ಸೋಮವಾರ, ಮಾರ್ಚ್ 11, 2024

Days at the Morisaki Bookshop

 

Days at the Morisaki Bookshop


ಬದುಕಲ್ಲಿ ಸರಳವಾದದ್ದು ಕೊಡುವ ಖುಷಿಯನ್ನು ಬಹುಶಃ ವ್ಯಾಖ್ಯಾನಿಸುವುದು ತುಸು ಕಷ್ಟ. ಆ ಸಂತೃಪ್ತಿಯನ್ನು ವಿವರಿಸುವುದಕ್ಕೆ ನಾವು ಹೊರಟ ತಕ್ಷಣವೇ ಅದು ಪೇಲವವಾಗುತ್ತದೆ. ಯಾವ ಸುಂದರ ಅನುಭೂತಿಯನ್ನೂ ಅಕ್ಷರಕ್ಕಿಳಿಸುವುದು ಅಷ್ಟು ಸುಲಭದ ಕೆಲಸವಲ್ಲ. ಭಾವವನ್ನು ಅಕ್ಷರಗಳಿಗೆ ಅನುವಾದಿಸುವುದಕ್ಕೆ ಹೊರಟಾಗ ಅದೆಷ್ಟೋ ಅರ್ಥಗಳು ಕಳೆದುಹೋಗುವ ಸಾಧ್ಯತೆಗಳೇ ಹೆಚ್ಚು. ಅನುಭವವಷ್ಟೇ ಪರಮ ಸತ್ಯ. ಅಂಥದ್ದೊಂದು ಚೆಂದದ‌ ಅನುಭವವನ್ನು ಕಟ್ಟಿಕೊಟ್ಟಿದ್ದು ಸತೋಶಿ ಯಾಗಿಸಾವಾ ಅವರ ಕಾದಂಬರಿ "Days at the Morisaki Bookshop" 


ಬಹಳ ಆಳವಾದ ಅಷ್ಟೇ ತೀವ್ರ ಧ್ವನಿಗಳುಳ್ಳ ಸಾಹಿತ್ಯವನ್ನು ಓದಿ ಓದಿ ಭಾರವಾದ ಯೋಚನೆಗಳೊಳಗೆ ಮುಳುಗಿಹೋಗಿರುವಾಗ ಇಂಥದ್ದೊಂದು ಪುಸ್ತಕ ಹೊಸ ಬಿಡುಗಡೆಯನ್ನು ಕೊಡುತ್ತದೆ. ಕತೆಯಲ್ಲೇನೂ ಭಿನ್ನವಾದುದು ಇಲ್ಲ ಅಥವಾ ಭಯಂಕರ ತಿರುವು ಅನ್ನಬಹುದಾದಂಥದ್ದೆಲ್ಲಾ ಏನೂ ಇಲ್ಲ. ಆದರೂ ಈ ಕಾದಂಬರಿ ಓದಿಸಿಕೊಳ್ಳುತ್ತದೆ; ಉದುರಿ ನೆಲಕ್ಕೆ ಬಿದ್ದ ಹೂವ ಮೇಲೆ ತಂಪಾದ ತಾಜಾ ಮಳೆ‌ ಹನಿಗಳು ಬಿದ್ದು ಇಡೀ ವಾತಾವರಣಕ್ಕೊಂದು ಹೊಸ ಆಹ್ಲಾದವನ್ನು ಕೊಡುವ ಹಾಗೆ. ಕೆಸರು, ಕಿರಿಕಿರಿ‌, ಕಸಕಡ್ಡಿಗಳ ನಡುವೆಯೂ ಮಳೆಗೊಂದು ಚಿಕಿತ್ಸಕ ಗುಣವಿದೆ. ಅರ್ಥವೇ ಆಗದ ಸಮ್ಮೋಹಕತೆಯೂ ಮಳೆಗಿದೆ. ಅಂಥ ಗುಣ ಈ ಕಾದಂಬರಿಗೂ ಇದೆ. ಒಂದು ಊರಿನ ತುಂಬಾ ಪುಸ್ತಕದ ಅಂಗಡಿಗಳೇ ತುಂಬಿದ್ದರೆ ಹಾಗೂ ಆ ಪುಸ್ತಕದ ಸುತ್ತಮುತ್ತಲೇ ಇಡೀ ಕತೆ ನಡೆದರೆ, ಪುಸ್ತಕದ ಕುರಿತಾಗಿ ಚೂರು ವಿಶೇಷವೇ ಅನ್ನಬಹುದಾದ ಆಸಕ್ತಿ ಇರುವವರಿಗೆ ಈ ಕಾದಂಬರಿ ಇಷ್ಟವಾಗದೇ ಇರಲಿಕ್ಕೆ ಹೇಗೆ ಸಾಧ್ಯ! 


