ಸೋಮವಾರ, ಮಾರ್ಚ್ 11, 2024

ನೀಲಿ‌ ಬಣ್ಣದ ಸ್ಕಾರ್ಫು


 ನೀಲಿ ಬಣ್ಣದ ಸ್ಕಾರ್ಫು


ಈ ಪುಸ್ತಕದ ಹೆಸರು ಕೇಳಿದ ದಿನದಿಂದ ಇದನ್ನು ಓದಬೇಕು ಅನ್ನುವ ಕುತೂಹಲ ಬಹಳ ಇತ್ತು. ಆದರೆ, ಯಾವುದೇ ಪುಸ್ತಕದ ಹಾರ್ಡ್ ಕಾಪಿ ಖರೀದಿ ಮಾಡುವುದನ್ನು ಬಿಟ್ಟು ೩-೪ ವರ್ಷಗಳಾಗಿದ್ದರಿಂದ ಈ ಪುಸ್ತಕವನ್ನು ಓದುವುದಕ್ಕೆ ಸಾಧ್ಯವಾಗಿರಲಿಲ್ಲ.


ಅನ್ನಿಸಬಹುದು, ಹೆಸರು ಕೇವಲ ಪದಗಳ ಗುಚ್ಛ ಅಂತ. ಆದರೆ, ಕೆಲವು ಹೆಸರುಗಳಿಗೆ ಆಯಸ್ಕಾಂತೀಯ ಗುಣಗಳಿರುತ್ತವೆ. ಹೆಸರುಗಳೇ ಕುತೂಹಲವನ್ನು ಹುಟ್ಟಿಸುತ್ತವೆ. ಅದರಲ್ಲೂ ಸಿನೆಮಾದ, ಪುಸ್ತಕದ, ಲೇಖನದ ಹೆಸರುಗಳಿಗಾಗಿ ಬಹಳಷ್ಟು ತಲೆಕೆಡಿಸಿಕೊಳ್ಳುವುದು ಸಹಜ ಸಂಗತಿ. ಸ್ಕಾರ್ಫಿಗೆ ಫ್ಯಾಷನ್ ಜಗತ್ತಿನಲ್ಲಿ ವಿಶಿಷ್ಟವಾದ ಜಾಗ ಇದೆ. ಅಂಥ ಸ್ಕಾರ್ಫು ಕನ್ನಡದ ಹಳ್ಳಿಯ ಕತೆಯೊಳಗೆ ಸೇರಿಕೊಂಡಿದ್ದು ಒಂದು ಭಿನ್ನ ಪ್ರಪಂಚವನ್ನು ನಮ್ಮೆದುರು ತೆರೆದಿಡುತ್ತದೆ. ಹಿಂದೊಂದು ಕಾಲದಲ್ಲಿ ನೀಲಿ ಬಣ್ಣ ಹೆಣ್ತನದ ಸಂಕೇತವಾಗಿತ್ತಂತೆ ಹಾಗೂ ಗುಲಾಬಿ ಬಣ್ಣ ಪುರುಷರ ಪ್ರತಿನಿಧಿಯಾಗಿತ್ತಂತೆ. ಆದರೆ, ಬಹುಶಃ ಹಿಟ್ಲರಿನ ಕಾಲದಲ್ಲಿ ಈ ಎರಡೂ ಬಣ್ಣಗಳ ಸ್ಥಾನಪಲ್ಲಟವಾಗಿರಬಹುದು ಅಂತ ಒಂದು ವಾದವಿದೆ. ನೀಲಿ ಅನ್ನುವುದು ಆಕಾಶದ ಬಣ್ಣ, ಹಾಗೆಯೇ ಅದನ್ನು ಪ್ರತಿಫಲಿಸುವ ಸಮುದ್ರದ ಬಣ್ಣ. ಅಂದರೆ ಅಗಾಧತೆಯ, ಪ್ರಶಾಂತತೆಯ, ಸ್ಥಿರತೆಯ ಬಣ್ಣ. ಇಲ್ಲಿನ ಕತೆಗಳಲ್ಲಿ ಹೆಣ್ಣು ಮನಸ್ಸಿನೊಳಗೆ ಅಡಿಯಿಡುವ ಪ್ರವೇಶ ದ್ವಾರವಿದೆ. ಅಲ್ಲಿನ ಪ್ರಪಂಚ ಸ್ಥಿರವೋ ಅಸ್ಥಿರವೋ, ಪ್ರಶಾಂತವೋ ಅಥವಾ ಸದಾ ಪ್ರಕ್ಷುಬ್ಧವೋ ಅನ್ನುವುದು ಬೇರೆಯ ಸಂಗತಿ, ಆದರೆ ಅಗಾಧ ಅನ್ನುವುದಂತೂ ಸತ್ಯ. 


