ಶುಕ್ರವಾರ, ಮೇ 23, 2014

"ಹುಡುಕಾಟ...ನಿನ್ನೆದೆಯ ಬೀದಿಯಲಿ.."

    "ಹುಡುಕಾಟ...ನಿನ್ನೆದೆಯ ಬೀದಿಯಲಿ.."


ನಿನ್ನೆದೆಯ ಬೀದಿಯಲಿ ನಾನೊಬ್ಬ ಅಲೆಮಾರಿ
ನೂರು ಗೋಡೆಯ ನಡುವೆ ಸಿಗದೇ ಕಾಲುದಾರಿ..
ನಿನ್ನಾಸೆ ಸಂತೆಯಲಿ ನಾನೊಬ್ಬ ವ್ಯಾಪಾರಿ
ಮಾರುದೂರದಿ ಕುಳಿತು ಕರೆಯಲೇ ಹಲವು ಸಾರಿ..

ಮುಗಿಲು ಕರಗದ ಸಮಯ ಎತ್ತರದ ಹುಡುಕಾಟ
ಬರುವಿಕೆಯ ಬಯಕೆಯಲಿ ಈ ದಿನದ ಕೊನೆಯು..
ಹೊನಲ ಬರೆಯದ,ಬರಿಯ ಬಣ್ಣಗಳ ಭೂಪಟ
ಕನಸುಗಳ ನಾವೆಯಲಿ ಈ ಖಾಲಿ ಬಲೆಯು..

ಎಲ್ಲ ಸುಳಿವ ಅಳಿಸಿ ಕಾದಿಹೆಯಾ ಒಲವೇ
ಹವೆಯೊಳಗೆ ಬೆರೆತಿಹುದು ನೀ ಇರುವ ಅಮಲು..
ನನ್ನ ಆಗಮ ನೆನೆಸಿ ನಾಚಿಹೆಯಾ ಸೆಳವೇ
ನಿನ್ನೆದೆಗೆ ಮರಳುವೆನು ನಾ ಕಳೆದು ಇರುಳು..

ಎಲ್ಲ ಬಣ್ಣದ ಸನಿಹ ಬೆತ್ತಲೆಯ ಬಿನ್ನಹ
ನೆರಳಿನಲಿ ಮರೆಯಾಯ್ತು ಈ ದೇಹ ಕುಸುರಿ...
ದಿವ್ಯ ಮೌನದ ವಿನಹ,ಸುಡುವಾಗ ವಿರಹ
ಕೊರಳಿನಲಿ ದನಿಯಾಯ್ತು ಈ ಜೀವ ಲಹರಿ...

ಭ್ರಮೆಯೊಳಗೆ ಬೆಸೆದಿಹೆನು ಆ ಮೊದಲ ಏಕಾಂತ
ಅರಳಿಹುದು ಅದರೊಳಗೆ ಸ್ಪರ್ಶ ಮಂದಾರ..
ನನ್ನೊಳಗೆ ಹಸಿವಿಹುದು ನೀ ಅದರ ಸಂಕೇತ
ನಗುತಿಹನೇ ನಿಶೆಯೊಳಗೆ ಆ ಪಾರ್ಶ್ವ ಚಂದಿರ..

                               ~‘ಶ್ರೀ’
                                 ತಲಗೇರಿ

ಗುರುವಾರ, ಮೇ 1, 2014

"ನಿಶೆಯ ಕಂತು..."

    "ನಿಶೆಯ ಕಂತು..."


ನೆರಳ ಬೆಸೆಯುವಾ ರಾಗಸಂಜೆಯೇ
ನನ್ನ ಬೆರಳ ಸೋಕಿಸು ಒಮ್ಮೆ ಸನಿಹದಿ
ನನ್ನವಳ ಗುಳಿಯ ಕೆನ್ನೆಗೆ..
ಕೊರಳ ಬಳಸುವಾ ತೋಳ ಬಂಧವೇ
ಮೈಯ ನುಣುಪ ಅರಳಿಸು ಒಮ್ಮೆ ಪ್ರಣಯದಿ
ಕನಸುಗಳು ನಮಗೊಲಿವ ಗಳಿಗೆ...

ಹೆರಳ ಘಮದಲಿ ಹೊಸತು ಕದಿರು
ಸೆಳೆತ ನೂರಿದೆ ಅವಳ ಇದಿರು..
ಮಿಣುಕು ಬೆಳಕಲಿ ಅಲೆದಲೆದು ಉಸಿರು
ಬೆರೆಯುತಿದೆ ನಮ್ಮೊಳಗೆ ಒಂದೊಂದೇ ಚೂರು..

ಸರಿವ ಸಮಯದಿ ಸುರಿವ ಬಯಕೆ
ಅಳತೆ ಮೀರಿದ ಅದರ ಎಣಿಕೆ..
ಪುಳಕ ಕೊಳದಲಿ ನಡೆನಡೆದು ತನಿಖೆ
ತೆರೆಯುತಿದೆ ನಮ್ಮೊಳಗೆ ಜಲಬಿಂದು ಮಡಿಕೆ...

ಇರುಳ ಕಿಟಕಿಯ ಪರದೆ ತುಂಬ
ಚಂದ್ರ ಸುಳಿದ ಹೆಜ್ಜೆ ಗುರುತು..
ಸರಿಸುವಾಗ ಎಲ್ಲ ತೆರೆಯ ಬಿಂಬ
ಕರಗಿಹೋಯಿತು ತಾನೇ ನಿಶೆಯ ಕಂತು..

ನೆರಳ ನಡೆಸುವಾ ಉದಯ ದನಿಯೇ
ನನ್ನ ನೆನಪ ಪೋಣಿಸು ಒಮ್ಮೆ ಪಯಣದಿ
ಅವಳೆದೆಯ ಪಲುಕ ನಿನ್ನೆಗೆ...

                         ~‘ಶ್ರೀ’
                          ತಲಗೇರಿ