ಈ ಕಾದಂಬರಿ ಒಂದರ್ಥದಲ್ಲಿ ಬಿರುಬೇಸಿಗೆಯ ಮಧ್ಯಾಹ್ನದಲ್ಲಿ ತಂಪಾದ ನಿದಿರೆ ಹೊತ್ತು ತರುವ ಆತ್ಮೀಯ ಗಾಳಿ. ಜಪಾನಿನ ಟೋಕಿಯೋದಲ್ಲಿ ಜಿಂಬೋಚೋ ( Jimbocho ) ಅನ್ನುವ ಜಾಗವೊಂದಿದೆ. ಅದನ್ನು 'ಪುಸ್ತಕಗಳ ಪಟ್ಟಣ'ವೆಂದೇ ಕರೆಯುತ್ತಾರೆ. ಅಂಥದ್ದೊಂದು ನಿಜ ಜಾಗದ ಹಿನ್ನೆಲೆಯಿಟ್ಟುಕೊಂಡು ಹೆಣೆದ ಕಾಲ್ಪನಿಕ ಕತೆಯೇ ಈ ಕಾದಂಬರಿ. ಬಹಳಷ್ಟು ಸ್ಥಳೀಯ ಭಾಷೆಗಳಲ್ಲಿ ಪುಸ್ತಕಗಳನ್ನು ಓದುವವರೇ ಇಲ್ಲ ಅನ್ನುವ ಕೊರಗು ಕೇಳುತ್ತಲೇ ಇರುವಾಗ ಪುಸ್ತಕ, ಅದರ ಓದಿನ ಕುರಿತಾದ ಅಪ್ಪಟ ಪ್ರೇಮ, ಓದಿನಿಂದಾಗಿಯೇ ಹುಟ್ಟಿಕೊಳ್ಳುವ ಒಂದಷ್ಟು ಮನುಷ್ಯ ಸಂಬಂಧಗಳು, ಈ ಪರಿಧಿಯಿಂದಾಚೆ ದೂರ ಹೋಗುವ ಒಂದಷ್ಟು ವ್ಯಕ್ತಿಗಳು, ಮಧ್ಯದಲ್ಲೆಲ್ಲಾ ಬದಲಾಗುತ್ತಲೇ ಇರುವ ಬದುಕು, ಎಲ್ಲಾ ಘಟನೆಗಳಿಗೂ ಸಾಕ್ಷಿಯಾಗುವ ಒಂದರ್ಥದಲ್ಲಿ ಪ್ರಮುಖ ಪಾತ್ರವೇ ಆಗುವ ಪುಸ್ತಕದಂಗಡಿ ಇವಿಷ್ಟನ್ನೂ ಈ ಕಾದಂಬರಿ ಹದವಾಗಿ ಬೆರೆಸಿಕೊಂಡು ನಮ್ಮೆದುರು ತೆರೆದುಕೊಳ್ಳುತ್ತದೆ. ಈ ಪುಸ್ತಕದ ಮೂಲಭಾಷೆ ಜಪಾನೀಸ್ ಆಗಿರಬಹುದು, ಈ ಪುಸ್ತಕದ ಕತೆ ನಡೆಯುವ ಮೂಲ ಜಾಗ ಜಪಾನಿನ ಜಿಂಬೋಚೋ ಆಗಿರಬಹುದು, ಇಲ್ಲಿನ ಪಾತ್ರಗಳ ಹೆಸರೆಲ್ಲವೂ ಜಪಾನಿನ ಹೆಸರುಗಳಾಗಿರಬಹುದು, ಆದರೆ‌ ಇಲ್ಲಿ ಬರುವ ಪಾತ್ರಗಳ್ಯಾವವೂ ನಮಗೆ ಅಪರಿಚಿತವಲ್ಲ. ಒಂದು ಕತೆ ಸಾರ್ವತ್ರಿಕವಾಗಬೇಕಾದರೆ ಅದರೊಳಗಿರುವ ಪಾತ್ರದ ಪೋಷಣೆಯು ಒಂದೇ ಸಮಯಕ್ಕೆ ಸ್ಥಳೀಯವೂ, ಜೊತೆಗೆ ಜಾಗತಿಕವೂ ಆಗಿರಬೇಕು. ಇಲ್ಲಿನ ಪಾತ್ರಗಳ್ಯಾವವೂ ನಮಗೆ ಹೊರಗಿನದು ಅಂತ ಅನ್ನಿಸುವುದೇ ಇಲ್ಲ. ಹಾಗಾಗಿಯೇ ಇನ್ನಷ್ಟು ಆಪ್ತವಾಗುತ್ತವೆ. ಕನ್ನಡದಲ್ಲಿ ಇಂಥ ಪ್ರಕಾರದ ಕಾದಂಬರಿಗಳು ಬಹಳ ಕಡಿಮೆ. 