ಮೀಡಿಯಾ ಚೆರ್ರಿ ಪ್ರಕಾಶನದ ಚೈತ್ರಿಕಾ ಹೆಗಡೆಯವರ  ಮೊದಲ ಕಥಾ ಸಂಕಲನವಿದು. ಒಂದು ಕಾರ್ಯಕ್ರಮದಲ್ಲಿ ಚೈತ್ರಿಕಾ ಮತ್ತು ಅವರ ಪತಿ ನಾಗರಾಜ ವೈದ್ಯ ಅವರನ್ನು ಭೇಟಿಯಾಗಿದ್ದಾಗ ಈ ಪುಸ್ತಕದ ಇ-ಬುಕ್ ಆವೃತ್ತಿ ಹೊರತರಬಹುದಾ ನೋಡಿ ಅಂತ ವಿನಂತಿಸಿಕೊಂಡಿದ್ದೆ. ಅದಕ್ಕೆ ಸ್ಪಂದಿಸಿದ ಅವರು ಒಂದೆರಡು ವಾರದಲ್ಲೇ ಗೂಗಲ್ ಪ್ಲೇ ಬುಕ್ಸ್ ಅಲ್ಲಿ ಇ-ಬುಕ್ ಲಭ್ಯವಾಗುವ ಹಾಗೆ ಮಾಡಿದರು. ಕನ್ನಡದ ಇನ್ನಷ್ಟು ಮತ್ತಷ್ಟು ಪುಸ್ತಕಗಳು ಇ-ಪುಸ್ತಕಗಳಾಗಿ ಬರಬೇಕು ಅನ್ನುವುದು ನನ್ನ ಆಸೆ. 


೧೨ ಕತೆಗಳಿರುವ ಈ ಸಂಕಲನದಲ್ಲಿ ಚೈತ್ರಿಕಾ ಅವರು ಕಳೆದ ಪರಿಸರದ ಒಡನಾಟದ ಕತೆಗಳಿವೆ. ಬಹುಶಃ ಎಲ್ಲ ಬರಹಗಾರರ ಶಕ್ತಿಯೂ ಇದೇ. ಜಯಂತ ಕಾಯ್ಕಿಣಿಯವರು ಹೇಳ್ತಾರಲ್ಲಾ, ಬದುಕಿನಿಂದ ಬರಹ ಬರಬೇಕು ಅಂತ, ಹಾಗೆಯೇ ಬರಹಗಾರರ ಸುತ್ತಮುತ್ತಲಿನ ಸಂಗತಿಗಳು ಕತೆಗಳಾಗಿ ಬರಬೇಕು. ಆಗಲೇ, ಅಂಥ‌ ಕತೆಗಳಿಗೆ ಸ್ವಂತಿಕೆಯೂ ನೂತನತೆಯೂ ಸಿಕ್ಕುವುದು. ಕಾಂತಾರದ ಸಮಯದಲ್ಲಿ ರಿಷಭ್ ಶೆಟ್ಟಿಯವರು ಒಂದು ಮಾತನ್ನು ಪದೇ ಪದೇ‌ ಉಲ್ಲೇಖಿಸುತ್ತಿದ್ದರು; "ಹೆಚ್ಚು ಹೆಚ್ಚು ಪ್ರಾದೇಶಿಕವಾದಷ್ಟೂ ಅದು ಜಾಗತಿಕ" ಅಂತ. 


