ಭಾನುವಾರ, ನವೆಂಬರ್ 17, 2013

"ಆಂತರ್ಯ ಭ್ರಮರ"...

       "ಆಂತರ್ಯ ಭ್ರಮರ"...

ಸಾಯುವುದೇ ಮತ್ತೆ ನನ್ನ ಕವಿತೆ
ಎದೆಯೊಳಗೆ ಬೇರಿದ್ದೂ,ಕೊನೆಯ ಗಳಿಗೆ
ನೆನಪೆಂಬ ಶೀರ್ಷಿಕೆಗೆ ಅವಸರವೇಕೆ
ಕಾಲುದಾರೀಲಿ ತುಸು ಹೋಗೋಣ ಜೊತೆಗೆ...

ಮತ್ತೆ ಮತ್ತೆ ಸತ್ತಿರುವೆ ಅಂತರದ ಕ್ಷಣದಿ
ಹುಟ್ಟುವಾ ಮುನ್ನವೇ ಎದೆಯೊಳಗೆ ಎಷ್ಟೊಂದು ಗೋರಿ!
ತಳೆದೊಂದು ಪೂರ್ಣ ಜನುಮ ಏಕಾಂತ ಗರ್ಭದಿ
ತಂಪಾದೆ ಇಂಪಾದೆ ಅಕ್ಷರದ ಆತ್ಮದಲಿ ಮೃದುವಾಗಿ ಜಾರಿ..

ಆ ಸಂದಿಗೊಂದಿಯ ಪ್ರಾಸಗಳ ಮೊರೆತ
ಹೊರನೋಟಕಿಂತ ಒಳಧ್ವನಿಯು ತಾನೇ ಅಪೇಕ್ಷಿತ
ಈ ಮೋಹ ವ್ಯಾಮೋಹ ಅಲಂಕಾರ ವ್ಯಾಕರಣ
ಕವಿಸಮಯ,ಎಲ್ಲಕ್ಕೂ ಹೆಚ್ಚು ನಿಜ ಅಂತಃಕರಣ..

ಸೌಂದರ್ಯ ಸಮರ ಈ ಜಗದ ಅಂಗಳದಿ
ಆಂತರ್ಯ ಭ್ರಮರ ಅರಸಿದೆ ಮತ್ತೆ ಮಧು ಬಿಂದು
ಕಾಲದಾ ಕುಲುಮೆಯಲಿ ಕರಗದಿರು ಕ್ಷಣ ಬಂಧಿ..
ಹೊಳಪಿನಾ ಬೆಳೆಯಾಗು,ಅರಳಿ ನೆರಳಾಗಿ ನಿಂದು..

ಸಾಯುವುದೇ ಮತ್ತೆ ಈ ಗಳಿಗೆ ಕವಿತೆ
ಆಗಾಗ ಸತ್ತು,ಆಗಾಗ ಹುಟ್ಟುವಾ ಚಂದ್ರನಂತೆ
ನಾನು ಜಗದೊಳಗೆ,ನನ್ನೊಳಗೆ ಮತ್ತೊಂದು ಸಂತೆ
ನನ್ನ ಕವಿತೆ ಕ್ಷಣ ಅತ್ತು,ಮತ್ತೆ ನಗುವ ಆ ಕಂದನಂತೆ..

                               ~‘ಶ್ರೀ’
                                 ತಲಗೇರಿ

ಭಾನುವಾರ, ನವೆಂಬರ್ 3, 2013

"ನಂಟು"..

     "ನಂಟು"...
            ...ನನಗೂ ನಿಮಗೂ ಅವನಿಗೂ...


ನನಗೂ ಆ ಮಳೆಗೂ ಏನೋ ಒಂಥರದ ನಂಟು
ನೆನಪುಗಳ ಜೊತೆ ಕಳೆವಾಗ ಆಗಾಗ
ತಂತಾನೇ ಕುಂತಲ್ಲೇ ಹನಿ ಉದುರುವುದೂ ಉಂಟು
ಮಳೆಬಿಲ್ಲ ಸೂಚನೆಯೇ ನನಗಿರದೆ ಒಮ್ಮೊಮ್ಮೆ
ಬಣ್ಣಗಳ ಜೊತೆಯಲ್ಲೇ ಇಣುಕುವುದು ಮಿಂಚು

ಕಪ್ಪನೆ ರಾತ್ರೀಲಿ ಗಗನದ ತುಂಬ
ಕಾಡುವುದು ಸತ್ತ ಚಂದಮಾಮನ
ಕಂಡರೂ ಕಾಣದ ಹೆಜ್ಜೆಯ ಗುರುತು
ನನ್ನೆದೆ ಬದಿಯ ಜಾಗದ ತುಂಬ
ಸುಡುವುದು ನನ್ನ,ನಿನ್ನೆಯ
ಮುಗಿದರೂ ಮುಗಿಯದ ನೋವಿನ ಕಂತು..

ಯಾರದೋ ಮಾತಿನ ಪಿಸುಪಿಸು ದನಿಯು
ಮೆಲ್ಲನೆ ಸೆಳೆವುದು ಗಮನವನತ್ತ;
ಕೇಳಿಯೂ ಕೇಳದ ವಿಷಯದ ಸುತ್ತ..
ಬಿಡದೇ ನಾಳಿನ ಕವಲಿನ ದಾರಿ
ಸುಮ್ಮನೆ ಎಳೆವುದು ಪಾದವನತ್ತ
ಮರೆತರೂ ಮರೆಯದ ಸಾವಿನ ಹುತ್ತ..

ನನಗೂ ಬೆಳಕಿಗೂ ಏನೋ ಒಂಥರದ ನಂಟು
ಇಷ್ಟೆಲ್ಲ ನಡೆವಾಗ ನಡುವಿನಲಿ ಆವೇಗ
ಆ ಮಿಂಚು ತಾ ಕೊಂಚ ಕಣ್ತೆರೆಸುವುದು ಉಂಟು
ನನಗೂ ನಿಮಗೂ ಅವನಿಗೂ ಎಲ್ಲಿಂದಲೋ ಗಂಟು
ತಿಳಿದರೂ ತಿಳಿಯದೇ ಬಿಟ್ಟರೂ ಬಿಡದೇ
ಸಾಗಿದೆ ಪಯಣ,ಬೇರಿನ ನೆರಳು ನೂರೆಂಟು..

                                  ~‘ಶ್ರೀ’
                                    ತಲಗೇರಿ

ಭಾನುವಾರ, ಅಕ್ಟೋಬರ್ 27, 2013

"ಪನ್ನೀರು"...

           "ಪನ್ನೀರು"...

ದೂರದಂಚ ದಿಗಂತದಿ ಬೆಳ್ಳಕ್ಕಿಗಳ ಸಾಲು
ತೋರುತಿದೆ ತೇಲುತಿರುವಂತೆ ರೇಷ್ಮೆಯ ಕೋಲು..
ತೆರೆಯುತಿದೆ ಬಾನು ತನ್ನೆಲ್ಲ ಆಂತರ್ಯ
ಹಂಚಿದೆ ಈ ಸಂಜೆಗೂ ಕೊಂಚ ಸೌಂದರ್ಯ..

ನಿನ್ನ ಹೆಜ್ಜೆ ಸುಳಿವು ನನ್ನೆದೆಗೆ ಸಿಕ್ಕಾಗ
ಬರಿದಾಯಿತು ಮೆಲ್ಲ ಎಲ್ಲ ಪರಿತಾಪ..
ನಿನ್ನ ಮುಂಗುರುಳು ನನ್ನ ನೋಡಿ ಸರಿದಾಗ
ಕರಗಿತೆಲ್ಲ ಕಾರ್ಮುಗಿಲ ಕಡು ಶಾಪ..

ಸ್ವಪ್ನಗಳಿಗೆ ಸೇತುವೆಯ ಕಟ್ಟು ಗೆಳತಿ
ಈ ಸಂಜೆ ಕಿರಣಗಳ ಹಗ್ಗ ಹೊಸೆಯುತ್ತ
ನನ್ನೆದೆಯೆ ಅಂಗಳದಿ ನಡೆದಾಡು ಗೆಳತಿ
ಅದಕಿರಲಿ ತಂಪು ಜಡಿಮಳೆಯ ಸಂಗೀತ..

ನನ್ನೆಲ್ಲ ಕನವರಿಕೆಗಳ ಸೇರು ಬಾ ಗೆಳತಿ
ಬಚ್ಚಿಟ್ಟ ಭಾವಗಳಿಗೆ ಕೊಡುತ ವಾಗ್ದಾನ..
ಇನ್ನೆಲ್ಲ ತಂಗಾಳಿಯು ನನದೇ ಗೆಳತಿ
ಅತ್ತಿತ್ತ ಸುಳಿಯುತಿರೆ ನೀ ಮೆಲ್ಲ ಪ್ರತಿಕ್ಷಣ..

ನಾನಿನ್ನು ಜೊತೆಗಿರುವೆ ಬಿರಿದ ಮಲ್ಲಿಗೆಯೆ
ಒರೆಸುವೆನು ಏನೇ ಇರಲಿ ನಿನ್ನ ಕಣ್ಣೀರು..
ಸಾವಿನ್ನು ನನಗಿಲ್ಲ ನೀ ಜೀವಸೆಲೆಯೇ
ಬೆರೆತಿರುವೆ ನೀನೇ,ಅಮೃತದ ಪನ್ನೀರು...

                                 ~‘ಶ್ರೀ’
                                   ತಲಗೇರಿ

"ಜೀವಗಂಗೆ"...

      "ಜೀವಗಂಗೆ"...

