ಬುಧವಾರ, ಅಕ್ಟೋಬರ್ 5, 2022

ವರಾಹ ರೂಪಂ...

 ವರಾಹರೂಪಂ... 



ಬಹುಶಃ ಮನುಷ್ಯ ಹುಟ್ಟಿದಾಗಿನಿಂದ‌ ನಂಬಿಕೆಗಳೂ ಹುಟ್ಟಿರಬಹುದು. ನಂಬಿಕೆ ಅಂದ್ರೆ ಕೆಲವೊಮ್ಮೆ ಪ್ರಶ್ನಿಸುವಂಥದ್ದು, ಇನ್ನು ಕೆಲವೊಮ್ಮೆ ಪ್ರಶ್ನಿಸಲು ಹೆದರುವಂಥದ್ದು. ಆದರೆ, ಇನ್ನು ಕೆಲವು ಸಂಗತಿಗಳನ್ನು ಪ್ರಶ್ನಿಸುವುದಕ್ಕೂ ಮನುಷ್ಯನ ಹತ್ತಿರ ಸಾಧ್ಯವಾಗುವುದಿಲ್ಲ. ಮನುಷ್ಯ ಸಂಕುಲ‌ ಸೃಷ್ಟಿಯಾದ ನಂತರ 'ದೇವರು' ಅಂತ ಏನನ್ನೋ ಮೊದಲ ಬಾರಿಗೆ ಕಂಡುಕೊಂಡಾಗ, ಅದನ್ನು ಗುರುತಿಸಿದಾಗ ಮನುಷ್ಯನಿಗೆ ತನಗಿಂತ ಭಿನ್ನವಾದ ಅಸ್ತಿತ್ವವೊಂದರ ಅನುಭವ ಆಗಿರಲೇಬೇಕಲ್ಲ! ತನ್ನನ್ನು ಮೀರಿದ ಶಕ್ತಿಯೊಂದನ್ನು ಮನುಷ್ಯನೇ ಬೆಳೆಸಿಕೊಂಡ, ಅದಕ್ಕೆ ದೇವರು ಅಂತ ಕರೆದ. ತಾನು ಕಂಡುಕೊಂಡ ಆ ಶಕ್ತಿಯೇ ಇಡೀ ಜಗತ್ತಿನ ಸೃಷ್ಟಿಗೆ ಕಾರಣವೆಂದೂ ಹಾಗೂ ಅದರ ನಾದ ಮಾತ್ರದಿಂದಲೇ ಜಗತ್ತು ತನ್ನ ಲಯವನ್ನು ಕಂಡುಕೊಳ್ಳುತ್ತದೆಂದು ನಂಬಿದ. ಹಾಗೆ ಜಗತ್ತು ‌ನಡೆಯುವಾಗ, ಅದರೊಳಗೆ ನಡೆಯುವ ಎಲ್ಲ ಕಾರ್ಯಗಳನ್ನೂ ಆ ಶಕ್ತಿ ಈ ಜಗತ್ತಿನ ಸ್ಥಿತಿಯನ್ನು ಕಾಪಾಡುವುದಕ್ಕೆ ನಡೆಸುವ ಕೆಲಸವೆಂದೂ ಕರೆದ. ನಂಬುವುದಷ್ಟೇ ಅಲ್ಲದೇ, ತನ್ನ ನಂಬಿಕೆಗಳನ್ನೂ ಆರಾಧಿಸತೊಡಗಿದ. ದೇವರ ಜೊತೆ ಜೊತೆಗೆ ಗಣಗಳೂ ಹುಟ್ಟಿಕೊಂಡವು. ಎಲ್ಲವೂ ಒಂದು ಸಮತೋಲನದ ಪ್ರಕ್ರಿಯೆಯ ಭಾಗವೇ ಆದವು. ಜಗತ್ತಿನ ವಾಸ್ತುಶಿಲ್ಪಕ್ಕೆ ದೇವರು ಮತ್ತು ನಂಬಿಕೆಗಳು ಕೊಟ್ಟಷ್ಟು ಕೊಡುಗೆಯನ್ನು ಮತ್ತ್ಯಾವುದೂ ಕೊಟ್ಟಿಲ್ಲ.