ಚೆನ್ನಕೇಶವ ದೇವಾಲಯದ ಕೆತ್ತನೆಗಳ ವರ್ಣನೆ ಮಾಡುವಾಗ ಚೆನ್ನಕೇಶವನ ಕುರಿತಾಗಿ ಒಂದಷ್ಟು ಪದಗಳು ಬರುತ್ತವೆ, ಅದೊಂಥರಾ ರೋಮಾಂಚನಕಾರಿ ಅನ್ನಿಸಿತು ನನಗೆ. ಆ ಪದಗಳಿಗೆ ಇರುವ ಘನತೆಯೇ ಬೇರೆ. 


ಭಾರತದ ಕಥಾಪರಂಪರೆ ಹಾಗೂ ಅದರಿಂದ ಒದಗಬಹುದಾದ ಮಹತ್ವದ ಸಂಗತಿಗಳನ್ನು ಲೇಖಕರು ಭಾಗಮತಿಯ ಕುರಿತಾದ ಲೇಖನದಲ್ಲಿ ಹೇಳಿದ್ದಾರೆ. ಇಡೀ ಮನುಕುಲದ ಕಥಾಕೌಶಲಕ್ಕೆ ಕಳಸವಿಡುವ ಮಾತೊಂದು ಇಲ್ಲಿದೆ. ಹಾಗೆಯೇ ಇನ್ನೊಂದು ಲೇಖನದಲ್ಲಿ ಬಂಗಾಲದ ಹೆಣ್ಣುಮಕ್ಕಳ ಕುರಿತಾಗಿ ಒಂದು ಸಿಹಿ ಆರೋಪವಿದೆ; ಲೇಖಕರಿಗೆ ಇಷ್ಟು ಚೆನ್ನಾಗಿ ಹೇಗೆ ಗೊತ್ತು ಅನ್ನುವ ಪ್ರಶ್ನೆ ಎದುರಾದರೆ ನೀವೂ ನನ್ನಂತೆಯೇ !


ವಿಜಯನಗರ ಸಾಮ್ರಾಜ್ಯದ ವರ್ಣನೆಗೆ ಬರುವಾಗ ನಮಗೆ ಬೇರೆಯದೇ ಲೇಖಕರು ಸಿಗುತ್ತಾರೆ‌. ವಿಜಯನಗರದ ಸ್ಥಾಪನೆಯ ಸಮಯದಲ್ಲಿ ಎಂಥ ವಾತಾವರಣವಿತ್ತೋ, ಅಂಥ ಸಮಯದಲ್ಲಿ ಪುನರುತ್ಥಾನದ ಯಾವ ಉದ್ವೇಗವಿತ್ತೋ ಅದು ಲೇಖಕರ ಸಾಲುಗಳಲ್ಲೂ ಉಸಿರಾಡುತ್ತದೆ. ಪುಸ್ತಕದ ಎಲ್ಲಾ ಭಾಗಗಳಿಗಿಂತ ವಿಜಯನಗರದ ಭಾಗ ಬಹುಶಃ ಲೇಖಕರನ್ನು ಹೆಚ್ಚು ತಟ್ಟಿದೆ ಅಂತ ಅಲ್ಲಿನ ಸಾಲುಗಳಿಂದಲೇ ಹೇಳಬಹುದು. ವಿಜಯನಗರದ ಕತೆಯ ಸ್ವರೂಪವೂ ಇಲ್ಲಿ ಹೇಳಿ ಮಾಡಿಸಿದ ಹಾಗಿದೆ. ಅನಾದರಕ್ಕೆ ಒಳಗಾದ ಹಾಳುಹಂಪೆಯಲ್ಲದೇ‌ ಇನ್ನಾರು ತನ್ನ ಕತೆಯನ್ನು ತಾನೇ ಹೇಳಿಕೊಳ್ಳುವುದು ಸಾಧ್ಯ! ಸ್ವಗತದ ಮಾದರಿಯ ನಿರೂಪಣೆ ಹಂಪೆಯ ಕತೆಗೆ ಅತ್ಯಂತ ಸೂಕ್ತವಾದದ್ದು. ಮುಪ್ಪಿನಲ್ಲಿ ಸ್ವಗತವೊಂದೇ ಸಂಗಾತವಲ್ಲವೇ! 