ಎದೆಯ ಪದರಿನಲ್ಲಿ ಸ್ವಪ್ನ ಚಿಗುರಿದ ಹಾಗೆ
ಮೊದಲ ಸಂಜೆಯಲ್ಲೇ ಬೆಳ್ಳಕ್ಕಿಗಳ ದಿಬ್ಬಣದ ಬೆಡಗು
ಸರಳವಾಗಿ ಬಿದಿರಿನಲ್ಲಿ ಸ್ವರವು ಸೃಜಿಸಿದ ಹಾಗೆ
ನನ್ನುಸಿರ ಕಂಪಿನಲೂ ನಿನ್ನ ಹೆಸರ ಇಂಪು ಕೂಗು

ಮಳೆಬಿಲ್ಲಿಗೆಲ್ಲ ಸೊಬಗು ಕೊಟ್ಟ ಬಣ್ಣ ನೀನು
ಆಗಲೇ ನಾ,ನಿನ್ನ ತುಂಬಿಕೊಂಡ ಆ ಚೂರು ಬಾನು
ಗಾಳಿಗೆಲ್ಲ ಬಾಗಿ ನುಲಿವ ಚಿಗುರು ಹುಲ್ಲು ನೀನು
ಒರಗು ಬಾ,ಎದೆಯ ಕೊಡಲೇ ಭೂಮಿಯಂತೆ ನಾನು..

ಹರಡಿಕೊಳುವೆ ಹೂವಿನಂತೆ ನಿನ್ನ ಹಾದಿಯುದ್ದ
ಸೋಕಿಹೋಗು ಕೊಂಚಕೊಂಚವೇ ಮೃದುಲ ಪಾದ..
ಹಾಗೇ ಮೆಲ್ಲ ಹಂಚಿಹೋಗು ನನಗೂ ಸ್ವಲ್ಪ ರಂಗು
ಮತ್ತೆ ಮತ್ತೆ ತುಂಬಿಕೊಳಲಿ ಕ್ಷಣವೂ ನಿನದೇ ಗುಂಗು..

ಸರಣಿ ಸ್ವಪ್ನಗಳ ಬೇಲಿಯುದ್ದ ಸಾಲುದೀಪ
ಪರಿಚಯಿಸು ಅವಕೂ ನಾನು ತುಂಬ ಪ್ರಾಮಾಣಿಕ..
ನಾನಿಡಲೇ ಒಂದೆರಡು ನಾಜೂಕು ಚುಕ್ಕಿಗಳ
ಸಣ್ಣ ಜೋಳಿಗೆಯ ಹೊತ್ತ ನಾನೊಬ್ಬ ಪ್ರಯಾಣಿಕ..

ಕಾಡದಿರು ನೀನು ಬಿಸಿಲುಗುದುರೆಯ ಹಾಗೆ
ಮರಳುಗಾಡಲು ನೀನೇ ಭರವಸೆಯ ಜೀವಗಂಗೆ!..
ಕ್ಷಣವೆಷ್ಟೇ ಕಳೆದರೂ ತೆರೆದಿಹುದು ಬಾಗಿಲು
ಸುಪ್ತವಾಗಿ ಸೇರು ಬಾ ನಿನಗೆಂದೇ ಕಾದಿರುವ ಒಡಲು..


                                 ~‘ಶ್ರೀ’
                                   ತಲಗೇರಿ

ಭಾನುವಾರ, ಅಕ್ಟೋಬರ್ 6, 2013

"ಗೆಲುವು"....

          "ಗೆಲುವು"....

ಈ ತೀರದ ಒಂಟಿ ದೋಣಿಯೊಡೆಯ
ಎತ್ತಹೋಗಿಹೆ ನೀ ಬಿಟ್ಟು ದೋಣಿಯ
ಆ ತುದಿಯ ದಂಡೆ ತಲುಪಬೇಕಿದೆಯೀಗ
ಮರಳುವೆಯಾ ನೀ ನಾವಿಕನೇ ಬೇಗ..

ಮೌನವಿದೆಯೇಕೋ ಹೊರ ಪದರದಲಿ..
ಬೆಳ್ಳಕ್ಕಿಗಳ ಬಿಂಬ ತುಂಬುತಿದೆ ಕಣ್ಣಲ್ಲಿ..
ಅಲೆಗಳೇಳುವ ಮುನ್ನ ಮತ್ತೆ ಆಳದಲಿ
ಕೂಡಿಬಿಡು ನನ್ನ ಇನ್ನೆರಡು ಕ್ಷಣಗಳಲಿ..

ಸುಪ್ತ ತೆರೆಗಳನೆಲ್ಲ ಸಂಬಾಳಿಸುವೆ ನೀನು
ಹುಟ್ಟುವಲೆಗಳಿಗೆಲ್ಲ ಮೂಲ ನಾನೇನು?!
ತಪ್ತ ಮನಕೆ ಒಮ್ಮೆ ಶಾಂತನಾಗಿ ಬಂದುಸೇರು
ಅಲೆಯದಿರು ನೀನು ಅಲೆಯಂತೆ ಜೋರು!!..

ಸೆಳೆತ ಎಲ್ಲಿಹುದೋ ತಿಳಿಯೆ‘ನಲ್ಲ’!
ಬರಿಯ ಮಿಡಿತವದು ಮೆಲ್ಲ ಮೆಲ್ಲ..
ಹುಟ್ಟು ಹಾಕಲಿ ಎಲ್ಲಿ ನಾ ಪ್ರತಿಸಲ
ತಲುಪಲಿ ಹೇಗೆ ಹಿಡಿದು ಒಂದೇ ಕವಲ..

ಕಾಯಲ್ಲವಿನ್ನು ನೀನೊಂದು ಭ್ರಮೆಯು
ವಾಸ್ತವದಿ ನನ್ನ ನಾ ನಂಬುವುದೇ ಗೆಲುವು..
ನನ್ನೆದೆಯ ಸುಳಿಯೊಳಗೆ ನಾನೇ ಪಯಣಿಗನು
ನಾವೆ ನನ್ನದು,ಇನ್ನು ನನ್ನಾತ್ಮ ನಾವಿಕನು

                               ~‘ಶ್ರೀ’
                                 ತಲಗೇರಿ

ಭಾನುವಾರ, ಸೆಪ್ಟೆಂಬರ್ 22, 2013

"ಅಲ್ಲಿ ತನಕ"..

"ಅಲ್ಲಿ ತನಕ"..

ಒಲವ ಪಯಣದಲಿ ನೀನು ನಾನು
ಕೈ ಹಿಡಿದು ನಡೆವಂಥ ಕನಸು
ಏಳು ಹೆಜ್ಜೆಗಳ ಜೊತೆಯ ಸಲಿಗೆಯನು
ಹಂಚುವೆಯಾ ನನಗೆ ಅಂಥ ಸೊಗಸು

ಮುಗಿಲ ಅಂಚಿನ ಹನಿಯೆರಡು
ಕೊಂಚ ಹಿತವೆನಿಸಬಹುದೇ ಈ ನೆಲಕೆ
ಮೊದಲ ಮಿಂಚಿನ ಸೆಳೆತ ಕುರುಡು
ಹೊಚ್ಚ ಹೊಸತು ಎನಿಸಿ,ತುಂಬು ಬಯಕೆ

ಇನ್ನೂನು ಸುಳಿದಿಲ್ಲ ಪ್ರೀತಿ ತಂಗಾಳಿ
ಕಾಯುತಿದೆ ಹುಲ್ಲು ಭೂಮಿಯೆದೆಗೆ ಒರಗಲು
ಕೆಣಕುತಿದೆ ಸಮಯ ತುಸು ಸತಾಯಿಸಿ
ಸರಿಯದೇ ಆ ನಿನ್ನ ಬಿಗುಮೌನ ಮುಂಗುರುಳು..

ಮೀಟೋ ಬೆರಳಿಗೂ,ತಂತಿ ಕೊರಳಿಗೂ
ಸ್ವರ ಬೆರೆವ ಸಲುವಾಗಿ ಅನುಬಂಧ
ಆ ನೆರಳು ಈ ನೆರಳು ಅಂತರದ ಕೂಗು
ಕರಗಿ ಹುಟ್ಟಲಿ ಮೆಲ್ಲ ಪಿಸುದನಿಯದೊಂದು..

ಮುಂದೆಂದೋ ಒಂದೇ ದಾರಿಯ ಬದಲು
ತಂತಾನೇ ಮೆಲ್ಲ ಹುಟ್ಟಿಕೊಂಡರೆ ಕವಲು
ಸೇರೋಣವಲ್ಲಿ ಮತ್ತೆ ನಾಳೆಗಳ ಕೊನೆಯಲ್ಲಿ
ಅಲ್ಲಿ ತನಕ ಗಾಳಿ,ಸದ್ದಿಲ್ಲದೆ ಸ್ಪರ್ಶವಾಹಿನಿ ಆಗಲಿ...

                                               ~‘ಶ್ರೀ’
                                                 ತಲಗೇರಿ

ತೊರೆಯದಿರು "ನೀರೇ"...

      ತೊರೆಯದಿರು "ನೀರೇ"...

ಕಿರುತೊರೆಯ ಕಲಕಲ ನಾದ
ಕಲ್ಲೆದೆಯ ಗರ್ಭದಲೂ
ತಂತಾನೇ ಚಿಗುರು ಸಂಭ್ರಮ..
ನೀ ತೊರೆಯದಿರು ‘ನೀರೇ’..
ಹರಿಯುತಿಹೆ ಈ ದಾರಿಯಲಿ
ಅದಕೂ ನೀ ತಾನೇ ರೂವಾರಿ..

