ಬುಧವಾರ, ಜುಲೈ 30, 2014

"ಅಭಿಸಾರಿಕೆ..."

"ಅಭಿಸಾರಿಕೆ..."

ಕಾಲುದಾರಿಯಲಿ ಕಾದಿದ್ದ
ನವಿಲುಗರಿಯೊಂದು
ಗೊಲ್ಲನಾ ಕೊಳಲ ದನಿಯ
ಕತೆ ಹೇಳಿತ್ತು..
ತನ್ನ ನಲ್ಲನ ನೆನೆದು ಆಕೆ
ಬಿರಬಿರನೆ ನಡೆವಾಗ
ಕಾಲುಂಗುರದ ಮಿಡಿತಕ್ಕೆ
ತರಗೆಲೆಯೂ ತಾಳ ಹಾಕಿತ್ತು..

ಮುಂಗುರುಳನು ಮೆಲ್ಲನೆ
ತೂಗುವ ತಂಗಾಳಿಗೆ
ಬಿಸಿಯಾಯಿತು ಯೌವನ;
ಇದು ಚಳಿ ಸಂಜೆಯ ಚಾಳಿ..
ಅವಳೆದೆ ಪುಟದಾ
ಸಲಿಗೆಯ ಮೇಲೆ
ನಡೆದಿದೆ ಈಗ
ಬಣ್ಣ ಬಣ್ಣದಾ ಕುಂಚದ ಹಾವಳಿ..

ಚಂದಿರ ಎರವಲು ಪಡೆದ
ಅವಳಾ ಹೊಳಪನು
ನಾಚುತ ತಾನು...
ಮುಗಿಲದು ಮಂಟಪ ಕಟ್ಟಿತು,
ಹಬ್ಬಕೆ ಅಣಿಯಾಯಿತು
ಬೆರಗು ಮೌನದಿ ಬಾನು..

ಬೆಳದಿಂಗಳ ಲೀಲೆಗೆ
ಅವಳಾದಳು ನೈದಿಲೆ;
ಹೇಳದೆ ಕೇಳದೆ ಹಾಗೇ..
ಭ್ರಮರದ ಸ್ಪರ್ಶಕೆ
ಎರೆದಳು ತನ್ನಯ ಮಧುವ..
ಹವೆಯಲಿ ಈಗ
ಮಿಲನದಾ ಮೆರವಣಿಗೆ...

                               ~`ಶ್ರೀ'
                                   ತಲಗೇರಿ

ಮಂಗಳವಾರ, ಜುಲೈ 22, 2014

"ದಾರಿ..ತಂಬೂರಿ...ಅಲೆಮಾರಿ..."

"ದಾರಿ..ತಂಬೂರಿ...ಅಲೆಮಾರಿ..."

ಹೆದ್ದಾರಿಯಾ ಎದೆಯಲ್ಲಿ
ನೆನಪುಗಳಾ ನಡಿಗೆ
ಅಡಿಗಡಿಗೆ ಕಳೆದಿಹವು
ಒಂದೊಂದೇ ಗಳಿಗೆ..
ನಟ್ಟನಡುವೆ ಬಿಳಿಪಟ್ಟಿ
ಅಂತರದ ಓಟಗಳಿಗೆ..

ಬೇಲಿಗೂಟಗಳೆಲ್ಲಾ ಬಂಧಿ
ಬಾಂಧವ್ಯದ ತಂತಿಯಲಿ
ಬಿಸಿಲು ಬೆಸೆದಿರೋ ಹಾಗೆ
ಚಂದ್ರಮನ ತೋಳಲಿ..
ಬಿಂದು ಬಿಂದುವು ಬಂಧು
ಅಖಂಡ ಸೃಷ್ಟಿಯಲಿ...

ಹೆಜ್ಜೆಗುರುತುಗಳೆಲ್ಲ
ಪಳೆಯುಳಿಕೆಗಳಾಗಿಯೂ
ಒಳಗಾಗಿಲ್ಲ ಅಸ್ತಿತ್ತ್ವದ ಹಂಗಿಗೆ..
ಕಳಚಿಹುದು ಅಲ್ಲಲ್ಲಿ
ಹೊರಪದರ;ಆರದಾ ಗಾಯಕ್ಕೆ
ತೇಪೆ ಹಾಕಿದ ಮೇಲೂ
ತಕರಾರು ಎದೆಯೊಳಗೆ..