ಇಲ್ಲಿನ ಕತೆಗಳೆಲ್ಲವೂ ಸಹಜವಾದ ಕತೆಗಳು. ಬಹುತೇಕ ಎಲ್ಲಾ ಕತೆಗಳಲ್ಲೂ ಪ್ರೀತಿ, ಮದುವೆ, ಸಂಸಾರ ನನಗೆ ಸಾಮಾನ್ಯ ಅಂಶಗಳಾಗಿ ಕಂಡವು. ಬಹುತೇಕ ಕತೆಗಳಲ್ಲಿ ಬೇರೆ ಬೇರೆ ಪರಿಸರದಲ್ಲಿ ಹುಡುಗ ಮತ್ತು ಹುಡುಗಿಯ ಪ್ರೇಮದ ಬದುಕನ್ನು, ಹೆಣ್ಣಿನ ಸಣ್ಣ ಸಣ್ಣ ಇಚ್ಛೆಗಳನ್ನು ಹುಡುಕುವ, ಆ ಮೂಲಕ ಬದುಕಿನ ಪುಟಗಳನ್ನು ತೆರೆದಿಡುವ ಪ್ರಯತ್ನ ಕಂಡಿತು. ಅದರ ಜೊತೆಗೆ ಉತ್ತರ ಕನ್ನಡದ ನಿತ್ಯದ ಬದುಕಿನ ಶೈಲಿಗಳನ್ನು ಎಲ್ಲಾ ಕತೆಗಳು ಬಹುತೇಕ ತೆರೆದಿಡುತ್ತಾ ಹೋದವು. ಉತ್ತರ ಕನ್ನಡ ಅನ್ನುವ ಜಿಲ್ಲೆಯೊಂದು ಇದೆಯೆಂದೇ ಬಹಳಷ್ಟು ಜನರಿಗೆ ತಿಳಿದಿಲ್ಲ. ಉತ್ತರ ಕನ್ನಡವೆಂದರೆ ನಾರ್ಥ್ ಕರ್ನಾಟಕಾನಾ ಅಂತಲೋ, ಯಾವಾಗ್ಲೂ ಅಲ್ಲಿ ಬಿಸಿಲು ಜಾಸ್ತಿ ಅಲ್ವಾ ಅಂತಲೋ, ರೊಟ್ಟಿ ಜಾಸ್ತಿ‌ ತಿನ್ನೋದು ಅಲ್ವಾ ಅಂತಲೋ ಕೇಳೋ ಪರಿಸ್ಥಿತಿ ಇರುವಾಗ ಇಂಥ ಉತ್ತರ ಕನ್ನಡಿಗರ ಬದುಕನ್ನು ದಾಖಲಿಸುವ ಕತೆಗಳು‌, ಅದರ ಮೂಲಕ ‌ಅಲ್ಲಿನ ಜನಜೀವನವನ್ನು ಹೊರ ಪ್ರಪಂಚಕ್ಕೆ ತೆರೆದಿಡುವ ಪ್ರಯತ್ನ ಖುಷಿಯಾಗದೇ ಹೋದೀತಾ! ಇಲ್ಲಿನ ಕತೆಗಳಲ್ಲಿ ಈ ಭಾಗದ ಹೆಣ್ಮನಗಳ ಬದುಕಿನ ನೋಟಗಳಿವೆ. ಹೊಂದಾಣಿಕೆಯೆಂಬುದು ಈ ಭಾಗದ ಜನರ ಬಹುಮುಖ್ಯ ಗುಣ, ಅದರಲ್ಲೂ ಇಲ್ಲಿನ ಹೆಣ್ಣುಮಕ್ಕಳಿಗೆ ಅದು ವಿಶೇಷವಾಗಿ ತುಸು ಹೆಚ್ಚೇ ಇರುವ ಸಂಗತಿ. ಜಗತ್ತಿನ ಬಹುತೇಕ ಎಲ್ಲಾ ಹಳ್ಳಿಗಳ ಹೆಣ್ಣುಮಕ್ಕಳ‌ ಕತೆ ಇದೇ ಇರಬಹುದು. ಹೆಚ್ಚಿನ ಆಸೆಗಳಿಲ್ಲದೇ, ಯಾರ ತಂಟೆಗೂ ಹೋಗದೇ, ಊರಿನ ಸಣ್ಣಪುಟ್ಟ ರಾಜಕೀಯ ತಕರಾರುಗಳಷ್ಟರಲ್ಲೇ ಬದುಕು ಸಾಗಿಸುವವರು ಇಲ್ಲಿನ ಜನರು. ಈ ಎಲ್ಲಾ ಸಂಗತಿಗಳನ್ನು ಈ ಕತೆಗಳಲ್ಲಿ ಸ್ಪರ್ಶಿಸಲಾಗಿದೆ.


ಮದುವೆಯೆಂಬುದು ಬಹುದೊಡ್ಡ ಸಂಗತಿ. ಅದರಲ್ಲೂ ಹಳ್ಳಿಗಳಲ್ಲಿ ಮದುವೆಯೆಂಬುದು ಒಂದು ಮಹಾಕನಸು. ಅಂದರೆ, ಮದುವೆಯಾದರೆ, ಬದುಕೊಂದು ಪೂರ್ಣವಾದಂತೆ, ಜವಾಬ್ದಾರಿಗಳು ಮುಗಿದಂತೆ ಅನ್ನುವ ನಂಬಿಕೆಯಿದೆಯಲ್ಲಾ ಅದು ಈ ಸಂಕಲನದಲ್ಲಿ ಎದ್ದು ಕಾಣುತ್ತದೆ. ಈ ಸಂಕಲನದ ಕತೆಗಳಲ್ಲಿನ ಹೆಣ್ಣು ಪಾತ್ರಗಳು ಬಹುತೇಕವಾಗಿ ಮದುವೆಯ ಸುತ್ತಮುತ್ತಲೇ ಕೇಂದ್ರೀಕೃತವಾಗಿರುವುದರಿಂದ ಚೂರು ಭಿನ್ನ ಕತೆಗಳನ್ನು ಕತೆಗಾರ್ತಿಯಿಂದ ಇನ್ನು ಮುಂದೆ ನಿರೀಕ್ಷಿಸಬಹುದು ಅಂದುಕೊಂಡಿದ್ದೇನೆ. ಬೇರೆ ಥರದ ಕತೆಗಳಿದ್ದಿದ್ದರೆ ಹೇಗಿರುತ್ತಿದ್ದವು ಅನ್ನುವ ಕುತೂಹಲವೊಂದು ನನ್ನಲ್ಲಿ ಉಳಿದುಕೊಂಡಿದೆ‌. ಹೊಸ ಕತೆಗಾರ್ತಿಯ ಈ ಪ್ರವೇಶ ಈ ಭಾಗದ ಇನ್ನಷ್ಟು ಕತೆಗಳಿಗೆ, ಬದುಕಿನ ಮತ್ತಷ್ಟು ನೋಟಗಳಿಗೆ ಪ್ರವೇಶ ಒದಗಿಸಲಿ ಅನ್ನುವ ಆಶಯದೊಂದಿಗೆ... 


~`ಶ್ರೀ' 

    ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