ತಿಳಿದಿಲ್ಲ ನಿನ್ನ ಹುಟ್ಟಿನಾ ಗುಟ್ಟು
ಎಲ್ಲಿ ಬೆರೆಯುವುದೋ ಕೊನೆಗೆ
ಆ ನಿನ್ನ ಕೊನೆಯ ತೊಟ್ಟು..
ತುಂಬಿಹುದು ಮಾತ್ರ ಆ ತಂಪು ಸ್ಪರ್ಶ
ಜೀವಜೀವದ ತುಂಬ ತುಂಬ
ಜಿನುಗುತಿದೆ ಪ್ರೀತಿಯಾ ಅಂಶ
ನೀನೇನೇ ಅಂತರಂಗದಾ ಉತ್ಕರ್ಷ..

ಗುಪ್ತಗಾಮಿನಿಯೋ,ಸುಪ್ತ ಇನಿದನಿಯೋ
ಅಭಿಸರಣ ಸನ್ನಿಹಿತ ಭಾಮಿನಿಯೋ..
ಕಾಣದ ಒಡಲ ಬಂಧದ ಕವಲೋ
ಧ್ಯಾನದ ದಿವ್ಯ ತೇಜದ ಲಹರಿಯೋ...
ನೀ ತೊರೆಯದಿರು ನೀರೇ..
ಈ ತೊರೆಯ...ಸುಪ್ತ ತೆರೆತೆರೆಯ...


                              ~‘ಶ್ರೀ’
                                ತಲಗೇರಿ

ಭಾನುವಾರ, ಆಗಸ್ಟ್ 18, 2013

        "ಅಮ್ಮ"...

ಲಾಲಿ ಹಾಡಿನ ಇಂಪು ಜೀವದನಿ
ಬಿದಿಗೆ ಚಂದ್ರನಂದಕೆ ಅರಗಿಣಿ
ಎದೆತುಂಬ ತಿಳಿನೀರ ಕಡಲೆ
ಎಳನೀರ ತಂಪಿನಾ ಮೃದು ಮಡಿಲೆ..

ನಿನ್ನೆಗಳ ಸಂಗಾತಿ ನಾಳೆಗಳ ಸಂಪ್ರೀತಿ
ಈ ಕ್ಷಣದ ಹಸಿ ಉಸಿರು ನೀನಮ್ಮ..
ಸೋಲುವುದೇ ಸುಖವು ಬಲುಚೆಂದ ಸಂಗತಿ
ಹಣೆಗೊಂದು ಮುತ್ತಿಟ್ಟು ನೀ ಸಂತೈಸುವಾಗ..

ತೊದಲಿನಲೂ ಮುಗುಧತೆಯ ಕಾಣೋ
ಮೊದಲ ನಿಜ ಮನಸು ನಿನದು..
ಹಸಿವಿನಲೂ ನನ್ನ ನಗುವೆ ಸಾಕೆನ್ನೋ
ತ್ಯಾಗಭಾವ ಸಂಗಮ ಈ ಬಂಧು..

ತಂತಾನೇ ಮಿಡಿವ ಜೀವತಂತಿ
ನನ್ನೆದೆಯ ಸಂಭ್ರಮದ ಭಾವ ಮೀಟಿ
ಈ ಜಗದ ಚಿರ ಸೌಂದರ್ಯವತಿ..
ನೀ ತಾನೇ ನನ್ನೆಲ್ಲ ಕನಸುಗಳ ಮೇಟಿ..

ಜಗದೆಲ್ಲ ಕಾವ್ಯಗಳ ನಿಜ ನಾಯಕಿ
ಸೋಜಿಗದ ಜೀವನದ ಸಂಚಾಲಕಿ..
ಬೆರೆಯಬೇಕು ನಾ ನಿನ್ನ ಪ್ರೀತಿ ಕಡಲಲಿ
ಮತ್ತೆಂದೂ ಒಲವು ನೂರು ಕವಲಾಗದಂತೆ...

                                ~‘ಶ್ರೀ’
                                  ತಲಗೇರಿ

ಶುಕ್ರವಾರ, ಆಗಸ್ಟ್ 16, 2013

       "ಅವನಲ್ಲೂ"...

ಖಾಲಿ ಬಾನಿನ ಒಂಟಿ ಬಾನಾಡಿ
ಹಾರುತಿಹುದು ದೂರ ದಿಗಂತದೆಡೆಗೆ..
ಏಳುಬೀಳಿನ ಮುಗಿಲ ದೂಡಿ
ಕಳೆಯಬಹುದೇ ಗಾಳಿ ತಾನೇ ಬೇಗೆ..

ಬೆರೆತ ಏಕಾಂತಕೆ ಮೌನ ಬೇಕೆ
ಮರೆವ ನಿನ್ನೆಗೆ ಮತ್ತೆ ಶೃಂಗಾರ
ಹಳೆಯ ನೌಕೆಯ ತೇಲು ಯಾನಕೆ
ಹಗಲ ಬೆಳಕಲಿ ಪಂಜು ಬೀಸರ
ರುಜುವಿಹುದು ನನ್ನೆದೆಯ ಪುಟದಿ
ನೀನಿಟ್ಟ ಹೆಜ್ಜೆಗಳಿಗೆ ಅದುವೇ ಸಾಕ್ಷಿ..

ಮುಗಿಲ ಹನಿಗಳ ಏಕತಾನತೆ
ನೀನಿದ್ದ ಪ್ರತಿಕ್ಷಣವು ಹೊಸತು ಪಲುಕು
ನೀ ತೊರೆದ ಎದೆಯ ಅಬ್ಬರದ ಮೊರೆತ
ಕಲ್ಲನ್ನು ಸವೆಸುತಿದೆ ಭರತ ಅನವರತ
ಮಜವಿಹುದು ಆ ಕಡಲ ದಡದಿ
ಅರಳಿಹುದು ಹೂ ದೀರ್ಘ ನೆನಪ ಸೂಸಿ..

ಇರುಳ ಬಾನಲಿ ಹಳೆಯ ಬೇಸರ
ಕಳೆಯಬಂದಿಹ ಹಾಗೇ ಚಂದಿರ..
ಚದುರಿ ಅಲೆದಿಹ ಚುಕ್ಕಿಗಳ ಕರೆದು
ಬಿಡಿಸಬಯಸಿಹ ಅವಳ ಚಿತ್ತಾರ..
ಅವನಲ್ಲೂ ಹುಟ್ಟಿಹುದು ನೆನಪಿನಾ ಮಹಾಪೂರ..

                            ~‘ಶ್ರೀ’
                              ತಲಗೇರಿ

ಬುಧವಾರ, ಜುಲೈ 17, 2013

   "ತಿಳಿಸಂಜೆಯಾ ನವಿಲು"...

ನೀನೇ ಪಂಚಮ ನೀನೇ ಸಂಭ್ರಮ
ನೀ ತಾನೇ ತಿಳಿಮುಗಿಲ ಚಂದ್ರಮ..
ನೀನೇ ಮುಂಗಾರು ನೀನೇ ಆ ತೇರು
ನೀನೇನೇ ಎದೆತುಂಬಿದಾ ಪನ್ನೀರು..

ನೆರಳಿನಾ ಬಿಂದುಗಳ ಛಾಯೆ
ಬಿರಿದ ಮಲ್ಲಿಗೆಯ ಮೃದು ಬಾಲೆ
ನೂರಾರು ಭಾವಗಳ ಖನಿಯೆ
ತಂಪು ಕೊಳಲಿನಾ ರಾಗಮಾಲೆ..
ನೀ ತಾನೇ ತಿಳಿಸಂಜೆಯಾ ನವಿಲು
ನೀನೇನೇ ಮುಂಜಾನೆಯಾ ಹೊಂಬಿಸಿಲು..

ಬೆಳ್ಳಕ್ಕಿಗಳ ದಿಬ್ಬಣದ ಬೆಡಗು
ತನಿಗಂಪು ತಾರುಣ್ಯದ ತಳಿರು
ಸ್ವಪ್ನಗಳ ಕಂತುಗಳ ಸಿಹಿಗುಂಗು
ತಂತಾನೇ ಪುಳಕಿತವು ನವಿರು..
ನೀ ತಾನೇ ತಿಳಿಸಂಜೆಯಾ ನವಿಲು
ನೀನೇನೇ ಮುಂಜಾನೆಯಾ ಹೊಂಬಿಸಿಲು..

ನೀನೇ ಬಿಗಿಮೌನ ನೀನೇ ರತಿಧ್ಯಾನ
ನೀ ತಾನೇ ನನ್ನೆದೆಯ ಆಲಾಪನ..
ನೀನೇ ಮಂದಾರ ನೀನೇ ಶೃಂಗಾರ
ನೀ ತಾನೇ ಕಣಕಣದ ರಹ ಝೇಂಕಾರ...

                              ~‘ಶ್ರೀ’
                                ತಲಗೇರಿ

ಮಂಗಳವಾರ, ಜುಲೈ 16, 2013

        "ಸೆಳೆತ"..

ಜಾರದಿರಿ ನೆನಪುಗಳೇ ಇಂದು
ಕೆನ್ನೆಯಲಿ ಹಾಗೇ ಬಿಸಿ ಹನಿಗಳಾಗಿ
ಸುಡುವ ನಿನ್ನೆಗಳೇ ಸವೆಯದಿರಿ
ಮೌನದಲಿ ಹಾಗೇ ಸದ್ದಿಲ್ಲದಾ ಸದ್ದಾಗಿ..