ದೂರದೂರಿನ ಕಾಲುದಾರಿಗೆ
ನಾನೊಬ್ಬ ದಾರಿಹೋಕ
ಉದುರುತಿಹ ಎಲೆಗಳಿಗೂ
ನನ್ನ ಸೋಕೋ ತವಕ..
ಬೆರಳ ಜೊತೆ ತಂತಿ ಸೇರಿಸಿ
ಹಸಿದ ಉದರದ ಕೂಗ
ಹಾಡಾಗಿಸಿದೆ ತಂಬೂರಿ..
ಎಲ್ಲ ದಾರಿಗೂ ಗಮ್ಯವೊಂದೇ!
ಕವಲುಗಳ ಕಲೆಹಾಕೋ
ನಾ...ಅಲೆಮಾರಿ..

                               ~`ಶ್ರೀ'
                                   ತಲಗೇರಿ

ಬುಧವಾರ, ಜುಲೈ 16, 2014

"ಮತ್ತೆ ಮೂಡುವ.."

"ಮತ್ತೆ ಮೂಡುವ.."

ಅಸ್ತಮಿತ ಆಸೆಗಳ
ಅಂತರಂಗದ ಬಣ್ಣಗಳು
ಕಳೆದ ಸಂಜೆಗೆ
ಮೆರಗು ನೀಡಿಹೋಗಿವೆ
ಅಸ್ತಮಕೂ ಮುನ್ನವೇ..

ಬಾನ ಹೆದ್ದಾರಿಯಲಿ
ತಾರೆಗಳೊಂದೊಂದು ಮೈಲಿಗಲ್ಲು
ಚಂದಿರನ ತೇರಿಗೆ..
ಕಾರಿರುಳ ನೆಳಲಿನಲಿ
ಕತೆಗಳೆಲ್ಲವೂ ಚೆದುರಿಹವು
ಅವರವರ ಪಾಲಿಗೆ..

ಬರೆಹವಾಗದೇ ಉಳಿದ
ನನ್ನದೆಯ ಬಿಡಿ ಭಾವಗಳ
ನಿಡುಮೌನದ ತರಹ;
ಬೀಸಣಿಕೆಯ ನಶೆಯಲ್ಲಿ
ತಂಪು ಕಂಡಿದೆ
ನಡುರಾತ್ರಿಯ ವಿರಹ...

ಮತ್ತೆ ಮೂಡುವ
ಅರುಣನಿಗೋ
ಬಣ್ಣಗಳ ಚಟ..
ಮಡಿಕೆಗಳ ಮಡಿಲಲ್ಲಿ
ನೆರಳಿನಾ ಆಟ..
ಕರಗಿಲ್ಲ ದ್ವಂದ್ವ
ಯಾವುದು ಸತ್ಯ;
ಕತ್ತಲೆಯ ನೆರವೋ..
ಇಲ್ಲಾ,ಬೆಳಕಿನಾಸರೆಯೋ...

                                ~'ಶ್ರೀ'
                                    ತಲಗೇರಿ

ಸೋಮವಾರ, ಜುಲೈ 14, 2014

"ಅನುಮಾನ ಬೇಡ..."

"ಅನುಮಾನ ಬೇಡ..."

ಕಾಗದವು ಹಸಿದಿಹುದು
ನೀಡಬೇಕಿದೆ ನಾನು
ಶಾಯಿ ಕಲಸಿದ ಕೈತುತ್ತು
ಒಣಗಿದಾ ಮಣ್ಣಿಗೆ
ತುಸು ತಂಪೀಯಬಹುದೇ
ಬರೆವ ನನ್ನ ಬೆರಳ ನೆರಳು....

ಏನು ಬರೆದರೂ ನಿನಗೆ
ಹಸಿವು ನೀಗಿದ
ಸಂತೃಪ್ತ ಭಾವ..
ಮತ್ತೆ ನನಗೆ
ಜೀವತಂತು ಮೀಟಿ
ತಾಯಾದ ಅನುಭವ..

ಈತನಕ ನನ್ನೊಳಗೆ
ಹೋರಾಡಿದಾ ಎಲ್ಲ
ತುಮುಲಗಳ ಭಾರವ
ಇಳಿಸಬೇಕು ನಿನ್ನೆದೆಗೆ
ತಿಳಿಯಬೇಕು ನೀನೂ
ಈ ಜಗದ ಸೋಜಿಗವ...

ಕೆದಕಬೇಕು ಈಗ
ನನ್ನೆದೆಯ ಸೂಕ್ಷ್ಮಗಳ
ಅಂತರಂಗದ ಸಾಕ್ಷ್ಯಗಳ...
ಅನುಮಾನ ಬೇಡ;
ನಿನ್ನೊಡಲ ಹಸಿವ
ತಣಿಸುವಾ ಸೆಲೆಯು..
ನಾನು ಕವಿಯು...