"ಶುದ್ಧ ಇತಿಹಾಸ ಅನ್ನುವುದು ಒಂದು ಮಾಯಾಜಿಂಕೆ, ಅದೆಂದಿಗೂ ಇದ್ದಿರಲಿಲ್ಲ" ಅನ್ನುವ ಮಾತು ಒಂದೊಮ್ಮೆ ಇಡೀ ಇತಿಹಾಸದ ಉಲ್ಲೇಖಗಳ ಬುಡವನ್ನೇ ಅಲ್ಲಾಡಿಸುವ ಮಾತಂತೆ ತೋರುತ್ತದೆ. ಜೊತೆಗೆ, ಇತಿಹಾಸ ಅಂದರೆ "ಹೀಗೆ ನಡೆದಿತ್ತು" ಅನ್ನುವುದನ್ನು ಹೇಳುವುದಕ್ಕಿಂತ ಹಾಗೆ ನಡೆದಿದ್ದನ್ನು "ಹೇಗೆಲ್ಲಾ ಹೇಳಬಹುದು" ಅನ್ನುವುದನ್ನೇ ಹೆಚ್ಚು ಧ್ವನಿಸುತ್ತದೆ ಅಂದರೆ ತಪ್ಪಾಗಲಾರದು ಅನ್ನುವ ಸಂಗತಿಯನ್ನು ಮತ್ತೆ ಈ ಸಾಲು ನಮ್ಮೆದುರಿಗೆ ಇಡುತ್ತದೆ.


ಹಾಗೆಯೇ ಈ ಪುಸ್ತಕದಲ್ಲಿರುವುದು‌ ಇತಿಹಾಸವಾದರೂ ಕತೆಯ ಮೂಲಕ ಹೇಳಿದ ಕಾರಣಕ್ಕೆ, ಕತೆಯನ್ನು ಹೇಳಲು ಬರುವ ಹಲವು ಪಾತ್ರಗಳು ಕೇವಲ ನೆಪ ಮಾತ್ರಕ್ಕೆ ಬಂದಂತೆಯೂ, ಅದು ಸ್ವಲ್ಪ ಯಾಂತ್ರಿಕವಾಗಿಯೂ ಕೆಲವು ಕಡೆಗಳಲ್ಲಿ ಕಂಡಿತು. ಆದರೆ, ಅಂಥ ಪಾತ್ರಗಳನ್ನು ತರುವುದು ಹಾಗೂ ಅದರ ಸುತ್ತ ವರ್ತಮಾನದ ಕತೆ ಹೆಣೆದು ಅವುಗಳಿಂದ ಇತಿಹಾಸಕ್ಕೆ ವರ್ಗಾವಣೆಯಾಗುವುದು ಅಷ್ಟು ಸುಲಭದ ಕೆಲಸವಲ್ಲ ಅನ್ನುವ ಅರಿವಿದ್ದರೂ, ಕೆಲವು ಪಾತ್ರಗಳು ಇನ್ನಷ್ಟು ಪಳಗಬಹುದಿತ್ತೇನೋ ಅಥವಾ ಇನ್ನಷ್ಟು ಕೊಡುಗೆ ಕೊಡಬಹುದಿತ್ತೇನೋ ಅಂತಲೂ ಅನ್ನಿಸಿತು. ಈ ಸಂಗತಿಯೇ ಕೆಲವೊಂದು ಕಡೆಗಳಲ್ಲಿ ಕೆಲವು ಪಾತ್ರಗಳ ಅಗತ್ಯತೆಯನ್ನು ಹಾಗೂ ಅವು ಕತೆಯಾಗುವಲ್ಲಿ ಸೋಲುವ ಸಾಧ್ಯತೆಗಳನ್ನೂ ಎತ್ತಿಹಿಡಿದಿದೆ.


ಒಟ್ಟಿನಲ್ಲಿ ಹೇಳುವುದಾದರೆ, ಇತಿಹಾಸವನ್ನು ಇಷ್ಟಪಡುವ ಹಾಗೂ ನಮ್ಮ ನಾಡನ್ನು ಇನ್ನಷ್ಟು ಮತ್ತಷ್ಟು ಪ್ರೀತಿಸುವ ನಾವೆಲ್ಲರೂ ಓದಲೇಬೇಕಾದ ನಮ್ಮ ಗತದ, ನಮ್ಮ ಸ್ವಂತದ ಕಥಾನಕ 'ಕಥಾಗತ'


~`ಶ್ರೀ' 

‌    ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