ಮಳಲಿನಲ್ಲಿ ಬರೆವ ಹೆಸರು
ಬಂದುಸೋಕುವ ಅಲೆಗೆ ಸ್ವಂತ
ಕೊರಳಿನಲ್ಲಿ ಬೆಸೆದ ಉಸಿರು
ಉಸುರಲೇನೋ ಬಿಡದ ತುಡಿತ..

ಆರದಿಹ ದೀಪದಲಿ ಬೆಳಕು
ಛಾಯೆ ತೋರುವ ಮಾಯಾವಿ
ತಂತಿಗಳ ಮಿಡಿತದಲಿ ಪಲುಕು
ಕಲ್ಲೆದೆಯ ಕರಗಿಸುವ ಪಲ್ಲವಿ

ಕನಸಿನಲಿ ಕನಸಾಗಿ ಕನಸು
ಕನವರಿಸುವಾಗ ಬಿಡದ ಸೆಳೆತ
ಬಾರದಿಹ ನಿಜದ ಜೀವಕೆ
ಕವಿತೆಯಲಿ ಯಾಕೋ ಹುಚ್ಚು ಎಳೆತ..

ಸರಿದುಬಿಡು ಪದರಗಳ ಬುಡಕೆ
ಎದೆಯ ತೀರದ ಆಚೆ ದಡಕೆ..
ಸೋಕಬೇಕು ತಾಜಾ ಅಲೆಗಳು
ಗಾಳಿಯೊಡನೆ ಬೆರೆತು ಅಮಲು..


                      ~‘ಶ್ರೀ’
                        ತಲಗೇರಿ

ಸೋಮವಾರ, ಜುಲೈ 8, 2013

"ಋತು ಸರಿದು"...

        "ಋತು ಸರಿದು"...

ಸೃಜಿಸುತಿದೆ ಎದೆ ಹೂವ
ಪಕಳೆಗಳಲಿ ತನಿಗಂಪ ಪರಾಗ
ನಾಚುತಿದೆ ಮೃದುವಾದ
ಗಾಳಿಯಲೆಗಳಿಗೆ ತಂತಾನೇ ಅಂತರಂಗ..

ಮೆತ್ತನೆಯ ಆ ಸ್ಪರ್ಶ ಮತ್ತೇರಿಸುವಾಗ
ಮಾತಿಲ್ಲ ಮತ್ತೆಲ್ಲ ಕಂಪಿಸುವ ಮೌನ
ಬಿಸಿಯುಸಿರು ಕೊರಳೊಳಗೆ ಹರಿದಾಡುವಾಗ
ಮುಂದೆಲ್ಲ ಕ್ಷಣಗಳಲೂ ಬೆಚ್ಚನೆಯ ಧ್ಯಾನ..

ಅರೆಕ್ಷಣದ ಬಳಿಯಲ್ಲೇ ತುಸು ತಲ್ಲಣ
ಮರಳುತಿದೆ ಮತ್ತೆ ಭ್ರಮರದಾ ಝೇಂಕಾರ!
ನನ್ನೆದೆಯ ಮಧುವಲ್ಲೇ ಇಡೀ ಜೀವನ
ಅರಳುವುದು ಅಲ್ಲಿ ಸೃಷ್ಟಿ ಫಲ ಮಂದಾರ..

ಯಾಕಿಟ್ಟನೀ ಜಗದಲ್ಲಿ ಪರಬ್ರಹ್ಮ
ಹೂವೊಂದಕೆ ಯುಗದಲ್ಲಿ ಒಂದೇ ಜನುಮ  
ಋತು ಸರಿದು ಸುಕ್ಕಾಗುವಾಗ ಮೃದು ಚರ್ಮ
ಉದುರುವುದು ಬಿಡಿಬಿಡಿಯಾಗಿ ದಳಸಂಗಮ..

ಮಧುವೊಂದೇ ‘ಸಾವಿರದ’ ನಿಜ ಸಂಭ್ರಮ
ಮತ್ತೊಂದು ಜೀವದೆದೆಯಲ್ಲಿ ಮರುಮಿಲನ
ಎದೆತಂತು ಮಿಡಿವಾಗ ಮತ್ತೆ ಸಂವಾದ
ಕೊನೆಯಿರದ ಸ್ವಪ್ನಗಳ ಸಾಲಿನಲಿ ದಿನಗಮನ..

                                  ~‘ಶ್ರೀ’
                                    ತಲಗೇರಿ 

"ಕರಗಲಿದೆ ಛಾಯೆ"...

      "ಕರಗಲಿದೆ ಛಾಯೆ"...

ಬಿಸಿಯುಸಿರು ಕೊಸರುತಿದೆ ಒಳಗೆ
ಮಥಿಸುತಿವೆ ತುಮುಲಗಳು ಮೆಲ್ಲಗೆ..
ಸವರುತಿದೆ ಏಕಾಂತದ ಬಿಸಿಗಾಳಿ
ತುಂಬುತಿದೆ ಎಲ್ಲೆಲ್ಲೂ ಖಾಲಿ ಖಾಲಿ..

ಅರಳುವಾಗ ಹೂವಲ್ಲೂ ದಿವ್ಯ ಮೌನ
ಮುದುರುವಾಗ ಕೂಡ ಮತ್ತದೇ ಧ್ಯಾನ..
ಸೃಷ್ಟಿಕ್ರಿಯೆ ಸಂಗೀತ ಮೌನಮಿಳಿತ..
ಅಂತ್ಯ ಆದಿಗಳ ನಡುವೆ ಚೆಂದ ಏರಿಳಿತ..

ಬಿಂದುಗಳ ಸಂಧಿಯಲಿ ತುಂಬುಮೌನ
ತಂತಾನೇ ಜಾರೋ ಹನಿಗಳಿಗೂ ಮೌನಗಮನ..
ಕನ್ನಡಿಯಲಿ ಬಂಧಿಯಾದ ಬಿಂಬಗಳ ಒಳಗೂ
ಕಾಡುವುದು ನಾಳೆಗಳು ಉರುಳುವಾ ಕೊರಗು..

ಹುಟ್ಟಲಿದೆ ಮನಸಿನಲಿ ಮತ್ತೆ ತನನನ
ನೆನಪಿಸುತ ಬೆಳ್ಳಿಬಟ್ಟಲ ಚಂದ್ರಮನ..
ಕಡು ಮೌನ ಛಾಯೆ ಕರಗಲಿದೆಯಿನ್ನ..
ತುಂಬಲಿದೆ ಬೆಳಕ ಬೆತ್ತಲೆ ತುಂಡುಮೇಣ..

                              ~‘ಶ್ರೀ’
                                ತಲಗೇರಿ

"ಕರಗಬಲ್ಲದು ಮೇಣ"..

        "ಕರಗಬಲ್ಲದು ಮೇಣ"..

ಮನಸೇ..
ನಿನ್ನ ನಿರ್ದಿಗಂತ ಪ್ರಾಂಗಣದಿ
ಮೊಳಗುತಿದೆ ರಣದುಂದುಭಿ..
ಮತ್ತೆ ಕಹಳೆ..
ಸಾಲುಗಟ್ಟಿ ಸುತ್ತುವರೆಯುತಿವೆ
ಎತ್ತೆತ್ತ ಸೈನ್ಯಗಳು..
ಝೇಂಕಾರದ ನಡುವೆ
ರಣಧೀರ ನಾನಾ ಪಾರ್ಥ..!
ಬದಲಾಗುತ್ತಿವೆ ಅವೆಷ್ಟೋ ಸೈನ್ಯಗಳು..
ಮೊದಲಾಗುತ್ತಿವೆ ಇನ್ನೆಷ್ಟೋ ನೆನಪುಗಳು..
ಹೋರಾಟ ಶುರುವಾಗುವ ಮುನ್ನವೇ
ಶರಣಾಗುವ ಅನುಮಾನ,ಅವಮಾನ..!
ಧರ್ಮಯುದ್ಧವೇ ಇದು!
ಈ ಭೂಮಿಗ್ಯಾಕೆ ರಕ್ತ ಹೀರುವ ಬಯಕೆ!
ನನ್ನದೇ ಭಾವಗಳು..ಒಳ ಸಂಬಂಧಗಳು..
ಗಹಗಹಿಸುತಿವೆ..ನಿಂತಿಹೆ ನಾ ಹೇಡಿಯಂತೆ..
ಅಬ್ಬರಿಸಿ ಸಾಮ್ರಾಟನಾಗುವ
ಆ ಉನ್ಮಾದ ಅನುವಾಗಲಿಲ್ಲವೇಕೆ!
ನನ್ನೆಲ್ಲ ಕ್ಷಣದಿ ಜೊತೆಗಿದ್ದ
ಆ ಮೋಹ ವ್ಯಾಮೋಹ..
ಮತ್ತ ಪ್ರಮತ್ತ ಮದ..
ಮಧುಮಂಚದಮಲ ಲೋಭ..
ಹಾಸಿಗೆಯ ಮಡಿಕೆಯೊಳಗೆ
ಕೊಸರಿದ್ದ ಕಾಮ..
ಬಿಡುವಿನಾ ಕ್ಷಣಗಳಲಿ
ಹುಚ್ಚಂತೆ ಹಚ್ಚಿಕೊಂಡಿದ್ದ ಕ್ರೋಧ..
ಮತ್ತೆ ಸಿಗದ ಸೌಂದರ್ಯಕ್ಕುಕ್ಕಿದ ಮಾತ್ಸರ್ಯ..
ನನ್ನವೇ ಅಲ್ಲವೇ ಈ ಎಲ್ಲ ತಪ್ತ ಭಾವ!!..
ಇಲ್ಲಿಲ್ಲ ಯಾವ ಮಾಯಾವಿ,ಗೀತಾಚಾರ್ಯ..
ನಾನೇ ಸಾರಥಿ,ನಾನೇ ರಥಿಕ,ಆಂತರ್ಯದಿ ಒಳಪಾಕ..
ನಾನೇ ಆಚರಿಸಬೇಕೇ ಸೂತಕ!!
ಧರ್ಮನೆತ್ತರು ಬಸಿಯುವ ಬದಲು
ಬಿಸಿಯುಸಿರ ಕಣ್ಣೀರು ಜಾರುತಿದೆ ಮೊದಲು..
ನಿಲ್ಲಬಲ್ಲೆನೇ ನಾನು ನನ್ನವರ ಮುಂದೆ..?
ಗೆಲ್ಲಬೇಕಿದೆಯೇ ನಾನು ಈ ಸಂಬಂಧಗಳನ್ನೇ?
ಅರಿಗಳೋ,ಮೈತ್ರಿಯ ಸಿರಿಗಳೋ
ಅರಿಯದಾಗಿದೆ ಈ ಭಾರ ಮನಕೆ..
ಆಂತರ್ಯವಿದು ತಟ್ಟಿ ಪಿಸುಗುಡುತಿದೆ,
ವಿಜ್ರಂಭಿಸಿಬಿಡು ಸಮರದಿ..
ಪಲ್ಲವಿಸಲಿ ಜೀವೋನ್ಮಾದ,
ಪಾರ್ಥನಾ ಪಾತ್ರ ಬದಲಾಗುವ ಮೊದಲು!..
ಸಮರದೊಳು ಸರಿಯಲ್ಲ ನೀರಸ ಮೌನ..
ಪ್ರೀತಿಯಿದೆ ಸ್ನೇಹವಿದೆ ಅಲ್ಲೊಂದು ಧ್ಯಾನ!
ನಿನ್ನನ್ನೇ ನೀ ಗೆದ್ದುಬಿಡು..
ಕರಗಬಲ್ಲದು ತಂತಾನೇ ಮೇಣ..!!
ಮತ್ತೆಲ್ಲಿಯ ಚೈತ್ಯಯಾತ್ರೆ..ಅರ್ಥವಿಲ್ಲದ ಪಯಣ..
ನಿರ್ದಿಗಂತ ಪ್ರಾಂಗಣ,ಆಗ ತಾಜಾ ಹೂ ಬನ..