ಹಿಂದೊಮ್ಮೆ Nagaraj Ramaswamy Vastarey ಸರ್ ಅವರ 'ಪ್ರಿಯೇ ಚಾರುಶೀಲೆ' ಓದಿದಾಗಲೂ ಇಂಥದ್ದೇ ಅನುಭವವಾಗಿತ್ತು. ಈಗ ಈ ಕಾದಂಬರಿ ಓದಿದಾಗ ಕೂಡಾ ಹೆಚ್ಚೂ ಕಡಿಮೆ ಅಂಥದ್ದೇ ಅನುಭವ. ಏಕತಾನತೆಯ ಬದುಕಿನಲ್ಲೊಂದು ಎಳೇ ಸ್ವಪ್ನ ರೂಪುಗೊಳ್ಳುವ ಹಾಗೆ, ಆ ಸ್ವಪ್ನದಿಂದಾಗಿಯೇ ನಮ್ಮ ಬದುಕಿನ ತಂತುಗಳು ಹೊಸ ಸ್ವರವನ್ನು ಮೀಟುವುದಕ್ಕೆ ಅಣಿಯಾಗುವ ಹಾಗೆ. ಕನ್ನಡಕ್ಕೆ ಬಹುಶಃ ಇದನ್ನು ಯಾರಾದರೂ ಅನುವಾದಿಸಿದರೆ ಅದನ್ನು ಕನ್ನಡೀಕರಿಸುವಾಗ ಎಷ್ಟೆಲ್ಲಾ ಸಾಧ್ಯತೆಗಳು ತೆರೆದುಕೊಳ್ಳುತ್ತವೆ ಹಾಗೂ ಕನ್ನಡದಂಥ ಭಾಷೆಯಲ್ಲಿ ಅದು ಅರಳಿಕೊಳ್ಳುವ ಬಗೆಯೇ ಒಂದು ಸಂಭ್ರಮವಾಗಬಹುದು ಅನ್ನುವ ಯೋಚನೆಗಳೇ ರೋಮಾಂಚಕ ಅಂತ ಅನಿಸಿದ್ದು ಹೌದು. ಸಂಸಾರದ ತಾಪತ್ರಯಗಳು, ಹುಡುಗ ಹುಡುಗಿಯರ ಹರೆಯದ ತುಮುಲಗಳು, ನೆರೆಹೊರೆಯ ಚೇಷ್ಟೆಗಳು, ಅಪ್ಪಟ ಮಾನವೀಯ ಸಂಬಂಧಗಳು ಇವೆಲ್ಲಾ ಇದ್ದರೂ ಇಲ್ಲಿ ಇನ್ನೊಂದು ಮುಖ್ಯ ಸಂಗತಿ ಪುಸ್ತಕ. ಭಾರತದ ಸಂಸ್ಕೃತಿ ಕಥನ ಪರಂಪರೆಯದ್ದು. ಜನಪದದ ಮೂಲಕ ಕತೆಗಳು ಪೀಳಿಗೆಯಿಂದ ಪೀಳಿಗೆಗೆ ದಾಟುತ್ತ ಬಂದರೂ, ಪುಸ್ತಕದ ಕುರಿತಾಗಿ ಅದೇನೋ ವಿಶೇಷ ಭಾವ ನಮ್ಮಲ್ಲಿ. ಜ್ಞಾನದ ಪರಂಪರೆಯನ್ನು ಆರಾಧಿಸುತ್ತಾ ಬಂದ ನಮಗೆ ಪುಸ್ತಕಗಳು ಯಾವಾಗಲೂ ಮಾರ್ಗದರ್ಶನದ ಮೂಲಬಿಂದುಗಳು. ನಮ್ಮಲ್ಲಿಯೂ ಇಂಥ ಕತೆಗಳು ಬರಲಿ ಅನ್ನುವುದೊಂದು ಬಿನ್ನಹವಷ್ಟೇ. 


