ಭಾನುವಾರ, ನವೆಂಬರ್ 17, 2013

"ಆಂತರ್ಯ ಭ್ರಮರ"...

       "ಆಂತರ್ಯ ಭ್ರಮರ"...

ಸಾಯುವುದೇ ಮತ್ತೆ ನನ್ನ ಕವಿತೆ
ಎದೆಯೊಳಗೆ ಬೇರಿದ್ದೂ,ಕೊನೆಯ ಗಳಿಗೆ
ನೆನಪೆಂಬ ಶೀರ್ಷಿಕೆಗೆ ಅವಸರವೇಕೆ
ಕಾಲುದಾರೀಲಿ ತುಸು ಹೋಗೋಣ ಜೊತೆಗೆ...

ಮತ್ತೆ ಮತ್ತೆ ಸತ್ತಿರುವೆ ಅಂತರದ ಕ್ಷಣದಿ
ಹುಟ್ಟುವಾ ಮುನ್ನವೇ ಎದೆಯೊಳಗೆ ಎಷ್ಟೊಂದು ಗೋರಿ!
ತಳೆದೊಂದು ಪೂರ್ಣ ಜನುಮ ಏಕಾಂತ ಗರ್ಭದಿ
ತಂಪಾದೆ ಇಂಪಾದೆ ಅಕ್ಷರದ ಆತ್ಮದಲಿ ಮೃದುವಾಗಿ ಜಾರಿ..

ಆ ಸಂದಿಗೊಂದಿಯ ಪ್ರಾಸಗಳ ಮೊರೆತ
ಹೊರನೋಟಕಿಂತ ಒಳಧ್ವನಿಯು ತಾನೇ ಅಪೇಕ್ಷಿತ
ಈ ಮೋಹ ವ್ಯಾಮೋಹ ಅಲಂಕಾರ ವ್ಯಾಕರಣ
ಕವಿಸಮಯ,ಎಲ್ಲಕ್ಕೂ ಹೆಚ್ಚು ನಿಜ ಅಂತಃಕರಣ..

ಸೌಂದರ್ಯ ಸಮರ ಈ ಜಗದ ಅಂಗಳದಿ
ಆಂತರ್ಯ ಭ್ರಮರ ಅರಸಿದೆ ಮತ್ತೆ ಮಧು ಬಿಂದು
ಕಾಲದಾ ಕುಲುಮೆಯಲಿ ಕರಗದಿರು ಕ್ಷಣ ಬಂಧಿ..
ಹೊಳಪಿನಾ ಬೆಳೆಯಾಗು,ಅರಳಿ ನೆರಳಾಗಿ ನಿಂದು..

ಸಾಯುವುದೇ ಮತ್ತೆ ಈ ಗಳಿಗೆ ಕವಿತೆ
ಆಗಾಗ ಸತ್ತು,ಆಗಾಗ ಹುಟ್ಟುವಾ ಚಂದ್ರನಂತೆ
ನಾನು ಜಗದೊಳಗೆ,ನನ್ನೊಳಗೆ ಮತ್ತೊಂದು ಸಂತೆ
ನನ್ನ ಕವಿತೆ ಕ್ಷಣ ಅತ್ತು,ಮತ್ತೆ ನಗುವ ಆ ಕಂದನಂತೆ..

                               ~‘ಶ್ರೀ’
                                 ತಲಗೇರಿ

ಭಾನುವಾರ, ನವೆಂಬರ್ 3, 2013

"ನಂಟು"..

     "ನಂಟು"...
            ...ನನಗೂ ನಿಮಗೂ ಅವನಿಗೂ...


ನನಗೂ ಆ ಮಳೆಗೂ ಏನೋ ಒಂಥರದ ನಂಟು
ನೆನಪುಗಳ ಜೊತೆ ಕಳೆವಾಗ ಆಗಾಗ
ತಂತಾನೇ ಕುಂತಲ್ಲೇ ಹನಿ ಉದುರುವುದೂ ಉಂಟು
ಮಳೆಬಿಲ್ಲ ಸೂಚನೆಯೇ ನನಗಿರದೆ ಒಮ್ಮೊಮ್ಮೆ
ಬಣ್ಣಗಳ ಜೊತೆಯಲ್ಲೇ ಇಣುಕುವುದು ಮಿಂಚು

ಕಪ್ಪನೆ ರಾತ್ರೀಲಿ ಗಗನದ ತುಂಬ
ಕಾಡುವುದು ಸತ್ತ ಚಂದಮಾಮನ
ಕಂಡರೂ ಕಾಣದ ಹೆಜ್ಜೆಯ ಗುರುತು
ನನ್ನೆದೆ ಬದಿಯ ಜಾಗದ ತುಂಬ
ಸುಡುವುದು ನನ್ನ,ನಿನ್ನೆಯ
ಮುಗಿದರೂ ಮುಗಿಯದ ನೋವಿನ ಕಂತು..

ಯಾರದೋ ಮಾತಿನ ಪಿಸುಪಿಸು ದನಿಯು
ಮೆಲ್ಲನೆ ಸೆಳೆವುದು ಗಮನವನತ್ತ;
ಕೇಳಿಯೂ ಕೇಳದ ವಿಷಯದ ಸುತ್ತ..
ಬಿಡದೇ ನಾಳಿನ ಕವಲಿನ ದಾರಿ
ಸುಮ್ಮನೆ ಎಳೆವುದು ಪಾದವನತ್ತ
ಮರೆತರೂ ಮರೆಯದ ಸಾವಿನ ಹುತ್ತ..

ನನಗೂ ಬೆಳಕಿಗೂ ಏನೋ ಒಂಥರದ ನಂಟು
ಇಷ್ಟೆಲ್ಲ ನಡೆವಾಗ ನಡುವಿನಲಿ ಆವೇಗ
ಆ ಮಿಂಚು ತಾ ಕೊಂಚ ಕಣ್ತೆರೆಸುವುದು ಉಂಟು
ನನಗೂ ನಿಮಗೂ ಅವನಿಗೂ ಎಲ್ಲಿಂದಲೋ ಗಂಟು
ತಿಳಿದರೂ ತಿಳಿಯದೇ ಬಿಟ್ಟರೂ ಬಿಡದೇ
ಸಾಗಿದೆ ಪಯಣ,ಬೇರಿನ ನೆರಳು ನೂರೆಂಟು..

                                  ~‘ಶ್ರೀ’
                                    ತಲಗೇರಿ