                                     ~‘ಶ್ರೀ’
                                       ತಲಗೇರಿ 

ಶುಕ್ರವಾರ, ಜುಲೈ 5, 2013

"ಗಗನ"....

          "ಗಗನ"....
ಮೋಡದ ಮನೆಯ ಚೆಂದದ ಮಹಲು
ಕಾಡುವ ಹನಿಗಳ ಸಾಲಿನ ಬಯಲು..
ಸುಳಿಮಿಂಚಿನ ಮೆರಗಂಚಿನ ಬಯಕೆ..
ಸತ್ಯ ಮಿಥ್ಯಗಳ ನಿತ್ಯ ಬೆತ್ತಲೆ ಭೂಮಿಕೆ..

ಕರಿಬಿಳಿ ಕನಸ ಮಿಲನದ ಜಾಗ
ಹಸಿಬಿಸಿ ಮನಸ ಪ್ರಣಯದ ಸೋಜಿಗ
ತಿಳಿಯದ ಅಗಲ,ಮುಗಿಯದ ಹಾದಿಯ ಬಂಧ
ಹೊಸ ಹೊಸ ಬೆಸುಗೆಗೂ ಸೋಕುವ ಸೃಷ್ಟಿಯ ಗಂಧ..

ಸಾವಿರ ಹೊಳಪಿನ ಸುಂದರ ಪರ್ವ
ಈ ಜಗಜೀವಕೆ ತುಸುಬೆಚ್ಚನೆ ಗರ್ವ
ಅರಳುವ ಮೇಘ,ಕರಗುವ ಭಾವದ ಸಮರ
ಕೊನೆಯಲಿ ಮತ್ತದೇ ಕಣ್ಣೀರಿನ ಹಸಿ ಪ್ರವರ..

ಆಸೆಗಳು ಒಂದೊಂದೇ
ತಾ ಮುಂದೆ ಎನುತಿರಲು
ಹಚ್ಚಿರುವೆ ಅವಕೂ ಸಾಲಿನಾ ಗೀಳು
ಉಸಿರಿಗೆಲ್ಲ ತುಸು ತುಡಿತವಿಟ್ಟು
ಎದೆಯ ತೆರೆದಿಹೆ ಗಗನ..
ಕಲೆಗಾರ ಸೋಕಿಸಿಹ ಅಲ್ಲೂ
ತನ್ನದೇ ಕುಂಚವನ್ನ,ಎದೆಯಂಚ ಪ್ರೀತಿಯನ್ನ..


                                    ~‘ಶ್ರೀ’
                                      ತಲಗೇರಿ

ಭಾನುವಾರ, ಮೇ 19, 2013


"ಕೊನೆಯ ಸಹಿ"...

ನನ್ನೆದೆಯ ಒಲವು ಆ ದಿವ್ಯ ಕಡಲು
ನಿನಗೆಂದೇ ಮೀಸಲು ಬಾ ಚಂದ್ರಿಕೆ
ನನ್ನೆದೆಯ ಪ್ರತಿಶಬ್ದ ನಿನ್ನ ಹೆಜ್ಜೆ ಕಾಗುಣಿತ
ನೀನೊಂದೇ ಕೊಳಲು ಈ ಬಡಜೀವಕೆ...

ಸಾಯುವುದು ಸಾವು ನಿನ್ನ ಕೈಯ
ಕೋಮಲತೆ ನನ್ನ ತುಸು ಸೋಕಲು
ತಣಿಯುವುದು ಕಾವು,ನಿನ್ನ ನೆರಳು
ನೆರಳಾಗಿ ನನ್ನಲ್ಲೇ ತಾ ಹಬ್ಬಿರಲು..
ಜೀಕು ಜೀಕು ಹೂವೆಸಳ ತೊಟ್ಟಿಲು
ಮತ್ತೆ ಬೇಕು ಎದೆಗರ್ಭದಾ ಲಾಲಿಸಾಲು..

ನೀನೊಂದು ಮೃದು ಮಳೆಸೊಲ್ಲು
ಮುದ್ದಾದ ಸ್ವಪ್ನಗಳ ಹೊಂಬಿಸಿಲು..
ನನದೆಲ್ಲ ನಾಳೆಗಳ ನೂರು ಬೆಳಕು
ನನ್ನ ಕೊರಳ ಅಲೆಅಲೆಯ ನೇಹ ಪಲುಕು
ಜೀಕು ಜೀಕು ಹೂವೆಸಳ ತೊಟ್ಟಿಲು
ಮತ್ತೆ ಬೇಕು ಎದೆಗರ್ಭದಾ ಲಾಲಿಸಾಲು...

ಆ ಚಂದ್ರ ಸರಿದಾನು
ತಾರೆಗಳ ಜೊತೆಯಲ್ಲಿ ಪರದೆಯೊಳಗೆ
ನನ್ನೆದೆಯ ಬಾಂದಳದ
ತಂಬೆಳಗು ತುಂಬಿರಲು ನಿನ್ನ ನಗೆಯೊಳಗೆ
ಜೋಪಾನ ಮಾಡುವೆನು ನಿನ್ನ ಗೆಳತಿಯೇ
ನನ್ನುಸಿರ ಕೊನೆಸದ್ದ ಸಹಿಯೆಂದೂ ನಿನಗಿರಲು...

                                         ~‘ಶ್ರೀ’
                                           ತಲಗೇರಿ

ಶನಿವಾರ, ಮೇ 18, 2013


"ಕನವರಿಕೆ ಕೊನೆಯಲ್ಲಿ"...

ಅಲೆ ಅಲೆಯಾಗಿ ಸೇರು ಬಾ ಚಂದ್ರಮ
ಮರೆಯಲ್ಲಿ ಅವಿತ ಅಭಿಸಾರಿಕೆಯ
ಹಸಿ ಮಳೆಯಾಗಿ ಇಳಿದು ಬಾ ಸಂಭ್ರಮ
ಎದೆಯಲ್ಲಿ ಬೆರೆಯೆ ಮೃದು ಪರಿಣಯ

ನೆರಳಲ್ಲಿ ಸೆರೆಯಾಗಿ ಮೌನ ಸಂವಾದ
ಕೊರಳಲ್ಲಿ ಕಂಪನದ ಚೆಂದ ಜಾದೂ..
ಬೆರಳಲ್ಲಿ ಬಲೆಯಾಗಿ ಕವಲ ಬಂಧ
ಮೂಡಿಹುದು ಆನಂದದ ಬಿಂದುವೊಂದು..

ನಾಚಿಕೆಯ ನೆಪದಲ್ಲಿ ಒನಪು ಅವಳಿಂದ
ಕನವರಿಕೆ ಕೊನೆಯಲ್ಲಿ ಸಣ್ಣ ಉಸಿರು..
ಯೌವನದ ಹೊಸ್ತಿಲಲಿ ಮನಸು ಮಕರಂದ
ಬಿಸಿಯಿರುವ ಎದೆಯಲ್ಲೂ ಹಚ್ಚ ತಳಿರು..

ಬಚ್ಚಿಡುವ ಬಯಕೆಗಳ ಎಣಿಕೆ ಒಳಗಿಂದ
ಹುಸಿ ಮುನಿಸ ಬಗಲಲ್ಲಿ ಮೆಲ್ಲ ಬೆವರು
ಕಟ್ಟಿರುವ ಗೆಜ್ಜೆಯಲೂ ಮಿಡಿತ ನಿನಗಂತ
ತುಸು ಕನಸ ಸೆರಗಲ್ಲಿ ಹಾಗೇ ಸವರು..