‌ ಬೇರೆ ಬೇರೆ ಕಲಾಪ್ರಕಾರಗಳು ಈ ಜಗತ್ತಿನಲ್ಲಿ ಹುಟ್ಟಿಕೊಂಡಿದ್ದಕ್ಕೂ ಈ ಎಲ್ಲಾ ನಂಬಿಕೆಗಳೇ ಮುಖ್ಯ ಕಾರಣ. ಇಂಥ ನಂಬಿಕೆಗಳೇ ವಿಶ್ವದ ಬೇರೆ ಬೇರೆ ಸಂಸ್ಕೃತಿಗಳನ್ನು ಹುಟ್ಟುಹಾಕಿದವು. ಈ ಸಂಸ್ಕೃತಿಗಳೇ ಮನುಷ್ಯನ ಬದುಕನ್ನು ಕಲಾತ್ಮಕವಾಗಿಸಿದವು. ನಂಬಿಕೆಗಳು ಬದುಕಿಗೆ ನೆಮ್ಮದಿ, ಧೈರ್ಯ, ಸಂಸ್ಕಾರ, ಆತ್ಮ ಸಂತೃಪ್ತಿಯನ್ನು ಕೊಟ್ಟವು. ನಂಬಿಕೆಗಳನ್ನು ಪ್ರಶ್ನಿಸುವುದನ್ನೂ ಇದೇ ಸಂಸ್ಕೃತಿ ಹೇಳಿಕೊಟ್ಟಿತು. ಪ್ರಶ್ನಿಸುವುದಕ್ಕೂ ಹೀಗಳೆಯುವುದಕ್ಕೂ ವ್ಯತ್ಯಾಸವಿದೆ. ಭಾರತ ಯಾವತ್ತಿಗೂ ಅನ್ವೇಷಕರ ನಾಡು. ಇದಮಿತ್ಥಂ ಅನ್ನುವ ನಂಬಿಕೆಯಿಂದ ಶುರುವಾಗಿ ಆ ನಂಬಿಕೆಗಳ ಪರಿಧಿಯನ್ನು ಮೀರಿ ಉತ್ತರ ಹುಡುಕುವ ಸಂಸ್ಕೃತಿ ಭಾರತದ್ದು. ಹೀಗೆ ಹುಡುಕುವ ಪ್ರಕ್ರಿಯೆಯಲ್ಲಿ ಒಂದಷ್ಟು ಆಚರಣೆಗಳು, ಪದ್ಧತಿಗಳೂ ರೂಪುಗೊಳ್ಳುತ್ತವೆ. ಅವೇ ಪರಂಪರೆಯಾಗಿ ಮುಂದುವರೆಯುತ್ತವೆ. "ಅರೇ, ಮನುಷ್ಯ ಹುಟ್ಟಿದ ಮೇಲಲ್ಲವಾ ಇವೆಲ್ಲಾ ಆಗಿದ್ದು?" ಅಂತ ಪ್ರಶ್ನಿಸಬಹುದಷ್ಟೇ, ಆದರೆ ಮನುಷ್ಯ ಪ್ರಪಂಚ ಹುಟ್ಟುವುದಕ್ಕೂ ಮೊದಲು ಏನಿತ್ತು? ಮನುಷ್ಯ ಪ್ರಪಂಚವೇ ಪೂರ್ತಿ ಕಣ್ಮರೆಯಾದ ಮೇಲೆ ಏನು ಉಳಿಯಬಹುದು? ಇವೆಲ್ಲಕ್ಕೂ ಏನೇನೋ ಊಹಿಸಿಕೊಂಡು ಉತ್ತರಿಸಬಹುದು ಬಿಟ್ಟರೆ, ನಿಖರವಾದ ಉತ್ತರ ಹೇಳುವುದಾದರೂ ಹೇಗೆ ಸಾಧ್ಯ? ಇಂದ್ರಿಯಗಳ ಅನುಭವದ ಪರಿಧಿಗೆ ನಿಲುಕದೇ ಇರುವುದನ್ನು ವ್ಯಂಗ್ಯ ಮಾಡುವ ಬದಲು, ಆ ಅನುಭವ ನಮಗಿನ್ನೂ ಆಗಿಲ್ಲ ಅಂತ ಒಪ್ಪಿಕೊಳ್ಳುವುದೇ ಹೆಚ್ಚು ಪ್ರಾಮಾಣಿಕತೆ. ತನಗಿಂತ ಹೆಚ್ಚು ಬಲಾಢ್ಯವಾದ ಯಾವುದೋ ಶಕ್ತಿ ತನ್ನನ್ನು ಕಾಯುತ್ತದೆ ಅನ್ನುವ ನಂಬಿಕೆಯಿಂದ ಮನುಷ್ಯ ಅಸಾಧ್ಯಗಳನ್ನು ಸಾಧ್ಯವಾಗಿಸಬಲ್ಲ‌. ಅದು ನಂಬಿಕೆಗೆ ಇರಬಹುದಾದ ಹರವು. 