                     ~'ಶ್ರೀ'
                         ತಲಗೇರಿ

ಭಾನುವಾರ, ಜುಲೈ 13, 2014

"ರೇಖೆಗಳು ಕರಗುವ ಸಮಯ.."

"ರೇಖೆಗಳು ಕರಗುವ ಸಮಯ.."

ಮೆಲ್ಲನೆ ನಕ್ಕಿತು ಮಲ್ಲಿಗೆಯ ಹೂವೊಂದು
ಉದುರಿತು ಅದರಿಂದ ಚಂದ್ರನಾ ಚೂರೊಂದು
ಪರಿಮಳದ ಗಾಳಿಯಲಿ ಹಾರುತಿದೆ ನವಿಲುಗರಿ
ದಾರವನು ಸೇರುತಿದೆ ನಾಚುತಲಿ ಬುಗುರಿ...

ಶ್ರಾವಣದ ತಿಳಿಸಂಜೆ ಅಧರಗಳು ಬೆದರಿ
ಗೋಡೆಗಳು ನಿಂತಿಹವು ಒಳಗೊಳಗೇ ಬೆವರಿ..
ಬೀದಿದೀಪಕೆ ಕಳೆದ ಕಾರ್ಮುಗಿಲ ಕಡು ಶಾಪ
ಹವೆಯ ಕವಿದಿದೆ ಈಗ ಅವಳದೇ ಮೈಧೂಪ..
ನಾ ಬರೆದ ರೇಖೆಗಳು ಕರಗುವಾ ಸಮಯ
ಕಾಗದನ ಮನೆಯಲ್ಲಿ ಬಣ್ಣಗಳ ಪರಿಣಯ..

ಚಾದರದ ಚಿತ್ರದಲಿ ತಿರುವುಗಳ ಹುಡುಕಾಟ
ಮೇರೆಗಳಿಗೆ ಸಾಕ್ಷಿಯಿಲ್ಲಿ ಒಂದು ಹಳೆಯ ಭೂಪಟ..
ಭ್ರಮರದಾ ಸ್ವರದಲ್ಲಿ ಮಧುವಿನಾ ಗೊಣಗಾಟ
ಹೂವೆದೆಯ ಮೆದುವಿನಲಿ ನೆಟ್ಟಿರಲು ಬಾವುಟ...
ನಾ ಬರೆದ ರೇಖೆಗಳು ಕರಗುವಾ ಸಮಯ
ಕಾಗದನ ಮನೆಯಲ್ಲಿ ಬಣ್ಣಗಳ ಪರಿಣಯ..

ಕಮಾನು ಕಟ್ಟಿಹುದು ನನ್ನವಳ ಪಿಸುಮಾತು
ಹಾದಿಯಾ ಹಾಸಿಹುದು ಹರೆಯಕೆ,ಕಾಮನಾ ಸೇತು..
ಗಮ್ಯವದು ಮರೆತೀತೇ ರಮ್ಯ ರಸಗಳಿಗೆಯಲಿ
ಮತ್ಸ್ಯ ಮಿಥುನ ಸುರತ,ಸೌಮ್ಯ ಶರಧಿಯಲಿ..
ನಾ ಬರೆದ ರೇಖೆಗಳು ಕರಗುವಾ ಸಮಯ
ಕಾಗದನ ಮನೆಯಲ್ಲಿ ಬಣ್ಣಗಳ ಪರಿಣಯ...

                                                  ~'ಶ್ರೀ'
                                                      ತಲಗೇರಿ

ಶುಕ್ರವಾರ, ಜುಲೈ 11, 2014

"ನನ್ನವಳು ಮತ್ತು ಚಂದಿರ..."

"ನನ್ನವಳು ಮತ್ತು ಚಂದಿರ..."

ಖಾಲಿ ಹಾಳೆಯ ಕೊಡು ಚಂದಿರ
ಬರೆದುಕೊಡುವೆ ನನ್ನವಳ ಚಿತ್ತಾರ
ಆ ನಿಶೆಯ ಬೆಳಕ ಸ್ವರದ ಏರಿಳಿತ
ಆಕಾಶ ಭೂಮಿಗೂ ಕಂಪನದ ಸೆಳೆತ..