ಬರೆದಿಡುವೆ ನಿಮಿಷಗಳ ಮೀಸಲು ಪುಟದಲ್ಲಿ
ಎನುತಿಹಳೇ ಅವಳಿಲ್ಲಿ ನೆನೆದು ಚಂದ್ರಮನ
ಬಿಡಬಾರದೇ ಬಿಡಾರವನು ಅವಳೆಡೆ ಯಾನದಲ್ಲಿ
ಬೆರೆಯುತ್ತ ಒಲವಲ್ಲಿ ಕರಗಿ ಈ ಕ್ಷಣ..

                                      ~‘ಶ್ರೀ’
                                        ತಲಗೇರಿ

             "ದಿವ್ಯ ಸಂಭವ"...

ಮೆಲ್ಲ ಮೆಲ್ಲ ಎದೆಯ ತಾಕು
ಬಿಸಿಯ ಕರಗಿಪ ಮುಗಿಲ ಹನಿಯೆ
ಇಳೆಯ ಕೂಡ ಗುನುಗಬೇಕು
ಹಳೆಯ ಕತೆಯ ಹೊಸತು ದನಿಯೆ..

ಮುಗಿಲ ಎದೆಯ ಜೀವಕಣದಿ
ಹೊಸೆದು ಬೆಸೆದಿದೆ ನಿತ್ಯ ನೇಹವ
ಹಲವು ಕ್ಷಣದ ಬೆಸುಗೆ ಮೌನದಿ
ಒಲವ ಧ್ಯಾನದ ದಿವ್ಯ ಸಂಭವ..

ದಿನವು ಸೇರುವ ಬಯಕೆ ಹಸಿದು
ಸೋತು ಮುಲುಕಿತೇ ದಿಗಂತದಲಿ
ನೆಗೆದು ಜೀಕುವ ವಯಸು ಮುಗಿದು
ಉನ್ಮಾದ ಕರಗಿತೇ ಕಣ್ಣೀರಿನಲಿ!..

ತಪ್ತ ವಿರಹ ತಪದಿ ಬೆರೆತೀತೇ
ಋತುವ ಕಾಡುವ ಮಣ್ಣಗಂಧ..
ಆಪ್ತ ಕನಸ ಹೆಸರ ಕರೆದೀತೇ
ಕೊರಳ ಕೊಳಲು ಚೆಂದದಿಂದ...

ಮೆಲ್ಲ ಮೆಲ್ಲ ಇಳಿಯೇ ಬಿಂದುವೇ
ಕ್ಷಿತಿಯ ತನುವದು ಹಾಗೇ ಚಿಗುರಲು
ನೆನಪಿನಲ್ಲೇ ಮೊಗ್ಗ ತುಟಿಯು ಬಿರಿಯೆ
ನಾಳೆಗಳ ಸ್ವಾಗತಕೆ ತಾಜಾ ಹೂಗಳು

                                 ~‘ಶ್ರೀ’
                                   ತಲಗೇರಿ

ಬುಧವಾರ, ಏಪ್ರಿಲ್ 17, 2013


ಅವಳು‘ಜಗತ್ತಿನ ಸು೦ದರಿ’...‘ಮಮತೆಯ ಸಾಗರಿ’!!...

    "ಎ೦ದೆ೦ದೂ ಕ೦ದ ನುಡಿವ ಮೊದಲ ಮಾತು ಅಮ್ಮನೇ..ಅಮ್ಮ..ಅಮ್ಮ..ಅಮ್ಮ..ಎ೦ಬ ಪದವೇ ಒ೦ದು ಸು೦ದರ ಕಾವ್ಯ...ಅಮ್ಮ ಎ೦ಬ ರಾಗವೇ ಒ೦ದು ಮೋಹಿತ ರಾಗ..."ಎ೦ತಹ ಅದ್ಭುತ ಗೀತೆ!‘ಅಮ್ಮ’ಎ೦ಬ ಪದ ಕಿವಿಗೆ ಬಿದ್ದರೆ ಸಾಕು,ಮಗುವಿನ ಮನಸ್ಸು ನಲಿದಾಡುತ್ತದೆ..ಅಮ್ಮನನ್ನು ಕ೦ಗಳಿ೦ದ ನೋಡಿದರೆ,ಆ ಕ೦ಗಳಲ್ಲಿ ಪ್ರೀತಿ ತಾನುಕ್ಕಿ ಬರುತ್ತದೆ.."ಕೆಟ್ಟ ಮಕ್ಕಳು ಹುಟ್ಟಬಹುದು;ಆದರೆ ಕೆಟ್ಟ ತಾಯಿ ಹುಟ್ಟೋದಿಲ್ಲ"!ಇದು ಜಗದುಕ್ತಿ...ಭಾರತೀಯ ಸ೦ಸ್ಕೃತಿಯಲ್ಲಿ ತಾಯಿಗೆ ಅತ್ಯ೦ತ ಉನ್ನತವಾದ ಸ್ಥಾನವನ್ನು ನೀಡಲಾಗಿದೆ..ಎಲ್ಲ ಗ್ರ೦ಥಗಳನ್ನು ನಾವು ತಾಯಿ ರೂಪದಲ್ಲಿ ನೋಡುತ್ತೇವೆ..ಜೀವಮಾನವಿಡೀ ಹಾಲನ್ನು ನೀಡಿ ನಮ್ಮನ್ನು ಸಾಕುವ ಹಸುವನ್ನು ‘ಗೋಮಾತೆ’ಎ೦ದು ಕರೆದು ಆರಾಧಿಸುತ್ತೇವೆ..ನಮ್ಮ ನೆಲವನ್ನು ತಾಯಿ ರೂಪದಲ್ಲಿ ಕ೦ಡು,‘ಅಮ್ಮಾ, ಬ೦ಗಾರದ ಬೆಳೆ ಕೊಡು’ಎ೦ದು ಬೇಡುತ್ತೇವೆ..ತಾಯಿಯೇ ಹಾಗೆ..ಮಕ್ಕಳ ಮಾತಿಗೆ ಬೆಲೆ ಕೊಡುವವಳೂ ಅವಳೇ;ಮಣ್ಣಿನ ಕುವರರಿಗೆ ಬೆಳೆ ನೀಡೋದು ಅವಳೇ..
     ಹೆಣ್ಣು...ಎ೦ದರೇ ವಾತ್ಸಲ್ಯದ ಪ್ರತೀಕ..ಅದರಲ್ಲೂ ತಾಯಿ ವಾತ್ಸಲ್ಯವೇ ಮೈದಾಳಿ ಬ೦ದ ದೇವತೆ..ಮಗು ಅತ್ತಾಗ ಎದೆಗಪ್ಪಿಕೊ೦ಡು,ನೆತ್ತಿಗೆ ಮುತ್ತು ಕೊಡುವವಳು ಅಮ್ಮನೇ...ಆಕೆಯ ಮನಸ್ಸು ಕುಸುಮ ಕೋಮಲ...ಹೃದಯ ಬಾನಿನ೦ತೆ ವಿಶಾಲ...ಆಕೆ ಮನೆಯ ನಾಲ್ಕು ಗೋಡೆಗಳನ್ನು ಬಿಟ್ಟು ಹೊರಗೆ ಬರದೇ ಇರಬಹುದು;ಆದರೆ ಆಕೆ ಇರದ ಸ್ಥಳವಿಲ್ಲ ಈ ಧರಣಿಯೊಳಗೆ...!ಶ೦ಕರಾಚಾರ್ಯರು..ಸನಾತನ ಧರ್ಮ ಪ್ರತಿಪಾದಕರು,ಸರ್ವಸ೦ಗ ಪರಿತ್ಯಾಗಿಗಳು;ತಾಯಿಗೆ ಕೊಟ್ಟ ವಚನವನ್ನು ಮರೆಯಲಿಲ್ಲ..ಇದು ತಾಯಿಯ ಮಹಿಮೆ..
     ಪುಟ್ಟ ಕ೦ದ ತಾಯಿಯನ್ನು ಅಗಲಿರುವುದು ಕಡಿಮೆ!ಆ ಮಗುವಿಗೆ ತಾಯಿಯೇ ಸರ್ವಸ್ವ..ಆ ಮಗುವಿಗೆ ತನ್ನ ತಾಯಿ ಸು೦ದರಿಯೋ,ಕುರೂಪಿಯೋ ಬೇಕಿಲ್ಲ..ಅದು ಬಯಸುವುದು ನಿಷ್ಕಲ್ಮಶ ಪ್ರೀತಿಯನ್ನು..ಅ೦ತಃಕರಣದ ಸೌ೦ದರ್ಯವನ್ನು..ಆ ಅ೦ತಃಕರಣವೇ ಇ೦ದೂ ತಾಯಿಗೆ ‘ಜಗದ ಶ್ರೇಷ್ಠ ವ್ಯಕ್ತಿ’ಯ ಪಟ್ಟವನ್ನು ಹಾಗೇ ಉಳಿಸಿದೆ.ಆದರೆ ಆಕೆಗೆ ಅದು ಬೇಕಿಲ್ಲ.ಆಕೆ ನಿಸ್ವಾರ್ಥಿ.ಅಮ್ಮಾ ಎ೦ದ ಕೂಡಲೇ ರೋಮಾ೦ಚನವಾಗುತ್ತದೆ...ಆಕೆಯ ಹೃದಯವೇ ವಾತ್ಸಲ್ಯದ ಶರಧಿ..ಅದಕ್ಕೆ೦ದೇ ಹೇಳೋದು ‘ಮಾತೃ ಹೃದಯಿ’..ಆ ಹೃದಯಕ್ಕೆ ಸ್ವಾರ್ಥ ಗೊತ್ತಿಲ್ಲ..ಪ್ರೀತಿಯಲ್ಲದೇ ಬೇರೇನೂ ಉಕ್ಕಲ್ಲ.ಶರಧಿಯ ನೀರು ಉಪ್ಪಾದರೂ,ಕೊನೆಗೆ ಕೊಡುವುದು ಬದುಕಲ್ಲಿ ಚೈತನ್ಯ ತು೦ಬುವ ಸಿಹಿಯಾದ ಮಳೆಹನಿಯನ್ನು..ನವ ವಸ೦ತದ ಕಲರವವನ್ನು...!!
     ಕ೦ಗಳಲ್ಲಿ ಬದುಕು ಕಟ್ಟಿಕೊಡುವ ಆಕೆಯ ಆ ಚೇತನದ ಶಕ್ತಿಯೆಷ್ಟು?ಸ್ವರದಲ್ಲೇ ಮನಸ್ಸು ಕದಿಯುವ ಆ ಪ್ರೀತಿಯ ಮೌಲ್ಯವೆಷ್ಟು?ಮಮತೆಯನ್ನೇ ತು೦ಬಿಕೊ೦ಡ ಆ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿದೆಯೇ?ಅದಕ್ಕೆ೦ದೇ ಆಕೆ ‘ಕರುಣಾಮಯಿ’..ಜೀವವಾಹಿನಿ...ನಿತ್ಯಗಾಮಿನಿ...ದೇವತೆಯ ಅವತಾರಿ...ಜಗತ್ತಿನ ಸು೦ದರಿ...ಮಮತೆಯ ಸಾಗರಿ...ಅಮ್ಮ೦ದಿರಿಗೆಲ್ಲಾ ನಮಿಸೋಣ ಒ೦ದು ಸಾರಿ..ಇದು ಎಲ್ಲ ತಾಯ೦ದಿರಿಗೆ ಅರ್ಪಣೆ..ಅಮ್ಮಾ ಎ೦ದೂ ನಗುತಿರು ಹಾಗೇ...ಬೆಸೆದುಕೊಳ್ಳಲಿ‘ಭಾವ ಹೂನಗೆ’!!......

                                                                                                               ~‘ಶ್ರೀ’
                                                                                                                ತಲಗೇರಿ

ಗುರುವಾರ, ಏಪ್ರಿಲ್ 11, 2013


       ""ನನಗೆ ಸ್ವಂತ"...

ನೀ ಕೊಟ್ಟ ಕನಸ ಸಾಲು ನೆರಳ
ಮನಸಲ್ಲೇ ಸಾಕುವೆನು ಇನ್ನು ಗೆಳತಿ
ನೀನಿಟ್ಟ ಒಲವ ದಾರಿ ಕವಲ
ಸವೆಯಲು ಉಸಿರೊಂದು ಬೇಕು ಗೆಳತಿ...

ನಿನ್ನ ಕಣ್ಣ ಅಂಚಲ್ಲಿ ಆ ಹನಿಯ ತವಕ
ಒರೆಸುತ್ತ ಕೂರುವೆನು ನಾನಿರುವ ತನಕ
ಮರೆಸುತ್ತ ಸಾಗುವೆನು ನೋವ ಗೆಳತಿ
ನಿನ್ನ ಕಣ್ಣ ಮಿಂಚಲ್ಲಿ ನಾ ಬೆರೆವ ತುಡಿತ
ಹಂಚಿಹೋಗು ಕೊಂಚ ಹೃದಯ ನನಗೆ ಸ್ವಂತ!...

ನನದೆನ್ನೋ ಬಾನಲ್ಲಿ ಆ ಮುಗಿಲ ಸೆಳೆತ
ಅರಸುತ್ತ ಮಳೆಬಿಲ್ಲ ಮುಗಿಯದಾ ಮಿಡಿತ
ಒಲವಿತ್ತು ತುಂಬುವೆಯಾ ಬಣ್ಣ ಗೆಳತಿ
ಎದೆಯೆನ್ನೋ ಬದಿಯಲ್ಲಿ ನೀ ಬರಲಿ ಎನುತ
ಹಂಚಿಹೋಗು ಕೊಂಚ ಹೃದಯ ನನಗೆ ಸ್ವಂತ!..

ಬರಲಿ ಬಿಡು ಬಿಸಿಲು ಬೆಳಕಿನಂತೆ
ಅರಳು ಮೆಲ್ಲಗೆ ಎದೆಯ ಮಲ್ಲಿಗೆ
ಸೋಕುತಿರಲಿ ಸುತ್ತ ಒಲವ ಸೌರಭ
ಗೆಳತಿ ನೀನು ನನಗೆ ಸ್ವಂತ....


                              ~‘ಶ್ರೀ’
                                ತಲಗೇರಿ

       "ಚೆಂದ ಹಂಗಾಮ"..

ನೀ ನನ್ನ ಗುರುತಿನ ಹೆಸರು
ನಾ ಹೇಗೆ ಮರೆಯಲಿ ನಿನ್ನ
ನೀ ನನ್ನ ಉಸಿರಿನ ಉಸಿರು
ನಾ ಹೇಗೆ ತೊರೆಯಲಿ ನಿನ್ನ..

ಎದೆಯಂದು ನಡೆಸಿತ್ತು ಖಾಲಿ ಜೀವನ
ಒಲವಲ್ಲೇ ನೀ ತುಂಬಿದೆ ಈ ಮೈಮನ..
ಸ್ವರವೊಂದು ಮಿಡಿದಾಗ ಬಹುಮೆಲ್ಲನೆ
ಜಾರಿತಲ್ಲೇ ಬರಿ ಏಕಾಂತ ಸುಮ್ಮನೆ..
ನೀನೆಂದೂ ಚೈತ್ರದಾ ಸಂಭ್ರಮ
ನನ್ನಎಲ್ಲ ಕನಸಿನಾ ಚೆಂದ ಹಂಗಾಮ...

ಮಿಂಚೊಂದು ಸುಳಿದಾಗ ತುಸು ಕಂಪನ
ಬಳಿಯಲ್ಲೇ ನೀ ಬಂದಂತೆ ಅನುಮಾನ..
ಹನಿಯೊಂದು ಇಳಿದಾಗ ಮೃದು ತಲ್ಲಣ
ಬಸಿರಲ್ಲೇ ನೀ ಬೆರೆತಂತೆ ಆ ಕ್ಷಣ..
ನೀನೆಂದೂ ಚೈತ್ರದಾ ಸಂಭ್ರಮ
ನನ್ನೆಲ್ಲ ಕನಸಿನಾ ಚೆಂದ ಹಂಗಾಮ..

ಅಳಬೇಕು ನಾನು ಸುಮ್ಮನೆ
ನಿನ್ನ ಬೆರಳು ಸೋಕಲೆಂದು ಮೆಲ್ಲನೆ..
ಬೀಸಿಬಿಡು ತುಸು ತಂಗಾಳಿ
ಸ್ಪರ್ಶ ಪಲುಕು ಸ್ಪಂದಿಸಲಿ ಘಮ್ಮನೆ..

                                    ~‘ಶ್ರೀ’
                                      ತಲಗೆರಿ

ಶನಿವಾರ, ಮಾರ್ಚ್ 23, 2013


     

          "ನವಿಲುಗರಿಯಾ ಮೃದು ಕುಂಚವೇ"..

           ಎಳೆ ಬಿಸಿಲ ತುಸು ನಾಚಿಕೆಯೇ
           ನಿನ್ನ ಕೆನ್ನೆಯಾ ಆವರಿಸಿದೆ
           ಮಳೆಬಿಲ್ಲ ಹೊಸ ಸಂಚಿಕೆಯೇ
           ನಿನ್ನ ರಂಗಿಂದ ಬರೆದಾಗಿದೆ

           ದಿನದಿನವು ನೀ ನಡೆದ ಮರುಕ್ಷಣವೇ
           ಮುತ್ತಿಟ್ಟು ಸವರಲೇ ನಿನ್ನ ಪಾದವ
           ಹಸಿ ಮನದಿ ನೀನೆಳೆದ ಬರಿರೇಖೆಯೇ
           ಅಚ್ಚಾಗಿ ಫಲಿಸಿದೆ ನಿನ್ನ ಭಾವವ
           ಕೊಂಚ ಕೊಂಚ ಸೋಕಿಹೋಗೇ
           ನವಿಲುಗರಿಯಾ ಮೃದು ಕುಂಚವೇ..

           ಮಧುಬನದಿ ನೀ ನಗುವ ಪರಿಮಳವೇ
           ಮತ್ತಾಗಿ ಸೋಕಿತು ನಿನ್ನ ಗುಂಗನು
           ಕದ ತೆರೆದು ನೀ ಕರೆಯೆ ಎದೆಮಂಚಕೆ
           ನಿಂತಲ್ಲೇ ಕರಗಿಸಿ ನನ್ನ ಸಾವನು
           ಕೊಂಚ ಕೊಂಚ ಸೋಕಿಹೋಗೇ
           ನವಿಲುಗರಿಯಾ ಮೃದು ಕುಂಚವೇ..

           ಸೆಳೆಮನವೇ ಹೊಸದಾಗಿ ತುಸುಬಯಕೆಯಾ
           ಮಳೆಬಿಸಿಲ ಬಗಲಲ್ಲಿ ಕನಸಾ ಪರಿಣಯ
           ಸುಳಿ ಒಲವೇ ಅಲೆಯಾಗಿ ಎದೆ ತೀರವ
           ತೊರೆ ಭ್ರಮೆಯ ಸರಕಿನ ಬರಡು ನೀರವ...