ಜಗತ್ತಿನೆಲ್ಲೆಡೆಯೂ ಮನುಷ್ಯರ ಕತೆಗಳು ಒಂದೇ ಥರವೇ. ಆದರೆ, ಯಾವಾಗ ಆ ನೆಲದ, ಆ ಪರಿಸರದ ಭಿನ್ನತೆಗಳು ಕತೆಯಾಗುತ್ತವೆಯೋ ಆಗ ಅವು ಹೊಸ ಆಯಾಮವನ್ನು ಕತೆಗೆ ಒದಗಿಸುತ್ತವೆ. ಹಾಗೆ ಹುಟ್ಟಿಕೊಂಡ ಕತೆಗಳು ಒಟ್ಟೊಟ್ಟಿಗೆ ಜಾಗತಿಕವೂ, ಪ್ರಾದೇಶಿಕವೂ ಆಗುತ್ತವೆ‌. ಒಂದು ಕತೆ ಏಕತಾನತೆಯ ಹಾದಿಯಲ್ಲಿ ಸಾಗುವುದನ್ನು ತಪ್ಪಿಸುವುದೂ ಇದೇ ಪ್ರಾದೇಶಿಕತೆ. ಒಂದೇ ತೆರನಾದ ಕತೆಗಳು ಸಾಹಿತ್ಯದಲ್ಲಿ ಕಾಣುತ್ತಿವೆ, ಸಾಹಿತ್ಯ ನಿಂತ‌ ನೀರಾಗಿದೆ, ಅದೇ ಊರು ಅದೇ ಕೇರಿ, ಅದೇ ನಗರ ಅದೇ ಉದ್ಯೋಗ, ಇವಿಷ್ಟರ ಸುತ್ತಲೇ ಕತೆಗಳು ಮತ್ತು ಕಥಾ ಪಾತ್ರಗಳು ಸುತ್ತು ಹೊಡೆಯುತ್ತಿವೆ ಅನ್ನುವ ಆರೋಪಗಳ ಮಧ್ಯ, ನಾವು ನಿಜವಾಗಿಯೂ ಈ ನೆಲದ ಕತೆಗಳನ್ನು ಪೂರ್ತಿಯಾಗಿ ಹೇಳಿದೆವಾ ಅಂತ ನಮ್ಮನ್ನೇ ನಾವು ಪ್ರಶ್ನಿಸಿಕೊಂಡರೆ ಬಹುಶಃ ಇಲ್ಲ‌ ಅಂತಲೇ ಅನ್ನಿಸದಿದ್ದರೆ ನಾವಿನ್ನೂ ಕತೆಗಳನ್ನು ಗುರುತಿಸಬಲ್ಲವರಾಗಿಲ್ಲವೆಂದೇ ಅರ್ಥ. ಸಮೃದ್ಧ ಜೀವ ಸಂಕುಲವಿದ್ದಲ್ಲಿ ಕತೆಗಳಿಗೆ ಬರವೇ! ಪ್ರಕೃತಿಯೊಂದಿಗೆ ಬದುಕು ಆರಂಭಿಸಿದ ಮನುಷ್ಯ ತಾನು ಮಾಡಿಕೊಂಡ ವ್ಯವಸ್ಥೆಗಳಲ್ಲಿ ಮನುಷ್ಯನೊಂದಿಗೇ ಬಿಕ್ಕಟ್ಟು ಸೃಷ್ಟಿಸಿಕೊಂಡ. ತಾನು ಶಕ್ತಿಶಾಲಿ ಅಂತ‌ ನಿರೂಪಿಸುವ ಭರದಲ್ಲಿ ಪ್ರಕೃತಿಗೂ ಎದುರಾಗಿ ನಿಂತ. ಆದರೆ, ದಾಹವಾದಾಗ ಕುಡಿಯಲು ಬೇಕಾಗುವ ನೀರು, ಹಸಿವಾದಾಗ ಬೇಕಾಗುವ ಆಹಾರವನ್ನು ಕೊಡುವ ಮಣ್ಣು, ಇವೆರಡಕ್ಕಿಂತಲೂ ಪ್ರತಿ ಕ್ಷಣ ಉಸಿರಾಡಲು ಅಗತ್ಯವಿರುವ ಗಾಳಿ ಇವುಗಳಲ್ಲಿ ಯಾವುದು ಕಲುಷಿತವಾದರೂ ಅದರಿಂದ ತನಗೇ ತೊಂದರೆ ಅನ್ನುವುದು ಮಾತ್ರ 'ತಾನೇ ಬುದ್ಧಿವಂತ' ಅಂದುಕೊಂಡ ಪ್ರಾಣಿಗೆ ತಿಳಿಯದೇ ಇರುವುದು ವಿಪರ್ಯಾಸ ಹಾಗೂ ಅದೇ ಸೋಜಿಗ. ಕೃತಕವಾಗಿ ಆಮ್ಲಜನಕ ತಯಾರಿಸಿ ಮಾರಾಟ ಮಾಡಿ ಅದೆಷ್ಟು ಹಣ ಮಾಡಬಹುದು ಅನ್ನುವ ಯೋಚನೆಯೇ ಹೆಚ್ಚು ಪ್ರಯೋಜನಕಾರಿ ಅಂತ ಅನಿಸದೇ ಹೋದರೆ ಅವ ಇಂದಿನ ಮನುಷ್ಯನೇ ಅಲ್ಲ;ಅವನಿಗೆ 'ಬದುಕುವ‌ ಕಲೆ'ಯೇ ಗೊತ್ತಿಲ್ಲ! ಆದರೆ, ನಮ್ಮ ಪೂರ್ವಿಕರಿಗೆ ಮನುಷ್ಯನ ಅಗತ್ಯತೆಗಳ ಅರಿವಿತ್ತು. ಹಾಗಾಗಿಯೇ ಅದೆಷ್ಟೋ ವಿಷಯಗಳನ್ನು ದೇವರ ಹೆಸರಿನಲ್ಲಿ ಕಾಪಾಡತೊಡಗಿದರು. ಉದಾಹರಣೆಗೆ 'ದೇವರ ಕಾಡು'. ಈ ಥರದ ಕಾಡುಗಳು ಇರುವುದರ ಮಹತ್ವದ ಅರಿವಿರದೇ ಹೋದರೆ, ಅದು ಮೂಢನಂಬಿಕೆಯಾಗಿ ಕಾಣುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಆದರೆ, ಅಂಥ ಕಾಡುಗಳೇ ಇಂದಿಗೂ ನಮ್ಮನ್ನೆಲ್ಲಾ ಪೊರೆಯುತ್ತಿರುವುದು. ನದಿ ಕೇವಲ ನಾಗರಿಕತೆಗಳ ತೊಟ್ಟಿಲು ಅಂತ ಓದಿ ಬಿಟ್ಟುಬಿಡದೇ, ದೇವರ ಸ್ಥಾನದಲ್ಲಿಟ್ಟು ಪೂಜಿಸುವ ನಾಡು ನಮ್ಮದು. ಮನುಷ್ಯನ ಬದುಕು ಸುಲಲಿತವಾಗಿ ನಡೆಯುವುದಕ್ಕೆ‌ ಅನುವು ಮಾಡಿಕೊಡುವ ಪ್ರಕೃತಿಯ ಎಲ್ಲ ಸಂಗತಿಗಳನ್ನೂ ಕೃತಜ್ಞತೆಯಿಂದ ಸ್ಮರಿಸುವ ಹಾಗೂ ಆ ಸ್ಮರಣೆಗಾಗಿ ಒಂದೊಂದು ಆಚರಣೆಯನ್ನು ಪೋಷಿಸಿಕೊಂಡು, ತಲೆಮಾರುಗಳಿಂದ ನಡೆಸಿಕೊಂಡು ಬಂದ ದೇಶ ನಮ್ಮದು. ಇಲ್ಲಿ ಕತೆಗಳು ಖಾಲಿಯಾದಾವೇ! 