"The rainy season had completely given way to summer while i was asleep." ನಮ್ಮಲ್ಲಿ ಬಹುತೇಕರು ಇಂಥ ಗಾಢ ನಿದ್ರೆಗಳಲ್ಲೇ ಇದ್ದೇವೆ. ನಮಗೆ ತಿಳಿದಿದೆ ಕಾಲ ಯಾರಿಗೂ ಕಾಯುವುದಿಲ್ಲ, ಜಗತ್ತು ಯಾರಿಗೂ ಕಾಯುವುದಿಲ್ಲ, ಹಾಗೂ ಮತ್ತೆ ನಾವಿಲ್ಲಿಗೆ ಬರುತ್ತೇವೋ ಇಲ್ಲವೋ ಅನ್ನುವ ಯಾವ ಖಾತ್ರಿಯೂ ಇಲ್ಲ. ಆದರೂ, ಏನೇನೋ ಕಾರಣಗಳಿಗಾಗಿ ಅದೊಂದು ವಿಚಿತ್ರವಾದ ಗಾಢ ನಿದ್ರೆಯಲ್ಲಿ ನಾವಿದ್ದೇವೆ, ಏಳಬಹುದು, ಏಳುವುದಕ್ಕೆ ಮನಸ್ಸು ಮಾಡಬೇಕಷ್ಟೇ. 


"Maybe it takes a long time to figure out what you’re truly searching for. Maybe you spend your whole life just to figure out a small part of it". ನಮ್ಮಿಡೀ ಬದುಕಿನ ಪೂರಾ ನಾವು ಬದುಕಿನ ಅರ್ಥಕ್ಕಾಗಿ ಹುಡುಕುತ್ತೇವೆ. ಶಬರಿಯ ಬದುಕು ಪೂರ್ಣವಾಗುವುದು, ಬದುಕಿನ ಉದ್ದೇಶ ಪೂರ್ಣವಾಗುವುದು ರಾಮನನ್ನಪ್ಪಿ ತನ್ನ ಸುಕ್ಕು ಸುಕ್ಕಾದ ಕೈಗಳಿಂದ ಅವನಿಗೆ ಹಣ್ಣುಗಳನ್ನು ತಿನ್ನಿಸಿದಾಗಲೇ. ಒಂದಿಡೀ ಬದುಕಿನ ಪೂರ್ಣತೆ ದಕ್ಕುವುದು ಕೇವಲ ಕೆಲವೇ ಕೆಲವು ಗಳಿಗೆಯ ಭಾಗದಲ್ಲಿ; ಕೇವಲ ಕೆಲವೇ ಕೆಲವು ಗಳಿಗೆಯ ಭಾಗ್ಯದಲ್ಲಿ. 


"Human beings are full of contradictions". ಸಂಕೀರ್ಣ ಬೌದ್ಧಿಕ ವ್ಯವಸ್ಥೆಯಿರುವ ಮನುಷ್ಯರಲ್ಲಿ ದ್ವಂದ್ವಗಳು ಸಹಜವೇ ಅಲ್ಲವಾ? ವಾಲ್ಟ್ ವಿಟ್ಮನ್ ತಮ್ಮ Song of Myself ಕವಿತೆಯಲ್ಲಿ ಹೇಳುವುದೂ ಬಹುಶಃ ಇಂಥದ್ದೇ ಒಂದು ಧ್ವನಿ :


"Do I contradict myself?

Very well then I contradict myself,

(I am large, I contain multitudes.)"


ಮನುಷ್ಯನಲ್ಲಿ ಯಾವಾಗ ಆಳದ ಚಿಂತನೆಗಳು ಶುರುವಾಗುತ್ತವೆಯೋ ಆಗಲೇ ಇಂಥ ದ್ವಂದ್ವಗಳೂ ಶುರುವಾಗುತ್ತವೆ‌. ದ್ವಂದ್ವಗಳು ಬಲಹೀನತೆಯಲ್ಲ, ಅಥವಾ ಸ್ಪಷ್ಟತೆಯಿಲ್ಲದೇ ಇರುವುದರ ಸಂಕೇತಗಳೂ ಅಲ್ಲ. ದ್ವಂದ್ವಗಳು ಹಲವು ಸಾಧ್ಯತೆಗಳ‌ ಅಭಿವ್ಯಕ್ತಿ. ಒಂದು ಸಂಗತಿಯನ್ನು ಹಲವು ಮಜಲುಗಳಲ್ಲಿ ನೋಡುವುದರ ಭೂಮಿಕೆ. 


ಓದಿನ ಸುಖ ನಿಮ್ಮದೂ ಆಗಲಿ.


~`ಶ್ರೀ'

   ತಲಗೇರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