ತಲೆದೊಂಬು ತೊದಲುತಿದೆ ಬಚ್ಚಿಟ್ಟ ಆಸೆಗಳ
ಕನಸಿನಾ ಯಾನದಲಿ ನಾವೆಗಳ ಯುಗಳ
ಬೆಚ್ಚನೆಯ ಮಲ್ಲಿಗೆಯ ಮೊಗ್ಗಿನಾ ಜೇನಹನಿ
ಪರಿಚಯದ ಸಲಿಗೆಯಲಿ ಭಾವಗಳ ಜೀವದನಿ

ನಡೆಸುತಿಹೆ ನೀನೇಕೆ ರಸಿಕ ರಾತ್ರಿಯ ದರ್ಬಾರು?
ಹನಿಸುತಿದೆ ಅಲ್ಲಲ್ಲಿ ನಾಚಿಕೆಯ ಮುಂಗಾರು..
ಮುಗಿಲ ನೆರಿಗೆಯಲಿ ಚಕ್ರವಾಕ ಮಿಲನ ಪರ್ವ
ಅಗಳಿ ತೆಗೆದ ಎದೆಯೊಳಗೆ ಈಗ ಪ್ರೀತಿ ಪ್ರಣವ...

ಬಣ್ಣಗಳ ಹರವಿಟ್ಟ ನೂರಾರು ತಾಟು
ಕೈಜಾರಿ ಮೂಡಿರುವ ಒಂದೆರಡು ಗೀಟು..
ಮೈದಳೆದು ನಿಂತಿಹುದು ಅಂಬರದ ಕುಸುರಿ
ಹುಣ್ಣಿಮೆಯ ಹಂಬಲಕೆ ಚಂದನದ ಲಹರಿ...

ನೆನಪುಗಳ ಸನಿಹ ನೂರೆಂಟು ತುಡಿತ
ಬೆತ್ತಲ ಬಯಲಿನಲಿ ತಾರೆಗಳ ಕಾಗುಣಿತ
ನನ್ನದೆನ್ನುವ ಅವಳು ನಾಳೆಗಳ ಬಾಗಿಲು
ಚಂದಿರನ ಸಾಲುಗಳಿಗೆ ದನಿಯಾಗೋ ಕೊಳಲು...

                                                    ~'ಶ್ರೀ'
                                                        ತಲಗೇರಿ

ಶನಿವಾರ, ಜುಲೈ 5, 2014

"ಭ್ರಮೆಗೆ ಮರಳಿ..."

      "ಭ್ರಮೆಗೆ ಮರಳಿ..."

ಸಂಶಯದ ಸುಳಿಮಿಂಚ ಬಣ್ಣವದು
ಉದ್ರೇಕದಾ ಪ್ರತಿಫಲನ ಚಲನೆಯಲಿ
ಪರಿಚಯದ ಪರಿಸರಣ ಸಾರವದು
ಆಂತರ್ಯದಾ ಸಮ್ಮಿಲನ ನಳಿಗೆಯಲಿ..

ಜೀವಲೋಕದ ಕಾವು ಸುಡುತಿದೆ
ಚಂದ್ರನೆದೆಯ ಭಾವ ಹಂದರ..
ಸಾವ ಕಾಣದ ಗಾಯ ನರಳಿದೆ
ರಂಧ್ರ ಬರೆದ ಕಲೆಯು ಭೀಕರ..

ಇತಿಹಾಸದೊಡಲಲಿ ಒಬ್ಬ ಗಾಂಧಾರಿ
ಕುರುಡಿಯಾದಳು ತಾನೇ ಬಯಸಿ
ಮಂದಹಾಸದ ನಿತ್ಯ ಮುಸುಕುಧಾರಿ
ನಡೆಯುತಿಹನೇ ಬೆಳಕ ಅರಸಿ...

ಮುಗಿಲ ಬಗಲಿನ ತೇಲು ತಾರೆ
ಉದುರುವುದೋ ಯಾವ ಗಳಿಗೆ..
ಹಸಿರ ಸೆರಗಿನ ನೀಲ ನೀರೆ
ಶಿಶಿರ ಬರುವನು ಮತ್ತೆ ಬಳಿಗೆ...

ಮುಗಿಲ ರಾಗದಿ ಕರಗೋ ರವಿಯು
ಮತ್ತೆ ಎದೆಯಲಿ ಚಂದ್ರ ಬಿಳಿಯು...
ಬಿಸಿಲ ಕುದುರೆ ಅರಳಿ ಹೊರಳಿ
ಕರೆಯುತಿಹುದು ಭ್ರಮೆಗೆ ಮರಳಿ...


                       ~‘ಶ್ರೀ’
                         ತಲಗೇರಿ