ಇಷ್ಟೆಲ್ಲಾ ಬರೆಯುವುದಕ್ಕೆ ಕಾರಣ ಕಾಂತಾರ ಸಿನೆಮಾ. ಈ ಬರವಣಿಗೆಯ ಯಾವ ಅಗತ್ಯವೂ ಇಲ್ಲದಷ್ಟು ಸಿನೆಮಾ ಈಗಾಗಲೇ ಜನಸಮೂಹವನ್ನು ತಲುಪಿಯಾಗಿದೆ. ಈ ಬರವಣಿಗೆಯಿಂದ ಆ ಸಿನೆಮಾಕ್ಕೆ ಯಾವ ಲಾಭವೂ ಇಲ್ಲ. ಆದರೆ, ಸಿನೆಮಾ ನೋಡಿ ಅದರಿಂದ ಉಂಟಾದ ರಸಾನುಭೂತಿಯನ್ನು ಪದಕ್ಕಿಳಿಸುವ ಪ್ರಯತ್ನ ಮಾಡದೇ ಹೋದರೆ, ಬಹುಶಃ ಆ ಸಿನೆಮಾದ ಗುಂಗಿನಿಂದ ಹೊರಬರುವುದು ತುಸು ಕಷ್ಟವೇ ಆದೀತೇನೋ.. "ವರಾಹ ರೂಪಂ ದೈವ ವರಿಷ್ಠಮ್" ಅನ್ನುವ ಆ ಧ್ವನಿ ಈಗಲೂ ಕಿವಿಯಲ್ಲಿ, ಮನಸ್ಸಿನಲ್ಲಿ ಅನುರಣಿಸುತ್ತಲೇ ಇದೆ. ಸಿನೆಮಾದಲ್ಲಿ ಋಣಾತ್ಮಕ ಅಂಶಗಳೇ ಇಲ್ವಾ ಅಂತ‌ ಪ್ರಶ್ನಿಸಿಕೊಂಡರೆ ಬೇಕಾದಷ್ಟು ಸಿಗುತ್ತವೆ. ಕೆಲವು ಪಾತ್ರಗಳು ಮತ್ತು ಆ ಪಾತ್ರಗಳಿಗೆ ಇರಬಹುದಾದ ಸಾಧ್ಯತೆಗಳು ಅಥವಾ ಸಂದರ್ಭದ ತೀವ್ರತೆ ಅಷ್ಟು ಸಮರ್ಥವಾಗಿ ಕಟ್ಟಲ್ಪಟ್ಟಿಲ್ಲ. ಉದಾಹರಣೆಗೆ ಲೀಲಾಳ ತುಮುಲಗಳು. ಆದರೂ, ಯಾಕೆ ಸಿನೆಮಾ ಅಷ್ಟು ಇಷ್ಟವಾಯಿತು ಅಂತ‌ ಕೇಳಿದರೆ ಅದಕ್ಕೆ ಬಹಳಷ್ಟು ಕಾರಣಗಳು ದೊರೆತವು. ಸುಮ್ಮನೆ ನೆಪಕ್ಕಾಗಿ ಯಾವುದನ್ನೂ ಇಲ್ಲಿ ತುರುಕಿಲ್ಲ. ಈ ಥರದ ಸಿನೆಮಾಗಳಾಗಲೀ, ಸಿನೆಮಾದ ಅಂತ್ಯಗಳಾಗಲೀ ಬಂದೇ ಇಲ್ವಾ ಅಂತ ಕೇಳಿದರೆ, ಬಂದಿವೆ; ಸುಖಾಂತ್ಯದ ಭಾಗವಾಗಿ ಬಂದವುಗಳೇ ಹೆಚ್ಚು. ಆದರೆ, ಇಲ್ಲಿ ಅದು ಇಡೀ ಕತೆಯ ಭಾಗವಾಗಿ, ಇಡೀ ಕತೆಯೇ ಅಂಥದ್ದೊಂದು ಹಂದರದಲ್ಲಿ ಸಹಜವಾಗಿ ಬಂದಿದೆ‌. ಜೊತೆಗೆ, ಅದರ ತೀವ್ರತೆಯೂ ಪ್ರೇಕ್ಷಕರಲ್ಲಿ ಒಂದು ತೆರನಾದ ಭಾವೋತ್ಕರ್ಷಕ್ಕೆ ಕಾರಣವಾಗುತ್ತಿದೆ. ಅಲ್ಲಿನವರೇ ಆ ಕತೆಯನ್ನು ಹೇಳಿದಾಗ ಅದಕ್ಕೊಂದು ಸ್ವಂತಿಕೆ ಸಿಗುತ್ತದೆ. ಅದರಲ್ಲೂ ಇದು ಸಂಪೂರ್ಣವಾಗಿ ಜನಪದದ ಹಿನ್ನೆಲೆಯಲ್ಲಿ ಮೂಡಿಬಂದಿದ್ದರಿಂದ ಜನರಿಗೆ ಹತ್ತಿರವಾಗುವ ಗುಣ ಹೆಚ್ಚು. ಜನಪದ ತನ್ನ ಸೊಗಡು ಹಾಗೂ ನೈಜತೆಯಿಂದಾಗಿ ಯಾವತ್ತೂ ಜನಮಾನಸದಲ್ಲಿ ಔನ್ನತ್ಯವನ್ನು