                                                  ~‘ಶ್ರೀ’
                                                    ತಲಗೇರಿ

ಶನಿವಾರ, ಫೆಬ್ರವರಿ 16, 2013


"ಕವಿಯಾಗಬೇಕಿದೆ ನಾನಿನ್ನು"...

ಏಕಾಂತವೇ ಸುಖವೆನುತಿರುವಾಗ
ಸಂಗಾತಿಯಾದೆ ಯಾಕೆ ನೀ
ಹೇಳದೇ ಯಾವ ಸಂಗತಿ
ಹೀಗೊಮ್ಮೆ ನಸುಮುನಿಸು ಬಂದಾಗ
ತಂಗಾಳಿಯಾದೆ ಯಾಕೆ ನೀ
ಬೇಕಂತಲೇ ಹುಟ್ಟಿತೇ ಈ ಪ್ರೀತಿ!..

ನೀ ನುಡಿವ ಕೊನೆಮಾತ
ಉಸಿರು ನಾನಾಗಬೇಕೆನಿಸಿದೆ
ಇನ್ನೇಕೆ ಅನುಮಾನ
ಉಸಿರಿನ್ನು ನಿನ್ನದೇ ಮುಗುಧೆ...
ನನ್ನೆದೆಯ ಪ್ರತಿಬಡಿತ
ಬೆಸೆದು ಹೊಸದಾಗಬೇಕೆನಿಸಿದೆ
ಇನ್ನೇಕೆ ಅನುಮಾನ
ಕನಸಿನ್ನು ನಿನ್ನದೇ ಕವಿತೆ..

ನೀ ಬಳಿಯೆ ಸುಳಿವಾಗ
ಸೆರಗಿನ ಬಿಸಿ ತಾಕಬೇಕೆನಿಸಿದೆ
ನಾನಿನ್ನು ನಿನ್ನವನು
ಮನಸಿನ್ನು ನಿನ್ನದೇ ಒಲವೇ..
ಬಣ್ಣಿಸಲು ನಿನ್ನ ಚೆಲುವ
ನಾನಿನ್ನು ಕವಿಯಾಗಬೇಕಿದೆ
ಇನ್ನೇನು ತಿಳಿಯೆನು
ನೀನಿನ್ನು ಪ್ರೀತಿಯಾ ಪದವೇ...

                          ~‘ಶ್ರೀ’
                            ತಲಗೇರಿ

ಶನಿವಾರ, ಫೆಬ್ರವರಿ 9, 2013


          "ಅದ್ವೈತ"
ಆಗ ತಾನೇ ಮಿಡಿವ ಕನಸಿನಲ್ಲಿ
ಬರಲೇ;ನಾನು ಆಗಂತುಕ..
ಬೀಗವಿಟ್ಟ ಎದೆಯ ಕೋಣೆಯಲ್ಲಿ
ಒಲವು,ಕಡಲಂತೆ ಭಾವುಕ..

ಕನಸ ಬಣ್ಣ ನೂರು ರಾಶಿ
ಬಿಳಿಯ ಪರದೆ ಹಾಗೇ ಹಾಸಿ
ಚೆಲ್ಲಲೇನು ಗಂಧ ಸೂಸಿ
ಬಿಟ್ಟುಬಿಡದೆ ಒಲವ ಹೂನಗೆ..

ಹಸಿರು ನಿನ್ನ ಒಲವ ಬಳ್ಳಿ
ಹಬ್ಬಿಕೊಳಲಿ ಹಾಗೇ ಸುರುಳಿ
ಕಾಯುವೆನು ಜತನದೊಡನೆ
ಒಣಗಗೊಡದೆ,ಖುಷಿಯ ನಾಳೆಗೆ..

ಮೊದಲ ಭೇಟಿ ಅದರ ಧಾಟಿ
ಹೊಸತು ಸ್ವರದ ಕಾವ್ಯ ಮಿಲನ
ಮೀಟಲೇನು ಎದೆಯ ತಂತಿ
ನಿಲ್ಲಗೊಡದೆ ರಾಗಮಾಲಿಕೆ..

ಬಳಿಯೆ ಸುಳಿಯಲೆ
ಹಿತದ ಅಲೆಯಾಗಿ ನಾನು ಸೋಕುತ..
ಬಿಂದು ಬಿಂದು ಬೆರೆಯಲು
ಒಂದೇ ನೆರಳಾಗಿ ಪ್ರೀತಿ ಅದ್ವೈತ..

                          ~"ಶ್ರೀ"
                            ತಲಗೇರಿ

ಗುರುವಾರ, ಜನವರಿ 31, 2013


     "ಮನ್ವಂತರದ ಲಾಲಿತ್ಯ"
ಈ ಸಂಜೆಯೇಕೋ ನೆನಪುಗಳ ಸಂತೆ
ಬಣ್ಣಗಳೆಲ್ಲ ನಿನ್ನ ಸ್ಪರ್ಶದಾ ಚಿತ್ರದಂತೆ..
ಸವಿ ತಂಗಾಳಿ ನಿನ್ನ ನಗೆಯ ಕಂಪು
ಹಕ್ಕಿಯಾ ಸುವ್ವಾಲಿ ನಿನ್ನ ಧ್ವನಿಯ ಇಂಪು..

ಈ ಸಮಯ ಜೋಡಿಸಿಟ್ಟ ಸಾಲು ನೆರಳು
ಕನಸುಗಳು ಹಲವಾರು ಅಲ್ಲಿ ಸೆರೆಯಾಳು..
ಕತ್ತಲು ಬೆಳಕಿನ ಭ್ರಮೆಯ ಸಂಗಮ
ನಗುತ ನಡೆದಿಹ ಎಲ್ಲ ತೊರೆದ ಜಂಗಮ...

ಗಿಡಗಳ ಬುಡದಲ್ಲಿ ನಿನ್ನೆಯ ಎಸಳುಗಳು
ಹೆಜ್ಜೆ ಕಾದಿಹ ಬಿಸಿಯುಸಿರ ಆ ಕ್ಷಣಗಳು..
ಅಲ್ಲೇ ದೂರದಿ ಮಧುರ ಮುರಳಿಗಾನ
ಅಲೆಯಲ್ಲಿ ಹಸಿಯಾದ ತೀರದ ಮಧು ಯೌವನ...

ಆ ಮನೆಯ ಕಂದನ ಅಳುವಿನಾ ಸದ್ದು
ಮತ್ತೆ ಮತ್ತೆ ರಮಿಸಲು ಅಮ್ಮನಾ ಮುದ್ದು..
ಮತ್ತೆಲ್ಲೋ ಗೋಡೆಯಲಿ ರಕ್ತದಾ ಕಲೆಯೆದ್ದು
ನಾನೇ ಎಂದಿದೆ ಬದುಕು ಸಾವಿನಾ ಜಿದ್ದು..

ಈ ಸಂಜೆಯೇಕೋ ನೆನಪುಗಳ ಸಂತೆ..
ಎದೆಯಲ್ಲಿ ಹುದುಗಿದ್ದ ವಿವಿಧ ಪದಗಳ ಕವಿತೆ..
ಎಲ್ಲಕ್ಕೂ ಇದೆ ಈ ಸಂಜೆಯಾ ಸಾಂಗತ್ಯ
ಸೃಷ್ಟಿಲಯನಾದ ಮನ್ವಂತರದ ಜೀವಲಾಲಿತ್ಯ...

                                        ~‘ಶ್ರೀ’
                                          ತಲಗೇರಿ

       "ಸ್ವಪ್ನ ತಂತಿ"
ಬೆಳ್ಳಿಮೋಡದ ಅಂಚಲ್ಲಿ
ನೀಲಿ ತಾರೆಯು ನೀನು
ಸುಪ್ತ ಮನದ ಸೀಮೆಯಲ್ಲಿ
ಗುಪ್ತ ಮೌನವು ನೀನು..
ಓ ಸ್ವಪ್ನ ಲಹರಿ..
ನಿನ್ನದೇ ಬಿಡಾರವು
ಮನವೆಂಬ ಈ ಅಲೆಮಾರಿ..

ಆಸೆಗಳ ಗೂಟಗಳಿಗೆ
ಚಿಗುರು ಸ್ವಪ್ನದ ಸೌರಭ
ಮಾಸಗಳ ಭಾಸಗಳಿಗೆ
ಮನೆಕೊಟ್ಟ ಬಣ್ಣದಾ ಕಂಬ..

ಹಿತವಾದ ಗಾಳಿಯಲಿ
ತೇಲುವ ರೇಷ್ಮೆಯ ತುಣುಕು
ಭ್ರಮೆಗಳಾ ಸಾಲಿನಲಿ
ಅಸ್ತಿತ್ತ್ವ ಪಡೆವ ಬದುಕು..

ಆತ್ಮದೊಲವ ಹಾದಿಯಲ್ಲಿ
ತೀರಿಹೋಗದ ಭಾವಮಹಾಯಾನ
ಜೀವಗಳ ಜೊತೆಯಲ್ಲಿ
ನಾಳೆಯೊಂದಿಗೆ ನಾಜೂಕು ಸಂಧಾನ...

ಹೇ ಕನಸೇ ನೀ ನನ್ನೆದೆಯ ತಂತಿ
ಮೀಟುವುದು ನಿನ್ನ ಅಲ್ಲಲ್ಲೇ ಮುಗ್ಧ ಪ್ರೀತಿ...

                                      ~‘ಶ್ರೀ’
                                        ತಲಗೇರಿ