ಭಾನುವಾರ, ಫೆಬ್ರವರಿ 22, 2015

"ಭಿತ್ತಿ ಮೀರಿ"....

"ಭಿತ್ತಿ ಮೀರಿ"....

ಇಟ್ಟಿಗೆಯ ಪೇರಿಸಿಡಲು
ಭಿನ್ನವಾಗುವ ಹಂಬಲಕೆ
ಮೊದಲ ಮಜಲು...
ಎಲ್ಲ ದಿಕ್ಕಲೂ
ಕಲ್ಲ ಸಾಲಿಗೆ
ತಳವ ಕೊಡಲು
ಮನೆಯ ಮಧ್ಯವೇ
ಹುಟ್ಟುತಿಹವು
ಮತ್ತೆ ಗೋಡೆಗಳು...

ಕತ್ತಲೆಯ ಸಂಗ್ರಹಕೆ
ಬೆಳಕು ದಾಟದ ಹೊದಿಕೆ...
ತಪ್ತ ಬಯಕೆಯ ಝಳಕೆ
ಸಂದು ಸಂದಿಗೂ
ಬಿಸಿಯು ಸೋಕಲು
ಸದ್ದು ಮಾಡೀತೇ ಇನ್ನು
ಸ್ತಬ್ಧ ಕುರ್ಚಿಯಾ ಕೀಲು...

ಮುಗಿಲೆದೆಯ ಬಿಗಿಯು
ನೆರಿಗೆಯನು ಕರಗಿಸಲು..
ತೆರೆ ಕದವ,ಮಳೆ ಹನಿಯ
ಬೊಗಸೆಯಲಿ ಹಿಡಿದುಕೊಳಲು..
ಗರಿಗೆದರಿ ಹಬ್ಬಿಕೊಳಲಿ ಹಕ್ಕಿ
ಇಣುಕಿರಲು ಎಳೆಬಿಸಿಲು...
ತುಂಬಿಕೊಳಲಿ ಗೋಡೆಗಳ ಮೀರಿ
ರಂಗು ರಂಗಿನ ಬೆಳಕಿನೆಸಳು...

                                   ~`ಶ್ರೀ'
                                        ತಲಗೇರಿ

ಶನಿವಾರ, ಫೆಬ್ರವರಿ 7, 2015

"ವರ್ತಮಾನ..."

   "ವರ್ತಮಾನ..."

ಬಿಂದುವಿನ ಸೆಳೆತದಲಿ
ಪರಿಧಿಗೊಂದು ಅಸ್ತಿತ್ತ್ವ..
ಚೆದುರದಂತೆ ಚಲನೆಯಲಿ
ಅಂಟಿಕೊಂಡಿದೆ ಹದವ...
ಅಂತರದ ಕಾವಿಗೆ
ಸ್ವಂತವಾಗಿದೆ ಹೊಸ ಮೊರೆತ...

ಹೇಳಲಿಲ್ಲವೇ ನಿನಗೆ..
ನಿಂತ ನೀರಿಗೂ,ತೆರೆದ ಕವಲಿಗೂ
ಬೇರೆ ಬೇರೆಯದೇ ವಿನ್ಯಾಸ...
ಜೀಕುತಿರೆ,ಜೋಕಾಲಿ..
ಗಾಳಿಗೊರಗೆ,ಬಾನಾಡಿ..
ಬೆರಗ ತುಳುಕಿಸುವ ಆಗಸ...

ಕಂಡಿದ್ದೆ ನಿನ್ನೆಗಳಲಿ
ಬಣ್ಣ ಬಣ್ಣದ ಬುಗುರಿ;
ಅಂಗಳದ ತುಂಬೆಲ್ಲ
ದಾರಗಳು ಚೆದುರಿ...
ರಾತ್ರಿ ಇಟ್ಟ ಚುಕ್ಕಿಗಳಿಗೆ
ಚಂದ್ರ ಹರಡಿಹ ಮೌನ...
ಸ್ವಪ್ನಗಳ ಗುಡಿಸಲಿಗೆ
ಬಳಿದು ಇಡಲೇ
ವಾಸ್ತವಿಕ ಬಣ್ಣ...

                        ~‘ಶ್ರೀ’
                           ತಲಗೇರಿ