ತಲುಪುತ್ತದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ರಾಮಾಯಣ. ವಾಲ್ಮೀಕಿ ಮಹರ್ಷಿ ರಾಮಾಯಣವನ್ನು ಬರೆಯುವುದಕ್ಕೂ  ಮೊದಲಿಗೆ ರಾಮಾಯಣವನ್ನು ನಾರದರಿಂದ ಕೇಳಿದ್ದು ಜ‌ನಪದದ ಭಾಗವಾಗಿಯೇ. ಜನಪದದಲ್ಲಿ ಮುಗ್ಧತೆ, ಭಕ್ತಿ, ಧರ್ಮಪ್ರಜ್ಞೆ, ನಂಬಿಕೆ, ಗೌರವ, ಸಂಭ್ರಮ, ಸಂಸ್ಕಾರ, ದರ್ಶನ, ಮೌಲ್ಯ, ಪರಂಪರೆ, ಸಂಪ್ರದಾಯಗಳಿವೆ. ಹಾಗಾಗಿ ಜನಪದ ಗಟ್ಟಿಯಾಗಿ ಬೇರೂರುತ್ತದೆ. ಮನಸ್ಸುಗಳನ್ನು ಕಟ್ಟುತ್ತದೆ. 


ದಕ್ಷಿಣ ಕನ್ನಡದ ಕುರಿತು ಹೇಳುವಾಗ ಹೇಳಲಾಗುವ ಒಂದು ಮಾತನ್ನು ಗಮನಿಸಿದ್ದೇನೆ; 'ಅವಿಭಜಿತ ದಕ್ಷಿಣ ಕನ್ನಡ'. ಅಲ್ಲಿನ ನಂಬಿಕೆಗಳು, ಆಚರಣೆಗಳು, ಸಂಪ್ರದಾಯಗಳು ಹಾಗೂ ಅವೆಲ್ಲಕ್ಕೂ ಮೂಲವಾಗಿರುವ ದೈವಗಳು ಇಡೀ ದಕ್ಷಿಣ ಕನ್ನಡವನ್ನು ಒಂದಾಗಿ ಹಿಡಿದಿಟ್ಟಿವೆ ಅಂದರೆ ತಪ್ಪಾಗಲಾರದೇನೋ. ಹಾಗೆಯೇ, ದಕ್ಷಿಣ ಕನ್ನಡಕ್ಕೆ ಒಂದು ನಿಗೂಢತೆಯಿದೆ. ಆ ನಿಗೂಢತೆಯೇ ಅಲ್ಲಿನ ಆಚರಣೆಗಳಿಗೂ ಅಂಥದ್ದೊಂದು ಗುಣವನ್ನು ತಂದುಕೊಟ್ಟಿದೆ. ಅಲ್ಲಿನ ನಂಬಿಕೆಗಳೆಲ್ಲಾ ಕತೆ ಅಂದುಕೊಂಡವರಿಗೆ ಕತೆಯೂ ಹೌದು, ಸತ್ಯ ಅಂದುಕೊಂಡವರಿಗೆ ಸತ್ಯವೂ ಹೌದು. ಮನುಷ್ಯನ ಊಹೆಗೂ ನಿಲುಕದ ಅದೆಷ್ಟೋ ಘಟನೆಗಳಿಗೆ ಈ ನಾಡು ಸಾಕ್ಷಿಯಾಗಿದೆ. ನನ್ನನ್ನು ಯಾವುದೋ ಶಕ್ತಿ ನಿರಂತರವಾಗಿ ಕಾಯುತ್ತಿದೆ ಹಾಗೂ ಅದು ನಾನು ಅಧರ್ಮದ ದಾರಿ ಹಿಡಿಯದಂತೆ ಸದಾ ಎಚ್ಚರಿಸುತ್ತಲೂ ಇರುತ್ತದೆ ಅನ್ನುವ ಭಾವವೇ ಬದುಕಿಗೆ ಅದೆಷ್ಟು ನೆಮ್ಮದಿ ತರಬಲ್ಲದು. ಅದಕ್ಕಾಗಿಯೇ ಇಲ್ಲಿನ ದೈವಗಳು ದೇವಸಮಾನವಾಗಿ ಪೂಜಿಸಲ್ಪಡುತ್ತವೆ. ಒಂದು ನಿರ್ದಿಷ್ಟ ಕಾರ್ಯಕ್ಕಾಗಿ ದೇವರಿಂದ ಕಳುಹಿಸಲ್ಪಟ್ಟವುಗಳು ಇವು ಅನ್ನುವ ನಂಬಿಕೆಯೂ ಇದರ ಭಾಗವೇ. ಇಲ್ಲಿ ಮನುಷ್ಯರೂ ದೈವದ ಸ್ಥಾನಕ್ಕೇರಿದ ಉದಾಹರಣೆಗಳಿವೆ. ಭಾರತ ಧರ್ಮಭೂಮಿಯೂ ಹೌದು, ಕರ್ಮಭೂಮಿಯೂ ಹೌದು. 


ಈ ಚಿತ್ರ ಘೋಷಣೆಯಾದ ದಿನದಿಂದ ಕಾದು, ಸುಮಾರು ನಾಲ್ಕು ವರ್ಷಗಳ ನಂತರ ಚಿತ್ರಮಂದಿರಕ್ಕೆ ಹೋಗಿ, ಇಂಥದ್ದೊಂದು ಸಿನೆಮಾ ನೋಡುವ ಸಂಭ್ರಮವೇ ಬೇರೆ. ಸಿನೆಮಾ ನೋಡಿ ಆದ ಮೇಲೂ ಅದರ ಕುರಿತಾಗಿ ನಾನು ಬರೆಯಬೇಕು ಅಂದುಕೊಂಡಿದ್ದೆಲ್ಲವೂ ಸಪ್ಪೆಯೆನಿಸಿ, ಕಾದು ಕಾದು ಬರೆಯುವ, ಪದೇ ಪದೇ ಸಿನೆಮಾವನ್ನು ಕಣ್ಣೆದುರಿಗೆ ತಂದುಕೊಳ್ಳುವ ಈ ಅನುಭವ ಇದೆಯಲ್ಲಾ ಅದಕ್ಕಾಗಿ ಕಾಂತಾರ ಹತ್ತಿರವಾಗುತ್ತದೆ. ಪ್ರತಿಯೊಬ್ಬರಲ್ಲೂ ಒಂದು ಅನಿರ್ವಚನೀಯ ಅನುಭೂತಿಯನ್ನು ಹುಟ್ಟುಹಾಕುವುದು ಸುಲಭದ ಸಂಗತಿಯಲ್ಲ.  ಕಾಂತಾರ ಒಂದು ಪರಿಪೂರ್ಣ ಕಲಾಕೃತಿಯಲ್ಲ. ಆದರೆ, ಚೆಂದದ ಹಾಗೂ ಸ್ವಂತಿಕೆಯ ಕಲಾಕೃತಿ. ತನ್ನ ಅಪೂರ್ಣತೆಯನ್ನು ತಾನೇ ಮೀರುವ ಸಾಧ್ಯತೆಗಳನ್ನು ತನ್ನಲ್ಲಿಯೇ ಇರಿಸಿಕೊಂಡ ಕಲಾಕೃತಿ. ಕೆಲವು ಸೂಕ್ಷ್ಮ ಸಂಗತಿಗಳನ್ನು ಬಹಳ ಸೂಕ್ಷ್ಮವಾಗಿಯೇ ಹೇಳಿದ ಸಿನೆಮಾ. ಮನುಷ್ಯ ಮನುಷ್ಯರ ನಡುವಿನ ಅಂತಸ್ತುಗಳ ಭಿನ್ನತೆಗಳು ಹಾಗೂ ಪರಿ'ಶುದ್ಧ'ವಾದಾಗ ಉಂಟಾಗುವ ಸಮಾನತೆ ಇತ್ಯಾದಿಗಳನ್ನು ವಾಚ್ಯವಾಗಿಸದೇ ಹೇಳಿದೆ. ಸಿಂಗಾರ ಸಿರಿಯೇ ಹಾಡಲ್ಲಿ Manasi Sudhir  ಅವ್ರು ಶಿವ ಮತ್ತು ಲೀಲಾಳನ್ನು ನೋಡಿ ಒಳಗೊಳಗೇ ಖುಷಿಪಡುವ ದೃಶ್ಯ ಇದೆ. ಅದು ಬಹುಶಃ ಎಲ್ಲ ಅಮ್ಮಂದಿರ ಅಂತಃಕರಣದ ಪ್ರತೀಕ ಅಂತಲೇ ಅನಿಸಿತು. ಒಂದು ಊರಿನ, ಒಂದು ಭಾಗದ ಸಾಮಾಜಿಕ ಜೀವನವನ್ನು ಯಾವ ಪೂರ್ವಗ್ರಹದಲ್ಲಾಗಲೀ ಅಥವಾ ಸಿದ್ಧಾಂತದ ಪರಿಧಿಯಲ್ಲಾಗಲೀ ತೆರೆದಿಟ್ಟಿಲ್ಲ. 'ಆ‌ ಕಾಲಘಟ್ಟದಲ್ಲಿ ಹೀಗಿತ್ತು ಮತ್ತು ಇದು ಹೀಗಿದೆ' ಅನ್ನುವುದಷ್ಟೇ ಇಲ್ಲಿನ ಪ್ರಸ್ತುತಿ. ಚಿತ್ರದ ಕೊನೆಯಲ್ಲಿ ಇರುವ ಆಶಯವೂ ಅಷ್ಟೇ ಹೃದ್ಯವಾದದ್ದು. ಧರ್ಮ ಮತ್ತು ದೈವ ಇರುವುದು ಇದೇ ಕಾರಣಕ್ಕಾಗಿ ಹಾಗೂ ಇದೇ ಅವುಗಳ ಕೆಲಸ ಅನ್ನುವುದನ್ನು ಅದೆಷ್ಟು ಕಾವ್ಯಾತ್ಮಕವಾಗಿ ಹೇಳಲಾಗಿದೆ ಅಂದರೆ, ಅರಿವಿಲ್ಲದೆಯೇ ಕಣ್ಣಂಚು ಒದ್ದೆಯಾಗುತ್ತದೆ ಹಾಗೂ ಮನಸ್ಸು ಆಹ್ಲಾದಕ್ಕೊಳಗಾಗುತ್ತದೆ. ಕತೆ, ಕವಿತೆ, ಸಿನೆಮಾ ಯಾವುದರಲ್ಲೇ ಆದರೂ, ಅಷ್ಟೂ ಹೊತ್ತಿನ ಸಂಗತಿಗಳನ್ನು ಒಗ್ಗೂಡಿಸಿ, ಅದಕ್ಕೊಂದು ಸೂಕ್ತವಾದ ಅರ್ಥ ಕೊಡುವುದು ಅಂತ್ಯದ ಕೆಲಸ. ಹಾಗಾಗಿಯೇ ಅಂತ್ಯ‌, ಇಡೀ ಸಿನೆಮಾವನ್ನು ಕಟ್ಟಬಹುದು ಅಥವಾ ಕೆಡವಬಹುದು. ಕಾಂತಾರದಲ್ಲಿ ಅಂತ್ಯ ಇಡೀ ಸಿನೆಮಾಕ್ಕೆ ಬೇರೆ ನೆಲೆಯನ್ನೇ ಕೊಟ್ಟಿದೆ. ಇತ್ತೀಚಿನ ದಿನಗಳಲ್ಲಿ ಬಂದ ಸಿನಿಮಾಗಳು ಧರ್ಮ, ಆಚರಣೆ, ಸಂಪ್ರದಾಯಗಳ ಕುರಿತಾಗಿ ಇರಬೇಕಾದ ಸೂಕ್ಷ್ಮತೆಯನ್ನು ಕಳೆದುಕೊಂಡಿರುವುದೇ ಹೆಚ್ಚು. ಆದರೆ, ಈ ಸಿನೆಮಾದಲ್ಲಿ ನಮ್ಮ ನೆಲದ ಕತೆಯನ್ನು ಒಂದು ಆತ್ಮೀಯ ಕತೆಯಾಗಿಯೇ ಹೇಳುವ ಹಾಗೂ ಅದನ್ನು ಅಷ್ಟೇ ಗೌರವದಿಂದ, ಜತನದಿಂದ ಮುಂದಿಡುವ ಪ್ರಯತ್ನಕ್ಕೆ ಮನಸ್ಸು ತುಂಬಿಕೊಳ್ಳದೇ, ಪುಳಕಗೊಳ್ಳದೇ ಇರುವುದಾದರೂ ಹೇಗೆ ಸಾಧ್ಯ! 


"ವರಾಹ ರೂಪಂ ದೈವ ವರಿಷ್ಠಮ್..."

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